Tuesday, 23 February 2016

ಶಿಕ್ಷಣ ಮತ್ತು ಪ್ರಶ್ನೆಗಳ ಸಾಹಸ




23/2/2016

ಹೇರಿಕೆಯ ಶಿಕ್ಷಣವು ಭಿನ್ನಾಭಿಪ್ರಾಯ ಗೌರವಿಸುವ ವ್ಯಕ್ತಿತ್ವವನ್ನು ರೂಪಿಸದು


ತಮ್ಮ  ಅಭಿಪ್ರಾಯಕ್ಕಿಂತ ಭಿನ್ನವಾದ ನಿಲುವು ಹೊಂದಿರುವವರ ಕುರಿತು ನಮ್ಮ ಯುವಜನ ತಳೆದಿರುವ ಮನೋಭಾವ ನಿಜಕ್ಕೂ ದಿಗಿಲು ಹುಟ್ಟಿಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಕೆಸರೆರಚಾಟಗಳು ನಮ್ಮ ಸಮಾಜದ ದೃಷ್ಟಿಕೋನವನ್ನು ಮಾತ್ರ ಪ್ರತಿಬಿಂಬಿಸುವುದಿಲ್ಲ, ಅವು ನಮ್ಮ ಶಿಕ್ಷಣ ವ್ಯವಸ್ಥೆಯ ಮೌಲ್ಯಮಾಪನವನ್ನೂ ಮಾಡುತ್ತಿವೆ.
ಸಮಾಜದ ಒಪ್ಪಿತ ಅಭಿಪ್ರಾಯಗಳು ಮತ್ತು ಮೌಲ್ಯಗಳನ್ನು ಪ್ರಶ್ನಿಸುವುದು, ಅವುಗಳ ಇನ್ನೊಂದು ಬದಿಯನ್ನು ಶೋಧಿಸುವುದು ಕಲಿಕೆಯ ಪ್ರಮುಖ ವಿಧಾನವಾಗುವವರೆಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ರೂಪಿಸುವುದು ಕಷ್ಟಕರ. ಇದ್ದುದನ್ನು ಇದ್ದಹಾಗೆಯೇ ಒಪ್ಪಿಸುವ ಶಿಕ್ಷಣದಿಂದ ಬದಲಾವಣೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ.
ಸಾಮಾಜಿಕ ಬದಲಾವಣೆಯನ್ನು ತರಲು ಶಿಕ್ಷಣದ ಪಠ್ಯ ಮತ್ತು ವಿಧಾನಗಳನ್ನು ಶೋಷಿತರ ದೃಷ್ಟಿಯಿಂದ ನಿರೂಪಿಸುವುದು ಅತ್ಯಂತ ಅಗತ್ಯ ಎಂದು ಭಾವಿಸಿದ ಫೌಲೋ ಫ್ರಯರಿ, ಶಿಕ್ಷಣದ ತತ್ವಶಾಸ್ತ್ರವನ್ನು ಸಾಮಾಜಿಕ ಚಳವಳಿಯೊಂದಿಗೆ ಬೆಸೆದು ವಿಮರ್ಶೆಯ ಶಿಕ್ಷಣ ಸಿದ್ಧಾಂತವನ್ನು (Critical Pedagogy) ಮಂಡಿಸಿದರು. ಫ್ರಯರಿಯವರ ನಂತರದ ಅನೇಕ ಶಿಕ್ಷಣ ಶಾಸ್ತ್ರಜ್ಞರು ವಿಮರ್ಶಾತ್ಮಕ ಶಿಕ್ಷಣ ಶಾಸ್ತ್ರವನ್ನು ಇನ್ನಷ್ಟು ಸೈದ್ಧಾಂತಿಕ ಸ್ಪಷ್ಟತೆಯೊಂದಿಗೆ ಮರು ನಿರೂಪಿಸಿದರು. 2005ರ ರಾಷ್ಟ್ರೀಯ ಪಠ್ಯಕ್ರಮ ನೆಲೆಗಟ್ಟು ವಿಮರ್ಶಾತ್ಮಕ ಶಿಕ್ಷಣ ಶಾಸ್ತ್ರವನ್ನು ಶಾಲಾ ಶಿಕ್ಷಣದಲ್ಲಿ ಅಳವಡಿಸಲು ಸಲಹೆ ನೀಡಿದೆ.
‘ಒಂದು ತಲೆಮಾರಿನ ಯೋಚನಾ ವಿಧಾನವನ್ನು ಪ್ರಭಾವಿಸಿದ ಎಲ್ಲ ಸಂಗತಿಗಳನ್ನೂ ಅನುಮಾನಿಸುವ ಶಿಕ್ಷಿತ ಅಪನಂಬಿಕೆಯನ್ನು ಪೋಷಿಸುವ ಮೂಲಕವೇ ಸಾಮಾಜಿಕ ಅಸಮಾನತೆಗಳಿಗೆ ಮದ್ದು ಹುಡುಕಲು ಸಾಧ್ಯ’ ಎಂದು ಹೆನ್ರಿ ಗಿರೋಕ್ಸ್ ಅಭಿಪ್ರಾಯಪಡುತ್ತಾರೆ. ಸಾಮಾಜಿಕ ಬದಲಾವಣೆಗೆ ಕಾರಣವಾಗಬೇಕಿದ್ದ ಶಿಕ್ಷಣವು ಇಂದು ಇದ್ದುದನ್ನು ಇದ್ದಂತೆಯೇ ಉಳಿಸಿಕೊಳ್ಳುವ ಸಂಪ್ರದಾಯಶರಣರ ಹುನ್ನಾರಗಳಿಗೆ ಬಲಿಯಾಗುತ್ತಿರುವ ಹಿನ್ನೆಲೆಯಲ್ಲಿ, ಗಿರೋಕ್ಸ್‌ರ ಅಭಿಪ್ರಾಯವನ್ನು ವಿಶ್ಲೇಷಿಸಬೇಕಿದೆ.
ಸಾಮಾಜಿಕ ಸ್ಥಗಿತತೆಗೆ ಶಿಕ್ಷಣವೂ ಕಾರಣವಾಗುತ್ತಿದೆ. ಪ್ರತಿ ಮಗುವೂ ಮನೆಯಿಂದ, ಆಟದ ಮೈದಾನದಿಂದ ಮತ್ತು ತನ್ನ ಪರಿಸರದಿಂದ ಮೈಗೂಡಿಸಿಕೊಂಡು ತಂದ ಅನುಭವಗಳು ಮತ್ತು ಉತ್ತಮ ಉಪಕ್ರಮಗಳನ್ನು ತರಗತಿಯು ಗೌರವದಿಂದ ಕಾಣುವಂತಾಗಬೇಕು. ಬೇರೆ ಯಾರದೋ ಅನುಭವಗಳ ಆಧಾರದ ಮೇಲೆ ಪರಿಹಾರಗಳನ್ನು ಹುಡುಕುವ ಬದಲು ತನ್ನದೇ ಅನುಭವಗಳನ್ನು ನಂಬುವ ಆತ್ಮವಿಶ್ವಾಸವನ್ನು ಆ ಮಗುವಿನಲ್ಲಿ ಬೆಳೆಸಬೇಕು. ಇರುವುದನ್ನು ಹಾಗೆಯೇ ಒಪ್ಪಿಕೊಳ್ಳುವುದನ್ನು ಕಲಿಸುವ ಬದಲು ಭಿನ್ನವಾಗಿ ಯೋಚಿಸುವ, ಪ್ರತಿಕ್ರಿಯಿಸುವ ಶಕ್ತಿಯನ್ನು ಒದಗಿಸಬೇಕು.
