Tuesday, 3 March 2015

ನೂರನೆಯ ಸಂಮಾನ













       









 ನೂರನೆಯ ಸಂಮಾನ
  
 ಮೋಟಾರು ಗಾಡಿ ನಿಂತ ಸದ್ದು ಕೇಳಿ ಅನಸೂಯಮ್ಮ ಅಡಿಗೆ ಮನೆಯಿಂದ ಜಗುಲಿಯ ಕಡೆ ಧಾವಿಸಿದರು. ಗಾಡಿ ಇಳಿದು ಬಂದವರು ಐತಾಳರ ಮನೆ ಯಾವುದು ಎಂದು ಬೇರೆ ಯಾರನ್ನಾದರೂ ಕೇಳಿದರೆ ತಮ್ಮ ಮನೆಯನ್ನು ತೋರಿಸದೇ ದೊಡ್ಡ ಐತಾಳರ ಮನೆಯನ್ನು ತೋರಿಸಿಬಿಡಬಹುದೆಂಬ ಆತಂಕ ಅನಸೂಯಮ್ಮನ ಮುಖದ ಮೇಲೆ ಛಾಪುಹೊಡೆದಂತಿತ್ತು. 
    ಅನಸೂಯಮ್ಮನ ಗಂಡ ಹರಿಕೃಷ್ಣ ಐತಾಳರು ಮತ್ತು ಎದುರುಮನೆಯ ದೊಡ್ಡ ಐತಾಳರೂ ಒಂದೇ ಕುಟುಂಬದವರು. ಸದ್ಯ, ದೊಡ್ಡ ಐತಾಳರ ಮಗ ವೆಂಕಟರಮಣ ಐತಾಳರೂ ಹರಿಕೃಷ್ಣ ಐತಾಳರೂ ಮದುವೆ, ಮುಂಜಿ ಮತ್ತಿತರ ಕಾರ್ಯಕ್ರಮಗಳಿಗೆ ಅಡುಗೆ ಮಾಡಿಕೊಡುವ ಸಮಾನ ವೃತ್ತಿಯಲ್ಲಿರುವವರು. ಇಬ್ಬರಿಗೂ ಸಾಕಷ್ಟು ಒಳ್ಳೆಯ ಹೆಸರು ಇರುವುದರಿಂದ ಗ್ರಾಹಕರು ಸಮಾನವಾಗಿ ಹಂಚಿಹೋಗುತ್ತಿದ್ದರು. ಇಬ್ಬರ ಮನೆಗಳೂ ಅಕ್ಕ-ಪಕ್ಕದಲ್ಲೇ ಇರುವುದರಿಂದ ವೆಂಕಟರಮಣ ಐತಾಳರನ್ನು ಹುಡುಕಿಕೊಂಡು ಬಂದವರು ಹರಿಕೃಷ್ಣ ಐತಾಳರ ಮನೆಗೂ, ಹರಿಕೃಷ್ಣ ಐತಾಳರನ್ನು ಹುಡುಕಿಕೊಂಡು ಬಂದವರು ವೆಂಕಟರಮಣ ಐತಾಳರ ಮನೆಗೂ ತಲುಪಿದ ಅನೇಕ ಸಂದರ್ಭಗಳಿದ್ದವು. ಅಡುಗೆಯ ವಿಷಯದಲ್ಲಿ ಇಬ್ಬರೂ ಐತಾಳರಲ್ಲಿ ಅಂತಹ ವ್ಯತ್ಯಾಸ ಇಲ್ಲದ್ದರಿಂದ ಗ್ರಾಹಕರಿಗೆ ಯಾವ ತೊಂದರೆಯೂ ಆಗುತ್ತಿರಲಿಲ್ಲ. ಆದರೆ, ಯಾವಾಗಲಾದರೂ ತಮ್ಮ ಮನೆಗೆ ಬರಬೇಕಾದವರು ದೊಡ್ಡ ಐತಾಳರ ಮನೆಗೆ ಹೋದ ವಿಷಯ ಹೇಗೋ ಅನಸೂಯಮ್ಮಗೆ ಗೊತ್ತಾದಾಗ ಹೊಟ್ಟೆಯಲ್ಲಿ ಹಸಿಮೆಣಸಿನಕಾಯಿಯ ಕಿವುಚಿದಂತಾಗುತಿತ್ತು. ಅನಸೂಯಮ್ಮ ಅಡುಗೆ ಮನೆಯಿಂದ ಧಾವಿಸಿ ಬರಲು ಇನ್ನೂ ಒಂದು ಕಾರಣವಿತ್ತು- ಹರಿಕೃಷ್ಣ ಐತಾಳರು ಶಾಲಾ-ಕಾಲೇಜು, ಸಂಘ ಸಂಸ್ಥೆಗಳು ನಡೆಸುವ ಕಾರ್ಯಕ್ರಮಗಳಿಗೆ ಕಡಿಮೆದರದಲ್ಲಿ, ಕೆಲವೊಮ್ಮೆ ಉಚಿತವಾಗಿ ಅಡುಗೆ ಮಾಡಿ ಕೊಡುತ್ತಿದ್ದುದರಿಂದ ಇತ್ತೀಚೆಗೆ ಅನೇಕರು ಅವರನ್ನು ಕರೆದು ಸನ್ಮಾನಿಸುತ್ತಿದ್ದರು. ಕೆಲವು ಸಲ ಕಾರ್ಯಕ್ರಮಕ್ಕೆ ಅತಿಥಿಯಾಗಿ ಕರೆದು ಸತ್ಕರಿಸುತ್ತಿದ್ದರು. ಹರಿಕೃಷ್ಣ ಐತಾಳರನ್ನು ಈ ಕಾರಣಕ್ಕಾಗಿ ನೋಡಲು ಬಂದವರೆಲ್ಲಾದರೂ ದಾರಿ ತಿಳಿಯದೇ ವೆಂಕಟರಮಣ ಐತಾಳರ ಮನೆಗೆ ಹೋದರೆ ಅವರನ್ನು ದೊಡ್ಡ ಐತಾಳರು ಬೈದು ಕಳುಹಿಸುತ್ತಿದ್ದರು. ಕಡಿಮೆದರದಲ್ಲಿ ಅಡುಗೆಮಾಡಿಕೊಡುತ್ತಾನೆಂದು ಸನ್ಮಾನಿಸುತ್ತಾರೋ ಅಥವಾ ನೀವು ಸನ್ಮಾನಿಸುತ್ತಿರುವುದರಿಂದ ಅವನು ಕಡಿಮೆದರದಲ್ಲಿ ಅಡುಗೆ ಮಾಡಿಕೊಡುತ್ತಾನೋ ಎಂದು ಬಂದವರನ್ನು ಕುಟುಕುತ್ತಿದ್ದರು. ತನ್ನ ಗಂಡನಿಗೆ ಹೆಸರು ಬರುವುದು ಈ ಮುದುಕನಿಗೆ ಇಷ್ಟ ಇಲ್ಲ ಎಂದು ಅನಸೂಯಮ್ಮ ಮನಸ್ಸಲ್ಲೇ ಗೊಣಗಬಹುದಿತ್ತೇ ವಿನಃ ಕುಟುಂಬದ ಹಿರಿಯ ತಲೆಗೆ ಉತ್ತರ ನೀಡುವ ಹಾಗಿರಲಿಲ್ಲ.  
