Saturday 27 December 2014

Sunday 14 December 2014

ರೈಲಿನಲ್ಲಿ ಸಿಕ್ಕವರು
`ರಾಯರು ಸಮಾ ತಕ್ಕೊಂಡಿರ್ಬೇಕು!’
ಪಕ್ಕದ ಸೀಟಿನಲ್ಲಿ ನಿದ್ದೆಹೊಡೆಯುತ್ತಿರುವ ಆಸಾಮಿಯತ್ತ ನೋಡುತ್ತಾ ಉದ್ಘರಿಸಿದ ಸಹಪ್ರಯಾಣಿಕ ಮನಮೋಹನನ ಗಮನ ಸೆಳೆಯಲು ಯತ್ನಿಸಿದ. ಮಾತಿಗೊಂದು ಪ್ರಾರಂಭವನ್ನು  ಒದಗಿಸಲಿಕ್ಕಾಗಿ ಹೀಗೆ ಗಮನಾರ್ಹ ಸಂಗತಿಗಳನ್ನು ಹೆಕ್ಕಿ ಶುರುಹಚ್ಚಿಕೊಳ್ಳುವುದು ಹಲವರ ರೂಢಿ. ಹೀಗೆ ಶುರುವಾದ ಮಾತು ಮುಂದುವರಿದು ಪ್ರಯಾಣದ ಬೇಸರವನ್ನು ಕಡಿಮೆಮಾಡಬಹುದು, ಕೆಲವೊಮ್ಮೆ ಪ್ರಯಾಣವನ್ನು ನಿಸ್ಸಾರಗೊಳಿಸಲೂಬಹುದು ಎಂಬುದು ಮನಮೋಹನನ ಅನುಭವ. ಮಾತು ಶುರುಹಚ್ಚಿಕೊಳ್ಳಲು ಯತ್ನಿಸುತ್ತಿರುವ ಸಹಪ್ರಯಾಣಿಕನಿಗೆ ಯಾವ ಮಟ್ಟದ ಮರುಸ್ಪಂದನೆ ನೀಡುವುದು ಸೂಕ್ತ ಎಂಬ ಲೆಕ್ಕಾಚಾರ ಹಾಕುತ್ತಾ ಮನಮೋಹನ ನಿದ್ದೆಹೊಡೆಯುತ್ತಿದ್ದ ವ್ಯಕ್ತಿಯತ್ತ ನೋಡಿದ. ಕೂದಲು ಕೆದರಿದೆ, ಹಾಕಿಕೊಂಡಿರುವ ಬಟ್ಟೆ ಕೊಳೆಯಾಗಿದೆ, ಬಾಯಲ್ಲಿ ಎಂಜಲು ಇಳಿಯುತ್ತಿದೆ; ವಯಸ್ಸು ನಲವತ್ತೋ ನಲವತ್ತೈದೋ ಇರಬಹುದು..ಕುಡಿದಿರುವುದೂ ಹೌದು.
    ನಿದ್ದೆ ಮಾಡುತ್ತಿದ್ದ ವ್ಯಕ್ತಿಯತ್ತ ಮನಮೋಹನ ನೋಡಿದ್ದರಿಂದ ಉತ್ತೇಜನಗೊಂಡ ಸಹಪ್ರಯಾಣಿಕ ಮಾತು ಮುಂದುವರಿಸಿದ-
`ಗೋವಾದಲ್ಲಿ ಡಿಸೆಲ್ ಪೆಟ್ರೋಲಿನಂತೆ ಫೆನ್ನಿ ಕೂಡಾ ಬಹಳ ಅಗ್ಗ..ಗೋವಾದಿಂದ ಬರುವ ಗಾಡಿಗಳೆಲ್ಲ ಟ್ಯಾಂಕ್ ತುಂಬಿಸಿಕೊಂಡೇ ಬರುವುದು..’ಎಂದು ತನ್ನ ದ್ವಂದ್ವಾರ್ಥದ ಮಾತಿಗೆ ತಾನೇ ಹೆಮ್ಮೆಪಟ್ಟುಕೊಂಡು ಮನಮೋಹನನ ಮುಖ ನೋಡಿದ. ಅಪರೂಪಕ್ಕೊಮ್ಮೆ ಗುಂಡು ಹಾಕುವ ಅಭ್ಯಾಸವಿರುವ ಮನಮೋಹನನಿಗೆ ನಗಲು ಕಷ್ಟವಾಯಿತು, ನಗದಿರಲೂ ಕಷ್ಟವಾಯಿತು. ಅಷ್ಟರಲ್ಲಿ ಹಾರವಾಡ ಸ್ಟೇಷನ್ನು ಬಂದಿದ್ದರಿಂದ ನಿಧಾನವಾಗಿ ಸ್ಪೀಡು ಕಡಿಮೆಮಾಡಿಕೊಂಡು ಟ್ರೇನು ನಿಂತಾಗ ಕುಡಿದು ಮಲಗಿದ ಆ ಮನುಷ್ಯನ ರಿಧಮ್ಮಿಗೆ ಎಂತಹ ಧಕ್ಕೆಯಾಯಿತೋ ಆತ ನಿಧಾನಕ್ಕೆ ವಾಲಿ ಮುಂದಿನ ಸೀಟಿಗೆ ಮುಗ್ಗರಿಸಿದ. ಸಾವರಿಸಿಕೊಂಡು ಏಳುವ ಕುರುಹುಗಳು ಆತನಲ್ಲಿ ಕಾಣಿಸದೇ ಕೆಲವು ಗಳಿಗೆಗಳು ಕಳೆದ ಮೇಲೆ ಮನಮೋಹನನೊಡನೆ ಮಾತು ಶುರುಹಚ್ಚಿಕೊಂಡ ಸಹಪ್ರಯಾಣಿಕ  ಆತನ ಬೆನ್ನ ಮೇಲೆ ಮೆಲ್ಲಗೆ ತಟ್ಟಿದ, ಇನ್ನೊಮ್ಮೆ ತಟ್ಟಿದ- ಎಚ್ಚರವಾಗಲಿಲ್ಲ. ಈಗ ಸ್ವಲ್ಪ ಬಿರುಸಾಗಿಯೇ ತಟ್ಟಿದ; ಈಗಲೂ ಎಚ್ಚರವಾಗಲಿಲ್ಲ. ಅಷ್ಟರಲ್ಲಿ ಎದುರಿನ ಸೀಟಿನಲ್ಲಿ ಕುಳಿತಿದ್ದ ಎಂಟೋ ಒಂಬತ್ತೋ ವರ್ಷದ ಬಾಲಕನೊಬ್ಬ ಕುಡಿದು ಒರಗಿದ ಆ ವ್ಯಕ್ತಿಯ ತಲೆಯನ್ನು ಮೆಲ್ಲನೆ ಅಲ್ಲಾಡಿಸುತ್ತಾ ಎಚ್ಚರಿಸಲು ಪ್ರಯತ್ನಿಸಿದ. ಇಡೀ ದೇಶದ ಅಡ್ಡಸೀಳಿಕೆಯೊಂದನ್ನು ತಂದು ಕುಳ್ಳರಿಸಿದಂತೆ ಇರುವ ಪ್ಯಾಸೆಂಜರ್ ರೈಲಿನ  ಜನರಲ್ ಭೋಗಿಯಲ್ಲಿ ನಡೆಯುತ್ತಿದ್ದ ಈ ಘಟನಾವಳಿಗಳೆಲ್ಲವೂ ಇಷ್ಟೊತ್ತಿನವರೆಗೂ ಕ್ಷುಲ್ಲಕವೆನಿಸಿ ಆಚೀಚೆಯ ಪ್ರಯಾಣಿಕರ ಗಮನವನ್ನು ಸೆಳೆಯಲು ಸೋತಿದ್ದವು. ಆದರೆ, ಬಾಲಕನ ಎಂಟ್ರಿಯಿಂದಾಗಿ ಘಟನೆಗಳಿಗೆ ತಿರುವು ದೊರೆಯುವ ಸೂಚನೆ ದೊರೆಯಿತು. ಈ ಬಾಲಕ ಕುಡಿದು ಮಲಗಿದಾತನ ಮಗನೇ ಆಗಿರಬಹುದೆಂದು ಮನಮೋಹನ ಊಹಿಸಿ, ಸಹಪ್ರಯಾಣಿಕ  ಆ ಬಾಲಕನೆದುರೇ ಇನ್ನೆಂಥದೋ ದ್ವಂದ್ವಾರ್ಥದ ಮಾತನ್ನಾಡಬಹುದೆಂಬ ಭಯದಿಂದ ತಾನೇ ಮಾತನಾಡಿಸಿದ.
`ಇವರು ನಿನಗೇನಾಗಬೇಕು?’
`ಅಪ್ಪ’
ನೀನೂ ಅಪ್ಪ ಅಲ್ದೇ ಇನ್ನು ಯಾರೆಲ್ಲ ಬಂದಿದ್ದೀರಿ ಟ್ರೇನಿನಲ್ಲಿ?’
