Saturday 29 December 2018

ಬೆರಳುಗಳು

ಟ್ರೋಮಾ, ಎಮೆರ್ಜೆನ್ಸಿ, ಕ್ಯಾಸುವಾಲ್ಟಿ ಎಂದು ಬೇರೆ ಬೇರೆ ಬೋರ್ಡಿನಲ್ಲಿ ನೇತುಬಿದ್ದಿರುವ ಪದಗಳು ಒಂದೇ ಅರ್ಥದವೋ ಅಥವಾ ಅವುಗಳ ನಡುವೆ ಅರ್ಥವ್ಯತ್ಯಾಸಗಳು ಇವೆಯೋ ಎಂಬುದನ್ನು ನಿಘಂಟು ನೋಡಿ ತಿಳಿದುಕೊಳ್ಳಬೇಕು ಎಂದು ಹಿಂದೆ ಎಂದೋ ಇಲ್ಲಿಗೆ ಬಂದಾಗ ಅಂದುಕೊಂಡದ್ದು ಮತ್ತೆ ನೆನಪಾಯಿತು. ಈಗ ಆರು ದಿನಗಳಿಂದ ಇವೇ ಬೋರ್ಡುಗಳನ್ನು ಅವಶ್ಯಕತೆ ಇಲ್ಲದೆಯೂ ಓದಿಕೊಳ್ಳುತ್ತಾ, ಅಮ್ಮ ಇರುವ ಐ.ಸಿ.ಯು ಗೆ ಹೋಗಿಬರುತ್ತಿದ್ದೇನೆ. ಎಚ್ಚರವಿರುತ್ತಿದ್ದರೆ ಐ.ಸಿ.ಯು ಎಂದರೆ ಇದಾ ಎಂದು ಅಮ್ಮ ಉದ್ಘಾರ ತೆಗೆಯುತ್ತಿದ್ದರು. ಇಪ್ಪತ್ತು ವರ್ಷಗಳ ಹಿಂದೆ ಇರಬೇಕು, ಈಗ ಕರಡಿ ನಾಗಪ್ಪ ಎಂದು ಕರೆಯಿಸಿಕೊಳ್ಳುವ ಹಳೆಮನೆ ನಾಗಪ್ಪನ ಮೇಲೆ ಕರಡಿಯೊಂದು ದಾಳಿ ಮಾಡಿದ್ದರಿಂದ ಮೈಯೆಲ್ಲ ಗಾಯಗಳಾಗಿ ರಕ್ತಸ್ರಾವದಿಂದ ಬದುಕು-ಸಾವಿನ ನಡುವೆ ಏಗುತ್ತಿರುವ ಸ್ಥಿತಿಯಲ್ಲೇ ಆತನನ್ನು ಇದೇ ಆಸ್ಪತ್ರೆಗೆ ಸೇರಿಸಲಾಗಿತ್ತು. ವಾರದ ನಂತರ ಊರಿಗೆ ಬಂದವರೊಬ್ಬರು ನಾಗಪ್ಪನನ್ನು ಐ.ಸಿ.ಯು ನಲ್ಲಿಟ್ಟಿದ್ದಾರೆಂದು ಹೇಳಿದ್ದನ್ನು ಅಮ್ಮ ಐಸಿನಲ್ಲಿ ಎಂದು ತಪ್ಪಾಗಿ ಕೇಳಿಸಿಕೊಂಡಿರಬೇಕು- ತಪ್ಪಾಗಿ ಏನು, ನಾವು ಕೇಳಿಸಿಕೊಳ್ಳುವುದು ನಮಗೆ ಅರ್ಥವಾಗುವುದನ್ನು ಮಾತ್ರವೇ ಅಲ್ಲವೆ? ಹೆಣ ಕೊಳೆಯಬಾರದು ಎಂದು ನಾಗಪ್ಪನನ್ನು ಐಸಿನಲ್ಲಿಟ್ಟಿದ್ದಾರೆಂದು ಅಮ್ಮ ನನ್ನಲ್ಲಿ ಹೇಳಿದ್ದಲ್ಲದೆ, ಆತನ ಅಕಾಲ ಸಾವಿನ ಬಗ್ಗೆ ತುಂಬಾ ವ್ಯಥೆ ಪಟ್ಟುಕೊಂಡಿದ್ದಳು. ನಾಗಪ್ಪ ಗುಣಮುಖನಾಗಿ ವಾಪಸು ಬಂದಾಗ ನಾನೂ ಅಮ್ಮನ ಮುಖವನ್ನು ಪ್ರಶ್ನಾರ್ಥಕವಾಗಿ ನೋಡಿದ್ದೆ. ಆನಂತರ ಎಷ್ಟೋ ವರ್ಷಗಳ ಬಳಿಕ ನನಗೆ ಅದು ಐ.ಸಿ.ಯು ಆಗಿತ್ತು ಎಂಬುದು ಗೊತ್ತಾಯಿತು. ಅಮ್ಮಗೆ ಗೊತ್ತಾಗಿತ್ತೋ ಇಲ್ಲವೋ?
  ಈಗ ಅಮ್ಮ ಐ.ಸಿ.ಯುನಲ್ಲೇ ಇದ್ದಾಳೆ. ನಾನು ಹೊರಗಿದ್ದೇನೆ. ಯಾವಾಗಲೂ ಮುಚ್ಚಿಕೊಂಡೇ ಇರುವ ಐ.ಸಿ.ಯು ಬಾಗಿಲುಗಳ ಗಾಜಿನ ಕಿಂಡಿಯಿಂದ ಒಳಗಿರುವ ರೋಗಿಗಳನ್ನು ಅವರ ಸಂಬಂಧಿಗಳು ನೋಡುತ್ತಿರುತ್ತಾರೆ. ನಾನೂ ಆಗಾಗ ಅಮ್ಮನನ್ನು ಅದೇ ಕಿಂಡಿಯಿಂದ ನೋಡಿದ್ದೇನೆ. ಪೈಪುಗಳ ಜಾಲದಲ್ಲಿ ಸಿಕ್ಕಿಕೊಂಡು ಹೊರಬರುವ ವಿಫಲ ಪ್ರಯತ್ನ ಮಾಡಿ ಸುಸ್ತು ಹೊಡೆದು ಈಗಷ್ಟೇ ಮಲಗಿರುವಂತೇ ಅಲ್ಲಿನ ರೋಗಿಗಳು ಕಾಣುತ್ತಾರೆ. ಅಮ್ಮನ ಮೂಗಿಗೆ ಜೋಡಿಸಿದ ವೆಂಟಿಲೇಟರ್ ಕೊಳವೆ, ದೇಹಕ್ಕೆಲ್ಲ ಅಂಟಿಕೊಂಡ ಇ.ಸಿ.ಜಿ ಕೊಳವೆಗಳು, ಮೂತ್ರದ ಪೈಪು, ಆಹಾರಕ್ಕೆ ಪೈಪು, ಕೈಗೆ ಚುಚ್ಚಿಕೊಂಡ ಸಲೈನ್ ನಳಿಕೆ ಮತ್ತಿತರ ನಳಿಕೆಗಳನ್ನು ನೋಡಿ ನಾನು ಆಶ್ಚರ್ಯಪಟ್ಟಿದ್ದಿದೆ. ಅಬ್ಬಾ! ಆರೋಗ್ಯ ಸರಿ ಹೋದರೂ ಈ ನಳಿಕೆಗಳಿಂದ ಬಿಡಿಸಿಕೊಂಡು ಹೊರಬರುವುದು ಕಷ್ಟ ಎಂಬಂತಹ ಚಿತ್ರ. ಒಳಗೆ, ರೋಗಿಗಳದು ಒಂದು ಬಗೆಯ ಯಾತನೆಯಾದರೆ, ಇತ್ತ ವೇಟಿಂಗ್ ರೂಮಿನಲ್ಲಿ ದಿನವಿಡೀ ಒಂದೇ ಚಾನೆಲ್ಲಿನ ಸುದ್ದಿ ಕೇಳಿಸಿಕೊಳ್ಳುತ್ತಾ, ಆಗಾಗ ಬರುವ ಆಕಳಿಕೆಯನ್ನೂ, ಕಿರುನಿದ್ದೆಯನ್ನೂ ಮತ್ತು ಚಟ್ಟಂಬಡೆ ಚಹಾವನ್ನೂ ಸವಿಯುವ ಐ.ಸಿ.