Monday 4 February 2013

ಶಾಲೆಗಳಲ್ಲಿ ಪರಿಸರ ಮಿತ್ರ-ಉದಯ ಗಾಂವಕಾರ*ಪ್ರಜಾವಾಣಿ

   ವಾಯುಗುಣ ಬದಲಾವಣೆಗಳಿಗೆ ಮನುಷ್ಯ ಚಟುವಟಿಕೆಗಳೇ ಕಾರಣ ಎಂಬ ಐ.ಪಿ.ಸಿ.ಸಿ. (ವಾಯುಗುಣ ಬದಲಾವಣೆ ಕುರಿತ ಅಂತರ್ ಸರಕಾರಿ ನಿಯೋಗ) ವರದಿಯು ಪರಿಸರ ಪ್ರಜ್ಞೆಯನ್ನು ಮಾನವರಲ್ಲಿರಬೇಕಾದ ಮಹೋನ್ನತ ಜೀವನ ಮೌಲ್ಯವಾಗಿ ಸ್ವೀಕರಿಸುವಂತೆ ಮಾಡಿದೆ.ಈ ಭೂಮಿಯನ್ನು ಮುಂಬರುವ ಅಪಾಯಗಳಿಂದ ಪಾರು ಮಾಡಲು ಸರ್ಕಾರಗಳ ಮಟ್ಟದಲ್ಲಿ ನಡೆಯುವ ನೀತಿ ನಿಯಮಗಳಿಂದಷ್ಟೇ ಸಾಧ್ಯವಿಲ್ಲ. ವ್ಯಕ್ತಿಗಳ ಮಟ್ಟದಲ್ಲಿಯೂ ಪರಿಸರಬದ್ಧತೆ ಉಂಟಾಗುವುದು ಅಗತ್ಯ. ಮನುಷ್ಯರ ನಡೆ-ನುಡಿ- ಆಲೋಚನೆಗಳಲ್ಲಿ ಹಸಿರು ಮನೋಭಾವದ ಪ್ರಭಾವಗಳನ್ನು ಕಾಣುವಂತಾಗಬೇಕು.

ಎಳವೆಯಲ್ಲಿಯೇ ಹಸಿರು ಮೌಲ್ಯಗಳ ಪ್ರಜ್ಞೆ ಉಂಟಾದಲ್ಲಿ  ಮುಂಬರುವ ತಲೆಮಾರು ಈ ಭೂಮಿಗೆ ಅಷ್ಟು ಕಂಟಕಪ್ರಾಯವಾಗಲಾರದು. ಈ ನಿಟ್ಟಿನಲ್ಲಿ  ಭಾರತ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯದಿಂದ ಸ್ಥಾಪಿಸಲ್ಪಟ್ಟ ಪರಿಸರ ಶಿಕ್ಷಣ ಕೇಂದ್ರವು ಆರ್ಸೆಲಾರ್ ಮಿತ್ತಲ್ ಸಂಸ್ಥೆಯ ನೆರವಿನೊಂದಿಗೆ ಶಾಲಾ ಮಕ್ಕಳಲ್ಲಿ ಪರಿಸರ  ಕಾಳಜಿಯನ್ನುಂಟು ಮಾಡಿ ಸುಸ್ಥಿರ ಅಭಿವೃದ್ಧಿಯತ್ತ ಅವರನ್ನು ಕೊಂಡೊಯ್ಯುವ ಉದ್ದೇಶದಿಂದ `ಪರಿಸರ ಮಿತ್ರ~ ಎಂಬ ಕಾರ್ಯಕ್ರಮವನ್ನು  ಹಮ್ಮಿಕೊಂಡಿದೆ.
ಯುನೆಸ್ಕೋ, ಯು.ಎನ್.ಇ.ಪಿ. ಮತ್ತು ಅರ್ಥ್ ಚಾರ್ಟರ್‌ಗಳ ಸಹಯೋಗವೂ ಈ ಕಾರ್ಯಕ್ರಮಕ್ಕಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಸರ್ವಶಿಕ್ಷಣ ಅಭಿಯಾನದ ಮೂಲಕ ಈ ಕಾರ್ಯಕ್ರಮ ಶಾಲೆಗಳಲ್ಲಿ ಅನುಷ್ಠಾನಗೊಳ್ಳಲಿದೆ.
ಏನಿದು  ಪರಿಸರ ಮಿತ್ರ ?
ವಾತಾವರಣದಲ್ಲಿ ಹೆಚ್ಚುತ್ತಿರುವ ಇಂಗಾಲದ ಡೈಆಕ್ಸೈಡ್ ಮತ್ತಿತರ ಹಸಿರು ಮನೆ ಅನಿಲಗಳು ವಾಯುಗುಣ ಬದಲಾವಣೆಗೆ ಕಾರಣವಾಗಿವೆ. ಇದರ ಪರಿಣಾಮವಾಗಿ ಜಾಗತಿಕ ತಾಪ ಏರಿಕೆ ಉಂಟಾಗಿದೆ. ಮನುಷ್ಯರ ಬದಲಾದ ಜೀವನ ಶೈಲಿ ಹಾಗೂ ಹೆಚ್ಚುತ್ತಿರುವ ಜನಸಂಖ್ಯೆಯ ಬೇಡಿಕೆಗಳಿಗನುಗುಣವಾಗಿ ಕಾರ್ಖಾನೆಗಳ ಸಂಖ್ಯೆ ಹೆಚ್ಚುತ್ತಿದೆ.

ವಿದ್ಯುತ್ ಬಳಕೆ, ಆಹಾರದ ಬಳಕೆ  ಏರುಮುಖವಾಗಿದೆ. ಮನುಷ್ಯ ನಡೆದಲ್ಲೆಲ್ಲ ಕಾರ್ಬನ್ ಹೆಜ್ಜೆ ಗುರುತುಗಳು ಮೂಡುತ್ತಿವೆ.  `ಪರಿಸರ ಮಿತ್ರ~  ಕಾರ್ಯಕ್ರಮವು ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಕನಿಷ್ಠಗೊಳಿಸುವಂತಹ ಸಕಾರಾತ್ಮಕ ಹಸಿರು ಕಾಯಕಗಳನ್ನು `ಅಂಗೈ ಮುದ್ರೆ~  (hand print) ಎಂದು ಕರೆಯುತ್ತದೆ.

ಶಾಲಾ ವಿದ್ಯಾರ್ಥಿಗಳು ತಮ್ಮ  `ಅಂಗೈ ಮುದ್ರೆ~ಗಳ ಮೂಲಕ ವಾಯುಗುಣ ಬದಲಾವಣೆಯ ಸವಾಲುಗಳನ್ನು ಎದುರಿಸಲು ಬೇಕಾದ ಜ್ಞಾನ, ಜಾಗೃತಿ ಮತ್ತು ಬದ್ಧತೆಯನ್ನು ಪ್ರದರ್ಶಿಸುವಂತೆ ಮಾಡುವುದು ಈ ಕಾರ್ಯಕ್ರಮದ ಉದ್ದೇಶ.
ಭಾರತದ ಎರಡು ಲಕ್ಷ ಶಾಲೆಗಳಲ್ಲಿರುವ ಐದರಿಂದ ಒಂಬತ್ತನೇ ತರಗತಿಯವರೆಗಿನ ಎರಡು ಕೋಟಿ ವಿದ್ಯಾರ್ಥಿಗಳನ್ನು ನಿಜ ಅರ್ಥದಲ್ಲಿ ಪರಿಸರ ಮಿತ್ರರನ್ನಾಗಿಸಸುವ ಈ ಮಹತ್ವಾಕಾಂಕ್ಷಿ ಯೋಜನೆಯ ಮೊದಲ ಹಂತ  ಈಗಾಗಲೇ ಪ್ರಾರಂಭಗೊಂಡಿದೆ.
ಪರಿಸರ ಕಾರ್ಯಕ್ರಮವೆಂದರೆ ಭಾಷಣ, ಜಾಥಾ, ಭಿತ್ತಿಚಿತ್ರ ಪ್ರದರ್ಶನ ಮತ್ತಿತರ ಜಾಗೃತಿ ಅಭಿಯಾನಗಳು ಮಾತ್ರ  ಎಂಬ ಗ್ರಹಿಕೆಯನ್ನು ಮೀರಲು  `ಪರಿಸರ ಮಿತ್ರ~  ನೆರವಾಗುತ್ತದೆ. ಸಕಾರಾತ್ಮಕ ಹಸಿರು ಕಾಯಕಗಳ `ಅಂಗೈಮುದ್ರೆ~ಗಳ ಮೂಲಕ ವಿದ್ಯಾರ್ಥಿಗಳನ್ನು ಜಾಗತಿಕ ನಾಗರಿಕರನ್ನಾಗಿಸಲು ಈ ಯೋಜನೆ ಉದ್ದೇಶಿಸಿದೆ.
ಸರ್ವಶಿಕ್ಷಣ ಅಭಿಯಾನದ ಮೂಲಕ ನಡೆಯುತ್ತಿರುವ ಅನೇಕ ಕಾರ್ಯಕ್ರಮಗಳ ನಡುವೆ ಶಾಲಾ ಮಕ್ಕಳನ್ನು ಸುಸ್ಥಿರ ಭವಿಷ್ಯದತ್ತ ಕೊಂಡೊಯ್ಯುವ ಪರಿಸರ ಮಿತ್ರದ ಕ್ರಿಯಾ ಯೋಜನೆಗಳು ಕಳೆದು ಹೋಗದ ಹಾಗೆ ನಮ್ಮ ಅಧಿಕಾರಿಗಳು, ಶಿಕ್ಷಕರು ನೋಡಿಕೊಳ್ಳಬೇಕಿದೆ.
ಪರಿಸರ ಶಿಕ್ಷಣವನ್ನು ಪಠ್ಯಕ್ರಮಕ್ಕೆ ಹೊರತಾದ ಪ್ರತ್ಯೇಕ ಕಾರ್ಯಕ್ರಮ ಎಂಬ  ಸಾಮಾನ್ಯ ಗ್ರಹಿಕೆಯನ್ನು ಶಿಕ್ಷಕರಿಂದ ಹೊರಹಾಕಿದರೆ ಈ ಕಾರ್ಯಕ್ರಮಕ್ಕೆ ಒಂದು ಉತ್ತಮ ಪ್ರಾರಂಭ ದೊರೆಯಿತೆಂದೇ ಅರ್ಥ.
2005ರ ಪಠ್ಯಕ್ರಮ ನೆಲೆಗಟ್ಟು ಮತ್ತು  ಪರಿಸರ ಮಿತ್ರ: ಜ್ಞಾನವನ್ನು ಭಾಷೆ, ಗಣಿತ, ವಿಜ್ಞಾನ  ಮತ್ತಿತ್ಯಾದಿ ಪಠ್ಯವಿಷಯಗಳ ರೂಪದಲ್ಲಿ ವ್ಯವಸ್ಥೆಗೊಳಿಸಲಾಗಿರುತ್ತದೆ. ಸಾಮಾನ್ಯವಾಗಿ ಶಾಲೆಗಳಲ್ಲಿ ಬೋಧನೆ ಮತ್ತು ಕಲಿಕೆಯ ಪ್ರಕ್ರಿಯೆಯು ವಿದ್ಯಾರ್ಥಿಗಳು ಜ್ಞಾನವನ್ನು ಹೀಗೆ ಬಿಡಿ ಬಿಡಿಯಾಗಿಯೇ ಗ್ರಹಿಸುವಂತೆ ಮಾಡುತ್ತದೆ.ಇದರಿಂದಾಗಿ ಪ್ರತ್ಯೇಕ ತರಗತಿಗಳಲ್ಲಿ ಕಲಿತ ನಿರ್ದಿಷ್ಟ ವಿಷಯಗಳನ್ನು ಪರಸ್ಪರ ಜೋಡಿಸಿ ನೋಡಲು ವಿದ್ಯಾರ್ಥಿಗಳಿಗೆ ಅವಕಾಶವಿರುವುದಿಲ್ಲ. ಜ್ಞಾನವನ್ನು ಸಮಗ್ರವಾಗಿ ಗ್ರಹಿಸಲು ಸಾಧ್ಯವಾಗದಿರುವುದರಿಂದ ತರಗತಿಯಲ್ಲಿ ಪಡೆದ ಶಿಕ್ಷಣವು ದೈನಂದಿನ ಬದುಕಿನೊಂದಿಗೆ ಜೋಡಿಸಿಕೊಳ್ಳುವುದಿಲ್ಲ.
ಏಕೆಂದರೆ, ನೈಜ ಜೀವನವು ಈ ರೀತಿ ವಿಭಾಗಗಳಲ್ಲಿ ವ್ಯವಸ್ಥಿತಗೊಂಡಿರುವುದಿಲ್ಲ. ವಿದ್ಯಾರ್ಥಿಗಳು ತಾವು ತರಗತಿಯಲ್ಲಿ  ಪಡೆದ ಜ್ಞಾನವನ್ನು ನೈಜ ಬದುಕಿನಲ್ಲಿ  ಒರೆಹಚ್ಚಲು ಬೇಕಾದ ಪರಿಸರವನ್ನು `ಪರಿಸರ ಮಿತ್ರ~ ಕಾರ್ಯಕ್ರಮವು ನಿರ್ಮಿಸುತ್ತದೆ.
ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ವಿಷಯಗಳ ಅಧ್ಯಾಪಕರೂ ನೀರು, ಕಸ ನಿರ್ವಹಣೆ, ಇಂಧನ, ಜೀವ ವೈವಿಧ್ಯ ಹಾಗೂ ಸಂಸ್ಕೃತಿ ಮತ್ತು ಪರಂಪರೆ ಎಂಬ ಐದು ಕ್ರಿಯಾವಿಷಯಗಳ ಮೂಲಕ ವಿದ್ಯಾರ್ಥಿಗಳೊಂದಿಗೆ ಕೆಲಸ ಮಾಡಲು ಅವಕಾಶ ಕಲ್ಪಿಸುತ್ತದೆ.
      ಭಾಷಾ ಶಿಕ್ಷಕರು ತಮ್ಮ ನಗರದ ಕಸ ನಿರ್ವಹಣೆಯ ಅವ್ಯವಸ್ಥೆಯ ಕುರಿತು ನಗರಸಭೆಯ ಅಧಿಕಾರಿಗಳಿಗೆ ಪತ್ರ ಬರೆಯಲು ವಿದ್ಯಾರ್ಥಿಗಳಿಗೆ ಪ್ರೇರಣೆ ಮತ್ತು ಜ್ಞಾನವನ್ನು ಒದಗಿಸಬಲ್ಲರು. ಗಣಿತ ಶಿಕ್ಷಕರು ಸೋರುವ ನಲ್ಲಿಯಿಂದ  ದಿನವೊಂದಕ್ಕೆ ಸಂಗ್ರಹವಾಗುವ ನೀರಿನ ಪ್ರಮಾಣವನ್ನು ಲೆಕ್ಕ ಹಾಕಲು ತಿಳಿಸಬಹುದು.
ವಿಜ್ಞಾನ ಶಿಕ್ಷಕರು ಶಾಲೆಯ ಸುತ್ತಲಿರುವ ಮರಗಿಡಗಳಿಗೆ ವೈಜ್ಞಾನಿಕ  ಹೆಸರುಗಳ ಪಟ್ಟಿ ಅಂಟಿಸುವಂತೆಯೋ ಅಥವಾ ಶಾಲೆಯ ನೀರಿನ ಟ್ಯಾಂಕನ್ನು ತುಂಬಿಸಲು ಬಳಕೆಯಾಗುವ ವಿದ್ಯುತ್ ಶಕ್ತಿಯ ಪ್ರಮಾಣವನ್ನು ಅಳೆಯುವಂತೆಯೂ ವಿದ್ಯಾರ್ಥಿಗಳಿಗೆ ಪ್ರೇರೇಪಣೆ ನೀಡಬಹುದು.
      ಪಠ್ಯ ವಿಷಯಗಳನ್ನು ಮಗುವಿನ ದೈನಂದಿನ ಬದುಕಿನೊಂದಿಗೆ ಬೆಸೆಯುವಂತಹ ಅನೇಕ ಚಟುವಟಿಕೆಗಳ ಮೂಲಕ ಗಳಿಸಿದ ಹಸಿರು ಜ್ಞಾನವು ವಿದ್ಯಾರ್ಥಿಗಳಿಗೆ ಸುಸ್ಥಿರ ಅಭಿವೃದ್ಧಿಗಾಗಿ ಎಲ್ಲಿ ಕ್ರಮ ಕೈಗೊಳ್ಳಬೇಕೋ ಅಂತಹ ನಿರ್ದಿಷ್ಟ ಸನ್ನಿವೇಶಗಳು ಮತ್ತು ಸ್ಥಳಗಳನ್ನು ಗುರುತಿಸಲು ನೆರವಾಗುತ್ತದೆ. ಪರಿಸರದಲ್ಲೊಂದು ಬದಲಾವಣೆಯನ್ನು ತರಬಲ್ಲೆನೆಂಬ ಆತ್ಮವಿಶ್ವಾಸವು ಅವರ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ.
ವಿದ್ಯಾರ್ಥಿಗಳು ಇಕೋ ಕ್ಲಬ್‌ನಂತಹ ಗುಂಪಿನೊಂದಿಗೆ ಕಾರ್ಯನಿರ್ವಹಿಸುವಾಗ ಪಡೆಯುವ ಸಾಮಾಜಿಕ ಕೌಶಲಗಳು ಅವರ ಬದುಕಿಗೆ ಬಹಳ ಮುಖ್ಯ. ಹೊಸ ತಲೆಮಾರು ಇಂತಹ ಸಾಮಾಜಿಕ ಬುದ್ಧಿವಂತಿಕೆಯನ್ನು ಗಳಿಸಿಕೊಂಡಲ್ಲಿ ಮುಂಬರುವ ದಿನಗಳು ಹಿಂಸೆಯಿಂದ, ದ್ವೇಷದಿಂದ ಮುಕ್ತವಾಗಬಹುದು.
       ಪರಿಸರ ಮಿತ್ರ ಕಾರ್ಯಕ್ರಮದ ಐದು ಕ್ರಿಯಾ ವಿಷಯಗಳಲ್ಲಿ ವಿದ್ಯಾರ್ಥಿಗಳು ಚಟುವಟಟಿಕೆಗಳನ್ನು ನಡೆಸುವಂತೆ ಪ್ರೇರೇಪಿಸುವ ಕಾರ್ಯವು 2005 ರ ಪಠ್ಯಕ್ರಮ ನೆಲೆಗಟ್ಟು ಸೂಚಿಸುವ ಮಾರ್ಗದರ್ಶಿ ತತ್ವಗಳಿಗೆ ಪೂರಕವಾಗಿದೆ ಕೂಡಾ.
 ಪಠ್ಯಕ್ರಮ ನೆಲೆಗಟ್ಟು ಜ್ಞಾನವನ್ನು ಶಾಲೆಯ ಹೊರ ಪರಿಸರದೊಂದಿಗೆ ಜೋಡಿಸಲು ಮತ್ತು ಪಠ್ಯಕ್ರಮವನ್ನು ಪಠ್ಯಪುಸ್ತಕಗಳನ್ನು ಮೀರಿ ಸವೃದ್ಧಗೊಳಿಸಲು ಉತ್ತೇಜಿಸುತ್ತದೆ.ವಿಚಾರಣೆ, ಅನ್ವೇಷಣೆ, ಪ್ರಶ್ನಿಸುವುದು, ಚರ್ಚೆ, ಅನ್ವಯ, ಆತ್ಮವಿಮರ್ಶೆ ಮುಂತಾದ ಕ್ರಿಯೆಗಳಿಂದ ಪರಿಕಲ್ಪನೆಗಳನ್ನು ಮೂಡಿಸಲು ಶಾಲೆಗಳು ಅವಕಾಶವಿತ್ತಲ್ಲಿ ಜ್ಞಾನಸೃಷ್ಟಿಯ ಕ್ರಿಯೆ ತೊಡಕಿಲ್ಲದೇ ಸಾಗಬಹುದು.
        ಪರಿಸರ ಮಿತ್ರ  ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು  ತರಗತಿ ಕೋಣೆಯಲ್ಲಿ  ಪಡೆದ ಮಾಹಿತಿಗಳನ್ನಾಧರಿಸಿ ನಿತ್ಯ ಬದುಕಿನ ಸಂದರ್ಭದಲ್ಲಿ ನಡೆಸುವ ಚಟುವಟಿಕೆಗಳು (ಪ್ರಾಜೆಕ್ಟ್ಸ್) ಅವರ ಪರಿಸರ ಬದ್ಧತೆಯನ್ನು ಹೆಚ್ಚಿಸಿ  ನಡೆದಲ್ಲೆಲ್ಲಾ ಅಂಗೈ ಮುದ್ರೆಗಳು ಉಂಟಾದರೆ ಈ ಭೂಮಿ ಮುಂದಿನ ತಲೆಮಾರಿಗಾಗಿ ಉಳಿಯಬಹುದು. ಜ್ಞಾನ ಸೃಷ್ಟಿಯ ಸಾಹಸ ಬೇಗನೆ ಶುರುವಾಗಲಿ!

2 comments:

ಶ್ರೀಧರ್. ಎಸ್. ಸಿದ್ದಾಪುರ. said...

namma shalegalali nadeya bekada ati mukya vishaya parisara samrakshane.

Uday Gaonkar said...

Sure.
Thanks for the comment