Wednesday, 24 June 2015

ಆಟವಾಡುವ ಮನಸ್ಸೇ ಆರೋಗ್ಯವಂತ ಮನಸ್ಸು!






 



* Uday Gaonkar



    ಮಕ್ಕಳಿಗೆ ದೈಹಿಕ ವ್ಯಾಯಾಮ, ಏಕಾಗ್ರತೆ, ಮಾನಸಿಕ ಸ್ಥಿರತೆಯನ್ನು ಒದಗಿಸುವುದಕ್ಕಾಗಿ ಶಾಲೆಗಳಲ್ಲಿ ಯೋಗವನ್ನು ಕಡ್ಡಾಯಗೊಳಿಸಬೇಕೆಂಬ ಒತ್ತಾಯ ಇತ್ತೀಚಿಗೆ ಕೇಳಿಬರುತ್ತಿದೆ. ಆದರೆ, ಯೋಗದ ಎಲ್ಲ ಆರೋಗ್ಯಕರ ಅಂಶಗಳನ್ನೂ ಹೊಂದಿರುವ ಆಟಗಳು ಶಾಲಾಸಮಯದಿಂದ ಹೊರಹೋಗುತ್ತಿವೆÉ. ಆಟವಿಲ್ಲದೆ ಪಾಠವಿಲ್ಲ ಎಂಬಲ್ಲಿಂದ ಆಟದ ಬದಲು ಬರೀ ಪಾಠ ಎಂಬಲ್ಲಿಗೆ ಶಾಲೆಗಳು ಬಂದು ನಿಂತಿವೆ.
   ದೈಹಿಕ ಶಿಕ್ಷಣವು ಪಠ್ಯವಿಷಯವಾಗಿ ಮೌಲ್ಯಮಾಪನಗೊಳ್ಳಲು ಪ್ರಾರಂಭವಾದ ನಂತರ ದೈಹಿಕ ಶಿಕ್ಷಣದ ಅವಧಿಗಳೂ ತರಗತಿಕೋಣೆಗಳ ಒಳಗೇ ನಡೆಯಲು ಪ್ರಾರಂಭವಾಗಿವೆÉ. ಕೆಲವು ಅವಧಿಗಳನ್ನು ಮೈದಾನದ ಚಟುವಟಿಕೆಗಳಿಗಾಗಿ ಮೀಸಲಿಡುತ್ತಿದ್ದಾರಾದರೂ ಅವು ಪಾಠಸೂಚಿಯಲ್ಲಿ ನಮೂದಾದ ನಿರ್ಧಿಷ್ಟ ನಿಯಮಗಳು, ನಿಬಂಧನೆಗಳ ಮೂಲಕ ವಿನ್ಯಾಸಗೊಳಿಸಿದ ಆಟಗಳ ಶಾಸ್ತ್ರೀಯ ತರಬೇತಿಯಲ್ಲಿ ವ್ಯಯವಾಗುತ್ತವೆ. ಮಕ್ಕಳು ಅವರಷ್ಟಕ್ಕೆ ಆಡುವ ಮುಕ್ತ ಆಟಗಳು ಸಂಪೂರ್ಣ ಮರೆಯಾಗಿಬಿಟ್ಟಿವೆ.