ಯು ರೋಗಿಗಳ ಸಂಬಂಧಿಕರದು ಇನ್ನೊಂದು ಬಗೆಯ ಯಾತನೆ. ದುಡ್ಡು ಹೊಂದಿಸಿಕೊಳ್ಳುವ ಸ್ವಂತದ ಸಮಸ್ಯೆಯ ನಡುವೆ ಯಾರೋ ಹೇಳಿಕೊಳ್ಳುವ ಕಷ್ಟಗಳು, ಮಲಗುವ ಸ್ಥಳ, ಬಾಥ್ ರೂಮು ಹೀಗೆ ಎಲ್ಲವನ್ನೂ ಹಂಚಿಕೊಳ್ಳಬೇಕು ಅವರು. ಆಗಾಗ ಯಾವ್ಯಾವುದೋ ಒಪ್ಪಿಗೆ ಪತ್ರಗಳಿಗೆ ಸಹಿ ಹಾಕುಲು ಮತ್ತು ಹೇಳಿದಾಗ ಕೌಂಟರಿಗೆ ಹೋಗಿ ದುಡ್ಡು ತುಂಬುವ ಸಲುವಾಗೇ ಸಂಬಂಧಿಗಳನ್ನು ಐ.ಸಿ.ಯು ನ ಹೊರಗೆ ಕಾಯಲು ಹೇಳುತ್ತಾರಿರಬೇಕು ಎಂದು ಕಾಸರಗೋಡಿನಿಂದ ಬಂದ ರಾಜೇಂದ್ರನ್ ಮೊನ್ನೆ ನನ್ನಲ್ಲಿ ಹೇಳಿದ್ದರು. ರಾಜೇಂದ್ರನ್‍ರ ಮಾತನ್ನು ಪೂರ್ತಿಯಾಗಿ ನಂಬದಿದ್ದರೂ ಹೂಂಗುಟ್ಟಿದ್ದೆ. ಈಗ ಅªರು ಸರಿಯಾಗೇ ಗ್ರಹಿಸಿದ್ದಾರೆ ಅನ್ನಿಸುತ್ತಿದೆ. ಬೆಳಿಗ್ಗೆ ಅರ್ಧ ಗಂಟೆ ಮತ್ತು ಸಂಜೆ ಅರ್ಧಗಂಟೆ ಮಾತ್ರ ರೋಗಿಯ ಭೇಟಿಗೆ ಅವಕಾಶ. ಆ ಅರ್ಧಗಂಟೆಯಲ್ಲಿ ಸಂಬಂಧಿಕರ ಪರವಾಗಿ ಗರಿಷ್ಠ ಇಬ್ಬರು ಒಳಹೋಗಬಹುದು. ಒಳಹೋಗಿ ಮಾಡುವುದೇನಿಲ್ಲ- ಮಿಕಿ ಮಿಕಿ ನೋಡುವ ಕಣ್ಣುಗಳನ್ನೇ ಒಂದಷ್ಟು ಹೊತ್ತು ನೋಡಬಹುದಷ್ಟೇ! ಹೀಗಿದ್ದರೂ, ಹೊರಬಂದ ಮೇಲೆ ಮತ್ತೆ ಗಾಜಿನ ಕಿಂಡಿಯಲ್ಲಿ ರೋಗಿಯ ಸಂಬಂಧಿಗಳು ಇಣುಕುತ್ತಿರುತ್ತಾರೆ. ಕಣ್ಣು ಮಾತ್ರ ಕಾಣ ಸುವಂತೆ ಮಾಸ್ಕ್ ಧರಿಸಿರುವ ನರ್ಸ್‍ಗಳು ಆಗೊಮ್ಮೆ ಈಗೊಮ್ಮೆ ಬಾಗಿಲು ತೆರೆದು ಹೊರಬರುವಾಗ ತಮ್ಮನ್ನು ಕರೆಯುತ್ತಾರೇನೋ ಎಂದು ಎಲ್ಲರೂ ಕುತ್ತಿಗೆ ಚಾಚುತ್ತಾರೆ.
 ಹೀಗೆ, ನಾನೂ ಗಾಜಿನ ಕಿಂಡಿಯಲ್ಲಿ ನೋಡಲು ಹೋದಾಗ ಅಲ್ಲಿದ್ದ ಸೆಕ್ಯುರಿಟಿ ಗಾರ್ಡ್ ಏನೋ ಹೇಳಿದಂತೆ ಕೇಳಿತು. ಆ ಕಡೆ ನೋಡಿದೆ. ನಾನು ಕೇಳಿಸಿಕೊಳ್ಳಲಿಲ್ಲವೆಂದು ಗೊತ್ತಾಗಿ ಆತ ಪುನಃ ಹೇಳಿದ-
`ಸರ್, ಒಳ್ಳೆ ಬೀಗ ಯಾವ್ದು? ....ಯಾವ್ದು ಅಂದ್ರೆ ಯಾವ ಕಂಪನೀದು?’
ಇದೇ ಆಸ್ಪತ್ರೆಯ ಬಾಗಿಲಿಗೆ ಬೀಗ ಜಡಿಯುವ ಜೋಕ್ ಮಾಡುತ್ತಿದ್ದಾನೆ ಅಂದ್ಕೊಂಡೆ. ಆದರೆ, ಆತನ ಮುಖ ನೋಡಿದಾಗ ಹಾಗೆನಿಸಲಿಲ್ಲ. ಆತನ ಮುಖದಲ್ಲಿ ಎಂತದ್ದೋ ಆತಂಕವಿತ್ತು. ಬಹಳ ಗಂಭೀರವಾಗೇ ಕೇಳಿದ ಪ್ರಶ್ನೆ ಅದು. ತೀರಾ ತಲೆಕೆಡಿಸಿಕೊಳ್ಳದೆ-
`ಗೊದ್ರೇಜ್ ಅಲ್ವಾ?’
ಅಂತ ಅವನನ್ನೇ ಕೇಳಿದೆ. ಆತನ ಕಿಸೆಯ ಮೇಲೆ ತೂಗು ಹಾಕಿದ ರಾಬರ್ಟ್ ಸಿಕ್ವೇರಾ ಎಂಬ ಹೆಸರು ಪಟ್ಟಿಯನ್ನು ನಾನು ಓದುತ್ತಿರುವುದನ್ನು ಆತ ಗಮನಿಸಿದನೆಂದು ಕಾಣುತ್ತದೆ. ಆ ಪಟ್ಟಿಯನ್ನು ಮುಟ್ಟಿನೋಡಿಕೊಂಡು ಅದು ಸ್ವಸ್ಥಾನದಲ್ಲಿದೆಯೇ ಎಂದು ಖಾತರಿಪಡಿಸಿಕೊಂಡ.
`ಗೊದ್ರೇಜ್ ಏನು ಸರ್, ಎಲ್ಲಾ ಆಯ್ತು...ಯೇಲೆ, ಅಲ್ಟೀ, ವಿಲ್ಸನ್.. ಯಾವುದೂ ಬಿಡಲಿಲ್ಲ.. ಏನೂ ಪ್ರಯೋಜನ ಆಗಲಿಲ್ಲ. ಅಲ್ಲೆಲ್ಲೋ ಹೊನ್ನಾವರದಲ್ಲಿ ಮಾವಿನಕುರ್ವೆ ಬೀಗ ಸಿಕ್ತದಂತೆ, ಅದೊಂದು ನೋಡಿಲ್ಲ.’
ಆರಂಭದ ಕೆಲ ಪುಟಗಳು ಕಿತ್ತುಹೋಗಿರುವ ಪತ್ತೆದಾರಿ ಕಾದಂಬರಿಯನ್ನು ಓದುತ್ತಿರುವಂತೆ ಅನ್ನಿಸಿತು. ವಿಸ್ಮಯ ಲೋಕದ ಬಾಗಿಲು ಪಕ್ಕನೆ ತೆರೆದು ನನ್ನೆದುರು ಕೌತುಕಗಳ ಮೂಟೆಯೇ ಬಿದ್ದಂತಾಯಿತು. ಮಿಕಿ ಮಿಕಿ ಕಣ್ಣು ಬಿಟ್ಟುಕೊಂಡು ಆ ಸೆಕ್ಯುರಿಟಿ ಗಾರ್ಡಿನತ್ತ ಬಾಯಿ ತೆರೆದು ನಿಂತೆ. ಯಾವ ಬೀಗ ಹಾಕಿದರೂ ತೆರೆವ ಕಳ್ಳರು ಯಾರಿರಬಹುದು? ಇವನ ಮಾತನ್ನು ಕೇಳಿದರೆ ಧನ-ಕನಕ ಮನೆಯಲ್ಲಿ ಕಾಲು ಮುರಿದು ಬಿದ್ದಹಾಗಿತ್ತು.