ಭಿನ್ನಾಭಿಪ್ರಾಯಗಳನ್ನು ಸಹಿಸುವ, ಸ್ವೀಕರಿಸುವ ಮತ್ತು ತಮಗಿಂತ ಭಿನ್ನವಾದ ಅಭಿಪ್ರಾಯಗಳನ್ನು ಹೊಂದಿರುವವರನ್ನು ಗೌರವದಿಂದ ಕಾಣುವ ವ್ಯಕ್ತಿತ್ವವನ್ನು ರೂಪಿಸಲು ಹೇರಿಕೆಯ ಶಿಕ್ಷಣದಿಂದ ಸಾಧ್ಯವಿಲ್ಲ. ವಿಮರ್ಶಾತ್ಮಕ ಶಿಕ್ಷಣ ಶಾಸ್ತ್ರವನ್ನು ಅರ್ಥ ಮಾಡಿಕೊಳ್ಳಲು ಒಂದು ಉದಾಹರಣೆ ತೆಗೆದುಕೊಳ್ಳೋಣ. ಸೈನ್ಯವನ್ನು ಸೇರಿ ದೇಶಕ್ಕಾಗಿ ದುಡಿಯುವುದನ್ನು ಸಮಾಜ ಅತ್ಯಂತ ಆದರ್ಶದ ವೃತ್ತಿಯನ್ನಾಗಿ ಸ್ವೀಕರಿಸುತ್ತದೆ. ಯುದ್ಧಭೂಮಿಯಲ್ಲಿ ಮಡಿದರೆ ವೀರಸ್ವರ್ಗ ಎಂಬ ನಂಬಿಕೆಯನ್ನು ತಲೆಮಾರಿನಿಂದ ತಲೆಮಾರಿಗೆ ದಾಟಿಸುತ್ತಲೇ ಇದ್ದೇವೆ.
ನಮ್ಮ ಶಿಕ್ಷಣ ವ್ಯವಸ್ಥೆ, ಅಲ್ಲಿನ ಪಠ್ಯಗಳು ಈ ನಂಬಿಕೆಯನ್ನು ದೃಢಗೊಳಿಸುತ್ತವೆ. ದೇಶದ ಒಳಿತಿಗಾಗಿ ಹೀಗೆ ನಂಬಿಸುವುದು ಅಗತ್ಯ ಎಂದು ನಮ್ಮ ಶಿಕ್ಷಣ ವ್ಯವಸ್ಥೆ ಅಭಿಪ್ರಾಯಪಡುತ್ತದೆ. ಸೈನ್ಯ ಸೇರುವುದು ಅತ್ಯುನ್ನತ ನಾಗರಿಕ ಜವಾಬ್ದಾರಿ ಎಂಬ ಮೌಲ್ಯವನ್ನು ನಮ್ಮ ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯಲ್ಲಿ ಕಲಿಕಾರ್ಥಿಯು ಪ್ರಶ್ನಿಸಲಾರ. ಆದರೆ ವಿಮರ್ಶೆಯ ಶಿಕ್ಷಣದಲ್ಲಿ ಅತ್ಯುಚ್ಚ ಮೌಲ್ಯಗಳೆಂದು ಪರಿಗಣಿತವಾದವೂ ವಿಮರ್ಶೆಗೆ ಒಳಪಡುತ್ತವೆ.
ಒಬ್ಬ ಚಾಲಕ ಅಥವಾ ಪೌರ ಕಾರ್ಮಿಕನ ಕೆಲಸವು ಸೈನಿಕನ ಅಥವಾ ವೈದ್ಯನ ಕೆಲಸಕ್ಕಿಂತ ಹೇಗೆ ಕಡೆಯಾಗುತ್ತದೆ? ಅವರೂ ನಮಗಾಗಿ ಕೆಲಸ ಮಾಡುತ್ತಿಲ್ಲವೇ?  ಗಡಿಗಳ ಒಳಗಿರುವ ಸಹಮಾನವರನ್ನು, ಚರಾಚರ ಜೀವಿಗಳನ್ನು, ನೆಲ-ನುಡಿ-ಸಂಸ್ಕೃತಿಗಳನ್ನು ಪ್ರೀತಿಸುವುದು, ಗೌರವಿಸುವುದು ಮತ್ತು ರಕ್ಷಿಸುವುದು ರಾಷ್ಟ್ರ ಪ್ರೇಮವಲ್ಲವೇ?
ಸೈನ್ಯ ಸೇರುವುದನ್ನು ಪ್ರೋತ್ಸಾಹಿಸುವ ಮೌಲ್ಯಗಳಲ್ಲಿ ಜನಸಾಮಾನ್ಯರ ಹಿತವು ಅಡಗಿದೆಯೇ ಅಥವಾ ಆಳುವವರ ಹಿತ ಕಾಪಾಡುವ ಉದ್ದೇಶವಷ್ಟೆ ಇದೆಯೇ? ಇಂತಹ ಎಷ್ಟೋ ಪ್ರಶ್ನೆಗಳು ವಿಮರ್ಶೆಯ ಕಲಿಕಾರ್ಥಿಗೆ ಬರಲು ಸಾಧ್ಯವಿದೆ. ಅಂತಹ ಪ್ರಶ್ನೆಗಳು ತಂತಾನೇ ಬರಲಾರವು. ಅಂತಹ ಪ್ರಶ್ನೆಗಳು ರೂಪುಗೊಳ್ಳಲು ಪೂರಕವಾದ ಪ್ರಜಾಪ್ರಭುತ್ವದ ತಳಹದಿಯ ಕಲಿಕೆಯ ಪರಿಸರವನ್ನು ಶಿಕ್ಷಕರು ಸೃಷ್ಟಿಸಬೇಕಾಗುತ್ತದೆ. ಕಲಿಕೆಯೆಂದರೆ ಭಾಷಣ, ಬಾಯಿಪಾಠ, ಪುನರಾವರ್ತನೆ ಎಂದು ಭಾವಿಸಿರುವ ಸಮಾಜದಲ್ಲಿ ಇದು ಖಂಡಿತವಾಗಿಯೂ ಸವಾಲು.
ಪ್ರಶ್ನಿಸುವುದರಿಂದ ಸಮಾಜಕ್ಕೆ ಕೆಟ್ಟದಾಗುತ್ತದೆಯೇ? ಖಂಡಿತ ಇಲ್ಲ. ತಮಗೆ ಕೆಟ್ಟದಾಗುವುದನ್ನು ಯಾರೂ ಆಯ್ಕೆ ಮಾಡಿಕೊಳ್ಳಲಾರರು. ಎಲ್ಲವೂ ಪ್ರಶ್ನೆಗಳಿಂದ ಬದಲಾಗಬಲ್ಲವೇ? ಸಾಧ್ಯವಿಲ್ಲ. ಯಾವುದೇ ಸಂಗತಿಯು ಆಳುವ ವರ್ಗದ, ಸಾಮಾಜಿಕವಾಗಿ ಮೇಲಂತಸ್ತಿನಲ್ಲಿರುವವರ ಮತ್ತು ಗಂಡಸಿನ ಪ್ರಾಬಲ್ಯವನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದ್ದರೆ ಪ್ರಶ್ನೆಗೊಳಗಾಗುತ್ತದೆ. ಏಕೆಂದರೆ, ಪ್ರಶ್ನೆಗಳು ಸಮಾನತೆಯ ಕಡೆ ಮತ್ತು ಬಿಡುಗಡೆಯ ಕಡೆ ಮುಖ ಮಾಡಿರುತ್ತವೆ.
ದಕ್ಷಿಣ ಆಫ್ರಿಕಾದಲ್ಲಿ ರಾಜಕೀಯ ಪ್ರತ್ಯೇಕತೆ ಇದ್ದ ಕಾಲಘಟ್ಟದಲ್ಲಿ ವಿಮರ್ಶೆಯ ಶಿಕ್ಷಣದಲ್ಲಿ ನಂಬಿಕೆಯಿಟ್ಟ ಒಂದು ಗುಂಪಿನ ಶಿಕ್ಷಕರು ಧಾರ್ಮಿಕ, ರಾಜಕೀಯ, ಮಿಲಿಟರಿ ವಿದ್ಯಮಾನಗಳಿಗೆ ಸಂಬಂಧಿಸಿದ ಸಂಗತಿಗಳನ್ನು ಸ್ನೇಹ, ಮಾನವೀಯತೆ, ಪ್ರಜಾಪ್ರಭುತ್ವದ ಮೌಲ್ಯಗಳೊಡನೆ ಮುಖಾಮುಖಿಯಾಗಿಸಿದರು. ಈ ಮೂಲಕ, ಕೇಪ್‌ಟೌನಿನ ಶಾಲೆಗಳು ಮತ್ತು ಜೈಲುಗಳಲ್ಲಿರುವ ಮಕ್ಕಳಲ್ಲಿ ಪ್ರಶ್ನೆಗಳು ಹುಟ್ಟುವಂತಹ ಕಲಿಕೆಯ ವಾತಾವರಣ ಸೃಷ್ಟಿಸಿದರು. ಈ ಪ್ರಯತ್ನಗಳಿಂದಾಗಿಯೇ ಅಲ್ಲಿ ವರ್ಣಭೇದ ನೀತಿಯನ್ನು ವಿರೋಧಿಸುವ ವಿದ್ಯಾರ್ಥಿ ಚಳವಳಿಯೊಂದು ರೂಪುಗೊಳ್ಳಲು ಸಾಧ್ಯವಾಯಿತು.
ತಾನಿರುವ ಸಾಮಾಜಿಕ ಸಂದರ್ಭದೊಡನೆ ತನ್ನ ಖಾಸಗಿ ಸಮಸ್ಯೆಗಳಿಗಿರುವ ಸಂಬಂಧವನ್ನು ಗುರುತಿಸಲು ವಿಮರ್ಶೆಯ ಶಿಕ್ಷಣವು ಸಹಾಯ ಮಾಡುತ್ತದೆ. ಸಾಮಾಜಿಕ ವಿಜ್ಞಾನದ ವಿಷಯದಲ್ಲಷ್ಟೇ ಅಲ್ಲ ಕಲಾ ವಿಷಯಗಳಲ್ಲೂ ಪ್ರಶ್ನೆಗೆ ಸ್ಥಾನವಿದೆ. ವಿಜ್ಞಾನವಂತೂ ಪ್ರಶ್ನೆಗಳಿಂದಲೇ ಬೆಳೆಯುವ ಪ್ರಶ್ನೋಪನಿಷತ್ತು! ಶಿಕ್ಷಣವೆಂದರೆ ಸಿದ್ಧಜ್ಞಾನವನ್ನು ಮೈಗೂಡಿಸಿಕೊಳ್ಳುವುದಲ್ಲ; ನಮ್ಮದೇ ಜ್ಞಾನವನ್ನು ಕಟ್ಟಿಕೊಳ್ಳುವುದು.
ಹೊಸದನ್ನು ಕಲಿಯುವುದು ಎಷ್ಟು ಮುಖ್ಯವೋ ಈಗಾಗಲೇ ಕಲಿತಿರುವುದು ಅಪ್ರಸ್ತುತವೆಂದೆಣಿಸಿದಾಗ ಅದನ್ನು ಬಿಟ್ಟುಕೊಡುವುದು ಕೂಡ ಅಷ್ಟೇ ಮುಖ್ಯ. ಶಿಕ್ಷಣವು ಕಲಿಕೆ, ಮರುಕಲಿಕೆ, ಪ್ರತಿಫಲನ ಮತ್ತು ಮೌಲ್ಯಮಾಪನ ಹಂತಗಳ ಮೂಲಕ ಸಾಗಬೇಕೆಂದರೆ, ಪ್ರಶ್ನಿಸುವ ಸಾಹಸವನ್ನು ನಮ್ಮ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕಾಗುತ್ತದೆ. ಪ್ರಶ್ನಿಸುವ, ಅನುಮಾನಿಸುವ, ಭಿನ್ನ ಯೋಚನೆ ಹೊಂದಿರುವ ವಿದ್ಯಾರ್ಥಿಯನ್ನೇ ಸಕ್ರಿಯ ವಿದ್ಯಾರ್ಥಿ ಎಂದು ವಿಮರ್ಶೆಯ ಶಿಕ್ಷಣ ಶಾಸ್ತ್ರವು ಭಾವಿಸುತ್ತದೆ.
______________________________________________________________________________________________
ಪ್ರಜಾವಾಣಿ ಇ ಪತ್ರಿಕೆಯಲ್ಲಿ ಇದೇ ಲೇಖನವನ್ನು ಓದಲು ಕ್ಲಿಕ್ ಮಾಡಿ


No comments: