ಕತೆ: ಬೆರಳುಗಳು- ಉದಯ ಗಾಂವಕಾರ
ಟ್ರೋಮಾ, ಎಮೆರ್ಜೆನ್ಸಿ, ಕ್ಯಾಸುವಾಲ್ಟಿ ಎಂದು ಬೇರೆ ಬೇರೆ ಬೋರ್ಡಿನಲ್ಲಿ ನೇತುಬಿದ್ದಿರುವ ಪದಗಳು ಒಂದೇ ಅರ್ಥದವೋ ಅಥವಾ ಅವುಗಳ ನಡುವೆ ಅರ್ಥವ್ಯತ್ಯಾಸಗಳು ಇವೆಯೋ ಎಂಬುದನ್ನು ನಿಘಂಟು ನೋಡಿ ತಿಳಿದುಕೊಳ್ಳಬೇಕು ಎಂದು ಹಿಂದೆ ಎಂದೋ ಇಲ್ಲಿಗೆ ಬಂದಾಗ ಅಂದುಕೊಂಡದ್ದು ಮತ್ತೆ ನೆನಪಾಯಿತು. ಈಗ ಆರು ದಿನಗಳಿಂದ ಇವೇ ಬೋರ್ಡುಗಳನ್ನು ಅವಶ್ಯಕತೆ ಇಲ್ಲದೆಯೂ ಓದಿಕೊಳ್ಳುತ್ತಾ, ಅಮ್ಮ ಇರುವ ಐ.ಸಿ.ಯು ಗೆ ಹೋಗಿಬರುತ್ತಿದ್ದೇನೆ. ಎಚ್ಚರವಿರುತ್ತಿದ್ದರೆ ಐ.ಸಿ.ಯು ಎಂದರೆ ಇದಾ ಎಂದು ಅಮ್ಮ ಉದ್ಘಾರ ತೆಗೆಯುತ್ತಿದ್ದರು. ಇಪ್ಪತ್ತು ವರ್ಷಗಳ ಹಿಂದೆ ಇರಬೇಕು, ಈಗ ಕರಡಿ ನಾಗಪ್ಪ ಎಂದು ಕರೆಯಿಸಿಕೊಳ್ಳುವ ಹಳೆಮನೆ ನಾಗಪ್ಪನ ಮೇಲೆ ಕರಡಿಯೊಂದು ದಾಳಿ ಮಾಡಿದ್ದರಿಂದ ಮೈಯೆಲ್ಲ ಗಾಯಗಳಾಗಿ ರಕ್ತಸ್ರಾವದಿಂದ ಬದುಕು-ಸಾವಿನ ನಡುವೆ ಏಗುತ್ತಿರುವ ಸ್ಥಿತಿಯಲ್ಲೇ ಆತನನ್ನು ಇದೇ ಆಸ್ಪತ್ರೆಗೆ ಸೇರಿಸಲಾಗಿತ್ತು. ವಾರದ ನಂತರ ಊರಿಗೆ ಬಂದವರೊಬ್ಬರು ನಾಗಪ್ಪನನ್ನು ಐ.ಸಿ.ಯು ನಲ್ಲಿಟ್ಟಿದ್ದಾರೆಂದು ಹೇಳಿದ್ದನ್ನು ಅಮ್ಮ ಐಸಿನಲ್ಲಿ ಎಂದು ತಪ್ಪಾಗಿ ಕೇಳಿಸಿಕೊಂಡಿರಬೇಕು- ತಪ್ಪಾಗಿ ಏನು, ನಾವು ಕೇಳಿಸಿಕೊಳ್ಳುವುದು ನಮಗೆ ಅರ್ಥವಾಗುವುದನ್ನು ಮಾತ್ರವೇ ಅಲ್ಲವೆ? ಹೆಣ ಕೊಳೆಯಬಾರದು ಎಂದು ನಾಗಪ್ಪನನ್ನು ಐಸಿನಲ್ಲಿಟ್ಟಿದ್ದಾರೆಂದು ಅಮ್ಮ ನನ್ನಲ್ಲಿ ಹೇಳಿದ್ದಲ್ಲದೆ, ಆತನ ಅಕಾಲ ಸಾವಿನ ಬಗ್ಗೆ ತುಂಬಾ ವ್ಯಥೆ ಪಟ್ಟುಕೊಂಡಿದ್ದಳು. ನಾಗಪ್ಪ ಗುಣಮುಖನಾಗಿ ವಾಪಸು ಬಂದಾಗ ನಾನೂ ಅಮ್ಮನ ಮುಖವನ್ನು ಪ್ರಶ್ನಾರ್ಥಕವಾಗಿ ನೋಡಿದ್ದೆ. ಆನಂತರ ಎಷ್ಟೋ ವರ್ಷಗಳ ಬಳಿಕ ನನಗೆ ಅದು ಐ.ಸಿ.ಯು ಆಗಿತ್ತು ಎಂಬುದು ಗೊತ್ತಾಯಿತು. ಅಮ್ಮಗೆ ಗೊತ್ತಾಗಿತ್ತೋ ಇಲ್ಲವೋ?.....