`ಪೋಲಿಸ್‍ರಿಗೆ ದೂರು ನೀಡಲಿಲ್ವಾ?’ ಎಂದು ಕೇಳಿದೆ.
ಗಾರ್ಡ್ ಇನ್ನಷ್ಟು ಹತ್ತಿರ ಬಂದ. ಅತ್ಯಂತ ಮುಖ್ಯ ಮತ್ತು ಗುಟ್ಟಿನ ಸಂಗತಿಯೊಂದನ್ನು ಹೇಳಲು ಬೇಕಾದ ಎಲ್ಲ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳತೊಡಗಿದ. ಎರಡು ಬಾರಿ ಕೆಮ್ಮಿದ. ಆಚೀಚೆ ನೋಡಿಕೊಂಡ. ಸ್ವಲ್ಪ ಬಾಗಿ ಆರಂಭಿಸಿದ-
`ಕಳ್ಳರಾದ್ರೆ ಪೋಲೀಸರಿಗೆ ದೂರು ಕೊಡಬಹುದಿತ್ತು...ಇದು ಹಾಗಲ್ಲ, ಸ್ವಂತ ತಮ್ಮನ ಹೆಂಡತಿ..’
ಮಾತು ಬಹಳಷ್ಟು ಮುಂದುವರಿಯುವ ಎಲ್ಲ ಸೂಚನೆಗಳೂ ನನಗೆ ಗೋಚರವಾಗತೊಡಗಿದವು. ಈಗಲೇ ತಪ್ಪಿಸಿಕೊಳ್ಳು ತಮ್ಮಾ ಎಂದು ನನ್ನೊಳಗಿಂದಲೇ ದನಿ ಬಂದ ಹಾಗೆನಿಸಿ-
`ಡಾಕ್ಟ್ರು ರೌಂಡ್ಸಿಗೆ ಎಷ್ಟೊತ್ತಿಗೆ ಬರ್ತಾರೆ?’ ಕೊನೇ ಪ್ರಶ್ನೆ ಎಂಬಂತೆ ಕೇಳಿದೆ.
`ಸರ್, ಅವರು ಇಷ್ಟೇ ಸಮಯಕ್ಕೆ ಬರ್ತಾರೆ ಎಂದು ಹೇಳುವುದು ಕಷ್ಟ. ದಿನವೂ ಒಂದೇ ಸಮಯಕ್ಕೆ ರೌಂಡ್ಸ್ ಆರಂಭಿಸುತ್ತಾರೆ. ನಾಲ್ಕು ಐ.ಸಿ.ಯು ಮುಗಿಸಿಕೊಂಡು ಇಲ್ಲಿಗೆ ಬರುವಾಗ ಏರುಪೇರಾಗುತ್ತದೆ.’
ಇಷ್ಟು ಹೇಳಿದವನೇ ಮೆಲ್ಲಗೆ ಮತ್ತೆರಡುಬಾರಿ ಕೆಮ್ಮಿದ. ಮತ್ತೆ ಶುರುಹಚ್ಚಿಕೊಂಡ-
`ಸ್ವಂತ ತಮ್ಮನ ಹೆಂಡತಿ ಸರ್..’
ಹಿಂದಿನ ದಿನದ ಕೊನೆಯ ಭಾಗದಿಂದಲೇ ಮುಂದುವರಿಯುವ ಧಾರಾವಾಹಿಗಳ ಹಾಗೆ, ಸಶೇಷವಾಗಿದ್ದ ತನ್ನ ಕತೆಯನ್ನು ಸ್ವಲ್ಪ ಹಿಂದಿನಿಂದಲೇ ಎತ್ತಿಕೊಂಡ.
`ಎಂತಾ ಬೀಗ ಹಾಕಿದ್ರೂ ತೆಗಿತಾಳೆ. ನಂಬರ್ ಬೀಗ ಹಾಕಿ ನೋಡಿದೆ. ಅದನ್ನೂ ಅವಳು ಪತ್ತೆ ಹಚ್ಚಿಬಿಡ್ತಾಳೆ. ಬೀಗದ ಕಂಪನಿಯವರು ಕೊಡುವ ಮೂರೂ ಬೀಗದ ಕೈಗಳನ್ನೂ ನನ್ನ ಬನಿಯನ್ನು ಕಿಸೆಯಲ್ಲಿಟ್ಟುಕೊಂಡು ಬರುತ್ತೇನೆ.’ ಎಂದು ಹೇಳಿ ತನ್ನ ಶರ್ಟಿನ ಎರಡು ಗುಂಡಿ ಬಿಚ್ಚಿ ಬನಿಯನ್ ಕಿಸೆಯೊಳಗೆ ಕೈತೂರಿಸಿ ಬೀಗದ ಕೈಯನ್ನು ಕಾಣ ಸಿದ. ಸ್ವಚ್ಚ ಯುನಿಫಾರ್ಮಿನ ಒಳಗಿರುವ ಬನಿಯನ್ನು ಹಿಂದೊಮ್ಮೆ ಬಿಳಿ ಬಣ್ಣದಾಗಿತ್ತೆಂದು ಊಹಿಸಬಹುದಿತ್ತು!
`ಆದ್ರೂ ಅವಳು ಡುಪ್ಲಿಕೇಟ್ ಬೀಗ ಮಾಡಿಸ್ಕೋತಾಳೆ..’
ಈತನ ಕತೆ ತೀರ ಅತಿಶಯದ್ದು ಅಂತ ಅನ್ನಿಸಿದ್ರೂ ಕೆಲವು ಮಿಸ್ಸಿಂಗ್ ಲಿಂಕ್‍ಗಳು ನನ್ನ ತಲೆ ಕೊರೆಯಲು ಆರಂಭಿಸಿದ್ದವು. ಕೇಳಿದರೆ ಕತೆ ಮತ್ತಷ್ಟು ಮುಂದುವರಿಯುವ ಭಯ ಇದ್ದುದರಿಂದ ಹೇಗೋ ತಡೆದುಕೊಂಡಿದ್ದೆ.
`ಮೊನ್ನೆ ನೋಡಿ.. ಮೂವತ್ತೆರಡು ತೆಂಗಿನ ಕಾಯಿಗಳನ್ನು ಜಗಲಿ ಮೇಲೆ ಜೋಡಿಸಿದ್ದೆ. ಹೇಗೆ ಜೋಡಿಸಿದ್ದೆ ಅಂದರೆ, ತೆಗೆಯುವುದಾದರೆ ಮೇಲಿನ ಕಾಯಿ ತೆಗೆಯಬೇಕು. ಬೇರೆ ಎಲ್ಲಿಯ ಕಾಯಿ ತೆಗೆದರೂ ಪೂರ್ತಿ ರಾಶಿಯೇ ಉರುಳಬೇಕು..ಹಾಗೆ. ನಿನ್ನೆ ಡ್ಯೂಟಿ ಮುಗಿಸಿ ಮನೆಗೆ ಹೋಗುತ್ತೇನೆ..ಕಾಯಿಗಳೆಲ್ಲ ಜಗುಲಿ ತುಂಬಾ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಎಣ ಸಿ ನೋಡಿದೆ, ಇಪ್ಪತೊಂಬತ್ತೇ!... ಏನು ಹೇಳ್ತೀರಿ ಇದಕ್ಕೆ?’