   ಹರಿಕೃಷ್ಣ ಐತಾಳರ ಜೊತೆ ಸನ್ಮಾನ ಸಮಾರಂಭಗಳಿಗೆ ಅನಸೂಯಮ್ಮ ಕೂಡಾ ಹೋಗುತ್ತಿದ್ದರು. ಗಂಡ-ಹೆಂಡತಿಯರಿಬ್ಬರನ್ನೂ ವೇದಿಕೆಗೆ ಕರೆದು ಹಾಕುವ ಹಾರ-ಶಾಲು, ನೀಡುವ ಹೂ-ಹಣ್ಣು, ಸ್ಮರಣಿಕೆಯ ಮೂರ್ತಿಗಳು ಮತ್ತು ತುಂಬಿದ ಸಭೆಯ ಕರತಾಡನ ಅನಸೂಯಮ್ಮಗೆ ಬಹಳ ಖುಷಿಕೊಡುತ್ತಿದ್ದುದರಿಂದ ಮನೆಗೆಲಸಕ್ಕೆ ತೊಂದರೆಯಾದರೂ ಸನ್ಮಾನ ಕಾರ್ಯಕ್ರಮಗಳನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಈಗ, ಮೋಟಾರು ಗಾಡಿಯ ಸದ್ದಾದಾಗಲೂ ಸಹ ಅಡುಗೆಗೆ ಹೇಳಲು ಬಂದವರು ಎಂಬುದಕ್ಕಿಂತ ಹೆಚ್ಚಾಗಿ, ಯಾರೋ ಸನ್ಮಾನಕ್ಕೆ ಕರೆಯಲು ಬಂದವರೇ ಇರಬಹುದೆಂದು ಊಹಿಸಿ ಅನಸೂಯಮ್ಮ ಅಡುಗೆ ಮನೆಯಿಂದ ಅಂಗಳದವರೆಗೂ ಬಂದಿದ್ದರು!
    ಹರಿಕೃಷ್ಣ ಐತಾಳರು ಸ್ನಾನಕ್ಕೆಂದು ಬಚ್ಚಲು ಮನೆಗೆ ಈಗಷ್ಟೆ ಹೋಗಿದ್ದರಿಂದ, ಯಾರಾದರೂ ಅವರನ್ನು ಹುಡುಕಿಕೊಂಡು ಬಂದಿದ್ದರೆ ಸ್ವಲ್ಪ ಕಾಯಬೇಕಾಗುತ್ತದೆ ಎಂಬುದನ್ನು ಗ್ರಹಿಸಿ, ಅನಸೂಯಮ್ಮ ಬಂದವರ ಅವಗಾಹನೆಗಾಗಿ ಗಂಡನನ್ನು ಸನ್ಮಾನಿಸುತ್ತಿರುವ ಫೋಟೋ ಇರುವ ನಿನ್ನೆಯ ಪೇಪರನ್ನು ಟಿಪಾಯಿಯ ಮೇಲಿಟ್ಟರು. ಪೇಪರು ಹಾರಿಹೋಗದಂತೆ ಅದರ ಮೇಲೆ ಕಪ್ಪುಲೋಹದ ದೇವರ ಮೂರ್ತಿಯೊಂದನ್ನು ಪ್ರತಿಷ್ಠಾಪಿಸಿದರು. ಶೋಕೇಸು ಪೂರ್ತಿ ತುಂಬಿದ್ದರಿಂದ ಸನ್ಮಾನದ ಸ್ಮರಣಿಕೆಯಾಗಿ ನೀಡಿದ ದೇವಾನುದೇವತೆಗಳ ಮೂರ್ತಿಗಳು ಸೂಕ್ತ ಆವಾಸವಿಲ್ಲದೇ ಅನಾಥವಾಗಿದ್ದವು. ಮರ, ಪ್ಲ್ಲಾಸ್ಟಿಕ್ಕು, ಲೋಹ ಹೀಗೆ ಮೂರ್ತಿಗಳನ್ನು ತಯಾರಿಸಲು ಬಳಸಿದ ಮಾಧ್ಯಮದ ಆಧಾರದಲ್ಲಿ, ಗಾತ್ರದ ಆಧಾರದಲ್ಲಿ, ನೀಡಿದ ಸಂಘ-ಸಂಸ್ಥೆಗಳ ಹಿರಿಮೆಯ ಆಧಾರದಲ್ಲಿ ಆಧ್ಯತೆಯನ್ನು ಪಡೆದುಕೊಂಡು ಮೂರ್ತಿಗಳು ಶೋಕೇಸಿನಲ್ಲಿ ಸ್ಥಾನ ಪಡೆಯುತ್ತಿದ್ದವು. ಹದಿನೈದು ದಿನಕ್ಕೋ ತಿಂಗಳಿಗೋ ಹರಿಕೃಷ್ಣ ಐತಾಳರೇ ಖುದ್ದಾಗಿ ಮೌಲ್ಯಮಾಪನ ನಡೆಸಿ ಶೋಕೇಸಿನಲ್ಲಿರುವ ಕೆಲವು ಮೂರ್ತಿಗಳನ್ನು ಹೊರತೆಗೆಯುವುದು, ಅವುಗಳ ಬದಲಾಗಿ ಹೊರಗಿರುವ ಮೂರ್ತಿಗಳನ್ನು ಶೋಕೇಸಿನಲ್ಲಿ ಹೊಂದಿಸಿಡುವುದು ನಡೆಯುತ್ತಿತ್ತು. ಸನ್ಮಾನದಲ್ಲಿ ಹಾಕಿದ ಹಾರಗಳು, ಕಾರ್ಯಕ್ರಮದಲ್ಲಿ ತೊಡಸಿದ್ದ ಬ್ಯಾಚುಗಳನ್ನು ಕೂಡಾ ಸ್ವತಃ ಐತಾಳರೇ ಜಗುಲಿಯ ಗೋಡೆಗೆ ಅಲ್ಲಲ್ಲಿ ಮೊಳೆಹೊಡೆದು ನೇತು ಹಾಕಿದ್ದರು. ಗಂಧದ ಹಾರಗಳು ಎಂದುಕೊಂಡವೆಲ್ಲ ವಾರದೊಳಗೆ ತಮ್ಮ ಮೇಲೆ ಸಿಂಪಡಿಸಲಾದ ಅತ್ತರಿನ ಘಮವನ್ನು ಕಳೆದುಕೊಂಡು ಕೊಳೆತ ಮರದ ವಾಸನೆ ಬೀರುವುದು, ಹಾರದ ಮೇಲೆ ಜೇಡಗಳು ಬಲೆಮಾಡಿಕೊಂಡು ಸಂಸಾರಹೂಡುವುದು, ಹಾರದ ಮರೆಯಲ್ಲಿ ಹಲ್ಲಿಗಳು ಮೊಟ್ಟೆಗಳನ್ನು ಅಂಟಿಸಿಡುವುದು ಮೊದಮೊದಲೆಲ್ಲ ಅನಸೂಯಮ್ಮಗೆ ಇಷ್ಟವಾಗುತ್ತಿರಲಿಲ್ಲವಾದರೂ, ಹೊಸ ಹೊಸ ಹಾರಗಳು ಬಂದು ಹಳೆಯದರ ಮೇಲೆ ಜಾಗ ಪಡೆದುಕೊಳ್ಳುವಾಗ ಹೆಮ್ಮೆಯ ಭಾವ ಮೂಡಿ ಮತ್ತೆಲ್ಲವೂ ಮರೆಯಾಗಿ ಬಿಡುತಿತ್ತು.  
      ದೊಡ್ಡ ಐತಾಳರು ಅನಸೂಯಮ್ಮನ ಕರೆದು “ಏನೇ ಅನಸೂಯ, ನಿನ್ನ ಗಂಡ ಕೆಲಸ ಬಿಟ್ಕಂಡ್ ಸನ್ಮಾನದ ಹಾರ, ಶಾಲಿನ ಹಿಂದ್ ಬಿದ್ದಿದ್ನಂತಲ್ಲ..ನಿಂಗೂ ಬುದ್ಧಿ ಇಲ್ದಾ... ಶಾಲ್ ಮಾರ್ಮಂಡ್ ಹೊಟ್ಟಿ ತುಂಬ್ಕಳ್ಳುಕಾತ್ತ?” ಅಂದಿದ್ದರು. ಯಾವಾಗಿಲ್ಲದ ಕಾಳಜಿ ಈ ಮುದುಕನಿಗೆ ಈಗ ಯಾಕ ಬಂತೋ  ಎಂದು ಮನಸ್ಸಿನಲ್ಲೇ ಅಂದುಕೊಂಡಿದ್ದರು ಅನಸೂಯಮ್ಮ. ಹೊಟ್ಟೆಕಿಚ್ಚಿಗೆ ಮದ್ದಿಲ್ಲ ಎಂದುಕೊಂಡು ದೊಡ್ಡ ಐತಾಳರು ಹೇಳಿದ್ದನ್ನು ಗಂಡನಿಗೂ ಹೇಳದೇ ಸುಮ್ಮನಿದ್ದರು. ಗಂಡನಿಗೆ ಇತ್ತೀಚೆಗೆ ಮೊದಲಿಗಿಂತ ಹೆಚ್ಚು ಅಡುಗೆಯ ಕರೆಬರುತಿತ್ತು. ಕೆಲಸ ಹೆಚ್ಚಿದ್ದರಿಂದ ಅಡುಗೆಗೆ ಇನ್ನೂ ಇಬ್ಬರು ಅಡುಗೆ ಭಟ್ಟರನ್ನು ಹಾಕಿಕೊಂಡಿದ್ದರು. ಬಹುಷಃ, ಇದನ್ನೆಲ್ಲ ನೋಡಿಯೇ ದೊಡ್ಡ ಐತಾಳರು ಹೊಟ್ಟೆಕಿಚ್ಚು ಪಟ್ಟಿರಬಹುದು ಅಂದುಕೊಂಡರು ಅನಸೂಯಮ್ಮ. ಹಿರಿಯಜೀವ..ಏನು ಹೇಳುವುದು? ಆದರೆ, ಇತ್ತೀಚೆಗೆ ದೊಡ್ಡ ಐತಾಳರು ರಸ್ತೆಯಲ್ಲಿ ಯಾವುದಾದರೂ ಗಾಡಿ ನಿಂತದ್ದು ತಿಳಿದರೆ ಹೊರಬರುತ್ತಿದ್ದರು. ಬಂದವರೊಡನೆ ಮಾತಾಡುತ್ತಿದ್ದರು. ಅವರೊಡನೆ ಏನು ಹೇಳುತ್ತಾರೋ ಎಂದು ತಿಳಿಯಲು ಅನಸೂಯಮ್ಮ ಬಹಳ ಸಲ ಪ್ರಯತ್ನಿಸಿದ್ದಿದೆ. ಆದರೆ, ತೀರಾ ಹತ್ತಿರ ಹೋಗಿ.. ಅಂದರೆ, ರಸ್ತೆಯಂಚಿಗೆ ಹೋಗಿ ಮಾತು ಕೇಳಲು ಸಂಕೋಚಪಟ್ಟು ಅಂಗಳದಿಂದಲೇ ವಾಪಸಾಗುತ್ತಿದ್ದರು. ದೊಡ್ಡ ಐತಾಳರ ಜೊತೆ ಮಾತನಾಡಿದವರಲ್ಲಿ ಯಾರಾದರೂ ಅವರ ಮನೆಗೆ ಹೋದರೆ ಅನಸೂಯಮ್ಮನವರಿಗೆ ಈ ಮುದುಕ ಏನೋ ಕಿತಾಪತಿ ಮಾಡಿದರು ಎಂದು ಅನಿಸುತಿತ್ತು. ಮೋಟಾರು ಗಾಡಿ ನಿಂತ ಸದ್ದಾದಾಗ ಅನಸೂಯಮ್ಮ ಕೀಲಿಕೊಟ್ಟ ಗೊಂಬೆಯಂತೆ ಅಡುಗೆಮನೆಯಿಂದ ಅಂಗಳದವರೆಗೆ ಬಂದುಬಿಟ್ಟರು.
                                      ***
   ಹರಿಕೃಷ್ಣ ಐತಾಳರನ್ನು ಪೇಟೆಯಲ್ಲಿ ಯಾರಾದರೂ ಕಂಡರೆ ಅವರದು ಅಡುಗೆಯ ವೃತ್ತಿ ಎಂದು ಊಹಿಸಲು ಸಾಧ್ಯವೇ ಇಲ್ಲ. ಅವರು ಸದಾ ಧರಿಸುವ ಬಿಳಿಯ ಶರ್ಟಿನ ಮೇಲಾಗಲೀ ಪಂಚೆಯ ಮೇಲಾಗಲೀ ಸಾಂಬಾರಿನ ಚಿಕ್ಕ ಕಲೆಯನ್ನೂ ಕೂಡಾ ಯಾರೂ ಹುಡುಕಲು ಸಾಧ್ಯವಿಲ್ಲ. ಯಾವುದೇ ಕಾರ್ಯಕ್ರಮವಿಲ್ಲವೆಂದಾದರೆ ಸಂಜೆ ಐದೂವರೆಗೆ ಐತಾಳರು ಪೇಟೆಗೆ ಬರುತ್ತಾರೆ. ಸ್ವತಃ ಅಡುಗೆ ಭಟ್ಟರಾದರೂ ಅವರ ಸಂಜೆಯ ಚಹಾ ಸಂಪಿಗೆ ಹೋಟೆಲ್ಲಿನಲ್ಲೇ! ದೊಡ್ಡ ದೊಡ್ಡ ಕುಳಗಳು ಸಂಜೆ ಕುಳಿತು ಮಾತಾಡುವ ಜಾಗ ಅದು. ಅಂತವರ ಭುಜಕ್ಕೆ ಭುಜ ಉಜ್ಜುವ ಅವಕಾಶವಿದೆ ಎಂಬ ಕಾರಣಕ್ಕಾಗಿಯೇ ಹದಿನೆಂಟು ರೂಪಾಯಿಗೆ ಒಂದು ಕಪ್ಪು ಚಹಾ ಮಾರುವ ಸಂಪಿಗೆ ಹೊಟೆಲ್ಲು ಐತಾಳರಿಗೆ ದುಬಾರಿ ಅನ್ನಿಸುತ್ತಿರಲಿಲ್ಲ. ಚಹಾ ಕುಡಿಯುತ್ತಾ ಮಾತಿನ ನಡುವೆ ಅವಕಾಶ ಹುಡುಕಿ ನಿನ್ನೆಯೋ ಮೊನ್ನೆಯೋ ನಡೆದ ಸನ್ಮಾನ ಕಾರ್ಯಕ್ರಮದ ವರ್ಣನೆ ನೀಡುವುದು ಐತಾಳರ ಸದುದ್ಧೇಶ. ಮೊನ್ನೆ ನಡೆದದ್ದು ಇನ್ನೂರನೇ ಸನ್ಮಾನ ಎಂತಲೋ, ಸನ್ಮಾನ ನೆರವೇರಿಸಲು ಆಹ್ವಾನಿತರಾದ ಗಣ್ಯರಿಂದ ಶಾಲು ಹೊದೆಸಿಕೊಳ್ಳುತ್ತಿರುವ ಇಪ್ಪತ್ತನೆಯ ಸಂದರ್ಭ ಅದಾಗಿತ್ತೆಂದೋ ಹೇಳುತ್ತಾ ಪ್ರತಿ ಸನ್ಮಾನಕ್ಕೂ ಅದರದ್ದೇ ಆದ ಮಹತ್ವವನ್ನು ಕರುಣಿಸುವ ಕಲೆಯನ್ನು ಇತ್ತೀಚೆಗೆ ಐತಾಳರು ಕಂಠಗತಮಾಡಿಕೊಂಡಿದ್ದರು. ಅದು ಎಲ್ಲರಿಗೂ ತಿಳಿದು, ಈಗ ಸಂಪಿಗೆ ಹೊಟೆಲ್ಲಿಗೆ ಬರುತ್ತಲೇ ನಿನ್ನೆ ನಡೆದದ್ದು ಎಷ್ಟನೇ ಸನ್ಮಾನ ಎಂದು ಬಾಯಿ ತೆಗೆಯುವ ಮೊದಲೇ ಐತಾಳರನ್ನು ಕೇಳುತ್ತಿದ್ದರು. ಈ ಕುಹಕ ಐತಾಳರಿಗೆ ಗೊತ್ತಾಗುತ್ತಿತ್ತೋ ಇಲ್ಲವೋ ತಿಳಿಯದು; ಆದರೆ, ಗೊತ್ತಾಗದವರಂತೆ ಮುಗ್ಧವಾಗಿ ಪ್ರತಿಕ್ರಿಯಿಸುತ್ತಿದ್ದರು. ನೂರಾ ಹನ್ನೊಂದನೇ ಸನ್ಮಾನದ ಕುರಿತು ಅವರ ಬಾಯಿಂದಲೇ ಕೇಳಿದ ಸ್ನೇಹಿತರು `ಏನು ಐತಾಳರೆ ಇದು? ನಿಮ್ಮ ನೂರನೇ ಸನ್ಮಾನಕ್ಕೆ ನಾವೆಲ್ಲ ಬರಬೇಕೆಂದುಕೊಂಡಿದ್ದೆವು. ನಮ್ಮದೂ ಒಂದು ಹಾರ ಹಾಕಿ ಕೃತಾರ್ಥರಾಗಬೇಕೆಂದುಕೊಂಡಿದ್ದೆವು.. ನೀವು ಹೇಳಲೇ ಇಲ್ಲ.. ಈಗ ನೂರಾ ಹನ್ನೊಂದಾಯ್ತು ಅಂತಿದ್ದೀರಿ’ ಎಂದಿದ್ದಕ್ಕೆ ಐತಾಳರು ಮುಗ್ಧವಾಗಿ ನಗುತ್ತಾ `ಇಲ್ಲಪ್ಪ, ನಿಮಗೆ ಹೇಳದೆ ನೂರನೇ ಸನ್ಮಾನ ಮಾಡಿಸ್ಕೊಳ್ತೇನಾ ನಾನು? ... ನೂರನೇ ಸನ್ಮಾನ ತನ್ನ ತವರೂರಲ್ಲೇ ಆಗಬೇಕೆಂಬುದು ನನ್ನ ಹೆಂಡತಿಯ ಆಸೆ..ಆದ್ರೆ, ಅಲ್ಲಿ ಮುಂದಾಗಿ ಮಾಡುವವರು ಯಾರೂ ಇಲ್ಲ...ಹಾಗಂತ, ಮಾಡ್ತೇವೆ ಮಾಡ್ತೇವೆ ಅಂತ ಆಗಾಗ ಹೇಳುವವರು ಇದ್ದಾರೆ. ಅದ್ಕೆ, ನೂರನೇ ಸನ್ಮಾನ ಬಾಕಿ ಇಟ್ಟುಕೊಂಡಿದ್ದೇನೆ. ನಿಮಗೆ ಖಂಡಿತ ಹೇಳ್ತೇನೆ’ ಅಂದಿದ್ದರು.
  ಐತಾಳರ ಸನ್ಮಾನ ಎಂಬುದು ಕೆಲವು ಸೇವಾ ಸಂಸ್ಥೆಗಳ ಕಾರ್ಯಕ್ರಮದ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟು ಈಗ ಎರಡು-ಮೂರು ವರ್ಷಗಳು ಕಳೆದುಹೋಗಿವೆ. ಕಾರ್ಯಕ್ರಮದಲ್ಲಿ ಐತಾಳರದೇ ಅಡುಗೆ ಇರುತ್ತದೆ. ಕಾರ್ಯಕ್ರಮ ಮುಗಿದ ಮೇಲೆ ಊಟೋಪಚಾರ ನೀಡಿದ್ದಕ್ಕಾಗಿ ಆಯೋಜಕರು ಎಷ್ಟೇ ಹಣ ನೀಡಿದರೂ, ನೀಡದೇ ಇದ್ದರೂ ಐತಾಳರು ನಿರ್ಧಾಕ್ಷಿಣ್ಯವಾಗಿ ಕೇಳುವ ಹಾಗಿರಲಿಲ್ಲ. ಹೆಗಲ ಮೇಲೆ ಬಿದ್ದ ಶಾಲನ್ನು ಮುಟ್ಟಿನೋಡಿಕೊಳ್ಳುವುದಕ್ಕಿಂತ ಹೆಚ್ಚೇನೂ ಮಾಡುವ ಹಾಗಿರಲಿಲ್ಲ. ಬರಬರುತ್ತಾ, ಐತಾಳರಿಗೆ ಸನ್ಮಾನಗಳು ಹೆಚ್ಚಾಗುತ್ತಾ ಬಂದಂತೆ ಅಡುಗೆ ಕರೆಗಳು ಕೂಡಾ ಹೆಚ್ಚಾಗುತ್ತಾ ಬಂದವು. ವ್ಯವಹಾರ ಜಾಸ್ತಿ ಆದದ್ದರಿಂದ ನಿಭಾಯಿಸಲು ಹೆಚ್ಚಿನ ಕೆಲಸದವರು ಬೇಕಾಯಿತು. ಈ ಸನ್ಮಾನಗಳ ನಡುವೆ ಸ್ವತಃ ಕೆಲಸ ಮಾಡಲು, ವ್ಯವಹಾರ ನೋಡಿಕೊಳ್ಳಲು ಐತಾಳರಿಗೆ ಸಮಯವೂ ಕಡಿಮೆಯಾಯಿತು. ಅಂಗಡಿಯಿಂದ ಸಾಮಾನು ತರುವ ಕೆಲಸವನ್ನು ತಮ್ಮ ನಂಬಿಗೆಯ ಕೆಲಸದವನೊಬ್ಬನಿಗೆ ನೇಮಿಸಿದರು. ಬರಬರುತ್ತಾ ವ್ಯವಹಾರದ ಸೂತ್ರ ಆತನ ಕೈ ಸೇರಿತು. ಜೇನು ಕೊಯ್ದವ ಬೆರಳು ನೆಕ್ಕದೇ ಇರುತ್ತಾನೆಯೇ? ಎಷ್ಟೇ ಹಣ ಬಂದರೂ ಹಳೆಯ ಗುಂಡಿಗಳು ತುಂಬುತ್ತಿರಲಿಲ್ಲ. ಕೆಲಸದವರ ಸಂಬಳ, ಅಂಗಡಿಯವರ ಹಣಗಳನ್ನು ಎಷ್ಟು ದಿನಗಳಂತ ಬಾಕಿ ಇಟ್ಟುಕೊಂಡಿರುವುದು? ಐತಾಳರು ಬ್ಯಾಂಕಿನಲ್ಲಿ ಸಾಲ ತೆಗೆದು ವ್ಯವಹಾರ ಮುಂದುವರಿಸಬೇಕಾದ ಸ್ಥಿತಿ ತಲುಪಿದರು. ಬ್ಯಾಂಕಿನಿಂದ ಸಾಲ ಪಡೆಯಲು ಮನೆ ಇರುವ ಮೂವತ್ತು ಸೆಂಟ್ಸ್ ಜಾಗವನ್ನು ಅಡ ಇಡಬೇಕಾಯಿತು.
