Monday, 21 December 2015

ಬಸವ ಮತ್ತು ಬ್ರಹ್ಮರಾಕ್ಷಸ

ಉದಯವಾಣಿ, Dec 20, 2015,
ಸಾಪ್ತಾಹಿಕ ಸಂಪದ
ಬಸವ ಮತ್ತು ಬ್ರಹ್ಮರಾಕ್ಷಸ
ಉದಯ ಗಾಂವಕರ
__________________________________________________________

ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ದೇವರ ಮೂರ್ತಿಗಳನ್ನು ಕಂಡು "ಅಯ್ಯೋ, ಎಂತ ಮಾಡಿದ್ಯಾ ಬಸ್ವಾ' ಎಂದು ಕೂಗಿಕೊಳ್ಳುತ್ತ ತುಳಸಿಕಟ್ಟೆಯ ಕಡೆ ಓಡೋಡಿ ಬರುತ್ತಿದ್ದ ಮಾದೇವಿ ಗಕ್ಕನೆ ನಿಂತಳು. ಬಸವ ತೆಂಗಿನಕಾಯಿ ಕೊಯ್ಯುವಾಗ ಕೆಳಗೆ ನೋಡುವವನೇಅಲ್ಲ. ಈಗಾಗಲೇ ಕೆಳಗೆ ಹಾಕಿದ ಒಂದು ಹಿಂಡಿಗೆಯೇ ತುಳಸಿಕಟ್ಟೆಯನ್ನೂ ಕಟ್ಟೆಯ ಮೇಲೇ ಜೋಡಿಸಿಟ್ಟ ದೇವರ ಮೂರ್ತಿಗಳನ್ನೂ ಅಂಗಳಪೂರ್ತಿ ಚೆಲ್ಲಾಪಿಲ್ಲಿಯಾಗಿ ಹರಡುವಂತೆ ಮಾಡಿದೆ.
ಇನ್ನೊಂದು ಕಾಯಿಹಿಂಡಿಗೆ ತಲೆಯ ಮೇಲೆಲ್ಲಾದರೂ ಬಿದ್ದರೆ ತನ್ನನ್ನು ಬದುಕಿಸಲು ತುಳಸಿಕಟ್ಟೆಯಲ್ಲಿ ದೇವರೂ ಇಲ್ಲ ವೆಂಬುದು ನೆನಪಾಯಿತು ಮಾದೇವಿಗೆ. ಹಾಗೆ, ಗಕ್ಕನೆ ನಿಂತವಳೆ ತಲೆ ಮೇಲೆತ್ತಿ ನೋಡಿದಳು; ತಾನು ಮಾಡಿರುವ ಅನಾಹುತಗಳ ಬಗ್ಗೆ ಯಾವ ಅಂದಾಜೂ ಇಲ್ಲದೆ ಬಸವ ಮರ ಇಳಿಯುತ್ತಿದ್ದ. ಮುಂಚೆಯೇ ಮಾದೇವಿ ಎಚ್ಚರಿಸಿದ್ದಳು- "ಮರ ಹತ್ತುವ ಮುಂಚೆ ಕಾಲು ತೊಳ್ಕ ಬಸ್ವ... ಹಿಮ್ಮಡಿ ಸರೀ ತೊಳ್ಕ... ಎಲ್ಲಿಗೆಲ್ಲ ಹೋಗಿ ಬಂದಿದ್ಯೋ ದೇವ್ರಿಗೇ ಗೊತ್ತು'. ಬಸವ ಹೆಚ್ಚು ಗಮನ ನೀಡದ್ದರಿಂದ "ಹಿಮ್ಮಡಿಯಲ್ಲಿ ಭೂತ ಪ್ರೇತ ಎಲ್ಲ ಇರ್ತದಂತೆ' ಎಂದು ಸೇರಿಸಿದ್ದಳು. ಮಾದೇವಿಯ ಮಾತನ್ನು ಕಿವಿ ಮೇಲೆ ಹಾಕ್ಕೊಳ್ಳದೆ ಬಸವ ತಳೆಬಳ್ಳಿ ಕಾಲಿಗೆ ಸಿಕ್ಕಿಸಿಕೊಂಡು ಸರಸರ ಮರ ಹತ್ತಿದ್ದ.
ಸುತ್ತಲಿನ ನಾಲ್ಕೈದು ಊರುಗಳಲ್ಲಿ ಕಾಯಿಕೊಯ್ಯುವವನೆಂದರೆ ಬಸವ ಒಬ್ಬನೇ. ಹಾಗಂತ, ಬಸವ ಕಾಯಿ ಕೊಯ್ಯುವ ಎಕ್ಸ್‌ಪರ್ಟ್‌ ಅಂತೇನೂ ಅಲ್ಲ. ಬೆಳೆದ ಕಾಯಿಗಳನ್ನು ಮರದ ಮೇಲೆಯೇ ಬಿಟ್ಟು ಎಳೆಯ ಕಾಯಿಗಳನ್ನು ರಪರಪ ಕೊಯ್ದು ಹಾಕುವುದು, ಕಾಯಿ ಒಣಗಿ ಮನೆಯ ಮೇಲೆ ಬೀಳಬಾರದೆಂಬ ಕಾಳಜಿಯಿಂದ ಮನೆಯ ಹತ್ತಿರದ ಮರ ಹತ್ತಲು ಕರೆದರೆ, ಈತನೇ ಮನೆಯ ಮಾಡಿನ ಮೇಲೆ ಬೀಳಿಸಿ ಹಂಚುಗಳನ್ನು ಒಡೆದುಹಾಕುವುದು ಹೀಗೆ, ಬಸವ ಮರ ಹತ್ತಲು ಬಂದರೆ ಒಂದಲ್ಲ ಒಂದು ಅನಾಹುತ ಇದ್ದದ್ದೇ!
ಸುತ್ತಲಿನ ನಾಲ್ಕೈದು ಊರುಗಳಿಗೆ ಬಸವ ಸಂಪರ್ಕಕೊಂಡಿಯೂ ಆಗಿದ್ದ. ಒಂದು ಮನೆಯ ಸುದ್ದಿಯನ್ನು ಇನ್ನೊಂದು ಮನೆಗೆ ತಲುಪಿಸುವ ಪೂರ್ವದಲ್ಲೇ ಆ ಸುದ್ದಿಗೆ ಸಾಕಷ್ಟು ಉಪ್ಪು$, ಖಾರ, ಮಸಾಲೆಗಳನ್ನು ಸೇರಿಸಿಬಿಡುತ್ತಿದ್ದ. ಕೆಲವು ಸಾರಿ ಶೂನ್ಯದಿಂದಲೂ ಸುದ್ದಿಯನ್ನು ಟಂಕಿಸಿ ಯಾರ್ಯಾರನ್ನೋ ಪೇಚಿಗೆ ಸಿಕ್ಕಿಸಿಬಿಡುತ್ತಿದ್ದ. ಪಕ್ಕದೂರಿನಲ್ಲಿ ಯಾರೋ ಸ್ವಲ್ಪ$ ಕೆಮ್ಮಿದರೆ ಈಚೆ ಊರಿಗೆ ಬಂದು ಅವರಿಗೆ ಡೆಂಗ್ಯೂನೋ, ಟೀಬಿಯೋ ಬಂದಿದೆಯಂತೆ, ಬದುಕುಳಿಯುವುದು ಅನುಮಾನವಂತೆ ಎಂತೆಲ್ಲಾ ಹೇಳಿ ಮನೆಗೆ ಸಂಬಂಧಿಕರು ಜಮಾಯಿಸುವಂತೆ ಮಾಡುತ್ತಿದ್ದ.
ಮೊನ್ನೆ ಮೊನ್ನೆಯಷ್ಟೇ ಕತಗಾಲಿನ ಗ್ರಾಮ ಪಂಚಾಯಿತಿ ಸದಸ್ಯೆ ಪದ್ಮಜಾ ಕಾಲು ಜಾರಿ ಬಾವಿಗೆ ಬಿದ್ದ ಸುದ್ದಿ ಬಸವನ ಬಾಯಿಂದಲೇ ಆಚೀಚೆಯ ಊರುಗಳಿಗೆ ಗೊತ್ತಾದದ್ದು. ಅದು ಕಾಲು ಜಾರಿ ಬಿದ್ದ ಕೇಸ್‌ ಅಲ್ಲವೆಂತಲೂ ಇದರ ಹಿಂದೆ ಪಂಚಾಯಿತಿ ರಾಜಕೀಯ ಇದೆ ಎಂತಲೂ ಮಾರನೆಯ ದಿನ ಹೆಚ್ಚುವರಿ ವಿವರಗಳನ್ನು ಸೇರಿಸಿದ್ದ. ರಾಜಿ ಸೂತ್ರದಂತೆ‌ ಅರ್ಧ ಅವಧಿಯ ನಂತರ ಪದ್ಮಜಾ ಗ್ರಾಮ ಪಂಚಾಯಿತಿಯ ಅಧ್ಯಕ್ಷಳಾಗಬೇಕಿತ್ತೆಂತಲೂ ಇದನ್ನು ತಪ್ಪಿಸಲಿಕ್ಕಾಗಿಯೇ ಬಾವಿಗೆ ಅವರನ್ನು ತಳ್ಳಲಾಯಿತೆಂದೂ ರೋಚಕಕತೆಯನ್ನು ಕಟ್ಟಿ, ಆ ಕತೆಯನ್ನು ತರ್ಕಬದ್ಧ ತುಣುಕುಗಳನ್ನಾಗಿ ಕತ್ತರಿಸಿ ಊರಿನ ಅಲ್ಲಲ್ಲಿ ಚದುರಿಬಿಟ್ಟಿದ್ದ. ಹೀಗೆ ಚದುರಿಬಿಟ್ಟ ತುಣುಕುಗಳೆಲ್ಲ ಸೇರಿ ಇಡಿಯಾದ ಆಘಾತಕಾರಿ ಸುದ್ದಿಯಾಗುವಂತೆ ಮತ್ತು ಆ ಇಡೀ ಸುದ್ದಿ ಯಾವುದೇ ಒಬ್ಬ ವ್ಯಕ್ತಿ ಸೃಷ್ಟಿಸಿದ್ದಲ್ಲವೆಂಬಂತೆ ನಂಬಿಸುವ ಹಾಗೆ ವ್ಯವಸ್ಥಿತವಾಗಿ ಪ್ರಸಾರ ಮಾಡುವ ಅಪ್ರತಿಮ ಪ್ರತಿಭೆ ಬಸವನಲ್ಲಿತ್ತು.
ಬಾವಿಯಲ್ಲಿ ಪದ್ಮಜಾಳ ಚಪ್ಪಲಿಗಳ ಬದಲು ಅವಳ ಗಂಡನ ಚಪ್ಪಲಿಗಳು ಬಿದ್ದಿದ್ದವೆಂತಲೂ, ಪದ್ಮಜಾಳಿಗೆ ಈಜು ಬರುತ್ತಿತ್ತೆಂತಲೂ, ಪದ್ಮಜಾಳ ಮನೆಗೆ ಪಂಚಾಯತಿ ಟ್ಯಾಂಕಿನಿಂದ ದಿನದ ಇಪ್ಪತ್ನಾಲ್ಕು ಗಂಟೆಯೂ ನಲ್ಲಿ ನೀರು ಬರುತ್ತಿದ್ದರಿಂದ ರಾತ್ರಿ ಬಾವಿಗೆ ಹೋಗುವ ಅಗತ್ಯವೇ ಇರಲಿಲ್ಲವೆಂತಲೂ, ಪದ್ಮಜಾ ಬಾವಿಗೆ ಬಿದ್ದು ಸತ್ತಮೇಲೆ ಅವಳ ಮೊಬೈಲ್‌ ಫೋನ್‌ ಕೂಡಾ ಕಾಣೆಯಾಗಿದೆಯೆಂತಲೂ ಎಂತೆಂತದೋ ಸುದ್ದಿಗಳನ್ನು ತನ್ನ ಮಾಯದ ಜೋಳಿಗೆಯಿಂದ ತೆಗೆದು ಗಾಳಿಯಲ್ಲಿ ತೇಲಿಬಿಟ್ಟಿದ್ದ. ಮನಸ್ಸಿಲ್ಲದಿದ್ದರೂ ಪದ್ಮಜಾಳ ಕುಟುಂಬಿಕರು ಪ್ರಕರಣದ ಕುರಿತು ಕುಮಟೆಯ ಪೋಲೀಸ್‌ಠಾಣೆಯಲ್ಲಿ ಪಿರ್ಯಾದು ನೀಡುವಂತೆ ಮಾಡಿದ್ದ.
ಬಸವನ ಸುದ್ದಿ ಇಡಿಯಾಗಿ ಸುಳ್ಳಾಗಿರುವುದಿಲ್ಲ ಎಂಬ ಕಾರಣದಿಂದಲೋ ಕೇಳಲು ರಸವತ್ತಾಗಿರುವುದರಿಂದಲೋ ಅಥವಾ ಅಸಾಮಾನ್ಯವಾದದ್ದು ಘಟಿಸುತ್ತಲೇ ಇರಬೇಕೆಂಬ ಅತೀವ ಆಸೆ ಭೂಲೋಕದ ಎಲ್ಲರಲ್ಲೂ ಅಷ್ಟಿಷ್ಟು ಇರುವುದರಿಂದಲೋ ಬಸವನಿಗೆ ಕೇಳುಗರ ಸಂಖ್ಯೆ ಕಡಿಮೆಯಾಗಿರಲಿಲ್ಲ. ಬಸವನ ಸುದ್ದಿಯ ವಿಶ್ವಾಸಾರ್ಹತೆಯನ್ನು ಇದುವರೆಗೂ ಅವನೆದುರು ಯಾರೂ ಪ್ರಶ್ನಿಸಿರಲಿಲ್ಲ.
ದೆವ್ವ-ಭೂತಗಳ ಕತೆ ಹೇಳುವುದರಲ್ಲೂ ಬಸವ ನಿಸ್ಸೀಮ. ಕೆಲವೊಮ್ಮೆ ಭಯಾನಕವಾಗಿ, ಇನ್ನು ಕೆಲವು ಸಲ ದೆವ್ವ-ಭೂತಗಳನ್ನೆಲ್ಲ ಮಾಮೂಲು ಮನುಷ್ಯರ ಮಟ್ಟಕ್ಕೆ ಇಳಿಸಿ ರಮ್ಯ ಕತೆಗಳನ್ನು ಸೃಷ್ಟಿಸುವಾಗ ಬಸವ ಒಬ್ಬ ಕುಶಲ ಕಲಾಕಾರನಾಗುತ್ತಿದ್ದ. ಯಾಣದ ಹೆಬ್ಟಾರರ ತೋಟಕ್ಕೊಮ್ಮೆ ಕಾಯಿಕೊಯ್ಯಲು ಹೋದಾಗ ತೆಂಗಿನ ಮರದ ಮೇಲೆ ಬ್ರಹ್ಮರಾಕ್ಷಸ ಹೆಣ್ಣು ದೆವ್ವವೊಂದನ್ನು ಕಂಡಿರುವುದಾಗಿ ಬಸವ ಆಗಾಗ ಹೇಳುತ್ತಿದ್ದ.
ಬ್ರಹ್ಮರಾಕ್ಷಸ ದೆವ್ವಗಳು ಎತ್ತರದ ಮರಗಳು, ಕಟ್ಟಡಗಳು, ಗುಡ್ಡಗಳಲ್ಲಿ ಸಂಸಾರ ಹೂಡಿರುತ್ತವೆಂತಲೂ ಯಾಣದ ಎತ್ತರದ ಬಂಡೆಗಳ ಮೇಲೆ ವಾಸಿಸಿದ್ದ ದೆವ್ವಗಳು ಬಂಡೆಯ ಬುಡದಲ್ಲಿ ನಿಯಮಿತವಾಗಿ ಪೂಜೆ-ಪುನಸ್ಕಾರಗಳು ಪ್ರಾರಂಭವಾದ ನಂತರ ದೈವೀಶಕ್ತಿಗೆ ಹೆದರಿ ಅಲ್ಲಿಂದ ಪಲಾಯನ ಮಾಡಿದವೆಂತಲೂ, ಹೀಗೆ ನಿರಾಶ್ರಿತವಾದ ದೆವ್ವಗಳು ಹೆಬ್ಟಾರರ ತೋಟದ ಎತ್ತರದತೆಂಗಿನ ಮರದ ಮೇಲೆ ಬಿಡಾರ ಹೂಡಿವೆಯೆಂತಲೂ ಹೇಳುತ್ತಿದ್ದ. ಹೆಬ್ಟಾರರ ತೋಟದಲ್ಲಿ ಒಮ್ಮೆ ಎತ್ತರದ ತೆಂಗಿನ ಮರವೊಂದನ್ನು ಏರಿದಾಗ ಬ್ರಹ್ಮರಾಕ್ಷಸ ದೆವ್ವವೊಂದನ್ನು ಕಂಡಿರುವುದಾಗಿ ಕಣ್ಣಿಗೆಕಟ್ಟಿದಂತೆ ಬಸವ ಎಷ್ಟು ನಿಪುಣತೆಯಿಂದ ಕತೆ ಹೇಳುತ್ತಿದ್ದನೆಂದರೆ, ತಾನು ದೆವ್ವಗಳಿಗಿಂತಲೂ ಬಲಿಷ್ಠನೆಂಬುದನ್ನು ನಿರೂಪಿಸುವುದರ ಜೊತೆಗೆ ಎದೆಯಲ್ಲಿ ಝಲ್‌ ಎನ್ನಿಸುವ ಭಯವನ್ನು ಹುಟ್ಟಿಸುತ್ತಿದ್ದ.
ಯಾರಾದರೂ ಎತ್ತರದ ತೆಂಗಿನ ಮರ ಹತ್ತಿದ್ದಾಗ ದೆವ್ವಗಳನ್ನು ಕಂಡರೆ ಭಯಗ್ರಸ್ಥರಾಗಿ ಅವಸರದಲ್ಲಿ ಮರ ಇಳಿಯಬಾರದಾಗಿಯೂ ಆ ಮರದ ಬೆಳೆದ ಕಾಯಿಗಳನ್ನಷ್ಟೇ ಕೊಯ್ದರೆ ಯಾವ ತೊಂದರೆಯೂ ಆಗದು ಎಂತಲೂ ಸಲಹೆ ನೀಡುತ್ತಿದ್ದ. ಅಪ್ಪಿತಪ್ಪಿಯೂ ಅರೆಬೆಳೆದ ಕಾಯಿಗಳನ್ನಾಗಲೀ, ಸಿಯಾಳಗಳನ್ನಾಗಲೀ ಕೀಳಬಾರದೆಂತಲೂ ಸಿಯಾಳಗಳೆಂದರೆ ಬ್ರಹ್ಮರಾಕ್ಷಸ ದೆವ್ವಗಳಿಗೆ ಬಹಳ ಪ್ರಿಯವಾಗಿರುವುದರಿಂದ ಅವುಗಳಿಗೆ ಕೈ ಹಾಕಿದರೆ ಮರದಿಂದ ಉರುಳಿ ಜೀವ ಕಳೆದುಕೊಳ್ಳುವುದು ಗ್ಯಾರಂಟಿ ಎಂತಲೂ ಎಚ್ಚರಿಸುತ್ತಿದ್ದ.
ವೃತ್ತಿಯಲ್ಲಿ ತನಗೆ ಪೈಪೋಟಿ ನೀಡಬಲ್ಲ ಇನ್ನೊಬ್ಬ ಹುಟ್ಟಿಕೊಳ್ಳದಂತೆ ನೋಡಿಕೊಳ್ಳುವುದೂ ಅವನ ದೆವ್ವದ ಕತೆಗಳ ಉದ್ದೇಶವಿರಬಹುದೆಂಬ ಅನುಮಾನ ಹುಟ್ಟದಂತೆ ಕತೆಗಳನ್ನು ಹೆಣೆಯುವುದು ಬಸವನಿಗೆ ತೆಂಗಿನ ಮರ ಹತ್ತಿದಷ್ಟೇ ಸಲೀಸು.
"ಎಂಥಾ ಮಾಡೆª ನೋಡು' ಎಂದು ಮಾದೇವಿ ಹೇಳಿದ್ದು ಕೇಳಿ ಬಸವ ಮರ ಇಳಿಯುತ್ತಲೇ ಕೆಳಗೆ ನೋಡಿದ. ದೇವರ ಮೂರ್ತಿಗಳೆಲ್ಲ ಅಂಗಳದಲ್ಲಿ ಅನಾಥವಾಗಿ ಬಿದ್ದಿವೆ. ತುಳಸೀಕಟ್ಟೆ ಮುರಿದು ಗಿಡದ ಸಮೇತ ನೆಲಕ್ಕುರುಳಿದೆ. ಬಸವನ ಎದೆಯಲ್ಲಿ ಧಸಕ್ಕೆಂದ ಹಾಗಾಯಿತು.
ಸರಸರನೆ ಇಳಿದು ದೇವರ ಮೂರ್ತಿಗಳನ್ನೆಲ್ಲ ಒಟ್ಟುಗೂಡಿಸಲು ಹೋದ ಬಸವನನ್ನು ಮಾದೇವಿ ತಡೆದಳು- "ನೀ ಮಾಡಿದ್ದು ಸಾಕು ಮಾರಾಯ... ಒಂದು ಮರ ಹತ್ತಿದ್ಯಲ್ಲ ಮೂವತ್ತು ರೂಪಾಯಿ ತಕ್ಕೊಂಡ ಹೋಗು... ನೀ ಮಾಡª ಕೆಲ್ಸಕ್ಕೆ ಈಗ ಪುರೋಹಿತರ ಕರೆದು ಹೋಮ ಗೀಮ ಹಾಕಿ ಸರಿಮಾಡ್ಕಬೇಕು...'
ಮಾದೇವಿಗೆ ದೇವರಗಿಂತ ಗಂಡನದ್ದೇ ಹೆದರಿಕೆ. ಗಂಡ ಬೇಡ ಅಂದಿದ್ರೂ ಮಕ್ಕಳಾಡುವ ಅಂಗಳಬದಿಯ ಮರ ಎಂದು ಬಸವನಿಗೆ ಕಾಯಿ ಕೊಯ್ಯಲು ಹೇಳಿದ್ದಳು. ಮಾದೇವಿಯ ಗಂಡ ಮಾಬ್ಲಿನೋ ಜುಗ್ಗಾತಿಜುಗ್ಗ. ಮರಕ್ಕೆ ಮೂವತ್ತು ರೂಪಾಯಿಯಂತೆ ದುಡ್ಡು ತೆಗೆದುಕೊಳ್ಳುವ ಬಸವನನ್ನು ಐದೇ ಕಾಯಿಗಳಿರುವ ಒಂದೇ ಹಿಂಡಿಗೆಯನ್ನು ಕೊಯ್ಯಲು ಕರೆಸಿದರೆ ದುಬಾರಿಯಾಗುತ್ತದೆ ಎಂಬ ಕಾರಣದಿಂದಲೇ ಬಸವನಿಗೆ ಬರಹೇಳುವುದು ಬೇಡವೆಂದಿದ್ದ. ಈಗ ಈ ತರಹದ ಅನಾಹುತವಾಗಿರುವುದನ್ನು ಕಂಡು ಕೆಂಡಾಮಂಡಲನಾಗದೆ ಇರುತ್ತಾನೆಯೇ?