ಇವನ ಕತೆ ಹಾಳಾಗ್ಲಿ. ಎಂಥ ಬೀಗ ಜಡಿದರೂ ತೆಗೆವ ನಟವರಲಾಲನಂತಹ ಇವನ ತಮ್ಮನ ಹೆಂಡತಿ ಬರೇ ಮೂರು ತೆಂಗಿನಕಾಯಿಗಾಗಿ ಮಾಡುವ ಸಾಹಸ ನಂಬುವಂತದ್ದೆ? ಅದಿರಲಿ, ಇವನ ಮನೆ ಸದಾ ಬೀಗಮುದ್ರೆಯಲ್ಲಿ ಇರುವುದಾದರೂ ಯಾವ ಕಾರಣದಿಂದ? ಮನೆಯಲ್ಲಿ ಒಬ್ಬರೇ ಇರುವ ಪರಿಸ್ಥಿತಿ ಯಾಕೆ ಬಂದಿದೆ ಈ ಮನುಷ್ಯನಿಗೆ? ವಯಸ್ಸು ಅರವತ್ತರ ಆಸುಪಾಸಿನಲ್ಲಿದ್ದರೂ ಈತ ಏಕಾಂಗಿಯಾದದ್ದು ಹೇಗೆ? ಹೀಗೆಲ್ಲ ನನ್ನ ತಲೆಯಲ್ಲಿ ಪ್ರಶ್ನೆಗಳು ಬರುವ ಹಾಗೆ ಕತೆ ಹೆಣ ದಿದ್ದಾನೆ ಘಾಟಿ ಮನುಷ್ಯ, ಅವುಗಳಿಗೆ ಉತ್ತರ ಪಡೆಯುವುದು ತೀರಾ ಜರೂರು ಎಂಬಂತಹ ಸಂಕಟದ ಸ್ಥಿತಿ ನಿರ್ಮಿಸಿದ್ದಾನೆ.
`ಮನೆಯಲ್ಲಿ ಇನ್ಯಾರೂ ಇಲ್ಲವಾ?’ ಕೇಳಿದೆ.
`ಅಮ್ಮ ಇದ್ದಾರೆ. ವಯಸ್ಸಾಗಿದೆ. ಕಣ್ಣು ಸರಿ ತೋರುವುದಿಲ್ಲ..ಕಿವಿಯಂತೂ ಕೇಳುವುದೇ ಇಲ್ಲ. ಯಾರಾದ್ರೂ ಬಂದಿದ್ರಾ ಅಂತ ದಿನಾ ಕೇಳ್ತೇನೆ.. ಯಾರೂ ಬರ್ಲಿಲ್ಲ ಎಂದು ಬಾರದೇ ಇದ್ದದ್ದೇ ತಪ್ಪು ಎಂಬ ಹಾಗೆ ಹೇಳ್ತಾರೆ’ ಅಂದ.
`ಅಲ್ಲ... ಯಾರೂ ಬರಬಾರದು ಅಂತಲೇ ನೀವು ಬೀಗ ಹಾಕುವುದಲ್ಲ? ಮತ್ಯಾಕೆ ಬರ್ತಾರೆ?’ ಅಂದೆ. ಆತನ ಇದುವರೆಗಿನ ಕತೆಯನ್ನು ಅಲ್ಲಗಳೆಯುವವನಂತೆ. ನಂತರ, ವಾಸ್ತವವೇ ಕೆಲವೊಮ್ಮೆ ಫ್ಯಾಂಟಸಿಯ ಕತೆಗಳಿಂತ ನಂಬಲಸಾಧ್ಯವಾಗಿರುತ್ತದೆ ಎಂದು ಅನ್ನಿಸಿತು. ನೀವು ಹೇಳುತ್ತಿರುವುದೆಲ್ಲ ಸುಳ್ಳು ಎಂದು ಅವನ ಮುಖದ ಮೇಲೆ ಹೊಡೆದಂತೆ ಹೇಳುವುದು ಸರಿಯಲ್ಲವೆಂದು ಭಾವಿಸಿ, ಎಲ್ಲಾದರೂ ಮಾತು ನಿಲ್ಲಿಸುವ ನಿಲ್ದಾಣದಂತಹ ಜಾಗ ಹುಡುಕುತ್ತಾ ಹೇಳಿದೆ-
`ನಿಮ್ಮ ತಮ್ಮನ ಮೂಲಕವೇ ಆಕೆಗೆ ಬುದ್ಧಿಹೇಳಿಸುವುದು ಬಿಟ್ಟು ಬೇರೇನು ಮಾಡಲು ಸಾಧ್ಯ? ಎಷ್ಟೆಂದರೂ ತಮ್ಮನಲ್ಲವೆ?..ಹೇಳಿ ನೋಡಿ’ ಎಂಬ ಪರಿಹಾರವನ್ನು ನೀಡಿ, ಮಾತುಕತೆ ಮುಗಿದ ಹಾಗೆಯೇ ಅಂದುಕೊಂಡÀು ಡಾಕ್ಟರ್ ಬರುವ ದಾರಿಂiÀiತ್ತ ನೋಡತೊಡಗಿದೆ.
`ತಮ್ಮ ಇದ್ದಿದ್ರೆ ಬೇರೆ ಮಾತು ಸರ್. ಅವನು ಸತ್ತು ಆರು ವರ್ಷಗಳಾದವು. ಅಮ್ಮಗೆ ಆ ಮೊಮ್ಮಕ್ಕಳಂದರೆ ಪ್ರೀತಿ. ಅಮ್ಮಗೆ ಬೇಜಾರಾಗುವುದು ನನಗೂ ಬೇಕಿಲ್ಲ.. ಅದ್ಕೇ ಸಹಿಸಿಕೊಂಡಿದ್ದೇನೆ...’
`ಮತ್ತೆ, ನಿಮ್ಮ ಮಕ್ಕಳು ಎಲ್ಲಿರತಾರೆ?’
`ಅದು ದೊಡ್ಡ ಕತೆ ಸರ್’ ಎಂದು ದೀರ್ಘ ಉಸಿರು ಎಳೆದುಕೊಂಡ. `ನನ್ನ ಹೆಂಡತಿ ನನ್ನ ಜೊತೆ ಇಲ್ಲ.. ತವರು ಮನೆಲಿದ್ದಾಳೆ. ಒಬ್ಬಳೇ ಮಗಳು. ಅವಳೂ ಅಲ್ಲೇ ಇದ್ದಾಳೆ. ನನಗೂ ಅವರಿಗೂ ಸಂಪರ್ಕ ಇಲ್ಲ’
ಮತ್ತೊಮ್ಮೆ ಉಸಿರೆಳೆದುಕೊಂಡು- `ಅವರಿಗೆ ನಾನು ಬೇಕು, ಅಮ್ಮ ಬೇಡ. ನನಗೆ ಅಮ್ಮ ಬೇಕು..ಇನ್ಯಾರೂ ಇಲ್ಲದಿದ್ದರೂ ಅಡ್ಡಿಯಿಲ್ಲ...’ ಎಂದು ಸ್ವಗತವೆಂಬಂತೆ ಹೇಳಿಕೊಂಡ.
ಅಷ್ಟೊತ್ತಿಗೆ ನರ್ಸ್ ಬಾಗಿಲ ಬಳಿ ಬಂದು ನನ್ನಮ್ಮನ ಹೆಸರು ಹೇಳಿ ಕೂಗಿದಳು. ಇದು ಆಸ್ಪತ್ರೆಯ ರೂಢಿ; ರೋಗಿಯ ಸಂಬಂಧಿಕರು ಬೇಕಾದಾಗ ರೋಗಿಯ ಹೆಸರನ್ನೇ ಹೇಳಿ ಕೂಗುತ್ತಾರೆ. ಒಳಗೆ ಹಾಸಿಗೆಯ ಮೇಲೆ ಮಲಗಿರುವ ರೋಗಿಗಳು ತಮ್ಮ ಹೆಸರನ್ನು ಕರೆಯುವಾಗ ಹೇಗೆ ಪ್ರತಿಕ್ರಿಯಿಸುತ್ತಾರೋ ಎಂಬ ಸಣ್ಣ ಆತಂಕ ಹೀಗೆ ಕೂಗುವಾಗೆಲ್ಲ ನನ್ನನ್ನು ಕಾಡುತ್ತದೆ. ಅಮ್ಮನ ಹೆಸರಿಗೆ ನಾನು ಓಗೊಟ್ಟೆ-  `ಇಲ್ಲಿದ್ದೇನೆÀÉ’ ಎಂದೆ. ಯಾವುದೋ ಪರೀಕ್ಷೆಯ ಮೊದಲು ಒಪ್ಪಿಗೆ ಪತ್ರ ತುಂಬಿಸಬೇಕಿತ್ತು.
_______________________

ಸಿಕ್ವೇರಾ ಎಂಬ ಸೆಕ್ಯುರಿಟಿ ಗಾರ್ಡ್ ರಾತ್ರಿಯವರೆಗೂ ಯಾಕೆ ಕಾಡಿದ ಎಂಬುದು ನನಗೂ ಗೊತ್ತಾಗಲಿಲ್ಲ. ನಿದ್ದೆ ಎಲ್ಲವನ್ನೂ ತೊಳೆದು ಹೊಸ ಬೆಳಗನ್ನು ನೀಡಿತು. ಎದ್ದವನೇ ಐ.ಸಿ.ಯುನ ಬಾಗಿಲವರೆಗೆ ಹೋಗಿ ಬಂದೆ. ಏಳು ಗಂಟೆಗೆ ಒಳಹೋಗಲು ಬಿಡುತ್ತಾರೆ. ಅರ್ಧ ಗಂಟೆಯ ಅವಧಿಯಲ್ಲಿ ಗರಿಷ್ಟ ಇಬ್ಬರು ಬಂಧುಗಳು ನೋಡಿ ಬರಬಹುದು. ನಾನೊಬ್ಬನೇ ಇರುವುದರಿಂದ ಪೂರ್ತಿ ಅರ್ಧಗಂಟೆ ನನಗೊಬ್ಬನಿಗೇ! ಆದರೆ, ಒಳಹೋಗಿ ಮಾಡುವುದೇನಿದೆ? ಅಮ್ಮ ಮಾತನಾಡುವುದಿಲ್ಲವಲ್ಲ?!   
ಅಮ್ಮ ಕೊನೆಯ ಬಾರಿ ಪದಗಳನ್ನು ಉಚ್ಚರಿಸಿದ್ದು ಮನೆಯಲ್ಲೇ! ಅಂಬುಲೆನ್ಸ್ ಏರುವ ಸ್ವಲ್ಪ ಮೊದಲು. ಬಾಲು ಎಂದು ಕ್ಷೀಣ ಧ್ವನಿಯಲ್ಲಿ ಅಣ್ಣನನ್ನು ಕರೆದದ್ದು ನನಗೆ ಕೇಳಿಸಿತ್ತ್ತು. ಅಮ್ಮ ಏನಂತಿದ್ದಾಳೆ ಎಂದು ಪ್ರಶ್ನಿಸುವವಳಂತೆ ಮಂದಾಕಿನಿ ನನ್ನ ಮುಖ ನೋಡಿದ್ದಳು. ನನಗೇನೂ ಅರ್ಥವಾಗಿಲ್ಲ ಎಂಬಂತೆ ಭುಜ ಎತ್ತರಿಸಿ ಸನ್ನೆಮಾಡಿದ್ದೆ. ಮಂದಾಕಿನಿಗೆ ನಿಜಕ್ಕೂ ಕೇಳಿಸಲಿಲ್ಲವೋ ಅಥವಾ ಆಕೆ ಕೇಳಿಸದ ಹಾಗೆ ಮಾಡಿದಳೋ?! ಎರಡುವರ್ಷಗಳ ಹಿಂದೆ ಗಣೇಶನಹಬ್ಬಕ್ಕೆ ಅಣ್ಣ ಊರಿಗೆ ಬಂದಾಗ ಮಂದಾಕಿನಿಯ ಬಗ್ಗೆ ಅಮ್ಮ ಏನೋ ದೂರಿದ್ದಳಿರಬೇಕು, ಬೆಂಗಳೂರಿಗೆ ಹೊರಟು ನಿಂತಾಗ ಅಣ್ಣ ಹೇಳಿದ್ದ `ಒಬ್ಬಳು ಕೆಲಸದವಳನ್ನು ಹುಡುಕು, ನಾನೇ ಅವಳ ಸಂಬಳ ಕೊಡುವೆ.. ಮಂದಾಕಿನಿಗೂ ಕಷ್ಟ.. ಆಯಾಸ ಆದಾಗ ಸಿಟ್ಟು ಬರುವುದು ಸಹಜ.. ವಯಸ್ಸಾದವರಿಗೆ ತಾವು ಹೊರೆಯಾಗಿದ್ದೇವೆ ಅಂತನ್ನಿಸಬಾರದು ಅಲ್ವಾ?’ ಎಂದಿದ್ದ. ಅದಕ್ಕೆ ಮಂದಾಕಿನಿ `ಎರಡು ದಿನ ನೋಡಿದರೆ ಏನೂ ಗೊತ್ತಾಗುವುದಿಲ್ಲ ಭಾವಾ.. ಒಂದು ತಿಂಗಳು ಅತ್ತೆಯನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಿ... ನಿಮಗೇ ತಿಳಿಯುತ್ತದೆ’ ಎಂದಿದ್ದಳು. ಹೋಗುವ ಕ್ಷಣದಲ್ಲಿ ಅಣ್ಣಗೆ ಈ ರೀತಿ ಮಂದಾಕಿನಿ ಉತ್ತರ ಕೊಟ್ಟದ್ದು ನನಗೆ ಹಿಡಿಸಿರಲಿಲ್ಲ. ಎರಡು ದಿನ ನಮ್ಮಿಬ್ಬರ ನಡುವೆ ಮಾತುಕತೆ ನಡೆದಿರಲಿಲ್ಲ.
  ಆ ನಂತರ ನಾನೂ ಅಣ್ಣನೊಡನೆ ಅನೇಕ ಬಾರಿ ಫೋನು ಮಾಡಿ ಮಾತಾಡಿದ್ದಿದೆ. ಮಂದಾಕಿನಿಯೂ ಅತ್ತಿಗೆಯೊಡನೆ ಗಂಟೆಗಟ್ಟಲೆ ಹರಟಿದ್ದೂ ಇದೆ. ಅತ್ತಿಗೆ ಹೇಳಿಕೊಟ್ಟ ಯಾವ್ಯಾವುದೋ ಅಡಿಗೆಯನ್ನು ನನ್ನ ಮೇಲೆ ಪ್ರಯೋಗಿಸಿ ದೊರೆತ ಅಪ್ರಾಮಾಣ ಕ ಅಭಿಪ್ರಾಯವನ್ನು ನಿಜದ ಫಲಿತಾಂಶ ಎಂದು ತಿಳಿದು, ಅದನ್ನು ಅತ್ತಿಗೆಗೆ ಫೋನು ಮಾಡಿ ಮಂದಾಕಿನಿ `ಸೂಪರ್ ಇದೆ ‘ ಅಂದಿದ್ದೂ ಇದೆ. ಆದರೂ, ಮಂದಾಕಿನಿಯ ಎದೆಯ ಗಾಯ ಆರಲಿಲ್ಲ ಎಂಬುದು ಆಗಾಗ ಅನುಭವಕ್ಕೆ ಬರುತ್ತಿತ್ತು.  ಸೆಲ್ಫಿ ವಿಥ್ ಅಮ್ಮಾ ಎಂಬ ಶೀರ್ಷಿಕೆಯೊಂದಿಗೆ ಅಮ್ಮನೊಂದಿಗಿನ ತನ್ನ ಚಿತ್ರವನ್ನು ಅಣ್ಣ ತನ್ನ ಫೇಸ್‍ಬುಕ್ ಗೋಡೆಗೆ ನೇತುಹಾಕಿದ್ದನ್ನು ಮಂದಾಕಿನಿ ಕಾಣ ಸಿದ್ದಳು. ಅವಳ ಮುಖದಲ್ಲಿ ಎದ್ದು ತೋರುತ್ತಿದ್ದ ವ್ಯಂಗ್ಯವನ್ನು ಅರ್ಥಮಾಡಿಕೊಳ್ಳಲಾರದಷ್ಟು ಪೆದ್ದನಂತೆ ನಟಿಸುವುದು ನನಗೆ ಅಭ್ಯಾಸವಾಗಿತ್ತು. ಮೂರು ತಿಂಗಳ ಹಿಂದಷ್ಟೇ ಅಮ್ಮ ಮೊಮ್ಮಕ್ಕಳನ್ನು ನೋಡಬೇಕೆನಿಸಿದೆ ಎಂದು ಹಟಮಾಡಿದ್ದರಿಂದ ಅವಳನ್ನು ಬೆಂಗಳೂರಿನ ಅಣ್ಣನ ಮನೆಗೆ ಬಿಟ್ಟುಬಂದಿದ್ದೆ. ನಾಲ್ಕೇ ದಿನಗಳÀಲ್ಲಿ ಅಮ್ಮನ ವಾಪಸು ಕರೆದುಕೊಂಡು ಅಣ್ಣ ಊರಿಗೆ ಬಂದಿದ್ದ. `ಎಷ್ಟು ಹೇಳಿದ್ರೂ ಅಮ್ಮ ಉಳಿಯಲು ಒಪ್ಪುತ್ತಿಲ್ಲ. ಅಲ್ಲಿನ ಹವೆಯೇ ಒಗ್ಗುತ್ತಿಲ’್ಲ ಅಂತಿದ್ದಾಳೆ ಎನ್ನುವಾಗ ಅಲ್ಲೇ ಇದ್ದ ಅಮ್ಮ ಏನೂ ಮಾತಾಡಿರಲಿಲ್ಲ. ಒಳಗೆ ಚಹಾ ಮಾಡುತ್ತಿದ್ದ ಮಂದಾಕಿನಿ `ಅದೆಂತಾ ಹವೆಯಪ್ಪಾ ನಿಮ್ಮ ಬೆಂಗಳೂರಿನದು’ ಎಂದು ಹೇಳಿದ್ದರಲ್ಲಿ ಇಣಕುತ್ತಿದ್ದ ವ್ಯಂಗ್ಯ ಅಣ್ಣನಿಗೆ ಗೊತ್ತಾಗಿಬಿಡಬಹುದೋ ಎಂದು ನಾನು ಚಡಪಡಿಸುತ್ತಿರುವಾಗ ಮಂದಾಕಿನಿಗೆ ತನ್ನ ಮಾತಿನ ವ್ಯಂಗ್ಯ ಅಣ್ಣನನ್ನು ತಲುಪಿಲ್ಲವೇನೋ ಎನಿಸಿರಬೇಕು-ಅಡುಗೆಮನೆಯಲ್ಲಿ ಲೋಟವೊಂದು ಉರುಳಿ ಟಣ್ ಟಣ್ ಎಂದು ರಿಂಗಣ ಸುತ್ತಾ ನಿಧಾನವಾಗಿ ಮನೆಯ ತುಂಬಾ ಮೌನವನ್ನು ಹರಡಿತ್ತು.
 ಸ್ನಾನ ಮುಗಿಸಿ, ಆಸ್ಪತ್ರೆಯ ಕ್ಯಾಂಟೀನಿನಲ್ಲಿ ಇಡ್ಲಿ ತಿಂದು ಬರುವಷ್ಟರಲ್ಲಿ ಆರೂ ಮುಕ್ಕಾಲಾಯಿತು. ಅಷ್ಟರಲ್ಲೇ ಸಿಕ್ವೇರಾ ತನ್ನ ಹಗಲು ಡ್ಯೂಟಿಗೆ ಆಗಮಿಸಿದ್ದ. ಮುಂಜಾನೆ ಆರು ಗಂಟೆಯಿಂದ ಮದ್ಯಾಹ್ನದ ಎರಡು ಗಂಟೆಯವರೆಗೆ ಸಿಕ್ವೇರಾನ ಹಗಲು ಡ್ಯೂಟಿ. ಎಷ್ಟೋ ವರ್ಷಗಳ ಪರಿಚಯದ ಹಾಗೆ ಎದುರು ಸಿಕ್ಕಿದ್ದಕ್ಕೆ ಒಂದು ನಗು ಬೀರಿದ ಸಿಕ್ವೇರಾ. `ಎಷ್ಟು ದೂರವಾಗುತ್ತದೆ ಇಲ್ಲಿಂದ ನಿಮ್ಮನೆ?’ ಎಂದು ಕೇಳಿದೆ; ಆತನ ಮುಗಳ್ನಗುವಿನ ಸಾಲ ತೀರಿಸುವವನಂತೆ. `ಹತ್ತಿರ ಸಾರ್, ಸರಳೇಬೆಟ್ಟು ಅಂತ, ಇಲ್ಲೇ ಚರ್ಚಿನ ಹತ್ತಿರ... ನಮ್ಮಪ್ಪ ಬಹಳ ಫೇಮಸ್ ಆಗಿದ್ರು.. ಸಿಕ್ವೇರಾ ನಾಯ್ಕರ ಮನೆ ಎಂದ್ರೆ ಅಲ್ಲಿ ಎಲ್ಲರಿಗೂ ಗೊತ್ತು’ ಅಂದ. `ಏನ್ ಮಾಡೋದು ನಮ್ ಕತೆ ಹೀಗೆ.. ಕಾಯೋದು... ಒಳಗಿರೋ ಪೇಷಂಟ್‍ಗಳು ಓಡಿ ಹೋಗ್ತಾರಾ?’ ಎಂದು ನನ್ನನ್ನೇ ಪ್ರಶ್ನಿಸಿ ವಿಷಾದದ ನಗು ಬೀರಿದ.
  ಅಟೆಂಡೆಂಟ್ಸ್ ಪಾಸನ್ನು ಸಿಕ್ವೇರಾನ ಕೈಯಲ್ಲಿ ಕೊಟ್ಟು ಒಳಹೋದೆ. ಪಕ್ಕದ ಬೆಡ್ಡಿನಲ್ಲೂ ಕಳೆದ ಮೂರು ದಿನಗಳಿಂದ ಅದೇ ಪೇಷಂಟ್ ಇದ್ದರು. ಇನ್ನುಳಿದ ಬೆಡ್‍ಗಳಲ್ಲಿ ರೋಗಿಗಳು ಬದಲಾಗಿರುವರು ಎಂಬುದು ಅಲ್ಲಿರುವ ಅವರ ಸಂಬಂಧಿಕರನ್ನು ನೋಡಿದಾಗ ತಿಳಿಯಿತು. ಐ.ಸಿ.ಯು ಬೆಡ್ಡಿನಲ್ಲಿರುವ ರೋಗಿಗಳು ಬದಲಾಗುವುದೆಂದರೆ ಅವರು ಹುಷಾರಾದರು ಅಂತಲ್ಲ. ನಿನ್ನೆ ಒಬ್ಬ ರೋಗಿ ತನ್ನ ಸಂಬಂಧಿಕರಲ್ಲಿ ಇಲ್ಲಿನ ನರ್ಸುಗಳ ಬಗ್ಗೆ ದೂರು ಹೇಳುತ್ತಿದ್ದ. ಇಲ್ಲಿ ಮತ್ತೂ ಕೆಲವು ದಿನ ಇಟ್ಟರೆ ತನ್ನನ್ನು ಕೊಂದೇ ಬಿಡುವರೆಂದು ಹೇಳುತ್ತಿದ್ದ. ಹಿರಿಯ ನರ್ಸೊಬ್ಬಳು ಆ ರೋಗಿಯ ಸಂಬಂಧಿಯನ್ನು ಹತ್ತಿರ ಕರೆದು ಐ.ಸಿ.ಯುನಲ್ಲಿ ಪ್ರಜ್ಞೆಯಲ್ಲಿರುವ ರೋಗಿಗಳಲ್ಲಿ ಈ ರೀತಿಯ ವರ್ತನೆ ಸಾಮಾನ್ಯ. ಇದು ಆಲ್ಟರ್ಡ್ ವರ್ತನೆ, ನಿಜವಾದದ್ದಲ್ಲ ಎಂದಿದ್ದರು. ಐ.ಸಿ.ಯುನಲ್ಲಿರುವವರಿಗೆ ಪ್ರಜ್ಞೆ ಇರುವುದೇ ತಪ್ಪು ಎಂಬಂತಿತ್ತು ಅವರ ಮಾತಿನ ದಾಟಿ. ಅಮ್ಮನ ಪಕ್ಕದ ಬೆಢ್ಡಿನಲ್ಲಿರುವ ವೃದ್ಧೆಯನ್ನು ನೋಡಲು ಎಂದಿನಂತೆ ಅವರ ಮಗಳು ಬಂದಿದ್ದರು. ಅವರ ಹೆಸರು ಸರೋಜಾ. ಕೊಂಕಣ  ಮಾತನಾಡುವವರು. ದಿನವೂ ಏಳುಗಂಟೆಗೆ ಒಳಬಂದು ಅಮ್ಮಾ ಅಮ್ಮಾ ಎಂದು ಕರೆಯುತ್ತಾರೆ. `ಅಮ್ಮಾ.. ಅಮ್ಮಾ..ಹಾಂವು..ಸರೋಜಾ..’ ಎನ್ನುತ್ತಾ ಅಲ್ಲಿ ಅವರು ಇರುವ ಆ ಅರ್ಧಗಂಟೆಯೂ ಕರೆಯುತ್ತಿರುತ್ತಾರೆ. ಈವತ್ತೂ ಹಾಗೆಯೇ ಕರೆಯುತ್ತಾ ಚಲನೆಯೇ ಇಲ್ಲದ ತನ್ನಮ್ಮನನ್ನು ಎಬ್ಬಿಸಲು ಪ್ರಯತ್ನಿಸುತ್ತಿದ್ದ ಸರೋಜಾ ಏನೋ ಪವಾಡವೇ ನಡೆದಷ್ಟು ಆಶ್ಚರ್ಯ ಖುಷಿಯನ್ನೆಲ್ಲ ಒಟ್ಟೊಟ್ಟಿಗೆ ಸೇರಿಸಿ ` ಅಣ್ಣಾ.. ಇಲ್ನೋಡಿ’ ಎಂದರು. ನಾನು ತಿರುಗಿದೆ. `ಇಲ್ನೋಡಿ.. ನಾನು ಅಮ್ಮಾ ಎಂದಾಗ ಅಮ್ಮ ಹೇಗೆ ಬೆರಳು ಅಲ್ಲಾಡಿಸಿದರು.. ನೋಡಿ ಅಣ್ಣಾ’ ಎಂದರು. ಬೆರಳುಗಳ ಚಲನೆಯೂ ಒಮ್ಮೊಮ್ಮೆ ಭಾಷೆಯಷ್ಟೇ ಸಶಕ್ತ ಸಂವಹನವಾಗಬಹುದಲ್ಲ ಎಂದು ಅಂದುಕೊಳ್ಳುತ್ತಾ ಆಕೆ ತೋರಿಸಿದ ಬೆರಳುಗಳನ್ನು ನೋಡಿದೆ. ಅವು ಮಾಮೂಲಿನಂತೆ ನಿಶ್ಚಲವಾಗಿದ್ದವು. `ಈಗಷ್ಟೇ ಬೆರಳುಗಳನ್ನು ಅಲ್ಲಾಡಿಸಿದ್ದರು..’ ಎಂದು ನನಗೆ ತೋರಿಸಲಾರದ್ದಕ್ಕೆ ವ್ಯಥೆÉಪಡುತ್ತಾ ಮತ್ತೆ `ಅಮ್ಮಾ ಅಮ್ಮಾ .. ಎಂದು ಕರೆಯಲು ಆರಂಭಿಸಿದರು. ಬೆರಳುಗಳು ನಿಶ್ಚಲವಾಗೇ ಇದ್ದವು. ನನ್ನ ಅನುಕಂಪದ ಕಣ್ಣುಗಳು ಸರೊಜಾರಿಗೆ ಕಾಣದ ಹಾಗೆ ಮುಖ ತಿರುಗಿಸಿ ನನ್ನಮ್ಮನ ಕಡೆ ತಿರುಗಿದೆ. ನನಗೂ ತಿಳಿಯದಂತೆ ನನ್ನ ಕಣ್ಣುಗಳು ಅಮ್ಮನ ಕೈಬೆರಳುಗಳ ಕಡೆ ಚಲಿಸಿದವು.
_________________________________
ಅರ್ಧ ಗಂಟೆಯ ಸಂದರ್ಶನದ ಅವಧಿ ಮುಗಿಸಿ ಹೊರಬಂದು ಸಿಕ್ವೇರಾನಲ್ಲಿ ಕಾರ್ಡು ಪಡೆದುಕೊಂಡೆ.
`ಈವತ್ತು ಡಾಕ್ಟರುಗಳಿಗೆ ರಜೆ ಸರ್, ಸ್ಕ್ಯಾನಿಂಗು, ರಕ್ತ, ಮಲ-ಮೂತ್ರ ಪರೀಕ್ಷೆಗಳೂ ಇರೋದಿಲ್ಲ... ನೀವು ಎಲ್ಲಿಗಾದರೂ ಹೋಗುವುದಿದ್ರೆ ಹೋಗಿ ಬರಬಹುದು’ ಎಂದ.
ಎಲ್ಲಿಗೆ ಹೋಗಬೇಕೆಂಬುದು ಗೊತ್ತಿರದಿದ್ದರೂ `ಹೌದಲ್ಲ’ ಎಂದೆ.
`ಒಂದು ವೇಳೆ ಯಾವುದೋ ಕಾರಣಕ್ಕೆ ಒಳಗಿಂದ ಕರೆ ಬಂದರೆ ಏನು ಮಾಡುವುದು ಸಿಕ್ವೇರಾರವರೆ?’
`ದೂರ ಹೋಗೋದಿಲ್ವಲ್ಲ.. ನಿಮ್ಮ ನಂಬರ್ ಕೊಡಿ, ನಾನು ಫೋನು ಮಾಡುವೆ.. ಅರ್ಧಗಂಟೆಯೊಳಗೆ ವಾಪಸು ಬರುವಷ್ಟೇ ದೂರ ಹೋಗಿ’
ನಂಬರು ಕೊಟ್ಟೆ. ಸರಿಯಾಗಿದೆಯೇ ಎಂದು ಪರೀಕ್ಷಿಸುವ ಸಲುವಾಗಿ ಕರೆ ಮಾಡಲು ತಿಳಿಸಿದೆ. ಸಿಕ್ವೇರಾನ ನಂಬರÀನ್ನು ನನ್ನ ಮೊಬೈಲಲ್ಲಿ ಸೇವ್ ಮಡಿಕೊಂಡು ಅಸ್ಪತ್ರೆಯಿಂದ ಹೊರ ನಡೆದೆ. ಆಸ್ಪÀತ್ರೆಯಿಂದ ಹೊರಹೋಗಬೇಕೆಂಬುದೇ ಸದ್ಯದ ಗುರಿಯಾಗಿತ್ತೇ ಹೊರತು ಎಲ್ಲಿಗೆ ಹೋಗುವುದೆಂಬುದು ನಿಗಧಿಯಾಗಿರಲಿಲ್ಲ. ರಿಕ್ಷಾದವನನ್ನು ಕರೆದೆ. ಸರಳೇಬೆಟ್ಟು ಚರ್ಚಿನ ಹತ್ತಿರ ಸಿಕ್ವೇರಾ ನಾಯ್ಕರ ಮನೆ ಅಂದೆ. `ಚರ್ಚಿನ ಹತ್ತಿರ ಬಿಡತ್ತೇನೆ.. ಮತ್ತೆ ನಾಯ್ಕರ ಮನೆಗೆ ಕೇಳಿಕೊಂಡು ಹೋಗಿ..’ ಎಂದ ರಿಕ್ಷಾದವ-ತುಳು ಭಾಷಿಕರ ರಾಗದ ಕನ್ನಡದಲ್ಲಿ.
ಚರ್ಚಿನ ಹತ್ತಿರ ಇಳಿದು ಸಿಕ್ವೇರಾ ನಾಯ್ಕರ ಮನೆ ಎಲ್ಲಿಯೆಂದು ವಿಚಾರಿಸಿದೆ. ` ಅಲ್ಲಿ ಕಾಣೊದೇ ನಾಯ್ಕರ ಮನೆ’ ಎಂದು ದಾರಿಹೋಕನೊಬ್ಬ ಹೇಳಿದಾಗ ಖುಷಿಯಾಯಿತು. ಹಾಗೆ ಹೇಳಿದವನೇ, `ಇದ್ದಾರೆ ಅನ್ನಲಿಕ್ಕೆ ಅಲ್ಲಿ ಅಮ್ಮ ಇದ್ದಾರೆ..’ ಎಂದ.
ರಾಬರ್ಟ್ ಸಿಕ್ವೇರಾ ಹೇಳಿದ ಹಾಗೆಯೇ ಮನೆಯ ಮುಂಬಾಗಿಲಿಗೆ ದೊಡ್ಡದೊಂದು ಬೀಗ ನೇತು ಬಿದ್ದಿತ್ತು. ಹತ್ತಿರದಲ್ಲೆಲ್ಲೂ ಮನುಷ್ಯರ ಸುಳಿವೇ ಇರಲಿಲ್ಲ. ಮನೆ ಹಳೆಯದಾದರೂ ಸಿಕ್ವೇರಾ ನಾಯ್ಕರು ಈ ಊರಿನ ದೊಡ್ಡ ಜನವೇ ಆಗಿದ್ದರು ಎಂಬುದರ ಕುರುಹಾಗಿ ದೊಡ್ಡ ಅಂಗಳ, ವಿಶಾಲ ಜಗುಲಿ, ಹೊರಗಡೆ ಕುಳಿತುಕೊಳ್ಳಲು ಕಟ್ಟೆ ಕಂಡವು. ಮನೆಗೆ ತಾಗಿಕೊಂಡೇ ಇದ್ದ ಬಾವಿಯನ್ನು ಬಳಸಿಕೊಂಡು ಹಾಗೇ ಮನೆಯ ಹಿಂಬದಿಗೆ ಬಂದೆ. ಮನುಷ್ಯರ ಓಡಾಟದ ಸದ್ದು ಕೇಳಿಸಿತು. ಅಲ್ಲೇ ನಿಂತೆ. ಹಿಂಬಾಗಿಲು ತೆರೆಯಿತು. ಹುಡುಗನೊಬ್ಬ ಎರಡು ತೆಂಗಿನಕಾಯಿಗಳನ್ನು ಎದೆಗೆ ಅವುಚಿಕೊಂಡು ಮನೆಯಿಂದ ಹೊರಬರುತ್ತಿದ್ದ. ಅವನ ಹಿಂದೆಯೇ ಅಜ್ಜಿ ಬಾಗಿಲವರೆಗೂ ಬಂದು ಏನನ್ನೋ ಹೇಳಿ ಬೀಳ್ಕೊಟ್ಟರು. ಆಕೆಯ ನಡಿಗೆಯನ್ನು ಗಮನಿಸಿದೆ- ನಡಿಗೆಯಲ್ಲೂ ಅವರ ವಯಸ್ಸು ಕಾಣುತಿತ್ತು. ಕಣ್ಣೇ ಕಾಣದವರ ನಡಿಗೆಯ ಹಾಗಿರಲಿಲ್ಲ ಎಂದು ಮರುಗಳಿಗೆಯಲ್ಲೇ ಅನ್ನಿಸಿತು. ಕೊಂಕಣ  ಭಾಷೆಯಲ್ಲಿ ಅವರಾಡಿದ ಮಾತು ಅರ್ಥವಾಗಲಿಲ್ಲ. ಆ ಹುಡುಗ ಭಗ್ನಾವಸ್ಥೆಯಲ್ಲಿರುವ ಕಂಪೌಂಡು ಗೋಡೆಯನ್ನು ಹತ್ತಿಳಿದು ಹಿತ್ತಿಲಲ್ಲಿ ಮರೆಯಾದ.
ಅಷ್ಟರಲ್ಲೇ ಫೋನ್ ರಿಂಗಾಯಿತು. ನರ್ಸ್ ಕರೆದಿರಬಹುದು, ಯಾವುದೋ ಫಾರ್ಮಿಗೆ ಸಹಿ ಬೇಕೇನೋ ಎಂದುಕೊಂಡು ಫೋನ್ ತೆಗೆದೆ. ಆದರದು ಸಿಕ್ವೇರಾನ ಕರೆಯಾಗಿರಲಿಲ್ಲ-ಬಾಲುಅಣ್ಣನ ಫೋನು. ಆಸ್ಪತ್ರೆಗೆ ಬಂದ ಮೇಲೆ ಒಮ್ಮೆಯೂ ಫೋನ್ ಮಾಡಿ ಅಮ್ಮನ ಬಗ್ಗೆ ವಿಚಾರಿಸದಿದ್ದ ಬಾಲುಅಣ್ಣನಿಗೆ ಈಗ ಪುರುಸೊತ್ತಾಗಿರಬೇಕು ಎಂದು ಒಳಗೇ ಕೋಪಿಸಿಕೊಂಡು ಅನೈಚ್ಛಿಕವಾಗಿ ತಲೆಕೊಡವಿದೆ. ಅಣ್ಣ ನೇರ ಆಸ್ಪತ್ರೆಗೇ ಬಂದಿರಬಹುದೇ ಎಂಬ ಅನುಮಾನ ಬಂತು. ಅಮ್ಮನ ಬಿಟ್ಟು ಬೇರೆ ಎಲ್ಲಿಗೋ ಹೋಗಿರುವೆನೆಂದರೆ ಏನೆಂದುಕೊಂಡಾನು? ಕರೆ ಸ್ವೀಕರಿಸಲಿಲ್ಲ. ಇಲ್ಲೇ ಎಲ್ಲೋ ಕ್ಯಾಂಟೀನಿಗೆ ಹೋಗಿದ್ದೆ ಎಂದು ಹೇಳಿದರಾಯಿತು ಎಂಬ ಲೆಕ್ಕಾಚಾರದಲ್ಲಿ ಮೊಬೈಲ್ ಫೋನನ್ನು ಕಿಸೆಗೆ ತುರುಕಿದೆ.
ಅಷ್ಟರಲ್ಲಿ ಏನೋ ಯೋಚನೆ ಬಂತು; ಅಣ್ಣ ಆಸ್ಪತ್ರೆಗೆ ಬಂದಿದ್ದೇ ಆದರೆ, ಈಗಾಗಲೇ ನರ್ಸ್ ಬಳಿ ವಿನಂತಿಸಿಕೊಂಡು ಐ.ಸಿ.ಯು ಒಳಗೆ ಹೋಗಿರುತ್ತಾನೆ. ಒಳಗೆ ಹೋದ ಅಣ್ಣ ಮಂಚದ ಬಳಿ ನಿಂತು ಹಣೆಯನ್ನು ನೇವರಿಸುತ್ತಾ `ಅಮ್ಮಾ’ ಎಂದು ಕರೆದಿರುತ್ತಾನೆ. ಇದುವರೆಗೂ ನಿಶ್ಚಲವಾಗಿದ್ದ ಅಮ್ಮ ತನ್ನ ಕೈಬೆರಳುಗಳನ್ನು ಮೆಲ್ಲನೆ ಆಡಿಸುತ್ತಾಳೆ..
ಮತ್ತೊಮ್ಮೆ ಫೋನ್ ರಿಂಗಣ ಸಿದ್ದರಿಂದ ಯೋಚನೆಗಳ ಸರಣ  ತುಂಡಾಯಿತು. ಅಣ್ಣನೇ ಮತ್ತೊಮ್ಮೆ ಮಾಡಿರಬಹುದೆಂದು ಫೋನ್ ತೆಗೆದೆ. ಈ ಬಾರಿಯೂ ನನ್ನ ಎಣ ಕೆ ತಪ್ಪಾಗಿತ್ತು. ಅದು ಅಣ್ಣನ ಫೋನ್ ಆಗಿರಲಿಲ್ಲ. ಸಿಕ್ವೇರಾ ಕರೆ ಮಾಡಿದ್ದ. ಯಾಕೆ ಮಾಡಿರಬಹುದು? ಫಾರ್ಮಿಗೆ ಸಹಿಮಾಡಲಿಕ್ಕೋ ಅಥವಾ ಬೇರೆ ಕಾರಣವಿರಬಹುದೋ? ಯಾಕೋ ಹೊಟ್ಟೆಯೊಳಗಿಂದ ಚಳಿ ಬಂದಂತೆನಿತು. ಎಲ್ಲ ಧೈರ್ಯವನ್ನು ಒಟ್ಟುಗೂಡಿಸಿ ಫೋನ್ ಎತ್ತಿ `ಹಲೋ’ ಎಂದೆ.
`ಅಲ್ಲೆಲ್ಲಾದರೂ ಒಳ್ಳೆಯ ಬೀಗ ಸಿಕ್ಕಿದರೆ ತನ್ನಿ ಸರ್’ ಎಂದ.
*********************************
ಉದಯ ಗಾಂವಕಾರ