`ನಾವಿಬ್ರೇ’
ಇಬ್ಬರೇ ಇರುವುದು ಖಾತ್ರಿಯಾದ ಮೇಲೆ ಇನ್ನಷ್ಟು ಧೈರ್ಯಮಾಡಿ ಮಾತು ಮುಂದುವರಿಸಿದ-
`ಶಾಲೆಗೆ ಹೋಗ್ತೀಯಾ?’
`ಹೌದು’
`ಎಷ್ಟನೇ ಕ್ಲಾಸು?’
`ಮೂರು’
`ಯಾವ ಶಾಲೆ?’
`ವೆಂಕಟ್ರಮಣ ಶಾಲೆ.’
`ಎಲ್ಲಿದೆ ಅದು?’
`ಮಂಗಳೂರಲ್ಲಿ’
ಯಾವುದೋ ಮುಖ್ಯ ಪ್ರಶ್ನೆ ನೆನಪಾದವನಂತೆ ಕೇಳಿದ-
`ನಿನ್ನ ಹೆಸರೇ ಹೇಳಿಲ್ಲವಲ್ಲ?’
ಹೇಳಲು ನೀವು ಕೇಳೇ ಇಲ್ಲವಲ್ಲ ಅಂತ ಆ ಬಾಲಕನಿಗೆ ಅನ್ನಿಸಿತೋ ಇಲ್ಲವೋ
`ಗೋಪಾಲರಾಜು’ ಎಂದ.
ತುಳು ಭಾಷಿಕರು ಮಾತನಾಡುವ ವಿಶಿಷ್ಟ ಕನ್ನಡದಲ್ಲಿ ಆ ಬಾಲಕ ಪ್ರಶ್ನೆ ಎಸೆಯುವಷ್ಟರಲ್ಲಿ ಉತ್ತರಿಸುತ್ತಿದ್ದ. ಮಾತು ಮುಂದೆಲ್ಲಿಗೂ ಹೋಗುತ್ತಿಲ್ಲ ಎನಿಸಿ, ರಿಪೀಟಾದರೂ ಅಡ್ಡಿಯಿಲ್ಲ ಎಂದುಕೊಂಡು ಮನಮೋಹನ ಕೇಳಿದ-
`ಹಾಗಾದ್ರೆÉ್ರ, ಮಂಗಳೂರಲ್ಲಿ ನೀವಿಬ್ರೂ ಇಳೀತೀರಲ್ಲ?’
`ಇಲ್ಲ, ಸುರತ್ಕಲ್ಲಿನಲ್ಲಿ’
`ಯಾಕೆ?’
`ಅಲ್ಲಿಂದ ಕುಲಾಯಿಗೆ ಹೋಗಬೇಕು, ಬಸ್ಸಿನಲ್ಲಿ’
`ಅಪ್ಪ ಏನು ಕೆಲಸ ಮಾಡ್ತಾರೆ?’
`ಕೂಲಿ ಕೆಲಸ’
`ಅಮ್ಮ?’
`ಅಮ್ಮ ಇಲ್ಲ’
ಮನಮೋಹನನಿಗೆ ಅನುಮಾನವಾಯ್ತು. ಸರಿಯಾಗಿ ಕೇಳಿಸಿಕೊಳ್ಳಲಿಲ್ಲವೇನೋ ಎಂದುಕೊಂಡು, ಹುಡುಗನ ಕಡೆ ಬಾಗಿ ಪುನಃ ಕೇಳಿದ
`ಅಮ್ಮ?’
`ಅಮ್ಮ ಸತ್ತು ಹೋಗಿದ್ದಾರೆ’
ಯಾವ ಗೊಂದಲಕ್ಕೂ ಆಸ್ಪದವಿಲ್ಲದಂತೆ ಭಾಷೆಯನ್ನು ನಯ-ನಾಜೂಕಿನಿಂದ ಹೊರತಂದು ಆ ಹುಡುಗ ಸ್ಪಷ್ಟವಾಗಿ ಉತ್ತರಿಸಿದ ರೀತಿ ಮನಮೋಹನಿಗೆ ಆಶ್ಚರ್ಯವುಂಟುಮಾಡಿತು. ಆ ಹುಡುಗನ ಕಣ್ಣುಗಳಲ್ಲಿ ನೀರು ತುಂಬಿಕೊಂಡಂತೆ ಕಂಡಿದ್ದರಿಂದ ಮನಮೋಹನ ಪಕ್ಕದ ಸಹಪ್ರಯಾಣಿಕರತ್ತ ನೋಡಿದ. ಅವರೆಲ್ಲರ ಮುಖದಲ್ಲಿ ಪಡಿಮೂಡಿದ ಪ್ರಶ್ನಾರ್ಥಕ ಚಿನ್ಹೆಯನ್ನು ಓದಿದವನÀಂತೆ ಮೆಲ್ಲನೇ ಅಂದ-
`ಅಮ್ಮ ತೀರಿಕೊಂಡಿದ್ದಾರಂತೆ!’
ಮಾಮೂಲಿ ಕುಡಿತದ ಕೇಸು ಎಂದು ಈ ಪ್ರಹಸನದಿಂದ ಆಸಕ್ತಿ ಕಳೆದುಕೊಂಡು ತಮ್ಮ ಕುಟುಂಬದ ಸುರಕ್ಷೆಯಲ್ಲಿ ಸಿಕ್ಕಿಕೊಂಡಿದ್ದ ಹೊನ್ನಾವರದ ದಂಪತಿಗಳು, ಗೆಣಸಿನ ಚಿಪ್ಸ ತಿನ್ನುತ್ತಾ ಮಲೆಯಾಳಿ ಪೇಪರ್ ಓದುತ್ತಿದ್ದ ಮಹಾನುಭಾವ, ನಿದ್ದೆಯಲ್ಲಿದ್ದಂತೆ ಇದ್ದರೂ ಎಚ್ಚರದಲ್ಲಿದ್ದ ಟೊಪ್ಪಿಯ ಮನುಷ್ಯ, ಅಷ್ಟೇಕೆ, ಅಂಚೆಕಾರ್ಡಿನಗಲದ ಮೊಬೈಲು ಫೋನು ಹಿಡಿದು, ಅದರಿಂದ ಹೊರಟ ವೈರುಗಳಲ್ಲಿ ಬಂದಿಯಾದವನಂತೆ ಮತ್ತು ಆ ವೈರುಗಳಲ್ಲದೇ ಬಾಹ್ಯ ಜಗತ್ತಿನೊಡನೆ ಸಂಪರ್ಕಸಾಧಿಸುವ ಬೇರೆ ಸಾಧ್ಯತೆಗಳೇ ಇಲ್ಲ ಎಂಬಂತಿದ್ದ ಯುವಕನೂ ಸೇರಿ ಅಲ್ಲಿದ್ದ ಎಲ್ಲರೂ ಈಗ ಮುಖ್ಯ ಕಥಾನಕದ ಭಾಗವಾದರು. ಸತ್ತಿರುವ ಅಮ್ಮನ ಕುರಿತು ಇವರೆಲ್ಲ ಪ್ರಶ್ನೆ ಕೇಳಿ ಮಗುವಿಗೆ ಎಂತಹ ನೋವನ್ನುಂಟುಮಾಡುತ್ತಾರೋ ಎಂದು ಹೆದರಿದ ಮನಮೋಹನ ಅವರುಗಳ ಆಲೋಚನೆಗಳನ್ನು ಕತ್ತರಿಸುವ ಹಾಗೆ,
`ಈ ಮಹಾಶಯ ಸುರತ್ಕಲ್ಲಿನಲ್ಲಾದ್ರೂ ಎಚ್ಚರವಾಗ್ತಾನೋ? ಎಂದ. ಹಾಗೆ ಹೇಳುತ್ತಲೇ ಅಪ್ಪನ ಕುರಿತು ಹಗುರವಾಗಿ ಮಾತನಾಡಿದ್ರಿಂದ ಮಗನಿಗೆ ಬೇಸರಾವಾಯ್ತೇನೋ ಎಂದು ನೊಂದುಕೊಂಡ. ಅಷ್ಟಿಷ್ಟು ಅನುಕೂಲವಿರುವ ಮಧ್ಯಮ ವರ್ಗದ ವಿದ್ಯಾವಂತ ತಂದೆ-ತಾಯಿಯರು ಮತ್ತು ಅವರ ಮಕ್ಕಳು ಆಲೋಚಿಸುವ ರೀತಿಗೂ ಕೊಳಗೇರಿಗಳ ಮಕ್ಕಳು, ಕೂಲಿಯವರ ಮಕ್ಕಳು ಆಲೋಚಿಸುವ ರೀತಿಗೂ ವ್ಯತ್ಯಾಸ ಇರಬಹುದೇ ಎಂಬ ಅನುಮಾನ ಉಂಟಾಗಿದ್ದರಿಂದ ಮನಮೋಹನನಿಗೆ ತನ್ನ ಬಾಲ್ಯದ ನೆನಪಾಯಿತೋ ಅಥವಾ ಬಾಲ್ಯದ ನೆನಪಾದ್ದರಿಂದ ಹಾಗೆ ಅನ್ನಿಸಿತೋ?  