Saturday 8 February 2014

ರೇನ್ ಕೋಟು  ಶಿರಸಿ ಬಸ್ ಸ್ಟಾಂಡಿನ ಸಿಮೆಂಟು ಬೆಂಚಿನ ಮೇಲೆ ಕುಳಿತು ಕಣ್ಣು, ಕುತ್ತಿಗೆ, ದೇಹವನ್ನೆಲ್ಲ ಇಷ್ಟಿಷ್ಟೇ ತಿರುಗಿಸಿ ಪೂರ್ತಿ ಮುನ್ನೂರವತ್ತು ಡಿಗ್ರಿವರೆಗೂ ಕಣ್ಣು ಹರಿಸಿದರೂ ಪರಿಚಯದವರ್ಯಾರೂ ಕಾಣಲಿಲ್ಲ. ಬಸ್ಟ್ಯಾಂಡು, ರೈಲು ನಿಲ್ದಾಣ  ಅಥವಾ ಯಾವುದೇ ಅಪರಿಚಿತ ಸ್ಥಳ ತಲುಪಿದ ತಕ್ಷಣ ನಾನು ಮಾಡುವ ಮೊದಲ ಕೆಲಸವಿದು. ದೂರದೂರಿಗೆ ತುರ್ತು ಸುದ್ದಿ ಮುಟ್ಟಿಸುವ ಸಲುವಾಗಿ ಯಾರನ್ನೋ ಹುಡುಕುವಂತೆ ಜನಸಮುದ್ರದ ನಡುವೆ ನಮ್ಮೂರ ಜನಕ್ಕಾಗಿ ನನ್ನ ಕಣ್ಣು, ಕುತ್ತಿಗೆ, ದೇಹವೆಲ್ಲ ಸೇರಿ ಆ ಬಗೆಯ ಜಂಟಿ ಪ್ರಯತ್ನದಲ್ಲಿ ಯಾಕಾದರೂ ತೊಡಗುತ್ತವೋ? ಬಹುಷಃ, ನಾನು ಯಾವುದೋ ನಿರ್ಧಿಷ್ಟ ವ್ಯಕ್ತಿಯನ್ನು ಹುಡುಕುತ್ತಿರಬಹುದೇ ಅಥವಾ ಇಂತಹ ಅಭ್ಯಾಸ ಎಲ್ಲರಲ್ಲಿಯೂ ಇದ್ದು, ಅದು ಮನುಷ್ಯನ ಮೂಲ ಪ್ರವೃತ್ತಿಯೇ ಆಗಿದೆಯೇ? ನನ್ನ ಜೊತೆ ಶಾಲೆಗೆ ಹೋಗುತ್ತಿದ್ದ ನಮ್ಮೂರ ಮೇಷ್ಟ್ರ ಮಗಳು ಈಗ ಏಕಾಏಕಿ ಗಂಡನ ಜೊತೆ ಒಂದೋ ಎರಡೋ ಮಕ್ಕಳನ್ನು ಕಟ್ಟಿಕೊಂಡು ಎದುರು ಸಿಕ್ಕರೆ, ಆಕೆಯನ್ನು ಬಹುವಚನದಲ್ಲಿ ಸಂಬೋಧಿಸಬೇಕೋ ಅಥವಾ ಸಲಿಗೆಯ ಏಕವಚನ ಸಾಕೋ ಎಂದೆಲ್ಲ ಯೋಚಿಸುತ್ತಾ ಶಿರಸಿ  ಬಸ್ ಸ್ಟ್ಯಾಂಡಿನ ಇಂಚಿಂಚು ಸರ್ವೆ ನಡೆಸಿದೆ.
  ಹಿಂದಿನ ಅನೇಕ ಬಸ್ ಸ್ಟ್ಯಾಂಡುಗಳಲ್ಲಿ ಆದ ನಿರಾಸೆ ಶಿರಸಿ ಬಸ್ ಸ್ಟ್ಯಾಂಡಿನಲ್ಲೂ ಮುಂದುವರಿಯಿತು. ನಮ್ಮೂರ ಜನ ಬೇರೆಲ್ಲಿಗೂ ಹೋಗುವುದೇ ಇಲ್ಲವೇನೋ ಅಂದುಕೊಳ್ಳುತ್ತಾ ಕಲ್ಲು ಬೆಂಚಿನ ಮೇಲೆ ಕೈಚೀಲವನ್ನಿಟ್ಟು ಅದರ ಬಳಿಯೇ ಕುಳಿತೆ. ಕಾಲಿಗೆ ತಾಗಿದ ಯಾರದೋ  ಕೈಚೀಲ ಅದರಲ್ಲಿದ್ದ ಹಸಿ ಹಸಿ ತರಕಾರಿಗಳಿಂದ ಗಮನ ಸೆಳೆಯಿತು. ನುಗ್ಗೆಕಾಯಿ, ಬಸಲೆಸೊಪ್ಪು ಹೊರಗೆ ಇಣುಕುತ್ತಿದ್ದವು. ನನಗೆ ಮಾದನಗೇರಿಯ ಮೂಲಂಗಿ, ಪಟ್ಲಕಾಯಿಯ ನೆನಪಾಯಿತು. ಜೊತೆಗೆ, ಬಿಳಿಶೆಟ್ಲಿ, ಚಿಪ್ಪಿಕಲ್ಲು ಕೂಡಾ ನೆನಪಿಗೆ ಬಂದವು. ಪಟ್ಲಕಾಯಿ ಅಥವಾ ಬಸಲೆಯ ಜೊತೆಗೆ ಚಿಪ್ಪಿಕಲ್ಲು ಅಥವಾ ಶೆಟ್ಲಿ ಸೇರಿಸಿ ಅಮ್ಮ ಮಾಡುವ ಹುಳುಗ ನೆನಪಾಗಿ ಬಾಯಿ ನೀರಾಯಿತು. ಇಷ್ಟೆಲ್ಲ ನೆನಪುಗಳ ಮೆರವಣಿಗೆಯನ್ನು ಮನದಲ್ಲಿ ಮೂಡಿಸಿದ ಆ ಕೈಚೀಲದ ಯಜಮಾನನನ್ನು ನೋಡುವ ಕುತೂಹಲ ಉಂಟಾಗಿ ನಿಧಾನವಾಗಿ ಚೀಲದ ಪಕ್ಕದಲ್ಲೇ ಇದ್ದ ಹಳೆಯ ಹವಾಯಿ ಚಪ್ಪಲಿಯ ಕಾಲುಗಳಿಂದ ಪ್ರಾರಂಭಿಸಿ ನನ್ನ ದೃಷ್ಟಿಯನ್ನು ಆತನ ಮುಖದವರೆಗೂ ಮೇಲೆತ್ತಿದೆ-ಎಂಬತ್ತರ ದಶಕದ ಸಿನೇಮಾಗಳಲ್ಲಿ ನಾಯಕನನ್ನು ಕಾಲಿನಿಂದ ಪ್ರಾರಂಭಿಸಿ ಸ್ವಲ್ಪ ಸ್ವಲ್ಪವೇ ಹೆಚ್ಚಿಗೆ ತೋರಿಸುತ್ತಾ ಕೊನೆಗೆ ಪೂರ್ತಿಯಾಗಿ ತೋರಿಸುವಂತೆ.
    ಅರೇ! ಇವ ದಾಮುವಲ್ಲವೇ?!
*****
   ಹೌದು, ದಾಮುವೇ!
 ದಾಮು ಎಂದರೆ ದಾಮೋದರ. ನನ್ನೊಡನೆ ಶಾಲೆಯಲ್ಲಿ ಬೆಂಚು ಡೆಸ್ಕುಗಳನ್ನು ಹಂಚಿಕೊಂಡವ. ನನ್ನಷ್ಟೇ ಎತ್ತರ ಇದ್ದುದರಿಂದ ಇರಬಹುದು, ನಮ್ಮ ಸಹಬೆಂಚು ಸ್ನೇಹ ಏಳನೆಯ ತರಗತಿಯವರೆಗೂ ಮುಂದುವರಿದಿತ್ತು. ಒಮ್ಮೆ ಇದೇ ದಾಮು ನನ್ನ ಮಡ್ಲಕೊಡೆಯನ್ನು ಅವನ ಅರಿವೆ ಕೊಡೆಯ ಚೂಪಾದ ತುದಿಯಿಂದ ಇರಿದು ತೂತು ಮಾಡಿದ್ದ. ನಾನು ಗಾಯತ್ರಿ ಮಾಸ್ತರರಲ್ಲಿ ದೂರು ನೀಡಿದಾಗ ಇದೇ ದಾಮು ಎಲ್ಲ ತಪ್ಪೂ ನನ್ನ ಮಡ್ಲಕೊಡೆಯದೇ ಎಂಬಂತೆ ವಾದಿಸಿದ್ದ. ಅವನ ವಾದಕ್ಕೆ ಗಾಯತ್ರಿ ಮಾಸ್ತರರು ಮರುಳಾದರೋ ಅಥವಾ ಅವರಿಗೂ ನನ್ನ ಮಡ್ಲಕೊಡೆಯ ಬಗ್ಗೆ ತಾತ್ಸಾರವಿತ್ತೋ, ಒಂದು ಐತಿಹಾಸಿಕ ತೀರ್ಪನ್ನು ನೀಡಿದ್ದರು. ಮಡಚಿ ಮೂಲೆಯಲ್ಲಿ ಇಡಲು ಸಾಧ್ಯವಾಗದೇ ಇರುವುದು ಮತ್ತು ತರಗತಿಯ ಬಹುಜಾಗವನ್ನು ಆಕ್ರಮಿಸಿ ವಿದ್ಯಾರ್ಥಿಗಳ ಓಡಾಟಕ್ಕೆ ತೊಂದರೆ ಕೊಡುತ್ತದೆ ಎಂಬ ಕಾರಣಗಳನ್ನು ನೀಡಿ, ಇನ್ನು ಮುಂದೆ ಮಡ್ಲಕೊಡೆಯನ್ನು ತರಲೇಬಾರದೆಂದು ಕಟ್ಟಪ್ಪಣೆ ಮಾಡಿದ್ದರು! ಈ ಆದೇಶ ನನ್ನ ಹಾಗೆ ಮಡ್ಲಕೊಡೆ ತರುತ್ತಿದ್ದ ಇನ್ನೂ ಮೂವರು ವಿದ್ಯಾರ್ಥಿಗಳಿಗೂ ಅನ್ವಯಿಸುತ್ತದೆ ಎಂದು ಅವರೆಲ್ಲರ ಹೆಸರುಗಳನ್ನು ಹೇಳಿ ಸ್ಪಷ್ಟಪಡಿಸಿದ್ದರು.
  ಉಳಿದ ಮಕ್ಕಳ ಹಗುರದ ಬಟ್ಟೆಕೊಡೆಗಳನ್ನು ಕಂಡು ಅಸೂಯೆಪಡುತ್ತಿದ್ದ ನನಗೆ ಭಾರದ ಮಡ್ಲಕೊಡೆಯ ಬಗ್ಗೆ ಅಸಮಾಧಾನವಿದ್ದದ್ದು ಸುಳ್ಳಲ್ಲ. ಆದ್ದರಿಂದಲೇ, ಗಾಯತ್ರಿ ಮಾಸ್ತರರ ಮಡ್ಲಕೊಡೆ ನಿಷೇಧದ ತೀರ್ಪನ್ನು ಮನೆಗೆ ಹೋಗಿ ಇನ್ನಷ್ಟು ಕಟ್ಟುನಿಟ್ಟುಗೊಳಿಸಿ ವರದಿಮಾಡಿದ್ದೆ. ಮಡ್ಲಕೊಡೆಯ ಬದಲು ಅರಿವೆಕೊಡೆ ದೊರೆಯುತ್ತದೆ ಎಂಬ ನನ್ನ ಸಂತೋಷವನ್ನು ಮನೆಯವರೆದುರು ತೋರಿಸಿಕೊಳ್ಳದೆ ಮುಂದಿನ ಕೆಲದಿನಗಳವರೆಗೆ ಬೇರೆ ಯಾರದೋ ಕೊಡೆಯನ್ನು ಹಂಚಿಕೊಂಡು ಶಾಲೆಗೆ ಹೋಗುತ್ತಿದ್ದೆ. ಅರಿವೆ ಕೊಡೆ ಬರುತ್ತದೆ ಎಂಬ ಖುಷಿಯೊಂದಿಗೆ ಮಳೆಯಲ್ಲಿ ನೆನೆದು ಬಂದರೂ ವಿನಾಯ್ತಿ ದೊರೆಯುವ ಖುಷಿಯೂ ಸೇರಿಕೊಂಡು ನನಗೆ ದುಪ್ಪಟ್ಟು ಸಂತೋಷ ದೊರೆತದ್ದರಲ್ಲ್ಲಿ ದಾಮುವಿನ ಪಾಲಿದೆ ಎಂದು ಆಗ ನನಗನಿಸಿರಲಿಲ್ಲ.  ತಲೆಯನ್ನು ಒದ್ದೆಮಾಡಿಕೊಳ್ಳಬೇಡ ಎಂಬ ಅಮ್ಮನ ಕಾಳಜಿ ಮತ್ತು ಪುಸ್ತಕದ ಚೀಲ ಒದ್ದೆಯಾಗಬಾರದೆಂಬ ನನ್ನದೇ ಸ್ವಂತ ಕಾಳಜಿ ಎರಡಕ್ಕೂ ಬೆಲೆಕೊಡುತ್ತಾ ಚೀಲವನ್ನು ತಲೆಯಮೇಲಿಟ್ಟುಕೊಂಡು ಯಾರದೋ ಕೊಡೆಯೊಳಗೆ ತೂರಿಕೊಳ್ಳುತ್ತಿದ್ದೆ. ಸ್ವಂತದ ಕೊಡೆಯ ಜವಾಬ್ಧಾರಿಗಿಂತ ಹೀಗೆ ತೂರಿಕೊಂಡೇ ದಿನ ಕಳೆಯುವುದು ಉತ್ತಮ ಅನ್ನಿಸಿದ್ದೂ ಉಂಟು. ಆದರೆ, ಬರಲಿರುವ ಕರಿಯ ಅರಿವೆಕೊಡೆ ಹುಟ್ಟಿಸಿದ ನಿರೀಕ್ಷೆಗಳು ಇಂತಹ ಮಧ್ಯಂತರ ಆಲೋಚನೆಗಳನ್ನು ನಿವಾಳಿಸಿಬಿಡುತ್ತಿದ್ದವು.
  ಕೊಡೆ ಇಂದು ದೊರೆಯಬಹುದೋ ನಾಳೆಯೋ ಎಂಬ ನಿರೀಕ್ಷೆ ಒಂದು ಕಡೆಯಾದರೆ, ಬರಲಿರುವ ಕೊಡೆ ಪ್ಲಾಸ್ಟಿಕ್ ಹಿಡಿಕೆಯ ಸ್ಟೀಲ್ ದಂಟಿನದೋ ಅಥವಾ ಬೆತ್ತದ ದಂಟಿನ ಹಳೆಯ ಮಾದರಿಯೋ ಎಂಬ ಕುತೂಹಲ ಇನ್ನೊಂದು ಕಡೆ. ಬೆತ್ತದ ದಂಟಿನ ಕೊಡೆಯೇ ಒಳ್ಳೆಯದು; ಪ್ಲಾಸ್ಟಿಕ್ ಹಿಡಿಕೆಯ ಕೊಡೆಗಳೆಲ್ಲ ಬರೀ ಚೆಂದಕ್ಕೆ ಎಂದು ಅಪ್ಪ ಆಗಾಗ ಹೇಳುತ್ತಿದ್ದುದು ನೆನಪಿಸಿಕೊಂಡರೆ ಆತಂಕವಾಗುತಿತ್ತು. ಬೆತ್ತದ ಕೊಡೆ ಚೆನ್ನಾಗಿರುವುದಾದರೆ ನಾನೂ ಅದನ್ನೇ ಬಯಸುತ್ತಿದ್ದನಲ್ಲ? ಮಕ್ಕಳಿಗೆ ಇಷ್ಟವಾಗುವುದೆಲ್ಲ ದೊಡ್ಡವರಿಗೇಕೆ ಇಷ್ಟವಾಗುವುದಿಲ್ಲ? ಚೆನ್ನಾಗಿರುವುದು ಎಂದರೆ ಎಲ್ಲರಿಗೂ ಇಷ್ಟವಾಗಬೇಕಲ್ಲವೇ? ಚೆಂದ ಇದ್ದ ಮಾತ್ರಕ್ಕೆ ಚೆನ್ನಾಗಿಲ್ಲ ಎಂದು ಏಕೆ ಯೋಚಿಸಬೇಕು? ಹೀಗೆಲ್ಲ ಯೊಚನೆಗಳು ಬಂದು ಹಳೆಯ ಮಾದರಿಯೇ ಉತ್ತಮ ಎಂಬ ಅಪ್ಪನ ನಿಖರ ನಿಲುವಿನ ಬಗ್ಗೆಯೇ ಅನುಮಾನ ಪಟ್ಟಿದ್ದೆ.
   ಮಡ್ಲಕೊಡೆ ನಿಷೇದದ ಎಂಟೋ ಒಂಬತ್ತೋ ದಿನಗಳ ನಂತರ ಅಪ್ಪ ಕುಮಟಾಕ್ಕೆ ಹೋದರು. ಬಹುಷಃ ಕೊಡೆಗೆ ಬೇಕಾದ ದುಡ್ಡು ಹೊಂದಿಸಿಕೊಳ್ಳಲು ಅಷ್ಟು ದಿನಗಳು ತಗುಲಿರಬಹುದು. ಆ ದಿನ ಶಾಲೆ ಬಿಟ್ಟು ಬರುವಾಗ ಕೊಡೆ ಬಂದಿರಬಹುದು ಎಂದು ಊಹಿಸುತ್ತಾ ಸಂತೋಷ, ಕುತೂಹಲ ಮತ್ತು ಆತಂಕಗಳ ವಿಚಿತ್ರ ಕಾಂಬಿನೇಷನ್ನಿನ ಅದೆಂತದೋ ಭಾವದೊಂದಿಗೆ ಮನೆಗೆ ಬಂದಿದ್ದೆ. ನನ್ನ ಕಣ್ಗಳಲ್ಲಿರುವ ಕುತೂಹಲವನ್ನು ಅಳತೆಮಾಡುವವಳÀಂತೆ ನೋಡಿ ಅಮ್ಮ ಜಗುಲಿಯಿಂದ ಕೊಣೆಯೊಳಗೆ ತೆರಳಿ ಕೂಡಲೇ ಒಂದು ನೀಲಿ ಕೈಚೀಲದೊಂದಿಗೆ ಹೊರಬಂದಳು. ಕೊಡೆಯ ಉದ್ದನೆಯ ದಂಡಿನಂತಹ ಆಕಾರವನ್ನು ನಿರೀಕ್ಷಿಸುತ್ತಿದ್ದ ನನಗೆ ಕೈಚೀಲ ಇನ್ನಷ್ಟು ಕುತೂಹಲವನ್ನುಂಟುಮಾಡಿತ್ತು. ಕೈಚೀಲದ ಗುಂಡಿಗಳನ್ನು ತೆರೆದು ಒಳಗಿರುವ ನೀಲಿ ಬಣ್ಣದ ರೇನ್ ಕೋಟನ್ನು ಅಮ್ಮ ನನ್ನ ಕೈಗೆ ನೀಡಿದ್ದಳು. ಕೊಡೆಯ ಬದಲು ರೇನ್ ಕೋಟ್ ದೊರೆತದ್ದಕ್ಕೆ ಖುಷಿಪಡಬೇಕೋ ಬೇಜಾರು ಪಟ್ಟುಕೊಳ್ಳಬೇಕೋ ಎಂದು ನಿರ್ಧರಿಸಲಾಗದೇ ಗೊಂದಲದಲ್ಲಿರುವಾಗ `` ನಮ್ಮೂರಲ್ಲಿ ಯಾರತ್ರೂ ರೇನ್ ಕೋಟಿಲ್ಲ..ನೀನೇ ಮೋದ್ಲು ರೇನ್ ಕೋಟ್ ಹಾಕುವವ’’ ಎಂದು ಅಮ್ಮ ಹೇಳಿದ್ದರಿಂದ ನನ್ನ ಗೊಂದಲಕ್ಕೆ ಕಾರಣವೇ ಇಲ್ಲವಾಯಿತು. ಪ್ಲಾಸ್ಟಿಕ್ ಹಿಡಿಕೆಯ ಸ್ಟೀಲ್ ದಂಟಿನ ಅರಿವೆ ಕೊಡೆಯನ್ನು ಹಿಡಿಯುವುದಕ್ಕಿಂತ ರೇನ್ ಕೋಟ್ ಧರಿಸುವುದೇ ಹೆಚ್ಚು ಪ್ರತಿಷ್ಟೆಯದು ಎಂಬುದು ಮನದಟ್ಟಾಗುತ್ತಲೇ, ನಾಳೆ ದಾಮು ನನ್ನ ರೇನ್ ಕೋಟನ್ನು ನೋಡಿ ಹೇಗೆ ಪ್ರತಿಕ್ರಿಯಿಸಬಹುದು ಎಂಬುದನ್ನು ಕಲ್ಪಿಸತೊಡಗಿದೆ.
                                     ******
   ನಾನು ಆ ಶಾಲೆಗೇ ಸೇರಿದ್ದೇ ಐದನೆಯ ತರಗತಿಯಲ್ಲಿ. ಏಕೋಪಾಧ್ಯಾಯರಿರುವ ಕಿರಿಯ ಪ್ರಾಥಮಿಕ ಶಾಲೆಯಿಂದ  ಬಂದಿದ್ದ ನನಗೆ ಬಹಳಷ್ಟು ಶಿಕ್ಷಕರಿರುವ ಹಿರಿಯ ಪ್ರಾಥಮಿಕ ಶಾಲೆ ಬೆರಗನ್ನುಂಟುಮಾಡಿತ್ತು. ಮೊದಲ ದಿನವೇ ಅಲ್ಲಿರುವ ಶಿಕ್ಷಕ-ಶಿಕ್ಷಕಿಯರ ಹೆಸರುಗಳನ್ನು ತಿಳಿದುಕೊಳ್ಳಬೇಕೆಂಬ ಕುತೂಹಲ ಇದ್ದಿದ್ದರೂ ಎಲ್ಲರ ಹೆಸರುಗಳನ್ನು ತಿಳಿದುಕೊಳ್ಳಲು ಒಂದು ವಾರ ಹಿಡಿಯಿತು. ಗಾಯತ್ರಿ ಎಂಬುದು ಒಬ್ಬ ಮಾಸ್ತರರ ಹೆಸರು ಎಂದಾಗ ನನಗೆ ಮತ್ತು ನನ್ನ ಹಾಗೆ ಆ ಶಾಲೆಗೆ ಹೊಸದಾಗಿ ಸೇರಿದವರಿಗೆ ನಂಬಲೇ ಆಗಿರಲಿಲ್ಲ. ಗಂಡಸಿನ ಹೆಸರು ಗಾಯತ್ರಿ ಎಂದಿರಲು ಸಾಧ್ಯವೇ ಇಲ್ಲ ಎಂದು ನಾವೆಲ್ಲ ವಾದಿಸಿದೆವು. ಆದರೆ, ಅದೇ ಶಾಲೆಯಲ್ಲಿ ಒಂದನೇ ತರಗತಿಯಿಂದಲೂ ಕಲಿಯುತ್ತಿದ್ದ ಉಳಿದ ಮಕ್ಕಳು ಗಾಯತ್ರಿ ಎಂಬುದು ಶಿಕ್ಷಕರೊಬ್ಬರ ಹೆಸರು ಎಂದು ಮನವರಿಕೆ ಮಾಡಿಕೊಡಲು ಬಹಳ ಪ್ರಯತ್ನ ಪಟ್ಟಿದ್ದರು. ಅವರ ಪ್ರಯತ್ನವೆಲ್ಲ ವಿಫಲಗೊಂಡು ಅಂತಿಮವಾಗಿ, ಹೆಡ್ ಮಾಸ್ತರರ ಕೋಣೆಯ ಗೋಡೆಗೆ ನೇತುಹಾಕಲಾಗಿದ್ದ ಶಿಕ್ಷಕರ ಹೆಸರುಗಳ ಬೋರ್ಡಿನ ಬಳಿ ನಮ್ಮನ್ನೆಲ್ಲ ಕರೆದುಕೊಂಡು ಹೋಗಿ ಅಲ್ಲಿರುವ ಆರ್. ಎಸ್. ಗಾಯತ್ರಿ ಎಂಬ ಹೆಸರನ್ನು ಕಾಣಿಸಿದರು. ಪ್ರತ್ಯಕ್ಷ ಪುರಾವೆ ಉಂಟುಮಾಡಿದ ಕಣ್ಕಟ್ಟಿನಿಂದಾಗಿ ಸುಮ್ಮನೆ ತರಗತಿಕೋಣೆಗೆ ಬಂದಿದ್ದರೂ ನಮಗೆ ಒಪ್ಪಿಗೆ ಆಗಿರಲಿಲ್ಲ. ಬೋರ್ಡಿನಲ್ಲಿ ಹೆಸರಿದ್ದ ಮಾತ್ರಕ್ಕೆ ಗಂಡಸಿನದೇ ಆಗಿರಬೇಕೆಂದಿಲ್ಲವೆಂದು ಪ್ರತಿವಾದ ಹೂಡಿದೆವು. ಆಗ ಇದೇ ದಾಮೋದರ ಬಹುದೊಡ್ಡ ಸಂಶೋಧನೆಯನ್ನು ಪ್ರಕಟಿಸುವ ಗತ್ತಿನಲ್ಲಿ, ಹೆಸರಿನ ಹಿಂದೆ ಶ್ರೀ ಇದ್ದರೆ ಅದು ಗಂಡಸಿನದೆಂದೂ ಶ್ರೀಮತಿ ಎಂದಿದ್ದರೆ ಹೆಂಗಸಿನದ್ದೆಂದೂ ತೀರ್ಪು ನೀಡಿದ್ದ. ಪುನಃ ಹೆಡ್ ಮಾಸ್ತರರ ಕೋಣೆಯ ಗೋಡೆಯ ಮೇಲಿನ ಬೋರ್ಡನ್ನು ನೋಡಿದರೆ ಅಲ್ಲಿ ಯಾರ ಹೆಸರಿನ ಹಿಂದೆಯೂ ಶ್ರೀ ಅಥವಾ ಶ್ರೀಮತಿ ಎಂಬುದು ಇರಲಿಲ್ಲ. ಹೆಸರಿನ ಮುಂದೆ ಶ್ರೀ ಹೊಂದಿರುವ ನಮ್ಮದೇ ತರಗತಿಯ ಕಾವ್ಯಶ್ರೀ ಗಂಡೊ ಹೆಣ್ಣೋ ಎಂಬ ಹುಸಿ ಚರ್ಚೆಯನ್ನು ಮಾಡುತ್ತಾ ಮತ್ತೆ ತರಗತಿಗೆ ಬಂದಿದ್ದೆವು.
    ಇಷ್ಟೆಲ್ಲ ಕುತೂಹಲವನ್ನು ಉಂಟುಮಾಡಿದ ಗಾಯತ್ರಿ ಮಾಸ್ತರರು ನಮ್ಮ ತರಗತಿಗೆ ಬಂದೇ ಬಿಟ್ಟರು. ಆಗಿನ್ನೂ ನಮ್ಮ ಪಾಲಿಗೆ ಅವರು ಗಾಯತ್ರಿ ಮಾಸ್ತರರಾಗಿರಲಿಲ್ಲ- ಕುಳ್ಳಗಿನ ಆಕಾರ, ಗುಂಡಗಿನ ಮುಖ, ಜುಬ್ಬ ಪಾಯಿಜಾಮದ ಮನುಷ್ಯಾಕೃತಿ ಮಾತ್ರ. ನಾವವರ ಮುಂದಿನ ನಡೆಗಳನ್ನು ಕುತೂಹಲದಿಂದ  ನಿರೀಕ್ಷಿಸುತ್ತಿದ್ದೆವು. ಶಂಕಿತ ಗಾಯತ್ರಿ ಮಾಸ್ತರರು ಆ ಶಾಲೆಗೆ ಹೊಸದಾಗಿ ಸೇರಿದ ನಮ್ಮ ಹೆಸರುಗಳನ್ನು ಕೇಳಿತಿಳಿದುಕೊಂಡರು. ತಮ್ಮ ಹೆಸರನ್ನೂ ಹೇಳಬಹುದೆಂದು ನಾವೆಲ್ಲ ಅಂದುಕೊಂಡೆವು. ಅವರು ಹಾಗೆ ಮಾಡಲಿಲ್ಲ. ಬದಲಿಗೆ, ನಾನು ನಿಮ್ಮ ಕ್ಲಾಸ್ ಟೀಚರ್ ಎಂದರು. ಹಾಗೆ ಹೇಳಿದ್ದೇ ಏನೋ ಹೊಳೆದವರಂತೆ, ಕರಿಹಲಗೆಯ ಕಡೆ ತಿರುಗಿ ಅತ್ಯಂತ ಮೇಲುಗಡೆ `ಶ್ರೀ ಮಹಾಬಲೇಶ್ವರಾಯ ನಮಃ’ ಎಂದು ಬರೆದರು. ಕೆಳಗಿನ ಸಾಲಿನಲ್ಲಿ ತರಗತಿ ಐದು ಎಂದು ಒಂದು ಮೂಲೆಯಲ್ಲಿ ಬರೆದು ಇನ್ನೊಂದು  ಮೂಲೆಯಲ್ಲಿ ಶಿಕ್ಷಕರ ಹೆಸರು ಎಂದು ಬರೆಯುತ್ತಿದ್ದಂತೆ ನನ್ನ ಎದೆ ಡವಗುಟ್ಟುತಿತ್ತು. ಇವರ ಹೆಸರು ಗಾಯತ್ರಿ ಎಂದಾಗದಿರಲಿ ಎಂದು ಬೋರ್ಡಿನ ಮೇಲೆ ಇರುವ ಮಹಾಬಲೇಶ್ವರನನ್ನು ಪ್ರಾರ್ಥಿಸತೊಡಗಿದೆ. ಅವರು ಬರೆಹವನ್ನು ಪೂರ್ತಿಗೊಳಿಸಿದರು-ತರಗತಿ ಶಿಕ್ಷಕರ ಹೆಸರು ಶ್ರೀ ರಾಜಾರಾಮ ಎಸ್ ಗಾಯತ್ರಿ.
 ದಾಮು ನನ್ನ ಕಡೆ ನೋಡಿ ಕೀಟಲೆಯ ನಗು ಬೀರಿದ್ದ.
******


  ಧೋ ಎಂದು ಸುರಿಯುವ ಮಳೆ ಮತ್ತು ಖಾಲಿ ಖಾಲಿಯಿರುವ ಶಾಲೆಯ ಸುತ್ತಲಿನ ನೆಲ ಗಾಯತ್ರಿ ಮಾಸÀ್ತರರನ್ನು ಕೆಣಕಿಸಿರಬಹುದು-ಅವರು ಏಳನೆಯ ತರಗತಿಯ ಮಕ್ಕಳ ಸಹಾಯ ಪಡೆದು ತರಕಾರಿ ಬೆಳೆಯುವ ಕೆಲಸಕ್ಕೆ ಕೈ ಹಾಕಿದ್ದರು. ಬೆಂಡೆ ಗಿಡಗಳು ಎತ್ತರ ಬೆಳೆದಿದ್ದವು. ಒಂದು ದಿನ ಬೆಂಡೆಗಿಡಗಳ ಬುಡಸಡಿಲುಗೊಳಿಸಿ ಗೊಬ್ಬರ ಹಾಕಲು ನಮ್ಮೆಲ್ಲರನ್ನು ಕರೆದುಕೊಂಡು ಹೋದರು. ಹಾರೆ-ಪಿಕಾಸು ಹಿಡಿಯುವ ಅದೃಷ್ಟ ಕೆಲವರಿಗಷ್ಟೇ-ಉಳಿದವರಿಗೆ ಕಳೆತೆಗೆದು ಕೈತೋಟ ಸ್ವಚ್ಛಗೊಳಿಸುವ ಕೆಲಸ.
 ಹತ್ತು ನಿಮಿಷವೂ ಕಳೆದಿರಲಿಲ್ಲ; ಸಣ್ಣದಾಗಿ ಮಳೆ ಪ್ರಾರಂಭವಾಯ್ತು. ಮಕ್ಕಳು ಕೊಡೆ ಹಿಡಿದು ಕಳೆಕೀಳುವ ಕೆಲಸ ಮುಂದುವರಿಸಿದರು. ನಾನು ರೇನ್ ಕೋಟ್ ಹಾಕಿಕೊಂಡು ಕಳೆಕೀಳಲು ಕಷ್ಟಪಡುತ್ತಿದ್ದೆ. ಚಿಕ್ಕದೊಂದು ಮುಂಡು ಪಿಕ್ಕಾಸು ಹಿಡಿದು ಅಗೆಯುತ್ತಿದ್ದ ದಾಮು ಗಾಯತ್ರಿ ಮಾಸ್ತರರ ಬಳಿ ಬಂದು ರೇನ್ ಕೋಟ್ ಇದ್ದಿದ್ದರೆ ಬುಡ ಸಡಿಲುಮಾಡುವ ಕೆಲಸ ಮುಗಿಸಿಯೇ ಹೋಗಬಹುದಿತ್ತು ಎಂಬ ಅಮೋಘ ಸಲಹೆಯನ್ನು ನೀಡಿದ. ನನ್ನ ರೇನ್ ಕೋಟನ್ನೊಮ್ಮೆ ತಾನೂ ಧರಿಸುವೆನೆಂದು ದಾಮು ಹಿಂದೆ ಬಹಳಸಲ ನನ್ನನ್ನು ಕೇಳಿದ್ದ. ನಾನದಕ್ಕೆ ಒಪ್ಪಿರಲಿಲ್ಲ. ಈಗ ಎಷ್ಟು ಉಪಾಯವಾಗಿ ನನ್ನ ರೇನ್ ಕೋಟನ್ನು ಪಡೆಯಲು ಹವಣಿಸುತ್ತಿದ್ದಾನೆ!!
 ಗಾಯತ್ರಿ ಮಾಸ್ತರರು ರೇನ್ ಕೋಟ್ ಬಿಚ್ಚಿಕೊಡಲು ತಿಳಿಸಿದರು. ನಾನು ರೇನ್‍ಕೋಟ್ ಬಿಚ್ಚಿಕೊಟ್ಟು ಗಾಯತ್ರಿ ಮಾಸ್ತರರ ಕೊಡೆಯಲ್ಲಿ ಆಶ್ರಯ ಪಡೆದೆ. ಕೆಲಸ ಮದ್ಯಾಹ್ನದ ಊಟದ ವಿರಾಮದವರೆಗೂ ಮುಂದುವರಿಯಿತು. ದಾಮು ರೇನ್ ಕೋಟ್ ಬಿಚ್ಚಿಕೊಡುವುದನ್ನೇ ಕಾಯುತ್ತಿದ್ದ ನನಗೆ ಊಟದ ವಿರಾಮದ ಲಾಂಗ್ ಬೆಲ್ಲು ಎಂದಿಗಿಂತ ಇಂಪಾಗಿ ಕೇಳಿಸಿತು.
  ಮದ್ಯಾಹ್ನ ಮನೆಗೆ ಹೋಗಿ ತಟ್ಟಿಯ ಮೇಲೆ ರೇನ್ ಕೊಟ್ ಬಿಚ್ಚಿಡುತ್ತಿರುವಾಗ ಅಮ್ಮ ಏನೋ ಅನಾಹುತವನ್ನು ಕಂಡವಳÀಂತೆ ಹೌಹಾರಿದಳು. ಬಲಕಂಕುಳ ಬಳಿ ರೇನ್ ಕೋಟ್ ಅರ್ಧ ಅಡಿಯಷ್ಟು ಹರಿದುಹೋಗಿತ್ತು. ಅಮ್ಮ ಹೊಡದೇ ಬಿಡುವರೆಂಬ ಭಯದಲ್ಲಿ ಪೂರ್ತಿ  ಕತೆಯನ್ನು ಅರ್ಧ ಮಾತು ಇನ್ನರ್ಧ ಅಳುವನ್ನು ಸೇರಿಸಿ ಅರುಹಿದೆ. ರೇನ್ ಕೋಟ್ ಹರಿದಿದ್ದನ್ನು ಕಾಣದ ನನಗೂ, ರೇನ್ ಕೋಟ್ ಹರಿದ ದಾಮೋದರನಿಗೂ ಮತ್ತು ಇಡೀ ಘಟನೆಯ ಪುರೋಹಿತತನವನ್ನು ವಹಿಸಿದ ಗಾಯತ್ರಿ ಮಾಸ್ತರರಿಗೂ ಎರಡು ಸುತ್ತು ಬೈದು, ಆನಂತರ ಸುಧಾರಿಸಿಕೊಂಡು
`` ಇದ ಅವರಿಗೇ ಕೊಟ್ಟು ಬಾ..ಬೆಂಡಿ ಗಿಡಕ್ಕೆ ಮಂಗ ಬರದಿದ್ದಂಗೆ ಬಿಚ್ಚ ಬೇಕಾರೆ ಮಾಡ್ಕಣ್ಲಿ’’ ಎಂದು ಸಿಟ್ಟಿನಿಂದ ಊಟಹಾಕದೇ ನನ್ನನ್ನು ವಾಪಸು ಕಳುಹಿಸಿದಳು.
 ನಾನು ಶಾಲೆಗೆ ವಾಪಸು ಹೋಗುವ ಮೊದಲೇ ನಮ್ಮ ಮನೆಯಲ್ಲಿ ನಡೆದ ರಾದ್ಧಾಂತ ಶಾಲೆಯನ್ನು ತಲುಪಿತ್ತು. ಶಾಲೆಗೆ ಹೋದವನೇ
 ರೇನ್ ಕೋಟನ್ನು ದಾಮುವಿಗೆ ನೀಡಿ
 `` ನೀನೇ ಸರಿಮಾಡಿಕೊಡಬೇಕು’’ ಎಂದು ಹಠ ಹಿಡಿದೆ.
ಇದಕ್ಕೆ ಸಂಬಂಧವೇ ಇಲ್ಲದವನಂತೆ ದಾಮು-
 ‘` ರೇನ್ ಕೋಟ್ ಕೊಡು ಅಂದ ಹೇಳಿದ್ದ ನಾನಾ ಗಾಯತ್ರಿ ಮಾಸ್ತರರಾ?’’ ಎಂದು ನನ್ನನ್ನೇ ಪ್ರಶ್ನೆ ಮಾಡಿದ.
ನನಗೆ ಎಲ್ಲಿಲ್ಲದ ಕೋಪ ಬಂತು
 `` ನಿನ್ನ ಗಾಯತ್ರಿ ಮಾಸ್ತರ ಸೊಡ್ಲಿಗೆ ಹೋಗಲಿ’’ ಎಂದು ಹೇಳಿ ಆನಂತರ ತುಟಿಕಚ್ಚಿಕೊಂಡೆ.
 ನಾನೆಂತಹ ಗಂಭೀರ ತಪ್ಪು ಮಾಡಿದೆನೆಂಬ ಅರಿವಾಗುವಾಗ ತಡವಾಗಿತ್ತು. ಪೇಸ್ಟು ಟ್ಯೂಬಿನಿಂದ ಹೊರಬಂದುಬಿಟ್ಟಿತ್ತು.
``ನೀನು ಗಾಯತ್ರಿ ಮಾಸ್ತರರಿಗೆ ಸೊಡ್ಲಿಗೆ ಹೋಗ್ಲಿ ಅಂದ್ಯಾ.... ತಡಿ ನಿಂಗೆ’’ ಅಂದ.
ಏಳನೆಯ ತರಗತಿ ಮುಗಿಯುವವರೆಗೂ ಗಾಯತ್ರಿ ಮಾಸ್ತರರಿಗೆ ಹೇಳಿಕೊಡುತ್ತೇನೆ ಎಂದು ದಾಮು ಆಗಾಗ ನನ್ನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದ. ತನ್ನ ಹೋಮ್ ವರ್ಕ್ ಎಲ್ಲವನ್ನೂ ನನ್ನಿಂದಲೇ ಮಾಡಿಸುತ್ತಿದ್ದ. ದಾಮುವಿನ ಬೇಡಿಕೆಗಳನ್ನು ಈಡೇರಿಸಲು ನಾನು ಆಗಾಗ ಅಮ್ಮನ ಸಾಸಿವೆ, ಕೊತ್ತುಂಬರಿ ಡಬ್ಬಗಳನ್ನೆಲ್ಲ ಹುಡುಕಿ ಚಿಲ್ಲರೆ ಕಳುವು ಮಾಡಬೇಕಾಗುತಿತ್ತು. ಇಷ್ಟಾದರೂ ದಾಮು ತೃಪ್ತನಾಗುತ್ತಿರಲಿಲ್ಲ, ತರಗತಿಯ ನನ್ನ ಖಾಸಾ ಸ್ನೇಹಿತರೊಡನೆ ದಾಮುವಿನ ಆದೇಶದಂತೆ ಮಾತುಬಿಡಬೇಕಾಗಿತ್ತು. ನನ್ನ ಪಾಲಿಗೆ ಅತಿ ದೀರ್ಘ ಅವಧಿಯದ್ದೆನಿಸಿದ ಏಳನೆಯ ತರಗತಿ ಮುಗಿಯುವವರೆಗೂ ದಾಮು ನನ್ನಿಂದ ಅನೇಕ ಸಲ ಕಳುವು ಮಾಡಿಸಿದ್ದ, ಸುಳ್ಳು ಹೇಳಿಸಿದ್ದ, ಸ್ನೇಹಿತರೊಡನೆ ಕಾಲು ಕೆರೆದು ಜಗಳವಾಡುವಂತೆ ಮಾಡಿಸಿದ್ದ. ನಾನೆಷ್ಟು ಹಿಂಸೆ ಅನುಭವಿಸಿದ್ದೆನೆಂದರೆ, ಏಳನೆಯ ತರಗತಿಯ ಅಂತ್ಯದಲ್ಲಿ ಇದ್ದ ಬಿದ್ದ ಧೈರ್ಯವನ್ನೆಲ್ಲ ಒಟ್ಟುಗೂಡಿಸಿ ಒಂದು ತೀರ್ಮಾನಕ್ಕೆ ಬಂದು ಬಿಟ್ಟಿದ್ದೆ-ಇನ್ನು ಮುಂದೆ ಹೇಗೂ ಈ ಶಾಲೆ ಬಿಟ್ಟು ಹೈಸ್ಕೂಲು ಸೇರಬೇಕಾದ್ದರಿಂದ ಇನ್ನು ಮುಂದೆ ದಾಮು `` ಗಾಯತ್ರಿ ಮಾಸ್ತರರಿಗೆ ಹೇಳ್ತೇ..’’ ಎಂದು ಹೆದರಿಸಿದರೆ `` ಹೇಳ್ಕೋ ಹೋಗೋ’’ ಎಂದು ಹೇಳಬೇಕೆಂದುಕೊಂಡಿದ್ದೆ. ಆದರೆ, ದಾಮೋದರ ಮತ್ತೆಂದೂ ನನ್ನನ್ನು ಹೆದರಿಸಲಿಲ್ಲ. ಏಕೆಂದರೆ, ಆತ ಏಳನೆಯ ತರಗತಿಯನ್ನು ದಾಟಿ ಎಂಟಕ್ಕೆ ಬರಲೇ ಇಲ್ಲ!
****
   ಶಿರಸಿ ಬಸ್ ಸ್ಟಾಂಡಿನಲ್ಲಿ ದಾಮುವನ್ನು ಕಂಡಾಗ ಹಳೆಯದೆಲ್ಲ ನೆನಪಾದರೂ ಹಳೆಯ ಸಿಟ್ಟು ಇರಲಿಲ್ಲ.
``ದಾಮು ಊರಿಗೆ ಹೊರಟ್ಯೇನೋ’’ ಎಂದು ಮಾತಿಗಾರಂಭಿಸಿದೆ. ಕಳೆದ ಇಪ್ಪತೈದು ವರ್ಷಗಳಿಂದಲೂ ದಾಮು ಶಿರಸಿಯ ರೆಸ್ಟೋರೆಂಟ್ ಒಂದರಲ್ಲಿ ಸಪ್ಲೈಯರ್ ಕೆಲಸ ಮಾಡುತ್ತಿದ್ದಾನೆ. ಸಣ್ಣ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡವ ಆದ್ದರಿಂದಲೇ, ಏಳನೆಯ ತರಗತಿ ಫೇಲ್ ಆಗುತ್ತಲೆ ದುಡಿಮೆಯ ಪ್ರಪಂಚಕ್ಕೆ ಕಾಲಿರಿಸಿದ್ದ. ದಾಮುವಿನ ಜೊತೆ ಸಪ್ಲೈಯರ್ ಕೆಲಸಕ್ಕೆ ಅದೇ ರೆಸ್ಟೋರೋಟಿನಲ್ಲಿ ಸೇರಿಕೊಂಡ ಒಂದಿಬ್ಬರು ಭಡ್ತಿ ಪಡೆದು ಈಗ ಅದೇ ಮಾಲೀಕರ ಬೇರೆ ರೆಸ್ಟೋರೆಂಟುಗಳಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರಂತೆ. ಇನ್ನಿಬ್ಬರು ತಮ್ಮದೇ ಸ್ವಂತ ಹೊಟೇಲು ನಡೆಸುತ್ತಿದ್ದಾರಂತೆÉ. ದಾಮುವಿನದು ಅದೇ ಸಪ್ಲೈಯರು ಕೆಲಸ. ಕೆಲಸದಲ್ಲಿ ಬದಲಾವಣೆ ಇಲ್ಲದಿದ್ದರೂ ಕಳೆದ ಇಪ್ಪತೈದು ವರ್ಷಗಳಲ್ಲಿ ದಾಮುವಿನ ಬದುಕಿನಲ್ಲಿ ಬಹಳ ಬದಲಾವಣೆಗಳು ಸಂಭವಿಸಿದ್ದವು. ಹತ್ತು ವರ್ಷಗಳÀ ಹಿಂದೆಯೇ ಮದುವೆ ಆಗಿತ್ತು. ಆನಂತರ, ಮಕ್ಕಳು, ಸಂಸಾರ ಹೀಗೆ ಜವಾಬ್ಧಾರಿಗಳು ಹೆಚ್ಚುತ್ತಲೇ ಹೋದವು. ಈ ಗಡಿಬಿಡಿಯಲ್ಲಿ ತನ್ನ ವೃತ್ತಿ ಬದುಕನ್ನು ಶಿರಸಿಯಿಂದ ಊರಿಗಾಗಲಿ ಅಥವಾ ತನ್ನ ಸಂಸಾರವನ್ನು ಊರಿಂದ ಶಿರಸಿಗಾಗಲಿ ಸ್ಥಳಾಂತರಿಸಲು ಸಮಯ ಸೌಕರ್ಯ ಯಾವುದೂ ಸಿಕ್ಕಿರಲಿಲ್ಲ. ದಾಮುವಿನ ಕುರಿತು ಊರಿಗೆ ಹೋದಾಗ ಅಷ್ಟಿಷ್ಟು  ಕೇಳಿತಿಳಿದುಕೊಂಡಿದ್ದ ಮಾಹಿತಿಗಳಿವು. ಎರಡು ವರ್ಷಗಳ ಹಿಂದೆ ಒಂದೆರಡುಬಾರಿ ಸಿಕ್ಕಿದ್ದ ಕೂಡಾ. ಈಗಲೂ ದಾಮು ಊರಿಗೆ ಹೊರಟಿದ್ದು ಖಾತ್ರಿಯಿದ್ದರೂ ಮಾತಿಗೊಂದು ಪ್ರಾರಂಭ ಪಡೆಯಲು
 ``ಊರಿಗೆ ಹೊರಟ್ಯೇನೋ’’  ಎಂದು ಕೇಳಿದ್ದೆ.
 ``ವಾರದ ಹಿಂದೆ ಹೋಗಿಬಂದಿದ್ದೆ, ಅಮ್ಮಗೆ ಹುಷಾರಿಲ್ವಂತೆ ಅದಕ್ಕೆ ಹೋಗಿ ಬರುವಾ ಅಂತ ಮಾಡ್ದೆ’’ ಅಂದ.
ನನ್ನ ಬಗ್ಗೆಯೂ ಕೇಳಿ ತಿಳಿದುಕೊಂಡ. ಸಾಗರದಲ್ಲಿ ಮನೆಕಟ್ಟಿಸಿದ ಬಗ್ಗೆ ಹೇಳಿದಾಗ ಏನೂ ಖುಷಿಪಟ್ಟುಕೊಳ್ಳಲಿಲ್ಲ.
``ನಮ್ಮೂರಲ್ಲಿ ಸಿಗುವ ಹಸಿಶೆಟ್ಲಿ ಬೇರೆ ಎಲ್ಲಾರೂ ಸಿಗುದಾ?’’
 ಎಂದು ನನ್ನನ್ನೇ ಪ್ರಶ್ನಿಸಿ, ತಾಜಾ ಸಿಗಡಿ ಮತ್ತು ಗಾಳದ ಹೊಳೆ ಮೀನುಗಳ ದೊರೆಯುವಿಕೆಯೇ ಒಂದು ಊರು ಎಷ್ಟು ಉತ್ತಮ ಎಂದು ಅಳೆಯುವ ಏಕೈಕ ಮಾನದಂಡವೆಂಬಂತೆ ಮಾತನಾಡಿದ.
``ಬೇರೆ ಊರಲ್ಲಿ ನಾವ್ಯಾವಾಗಲೂ ಹೊರಗಿನವರೇ’’ ಅಂದ.
 ನಲವತ್ತು ಲಕ್ಷ ರೂಪಾಯಿ ಖರ್ಚು ಮಾಡಿ ನಾನು ಕಟ್ಟಿಸಿದ ಮನೆ ನಿಷ್ಪ್ರಯೋಜಕವೆಂಬಂತಿತ್ತು ಅವನ  ಮಾತು.
  ದಾಮು ಧರಿಸಿದ ಶರ್ಟು, ಪ್ಯಾಂಟು ಮತ್ತು ವಾರದಿಂದ ಬೋಳಿಸದ ಅವನ ಗಡ್ಡ ಅವನ ಪರಿಸ್ಥಿತಿಯನ್ನು ನನಗೆ ಮನದಟ್ಟು ಮಾಡಿದ್ದವು. ಆದುದರಿಂದ, ಅವನ ಕುರಿತು ನಾನು ಹೆಚ್ಚಿಗೆ ಕೇಳಲು ಹೋಗಲಿಲ್ಲ. ಅಷ್ಟರಲ್ಲಿ ಬಸ್ ಬಂದದ್ದರಿಂದ ದಾಮು ಹೊರಡಲಣಿಯಾದ.
``ಊರಿಗೆ ಸದ್ಯ ಹೋಗಿದ್ದೆಯಾ’’ ಎಂದು ಕೇಳಿದ.
 ಹೋಗದೇ ಆರು ತಿಂಗಳಾಗಿತ್ತು. ಇತ್ತೀಚೆಗೆ ಅಪ್ಪಗೆ ಹುಷಾರಿಲ್ಲದಾಗಲೂ ಹೋಗಲಾಗಿರಲಿಲ್ಲ. ತಮ್ಮನ ಬ್ಯಾಂಕ್ ಅಕೌಂಟಿಗೆ ಐದುಸಾವಿರ ರೂಪಾಯಿ ಇ ಎಮ್ ಟಿ ಮಾಡಿ, ಫೋನಿನಲ್ಲೇ ಅಪ್ಪನ ಆರೋಗ್ಯ ವಿಚಾರಿಸಿಕೊಂಡಿದ್ದೆ. ``ಸದ್ಯ ಹೋಗಲಿಲ್ಲ’’ ಎಂದು ಹೇಳಲು ಏಕೋ ಅಳುಕಾಯಿತು.
 ``ಹದಿನೈದು ದಿನದ ಹಿಂದೆ ಹೋಗಿದ್ದೆ’’ ಅಂದೆ.
 ``ನುಗ್ಗೆಕೋಡು ಬೇಕಾ’’ ಎಂದು ಕೇಳಿದ.
ಮಾತಾಡದೆ ಒಂದು ಕಟ್ಟು ತೆಗೆದುಕೊಂಡೆ. ದಾಮು ಬಸ್ಸಿನ ಕಡೆ ಹೆಜ್ಜೆ ಹಾಕುತ್ತಿರುವಾಗ
`` ದಾಮು, ಒಂದ್ನಿಮಿಷ’’ ಎಂದೆ.
 ದಾಮು ತಿರುಗಿದ
 ``ಇದನ್ನು ಇಟ್ಕೋ’’
ಎನ್ನುತ್ತಾ ಐದು ನೂರು ರೂಪಾಯಿ ನೋಟನ್ನು ಅವನ ಕೈಗಿಡಲು ಹೋದೆ. ದಾಮುವಿನ ಮುಖಚಹರೆ ಬದಲಾಯಿತು. ತಟ್ಟನೆ ನನ್ನ ಕೈಯಲ್ಲಿದ್ದ ನುಗ್ಗೆಕೋಡಿನ ಕಟ್ಟನ್ನು ಕಸಿದುಕೊಂಡು ಸರಸರನೆ ಬಸ್ ಹತ್ತಲು ಧಾವಿಸಿಹೋದ.
  ಕೈಲಿದ್ದ ಐದು ನೂರರÀ ನೋಟು ಆಗಷ್ಟೇ ಬೆಳಗಿದ ನಿಯಾನ್ ದೀಪದಲ್ಲಿ ಬೇರೆ ತರ ಕಾಣಿಸುತಿತ್ತು.

************************************************************


ಬಿಚ್ಚು-ಬೆಚ್ಚು, ಬೆರ್ಚಪ್ಪ
ಮಡ್ಲಕೊಡೆ-ತಾಳೆಗರಿಯ ಕೊಡೆ    
ಸೊಡ್ಲಿ- ಸ್ಮಶಾನ
ಪಟ್ಲಕಾಯಿ-ಪಡುವಲಕಾಯಿ
ಹುಳಗಾ- ಒಂದು ಬಗೆಯ ಸಾರು
ಶೆಟ್ಲಿ- ಸಿಗಡಿ

5 comments:

ಮಂಜು ಹಿಚ್ಕಡ್ said...

ಉತ್ತರ ಕನ್ನಡದ ಆಡು ಭಾಷೆಯಲ್ಲಿ ಬರೆದ ಕತೆ ತುಂಬಾ ಸೊಗಸಾಗಿದೆ..

Unknown said...

ನನ್ನ ಬಾಲ್ಯದ ಜೀವನಕ್ಕೆ ಕೊಂಡೊಯ್ದ ಕ್ಷಣಕ್ಕೆ ಅಭಿನಂದನೆಗಳು ಉದಯ ಸರ್....

ಶ್ರೀಧರ್. ಎಸ್. ಸಿದ್ದಾಪುರ. said...

ಕತೆ ಸೊಗಸಾಗಿ ಮೂಡಿಬಂದಿದೆ. ಮೊದಲರ್ಧದಲ್ಲಿ ನಡೆದ ಘಟನೆಗಳು ಅಲ್ಲಿಗೆ ನಿಂತು ಹೋದವೆನಿಸಿ ಅದರ ಮುಂದುವರಿಕೆಯು ಕೊನೆಯ ಭಾಗವಾಗಿ ಮಾರ್ಪಾಟಾದುದೆಂದು ಅನಿಸುತ್ತಿದೆ.
ತಾವು ಬರೆದ ಕತೆಗಳೆಲ್ಲವೂ(ನನಗೆ ಗೊತ್ತಿರುವ ಮಟ್ಟಿಗೆ)ಶಿಕ್ಷರು ಶಿಕ್ಷಣದೊಂದಿಗೆ ಜೋಡಿಸಿಕೊಂಡಿದೆ. ಮುಂದಿನ ಕತೆ ಹೊಸ ವಿಷಯ ವಸ್ತುವಿನಿಂದ ವಿಭಿನ್ನವಾಗಿರತ್ತದೆ ಎಂದು ಆಶಿಸುತ್ತೇನೆ.

ಈ-ಅಂಗಳ said...

ಗಾಯತ್ರಿ ಮಾಸ್ತರ ಅವರ ಪ್ರಸ್ಥಾಪ ,ನಮ್ಮ ಶಾಲೆ ಕೈತೋಟ ಎಲ್ಲವನ್ನೂ ನೆನಪಿಸಿ ಮತ್ತೊಮ್ಮೆ ಶಾಲೆಗೆ ಹೀಗಿ ಬಂದಂತೆ ಅನ್ನಿಸ್ತಿದೆ.
ತುಂಬಾ ಸಂತೋಷ ಆಯ್ತು . ದ
ಧನ್ಯವಾದಗಳು. ಮುಂದೆ ಒಮ್ಮೆ ಎಂದಾದರೂ ಸಮಯ ಕೂಡಿಬಂದರೆ ಎಲ್ಲರೂ ಸೇರಿ ಶಾಲೆಗೆ ಹೋಗೋಣ.����

Uday Gaonkar said...

ಶೋಭಾ
ಕತೆಗಾರನ ಕಲ್ಪನಾಲೋಕವೊಂದು ಓದುಗನಲ್ಲಿ ಜೀವತಳೆದು, ವಿಸ್ತರಿಸಿಕೊಂಡಾಗಲೇ ಕತೆಯು ಸಾರ್ಥಕವಾಗುವುದು. ಈ ಕತೆಯು ನಡೆಯುವ ಕಾಲ ಮತ್ತು ಭೌತಿಕ ಅನುಭವ ಲೋಕವನ್ನು ನನ್ನ ಜೊತೆಯೇ ಹಂಚಿಕೊಂಡ ನಿನ್ನ ಭಾವಕೋಶಗಳು ಹೇಗೆ ಪ್ರತಿಕ್ರಿಯಿಸಿವೆ ಎಂಬ ಕುತೂಹಲ ನನಗೂ ಇದೆ. ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.

ಉದಯ ಗಾಂವಕಾರ