Saturday 23 July 2016

ಎಚ್ಚದ ಮನೆ   ಗಾಂಧಿನಗರದ ಫಿಶ್‍ಲ್ಯಾಂಡ್ ಹೊಟೆಲ್ಲಿನ ಗೆಳೆಯ ಮೋಹನ ಭಂಡಾರಿ ರೆಸ್ಟೋರೆಂಟಿನ ಕೋಲ್ಡ್ ಸ್ಟೋರೇಜಿನಿಂದ ಹೊರತೆಗೆದು ಹುರಿದುಕೊಟ್ಟ ಬಂಗಡೆ ಮೀನನ್ನು ತಿನ್ನುವಾಗೆಲ್ಲ ಚಂದ್ರಕಾಂತ ಊರಲ್ಲಿ ಸಿಗುವ ಹಸಿ ಹಸಿ ಮಿಡುಕಾಡುವ ಮೀನಿನ ನೆನಪು ಮಾಡಿಕೊಳ್ಳುತ್ತಿದ್ದ. ಈಗ, ಊರಲ್ಲೇ ಮೀನು ಸಿಗತ್ತಿಲ್ಲ ಎಂದರೆ? ಊರ ಯುವಕರು ಒಂದು ಕೈಲಿ ಮೊಬೈಲ್‍ಫೋನು ಇನ್ನೊಂದು ಕೈಯಲ್ಲಿ ಚೆಂಬು ಹಿಡಿದುಕೊಂಡು ಶೌಚಕ್ಕೆ ಹೋಗುವುದನ್ನು ಕಂಡಾಗಲೂ ಇಷ್ಟು ಆಶ್ಚರ್ಯಪಟ್ಟಿರಲಿಲ್ಲ. ಊರಿಗೆ ಬಂದು ಎರಡು ದಿನಗಳು ಕಳೆದರೂ ಕಾಂಗಳಸಿ ಇಲ್ಲ, ನೋಗಲೆ ಇಲ್ಲ, ಕೆಂಸ-ಏರಿ ಯಾವುದೂ ಇಲ್ಲ. ಹಸಿಶೆಟ್ಲಿಯ ಜೊತೆ ಬಸಲೆ ಸೇರಿಸಿ ಮಾಡುವ ಹುಳಗವೂ ಇಲ್ಲ. ಈ ಭೂಮಿಯ ಮೇಲೆ ಎಲ್ಲವೂ ನೆಟ್ಟಗಿಲ್ಲ ಅಂತ ಅನ್ನಿಸತೊಡಗಿತು. ಜಾಗತೀಕರಣ, ಗ್ಲೋಬಲ್ ವಾರ್ಮಿಂಗ್, ಉದಾರಿಕರಣ ಮುಂತಾದ ಪದಗಳೆಲ್ಲ ನೆನಪಾಗಿ ಇವುಗಳಲ್ಲಿ ಯಾವುದು ಊರಲ್ಲಿ ಮೀನುಸಿಗದಿರುವುದಕ್ಕೆ ಕಾರಣವಾಗಿರಬಹುದು ಎಂದು ತಲೆಕೆರೆದುಕೊಳ್ಳುತ್ತಿರುವಾಗಲೆ ಚಂದ್ರಕಾಂತನಿಗೆ ಅನಿವಾರ್ಯವಾಗಿ ಅಮ್ಮದಣ್ಣ ನೆನಪಾದ. ಅಮ್ಮದಣ್ಣ ಮೊದಲು ನೆನಪಾದನೋ ಅಥವಾ ಅಮ್ಮದಣ್ಣ ತರುತ್ತಿದ್ದ ಮೀನು ಮೊದಲು ನೆನಪಾಯಿತೋ ಎಂಬ ಗೊಂದಲದ ನಡುವೆಯೇ ಒಂದು ನಿರ್ಧಾರಕ್ಕೆ ಬಂದವನಂತೆ ಒಳ ಹೋಗಿ ಪ್ಯಾಂಟೇರಿಸಿಕೊಂಡು ಬಂದ. ಕಳೆದ ಬಾರಿ ಊರಿಗೆ ಬಂದಾಗಲೇ ಅಮ್ಮದಣ್ಣನಿಗೆ ಹುಷಾರಿಲ್ಲ ಎಂದು ಯಾರೋ ಹೇಳಿದ್ದರು. ಅಮ್ಮದಣ್ಣನನ್ನು ನೋಡಿ ಬರಲೇಬೇಕು ಎಂಬ ಹೊಟ್ಟೆಯೊಳಗಿಂದ ಹೊರಟ ಒತ್ತಾಯಕ್ಕೆ ಕಟ್ಟುಬಿದ್ದವನಂತೆ ಗಡಿಬಿಡಿಯಲ್ಲಿ ಹೊರಟ. ಹೊರಡುವಾಗ ``ಬೀಸುಬಲೆಮೀನು ಸಿಕ್ಕರೆ ತರ್ತೆ” ಎಂದು ಅಮ್ಮಗೆ ಹೇಳುವುದನ್ನು ಮರೆಯಲಿಲ್ಲ.
  ಹಳೆಯ ಹುಲ್ಲುಮಾಡು ಹೋಗಿ ಹಂಚು ಬಂದಿದೆಯೆಂಬುದೊಂದನ್ನು ಬಿಟ್ಟರೆ ಅಮ್ಮದಣ್ಣನ ಮನೆಯಲ್ಲಿ ಮತ್ತೇನೂ ಬದಲಾದಂತಿರಲಿಲ್ಲ. ಬಲೆಯ ಒಂದು ಅಂಚು ನೀರನಲ್ಲಿ ತೇಲುವ ಸಲುವಾಗಿ ಪೋಣಿಸುತ್ತಿದ್ದ ಹಗುರದ ಪೊಳ್ಳು ಚೆಂಡುಗಳು ಅಂಗಳದಲ್ಲಿ ಅಲ್ಲಲ್ಲಿ ಬಿದ್ದುಕೊಂಡಿದ್ದವು. ಚಿಕ್ಕವನಿರುವಾಗ ಈ ತೇಲುಚೆಂಡುಗಳು ಬೇಕೆಂದು ಹಠಹಿಡಿಯುತ್ತಿದ್ದ ನೆನಪಾಯಿತು ಚಂದ್ರಕಾಂತನಿಗೆ. ಬಾಗಿಲಪಟ್ಟಿ ಹೊಡೆಯುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿ ಚಂದ್ರಕಾಂತ ತಲೆತಗ್ಗಿಸಿಕೊಂಡೆ ಒಳಹೋದ. ಜಗುಲಿಯಲ್ಲೇ ಇದ್ದ ಮಂಚದ ಮೇಲೆ ಮಲಗಿಕೊಂಡಿದ್ದ ಮನುಷ್ಯಾಕೃತಿ ಅಮ್ಮದಣ್ಣನದೇ ಎಂದು ಗುರುತಿಸುವಷ್ಟು ಗತಕಾಲದ ಕುರುಹುಗಳು ಆ ದೇಹದಲ್ಲಿ ಇನ್ನೂ ಉಳಿದುಕೊಂಡಿದ್ದವು. ಮಂಚದಮೇಲೆ ಅಮ್ಮದಣ್ಣನೇ ಮಲಗಿಕೊಂಡಿದ್ದಾನೆ ಎನ್ನುವುದಕ್ಕಿಂತ ಆತನನ್ನು ಅಲ್ಲಿ ಮಲಗಿಸಲಾಗಿದೆ ಎನ್ನುವುದೇ ಸರಿ ಎಂದು ಚಂದ್ರಕಾಂತ ತನ್ನನ್ನುತಾನೇ ತಿದ್ದಿಕೊಂಡು ಹತ್ತಿರ ಹೋದ. ಚಂದ್ರಕಾಂತನನ್ನು ಗುರುತಿಸಿದ ಅಮ್ಮದಣ್ಣನ ಕಿರಿಯ ಮಗ ಇಶಾಕ ತನ್ನ ತಾಯಿಗೆ ವಿಷಯ ತಿಳಿಸಲು ಒಳಹೋದ ಬೆನ್ನಲ್ಲೇ ಸೆರಗನ್ನು ತಲೆಯ ಮೇಲೆ ಎಳೆದುಕೊಳ್ಳುತ್ತಾ ಅಮ್ಮದಣ್ಣನ ಹೆಂಡತಿ ಹೊರಬಂದಳು. ಅಮ್ಮದಣ್ಣನಿಗೆ ಹೋಲಿಸಿದರೆ ಈಕೆ ಈ ವಯಸ್ಸಲ್ಲೂ ಗಟ್ಟಿಯಾಗಿ ಇದ್ದಾಳೆ ಎಂದು ಚಂದ್ರಕಾಂತÀನಿಗೆ ಅನ್ನಿಸಿತು. ಚಿಕ್ಕವನಿರುವಾಗ ಏಡಿಯ ಕೊಂಬು ಬೇಕೆಂದು ಆಕೆಯಲ್ಲಿ ಹಠಮಾಡುತ್ತಿದ್ದುದು ತನಗೆ ನೆನಪಾದಂತೆ ಅಮ್ಮದಣ್ಣನ ಹೆಂಡತಿಗೂ ನೆನಪಾಗಿರಬಹುದೇ ಎಂಬ ವಿಚಿತ್ರ ಅನುಮಾನ ಚಂದ್ರಕಾಂತನ ತುಟಿಗಳನ್ನು ಅಲ್ಲಾಡಿಸಿ ಹೊರಟುಹೋಯಿತು. ಆಕೆ ಅಮ್ಮದಣ್ಣನ ಕಿವಿಯ ಹತ್ತಿರ ಹೋಗಿ ಚಂದ್ರಕಾಂತ ಬಂದಿರುವ ವಿಷಯವನ್ನು ತಿಳಿಸಿದಾಗ ಆತನ ಕಣ್ಣುಗುಡ್ಡೆಗಳಲ್ಲಿ ಉಂಟಾದ ಚಲನೆಯನ್ನು ಇಶಾಕ ಗುರುತಿಸಿದನೆÉಂದು ಕಾಣುತ್ತದೆ, ಆತ ಚಂದ್ರಕಾಂತನ ಮುಖವನ್ನೇ ನೋಡತೊಡಗಿದ.
   ಅಮ್ಮದಣ್ಣ ಎಂಬತ್ತರ ಆಸುಪಾಸಿನಲ್ಲಿರುವ ಮನುಷ್ಯ. ಕಳೆದ ಆರು ತಿಂಗಳಿಂದ ಹಾಸಿಗೆ ಹಿಡಿದು ಮಲಗಿರುವವನು. ಅವನ ಮನೆತನದವರು ಎಷ್ಟೋ ತಲೆಮಾರುಗಳಿಂದಲೂ ಚಂದ್ರಕಾಂತನ ಮನೆಗೆ  ಎಚ್ಚಗಾರರು. ಎಚ್ಚಗಾರರೆಂದರೆ ಕೃಷಿಕುಟುಂಬಕ್ಕೆ ಮೀನು ಪೋರೈಸುವ ಮೀನುಗಾರ ಕುಟುಂಬದವರು. ಇದು ಆನುವಂಶಿಕವಾಗಿ ಬರುವ ಜವಾಬ್ಧಾರಿ. ಅವರು ಕೊಡುವ ಮೀನಿಗೆ ಪ್ರತಿಯಾಗಿ ಎಚ್ಚದ ಮನೆಯವರು ಪ್ರತಿ ವರ್ಷ ದೀಪಾವಳಿ ಹಬ್ಬದ ನಂತರ ಭತ್ತ ಕೊಡುತ್ತಿದ್ದರು. ಅವರೆಷ್ಟು ಮೀನು ಕೊಡುತ್ತಾರೆ ಎಂಬುದಕ್ಕೆ ಹೇಗೆ ಲೆಕ್ಕ ಇಲ್ಲವೋ ಹಾಗೆ ಇವರು ಪ್ರತಿ ವರ್ಷ ಒಂದು ಕಂಡಿಗೆ ಭತ್ತ ಕೊಡುವ ಪರಿಪಾಠವಿದ್ದರೂ ಅದರ ಜೊತೆ ಕೊಡುವ ನೆಲಗಡಲೆ, ತೆಂಗಿನಕಾಯಿ, ಬೆಲ್ಲ, ಅಡಿಕೆ ದಬ್ಬೆ, ತೆಂಗಿನ ಸೋಗೆಗೂ ಲೆಕ್ಕವಿರಲಿಲ್ಲ. ಪರಸ್ಪರರ ಅವಶ್ಯಕತೆ ಮತ್ತು ಬದುಕಿನ ಪ್ರಾಯೋಗಿಕ ಸಾಧ್ಯತೆಗಳೇ ಎಚ್ಚಗಾರರು ಮತ್ತು ಎಚ್ಚದ ಮನೆಯವರ ಕೊಡು-ಕೊಳ್ಳುವಿಕೆಯನ್ನು ನಿರ್ಧರಿಸುತಿತ್ತು. ಇಲ್ಲಿ ಕೊಡುವವರು ಯಾರೋ ಕೊಳ್ಳುವವರು ಯಾರೋ?  ವ್ಯವಹಾರದ ಎಲ್ಲ ತತ್ವಗಳನ್ನೂ ಮೀರುವ ಈ ಸಂಬಂಧವನ್ನು ಎಣಿಸಿದರೆ ಚಂದ್ರಕಾಂತನಿಗೆ ಈಗ ಆಶ್ಚರ್ಯವಾಗುತ್ತದೆ. ಅಮ್ಮದಣ್ಣನೂ ಈ ಚಾಜವನ್ನು ಮುಂದುವರಿಸಿಕೊಂಡೇ ಬಂದವನು. ಇದು ಚಂದ್ರಕಾಂತನ ಮನೆಗೆ ಮಾತ್ರ ಸೀಮಿತವಾದ ಪದ್ಧತಿಯಲ್ಲ; ಆ ಊರಲ್ಲಿ ಪ್ರತಿ ಕೃಷಿ ಕುಟುಂಬಕ್ಕೂ ಒಬ್ಬರು ಎಚ್ಚಗಾರರು ಇದ್ದಾರೆÉÉ. ಇದ್ದಾರೆ ಅನ್ನುವುದಕ್ಕಿಂತ ಇದ್ದರು ಅನ್ನುವುದೇ ಸರಿ. ಈಗ್ಗೆ ಹತ್ತು ಹದಿನೈದು ವರ್ಷಗಳಲ್ಲಿ ಎಚ್ಚದ ಮನೆಗೂ ಎಚ್ಚಗಾರರಿಗೂ ಇರುವ ಸಂಬಂಧದ ಸ್ವರೂಪ ಬಹಳ ಬದಲಾಗಿದೆ. ಎಚ್ಚಗಾರರು ಈ ಸಂಬಂಧವನ್ನು ಒಂದು ಶಾಸ್ತ್ರದಂತೆ ಮುಂದುವರಿಸುವ ಸಲುವಾಗಿ ವರ್ಷಕ್ಕೆ ಒಂದೋ ಎರಡು ಬಾರಿ ಮೀನು ತಂದುಕೊಡುತ್ತಾರೆ.
   ಹಾಗೆ ನೋಡಿದರೆ, ಅಮ್ಮದಣ್ಣನ ಕುಟುಂಬಕ್ಕೂ ಚಂದ್ರಕಾಂತನ ಕುಟುಂಬಕ್ಕೂ ಇರುವ ಸಂಬಂಧ ಎಚ್ಚಗಾರರಿಗೂ ಎಚ್ಚದ ಮನೆಯವರಿಗೂ ಇರುವ ಸಂಬಂಧಕ್ಕಿಂತ ಹೆಚ್ಚಿನದಾಗಿತ್ತು. ಅಘನಾಶಿನಿ ನದಿಯು ಭಯಂಕರ ಮಳೆಗಾಲದ ಕುಂಭದ್ರೋಣ ಮಳೆಯಲ್ಲಿ ಉಬ್ಬರಿಸಿಕೊಂಡು ಅರ್ಧ ಊರನ್ನು ಮುಳುಗಿಸಿದ ಆ ಮಹಾಪೂರದ ಸಮಯದಲ್ಲೇ ಅಮ್ಮದಣ್ಣನ ಅಪ್ಪ ಇಹಲೋಕ ತ್ಯಜಿಸಿದಾಗ, ತನ್ನ ಅಪ್ಪನ ಹೆಣವನ್ನು ಮಣ್ಣು ಮಾಡಲು ಜಾಗವಿಲ್ಲದೆ ಅಮ್ಮದಣ್ಣ ತಲೆಯಮೇಲೆ ಕೈಹೊತ್ತು ಕೂತಿದ್ದ. ಆಗ ಚಂದ್ರಕಾಂತನ ಅಜ್ಜನೇ ಮುಂದೆ ಬಂದು  ``ಸತ್ತ ಮೇಲೆ ಮನುಷ್ಯರು ದೇವರಾಗುತ್ತಾರೆ, ಅವರಿಗೆ ಜಾತಿ-ಗೀತಿ ಏನೂ ಇರುವುದಿಲ್ಲ’’ ಎನ್ನುತ್ತಾ ತಮ್ಮ ಜಾಗದಲ್ಲಿ ದೇಹವನ್ನು ದಫನ್ ಮಾಡಲು ಅವಕಾಶ ನೀಡಿದ್ದ.
   ಅಮ್ಮದಣ್ಣನ ಹೆಂಡತಿಗೆ ಚಂದ್ರಕಾಂತನನ್ನು ನೋಡಿ ಅವನು ಚಿಕ್ಕವನಾಗಿದ್ದಾಗಿನ ನೆನಪುಗಳು ಮರುಕಳಿಸಿದವು, ತನ್ನನ್ನು ಕಂಡಾಗ ಓಡಿ ಬರುತ್ತಿದ್ದ ಚಂದ್ರಕಾಂತನೇ ಈಗ ಎದುರಲ್ಲಿರುವವನು? ದಣಪೆ ದಾಟಿ ಹಿತ್ತಲ ಒಳಬರುವ ಮುಂಚೆಯೇ ಚೀಲದಲ್ಲಿ ಏನಿದೆ ಎಂದು ನೋಡಲು ಹಠಮಾಡುತ್ತಿದ್ದ ಮತ್ತು ಏಡಿ ತರದಿದ್ದರೆ ಸಿಟ್ಟು ಮಾಡಿಕೊಂಡು ಹೋಗುತ್ತಿದ್ದ ಚಂದ್ರಕಾಂತನ ಆಗಿನ ಮುಖ ಅಮ್ಮದಣ್ಣನ ಹೆಂಡತಿಯ ಕಣ್ಣೆದುರು ಕಾಣಿಸಿದಂತಾಯ್ತು. ಅದೇ ಮುಖವನ್ನು ಅವನ ಈಗಿನ ದೇಹದ ಮೇಲೆ ಅಂಟಿಸಿ ನೋಡುವವಳಂತೆ ಆಕೆ ಚಂದ್ರಕಾಂತನ್ನು ದಿಟ್ಟಿಸಿ ನೋಡತೊಡಗಿದಳು.
  ಅಷ್ಟರಲಿ,್ಲ ಇಶಾಕ ಕುರ್ಚಿಯೊಂದನ್ನು ಅಮ್ಮದಣ್ಣನ ಮಂಚದ ಪಕ್ಕದಲ್ಲಿಟ್ಟಿದ್ದ. ಚಂದ್ರಕಾಂತ ಕುರ್ಚಿಯ ಮೇಲೆ ಕೂತು ಅಮ್ಮದಣ್ಣನೊಡನೆ ಮಾತನಾಡಲು ಪ್ರಯತ್ನಿಸಿದ.
                                              ******************************

    ಅಮ್ಮದಣ್ಣನ ಮನೆಯಿಂದ ಯಾರಾದರೊಬ್ಬರು ವಾರದಲ್ಲಿ ಒಂದೆರಡು ಬಾರಿಯಾದರೂ ಚಂದ್ರಕಾಂತನ ಮನೆಗೆ ಭೇಟಿ ನೀಡುತ್ತಿದ್ದರು. ಕೆಲವು ಸಲ ಒಂದೇ ದಿನದಲ್ಲಿ ಎರಡು ಬಾರಿ ಭೇಟಿ ನೀಡುವುದೂ ಇರುತ್ತಿತ್ತು. ಅಮ್ಮದಣ್ಣನೋ ಅವನ ಹಿರಿ ಮಗನೋ ಬೀಸುಬಲೆ ತೆಗೆದುಕೊಂಡು ಮೀನು ಹಿಡಿಯಲು ಹೋಗುವುದು, ಎರಡನೆ ಮಗ ಸಮುದ್ರದಿಂದ ಮರಳುವುದು, ಸೊಸೆಯಂದಿರು ಮನೆಕೆಲಸದಿಂದ ಪುರುಸೊತ್ತು ಮಾಡಿಕೊಂಡು ಚಿಪ್ಪಿಕಲ್ಲು, ಕಲಗ ಇತ್ಯಾದಿಗಳನ್ನು ತರುವುದು, ಅಮಾವಾಸ್ಯೆ-ಹುಣ್ಣಿಮೆ, ಇಳಿತ-ಭರತಗಳು ಅಮ್ಮದಣ್ಣನ ಮನೆಯವರು ಚಂದ್ರಕಾಂತನ ಮನೆಗೆ ಬರುವುದನ್ನು ನಿರ್ಧರಿಸುತ್ತಿದ್ದವು. ಅಮ್ಮದಣ್ಣನ ಹೆಂಡತಿ ಬಂದರೆ, ಮೀನು ಕೊಯ್ದು ತೊಳೆದಿಟ್ಟು ಹೋಗುತ್ತಿದ್ದಳು. ಮನೆಗೆ ನೆಂಟರು ಬಂದದ್ದು ಗೊತ್ತಾದರೆ, ಸ್ವತಃ ಅಮ್ಮದಣ್ಣನೇ ಬರುತ್ತಿದ್ದ. ``ನೆಂಟ್ರು ಬಂದ ಸುದ್ದಿ ಗೊತ್ತಾದ ಮೇಲೆ ಬೀಸ್ಕಂಡ್ ಬಂದೆ’’ ಎನ್ನುತ್ತಾ ಮಿಡಕಾಡುವ ಕಾಂಗಳಸಿ, ಏರಿ, ಕೆಂಸ, ಕುರುಡಿ, ನೋಗಲೆ ಮತ್ತಿತರ ಮೀನುಗಳನ್ನು ಅಂಗಳದವರೆಗೂ ತಂದ ಮಡಕೆಯಲ್ಲಿ ಸುರಿಯುತ್ತಿದ್ದ. ಮೀನು ಸ್ವಚ್ಛಗೊಳಿಸುವ ಮೊದಲೇ ಅಮ್ಮದಣ್ಣನಿಗೆ ಚಂದ್ರಕಾಂತನ ಅಮ್ಮ ಚಹಾ ಮಾಡಿಕೊಡುತ್ತಿದ್ದಳು.
 ಚಂದ್ರಕಾಂತನ ಮನೆಯ ಜಗುಲಿಯ ಒಳಗೆ ಪ್ರವೇಶವನ್ನೇ ಪಡೆಯದ ಅಮ್ಮದಣ್ಣ ಚಂದ್ರಕಾಂತನ ಮನೆಯ ತೀರಾ ಆಂತರಿಕ ವಿಚಾರದಲ್ಲೂ ಮಧ್ಯಪ್ರವೇಶಿಸುವ ಸ್ವಾತಂತ್ರ ಪಡೆದಿದ್ದ. ಕೃಷ್ಣಾಷ್ಟಮಿಯ ದಿನ ಮಾಡುವ ರಾಗಿಮಣ್ಣಿ ಚಂದ್ರಕಾಂತನಿಗೆ ಇಷ್ಟವಾಗುತ್ತಿರಲಿಲ್ಲವಾದರೂ ಅಮ್ಮದಣ್ಣನಿಗೆ ಇಷ್ಟ ಎಂಬ ಕಾರಣಕ್ಕಾಗಿ ಚಂದ್ರಕಾಂತನ ಅಮ್ಮ ಮಾಡುತ್ತಿದ್ದರು. ಅಮ್ಮದಣ್ಣನಿಗೆ ಇಷ್ಟವೆಂದು ತೆಗೆದಿರಿಸಿದ್ದ ಯಾವುದೇ ಸಿಹಿತಿಂಡಿಯನ್ನು ಚಂದ್ರಕಾಂತ ಕದ್ದು ತಿಂದರೆ ಅವನಜ್ಜಿ ಊರುಕೋಲನ್ನು ತಲೆಯವರೆಗೂ ಎತ್ತುತ್ತಿದ್ದರು. ಉರೂಸಿನ ರಾತ್ರಿ ಚಂದ್ರಕಾಂತನೂ ಬೇರೆ ಮಕ್ಕಳ ಜೊತೆ ಮಸೀದಿ ಮೈದಾನಕ್ಕೆ ಹೋಗುತ್ತಿದ್ದ. ಜಾತ್ರೆಯ ನಡುವೆ ಅಮ್ಮದಣ್ಣನ ಮನೆಗೂ ಹೋಗಿ, ಅಲ್ಲಿ ಅಮ್ಮದಣ್ಣ ಇಲ್ಲದಿರುವುದನ್ನು ಖಾತ್ರಿಪಡಿಸಿಕೊಂಡು ಬಿರಿಯಾನಿ ತಿನ್ನುತ್ತಿದ್ದ. ತಮ್ಮ ಮನೆಯಲ್ಲಿ ಚಂದ್ರಕಾಂತ ಬಿರಿಯಾನಿ ತಿನ್ನುವ ವಿಷಯ ಅಮ್ಮದಣ್ಣನಿಗಾಗಲೀ ಚಂದ್ರಕಾಂತನ ಮನೆಯವರಿಗಾಗಲಿ ಗೊತ್ತಾಗದಂತೆ ಅಮ್ಮದಣ್ಣನ ಮನೆಯವರೆಲ್ಲರೂ ಎಚ್ಚರಿಕೆ ವಹಿಸುತ್ತಿದ್ದರು. ಅಮ್ಮದಣ್ಣನ ಹೆಂಡತಿ ಚಂದ್ರಕಾಂತನ ಮನೆಗೆ ಬಂದಾಗ ಕೆಲವೊಮ್ಮೆ ``ನಮ್ಮ ಮನೆಗೆ ಬಂದರೆ ಬಿರಿಯಾನಿ ಮಾಡಿಕೊಡುತ್ತೇನೆ’’ ಎಂದು ಎಲ್ಲರೆದುರೇ ಹೇಳುವಾಗ ಚಂದ್ರಕಾಂತನಿಗೆ ಭಯವಾಗುತ್ತಿತ್ತು. ಎಲ್ಲರೂ ಅಮ್ಮದಣ್ಣನ ಹೆಂಡತಿ ತಮಾಷೆ ಮಾಡುತ್ತಿದ್ದಾಳೆ ಎಂದು ತಪ್ಪಾಗಿ ತಿಳಿದು ನಗುತ್ತಿದ್ದರು. ಒಂದು ಊರೂಸಿನಲ್ಲಿ ಹೀಗೆ, ಚಂದ್ರಕಾಂತ ಕದ್ದು ಗಡಿಬಿಡಿಯಿಂದ ಬಿರಿಯಾನಿ ತಿನ್ನುವುದನ್ನು ಕಂಡು ಆ ಮನೆಯ ಮೂಲೆಯಲ್ಲಿ ಕುಳಿತ ಅಮ್ಮದಣ್ಣನ ಅಮ್ಮ ಕೆಮ್ಮತ್ತಾ ``ಸಾವಕಾಶ ತಿನ್ನು ಮಗಾ, ಅಪ್ಪಗೆ ಗೊತ್ತಾಗುವುದಿಲ್ಲ ಹೆದರಬೇಡಾ’’ ಅಂದಳು. ಚಂದ್ರಕಾಂತನ ಮುಖದಲ್ಲಿ ಭಯದ ಚಿನ್ಹೆಗಳು ಹಾಗೆಯೇ ಇರುವುದನ್ನು ಗಮನಿಸಿ, ``ಗೊತ್ತಾದರೂ ಅಡ್ಡಿಲ್ಲ..ನಿನ್ನ ಅಪ್ಪನೂ ಸಣ್ಣವನಿರುವಾಗ ನಮ್ಮ ಮನೆಯಲ್ಲಿ ಬಿರಿಯಾನಿ ತಿಂದವನೇ!’’ ಎಂದಿದ್ದಳು.
                                                         *****************************

   ಅಮ್ಮದಣ್ಣನ ಕುಟುಂಬಕ್ಕೂ ಚಂದ್ರಕಾಂತನ ಕುಟುಂಬಕ್ಕೂ ಇದ್ದ ಅನ್ಯೋನ್ಯ ಸಂಬಂಧ ಹಳಸಲು ಕಾರಣವಾದ ನಿರ್ಧಿಷ್ಟ ಪ್ರಸಂಗ ಯಾವುದು ಎಂದು ಕೇಳಿದರೆ ಹೇಳುವುದು ಕಷ್ಟ.. ಅದು ಶಫಿ ಮಾಸ್ತರನ ಟೀವಿಯಿಂದಲೇ ಉಂಟಾಯಿತು ಎಂದು ಹೆಚ್ಚಿನವರು ಭಾವಿಸಿದ್ದಾರೆ. ಅದು ನೂರಕ್ಕೆ ನೂರು ಸತ್ಯವಲ್ಲ. ಊರಿಗೆ ಸರ್ಕಾರಿ ಬಸ್ಸು ಬರಲು ಪ್ರಾರಂಭವಾದ ಮೇಲೆ ಮೀನು ಬುಟ್ಟಿಗಳು ನೇರ ಕುಮಟೆಯ ಮೀನು ಮಾರುಕಟ್ಟೆಗೆ ಹೋಗಲು ಪ್ರಾರಂಭವಾದದ್ದು, ಮೀನಿಗೆ ಒಳ್ಳೆಯ ಬೆಲೆ ದೊರೆಯುವುದರಿಂದ ಎಚ್ಚದ ಮನೆಗೆ ಮೀನು ಕೊಡುವುದು ಕಡಿಮೆಯಾಗುತ್ತಾ ಬಂದದ್ದು, ಮಿರ್ಜಾನಿನ ಮೀನು ವ್ಯಾಪಾರಿ ಮಂಜ ಅಂಬಿಗ ವಾರಗಟ್ಟಲೆ ಮೀನು ಕೆಡದಹಾಗೆ ಸಂಗ್ರಹಿಸುವ ವ್ಯವಸ್ಥೆಯನ್ನು ಮಾಡಿಕೊಂಡದ್ದು, ಬೊಂಬೇಕರ ಆದಮನ ಕಂಪೌಂಡ್ ಗೋಡೆಯು ಮಾಚಮ್ಮನ ಗುಡಿಯ ಜಾಗವನ್ನು ಅತಿಕ್ರಮಿಸಿದ್ದು ಹೀಗೆ ಹಲವು ಕಾರಣಗಳು ಸೇರಿಕೊಂಡು ಎಚ್ಚದ ಮನೆಯವರು ಮತ್ತು ಎಚ್ಚಗಾರರÀ ನಡುವಿನ ಸಂಬಂಧದ ಸೂಕ್ಷ್ಮ ತಂತುಗಳು ಸಡಿಲಗೊಂಡಿದ್ದವು.
    ಕಾಗಾಲಿನ ಉರ್ದು ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಶಫಿ ಮಾಸ್ತರ ಹೊಸದಾಗಿ ಖರೀದಿಸಿ ತಂದ ಟೀವಿ ಆ ಊರಿನ ಸಮಾಜಶಾಸ್ತ್ರವನ್ನು ಅಷ್ಟಿಷ್ಟು ಬದಲಿಸಿದ್ದು ಸುಳ್ಳಲ್ಲ. ಕ್ರಿಕೆಟ್ ಮ್ಯಾಚುಗಳ ಕಾಮೆಂಟರಿಯನ್ನು ರೇಡಿಯೋದಲ್ಲಿ ಕೇಳಿಯೇ ಖುಷಿಪಡುತ್ತಿದ್ದ ಚಂದ್ರಕಾಂತನ ಅಪ್ಪಯ್ಯ ಬಡ್ಡಿರಾಮಣ್ಣನೂ ಅಮ್ಮದಣ್ಣನೂ ಊರಿಗೆ ಬಂದ ಮೊದಲ ಟೀವಿಯಲ್ಲಿ ಕ್ರಿಕೆಟ್ ಮ್ಯಾಚು ನೋಡಲು ಉತ್ಸಾಹ ತೋರಿದರು. ಅಮ್ಮದಣ್ಣನಿಗೆ ಕೂಡಾ ತನ್ನಮನೆಯ ಜಗುಲಿಗಿಂತ ಒಳಗಿನ ಕೋಣೆಗೆ ಬರಲು ಅವಕಾಶ ನೀಡದಿದ್ದ ಬಡ್ಡಿರಾಮಣ್ಣ ಈಗ ಶಫಿ ಮಾಸ್ತರನ ಮನೆಯ ಒಳಕೋಣೆಯನ್ನು ತಲುಪಲು ಸಿದ್ದನಾಗಿದ್ದ. ಹಿಂದಿನ ಬಾರಿಯ ವಿಶ್ವಕಪ್ಪನ್ನು ಕಪಿಲ್‍ದೇವ್ ಎತ್ತುಕೊಂಡು ಬಂದ ಮೇಲೆ ಬಡ್ಡಿರಾಮಣ್ಣನ ಕ್ರಿಕೆಟ್ ಕಾಯಿಲೆ ಎಷ್ಟು ಉಲ್ಬಣವಾಗಿತ್ತೆಂದರೆ, ಅವನು ಯಾವುದೇ ವಿಷಯದ ಮೇಲೆ ಮಾತು ಪ್ರಾರಂಭಿಸಿದರೂ ಮಾತು ಮುಗಿಸುತಿದ್ದುದು ಮಾತ್ರ ಕಪಿಲ್‍ದೇವನಿಂದಲೇ! ಬೇರೆ ಯಾರೇ ಭಾರತದ ಕ್ಯಾಪ್ಟನ್ ಆಗಿದ್ದರೆ ನಾನು ಕ್ರಿಕೆಟ್‍ಮ್ಯಾಚು ನೋಡಲು ಶಫಿ ಮಾಸ್ತರನ ಮನೆಗೆ ಹೋಗುತ್ತಿರಲಿಲ್ಲ ಎಂದು ತನಗೆ ತಾನೇ ಸಬೂಬು ಕೊಟ್ಟುಕೊಳ್ಳುತ್ತಾ ಶಫಿ ಮಾಸ್ತರನ ಮನೆಯ ಟೀವಿಯ ಮುಂದೆ ಕುಳಿತುಕೊಳ್ಳುತ್ತಿದ್ದ. ಊರಿನ ಹುಡುಗರೆಲ್ಲ ರವಿವಾರದಂದು ಮನೆಗೆ ಜಮಾಯಿಸುತ್ತಿದ್ದುದರಿಂದ ಮನೆಯ ಜಗುಲಿ ಸಾಲದಾಯಿತು. ಶಫಿಮಾಸ್ತರ ಟೀವಿಯನ್ನು ಅಂಗಳದಲ್ಲಿ ಪ್ರತಿಷ್ಟಾಪಿಸುವ ಕಷ್ಟ ತೆಗೆದುಕೊಳ್ಳಬೇಕಾಯಿತು. ಸಿಡುಕುತ್ತಲೇ ಶಫಿ ಮಾಸ್ತರ ಎಕ್ಸಟೆನ್ಷನ್ ಕೆಬಲ್ ಕೊಂಡು ತಂದು ಟೀವಿಯನ್ನು ಅಂಗಳದಲ್ಲಿ ವ್ಯವಸ್ಥೆ ಮಾಡಿದ್ದ. ಒಂದೇ ಕುರ್ಚಿಯ ಮೇಲೆ ಇಬ್ಬರು ಕುಳಿತುಕೊಂಡಾಗ ಶಫಿ ಮಾಸ್ತರ ಗದರಿಸುತ್ತಿದ್ದ. ತಾನು ಕುಳಿತುಕೊಳ್ಳುವ ಕುರ್ಚಿಯಲ್ಲಿ ಇನ್ಯಾರಾದರೂ ಕುಳಿತರೆ ಅವನಿಗೆ ಕೆಟ್ಟ ಕೋಪ ಬರುತ್ತಿತ್ತು. ತಾನು ಅಲ್ಲಿಲ್ಲದಿರುವಾಗಲೂ ಆ ಕುರ್ಚಿ ಖಾಲಿ ಇರಬೇಕೆಂದು ಹೇಳುತ್ತಿದ್ದ. ಕುಳಿತುಕೊಳ್ಳಲು ಜಾಗ ಸಿಗದವರಿಗೆ ಅಸಮಾಧಾನವಾದರೂ ಏನೂ ಮಾಡುವ ಹಾಗಿರಲಿಲ್ಲ. ಕ್ರಿಕೆಟ್ ಆಡುವಾಗಲೂ ಶಫಿಮಾಸ್ತರ ತನ್ನ ಬ್ಯಾಟನ್ನು ಬೇರೆಯವರಿಗೆ ಕೊಡುತ್ತಿರಲಿಲ್ಲ. ಎಲ್ಲರೂ ಒಂದು ಬ್ಯಾಟಿನಲ್ಲಿ ಆಟವಾಡುತ್ತಿದ್ದರೆ ಅವನದೇ ಬೇರೆ ಬ್ಯಾಟು. ಅವನು ಕ್ಯಾಪ್ಟನ್ ಆಗಿರುವಾಗÀ ಅವನೇ ಹೆಚ್ಚು ಓವರ್ ಬೌಲ್ ಮಾಡುತ್ತಾನೆ, ಅವನೇ ಓಪನಿಂಗ್ ಬ್ಯಾಟ್ಸ್‍ಮನ್ ಆಗುತ್ತಾನೆ ಮುಂತಾದ ದೂರುಗಳಿದ್ದರೂ ಈಗ ಅವನ ಟೀವಿಯಿಂದಾಗಿ ಜಗಳ ಆಡುವಂತಿರಲಿಲ್ಲ. ಚಂದ್ರಕಾಂತನಿಗೆ ಮಾತ್ರ ಶಫಿ ಮಾಸ್ತರನ ಮೇಲೆ ಎಲ್ಲಿಲ್ಲದ ಸಿಟ್ಟಿತ್ತು. ಮಿರ್ಜಾನ ತಂಡೆದೆದುರು ಕೋಟೇಮೈದಾನದಲ್ಲಿ ಆಡಿದ ಪಂದ್ಯದಲ್ಲಿ ಚಂದ್ರಕಾಂತನಿಗೆ ಒಂದೇ ಒಂದು ಓವರನ್ನೂ ಎಸೆಯಲು ಅವಕಾಶ ಕೊಟ್ಟಿರಲಿಲ್ಲ. ಪಂದ್ಯ ಗೆದ್ದ ಸಂಭ್ರಮದಲ್ಲಿ ಜಗಳವಾಡಲೂ ಸಾಧ್ಯವಾಗಲಿಲ್ಲ.
   ಭಾರತ-ಪಾಕಿಸ್ತಾನಗಳ ನಡುವಿನÀ ಮ್ಯಾಚಿನ ದಿನ ಶಫಿ ಮಾಸ್ತರನ ಮನೆಯ ಅಂಗಳ ಅಕ್ಷರಶಃ ತುಂಬಿಹೋಗಿತ್ತು. ಚಂದ್ರಕಾಂತನ ಅಪ್ಪಯ್ಯ, ಅಮ್ಮದಣ್ಣ ಅಲ್ಲದೆ ಇನ್ನೂ ಅನೇಕ ಹಿರಿಯರು ಮ್ಯಾಚು ನೋಡಲು ಬಂದಿದ್ದರಿಂದ ಕಿರಿಯರನೇಕರು ನಿಂತೇ ಮ್ಯಾಚು ನೋಡಬೇಕಾಯಿತು. ಮನೆಯ ಒಳಗಿದ್ದ ಸೋಫಾವನ್ನೂ ಶಫಿ ಮಾಸ್ತರ ಹೊರಗಿಟ್ಟು ಹಿರಿಯರಿಗೆ ಆಸನ ವ್ಯವಸ್ಥೆ ಮಾಡಿದ್ದ. ಆದಷ್ಟು ನಗುಮೊಗದಿಂದ ಮನೆಗೆ ಬಂದವರನ್ನು ಸ್ವಾಗತಿಸಿದ್ದ. ತನ್ನ ಕುರ್ಚಿಯನ್ನೂ ಇನ್ನೊಬ್ಬರಿಗೆ ಬಿಟ್ಟುಕೊಟ್ಟು ನಿಂತುಕೊಂಡೆ ಮ್ಯಾಚುನೋಡಲು ಸಿದ್ಧನಾಗಿದ್ದ. ಭಾರತ ಈವತ್ತು ಗೆದ್ದೇ ಗೆಲ್ಲುತ್ತದೆ ಎಂತಲೂ, ಯಾರದಾದರೂ ಬೆಟ್ ಇದ್ದರೆ ಹೇಳಬಹುದೆಂದೂ ಘೊಷಿಸಿಕೊಳ್ಳುವಾಗ ತುಸು ಜಾಸ್ತಿಯೇ ಎಂಬಷ್ಟು ದೇಶಪ್ರೇಮವನ್ನು ಪ್ರದರ್ಶಿಸಿಕೊಳ್ಳುತ್ತಿದ್ದ. ಟಾಸ್ ಗೆದ್ದು ಪಾಕಿಸ್ತಾನ ತಂಡ ಬ್ಯಾಟಿಂಗ್ ಆಯ್ದುಕೊಂಡಿತು. ರಮೀಜ ರಾಜ ಔಟಾದ ಮೇಲೆ ಬಂದ ಸಲೀಂ ಮಲಿಕ್ ಬೌಂಡರಿಯ ಮೇಲೆ ಬೌಂಡರಿ ಭಾರಿಸುತ್ತಿದ್ದ. ಭಾರತದ ಬೌಲರುಗಳು ಸಲೀಂ ಮಲಿಕ್‍ನನ್ನು ಔಟ್ ಮಾಡಲು ಆಗದೆ ಬೆವರಿಳಿದು ಹೋಗಿದ್ದರು. ಸಲೀಂ ಮಲಿಕ್‍ನ ಆಟ ಬಡ್ಡಿರಾಮಣ್ಣನಿಗೆ ಎಷ್ಟು ಅಸಹನೆ ಉಂಟುಮಾಡಿತೆಂದರೆ, ಒಂದು ಹಂತದಲ್ಲಿ ಆತ ತನ್ನ ಸಹನೆಯನ್ನು ಸಂಪೂರ್ಣವಾಗಿ ಕಳೆದುಕೊಂಡು ಟೀವಿ ಬಂದ್ ಮಾಡಿ ಎಂದು ಅರಚುತ್ತಾ ಭಾರತದ ಬೌಲರುಗಳಿಗೆ ಶಪಿಸಿ ಎದ್ದುಹೋದ. ಅವನÀ ಜೊತೆ ಇನ್ನೂ ಮೂವರು ಹಿರಿಯರು ಎದ್ದುಹೋದರು. ಅವರು ಎದ್ದು ಹೋದದ್ದೇ ತಡ ಚಂದ್ರಕಾಂತ ಎಂತದೋ ಭಯಂಕರ ಅನಾಹುತವನ್ನು ತಪ್ಪಿಸುವ ಪ್ರಯತ್ನವೋ ಎಂಬಂತೆ ಶಫಿ ಮಾಸ್ತರನ ಮನೆಯ ಮೇನ್‍ಸ್ವಿಚ್ಚನ್ನು ಆಫ್ ಮಾಡಿಬಿಟ್ಟ. ಇದರಿಂದ ಸಿಟ್ಟಾದ ಶಫಿ ಮಾಸ್ತರ ``ನನ್ನ ಮನೆಯ ಸ್ವಿಚ್ಚನ್ನು ಆಫ್ ಮಾಡಲು ನೀನು ಯಾರು?’’ ಎಂದು ಜೋರಾದ. ಜಗಳವಾಡಲು ತಯಾರಾಗೇ ನಿಂತವನಂತೆ ಚಂದ್ರಕಾಂತ ``ನೀನು ಆನ್ ಮಾಡಿದರೆ ಮತ್ತೆ ಆಫ್ ಮಾಡ್ತೇನೆ, ಏನು ಮಾಡ್ಕೊಳ್ತೆ ನೋಡೆ ಬಿಡುವಾ’’ ಎಂದು ಸವಾಲು ಹಾಕಿದ. `ತಾಕತ್ತಿದ್ದರೆ ಮಾಡೋ’ ಎನ್ನುತ್ತಾ ಶಫಿ ಮಾಸ್ತರ ಮತ್ತೆ ಸ್ವಿಚ್‍ಆನ್ ಮಾಡಿದ. ಚಂದ್ರಕಾಂತ ಮತ್ತೆ ಆಫ್ ಮಾಡಲು ಹೋದ. ಶಫಿ ಮಾಸ್ತರ ಚಂದ್ರಕಾಂತನ ಕಾಲರನ್ನು ಹಿಂದಿನಿಂದ ಹಿಡಿದು ತಡೆದ. ಇಷ್ಟರ ನಂತರ ಜಗಳ ನಾಟಕೀಯ ತಿರುವನ್ನು ತೆಗೆದುಕೊಂಡಿತು.
   ಶಫಿ ಮಾಸ್ತರನೆಂಬ ಯಕಶ್ಚಿತ್ ಸಾಬಿಯು ಕಾಲರ್‍ಹಿಡಿದು ನಿಲ್ಲಿಸಿದ ಅಪಮಾನಕ್ಕೆ ಪ್ರತಿಯಾಗಿ ಬ್ರಹ್ಮಾಸ್ತ್ರವನ್ನು ಪ್ರಯೋಗಿಸುವುದೇ ಸೂಕ್ತ ಎಂದು ಚಂದ್ರಕಾಂತನಿಗೆ ಅನ್ನಿಸಿರಬೇಕು ``ಭಾರತದ ಅನ್ನ ತಿಂದು ಪಾಕಿಸ್ತಾನ ಟೀಮಿಗೆ ಸಪೋರ್ಟು ಮಾಡ್ತಿಯೇನೋ, ಬುದ್ಧಿ ಕಲಿಸ್ತೇನೆ ನಿಂಗೆ’’ ಅಂದ. ಇದು ಶಫಿ ಮಾಸ್ತರನನ್ನು ಎಂತಹ ಧರ್ಮಸಂಕಟದಲ್ಲಿ ನಿಲ್ಲಿಸಿಬಿಟ್ಟಿತೆಂದರೆ, ಚಂದ್ರಕಾಂತನ ವಿರುದ್ಧ ಇನ್ನು ಏನೇ ಮಾತಾಡಿದರೂ ತನ್ನ ರಾಷ್ಟ್ರೀಯತೆಯೇ ಪ್ರಶ್ನಾರ್ಹವಾಗುವ ಸಾಧ್ಯತೆಯಿದೆ ಎಂದು ಆತನಿಗೆ ಅನಿಸಿಹೋಯಿತು. ಶಫಿ ಮಾಸ್ತರ ಮಾತು ನಿಲ್ಲಿಸಿದ. ಆತ ಮಾತು ನಿಲ್ಲಿಸಿದರೂ ಅಲ್ಲಿ ಶುರುವಾದ ಜಗಳ ಅಲ್ಲಿಗೇ ನಿಲ್ಲಲಿಲ್ಲ. ವೈಯಕ್ತಿಕ ಮಟ್ಟವನ್ನು ಮೀರಿ ಎರಡು ದೇಶಗಳ ನಡುವಿನ ಹಗೆತನದೊಂದಿಗೆ ಬೆಸೆದುಕೊಂಡ ಆ ಜಗಳವು ನಂತರ ಎರಡು ಧರ್ಮಗಳ ನಡುವಿನ ಜಗಳವಾಗಿ ಮುಂದುವರಿಯಿತು. ಅಮ್ಮದಣ್ಣ ಶಫಿ ಮಾಸ್ತರನ ಪರವಾಗಿ ನಿಂತ.
                                           ****************************

    ಕಣ್ಣುಗಳ ಚಲನೆಯನ್ನೇ ಅನುವಾದಿಸಿಕೊಂಡು ಅಮ್ಮದಣ್ಣನ ಸಂಕಟಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರುವವನಂತೆ ಚಂದ್ರಕಾಂತ ಆತನ ಮುಖವನ್ನೇ ನೋಡುತ್ತಿದ್ದ. ಇಶಾಕ ಇನ್ಯಾವುದೋ ಕೆಲಸದ ಮೇಲೆ ಹೊರಗೆ ಹೋದ. ಅಮ್ಮದಣ್ಣನ ಹೆಂಡತಿ ಏನನ್ನೂ ಹೇಳಲು ಪ್ರಯತ್ನಿಸುತ್ತಿರುವವಳಂತೆ ಚಂದ್ರಕಾತನಿಗೆ ಕಂಡಳು. ಎರಡರಡು ಬಾರಿ ಒಳಗೆ ಹೋಗಿ ಹೊರಬಂದಳು. ಚಂದ್ರಕಾಂತನ ಯಾವುದೋ ಮಾತಿಗೆ ಕಾದವಳಂತೆ ನಿಂತೇ ಇದ್ದಳು. ಅಮ್ಮದಣ್ಣನೂ ಎಷ್ಟೋ ವರ್ಷದಿಂದ ಮುಚ್ಚಿಟ್ಟುಕೊಂಡ ಮಾತನ್ನು ಹೇಳಲು ತಯಾರಾದವನ ಚಡಪಡಿಕೆಯಲ್ಲಿದ್ದ. ಹೆಂಡತಿ ಮತ್ತೊಮ್ಮೆ ಒಳಹೋದದ್ದನ್ನು ಗಮನಿಸಿದ ಅಮ್ಮದಣ್ಣ ಕ್ಷೀಣ ಧ್ವನಿಯಲ್ಲಿ `ನಾನು ಹೆಚ್ಚು ಸಮಯ ಬದುಕುವುದಿಲ್ಲ, ಚಂದು.’ ಎಂದು ಪ್ರಾರಂಭಿಸಿ ಇನ್ನೇನು ಹೇಳಲು ಹೊರಟಾಗಲೇ ಒಳಗಿಂದ ಅಮ್ಮದಣ್ಣನ ಹೆಂಡತಿ ಕರೆದಹಾಗೆ ಕೇಳಿಸಿತು. `ಬಂದೆ, ಬಂದೆ’ ಎನ್ನುತ್ತಾ ಚಂದ್ರಕಾಂತ ಅಲ್ಲಿಂದ ಎದ್ದು ಹೋದ. ಅಮ್ಮದಣ್ಣನ ಹೆಂಡತಿ ಅಡಿಗೆ ಮನೆಯ ಬಾಗಿಲನ್ನು ಹಿಡಿದುಕೊಂಡು ನಿಂತಿದ್ದಳು-`ಅವ್ರು ಬಾಳ ದಿನದಿಂದ ಹೇಳ್ತಾ ಇದ್ರು ಅಂದ್ಕೊಂಡು ಮದ್ಯಾಹ್ನದ ಊಟಕ್ಕೆ ಬಿರಿಯಾನಿ ಮಾಡ್ದೆ, ಸ್ವಲ್ಪ ಬಡಿಸಲಾ?’ ಅಂತ ಅಮ್ಮದಣ್ಣನಿಗೆ ಕೇಳದ ಹಾಗೆ ಪಿಸುಧ್ವನಿಯಲ್ಲಿ ಕೇಳಿದಳು. ಚಂದ್ರಕಾಂತನ ಉತ್ತರವನ್ನು ತಿಳಿದುಕೊಳ್ಳುವ ಮೊದಲೇ ಏನೋ ನೆನಪಾದವಳಂತೆ ಗಡಿಬಿಡಿಯಿಂದ ಅಡುಗೆಮನೆಗೆ ನಡೆದಳು. ಬಹುಷಃ, ಒಲೆಯಮೇಲೆ ಬೇಯುತ್ತಿದ್ದ ಬಿರಿಯಾನಿ ಕರಟಿಹೋಗಬಹುದೆಂಬ ಭಯದಿಂದ ಓಡಿರಬೇಕು ಎಂದುಕೊಳ್ಳುತ್ತಾ ಚಂದ್ರಕಾಂತ ಪುನಃ ಜಗುಲಿಗೆ ಬಂದು ಅಮ್ಮದಣ್ಣನ ಪಕ್ಕದ ಕುರ್ಚಿಯಲ್ಲಿ ಕುಳಿತುಕೊಂಡ. ಅಮ್ಮದಣ್ಣನ ಮಾತು ಮುಗಿದಿರಲಿಲ್ಲವೆಂಬುದು ಚಂದ್ರಕಾಂತನಿಗೂ ತಿಳಿದಿತ್ತು. “ಚಂದು, ನಾನೊಂದು ಮಾತು ಹೇಳಲಾ?” ಹೇಳು ಎಂಬಂತೆ ಚಂದ್ರಕಾಂತ ಅಮ್ಮದಣ್ಣನ ಮುಖವನ್ನು ನೋಡತೊಡಗಿದ. “ಬೇಜಾರು ಮಾಡ್ಕೋಬೇಡಾ... ನಿಮ್ಮಪ್ಪನನ್ನು ಒಪ್ಪಿಸುವುದು ನಿನಗೆ ಬಿಟ್ಟಿದ್ದು...” ಅಮ್ಮದಣ್ಣನ ಗಂಟಲಿನಿಂದ ಧ್ವನಿಯಾಗಿ ಹೊರಬರದ ಪದಗಳನ್ನೂ ಪೂರ್ತಿಮಾಡಿಕೊಂಡು ಚಂದ್ರಕಾಂತÀ ಆಲಿಸುತ್ತಿದ್ದರೂ ಆತ ಏನು ಹೇಳಲು ಹೊರಟಿದ್ದಾನೆಂಬುದರ ಬಗ್ಗೆ ಸ್ವಲ್ಪವೂ ಸುಳಿವು ಸಿಗಲಿಲ್ಲ. “ ನಿಮ್ಮ ಬೇಣದಲ್ಲಿ ನಮ್ಮಪ್ಪನ ಗೋರಿ ಇದ್ಯೆಲ್ಲ ಅಲ್ಲೇ ನಾನು ಮಣ್ಣಾಗಬೇಕು... ನೀನು ಮನಸ್ಸು ಮಾಡಿದರೆ ಆಗ್ತದೆ” ಎಂದ. ಆಡಲು ಯಾವ ಮಾತೂ ದೊರೆಯದೆ ಚಂದ್ರಕಾಂತ ಅಮ್ಮದಣ್ಣನ ಕೈ ಹಿಡಿದುಕೊಂಡ. ಅಮ್ಮದಣ್ಣನ ನಾಡಿಬಡಿತ ಕೂಡಾ ಅದೇ ಮಾತುಗಳನ್ನು ಮುಂದುವರಿಸಿದ ಹಾಗೆನಿಸಿ ನಿಧಾನವಾಗಿ ಕೈ ಬಿಡಿಸಿಕೊಂಡ.
    ಅಮ್ಮದಣ್ಣನ ಹೆಂಡತಿ ಒಳಹೋಗಿ ಬಿರಿಯಾನಿ ಪಾತ್ರೆಯ ಮುಚ್ಚಳ ತೆಗೆದಳೆಂದು ಕಾಣುತ್ತದೆ. ಸುವಾಸನೆಯ ಸೂತ್ರವೊಂದು ನಿಧಾನವಾಗಿ ಅಡುಕೆಕೋಣೆಯನ್ನೂ ಜಗುಲಿಯನ್ನೂ ಜೋಡಿಸಲಾರಂಭಿಸಿತು.
                                                          *********************