 ಮಕ್ಕಳು ಅಥವಾ ಮಕ್ಕಳ ಗುಂಪು ಸ್ವತಂತ್ರವಾಗಿ ಆರಿಸಿಕೊಳ್ಳುವ, ಸ್ವತಃ ಸಂಘಟಿಸುವ ಮತ್ತು ನಿರ್ದಿಷ್ಟ ರೂಪುರೇಷೆಗಳನ್ನು ಹೊಂದಿರದ ಆಟಗಳನ್ನು ಮುಕ್ತ ಆಟಗಳು ಎನ್ನಬಹುದು. ಇವುಗಳಿಗೆ ನಿಯಮ ನಿಬಂಧನೆಗಳು ಇರುವವಾದರೂ ಮಕ್ಕಳೆ ಅವುಗಳನ್ನು ಮುರಿದುಕಟ್ಟುತ್ತಾ, ಮರುಜೋಡಿಸಿಕೊಳ್ಳುತ್ತಾ ಮತ್ತೆ ಮತ್ತೆ ಮರುನಿರೂಪಣೆಗೆ, ವಿಕಸನಕ್ಕೆ, ಸುಧಾರಣೆಗೆ ಒಡ್ಡಿಕೊಳ್ಳುತ್ತಿರುತ್ತಾರೆ. ಆಡುವ ಸಮಯದ ನಡುವೆ ಬರುವ ಒಡನಾಟದ ಎಲ್ಲ ಗಳಿಗೆಗಳೂ ಮುಕ್ತ ಆಟಗಳ ಅವಿಭಾಜ್ಯ ಅಂಗವಾಗಿರುತ್ತವೆ. ವಾಲಿಬಾಲ್, ಬಾಸ್ಕೆÉಟ್ ಬಾಲ್ ನಂತಹ ಆಟಗಳು ತಮ್ಮ ಕಟ್ಟುನಿಟ್ಟಿನ ನಿಯಮ-ನಿಬಂಧನೆಗಳಿಂದಾಗಿ ಪ್ರತ್ಯೇಕ ಸಮಯ ಮತ್ತು ಸ್ಥಳವನ್ನು ಬೇಡಿದರೆ ಮುಕ್ತ ಆಟಗಳನ್ನು ಯಾವುದೇ ತೆರೆದ ಸ್ಥಳ ಮತ್ತು ತೆರೆದ ಸಮಯದಲ್ಲಿ ಆಡಬಹುದಾಗಿದೆ. ಸ್ಥಳ ಅನುಕೂಲವಾಗಿದೆಯೆಂದರೆ ಕಣ್ಣಮುಚ್ಚಾಲೆ, ಇಲ್ಲವೆಂದಾದರೆ ಬಟ್ಟೆಯ ಉಂಡೆಯನ್ನೇ ಚೆಂಡು ಮಾಡಿ ಆಡುವ ಡಬ್ಬಾ ಡುಬ್ಬಿ ಅದೂ ಸಾಧ್ಯವಿಲ್ಲಾಂದರೆ ಮುಟ್ಟಾಟ ಹೀಗೆ ಆ ಗಳಿಗೆಯಲ್ಲೇ ಮುಕ್ತಆಟಗಳು ನಿಯಮಗಳನ್ನು ಸಡಿಲಿಸಿಕೊಳ್ಳಬಲ್ಲವು.  ಕೆಲವೊಮ್ಮೆ, ಕ್ರಿಕೆಟ್ಟಿನಂತಹ ಸ್ಟ್ರಕ್ಚರ್ಡ್ ಆಟಗಳೂ ಮಕ್ಕಳ ಸೃಜನಶೀಲತೆಯಿಂದಾಗಿ ಹೊಸರೂಪು ಪಡೆದುಬಿಡುತ್ತವೆ. ಹೀಗೆ ಆಟಗಳು ಮಕ್ಕಳ ಕೈಯಲ್ಲಿ ಆಟಿಕೆಗಳಾಗುವ ಹೊತ್ತಿನಲ್ಲೇ ಅವರ ವ್ಯಕ್ತಿತ್ವವನ್ನು ರೂಪಿಸುವ ಒಡನಾಟಗಳು ಉಂಟಾಗುತ್ತವೆ. ಜಗಳ, ಸ್ನೇಹ, ದೋಸ್ತಿ ಕಟ್ ಎಲ್ಲದಕ್ಕೂ ಶೈಕ್ಷಣಿಕ ಮತ್ತು ಮನೋವೈಜ್ಞಾನಿಕ ಮಹತ್ವ ಇದ್ದೇ ಇದೆ. ಬದುಕನ್ನು ಎಲ್ಲ ಬದಿಗಳಿಂದ ಶೋಧಿಸುವ ವಿಮರ್ಶಾತ್ಮಕ ಶಿಕ್ಷಣಶಾಸ್ರ್ತ (ಕ್ರಿಟಿಕಲ್ ಪೆಡಗೊಜಿ) ಇಂತಹ ಆಟದ ಸಮಯದಲ್ಲೇ ತನ್ನ ಉತ್ತುಂಗದಲ್ಲಿರುತ್ತದೆ.