  ಇಷ್ಟಾದರೂ. ಸನ್ಮಾನದ ಚಟ ಐತಾಳರನ್ನು ಬಿಡಲಿಲ್ಲ. ಈಗಲೂ ಯಾರಾದರೂ ಸನ್ಮಾನ ಮಾಡುತ್ತೇನೆಂದು ಬಂದರೆ, ಸನ್ಮಾನದ ದಿನ ಯಾವೆಲ್ಲ ಗಣ್ಯರನ್ನು ಕರೆಯಬೇಕೆಂದು ಅವರೇ ಸೂಚಿಸುತ್ತಾರೆ. ಅಭಿನಂದನಾ ಪತ್ರ ಹೇಗಿರಬೇಕು ಮತ್ತು ಯಾವ ಮುದ್ರಣಾಲಯದಲ್ಲಿ ವಿನ್ಯಾಸಗೊಳಿಸಬೇಕು, ಸನ್ಮಾನಕ್ಕಿಂತ ಮುಂಚೆ ಎಲ್ಲೆಲ್ಲಿ ಬ್ಯಾನರುಗಳನ್ನು ನೇತುಹಾಕಬೇಕು ಇತ್ಯಾದಿ ಇತ್ಯಾದಿಗಳನ್ನೆಲ್ಲ ತಾವೇ ತಿಳಿಸುತ್ತಾರೆ. ಆಯೋಜಕರು ಅಷ್ಟು ಆಸಕ್ತಿ ತೋರಿಸದಿದ್ದಲ್ಲಿ ತಾವೇ ಸ್ವತಃ ಆ ಕೆಲಸಗಳನ್ನು ಮಾಡುತ್ತಾರೆ. ಕಳೆದೆರಡು ವರ್ಷಗಳಿಂದಲೂ ಉಪನ್ಯಾಸಕರೊಬ್ಬರು ಐತಾಳರ ಸನ್ಮಾನ ಪತ್ರಗಳನ್ನು ಬರೆದುಕೊಡುತ್ತಾ ಬಂದಿದ್ದಾರೆ. ಆಗಾಗ ಅವರಿಗೆ ಹೋಳಿಗೆ, ಜಿಲೇಬಿ ಪ್ಯಾಕೆಟ್ಟುಗಳನ್ನು ಕೊಟ್ಟು ಐತಾಳರು ಋಣಸಂದಾಯ ಮಾಡುತ್ತಿರುತ್ತಾರೆ. ಇವಕ್ಕೆಲ್ಲ ತಗಲುವ ಖರ್ಚುಗಳು ಮತ್ತು ಓಡಾಟಗಳು ತಮ್ಮ ಜವಾಬ್ಧಾರಿಗೆ ಬಾರದಿರುವುದರಿಂದ ಸಂಘಟಕರೂ ಖುಷಿಯಾಗುತ್ತಾರೆ. ಪತ್ರಿಕಾ ವರದಿಗಾರರಿಗೆ ಅವರೇ ಖುದ್ದು ಫೋನುಮಾಡಿ ತಮ್ಮ ಸನ್ಮಾನ ಕಾರ್ಯಕ್ರಮಕ್ಕೆ ಕರೆಯುತ್ತಾರೆ. ಪತ್ರಿಕಾ ದಿನಾಚರಣೆಯಂದು ಪತ್ರಕರ್ತಸ್ನೇಹಿತರು ನಡೆಸುವ ಅದ್ದೂರಿ ಕಾರ್ಯಕ್ರಮಕ್ಕೆ ಈಗ್ಗೆ ಮೂರುವರ್ಷಗಳಿಂದ ಐತಾಳರೇ ಉಚಿತವಾಗಿ ಊಟ ಉಪಹಾರ ನೀಡುತ್ತಾ ಬಂದಿರುವುದರಿಂದ ಅವರೂ ಐತಾಳರ ಸನ್ಮಾನ ಕಾರ್ಯಕ್ರಮಗಳನ್ನು ತಪ್ಪದೇ ವರದಿಮಾಡುತ್ತಾರೆ. ಐತಾಳರಲ್ಲಿ ಅವರ ಅಷ್ಟೂ ಇನ್ನೂರಾ ಇಪ್ಪತ್ತಾರು ಸನ್ಮಾನಗಳ ಪತ್ರಿಕಾ ವರದಿಗಳ ತುಣುಕಗಳಿವೆ. ಅವುಗಳನ್ನೆಲ್ಲ ಫೈಲಿನಲ್ಲಿ ದಿನಾಂಕವಾರು ಜೋಡಿಸಿಟ್ಟುಕೊಂಡಿದ್ದಾರೆ. ಅದೇ ಫೈಲಿನಲ್ಲಿ ತಮ್ಮ ಪರಿಚಯ ಪತ್ರದ ಅನೇಕ ಪ್ರತಿಗಳನ್ನು ಇಟ್ಟುಕೊಂಡಿದ್ದಾರೆ. ಕಾರ್ಯಕ್ರಮ ನಡೆಸುವವರು ಅವುಗಳನ್ನು ಕೇಳಲಿ ಕೇಳದಿರಲಿ ಐತಾಳರು ಅವರಿಗೊಂದು ಪ್ರತಿ ನೀಡುತ್ತಾರೆ. ಕೆಲವು ಸಂಘಟಕರು ಸರಿಯಾಗಿ ಪೂರ್ವಸಿದ್ಧತೆಮಾಡಿಕೊಳ್ಳದೇ ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ಹಾರವನ್ನೋ ಶಾಲನ್ನೋ ತರಲು ಮರೆತು ಸನ್ಮಾನದ ಸಂದರ್ಭದಲ್ಲಿ ಪೇಚಾಡುವುದನ್ನು ಐತಾಳರು ಅನೇಕ ಬಾರಿ ಕಂಡಿದ್ದಾರೆ. ಅನುಭವಿಸಿದ್ದಾರೆ ಕೂಡಾ. ಅದಕ್ಕೂ ಪರಿಹಾರ ಕಂಡುಕೊಂಡಿರುವ ಐತಾಳರು ತಮ್ಮ ಬ್ಯಾಗಿನಲ್ಲಿ ಸದಾ ಒಂದು ಗಂಧದ ಹಾರ, ಒಂದು ಶಾಲು ಇಟ್ಟುಕೊಂಡಿರುತ್ತಾರೆ. ಈ ವಿಚಾರ ಎಲ್ಲರಿಗೂ ಗೊತ್ತಾಗಿರುವುದರಿಂದ ಐತಾಳರ ಸನ್ಮಾನ ಇದ್ದರೆ ಈಗೀಗ ಸಂಘಟಕರು ಹಾರ ಮತ್ತು ಶಾಲನ್ನು ಹೊರತುಪಡಿಸಿ ಉಳಿದ ಸಾಮಗ್ರಿಗಳನ್ನು ಮಾತ್ರ ಖರೀದಿಸುತ್ತಾರೆ. ಎರಡು ಕಿಲೋಗ್ರಾಮ್ ಹಣ್ಣು, ಒಂದು ಹರಿವಾಣ ಮತ್ತು ಸ್ಮರಣಿಕೆಯಾಗಿ ಒಂದು ಮೂರ್ತಿ..ಅಬ್ಬಬ್ಬಾ ಎಂದರೆ ಐದುನೂರು ರೂಪಾಯಿಗೆ ಒಂದು ಸನ್ಮಾನ ಮುಗಿದುಬಿಡುತ್ತದೆ. ಆದರೆ, ಪ್ರತಿ ಸನ್ಮಾನದಲ್ಲೂ ಐತಾಳರು ಸಾವಿರಾರು ರೂಪಾಯಿಗಳನ್ನು ಕಳೆದುಕೊಳ್ಳುತ್ತಾರೆ. ಹೀಗೆ ಆದ ನಷ್ಟವನ್ನು ಸನ್ಮಾನ ಮಾಡದ ಗ್ರಾಹಕರಿಗೆ ವರ್ಗಾಯಿಸಲು ಪ್ರಯತ್ನಿಸಿ ಐತಾಳರು ಅಡುಗೆಯ ದರ ಹೆಚ್ಚಳ ಮಾಡಿದ್ದರಿಂದ ಇನ್ನಷ್ಟು ಅನಾಹುತವೇ ಆಗಿದೆ. ಇದರಿಂದ ಸನ್ಮಾನ ಮಾಡುವವರ ಸಂಖ್ಯೆ ಮತ್ತಷ್ಟು ಹೆಚ್ಚಿದೆ. ಪ್ರತಿ ಸನ್ಮಾನವೂ ಐತಾಳರನ್ನು ಸಾಲದ ಶೂಲದಲ್ಲಿ ಇನ್ನಷ್ಟು ಆಳಕ್ಕೆ ತಳ್ಳುತ್ತಲೇ ಇದೆ.
