Friday 4 November 2022

ಕಲಿಕೆಯೆಂಬುದು ಹಬ್ಬ!
ಮಗುವು ತನ್ನ ಬಾಲ್ಯವನ್ನು ಸಂಭ್ರಮಿಸಬೇಕೆಂದರೆ ಕಲಿಕೆಯು ಹಬ್ಬವಾಗಬೇಕು; ಅಪರಿಮಿತ ಸ್ವಾತಂತ್ರ್ಯ ಮತ್ತು ಸಂತೋಷ ಮಾತ್ರ ಮಗುವಿಗೆ ಹಬ್ಬದ ಸಡಗರವನ್ನುಂಟುಮಾಡಬಲ್ಲದು. ತನ್ನದೇ ಲೋಕವೊಂದನ್ನು ವಿಸ್ತರಿಸಿಕೊಳ್ಳುತ್ತಾ ಎಲ್ಲ ಸೀಮೆಗಳನ್ನು ಉಲ್ಲಂಘಿಸಿ ವಿಶ್ವಮಾನವನಾಗಲು ಮಕ್ಕಳಿಗೆ ಇಂತಹ ಸಡಗರ ಅನಿವಾರ್ಯ ಕೂಡಾ. ಹಿರಿಯರ ಪ್ರಪಂಚವು ಬಾಲ್ಯದ ಕೀಲಿಕೈಗಳಾದ `ಸೃಜನಶೀಲ ಚೈತನ್ಯ' ಮತ್ತು `ದಾರಾಳ ಸಂತಸ' ಗಳನ್ನು ಸ್ವಲ್ಪವೂ ಯೋಚಿಸದೇ ಹಾಳುಗೆಡವಬಹುದಾದ ಸಾಧ್ಯತೆಗಳಿವೆ ಎನ್ನುತ್ತಾರೆ ಕವಿ ರವೀಂದ್ರನಾಥ ಠಾಗೋರರು. ಮಕ್ಕಳ ಸಂತಸ ಮತ್ತು ಚೈತನ್ಯವನ್ನೇ ಆಧರಸಿಕೊಂಡು ರಾಜ್ಯದ ಎಲ್ಲ ಶೈಕ್ಷಣಿಕ ಕ್ಲಸ್ಟರುಗಳಲ್ಲಿ ಕಲಿಕೆಯ ಹಬ್ಬವನ್ನು ಆಚರಿಸಲು ಸಮಗ್ರ ಶಿಕ್ಷಣ ಕರ್ನಾಟಕ ಸಿದ್ಧತೆ ನಡೆಸಿದೆ.  2020 ರ ರಾಷ್ಟ್ರೀಯ ಶಿಕ್ಷಣ ನೀತಿಯು ಶಾಲೆಗಳು ಅಳವಡಿಸಿಕೊಳ್ಳಬೇಕಾದ ಕಲಿಕೆಯ ವಿಧಾನಗಳ ಕುರಿತು ಚರ್ಚಿಸುತ್ತಾ (4.4 - 4.8) ಕಲಿಕೆಯ ಎಲ್ಲ ಹಂತಗಳಲ್ಲೂ ಪ್ರಯೋಗ, ಪ್ರಾಜೆಕ್ಟ್, ಪ್ರಶ್ನೆಗಳಿಗೆ ಅವಕಾಶವಿರುವ ತರಗತಿ ಪರಿಸರವನ್ನು ರೂಪಿಸಲು ಸೂಚಿಸುತ್ತದೆ. ಕತಾಭಿವ್ಯಕ್ತಿ, ನಾಟಕವೂ ಸೇರಿದಂತೆ ಕಲಾಂತರ್ಗತ ಕಲಿಕೆಯ ವಿನ್ಯಾಸಗಳನ್ನು ರೂಪಿಸಲು ನಿರ್ದೇಶಿಸುತ್ತದೆ. ಅಂತಹ ಕಲಿಕೆಯ ಅನುಭವವನ್ನು ಮಕ್ಕಳಿಗೆ ನೀಡಲು ಶಿಕ್ಷಕರಲ್ಲಷ್ಟೇ ಅಲ್ಲ, ಎಲ್ಲ ಭಾಗೀದಾರರಲ್ಲೂ ಮನೋಭೂಮಿಕೆಯನ್ನು ಸಿದ್ಧಪಡಿಸಬೇಕಿದೆ. ಪ್ರಯೋಗ, ಪ್ರಶ್ನಿಸುವುದು, ಕಲಾಭಿವ್ಯಕ್ತಿ ಮತ್ತು ಚಟುವಟಿಕೆಗಳು ಕಲಿಕೆಯ ಮಾರ್ಗವಾಗಿ ಮಾತ್ರವಲ್ಲ ಗುರಿಯಾಗಿಯೂ ಮುಖ್ಯ. ಮಗುವು ತನ್ನ ವೈಜ್ಞಾನಿಕ ಸೃಷ್ಟಿಶೀಲತೆಯನ್ನು ಬಳಸಿಕೊಂಡು ಅತ್ಯಂತ ವ್ಯವಸ್ಥಿತವಾಗಿ ತನ್ನನ್ನು ನಿರ್ಧಾರದತ್ತ ಕೊಂಡೊಯ್ಯಬಲ್ಲ ಅಧಾರ ಚಾಕಟ್ಟುಗಳನ್ನು ರಚಿಸಿಕೊಳ್ಳಬಲ್ಲದು. ಹೀಗೆ ರಚಿಸಿಕೊಂಡ ಮೂಲಾಧಾರಗಳನ್ನು ಮತ್ತೆ ಮತ್ತೆ ಮುರಿದುಕಟ್ಟುವ ಕಲೆಗಾರಿಕೆಗೆ ಪ್ರಶ್ನೆ, ವೀಕ್ಷಣೆ, ಪ್ರಯೋಗಗಳೇ ಚೈತನ್ಯವನ್ನು ಒದಗಿಸುತ್ತವೆ. ನಿರಂತರ ನಿಕಷೆಯಲ್ಲಿ ನಿರ್ಧಾರಗಳನ್ನು ತಳೆಯುವ ಮತ್ತು ಅವುಗಳನ್ನು ಸದಾ ಪ್ರಶ್ನಿಸುವ ಎದೆಗಾರಿಕೆಯನ್ನು ಈ ವಿಧಾನವು ನೀಡುತ್ತದೆ. ವ್ಯಕ್ತಿಯು ಏಕಾಂಗಿಯಾಗಿ ಬದುಕಲಾರ; ಕಲಿಯಲಾರ ಕೂಡಾ. ಅನುಭವಾತ್ಮಕ ಕಲಿಕೆಯೆನ್ನುವುದು ಒಡನಾಟದ ಕಲಿಕೆಯೂ ಹೌದು. ಸಹಬಾಳ್ವೆ, ಸಹೋದರತೆ ಮತ್ತು ಪ್ರಜಾಪ್ರಭುತ್ವದ ವಿಧಾನಗಳನ್ನು ಕಲಿಕೆಯ ಪರಿಸರ ಮತ್ತು ವಿಧಾನಗಳು ಒಳಗೊಂಡಿರಬೇಕು. ವಿಮರ್ಶಾತ್ಮಕ ಚಿಂತನೆಗಳು, ವಸ್ತುನಿಷ್ಠತೆ ಮತ್ತು ಪೂರ್ವಾಗ್ರಹಗಳಿಂದ ಮುಕ್ತವಾದ ನಿರಂಕುಶ ಮತಿತ್ವವನ್ನು ಕಲಿಕೆಯ ಅನುಭವಗಳು ಒದಗಿಸಬೇಕು. ಇದು ಶಿಕ್ಷಣದ ಗುರಿಯೂ ಹೌದು. ಮಗು, ಜ್ಞಾನದ ಸಂರಚನೆಗಳನ್ನು ಭಾಷೆ ಮತ್ತು ನೇರ ಅನುಭವಗಳ ಮೂಲಕ ರೂಪಿಸಿಕೊಳ್ಳುತ್ತದೆ. ತನ್ನ ಅನುಭವಗಳನ್ನು ಸೋಸಿ, ಅವುಗಳ ಬೆಳಕಿನಲ್ಲಿ ಭಾಷೆಯ ಮೂಲಕ ತನ್ನ ಅರಿವನ್ನು ಪೋಣಿಸುವ ಕೌಶಲವೂ ಮಗುವಿನ ವೈಚಾರಿಕ ವಿಕಾಸಕ್ಕೆ ಅಗತ್ಯ. ತರಗತಿಕೋಣೆಯು ತನ್ನ ಸ್ಮರಣೆ ಆಧರಿತ ಕಲಿಕೆಯ ವಿಧಾನಗಳಿಂದ ಹೊರಬರಲು, ಕಲಿಕೆಯ ಕುರಿತಾದ ಸಮಾಜದ ದೃಷ್ಟಿಕೋನದಲ್ಲೇ ಬದಲಾವಣೆ ಆಗಬೇಕಿದೆ. ಈ ಕಾರಣದಿಂದ ಕಲಿಕೆಯ ಹಬ್ಬವು ಕಲಿಕೆಯ ಕುರಿತಾದ ಸಮುದಾಯದ ನಂಬಿಕೆಗಳನ್ನು ಸಡಲಿಸಿ ಹೊಸ ಚಿಂತನೆಗಳನ್ನು ಬಿತ್ತುವ ಅವಕಾಶವೂ ಹೌದು. ಮಗುವಿನ ಕುತೂಹಲ, ಕುತೂಹಲದ ಉತ್ಪನ್ನವಾದ ಪ್ರಶ್ನಿಸುವ ಸ್ವಭಾವ, ತನ್ನ ಪ್ರಶ್ನೆಗಳಿಗೆ ತಾನೇ ಉತ್ತರ ಹುಡುಕಿಕೊಳ್ಳಬಲ್ಲ ಕಲಿಕಾ ಪರಿಸರ, ಪ್ರಶ್ನೆಗಳ ಮೂಲಕ ಉಂಟಾಗಬಹುದಾದ ಸಂವಾದ-ಚರ್ಚೆಗಳು ತರಗತಿಯ ಭಾಗವಾಗಿ ರೂಪುಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮವು‌ ಈ ವರ್ಷ ತರಗತಿ ಕೋಣೆಯ ವ್ಯವಹಾರಗಳಿಗೆ ಅನುಭವ ಕಲಿಕೆಯ ಸ್ಪರ್ಷವನ್ನು ನೀಡಿದೆ. ಕಲಿಯಲು ಕಲಿಯುವ ದಾರಿಗಳನ್ನು ತೋರಿದೆ. ಈ ದಾರಿಯ ಮುಂದಿನ ಪಯಣವನ್ನು ಸುಗಮಗೊಳಿಸುವ ಕಾರಣಕ್ಕಾಗಿಯೂ ಕಲಿಕಾ ಹಬ್ಬವು ಮುಖ್ಯ. ಕಲಿಕಾ ಹಬ್ಬವು ಕಲಿಕೆಯ ವಿಧಾನ ಮತ್ತು ಕಲಿಕೆಯ ಫಲಗಳ ಕುರಿತು ಸಾರ್ವಜನಿಕ ಚರ್ಚೆಯನ್ನು ಉಂಟುಮಾಡಬಲ್ಲ ಸಾಮಾಜಿಕ ವೇದಿಕೆಯೂ ಆಗಬೇಕು. ಜ್ಞಾನವನ್ನು ಮಗುವು ಸ್ವತಃ ರಚಿಸಿಕೊಳ್ಳತ್ತದೆ. ಆದುದರಿಂದ ಚರ್ಚೆ, ಒಡನಾಟ, ಪ್ರಯೋಗ, ಚಟುವಟಿಕೆ ಮುಂತಾದ ವಿಧಾನಗಳಿಂದ ಮಾತ್ರ ಕಲಿಕೆ ಸಂಭವಿಸಲು ಸಾಧ್ಯ. ಅಲ್ಲದೆ, ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯು ತರಗತಿ ವ್ಯವಹಾರಗಳನ್ನು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸರಿಹೊಂದುವಂತೆ ಮಾಡುತ್ತದೆ. ಪ್ರಶ್ನೆಗಳನ್ನು ಕೇಳುವ ಮಕ್ಕಳು ಯೋಚಿಸಬಲ್ಲರು ಕೂಡಾ. ಮಗು ತನ್ನ ಇಂದ್ರೀಯಗಳ ಮೂಲಕ ಪಡೆದ ಅನುಭವಗಳನ್ನು ವಿಶ್ಲೇಷಣೆಯ ನಿಕಷಕ್ಕೆ ಒಡ್ಡಿ ತೀರ್ಮಾನ ತೆಗೆದುಕೊಳ್ಳುವಂತಹ ಕಲಿಕೆಯ ಪರಿಸರವನ್ನು ರೂಪಿಸುವ ಜವಾಬ್ಧಾರಿ ನಮ್ಮದು. ಮಾಹಿತಿ ತಂತ್ರಜ್ಞಾನವು ನಮಗೆ ಜಗತ್ತನ್ನೇ ಸಂಪರ್ಕಿಸುವ, ಕ್ಷಣಾರ್ಧದಲ್ಲಿ ಮಾಹಿತಿಗಳನ್ನು ಬಗೆದು ತೆಗೆಯುವ ಸೌಕರ್ಯಗಳನ್ನು ಒದಗಿಸಿದೆ. ಆದರೆ, ಮಕ್ಕಳ ಒಡನಾಟದ ಅನುಭವಗಳಿಗೆ ಕಂಪ್ಯೂಟರುಗಳು ಬದಲಿಯಾಗಲಾರವು. ಸ್ಮಾರ್ಟ್ ಕ್ಲಾಸ್‌ಗಳು ನೀಡುವ ವರ್ಚುವಲ್ ಅನುಭವಗಳು ನೈಜ ಅನುಭವಗಳಿಗೆ ಪರ್ಯಾಯಗಳಲ್ಲ. ಸಾವಯವ ಭಾಗವಹಿಸುವಿಕೆಯನ್ನು ಕಡಿಮೆಮಾಡುವ ಯಾವ ವಿಧಾನವೂ ಪ್ರಜಾಸತ್ತಾತ್ಮಕ ತರಗತಿ ಪರಿಸರವನ್ನು ರೂಪಿಸದು. ಪ್ರಜಾಸತ್ತಾತ್ಮಕವಲ್ಲದ ತರಗತಿಕೋಣೆಯಲ್ಲಿ ವೈಜ್ಞಾನಿಕ ಮನೋಧರ್ಮವಾಗಲಿ ಅದರ ಪ್ರಕಟರೂಪಗಳಾದ ತಾರ್ಕಿಕ ಚಿಂತನೆ, ಸಹನೆ, ಭಿನ್ನಾಭಿಪ್ರಾಯಗಳನ್ನು ಆಲಿಸುವ ಮತ್ತು ಗೌರವಿಸುವ ಸ್ವಭಾವ, ಪೂರ್ವಾಗ್ರಹಗಳಿಂದ ಮುಕ್ತವಾದ ಚಿಂತನಾಕ್ರಮ, ಒಳಗೊಳ್ಳುವಿಕೆ, ತಂಡವಾಗಿ ಕಾರ್ಯನಿರ್ವಹಿಸುವಲ್ಲಿ ತೋರುವ ಆಸಕ್ತಿಗಳ ಬೆಳವಣಿಗೆ ಸಾಧ್ಯವಿಲ್ಲ. 
ಈ‌ ಶೈಕ್ಷಣಿಕ ವರ್ಷದಲ್ಲಿ ಜಾರಿಗೆ ಬಂದ ಕಲಿಕಾ ಚೇತರಿಕೆಯು ನಮ್ಮ ಸಾಂಪ್ರದಾಯಿಕ ಕಲಿಕಾ ಮಾರ್ಗಗಳಲ್ಲಿ ದೊಡ್ಡ ಬದಲಾವಣೆಯನ್ನು ತಂದಿದೆ. ಇನ್ನೂ ಮುಂದುವರೆದು,  ಸ್ವಕಲಿಕೆಯ  ಚಟುವಟಿಕೆಗಳಲ್ಲಿ ಮಕ್ಕಳು ಖುಷಿಯಿಂದ ಪಾಲ್ಗೊಳ್ಳುಳುವ  ಕಲಿಕಾ ಹಬ್ಬವನ್ನು ಆಚರಿಸಲಾಗುತ್ತದೆ.  ರಾಜ್ಯದ 4108 ಕ್ಲಸ್ಟರ್ ಗಳಲ್ಲಿ ಮತ್ತು 34 ಜಿಲ್ಲಾ ಕೇಂದ್ರಗಳಲ್ಲಿ ಈ ಕಲಿಕಾ ಹಬ್ಬವು ನಡೆಯಲಿದೆ. ಕ್ಲಸ್ಟರ್ ಗಳಲ್ಲಿ  ಎರಡು ದಿನಗಳಲ್ಲಾದರೆ ಜಿಲ್ಲಾ ಹಬ್ಬಗಳು ಮೂರು ದಿನಗಳಿರುತ್ತವೆ. ಈ ಎರಡೂ ಹಬ್ಬಗಳಲ್ಲಿ 4 ರಿಂದ 9 ನೇ ತರಗತಿಯ ವರೆಗಿನ 626,400 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಹಬ್ಬದ ಸ್ಪೂರ್ತಿಯು ಶಾಲೆಯವರೆಗೂ ತಲುಪಿ ಬ್ಯಾಗ್ ರಹಿತ ದಿನಗಳನ್ನು ಸಂಭ್ರಮವಾಗಿಸಲಿವೆ. ಈ ಸಂಭ್ರಮವು ದೈನಿಕದ ತರಗತಿ ಪರಿಸರವನ್ನು ಹಬ್ಬವಾಗಿಸಲಿ ಎಂಬುದು ಆಶಯ. ಕಲಿಕಾ ಹಬ್ಬಕ್ಕಾಗಿ ಪ್ರತಿ ಕ್ಲಸ್ಟರಿನ ಐವರು ಶಿಕ್ಷಕರಿಗೆ ತರಬೇತು ನೀಡಲಾಗುತ್ತದೆ. ಜಿಲ್ಲಾ ಹಂತ, ರಾಜ್ಯ ಹಂತದ ಸಂಪನ್ಮೂಲ ವ್ಯಕ್ತಿಗಳೂ ಸೇರಿ ಒಟ್ಟೂ 26000 ತರಬೇತಾದ ಶಿಕ್ಷಕರ ಪಡೆ ಸಿದ್ಧಗೊಳ್ಳಲಿದೆ. ಶಿಕ್ಷಣಾಸಕ್ತರು, ಫೋಷಕರು ಮಾತ್ರವಲ್ಲ ಊರಿಗೆ ಊರೇ ಹಬ್ಬದಲ್ಲಿ‌ ಪಾಲ್ಗೊಳ್ಳಲಿದೆ. ಜಿಲ್ಲಾಮಟ್ಟದ ಹಬ್ಬಗಳು ಸನಿವಾಸ ಕಾರ್ಯಕ್ರಮಗಳಾಗಿವೆ. ಅತಿಥಿ-ಅತಿಥೇಯ ಮಾದರಿಯಲ್ಲಿ ಕಾರ್ಯಕ್ರಮ ನಡೆಯುವ ಶಾಲೆಯ ಪ್ರತಿ ಮಗುವೂ ಬೇರೆ ಊರಿನಿಂದ ಬಂದ ಅತಿಥಿ ಮಗುವಿಗೆ ಅತಿಥೇಯನಾಗುತ್ತಾನೆ ಅಥವಾ ಆಗುತ್ತಾಳೆ. ಮೂರೂ ದಿನಗಳಲ್ಲೂ ಮಕ್ಕಳು ಕಲಿಕೆಯ ಪ್ರಕ್ರಿಯೆಯಲ್ಲಿ ಆಟದ ರೀತಿಯಲ್ಲಿ ಪಾಲ್ಗೊಳ್ಳುತ್ತಾರೆ. ಆ ಮೂಲಕ ಪ್ರತೀ ಮಗುವೂ ತನ್ನದೇ ಜ್ಞಾನ ರಚನೆಯಲ್ಲಿ ಪಾಲ್ಗೊಳ್ಳುತ್ತದೆ. ಈ ಕಾರ‍್ಯಕ್ರಮದಲ್ಲಿ ಪಾಲ್ಗೊಂಡ ಪ್ರತಿ ಮಗುವೂ ಎಂದೆಂದೂ ಮರೆಯದ ನೆನಪುಗಳನ್ನು ತನ್ನೊಡನೆ ಕೊಂಡೊಯ್ಯುತ್ತದೆ. ಮಗುವೇ ಕಲಿಕೆಯ ಸಂದರ್ಭಗಳನ್ನು ಸೃಷ್ಟಿಸುವ, ನಿಭಾಯಿಸುವ ಮತ್ತು ಈ ಪ್ರಕ್ರಿಯೆಯಲ್ಲಿ ದೊರೆತ ಅನುಭವಗಳ ಮೂಲಕ ತನ್ನದೇ ಜ್ಞಾನ ಸೃಷ್ಟಿಯಲ್ಲಿ ತೊಡಗುವ ಕ್ಲಾಸ್ ರೂಮುಗಳನ್ನು ನಿಜವಾಗಿಸಲು ಇಂತಹ ಹಬ್ಬಗಳು ಅಗತ್ಯ. ಹಬ್ಬವು ಘಟನೆಯಾಗದೆ ನಿತ್ಯದ ಬದುಕಾಗಲಿ! 
 ಪ್ರಶ್ನೆಯು ಪ್ರಜ್ಞೆಯಾಗಲಿ.