Showing posts with label ಸಹಮತ. Show all posts
Showing posts with label ಸಹಮತ. Show all posts

Monday, 10 October 2022

ಸೂಕ್ಷ್ಮ ಜೀವಿಯೊಂದು ಸಾಕ್ಷ್ಯ ನುಡಿಯಲು ಬಂದಾಗ..

 

ಪರೇಶ ಮೆಸ್ತಾ ಎಂಬ ಬಾಳಿ ಬದುಕಬೇಕಿದ್ದ ಯುವಕ ಸಾವಿಗೀಡಾಗಿದ ಘಟನೆ ನಡೆದು ಐದು ವರ್ಷಗಳೇ ಕಳೆದಿವೆ. ಮನೆಯ ಮಗನ ಸಾವನ್ನು ಸ್ವೀಕರಿಸುವುದು ಯಾವ ತಂದೆ-ತಾಯಿಗೂ ಸುಲಭವಲ್ಲ. ಸಾವಿನ ಸುದ್ದಿ ತಿಳಿದಾಗ ಪ್ರೀತಿಪಾತ್ರರ ಮನಸ್ಸು  ಆ ಸುದ್ದಿಯನ್ನು ನಿರಾಕರಿಸುತ್ತದೆ. ಎಲಿಜಬೆಥ್‌ ಕುಬ್ಲೆರ್ ತನ್ನ ಡೆಥ್‌ ಅಂಡ್‌ ಡೈಯಿಂಗ್ ಕೃತಿಯಲ್ಲಿ  ಸಾವಿನ ನಿರಾಕರಣೆಯನ್ನು ಶೋಕದ ಮೊದಲ ಹಂತವಾಗಿ ಗುರುತಿಸುತ್ತಾರೆ. ಬದುಕಿನ ಅತ್ಯಂತ ದೊಡ್ಡ ನಷ್ಟವನ್ನು ಎದುರಿಸಲು ಮನಸ್ಸು ಬಳಸುವ ರಕ್ಷಣಾತ್ಮಕ ತಂತ್ರವಿದು. 

ಆದರೆ, ವಾಸ್ತವವು ನಿಚ್ಚಳವಾಗುತ್ತಾ ಹೋದಂತೆ ಶೋಕದ ಎರಡನೆಯ ಹಂತವು ತೆರೆದುಕೊಳ್ಳುತ್ತದೆ. ಆ ಹಂತವೇ ಸಿಟ್ಟು. ದುಃಖವು ಉಂಟುಮಾಡುವ ಅಸಹಾಯಕತೆ, ನೋವಿನಿಂದ ಕಂಗೆಟ್ಟುಹೋಗುವುದನ್ನು ತಪ್ಪಿಸಿಕೊಳ್ಳಲು ಇನ್ನೊಬ್ಬರ ಮೇಲೆ ಸಿಟ್ಟುಮಾಡಿಕೊಳ್ಳಲು ಮನಸ್ಸು ಬಯಸುತ್ತದೆ. ಸಾಮಾನ್ಯವಾಗಿ, ಯಾರ ಮೇಲೆ ಸಿಟ್ಟುಮಾಡಿಕೊಳ್ಳಬೇಕೆಂದು ಗೊತ್ತಾಗದೆ ಹೋದರೆ ಜನರು ಆಗ ದೇವರನ್ನು ದೂಷಿಸುತ್ತಾರೆ. ತಾನು ದುಃಖದಲ್ಲಿರುವಾಗ  ಇನ್ಯಾರೋ ಖುಷಿಯಲ್ಲಿದ್ದಾರೆಂದು ಭಾವಿಸಿ ಕೆಲವೊಮ್ಮೆ ಸಿಟ್ಟುಮಾಡಿಕೊಳ್ಳುತ್ತಾರೆ. ಆ ಕಾರಣಕ್ಕಾಗಿಯೇ ಸಾವಿನ ಮನೆಗೆ ಬಂದ ಜನ ಸಂಬಂಧಿಗಳ ಶೋಕದಲ್ಲಿ ಭಾಗಿಯಾಗಿರುವುದನ್ನು ಖಾತ್ರಿಪಡಿಸುವ ಸಲುವಾಗಿ ವ್ಯಕ್ತ ರೀತಿಯಲ್ಲಿ ದುಃಖಪಡುತ್ತಾರೆ. ದುಃಖ ಶಮನವಾಗುವುದಕ್ಕೆ ಕಾಲದ ಸಹಾಯ ಬೇಕು. ಇದು ಹಲವು ಹಂತಗಳಲ್ಲಿ ನಡೆಯುವುದಾದರೂ ಪುತ್ರ ಶೋಕವು ನಿಶ್ಯೇಶವಾಗಿ ಕೊನೆಗೊಳ್ಳದು.

ಪರೇಶ್‌ ಮೆಸ್ತಾ ಸಾವಿನ ಪ್ರಕರಣವನ್ನು ಸಿ.ಬಿ.ಐ ಆಕಸ್ಮಿಕ ಸಾವು ಎಂದು ಕೊನೆಗೊಳಿಸಿದೆ. ಕೊಲೆ ಎಂಬ ಸಂಶಯದಲ್ಲಿ ನಡೆದ ಈ ತನಿಖೆಯು ಹಲವು ಪುರಾವೆಗಳನ್ನು ಪರಿಶೀಲಿಸಿ ಈ ತೀರ್ಮಾನಕ್ಕೆ ಬಂದಿದೆ. ಎಂಟಿ ಮಾರ್ಟೆಮ್‌ ಡ್ರೋನಿಂಗ್‌ ಅಥವಾ ಮುಳುಗುವ ಮೊದಲಿನ ಸಾವು ಎಂದು ತೀರ್ಮಾನಿಸಲು ಯಾವ ಸಾಕ್ಷ್ಯವೂ ದೊರೆತಿಲ್ಲವೆಂದು ಹೇಳಿದೆ.  ಈ ಲೇಖನದ ಕಾಳಜಿಯಿರುವುದು ಯಾವ ವೈಜ್ಞಾನಿಕ ಸಾಕ್ಷ್ಯಗಳು ಇಂತಹ  ಪರಿಶೋಧನೆಗೆ ಸಹಾಯ ಮಾಡುತ್ತವೆ ಎಂಬುದರಲ್ಲಿ.