   ಹರಿಕೃಷ್ಣ ಐತಾಳರು ತಮ್ಮ ವ್ಯವಹಾರದಲ್ಲಿ ಸೋಲುತ್ತಿರುವುದು ಮತ್ತು ಅವರಿಗೆ ಸನ್ಮಾನದ ಗೀಳು ವಿಪರೀತವಾಗಿ ಅಂಟಿಕೊಂಡಿರುವುದು ದೊಡ್ಡ ಐತಾಳರಿಗೆ ಈಗ ಖಚಿತವಾಗಿಹೋಗಿತ್ತು. ನೇರವಾಗಿ ಅಲ್ಲದಿದ್ದರೂ, ಹರಿಕೃಷ್ಣ ಐತಾಳರ ಅಡುಗೆಯವರನ್ನು ಆಗಾಗ ಕರೆದು ವ್ಯವಹಾರ ಹೇಗೆ ನಡೆಯುತ್ತಿದೆ ಎಂದು ವಿಚಾರಿಸುತ್ತಿದ್ದರು. ಅನಸೂಯಮ್ಮನವರನ್ನು ಒಂದೆರಡುಬಾರಿ ಕರೆದು ಗಂಡನಿಗೆ ಕೆಲಸದ ಮೇಲೆ ಹೆಚ್ಚಿಗೆ ಗಮನಕೊಡುವಂತೆ ತಿಳಿಸಲು ಸೂಚಿದ್ದರು. ಹೊಟ್ಟೆಕಿಚ್ಚಿನಿಂದಾಗಿಯೇ ಈ ಮುದುಕ ಹೀಗೆ ಹೇಳುವುದು ಎಂದು ಅನಸೂಯಮ್ಮ ತಿಳಿದದ್ದಷ್ಟೇ ಅಲ್ಲ, ಅದನ್ನು ಅವರಿವರ ಹತ್ತಿರ ಹೇಳಿಯೂ ಬಿಟ್ಟಿದ್ದರು. ಸುದ್ದಿ ಹೇಗೋ ವೆಂಕಟರಮಣ ಐತಾಳರಿಗೆ ತಿಳಿದು `ಅವ ಏನಾದರೂ ಮಾಡ್ಕೊಂಡು ಸಾಯಲಿ, ನಿಮಗೆಂತಕೆ  ಅದರ ಉಸಾಬರಿ?’ ಎಂದು ಅಪ್ಪನಿಗೆ ತಿಳಿಹೇಳಿದ್ದರು. 
                                               ***
  `ಹರಿಕೃಷ್ಣ ಐತಾಳರ ಮನೆಯಲ್ಲವ?’ ಎಂದು ಅವರು ಕೇಳಬಹುದಾದ ಪ್ರಶ್ನೆಯನ್ನು ಮೊದಲೇ ಊಹಿಸಿಕೊಂಡದ್ದರಿಂದ, ಕಾರು ಇಳಿದು ಅವರು ಬಾಯಿತೆರೆಯುತ್ತಲೇ `ಹೌದೌದು.. ಇದೇ ಮನೆ’ ಎಂದು ಅನಸೂಯಮ್ಮ ಗೇಟು ತೆರೆದು ಸ್ವಾಗತಿಸಿದರು. ಸೂಟು ಬೂಟು ಧರಿಸಿ ಬಂದ ನಾಲ್ವರಲ್ಲಿ ಒಬ್ಬರು `ಇದ್ದಾರಾ ಐತಾಳರು?’ ಎಂದು ಕೇಳಿದರು. `ಸ್ನಾನಕ್ಕೆ ಹೋಗಿದ್ದಾರೆ, ಈಗ ಬರ್ತಾರೆ, ಕುಳಿತುಕೊಳ್ಳಿ’ ಎಂದು ಹೇಳಿ ಅನಸೂಯಮ್ಮ ಚಹಾ ಮಾಡಲು ಒಳಗೆ ಹೊರಟರು. ಅಡುಗೆ ಮನೆಗೆ ಹೋಗುವ ಮೊದಲು `ನಿಮಗೆ ಚಾ ಆಗ್ಬಹುದಾ ಕಾಫಿ ಮಾಡಲಾ’ ಎಂದು ಕೇಳಬೇಕೆಂದುಕೊಂಡವರು ಹಾಗೆ ಕೇಳದೇ ಒಳನಡೆದರು. ಹಾಗೆ ಕೇಳದಿರಲು ನಿನ್ನೆಯಷ್ಟೇ ಮಾಡಿದ ಕಷಾಯ ಪುಡಿಯ ನೆನಪಾದದ್ದು ಒಂದು ಕಾರಣವಾದರೂ ಅತಿಥಿಗಳಲ್ಲೇ ಆಯ್ಕೆ ಕೇಳಿದರೆ, ಅವರು `ಏನೂ ಮಾಡುವುದು ಬೇಡ’ ಅಂತಲೋ ‘ನಾವು ಈಗಷ್ಟೇ ಕಾಫಿ ಮುಗಿಸಿ ಬಂದಿದ್ದೇವೆ’ ಅಂತಲೋ ಏನಾದರೊಂದು ಹೇಳುವುದು, ಆ ನಂತರ ಒತ್ತಾಯ ಮಾಡುವುದು, ಹೀಗೆ, ಪೂರ್ವನಿರ್ಧಾರಿತವೆಂಬಂತೆ ನಡೆಯುವ ನಾಟಕೀಯ ಸನ್ನಿವೇಶಗಳನ್ನು ತಪ್ಪಿಸುವ ಉದ್ಧೇಶವೂ ಅನಸೂಯಮ್ಮನಿಗಿತ್ತು. 
  ಯಾರ್ಯಾರೋ ತನ್ನ ಗಂಡನಿಗೆ ಸನ್ಮಾನ ಮಾಡುತ್ತಾರೆ. ಆದರೆ, ತನ್ನ ತವರುಮನೆ ಊರಿನವರು ಮಾತ್ರ ನಿರ್ಲಕ್ಷ ಮಾಡುತ್ತಿದ್ದಾರೆ ಅಂತ ಗಂಡನನ್ನು ಸನ್ಮಾನಕ್ಕೆ ಕರೆಯಲು ಯಾರಾದರೂ ಬಂದಾಗ ಅನಸೂಯಮ್ಮಗೆ ಅನಿಸುತ್ತಿರುತ್ತದೆ. ತವರೂರಲ್ಲಿ ಗಂಡ ಹೆಂಡತಿ ಇಬ್ಬರಿಗೂ ಶಾಲು ಹೊದೆಸಿ ಸನ್ಮಾನ ಮಾಡುತ್ತಿರುವುದನ್ನು ಹಗಲುಗನಸು ಕಾಣುತ್ತಾ ಆಗಾಗ ಖುಷಿಪಟ್ಟುಕೊಳ್ಳುತ್ತಾರೆ. ಇದೆಲ್ಲ ಊಹೆ ಎಂದು ಎಚ್ಚರಗೊಳ್ಳುತ್ತಲೇ ಪೆಚ್ಚಾಗುತ್ತಾರೆ. ನೂರನೇ ಸನ್ಮಾನವನ್ನು ತನ್ನ ತವರೂರಲ್ಲೇ ಮಾಡಬೇಕೆಂದು ತಾನು ಪಟ್ಟುಹಿಡಿದ ವಿಚಾರವನ್ನು ಈಚೆಗೆ ತವರಿಗೆ ಹೋದಾಗ ಹೇಳಿದ್ದರೂ ತನ್ನ ಅಣ್ಣನ ಮಕ್ಕಳಾಗಲೀ ಇನ್ಯಾವ ಹಿರಿಯರಾಗಲೀ ಉತ್ಸಾಹ ತೋರಿರಲಿಲ್ಲ. `ಅವರಿಗೆ ಅಷ್ಟೆಲ್ಲ ಕಷ್ಟ ಆಪದಾರೆ, ಖರ್ಚೆಲ್ಲ ನಾನೇ ಕಂಡಕಳ್ತೇನಂದ ಹೇಳ’ ಎಂದು ಐತಾಳರು ಅನಸೂಯಮ್ಮನಲ್ಲಿ ಹೇಳಿದ್ದರು. ಅದನ್ನೂ ಅನಸೂಯಮ್ಮ ಸೂಚ್ಯವಾಗಿ ಮುಟ್ಟಿಸಿದ್ದರು. ಆ ಊರಿನ ಯುವಕ ಸಂಘದ ವಾರ್ಷಿಕೋತ್ಸವದ ಆಮಂತ್ರಣ ಬಂದಾಗ ಐತಾಳರು ಚಂದಾ ಹಣವನ್ನು  ತಕ್ಷಣ ಮನಿಯಾರ್ಡರ್ ಮೂಲಕ ಕಳುಹಿಸಿದ್ದರು. ಊಹೂಂ.. ಐತಾಳರನ್ನು ಸನ್ಮಾನಿಸುವ ಇರಾದೆ ಇರುವ ಯಾವ ಚಿನ್ಹೆಗಳೂ ಕಂಡಿರಲಿಲ್ಲ. ಇದರ ಬದಲು, ಕೆಲವು ಹುಡುಗರು `ಎಂತಕಂದ್ ಅವರಿಗೆ ಸನ್ಮಾನ ಮಾಡೂದ? ಈ ಊರ್ನ ಹೆಣ್ಗಳ ಮದುವೆಯಾದ ಎಷ್ಟಪ ಅಳಿಯಂದಿಕಳಿಲ್ಲ?!’ ಎಂದು ಕೇಳಿದ್ದು ಅನಸೂಯಮ್ಮನ ಕಿವಿಗೂ ಬಿದ್ದು ಗಂಡನ ನೂರನೇ ಸನ್ಮಾನ ತನ್ನ ತವರೂರಲ್ಲೇ ನಡೆಯಬೇಕೆಂಬ ಆಸೆಯನ್ನು ಕೈ ಬಿಟ್ಟಿದ್ದರು. ಆದರೆ, ಖಾಲಿ ಇರುವ ನೂರನೇ ಸನ್ಮಾನದ ಸ್ಥಾನವನ್ನು ಯಾವುದಾದರೂ ಪ್ರತಿಷ್ಠಿತ ಸಂಸ್ಥೆಗಳ ಮೂಲಕ ಸನ್ಮಾನ ಪಡೆಯುವುದರಿಂದಲೇ ತನ್ನ ಗಂಡ ತುಂಬಿಸಿಕೊಳ್ಳಬೇಕೆಂದು ಮನದಲ್ಲೇ ಆಸೆಪಡುತ್ತಿದ್ದರು. ಬಂದವರ ಸೂಟು-ಬೂಟು, ಹಾವಭಾವಗಳನ್ನು ಗಮನಿಸಿ ಯಾವುದೋ ದೊಡ್ಡ ಸಂಸ್ಥೆಯವರೇ ಇರಬೇಕು ಎಂದು ಊಹಿಸಿದರು. ಬೇಗ ಸ್ನಾನ ಮಾಡಲು ಗಂಡನಲ್ಲಿ ಹೇಳುವುದಕ್ಕಾಗಿ ಮತ್ತು ಬಂದವರು ಯಾರೆಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಅಡುಗೆ ಮನೆಯೊಳಗೆ ಹೋದವರು ಪುನಃ ಹೊರಬಂದು `ಯಾರು ಬಂದಿದ್ದಾರೆಂದು ಅವರಿಗೆ ಹೇಳಲಿ?’ ಎಂದು ಕೇಳಿದರು. `ಬ್ಯಾಂಕಿನವರು ಎಂದು ಹೇಳಿ... ಅವರಿಗೆ ಗೊತ್ತಾಗುತ್ತದೆ’ ಅಂದರು. `ಬ್ಯಾಂಕಿನವರು’ ಎಂಬ ಪದ ಅನಸೂಯಮ್ಮನವರಿಗೆ ಯಾಕೋ ಹಿತವಾಗಿ ಕೇಳಿಸಲಿಲ್ಲ. ಒಲೆ ಹೊತ್ತಿಸುವ ಮೊದಲು ಬಚ್ಚಲು ಮನೆಗೆ ಹೋಗಿ `ಯಾರೋ ಬ್ಯಾಂಕಿನವರ ಬಂದೀರ, ಬೇಗ ಸ್ನಾನ ಮಾಡಿ, ಅಂದರು. `ಯಾರ?’ ಎಂದು ಗಂಡ ಪುನಃ ವಿಚಾರಿಸಿದಾಗ ಅವರ ಧ್ವನಿಯಲ್ಲಿ ಆತಂಕವಿರುವ ಹಾಗೆ ಅನ್ನಿಸಿತು. ತಾನು ಗುರುತಿಸಿರುವುದು ತನಗೇ ಇರುವ ಆತಂಕವನ್ನೋ ಅಥವಾ ಗಂಡನ ಧ್ವನಿಯಲ್ಲಿರುವ ಆತಂಕವನ್ನೋ ಎಂಬ ಗೊಂದಲದ ನಡುವೆ- `ಯಾರೋ ಬ್ಯಾಂಕಿನವರಂಬ್ರ’ ಎಂದಷ್ಟೇ ಹೇಳಿ ಅಡುಗೆ ಮನೆಗೆ ಬಂದರು.