ಗೆಳೆಯ ಉದಯ ಗಾಂವಕಾರ ರವರ ಹೊಸ ಕಥೆ...ಬೆರಳುಗಳು ಓದಿದ ನಂತರ ಅನಿಸಿದ್ದು..
ಐಸಿಯುನಲ್ಲಿ ಸೇರಿಸಲಾದ ಅಮ್ಮನನ್ನು ನೋಡಿಕೊಳ್ಳುತ್ತಿದ್ದ ಕಥಾನಾಯಕನ ಸುತ್ತ ಹೆಣೆದ ಈ ಕಥೆಯಲ್ಲಿ ತಾಯಿ ಮಕ್ಕಳ ಸಂಬಂಧಗಳನ್ನು ವಿಶ್ಲೇಷಣೆ ನಡೆಸುವ ಪ್ರಾಮಾಣಿಕ ಪ್ರಯತ್ನವೊಂದನ್ನು ನಡೆಸಲಾಗಿದೆ. ಮದುವೆಯಾದ ಗಂಡು ಮಕ್ಕಳೊಂದಿಗೆ ವಯಸ್ಸಾದ ಅಮ್ಮನ ಸಂಬಂಧಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಚೆಗೆ ಒಳಪಡುವ ಸಂದರ್ಭದಲ್ಲಿ ಈ ಕತೆ ತೆರೆಯುವ ಮಗ್ಗಲುಗಳು ಪ್ರಸ್ತುತತೆಯನ್ನು ಪಡೆದುಕೊಳ್ಳುತ್ತವೆ. ಹೆಣ್ಣುಮಕ್ಕಳೊಂದಿಗಿನ ತಾಯಿಯ ಸಂಬಂಧವನ್ನು
ಸಹ ಇಲ್ಲಿ ಅವಲೋಕಿಸಲಾಗಿದೆ.
ಐಸಿಯುನಲ್ಲಿ ಸೇರಿಸಲಾದ ಅಮ್ಮನ ಬಗ್ಗೆ ಹೆಚ್ಚಿನ ಕಾಳಜಿವಹಿಸುವ ಕಥಾನಾಯಕನ ಅಣ್ಣನಿಗೆ ಸಂಬಂಧ ವ್ಯಾವಹಾರಿಕವಾಗಿ ಕಾಣುತ್ತದೆ. ಅಮ್ಮನನ್ನು ತಮ್ಮನ ಮನೆಯಲ್ಲೇ ಬಿಡಬೇಕೆನ್ನುವ ಅನಿವಾರ್ಯತೆ..."ಒಬ್ಬಳನ್ನು ಕೆಲಸದವಳನ್ನು ಹುಡುಕು...ನಾನೇ ಅವಳ ಸಂಬಳ ಕೊಡುವೆ", ಎನ್ನುವ ಮಾತಿನ ಮೂಲಕ ಗುರ್ತಿಸಲಾಗಿದೆ. ಅಣ್ಣ-ತಮ್ಮಂದಿರ ಮಡದಿಯರು ಗಂಡಂದಿರ ತಾಯಿಯ ಬಗ್ಗೆ ಇಟ್ಟುಕೊಂಡಿರುವ ಸಂಬಂಧಗಳ ಬಗ್ಗೆಯೂ ಇಲ್ಲಿ ವಿಮರ್ಶಿಸಿರುತ್ತಾರೆ..(ಎರಡು ದಿನ ನೋಡಿದರೆ ಏನೂ ಗೊತ್ತಾಗುವುದಿಲ್ಲ ಭಾವಾ ಒಂದು ತಿಂಗಳು ಅತ್ತೆಯನ್ನು ಮನೆಯಲ್ಲಿ ಇಟ್ಟುಕೊಳ್ಳಿ ....ನಿಮಗೇ ತಿಳಿಯುತ್ತದೆ.)
ಸಿಕ್ವೇರಾ ಎನ್ನುವ ಆಸ್ಪತ್ರೆಯ ಸೆಕ್ಯುರಿಟಿ ಗಾರ್ಡ್ ಇಲ್ಲಿ ಒಬ್ಬ ವಿಚಿತ್ರ ಸ್ವಭಾವದ ಒಂದು ಪಾತ್ರ. ತಾಯಿಯನ್ನು ಅತಿಯಾಗಿ ನಂಬುವ ಆತ ತಮ್ಮನ ಹೆಂಡತಿಯನ್ನು ಅನುಮಾನಿಸಿ ತನ್ನ ಮನೆ ಬಾಗಿಲಿಗೆ ಬೀಗ ಹಾಕಿ, ಕುತೂಹಲ ಹುಟ್ಟಿಸುವ ಕಥನ ಸಂದರ್ಭವನ್ನು ಕಥೆಗಾರರು ಬಹಳ ಸ್ವಾರಸ್ಯಕರವಾಗಿ ಚಿತ್ರಿಸಿದ್ದಾರೆ...(ಆರಂಭದ ಕೆಲ ಪುಟಗಳು ಕಿತ್ತುಹೋಗಿರುವ ಪತ್ತೆದಾರಿ ಕಾದಂಬರಿಯನ್ನು ಓದುತ್ತಿರುವಂತೆ....)
ಮತ್ತೊಂದು ಚಿತ್ರಣ, ಪಕ್ಕದ ಬೆಡ್ಡಿನ ಸರೋಜಳ ಅಮ್ಮನ ಬೆರಳುಗಳ ಚಲನೆಯನ್ನು (ಬಹುಷಃ ಬೆರಳಿನ ಚಲನೆಯೆನ್ನುವುದು ಭ್ರಮೆಯದ್ದಾಗಿರಬಹುದು...) ಬಹಳ ಗಂಭೀರವಾಗಿ ಪರಿಗಣಿಸಿ ಕಥಾನಾಯಕನ ಗಮನ ಸೆಳೆಯುವಾಗ ಅಮ್ಮನ ಆರೋಗ್ಯದ ಬಗ್ಗೆ ಮಗಳಿಗಿರುವ ಕಾಳಜಿಯನ್ನು ಅರ್ಥಮಾಡಿಕೊಳ್ಳಬೇಕು..(ಇಲ್ನೋಡಿ ಅಣ್ಣ....ನಾನು ಅಮ್ಮಾ ಎಂದಾಗ ಅಮ್ಮ ಹೇಗೆ ಬೆರಳು ಅಲ್ಲಾಡಿಸಿದರು...) ನಂತರ ಕಥಾನಾಯಕ ತನ್ನ ತಾಯಿಯ ಬೆರಳಿನ ಕಡೆಗೆ ನೋಡಿ ಅಸಹಾಯಕನಾಗುತ್ತಾನೆ
ಇಲ್ಲಿ ಮೂರು ಸಂದರ್ಭಗಳನ್ನು ಸೃಷ್ಟಿಸಿ ತಾಯಿ ಮಕ್ಕಳ ಸಂಬಂಧಗಳನ್ನು ಪ್ರಾಮಾಣಿಕವಾಗಿ ವಿಶ್ಲೇಷಣೆ ನಡೆಸಿದ್ದಾರೆ. ಅದುವೇ ಬಹಳ ಪ್ರಮುಖ ವಿಷಯ ಹಾಗೂ ಕಥಾವಸ್ತು...ಅಲ್ಲದೆ ಕುತೂಹಲ ಪ್ರತಿ ಘಟ್ಟದಲ್ಲೂ ಮುನ್ನುಗ್ಗುತ್ತಿರುವಾಗ ಇದ್ದಕ್ಕಿದ್ದಂತೆ ಕಥೆಯನ್ನು ಸಿಕ್ವೇರಾನ ಒಂದು ಕುತೂಹಲದ ಮಾತಿನೊಂದಿಗೆ ಅಂತ್ಯಗೊಳಿಸಿ ಮುಗ್ಗರಿಸುವಂತೆ ಮಾಡಿದ ಕಥೆಗಾರರ ತಂತ್ರಗಾರಿಕೆ ಮೆಚ್ಚುವಂತಹದ್ದು. ಅಲ್ಲದೆ ಸಿಕ್ವೇರಾನ ಮಾನಸಿಕ ಅಸ್ವಸ್ಥತೆಯನ್ನು ಅನಾವರಣಗೊಳಿಸುವ ಪರಿ ಓದುಗರ ಅನುಕಂಪವನ್ನು ಪಡೆಯುತ್ತದೆ. ಭಾಷಾ ಪ್ರಯೋಗದ ಚತುರತೆಯಿಂದಾಗಿ ಕಥೆ ಬಹಳ ಆಪ್ಯಾಯಮಾನವಾಗಿಸಿ
ಓದುಗರ ಅಂತರಂಗವನ್ನು ಕಲಕಿಬಿಡುತ್ತದೆ..
ಪಾತ್ರಗಳನ್ನು ಕಪ್ಪು ಬಿಳುಪಿನಲ್ಲಿ ಕಟ್ಟದೇ ಓದುಗರು ಹೊಸದೇ
ಆದ ಕತೆಯನ್ನು ರೂಪಿಸಿಕೊಳ್ಳುವಂತೆ ಮತ್ತು ಸಂದರ್ಭವನ್ನು ಬೇರೆ ಕಣ್ಣುಗಳಿಂದ ನೋಡಲು ಅನುವು ಮಾಡಿಕೊಡುವ
ನಿರೂಪಣೆ ಕತೆಗೆ ಪ್ರತಿ ಓದಿನಲ್ಲೂ ವಿಭಿನ್ನ ಆಯಾಮವನ್ನು ನೀಡುತ್ತದೆ.
ಪಾತ್ರಗಳನ್ನು ಕಪ್ಪು ಬಿಳುಪಿನಲ್ಲಿ ಕಟ್ಟದೇ ಓದುಗರು ಹೊಸದೇ ಆದ ಕತೆಯನ್ನು ರೂಪಿಸಿಕೊಳ್ಳುವಂತೆ ಮತ್ತು ಸಂದರ್ಭವನ್ನು ಬೇರೆ ಕಣ್ಣುಗಳಿಂದ ನೋಡಲು ಅನುವು ಮಾಡಿಕೊಡುವ ನಿರೂಪಣೆ ಕತೆಗೆ ಪ್ರತಿ ಓದಿನಲ್ಲೂ ವಿಭಿನ್ನ ಆಯಾಮವನ್ನು ನೀಡುತ್ತದೆ.
ಕತೆಗಾರ ಗೆಳೆಯ ಉದಯ ಗಾಂವಕಾರರವರಿಂದ ಇನ್ನೂ ಹೆಚ್ಚಿನದನ್ನು ನಿರೀಕ್ಷಿಸಬಹುದು ಎನ್ನುವುದನ್ನೀಗ ಖಾತ್ರಿಗೊಳಿಸಿದ್ದಾರೆ.
ವಿಚಿತ್ರ ತಲ್ಲಣವನ್ನು ಹುಟ್ಟುಹಾಕಿದ ಕಥೆ: ಸುಧಾ ಹೆಗಡೆ
ಕಥೆ ಪೂರ್ತಿಯಾಗಿ ಅರ್ಥವಾಯಿತು ಎನ್ನಲಾರೆ, ಹಾಗಾಗಲು ಸಾಧ್ಯವೂ ಇಲ್ಲ, ಹಾಗಾಗಬಾರದು ಕೂಡ. ಆದರೆ ಓದಿನ ನಂತರ ಅದೊಂದು ವಿಚಿತ್ರ ತಲ್ಲಣವನ್ನು ನನ್ನೊಳಗೆ ಹುಟ್ಟುಹಾಕಿದೆ ಮತ್ತು ಅದು ಶಬ್ದಗಳಿಗೆ ನಿಲುಕದ್ದು. ಪಾತ್ರಗಳ ಮನಸ್ಸಿನೊಳಗೆ ಅವರನ್ನು ಅತಿಕ್ರಮಿಸದೇ ಪ್ರವೇಶಿಸುವ ನಿಮ್ಮ ಸೂಕ್ಷ್ಮತೆ ಬಹಳ ಇಷ್ಟವಾಯಿತು. ಕಥೆಗಳನ್ನು ಬರೆಯುತ್ತಿರಿ. ಓದುವುದರ ಮೂಲಕ ಭಾವನೆಗಳ ನವಿರನ್ನು ಸ್ಪರ್ಶಿಸುತ್ತಿರುತ್ತೇವೆ ನಾವು.
ಅಸಂಗತ ನಾಟಕ ನೋಡಿದಂತಾಯಿತು: ರಮೇಶ ಗುಲ್ವಾಡಿ
ಸುಲಭಕ್ಕೆ ದಕ್ಕುವ ಕಥೆ ಅಲ್ಲವೇ ಅಲ್ಲ. ಸನ್ನಿವೇಶಗಳ ಚಿತ್ರಣ,, ವ್ಯಕ್ತಿತ್ವಗಳ ಅನಾವರಣ ಕಥೆಯ ಅನನ್ಯತೆಯನ್ನು ಸಾದರಪಡಿಸುತ್ತದೆ. ಆದರೆ, ಖಂಡಿತವಾಗಿ ನನಗೂ ಅರ್ಥವಾಗಿದೆ ಎಂದು ಹೇಳಲಾರೆ !
ಮರು ಓದು ಅಗತ್ಯ......
........
ಇನ್ನೊಮ್ಮೆ ಓದಿದೆ..
ಇದೊಂದು ಅಸಂಗತ ಶೈಲಿಯ ಕಥೆ ಎಂದು ತಪ್ಪಾಗಿ ಅಂದಾಜಿಸಿದ್ದೆ. ಸಂಗೀತ ವಾದ್ಯಗಳು ಬದುಕಿನ ತುಣುಕುಗಳನ್ನು ಜಾಣ್ಮೆಯಿಂದ ಪೋಣಿಸಿದಾಗ ಗಾಯದ ಮೇಲೆ ಹೆಚ್ಚಿದ ಮುಲಾಮು ಗಾಯವನ್ನು ಮರೆ ಮಾಡುವಂತೆ ಕಥಾರೂಪ ತಳೆದಿದೆ. ಗಾಯದ ಆಳವನ್ನೂ ನಾನು ತಪ್ಪಾಗಿ ಗುರುತಿಸಿದ್ದೆ
ಮಂದಾಕಿನಿ ಮತ್ತು ಬಾಲು ತುಂಬಾ ಪರಿಚಿತ ಪಾತ್ರಗಳು. ಬಹುಶಃ ವಯಸ್ಸಾದ ತಂದೆ ತಾಯಿಗಳು ಇರುವ ಮನೆಗಳಲ್ಲಿ ಇದ್ದೇ ಇರುವ ಪಾತ್ರಗಳು. ಸಂಬಂಧಗಳು ಸಂಕೀರ್ಣಗೊಳ್ಳುವುದೂ ಇಲ್ಲೇ. ಆದರೆ ಕಥೆಯ ನಾಯಕನಾಗುವುದು ಮಾತ್ರ ರಾಬರ್ಟ್ ಸಿಕ್ವೇರಾ !
ಕೆಲವೊಮ್ಮೆ ನನಗೆ ಕಥೆಗಾರ ಮತ್ತು ಸಿಕ್ವೇರಾ ಒಂದೇ ನಾಣ್ಯದ ಎರಡು ಮುಖಗಳಂತೆ ಕಂಡದ್ದಿದೆ." ಬೀಗ" ಎಂಬುದು ಸಂವೇದನೆಯ ಅಭಿವ್ಯಕ್ತಿಯಂತೆ ಎದುರಾಗುತ್ತದೆ. ಸ್ವಂತ ತಾಯಿಯನ್ನು ಮನೆಯೊಳಗೆ ಕೂಡಿ ಹಾಕಿ ಬೀಗ ಜಡಿಯುವ ಆತ ಮತ್ತೊಬ್ಬರ ತಾಯಿಯನ್ನು ಕೂಡಿ ಹಾಕಿರುವ ಐಸಿಯುವಿಗೆ ಕಾವಲುಗಾರನಾಗಿರುವುದು ಒಂದು ವ್ಯಂಗ್ಯ." ಅವರೇನು ಓಡಿ ಹೋಗ್ತಾರಾ ?" ಎನ್ನುವ ಭಾವ ಈ ವ್ಯಂಗ್ಯವನ್ನು ಮತ್ತಷ್ಟು ಪ್ರತಿಫಲಿಸುತ್ತದೆ.
ಸಂಬಂಧಗಳಿಗೆ ಒಡೆಯಲಾಗದ ಬೀಗವೇ ಬೇಕು !
ಸ್ಪಂದನೆಯೆನ್ನುವುದು ಮನಸಿನ ತುಡಿತ. ಬೆರಳುಗಳ ಚಲನೆಯೂ ಭಾಷೆಯಷ್ಟೇ ಸಶಕ್ತ ಸಂವಹನವಾಗುವುದನ್ನೂ ಗುರುತಿಸುವ ಕಥೆಗಾರ ಗೌಣವಾಗಿರುವ ನೋವುಗಳನ್ನು ಭಾವಗಳನ್ನು ಅಭಿವ್ಯಕ್ತಿಗೊಳಿಸುತ್ತಾರೆ.
ಕಥೆಗೆ "ಬೆರಳುಗಳು" ಎಂದೇಕೆ ಹೆಸರಾಯಿತು "ಬೀಗ" ಎಂದದ್ದರೆ ಇನ್ನೂ ಪರಿಣಾಮಕಾರಿಯಾಗುತಿತ್ತಲ್ಲಾ ಎಂದು ಆಲೋಚಿಸಿದೆ . ಮುಚ್ಚಿದ ಬಾಗಿಲಿನೊಳಗಿನ ಕೌತುಕಕಿಂತ ತೆರೆದ ಐಸಿಯು ನೊಳಗಿನ ಬೆರಳ ಚಲನೆ ಹೆಚ್ಚು ಮೌಲ್ಯಯುತವಾದದ್ದು ಎಂಬುದು ಹೊಳೆಯಿತು.
ಮುಚ್ಚಿಟ್ಟ ಸತ್ಯಗಳು ಬಚ್ಚಿಟ್ಟ ಸುಳ್ಳುಗಳು ಒಂದಕೊಂದು ಸಂವಾದಿ. ಆದರ ಮುಂಬಾಗಿಲಿಗೆ ಹಾಕಿದ ಬೀಗ ಹಿಂಬಾಗಿಲ ಹಿಡಿತವನ್ನು ಕಳೆದುಕೊಳ್ಳುವುದು ಕೂಡಾ ಮುಖ್ಯವಾಗುತ್ತದೆ.
ಮನಸಿಗೆ ಹಾಕಿದ ಬೀಗವನ್ನು ಇನ್ನಷ್ಟು ಗಟ್ಟಿಗೊಳಿಸುವುದೋ ಅಥವಾ ಮನಸನ್ನೇ ತೆರೆದಿಟ್ಟುಕೊಳ್ಳುವುದೋ ಆಯ್ಕೆ ಮುಕ್ತ.
ಕಥೆ ಆಪ್ತವಾಗಿದೆ. ಒಳ ಮನಸಿನ ಕದವನ್ನೂ ತಟ್ಟುತ್ತದೆ,ಮತ್ತೊಂದು ಓದು ಹೊಸ ನೋಟಗಳನ್ನು........
.....
ಕಾಯಿ ತೆಗೆದುಕೊಂಡು ಹೋದ ಹುಡುಗ ಸಿಕ್ವೇರಾ ತಮ್ಮನ ಮಗನಿರಬಹುದು.ಬೀಗ ಹಾಕಿದ್ದು ಮುಂಬಾಗಿಲಿಗೆ ಮಾತ್ರ. ಹಿಂದಿನ ಬಾಗಿಲಲ್ಲಿ ಏನೇನೋ ನಡೆಯಬಹುದು.
ಮೇಲಿನವು ಶಾಬ್ದಿಕ ಉತ್ತರ ಗಳು ಅಷ್ಟೇ. ಆದರೆ ಸಂಕೇತ ಬೇರೆಯೇ ಇರಬಹುದೆ......
ಈ ಕಥೆ ಎದೆಯೊಳಗೊಂದು ಬೀಜ ನೆಟ್ಟಿದೆ: ಸಚಿನ್ ಅಂಕೋಲಾ
ಬಹಳ ಭಿನ್ನವಾದ ಕಥೆ .. ನನಗೆ ಚಿತ್ತಾಲರ ಕಥೆಗಳನ್ನು ಓದಿದಾಗ ಉಂಟಾಗುತ್ತಿದ್ದ ಹೊಸತರ ಅನುಭವವೇ ಈ ಕಥೆ ಓದಿನಿಂದಲೂ ಸಿಕ್ಕಿತು..ಅಂತೆಯೇ ಅವರ ಬಹುತೇಕ ಕಥೆಗಳು ಎಷ್ಟೇ ಬಾರಿ ಓದಿದರೂ ಸಂಪೂರ್ಣವಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗದೇ ಅಲ್ಲಲ್ಲಿ ನುಣುಚಿಕೊಂಡು ಹೊಸ ಹೊಸ ಹೊಳಹುಗಳೆಡೆಗೂ ತೆರೆದುಕೊಳ್ಳುತ್ತದೆ.. ಈ ಕಥೆಯೂ ಹಾಗೆಯೇ ಇನ್ನೊಂದೆರಡು ಬಾರಿ ಓದಬೇಕು ಅನ್ನಿಸ್ತಿದೆ ನನಗೆ.. ಬೀಗ ಅನ್ನೋದು ಈ ಕಥೆಯಲ್ಲಿ ಬಹಳ ಸಶಕ್ತವಾದ ರೂಪಕವಾಗಿ ಕಾಡತ್ತೆ, ಮತ್ತು ಬೆರಳುಗಳು ಸ್ಪಂಧಿಸುವ ವಿಚಾರವೂ ಕೂಡ ಹಾಗೆಯೇ... ಬಹಳ ಸೂಕ್ಷ್ಮವಾದ ಒಂಚು ವಿಚಾರ ಕಥಾನಾಯಕನ ತಾಯಿಯನ್ನು ಸೆಕ್ಯೂರಿಟಿ ಕಾಯ್ತಾ ಇದ್ದರೆ ಇತ್ತ ಕಥಾನಾಯಕ ಸೆಕ್ಯೂರಿಟಿಯ ತಾಯಿಯನ್ನು ನೋಡಲು ಅವರ ಮನೆಯೆಡೆ ಹೋಗುತ್ತಾನೆ ಇದು ಕಥೆಯ center of attraction.. ಒಟ್ಟಾರೆ ಈ ಕಥೆ ಎದೆಯೊಳಗೊಂದು ಬೀಜ ನೆಟ್ಟಿದೆ ಮತ್ತು ಒಂದಿಷ್ಟು ದಿನ ಅದು ಮೊಳೆತು ನಮ್ಮೊಳಗೆ ಅದು ತನ್ನದೇ ಆಕಾರಪಡೆಯಬಲ್ಲದು ಅನ್ನಿಸತ್ತೆ..
ಬಾಂಧವ್ಯದ ಕೊಂಡಿಗಳನ್ನು ಬಂಧಿಸುವ ಬೀಗ ಸದ್ಯ ದುರ್ಲಭ: ರಾಘವೇಂದ್ರ ಬೈಂದೂರು
ರಾಬರ್ಟ್ ಸಿಕ್ವೇರ ಬೀಗಕ್ಕಾಗಿ ಹುಡುಕುತ್ತಿದ್ದರೆ, ಓದುಗನಾದ ನಾನು ಆ ಕಥೆಯನ್ನು ತೆರೆಯುವ ಸರಿಯಾದ ಕೀಲಿಗಾಗಿ ತಡಕಾಡುತ್ತಿದ್ದೇನೆ. ಒಂದು ವೇಳೆ ಕಥಾ ನಾಯಕನ ಅಮ್ಮನ ಬೆರಳುಗಳಿಗೆ ಜೀವ ಬಂದರೂ.. ಆತನು ಭವಿಷ್ಯದ ಬಿಂಬವನ್ನು ಅರವತ್ತು ಮೀರಿದ ರಾಬರ್ಟ್ ಸಿಕ್ವೇರನ ಮನೆಯಲ್ಲಿ ಕಂಡಿರಬಹುದು...ಬಾಂಧವ್ಯದ ಕೊಂಡಿಗಳನ್ನು ಬಂಧಿಸುವ ಬೀಗ ಸದ್ಯದ ವರ್ತಮಾನದಲ್ಲಿ ದುರ್ಲಭ..
ಕಾಯಿ ತಗೆದು ಕೊಂಡು ಹೋದ ಆ ಹುಡುಗ ಯಾರು...? ಬೀಗ ಈ ತಾಯಿ ಹೇಗೆ ತೆಗೆದಳು..? ಕಥಾ ನಾಯಕ ಆ ಸೆಕ್ಯುರಿಟಿ ಮನೆ ಹುಡುಕಿಕೊಂಡು ಹೋಗುವ ಕುತುಹಲ...ಈಗ ನನ್ನ ತಲೆ ಒಳಗೆ ಹುಳುವಾಗಿ ಹರಿಯುತಿದೆ...-ಸಂದೇಶ ವಡೇರಹೋಬಳಿ
-------------------------------------
ಉದಯ ಶೆಟ್ಟಿ, ಪಡುಕರೆ
ಚರ್ಚೆಗಳನ್ನು ಗಮನಿಸಿದರೆ ಹೊಸ ವರ್ಷದ ಕಥಾ ಓದುವಿನಲ್ಲಿ ಬೆರಳುಗಳು ಓದೋದೇ ಒಳ್ಳೆಯದೇನೊ. ಕಥೆ ತಪ್ಪಿಸಿಕೊಂಡರೂ ಕಥೆಗಾರರು ತಪ್ಪಿಸಿಕೊಳ್ಳುವಂತಿಲ್ಲವಲ್ಲ ಅವತ್ತು!
No comments:
Post a Comment