ಅಂತೂ ಮನಮೋಹನ ಬಾಲ್ಯಕ್ಕೆ ಮರಳಿದ. ಮಕ್ಕಳ ಜಗಳದಲ್ಲಿ ಅಪ್ಪ- ಅಮ್ಮರ ವಿಷಯವೆಲ್ಲ ಪ್ರಸ್ತಾಪವಾಗುತಿತ್ತು. ನಿನ್ನಪ್ಪ ಹೀಗೆ, ನಿನ್ನಮ್ಮ ಹಾಗೆ ಇತ್ಯಾದಿ ಇತ್ಯಾದಿ. ಊರಿನ ಅಡ್ಡ ಸಂಬಂಧಗಳೆಲ್ಲ ಮಕ್ಕಳ ಜಗಳಗಳಲ್ಲಿ ಮಧ್ಯಪ್ರವೇಶಿಸಿಬಿಡುತ್ತಿದ್ದವು. ದೊಡ್ಡವರ ಜಗಳಗಳಲ್ಲೂ ಮಕ್ಕಳಿಗೆ ತಮ್ಮ ತಂದೆ ತಾಯಿಯರ ಕುರಿತು ಹೊಸ ಸಂಗತಿಗಳು ತಿಳಿಯುತ್ತಿದ್ದವು. ಆಚೆ ಮನೆಯ ಹೆಂಗಸಿಗೂ ಅಪ್ಪನಿಗೂ ಇರುವ ಸಂಬಂಧ ಒಳ್ಳೆಯದಲ್ಲ ಎಂತಲೋ, ಅಮ್ಮಂಗೂ ಅಪ್ಪಂಗೂ ನಡುವೆ ಇನ್ಯಾವನೋ ಇದ್ದಾನೆಂದೋ ಮಕ್ಕಳು ಅರಿತುಕೊಳ್ಳುವುದಲ್ಲದೇ ವಾಸ್ತವವನ್ನು ಒಪ್ಪಿಕೊಂಡೂ ಬಿಡುತ್ತಿದ್ದರು. ಮಕ್ಕಳ ಜಗಳಗಳು ಶಾಲಾ ಮೇಷ್ಟ್ರ ಬಳಿ ಹೋದಾಗ ಹೆಚ್ಚಾಗಿ ಕೇಳಿಬರುತ್ತಿದ್ದ ದೂರೆಂದರೆ, ಅವನು ನನ್ನಪ್ಪನ ಸುದ್ದಿ ಮಾತಾಡಿದ ಅಥವಾ ನನ್ನಮ್ಮನ ಬಗ್ಗೆ ಮಾತಾಡಿದ ಎಂಬುದಾಗಿರುತಿತ್ತು. ಬರಬರುತ್ತಾ, ಮಕ್ಕಳಿಗೆ ತನ್ನ ಅಪ್ಪ, ಅಮ್ಮ, ಮಾವ ಅಣ್ಣ ಇತ್ಯಾದಿಗಳೆಲ್ಲ ಬಹುದೊಡ್ಡ ಆದರ್ಶಗಳಲ್ಲ ಎಂಬುದು ಅರ್ಥವಾಗಿರುತಿತ್ತು. ಅಪ್ಪ ಅಮ್ಮರ ಬಗ್ಗೆ ಯಾರಾದರೂ ಲಘುವಾಗಿ ಮಾತನಾಡಿದರೆ ಅತಿಯಾಗಿ ನೊಂದುಕೊಳ್ಳದಷ್ಟು ಅಥವಾ ಅಂತಹ ಮಾತುಗಳನ್ನು ಉಪೇಕ್ಷೆಮಾಡುವಷ್ಟು  ದೃಢತೆ ತಂತಾನೆ ಬರುತಿತ್ತು. ಆದರೆ, ನಮ್ಮ ಮಕ್ಕಳು? ಸುಸಂಸ್ಕøತರೆನಿಸಲು ಅಪ್ರಾಮಾಣಿಕ ಪೊರೆಗಳನ್ನು ಹೊದ್ದು ಮಲಗಿರುವ ತಂದೆ-ತಾಯಿಯರ ಕುರಿತು ನಮ್ಮ ಮಕ್ಕಳಿಗೆ ಇರುವುದು ಬರೀ ಸುಳ್ಳು ಚಿತ್ರಣ!
   ಹೀಗೆ ಯೋಚಿಸುತ್ತಿರುವಾಗಲೇ  ಗೋಕರ್ಣ ಸ್ಟೇಷನ್ನು ಬಂದಿದ್ದರಿಂದ ಟ್ರೇನು ನಿಧಾನವಾಯ್ತು. ಇಷ್ಟೊತ್ತಿನವರೆಗೂ ಜೊತೆಯಲ್ಲಿದ್ದ ಪ್ರಯಾಣಿಕರೊಬ್ಬರು ಇಳಿಯಲು ತಯಾರಾದರು. ಹಿಂದಿನ ಸ್ಟೇಷನ್ನಿನಲ್ಲಿ ಅವರು ಗೋಪಾಲರಾಜುವಿಗೆ ಕೊಟ್ಟಿದ್ದ ಮೈಸೂರುಪಾಕಿನ ತುಂಡು ಅವನ ಕೈಯಲ್ಲಿ ಹಾಗೇ ಇರುವುದನ್ನು ಗಮನಿಸುತ್ತಾ ಬಾಗಿಲ ಬಳಿ ನಡೆದರು. ಅವರು ಇಳಿಯುತ್ತಲೇ ಗೋಪಾಲರಾಜು ತನ್ನ ಕೈಯಲ್ಲಿದ್ದ ಮೈಸೂರುಪಾಕನ್ನು ಕಿಟಕಿಯಿಂದ ಹೊರಗೆ ಬಿಸಾಡಿದ. ಗೋಪಾಲರಾಜುವನ್ನು ಗಮನಿಸುತ್ತಿದ್ದ ಮನಮೋಹನ ಮತ್ತೆ ಮಾತನಾಡಿಸಿದ-
ನಿನ್ನಪ್ಪನ ಫೋನ್ ನಂಬರ್ ಗೊತ್ತಾ?’
`ಗೊತ್ತುಂಟು’
ಗೋಪಾಲರಾಜು ಹೇಳಿದ ಫೋನ್‍ನಂಬರನ್ನು ದಾಖಲಿಸಿಕೊಂಡು ಮನಮೋಹನ ಆ ನಂಬರಿಗೆ ಕರೆಮಾಡಿದ. ಸ್ವಲ್ಪ ಸಮಯದ ಹಿಂದಷ್ಟೇ ಸೀಟಿನ ಕೆಳಗೆ ಬಿದ್ದಿದ್ದ ಆ ಕುಡುಕನನ್ನು ಮತ್ತೆ ಸೀಟಿನ ಮೇಲೆ ಪ್ರಯಾಣಿಕರೊಬ್ಬರು ಕುಳ್ಳರಿಸಿದ್ದರು. ಮನಮೋಹನನ ಫೋನ್ ಕರೆಗೆ ಅಂಗಿಯ ಕಿಸೆಯಲ್ಲಿದ್ದ ಫೋನ್ ಬೆಳಕಿನೊಂದಿಗೆ ರಿಂಗಣಿಸಿದಾಗ ಆತನ ಕಣ್ಣುಗಳು ತೆರೆಯುವ ಪ್ರಯತ್ನ ನಡೆಸಿದಂತೆ ಕಂಡವು. ಗೋಪಾಲರಾಜು ಕುತೂಹಲ, ಖುಷಿಯಿಂದ ಅಪ್ಪನ ಕಿಸೆಯನ್ನೇ ನೋಡುತ್ತಿದ್ದ.
`ನೀವಿಬ್ರೂ ಎಲ್ಲಿಗೆ ಹೋಗಿದ್ರಿ?’
`ಕಾರವಾರಕ್ಕೆ’
`ಏಕೆ?’
ಗೋಪಾಲರಾಜು ಮುಖವನ್ನು ಹತ್ತಿರ ತಂದು ಮೆಲ್ಲಗೆ ಹೇಳಿದ-
`ಅಕ್ಕ ಮನೆಬಿಟ್ಟು ಹೋಗಿದ್ದಳು-ಅವಳು ಕಾರವಾರದಲ್ಲಿದ್ದಾಳೆಂದು ಗೊತ್ತಾಯ್ತು..ಅಲ್ಲಿಗೆ ಹೋಗಿದ್ದೆವು’
`ಅಕ್ಕ ಸಿಕ್ಕಳಾ?’
`ಇಲ್ಲ,್ಲ’
`ನಿಮ್ಮಕ್ಕಂದು ಎಷ್ಟು ವಯಸ್ಸು?
`ಹದಿನೇಳು ವರ್ಷ’
ಅಕ್ಕ ಮನೆಬಿಟ್ಟು ಹೋದದ್ದು ಯಾವಾಗ?’
