Sunday 25 January 2015

ತಲೆಯೆತ್ತಿ ನೋಡೋಣ! ತಲೆಯೆತ್ತಿ ನಡೆಯೋಣ!!

    
ಹೊಸದಿಶೆಯತ್ತ ದಾಪುಗಾಲು ಹಾಕುತ್ತಿರುವಾಧುನಿಕ ಜಗತ್ತನ್ನು ಹಿಂದಕ್ಕೆ ತಳ್ಳುವ ಪ್ರಯತ್ನಗಳು ನಿಮ್ಮ ಗಮನಕ್ಕೂ ಬಂದಿವೆ.
 ಅಂದಶೃದ್ಧೆಗಳನ್ನು ವಿರೋಧಿಸುವ ಬದಲು ಪೋಷಿಸುವ ಪ್ರಯತ್ನಗಳಿಗೆ ಧರ್ಮರಕ್ಷಣೆಯ ಮಹತ್ವ ಪ್ರಾಪ್ತವಾಗುತ್ತಿದೆ. ಮೂಢನಂಬಿಕೆಗಳು ಹಿಂದೆ ಇರಲಿಲ್ಲವೆಂಬುದು ನನ್ನ ವಾದವಲ್ಲ. ಆದರೆ, ಸ್ವಾಮಿ ವಿವೇಕಾನಂದರ ಪ್ರಯತ್ನಗಳನ್ನೇ ಉದಾಹರಿಸಿ ಹೇಳುವುದಾದರೆ- ಮೂಢನಂಬಿಕೆಗಳು ಮತ್ತು ಪೊಳ್ಳು ಆಚರಣೆಗಳನ್ನು ಹೋಗಲಾಡಿಸಿ ಧರ್ಮವನ್ನು ಪುನರುಜ್ಜೀವನಗೊಳಿಸಬಹುದೆಂದು ಅವರು ಭಾವಿಸಿದ್ದರು. ಈಗ, ಪರಿಸ್ಥಿತಿ ಹಾಗಿಲ್ಲ. ಜಾತಿ ಪದ್ಧತಿ ಮತ್ತು ಅಸ್ಪøಶ್ಯತೆಯಂತಹ ಸಾಮಾಜಿಕ ಅನಿಷ್ಟಗಳು, ಪುರೋಹಿತಶಾಹಿ, ಸತಿಪದ್ಧತಿ, ಜ್ಯೋತಿಷ್ಯ ಮತ್ತಿತರ ಜೀವ ವಿರೋಧಿ ನಂಬಿಕೆಗಳನ್ನು ಉಳಿಸಿಕೊಂಡು ಹೋಗುವ ಮೂಲಕವೇ ಧರ್ಮವನ್ನು ರಕ್ಷಿಸಬೇಕೆಂಬ ವಾದ ಬಲಯುತವಾಗುತಿದೆ. ಕಂದಾಚಾರಗಳನ್ನು ಬಯಲಿಗೆ ತಂದು ಅವುಗಳ ವಿರುದ್ಧ ಜನಜಾಗೃತಿಯನ್ನು ನೀವು ಮೂಡಿಸುತ್ತೀರಾದರೆ, ನಿಮಗೆ ಧರ್ಮದ್ರೋಹಿಯೆಂಬ ಪಟ್ಟ ದೊರೆಯುತ್ತದೆ. ಆದುದರಿಂದಲೇ, ಪ್ರಗತಿಪರವಾದ ಸಿನೇಮಾವೊಂದನ್ನು ನಿಷೇಧಿಸಬೇಕೆಂಬ ಒತ್ತಾಯ ಕೇಳಿಬಂತು. ಬೆಳಗ್ಗೆದ್ದರೆ, ಬೇರೆ ಬೇರೆ ಧರ್ಮಕ್ಕೆ ಸಂಬಂಧಿಸಿದ ಗುರುಗಳು ಟಿ.ವಿ ಯ ಮೂಲಕ ನಮ್ಮ ಡ್ರಾಯಿಂಗ್ ರೂಮ್ ಪ್ರವೇಶಿಸಿಸಲು ಯಾವ ಅಡತಡೆಯೂ ಇಲ್ಲವಾಯಿತು. ಇತ್ತೀಚೆಗೆ ತನ್ನನ್ನು ತಾನೇ `ವೈಜ್ಞಾನಿಕ ಜ್ಯೋತಿಷಿ’ ಎಂಬ ವಿಲಕ್ಷಣ ಹೆಸರಿನಿಂದ ಕರೆಯಿಸಿಕೊಳ್ಳುವ ಜ್ಯೋತೀಷಿಯೊಬ್ಬ ರೇಪ್ ಭವಿಷ್ಯವನ್ನು ನುಡಿದಿದ್ದ. ಇಂತಹ ರಾಶಿಯವರು ಇಂತಿಂತ ದಿನ ಅತ್ಯಾಚಾರಕ್ಕೊಳಗಾಗುತ್ತರಂದು ಆತ ತಿಳಿಸಿದ್ದ. ಅತ್ಯಾಚಾರವಾಗುವ ಸ್ಥಳ, ಅತ್ಯಾಚಾರ ಮಾಡುವ ವ್ಯಕ್ತಿಯ ಬಗ್ಗೆಯೂ ಸುಳಿವು ನೀಡಿದ್ದ. ಇಂತವರು ಮೈದುನನಿಂದ, ಇವರು ಮನೆಕೆಲಸದವನಿಂದ, ಇನ್ನುಳಿದವರು ಕಛೇರಿಯ ಬಾಸಿನಿಂದ ಹೀಗೆ ಆತನ ಭವಿಷ್ಯ ಮುಂದುವರಿದಿತ್ತು. ಆಶ್ಚರ್ಯವೆಂದರೆ, ವೈಜ್ಞಾನಿಕ ಮನೋಭಾವ, ಮಾನವೀಯತೆ, ಪ್ರಶ್ನಿಸುವ ಮನಬೋಭಾವ ಮತ್ತು ಪ್ರಗತಿಶೀಲತೆಯನ್ನು ಬೆಳೆಸಿಕೊಳ್ಳುವುದು ಭಾರತದ ಸಂವಿಧಾನದ ಪ್ರಕಾರ ಮೂಲಭೂತ ಕರ್ತವ್ಯವಾದರೂ, (45/51 ಮೂಲಭೂತ ಕರ್ತವ್ಯಗಳು, ಭಾರತದ ಸಂವಿಧಾನ)  ಅದೇ ಸಂವಿಧಾನದ ಆಶಯಗಳನ್ನು ಅರಗಿಸಿಕೊಂಡು ಹುಟ್ಟಿದ ಕಾನೂನುಗಳು ಆ ಜ್ಯೋತಿಷಿಯನ್ನು ಶಿಕ್ಷಿಸಲಿಲ್ಲ. 