ಪ್ರತಿ ವರ್ಷವೂ ಜಗತ್ತಿನಾದ್ಯಂತ ಮೂರು ಲಕ್ಷಕ್ಕೂ ಹೆಚ್ಚು ಜನ ನೀರಿನಲ್ಲಿ ಮುಳುಗಿ ಸಾಯುತ್ತಾರೆ. ಡೋರ್ಲ್ಯಾಂಡ್‌ ಮೆಡಿಕಲ್‌ ಡಿಕ್ಷನರಿಯ ಪ್ರಕಾರ ಮುಳುಗಿ ಸಾಯುವುದೆಂದರೆ ಶ್ವಾಸಕೋಶದಲ್ಲಿ ನೀರು ತುಂಬಿ ಉಸಿರಾಟ ಸಾಧ್ಯವಾಗದೇ ಸಾಯುವುದು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಮುಳುಗಿ ಸಾಯುವುದೆಂದರೆ ದ್ರವದಲ್ಲಿ ಮುಳುಗಿ ಉಂಟಾದ ಉಸಿರಾಟ ಅಸೌಕರ್ಯದಿಂದಾದ ಸಾವು. ನೀರಿನಲ್ಲಿ ಶವ ದೊರೆತ ಮಾತ್ರಕ್ಕೆ ಅದನ್ನು ಮುಳುಗಿ ಉಂಟಾದ ಸಾವು ಎಂದು ತೀರ್ಮಾನಿಸಲಾಗದು. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರಷ್ಟೇ ಅಲ್ಲ, ಬೇರೆ ಬೇರೆ ಸಂಸ್ಥೆಗಳು, ಪ್ರಯೋಗಾಲಯಗಳು, ವಿವಿಧ ಕ್ಷೇತ್ರಗಳ ತಜ್ಞರ ಸುಸಂಘಟಿತ ಪ್ರಯತ್ನವು ಇಂತಹ ಸಾವಿನ ಬಗ್ಗೆ ಖಚಿತವಾದ ತೀರ್ಮಾನಗಳನ್ನು ನೀಡುವಲ್ಲಿ ಸಹಾಯ ಮಾಡುತ್ತವೆ. ಮೆಡಿಕೋ ಲೀಗಲ್‌ ತನಿಖೆದಾರರು, ಫೋರೆನ್ಸಿಕ್‌ ತಜ್ಞರು, ತಾಂತ್ರಿಕ ಪರಿಣಿತರು, ಮೊದಲ ವೈದ್ಯಕೀಯ ಪ್ರತಿಸ್ಪಂದಿಗಳು, ಸೂಕ್ಷ್ಮಾಣುಜೀವಿ ಶಾಸ್ತ್ರಜ್ಞರು ಹೀಗೆ ಹತ್ತು-ಹಲವು ವೃತ್ತಿಪರರ ವರದಿಗಳ ಆಧಾರದ ಮೇಲೆ ಸಾವು ಹೇಗೆ ಉಂಟಾಯಿತು ಎಂಬ ತೀರ್ಮಾನಕ್ಕೆ ಬರಲಾಗುತ್ತದೆ.

ಈ ಲೇಖನವನ್ನೂ ಓದಿ:
ಮನದ ಸೂತಕ ಹೋಗಲಾಡಿಸೋಣ!

ಈಗಾಗಲೆ ಚರ್ಚಿಸಿದಂತೆ ನೀರಿನಲ್ಲಿ ಮುಳುಗಿಸಾಯುವುದೆಂದರೆ ಆಮ್ಲಜನಕದ ಕೊರತೆ ಉಂಟಾಗಿ ಸಾಯುವುದು. ಇದು ಹಲವು ಅಂಗಗಳ ಮೇಲೆ ಪ್ರಭಾವ ಬೀರುವ ಕ್ರೀಯೆ. ನಾವು ಒಮ್ಮೆ ಉಸಿರು ತೆಗೆದುಕೊಂಡಿದ್ದೇವೆಂದರೆ ಇಪ್ಪತೈದು ಸೆಕ್ಸ್ಟಿಲಿಯನ್‌ ಅಣುಗಳನ್ನು ಒಳಗೆಳೆದುಕೊಳ್ಳುತ್ತೇವೆ. ಅಂದರೆ ಇಪ್ಪತೈದರ ಮುಂದೆ ಇಪ್ಪತ್ತೊಂದು ಸೊನ್ನೆಹಾಕಿದರೆ (25,000,000,000,000,000,000,000) ಎಷ್ಟು ಅಣುಗಳಾಗುತ್ತವೋ ಅಷ್ಟು. ಹೀಗೆ ಉಸಿರಾಡಿದ ಗಾಳಿಯು ಶ್ವಾಸನಾಳದ ಮೂಲಕ ಶ್ವಾಸಕೋಶದ ಅತ್ಯಂತ ನವಿರಾದ ಭಾಗವಾದ ಅಲ್ವಿಯೋಲೈಗಳಿಗೆ ತಲುಪುತ್ತದೆ. ಅಲ್ಲಿಂದ ಈ ಲೋಮನಾಳಗಳಿಗೆ ವಿಸರಣೆಗೊಂಡು ರಕ್ತ ಪ್ರವಾಹವನ್ನು ಸೇರಿಕೊಳ್ಳುತ್ತದೆ. ಸಾಕಷ್ಟು ಸಮಯದವರೆಗೆ ಆಮ್ಲಜನಕ ದೊರೆಯದಾಗ ಹಿಪೋಕ್ಸಿಯಾ ಅಥವಾ ಆಮ್ಲಜನಕ ಅಲಭ್ಯತೆ ಉಂಟಾಗಿ ಸಾವು ಸಂಭವಿಸುತ್ತದೆ.

ಪ್ರಜ್ಞೆಯಲ್ಲಿರುವ ಮನುಷ್ಯನೊಬ್ಬ ಆಕಸ್ಮಿಕವಾಗಿ ನೀರಿಗೆ ಬಿದ್ದಾಗ ಎಷ್ಟು ಆಳಕ್ಕೆ ಹೋಗುತ್ತಾನೆ ಎಂಬುದು ಬೀಳುವಾಗಿನ ಚಲನ ಪರಿಮಾಣವನ್ನು ಅವಲಂಬಿಸಿದೆ. ಆನಂತರ ತೇಲುವಿಕೆ ಮತ್ತು ಕೈಕಾಲು ಬಡಿತಗಳಿಂದಾಗಿ ವ್ಯಕ್ತಿ ಮೇಲೆ ಬರುತ್ತಾನೆ. ಮುಖ ನೀರಿನ ಮೇಲೆ ಬಂದಾಗ ಸಹಾಯಕ್ಕಾಗಿ ಕೂಗುತ್ತಾನೆ. ಮತ್ತೆ ಮುಳುಗುವಾಗ ನೀರು ಆತನ ಮೂಗು, ಬಾಯಿಗಳ ಮೂಲಕ ಶ್ವಾಸಕೋಶವನ್ನು ಸೇರುತ್ತದೆ. ಹೀಗೆ ಒಳಸೇರಿದ ನೀರನ್ನು ಹೊರಹಾಕಲು ಮಾಡುವ ಪ್ರಯತ್ನದಲ್ಲಿ ಕೆಮ್ಮುತ್ತಾನೆ. ಸ್ವಲ್ಪ ಮಟ್ಟಿನ ಗಾಳಿ ಹೊರಹೋಗುತ್ತದೆ ಮತ್ತು ಇನ್ನಷ್ಟು ನೀರು ಒಳಸೇರುತ್ತದೆ. ಈಗ ದೇಹದ ತೂಕ ಹೆಚ್ಚುತ್ತದೆ. ವ್ಯಕ್ತಿ ಇನ್ನಷ್ಟು ಮುಳುಗುತ್ತಾನೆ. ಈ ಕ್ರಿಯೆಗಳು ಮತ್ತೆ ಮತ್ತೆ ನಾಲ್ಕೈದು ಬಾರಿ ಪುನರಾವರ್ತನೆಯಾಗುವಾಗ ಶ್ವಾಸಕೋಶದ ಗಾಳಿ ಮತ್ತಷ್ಟು ಹೊರಹೋಗಿ ಇನ್ನಷ್ಟು ನೀರು ತುಂಬಿಕೊಳ್ಳುತ್ತದೆ.

ಶವವೊಂದನ್ನು ನೀರಿನಿಂದ ಹೊರತೆಗೆದ ಮೇಲೆ ಆ ಸಾವು ನೀರಿಗೆ ಬೀಳುವ ಮೊದಲು ಉಂಟಾಯಿತೋ ಅಥವಾ ನಂತರ ಉಂಟಾಯಿತೋ ಎಂಬುದನ್ನು ಪತ್ತೆ ಮಾಡಲು ದೇಹದ ಹೊರಗಿನ ಚಿನ್ಹೆಗಳು, ದೇಹದ ಒಳಗಿನ ಚಿನ್ಹೆಗಳು, ಜೀವರಾಸಾಯನಿಕ ಮತ್ತು ಜೀವ ಭೌತಿಕ ಪರೀಕ್ಷೆಗಳು ಮಾತ್ರವಲ್ಲ ಮುಳುಗಿದಾಗ ದೇಹದ ಒಳಸೇರಿದ ಡಯಟಮ್‌ ಎಂಬ ಸೂಕ್ಷ್ಮ ಜೀವಿಗಳೂ ಸಾಕ್ಷ್ಯವಾಗುತ್ತವೆ.



ಡಯಟಮ್‌ ಎಂಬ ಸೂಕ್ಷ್ಮಾಣುಗಳು ನೀರಿನಲ್ಲಿ ವಾಸಿಸುವ ಸ್ವಪೋಷಕ ಜೀವಿಗಳು. ಇಪ್ಪತ್ತು ಮೈಕ್ರಾನ್‌ ನಿಂದ ಇನ್ನೂರು ಮೈಕ್ರಾನ್‌ ವ್ಯಾಸದಲ್ಲಿರುವ ಈ ಜೀವಿಗಳು ಕೆರೆ ಸರೋವರಗಳ ದ್ಯುತಿವಲಯದಲ್ಲಿ ಅಂದರೆ ಬೆಳಕು ತಲುಪಬಲ್ಲಷ್ಟು ಆಳದವರೆಗೆ ಇರುತ್ತವೆ. ಇವುಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಪ್ರಬೇಧಗಳಿವೆ. ನೀರಿನಿಂದ ಹೊರತೆಗೆದ ಶವದ ಅಂಗಾಂಗಗಳಿಂದ ಡಯಟಮ್‌ ಗಳನ್ನು ಸಂಗ್ರಹಿಸಲಾಗುತ್ತದೆ. ಶವ ದೊರೆತ ಕೆರೆ, ಸರೋವರ, ನದಿಗಳಿಂದಲೂ ಡಯಟಮ್‌ ಗಳನ್ನು ಸಂಗ್ರಹಿಸಲಾಗುತ್ತದೆ.

ಮುಳುಗಿ ಸಾಯುವ ಪ್ರಕರಣಗಳಲ್ಲಿ ದೇಹದಿಂದ ನೀರನ್ನು ಬಲವಂತವಾಗಿ ಹೊರಹಾಕುವ ಪ್ರಯತ್ನ ನಡೆಯುವುದರಿಂದ ಶ್ವಾಸಕೋಶದ ಅಲ್ವಿಯೋಲೈ ಭಾಗದ ಸೂಕ್ಷ್ಮ ಗೋಡೆಗಳು ಹರಿದುಹೋಗುತ್ತವೆ. ಇದರಿಂದ ಡಯಟಮ್‌ ಗಳು ರಕ್ತ ಸೇರಿ ಕಿಡ್ನಿ, ಪಿತ್ಥಕೋಶ, ಮೆದುಳು, ಮೂಳೆಮಜ್ಜೆಗಳನ್ನು ಸೇರುತ್ತವೆ. ನೀರಿಗೆ ಬಿದ್ದ ಮೇಲೆ ಸಾವು ಸಂಭವಿಸಿದ್ದರೆ, ಶವ ದೊರೆತ ಸ್ಥಳದ ನೀರಿನಲ್ಲಿರುವ ಶೇಖಡಾ ಹತ್ತರಷ್ಟು ಸಾಂದ್ರತೆಯಲ್ಲಿ ಶ್ವಾಸಕೋಶದಲ್ಲಿ ಡಯಟಮ್‌ ಗಳು ಪತ್ತೆಯಾಗುತ್ತವೆ. ಶ್ವಾಸಕೋಶದ ಡಯಟಮ್‌ ಸಾಂದ್ರತೆಯ ಹತ್ತರಷ್ಟು ಅಂಗಾಂಗಗಳಲ್ಲಿ ದೊರೆಯುತ್ತವೆ. ಆಯಾ ಕೆರೆ, ನದಿಯ ನೀರಿನ ಆಮ್ಲೀಯತೆ, ತಾಪಮಾನ, ಲವಣ ಸಾಂದ್ರತೆಯ ಆಧಾರದ ಮೇಲೆ ಕೆಲವು ಪ್ರಬೇಧದ ಡಯಟಮ್‌ ಗಳು ಹೆಚ್ಚಿಗೆ ಇರುತ್ತವೆ. ಆದುದರಿಂದ, ದೇಹದಲ್ಲಿ ದೊರೆತ ಡಯಾಟಮ್‌ ಪ್ರಬೇಧಗಳ ಸಾಂದ್ರತೆಗೂ ಕೆರೆಯಲ್ಲಿರುವ ಡಯಾಟಮ್‌ ಪ್ರಬೇಧಗಳ ಸಾಂದ್ರತೆಗೂ ಹೋಲಿಕೆ ಮಾಡಲಾಗುತ್ತದೆ.

ನೀರಿಗೆ ಬೀಳುವ ಮೊದಲೇ ಸಾವು ಉಂಟಾಗಿದ್ದರೆ ಅಂಗಾಂಶಗಳಲ್ಲಿ ಅದರಲ್ಲೂ ಮೂಳೆಮಜ್ಜೆಗಳಲ್ಲಿ ಡಯಟಮ್‌ ಗಳು ಸೇರುವ  ಸಾಧ್ಯತೆ ಇಲ್ಲವೇ ಇಲ್ಲ ಎಂಬಷ್ಟು ಕ್ಷೀಣ.


ಹೀಗೆ, ಡಯಟಮ್‌ ಎಂಬ ಸೂಕ್ಷ್ಮ ಜೀವಿಯು ಸಾವಿನ ಸಾಕ್ಷ್ಯ ನುಡಿಯಲು ಕೋರ್ಟು ಕಟೆಕಟೆಯನ್ನು ಹತ್ತುತ್ತದೆ.


Sunday, 10 July 2022

ಮನದ ಸೂತಕವನ್ನು ಹೋಗಲಾಡಿಸೋಣ.


ಹೆಣ್ಣು ಹೆಣ್ಣಾದೊಡೆ ಗಂಡಿನ ಸೂತಕ

ಗಂಡು ಗಂಡಾದೊಡೆ ಹೆಣ್ಣಿನ ಸೂತಕ

ಮನದ ಸೂತಕ ಹಿಂಗಿದೊಡೆ

ತನುವಿನ ಸೂತಕಕ್ಕೆ ತೆರಹುಂಟೇ ಅಯ್ಯ?

ಮೊದಲಿಲ್ಲದ ಸೂತಕಕ್ಕೆ ಮರುಳಾಯಿತ್ತು ಜಗವೆಲ್ಲ

ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನೆಂಬ

ಗುರುವಂಗೆ ಜಗವೆಲ್ಲ ಹೆಣ್ಣು ನೋಡಾ!

-ಅಕ್ಕಮಹಾದೇವಿ












ಹದಿವಯಸ್ಸಿನ ಹುಡುಗಿಯರಿಗೆ ಮುಟ್ಟಿನ ಕಪ್ಪುಗಳನ್ನು ನೀಡುವ ಕಾರ್ಯಕ್ರಮಕ್ಕೆ ಸರಕಾರ ಚಾಲನೆ ನೀಡಿದೆ. ಮೊದಲ ಹಂತದಲ್ಲಿ ಚಾಮರಾಜ ನಗರ ಮತ್ತು ದಕ್ಷಿಣ ಕನ್ನಡದ ಹುಡುಗಿಯರಿಗೆ ಮುಟ್ಟಿನ ಕಪ್ಪುಗಳು ದೊರೆಯುತ್ತವೆ . ಮೈತ್ರಿ ಎಂಬ ಹೆಸರಿನ ಈ ಕಪ್ಪುಗಳು ಪ್ರೌಢಾವಸ್ಥೆಗೆ ಕಾಲಿಡುತ್ತಿರುವ ರಾಜ್ಯದ ಎಲ್ಲ ಕಿಶೋರಿಯರಿಗೂ ತಲುಪಲಿದೆ. ಈಗ ಮುಟ್ಟಿನ ಕುರಿತು ಮಾತನಾಡಬೇಕಿದೆ.  ಮುಟ್ಟಿನ ಬಗ್ಗೆ ಮಾತನಾಡಲು ಜನರು ಹಿಂಜರಿಯುವ ಕಾಲದಲ್ಲಿ  ಈ ಕುರಿತು ಮತ್ತೆ ಮತ್ತೆ ಮಾತನಾಡುವುದೇ ಮುಟ್ಟಿಗಿರುವ ಸಾಮಾಜಿಕ ಸಂಕೋಚವನ್ನು ಪರಿಹರಿಸುವ ದಾರಿ.

ಕರಾವಳಿ ಮುಂಜಾವು ಅಂಕಣ: ಈ ಲೇಖನವನ್ನೂ ಓದಿ: 

 


ಮತ್ತೆ ಬಂದ ಜೇನು ಹುಳುಗಳು 

ಹೊಸ ಜೀವ ಸೃಷ್ಟಿಯೆಂಬುದು ಗಂಡು ಮತ್ತು ಹೆಣ್ಣು‌ ಲಿಂಗಾಣುಗಳ ಸಮಾಗಮದೊಂದಿಗೆ ಆರಂಭವಾಗುತ್ತದೆ. ಪ್ರತಿ ಹೆಣ್ಣು ಮಗುವೂ ಹುಟ್ಟುತ್ತಲೆ ನಿರ್ದಿಷ್ಟ ಸಂಖ್ಯೆಯ ಹೆಣ್ಣು ಲಿಂಗಾಣುಗಳನ್ನು ಅಥವಾ ಅಂಡಗಳನ್ನು ಹೊತ್ತೇ ಹುಟ್ಟಿರುತ್ತಾಳೆ. ಹೆಣ್ಣು ಮಗು ಹನ್ನೆರಡೋ ಹದಿಮೂರೋ ವಯಸ್ಸು ತಲುಪುತ್ತಲೆ ಆಕೆಯ ದೇಹದಲ್ಲಿ ಬಿಡುಗಡೆಯಾಗುವ ಕೆಲವು ರಾಸಾಯನಿಕ ಪ್ರಚೋದಕಗಳು  ಆಕೆಯ ಒಂದು ಜೊತೆ ಅಂಡಾಶಯಳಲ್ಲಿ ಯಾವುದೋ ಒಂದರಿಂದ ಒಂದು ಅಂಡವನ್ನು ಬಿಡುಗೊಡೆಗೊಳಿಸುತ್ತದೆ. ಆ ಒಂದು ಅಂಡ ಅಲ್ಲಿಂದ ಪ್ರಯಾಣಮಾಡಿ ಗರ್ಭಾಶಯವನ್ನು ತಲುಪಬೇಕು. ಒಂದೊಮ್ಮೆ ಗಂಡಿನೊಂದಿಗೆ ಲೈಂಗಿಕ ಸಂಪರ್ಕ ಉಂಟಾದಲ್ಲಿ ಗರ್ಭಾಶಯವನ್ನು ಪ್ರವೇಶಿಸಲಿರುವ ಗಂಡು ಲಿಂಗಾಣುಗಗಳಲ್ಲಿ ಒಂದರೊಡನೆ  ಜೊತೆಗೂಡಿ ಜೀವಸೃಷ್ಟಿ ಶುರುವಾಗಬೇಕಲ್ಲ? ಇದಕ್ಕೆಲ್ಲ ಸ್ವಲ್ಪ ಸಿದ್ಧತೆ ಬೇಕು. ಗಂಡು ಮತ್ತು ಹೆಣ್ಣು ಲಿಂಗಾಣುಗಳ ಸಮಾಗಮದ ನಂತರ ಫಲಿತಗೊಳ್ಳುವ ಜೀವಾಂಕುರವು ನೆಲೆನಿಲ್ಲಲು, ಪೋಷಣೆಯನ್ನು ಪಡೆಯಲು ಗರ್ಭಾಶಯದ ಒಳಗೋಡೆಯ ಮೇಲೆ ಸಾಕಷ್ಟು ಸಿದ್ಧತೆಗಳು ನಡೆಯಬೇಕು. ಈ ಸಿದ್ಧತೆಯಲ್ಲಿ ಗರ್ಭಾಶಯದ ಒಳಗೋಡೆಯ ಮೇಲೆ ನವಿರಾದ ರಕ್ತನಾಳಗಳು ಬೆಳೆದು ಪೋಷಣೆಯನ್ನು ಒದಗಿಸುವ ಮೆತ್ತನೆಯ ಹಾಸಿಗೆಯೊಂದನ್ನು ಸೃಷ್ಟಿಸುತ್ತವೆ. ಸಿದ್ಧತೆಗೆ ನಾಲ್ಕು ವಾರಗಳೇ ಬೇಕಾಗುತ್ತವೆ.. ಆದರೆ, ಇಷ್ಟಕ್ಕೆ ಗಂಡು ಲಿಂಗಾಣುವು ಲೈಂಗಿಕ ಕ್ರಿಯೆಯ ಮೂಲಕ ಹೆಣ್ಣು ದೇಹವನ್ನು ಪ್ರವೇಶಿಸಲೇ ಬೇಕೆಂದಿಲ್ಲವಲ್ಲ? ಲೈಂಗಿಕ  ಸಮಾಗಮವನ್ನು ಗಂಡು ಮತ್ತು ಹೆಣ್ಣುಗಳು ನಿರ್ಧರಿಸಬೇಕು. ಹಲವು ಸಾಮಾಜಿಕ ನಿಭಂದನೆಗಳು ಈ ನಿರ್ಧಾರದ ಮೇಲೆ ಪ್ರಭಾವ ಬೀರುತ್ತವೆ. ಅಂಡವು ಫಲಿತಗೊಳ್ಳದಾಗ ಗರ್ಭಕೋಶದಲ್ಲಾದ ಈ ಎಲ್ಲ ಸಿದ್ಧತೆಗಳು ವ್ಯರ್ಥವಾಗುತ್ತವೆ. ಆಗ ಗರ್ಭಕೋಶದ ಹಾಸಿಗೆ ಕಳಚಿಕೊಂಡು ಮುಟ್ಟಿನ ಸ್ರಾವವಾಗಿ ಹೊರಹೋಗುತ್ತದೆ.ಈ ಕ್ರಿಯೆ ನಾಲ್ಕೈದು ವಾರಗಳಿಗೊಮ್ಮೆ ಪುನರಾವರ್ತನೆ ಆಗುತ್ತಲೇ ಇರುತ್ತದೆ. ಋತುಸ್ರಾವವು ನಾಲ್ಕು-ಐದು ದಿನಗಳವರೆಗೂ ಉಂಟಾಗುತ್ತದೆ. ಹೆಣ್ಣು ಋತುಮತಿಯಾಗುವುದು ಒಂದು ಜೈವಿಕ ಕ್ರಿಯೆ. ಜೀವಸೃಷ್ಟಿಯ ಉದ್ಧೇಶವೂ ದೈವಿಕ.

ಜೀವಾಂಕುರವಾಗುವುದು  ಗರ್ಭಾಶಯದಲ್ಲಿ. ಆದರೆ, ಗರ್ಭ ಧರಿಸುವ ಹೆಣ್ಣು ಗರ್ಭಗುಡಿಗೆ ಹೋಗುವಂತಿಲ್ಲ. ಮುಟ್ಟಾಗಿರಲಿ, ಇಲ್ಲದಿರಲಿ, ಧರ್ಮ ಯಾವುದೇ ಇರಲಿ, ಗರ್ಭಗುಡಿಗೆ  ಹೆಣ್ಣಿನ ಪ್ರವೇಶ ನಿಷಿದ್ಧ. ಶಬರಿಮಲೆಯ ಅಯ್ಯಪ್ಪನ ದೇವಾಲಯ ಮಂಡಲಿಯ ಅಧ್ಯಕ್ಷರು ‘ಮಹಿಳೆಯರು ಮುಟ್ಟಾಗಿದ್ದಾರಾ ಎಂಬುದನ್ನು ಪತ್ತೆಹಚ್ಚುವ ಮೆಷಿನ್ ಬರಲಿ, ಆಮೇಲೆ ಮಹಿಳೆಯರನ್ನು ದೇವಾಲಯದೊಳಗೆ ಬಿಡುವ ಬಗ್ಗೆ ಯೋಚಿಸೋಣ’ ಎಂಬರ್ಥದ ಮಾತುಗಳನ್ನು ಆಡಿದ್ದರು. ಇದು ಧರ್ಮದ ಮಾತೂ ಅಲ್ಲ. ಸಮಾನತೆಯನ್ನು ಖಾತರಿಪಡಿಸುವ ನಮ್ಮ ಸಂವಿಧಾನದ ಮಾತೂ ಅಲ್ಲ. ಇದು ಮುಟ್ಟಿನ ಬಗ್ಗೆ ಇನ್ನೂ ನಮ್ಮ ಸಮಾಜದಲ್ಲಿ ನೆಲೆಯೂರಿರುವ ಅಜ್ಞಾನದ ಮಾತು.

ಮುಟ್ಟಿನ ಬಗ್ಗೆ ಹೆಣ್ಣು ಮಕ್ಕಳಿಗೆ ತಿಳುವಳಿಕೆ ನೀಡುವುದು ಎಷ್ಟು ಅವಶ್ಯಕವೋ ಗಂಡು ಮಕ್ಕಳಿಗೆ ತಿಳಿಸುವುದೂ ಅಷ್ಟೇ ಅವಶ್ಯಕ. ಇತ್ತೀಚೆಗೆ, ಒಂದು ಸಂಸ್ಥೆಯವರು ಉಚಿತವಾಗಿ ಸ್ಯಾನಿಟರಿ ಪ್ಯಾಡು ನೀಡಲು ಶಾಲೆಗೆ ಬಂದಿದ್ದರು. ಅದನ್ನು ಹಂಚುವಾಗ ಗಂಡುಮಕ್ಕಳು ಹೊರಹೋಗಲಿ ಎಂದು ಸೂಚಿಸಿದರು. “ ಬೇಡ, ಅವರೂ ಇರಲಿ” ಎಂದೆ. ಗಂಡು ಮಕ್ಕಳಿಗೂ ಮುಟ್ಟಿನ ತಿಳುವಳಿಕೆ ದೊರೆಯಿತು. ಹೆಣ್ಣು ಮಕ್ಕಳ ಸಂಕೋಚವೂ ಸಾಕಷ್ಟು ಕಡಿಮೆಯಾಯಿತು. ಕಾರ್ಯಕ್ರಮದ ಕೊನೆಯಲ್ಲಿ, ಸ್ಯಾನಿಟರಿ ಪ್ಯಾಡು ಹಿಡಿದುಕೊಂಡ ಹುಡುಗಿಯರ ಫೋಟೋ ಬೇಕೆಂದರು. “ಈಗಲಾದರೂ, ಹುಡುಗರು ಹೊರಹೋಗಲಿ ಅಲ್ವೇ” ಎಂದು ನನ್ನಲ್ಲಿ ಕೇಳಿದರು. ಆಗಲೂ ಬೇಡ ಎಂದೆ. ಹುಡುಗಿಯರು ಸ್ಯಾನಿಟರಿ ಪ್ಯಾಡ್‌ ಹಿಡಿದುಕೊಂಡು  ಅವರ ಕಾರ್ಯಕ್ರಮದಲ್ಲಿ ರೂಪದರ್ಶಿಗಳಾದರು. ಹುಡುಗರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.” ಎಷ್ಟು ಹುಡುಗರು ನಿಮ್ಮ ಅಮ್ಮನಿಗೋ ಅಕ್ಕನಿಗೋ ಅಂಗಡಿಯಿಂದ ಸ್ಯಾನಿಟರಿ ಪ್ಯಾಡು ತಂದುಕೊಟ್ಟಿದ್ದೀರಿ?” ಎಂದು ಪ್ರಶ್ನಿಸಿದೆ. ಕೆಲವರಷ್ಟೇ ಕೈ ಎತ್ತಿದರು. ಕೈ ಎತ್ತದಿದ್ದ ಒಬ್ಬ ಹುಡುಗನನ್ನು ಕೇಳಿದೆ., “ಕೇಳಿದ್ದರೆ ತಂದುಕೊಡುತ್ತಿದ್ದೆ” ಎಂದನು.. ಕ್ಲಾಸಿನಲ್ಲಿದ್ದ ಅವಳಿ ಮಕ್ಕಳಲ್ಲಿ ಒಬ್ಬ ಹುಡುಗ ಕೈಯೆತ್ತಿರಲಿಲ್ಲ. ಅವಳಿ  ಹುಡುಗಿ ಮಧ್ಯಪ್ರವೇಶಿಸಿ “ ನನಗೆ ಪ್ಯಾಡು ತಂದುಕೊಡುವವ ಅವನೇ, ಆದರೂ ಕೈ ಎತ್ತಿಲ್ಲ” ಎಂದು ದೂರಿದಳು. ಹೊಸ ತಲೆಮಾರು ಬದಲಾಗುತ್ತಿದೆ. ಶಬರಿಮಲೈ ಘಟನೆಯ ನಂತರ ಪಾಟಿಯಾಲದ ಸರ್ಕಾರಿ ಕಾಲೇಜಿನಲ್ಲಿ ಪದವಿ ಓದುತ್ತಿದ್ದ ನಿಖಿತಾ ಅಜಾದ್‌ ಎಂಬ ಯುವತಿ #Happy_to_Bleed ಎಂಬ ಹ್ಯಾಷ್‌ ಟ್ಯಾಗಿನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮುಟ್ಟಿನ ಕುರಿತು ಮಾತನಾಡಲು ಹೆಣ್ಣುಮಕ್ಕಳಿಗೆ ಕರೆನೀಡಿದರು. ಇದೊಂದು ಆಂದೋಲನವಾಗಿ ರೂಪುಗೊಂಡಿತು. ಯುವತಿಯರು ತಮ್ಮ ಅನುಭವ ಮತ್ತು ಆಶಯಗಳನ್ನು ನಿರ್ಬಿಡೆಯಾಗಿ ಹಂಚಿಕೊಂಡರು. ಈ ಆಂದೋಲನವು ಗಂಡಾಳಿಕೆಯ ಜಗತ್ತನ್ನು ಹೆಣ್ಣಿನ ಕಣ್ಣುಗಳಿಂದ ನೋಡುವ ದೃಷ್ಟಿಯನ್ನು ಒದಗಿಸಿತು.

ಮುಟ್ಟಿನ ಸ್ರಾವದಲ್ಲಿರುವುದು ದೇಹದಲ್ಲಿ ಹರಿಯುವ  ರಕ್ತವೇ. ಜೊತೆಗೆ, ಇತರ ಅಂಗಾಂಶಗಳು ಇರುತ್ತವೆ ಹೊರಗಿನ. ಆಮ್ಲಜನಕದೊಡನೆ ಸಂಯೋಜನೆಗೊಂಡು ಸ್ರಾವದ ಬಣ್ಣವು ಕಂದು-ಕೆಂಪು ಬಣ್ಣಕ್ಕೆ ತಿರುಗಿರುತ್ತದೆ. ಅದರಲ್ಲಿ ಮಲಿನವಾದದ್ದು ಯಾವುದೂ ಇಲ್ಲ. ಮಲ ಮೂತ್ರ ವಿಸರ್ಜನೆಗಳೂ ಮಲಿನವಲ್ಲ. ಜೈವಿಕ ಕ್ರಿಯೆಗಳಷ್ಟೆ. ಮುಟ್ಟಿನ ಸಮಯದಲ್ಲಿ ಸ್ನಾನ ಮಾಡಬಾರದೆಂಬ ಕಟ್ಟಳೆಯೂ ವೈಜ್ಞಾನಿಕವಲ್ಲ. ಬಿಸಿನೀರು ಸ್ನಾನವು ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಮುಟ್ಟಿನ ನೋವನ್ನು ಕಡಿಮೆ ಮಾಡುತ್ತದೆ. ಮುಟ್ಟಿನ ಸಮಯದಲ್ಲಿ ಹೆಣ್ಣು ಮಕ್ಕಳು ಹೊರಗಿರುವುದನ್ನು ಅವರಿಗೆ ನೀಡಿರುವ ವಿಶ್ರಾಂತಿಯೆಂದು ಕೆಲವರು ಸಮರ್ಥಿಸಿಕೊಳ್ಳುತ್ತಾರೆ. ಆದರೆ, ದೈಹಿಕ ಚಟುವಟಿಕೆಗಳು ಸೆರಟೋನಿನ್‌ ಎಂಬ ಚೋದಕ ದೃವ್ಯದ ಸೃವಿಕೆಗೆ ಕಾರಣವಾಗುತ್ತವೆ. ಈ ದೃವ್ಯವು ದೇಹದಲ್ಲಿ  ಹರಿದಾಡಿ ಖುಷಿಗೆ ಕಾರಣವಾಗುತ್ತದೆ. ನಿದ್ದೆ, ಜೀರ್ಣಕ್ರೀಯೆಗಳು ಸುಲಲಿತಗೊಳ್ಳುತ್ತವೆ.

ಮುಟ್ಟು, ಮುಟ್ಟಿನ ನೋವು, ಮುಟ್ಟಿನ ಕುರಿತಾದ ತಪ್ಪು ಕಲ್ಪನೆಗಳಷ್ಟೇ ಹೆಣ್ಣನ್ನು ಪೀಡಿಸುವುದಲ್ಲ, ಮುಟ್ಟನ್ನು ನಿರ್ವಹಿಸಲು ಬಳಸುವ ಸ್ಯಾನಟರಿ ಪ್ಯಾಡುಗಳನ್ನು ನಿರ್ವಹಿಸುವುದೂ  ಸವಾಲೇ ಸರಿ. ಮುಟ್ಟಿನ ಕಪ್ಪುಗಳು  ಹೆಣ್ಣುಮಕ್ಕಳನ್ನು ಪ್ಯಾಡುಗಳ ರಗಳೆಯಿಂದ ಪಾರುಮಾಡಬಲ್ಲದು. ಸಿಲಿಕೋನಿನಿಂದ ತಯಾರಿಸಿದ ಮುಟ್ಟಿನ ಕಪ್ಪುಗಳನ್ನು ಮರುಬಳಕೆ ಮಾಡಬಹುದು. ಈ ಕಪ್ಪು ಋತುಸ್ರಾವವನ್ನು ಹೀರುವುದಿಲ್ಲ;  ಅದನ್ನು ಸಂಗ್ರಹಿಸುತ್ತದೆ. ಸೂಕ್ತ ಸ್ವಚ್ಛತಾ ವಿಧಾನವನ್ನು ಬಳಸಿ ಕಪ್ಪನ್ನು ಮತ್ತೆ ಮತ್ತೆ ಬಳಸಬಹುದು. ಪ್ಯಾಡುಗಳಲ್ಲಿ ಪ್ಲಾಸ್ಟಿಕ್‌ ಇರುವುದರಿಂದ ಅವು ನೂರಾರು ವರ್ಷಗಳ ವರೆಗೆ ಕೊಳೆಯದೆ ಉಳಿಯುತ್ತವೆ. ಮುಟ್ಟಿನ ಕಪ್ಪುಗಳು ಮಹಿಳಾಸ್ನೇಹಿ ಅಷ್ಟೇ ಅಲ್ಲ, ಪರಿಸರ ಸ್ನೇಹಿ ಕೂಡಾ..

ಮುಟ್ಟಿನ ಕಪ್ಪುಗಳು ಹೊಸದಾದರೂ ಅವುಗಳನ್ನು ನಿರ್ವಹಿಸುವ ವಿಧಾನವನ್ನು ಹೆಣ್ಣುಮಕ್ಕಳು ಬೇಗನೆ ಕಲಿಯಬಲ್ಲರು. ಹಳೆಯ ನಂಬಿಕೆಗಳನ್ನು ನಿರ್ವಹಿಸುವುದು ಈಗಲೂ ಸವಾಲೇ!

 ಕರಾವಳಿ ಮುಂಜಾವು ಅಂಕಣ

 


Monday, 20 June 2022

ಬಿಳಿ ಬಣ್ಣ ಶ್ರೇಷ್ಟವೆಂಬ ವ್ಯಸನವು ಜಾತಿ ತಾರತಮ್ಯದಷ್ಟೇ ಅಮಾನವೀಯ

"ಚರ್ಮದ ಬಣ್ಣದ ಕಾರಣಕ್ಕಾಗಿ ತಾರತಮ್ಯ ನಡೆಯುತ್ತದೆ. ತಿಳಿ ಮೈಬಣ್ಣ ಶ್ರೇಷ್ಠವೆಂಬ ಅಹಮಿಕೆಯೂ, ಗಾಢ ಬಣ್ಣ ಕುರೂಪವೆಂಬ ಕೀಳರಿಮೆಯೂ ಬೇಡ” 

ಹೀಗೆನ್ನುತ್ತಾ ಫೇರನೆಸ್‌ ಉತ್ಪನ್ನವೊಂದರ ಎರಡು ಕೋಟಿ ರೂಪಾಯಿಗಳ ಜಾಹಿರಾತು ಒಪ್ಪಂದವನ್ನು ತಿರಸ್ಕರಿಸಿ ಬಹುಭಾಷಾ ನಟಿ ಸಾಯಿಪಲ್ಲವಿ ಸುದ್ದಿಯಾಗಿದ್ದರು. ಅವರ ತರ್ಕ ಸರಳವಾಗಿದೆ- ನಿಗ್ರೋಗಳಿಗೆ ತಮ್ಮದೇ  ಮೈಬಣ್ಣ ಇರುವಂತೆ, ಮಂಗೂಲಿಯನ್ನರಿಗೆ, ಕಕೇಶಿಯನ್ನರಿಗೆ, ಆಸ್ಟ್ರೇಲಿಯನ್ನರಿಗೆ ತಮ್ಮದೇ ಬಣ್ಣದ ಚರ್ಮ ಇರುತ್ತದೆ. ಭಾರತೀಯರಿಗೂ ಕೂಡಾ ತಮ್ಮದೇ ಮೈಬಣ್ಣವಿದೆ ಅಷ್ಟೆ. ದ್ರಾವಿಡಿಯನ್ನರ ಬಣ್ಣ ಉತ್ತರದ ಜನರ ಬಣ್ಣಕ್ಕಿಂತ ತುಸು ಗಾಢವಿರಬಹುದು ಅದು ನಮ್ಮ ಮೈಬಣ್ಣ. ಬ್ರಿಟೀಷರನ್ನು ಈ ದೇಶದಿಂದ ಹೊರದಬ್ಬುವ ದೀರ್ಘ ಹೋರಾಟದಲ್ಲಿ ಈ ದೇಶದ ಎಲ್ಲ ಮೈಬಣ್ಣದವರೂ ಜೊತೆಗೂಡಿದ್ದರು. ಎಂಟು ಧರ್ಮದ, ನಾಲ್ಕು ಸಾವಿರ ಜಾತಿಯ, ಇನ್ನೂರೈವತ್ತು ಭಾಷೆಯ ಜನರು,  ಅದೆಷ್ಟೋ ಉಪಭಾಷೆಯನ್ನು ಮಾತನಾಡುವವರು, ಇನ್ನೆಷ್ಟೋ ವಿಶಿಷ್ಟ ಆಚರಣೆಗಳನ್ನು ಅನುಸರಿಸುವವರು, ವಿಭಿನ್ನ ಪಂಥದವರು. ನೂರಾರು ಬುಡಕಟ್ಟು ಪಂಗಡವರು  ಒಂದಾಗಿ ಬ್ರಿಟೀಷರನ್ನು ಎದುರಿಸಿ ಗೆದ್ದಿದ್ದೆವು. ಅವರೇನೋ ಹೊರಟುಹೋದರು. ಆದರೆ, ಅವರು ಬಿಟ್ಟು ಹೋದ ಬಿಳಿ ಮೈಬಣ್ಣ ಶ್ರೇಷ್ಟವೆಂಬ ವ್ಯಸನ ಇಲ್ಲೇ ಇದೆ. ಅದು ಒಂದು ಸಾಮಾಜಿಕ ಉಪಟಳವಾಗಿ ಕಾಡುತ್ತಿದೆ. 

ಅಮೇರಿಕದ ಮಿನಾಪೋಲಿಸ್ ಪಟ್ಟಣದಲ್ಲಿ 2020 ರ ಮೇ 25 ರಂದು ಕಪ್ಪು ವರ್ಣೀಯರಾದ ಜಾರ್ಜ್ ಫ್ಲಾಯ್ಡ್ ಎಂಬವರನ್ನು  ಬಿಳಿ ಬಣ್ಣದ ಪೋಲೀಸ್ ಅಧಿಕಾರಿ, ರಸ್ತೆಯಲ್ಲಿ ತಡೆದು ಕಾರಿನಿಂದ ಹೊರಗೆಳೆದು ಕಾಲಿನಲ್ಲೇ ಕುತ್ತಿಗೆ ಓತ್ತಿ ಕೊಂದಿದ್ದ. ಈ ಜನಾಂಗೀಯ ದ್ವೇಷದ ವಿರುದ್ಧ ಜಗತ್ತಿನಾದ್ಯಂತ ಆ ನಂತರ ಪ್ರತಿಭಟನೆಗಳು ನಡೆದಿದ್ದವು. ಫೇರ್ ಎನ್ನುವ ಪದವೇ ಜನಾಂಗೀಯ ತಾರತಮ್ಯದಿಂದ ಕೂಡಿದೆ ಎಂಬ ಕಾರಣಕ್ಕಾಗಿ ಯೂನಿಲಿವರ್ ಸಂಸ್ಥೆ ತನ್ನ 'ಫೇರ್ ಎಂಡ್ ಲವ್ಲಿ' ಎಂಬ ಉತ್ಪನ್ನದ ಹೆಸರನ್ನು 'ಗ್ಲೋ ಎಂಡ್ ಲವ್ಲಿ' ಎಂದು ಬದಲಿಸಿತು. ಭಾರತದ ದೊಡ್ಡ ಮದುವೆ ದಲ್ಲಾಳಿ ವೆಬ್ ಸೈಟಾದ 'ಶಾದಿ ಡಾಟ್ ಕಾಮ್' ತನ್ನ ಫಿಲ್ಟರ್ ಸೌಕರ್ಯದಿಂದ 'ಫೇರ್' ಎಂಬ ಸುಳಿವು ಪದವನ್ನು ತೆಗೆದುಹಾಕಿತು.



ಚರ್ಮದ ಬಣ್ಣಕ್ಕೆ ಮೆಲಾನಿನ್‌ ಎಂಬ ವರ್ಣಕ ಕಾರಣ. ಚರ್ಮ, ಕೂದಲು, ಕಣ್ಣಿನ ಬಣ್ಣದ ಮೂಲಕ ಮಾನವ ಪ್ರಬೇಧವು ಹಲವು ಜನಾಂಗಗಳಾಗಿ ಗುರುತಿಸಲ್ಪಟ್ಟಿರುವುದರಲ್ಲಿ ಈ ವರ್ಣಕದ ಪಾತ್ರ ದೊಡ್ಡದು. ನಮ್ಮ ದೇಹದಲ್ಲಿರುವ ಮೆಲನೋಸೈಟುಗಳೆಂಬ ಜೀವಕೋಶಗಳು ಈ ವರ್ಣಕವನ್ನು ಉತ್ಪಾದಿಸುತ್ತವೆ.  ಮೆಲನೋಸೈಟುಗಳು  ಎಲ್ಲರಲ್ಲೂ ಇವೆ. ಎಲ್ಲರಲ್ಲೂ ಬಹುತೇಕ ಸಮಾನ ಸಂಖ್ಯೆಯಲ್ಲೇ ಇವೆ. ಆದರೆ, ಅವು ತಯಾರಿಸುವ ಮೆಲಾನಿನ್‌ ವರ್ಣಕಗಳ ಪ್ರಮಾಣ ಬೇರೆ ಬೇರೆ ಜನಾಂಗದ ಜನರಲ್ಲಿ ಬೇರೆಯಾಗಿದೆ. ಕಡಿಮೆ ಮೆಲಾನಿನ್‌ ಉತ್ಪತ್ತಿಯಾದರೆ, ನಿಮ್ಮದು ತಿಳಿಬಣ್ಣ, ಹೆಚ್ಚು ಉತ್ಪತ್ತಿಯಾದರೆ ಕಪ್ಪು ಬಣ್ಣ. ನಮಗೆಷ್ಟು ಮೆಲಾನಿನ್‌ ತಯಾರಿಸಬೇಕು ಎಂಬುದನ್ನು ನಾವು ನಿರ್ಣಯಿಸಲಾರೆವು. ಇಂತಿಷ್ಟೇ ವರ್ಣಕವನ್ನು ಮೆಲಾನೋಸೈಟುಗಳು ನಮ್ಮಲ್ಲಿ ಉತ್ಪಾದಿಸಬೇಕೆಂಬ  ಆದೇಶ ಎಂದೋ ಆಗಿಹೋಗಿದೆ. ತಲೆಮಾರಿನಿಂದ ತಲೆಮಾರಿಗೆ  ಈ ಆದೇಶವನ್ನು ನಮ್ಮ ವಂಶವಾಹಿಗಳಲ್ಲಿರುವ  ಜೀನುಗಳು ಹೊತ್ತೊಯ್ಯುತ್ತಾ ಬಂದಿವೆ.

ಈ ಲೇಖನ ಓದಿದ್ದೀರಾ?   ದಿನೇಶ್ ಕಾರ್ತಿಕ್ ಕುಸಿದು ಬಿದ್ದಾಗ

ಎರಡು ಕೋಟಿಯ ಆಫರ್ ತಿರಸ್ಕರಿಸಿದ ನಂತರ ಸಾಯಿಪಲ್ಲವಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮೈಬಣ್ಣದ ತಾರತಮ್ಯದ ಕುರಿತು ತನ್ನದೇ ಅನುಭವವನ್ನು ಹಂಚಿಕೊಂಡಿದ್ದರು. ಸಾಯಿಪಲ್ಲವಿಯವರ ಸಹೋದರಿಗೆ ತನ್ನಕ್ಕನಿಗಿಂತ ತನ್ನ ಮೈಬಣ್ಣ ಗಾಢವಾಗಿದೆ ಎಂಬ ಕೀಳರಿಮೆ ಇತ್ತು. ಈ ಕೀಳರಿಮೆಯು ಬಿಳಿ ಬಣ್ಣವನ್ನು ಗೌರವಿಸುವ, ಕಪ್ಪನ್ನು ಕೀಳಾಗಿ ಕಾಣುವ ಸಮಾಜದ ಪ್ರತಿಫಲನ. ಫೇರ್ ನೆಸ್ ಕ್ರೀಮುಗಳ ಜಾಹಿರಾತುಗಳು, ಸಿನೇಮಾ- ಧಾರವಾಹಿಗಳಲ್ಲಿ ತೆಳುಬಣ್ಣದ ನಾಯಕ- ನಾಯಕಿಯರೇ ಇರುವುದು ಇತ್ಯಾದಿ ಸಂಗತಿಗಳು ಕಪ್ಪುಬಣ್ಣ ಕುರೂಪ ಎಂಬ ಮನಃಸ್ಥಿತಿಯನ್ನು ಬೆಳೆಸುತ್ತಾ ಬಂದಿದೆ. ಸಾಕಷ್ಟು ತರಕಾರಿ ಮತ್ತು ಹಣ್ಣುಗಳನ್ನು ಸೇವಿಸಿದರೆ ತನ್ನಂತೆ ತಿಳಿಬಣ್ಣ ಹೊಂದಲು ಸಾಧ್ಯ ಎಂದು ತರಕಾರಿ ತಿನ್ನಲೊಪ್ಪದ  ಸಹೋದರಿಗೆ ಸಾಯಿಪಲ್ಲವಿ ಹೇಳಿದ್ದರಂತೆ. ಆಕೆ, ಇಷ್ಟವಿಲ್ಲದಿದ್ದರೂ ತರಕಾರಿ ತಿನ್ನಲು ಆರಂಭಿಸಿದ್ದರಂತೆ. ಆದರೆ, ಮೈಬಣ್ಣ ಹಾಗೆಯೇ ಉಳಿಯಿತು. ಕಪ್ಪು ಕುರೂಪವೆಂಬ ಕಲೆಯೂ ಆಕೆಯ ಮನಸ್ಸಿನಲ್ಲಿ ಅಚ್ಚಾಗಿ ಉಳಿಯಿತು. ಮೈಬಣ್ಣದ ಕಾರಣಕ್ಕೆ ಮಾನಸಿಕವಾಗಿ ಕುಗ್ಗುವ, ಮದುವೆಯಾಗದಿರುವ, ತಂದೆ-ತಾಯಿಯರಿಗೆ ಸಮಸ್ಯೆ ಎಂದು ನೊಂದುಕೊಳ್ಳುವ ಹೆಣ್ಣುಮಕ್ಕಳನ್ನು ಮನಸ್ಸಲ್ಲಿಟ್ಟುಕೊಂಡೇ ತಾನು ಆ ಜಾಹಿರಾತಿನಲ್ಲಿ ನಟಿಸಲು ನಿರಾಕರಿಸಿದೆನೆಂದು ಸಾಯಿಪಲ್ಲವಿ ಹೇಳಿದ್ದರು. 

ಶಿಕ್ಷಕಿಯೊಬ್ಬರು ವರ್ಣತಾರತಮ್ಯದ ತನ್ನ ಅನುಭವವನ್ನು ನನ್ನ ಬಳಿ ಹಂಚಿಕೊಂಡಿದ್ದರು. ಅವರು ಪ್ರೌಢಶಾಲೆಯಲ್ಲಿರುವಾಗ ಶಾಲಾ ನಾಟಕದಲ್ಲಿ ಅಭಿನಯಿಸಲು ಹೋಗಿದ್ದರಂತೆ. ಕಾಳಿದಾಸನ ಅಭಿಜ್ಞಾನ ಶಾಕುಂತಲೆಯ ಪುಟ್ಟ ಭಾಗವನ್ನು ಅವರ ಶಿಕ್ಷಕರು ಶಾಲಾ ವಾರ್ಷಿಕೋತ್ಸವದಂದು ರಂಗದ ಮೇಲೆ ತರಲು ಯೋಜಿಸಿದ್ದರಂತೆ. ಇವರ ಅಭಿನಯ ನೋಡಿ, "ಈ ಹುಡುಗಿ ಚೆನ್ನಾಗಿ ಅಭಿನಯಿಸುತ್ತಾಳೆ, ಇವಳನ್ನು ಶಕುಂತಲೆಯ ಪಾತ್ರಕ್ಕೆ ಆಯ್ಕೆ ಮಾಡೋಣ"  ಎಂದರಂತೆ. ಮಾರನೇ ದಿನ ತಾಲೀಮು ಶುರುವಾದಾಗ ಬಿಳಿ ಚರ್ಮದ ಹುಡುಗಿಯೊಬ್ಬಳನ್ನು ಶಕುಂತಲೆ ಪಾತ್ರಕ್ಕೆ ಅವರು ಆಯ್ಕೆ ಮಾಡಿ, ಇವರಲ್ಲಿ ಬೇರೊಂದು ಪಾತ್ರ ಮಾಡಲು ಸೂಚಿಸಿದರಂತೆ. ಬೆಳೆದು ದೊಡ್ಡವಳಾಗಿ, ಈಗ ಶಿಕ್ಷಕಿಯಾದರೂ ಆ ಗಾಯವಿನ್ನೂ ಅವರಲ್ಲಿ  ಮಾಸಿರಲಿಲ್ಲ.  ಇದಕ್ಕೆ ವ್ಯತಿರಿಕ್ತವಾಗಿ, ನೀನಾಸಂ ತಿರುಗಾಟದ ಸೀತಾ ಸ್ವಯಂವರ ನಾಟಕದಲ್ಲಿ ಕಪ್ಪು ಮೈಬಣ್ಣದ ನಟಿಯನ್ನು ಸೀತೆಯಾಗಿಯೂ ತಿಳಿಬಣ್ಣದ ನಟಿಯನ್ನು ಸೀತೆಯ ಸಖಿಯಾಗಿಯೂ ಆಯ್ಕೆ ಮಾಡಿ ಇಂತಹ ಮನಃಸ್ಥಿತಿಯನ್ನು ಕದಲಿಸುವ ಪ್ರಯತ್ನ ಮಾಡಿದ್ದರು. ಕನ್ನಡ ಸಾಹಿತ್ಯವೂ ಮೈಬಣ್ಣದ ತಾರತಮ್ಯವನ್ನು ಪ್ರತಿರೋಧಿಸುವ ರಚನೆಗಳನ್ನು ಸೃಷ್ಟಿಸಿದೆ.

ಮೆಲನೋಮಾ ಎಂಬುದು ಗಂಭೀರ ಸ್ವರೂಪದ ಕ್ಯಾನ್ಸರ್. ಮೂಗು, ಕೆನ್ನೆಗಳಂತಹ ಸೂರ್ಯನ ಬೆಳಕಿಗೆ ತೆರೆದುಕೊಳ್ಳುವ ಭಾಗದ ಮೆಲನೋಸೈಟುಗಳಲ್ಲಿ  ಕಂಡು ಬರುವ ಈ ಕ್ಯಾನ್ಸರ್ ಬಿಳಿಚರ್ಮದವರಿಗೆ ಬರುವ ಸಾಧ್ಯತೆ ಹೆಚ್ಚು. ಶ್ರೇಷ್ಟತೆಯ ವ್ಯಸನವೆಂಬ ಕ್ಯಾನ್ಸರ್ ಕೂಡಾ ಬಿಳಿ ಚರ್ಮದವರಿಗೆ, ಮೇಲ್ಜಾತಿ ಅಂದುಕೊಳ್ಳುವವರಿಗೆ ತಗಲುವ ಸಾಧ್ಯತೆ ಹೆಚ್ಚು.

ಅಂಕಣ ಬರೆಹ: