Monday 10 October 2022

ಸೂಕ್ಷ್ಮ ಜೀವಿಯೊಂದು ಸಾಕ್ಷ್ಯ ನುಡಿಯಲು ಬಂದಾಗ..

 

ಪರೇಶ ಮೆಸ್ತಾ ಎಂಬ ಬಾಳಿ ಬದುಕಬೇಕಿದ್ದ ಯುವಕ ಸಾವಿಗೀಡಾಗಿದ ಘಟನೆ ನಡೆದು ಐದು ವರ್ಷಗಳೇ ಕಳೆದಿವೆ. ಮನೆಯ ಮಗನ ಸಾವನ್ನು ಸ್ವೀಕರಿಸುವುದು ಯಾವ ತಂದೆ-ತಾಯಿಗೂ ಸುಲಭವಲ್ಲ. ಸಾವಿನ ಸುದ್ದಿ ತಿಳಿದಾಗ ಪ್ರೀತಿಪಾತ್ರರ ಮನಸ್ಸು  ಆ ಸುದ್ದಿಯನ್ನು ನಿರಾಕರಿಸುತ್ತದೆ. ಎಲಿಜಬೆಥ್‌ ಕುಬ್ಲೆರ್ ತನ್ನ ಡೆಥ್‌ ಅಂಡ್‌ ಡೈಯಿಂಗ್ ಕೃತಿಯಲ್ಲಿ  ಸಾವಿನ ನಿರಾಕರಣೆಯನ್ನು ಶೋಕದ ಮೊದಲ ಹಂತವಾಗಿ ಗುರುತಿಸುತ್ತಾರೆ. ಬದುಕಿನ ಅತ್ಯಂತ ದೊಡ್ಡ ನಷ್ಟವನ್ನು ಎದುರಿಸಲು ಮನಸ್ಸು ಬಳಸುವ ರಕ್ಷಣಾತ್ಮಕ ತಂತ್ರವಿದು. 

ಆದರೆ, ವಾಸ್ತವವು ನಿಚ್ಚಳವಾಗುತ್ತಾ ಹೋದಂತೆ ಶೋಕದ ಎರಡನೆಯ ಹಂತವು ತೆರೆದುಕೊಳ್ಳುತ್ತದೆ. ಆ ಹಂತವೇ ಸಿಟ್ಟು. ದುಃಖವು ಉಂಟುಮಾಡುವ ಅಸಹಾಯಕತೆ, ನೋವಿನಿಂದ ಕಂಗೆಟ್ಟುಹೋಗುವುದನ್ನು ತಪ್ಪಿಸಿಕೊಳ್ಳಲು ಇನ್ನೊಬ್ಬರ ಮೇಲೆ ಸಿಟ್ಟುಮಾಡಿಕೊಳ್ಳಲು ಮನಸ್ಸು ಬಯಸುತ್ತದೆ. ಸಾಮಾನ್ಯವಾಗಿ, ಯಾರ ಮೇಲೆ ಸಿಟ್ಟುಮಾಡಿಕೊಳ್ಳಬೇಕೆಂದು ಗೊತ್ತಾಗದೆ ಹೋದರೆ ಜನರು ಆಗ ದೇವರನ್ನು ದೂಷಿಸುತ್ತಾರೆ. ತಾನು ದುಃಖದಲ್ಲಿರುವಾಗ  ಇನ್ಯಾರೋ ಖುಷಿಯಲ್ಲಿದ್ದಾರೆಂದು ಭಾವಿಸಿ ಕೆಲವೊಮ್ಮೆ ಸಿಟ್ಟುಮಾಡಿಕೊಳ್ಳುತ್ತಾರೆ. ಆ ಕಾರಣಕ್ಕಾಗಿಯೇ ಸಾವಿನ ಮನೆಗೆ ಬಂದ ಜನ ಸಂಬಂಧಿಗಳ ಶೋಕದಲ್ಲಿ ಭಾಗಿಯಾಗಿರುವುದನ್ನು ಖಾತ್ರಿಪಡಿಸುವ ಸಲುವಾಗಿ ವ್ಯಕ್ತ ರೀತಿಯಲ್ಲಿ ದುಃಖಪಡುತ್ತಾರೆ. ದುಃಖ ಶಮನವಾಗುವುದಕ್ಕೆ ಕಾಲದ ಸಹಾಯ ಬೇಕು. ಇದು ಹಲವು ಹಂತಗಳಲ್ಲಿ ನಡೆಯುವುದಾದರೂ ಪುತ್ರ ಶೋಕವು ನಿಶ್ಯೇಶವಾಗಿ ಕೊನೆಗೊಳ್ಳದು.

ಪರೇಶ್‌ ಮೆಸ್ತಾ ಸಾವಿನ ಪ್ರಕರಣವನ್ನು ಸಿ.ಬಿ.ಐ ಆಕಸ್ಮಿಕ ಸಾವು ಎಂದು ಕೊನೆಗೊಳಿಸಿದೆ. ಕೊಲೆ ಎಂಬ ಸಂಶಯದಲ್ಲಿ ನಡೆದ ಈ ತನಿಖೆಯು ಹಲವು ಪುರಾವೆಗಳನ್ನು ಪರಿಶೀಲಿಸಿ ಈ ತೀರ್ಮಾನಕ್ಕೆ ಬಂದಿದೆ. ಎಂಟಿ ಮಾರ್ಟೆಮ್‌ ಡ್ರೋನಿಂಗ್‌ ಅಥವಾ ಮುಳುಗುವ ಮೊದಲಿನ ಸಾವು ಎಂದು ತೀರ್ಮಾನಿಸಲು ಯಾವ ಸಾಕ್ಷ್ಯವೂ ದೊರೆತಿಲ್ಲವೆಂದು ಹೇಳಿದೆ.  ಈ ಲೇಖನದ ಕಾಳಜಿಯಿರುವುದು ಯಾವ ವೈಜ್ಞಾನಿಕ ಸಾಕ್ಷ್ಯಗಳು ಇಂತಹ  ಪರಿಶೋಧನೆಗೆ ಸಹಾಯ ಮಾಡುತ್ತವೆ ಎಂಬುದರಲ್ಲಿ.

ಪ್ರತಿ ವರ್ಷವೂ ಜಗತ್ತಿನಾದ್ಯಂತ ಮೂರು ಲಕ್ಷಕ್ಕೂ ಹೆಚ್ಚು ಜನ ನೀರಿನಲ್ಲಿ ಮುಳುಗಿ ಸಾಯುತ್ತಾರೆ. ಡೋರ್ಲ್ಯಾಂಡ್‌ ಮೆಡಿಕಲ್‌ ಡಿಕ್ಷನರಿಯ ಪ್ರಕಾರ ಮುಳುಗಿ ಸಾಯುವುದೆಂದರೆ ಶ್ವಾಸಕೋಶದಲ್ಲಿ ನೀರು ತುಂಬಿ ಉಸಿರಾಟ ಸಾಧ್ಯವಾಗದೇ ಸಾಯುವುದು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಮುಳುಗಿ ಸಾಯುವುದೆಂದರೆ ದ್ರವದಲ್ಲಿ ಮುಳುಗಿ ಉಂಟಾದ ಉಸಿರಾಟ ಅಸೌಕರ್ಯದಿಂದಾದ ಸಾವು. ನೀರಿನಲ್ಲಿ ಶವ ದೊರೆತ ಮಾತ್ರಕ್ಕೆ ಅದನ್ನು ಮುಳುಗಿ ಉಂಟಾದ ಸಾವು ಎಂದು ತೀರ್ಮಾನಿಸಲಾಗದು. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರಷ್ಟೇ ಅಲ್ಲ, ಬೇರೆ ಬೇರೆ ಸಂಸ್ಥೆಗಳು, ಪ್ರಯೋಗಾಲಯಗಳು, ವಿವಿಧ ಕ್ಷೇತ್ರಗಳ ತಜ್ಞರ ಸುಸಂಘಟಿತ ಪ್ರಯತ್ನವು ಇಂತಹ ಸಾವಿನ ಬಗ್ಗೆ ಖಚಿತವಾದ ತೀರ್ಮಾನಗಳನ್ನು ನೀಡುವಲ್ಲಿ ಸಹಾಯ ಮಾಡುತ್ತವೆ. ಮೆಡಿಕೋ ಲೀಗಲ್‌ ತನಿಖೆದಾರರು, ಫೋರೆನ್ಸಿಕ್‌ ತಜ್ಞರು, ತಾಂತ್ರಿಕ ಪರಿಣಿತರು, ಮೊದಲ ವೈದ್ಯಕೀಯ ಪ್ರತಿಸ್ಪಂದಿಗಳು, ಸೂಕ್ಷ್ಮಾಣುಜೀವಿ ಶಾಸ್ತ್ರಜ್ಞರು ಹೀಗೆ ಹತ್ತು-ಹಲವು ವೃತ್ತಿಪರರ ವರದಿಗಳ ಆಧಾರದ ಮೇಲೆ ಸಾವು ಹೇಗೆ ಉಂಟಾಯಿತು ಎಂಬ ತೀರ್ಮಾನಕ್ಕೆ ಬರಲಾಗುತ್ತದೆ.

ಈ ಲೇಖನವನ್ನೂ ಓದಿ:
ಮನದ ಸೂತಕ ಹೋಗಲಾಡಿಸೋಣ!

ಈಗಾಗಲೆ ಚರ್ಚಿಸಿದಂತೆ ನೀರಿನಲ್ಲಿ ಮುಳುಗಿಸಾಯುವುದೆಂದರೆ ಆಮ್ಲಜನಕದ ಕೊರತೆ ಉಂಟಾಗಿ ಸಾಯುವುದು. ಇದು ಹಲವು ಅಂಗಗಳ ಮೇಲೆ ಪ್ರಭಾವ ಬೀರುವ ಕ್ರೀಯೆ. ನಾವು ಒಮ್ಮೆ ಉಸಿರು ತೆಗೆದುಕೊಂಡಿದ್ದೇವೆಂದರೆ ಇಪ್ಪತೈದು ಸೆಕ್ಸ್ಟಿಲಿಯನ್‌ ಅಣುಗಳನ್ನು ಒಳಗೆಳೆದುಕೊಳ್ಳುತ್ತೇವೆ. ಅಂದರೆ ಇಪ್ಪತೈದರ ಮುಂದೆ ಇಪ್ಪತ್ತೊಂದು ಸೊನ್ನೆಹಾಕಿದರೆ (25,000,000,000,000,000,000,000) ಎಷ್ಟು ಅಣುಗಳಾಗುತ್ತವೋ ಅಷ್ಟು. ಹೀಗೆ ಉಸಿರಾಡಿದ ಗಾಳಿಯು ಶ್ವಾಸನಾಳದ ಮೂಲಕ ಶ್ವಾಸಕೋಶದ ಅತ್ಯಂತ ನವಿರಾದ ಭಾಗವಾದ ಅಲ್ವಿಯೋಲೈಗಳಿಗೆ ತಲುಪುತ್ತದೆ. ಅಲ್ಲಿಂದ ಈ ಲೋಮನಾಳಗಳಿಗೆ ವಿಸರಣೆಗೊಂಡು ರಕ್ತ ಪ್ರವಾಹವನ್ನು ಸೇರಿಕೊಳ್ಳುತ್ತದೆ. ಸಾಕಷ್ಟು ಸಮಯದವರೆಗೆ ಆಮ್ಲಜನಕ ದೊರೆಯದಾಗ ಹಿಪೋಕ್ಸಿಯಾ ಅಥವಾ ಆಮ್ಲಜನಕ ಅಲಭ್ಯತೆ ಉಂಟಾಗಿ ಸಾವು ಸಂಭವಿಸುತ್ತದೆ.

ಪ್ರಜ್ಞೆಯಲ್ಲಿರುವ ಮನುಷ್ಯನೊಬ್ಬ ಆಕಸ್ಮಿಕವಾಗಿ ನೀರಿಗೆ ಬಿದ್ದಾಗ ಎಷ್ಟು ಆಳಕ್ಕೆ ಹೋಗುತ್ತಾನೆ ಎಂಬುದು ಬೀಳುವಾಗಿನ ಚಲನ ಪರಿಮಾಣವನ್ನು ಅವಲಂಬಿಸಿದೆ. ಆನಂತರ ತೇಲುವಿಕೆ ಮತ್ತು ಕೈಕಾಲು ಬಡಿತಗಳಿಂದಾಗಿ ವ್ಯಕ್ತಿ ಮೇಲೆ ಬರುತ್ತಾನೆ. ಮುಖ ನೀರಿನ ಮೇಲೆ ಬಂದಾಗ ಸಹಾಯಕ್ಕಾಗಿ ಕೂಗುತ್ತಾನೆ. ಮತ್ತೆ ಮುಳುಗುವಾಗ ನೀರು ಆತನ ಮೂಗು, ಬಾಯಿಗಳ ಮೂಲಕ ಶ್ವಾಸಕೋಶವನ್ನು ಸೇರುತ್ತದೆ. ಹೀಗೆ ಒಳಸೇರಿದ ನೀರನ್ನು ಹೊರಹಾಕಲು ಮಾಡುವ ಪ್ರಯತ್ನದಲ್ಲಿ ಕೆಮ್ಮುತ್ತಾನೆ. ಸ್ವಲ್ಪ ಮಟ್ಟಿನ ಗಾಳಿ ಹೊರಹೋಗುತ್ತದೆ ಮತ್ತು ಇನ್ನಷ್ಟು ನೀರು ಒಳಸೇರುತ್ತದೆ. ಈಗ ದೇಹದ ತೂಕ ಹೆಚ್ಚುತ್ತದೆ. ವ್ಯಕ್ತಿ ಇನ್ನಷ್ಟು ಮುಳುಗುತ್ತಾನೆ. ಈ ಕ್ರಿಯೆಗಳು ಮತ್ತೆ ಮತ್ತೆ ನಾಲ್ಕೈದು ಬಾರಿ ಪುನರಾವರ್ತನೆಯಾಗುವಾಗ ಶ್ವಾಸಕೋಶದ ಗಾಳಿ ಮತ್ತಷ್ಟು ಹೊರಹೋಗಿ ಇನ್ನಷ್ಟು ನೀರು ತುಂಬಿಕೊಳ್ಳುತ್ತದೆ.

ಶವವೊಂದನ್ನು ನೀರಿನಿಂದ ಹೊರತೆಗೆದ ಮೇಲೆ ಆ ಸಾವು ನೀರಿಗೆ ಬೀಳುವ ಮೊದಲು ಉಂಟಾಯಿತೋ ಅಥವಾ ನಂತರ ಉಂಟಾಯಿತೋ ಎಂಬುದನ್ನು ಪತ್ತೆ ಮಾಡಲು ದೇಹದ ಹೊರಗಿನ ಚಿನ್ಹೆಗಳು, ದೇಹದ ಒಳಗಿನ ಚಿನ್ಹೆಗಳು, ಜೀವರಾಸಾಯನಿಕ ಮತ್ತು ಜೀವ ಭೌತಿಕ ಪರೀಕ್ಷೆಗಳು ಮಾತ್ರವಲ್ಲ ಮುಳುಗಿದಾಗ ದೇಹದ ಒಳಸೇರಿದ ಡಯಟಮ್‌ ಎಂಬ ಸೂಕ್ಷ್ಮ ಜೀವಿಗಳೂ ಸಾಕ್ಷ್ಯವಾಗುತ್ತವೆ.ಡಯಟಮ್‌ ಎಂಬ ಸೂಕ್ಷ್ಮಾಣುಗಳು ನೀರಿನಲ್ಲಿ ವಾಸಿಸುವ ಸ್ವಪೋಷಕ ಜೀವಿಗಳು. ಇಪ್ಪತ್ತು ಮೈಕ್ರಾನ್‌ ನಿಂದ ಇನ್ನೂರು ಮೈಕ್ರಾನ್‌ ವ್ಯಾಸದಲ್ಲಿರುವ ಈ ಜೀವಿಗಳು ಕೆರೆ ಸರೋವರಗಳ ದ್ಯುತಿವಲಯದಲ್ಲಿ ಅಂದರೆ ಬೆಳಕು ತಲುಪಬಲ್ಲಷ್ಟು ಆಳದವರೆಗೆ ಇರುತ್ತವೆ. ಇವುಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಪ್ರಬೇಧಗಳಿವೆ. ನೀರಿನಿಂದ ಹೊರತೆಗೆದ ಶವದ ಅಂಗಾಂಗಗಳಿಂದ ಡಯಟಮ್‌ ಗಳನ್ನು ಸಂಗ್ರಹಿಸಲಾಗುತ್ತದೆ. ಶವ ದೊರೆತ ಕೆರೆ, ಸರೋವರ, ನದಿಗಳಿಂದಲೂ ಡಯಟಮ್‌ ಗಳನ್ನು ಸಂಗ್ರಹಿಸಲಾಗುತ್ತದೆ.

ಮುಳುಗಿ ಸಾಯುವ ಪ್ರಕರಣಗಳಲ್ಲಿ ದೇಹದಿಂದ ನೀರನ್ನು ಬಲವಂತವಾಗಿ ಹೊರಹಾಕುವ ಪ್ರಯತ್ನ ನಡೆಯುವುದರಿಂದ ಶ್ವಾಸಕೋಶದ ಅಲ್ವಿಯೋಲೈ ಭಾಗದ ಸೂಕ್ಷ್ಮ ಗೋಡೆಗಳು ಹರಿದುಹೋಗುತ್ತವೆ. ಇದರಿಂದ ಡಯಟಮ್‌ ಗಳು ರಕ್ತ ಸೇರಿ ಕಿಡ್ನಿ, ಪಿತ್ಥಕೋಶ, ಮೆದುಳು, ಮೂಳೆಮಜ್ಜೆಗಳನ್ನು ಸೇರುತ್ತವೆ. ನೀರಿಗೆ ಬಿದ್ದ ಮೇಲೆ ಸಾವು ಸಂಭವಿಸಿದ್ದರೆ, ಶವ ದೊರೆತ ಸ್ಥಳದ ನೀರಿನಲ್ಲಿರುವ ಶೇಖಡಾ ಹತ್ತರಷ್ಟು ಸಾಂದ್ರತೆಯಲ್ಲಿ ಶ್ವಾಸಕೋಶದಲ್ಲಿ ಡಯಟಮ್‌ ಗಳು ಪತ್ತೆಯಾಗುತ್ತವೆ. ಶ್ವಾಸಕೋಶದ ಡಯಟಮ್‌ ಸಾಂದ್ರತೆಯ ಹತ್ತರಷ್ಟು ಅಂಗಾಂಗಗಳಲ್ಲಿ ದೊರೆಯುತ್ತವೆ. ಆಯಾ ಕೆರೆ, ನದಿಯ ನೀರಿನ ಆಮ್ಲೀಯತೆ, ತಾಪಮಾನ, ಲವಣ ಸಾಂದ್ರತೆಯ ಆಧಾರದ ಮೇಲೆ ಕೆಲವು ಪ್ರಬೇಧದ ಡಯಟಮ್‌ ಗಳು ಹೆಚ್ಚಿಗೆ ಇರುತ್ತವೆ. ಆದುದರಿಂದ, ದೇಹದಲ್ಲಿ ದೊರೆತ ಡಯಾಟಮ್‌ ಪ್ರಬೇಧಗಳ ಸಾಂದ್ರತೆಗೂ ಕೆರೆಯಲ್ಲಿರುವ ಡಯಾಟಮ್‌ ಪ್ರಬೇಧಗಳ ಸಾಂದ್ರತೆಗೂ ಹೋಲಿಕೆ ಮಾಡಲಾಗುತ್ತದೆ.

ನೀರಿಗೆ ಬೀಳುವ ಮೊದಲೇ ಸಾವು ಉಂಟಾಗಿದ್ದರೆ ಅಂಗಾಂಶಗಳಲ್ಲಿ ಅದರಲ್ಲೂ ಮೂಳೆಮಜ್ಜೆಗಳಲ್ಲಿ ಡಯಟಮ್‌ ಗಳು ಸೇರುವ  ಸಾಧ್ಯತೆ ಇಲ್ಲವೇ ಇಲ್ಲ ಎಂಬಷ್ಟು ಕ್ಷೀಣ.


ಹೀಗೆ, ಡಯಟಮ್‌ ಎಂಬ ಸೂಕ್ಷ್ಮ ಜೀವಿಯು ಸಾವಿನ ಸಾಕ್ಷ್ಯ ನುಡಿಯಲು ಕೋರ್ಟು ಕಟೆಕಟೆಯನ್ನು ಹತ್ತುತ್ತದೆ.


10 comments:

Ravichandra Atanur said...

ಸರಳ ವೈಜ್ಞಾನಿಕ ವಿಶ್ಲೇಷಣೆ. ವಿಜ್ಞಾನವನ್ನು ಹೀಗೆ ಕನ್ನಡದಲ್ಲಿ ಬರೆಯುವುದು ಕಷ್ಟ ಕಷ್ಟ.

Veerendrapatil said...

Nice information Uday sir, Thank you very much sir.

PVS SAROJINI MADHUSUDANA GOVT HIGHSCHOOL VADERAHOBLI said...

ಚೆನ್ನಾಗಿದೆ.

DNS said...

Good information sir

Savitha YB said...

ತುಂಬಾ ಚೆನ್ನಾಗಿದೆ ಲೇಖನ

Uday Gaonkar said...

💚

Uday Gaonkar said...

ತ್ಯಾಂಕ್ಯೂ ಸೋ ಮಚ್

Uday Gaonkar said...

ತ್ಯಾಂಕ್ಯೂ ಸೋ ಮಚ್

Uday Gaonkar said...

ತ್ಯಾಂಕ್ಯೂ ಸೋ ಮಚ್

Uday Gaonkar said...

ತ್ಯಾಂಕ್ಯೂ ಸೋ ಮಚ್