     ವಿಜ್ಞಾನ, ಹೇಳಿಕೇಳಿ ಪುರಾವೆಗಳನ್ನು ಆಧರಿಸಿ ಉಸಿರಾಡುವ ಯೋಚನಾ ಪದ್ಧತಿ. ಇಲ್ಲಿ ನಂಬಿಕೆಗೆ ಸ್ಥಾನವಿಲ್ಲ.` ನೀನು ನನ್ನ ಮಾತನ್ನೂ ನಂಬದಿರು. ಸ್ವತಃ ಯೋಚಿಸು’ ಎಂದು ನುಡಿದ ಶಾಖ್ಯಮುನಿ ಸಿದ್ಧಾರ್ಥ ಬುದ್ಧನಾದ. `ಧರ್ಮಗ್ರಂಥಗಳಲ್ಲಿ ಉದ್ಧರಿಸಲ್ಪಟ್ಟಿದೆ ಎಂಬ ಕಾರಣಕ್ಕಾಗಿ ನಂಬದಿರು; ಮಹಾತ್ಮರು ಹೇಳಿದ್ದಾರೆಂಬ ಕಾರಣಕ್ಕಾಗಿ ನಂಬದಿರು; ನಂಬಿ ನಂಬಿ ಅಭ್ಯಾಸವಾಗಿದೆ ಎಂಬ ಕಾರಣಕ್ಕಾಗಿ ನಂಬದಿರು, ಸ್ವತಃ ಯೋಚಿಸು’ ಎಂದಿದ್ದ ಬುದ್ಧ. ಗುರುವೇ, ನೀನು ಹೇಳುವ ಮಾತುಗಳು ಧರ್ಮಗ್ರಂಥಗಳಲಿಲ್ಲ ಎಂದು ನುಡಿದ ಶಿಷ್ಯನಿಗೆ ಮಾರುತ್ತರಿಸಿದ ಬುದ್ಧ, ಹಾಗಾದರೆ ಅವುಗಳನ್ನು ಸೇರಿಸು ಅಂದಿದ್ದ. ನೀನು ಹೇಳುವ ಮಾತುಗಳು ಧರ್ಮಗ್ರಂಥಗಳು ಹೇಳಿದ್ದಕ್ಕೆ ವ್ಯತಿರಿಕ್ತವಾಗಿವೆ ಎಂದಿದ್ದಕ್ಕೆ ಬುದ್ದ ಪ್ರತಿಕ್ರಿಯಿಸಿದ್ದು ಹೀಗೆ-`ಹಾಗಾದರೆ, ಧರ್ಮಗ್ರಂಥಗಳಿಗೆ ತಿದ್ದುಪಡಿ ಅಗತ್ಯ’. ಬುದ್ಧನ ದಾರಿ ವಿಜ್ಞಾನದ ದಾರಿಯೂ ಹೌದು.
ಮಂಗಗಳ ಮೇಲೆ ನಡೆಸಿದ ಪ್ರಯೋಗವೊಂದನ್ನು (ಕೃಪೆ-ಸೈನ್ಸ್ ರಿಪೋರ್ಟರ್) ನಿಮ್ಮ ಗಮನಕ್ಕೆ ತರಲು ಪ್ರಯತ್ನಿಸುವೆ-
    ಐದು ಮಂಗಗಳನ್ನು ದೊಡ್ಡ ಪಂಜರದಲ್ಲಿಟ್ಟು ಪಂಜರದ ಮದ್ಯದಲ್ಲಿ ಕಂಬವೊಂದರ ತುದಿಗೆ ಬಾಳೆಹಣ್ಣುಗಳನ್ನು ತೂಗುಹಾಕಲಾಯಿತು. ಯಾವುದೋ ಒಂದು ಮಂಗ ಕಂಬವನ್ನು ಹತ್ತಿ ಬಾಳೆಹಣ್ಣು ಕೀಳಲು ಪ್ರಯತ್ನಿಸಿದ ಕೂಡಲೆ ಉಳಿದ ಮಂಗಗಳ ಮೇಲೆ ಕೊರೆಯುವ ಶೀತನೀರನ್ನು ಸುರಿಯಲಾಯಿತು. ಇದನ್ನು ಅನೇಕ ಬಾರಿ ಪುನರಾವರ್ತಿಸಿದ ಮೇಲೆ ಯಾವುದೇ ಮಂಗ ಬಾಳೆಹಣ್ಣು ಕೀಳಲು ಪ್ರಯತ್ನಸಿದರೆ ಅದರ ಮೇಲೆ ಉಳಿದ ನಾಲ್ಕು ಮಂಗಗಳು ಆಕ್ರಮಣ ಮಾಡುತ್ತಿದ್ದವು. ಈ ಹಂತದಲ್ಲಿ ಪಂಜರದಿಂದ ಒಂದು ಮಂಗವನ್ನು ಬದಲಿಸಲಾಯಿತು. ಹೊಸ ಮಂಗ ಬಾಳೆಹಣ್ಣನ್ನು ಕೀಳಲು ಪ್ರಯತ್ನಸಿದಾಗ ಯಥಾಪ್ರಕಾರ ಉಳಿದ ನಾಲ್ಕು ಮಂಗಗಳು ಆಕ್ರಮಣ ನಡೆಸಿದವು. ಆನಂತರ ಇನ್ನೊಂದು ಮಂಗವನ್ನು ಬದಲಿಸಿ ಮತ್ತೊಂದು ಹೊಸಮಂಗವನ್ನು ಸೇರಿಸಲಾಯಿತು. ಎರಡನೇ ಹೊಸಮಂಗ ಬಾಳೆಹಣ್ಣು ಕೀಳಲು ಪ್ರಯತ್ನಿಸಿದಾಗ ಪುನಃ ನಾಲ್ಕು ಮಂಗಗಳು ಆಕ್ರಮಣ ನಡೆಸಿದವು. ತನ್ನ ಮೇಲೆ ಶೀತನೀರಿನ ಪ್ರಯೋಗವಾಗಿರದಿದ್ದರೂ ಮೊದಲ ಹೊಸಮಂಗ ಕೂಡಾ ಎರಡನೇ ಹೊಸಮಂಗನ ಮೇಲೆ ಆಕ್ರಮಣ ನಡೆಸಿತು. ಹೀಗೆ ಒಂದೊಂದಾಗಿ ಉಳಿದ ಮೂರು ಹಳೆಯ ಮಂಗಗಳನ್ನು ಬದಲಿಸಿ ಶೀತನೀರಿನ ಪ್ರಯೋಗವಾಗದ ಮಂಗಗಳನ್ನು ಸೇರಿಸಲಾಯಿತು. ಆಗಲೂ, ಯಾವುದೇ ಮಂಗ ಬಾಳೆಹಣ್ಣನ್ನು ಕೀಳಲು ಹೋದಾಗ ಉಳಿದ ನಾಲ್ಕು ಮಂಗಗಳು ಕಾರಣವಿಲ್ಲದೆ ಆಕ್ರಮಣ ಮಾಡುತ್ತಿದ್ದವು.
    ಮೂಢನಂಬಿಕೆಗಳನ್ನು ಅನುಸರಿಸುವವರ ಪರಿಸ್ಥಿತಿ ಆ ಮಂಗಗಳಿಗಿಂತ ಬಿನ್ನವಲ್ಲ. ತಾವೇನು ಮಾಡುತ್ತಿದ್ದವೋ ಅದಕ್ಕೆ ಕಾರಣಗಳನ್ನು ಕೇಳಿಕೊಳ್ಳುವ ಗೋಜಿಗೇ ಹೋಗದೆ ಕಾಲವನ್ನು ತಳ್ಳುತ್ತಾ ಹಿಂದಕ್ಕೆ ಹಿಂದಕ್ಕೆ ಚಲಿಸುವ ಜನರ ಕಣ್ತೆರುಸುವುದು ನಮ್ಮ ಕಾಲದ ದೊಡ್ಡ ಸವಾಲು. 
     ಜ್ಯೋತಿಷ್ಯಕ್ಕೆ ಈ ಜಗತ್ತಿನ ಯಾವುದೇ ಪುರಾವೆಗಳು ಲಭ್ಯವಿಲ್ಲ. ಹದಿನೆಂಟು ಮಂದಿ ನೊಬೆಲ್ ಪ್ರಶಸ್ತಿ ವಿಜೇತರೂ ಸೇರಿದಂತೆ 190 ವಿಜ್ಞಾನಿಗಳು ಜ್ಯೋತಿಷ್ಯವನ್ನು ಖಂಡಿಸುವ ಹೇಳಿಕೆಗೆ ಸಹಿಹಾಕಿ ಅದನ್ನು `ಸುಳ್ಳು ವಿಜ್ಞಾನ’ ವಿಭಾಗಕ್ಕೆ ಸೇರಿಸಿದರು. ಅಸಮಾನ್ಯ ಮತ್ತು ಅಲೌಕಿಕ ಸಂಗತಿಗಳ ಕುರಿತು ವೈಕ್ಞಾನಿಕ ಸಂಶೋಧನೆ ನಡೆಸುವ (CSICOP) ಸಂಸ್ಥೆ ಜ್ಯೋತಿಷ್ಯವನ್ನು ಸಮರ್ಥಿಸುವ ಯಾವುದೇ ಪುರಾವೆ ಲಭ್ಯವಿಲ್ಲವೆಂದು ಕಳೆದ ವರ್ಷªಷ್ಟೇ ತಿಳಿಸಿದೆ. ಬರ್ಕಲೇ ಪ್ರಯೋಗಾಲಯದ ವಿಜ್ಞಾನಿ ಶಾನ್ ಕಾರ್ಲಸನ್ 265 ಮಂದಿಯ ಜಾತಕವನ್ನು 26 ಪ್ರಸಿದ್ಧ ಜ್ಯೋತಿಷಿಗಳಿಗೆ ನೀಡಿ ಆ 265 ಮಂದಿಯ ವ್ಯಕ್ತಿ ನಿರ್ಧಷ್ಟ ಗುಣಲಕ್ಷಣಗಳನ್ನು ಪಟ್ಟಿಮಾಡಲು ತಿಳಿಸಿದರು. ದೊರೆತ ಉತ್ತರಗಳಿಂದ ಕೇವಲ ಮೂವತ್ತೈದು ಶೇಕಡಾದಷ್ಟೇ ಅಂದರೆ, ಸಂಭವನೀಯತೆಯ ನಿಯಮದ ಪ್ರಕಾರವಷ್ಟೇ ಒಬ್ಬರಿಗೊಬ್ಬರು ತಾಳೆಯಾಗುತ್ತಿದ್ದರು. ಜಾತಕ, ಹಸ್ತಸಾಮುದ್ರಿಕ, ಸಂಖ್ಯಾಶಾಸ್ರ್ರ ಮತ್ತಿತರ ಪೊಳ್ಳುವಿದ್ಯೆಗಳ ಸಹಾಯದಿಂದ ವ್ಯಕ್ತಿಯ ಗುಣ ಲಕ್ಷಣಗಳನ್ನು ಆ ವ್ಯಕ್ತಿಯ ಎದುರೇ ಹೇಳುವಾಗ ಜ್ಯೋತಿಷಿಗಳು ಮಾರಾಟ ಪ್ರತಿನಿಧಿಗಳು, ಜಾಹಿರಾತುದಾರರು ಅನುಸರಿಸುವ ತಂತ್ರವನ್ನೇ ಅನುಸರಿಸುತ್ತಾರೆ. ಅದೇನೆಂದರೆ, ಹೇಳಬೇಕಾದ ಸಂಗತಿಗಳು ಸತ್ಯವಾಗಿರುವುದಕ್ಕಿಂತ ಕೇಳುವವನಿಗೆ ಇಷ್ಟವಾಗುವಂತಿರಬೇಕು. ``ಅವನಿಗೆ ಸತ್ಯ ಹೇಳಬೇಡ, ಅವನು ಯಾವುದು ಸತ್ಯವಾಗಬೇಕೆಂದು ಬಯಸುತ್ತಾನೋ ಅದನ್ನು ಹೇಳು’ ಇದು ಅವರ ಪ್ರಮುಖ ತಂತ್ರ. ಅಂತಹ ಒಂದು ತಂತ್ರವನ್ನು ಹೈಮನ್ ಉದ್ಧರಿಸುತ್ತಾರೆ-
`` ನಿಮ್ಮ ಕೆಲವು ಆಕಾಂಕ್ಷೆಗಳು ಅವಾಸ್ತವಿಕವಾದವು. ಕೆಲವು ಸಲ ನೀವು, ಎಲ್ಲರೊಡನೆ ಬೆರೆಯುವ, ಬಹರ್ಮುಖಿಗಳಾಗಿದ್ದಂತೆ ತೋರಿದರೂ ಕೆಲವೊಮ್ಮೆ ಅದೇಕೋ ಅಂರ್ಮುಖಿಗಳಾಗುತ್ತೀರಿ. ನಿಮ್ಮನ್ನು ನೀವು ಸಂಪೂರ್ಣವಾಗಿ ಇತರರಿಗೆ ಅರ್ಥವಾಗುವಂತೆ ವ್ಯಕ್ತಪಡಿಸುವುದಿಲ್ಲ. ಸರಿಯಾದ ಪುರಾವೆಗಳಿಲ್ಲದೆ ಇತರರ ಮಾತನ್ನು ನೀವು ಒಪ್ಪುವುದಿಲ್ಲ. ನಿಮ್ಮ ನಿರ್ಧಾರ ಸರಿಯಾಗಿದೆಯೇ ಇಲ್ಲವೇ ಎಂಬ ಬಗ್ಗೆ ನಿಮಗೆ ಅನೇಕ ಸಲ ಅನುಮಾನಗಳು ಉಂಟಾಗುತ್ತವೆ. ನಿಮಗೆ ಕೆಲವು ವೈಯಕ್ತಿಕ ದೌರ್ಬಲ್ಯಗಳಿವೆ, ಅವು ನಿಮಗೆ ಹಾನಿಯುಂಟು ಮಾಡುತ್ತಿವೆ. ನಿಮ್ಮಲ್ಲಿ ವಿಶೇಷ ಸಾಮಥ್ರ್ಯವಿದ್ದು ಆ ಸಾಮರ್ಥ್ಯವನ್ನು ನೀವು ಸರಿಯಾಗಿ ಬಳಸಿಕೊಂಡಿಲ್ಲ....’’
 ಮೇಲಿನ ಮಾತುಗಳು ನಿಮಗೆ ಅನ್ವಯಿಸುತ್ತವೆಯೇ? ಹೆಚ್ಚು-ಕಡಿಮೆ ಎಲ್ಲರೂ ತಮಗೇ ಅನ್ವಯಿಸುತ್ತದೆ ಎಂದು ನಂಬುತ್ತಾರೆ!
    ಇತ್ತೀಚೆಗೆ, 6,475 ರಾಜಕೀಯ ದುರೀಣರ ಜಾತಕವನ್ನು ಪರೀಕ್ಷಿಸಲಾಯಿತು. ಅವರೆಲ್ಲರ ಜಾತಕಗಳೂ ಬೇರೆ ಬೇರೆ ರಾಶಿಗಳಲ್ಲಿ ಸಮಾನವಾಗಿ ಹಂಚಿಹೋಗಿದ್ದವು. ಅವರಲ್ಲಿ ಜ್ಯೋತಿಷ್ಯದ ಪ್ರಕಾರ ನಾಯಕತ್ವದ ಗುಣಗಳಿರಬೇಕಾದ ಜಾತಕದವರೂ ಇದ್ದರು. ಹಾಗೆಯೇ, ನಾಯಕತ್ವ ಗುಣಗಳಿರದಿರುವ ಜಾತಕದವರೂ ಇದ್ದರು. ಜಾನ್ ಕೆನಡಿ ಹತ್ಯೆಯನ್ನು ಮುನ್ಸೂಚಿಸಿ ಪ್ರಸಿದ್ಧರಾದ ಜ್ಯೋತಿಷಿಯೊಬ್ಬರ ಜೀವಿತಕಾಲದ ಪ್ರಮುಖ ಭವಿಷ್ಯ ನುಡಿಗಳನ್ನು ಕಲೆಹಾಕಿದ ಒಬ್ಬ ಅಧ್ಯಯನಕಾರರಿಗೆ ದೊರೆತ ಸಂಗತಿಯೇನೆಂದರೆ, ಆ ಜ್ಯೋತಿಷಿ ನುಡಿದ 82 ಶೇಕಡಾ ಭವಿಷ್ಯಗಳು ಸುಳ್ಳಾಗಿದ್ದವು.
    ಜ್ಷಾನಕ್ಕೂ ನಂಬಿಕೆಗೂ ಇರುವ ವ್ಯತ್ಯಾಸ ಇಷ್ಟೇ- ಜ್ಞಾನ ಪುರಾವೆಯನ್ನು ಬೇಡುತ್ತದೆ. ನಂಬಿಕೆಗೆ ಅದರ ಹಂಗಿಲ್ಲ. ಅಡಮ್ ಬ್ಲಾಂಕನ್‍ಬಿಕರ್ ಎಂಬ ಹೆಸರಾಂತ ವಿಜ್ಞಾನದ ಪ್ರೊಫೆಸರೊಬ್ಬರು `ನಾನು ವಿಜ್ಞಾನವನ್ನು ನಂಬುವುದಿಲ್ಲ..ನನ್ನ ವಿದ್ಯಾರ್ಥಿಗಳೂ ನಂಬಬಾರದು’ ಎಂದಿದ್ದರು. ಇನ್ನೊಬ್ಬರು ವಿಜ್ಞಾನಿ ಡಾ. ಬ್ರಿಯಾನ್ ಪೊಬೆನರ್ ತಾನು ವಿಕಾಸವಾದವನ್ನು ನಂಬುವುದಿಲ್ಲ. ಆದರೆ, ವಿಕಾಸವಾದಕ್ಕೆ ಸಮರ್ಥನೆಯಾಗಿ ನೀಡಿದ ಪುರಾವೆಗಳನ್ನು ಒಪ್ಪುತ್ತೇನೆ ಅಂದಿದ್ದರು. ವೀಕ್ಷಣೆ, ಪ್ರಯೋಗ, ವಿಶ್ಲೇಷಣೆ ಮತ್ತಿತರ ವಿಧಾನಗಳಿಗೆ ದಕ್ಕುವ ವಿಜ್ಞಾನದಲ್ಲಿ ನಂಬಿಕೆಗೆ ಸ್ಥಾನವೇ ಇಲ್ಲ. ಮತ್ತೆ ಮತ್ತೆ ತನ್ನನ್ನು ತಾನೆ ತಪ್ಪೆಂದು ಸಾಧಿಸಿ ಮುಂದೆ ಸಾಗುವ ವಿಜ್ಞಾನದ ಪ್ರತಿ ಹುಟ್ಟಿನಲ್ಲೂ ಸದಾ ಪಿತೃಹತ್ಯೆಯ ದೋಷ. ಆದುದರಿಂದಲೇ, ವಿಜ್ಞಾನ ನಿಂತ ನೀರಲ್ಲ: ಅದಕ್ಕೆ ಬೆಳವಣಿಗೆ ಇದೆ. ಜೀವಂತಿಕೆ ಇದೆ.
    ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಉಡುಪಿ ಜಿಲ್ಲಾ ಘಟಕ ಮತ್ತು ಕುಂದಾಪುರ ಸಮುದಾಯ ಒಟ್ಟಿಗೆ ಸೇರಿ ಜನವರಿ 24ರ ಶನಿವಾರ ಭಂಡಾರ್ಕರ್ಸ್ ಕಾಲೇಜಿನಲ್ಲಿ ಚುಕ್ಕಿ ಚಂದ್ರಮ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ. ಪ್ರಾತ್ಯಕ್ಷಿಕೆ, ಸಂವಾದ, ಆಕಾಶ ವೀಕ್ಷಣೆಗಳನ್ನೊಳಗೊಂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮಕ್ಕಳು ರಾಹು ಕೇತುಗಳೆಂಬ ಭೌತಿಕ ಕಾಯಗಳೇ ಇಲ್ಲವೆಂಬುದನ್ನು ತಿಳಿದುಕೊಳ್ಳುತ್ತಾರೆ. ರಾಶಿಪುಂಜಗಳು ಉಂಟುಮಾಡುವ ಚಿತ್ರಾಕೃತಿಗಳು ಒಂದೇ ರೀತಿಯಿದ್ದರೂ ಅದರಲ್ಲಿರುವ ನಕ್ಷತ್ರಗಳು ಅಸಾಧ್ಯ ವೇಗದಲ್ಲಿ ದೂರ ಸರಿಯುತ್ತಿವೆ ಎಂಬುದನ್ನೂ ತಿಳಿದುಕೊಳ್ಳುತ್ತಾರೆ. ಬರಿಗಣ್ಣಿಗೆ ಕಾಣುವ ನಕ್ಷತ್ರಗಳಿರುವಂತೆ ಕಾಣದ ನಕ್ಷತ್ರಗಳು ಇವೆಯೆಂಬುದನ್ನೂ, ರಾಶಿಪುಂಜಗಳ ನಕ್ಷತ್ರಗಳು ಒಂದೇ ಗೋಳಕ್ಕೆ ಅಂಟಿಕೊಂಡಂತೆ ಕಾಣುವುದಾದರೂ ಅವುಗಳು ಭೂಮಿಯಿಂದ ಬೇರೆ ಬೇರೆ ದೂರದಲ್ಲಿವೆಯೆಂಬುದನ್ನೂ ತಿಳಿದುಕೊಳ್ಳುತ್ತಾರೆ. ಇಲ್ಲಿ ಯಾವುದೂ ಸ್ಥಿರವಲ್ಲ, ಎಲ್ಲವೂ ಬದಲಾಗುತ್ತಿವೆ ಎಂತಲೂ ಎಲ್ಲ ಉತ್ತರಗಳೂ ತಾತ್ಪೂರ್ತಿಕವಾದುದು ಎಂಬುದೇ ಸತ್ಯ ಎಂತಲೂ ತಿಳಿದುಕೊಳ್ಳುವರು. 

ಮತ್ತು ಈ ತಿಳುವಳಿಕೆಯೇ ಅವರನ್ನು ರಕ್ಷಿಸಬಲ್ಲದು!


Saturday 17 January 2015

ಅಮೋನಿಯಂ ನೈಟ್ರೇಟ್- ಉದಯವಾಣಿ ಲೇಖನ

ಅಮೋನಿಯಂ ನೈಟ್ರೇಟೆಂಬ ರಕ್ತಲೇಪಿತ ರಸಗೊಬ್ಬರದ ಕತೆ


  ಮೊನ್ನೆಯಷ್ಟೇ ಬೆಂಗಳೂರು ಸ್ಪೋಟಕ್ಕೆ ಕಾರಣರಾದ ಭಟ್ಕಳದ ಶಂಕಿತ ಉಗ್ರರನ್ನು ಸೆರೆಹಿಡಿದರು. ಸೆರೆ ಸಿಕ್ಕವರು ಉಗ್ರರೇ ಹೌದು ಎಂಬುದನ್ನು ಖಚಿತಪಡಿಸಿದ್ದು ಅವರ ಮನೆಯಲ್ಲಿ ಸಿಕ್ಕಿದ ಅಮೋನಿಯಂ ನೈಟ್ರೇಟು!
  ಸಾಮಾನ್ಯ ತಾಪದಲ್ಲಿ ಬಿಳಿ ಬಣ್ಣದ ಪುಡಿಹರಳಿನ ರೂಪದಲ್ಲಿರುವ ಈ ರಾಸಾಯನಿಕ ಕೃಷಿಯ ದಿಕ್ಕು-ದೆಶೆಗಳನ್ನು ಬದಲಾಯಿಸಿದ ರಸಗೊಬ್ಬರ. ಸಸ್ಯಗಳ ಬೆಳವಣಿಗೆಗೆ, ಹಣ್ಣು ಬೆಳೆಗಳ ಉತ್ತಮ ಇಳುವರಿಗೆ, ಎಲೆ ತರಕಾರಿಗಳು ಹಸಿ-ಹಸಿ ಸೊಪ್ಪನ್ನು ಹೇರಿಕೊಂಡು ಬೆಳೆಯಲು ನೈಟ್ರೋಜನ್ ಬೇಕು. ವಾತಾವರಣದಲ್ಲಿ ನೈಟ್ರೋಜನ್ ಹೇರಳವಾಗಿದ್ದರೂ ಅವುಗಳನ್ನು ಸಸ್ಯಗಳು ನೇರವಾಗಿ ಪಡೆಯಲಾರವು. ಸಸ್ಯಗಳು ಪೋಷಕಾಂಶಗಳನ್ನು ಪಡೆಯಬೇಕಾದರೆ ಅವು ನೀರಿನಲ್ಲಿ ಕರಗಬೇಕಾಗುತ್ತವೆ. ಅಮ್ಮೋನಿಯಂ ನೈಟ್ರೇಟಿನಲ್ಲೋ ಹತ್ತಿರ ಹತ್ತಿರ ಮೂವತ್ತು ಶೇಕಡಾದಷ್ಟು ನೈಟ್ರೋಜನ್ ಇರುತ್ತದೆ. ಇದು ನೀರಿನಲ್ಲಿ ಕರಗುತ್ತದೆ. ಜೊತೆಗೆ, ಬಹಳ ಅಗ್ಗ ಕೂಡಾ. ಕೇಳಬೇಕೇ? ಈ ರಾಸಾಯನಿಕ ಬಡದೇಶಗಳ ರೈತರ ಡಾರ್ಲಿಂಗ್ ಆಗಿಹೋಯಿತು.
  ಅಮೋನಿಯಂ ನೈಟ್ರೇಟು ರಾಸಾಯನಿಕ ಕ್ರೀಯೆಯಲ್ಲಿ ಪ್ರತಿಕಾರಕಗಳ ಎಲೆಕ್ಡ್ರಾನುಗಳನ್ನು ಕಳೆಯಬಲ್ಲದು -ಇದೊಂದು ಶಕ್ತಿಶಾಲಿಯಾದ ಆಕ್ಸಿಡೀಕರಣದ ದಲ್ಲಾಳಿ. ಹಾಗೆಯೇ, ಸಾವಿನ ದಲ್ಲಾಳಿ ಕೂಡಾ. ಶಾಖಕ್ಕೆ ಸೂಕ್ಷ್ಮವಾಗಿ ಪ್ರತಿಕ್ರಿಯಿಸುವ ಅಮೋನಿಯಂ ನೈಟ್ರೇಟು, ಇಂತಹ ಬಾಹ್ಯಪ್ರೇರಣೆಗೆ ಕೂಡಲೇ ಪ್ರತಿಕ್ರಿಯಿಸುವ ಮೂಲಕ ರಸಗೊಬ್ಬರದಿಂದ  ಸ್ಪೋಟಕ ಸಾಮಗ್ರಿಯಾಗಿ ಬದಲಾಗಬಲ್ಲದು! ಹೀಗಾಗಿ, ಅಮೋನಿಯಂ ನೈಟ್ರೇಟು ಇತ್ತೀಚೆಗೆ ರೈತರಿಗಿಂತ ಉಗ್ರಗಾಮಿಗಳಿಗೇ ಹೆಚ್ಚು ಪ್ರಿಯವಾದ ರಾಸಾಯನಿಕ.
  ಅಮೋನಿಯಂ ನೈಟ್ರೇಟನ್ನು ಟ್ರೈ ನೈಟ್ರೋ ಟೋಲಿನ್ ಎಂಬ ಸ್ಫೋಟಕದೊಂದಿಗೋ ಡಿಸೆಲ್‍ನಂತಹ ಇಂಧನತೈಲದೊಂದಿಗೋ ಬೆರೆಕೆ ಹಾಕಿ ಬಾಂಬು ತಯಾರಿಸುತ್ತಾರೆ. ಈ ಸ್ಫೋಟಕಗಳನ್ನೆಲ್ಲ ಉಗ್ರಗಾಮಿಗಳೇ ಬಳಸುತ್ತಾರೆ ಎಂದುಕೊಳ್ಳಬೇಡಿ. ಬಾಂಬುಗಳು ಮೂಲತಃ ಗಣಿಗಾರಿಕೆಗಾಗಿಯೇ ಕಂಡುಹಿಡಿಯಲ್ಪಟ್ಟ ಸ್ಪೋಟಕ ಕಾಂಬಿನೇಷನ್‍ಗಳು. ಆನಂತರ, ರಕ್ಷಣಾಪಡೆಗಳು ಇವುಗಳನ್ನು ಬಳಸಿಕೊಂಡವು. 1996 ರ ಅಮೇರಿಕಾದ ಒಕ್ಲಾಮಾ ನಗರದ ಸ್ಫೋಟದಿಂದಲೂ ಅಮೋನಿಯಂ ನೈಟ್ರೇಟನ್ನು ಉಗ್ರಗಾಮಿಗಳು ಬಳಸುತ್ತಿದ್ದಾರೆ!  2002 ರ ಬಾಲಿ ನೈಟ್ ಕ್ಲಬ್ ಸ್ಫೋಟ, 2003ರ ಇಸ್ತನಾಬುಲ್ ಸ್ಫೋಟಗಳಲ್ಲಿ ಅಲ್ ಖೈದಾದಂತಹ ಜಾಗತಿಕ ಭೀತಿವಾದಿಗಳು ಅಮೋನಿಯಂ ನೈಟ್ರೇಟನ್ನು ಬಳಸಿದ್ದರು. 2004 ರಲ್ಲಿ ಭಾರತ ಸರಕಾರ ನೈಟ್ರೋ ಗ್ಲಿಸರಿನ್ ಮೂಲದ ಸ್ಫೋಟಕಗಳನ್ನು ನಿಷೇದಿಸಿದ ಮೇಲೆ, ಭಾರತೀಯ ಉಪಖಂಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಗ್ರಗಾಮಿ ಸಂಘಟನೆಗಳು ಅಮೋನಿಯಂ ನೈಟ್ರೇಟನ್ನು ಹೆಚ್ಚೆಚ್ಚು ಬಳಸಲಾರಂಭಿಸಿದವು. ಈ ಮಾತಿಗೆ ಪುರಾವೆಯಾಗಿ ಹೈದರಾಬಾದ್ ಸ್ಫೋಟ, ಚಿನ್ನಸ್ವಾಮಿ ಕ್ರೀಡಾಂಗಣ ಸ್ಫೋಟ, ಪುಣೆಯ ಜರ್ಮನ್ ಬೇಕರಿ ಸ್ಫೋಟ, ದಿಲ್ ಕುಷ್ ನಗರದ ಸ್ಫೋಟ ಹೀಗೆ ಹಲವು ಉದಾಹರಣೆಗಳು ದೊರೆಯುತ್ತವೆ. ಸುಧಾರಿತ ಸ್ಫೋಟಕ ಉಪಕರಣಗಳು(Iಇಆ) ಎಂದು ಕರೆಯಲ್ಪಡುವ ಸ್ಫೋಟಕಗಳಲ್ಲಿ ಮುಖ್ಯ ಕಚ್ಚಾವಸ್ತು ಅಮೋನಿಯಂ ನೈಟ್ರೇಟ್ ಆಗಿರುತ್ತದೆ. ನಟ್ಟು, ಬೋಲ್ಟು, ಬಾಲ್‍ಬಿಯರಿಂಗ್ ಗುಂಡುಗಳÀಂತಹ ದೇಹದ ಮೂಲಕ ತೂರಿಹೋಗಬಹುದಾದ ಘನವಸ್ತುಗಳನ್ನು ಸೇರಿಸಿ ಈ ಬಾಂಬುಗಳು ಪರಿಣಾಮವನ್ನು ಹೆಚ್ಚಿಸಲಾಗುತ್ತದೆ.
  ಸೆಲ್ಯುಲೋಸ್ ನೈಟ್ರೇಟ್ ಮತ್ತು ನೈಟ್ರೋ ಗ್ಲಿಸರಿನ್ ಮೂಲದ ಸ್ಫೋಟಕಗಳ ಬಳಕೆ ಪ್ರಾರಂಭವಾದದ್ದು ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ. ಸರ್ ಅಲ್ಪ್ರೆಡ್ ನೊಬೆಲ್‍ರ ತಂದೆ ನಡೆಸುತ್ತಿದ್ದ ಸ್ಫೋಟಕಗಳ ಫ್ಯಾಕ್ಟರಿಯಲ್ಲಿ ಆಕಸ್ಮಿಕವಾಗಿ ಸ್ಫೋಟ ಸಂಭವಿಸಿ ನೊಬೆಲ್‍ರ ಇಬ್ಬರು ತಮ್ಮಂದಿರು ಅಸುನೀಗಿದ್ದರು. ಆನಂತರ, ಅಲ್ಫ್ರೆಡ್ ನೊಬೆಲ್ ನೈಟ್ರೋಗ್ಲಿಸರಿನ್ ಮೂಲದ ಸ್ಫೋಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಬಳಸಬಹುದಾದ ಡೈನಮೈಟ್ ಎಂಬ ಸಂಯೋಜನೆಯನ್ನು  ತಯಾರಿಸಿದರು. ಡೈನಮೈಟ್ ತಯಾರಾದದ್ದು ಗಾಂಧಿ ಹುಟ್ಟುವುದಕ್ಕಿಂತ ಎರಡು ವರ್ಷ ಮೊದಲು- 1867 ರಲ್ಲಿ. ಆನಂತರ, ಡೈನಮೈಟ್ ತಯಾರಿಸಿದ ಕುಖ್ಯಾತಿಯಿಂದ ತಪ್ಪಿಸಿಕೊಳ್ಳಲೋಸುಗುವೋ ಎಂಬಂತೆ ತನ್ನ ಆಸ್ತಿಯೆಲ್ಲ ನೊಬೆಲ್ ಪ್ರಶಸ್ತಿಗಳನ್ನು ನೀಡಲು ವಿನಿಯೋಗವಾಗಬೇಕೆಂಬ ಇಚ್ಛಾಪತ್ರವನ್ನು ಬರೆದು ಇದೇ ನೊಬೆಲ್ ಮಹಾಶಯ ಅಸುನೀಗಿದ್ದರು.
    ರಕ್ತ ಸಿಕ್ತವಾದ ಆಲೋಚನೆಗಳನ್ನು ಹೊಂದಿರುವವರು ಬಾಯಲ್ಲಿ ಆಲಿವ್ ಟೊಂಗೆಯನ್ನು ಕಚ್ಚಿಕೊಂಡರೇನಂತೆ- ಅವರ ಕಾರ್ಯಗಳಲ್ಲಿ ರಕ್ತದ ಲೇಪನ ಇದ್ದೇ ಇರುತ್ತದೆ. ಅಮೋನಿಯಂ ನೈಟ್ರೇಟು ಮತ್ತಿತರ ರಸಗೊಬ್ಬರಗಳನ್ನು ಹೇಬರ್ ಪ್ರಕ್ರಿಯೆ ಎಂಬ ರಾಸಾಯನಿಕ ಕ್ರಿಯೆಯ ಮೂಲಕ ತಯಾರಿಸಿದ ಸಾಧನೆಗಾಗಿ ವಿಜ್ಞಾನಿ ಫ್ರಿಟ್ಞ್ ಹೇಬರರಿಗೆ 1918 ರಲ್ಲಿ ರಸಾಯನ ಶಾಸ್ತ್ರದ ನೊಬೆಲ್ ಪ್ರಶಸ್ತಿ ದೊರೆಯಿತು. ಇದೇ ಹೇಬರ್ ಮಹಾಶಯನನ್ನು ಮೊದಲ ಮಹಾಯುದ್ಧದ ಕಾಲದಲ್ಲಿ ಜರ್ಮನಿಯ ರಾಸಾಯನಿಕ ಸಮರಪಡೆಯ ಮುಖ್ಯಸ್ಥರನ್ನಾಗಿಯೂ ಮಾಡಲಾಗಿತ್ತು. ಇದೇ ಹೇಬರ್ ಎರಡನೇ ವೈಪ್ರೆಸ್ ಕದನದಲ್ಲಿ ಕ್ಲೋರಿನ್ ಗ್ಯಾಸ್ ದಾಳಿಯನ್ನು ನಿರ್ದೇಶಿಸಿ ಮಿತ್ರಪಡೆಯ ಸಾವಿರಾರು ಯೋಧರ ಸಾವಿಗೆ ಕಾರಣರಾಗಿದ್ದರು. ಅಮೋನಿಯಂ ನೈಟ್ರೇಟೆಂಬ ರಸಗೊಬ್ಬರ ರಕ್ತಲೇಪಿಸಿಕೊಂಡೇ ಹುಟ್ಟಿರುವುದಕ್ಕೆ ಇದಕ್ಕಿಂತ ಬೇರೆ ಪುರಾವೆ ಬೇಕೇ?
 ಸ್ಫೋಟಕಗಳಿಗೆ ಬಹಳ ದೊಡ್ಡ ಇತಿಹಾಸವಿಲ್ಲ. ಬಹುಷಃ, ದೀರ್ಘ ಭವಿಷ್ಯವೂ ಇಲ್ಲ! ಹದಿಮೂರನೇ ಶತಮಾನದ ಹೊತ್ತಿಗೆ ಕೋವಿ ಮದ್ದಲ್ಲದೇ ಬೇರೆ ಸ್ಫೋಟಕಗಳೇ ಗೊತ್ತಿರಲಿಲ್ಲ.  ಸೆಲ್ಯುಲೋಸ್ ನೈಟ್ರೇಟ್ ಮತ್ತು ನೈಟ್ರೋ ಗ್ಲಿಸರಿನ್ ಮೂಲದ ಸ್ಫೋಟಕಗಳ ಬಳಕೆ ಪ್ರಾರಂಭವಾದದ್ದು ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ;  ಟಿ.ಎನ್.ಟಿ ರಂಗಪ್ರವೇಶ ಮಾಡಿದ್ದು ಮೊದಲ ವಿಶ್ವಸಮರದ ಸಂದರ್ಭದಲ್ಲಿ. 1991 ರಲ್ಲಿ ರಾಜೀವ ಗಾಂಧಿ ಆರ್. ಡಿ. ಎಕ್ಸ್ ಎಂಬ ಸ್ಫೋಟಕಕ್ಕೆ ಬಲಿಯಾದರು. ಈಗ ಮತ್ತದೇ ರಸಗೊಬ್ಬರ. ಬೆಂಗಳೂರಿನಲ್ಲಿ ಬಾಂಬು ಸ್ಫೋಟಗೊಂಡರೆ ಭಟ್ಕಳದಲ್ಲಿ ಅಮೋನಿಯಂ ನೈಟ್ರೇಟು ದೊರೆಯುತ್ತದೆ.
  ಅಮೋನಿಯಂ ನೈಟ್ರೇಟನ್ನು ರಸಗೊಬ್ಬರವಾಗಿ ಬಳಸುವಾಗಲೂ ಅಪಾಯವಿದ್ದೇ ಇದೆ. ಸಂಗ್ರಹಣೆ ಮತ್ತು ಬಳಕೆಯ ಯಾವ ಹಂತದಲ್ಲಿ ಎಚ್ಚರ ತಪ್ಪಿದರೂ ಅನಾಹುತ ಕಟ್ಟಿಟ್ಟ ಬುತ್ತಿ. ಟೆಕ್ಸಾಸ್ ನಗರದ ರಸಗೊಬ್ಬರ ಕಾರ್ಖಾನೆಯ ದುರಂತವೂ ಸೇರಿದಂತೆ ಎಷ್ಟೋ ಸಾವು-ನೋವುಗಳಿಗೆ ಈ ರಸಗೊಬ್ಬರ ಕಾರಣವಾಗಿದೆ. ರಸಗೊಬ್ಬರಕ್ಕಾಗಿ ಹಾತೊರೆಯುತ್ತಾ ಪೋಲೀಸರ ಗುಂಡು ತಿಂದು ಸತ್ತ ಹಾವೇರಿಯ ರೈತ ನಮ್ಮ ನೆನಪಿಂದ ಇನ್ನೂ ಮರೆಯಾಗಿಲ್ಲ. ಗತಿಸಿದ 2014 ರ ಕಟ್ಟಕಡೆಯ ನೂರೈವತ್ತು ಗಂಟೆಗಳಲ್ಲಿ ವಿದರ್ಭ ಪ್ರಾಂತ್ಯದ 12 ರೈತರು ಆತ್ಮಹತ್ಯೆ ಮಾಡಿಕೊಂಡರು. ಈ ಸಾವಿನಲ್ಲಿ ರಸಗೊಬ್ಬರದ ಅವಶೇಷಗಳು ಇಲ್ಲದೇ ಇಲ್ಲ. ಹಸಿರು ಕ್ರಾಂತಿಯ ನೆವದಲ್ಲಿ, ಹಾಕಿದ ದುಡ್ಡಿಗೆ ಬರುವ ಇಳುವರಿ ಸಾಲುವುದಿಲ್ಲವೆಂಬ ಕೊರಗಲ್ಲಿ ನೆಲಕ್ಕೆ ಸುರಿದ ರಾಸಾಯನಿಕಗಳು ಇಂದು ರೈತನನ್ನೇ ತಿನ್ನುತ್ತಿವೆ. ರಸಗೊಬ್ಬರಕ್ಕೆ ರಕ್ತ ಮೆತ್ತಿಕೊಂಡದಂತೂ ಸತ್ಯ.
  ಅಂದಹಾಗೆ, ಅಮೋನಿಯಂ ನೈಟ್ರೇಟನ್ನು ನೀರಲ್ಲಿ ಹಾಕಿ ಬಿಸಿ ಮಾಡಿದರೆ ಏನು ದೊರೆಯುವುದು ಗೊತ್ತೇ? ನೈಟ್ರಸ್ ಆಕ್ಸೈಡ್-ಅದೇ.. ಲಾಫಿಂಗ್ ಗ್ಯಾಸ್!
_________________________________________________________________________
ಉದಯ ಗಾಂವಕಾರ
9481509699