   ಕಷಾಯ ಆಗುವುದರೊಳಗೆ ಗಂಡ ಸ್ನಾನ ಮುಗಿಸಿ ಬರುತ್ತಾರೆಂದುಕೊಂಡಿದ್ದ ಅನಸೂಯಮ್ಮಗೆ ನಿರಾಸೆಯಾಯಿತು. ಟೀಪಾಯಿಯ ಮೇಲಿರುವ ಸ್ಮರಣಿಕೆಯನ್ನು ಪಕ್ಕಕ್ಕೆ ಸರಿಸಿ ಒಂದು ಪ್ಲೇಟಿನಲ್ಲಿ ಚಕ್ಕುಲಿ ಮತ್ತು ಗಂಡನಿಗೂ ಸೇರಿಸಿ ನಾಲ್ಕು ಕಪ್ಪು ಕಷಾಯ ತಂದಿಟ್ಟರು. ಗಂಡ ಇನ್ನೂ ಯಾಕೆ ಸ್ನಾನ ಮುಗಿಸಲಿಲ್ಲವೆಂಬ ಆತಂಕವನ್ನು ತೋರಿಸಿಕೊಳ್ಳದೆ `ಅವರು ಈಗ ಬರ್ತಾರೆ, ನೀವು ತೆಗೆದುಕೊಳ್ಳಿ’ ಎಂದರು. ಪುನಃ ಬಚ್ಚಲುಮನೆಗೆ ಹೋಗಿ ಚಿಲಕದ ಸದ್ದು ಮಾಡಿ ಬಂದರು. ಕಷಾಯ ಖಾಲಿಯಾದರೂ ಗಂಡ ಬಾರದಾದಾಗ ಅನಸೂಯಮ್ಮಗೆ ಅವಮಾನ ಆತಂಕಗಳೆಲ್ಲ ಒಟ್ಟಿಗೆ ಸೇರಿ ಹೇಗೇಗೋ ಆಯಿತು. ಈ ಬಾರಿ ಬಚ್ಚಲು ಮನೆಗೆ ಹೋದವರು ಸ್ವಲ್ಪ ಗಟ್ಟಿಯಾಗೇ ಕರೆದರು. ಮಾರುತ್ತರ ಬರಲಿಲ್ಲ. ಇನ್ನೊಮ್ಮೆ ಕರೆದರು, ಈಗಲೂ ಉತ್ತರವಿಲ್ಲ. ಕದ ಬಡಿದರೂ ಮಾತಿಲ್ಲ. ಅನಸೂಯಮ್ಮಗೆ ಏನೇನೋ ನೆನಪಾಗಿ ಭಯವಾಯಿತು. ಒಂದೇ ಸಮನೆ ಕೂಗಿಕೊಳ್ಳಲು ಪ್ರಾರಂಭಿಸಿದರು.
   ಏನೋ ಅನಾಹುತವಾಗಿದೆ ಎಂಬುದನ್ನು ಗ್ರಹಿಸಿ ಬ್ಯಾಂಕಿನವರು ಬಚ್ಚಲ ಮನೆಯ ಕಡೆ ಬಂದರು. ಅನಸೂಯಮ್ಮನನ್ನು ಸಮಾಧಾನಪಡಿಸುವುದು ಮತ್ತು ಒಳಗಿರುವ ಐತಾಳರನ್ನು ಹೊರತರುವುದು ಇವೆರಡರಲ್ಲಿ ಯಾವುದಕ್ಕೆ ಆಧ್ಯತೆ ದೊರೆಯಬೇಕು ಎಂಬುದನ್ನು ಲೆಕ್ಕಹಾಕುತ್ತಾ ಪ್ರೊಬೆಷನರಿ ಅಧಿಕಾರಿಯೊಬ್ಬರು ತಮ್ಮ ಮ್ಯಾನೇಜಮೆಂಟ್ ತರಬೇತಿಯ ಪಟ್ಟುಗಳನ್ನು ಪಣಕ್ಕಿಡುವ ಹುಮ್ಮಸ್ಸಿನಲ್ಲಿರುವಾಗಲೇ ಹಿರಿಯರೊಬ್ಬರು ಏನೋ ಹೊಳೆದವರಂತೆ, `ಐತಾಳರೆ, ಬರುವ ಗುರುವಾರ ನಮ್ಮ ಬ್ಯಾಂಕಿನ ಸಂಸ್ಥಾಪಕರ ನೂರನೇ ಜನ್ಮದಿನದ ಆಚರಣೆ ಇದೆ. ನೀವು ನಮ್ಮ ನೂರನೇ ಅಕೌಂಟ್ ಹೋಲ್ಡರ್ ಆಗಿರುವುದರಿಂದ ನಿಮಗೆ ಸನ್ಮಾನವಿದೆ. ಕಾಗದ ಕೊಡಲು ಬಂದಿದ್ದೇವೆ’ ಎಂದು ಒಂದೇ ಉಸಿರಿನಲ್ಲಿ ಗಟ್ಟಿಯಾಗಿ ಹೇಳಿದರು. 
   ಕಿರ್ರನೆ ಶಬ್ಧ ಮಾಡುತ್ತಾ ತೆರೆದುಕೊಂಡ ಬಾಗಿಲಿನ ಜೊತೆಗೆ ಹೊರಬಂದ ಹರಿಕೃಷ್ಣ ಐತಾಳರು `ನೀರು ಬಹಳ ಬಿಸಿ ಇತ್ತ್ತು...ತಲೆ ತಿರುಗಿದ  ಹಾಗಾಗಿ ಅಲ್ಲೆ ಕುಳಿತುಬಿಟ್ಟೆ.. ಛೇ!...ನೀವೆಲ್ಲ ಕಾಯುವ ಹಾಗಾಯಿತು’ ಎಂದರು. 
  ಅನಸೂಯಮ್ಮಗೆ ನಿಂತಿರುವ ನೆಲ ನಿಧಾನಕ್ಕೆ ವಾಲುತ್ತಿರುವಂತೆ ಅನ್ನಿಸಿತು. ಗೋಡೆ ಹಿಡಿದುಕೊಂಡು ಅಲ್ಲೇ ಕುಸಿದುಬಿಟ್ಟರು.
______________________________________________________________

2 comments:

sunanda said...

ಉದಯ್,
ಒಂದು ಅರ್ಥಪೂರ್ಣ ಸಂದೇಶವನ್ನು ನೀಡುವ ಸೂಕ್ಷ್ಮ ವಿವರಗಳನ್ನೊಳಗೊಂಡ ಕತೆ, ಹರಿಕೃಷ್ಣ ಐತಾಳ ಹಾಗೂ ಅನುಸೂಯಮ್ಮಳ ಸನ್ಮಾನದ ಹುಚ್ಚು, ಅವರ ದೈನಂದಿನ ಬದುಕನ್ನು ಹೇಗೆ ಶಿಥಿಲಗೊಳಿಸುತ್ತ ಸಾಗುತ್ತಿದೆ ಎಂಬುದನ್ನು ಗಮನಿಸುತ್ತಿರುವ ದೊಡ್ಡ ಐತಾಳರ ಕಾಳಜಿಗಳನ್ನು ಅಸೂಯೆಯ ನೆಲೆಯಲ್ಲಿ ನೋಡುವ ಕಥಾ ನಿರೂಪಣೆಯು, ಕೊನೆಯಲ್ಲಿ ನೀಡುವ ಅಚಾನಕ್ಕಾದ ಶಾಕ್, ಹರಿಕೃಷ್ಣ ಐತಾಳರದಷ್ಟೆ ಅಲ್ಲ, ಓದುಗರದೂ ಆಗುವಂತಿದೆ. ಬ್ಯಾಂಕಿನ ಅಧಿಕಾರಿಗಳು ಬಾತ್ರೂಮಿನ ಬಾಗಿಲು ತೆರೆಯಲು ಮಾಡಿದ ಉಪಾಯದಲ್ಲೇ ಮನುಷ್ಯನ ಆಸೆ, ಚಪಲ, ಪ್ರಚಾರ ದಾಹಗಳ ಪ್ರಲೋಭನೆಗಳು ಮಿಳಿತಗೊಂಡಿವೆ..ಒಳ್ಳೆಯ ಅನುಭವವೊಂದನ್ನು ಸ್ಪುರಿಸುವ ಕತೆ.
ಕಥಾಪಯಣ ಹೀಗೇ ಮುಂದುವರೆಯಲಿ.

Uday Gaonkar said...

ತುಂಬಾ thanks. ನಾನು ಕಾಮೆಂಟ್ ಬಾಕ್ಸನ್ನು ನೋಡದೇ ಬಹಳ ದಿನಗಳಾಗಿದ್ದವು.
ಮೆಚ್ಚುಗೆ ಬಹಳ ಖುಷಿ ನೀಡಿತು.