Sunday 31 December 2023

ಮುಟ್ಟಿನ ಪದಗಳು

 ನಾನು ಮುಟ್ಟಾದ ದಿನ;

ಅಣ್ಣನ ಕಿಸಕ್ಕನೆ ನಗು
'ಹೆಣ್ಣು ಜನ್ಮಕ್ಕಂಟಿದ ಬವಣೆ'
ಅಮ್ಮನ ವಿಷಾದದ ಮಾತು
ನನಗೆ ಮಾತ್ರ ಪರೀಕ್ಷೆಯಲಿ
ನನ್ನ ಸೋಲಿಸುವ ಹುನ್ನಾರದಲ್ಲಿರುವ
ಹುಡುಗನ ನೆನಪು
ಅವನಿಗಿಲ್ಲದ ತೊಡರೊಂದು
ನನಗೆದುರಾದ ನೋವು
ತೊಡೆಯ ಸಂಧಿಯಲಿಷ್ಟು
ಬಟ್ಟೆ ತುರುಕಿ ಶಾಲೆಗೆ ಓಡಿದವಳ
ಕುಂಟುನಡಿಗೆಗೆ:
ಗೆಳತಿಯರ ಗುಸುಗುಸು!
ಲೆಕ್ಕಮಾಡಲು ಬೋರ್ಡಿಗೆ
ಕರೆದ ಶಿಕ್ಷಕರೂ
ಲಂಗಕೆ ಅಂಟಿದ ಕೆಂಪ ಕಂಡು ಪೆಚ್ಚು!
ಎಂದೂ ತಪ್ಪದ ಲೆಕ್ಕ ತಪ್ಪಾಗಿತ್ತು
ರಾತ್ರಿ
ಅಪ್ಪ ಹೇಳಿದ
ದ್ರೌಪದೀ ವಸ್ತ್ರಾಪಹರಣದ ಕಥೆ
ಮುಟ್ಟಾದವಳ
ಹಿಡಿದೆಳೆದ ದುಷ್ಟ ತೊಡೆ ಮುರಿದು
ರಣಾಂಗಣದಲ್ಲಿ ಬಿದ್ದಿದ್ದ
ಉರಿವ ತೊಡೆಯ ಗಾಯಕ್ಕೆ
ಕಥೆಯ ಮುಲಾಮು
ತಿಂಗಳ ಸ್ರಾವ ಸುರಿಯುತ್ತ
ಮೈಲಿಗೆಯ ಪಟ್ಟ ಹೊತ್ತ
ಕಾಲ ಸರಿದು
ನಾ ಹೇಳಿದಲ್ಲದೇ ಮುಟ್ಟು
ಬಯಲಾಗದ ಗುಟ್ಟು
ಮುಟ್ಟು ಹುಟ್ಟುವ ಗರ್ಭದಲಿ
ಮಗುವ ಹೊತ್ತು ನಿಂತಾಗ
ಮುಟ್ಟೂ ಒಂಥರಾ ಹಿತವೆನಿಸಿ,
ಮುಟ್ಟಾಗುವವರ ಮುಟ್ಟೆನೆಂದ
ದೇವರ ಮೇಲೆ ಸಿಟ್ಟು-
- ನೆತ್ತಿಗೇರಿ
ಮುಟ್ಟಿಲ್ಲದೇ ಹುಟ್ಟಿದ ನಿನ್ನ
ಕಣ್ಣೆತ್ತಿಯೂ ನೋಡೆವು ಎಂಬ ದಿವ್ಯ
ಉದಾಸೀನದ ಹಣತೆ ಬೆಳಗಿ
ಮುಟ್ಟಿದಲ್ಲದೇ, ಮುಟ್ಟಿಲ್ಲದೇ
ಹುಟ್ಟಿಲ್ಲವೆಂದರಿಯದ ಮುಠ್ಠಾಳರೇ,
ಎಲ್ಲ ಸಹಿಸಬಹುದು ಮುಟ್ಟಿನ
ಬಿಲಕ್ಕೆ ದುರ್ಬೀನು ಇಡುವ
ಕ್ರೌರ್ಯವ ಹೇಗೆ ಸಹಿಸುವುದು?
ಹೊಕ್ಕಿಬಿಡಿ ಮುಟ್ಟು ಸುರಿಯುವ
ದಾರಿಯಲಿ, ನಿಮ್ಮ ಹುಟ್ಟಿನ
ಗುಟ್ಟಲ್ಲದೇ ಬೇರೇನಿಹುದಲ್ಲಿ?

ಸುಧಾ ಆಡುಕಳ
_________________
ಮುಟ್ಟು
ಕಲ್ಲೂ ಕೊನರುವುದು
ಮುಟ್ಟು
ಮುರುಟಿದ ಪ್ರೇಮ
ಅರಳುವುದು
ಮುಟ್ಟು
ಕೊಳಲ ಸ್ಪರ್ಷಕ್ಕೇ
ತುಟಿ ಬದುಕ ಹಾಡುವುದು
ಮುಟ್ಟು
ಎದೆಯ ಪಣತೆಯಲಿ
ಅರಿವ ದೀಪ ಉರಿವುದು
ಮುಟ್ಟು
ಶತಮಾನಗಳ ಸಂಕಟವು
ಧುಮ್ಮಿಕ್ಕಿ ತಿಳಿ ನೀರ ಕೊಳವಾಗುವುದು
ಮುಟ್ಟು
ನಿನ್ನ ಹುಟ್ಟರಿವೆ
ಮತ್ತು ದೇವರದೂ....

ಕೆ.ನೀಲಾ
ಮನೆಯೊಳಗೆ ಏಕೆ
ಬರುತ್ತಿಲ್ಲ ಎಂದದ್ದಕ್ಕೆ
ಅಪ್ಪನ ಅಡುಗೆ
ರುಚಿಯಾಗುತ್ತಿಲ್ಲವಾ?
ಅಮ್ಮನ ಪ್ರಶ್ನೆ.
ಮತ್ತೂ ಹಠ ಮಾಡಿದರೆ-
ಕಾಗೆ ಮುಟ್ಟಿತು ನನ್ನ,
ಸುಮ್ಮನಿರು ಎಂಬ ಗದರಿಕೆ.
ಅಪ್ಪನನ್ನೇಕೆ ಎಂದೂ
ಮುಟ್ಟುವುದಿಲ್ಲ
ಆ ಹಾಳಾದ ಕಾಗೆ!
-ನನ್ನ ಗೊಣಗಾಟಕ್ಕೆ
ಅಮ್ಮನದು ಮುಗುಳ್ನಗು.
******************
ಆಕೆ ಭೂಮಿಯಂತೆ;
ಹುಟ್ಟಿನೊಂದಿಗೇ
ಅಷ್ಟೂ ಅಂಡಗಳನ್ನು
ಹೊತ್ತು ತಂದವಳು.
ಹುಟ್ಟಿಸುವ ಹಂಬಲ
ನೆತ್ತರಿನಲ್ಲಿ‌
ಕೊನೆಗೊಂಡರೇನಂತೆ
ತಿಂಗಳ ಸ್ರಾವವೂ
ತಿಂಗಳ-ಬೆಳಕಿನಂತೆ!
ಪೂರ್ಣಗೊಳ್ಳುವ
ಪ್ರಯತ್ನಕ್ಕೆ
ಕೊನೆ ಮೊದಲಿರುವುದಿಲ್ಲ.
**************
ಸಾವಿರದ ಮನೆಯ
ಸಾಸಿವೆ ತರಲು ಹೋದ
ಕಿಸಾಗೋತಮಿ
ಹಿಂತಿರುಗಿ ಬಂದಳು.
ಮುಟ್ಟಿರದ ಯೋನಿಯಿಂದ
ಹುಟ್ಟಿರುವವನನ್ನು
ಹುಡುಕಿಕೊಡು ಎಂದಳು.
*************
ಹುಟ್ಟು- ಸಾವುಗಳಿರದ
ದೇವಾನುದೇವತೆಗಳಿಗೆ
ಕಡ್ಡಾಯ ನಿವೃತ್ತಿ ಬೇಕು.
ಅವರೂ ನಮ್ಮ-ನಿಮ್ಮಂತೆ
ಮುಟ್ಟಾಗುವ ಮಾತೆಗೆ
ಮಗುವಾಗಿ ಹುಟ್ಟಬೇಕು.
*******************
ಮುಟ್ಟಬೇಡ ಮಗಾ
ಮೀಯಬೇಕಾಗುತ್ತದೆ
ಎಂಬ ಅಮ್ಮನ ಎಚ್ಚರಿಕೆಯನ್ನು
ಕಡೆಗಣಿಸಿ ಮುಟ್ಟಿಸಿಕೊಂಡ
ನೆನಪಾಯಿತು.
ಅಮ್ಮನ ಅಪ್ಪುಗೆಯ ಬಿಸಿಗಿಂತ
ಮುಟ್ಟಿನ ಮೈಲಿಗೆ ಹೆಚ್ಚಲ್ಲ
ಎಂದು ನಿರಾಳದಲ್ಲಿ ನಿದ್ದೆ
ಹೋದದ್ದಷ್ಟೇ ಗೊತ್ತು.
**************
ಮುಟ್ಟಾದ ಮಾತೆಯ
ಹೊಟ್ಟೆಯಲ್ಲಿ ಹುಟ್ಟಿಸಿದ್ದಕ್ಕೆ
ಆ ದೇವರಿಗೆ ಕೃತಜ್ಞತೆ
ಸಲ್ಲಿಸಬೇಕೆಂದುಕೊಂಡೆ
ಆ ಭಾಗ್ಯವಿರದ ದೇವರ
ಹೊಟ್ಟೆ ಉರಿಸುವುದೇಕೆಂದು
ಸುಮ್ಮನಿದ್ದುಬಿಟ್ಟೆ!

ಉದಯ ಗಾಂವಕಾರ

_________ಅವಳ ಮುಟ್ಟು
ಆಕೆಗಿನ್ನೂ ನೆನಪಿದೆ
ಅವಳು ಮೈನೆರೆದ ಆ ದಿನ..!
ಅಳುತ್ತಾ ಬಂದು ಅಪ್ಪನ ಅಪ್ಪಿ
ಕಣ್ಣೊಳಗೆ ಕಣ್ಬೆರಸಿ
ಕೆಂಪು ಮೆತ್ತಿದ್ದ ಬಟ್ಟೆಯ ತೋರಿ
ನೆತ್ತರ ಕಥೆ ಹೇಳಿದ ದಿನ..!
ಇನ್ನೂ ಗೋರಿ ಸೇರಿರದ ಅಪ್ಪ
ತಡವುತ್ತಾ ಬಂದು...
ಆಗಸದಿ ಶೂನ್ಯ ದೃಷ್ಟಿಯ ನೆಟ್ಟು
ಬರಸೆಳೆದು ಅಪ್ಪಿ ಮುತ್ತಿಟ್ಟ ಆ ದಿನ...
ಅಂದು... ಅಪ್ಪನ ಕಣ್ಣಂಚುಗಳಲ್ಲಿ
ನೀರು ಜಿನುಗಿತ್ತು...
ಮತ್ತೆ ಅವಳ ಕಣ್ಣುಗಳಲ್ಲಿ
ಭಯ ಹೊತ್ತ ಕುತೂಹಲ....!
ಅವಳಿಗೇನು ತಿಳಿದಿತ್ತು...
ಸಗಣಿ ನೀರ ತಲೆಯ ಮೇಲೆ ಚಿಮುಕಿಸಿ
ಮನೆಯ ಬಚ್ಚಲಲ್ಲಿ ಬೆಚ್ಚಗಿದ್ದ
ನಾಲ್ಕು ಚೊಂಬು ನೀರನ್ನು
ದಡದಡನೆ ಬಗ್ಗಿಸಿ
ಚಂದಕ್ಕೆ ಮಡಿಸಿದ ಕರವಸ್ತ್ರವ ಕೊಟ್ಟ
ಪಕ್ಕದ ಮನೆಯ ಹುಡುಗಿ
ಅಂದಿಗೆ ಅಮ್ಮನಾಗುವಳೆಂದು..!
ಆಕೆ ಕೊಟ್ಟ ಕರವಸ್ತ್ರವ
ಒಳ ಉಡುಪಿನೊಳಗೆ
ತುರುಕಿಕೊಂಡು...ಕಾಲು ಅಗಲಿಸಿ
ನಡೆವಾಗ ಆಕೆಗೆ
ಹೆಣ್ಣಾಗುವುದು
ಮಣ್ಣಾಗುವುದು...ಒಂದೇ ಎನಿಸಿತ್ತು.
ಅಮ್ಮ..ಬೆವರ ಮಾರಿ
ಒಡಕು ಪಾದಗಳಲ್ಲಿ
ಜಗವ ಸುತ್ತಿ ಬಂದವಳಿಗೆ
ನಿನ್ನೆ ರಾತ್ರಿಯೇ ಆರಿಹೋಗಿದ್ದ
ಒಲೆಗೆ ತನ್ನುಸಿರ ಧಾರೆಯನೇ ಎರೆದು
ಬೂದಿಯೊಳಗೆ ಬೆಚ್ಚಗೆ ಅವುಚಿ
ಇನ್ನೂ ಉಸಿರು ಬಿಗಿ ಹಿಡಿದ
ಕೆಂಡವ ಕೆದಕಿ ಊದಿ ಊದಿ
ಮತ್ತೆ ಜೀವ ಸುರಿಯುವ ಧಾವಂತ..!
ಯಾರದೋ ಹೊಲದ ಬೇಲಿಯ ಹೊಕ್ಕಿ
ಪೊದೆಗಳೊಡನೆ ಗುದ್ದಾಡಿ..ಜಯಿಸಿ
ಹೊತ್ತು ತಂದ ಪುಳ್ಳೆಕಡ್ಡಿಗಳ ಕಟ್ಟು ಬಿಡಿಸಿ
ಒಲೆಯ ಬಾಯಲ್ಲಿ ತುರುಕಿ
ಕಡ್ಡಿ ಗೀರುವಳು
ಕೊತಕೊತನೆ ಕುದಿಸುವಳು
ಒಡಲ ಉರಿಯಲ್ಲೇ
ತಪ್ಪಲೆಯ ಗಂಜಿಯ...
ಅವಳು ಮೈನೆರೆದ ಆ ದಿನ
ಮನೆಯಲ್ಲೆಲ್ಲಾ
ಸೂತಕವ ಹೊತ್ತ ಛಾಯೆ...
ಮೈಯಲ್ಲಿ ಕೂದಲು ಚಿಗುರಿ
ಮೊಲೆ ಮೂಡುವುದ
ಹೇಳಿ ಕೊಡಲಿಲ್ಲ ಅಮ್ಮ...
ನೆತ್ತರು ಒಸರಿ ಮೈಮನಕ್ಕೆ
ಮೆತ್ತಿಕೊಂಡಾಗಲೂ
ಬಾಯಿ ತೆರೆಯಲಿಲ್ಲ ಅವಳು..
ಹೊತ್ತೊಯ್ದು ಹುಯ್ದಳು
ಕಂಡಕಂಡವರ ಬಚ್ಚಲಲ್ಲಿ ಕುದಿನೀರ...
ಅಪರೂಪಕ್ಕೊಮ್ಮೆ
ತಾಗಿದ ಬಿಸಿಯ ಚುರುಕಿಗೆ
ಅರಚಿದರೆ... ಗಿಡುವಿದಳು
ಬೆನ್ನ ಮೇಲೆ ಧಿಡ್ಡೆನೆ ಸದ್ದಾಗುವಂತೆ...
ಇದ್ದ ಗಂಡಸು ಹಾಸಿಗೆಯ ಮೇಲೆ
ನರಳುಗಳ ಅಪ್ಪಿ ನಿಟ್ಟುಸಿರನೇ
ಉಸಿರುತಿರಲು....
ಮನೆಯ ಮುಂದಿನ
ನಿಸ್ತೇಜ ಅಂಗಳದಲಿ
ನಿಲ್ಲಲಾರದೇ ಹೊರಳುವನು
ಮಂಕು ಮುಖವನೇ ಹೊತ್ತ ಚಂದಿರ
ಹಾಸಿಗೆ ಹೊಕ್ಕ ಅಮ್ಮನಿಗೆ
ನಿದ್ರೆಯೂ...ತೂಗದೇ
ಎದ್ದು ಕುಳಿತು ದೀಪ ಹಚ್ಚುವಳು
ಬಟ್ಟೆ ಬರೆ,ದಿಂಬಿನ ಗಂಟು,
ಗೋಡೆಯ ತೂತುಗಳಲ್ಲಿ ಹೊಕ್ಕು
ರಾತ್ರಿ ಮೈಮನಗಳ ಕೊರೆಯುವ
ತಿಗಣೆಗಳ ಮೈಗೆ
ದೀಪದ ಉರಿ ಸೋಕಿಸಿ..
ಜೀವಭಯದಿ ಓಡುವ
ಅವುಗಳ ಅಟ್ಟಿಸಿ ಗೋಡೆಗೆ ಉಜ್ಜಿ
ತೂಕಡಿಸುವಳು..
ಗಂಡ ಆಗಾಗ ತುತ್ತು ಕೇಳುವನು
ಕಲಸಿ ತಿನ್ನಿಸೆನ್ನುವನು
ಅಳುತ್ತಾ ನರಳುವನು
ನರಳುತ್ತಾ ಅಳುವನು
ಕುದಿಯುವನು ಒಳಗೊಳಗೆ
ಅಡುಗೆ ಕೋಣೆಯ ಪಾತ್ರೆಗಳಲ್ಲಿ
ಕೈತೂರಿಸಿ ತಡವುವನು
ಕೂಳಿಲ್ಲದ ಕುಡಿಕೆಗಳ ಎತ್ತಿ ಕುಕ್ಕುವನು
ಅರೆಹೊಟ್ಟೆಯ ಹೊತ್ತು..
ಮೈಯ ಚೆಲ್ಲಿಕೊಳುವನು.
ಊರಲ್ಲಿ ನಡೆವ ಮಾರಿ ಪೂಜೆಗೆ
ಅವಳೆಂದೂ ಹೋಗಿಲ್ಲ...
ಬಾಗಿಲ ಸಂದಿನಿಂದ
ಆಸೆಗಣ್ಣುಗಳು
ಹೊರ ಇಣುಕುತ್ತಿದ್ದವು ಮಾತ್ರ...
ಗೆಳತಿಯರು ಉಡುತ್ತಿದ್ದರು
ಬಣ್ಣಬಣ್ಣದ ಸೀರೆ...
ಓಲೆ ಡಾಬು ವೈಯಾರಗಳ
ಇವಳು ಉರಿಯುತ್ತಿದ್ದಳು
ಒಳಗೊಳಗೇ ಕಟ್ಟಿಗೆಯ ಕೊರಡುಗಳ
ಒಟ್ಟಿಕೊಂಡು ಎದೆಗೂಡುಗಳೊಳಗೆ...!
ಕುಡಿಮೀಸೆಯವನು
ವಾರೆನೋಟವ ಬೀರಿ ನಸುನಕ್ಕಾಗ
ಹಾರಿದ್ದವು ಎದೆಯ ಕೊಳದಿ
ಸಾವಿರಾರು ಹಂಸಗಳು...
ಹರಿದವು ಮನದ ಕಾನನದಿ
ಲಕ್ಷ ಲಕ್ಷ ಝರಿಗಳು..
ನೋಟು ಬುಕ್ಕುಗಳಲ್ಲಿಯೂ
ನವಿಲುಗರಿಯಾಗಿ ಬಂದು
ಅವುಚಿಕೊಂಡನು...
ಗೀಚಿದ್ದ ಹೃದಯದ ಕವಾಟದೊಳಗೂ
ಅಂಟಿಕೊಂಡನು ಅವಳ್ಹೆಸರ ಪಕ್ಕ...
ಮುದ್ದು ಮುಖದ ಸುಕುಮಾರ....
ಮೂಗಲ್ಲೆ ಚುಂಬಿಸುತ್ತಾ
ಉಸಿರಲೇ ಕಾವು ಕೊಡುವವನು...
ಎದೆಯ ಬಾಗಿಲಲ್ಲೇ
ಕಾದು ಕೂರುವನು
ತೆರೆದ ಪಂಜರದೊಳು
ಚಿವ್ಗುಡುವ ಗಿಳಿಯ....!
ಮುಂಗೈಯ ಬಗೆದು
ನೆತ್ತರಲೇ ಅವಳ ಚಿತ್ತಾರ
ಬರೆದ ಅವನು
ಅವಳ ಪ್ರತೀ ಮುಟ್ಟಲ್ಲು ನೆನಪಾಗುವ
ಅವಳೆದೆಯ ಝರಿಯ ಹಂಸ...!
- ಜಾಹಿಧಾ ಕೊಡಗು
___Friday 28 April 2023

ಮೀನ-ಮೇಷ ಎಣಿಸದೆ ಮೀನ್‌ ಮೈಂಡೆಡ್‌ ಆಗಿ!

ಎರಡು ವರ್ಷಗಳ ಹಿಂದಿನ ಸುದ್ದಿ ಇದು. ಮಲ್ಪೆ ಕಡಲ ಕಿನಾರೆಯಿಂದ  ಮೀನುಗಾರಿಕೆಗೆ ತೆರಳಿದ್ದ ಬಲರಾಮ್ ಎಂಬ ಹೆಸರಿನ ಬೋಟಿನಲ್ಲಿದ್ದ ಮೀನುಗಾರರ ಬಲೆಗೆ ಹದಿನೆಂಟು ಕಿ.ಗ್ರಾಮ್ ತೂಕದ ಗೋಲ್‌ ಮೀನು ಬಿದ್ದಿತ್ತು.  ಇತ್ತೀಚೆಗೆ ಕಾರವಾರ ಬಂದರಿನಲ್ಲೂ ಇಂತದ್ದೇ ಸುದ್ದಿ ವರದಿಯಾಗಿತ್ತು. ಅದು ದೊಡ್ಡ ಮೀನಾಗಿರುವುದಕ್ಕಷ್ಟೇ ದೊಡ್ಡ ಸುದ್ದಿಯಲ್ಲ; ಅದು ದೊಡ್ಡ ಮೊತ್ತವನ್ನೂ ಬೋಟಿನ ಮಾಲೀಕರಿಗೆ  ತಂದುಕೊಟ್ಟಿತು. ಆ ಮೀನು  ಒಂದು ಲಕ್ಷದ ಎಂಭತ್ತೊಂದು ಸಾವಿರದ ಇನ್ನೂರು ರೂಪಾಯಿಗೆ ಮಾರಟವಾಗಿತ್ತು. ಅಂದರೆ, ಕೇಜಿಗೆ ಸುಮಾರು ಹತ್ತು ಸಾವಿರ ಬೆಲೆಬಾಳುವ ಕ್ಯಾಚಿದು. ಒಂದೇ ಮೀನಿಂದ ಇಷ್ಟು ಹಣ ಪಡೆಯುತ್ತಿರುವುದು ಉಡುಪಿಯ ಮಟ್ಟಿಗೆ ದಾಖಲೆ.

ಅದಕ್ಕೂ ಹಿಂದೆ ಮಹಾರಾಷ್ಟ್ರದ ತುಕಾರಾಮ್ ತಾರೆ ಎಂಬವರ ಒಂದೇ ಬಲೆಗೆ ನೂರೈವತ್ತೇಳು ಗೋಲ್‌ ಮೀನುಗಳು ಬಿದ್ದಿದ್ದವು.  ಒಂದು ಕೋಟಿ ಮೂವತ್ಮೂರು ಲಕ್ಷ ರೂಪಾಯಿಗಳಷ್ಟು ಹಣಕ್ಕೆ ಆ ಮೀನುಗಳು ಮಾರಾಟವಾಗಿ ತಾರೆಯ ಗ್ರಹಗತಿ ಬದಲಿಸಿದ್ದವು.

ಗೋಲ್ ಮೀನು ಕಲ್ಮುರಿಯಂತೆ ಸಂದಿಗೊಂದುಗಳಲ್ಲಿ ಬದುಕುವ ಮೀನು. ಬಲೆಗೆ ಬೀಳುವುದು ಕಡಿಮೆ. ಇದರ ಜೀವಶಾಸ್ತ್ರೀಯ ದ್ವಿನಾಮಕರಣ Protonibea diacanthus. 

ಈಗ ಈ ಸುದ್ದಿ ಯಾಕೆ ಎಂದು ಕೇಳ್ತೀರಾ? ನಾವು ಆಹಾರಕ್ಕೆ ಪೂರಕವಾಗಿ ತಿನ್ನುವ ಹಲವು ಸೂಕ್ಷ್ಮ ಪೋಷಕಾಂಶಗಳನ್ನು ಮೀನುಗಳಿಂದ ಪಡೆಯುತ್ತೇವೆ. ಗೋಲ್ ಮೀನಿನ ಜಠರ ಭಾಗದಲ್ಲಿ ಇರುವ ಚೀಲದಂತಹ ರಚನೆಗೆ ಸಿಂಗಪೂರ್‌, ಹಾಂಗ್‌ ಕಾಂಗ್‌ ಇಂಡೋನೇಶಿಯಾ, ಜಪಾನ್‌ ಗಳಲ್ಲಿ  ಬಹು ಬೇಡಿಕೆಯಿದೆ. ಈ ಚೀಲವೇ ಗೋಲ್ ಮೀನನ್ನು ಗೋಲ್ಡ್ ಮೀನನ್ನಾಗಿಸಿದೆ. ಈ ಚೀಲ ಅಥವಾ ಬೋಟಿಯು ಐಯೋಡಿನ್‌, ಒಮೆಗಾ-3 ಕೊಬ್ಬಿನ ಆಮ್ಲ, ಡಿ.ಎಚ್.ಎ, ಎ.ಪಿ.ಇ, ಕಬ್ಬಿಣ, ಮೆಗ್ನೀಶಿಯಮ್‌, ಸೆಲೆನಿಯಮ್‌ ಮುಂತಾದ ಪೋಷಕಾಂಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತದೆ.  ಗೋಲ್ ಮೀನು ದುಬಾರಿಯಾಗಲು ಇನ್ನೂ ಒಂದು ಮುಖ್ಯ ಕಾರಣವಿದೆ.    ಗೋಲ್ ಮೀನಿನ ಚರ್ಮದಿಂದ  ಕೊಲ್ಲಾಜೆನ್‌ ಎಂಬ ವಸ್ತುವನ್ನು ಸಂಸ್ಕರಿಸುತ್ತಾರೆ. ನಮ್ಮ ದೇಹದ ವಿವಿಧ ಅಂಗಾಂಶಗಳನ್ನು ಅಂಟಿನಂತೆ ಜೋಡಿಸುವ ಒಂದು ಪ್ರೋಟಿನ್‌ ಯುಕ್ತ ವಸ್ತುವೇ ಕೊಲ್ಲಾಜೆನ್. ಇದು ಎಲ್ಲ ಪ್ರಾಣಿಗಳ ದೇಹದಲ್ಲಿರುತ್ತದೆ. ಚರ್ಮದ ಭಾಗದಲ್ಲಿ ಹೆಚ್ಚಾಗಿರುತ್ತದೆ. ಇದರಿಂದ ಚರ್ಮದ ಕಾಂತಿಯನ್ನು ಹೆಚ್ಚಿಸುವ ಸೌಂದರ್ಯವರ್ಧಕ ಕ್ರೀಮುಗಳನ್ನು ತಯಾರಿಸುತ್ತಾರೆ. ಈ ಕ್ರೀಮುಗಳು ವಯಸ್ಸಾಗುವಿಕೆಯನ್ನು ತಡೆಯುತ್ತದೆ ಎಂದು ಕ್ಲೇಮು ಮಾಡುವ ಜಾಹಿರಾತುಗಳನ್ನು ಅನೇಕರು ನೋಡಿರಬಹುದು. ಇಂತಹ ಕ್ರೀಮುಗಳನ್ನು ಬಳಸಿರಬಹುದು ಕೂಡಾ.  ಅಲಂಕಾರ ಮಾಡಿಕೊಂಡು ದೇವಸ್ಥಾನ, ಚರ್ಚು, ಮಸೀದಿಗಳಿಗೂ ಹೋಗಿರಬಹುದು..

****

ಜೀವ ಒತ್ತೆ ಇಟ್ಟು ತಿನ್ನುವುದಾದರೆ ಇದೇ ಮೀನು ತಿನ್ನಿ.

.

ಪಫ್ಫರ್ ಫಿಶ್ ಎನ್ನುವ ಮೀನೊಂದಿದೆ. ಬ್ಲೋ ಫಿಶ್, ಗ್ಲೋಬ್ ಪಿಶ್, ಬಲೂನ್ ಫಿಶ್ ಎಂದೆಲ್ಲ ಕರೆಸಿಕೊಳ್ಳುತ್ತದೆ  ಈ ಮೀನು, ವೈರಿಗಳು ಇಲ್ಲದಿದ್ದಾಗ ಸರ್ವಸಾಮಾನ್ಯ ಮೀನುಗಳಂತೆಯೇ ಈ ಮೀನೂ ಕಾಣುತ್ತದೆ. ಆದರೆ ಯಾವಾಗ ಶತ್ರು ಎದುರಿಗೆ ಬಂತೋ, ತನ್ನ ಪ್ರಾಣಕ್ಕೆ ಸಂಚಕಾರ ಎಂಬುದು ಈ ಮೀನಿಗೆ ಅರಿವಾಗಿ ಈ  ಮೀನು ತನ್ನ ಸುತ್ತಲಿನ ನೀರನ್ನು ಕುಡಿಯಲು ಆರಂಭಿಸುತ್ತದೆ! ಕೇವಲ ಮೂವತ್ತು ಸೆಕೆಂಡ್ ಕಳೆಯುವುದರೊಳಗೆ ನೀರು ತುಂಬಿ ಫುಟ್ಬಾಲ್‌ನಂತೆ ಕಾಣುತ್ತದೆ! ಅದರ ಮೈಮೇಲಿನ ರೋಮಗಳು ದೊಡ್ಡ ಮುಳ್ಳುಗಳ ರೂಪ ತಾಳುತ್ತವೆ!

ಜಪಾನಿನನ ಜನ ಈ ಮೀನಿನ ಮಾಂಸವೆಂದರೆ ಪ್ರಾಣ ಬಿಡುತ್ತಾರೆ. ಹೌದು, ಈ ಮೀನನ್ನು ತಿಂದು ಕೆಲವರಾದರೂ ಪ್ರಾಣ ಬಿಡುತ್ತಾರೆ ಕೂಡಾ. ಇದರ ಟೆಟ್ರೋಡೊಟಾಕ್ಸಿನ್ ಎಂಬ ಘನಘೋರ ವಿಷ ಕೆಲವೇ ಸೆಕೆಂಡುಗಳಲ್ಲಿ ನರಮಂಡಲದ ವಿದ್ಯುತ್ ತರಂಗಗಳನ್ನು ಸ್ಥಗಿತಗೊಳಿಸುವುದರಿಂದ ನೋಡ ನೋಡುತ್ತಲೆ ವ್ಯಕ್ತಿ ಉಸಿರುಗಟ್ಟಿ ಸಾವಿಗೀಡಾಗುತ್ತಾನೆ! ಫುಗುವಿನ ಪಿತ್ತಜನಕಾಂಗದ ಜೊತೆಗೆ, ಫುಗು ಮೀನಿನ ಅಂಡಾಶಯ ಮತ್ತು ಚರ್ಮ ಅತ್ಯಂತ ವಿಷಯುಕ್ತವಾಗಿದ್ದು, ಈ ಮೀನಿನ ಖಾದ್ಯ ತಯಾರಿಸಲು ಮಾಂಸವನ್ನು ಅತೀ ಸೂಕ್ಷ್ಮವಾಗಿ ಬಿಡಿಸಬೇಕು. ಇದಕ್ಕೆಂದೇ ಪುಗು ಮೀನಿನ ಖಾದ್ಯವನ್ನು ತಯಾರಿಸುವ ಹೊಟೇಲಿನ ಅಡುಗೆಯವರು ಎರಡರಿಂದ ಮೂರು ವರ್ಷಗಳ ಕಠಿಣ ತರಬೇತಿಯನ್ನು ಪೂರೈಸಲೇಬೇಕು.

.

ಗೊತ್ತಾ ನಿಮಗೆ?

.

ತಿಮಿಂಗಲ ಭೂಮಿಯ ಮೇಲೆ ವಾಸಿಸುವ ಅತ್ಯಂತ ದೊಡ್ಡ ಜೀವಿ. ಆದರೆ, ಅದು ಮೀನಲ್ಲ. ವೇಲ್‌ ಶಾರ್ಕ್‌ ಎಂಬ ಸೊರ ಅಥವಾ ಚಾಟಿ ಮೀನು ಸಮುದ್ರದಲ್ಲಿ ವಾಸಿಸುವ ಅತ್ಯಂತ ದೊಡ್ಡ ಮೀನು. ಇದು ಐವತ್ತು ಅಡಿಗಳ ವರೆಗೆ ಬೆಳೆಯಬಲ್ಲದು. ಫಿಲಿಫಿನ್ಸ್‌ ನಲ್ಲಿ ಸಿಗುವ ಗೋಬಿ ಮೀನು ಅತ್ಯಂತ ಚಿಕ್ಕ ಮೀನು. ಈ ಮೀನು ಅರ್ಧ ಇಂಚಿಗಿಂತ ಹೆಚ್ಚಿಗೆ ಬೆಳೆಯಲಾರದು.


ಮೀನು ನಿದ್ದೆ ಮಾಡುತ್ತದೆಯೇ?

ಕಣ್ಣು ಮುಚ್ಚಿಕೊಂಡಿರುವವರೆಲ್ಲ ನಿದ್ದೆ ಮಾಡುತ್ತಿರುವುದಿಲ್ಲ. ಕಣ್ಣು ತೆರೆದವರೆಲ್ಲರೂ ಎಚ್ಚರವಾಗಿಯೇ ಇದ್ದಿರುವುದಿಲ್ಲ. ಹೆಚ್ಚಿನ ಮೀನುಗಳಿಗೆ ಕಣ್ರೆಪ್ಪಗಳಿರುವುದಿಲ್ಲ. ಅವು ತಮ್ಮ ನರ  ವ್ಯವಸ್ಥೆಗೆ ವಿರಾಮನೀಡಲು ನಿದ್ದೆ ಮಾಡುತ್ತವೆ- ಕಣ್ಣು ತೆರೆದುಕೊಂಡೇ!

ಇದೊಂದು ವಿಷಯ ನಿಮಗೆ ಹೇಳಲೇಬೇಕು-ಮೀನೇಕೆ ಗೌಲು?

ಸಮುದ್ರದ ನೀರಿನಲ್ಲಿ ಮೂರು ಶೇಖಡಾದಷ್ಟು ಕರಗಿದ ಲವಣಗಳಿರುತ್ತವೆ. ಸಮುದ್ರವಾಸಿ ಮೀನುಗಳು ತಮ್ಮ ಕೋಶಗಳು ಅಭಿಸರಣೆಯಿಂದ ಚಪ್ಪಟೆಯಾಗದಂತೆ ರಕ್ಷಿಸಿಕೊಳ್ಳಲು ಅಷ್ಟೇ ಪ್ರಮಾಣದ ಅಮೈನುಗಳನ್ನು ಹೊಂದಿರಬೇಕಾಗುತ್ತದೆ. ಸಮುದ್ರದ ಮೀನಿನ ಕೋಶಗಳಲ್ಲಿ  ಟ್ರೈ ಮಿಥಲಮೈನ್‌ ಆಕ್ಸೈಡು ಇರುತ್ತದೆ. ಆದರೆ, ಮೀನಿನ ಸಾವಿನ ನಂತರ ಬ್ಯಾಕ್ಟಿರಿಯಾಗಳು  ಟ್ರೈ ಮಿಥಲಮೈನ್‌ ಆಕ್ಸೈಡನ್ನು ಟ್ರೈ ಮಿಥಲಮೈನ್‌ ಆಗಿ ಪರಿವರ್ತಿಸುತ್ತದೆ. ಈ ಅಮೈನಿಗೆ ಮೀನಿನ ವಾಸನೆ! ಆಮ್ಲವನ್ನು ಸೇರಿಸಿದರೆ ಅದು ಆವಿಯಾಗಿ ಮೂಗಿನವರೆಗೆ ಬರುವುದು ತಪ್ಪುತ್ತದೆ. ಮೀನಿಗೆ ಒಂದು ಚಮಚ ನಿಂಬೆ ರಸ ಸೇರಿಸಿ.

 

ಮೀನಂಬಾಕಂ!


    ಇದು ಎರಡನೇ ಜಾಗತಿಕ ಯುದ್ಧದ ನಂತರ ಜನಪ್ರಿಯವಾಗಿದ್ದ ಜೋಕ್-ಒಬ್ಬ ನಾಜಿ ಅಧಿಕಾರಿ ಯಹೂದಿ ಕುಟುಂಬವೊಂದರ ಜೊತೆ  ರೈಲಿನ ಒಂದೇ ಕಂಪಾರ್ಟ್‌ ಮೆಂಟನ್ನು  ಹಂಚಿಕೊಳ್ಳಬೇಕಾಯಿತು. ನಾಜಿಗಳಿಗೆ ಯಹೂದಿಗಳ ಮೇಲೆ ಎಷ್ಟು ಸಿಟ್ಟಿದೆಯೋ ಅಷ್ಟೇ ಅಸೂಯೆಯಿದೆ. ಅಸೂಯೆಯೆಂದರೆ ಮೆಚ್ಚುಗೆಯ ಇನ್ನೊಂದು ರೂಪ ಅಷ್ಟೇ! ನಾಜಿ ಮನುಷ್ಯ ಯಹೂದಿಯನ್ನು ಮಾತನಾಡಿಸುತ್ತಾನೆ - ``ನೀವು ಯಹೂದಿಗಳು ಇಷ್ಟು ಬುದ್ಧಿವಂತರಾಗಲು ಕಾರಣವೇನು?''

    ``ಇದಕ್ಕೆ ನಮ್ಮ ಆಹಾರವೇ ಕಾರಣ; ನಾವು ಮೀನಿನ ತಲೆ ತಿನ್ನುತ್ತೇವೆ” ಯಹೂದಿ ಉತ್ತರಿಸುತ್ತಾನೆ. ಊಟದ ಸಮಯವಾದುದರಿಂದ ಯಹೂದಿ ಊಟದ ಬಾಕ್ಸನ್ನು ತೆಗೆದು ಹುರಿದ ಮೀನಗಳನ್ನು ತನ್ನ ಕುಟುಂಬಿಕರಿಗೆ ಹಂಚಲು ತೊಡಗುತ್ತಾನೆ. 

    ನಾಜಿಗೆ ಆಸೆಯಾಗುತ್ತದೆ. ತನಗೂ ಮೀನಿನ ತಲೆಗಳನ್ನು ನೀಡುವಂತೆ ಕೇಳುತ್ತಾನೆ. ಅದಕ್ಕೆ ಒಪ್ಪಿದ ಯಹೂದಿ ಆರು ಮೀನುತಲೆಗಳನ್ನು ಆರು ಡಾಲರುಗಳಿಗೆ ನಾಜಿಗೆ ಮಾರುತ್ತಾನೆ. ನಾಜಿ ಒಂದೊಂದೇ ಮೀನಿನ ತಲೆಯನ್ನು ಚೀಪುತ್ತಾ ನಾಲ್ಕನೇ ತಲೆಯನ್ನು ತಿನ್ನುವಾಗ ಏನೋ ಹೊಳೆದವನಂತೆ ``ಆರು ಡಾಲರ್ ಅತಿಯಾಯಿತು. ವಾಸ್ತವವಾಗಿ ಇದು ಮೀನಿನ ಬಿಸಾಡುವ ಭಾಗವಾಗಿತ್ತಲ್ಲವೇ?'' ಎಂದು ಕೇಳುತ್ತಾನೆ.

ಅದಕ್ಕೆ ಯಹೂದಿ ಹೇಳುತ್ತಾನೆ - ``ನೋಡು, ನೀನು ತಿಂದ ಮೀನಿನ ತಲೆ ಈಗಾಗಲೇ ಕೆಲಸಮಾಡಲು ಪ್ರಾರಂಭಿಸಿದೆ!''.

😃

—-----