  ಮಕ್ಕಳ ದೈಹಿಕ ಕ್ರೀಯಾಶೀಲತೆಯೆಂಬುದು ಅವರು ಎಷ್ಟು ಸಮಯ ಆಟದಲ್ಲಿ ತೊಡಗಿದ್ದಾರೆಂಬುದನ್ನು ನೇರವಾಗಿ ಅವಲಂಬಿಸಿರುತ್ತದೆ. ದೈಹಿಕ ಕ್ರೀಯಾಶೀಲತೆ ಅವರ ಮಾನಸಿಕ ಆರೋಗ್ಯವನ್ನು ಉತ್ತಮಪಡಿಸುತ್ತದೆ. ಆಟದ ಸಮಯವು ಒತ್ತಡದಿಂದ ಪಾರಾಗುವ ಅತ್ಯಂತ ಆರೋಗ್ಯಕರ ಮತ್ತು ಸಂತಸದ ವಿಧಾನ. ಮುಕ್ತ ಆಟಗಳಲ್ಲಿ ಮಕ್ಕಳು ತಮ್ಮದೇ ನಿರ್ಧಾರವನ್ನು ತಳೆಯಲು ಅವಕಾಶಗಳಿರುತ್ತವೆ, ತಮ್ಮದೇ ಹಾದಿ ತುಳಿಯಲು ಮತ್ತು ತಮ್ಮ ಬಗ್ಗೆ ಖುಷಿಪಡಲು ಕಾರಣಗಳಿರುತ್ತವೆ. ಇವೆಲ್ಲವೂ ಮಕ್ಕಳ ಆತ್ಮಗೌರವವನ್ನು ಹೆಚ್ಚಿಸುತ್ತವೆ. ಸಾಧನೆಯ ಹೆಮ್ಮೆಗೆ ಪದೇ ಪದೇ ಪಾತ್ರರಾಗುವುದರಿಂದ ಬಿಕ್ಕಟ್ಟಿನ ನಡುವೆಯೂ ಗೆಲುವನ್ನು ನಿರೀಕ್ಷಿಸುವ ಆಶಾವಾದ ಚಿಗುರೊಡೆಯುತ್ತದೆ. ಆಡದ ಮಕ್ಕಳಷ್ಟು ಬೇಗ ಆಡುವ ಮಕ್ಕಳು ಕೈಚೆಲ್ಲಿ ನಿಲ್ಲಲಾರರು. ಭ್ಲೆಚ್ಫೋರ್ಡ್ ಮತ್ತು ಸಂಗಡಿಗರು ನಡೆಸಿದ ಅಧ್ಯಯನಗಳ(2003) ಪ್ರಕಾರ ಸಾಮಾಜಿಕವಾಗಿ ಹಿಂದುಳಿದ ಮತ್ತು ದೈಹಿಕ ಸವಾಲುಗಳುಳ್ಳ ಮಕ್ಕಳಿಗೆ ಸಮನ್ವಯದ ಶಿಕ್ಷಣವನ್ನು ಎಲ್ಲರೊಡಗೂಡಿ ನೀಡುವಲ್ಲಿ ಶಿಷ್ಟ ಆಟಗಳು ಸೋಲುತ್ತವೆ. ಆದರೆ, ಮುಕ್ತ ಆಟಗಳು ಯಶಸ್ವಿಯಾಗುತ್ತವೆ. ಹದಿನೈದು ನಿಮಿಷಗಳಷ್ಟು ಮುಕ್ತ ಆಟದಲ್ಲಿ ತೊಡಗಿ ತರಗತಿಗೆ ಮರಳಿದ ಮಕ್ಕಳ ತರಗತಿ ವರ್ತನೆಗಳು ಆಟವಾಡದ ಮಕ್ಕಳ ವರ್ತನೆಗಳಿಗಿಂತ ಉತ್ತಮವಾಗಿರುತ್ತದೆ ಎಂದು ಇನ್ನೊಂದು ಅಧ್ಯಯನ ಹೇಳುತ್ತದೆ.
   ಆಟದ ಸಮಯ ಸಂಪೂರ್ಣವಾಗಿ ಮಕ್ಕಳ ಸಮಯ. ಶಿಕ್ಷಕರ ಅಥವಾ ಪಾಲಕರ ಕಣ್ಗಾವಲಿನಲ್ಲಿ ಈ ಸಮಯವು ವಿನಿಯೋಗಿಸಲ್ಪಟ್ಟರೆ ಅದಕ್ಕೆ ಮೌಲ್ಯವಿರುವುದಿಲ್ಲ. ಫಿನ್‍ಲ್ಯಾಂಡ್ ದೇಶದಲ್ಲಿ ಪ್ರತಿ ನಲವತ್ತೈದು ನಿಮಿಷಗಳ ಅವಧಿಯ ನಂತರವೂ ಹದಿನೈದು ನಿಮಿಷಗಳ ಬ್ರೇಕ್ ನೀಡುತ್ತಾರಂತೆ ಮತ್ತು ಆ ಹದಿನೈದು ನಿಮಿಷಗಳನ್ನು ಶಿಕ್ಷಕರು ತಮ್ಮ ಮುಂದಿನ ಪಾಠದ ಸಿದ್ಧತೆಗೋ, ಚಹಾ ಕುಡಿಯಲೋ, ಸ್ನೇಹಿತರೊಂದಿಗೆ ಹರಟೆ ಹೊಡೆಯಲೋ ಉಪಯೋಗಿದರೆ ಆ ಹದಿನೈದು ನಿಮಿಷಗಳನ್ನು ತಾವು ಹೇಗೆ ಉಪಯೋಗಿಸಬೇಕೆಂದು ಸ್ವತಃ ಮಕ್ಕಳೇ ತೀರ್ಮಾನಿಸುತ್ತಾರಂತೆ.ಇಲ್ಲೆಲ್ಲ ಆಲೋಚನೆಗಳು ಅದಲು ಬದಲಾಗುತ್ತವೆ, ಅಭಿಪ್ರಾಯಗಳು, ಭಿನ್ನಾಭಿಪ್ರಾಯಗಳು ವಿಶ್ಲೇಷಣೆಯ ಮೂಸೆಯಲ್ಲಿ ಬೆಂದು ಹೊರಬರುತ್ತವೆ. ಶಾಲೆಯಲ್ಲಿ ಒಡನಾಟದ ಅವಕಾಶಗಳು ಹೆಚ್ಚುವುದರಿಂದ ಸಾಮಾಜಿಕ ಕೌಶಲಗಳ ಬೆಳವಣಿಗೆಗೂ ಅವಕಾಶ ಹೆಚ್ಚುತ್ತದೆ. ಮಕ್ಕಳು ಶಾಂತಿ, ಸಹಬಾಳ್ವೆ ಮತ್ತು ಜವಬ್ಧಾರಿಯಿಂದ ನಡೆದುಕೊಳ್ಳುವಲ್ಲಿ ಈ ಅಂಶಗಳೆಲ್ಲ ಕೆಲಸಮಾಡುತ್ತಿರುತ್ತವೆ.
  ಇತ್ತೀಚೆಗೆ, ಮಕ್ಕಳ ಮನಶಾಃಸ್ರ್ತವನ್ನು ಅರೆದು ಸಂತಸದ ಕಲಿಕೆ, ಸಹಯೋಗದ ಕಲಿಕೆ, ಸ್ವವೇಗದ ಕಲಿಕೆ, ಸ್ವಕಲಿಕೆ ಎಂತೆಲ್ಲ ಸರಳಗೊಳಿಸಿ ಪ್ರತಿಪಾದಿಸಲಾಗುತ್ತಿದೆ. ಕೇವಲ ಆಟಗಳಷ್ಟೇ ಅಲ್ಲ, ಬೇರೆಲ್ಲ ವಿಷಯಗಳೂ ಆಟವಾಗಬೇಕು ಎಂದು ಶಿಕ್ಷಣ ಸಿದ್ಧಾಂತಗಳು ತಿಳಿಸುತ್ತವೆ. ಪುನರಾವರ್ತನೆ, ಅನುಕರಣೆ, ಆಜ್ಞಾಪಾಲನೆಯಿಂದ ಕಲಿಕೆ ಸಂಭವಿಸುವುದೇ ಇಲ್ಲವೆಂದಾಗಲೀ ಅಂತಹ ಶೈಕ್ಷಣಿಕ ಚಟುವಟಿಕೆಗಳಿಂದ ಅನುಕೂಲ ಇಲ್ಲವೆಂದಾಗಲೀ ಹೇಳಲಾಗದು. ಆದರೆ, ಅಂತಹ ಚಟುವಟಿಕೆಗಳು ಸ್ವಪ್ರೇರಣೆ, ಒಡನಾಟ, ಸಂತಸದ ಕಲಿಕೆಯಿಂದೊಡಗೂಡಿದ ಅನುಭವಗಳಿಗೆ ಬದಲಿಯಾಗಲಾರವು. ಜಿಮ್‍ನಲ್ಲಿರುವ ಸೈಕಲ್ಲನ್ನು ತುಳಿದರೂ ವ್ಯಾಯಾಮ ದೊರೆಯುತ್ತದೆ. ಆದರೆ, ತುಳಿಯುವವನ ದೇಹ ಮತ್ತು ಮನಸ್ಸಿನೊಡನೆ ರಸ್ತೆಯಲ್ಲಿ ಓಡುವ ಬೈಸಿಕಲ್ ನಿರಂತರವಾಗಿ ಪ್ರತಿಸ್ಪಂದಿಸುವಂತೆ, ತನ್ನ ಸುತ್ತಲಿನ ನೆಲ, ನೀರು, ಗಾಳಿಯೊಡನೆ ಸಂವಹಿಸಲು ಅವಕಾಶ ನೀಡುವಂತೆ ಮತ್ತು ಸಣ್ಣ ಸಣ್ಣ ಗುರಿಗಳನ್ನು ಮುಂದಿಡುತ್ತಾ ಸಂತಸದ ಅನುಭವವನ್ನು ಒದಗಿಸುವಂತೆ ಜಿಮ್‍ನ ಸೈಕಲ್ ಕೆಲಸಮಾಡಬಲ್ಲುದೇ?
  ಆಟವಾಡುವ ಸಮಯ ಮಕ್ಕಳಿಗೆ ಸಿಗುತ್ತಲೇ ಇಲ್ಲ. ಇಡೀ ಶಾಲಾ ದಿನವೇ ಪೂರ್ವಯೋಜಿತ ನಿರ್ಧಿಷ್ಟ ಆಕೃತಿಯ ಚಟುವಟಿಕೆಗಳಲ್ಲಿ ಕಳೆದುಹೋಗುತ್ತಿದೆ. ಪಠ್ಯಪುಸ್ತಕಗಳು ಮಾಹಿತಿಯ ಭಾರದಿಂದ ಕುಸಿಯುತ್ತಿರುವುದರಿಂದಾಗಿಯೂ ಮಕ್ಕಳು ಆಟದ ಸಮಯವನ್ನು ಕಳೆದುಕೊಂಡಿರಬಹುದು. ಶಿಸ್ತಿನ ಕುರಿತು ಪಾಲಕರು, ಶಿಕ್ಷಕರು ಮತ್ತು ವ್ಯವಸ್ಥೆ ತಳೆದಿರುವ ನಿಲುವುಗಳೂ ಇದಕ್ಕೆ ಕಾರಣವಾಗಿರಬಹುದು. ಮಕ್ಕಳ ರಕ್ಷಣೆ ಮತ್ತು ಆರೋಗ್ಯದ ಕುರಿತು ಇರುವ ಅತಿಕಾಳಜಿಯೂ ಸ್ವಲ್ಪ ಮಟ್ಟಿಗೆ ಆಟದ ಸಮಯ ಕಡಿತವಾಗಲು ತನ್ನ ದೇಣಿಗೆಯನ್ನು ಸಲ್ಲಿಸಿರಬಹುದು. ಆದರೆ, ಹಿಂದೆ ನಾವೆಲ್ಲ ಆಡಿದಷ್ಟು ಆಟವನ್ನು ಈಗಿನ ಮಕ್ಕಳು ಆಡುತ್ತಿಲ್ಲ ಎಂಬುದು ಸ್ಪಷ್ಟ. ಮೈದಾನಗಳೇ ಇರದ ಶಾಲೆಗಳು ಹುಟ್ಟಿಕೊಳ್ಳುತ್ತಿರುವುದೇ ಇದಕ್ಕೆ ಸಾಕ್ಷಿ. ಬೋರ್ಡು ನೋಡುವವರೆಗೂ ಕಟ್ಟಡವೊಂದನ್ನು ಶಾಲೆಯೋ ಆಸ್ಪತ್ರೆಯೋ ಎಂದು ಗುರುತಿಸಲಾಗದಂತಹ ಪರಿಸ್ಥಿತಿ ಎಲ್ಲ ಕಡೆಯೂ ಇದೆ.
    ಉತ್ತಮ ಆರೋಗ್ಯಕ್ಕಾಗಿ ಮತ್ತು ಸ್ವಸ್ಥ ಸಮಾಜಕ್ಕಾಗಿ, ಮೊದಲು ಶಾಲೆಗಳಲ್ಲಿ ಆಟ ಕಡ್ಡಾಯವಾಗಲಿ!

No comments: