Monday 19 March 2018

ದಿನೇಶ್ ಕಾರ್ತಿಕ್ ಕುಸಿದು ಬಿದ್ದಾಗ...........


   ಇದು ಕೆಲವು ವರ್ಷಗಳ ಹಿಂದಿನ ಘಟನೆ. ಬಾಂಗ್ಲಾದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತದ ಮೊದಲ ನಾಲ್ಕು ಬ್ಯಾಟ್ಸ್‍ಮನ್‍ಗಳೂ ಸೆಂಚುರಿಯನ್ನು ಸಿಡಿಸಿ ತಮಗಿಲ್ಲದ ಮೀಸೆಯ ಮೇಲೆ ಬೆರಳಾಡಿಸಿದ್ದರು. ಆದರೆ ಆ ಶತಕಗಳು ಅಷ್ಟು ಸುಲಭದ್ದಾಗಿರಲಿಲ್ಲ. ಏಕೆಂದರೆ ಅವರು ಹೋರಾಡುತ್ತಿದ್ದುದು ಬಾಂಗ್ಲಾದ ವಿರುದ್ಧವಾಗಿರಲಿಲ್ಲ, ಬಿರು ಬಿಸಿಲ ಬೇಗೆಯ ಎದುರಾಗಿತ್ತು.ಆರಂಭಿಕರಿಬ್ಬರನ್ನೂ ಆಟದ ನಡುವೆಯೇ ಮೈದಾನದಿಂದ ಹೊತ್ತುಕೊಂಡು ಬರಬೇಕಾಯಿತು. ವಾಸಿಮ್ ಜಾಫರ್ ಮುಂಬೈನವರು ನೋಡಿ, ಶತಕ ಬಾರಿಸಿದ ನಂತರವೇ ಕುಸಿದುಬಿದ್ದರು. ದಕ್ಷಿಣ ಭಾರತದ ಕಾರ್ತಿಕ್ ಶತಕದ ಮೊದಲೇ ಕುಸಿದರು.ದಿನೇಶ್ ಕಾರ್ತಿಕ್ ಸ್ನಾಯು ಸೆಳೆತದಿಂದ ಕುಸಿದು ಬೀಳುವ ಮೊದಲು ಅವರ ದೇಹ ಬೇಸಿಗೆಯ ಸೆಕೆಯಿಂದ ಪಾರಾಗಲೂ ಬಹಳಷ್ಟು ಶ್ರಮಿಸಿದ್ದಂತೂ ನಿಜ. ದಿನೇಶ್ ಕಾರ್ತಿಕ್ ಕೂಡ ಎಲ್ಲ ಉಷ್ಣರಕ್ತದ ಪ್ರಾಣಿಗಳಂತೆ ಸ್ಥಿರ ದೇಹತಾಪವನ್ನು ಹೊಂದಿರುವವರು. ಹೊರಗಡೆಯ ತಾಪದಲ್ಲಿ ಎಷ್ಟೇ ಹೆಚ್ಚಳವಾಗಲಿ ಅಥವಾ ಇಳಿಕೆಯಾಗಲಿ ಅವರ ದೇಹದ ತಾಪವು ಅದರಿಂದ ವ್ಯತ್ಯಯಗೊಳ್ಳದು. ಸ್ಥಿರ ತಾಪವನ್ನು ಕಾದುಕೊಳ್ಳಲು ಅವಶ್ಯಕವಾದ ತಾಪಸ್ಥಾಪಿ ತಂತ್ರವನ್ನು ಅವರ ದೇಹವೇ ಅನಸರಿಸುತ್ತದೆ.ಎಲ್ಲ ಮನುಷ್ಯರಂತೆ ದಿನೇಶ್ ಕಾರ್ತಿಕ್‍ರ ದೇಹದಲ್ಲಿ ಅದರಲ್ಲೂ ಮುಖ್ಯವಾಗಿ ಸ್ನಾಯುಗಳು ಮತ್ತು ಪಿತ್ತಕೋಶದಲ್ಲಿ ನಡೆಯುವ ಚಯಪಚಯ ಕ್ರಿಯೆಗಳಿಂದ ಉಷ್ಣವು ಉತ್ಪಾದನೆಗೊಳ್ಳುತ್ತದೆ. ಕಾರ್ತಿಕರ ದೇಹದ ತಾಪಕ್ಕಿಂತ ಢಾಕಾದ ಚಿತ್ತಗಾಂವ ಕ್ರೀಡಾಂಗಣದಲ್ಲಿನ ತಾಪ ಹೆಚ್ಚಿದ್ದುದರಿಂದ ಅವರಿಗೆ ಸೆಕೆಯ ಅನುಭವ ಉಂಟಾಯಿತು. ಅವರ ಮೆದುಳಿನ ಕೆಳಭಾಗದಲ್ಲಿರುವ ಹೈಪೋಥಲಾಮಸ್ ಎಂಬ ಭಾಗಕ್ಕೆ ಇದು ಮೊದಲು ಗೊತ್ತಾಯಿತು. ಈ ಹೈಪೋಥಲಾಮಸ್ ಎಂದರೆ ಪ್ರಿಜ್ಜು, ಏ.ಸಿ, ಇಸ್ತ್ರಿ ಪೆಟ್ಟಿಗೆಗಳಲ್ಲಿರುವ ಸ್ಥಿರತಾಪವನ್ನು ಕಾದುಕೊಳ್ಳಲು ಬಳಸುವ ತಾಪಸ್ಥಾಪಿ ಸ್ವಿಚ್ಚುಗಳಂತೆ ಕೆಲಸ ಮಾಡುವ ಭಾಗ. ಕೂಡಲೇ ಹೃದಯ ಪಂಪು ಮಾಡುವ ರಕ್ತದ ಶೇಕಡಾ ಮೂವತ್ತಕ್ಕಿಂತ ಹೆಚ್ಚಿನ ಪ್ರಮಾಣದ ರಕ್ತವನ್ನು ಚರ್ಮಕ್ಕೆ ಕಳುಹಿಸುವ ಏರ್ಪಾಟು ನಡೆಯಿತು. ಕಾರಿನ ಬಿಸಿ ಏಂಜಿನ್‍ನ  ಶಾಖವನ್ನು ರೇಡಿಯೇಟರ್‍ನಲ್ಲಿ ಹರಿಯುವ ದ್ರವ ಕೂಲಂಟ್ ಹೀರಿಕೊಂಡು ಅನಂತರ ವಾತಾವರಣಕ್ಕೆ ಹೊರ ಹಾಕುತ್ತದ್ದಲ್ಲ ಹಾಗೆ, ನಮ್ಮ ರಕ್ತವು ಚರ್ಮದ ರಕ್ತನಾಳಗಳ ಮೂಲಕ ಹರಿಯುವುದರಿಂದ ದೇಹ ತಣ್ಣಗಾಗುತ್ತದೆ. ನಮ್ಮ ಚರ್ಮವು ದೇಹವನ್ನು ತಣ್ಣಗಿರಿಸಲು ಬೆವರುವಿಕೆ ತಂತ್ರವನ್ನು ಅನುಸರಿಸುತ್ತದೆ.ದಿನೇಶ್ ಕಾರ್ತಿಕ್‍ರ ಚರ್ಮದ ಮೇಲೆ ಸುಮಾರು 2,500,00 ಸ್ವೇದ ಗ್ರಂಥಿಗಳಿವೆ. ಈ ಗ್ರಂಥಿಗಳೊಡನೆ ರಕ್ತದ ಲೋಮನಾಳಗಳ ಒಡನಾಟವಿದೆ. ಅಲ್ಲದೇ ದೇಹದ ತಾಪ ಮತ್ತು ಬಾಹ್ಯ ತಾಪಗಳ ಮಾಹಿತಿಗಳನ್ನು ಮೆದುಳಿಗೆ ತಿಳಿಸಬಲ್ಲ ಜ್ಞಾನವಾಗಿ ನರಗಳಿವೆ. ತಾಪಕ್ಕೆ ತಕ್ಕಂತೆ ಉದ್ಧೀಪನಗಳನ್ನುಂಟು ಮಾಡುವ ಎಸಿಟೈಲ್‍ಚೋಲಿನ್ ಎಂಬ ರಾಸಾಯನಿಕದ ನೆರವಿನಿಂದ ನರವ್ಯವಸ್ಥೆಯು ರಕ್ತದ ಸಾಗಾಣಿಕೆ, ಬೆವರುವಿಕೆಯ ಪ್ರಮಾಣ ಮತ್ತಿತರ ಕ್ರಿಯೆಗಳ ನಡುವೆ ಹೊಂದಾಣಿಕೆಯನ್ನೇರ್ಪಡಿಸುತ್ತದೆ.ಢಾಕಾದ ಸೆಕೆ ಮತ್ತು ಒಣ ವಾತಾವರಣ ದಿನೇಶ್ ಕಾರ್ತಿಕ್‍ರನ್ನು ಬಹಳಷ್ಟು ಬೆವರು ಸುರಿಸುವಂತೆ ಮಾಡಿದವು. ಮಣ್ಣಿನ ಮಡಕೆಯ ಮೇಲಿರುವ ಸಣ್ಣ ಸಣ್ಣ ರಂದ್ರಗಳ ಮೂಲ ‘ಬೆವರುವಿಕೆ’ ಉಂಟಾಗುವುದರಿಂದ ಹೇಗೆ ಒಳಗಡೆಯ ನೀರು ತಣ್ಣಗಾಗಿರುವುದೋ ಹಾಗೆ ಕಾರ್ತಿಕರ ದೇಹ ಕೂಡಾ ತಣ್ಣಗಾಗಲು ಬೆವರುವುದು ಅನಿವಾರ್ಯವಾಗಿತ್ತು. ಬೇಸಿಗೆಯಲ್ಲಿ ಬೆವರುವಿಕೆಯಿಂದ ಗಂಟೆಗೆ ಒಂದೂವರೆ ಲೀಟರ್‍ನಿಂದ ನಾಲ್ಕು ಲೀಟರ್‍ವರೆಗೆ ನೀರು ವಾತಾವರಣ ಸೇರಬಹುದು. ದಿನೇಶ್ ಕಾರ್ತಿಕ್ ಆ ದಿನ ಸಾಕಷ್ಟು ಅಧಿಕ ಪ್ರಮಾಣದ ನೀರನ್ನು ಬೆವರುವಿಕೆಯಿಂದ ಕಳೆದುಕೊಂಡರು. ಇದರಿಂದ ಅವರ ದೇಹ ನಿರ್ಜಲೀಕರಣದ ಸ್ಥಿತಿಯನ್ನು ತಲುಪಿತು. ಜೊತೆಗೆ, ಈ ಬೆವರುವಿಕೆ ಎಂಬುದು ಬರೇ ನೀರನ್ನು ಕಳೆದುಕೊಳ್ಳುವ ಕ್ರಿಯೆ ಮಾತ್ರವಲ್ಲ, ಇದರಲ್ಲಿ ಸೋಡಿಯಂ ಕ್ಲೋರೈಡ್, ಪೊಟಾಸಿಯಂ, ಲ್ಯಾಕ್ಟಿಕ್ ಆಮ್ಲ, ಯೂರಿಕ್ ಆಮ್ಲಗಳೆಲ್ಲವೂ ಇರುತ್ತವೆ. ಸೋಡಿಯಂ ಮತ್ತು ಪೊಟಾಸಿಯಂ ಲವಣಗಳನ್ನು ಕಳೆದುಕೊಂಡದ್ದರಿಂದ ಕಾರ್ತಿಕರ ದೇಹದಲ್ಲಿ ಇಲೆಕ್ಟ್ರೋಲೈಟ್ ಅಸಂತುಲನೆ ಉಂಟಾಯಿತು. ಇದೇ ಅವರನ್ನು ಸ್ನಾಯು ಸೆಳೆತಕ್ಕೆ ಗುರಿಯಾಗಿಸಿತು.ನೀರೇ ದೊರೆಯದ ಮರುಭೂಮಿಯಲ್ಲಿ ಬೆವರುವುದು ಬಹಳ ದುಬಾರಿ ವ್ಯವಹಾರ. ಆದುದರಿಂದ ಅಲ್ಲಿನ ಜೀವಿಗಳು ಬಹಳ ಅಧಿಕ ತಾಪದಲ್ಲಷ್ಟೇ ಬೆವರುತ್ತವೆ. ಆನೆಗಳದು ಇನ್ನೂ ಭಿನ್ನತಂತ್ರ. ಅವುಗಳು ಎಂದೂ ಬೆವರುವುದೇ ಇಲ್ಲ. ಸುಮಾರು ನಾಲ್ಕೈದು ಚದರ ಮೀಟರ್ ಮೇಲ್ಮೈ ವಿಸ್ತೀರ್ಣವನ್ನು ಹೊಂದಿರುವ ಅವುಗಳ ಕಿವಿಗಳಲ್ಲಿ ಭಾರಿ ಪ್ರಮಾಣದ ಲೋಮನಾಳ ಜಾಲವಿದೆ. ದೇಹದ ಉಷ್ಣತೆಯನ್ನೆಲ್ಲ ಹೀರಿಕೊಂಡು ಬೆಚ್ಚಗಾದ ರಕ್ತ ಈ ಲೋಮನಾಳಗಳಲ್ಲಿ ಹರಿಯುತ್ತದೆ. ಆಗ ಆನೆಗಳ ನೆರಳಿದ್ದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಾ ತಮ್ಮ ಕಿವಿಗಳನ್ನು ಆಚೀಚೆ ಆಡಿಸುತ್ತವೆ. ದಿನೇಶ್ ಕಾರ್ತಿಕ್ ಆನೆಯೂ ಅಲ್ಲ, ಒಂಟೆಯೂ ಅಲ್ಲ. ಅವರೊಬ್ಬ ಮನುಷ್ಯ. ಆದುದರಿಂದಲೇ ಢಾಕಾದ ಬಿರು ಬಿಸಿಲಿಗೆ ಕುಸಿದು ಬಿದ್ದರು. ಆದರೂ, ಈಗಾಗಲೇ ಕುಸಿದು ಬಿದ್ದಿದ್ದ ಭಾರತ ತಂಡವನ್ನು ಸಾಕಷ್ಟು ಮೇಲಕ್ಕೆತ್ತಿದ್ದರು!