Showing posts with label ಖಾಸಗಿಪುಟ. Show all posts
Showing posts with label ಖಾಸಗಿಪುಟ. Show all posts

Saturday, 4 February 2017

ನಾರಾಯಣ ಗಾಂವಕಾರರಿಗೆ ದಿ. ದುರ್ಗಾದಾಸ ಗಂಗೊಳ್ಳಿ ಪ್ರಶಸ್ತಿ

ಕುಮಟಾದ ಕಲಾ ಗಂಗೋತ್ರಿ ಸಂಸ್ಥೆಯು ಯಕ್ಷಗಾನ ಕಲಾವಿದರಾದ ನಾರಾಯಣ ಗಾಂವಕಾರ ಇವರಿಗೆ ದಿ. ದುರ್ಗಾದಾಸ ಗಂಗೊಳ್ಳಿ ಪ್ರಶಸ್ತಿ ನೀಡಿ ಗೌರವಿಸಿತು. ಇದೇ ಸಂದರ್ಭದಲ್ಲಿ ಜಾನಪದ ಹಾಡುಗಾರ್ತಿ ಪದ್ಮಶ್ರಿ ಸುಕ್ರಿ ಗೌಡ, ಶ್ರೀ ಮುರೂರು ವಿಷ್ಣು ಭಟ್, ಡಾ ಎಂ ಆರ್ ನಾಯಕರನ್ನು ಇದೇ ವೇದಿಕೆಯಲ್ಲಿ ಸಮ್ಮಾನಿಸಲಾಯಿತು.


ಬಡಾಬಡಗಿನ ಯಕ್ಷಗಾನ ಪರಂಪರೆಯಲ್ಲಿ ಡೇರೆಮೇಳಗಳ ಕಲಾವಿದರಷ್ಟೇ ಜನಪ್ರಿಯರಾದ ಅನೇಕ ಹವ್ಯಾಸಿ ಮತ್ತು ಬಯಲಾಟದ ಕಲಾವಿದರಿದ್ದಾರೆ. ಪಡುವಣಿಯ ನಾರಾಯಣ ಗಾಂವಕಾರರು ಅಂತಹ ಕಲಾವಿದರಲ್ಲೊಬ್ಬರು. ಅನಾರೋಗ್ಯದ ಕಾರಣದಿಂದಾಗಿ ತಮ್ಮ ಹವ್ಯಾಸವನ್ನು ಐವತ್ತೈದರ ಹರೆಯದಲ್ಲೇ ನಿಲ್ಲಿಸಿದರೂ ಅವರ ಎರಡು ದಶಕಗಳ ಕಾಲದ ಯಕ್ಷಗಾನದ ಸೇವೆ ಅನುಪಮವಾದದ್ದು. ತಮ್ಮ ಕಾಲದಲ್ಲಿ ಉತ್ತರ ಕನ್ನಡದ ಉದ್ದಗಲಗಳಲ್ಲಿ ವಿಶಿಷ್ಟ ಪಾತ್ರಾಭಿನಯ ಮತ್ತು ಅರ್ಥಗಾರಿಕೆಗಾಗಿ ಹೆಸರಾಗಿದ್ದ ನಾರಾಯಣ ಗಾಂವಕಾರರು ಮಾರುತಿ ಪ್ರತಾಪ ಪ್ರಸಂಗದ ಹನುಮಂತ, ಕಚದೇವಯಾನಿ ಪ್ರಸಂಗದ ಶುಕ್ರಾಚಾರ್ಯ ಪಾತ್ರಗಳ ಮಟ್ಟಿಗಂತೂ `ಇವರೇ ಸೈ’ ಎಂಬಷ್ಟು ಜನಪ್ರಿಯರು.

ಉತ್ತರ ಕನ್ನಡದ ಕುಮಟಾ ತಾಲೂಕಿನ ಪಡುವಣಿ ಇವರ ಹುಟ್ಟೂರು. ಅನಂತ ಗಾಂವಕಾರ
ಮತ್ತು ಸಣ್ಣಮ್ಮ ಗಾಂವಕಾರರ ಮಗನಾಗಿ 1940 ರ ಮೇ 10 ನೇ ತಾರೀಕಿನಂದು ಜನಸಿದ ಗಾಂವಕಾರರು ಮೆಟ್ರಿಕ್ ವರೆಗಿನ ಶಿಕ್ಷಣವನ್ನು ಹೆಗೆಡೆಯಲ್ಲಿ ಪಡೆದವರು. ಯಕ್ಷಗಾನದ ಹುಚ್ಚು ಓದನ್ನು ಮುಂದುವರಿಸಲು ಅವಕಾಶವನ್ನೇ ನೀಡದಾಗ ತನ್ನ ಹದಿನಾಲ್ಕನೇ ವಯಸ್ಸಿನಲ್ಲಿಯೇ ಗೆಜ್ಜೆ ಕಟ್ಟಿ ಅಭಿಮನ್ಯುವಿನ ಪಾತ್ರದ ಮೂಲಕ ರಂಗದ ಮೇಲೆ ಹೆಜ್ಜೆ ಹಾಕಿದರು. ಆಗಿನ ಹೆಸರಾಂತ ಭಾಗವತರಾದ ಬಾಡದ ಶಿವರಾಮ ಹೆಗಡೆಯವರು ಮತ್ತು ಪಡುವಣಿ ಪರಮಯ್ಯ ಪಟಗಾರರರನ್ನು ಇವರು ತನ್ನ ಯಕ್ಷಗುರುಗಳೆಂದು ನೆನಪುಮಾಡಿಕೊಳ್ಳುತ್ತಾರೆ. ಚಿಕ್ಕ ಪ್ರಾಯದಲ್ಲೇ ಯಕ್ಷಗಾನಕ್ಕೆ ಮನಸೋತು, ಎಲ್ಲ ಬಗೆಯ ಪಾತ್ರಗಳನ್ನು ಮಾಡುತ್ತಾ ಹಂತ-ಹಂತವಾಗಿ ಮೇಲೇರಿ, ಎರಡನೇ ವೇಷದಾರಿಯಾಗಿ ರಸಿಕರ ಮನದಲ್ಲಿ ಅಚ್ಚಳಿಯದೆ ಉಳಿದವರು. ರಂಗದಿಂದ ನಿವೃತ್ತಿ ಪಡೆದು ಎರಡುದಶಕಗಳೇ ಕಳೆದರೂ ಊರೂರುಗಳಲ್ಲಿ ಇವರ ಪಾತ್ರವನ್ನು ಕಣ್ಣೆದರು ತಂದುಕೊಂಡು ಪರವಶರಾಗುವ ಅಭಿಮಾನಿಗಳಿದ್ದಾರೆ. ತನ್ನ ಪಾತ್ರವನ್ನು ರೂಪಿಸುತ್ತಾ ಒಂದು ಸಂಘಟಿತ ಆಖ್ಯಾನದ ಪ್ರದರ್ಶನಕ್ಕೆ ಪೋಷಣೆ ನೀಡುವುದು ಯಕ್ಷಗಾನಕ್ಕೇ ವಿಶಿಷ್ಟವಾದ ಪರಂಪರೆ. ನಾರಾಯಣ ಗಾಂವಕಾರರು ಈ ಅಲಿಖಿತ ನಿಯಮವನ್ನು ಮೀರಿದವರಲ್ಲ. ಹವ್ಯಾಸಿ ಮೇಳಗಳಲ್ಲಿಯೇ ತಮ್ಮ ಸೇವೆಯನ್ನು ಪೂರ್ಣಗೊಳಿದವರಾಗಿದ್ದರೂ ಪ್ರೇಕ್ಷಕ ವರ್ಗ ಯಾವುದೇ ಆಗಿದ್ದರೂ ಪ್ರಾಮಾಣಿಕ ಪ್ರದರ್ಶನ ನೀಡುವ ಶೃದ್ಧೆ ಮತ್ತು ಬದ್ಧತೆಯಲ್ಲಿ ಇವರದು ಪಕ್ಕಾ ವೃತ್ತಿಪರ ನಿಲುವು. ಚಿಕ್ಕ ಹಳ್ಳಿಗಳಲ್ಲಿಯೇ ಇರಲಿ ನಗರದ ದೊಡ್ಡ ಸಭಾಂಗಣಗಳವೇ ಆಗಿರಲಿ ನೂರಕ್ಕ ನೂರಷ್ಟು ತಮ್ಮ ಸಾಮರ್ಥ್ಯಕ್ಕೆ ತಕ್ಕಂತಹ ಪ್ರದರ್ಶನವನ್ನು ನೀಡುವುದಕ್ಕೆ ನಾರಾಯಣ ಗಾಂವಕಾರರು ಸದಾ ಬದ್ಧರಾಗಿದ್ದರು. ಪಾತ್ರ ಬೀಳಾಗದಂತೆ ಸದಾ ಎಚ್ಚರದಲ್ಲಿರುವವರು. ಇವರ ಪಾತ್ರಗಳಲ್ಲೇ `ಹನುಮಂತ’ ನ ಪಾತ್ರ ಅನನ್ಯವಾದದ್ದು. ತನ್ನ ಯಕ್ಷಸೇವೆಯ ಆರಂಭದ ದಿನಗಳಲ್ಲೇ ಇಂದ್ರಜೀತು ಕಾಳಗದಲ್ಲಿ ಮೂರೂರು ದೇವರು ಹೆಗಡೆಯವರ ಇಂದ್ರಜಿತುವಿನ ಎದುರು ಹನುಮಂತನಾಗಿ ಹತ್ತಾರು ಕಡೆ ಪಾತ್ರವಹಿಸಿ ಹನುಮಂತನ ಪಾತ್ರಕ್ಕೆ ಅನನ್ಯವಾದ ಆಯಾಮವನ್ನು ಒದಗಿಸಿದವರು. ಆನಂತರ, ಇವರು ನೂರಾರು ರಂಗಸ್ಥಳಗಳ ಮೇಲೆ ಹನುಮಂತನಾಗಿ ಮೆರೆದವರು. ವಾಚಿಕ, ಆಹಾರ್ಯ, ಆಂಗಿಕ ಹಾಗೂ ಸಾತ್ವಿಕ ಅಭಿನಯಗಳಲ್ಲಿ ಇವರು ಸಮಾನ ಸಿದ್ಧಿಯನ್ನು ಸಾಧಿಸಿದವರು. ಇವರ ಅಭಿನಯ ನಿಜವಾದ ರಸೋಲ್ಲಾಸವೇ ಆಗಿರುತಿತ್ತು. ಉತ್ತಮ ನಾಯ್ಕರ ಮೇಳವೆಂದೇ ಪ್ರಸಿದ್ಧವಾಗಿದ್ದ ಕುಮಟಾದ ಶಾಂತಿಕಾ ಪರಮೇಶ್ವರಿ ಯಕ್ಷಗಾನ ಮಂಡಳಿ ಇಬ್ಬರು ಶ್ರೇಷ್ಠ ಹನುಮಂತನ ಪಾತ್ರದಾರಿಗಳನ್ನು ಒಂದೇ ಕಾಲಗಟ್ಟದಲ್ಲಿ ನೀಡಿದೆ. ಒಬ್ಬರು ಕುಮಟಾ ಗೋವಿಂದ ನಾಯ್ಕರಾದರೆ ಇನ್ನೊಬ್ಬರು ಪಡುವಣಿ ನಾರಾಯಣ ಗಾಂವಕಾರರು. ವೇಷಕಟ್ಟಿಕೊಳ್ಳುವಲ್ಲಿ ತೋರುವ ಶ್ರದ್ಧೆ, ಮುಖವರ್ಣಿಕೆಯಲ್ಲಿನ ಅಚ್ಚುಕಟ್ಟುತನ ಮತ್ತು ಕಲಾತ್ಮಕತೆ ಮತ್ತು ಹನುಮಂತನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡುವ ಕಾರಣಕ್ಕಾಗಿ ನಾರಾಯಣ ಗಾಂವಕಾರರು ಬಡಗುತಿಟ್ಟು ಯಕ್ಷಗಾನ ಪ್ರಪಂಚದ ಸಾರ್ವಕಾಲಿಕ ಶ್ರೇಷ್ಟ ಹನುಮಂತನ ಪಾತ್ರದಾರಿಗಳ ಸಾಲಿನಲ್ಲಿ ನಿಲ್ಲುವವರು. ಯಕ್ಷರಂಗದ ದಂತಕತೆ ಎಕ್ಟರ್ ಜೋಷಿಯವರ ಭೂಕೈಲಾಸದಲ್ಲಿ ರಾವಣನ ಪಾತ್ರ ಮಾಡುತ್ತಿದ್ದರೆ ನಾರಾಯಣ ಗಾಂವಕಾರರದು ಈಶ್ವರನ ಪಾತ್ರ. ಈ ಜೋಡಿಯ ಜನಪ್ರೀಯತೆ ಅವರನ್ನು ಗೋವಾ ಮತ್ತು ಮುಂಬೈಗಳಲ್ಲಿಯೂ ಪ್ರದರ್ಶನ ನೀಡುವ ಅವಕಾಶವನ್ನು ನೀಡಿತು. ಕೆರೆಮನೆ ಮಹಾಬಲ ಹೆಗೆಡೆಯವರ ಸುದನ್ವ ಪಾತ್ರಕ್ಕೆ ಎದುರಾಗಿ ಅರ್ಜುನನಾಗಿ, ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಭಸ್ಮಾಸುರನ ಪಾತ್ರಕ್ಕೆ ಎದುರಾಗಿ ರಾವಣನಾಗಿ ಹೀಗೆ ಆಗಿನ ಪ್ರಸಿದ್ಧ ಕಲಾವಿದರೊಂದಿಗೆ ಪಾತ್ರ ಮಾಡಿ ಮೆಚ್ಚುಗೆ ಗಳಿಸಿದವರು.
ಕಚ-ದೇವಯಾನಿ ಪ್ರಸಂಗದಲ್ಲಿ ನಾರಾಯಣ ಗಾಂವಕಾರರು ಶುಕ್ರಾಚಾರ್ಯನಾಗಿ ಕಚನಾಗಿ ಧಾರೇಶ್ವರ ಮಾಸ್ತರರು ಮತ್ತು ದೇವಯಾನಿಯಾಗಿ ಪಾಲನಕರ ಮಾಸ್ತರರು ಇರಲೇಬೇಕೆಂಬ ಸಹೃದಯರ ಒತ್ತಾಯ ಆ ಕಾಲದ ಅಲಿಖಿತ ನಿಯಮವಾಗಿ ಚಾಲ್ತಿಯಲ್ಲಿದ್ದುದು ಅವರ ಜನಪ್ರಿಯತೆಗೆ ಸಾಕ್ಷಿ. ಅನಾರೋಗ್ಯದಿಂದಾಗಿ ತಮ್ಮ ಐವತ್ತರ ಹರೆಯದಲ್ಲೇ ವೇಷ ಹಚ್ಚುವುದನ್ನು ನಿಲ್ಲಿಸಿ ತಾಳಮದ್ದಳೆಯಲ್ಲಿ ತಮ್ಮ ವ್ಯವಸಾಯವನ್ನು ಮುಂದುವರಿಸಿದರು. ಅರ್ಥಗಾರಿಕೆಯಲ್ಲೂ ಇವರು ತಮ್ಮ ಛಾಪನ್ನು ಮೂಡಿಸಿದರು. ಕರ್ಕಿಯ ಹಾಸ್ಯಗಾರ ಮೇಳ, ಹಳದೀಪುರದ ಜೋಗನಕಟ್ಟೆ ಮೇಳ, ಕುಮಟಾದ ಶ್ರೀ ರಾಮನಾಥ ಯಕ್ಷಗಾನ ಮಂಡಳಿ, ಹೆಗಡೆಯ ಶ್ರೀ ಶಾಂತಿಕಾ ಪರಮೇಶ್ವರಿ ಯಕ್ಷಗಾನ ಮಂಡಳಿ ಮುಂತಾದ ಬಯಲಾಟದ ಮೇಳಗಳಲ್ಲಿ ಪಾತ್ರವಹಿಸಿ ಜಿಲ್ಲೆಯ ಹಿರಿ-ಕಿರಿಯ ಯಕ್ಷಗಾನ ಕಲಾವಿದರೊಂದಿಗೆ ಒಡನಾಟಹೊಂದಿದವರು. ಮೂರೂರು ದೇವರ ಹೆಗಡೆ, ಎಕ್ಟರ್ ಜೋಷಿ ಮತ್ತು ವೀರಭದ್ರನಾಯ್ಕರ ಪಾತ್ರಗಳಿಂದ ಪ್ರಭಾವಿತರಾಗಿದ್ದ ನಾರಾಯಣ ಗಾಂವಕಾರರು ಕಡತೋಕ ಮಂಜು ಭಾಗವತರು, ಕೊಪ್ಪಲಮಕ್ಕಿ ಭಾಗವತರು, ಬಾಡದ ಶಿವರಾಮ ಹೆಗಡೆಯವರಂತಹ ಶ್ರೇಷ್ಟರ ತಾಳಕ್ಕೆ ಹೆಜ್ಜೆಹಾಕಿದವರು. ದೇವರು ಹೆಗಡೆಯವರು, ಕೊಂಡದಕುಳಿ ರಾಮ ಹೆಗಡೆ (ಸೀನಿಯರ್) ಅಗ್ರಗೋಣ ಎಂ. ಎಂ ನಾಯಕ, ಹಿರೇಗುತ್ತಿ ವೆಂಕಟ್ರಮಣ ನಾಯಕರಂತಹ ಮೇರುಕಲಾವಿದರ ಮಾರ್ಗದರ್ಶನ ಪಡೆದು ತನ್ನದೇ ದಾರಿಯನ್ನು ಗುರುತಿಸಿಕೊಂಡವರು. ಕುಮಟಾ ಉತ್ತಮ ನಾಯ್ಕ್, ಕುಮಟಾ ಗೋವಿಂದ ನಾಯ್ಕ್ , ಗೋಕರ್ಣ ಹೊನ್ನಪ್ಪ ಗುನಗಾ , ಶಿವಾನಂದ ಭಂಡಾರಿ, ಅನಂತ ಹೆಗಡೆ ಹಾವಗೋಡಿ ಮುಂತಾದವರ ಜೊತೆಯಲ್ಲಿಯೇ ಹವ್ಯಾಸಿ ಮೇಳವಾಗಿ ಯಕ್ಷಗಾನವನ್ನು ಹಳ್ಳಿಗಳಲ್ಲಿ ಜೀವಂತವಾಗಿರಿಸಿದವರು. ನಾರಾಯಣ ಗಾಂವಕಾರರು ಯಾರನ್ನೂ ಅನುಸರಿಸಿದವರಲ್ಲ; ಅನುಕರಿಸಿದವರಲ್ಲ.
ಯಕ್ಷಗಾನದ ನೈಜ ಪ್ರದರ್ಶನ ನೀಡಿದವರಲ್ಲಿ ಇವರೊಬ್ಬರು. ತಮ್ಮ ಪಾತ್ರಗಳ ಮೂಲಕ ಪ್ರೇಕ್ಷಕರಲ್ಲಿ ನಾರಾಯಣ ಗಾಂವಕಾರರು ಹೊಮ್ಮಿಸಿದ ರಸಾನುಭವ ಅನಿರ್ವಚನೀಯ.

Thursday, 31 March 2016

ನಾರಾಯಣ ಗಾಂವಕಾರ-ನುಡಿ ಚಿತ್ರಗಳು










ಅನುಪಮ ಕಲಾವಿದ ಪಡುವಣಿ ನಾರಾಯಣ ಗಾಂವಕಾರ




  • ಬರೆಹ: ಗೌತಮ ಗಾಂವಕಾರ, ತೊರ್ಕೆ, ಕರಾವಳಿ ಮುಂಜಾವಿನಲ್ಲಿ.


ನಾರಾಯಣ ಗಾಂವಕಾರರು ಪಡುವಣಿಯವರು. ಇವರ ಪೂರ್ವಜರು ಚಂದಾವರ ಸೀಮೆಯ ಅಘನಾಶಿನಿಯವರು ಎಂದು ಕೇಳಿದ್ದೇನೆ.ಇವರೊಬ್ಬ ವಿಶಿಷ್ಟ ಪ್ರತಿಭೆಯ ಯಕ್ಷಗಾನ ಕಲಾವಿದರು. ಇವರು ಎಲೆ ಮರೆಯ ಕಾಯಿಯಂತೆ ಇದ್ದವರಲ್ಲ; ಜಿಲ್ಲೆಯ  ಎಲ್ಲೆಡೆ ತಮ್ಮ ಕಲಾಪ್ರತಿಭೆಯನ್ನು ಮೆರೆದು ವಿಜೃಂಸಿದ ಕಲಾವಿದ

ನಾರಾಯಣ ಗಾಂವಕಾರ, ಪಡುವಣಿ
ಯಾವನೋ ಯಕ್ಷಗಾನ ಗುರುವಿನ ಮಾರ್ಗದರ್ಶನದಲ್ಲಿ ಒಂದೇ ಒಂದು ಆಖ್ಯಾನದಲ್ಲಿ ಒಂದೇ ಒಂದು ಪಾತ್ರಕ್ಕಾಗಿ ಅಷ್ಟಿಷ್ಟು ಕುಣಿದು, ಉರುಹೊಡೆದು ಒಪ್ಪಿಸುವವನೂ ಕಲಾವಿದ!  ಚಿಕ್ಕ ಪ್ರಾಯದಲ್ಲೇ ಯಕ್ಷಗಾನಕ್ಕೆ ಮನಸೋತು, ಎಲ್ಲ ಬಗೆಯ ಪಾತ್ರಗಳನ್ನು ಮಾಡುತ್ತಾ ಹಂತ-ಹಂತವಾಗಿ ಮೇಲೇರಿ, ಎರಡನೇ ವೇಷದಾರಿಯಾಗಿ ರಸಿಕರ ಮನದಲ್ಲಿ ಅಚ್ಚಳಿಯದೆ ಉಳಿದ ನಾರಾಯಣ ಗಾಂವಕಾರರನ್ನು ಅವರು ರಂಗದಿಂದ ನಿವೃತ್ತಿ ಪಡೆದಮೇಲೆ ಮರೆತದ್ದು ಬಯಲಾಟ ಪ್ರಪಂಚದ ದುರಂತ. ಇವರು ವಂದಿ ಮಾಗದರ ಗುಂಪು ಕಟ್ಟಿಕೊಳ್ಳಲಿಲ್ಲ. ವ್ಯಕ್ತಿ ಪ್ರತಿಭೆಯ ನೈಜ ಪ್ರಕಾಶಕ್ಕೆ ಇಂತಹ ಗುಂಪು ಮಾರಕ . ತನ್ನ ಪಾತ್ರವನ್ನು ರೂಪಿಸುತ್ತಾ ಒಂದು ಸಂಘಟಿತ ಆಖ್ಯಾನದ ಪ್ರದರ್ಶನಕ್ಕೆ ಪೋಷಣೆ ನೀಡುವುದು ಈ ಕಲೆಗೇ ವಿಶಿಷ್ಟವಾದ ಪರಂಪರೆ. ನಾರಾಯಣ ಗಾಂವಕಾರರು ಈ ಅಲಿಖಿತ ನಿಯಮವನ್ನು ಮೀರಿದವರಲ್ಲ.

ಎಲ್ಲರೂ ದಶಾವತಾರಿಗಳಾಗುವುದಿಲ್ಲ. ನಾರಾಯಣ ಗಾಂವಕಾರರನ್ನೂ ದಶಾವತಾರಿ ಎನ್ನಲಾಗದು. ಆದರೆ, ಹತ್ತು ಹಲವು ಪಾತ್ರಗಳಲ್ಲಿ `ಇವರೇ ಸೈ’ ಎನ್ನು ಮುದ್ರೆ ಒತ್ತಿದವರು. ಒಂಟಿ ಸಲಗದಂತೆ ಸಾಗಿ ಜನಮೆಚ್ಚಿಗೆಯನ್ನು ಪಡೆದವರು.

ಭಾಗವತರು, ಮದ್ದಳೆಯವರು, ಚೆಂಡೆಯವರು, ವಿದೂಷಕಪಾತ್ರದಾರಿಯೂ ಸೇರಿದಂತೆ ಪ್ರತಯೊಬ್ಬರ ಪೂರಕ ಶ್ರಮ, ಪ್ರತಿಭೆಗಳು ಒಟ್ಟುಗೂಡಿ ಒಂದು ಆಖ್ಯಾನವಾಗುತ್ತಿರುವಾಗಲೇ ನಿನಗಿಂತ ನಾನು ಕಡಿಮೆಯಿಲ್ಲ ಎಂಬ ಮೇಲಾಟವೂ ಇವರ ನಡುವೆ ನಡೆಯುತ್ತದೆ. ಇವರ ನಡುವೆ ಒರೆಸಾಟಗಳೂ ನಡೆಯುತ್ತವೆ. ಪುರುಷ ಪಾತ್ರದಾರಿಯು ಹುಸಿ ಹೆಜ್ಜೆಯನ್ನು ಹಾಕುವವನಂತೆ ಮಾಡಿ ಮದ್ದಳೆಯವನನ್ನು ಪರೀಕ್ಷಿಸುತ್ತಾನೆ. ಮದ್ದಲೆಯವನು ಗಲಿಬಿಲಿಯಾಗದಿದ್ದಲ್ಲಿ ಪಾತ್ರದಾರಿ ಮೆಚ್ಚುತ್ತಾನೆ. ಇದೇ ರೀತಿ ಭಾಗವತರೂ, ಎದುರು ಪಾತ್ರದಾರಿಯೂ ಇತರರಿಗೆ ಪರೀಕ್ಷೆಗಳನ್ನು ಒಡ್ಡುತ್ತಲೇ ಇರುತ್ತಾರೆ. ಹಿಮ್ಮೇಳ-ಮುಮ್ಮೇಳಗಳ ನಡುವೆ ಇಂತಹ ಒರೆಸಾಟಗಳಲ್ಲಿ   ಕಲಾವಿದನ ಸತ್ವವು ಹೊರಹೊಮ್ಮುತ್ತದೆ. ನಾರಾಯಣ ಗಾಂವಕಾರರು ಇಂತಹ ಒರೆಸಾಟಗಳಲ್ಲಿ ಗೆದ್ದು, ಆಖ್ಯಾನವನ್ನೂ ಗೆಲ್ಲಿಸಿದವರು.

 ನಾರಾಯಣ ಗಾಂವಕಾರರು 
ಅಂದಿನ ಆಟದ ಭೂಮಿಕೆಗೆ ಹೊಂದುವಂತೆ ಪಾತ್ರ ನಿರ್ವಹಣೆಗೆ ಹೆಸರಾದವರು. ಪಾತ್ರ ಬೀಳಾಗದಂತೆ ಸದಾ ಎಚ್ಚರದಲ್ಲಿರುವವರು. ಇವರ ಪಾತ್ರಗಳಲ್ಲೇ `ಹನುಮಂತ’ ನ ಪಾತ್ರ ಅನನ್ಯವಾದದ್ದು. ಪಾತ್ರದಲ್ಲಿ ತಲ್ಲೀನತೆ ಅಂತಹದ್ದು. ಇವರು ನೂರಾರು ರಂಗಸ್ಥಳಗಳ ಮೇಲೆ ಹನುಮಂತನಾಗಿ ಮೆರೆದವರು. ಇದರ ಪರಿಣಾಮವಾಗಿ ಇವರ ಬೇರೆ ಪಾತ್ರಗಳಲ್ಲೂ ಹನುಮಂತನ ಛಾಯೆ ಕಾಣಿಸುತಿತ್ತು. ವಾಚಿಕ, ಆಹಾರ್ಯ, ಆಂಗಿಕ ಹಾಗೂ ಸಾತ್ವಿಕ ಅಭಿನಯಗಳಲ್ಲಿ ಇವರು ಸಮಾನ ಸಿದ್ಧಿಯನ್ನು ಸಾಧಿಸಿದವರು. ಇವರ ಅಭಿನಯ ನಿಜವಾದ ರಸೋಲ್ಲಾಸವೇ ಆಗಿರುತಿತ್ತು.
ಅನಾರೋಗ್ಯದಿಂದಾಗಿ ತಮ್ಮ  ಐವತ್ತರ ಹರೆಯದಲ್ಲೇ ವೇಷ ಹಚ್ಚುವುದನ್ನು ನಿಲ್ಲಿಸಿದರು. ತಾಳಮದ್ದಳೆಯಲ್ಲಿ ತಮ್ಮ ವ್ಯವಸಾಯವನ್ನು ಮುಂದುವರಿಸಿದರು.  ಅರ್ಥಗಾರಿಕೆಯಲ್ಲೂ ಇವರು ತಮ್ಮ ಛಾಪನ್ನು ಮೂಡಿಸಿದರು.

ಇವರು ಯಾರನ್ನೂ ಅನುಸರಿಸಿದವರಲ್ಲ; ಅನುಕರಿಸಿದವರಲ್ಲ. ಯಕ್ಷಗಾನದ ನೈಜ ಪ್ರದರ್ಶನ ನೀಡಿದವರಲ್ಲಿ ಇವರೊಬ್ಬರು. ತಮ್ಮ ಪಾತ್ರಗಳ ಮೂಲಕ ಪ್ರೇಕ್ಷಕರಲ್ಲಿ ನಾರಾಯಣ ಗಾಂವಕಾರರು ಹೊಮ್ಮಿಸಿದ ರಸಾನುಭವ ಅನಿರ್ವಚನೀಯ.
ನಾರಾಯಣ ಗಾಂವಕಾರವರ ಸಂದರ್ಶನಕ್ಕಾಗಿ ಕ್ಲಿಕ್ ಮಾಡಿ. 

ನಾರಾಯಣ ಗಾಂವಕಾರರ ಸಂದರ್ಶನ

ನಾರಾಯಣ ಗಾಂವಕಾರ, ಪಡುವಣಿ

NARAYANA GAONKAR
ತಂದೆ: ಅನಂತ ಗಾಂವಕಾರ
ತಾಯಿ: ಸಣ್ಣಮ್ಮ ಗಾಂವಕಾರ
ಜನನ: 10 ಮೇ 1940
ಶಿಕ್ಷಣ: ಮೆಟ್ರಿಕ್
ಯಕ್ಷರಂಗಕ್ಕೆ ಪಾದಾರ್ಪಣೆ: ತನ್ನ 14 ನೇ ವಯಸ್ಸಿನಲ್ಲಿ 1954 ರಲ್ಲಿ
ಮೊದಲ ಪಾತ್ರ: ಅಭಿಮನ್ಯು
ಪ್ರಾರಂಭಿಕ ಗುರುಗಳು: ದಿ. ಶಿವರಾಮ ಹೆಗಡೆ, ಬಾಡ ಮತ್ತು ದಿ. ಪರಮಯ್ಯ ಪಟಗಾರ, ಪಡುವಣಿ

ಹೆಸರು ತಂದ ಪಾತ್ರಗಳು: ಹನುಮಂತ (ಮಾರುತಿ ಪ್ರತಾಪ), ಶುಕ್ರಾಚಾರ್ಯ(ಕಚ ದೇವಯಾನಿ),

ನಾರಾಯಣ ಗಾಂವಕಾರರ ಸಂದರ್ಶನ
ಸಂಸದರ್ಶಕರು ಬೊಮ್ಮಯ್ಯ ಗಾಂವಕಾರ, ಉಪನ್ಯಾಸಕರು ಮತ್ತು ಹೆಸರಾಂತ ಭಾಗವತರು

ಪ್ರಶ್ನೆ:ನಿಮ್ಮ ಮೆಚ್ಚಿನ ಓರಿಗೆಯ ಕಲಾವಿದರಾರು?
ಉತ್ತರ: ದಿ. ಪರಮಯ್ಯ ಹಾಸ್ಯಗಾರ, ದಿ. ಬಳ್ಕೂರು ಜುಟ್ಟು ನಾಯ್ಕ, ದಿ. ಧಾರೇಶ್ವರ ಮಾಸ್ತರ, ದಿ. ಶಿವಾನಂದ ಭಂಡಾರಿ, ಶ್ರೀ ಅನಂತ ಹೆಗಡೆ ಹಾವಗೋಡಿ, ಶ್ರೀ ರಾಮ ಮಾಸ್ತರ ಮುಂತಾದವರು

ಪ್ರಶ್ನೆ: ನೀವು ಮೆಚ್ಚಿಕೊಂಡ ಕಲಾವಿದರು?
ಉತ್ತರ: ದಿ.ದೇವರು ಹೆಗಡೆ, ದಿ.ಎಕ್ಟರ್ ಜೋಷಿ, ದಿ.ವೀರಭದ್ರ ನಾಯ್ಕ, ದಿ. ಜಗನ್ನಾಥ ಶೆಟ್ಟಿ, ದಿ. ಶಂಭು ಹೆಗಡೆ, ದಿ. ವೆಂಕಟರಮಣ ನಾಯಕ, ಹಿರೇಗುತ್ತಿ, ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ, ಶ್ರೀ ಜಲವಳ್ಳಿ ವೆಂಕಟೇಶ್ ರಾವ್. ದಿ. ಗೋವಿಂದ ನಾಯ್ಕ್, ದಿ. ಎಂ ಎಂ ನಾಯಕ ಇತ್ಯಾದಿ

ಪ್ರಶ್ನೆ: ಯಾವ ಯಾವ ಬಯಲಾಟ ಮೇಳಗಳಲ್ಲಿ ನೀವು ಅಭಿನಯಿಸಿದ್ದೀರಿ?

ಉತ್ತರ: ಹಾಸ್ಯಗಾರ ಮೇಳ, ಕರ್ಕಿ, ಜೋಗನಕಟ್ಟೆ ಮೇಳ ಹಳದೀಪುರ, ಶ್ರೀ ರಾಮನಾಥ ಯಕ್ಷಗಾನ ಮಂಡಳಿ, ಕುಮಟಾ, ಶ್ರೀ ಶಾಂತಿಕಾ ಪರಮೇಶ್ವರಿ ಯಕ್ಷಗಾನ ಮಂಡಳಿ, ಹೆಗಡೆ, ಇನ್ನೂ ಅನೇಕ..

Sunday, 20 January 2013

ಖಾಸಗಿ ಚಿತ್ರಗಳು..

ನನ್ನ ಮಗಳು ಪ್ರಾರ್ಥನಾ,ಪತ್ನಿ ಸಂಧ್ಯಾ----->
























ಲಾಲ್ ಬಾಗಿನಲ್ಲಿ..

ಪ್ರಜಾವಾಣಿ ಲೇಖನ-ಪರೀಕ್ಷೆಗಳನ್ನು ಪಳಗಿಸೋಣ!


ಪರೀಕ್ಷೆಗಳನ್ನು ಪಳಗಿಸೋಣ!
   ಏಳನೆ ತರಗತಿಯಲ್ಲಿ ಓದುತ್ತಿರುವ ಮೃಣಾಲಿನಿಗೆ ಕನ್ನಡ ಭಾಷೆಯ ವ್ಯಾಕರಣ ಭಾಗ ಕಷ್ಟವಾಗುತ್ತದೆ. ಪರೀಕ್ಷೆಗಳಲ್ಲಿ ಸಂಧಿಗಳನ್ನು ಗುರುತಿಸುವುದು, ಸಮಾಸಗಳನ್ನು ಹೆಸರಿಸುವುದು ಬಂದಾಗ ಅಂಕಗಳು ಕೈ ತಪ್ಪಿಹೋಗುತ್ತವೆ.ಆದರೂ,ಆಕೆ ಕನ್ನಡದಲ್ಲಿ ಎ ಗ್ರೇಡನ್ನು ಪಡೆಯುತ್ತಾಳೆ. ಏಕೆಂದರೆ,ಆಕೆ ಕನ್ನಡದಲ್ಲಿ ಚೆನ್ನಾಗಿ ಮಾತನಾಡುತ್ತಾಳೆ.ಶಾಲೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುವಾಗ ಮೃಣಾಲಿನಿಯೇ ನಿರೂಪಕಿ.ಆಕೆ ಕವಯತ್ರಿ ಕೂಡಾ.ಶಾಲೆಯ ಗೋಡೆ ಪತ್ರಿಕೆಯಲ್ಲಿ ಪ್ರತಿ ತಿಂಗಳೂ ಆಕೆಯ ಕವನಗಳು ಪ್ರಕಟವಾಗುತ್ತವೆ.ಜೊತೆಗೆ,ಆಕೆಯ ಅಕ್ಷರಗಳು ಮುದ್ದಾಗಿವೆ!
   *******
   ಮೋಹನ ಎಂಟನೆಯ ತರಗತಿಯ ವಿದ್ಯಾರ್ಥಿ.ತನ್ನ ಶಾಲೆಯ ವಿದ್ಯಾರ್ಥಿ ಸರಕಾರದಲ್ಲಿ ಪರಿಸರ ಮತ್ತು ಸ್ವಚ್ಛತೆಯ ಮಂತ್ರಿ.ವಿಜ್ಞಾನ ಸಂಘದ ಸದಸ್ಯ ಕೂಡಾ.ಶಾಲೆಯ ಕೈತೋಟ ನಿರ್ವಹಣೆ ಮತ್ತು ಸ್ವಚ್ಛತೆ ಕಾಪಾಡುಲು ಮೋಹನನಿಗೆ ಯಾರೂ ಹೇಳಬೇಕಾಗಿಲ್ಲ.ಸ್ವತಃ ಪ್ರೇರಣೆಗೊಂಡು ಆತ ಈ ಕೆಲಸವನ್ನು ಮಾಡುತ್ತಾನೆ. ತನ್ನ ಗೆಳೆಯರನ್ನು ಒಂದುಗೂಡಿಸಿ ಶಾಲಾ ಉದ್ಯಾನವನದ ನಿರ್ವಹಣೆಯಲ್ಲಿ ತೊಡುಗುತ್ತಾನೆ.ಕಳೆ ಕೀಳುವುದು,ಗಿಡಗಳಿಗೆ ನೀರುಣಿಸುವುದು ಮುಂತಾದ ಕೆಲಸಗಳನ್ನು ಮಾಡಿದ ನಂತರವೇ ಆತ ಶಾಲೆಯಿಂದ ಮನೆಗೆ ತೆರಳುತ್ತಾನೆ.ಆತನಿಗೆ ಸ್ಥಳೀಯ ಹಕ್ಕಿಗಳು ಮತ್ತು ಗಿಡಗಳ ಕುರಿತು ಸಾಕಷ್ಟು ಜ್ಞಾನವಿದೆ.ಈ ಕಾರಣದಿಂದಾಗಿಯೇ ಮೋಹನ ವಿಜ್ಞಾನ ಮತ್ತು ಕಾರ್ಯಶಿಕ್ಷಣ ವಿಷಯಗಳಲ್ಲಿ ಉತ್ತಮ ಗ್ರೇಡ್‍ಗಳನ್ನು ಪಡೆಯುತ್ತಾನೆ.
   *******
  ಶಾಲೆಯ ಅಥ್ಲೆಟಿಕ್ ಚಾಂಪಿಯನ್ ಮೇಘನಾ ಏಳನೇ ತರಗತಿಯ ವಿದ್ಯಾರ್ಥಿನಿ. ಓಟ ಮತ್ತು ಜಿಗಿತದ ವಿವಿಧ ಸ್ಪರ್ಧೆಗಳಲ್ಲಿ ತನ್ನ ವಲಯ ಮತ್ತು ಜಿಲ್ಲೆಯ ತಂಡಗಳನ್ನು ಆಕೆ ಪ್ರತಿನಿಧಿಸಿದ್ದಾಳೆ.ಶಾಲೆಯ ಕಿರಿಯರಿಗೆ ಆಕೆ ತರಬೇತುದಾರಳು ಕೂಡಾ!ಆದುದರಿಂದ ತನ್ನ ರಿಪೋರ್ಟ್ ಕಾರ್ಡಿನಲ್ಲಿ ದೈಹಿಕ ಶಿಕ್ಷಣ ವಿಷಯಕ್ಕೆ ಉತ್ತಮ ಗ್ರೇಡ್‍ಗಳನ್ನು ಪಡೆಯುತ್ತಾಳೆ.ಆಕೆ ಉತ್ತಮ ಮಿಮಿಕ್ರಿ ಮತ್ತು ರಂಗೋಲಿ ಕಲಾವಿದೆಯೂ ಆಗಿರುವುದರಿಂದ ಕಲಾ ಶಿಕ್ಷಣದಲ್ಲೂ ಒಳ್ಳೆಯ ಗ್ರೇಡ್‍ಗಳು ದೊರೆಯುತ್ತವೆ.ಗಣಿತ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ ಆಕೆ ಹಿಂದಿರುವಳಾದರೂ ಒಟ್ಟಾರೆ ಗ್ರೇಡ್ ತೃಪ್ತಿಕರವೇ ಆಗಿರುವುದರಿಂದ ಆಕೆಯ ಪೋಷಕರು ಖುಷಿಯಾಗಿದ್ದಾರೆ.ಆಕೆಯ ಕ್ರೀಡಾ ಸಾಧನೆಗಳಿಗೆ ಬೆಂಬಲವಾಗಿ ನಿಂತಿದ್ದಾರೆ.
  *******
   ಮೌಲ್ಯಮಾಪನವು ಹೀಗಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಅನಿಸುವುದಿಲ್ಲವೇ?
  2005ರ ರಾಷ್ಟ್ರೀಯ ಪಠ್ಯಕ್ರಮ ನೆಲೆಗಟ್ಟು ಮತ್ತು 2009ರ ಮಕ್ಕಳ ಶಿಕ್ಷಣದ ಹಕ್ಕು ಕಾಯಿದೆ  ಇವೆರಡೂ ಮೌಲ್ಯಮಾಪನವು ಹೀಗೆಯೇ ಇರಬೇಕೆಂದು ಸೂಚಿಸುತ್ತವೆ!ಪರೀಕ್ಷೆ ಮತ್ತು ಮೌಲ್ಯಮಾಪನ ಇವೆರಡೂ ಒಂದೇ ಎಂಬ ಜನಪ್ರಿಯ ಗ್ರಹಿಕೆಯನ್ನು ಬೇಧಿಸದೇ ಇದ್ದಲ್ಲಿ ಎಲ್ಲ ಶೈಕ್ಷಣಿಕ ಸುಧಾರಣೆಗಳೂ ನಿಷ್ಫಲವಾಗಬಹುದು ಎಂದು 2005ರ ರಾಷ್ಟ್ರೀಯ ಪಠ್ಯಕ್ರಮ ನೆಲೆಗಟ್ಟು ಅಭಿಪ್ರಾಯ ಪಡುತ್ತದೆ.ಲಿಖಿತ ಪರೀಕ್ಷೆಗಳನ್ನೇ ಕೇಂದ್ರವಾಗಿರಿಸಿಕೊಂಡು ನಡೆಯುವ ಕಲಿಕೆ-ಬೋಧನೆ ಪ್ರಕ್ರಿಯೆಗಳು ನಡೆಯುವುದನ್ನು ಗಮನದಲ್ಲಿರಿಸಿಕೊಂಡೇ ಈ ಮಾತನ್ನು ಉಲ್ಲೇಖಿಸಲಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.ಕಲಿಕೆಯೆಂಬುದನ್ನು ಕಂಠಪಾಠ ಎಂದೇ ತಿಳಿದುಕೊಂಡಿರುವುದಕ್ಕೂ ಮತ್ತು ಕಲಿಕೆಯು ಸಂಪೂರ್ಣವಾಗಿ ಪಠ್ಯಪುಸ್ತಕ ಕೇಂದ್ರಿತವಾಗಿರುವುದಕ್ಕೂ ಮೌಲ್ಯಮಾಪನ ಪ್ರಕ್ರಿಯೆಯನ್ನು ತಪ್ಪಾಗಿ ಗ್ರಹಿಸಿರುವುದೇ ಕಾರಣ.
  ಮೌಲ್ಯಮಾಪನವು ಶಿಕ್ಷಣದ ಅವಿಭಾಜ್ಯ ಅಂಗ.ಭಯದ ವಾತಾವರಣವನ್ನು ಸೃಷ್ಟಿಸಿ ಮಗುವನ್ನು ಕಲಿಯುವಂತೆ ಮಾಡುವುದು ಮೌಲ್ಯಮಾಪನದ ಉದ್ದೇಶವಲ್ಲ.ಮಕ್ಕಳಿಗೆ `ನಿಧಾನ ಕಲಿಯುವವರು’ `ಪ್ರತಿಭಾವಂತರು’ `ಸಮಸ್ಯಾತ್ಮಕ ಮಕ್ಕಳು’ ಮುಂತಾದ ಹಣೆಪಟ್ಟಿ ಕಟ್ಟುವುದೂ ಮೌಲ್ಯಮಾಪನದ ಕೆಲಸವಲ್ಲ.ಹೀಗೆ ಮಾಡುವುದರಿಂದ ಕಲಿಕೆಯ ಸಂಪೂರ್ಣ ಜವಾಬ್ಧಾರಿಯನ್ನು ಮಕ್ಕಳ ಮೇಲೆ ಹೊರಿಸಿದಂತಾಗುತ್ತದೆ ಮಾತ್ರವಲ್ಲ,ಈ ಕೆಲಸವನ್ನು ತಪ್ಪು ಫಲಿತಾಂಶದ ಆಧಾರದ ಮೇಲೆ ಮಾಡಿದಂತಾಗುತ್ತದೆ.ಶಿಕ್ಷಣವು ಮಗುವಿಗೆ ಬದುಕಲು ಕಲಿಸಬೇಕು.ನಾಗರಿಕ ಜವಾಬ್ಧಾರಿಗಳನ್ನು ಅರ್ಥಪೂರ್ಣವಾಗಿ ನಿಭಾಯಿಸುವ ಮತ್ತು ವ್ಯಕ್ತಿಯ ಉತ್ಪಾದನಾ ಸಾಮಥ್ರ್ಯವನ್ನು ಹೆಚ್ಚಿಸುವ ಶಿಕ್ಷಣ ಇಂದಿನ ಅವಶ್ಯಕತೆ.ನಮ್ಮ ರಾಷ್ಟ್ರೀಯ ಗುರಿಗಳ ಈಡೇರಿಕೆಗೆ ಶಿಕ್ಷಣವೇ ಸಾಧನ.ಇಂತಹ ಶಿಕ್ಷಣವನ್ನು ನೀಡುವಲ್ಲಿ ನಾವೆಷ್ಟು ಸಫಲರಾಗಿದ್ದೇವೆ ಎಂಬ ಕುರಿತು ವಿಶ್ವಾಸಾರ್ಹ ಹಿಮ್ಮಾಹಿತಿಯನ್ನು ನೀಡುವಲ್ಲಿ ಮೌಲ್ಯಮಾಪನವು ನೆರವಾಗುತ್ತದೆ.ಮಗುವಿಗೂ ಸಹ ತನ್ನ ಗುರಿ-ಸಾಧನೆಗಳನ್ನು ಮತ್ತು ತನ್ನ ಮಿತಿಗಳನ್ನು ಗುರುತಿಸಲು,ಮುಂದಿನ ಕಲಿಕೆಯನ್ನು ಯೋಜಿಸಲು ಸಹಕರಿಸುತ್ತದೆ.ಲಿಖಿತ ಉತ್ತರಗಳನ್ನು ಬಯಸುವ ಪರೀಕ್ಷೆಯು ಮೌಲ್ಯಮಾಪನದ ಒಂದು ತಂತ್ರವಷ್ಟೇ!.ಮಗುವಿನ ಉರುಹೊಡೆಯುವ ಸಾಮಥ್ರ್ಯವನ್ನು ಅಳೆಯುವ,ಸ್ಮರಣ ಶಕ್ತಿಯನ್ನು ಮೌಲ್ಯಾಂಕನಗೊಳಿಸುವ ಆದರೆ, ಮಗುವಿನ ಸೃಜನಶೀಲತೆ,ವಿಶ್ಲೇಷಣಾ ಮನೋಭಾವ,ಹೊಸಸಂದರ್ಭಕ್ಕೆ ಪ್ರತಿಕ್ರಿಯಿಸುವ ರೀತಿಯನ್ನು ಅಳೆಯುವಲ್ಲಿ ಅಸಡ್ಡೆ ತೋರುವ ಪರೀಕ್ಷೆಗಳಿಗಾಗಿ ನಮ್ಮ ಮಕ್ಕಳು ಸಿದ್ಧಗೊಳ್ಳುತ್ತಾ ಬಾಲ್ಯದ ಧಾರಾಳ ಸಂತಸ ಮತ್ತು ರಚನಾತ್ಮಕ ಚೈತನ್ಯವನ್ನು ಕಳೆದುಕೊಳ್ಳುತ್ತಿದ್ದಾರೆಂಬ ಆತಂಕ ಎದುರಾಗಿದೆ.
ಮೌಲ್ಯಮಾಪನ ಕ್ರಿಯೆಯಲ್ಲಿ ಲಿಖಿತ ಪರೀಕ್ಷೆಗಳು ಮಹತ್ವದ ಪಾತ್ರವನ್ನೇ ವಹಿಸುತ್ತವೆ.ಆದರೆ,ಅವುಗಳನ್ನು ಹೇಗೆ ವಿನ್ಯಾಸಗೊಳಿಸಲಾಗಿದೆ, ಶೈಕ್ಷಣಿಕ ಉದ್ಧೇಶಗಳನ್ನು ಅಳೆಯುವಲ್ಲ್ಲಿ ಮತ್ತು ಈಡೇರಿಸುವಲ್ಲಿ ಅವು ಸಕ್ಷಮವಾಗಿವೆಯೇ ಎಂಬ ಪ್ರಶ್ನೆಗಳು ಬಹು ಮುಖ್ಯ.ಪರೀಕ್ಷೆ ಎಷ್ಟು ಉತ್ತಮವಾಗಿದೆ ಎಂಬುದನ್ನು ಮಕ್ಕಳ ಉತ್ತರಗಳಲ್ಲಿ ಹುಡುಕುವ ಬದಲು ವಿದ್ಯಾರ್ಥಿಗಳು ಎದುರಿಸಿದ ಪ್ರಶ್ನೆಗಳ ಮೂಲಕವೇ ತೀರ್ಮಾನಿಸಬಹುದು!ವಿದ್ಯಾರ್ಥಿಗಳು ತಮಗೆ ತಾವೇ ಎಷ್ಟು ಪ್ರಶ್ನೆಗಳನ್ನು ಹಾಕಿಕೊಳ್ಳುವಂತೆ ಪರೀಕ್ಷೆಗಾಗಿ ಸಿದ್ಧಪಡಿಸಿದ ಪ್ರಶ್ನೆ ಪತ್ರಿಕೆಯು ಪ್ರೇರೇಪಿಸಿದೆ ಎಂಬುದು ಪರೀಕ್ಷೆಯ ಯಶಸ್ಸನ್ನು ನಿರ್ಧರಿಸುತ್ತದೆ.ಇಷ್ಟಾಗಿಯೂ,ಲಿಖಿತ ಉತ್ತರಗಳನ್ನು ಬಯಸುವ ಪರೀಕ್ಷೆಯೇ ಮೌಲ್ಯಮಾಪನದ ಏಕಮೇವ ತಂತ್ರವಲ್ಲ.ಲಿಖಿತ ಪರೀಕ್ಷೆಗಳ ಮೂಲಕವೇ ಮಗುವಿನ ಸರ್ವಾಂಗೀಣ ಬೆಳವಣಿಗೆಯನ್ನು ಅಳತೆಮಾಡಲು ಸಾಧ್ಯವಿಲ್ಲ.ಈ ಕಾರಣಕ್ಕಾಗಿ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಹತ್ತಾರು ವಿಧದ ತಂತ್ರಗಳು ಮತ್ತು ಸಾಧನಗಳನ್ನು ಬಳಸಬೇಕಾಗಿದೆ.
ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ
   ಮಗುವಿನ ಕಲಿಕೆಯ ಕುರಿತಾದ ಸ್ಪಷ್ಟ ಚಿತ್ರಣವನ್ನು ಪಡೆಯಲು ಶಿಕ್ಷಕರು ನೀಡುವ `ತೀರ್ಪು’ಗಳೇ ಅಂತಿಮವಲ್ಲ.ಆದರೆ,ಶಿಕ್ಷಕರ ತೀರ್ಪುಗಳು ಬಹಳ ಮುಖ್ಯವಾಗಿರುವುದು ಸುಳ್ಳಲ್ಲ. ಇಂತಹ ತೀರ್ಪುಗಳು ಹೆಚ್ಚು ಸ್ಷಷ್ಟವೂ,ವಿಶ್ವಾಸಾರ್ಹವೂ ಮತ್ತು ಮಗುವಿನ ಸರ್ವಾಂಗೀಣ ಬೆಳವಣಿಗೆಯನ್ನು ಆಧರಿಸಿಯೂ ಇರಬೇಕಾದದ್ದು ಅವಶ್ಯಕ.ಶಿಕ್ಷಕರು ಬಳಸುವ ಮೌಲ್ಯಮಾಪನ ತಂತ್ರಗಳು ಮಗುವಿನ ಬಲ ಮತ್ತು ದೌರ್ಬಲ್ಯಗಳಿಗೆ ಸಂವೇದನಾ ಶೀಲವಾಗಿರಬೇಕು.ಈ ಮೂಲಕ ಮೌಲ್ಯಮಾಪನವು ಮಾನವೀಯಗೊಳ್ಳಬೇಕಾಗಿದೆ. ಜೊತೆಗೆ,ಮೌಲ್ಯಮಾಪನವನ್ನು ಒಂದು ಅರ್ಥಪೂರ್ಣ ತರಗತಿ ಸಂವಹನವಾಗಿಯೂ ಗ್ರಹಿಸುವ ಅವಶ್ಯಕತೆಯಿದೆ. 
  ಪಾತ್ರೆಯಲ್ಲಿನ ಒಂದು ಅಗಳು ಬೆಂದಿದೆಯೆಂದರೆ ಇಡೀ ಪಾತ್ರೆಯ ಅನ್ನ ಬೆಂದಿದೆಯೆಂಬ ತೀರ್ಮಾನಕ್ಕೆ ಬರುವುದು ಮಕ್ಕಳ ಕಲಿಕೆಯ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ತೀರಾ ತಪ್ಪಾದ ಮಾರ್ಗ.ಪ್ರತಿ ಮಗುವೂ ಭಿನ್ನ ಸಾಮಾಜಿಕ ಮತ್ತು ಕೌಟುಂಬಿಕ ಹಿನ್ನೆಲೆಯನ್ನು ಹೊಂದಿರುತ್ತದೆ.  ಮಗುವಿಗೆ ದೊರೆಯುವ ಅನುಭವಗಳು ವಿಭಿನ್ನವಾಗಿರುತ್ತವೆ ಮತ್ತು ಅವುಗಳನ್ನು ಗ್ರಹಿಸುವ ರೀತಿ ಪ್ರತಿ ಮಗುವಿಗೂ ವಿಶಿಷ್ಟವಾಗಿರುತ್ತದೆ. ಆದುದರಿಂದಲೇ, ಮೌಲ್ಯಮಾಪನವು ಮಗುವಿನ ಅನನ್ಯತೆಯನ್ನು ಗಣನೆಗೆ ತೆಗೆದುಕೊಳ್ಳುವುದು ಅವಶ್ಯಕ. ಈ ಎಲ್ಲ ಕಾರಣಗಳಿಂದಾಗಿ,ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ವಿಧಾನಗಳನ್ನು ಅಳವಡಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.  
    ಭಾಷೆ,ಗಣಿತ,ವಿಜ್ಞಾನ,ಸಮಾಜ ವಿಜ್ಞಾನಗಳ ಜೊತೆಗೆ ದೈಹಿಕ ಶಿಕ್ಷಣ,ಕಲಾಶಿಕ್ಷಣ,ಕಾರ್ಯಶಿಕ್ಷಣ,ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳನ್ನು ಪಠ್ಯ ವಿಷಯಗಳನ್ನಾಗಿ ಸೇರಿಸಲಾಗಿದೆ.ಈ ಎಲ್ಲ ಪಠ್ಯ ವಿಷಯಗಳನ್ನೊಳಗೊಂಡೇ ಮಗುವಿನ ಶೈಕ್ಷಣಿಕ ಸಾಧನೆಗಳನ್ನು ಅಳೆಯುವ ಪದ್ಧತಿ ಈ ವರ್ಷದಿಂದ ಪ್ರಾರಂಭವಾಗಿದೆ.ಪ್ರತಿಯೊಂದು ಪಠ್ಯ ವಿಷಯದ ಸಾಧನೆಯನ್ನೂಸಂಕಲನಾತ್ಮಕ ಮತ್ತು ರೂಪಣಾತ್ಮಕ ಮೌಲ್ಯಮಾಪನಗಳ ಮೂಲಕ ಅಳೆಯಲಾಗುತ್ತದೆ. ಸೆಮಿಸ್ಟರ್‍ನ ಅಂತ್ಯದಲ್ಲಿ ನಡೆಯುವ ಲಿಖಿತ ಪರೀಕ್ಷೆಗಳೇ ಸಂಕಲನಾತ್ಮಕ ಮೌಲ್ಯಮಾಪನದ ಪ್ರಮುಖ ಸಾಧನ. ಪಠ್ಯವಿಷಯವೊಂದರ ಕಲಿಕೆಗೆ ಸಂಬಂಧಿಸಿದ ಸಾಧನೆಗಳನ್ನು  ಮಗುವಿನ ಸಹಜ ವರ್ತನೆಗಳಲ್ಲಿ ವಿವಿಧ ಸಾಧನ ಮತ್ತು ತಂತ್ರಗಳ ಸಹಾಯದಿಂದ ಹುಡುಕುವುದೇ  ರೂಪಣಾತ್ಮಕ ಮೌಲ್ಯಮಾಪನ.ರೂಪಣಾತ್ಮಕ ಮೌಲ್ಯಮಾಪನವು ಕಾರ್ಯರೂಪದಲ್ಲಿ ತೀರಾ ಹೊಸದಾದ ಪರಿಕಲ್ಪನೆ.ಇದಕ್ಕೆ ಅಗತ್ಯವಾದ ಸಾಧನಗಳು,ತಂತ್ರಗಳು ಮತ್ತು ಅಳತೆಗೋಲುಗಳನ್ನು ಪ್ರತಿ ಮಗುವಿನ ವಿಶಿಷ್ಠತೆಗಳನ್ನು ಲಕ್ಷಿಸಿಕೊಂಡೇ ರೂಪಿಸಬೇಕಾದ ಅನಿವಾರ್ಯತೆ ಇರುವುದರಿಂದ ಶಿಕ್ಷಕಿಯರಿಗೆ ಹೆಚ್ಚಿನ ವೃತ್ತಿಪರ ಬೆಂಬಲ ಅಗತ್ಯವಾಗಿದೆ. ಭಾಷೆಯ ಸೃಜನಶೀಲ ಬಳಕೆಯನ್ನಾಗಲೀ, ಬದುಕಿನ ನಿರ್ಧಾರ ತೆಗೆದುಕೊಳ್ಳುವಾಗ ವಿಜ್ಞಾನದ ವಿಧಾನಗಳನ್ನು ಅನುಸರಿಸುವುದನ್ನಾಗಲೀ, ಅಭಿವ್ಯಕ್ತಿಯಲ್ಲಿ ಗಣಿತವನ್ನು ಪರಿಣಾಮಕಾರಿಯಾಗು ಬಳಸುವುದನ್ನಾಗಲೀ ಅಳೆಯಬೇಕಾದರೆ ಮೌಲ್ಯಮಾಪನವನ್ನು ತರಗತಿ ಸಂವಹನದ ಭಾಗವಾಗಿ ಗ್ರಹಿಸುತ್ತಾ ಶಿಕ್ಷಕಿಯು ಉದ್ಧೇಶಪೂರ್ವಕ ಸಂದರ್ಭಗಳನ್ನು ಕಲಿಕೆಯ ಪರಿಸರದÀಲ್ಲೇ ಸೃಷ್ಟಿಸಿಕೊಳ್ಳಬೇಕಾಗುತ್ತದೆ.ಶೈಕ್ಷಣಿಕ ಸಾಧನೆಗಳ ಜೊತೆಗೆ,ಮಗುವಿನ ಸಾಮಾಜಿಕ,ಭಾವನಾತ್ಮಕ,ವೈಜ್ಞಾನಿಕ ಕೌಶಲಗಳು ಮತ್ತು ಮೌಲ್ಯ ರೂಪಣೆ ಹಾಗೂ ಮನೋಧೋರಣೆಗಳಲ್ಲಿರುವ ಧನಾತ್ಮಕ ಅಂಶಗಳನ್ನು ಗುರುತಿಸುವ ಮೂಲಕ ಸಮಗ್ರ ವ್ಯಕ್ತಿತ್ವದ ಮೌಲ್ಯಮಾಪನ ನಡೆಯಬೇಕು.
   ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನವು ಹತ್ತಾರು ಶೈಕ್ಷಣಿಕ ಸುಧಾರಣೆಗಳ ಜೊತೆಗೆ ಹನ್ನೊಂದಾಗದೇ ಹೊಸದೊಂದು ಮನೋಧರ್ಮವನ್ನು ಶಿಕ್ಷಣಕ್ಷೇತ್ರದಲ್ಲಿ ಕೆಲಸಮಾಡುವವರಿಗೆ ಉಂಟುಮಾಡಲೆಂಬುದು ಎಲ್ಲರ ಆಶಯ.ಕಲಿಕೆಯೆಂಬುದು ಮಾಹಿತಿಗಳ ಹೊರೆ ಹೊರುವ ಕೆಲಸ ಎಂಬಂತಾಗದೆ ಜ್ಞಾನದ ರಚನೆಯ ಅರ್ಥಪೂರ್ಣ ಅವಕಾಶವಾಗಲು ಇದು ಅನಿವಾರ್ಯ ಕೂಡಾ.ನಮ್ಮ ಪ್ರಜಾಪ್ರಭುತ್ವದ ಗುರಿ-ಉದ್ಧೇಶಗಳನ್ನು ಈಡೇರಿಸಲು ಲಾಯಕ್ಕಾದ ಉತ್ಪನ್ನದಾಯಕ ಮಾನವ ಸಂಪನ್ಮೂಲದ ಸೃಷ್ಟಿಗೆ ಶಿಕ್ಷಣವಲ್ಲದೆ ಬೇರೆ ಯಾವ ಸಾಧನವಿದೆ?