____________________________

              
ಪುರೋಹಿತರನ್ನೂ ಹೊನ್ನಪ್ಪ ಗಾವಡಿಯನ್ನೂ ಒಟ್ಟಿಗೆ ಸೇರಿಸಿ ನೆಲಕ್ಕುರುಳಿದ ತುಳಸಿಕಟ್ಟೆಯನ್ನು ಮತ್ತೆ ಮೊದಲಿನಂತೆ ಪ್ರತಿಷ್ಠಾಪಿಸುವುದೆಂದರೆ ಸುಲಭವೇ? ಇವರಿಬ್ಬರನ್ನೂ ಒಟ್ಟಿಗೆ ಸೇರಿಸಿ ಮಾಬ್ಲ ದೊಡ್ಡದೊಂದು ಹೊಣೆಗಾರಿಕೆಯನ್ನು ಹಸ್ತಾಂತರಿಸಿ ನಿರಾಳನಾಗಿದ್ದ. ಅಂತೂ, ಬಸವ ಮಾಡಿದ ಅನಾಹುತಗಳನ್ನೆಲ್ಲ ಸರಿಮಾಡುವ ಕೆಲಸ ಪ್ರಾರಂಭವಾಯಿತು. ಪುರೋಹಿತರು ಬರುತ್ತಲೇ ಸ್ವಲ್ಪವೂ ಸಮಯ ವ್ಯಯ ಮಾಡದೆ ಮಂತ್ರೋಚ್ಚಾರಣೆ ಪ್ರಾರಂಭಿಸಿದ್ದರು. ಚದುರಿಬಿದ್ದಿದ್ದ ಮೂರ್ತಿಗಳನ್ನೆಲ್ಲ ನೀರಿನ ಪಾತ್ರೆಯಲ್ಲಿ ಮುಳುಗಿಸಿಟ್ಟು ಮತ್ತೊಂದಿಷ್ಟು ಮಂತ್ರಗಳನ್ನು ಉದುರಿಸಿದರು. ಈ ಹಿಂದೆ ತುಳಸಿಕಟ್ಟೆಯಲ್ಲಿದ್ದ ದೇವರುಗಳನ್ನೆಲ್ಲ ತಾವೇ ತಂದಿದ್ದ ತಾಮ್ರದ ಬಿಂದಿಗೆಯಲ್ಲಿ ಬಂಧಿಸಿಟ್ಟುರುವುದಾಗಿ ವಿವರಣೆ ನೀಡುತ್ತಾ ಮುರಿದುಬಿದ್ದ ಕಟ್ಟೆಯನ್ನು ಮರುಜೋಡಿಸುವ ಕೆಲಸ ಶುರುಮಾಡಿಕೊಳ್ಳಲು ಹೊನ್ನಪ್ಪ ಗಾವಡಿಗೆ ಅನುವುಮಾಡಿಕೊಟ್ಟರು. ಮುರಿದುಹೋದ ಭಾಗಕ್ಕೆ ಸಿಮೆಂಟು ಮರಳಿನ ಮುಲಾಮು ಸವರಿ ಹೊನ್ನಪ್ಪ ಗಾವಡಿ ಕಟ್ಟೆಯನ್ನು ಮರುಜೋಡಿಸಿದ. ಸುತ್ತೆಲ್ಲ ಚೆಲ್ಲಿದಂತಿದ್ದ ಸಿಮೆಂಟು ಮರಳು ಮತ್ತಿತರ ಸಾಮಗ್ರಿಗಳನ್ನು ತಕ್ಕಮಟ್ಟಿಗೆ ಸ್ವಚ್ಛಗೊಳಿಸಿ ಕಟ್ಟೆಯನ್ನು ಪುನಃ ಪುರೋಹಿತರಿಗೆ ಬಿಟ್ಟುಕೊಟ್ಟ. ಹೊನ್ನಪ್ಪ ಮುಟ್ಟಿದ ಕಟ್ಟೆಯನ್ನು ಮತ್ತೊಂದಿಷ್ಟು ಮಂತ್ರೋಚ್ಚಾರಣೆ, ಉದಕ ಪ್ರೋಕ್ಷಣೆಗಳ ಮೂಲಕ ಶುದ್ಧಗೊಳಿಸಿದ ನಂತರ ಪಾತ್ರೆಯಲ್ಲಿ ಮುಳುಗಿಸಿಟ್ಟ ದೇವರ ಮೂರ್ತಿಗಳನ್ನೆಲ್ಲ ಮತ್ತೆ ಮೊದಲಿನಂತೆ ಜೋಡಿಸಿದರು. ಬಿಂದಿಗೆಯಲ್ಲಿ ಬಂಧಿಸಿಟ್ಟಿರುವ ದೇವರುಗಳನ್ನು ಆ ಮೂರ್ತಿಗಳಿಗೆ ಅವಾಹಿಸುತ್ತಿರುವ ಮಾಹಿತಿಯನ್ನು ಮಾಬ್ಲನಿಗೂ ಮದೇವಿಗೂ ತಿಳಿಸಿ ಮಂತ್ರೋಚ್ಚಾರಣೆಯೊಂದಿಗೆ ಅವಾಹನೆಯ ವಿಧಿ-ವಿಧಾನಗಳನ್ನು ಪೋರೈಸಿದರು. ಆನಂತರ ಪೂಜೆಯನ್ನು ನೆರವೇರಿಸಿದರು.
ವಿಧಿ-ವಿಧಾನಗಳು ಸಾಂಗವಾಗಿ ನೆರೆವೇರಿದ ಸಮಾಧಾನದಲ್ಲಿ ಮಾಬ್ಲ ಪುರೋಹಿತರಿಗೆ ದಕ್ಷಿಣೆ ನೀಡಿ ಸಾಷ್ಟಾಂಗ ನಮಸ್ಕರಿಸಿದ. ಹೊನ್ನಪ್ಪ ಗಾವಡಿಗೆ ಕೂಲಿ ನೀಡಿ ಕಳುಹಿಸಿದ.
ಇಷ್ಟೊತ್ತಿಗೆ ಸಂಜೆ ಆರುವರೆ ಆಯಿತು. ಉಸ್ಸಪ್ಪ ಎಂದು ಮಾಬ್ಲ ಚಿಟ್ಟೆಯ ಮೇಲೆ ಕುಳಿತು ಇಡೀ ದಿನದ ಸಾಧನೆಯನ್ನು ಮತ್ತೊಮ್ಮೆ ಮೆಲಕುಹಾಕಿದ. ಇಂದು ಬರುವೆ ನಾಳೆ ಬರುವೆ ಎನ್ನುತ್ತಾ ಗ್ರಹ ಪ್ರವೇಶದ ಮುಂಚಿನ ದಿನದವರೆಗೂ ಗಿಲಾಯಿ ಕೆಲಸ ಬಾಕಿ ಇಟ್ಟುಕೊಳ್ಳುವ ಹೊನ್ನಪ್ಪ ಗಾವಡಿಯನ್ನೂ ಸೈಕಲ್ಲು ತುಳಿಯುವಾಗಲೂ ಮಂತ್ರಗಳನ್ನು ಮಣಮಣಿಸುತ್ತಾ ತನ್ನ ಪುರುಸೊತ್ತಿಲ್ಲದ ವೇಳಾಪಟ್ಟಿಗೆ ಹೊಂದಿಕೊಳ್ಳಲು ಹರಸಾಹಸ ಪಡುವ ಪುರೋಹಿತರನ್ನೂ ಒಟ್ಟಿಗೆ ಹಿಡಿದು ಭಗ್ನವಾದ ತುಳಸಿಕಟ್ಟೆಯನ್ನು ಇಷ್ಟು ತುರ್ತಾಗಿ ಸರಿಪಡಿಸಿಕೊಂಡದ್ದು ಸಾಮಾನ್ಯ ಸಾಧನೆಯೇ?! ಮಾಬ್ಲನಿಗೆ ಬೇರೆ ದಾರಿಯೂ ಇರಲಿಲ್ಲ ಬಿಡಿ. ಅಂಗಳದಲ್ಲಿ ಮುರಿದಿಬಿದ್ದ ತುಳಸಿಕಟ್ಟೆಯನ್ನಿಟ್ಟುಕೊಂಡು ರಾತ್ರಿ ನಿದ್ರೆ ಮಾಡಲಾದರೂ ಸಾಧ್ಯವಿತ್ತೆ? ಒಡಕಲು ತುಳಸಿಕಟ್ಟೆಯನ್ನು ಕಂಡು ಮಾಬ್ಲ ಎಷ್ಟು ಹೆದರಿದ್ದನೆಂದರೆ, ಆ ಹೆದರಿಕೆಯಲ್ಲಿ ಈ ಎಲ್ಲ ಅನಾಹುತಗಳಿಗೆ ಕಾರಣನಾದ ಬಸವನಿಗಾಗಲಿ ಅವನನ್ನು ಬರಹೇಳಿದ ಮಾದೇವಿಗಾಗಲಿ ಬೈಯ್ಯಲು ನೆನಪಾಗಲೇ ಇಲ್ಲ. ಜುಗ್ಗಾತಿಜುಗ್ಗನಾದರೂ ಖರ್ಚಾಗುವ ದುಡ್ಡಿನ ಚಿಂತೆ ಉಂಟಾಗಲಿಲ್ಲ. ಮನೆಯ ಮುಂದೆ ತುಳಸಿಯೇ ಇಲ್ಲವೆಂದರೆ ಇರುವ ದೆವ್ವಗಳೆಲ್ಲ ಬಂದುಸೇರಿಕೊಳ್ಳಲಿಕ್ಕಿಲ್ಲವೇ?
ತುಳಸಿಕಟ್ಟೆ ಅಂಗಳದಲ್ಲಿ ಮತ್ತೆ ಮೊದಲಿನಂತೆ ವಿರಾಜಮಾನವಾದ ಸಮಾಧಾನದಲ್ಲಿ ಮಾಬ್ಲ ಮತ್ತೆ ಮೊದಲಿನ ಮನುಷ್ಯನಾದ. ಪುರೋಹಿತರಿಗೆ ಕೊಟ್ಟ ದಕ್ಷಿಣೆ, ಹೊನ್ನಪ್ಪ ಗಾವಡಿಗೆ ನೀಡಿದ ಕೂಲಿ ಎಲ್ಲವೂ ಮೈಮೇಲೆ ಎಳೆದುಕೊಂಡ ಖರ್ಚಲ್ಲವಾ ಎಂದು ಯೋಚಿಸಿದ. ಬಸವನ ಮೇಲೆ ವಿಪರೀತ ಸಿಟ್ಟು ಬಂತು. ಫೋನು ತೆಗೆದುಕೊಂಡು ಬಸವನ ನಂಬರು ಒತ್ತಿದ. ಬಸವ ಫೋನು ಎತ್ತುತ್ತಲೆ ಮನಸಾರೆ ಬಯ್ದು ಕಳೆದುಕೊಂಡ ದುಡ್ಡಿನ ಲೆಕ್ಕ ಚುಕ್ತಾ ಮಾಡಿಕೊಳ್ಳಬೇಕೆಂಬ ತವಕ ಫೋನಿನ ರಿಂಗಣಿಸುವಿಕೆಯ ಅವಧಿಯನ್ನು ದೀರ್ಘವಾಗಿಸಿತು. ಬಸವ ಫೋನು ಎತ್ತಲಿಲ್ಲ. ಸಾಮಾನ್ಯವಾಗಿ ಬಸವ ಫೋನು ಎತ್ತದೇ ಇರುವವನಲ್ಲ. ಅವನ ದೇಹದ ಮೇಲೆ ತಳೆಬಳ್ಳಿ, ಮುಂಡಾಸು ಮತ್ತು ಕತ್ತಿ ಸಿಕ್ಕಿಸಿಕೊಳ್ಳುವ ಉಡಿಕೊಕ್ಕೆಗೆ ಎಂತಹ ಸ್ಥಾನವಿತ್ತೋ ಅಷ್ಟೇ ಮಹತ್ವದ ಸ್ಥಾನ ಸೊಂಟದಲ್ಲಿ ಸಿಕ್ಕಿಸಿಕೊಳ್ಳುವ ಸÀಂಚಿಗೆ ಮತ್ತು ಅದರೊಳಗೆ ಅವಿತಿರುವ ಮೊಬೈಲು ಫೋನಿಗೂ ಇತ್ತು. ಮರದ ಮೇಲೆ ಇದ್ದಾಗಲೂ ಆತ ಕರೆಬಂದರೆ ಸಂಚಿಯಲ್ಲಿರುವ ಮೂರು ಬಾರಿ ಮಡಚಿದ ಪ್ಲಾಸ್ಟಿಕ್ಕಿನ ಚೀಲದಿಂದ ಮೊಬೈಲು ತೆಗೆದು ಕರೆಸ್ವೀಕರಿಸುತ್ತಿದ್ದ. ಮಾಬ್ಲ ಮತ್ತೊಮ್ಮೆ ಪ್ರಯತ್ನಿಸಿದ. ಈಗಲೂ ಸ್ವೀಕರಿಸಲಿಲ್ಲ. ಇನ್ನೊಮ್ಮೆ ಪ್ರಯತ್ನಿಸುತ್ತಿದ್ದನೋ ಏನೋ ಅಷ್ಟರಲ್ಲಿ ಮಾದೇವಿ ಗಾಬರಿಯಿಂದ ಧಾವಿಸಿ ಬಂದಿದ್ದರಿಂದ ಫೋನನ್ನು ಮಾದೇವಿಯ ಕೈಗೆ ಕೊಟ್ಟು ಒಳಗಿಡುವಂತೆ ಸನ್ನೆ ಮಾಡಿದ. ಏನನ್ನೋ ಹೇಳಲು ಹೊರಟ ಮಾದೇವಿ ಗಂಡನ ದೂರ್ವಾಸವದನವನ್ನು ಕಂಡು ಸುಮ್ಮನಾದಳು. ಬಸವನಿಗೆ ಬೈಯ್ಯಬೇಕೆಂದುಕೊಂಡ ಎಲ್ಲ ಬಯ್ಗಳನ್ನೂ ಮಾದೇವಿಗೆ ವರ್ಗಾಯಿಸಬೇಕೆಂದುಕೊಂಡ ಮಾಬ್ಲ ಅವಳ ಮುಖದಲ್ಲಿನ ಗಾಬರಿಯನ್ನು ಓದಿ `ಎಂತಾಯ್ತೆ?’ ಅಂದ.
ಅಂಗಳದಲ್ಲಿ ಬಿದ್ದ ಸಿಮೆಂಟು, ಮರಳುಗಳನ್ನು ಗುಡಿಸುತ್ತಿರುವಾಗ ಯಾರೋ ಗುಣಗುಣಿಸುತ್ತಿರುವ ಸದ್ದು ಕೇಳಿಸಿತೆಂದೂ ಹತ್ತಿರದಲ್ಲೆಲ್ಲೂ ಮನೆಯಾಗಲೀ ಜನರಾಗಲೀ ಇಲ್ಲದಿರುವಾಗ ಈ ಸದ್ದು ಎಲ್ಲಿಂದ ಬರುತ್ತಿದೆ ಎಂದು ಗಮನವಿಟ್ಟು ಕೇಳಿದಾಗ ಆ ಸದ್ದು ಮರದ ಮೇಲಿಂದಲೇ ಬರುತ್ತಿರುವಂತೆ ಅನ್ನಿಸಿತೆಂದೂ ಮಾದೇವಿ ಹೇಳಿದಳು. ಮಾಬ್ಲನಿಗೆ ಸಣ್ಣದಾಗಿ ನಡುಕ ಶುರುವಾಯಿತು. ಈಗಲೂ ಸದ್ದು ಬರುತ್ತಿದೆಯೇ ಎಂದು ತಿಳಿಯಲು ಅಂಗಳದಲ್ಲಿ ನಿಂತು ಕಿವಿ ಕೊಟ್ಟ. ಅಂತಹ ಯಾವ ಸದ್ದೂ ಇರಲಿಲ್ಲ. ಬ್ರಹ್ಮರಾಕ್ಷಸ ದೆವ್ವಗಳು ಯಾಣದ ಬ್ರಹದಾಕಾರದ ಬಂಡೆಗಳಿಂದ ಎತ್ತರದ ತೆಂಗಿನ ಮರಗಳಿಗೆ ಬಿಡಾರ ಬದಲಿಸಿವೆ ಎಂದು ಬಸವ ಹೇಳಿದ್ದು ನೆನಪಾಯಿತು. ತುಳಸಿಕಟ್ಟೆ ಒಡೆದು ದೇವರೇ ನಿರಾಶ್ರಿತರಾದ ಪರಿಸ್ಥಿತಿಯ ಲಾಭ ಪಡೆದು ಈ ಬ್ರಹ್ಮ ರಾಕ್ಷಸ ದೆವ್ವಗಳು ನಮ್ಮ ಅಂಗಳದ ತೆಂಗಿನ ಮರಕ್ಕೇ ಒಕ್ಕರಿಸಿಬಿಟ್ಟವೋ ಎಂಬ ಚಿಂತೆ ಹುಟ್ಟಿಕೊಂಡಿತು. ಹಾಗದರೆ, ತುಳಸಿಕಟ್ಟೆಯ ಪುನರಪ್ರತಿಷ್ಠಾಪನೆ ಶಾಸ್ತ್ರೋಕ್ತವಾಗಿ ನಡೆಯಲಿಲ್ಲವೇ? ವಿಧಿ-ವಿಧಾನಗಳಲ್ಲಿ ಏನಾದರೂ ಊನವಾಯಿತೇ? ಮಾಬ್ಲನ ತಲೆಯೆಂಬುದು ಅನುಮಾನಗಳ ಗಿರಣಿಯಂತಾಯ್ತು. ಈ ಬ್ರಹ್ಮರಾಕ್ಷಸ ದೆವ್ವಗಳು ಎಷ್ಟು ಅಪಾಯಕಾರಿಯಾಗಿರುತ್ತವೋ ಅಷ್ಟೇ ಹೆಡ್ಡ ಶಿಖಾಮಣಿಗಳೂ ಆಗಿರುತ್ತವೆ ಎಂದು ಯಾವುದೋ ಕತೆಯಲ್ಲಿ ಕೇಳಿದ ನೆನಪು ಮಾಬ್ಲನಿಗೆ. ತನ್ನನ್ನು ಕೊಲ್ಲಲು ಬಂದ ಬ್ರಹ್ಮರಾಕ್ಷಸ ದೆವ್ವದ ಎದುರು ಕನ್ನಡಿ ತೋರಿಸಿದ ಕ್ಷೌರಿಕ `ನಿನ್ನಂತಹ ನೂರಾರು ಬ್ರಹ್ಮ ರಾಕ್ಷಸರನ್ನು ಹಿಡಿದಿಟ್ಟಿರುವೆ’ ಎಂದು ಹೆದರಿಸಿದ ಕತೆಯದು. ಕ್ಷೌರಿಕನಿಗೆ ಹೆದರಿಕೊಂಡು ಅವನ ಮನೆಕೆಲಸದವನಾದ ಬ್ರಹ್ಮ ರಾಕ್ಷಸನ ಕತೆ ಮಾಬ್ಲನಿಗೆ ಹೇಗೆ ಆ ಗಳಿಗೆಯಲ್ಲಿ ನೆನಪಿಗೆ ಬಂತೋ?
ಮಾದೇವಿ ಭುಜದ ಮೇಲೆ ಕೈ ಇಟ್ಟು ಒತ್ತಿದ್ದರಿಂದ ಮಾಬ್ಲ ಕತೆಯಿಂದ ಹೊರಬಂದು ಎಚ್ಚರಾದ. ಮಾದೇವಿ ತೆಂಗಿನ ಮರದ ಕಡೆ ಬೆರಳು ತೋರಿಸಿದಳು. ಹೌದು, ತೆಂಗಿನ ಮರದಿಂದಲೇ ಸದ್ದು ಬರುತ್ತಿದೆ. ಯಾರೋ ಗುಣಗುಣಿಸುತ್ತಿರುವ ಸದ್ದು ಎಂದು ಸ್ಪಷ್ಟವಾಗಿ ಹೇಳಲಾಗದಿದ್ದರೂ ಇನ್ಯಾವುದೇ ಮೃಗ-ಪಕ್ಷಿಯದಲ್ಲವೆಂದು ಖಚಿತವಾಗಿ ಹೇಳಬಹುದಾಗಿತ್ತು. ದೊಡ್ಡದೊಂದು ಕಂಟಕವು ಎದುರಲ್ಲೇ ಬಂದು ನಿಂತಿರುವಂತೆ ಅನ್ನಿಸಿದರೂ, ಹೆಂಡತಿಯೆದುರು ತನ್ನ ಭಯವನ್ನು ತೋರಿಸಿಕೊಳ್ಳಬಾರದೆಂಬ ಗಂಡುಪ್ರಜ್ಞೆ ಅಷ್ಟೊತ್ತಿಗೆ ಎಚ್ಚರವಾದದುರಿಂದ, ತನ್ನ ಭಯವನ್ನು ತೋರಿಸಿಕೊಳ್ಳದೆ ` ಮೊಬೈಲು ತಾ, ಬಸ್ವನಿಗೊಂದು ಫೋನು ಮಾಡ್ಬೇಕು’ ಎಂದ. ಸ್ವಲ್ಪ ಹೊತ್ತಿನ ಹಿಂದಷ್ಟೇ ಬಸವ ಕರೆಸ್ವೀಕರಿಸದೇ ಇರುವುದು ಮರತೆ ಹೋದಂತಿತ್ತು ಮಾಬ್ಲನಿಗೆ. ಮಾದೇವಿ ಪ್ರಶ್ನಾರ್ಥಕವಾಗಿ ಮುಖ ನೋಡಿದ್ದನ್ನು ಗಮನಿಸಿ `ಬ್ರಹ್ಮ ರಾಕ್ಷಸ ದೆವ್ವಕ್ಕೆ ಪಾಠ ಕಲಿಸಬೇಕೆಂದ್ರೆ ಬರಗದ್ದೆ ಸುಬ್ರಹ್ಮಣ್ಯ ಜೋಯಿಸರೇ ಬೇಕು. ಅವ್ರು ಎಂತೆಂಥ ನಡೆಗಳ್ನೆಲ್ಲ ಮಟ್ಟ ಹಾಕ್ಲಿಲ್ಲ?! ಬಸ್ವಗೆ ಹೇಳಿದ್ರೆ ಬೆಳಗಮುಂಚೆ ಕರ್ಕಾಬರ್ತಾ’
ಮಾದೇವಿಯ ಕೈಯಿಂದ ಫೋನು ಪಡೆÉದುಕೊಂಡು ಬಸವನ ನಂಬರಿಗೆ ಕರೆಮಾಡಿದ. ಅಲ್ಲಿ ರಿಂಗ್ ಆಗುತ್ತಲೇ ಮಾಬ್ಲನ ಭುಜವನ್ನು ಮಾದೇವಿ ಮೆಲ್ಲಗೆ ತಟ್ಟಿ ತೆಂಗಿನ ಮರದಿಂದ ಬರುವ ಸದ್ದಿಗೆ ಕಿವಿಕೊಟ್ಟಳು. ಕಿವಿಯಿಂದ ಮೊಬೈಲ್ ದೂರ ಹಿಡಿದು ಮಾಬ್ಲನೂ ತೆಂಗಿನ ಮರದಿಂದ ಬರುವ ಸದ್ದು ಕೇಳಿಸಿಕೊಂಡ. ಏನೋ ಅನುಮಾನ ಬಂದಂತಾಯ್ತು. ಬಸವನಿಗೆ ಹೋಗುತ್ತಿದ್ದ ಕರೆಯನ್ನು ನಿಲ್ಲಿಸಿದ. ತೆಂಗಿನ ಮರದಿಂದ ಬರುವ ಸದ್ದೂ ನಿಂತಿತು. ಪುನಃ ಬಸವನಿಗೆ ಕರೆಮಾಡಿದ. ಪುನಃ ಗುಣುಗುಣಿಸುವ ಸದ್ದು ಶುರುವಾಯಿತು. ಬೆಟ್ಟದಂತಹ ರಹಸ್ಯವನ್ನು ಬೇಧಿಸಿದ ಗರ್ವದಲ್ಲಿ ಬಸವನಿಗೂ ಅವನನ್ನು ಕಾಯಿಕೊಯ್ಯಲು ಬರಹೇಳಿದ ಮಾದೇವಿಗೂ ವಾಚಾಮಗೋಚರ ಬೈಯ್ಯತೊಡಗಿದ.
ಬ್ರಹ್ಮರಾಕ್ಷಸ ದೆವ್ವವು ಮರದಿಂದಿಳಿದು ಗಂಡನಿಗೇ ತಗುಲಿಕೊಂಡಿತೋ ಎಂಬ ಅನುಮಾನ ಬಂದವಳಂತೆ ಮಾದೇವಿ ಮಾಬ್ಲನನ್ನು ಮಿಕಮಿಕ ನೋಡತೊಡಗಿದಳು.
ಉದಯ ಗಾಂವಕರ

No comments: