Thursday 18 August 2022

ಅಮೃತದ ಹೂಜಿಯಲ್ಲಿ‌ ವಿಷ

 ಅಮೃತ ಉತ್ಸವ ಆಚರಿಸುವಾಗಲೇ ಕುಡಿಯುವ ನೀರಿನ ಮಡಕೆ ಮುಟ್ಟಿದ್ದಕ್ಕಾಗಿ ಶಿಕ್ಷಕನೊಬ್ಬ ಮಗುವನ್ನು ಕೊಂದ ಘಟನೆ ನಡೆದುಹೋಗಿದೆ. ರಾಜಸ್ತಾನದ ಜಲೋರ್‌ ಎಂಬಲ್ಲಿನ ಸರಸ್ವತಿ ವಿದ್ಯಾಮಂದಿರದಲ್ಲಿ ಮೂರನೆಯ ತರಗತಿ ಕಲಿಯುತ್ತಿದ್ದ ಬಾಲಕನನ್ನು ಚೈಲ್‌ ಸಿಂಗ್‌ ಎಂಬ ಹೆಸರಿನ ಮೇಲ್ವರ್ಗದವನು ಎಂದುಕೊಳ್ಳುವ ಶಿಕ್ಷಕನೊಬ್ಬ ಹೊಡೆದು ಕೊಂದಿದ್ದಾನೆ. ಆತನಿಗಾಗಿ ಕುಡಿಯಲು ನೀರು ಸಂಗ್ರಹಿಸಿಟ್ಟಿದ್ದ ಮಡಕೆಯಿಂದ ನೀರು ಕುಡಿದಿದ್ದೇ ಆ ಬಾಲಕ ಮಾಡಿದ ತಪ್ಪು. ಆ ಬಾಲಕ ಇಂದ್ರಕುಮಾರನಿಗೆ ಇದೆಲ್ಲ ಈಗಷ್ಟೇ ಅರಿವಿಗೆ ಬರುತ್ತಿದ್ದ ವಯಸ್ಸು. ಮೇಲು-ಕೀಳುಗಳೆಂಬ ಶ್ರೇಣಿಗಳನ್ನು ಶಾಲೆಯಲ್ಲಿ, ಓಣಿಯಲ್ಲಿ, ಕೇರಿಯಲ್ಲಿ ದಿನವೂ ಇಷ್ಟಿಷ್ಟೇ ಅನುಭವಿಸುತ್ತಾ ಕೊನೆಗೆ ತನ್ನ ಜಾತಿಯ ಬಗ್ಗೆಯೂ, ತನ್ನ ಬಗ್ಗೆಯೂ ಕೀಳರಿಮೆ ಬೆಳಸಿಕೊಂಡು ನಿಧಾನವಾಗಿ ಅಭಿವೃದ್ಧಿಯ ಚಲನ ಮಾರ್ಗದಿಂದ ದೂರ ಸರಿಯುವ ಎಲ್ಲ ಒತ್ತಡಗಳನ್ನು ಆತ ನಿಭಾಯಿಸಬೇಕಿತ್ತು.  ಆದರೆ, ದುಷ್ಟ ಶಿಕ್ಷಕ ಅದಕ್ಕೂ ಆಸ್ಪದ ನೀಡದೆ ಆತನನ್ನು ಬದುಕಿನಿಂದಲೇ ದೂರ ತಳ್ಳಿದ್ದಾನೆ. ಇಂದ್ರಕುಮಾರನ ತಂದೆ ತನ್ನ ದೂರಿನಲ್ಲಿ “ ನನ್ನ ಮಗನಿಗೆ ಅದು ಅವರ ನೀರಿನ ಮಡಕೆ ಎಂದು ಗೊತ್ತಿರಲಿಲ್ಲ” ಎಂದಿದ್ದಾರೆ. ತನ್ನ ಮಗ ಗೊತ್ತಿಲ್ಲದೆ ಮಾಡಿದ “ ತಪ್ಪು” ಎನ್ನುವ ರೀತಿಯಲ್ಲಿ. ಪಾಪ, ಆ ಬಡತಂದೆಗೆ ಇಂತಹ ಸಂದರ್ಭ ಎದುರಾದಾಗಲೂ ತಮ್ಮ ಮೇಲೆ ಶತಮಾನಗಳಿಂದ ಆಗುತ್ತಿದ್ದ ಶೋಷಣೆಯನ್ನು ಗುರುತಿಸಲಾಗದಷ್ಟು ಈ ಸಮಾಜ ಆತನ ಮೆದುಳಿನ ಮೇಲೆ ಬೆರಳಾಡಿಸಿಬಿಟ್ಟಿದೆ.

ದೇಶವನ್ನು ಹಿಂದಕ್ಕೆ ಎಳೆಯುವ ಚೈಲ್‌ ಸಿಂಗನಂತವರು  ದೇಶದ ಎಲ್ಲ ಕಡೆಯೂ ಇದ್ದಾರೆ.   ಅವರ ನೀರಿನ ಮಡಕೆ ಯಾವುದೆಂದು ಗೊತ್ತಾಗುವುದು ಅದನ್ನು ಇತರರು ಮುಟ್ಟಿದಾಗಲೇ! 

.   

ಕೆಲವು ವರ್ಷಗಳ ಹಿಂದೆ ಹಿರಿಯ ಸ್ನೇಹಿತರೊಬ್ಬರು ಗ್ರಹ ಪ್ರವೇಶದ ಆಮಂತ್ರಣ ಕಾಗದ ನೀಡಿದರು. ಮುಂಚೆ ಮೇಷ್ಟ್ರಾದವರು, ನಂತರ ವಿಷಯ ಪರಿವೀಕ್ಷಕರಾಗಿ ನಿವೃತ್ತರಾದವರು. ಪ್ರೀತಿಯಿಂದ ಕರೆದಿದ್ದಾರೆ, ಹೋಗ್ಲೇಬೇಕು ಎಂದುಕೊಂಡೆ. ಆ ನಂತರ ಗೊತ್ತಾಯ್ತು ಅವರು ನಮಗೆಲ್ಲ ಒಂದು ದಿನ ಔತಣವಿಟ್ಟುಕೊಂಡಿದ್ದರು. ಅದರ ಮುನ್ನಾದಿನ ತಮ್ಮ ಜಾತಿಯವರಿಗೆಂದೇ ವಿಶೇಷ ಔತಣ ಇಟ್ಟುಕೊಂಡಿದ್ದರು.  ನಾನವರಲ್ಲಿ ಕೇಳಿದೆ. ಅದಕ್ಕವರು “ ನೀವೂ ಬೇಕು, ಅವರೂ ಬೇಕು. ನಮ್ಮವರು ಕೆಲವರು ನಿಮ್ಮ ಜೊತೆ ಕುಳಿತು ಊಟ ಮಾಡುವುದಿಲ್ಲ.. ಸರಿಯೋ ತಪ್ಪೋ.. ನಂಗೆ ಎಲ್ರೂ ಬರಬೇಕು” ಅಂದರು. ನಾನು ಹೋಗಲಿಲ್ಲ. 

.

ಪಿ.ಯು ಕಾಲೇಜಿನ ಪ್ರಿನ್ಸಿಪಾಲರೊಬ್ಬರು  ತಮ್ಮ ಮನೆಯ ಮೇಲೆ ಇನ್ನೊಂದು ಮಹಡಿ ಕಟ್ಟಿಸಿದಾಗ ಈ ರಗಳೆಯೇ ಬೇಡವೆಂದುಕೊಂಡು ಅದರ ಪ್ರವೇಶೋತ್ಸವಕ್ಕೆ   ತಮ್ಮ ಜಾತಿಯ ಸಹೋದ್ಯೋಗಿಗಳಿಗೆ ಮಾತ್ರ ಆಮಂತ್ರಣ ನೀಡಿದರು. ಮಾರನೆಯ ದಿನ ಉಳಿದವರಿಗೆ ಸಿಹಿತಿನಿಸು ತಂದುಕೊಟ್ಟರು. ಕೆನ್ನೆಯ ಮೇಲೆ ಬಿದ್ದ ಪೆಟ್ಟು ಕೆಲವರಿಗೆ ಮಾತ್ರ ತಿಳಿಯಿತು. ಆ ಕೆಲವರಷ್ಟೇ  ಸಿಹಿ ತಿನಿಸು ತಿನ್ನಲಿಲ್ಲ.

ನಮ್ಮ ಬಿ.ಇ.ಓ ಕಚೇರಿಯಲ್ಲಿ ಕೆಲಸಮಾಡುತ್ತಿದ್ದ ಪ್ರಥಮ ದರ್ಜೆ ಸಹಾಯಕರೊಬ್ಬರ ಮದುವೆಗೆ ಹೋಗಲು ನಿಂತಿದ್ದೆ. ನನ್ನ ಸಹೋದ್ಯೋಗಿಯೊಬ್ಬರು ನನ್ನ ಜೊತೆ ಬರುವೆ ಎಂದರು. ನನ್ನ ವಾಹನದಲ್ಲಿ ಮದುವೆ ಹಾಲಿಗೆ ತಲುಪಿ, ವಧುವರರಿಗೆ ಶುಭಾಶಯ ತಿಳಿಸುವವರೆಗೂ ಅವರು ನನ್ನ ಜೊತೆಯೇ ಇದ್ದರು. ಊಟದ ಹಾಲಿಗೆ ಹೋಗುವಾಗ ಅವರು ಮರೆಯಾದರು. ಆಚೀಚೆ ಹುಡುಕಿದೆ. ಬೇರೆ ಯಾವುದೋ ಸಾಲಿನಲ್ಲಿ ಕುಳಿತರಿರಬಹುದು ಎಂದುಕೊಂಡು ಸುಮ್ಮನಾದೆ. ಕೈ ತೊಳೆದುಕೊಂಡು ಬರಲು ಹೋದಾಗ ಅಲ್ಲೊಂದು ಪ್ರತ್ಯೇಕ ಸಾಲು ಒಳಗಡೆ ಊಟಕ್ಕೆ ಕುಳಿತಿರುವುದ ಕಾಣಿಸಿತು. ನನ್ನ ಸಹೋದ್ಯೋಗಿಯೂ ಅಲ್ಲಿದ್ದರು. ಕೆನ್ನೆಗೆ ಹೊಡೆದ ಹಾಗಾಯಿತು. ಬರುವಾಗ ಒಬ್ಬನೇ ಬಂದುಬಿಟ್ಟೆ.


ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಸಿದ್ಧತೆ ನಡೆಯುತಿತ್ತು. ಪರಿಶೀಲನಾ ಸಭೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕರು ಆತಿಥ್ಯದ ಸಿದ್ಧತೆಯ ಕುರಿತು ಸಭೆಗೆ ಮಾಹಿತಿ ಸಲ್ಲಿಸುತಿದ್ದರು. ಊಟವನ್ನು ಇಂತದ್ದೇ ಜಾತಿಯವರು ಮಾಡುವುದಾಗಿಯೂ ಬಡಿಸಲೂ ಸಹ ಅದೇ ಮೇಲ್ಜಾತಿಯೆನ್ನುವರನ್ನೇ ಗೊತ್ತುಮಾಡಿರುವುದಾಗಿಯೂ ಸಭೆಗೆ ತಿಳಿಸಿದರು. ಭಾಗವಹಿಸಿದವರು ಚಪ್ಪಾಳೆ ತಟ್ಟಿ ಮೆಚ್ಚಿದರು.  ಸಾಮಾನ್ಯವಾಗಿ ಬಡಿಸಲು ಊರಿನ ಕಾರ್ಯಕರ್ತರನ್ನೇ ಬಳಸಿಕೊಳ್ಳುವುದು ವಾಡಿಕೆ. ಈ ಜಾತಿ ತರತಮದ ಮಾತಿನಿಂದ ರೋಸಿಹೋದ ಬಿ.ಇ.ಓ ಎದ್ದುನಿಂತು “ಇದು ಸರ್ಕಾರಿ ಕಾರ್ಯಕ್ರಮ, ನಿಮ್ಮ ಮನೆಯದ್ದಲ್ಲ. ನಿಮ್ಮ ಮನೆಯದ್ದಾದರೂ ನೀವು ಜಾತಿ ತರತಮ ಮಾಡಬಾರದು. ಸರ್ಕಾರಿ ಕಾರ್ಯಕ್ರಮದಲ್ಲಂತೂ ಇಂತಹ ಮಾತನ್ನು ಆಡಲೇಬಾರದು. ಊಟದ ವ್ಯವಸ್ಥೆ ಸರಿಯಾಗಿ ನಡೆಯಬೇಕು. ಶುಚಿ, ರುಚಿಯಾದ ಅಡುಗೆ ಸಿದ್ಧವಾಗಬೇಕು. ಅಷ್ಟೇ ನಮ್ಮ ಆದ್ಯತೆ” ಎಂದರು. ಕೆಲವೇ ದಿನಗಳಲ್ಲಿ ಅವರಿಗೆ  ವರ್ಗವಾಯಿತು.  

.


ಕೆನ್ನೆಯ ಮೇಲೆ ಬೀಳುವ ಪೆಟ್ಟುಗಳನ್ನು ನಿರ್ಲಕ್ಷಿಸುತ್ತಲೇ ಇದ್ದರೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಅಕ್ಷರ ದಾಸೋಹ ಶುರುವಾದ ಹೊಸತರಲ್ಲಿ ಕೆಳಜಾತಿಯ ಅಡುಗೆಯವರು ಸಿದ್ಧಪಡಿಸಿದ ಆಹಾರವನ್ನು ತಮ್ಮ ಮಕ್ಕಳು ತಿನ್ನುವುದಿಲ್ಲ ಎಂದು ಅನೇಕ ಪಾಲಕರು ಪ್ರತಿಭಟಿಸಿದರು. ಇಂತಹ ಸಂವಿಧಾನ ವಿರೋಧಿ ಮಾತುಗಳನ್ನು ಆಡಲು ಧೈರ್ಯ ಬಂದಿರುವುದು ಎಲ್ಲಿಂದ? ಆ ಜಾತಿ-ಈ ಜಾತಿ ಎನ್ನದೆ ಎಲ್ಲರಲ್ಲೂ ಜಾತಿ ಶ್ರೇಷ್ಠತೆಯ ವ್ಯಸನ ಇರುವುದರಿಂದಲೇ ಇಂತದ್ದೆಲ್ಲ ಮತ್ತೆ ಮತ್ತೆ ಸಂಭವಿಸುತ್ತವೆ. ಅನೇಕ ಶಾಲೆಗಳಲ್ಲಿ  ಕೆಳಜಾತಿ ಅಡುಗೆಯವರ ನೇಮಕದ ವಿವಾದ ನಿಧಾನವಾಗಿ ತಣ್ಣಗಾಗಿರುವುದು ಎಲ್ಲರೂ ಅವರನ್ನು ಒಪ್ಪಿಕೊಂಡಿರುವುದರಿಂದಲ್ಲ. ಹೇಗೋ ಅವರನ್ನು ಮನವೊಲಿಸಿ, ಬೆದರಿಸಿ, ಆಮಿಷ ತೋರಿಸಿ ಅಡುಗೆ ಕೆಲಸದಿಂದ ಅವರಾಗೇ ಹೊರಹೋಗುವಂತೆ ಮಾಡಿರುವುದರಿಂದ. ಮೇಲ್ನೋಟಕ್ಕೆ ಎಲ್ಲ ಚೆಂದವಾಗಿ ಕಾಣಿಸುವ ಸಮಾಜದೊಳಗೆ ಜಾತಿಪ್ರಜ್ಞೆಯ ಒರಲೆ ಮನೆಮಾಡಿಕೊಂಡಿದೆ. ಇತ್ತೀಚೆಗೆ, ಸ್ನೇಹಿತರೊಬ್ಬರು ʼನಾವೆಲ್ಲ ಉದಾರ ಧೋರಣೆಯ ಜನರಂತೆ ಕಾಣುತ್ತೇವೆ. ಹಾಗೆಂದು ಅಂದುಕೊಂಡಿದ್ದೇವೆ ಕೂಡಾ. ಸ್ವಲ್ಪ ಕೆರೆದು ನೋಡಿದರೆ ನಮ್ಮೆಲ್ಲರಲ್ಲೂ ಜಾತಿ ಪ್ರಜ್ಞೆ ಇದೆ. ಅದನ್ನು ನಮ್ಮ ಸಂಸ್ಕೃತಿ, ಪರಂಪರೆ ಎನ್ನುತ್ತಾ ಪೋಷಿಸಿಕೊಂಡು ಬರುತ್ತಿದ್ದೇವೆ. ಇನ್ನೊಂದು ಜೀವದ ಘನತೆಯ ಬದುಕನ್ನು ಅವಮಾನಿಸುವ ಮಟ್ಟಕ್ಕೆ ಈ ಪ್ರಜ್ಞೆ ಬೆಳಯದಂತೆ ನೋಡಿಕೊಳ್ಳಬೇಕಿದೆʼ ಎಂದಿದ್ದರು. 

.

ನೀವು ಉದಾಹರಿಸಿ ಅನೇಕ ಸಂದಭ೯ಗಳು, ಸನ್ನಿವೇಶಗಳು ನೆನಪಾಗುತ್ತಿವೆ. ಜಾತೀಯತೆ, ಮಾನಸಿಕ ಅಸ್ಪ್ರಶ್ಯತೆ  ಕೋಮು ವಿಷ  ಇವೆಲ್ಲ ಹೊಸ ಹೊಸ ವೇಷಗಗಳಲ್ಲಿ ನಮ್ಮಲ್ಲಿ ಸಕ್ರಿಯವಾಗುತ್ತಿದ್ದು ಅವು ನಮ್ಮ "ಪಂಚಪ್ರಾಣಗಳ"ನ್ನು ನಿತ್ಯ ಹೀರುತ್ತ ಪ್ರಗತಿಯ ಚಲನೆಯ ವಿರುದ್ಧ ದಿಕ್ಕಿಗೆ ಎಳೆಯುತ್ಚಲೇ ಇವೆ. 

 ನಿಮ್ಮ ಲೇಖನ ಕಣ್ಣು ತೆರೆಸುವಂತಿದೆ. ಆದರೆ ನಾವು ಕಣ್ಣು ತೆರೆಯಲಾರೆವು;  ಅನ್ನ ನೀರು ಕೊಡಲಾರೆವು,   ಭೇದ, ಪಂಕ್ತಿಭೇದ ಜಾತಿ ಹಿಂಸೆಗಳು ಮುಂದುವರಿಯಲಿವೆ!. 

ಭಾರತ್ ಮಾತಾ ಕೀ ಜೈ!!

  • ಸಂತೋಷ ಕುಮಾರ ಶೆಟ್ಟಿ, ನಿವೃತ್ತ ಮುಖ್ಯ ಶಿಕ್ಷಕರು

ಬಹಳ ವರ್ಷಗಳ ಹಿಂದೆ ಕುಂದಾಪುರದ ಕೊರಗ ಮಕ್ಕಳ ಪೋಷಕರ ಸಭೆ ನಡೆದಿತ್ತು. ಶಿಕ್ಷಣದ ಅವಶ್ಯಕತೆ, ಶುಚಿತ್ವ ಇತ್ಯಾದಿಗಳ ಬಗ್ಗೆ ಅರಿವು ಮೂಡಿಸುವುದು ಆ ಸಭೆಯ ಉದ್ಧೇಶ. ಸಭೆ ನಡೆದಿರುವುದು ಕೊರಗ ಕ್ಷೇಮಾಭಿವೃದ್ಧಿ ಸಮಿತಿ ನಿರ್ವಹಿಸುವ ವಸತಿನಿಲಯದಲ್ಲಿ. ಭಾಗವಹಿಸಿದ ಎಲ್ಲ ಪೋಷಕರಿಗೂ, ಸಂಪನ್ಮೂಲ ವ್ಯಕ್ತಿಗಳಿಗೂ ಅದೇ ವಸತಿ ನಿಲಯದ ಅಡುಗೆಯವರು ಆಹಾರ ಸಿದ್ಧಪಡಿಸಿದ್ದರು. ಬೆಳಿಗ್ಗೆಯಿಂದ ಆದರ್ಶದ ಮಾತಾಡುತ್ತಿದ್ದ ಸಂಪನ್ಮೂಲ ವ್ಯಕ್ತಿಗಳು ಮದ್ಯಾಹ್ನ ಊಟದ ಹೊತ್ತಿಗೆ ಒಬ್ಬೊಬ್ಬರೇ ಮಾಯವಾಗಿಬಿಟ್ಟಿದ್ದರು. ಕೊರಗರ ಕ್ಷೇಮಾಭಿವೃದ್ಧಿಗೆ ದುಡಿಯುತ್ತಿರುವ ಗಣೇಶರು “ ಎಲ್ಲ ಇಷ್ಟೇ, ಹೇಳುವುದು ಪುರಾಣ!” ಎಂದು ಉದ್ಘರಿಸಿದಾಗ ತಲೆತಗ್ಗಿಸಬೇಕಾಯ್ತು. ಹೌದು, ನಾವು ಹೇಳುತ್ತಿರುವುದೆಲ್ಲ ಪುರಾಣ. ವಾಸ್ತವ ಬೇರೆಯೇ ಇದೆ.

.

ಈ ಮಗುವಿನ ಪಾಲಕರು ನಮ್ಮನೆಂದೂ ಕ್ಷಮಿಸಲಾರರು.

Monday 8 August 2022

ಬರಿಯ ಬಣ್ಣದ ಬಟ್ಟೆಯಲ್ಲ ನಮ್ಮ ಬಾವುಟ!


ಒಂದು ಭೌಗೋಳಿಕ ವ್ಯಾಪ್ತಿಯು ಒಂದು ಆಡಳಿತಕ್ಕೊಳಪಟ್ಟ ಮಾತ್ರಕ್ಕೆ ಅದೊಂದು ದೇಶವಾಗಲಾರದು.” ದೇಶವೆಂದರೆ ಮಣ್ಣಲ್ಲ, ದೇಶವೆಂದರೆ ಮನುಷ್ಯರು” ಎನ್ನುತ್ತಾರೆ ತೆಲುಗಿನ ಕವಿ ವೆಂಕಟ ಅಪ್ಪಾರಾವ್‌ ಗುರ್ಜಡ. ದೇಶವು ಇಲ್ಲಿನ ಜನರನ್ನು ಭಾವನಾತ್ಮಕವಾಗಿ ಒಗ್ಗೂಡಿಸದೇ ಹೋದರೆ ಅದು ಭೂಪಟದ ಗೆರೆಯಾಗಿ ಉಳಿದುಬಿಡುತ್ತದೆ. 

ಬ್ರಿಟೀಷರು 1905 ರಲ್ಲಿ  ಬಂಗಾಳವನ್ನು ವಿಭಜಿಸಿ ಹೋಳು ಮಾಡಿದಾಗಲೇ ಅಲ್ಲಿನ ಜನರಿಗೆ ಅದು ರಾಷ್ಟ್ರೀಯ ಭಾವನೆಗೆ ಧಕ್ಕೆ ತರುತ್ತದೆ ಎಂದೆನಿಸಿತು. ಹಿಂದುಗಳು-ಮುಸಲ್ಮಾನರು ತಮ್ಮ ನೆಲವನ್ನು ಹೀಗೆ ವಿಭಜಿಸುವುದನ್ನು ವಿರೋಧಿಸಿ ರಸ್ತೆಗಿಳಿದರು.  ಭಾಷೆ ಅವರನ್ನು ಒಗ್ಗೂಡಿಸಿತ್ತು. ಆ ಹೋರಾಟದಲ್ಲಿ ಅವರು ತಮ್ಮ ಐಕ್ಯತೆಯನ್ನು ಪ್ರದರ್ಶಿಸಲು ಒಂದು ಬಾವುಟವನ್ನು ಸಿದ್ಧಪಡಿಸಿದ್ದರು. ಬೆಂಗಾಲ ವಿಭಜನೆಯ ವಿರುದ್ಧದ ಹೋರಾಟವನ್ನು ಸಂಘಟಿಸಿದ್ದ ಸುರೇಂದ್ರನಾಥ ಬ್ಯಾನರ್ಜಿಯವರೇ ಆ ಬಾವುಟವನ್ನು ವಿನ್ಯಾಸಗೊಳಿಸಿದ್ದರು ಕೂಡಾ.

ಹೀಗೆ ಈ ದೇಶಕ್ಕೆ ಭಾವುಟವೊಂದು ದೊರಕಿತ್ತು.ಬಂಗಾಳಿಗಳ ಭಾಷಿಕ ಅಭಿಮಾನದಿಂದ ಅಕ್ಷರಶಃ ದಂಗಾಗಿಹೋದ ಬ್ರಿಟೀಷರು ಒಡೆದ ಬಂಗಾಳಿ ಹೋಳುಗಳನ್ನು 1911 ರಲ್ಲಿ ಲಾರ್ಡ್‌ ಹಾರ್ಡಿಂಗ್‌ ನೇತೃತ್ವದಲ್ಲಿ ಒಂದುಗೂಡಿಸಿದರು. ಆನಂತರ  ಐಕ್ಯತೆಯನ್ನು ಪ್ರದರ್ಶಿಸಲು ಸಿದ್ಧಪಡಿಸಿದ್ದ ಬಾವುಟವನ್ನು ಎಲ್ಲರೂ ಮರೆತರು.

ಈ ನಡುವೆ, ಜರ್ಮನಿಯಲ್ಲಿ ನಡೆದ ಎರಡನೆ ಅಂತರಾಷ್ಟ್ರೀಯ ಸಮಾಜವಾದಿ ಸಮಾವೇಶದಲ್ಲಿ ಭಾರತದಿಂದ ಭಾಗವಹಿಸಿದ ಬಿಕಾಜಿ ರುಸ್ತುಮ್‌ ಕಾಮಾರವರು ಬ್ರಿಟೀಷರ ವಿರುದ್ಧದ ಭಾರತೀಯರ ರಾಜಕೀಯ ಹೋರಾಟವನ್ನು ಬಲಪಡಿಸುವ ತಮ್ಮ ಕೆಚ್ಚನ್ನು ತಮ್ಮ ಭಾಷಣದಲ್ಲಿ ವ್ಯಕ್ತಪಡಿಸಿದರು ಮಾತ್ರವಲ್ಲ, ಭಾರತೀಯರ ಈ ಇಚ್ಛಾಶಕ್ತಿಯನ್ನು ಪ್ರದರ್ಶಿಸಲೋಸುಗ  ಒಂದು ಬಾವುಟವನ್ನು ಅಲ್ಲಿಯೇ ಎತ್ತರಿಸಿದರು. ಆ ಬಾವುಟವನ್ನು ವಿನ್ಯಾಸಗೊಳಿಸದವರು ಹೇಮಚಂದ್ರದಾಸರು.

*

1916 ರಿಂದ 1918 ರವರೆಗೆ ನಡೆದ ಹೋಮ್‌ ರೂಲ್‌ ಚಳುವಳಿ ಭಾರತದ ಮುಂದಿನ ಸ್ವಾತಂತ್ರ ಸಂಗ್ರಾಮಕ್ಕೆ ಸ್ಪೂರ್ತಿದಾಯಕ ಆರಂಭವನ್ನು ಒದಗಿಸಿತ್ತು.  ಅನಿಬೆಸೆಂಟ್‌ ಮತ್ತು ಬಾಲ ಗಂಗಾಧರ ತಿಲಕರು ಈ ಚಳುವಳಿಯ ನೇತೃತ್ವ ವಹಿಸಿದ್ದರು. 

ಅನಿಬೆಸಂಟರು ವೈಜ್ಞಾನಿಕ ಭೌತವಾದದಲ್ಲಿ ನಂಬಿಕೆಯಿಟ್ಟ  ಆಂಗ್ಲೋ ಐರಿಶ್‌ ಮಹಿಳೆ. "ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು" ಎಂದ ತಿಲಕರು ಸಂಪ್ರದಾಯಸ್ಥ ರಾಷ್ಟ್ರೀಯವಾದಿ. ಇವರಿಬ್ಬರೂ ಸೇರಿ ಹೋಮ್‌ ರೂಲ್‌ ಚಳುವಳಿಗಾಗಿ ವಿನ್ಯಾಸಗೊಳಿಸಿದ ಬಾವುಟದಲ್ಲಿ ಐದು ಕೆಂಪು ಪಟ್ಟಿಗಳು ಮತ್ತು ನಾಲ್ಕು ಹಸಿರು ಪಟ್ಟಿಗಳಿದ್ದವು. ಸಪ್ತರ್ಷಿ ಮಂಡಳದಂತೆ ಏಳು ನಕ್ಷತ್ರಗಳನ್ನು ಜೋಡಿಸಿ ಇನ್ನೊಂದು ನಕ್ಷತ್ರವನ್ನು ಈಗಿನ ಪಾಕಿಸ್ತಾನದ ಧ್ವಜದಲ್ಲಿರುವಂತೆ ಚಂದ್ರನ ಜೊತೆ ಇರಿಸಿದ್ದರು.  ಬ್ರಿಟನ್ನಿನ ಯೂನಿಯನ್‌ ಜಾಕನ್ನು  ಎಡ ಮೇಲ್ಭಾಗದಲ್ಲಿ ಇರಿಸುವ ಮೂಲಕ ಮುಂಬರುವ ಭಾರತವನ್ನು  ಬ್ರಿಟಿಷ್‌ ಅಧಿಪತ್ಯಕ್ಕೊಳಪಡುವ ಸ್ವತಂತ್ರ ದೇಶವಾಗಿ ಕಲ್ಪಿಸಿಕೊಂಡಿದ್ದರು.

*

ಇದಾಗಿ ನಾಲ್ಕು ವರ್ಷಗಳ ನಂತರ ಗಾಂಧೀಜಿ ರಾಷ್ಟ್ರೀಯ ಕಾಂಗ್ರೆಸ್ಸಿನ ನೇತೃತ್ವ ವಹಿಸಿದರು. ರಾಷ್ಟ್ರೀಯ ಚಳುವಳಿಯ ಐಕ್ಯತೆಯನ್ನು ಬಿಂಬಿಸುವ ಸಲುವಾಗಿ ಅವರು ಪಿಂಗಳೆ ವೆಂಕಯ್ಯನವರಲ್ಲಿ ಧ್ವಜವನ್ನು ಸಿದ್ಧಪಡಿಸಲು ಕೋರಿದರು. ಗಾಂಧೀಜಿಯವರ ಅನುಯಾಯಿಯಾಗಿದ್ದ ವೆಂಕಯ್ಯನವರು ಕೃಷಿಕರಾಗಿದ್ದರು. ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮನ್ನು ಅರ್ಪಿಸಿಕೊಂಡಿದ್ದರು.

ಗಾಂಧೀಜಿಯವರು 1921 ರ ಎಪ್ರಿಲ್‌ 1 ರಂದು ವಿಜಯವಾಡ ನಗರಕ್ಕೆ ಆಗಮಿಸಿದಾಗ ತಾವು ವಿನ್ಯಾಸಗೊಳಿಸಿದ ಧ್ವಜವನ್ನು  ಗಾಂಧೀಜಿಯವರಿಗೆ ಅರ್ಪಿಸಿದರು. ಗಾಂಧೀಜಿಯವರ ಆಶಯದಂತೆ ಬಾವುಟದ ಮಧ್ಯಬಾಗದಲ್ಲಿ ಚರಕದ ಚಿತ್ರವನ್ನು ಮೂಡಿಸಲಾಗಿತ್ತು. ಸ್ವಾವಲಂಬನೆಯೊಂದೇ ಸ್ವಾತಂತ್ರ್ಯವನ್ನು ತರಬಲ್ಲದು ಎಂಬ ಗಾಂಧೀಜಿಯವರ ನಂಬಿಕೆಯೇ ಚರಕವಾಗಿ ಬಾವುಟದಲ್ಲಿ ಸ್ಥಾನಪಡೆದಿತ್ತು.

*


ಈ ಲೇಖನವನ್ನೂ ಓದಿ:ಮನದ ಸೂತಕವನ್ನು ಹೋಗಲಾಡಿಸೋಣ.


ಸ್ವಾವಲಂಬನೆಯನ್ನು ಸ್ವಾತಂತ್ರ್ಯದ ಮೆಟ್ಟಿಲು ಎಂದು ಗಾಂಧೀಜಿ ಭಾವಿಸಿರಲಿಲ್ಲ. ಅವರಿಗೆ ಸ್ವಾವಲಂಭನೆಯೇ ಸ್ವಾತಂತ್ರ್ಯವಾಗಿತ್ತು.

ಚರಕವು ಸ್ವಾತಂತ್ರ್ಯ ಹೋರಾಟದ ಸಂಕೇತವಾಗುವ ಹಿಂದೆ ಗಾಂಧೀಜಿಯವರ  ಈ ನಂಬಿಕೆಯ ಪ್ರಭಾವವಿತ್ತು. ಇದು ಬೇಗನೆ  ಜಗತ್ತಿಗೆ ಮನವರಿಕೆಯಾಯ್ತು.

ಕೈಗಾರಿಕಾ ಕ್ರಾಂತಿಯ ನಂತರ ಇಂಗ್ಲೆಂಡಿನ ಲ್ಯಾಂಕಾಶೈರ್ ಪ್ರದೇಶವು ಜಗತ್ತಿನ ಬಟ್ಟೆ ಉದ್ಯಮದ ಕೇಂದ್ರವಾಗಿ ಬೆಳೆದಿತ್ತು. ಬಟ್ಟೆ ಉದ್ಯಮವು ಅಲ್ಲಿ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿತ್ತಲ್ಲದೆ ಇಂಗ್ಲೆಂಡಿನ ಬಹುಮುಖ್ಯ ರಪ್ತು ಉದ್ಯಮವಾಗಿ ರೂಪುಗೊಂಡಿತ್ತು. ಮೊದಲ ಮಹಾಯುದ್ಧದ ನಂತರ ಅಲ್ಲಿ ತಯಾರಾಗುತ್ತಿದ್ದ ಬಟ್ಟೆಗಳಲ್ಲಿ ಶೇಖಡಾ ಅರವತ್ತರಷ್ಟು ಬಟ್ಟೆಗಳು ಭಾರತದಲ್ಲಿ ಬಿಕರಿಯಾಗುತ್ತಿದ್ದವು.

ಸ್ವಾವಲಂಬಿ ಭಾರತವನ್ನು ಕಟ್ಟುವ ಮೂಲಕ  ಬ್ರಿಟೀಷ್ ಪ್ರಭುತ್ವದ ಆರ್ಥಿಕತೆಗೆ ಹೊಡೆತ ನೀಡುವ ಉದ್ಧೇಶದಿಂದ  ವಿದೇಶಿ ಬಟ್ಟೆಗಳನ್ನು ಬಹಿಷ್ಕರಿಸಲು ಗಾಂಧೀಜಿ ಕರೆಕೊಟ್ಟಿದ್ದರು. ಪರಿಣಾಮವಾಗಿ ಬ್ರಿಟಿನ್ನಿನ ವಸ್ತ್ರೋಧ್ಯಮ ನೆಲಕಚ್ಚಿತು. ಆರ್ಥಿಕ ಕುಸಿತ ಉಂಟಾಯಿತು. ಬಟ್ಟೆ ಗಿರಣಿಗಳು ಮುಚ್ಚಿದವು. ಅಲ್ಲಿ ನಿರುದ್ಯೋಗ ಉಂಟಾಯಿತು.

ಸಾವಿರದ ಒಂಬೈನೂರಾ ಮೂವತ್ತೊಂದರ ಸೆಪ್ಟಂಬರ್ ತಿಂಗಳಲ್ಲಿ ಗಾಂಧೀಜಿ ಕಾಂಗ್ರೆಸ್ಸಿನ ಏಕೈಕ ಪ್ರತಿನಿಧಿಯಾಗಿ ಎರಡನೇ ದುಂಡು ಮೇಜಿನ ಪರಿಷತ್ತಿನಲ್ಲಿ ಭಾಗವಹಿಸಲು ಇಂಗ್ಲೆಂಡಿಗೆ ಹೋಗಿದ್ದರು. ಆಗ ಅವರು ಲ್ಯಾಂಕಾಶೈರ್ ಪ್ರದೇಶಕ್ಕೂ ಭೇಟಿ ನೀಡಲು ಇಚ್ಛೆಪಟ್ಟರು. ಇಂಗ್ಲೆಂಡಿನ ಜನರ ಉದ್ಯೋಗ ಕಿತ್ತುಕೊಂಡ ಮನುಷ್ಯ ಲ್ಯಾಂಕಾಶೈರಿಗೆ ಬರುತ್ತಿರುವುದಾಗಿ ಅಲ್ಲಿನ ಪತ್ರಿಕೆಗಳು ಬರೆದವು.

ಗಾಂಧೀಜಿ ಅಲ್ಲಿನ ಬಟ್ಟೆ ಮಿಲ್ಲೊಂದಕ್ಕೆ ಭೇಟಿ ನೀಡಿದರು. “ನಮ್ಮೆಲ್ಲ ಕಾರ್ಮಿಕರು ನಿಮ್ಮನ್ನೊಮ್ಮೆ ನೋಡಬಹುದೇ?” ಎಂದು ಮಿಲ್ಲಿನ ಮ್ಯಾನೇಜರ್ ಗಾಂಧೀಜಿಯವರಲ್ಲಿ ಕೇಳಿದರು. “ಓಹೋ..ಅದಕ್ಕೇನಂತೆ?” ಎಂದರು ಗಾಂಧೀಜಿ.  ಮಿಲ್ಲಿನ ಗಂಟೆ ಭಾರಿಸಿದ್ದೇ ತಡ ಗಾಂಧೀಜಿಯವರ ಬರುವನ್ನೇ ಶತಮಾನಗಳಿಂದ ಕಾಯುತ್ತಿರುವವರಂತೆ ಕಾರ್ಮಿಕರೆಲ್ಲ ಓಡೋಡಿ ಬಂದರು. ತಮ್ಮ ಅಭಿಮಾನವನ್ನು ನಿಯಂತ್ರಿಸಿಕೊಳ್ಳಲಾರದ ಕೆಲವರು ಗಾಂಧೀಜಿಯನ್ನು ಆಲಂಗಿಸಿಕೊಂಡರು.

“ತಮ್ಮ ಎದುರಾಳಿಯ ಮುಂದೆ ಮಂಡಿಯೂರಿದ ವಸ್ತ್ರೋಧ್ಯಮ” ಎಂದು ಇಂಗ್ಲೆಂಡಿನ ಪತ್ರಿಕೆಯೊಂದು ಈ ಸುದ್ದಿಗೆ ತಲೆಬರೆಹ ನೀಡಿತು.

*

ಗಾಂಧೀಜಿಯವರ ಮಾರ್ಗದರ್ಶನದಂತೆ ಪಿಂಗಳೆ ವೆಂಕಯ್ಯನವರು ಸಿದ್ಧಪಡಿಸಿದ ಬಾವುಟವನ್ನು ಚರಕಾ ಧ್ವಜ ಎಂದೇ ಕರೆಯುತ್ತಿದ್ದರು. ಚರಕವೂ ಭಾರತದ ರಾಷ್ಟ್ರೀಯ ಚಳುವಳಿಯೂ ಹೀಗೆ ಒಂದನ್ನೊಂದು ಬೇರ್ಪಡಿಸಲಾಗದಷ್ಟು ಬೆಸೆದುಹೋಗಿದ್ದವು.

ಇಷ್ಟಾಗಿಯೂ ಚರಕಧ್ವಜಕ್ಕೆ ಹೊಸರೂಪದ ಅಗತ್ಯವಿದೆ ಎನಿಸಿತು. 1931 ರಲ್ಲಿ ಚರಕಾಧ್ವಜಕ್ಕೆ ಹೊಸ ವಿನ್ಯಾಸವನ್ನು ನೀಡಲು ಏಳುಮಂದಿಯ ಸಮಿತಿಯನ್ನು ಕರಾಚಿಯಲ್ಲಿ ರೂಪಿಸಲಾಯಿತು. ಈ ಸಮಿತಿ ಹೊಸ ರೂಪವನ್ನು ನೀಡಿತು. ಬಾವುಟದ ಮೇಲಿನ ಮತ್ತು ಕೆಳಗಿನ ಅಂಚುಗಳವರೆಗೆ ವಿಸ್ತರಿಸಿದ್ದ ಚರಕವನ್ನು ಮಧ್ಯದ ಬಿಳಿಯ ಪಟ್ಟಿಗೆ ಸೀಮಿತಗೊಳಿಸಲಾಯಿತು.

*

ಭಾರತಕ್ಕೆ ಸ್ವಾತಂತ್ರ್ಯ ದೊರೆಯುವ ಸೂಚನೆಯನ್ನು ಲಾರ್ಡ್‌ ಮೌಂಟ್‌ ಬ್ಯಾಟನ್‌ ಘೋಷಿಸಿದಾಗ ಮೂಲತಃ ಪಿಂಗಳೆ ವೆಂಕಯ್ಯನವರು ಸಿದ್ಧಪಡಿಸಿದ ಬಾವುಟವನ್ನು ಮರುವಿನ್ಯಾಸಗೊಳಿಸಲು ಡಾ. ರಾಜೇಂದ್ರ ಪ್ರಸಾದರವರ ನೇತೃತ್ವದ ಸಮಿತಿಯನ್ನು ರಚಿಸಲಾಯಿತು. ಐ.ಸಿ.ಎಸ್ ಅಧಿಕಾರಿ ಬದ್ರುದ್ದೀನ ತ್ಯಾಬ್ಜಿಯವರ ಹೆಂಡತಿ ಸುರೈಯ್ಯಾ ರವರು ಈಗ ನಾವು ಬಳಸುತ್ತಿರುವ ವಿನ್ಯಾಸದ ಬಾವುಟವನ್ನು ಮೊದಲ ಬಾರಿಗೆ ಸಿದ್ಧಪಡಿಸಿದರು. ಚರಕದ ಬದಲಾಗಿ ಚರಕವು ಪ್ರತಿನಿಧಿಸುವ ಸ್ವಾವಲಂಬನೆಯನ್ನೂ ಪ್ರಗತಿ, ಚಲನೆ ಮತ್ತು ಜೀವಂತಿಕೆಯನ್ನೂ ಪ್ರತಿನಿಧಿಸುವ ಸಾರಾನಾಥದ ಅಶೋಕ ಸ್ಥಂಭದ ಚಕ್ರವನ್ನು ಧ್ವಜದಲ್ಲಿ ಮೂಡಿಸಲಾಯಿತು. 1947 ರ ಜುಲೈ 21 ರಂದು ಹೊಸ ಧ್ವಜವನ್ನು ಅಂಗೀಕರಿಸಲಾಯಿತು.

*

ಭಾರತದ ರಾಷ್ಟ್ರೀಯ ಧ್ವಜದಲ್ಲಿ ನಾಲ್ಕು ಬಣ್ಣಗಳಿವೆ. ಆದರೂ ಇದನ್ನು ನಾವು ತ್ರಿವರ್ಣ ಧ್ವಜ ಎನ್ನುತ್ತೇವೆ. ಕೇಸರಿ, ಬಿಳಿ,ಹಸಿರು ಪಟ್ಟಿಗಳಲ್ಲದೆ ನೀಲಿ ಬಣ್ಣವೂ ಇದೆ. ಎಲ್ಲೆಗಳಿಲ್ಲದ ಆಕಾಶದಂತೆ, ಕೊನೆಯಿರದ ಸಮುದ್ರದಂತೆ ನೀಲಿಯು ಗಡಿಗಳನ್ನು ಮೀರಿದ ವೈಶಾಲ್ಯತೆಯನ್ನು ಸೂಚಿಸುತ್ತದೆ. 

ಈ ಬಣ್ಣಗಳೆಲ್ಲವೂ ಮನ-ಮನಗಳಲ್ಲಿ ಮೂಡಲಿ!