`ಒಂದು ತಿಂಗಳಾಯ್ತು’
ಹೆಂಡತಿಯನ್ನು ಕಳೆದುಕೊಂಡ ಮನುಷ್ಯ ಮಗಳನ್ನು ಕಳೆದುಕೊಂಡರೆ ಕುಡಿಯದೇ ಇರುತ್ತಾನೆಯೇ ಎನಿಸಿತು ಮನಮೋಹನಿಗೆ. ಇವನ ಅಕ್ಕ ಎಲ್ಲಿ ಹೋಗಿರಬಹುದು? ಅಮ್ಮ ಇಲ್ಲದ ಹುಡುಗಿ ಪಾಪ, ಯಾರೋ ಪುಸಲಾಯಿಸಿ ಕರೆದುಕೊಂಡು ಹೋಗಿರಬಹುದು. ಹದಿನೇಳು ವರ್ಷದ ಹುಡುಗಿ ಎಂದಮೇಲೆ ನೂರಾರು ಕಣ್ಣುಗಳು ಇದ್ದೇ ಇರುತ್ತವೆ. ಆತಂಕವಾಯಿತು ಮನಮೋಹನನಿಗೆ. ಈ ಚಿಕ್ಕ ಮಗುವಿನಲ್ಲಿ ಇನ್ನೇನು ಕೇಳುವುದೂ ಉಚಿತವಲ್ಲವೆಂದು ಸುಮ್ಮನಾದ. ಕಿಸೆಯಿಂದ ಒಂದುನೂರು ರೂಪಾಯಿ ತೆಗೆದು ಗೋಪಾಲರಾಜುವಿನ ಕೈಯಲ್ಲಿಟ್ಟು,
`ಮುಂದಿನ ಸ್ಟೇಷನ್ನಿನಲ್ಲಿ ಇಳಿಯುತ್ತೇನೆ, ನೀನು ಸುರತ್ಕಲ್ಲು ಬರುವ ಮುಂಚೆಯೇ ಅಪ್ಪನನ್ನು ಎಬ್ಬಿಸು’ ಎಂದ. ದುಡ್ಡುಕೊಟ್ಟಿದ್ದನ್ನು ಇತರ ಪ್ರಯಾಣಿಕರು ನೋಡಿರಬಹುದೆಂದು ಊಹಿಸಿ ಖುಷಿಪಡಿತ್ತಾ ಬಾಗಿಲ ಬಳಿಬಂದು ಉದ್ದನೆಯ ಟ್ರೇನಿನ ಬಾಲದವರೆಗೂ ಕಣ್ಣುಹಾಯಿಸಿದ. ದಿನವೂ ಈ ಟ್ರೇನು ಎಷ್ಟು ಜನರನ್ನು ಹೊತ್ತೊಯ್ಯುತ್ತಿರಬಹುದು? ಈ ಟ್ರೇನಿನೊಳಗೆ ಗೋಪಾಲರಾಜುವಿನಂತಹ ಎಷ್ಟು ಕತೆಗಳಿರಬಹುದು? ಟ್ರೇನು ಕುಮಟಾದಲ್ಲಿ ನಿಂತಿತು. ಮನಮೋಹನ ಇಳಿದು ಗೋಪಾಲರಾಜುವಿನತ್ತ ಕೈ ಬೀಸಿದ. ಗೋಪಾಲರಾಜು ಏನೂ ನಡೆದೇ ಇಲ್ಲವೆಂಬಂತಹ ಮುಖಮುದ್ರೆಯಲ್ಲಿದ್ದ. ಬೇರೆ ಬೇರೆ ಬಾಗಿಲುಗಳಿಂದ ಫ್ಲ್ಲಾಟ್‍ಫಾರ್ಮಿಗಿಳಿದ ಜನ ಮತ್ತು ಅವೇ ಬಾಗಿಲುಗಳಿಂದ ಹತ್ತಿದ ಅಷ್ಟೇ ಜನ ಮನಮೋಹನನಿಗೆ ನರಮನುಷ್ಯರಂತೆ ಕಾಣುವ ಬದಲು ಕತೆಗಳಂತೆ ಭಾಸವಾದರು. ಅಬ್ಬಾ ಟ್ರೇನಿನಲ್ಲಿ ಎಷ್ಟು ಕತೆಗಳು ತೂರಿಕೊಂಡವು? ಎಷ್ಟು ಕಳಚಿಕೊಂಡವು ಎಂದು ಯೋಚಿಸುತ್ತಾ ರಿಕ್ಷಾ ಸ್ಟ್ಯಾಂಡಿನತ್ತ ಹೆಜ್ಜೆ ಹಾಕಿದ.
                                     ******

`ನಾನು ಸರ್, ಗೋಪಾಲರಾಜು.. ನಿನ್ನೆ ಟ್ರೇನಿನಲ್ಲಿ ಸಿಕ್ಕಿದ್ನಲ್ಲ..’
ಈ ಕರೆಯನ್ನು ನಿರೀಕ್ಷಿಸಿರಲಿಲ್ಲ ಮನಮೋಹನ.
ಸರ್, ನನ್ನಪ್ಪನ ಮೊಬೈಲ್‍ನಲ್ಲಿ ನಿಮ್ಮ ಮಿಸ್ಡ್ ಕಾಲಿತ್ತು..ನಿನ್ನೆ ನೀವು ಮಾಡಿದ್ದಿರಲ್ಲ?!’
`ಓಹೋ ಗೊತ್ತಾಯ್ತು, ಗೋಪಾಲರಾಜು.. ನಿನ್ನೆ ಸುರತ್ಕಲ್ಲಿನಲ್ಲಿ ಇಳಿದ್ರಿ ಅಲ್ವಾ?’ ಎಂದ.
ಗೋಪಾಲರಾಜು ಮುದ್ದಾಗಿ ಮಾತನಾಡುತ್ತಿದ್ದ. ಇಂದು ತನ್ನ ಹುಟ್ಟುಹಬ್ಬ ಎಂದು ಹೇಳಿಕೊಂಡ. `ಹ್ಯಾಪಿ ಬರ್ತಡೇ ಗೋಪಾಲರಾಜು’ ಎಂದಿದ್ದಕ್ಕೆ `ಹ್ಯಾಪಿ ಬರ್ತ ಡೇ’ ಎಂದು ಮುಗ್ಧವಾಗಿ ಮಾರುತ್ತರಿಸಿದ. ಏನೋ ನೆನಪಾದವನಂತೆ `ಈಗಲ್ಲ ನನ್ನ ಹ್ಯಾಪಿ ಬರ್ತಡೇ..ಸಂಜೆ’ ಎಂದ. ಇಷ್ಟು ಖುಷಿಯಲ್ಲಿ ಮಾತಾಡುತ್ತಿದ್ದ ಗೋಪಾಲರಾಜು ಒಮ್ಮೇಲೆ ಏನೋ ನೇನಪಾದವನಂತೆ `ಹ್ಯಾಪಿ ಬರ್ತಡೇಗೆ ನನ್ನ ಅಕ್ಕ ಬೇಕು ಸರ್’ ಅಂದ. ಅಪ್ಪನಿಗೆ ಫೋನು ಕೊಡುವಂತೆ ಮನಮೋಹನ ಕೇಳಿದ. ನಿನ್ನೆಯ ಟ್ರೇನಿನ ಘಟನೆಯ ಕುರಿತು ಆತ ಕ್ಷಮೆ ಕೇಳಿದ.
`ಇನ್ನು ಹಾಗೆ ಮಾಡುವುದಿಲ್ಲ. ಕುಡುಕನಲ್ಲ ಸರ್ ನಾನು...ನಿನ್ನೆ ಬೇಜಾರಾಗಿತ್ತು’ ಅಂದ. ಆತನ ಮಗಳು ಮನೆಬಿಟ್ಟು ಹೋದ ಕುರಿತು ಕೆದಕಿ ಕೇಳಬಾರದು, ಅವನೇ ಹೇಳಲಿ ಎಂದುಕೊಂಡು ಮನಮೋಹನ ಬೇರೇನೋ ಮಾತನಾಡತೊಡಗಿದ. ವಿಷಯ ಬಾರದ್ದರಿಂದ ಕೊನೆಗೇ ಮನಮೋಹನನೇ ` ಹುಟ್ಟು ಹಬ್ಬಕ್ಕೆ ಗೋಪಾಲರಾಜು ಅಕ್ಕ ಬೇಕು ಅಂತಿದ್ದಾನಲ್ಲ?’ ಅಂದ. ಅಷ್ಟು ಕೇಳಿದ್ದೇ ಕತೆ ಪ್ರಾರಂಭವಾಯ್ತು. ಮನೆ ಬಿಟ್ಟು ಹೋಗಿರುವ ಹುಡುಗಿ ತನ್ನ ಸ್ವಂತ ಮಗಳಾಗಿರದೇ ಮಲಮಗಳು ಎಂಬುದಾಗಿಯೂ, ತಿಂಗಳ ಹಿಂದೆ ಸತ್ತುಹೋಗಿರುವ ಈತನ ಹೆಂಡತಿಗೆ ಈ ಮೊದಲೇ ಮದುವೆಯಾಗಿ ಒಬ್ಬಳು ಮಗಳಿದ್ದಳೆಂದೂ ತಿಳಿಸಿದ. ಒಂದು ವರ್ಷದ ಹಿಂದೆ, ಹೆಂಡತಿ ಬದುಕಿರುವಾಗಲೇ ಒಮ್ಮೆ ಮಲಮಗಳು ಮನೆಬಿಟ್ಟುಹೋಗಿ ಎರಡು ಮೂರು ತಿಂಗಳ ಹುಡುಕಾಟದ ನಂತರ ಮತ್ತೆ ಮನೆ ತಲುಪಿದ್ದಳಂತೆ. ಈ ಬಾರಿ ಮನೆ ಬಿಟ್ಟುಹೋದವಳು ಹಿಂದಿನಬಾರಿ ಉಳಿದುಕೊಂಡಲ್ಲಿಯೇ ಇರುವುದು ಗೊತ್ತಾಗಿ ಕಾರವಾರಕ್ಕೆ ಹೋಗಿದ್ದನ್ನು ತಿಳಿಸದ. ಆಕೆ ವಾಪಸು ಬರಲು ನಿರಾಕರಿಸಿದ್ದರಿಂದ ಅವಳ ಮೂಖ ನೋಡಲೂ ಆಗದೇ ಅಪ್ಪ-ಮಗ ವಾಪಸಾಗಿದ್ದರು.
ಮನಮೋಹನ ಕುತೂಹಲಕ್ಕಾಗಿ ಕೇಳಿದ-
`ಆಕೆ ಅಲ್ಲಿ ಯಾರ ಮನೆಯಲ್ಲಿರುತ್ತಾಳೆ?’
`ಸರ್, ಅದು ಮನೆಯಲ್ಲ ಆಶ್ರಮ..ಆ ಆಶ್ರಮವನ್ನು ನಡೆಸುತ್ತಿರುವವರು ಮೂಲತಃ ಗೋಕರ್ಣದವರು, ನೂರುಲ್ಲಾ ಅಂತ.
ಮನಮೋಹನನಿಗೆ ನೂರುಲ್ಲಾನ ಪರಿಚಯವಿತ್ತು. ಅದೇ ವಿಶ್ವಾಸದಲ್ಲಿ ಹೇಳಿಯೇಬಿಟ್ಟ-
`ನೀವೇನೂ ಚಿಂತಿಸಬೇಡಿ. ನಿಮ್ಮ ಮಗಳನ್ನು ನಾನು ಕರೆದುಕೊಂಡು ಬರುತ್ತೇನೆ. ನೀವು ನನ್ನೊಡನೆ ಬರಬೇಕಷ್ಟೇ!’’ ಎಂದ
`ಆಯ್ತು ಸರ್, ಅವಳು ಅಲ್ಲಿ ಸುಖವಾಗಿದ್ದಾಳೆ ಎಂದು ತಿಳಿದು ವಾಪಸು ಬಂದಿದ್ದೆ. ಆದ್ರೆ, ನನ್ನ ಮಗ ಅವಳನ್ನು ಬಹಳ ನೆನಪುಮಾಡಿಕೊಳ್ಳುತ್ತಿದ್ದಾನೆ’ ಎಂದ.
`ಯಾವುದಕ್ಕೂ ನೂರುಲ್ಲಾನಿಗೆ ಫೋನ್ ಮಾಡಿ ತಿಳಿದುಕೊಳ್ಳುವೆ- ಆತ ಬಹಳ ಒಳ್ಳೆಯ ಮನುಷ್ಯ.. ಮತ್ತೆ ಮಾತಾಡುವೆ’ ಎನ್ನುತ್ತಾ ಫೋನ್ ಸಂಪರ್ಕ ಕಡಿತಗೊಳಿಸಿದ.    
                                  *******
ನೂರುಲ್ಲಾನೂ ಮನಮೋಹನನೂ ಕುಮಟಾದ ಬಾಳಿಗಾ ಕಾಲೇಜಿನಲ್ಲಿ ಒಟ್ಟಿಗೆ ಓದಿದವರಾದ್ದರಿಂದ ಮತ್ತು ಆ ಕಾಲದÀ ಕಾಲೇಜು ಕ್ರಿಕೆಟ್ ತಂಡದ ಸದಸ್ಯರೂ ಆಗಿದ್ದರಿಂದ ಪರಸ್ಪರ ಏಕವಚನದಲ್ಲಿ ಮಾತನಾಡಿಸುವಷ್ಟು ಸಲಿಗೆ ಇತ್ತು. ಎಷ್ಟೋ ವರ್ಷಗಳಿಂದ ಭೇಟಿಯಾಗಿರಲಿಲ್ಲ, ಫೋನಿನಲ್ಲೂ ಮಾತನಾಡಿರಲಿಲ್ಲ. ಯಾರಿಂದಲೋ ನೂರುಲ್ಲಾನ ನಂಬರು ಪಡೆದು ಫೋನ್ ಮಾಡಿದ; ಟ್ರೇನಿನ ಕತೆ ಹೇಳಿದ..ಆ ಹುಡುಗಿ ನೀನು ನಡೆಸುವ ಆಶ್ರಮದಲ್ಲೇ ಇರುವುದು ಗೊತ್ತಾಗಿ ಫೋನು ಮಾಡಿದೆ ಅಂದ. `ಹೌದು ಇಲ್ಲೇ ಇದ್ದಾಳೆ..ಆ ಮನುಷ್ಯನೊಡನೆ ಹೋಗಲು ಒಪ್ಪಲಿಲ್ಲ..ನಮ್ಮ ಮನೇಲಿ ಚಿಕ್ಕ ಪುಟ್ಟ ಕೆಲಸಮಾಡಿಕೊಂಡು ಮದ್ಯಾಹ್ನದ ಮೇಲೆ ಆಶ್ರಮದಲ್ಲಿ ಹೊಲಿಗೆ ಕಲಿಯುತ್ತಿದ್ದಾಳೆ’ ಎಂದು ನೂರುಲ್ಲಾ ಎಂದಾಗ ಕತೆ ಸುಳ್ಳಲ್ಲವಲ್ಲ ಎಂದು ಖುಷಿಯಾಯ್ತು ಮನಮೋಹನಿಗೆ.
`ನಿನಗೇಕೆ ರಗಳೆ..ಅವರು ಕರೆದುಕೊಂಡು ಹೋಗಲಿ. ಇವೆಲ್ಲ ಮತ್ತೆಲ್ಲಿಗೋ ತಲುಪಿಬಿಟ್ಟರೆ ಅಪಾಯ..ಸುಮ್ಮನೆ ಉಪಕಾರ ಮಾಡಲು ಹೋಗಿ ಕಿರಿಕಿರಿ ಅನುಭವಿಸಬೇಕಾಗುತ್ತದೆ’ ಸಲಹೆಯನ್ನೂ ಎಚ್ಚರಿಕೆಯನ್ನೂ ಬಹಳ ಜಾಣ್ಮೆಯಿಂದ ಬೆರೆಸಿ ಮಾತನಾಡಿದ್ದು ನೂರುಲ್ಲಾನಿಗೆ  ಗೊತ್ತಾಯಿತು ಅಂತ ಕಾಣುತ್ತದೆ-
`ಓಹೋ ಕರೆದುಕೊಂಡು ಹೋಗಲಿ. ಬಿಟ್ಟಿ ಕೆಲಸದವಳು ಸಿಕ್ಕಿದಳು ಅಂತ ಇಟ್ಟುಕೊಂಡದ್ದಲ್ಲ’ ಎಂದ.
ಪುಕ್ಕಟೆಯಾಗಿ ಸಿಕ್ಕಿದ ಕೆಲಸದವಳನ್ನು ಕಳೆದುಕೊಳ್ಳುವ ನೋವು ನೂರುಲ್ಲಾನ ಮಾತಿನಲ್ಲಿ ಅವಿತಿದೆಯೋ ಎಂದು ಮನಮೋಹನ ಹುಡುಕಿದ. ಅನುಮಾನ ಪಟ್ಟಂತೆಲ್ಲ ಅದು ದೃಢವಾಗುತ್ತಾ ಹೋಗುವುದು ಅನುಮಾನಿಸುವವನ ಮನಸ್ಥಿತಿಯಲ್ಲಿರುವ ದೋಷವೇ ಆಗಿರುತ್ತದೆಂದು ಯಾರೋ ಹೇಳಿದ್ದು ನೆನಪಾಗಿ ಆಲೋಚನೆಗಳನ್ನು ಬೇರೆಡೆ ತಿರುಗಿಸಲು ಯತ್ನಿಸಿದ, ಆ ಯತ್ನದಲ್ಲಿ ಸೋತ.
`ಸರಿ, ಆ ಮನುಷ್ಯ ನಾಳೆ ಬರುತ್ತಾನೆ. ಸಾಧ್ಯವಾದರೆ ನಾನೂ ಬರುವೆ...ಹುಡುಗೀನ್ನ ಕಳುಹಿಸಿಕೊಡು. ಅವರು ಏನಾದರೂ ಮಾಡಿಕೊಳ್ಳಲಿ’ ಎಂದಾಗ ನೂರುಲ್ಲಾ ಮರುಮಾತನಾಡಲಿಲ್ಲ. ಮಾತನಾಡದಿರುವಾಗ ನೂರುಲ್ಲಾ ಏನು ಯೋಚಿಸುತ್ತಿರಬಹುದು? ನನ್ನ  ಕಾಳಜಿಯನ್ನು ಅನುಮಾನಿಸುತ್ತಿರಬಹುದೇ? ಮಾತುಕತೆ ಮುಗಿದರೂ ಪ್ರವಾಹದಂತೆ ನುಗ್ಗಿ ಬರುವ ಯೋಚನೆಗಳು ನಿಲ್ಲಲಿಲ್ಲ. ಯಾರದೋ ಮಗಳನ್ನು ಹುಡುಕಲು ನಾನೇಕೆ ಇಷ್ಟು ಕಾಳಜಿವಹಿಸುತ್ತಿದ್ದೇನೆ? ಆ ಹುಡುಗಿಯನ್ನು ನೂರುಲ್ಲಾ ಮನೆಯಲ್ಲಿಟ್ಟುಕೊಂಡದ್ದು ಕರುಣೆಯಿಂದಲೋ ಮನೆಗೆಲಸಕ್ಕೆ ನೆರವಾಗಲಿ ಎಂದೋ? ಆಕೆಗೆ ಹದಿನೇಳು ವರ್ಷವಾಗಿರುವುದಕ್ಕೂ ಮನೆಬಿಟ್ಟು ಹೋಗಿರುವುಕ್ಕೂ ಸಂಬಂಧವಿದೆಯೇ? ಮಲತಂದೆಗೂ ಮಲಮಗಳಿಗೂ ಎಂತಹ ಸಂಬಂಧವಿರಬಹುದು? ಈ ಹುಡುಗಿಯ ಕತೆಹೇಳಿ ಆಕೆಯನ್ನು ಕರೆತರಲು ಹೋಗುವುದಾಗಿ ಹೇಳಿದಾಗ ಹೆಂಡತಿ ಎಂದಿಲ್ಲದ ಖುಷಿಯಲ್ಲಿ ಒಪ್ಪಿ ಪ್ರೋತ್ಸಾಹ ನೀಡಿದ್ದೇಕೆ? ಆಕೆಗೂ ಮನೆಗೆಲಸಕ್ಕೆ ಬಿಟ್ಟಿಯಾಗೊಬ್ಬಳು ಸಿಗಬಹುದೆಂಬ ನಿರೀಕ್ಷೆಯಿದೆÀಯೇ?
ಟ್ರೇನಿನಂತೆ ನುಗ್ಗಿ ಬರುತ್ತಿದ್ದ ಅನುಮಾನಗಳಿಗೆ ಬ್ರೇಕು ಇರಲಿಲ್ಲ.
                                 ***********
   ಆ ಹುಡುಗಿ ಟ್ರೇನಿನಲ್ಲಿ ಕುಳಿತುಕೊಳ್ಳುವಾಗಲೂ ಮನಮೋಹನ ಆಕೆಯನ್ನು ಗಮನಿಸುತ್ತಿದ್ದ. ತಮ್ಮನ ಪಕ್ಕದಲ್ಲಿ ಕುಳಿತುಕೊಳ್ಳುತ್ತಾಳೋ ಅಥವಾ ಮಲತಂದೆಯೊಂದಿಗೋ? ಮನಮೋಹನನ ಊಹೆಗೆ ವ್ಯತಿರಿಕ್ತವಾಗಿ ಆಕೆ ತಮ್ಮನೊಂದಿಗೆ ಕುಳಿತುಕೊಂಡಳು. ತಮ್ಮನಿಗೋ ವಿಪರೀತ ಖುಷಿ. ತನ್ನ ಹುಟ್ಟುಹಬ್ಬಕ್ಕೆ ಬಾರದಿರುವುದಕ್ಕೆ ಆಕ್ಷೇಪಿಸಿ ಅಕ್ಕನೊಡನೆ ಸಿಟ್ಟುಮಾಡಿಕೊಂಡಂತೆ ತೋರಿದರೂ ಆಕೆಯ ಕೈ ಬಿಟ್ಟಿರಲಿಲ್ಲ ಗೋಪಾಲರಾಜು. ಮನಮೋಹನ ಯಥಾಪ್ರಕಾರ ಎಲ್ಲವನ್ನೂ ಅನುಮಾನದಿಂದ ಅಗೆದು ಬಗೆದು ನೋಡುತ್ತಿದ್ದ. `ಈ ಹುಡುಗಿಗೂ ಅವಳ ಮಲತಂದೆಗೂ ಸಂಬಂಧವಿದೆಯಂತೆ’ ಎಂದು ಕಾರವಾರ ರೈಲು ನಿಲ್ದಾಣದಲ್ಲಿ ನೂರುಲ್ಲಾ ಹೇಳಿದಮೇಲಂತೂ ಮನಮೋಹನನ ಅನುಮಾನ ವಿಪರೀತವಾಗಿತ್ತು. `ಈ ಹುಡುಗಿಯ ತಾಯಿ ವಿಷಯ ಗೊತ್ತಾಗಿ ಮಗಳನ್ನೇ ಹೊರಹಾಕಿದ್ದಳಂತೆ..ಅವಳಾಗೇ ಮನೆಬಿಟ್ಟು ಬಂದದ್ದಲ್ವಂತೆ. ಈ ಬಾರಿ ಮಾತ್ರ..ತಾಯಿ ಸತ್ತ ಮೇಲೆ ಅವಳಾಗೇ ಮನೆಬಿಟ್ಟು ಬಂದದ್ದಂತೆ’ ಎಂದ ನೂರುಲ್ಲಾನ ಮಾತುಗಳು ಮನಮೋಹನಿಂದ ಪರೀಕ್ಷೆಗೊಳಗಾಗುತ್ತಿದ್ದವು. ಮಲತಂದೆಯೊಂದಿಗೆ ಆಕೆ ಮಾತನಾಡುತ್ತಿದ್ದ ರೀತಿ, ಕುಳಿತ ಭಂಗಿ ಎಲ್ಲವನ್ನೂ ಪರೀಕ್ಷಿಸಿ ನೂರುಲ್ಲಾನ ಮಾತು ಸುಳ್ಳಾಗಿರಬಹುದು ಎಂದುಕೊಂಡ. ಸಂಬಂಧ ಇದ್ದಿದ್ದರೆ ಏಕೆ ಮನೆಬಿಟ್ಟುಹೋಗುತ್ತಿದ್ದಳು? ಇಷ್ಟು ಸರಳ ತರ್ಕ ನೂರುಲ್ಲಾನ ತಲೆಗೆ ಯಾಕೆ ಹೊಳೆಯುವುದಿಲ್ಲ ಎಂಬ ಯೋಚನೆ ಬರುವಾಗಲೇ ಇಂತಹ ವಿಷಯದಲ್ಲಿ ತರ್ಕ ಕೈಕೊಡುವುದೇ ಹೆಚ್ಚು ಎಂದೂ ಅನ್ನಿಸತೊಡಗಿತು. ಈ ಹುಡುಗಿ ನೂರುಲ್ಲಾನ ಮನೆಯಲ್ಲಿದ್ದರೆ ಕ್ಷೇಮವಿತ್ತೋ ಗೋಪಾಲರಾಜುವಿನ ಅಕ್ಕನಾಗಿರುವುದೇ ಕ್ಷೇಮವೋ ಎಂಬುದು ಮನಮೋಹನಿಗೆ ಜಿಜ್ಞಾಸೆಯಾಗಿ ಕಾಡುತ್ತಿರುವಾಗಲೇ ಕುಮಟಾ ಸ್ಟೇಷನ್ನು ಬಂದು, ಕನಿಷ್ಠ ಈ ಸಮಸ್ಯೆಯಿಂದ ಭೌತಿಕವಾದರೂ ಬೇರ್ಪಡಬಹುದಲ್ಲ ಎಂದು ಖುಷಿಯಾಯ್ತು. ಟ್ರೇನಿನಲ್ಲಿ ಸಿಕ್ಕಿಕೊಂಡ ಸಮಸ್ಯೆಗೆ ಟ್ರೇನಿನಲ್ಲೇ ಪರಿಹಾರವೂ ಸಿಕ್ಕಿತೆಂದುಕೊಂಡು ಮನಮೋಹನ ಇಳಿಯಲಣಿಯಾದ. ಗೋಪಾಲರಾಜುವಿಗೂ, ಅವನಪ್ಪನಿಗೂ ಮತ್ತು ಆ ಹುಡುಗಿಗೂ ವಿಧಾಯಹೇಳಿ ಟ್ರೇನಿಳಿದು ಬೈಕ್ ಸ್ಟಾಂಡಿನತ್ತ ನಡೆದ. ಸೆಲ್ಪ್ ಸ್ಟಾರ್ಟಾಗುವ ಬೈಕುಗಳು ಬಂದಮೇಲೆ ಚಪ್ಪಲಿಗಳ ಆಯುಷ್ಯ ಹೆಚ್ಚಿದೆಯೆಂದು ಅಂದುಕೊಳ್ಳುತ್ತಾ ಕಿಸೆಯಿಂದ ಕೀಲಿಕೈಯನ್ನು ತೆಗೆಯುತ್ತಿರುವಾಗ ಯಾರೋ ಹಿಂಬಾಲಿಸಿ ಬಂದಂತೆ ಅನ್ನಿಸಿ ತಿರುಗಿದ. ಆ ಹುಡುಗಿ ಎದುಸಿರು ಬಿಡುತ್ತಾ ನಿಂತಿದ್ದಳು.
`ಅವನು ಸರಿ ಇಲ್ಲ. ನಾನು ಅವನೊಡನೆ ಹೋಗುವುದಿಲ್ಲ’ ಎಂದಳು.
    ಮನಮೋಹನ ಟ್ರೇನಿನ ಕಡೆ ನೋಡಿದ, ಟ್ರೇನು ನಿಧಾನವಾಗಿ ವೇಗ ಹೆಚ್ಚಿಸಿಕೊಳ್ಳುತ್ತಾ ಹೊರಟಾಗಿತ್ತು. ಏನೋ ಹೊಳೆದಂತಾಗಿ ಹೆಂಡತಿಗೆ ಫೋನ್ ಮಾಡಿ ವಿಷಯ ತಿಳಿಸಿದ- ಆಕೆಯನ್ನು ಕರೆತಂದರೆ ತಾನು ಮನೆಬಿಟ್ಟುಹೋಗುವುದಾಗಿ ಹೆಂಡತಿ ಹೇಳಿದ್ದು ಕೇಳಿ ಮತ್ತಷ್ಟು ಗಾಬರಿಗೊಂಡ. ಏನೂ ತೋಚದೇ ದೂರದಲ್ಲಿ ಸಾಗುತ್ತಿದ್ದ ಟ್ರೇನನ್ನು ಮತ್ತೆ ನೋಡತೊಡಗಿದÀ. ಬಿಲದೊಳಗೆ ಇಲಿ ಸೇರುವಂತೆ ಟ್ರೇನು ದೂರದ ಗುಡ್ಡದಲ್ಲಿ ನುಸುಳಿ ಮರೆಯಾಯಿತು. ಕಂಬದ ಕೆಂಪು, ಹಸಿರು ದೀಪಗಳು, ರೇಲ್ವೆ ಸಿಬ್ಬಂದಿ ತೋರುವ ನಿಶಾನೆಯ ಬಾವುಟಗಳು ಈ ಬ್ರಹತ್ ಟ್ರೇನನ್ನು ನಿಜವಾಗಿಯೂ ನಿಯಂತ್ರಿಸುತ್ತವೋ ಅಥವಾ ಇವೆಲ್ಲ ಎಷ್ಟೋ ವರ್ಷಗಳಿಂದ ನಡೆದುಕೊಂಡು ಬಂದ ಅರ್ಥವಿಲ್ಲದ ಆಚರಣೆಗಳೋ ಎಂಬ ಅನುಮಾನ ಈ ಸಮಯದಲ್ಲಿ ಬಂದದ್ದಕ್ಕೆ ಮನಮೋಹನ ಸಂಕೋಚಪಡುತ್ತಿರುವಾಗಲೇ ಆ ಹುಡುಗಿ ಯಾವುದೋ ನಿರ್ಧಾರಕ್ಕೆ ಬಂದವಳಂತೆ-
`ಕಾರವಾರದ ಕಡೆ ಟ್ರೇನು ಎಷ್ಟೊತ್ತಿಗೆ’ ಎಂದು ಕೇಳಿದಳು.
                                          ***************


Monday 28 July 2014

ಎಸ್. ಎಸ್. ಎಲ್. ಸಿ ಗೆ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ.   ರಾಜ್ಯ ಪಠ್ಯಕ್ರಮದ ಹತ್ತನೆಯ ತರಗತಿಗೆ ಈ ಶೈಕ್ಷಣಿಕ ವರ್ಷದಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಗಳಿಗೂ ಸರ್ಕಾರ ಬದಲಾವಣೆ ತಂದಿದೆ. ಬದಲಾದ ಪದ್ಧತಿಯನ್ನು `ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ’ ಎಂದು ಕರೆಯಲಾಗಿದೆ.
   ಹೊಸ ಮೌಲ್ಯಮಾಪನ ಪದ್ಧತಿಯು ಕಲಿಕೆಯ ವಿಷಯಗಳನ್ನು ಪಠ್ಯ(scholastic) ಮತ್ತು ಸಹಪಠ್ಯ(Non scholastic) ಎಂಬುದಾಗಿ ವಿಂಗಡಿಸುತ್ತದೆ. ಪಠ್ಯ ವಿಷಯದಲ್ಲಿ  ಆಂತರಿಕ ಮತ್ತು ಬಾಹ್ಯ ಮೌಲ್ಯಮಾಪನ ಇರುತ್ತದೆ. ಬಾಹ್ಯ ಮೌಲ್ಯಮಾಪನಕ್ಕೆ ಶೇಖಡಾ 80 ರಷ್ಟು ಮತ್ತು ಆಂತರಿಕ ಮೌಲ್ಯಮಾಪನಕ್ಕೆ ಶೇಖಡಾ 20 ರಷ್ಟು ಪ್ರಾಧಾನ್ಯತೆ ಇರುತ್ತದೆ. ಪ್ರಥಮ ಭಾಷೆ, ದ್ವಿತೀಯ ಭಾಷೆ, ತೃತಿಯ ಭಾಷೆ, ಗಣಿತ, ಸಾಮಾನ್ಯ ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳು ಪಠ್ಯ ವಿಷಯಗಳಾಗಿದ್ದು, ಇವುಗಳಿಗೆ ಒಟ್ಟಾಗಿ 500 ಅಂಕಗಳ ಬಾಹ್ಯ ಪರೀಕ್ಷೆಯನ್ನು ಶೈಕ್ಷಣಿಕ ವರ್ಷಾಂತ್ಯದಲ್ಲಿ ನಡೆಸಲಾಗುತ್ತದೆ. ಉತ್ತೀರ್ಣತೆ ಹೊಂದಲು ಪ್ರಥಮ ಭಾಷೆಯ ಗರಿಷ್ಠ 100 ಅಂಕಗಳ ಬಾಹ್ಯ ಪರೀಕ್ಷೆಯಲ್ಲಿ ಕನಿಷ್ಠ 30 ಅಂಕಗಳನ್ನೂ ಉಳಿದ ಪಠ್ಯವಿಷಯಗಳ 80 ಅಂಕಗಳ ಬಾಹ್ಯ ಪರೀಕ್ಷೆಯಲ್ಲಿ ಕನಿಷ್ಠ 24 ಅಂಕಗಳನ್ನೂ ಪಡೆಯಬೇಕಾಗುತ್ತದೆ. ಜೊತೆಗೆ, ಬಾಹ್ಯ ಪರೀಕ್ಷೆಯ ಒಟ್ಟು 500 ಅಂಕಗಳಲ್ಲಿ 175 ಅಂಕಗಳನ್ನು ಪಡೆಯಬೇಕು. ವಿದ್ಯಾರ್ಥಿಯ ಪಠ್ಯ ವಿಷಯಗಳಲ್ಲಿನ ಸಾಧನೆಯನ್ನು ಅಂಕಗಳು, ಶ್ರೇಣಿಗಳಲ್ಲಿ ಗುರುತಿಸುವುದರೊಂದಿಗೆ ಸಂಚಿತ ದರ್ಜಾಂಶ ಸರಾಸರಿಯಲ್ಲೂ ಸೂಚಿಸಲಾಗುವುದು. ಆದರೆ, ಸಹಪಠ್ಯ ವಿಷಯಗಳಾದ ದೈಹಿಕ ಮತ್ತು ಆರೋಗ್ಯ ಶಿಕ್ಷಣ, ಕಾರ್ಯಾನುಭವ, ಮನೋಭಾವನೆ ಮತ್ತು ಮೌಲ್ಯಶಿಕ್ಷಣ, ಕಲಾಶಿಕ್ಷಣಗಳಿಗೆ ಬಾಹ್ಯ ಮೌಲ್ಯಮಾಪನ ಇರುವುದಿಲ್ಲ. ಸಹಪಠ್ಯ ವಿಷಯಗಳಲ್ಲಿನ ವಿದ್ಯಾರ್ಥಿಯ  ಸಾಧನೆಯನ್ನು ಎ, ಬಿ  ಅಥವಾ ಸಿ ಶ್ರೇಣಿಗಳಲ್ಲಿ ಗುರುತಿಸಲಾಗುತ್ತದೆ.

    ಪ್ರತಿ ಪಠ್ಯ ವಿಷಯಕ್ಕೂ 200 ಅಂಕಗಳ ಆಂತರಿಕ ಮೌಲ್ಯಮಾಪನವನ್ನು ನಡೆಸಲಾಗುತ್ತದೆ. ಆಂತರಿಕ ಮೌಲ್ಯಮಾಪನವನ್ನು ನಾಲ್ಕು ರೂಪಣಾತ್ಮಕ ಮೌಲ್ಯಮಾಪನಗಳಾಗಿ ವಿಭಜಿಸಲಾಗಿದ್ದು, ಪ್ರತಿ ರೂಪಣಾತ್ಮಕ ಮೌಲ್ಯಮಾಪನದಲ್ಲಿಯೂ 20 ಅಂಕಗಳ ಒಂದು ಕಿರು ಪರೀಕ್ಷೆ ಮತ್ತು 15 ಅಂಕಗಳ ಎರಡು ಚಟುವಟಿಕೆಗಳನ್ನು ನಡೆಸಲಾಗುತ್ತದೆ. ವಿದ್ಯಾರ್ಥಿಯು ನಿರ್ವಹಿಸಬೇಕಾದ ಚಟುವಟಿಕೆಗಳ ಪಟ್ಟಿಯನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಒದಗಿಸುತ್ತದೆ. ತಮ್ಮ ವಿದ್ಯಾರ್ಥಿಗಳಿಗೆ ಸೂಕ್ತವಾದ ಚಟುವಟಿಕೆಗಳನ್ನು ಶಿಕ್ಷಕರೆ ಈ ಪಟ್ಟಿಯಿಂದ ಆಯ್ದುಕೊಳ್ಳಬಹುದಾಗಿದೆ. ಹೀಗೆ, ಪ್ರಥಮ ಭಾಷೆಯನ್ನು ಹೊರತು ಪಡಿಸಿ ಪ್ರತಿ ವಿಷಯದ ಅಂತರಿಕ ಮೌಲ್ಯಮಾಪನದಲ್ಲಿ ಗಳಿಸಿದ ಅಂಕಗಳ 1/10 ಭಾಗವನ್ನು(ಗರಿಷ್ಠ 20 ಅಂಕಗಳು) ಮತ್ತು ಪ್ರಥಮ ಭಾಷೆಯಲ್ಲಾದರೆ, ಆಂತರಿಕ ಮೌಲ್ಯಮಾಪನದದಲ್ಲಿ ಗಳಿಸಿದ ಅಂಕಗಳ 1/8 ಭಾಗವನ್ನು (ಗರಿಷ್ಠ 25 ಅಂಕಗಳು) ಬಾಹ್ಯ ಮೌಲ್ಯಮಾಪನದ ಅಂಕಗಳೊಂದಿಗೆ ಸಂಯೋಜಿಸಲಾಗುತ್ತದೆ. ಅರ್ಧವಾರ್ಷಿಕ ಪರೀಕ್ಷೆ ಮತ್ತು ಸಿದ್ಧತಾ ಪರೀಕ್ಷೆಗಳು ಆಂತರಿಕ ಮೌಲ್ಯಮಾಪನದಲ್ಲಿ ಸೇರುವುದಿಲ್ಲ.
   ಖಾಸಗಿ ವಿದ್ಯಾರ್ಥಿಗಳು ಮತ್ತು ವಿಶೇಷ ವಿದ್ಯಾರ್ಥಿಗಳಿಗೆ ಬಾಹ್ಯ ಮೌಲ್ಯಮಾಪನವು ಆರು ಪಠ್ಯವಿಷಯಗಳಿಗೆ ಗರಿಷ್ಠ 625 ಅಂಕಗಳಾಗಿರುತ್ತವೆ. ಬಿ ವಿಭಾಗದ ಸಹಪಠ್ಯ ವಿಷಯಗಳ ಮೌಲ್ಯಮಾಪನ ಇರುವುದಿಲ್ಲ.

ಈ ಪದ್ಧತಿ ಎಷ್ಟು ನಿರಂತರ, ಎಷ್ಟು ಸಮಗ್ರ?

  ಶಿಕ್ಷಕರು ಬಳಸುವ ಮೌಲ್ಯಮಾಪನ ತಂತ್ರಗಳು ಮಗುವಿನ ಬಲ ಮತ್ತು ದೌರ್ಬಲ್ಯಗಳಿಗೆ ಸಂವೇದನಾಶೀಲವಾಗಿರಬೇಕು. ಇದರಿಂದ ಮೌಲ್ಯಮಾಪನವು ಮಾನವೀಯಗೊಳ್ಳಬಲ್ಲದು. ಮೌಲ್ಯಮಾಪನ ವಿಧಾನಗಳು ಸ್ಪಷ್ಟ ಮತ್ತು ವಿಶ್ವಾಸಾರ್ಹ ಹಿಮ್ಮಾಹಿತಿಗಳನ್ನು ವಿದ್ಯಾರ್ಥಿಗಳಿಗೂ, ಶಿಕ್ಷಕರಿಗೂ ಒದಗಿಸುವಂತಿರಬೇಕು.  ಜೊತೆಗೆ, ಮೌಲ್ಯಮಾಪನವನ್ನು ಒಂದು ಅರ್ಥಪೂರ್ಣ ತರಗತಿ ಸಂವಹನವಾಗಿಯೂ ಗ್ರಹಿಸುವ ಅವಶ್ಯಕತೆಯಿದೆ. ಪ್ರತಿ ವಿದ್ಯಾರ್ಥಿಯೂ ಭಿನ್ನ ಸಾಮಾಜಿಕ ಮತ್ತು ಕೌಟುಂಬಿಕ ಹಿನ್ನೆಲೆಯನ್ನು ಹೊಂದಿರುತ್ತದೆ. ವಿದ್ಯಾರ್ಥಿಗೆ ದೊರೆಯುವ ಅನುಭವಗಳು ವಿಭಿನ್ನವಾಗಿರುತ್ತವೆ ಮತ್ತು ಅವುಗಳನ್ನು ಗ್ರಹಿಸುವ ರೀತಿ ಪ್ರತಿ ವಿದ್ಯಾರ್ಥಿಗೂ ವಿಶಿಷ್ಟವಾಗಿರುತ್ತದೆ. ಆದುದರಿಂದಲೇ, ಮೌಲ್ಯಮಾಪನವು ವಿದ್ಯಾರ್ಥಿಯ ಅನನ್ಯತೆಯನ್ನು ಗಣನೆಗೆ ತೆಗೆದುಕೊಳ್ಳುವುದು ಅವಶ್ಯಕ.

    ಪಠ್ಯವಿಷಯವೊಂದರ ಕಲಿಕೆಗೆ ಸಂಬಂಧಿಸಿದ ಸಾಧನೆಗಳನ್ನು  ಮಗುವಿನ ಸಹಜ ವರ್ತನೆಗಳಲ್ಲಿ ವಿವಿಧ ಸಾಧನ ಮತ್ತು ತಂತ್ರಗಳ ಸಹಾಯದಿಂದ ಹುಡುಕುವುದೇ  ರೂಪಣಾತ್ಮಕ ಮೌಲ್ಯಮಾಪನ. ರೂಪಣಾತ್ಮಕ ಮೌಲ್ಯಮಾಪನವು ಕಾರ್ಯರೂಪದಲ್ಲಿ ತೀರಾ ಹೊಸದಾದ ಪರಿಕಲ್ಪನೆ. ಇದಕ್ಕೆ ಅಗತ್ಯವಾದ ಸಾಧನಗಳು, ತಂತ್ರಗಳು ಮತ್ತು ಅಳತೆಗೋಲುಗಳನ್ನು ಪ್ರತಿ ವಿದ್ಯಾರ್ಥಿಯ ವಿಶಿಷ್ಠತೆಗಳನ್ನು ಲಕ್ಷಿಸಿಕೊಂಡೇ ರೂಪಿಸಬೇಕಾಗುತ್ತದೆ. ಭಾಷೆಯ ಸೃಜನಶೀಲ ಬಳಕೆಯನ್ನಾಗಲೀ, ಬದುಕಿನ ನಿರ್ಧಾರ ತೆಗೆದುಕೊಳ್ಳುವಾಗ ವಿಜ್ಞಾನದ ವಿಧಾನಗಳನ್ನು ಅನುಸರಿಸುವುದನ್ನಾಗಲೀ, ಅಭಿವ್ಯಕ್ತಿಯಲ್ಲಿ ಗಣಿತವನ್ನು ಪರಿಣಾಮಕಾರಿಯಾಗು ಬಳಸುವುದನ್ನಾಗಲೀ ಅಳೆಯಬೇಕಾದರೆ ಮೌಲ್ಯಮಾಪನವನ್ನು ತರಗತಿ ಸಂವಹನದ ಭಾಗವಾಗಿ ಗ್ರಹಿಸುತ್ತಾ ಶಿಕ್ಷಕಿಯು ಉದ್ಧೇಶಪೂರ್ವಕ ಸಂದರ್ಭಗಳನ್ನು ಕಲಿಕೆಯ ಪರಿಸರದಲ್ಲೇ ಸೃಷ್ಟಿಸಿಕೊಳ್ಳಬೇಕಾಗುತ್ತದೆ. ಶೈಕ್ಷಣಿಕ ಸಾಧನೆಗಳ ಜೊತೆಗೆ, ಮಗುವಿನ ಸಾಮಾಜಿಕ, ಭಾವನಾತ್ಮಕ, ವೈಜ್ಞಾನಿಕ ಕೌಶಲಗಳು ಮತ್ತು ಮೌಲ್ಯ ರೂಪಣೆ ಹಾಗೂ ಮನೋಧೋರಣೆಗಳಲ್ಲಿರುವ ಧನಾತ್ಮಕ ಅಂಶಗಳನ್ನು ಗುರುತಿಸುವ ಮೂಲಕ ಸಮಗ್ರ ವ್ಯಕ್ತಿತ್ವದ ಮೌಲ್ಯಮಾಪನ ನಡೆಯಬೇಕು. ರೂಪಣಾತ್ಮಕ ಮೌಲ್ಯಮಾಪನವು ಪ್ರತಿಫಲನಾತ್ಮಕ ವಿದ್ಯಾರ್ಥಿಯನ್ನೂ, ಪ್ರತಿಫಲನಾತ್ಮಕ ಶಿಕ್ಷಕರನ್ನೂ ರೂಪಿಸಬಲ್ಲದು. ರೂಪಣಾತ್ಮಕ ಮೌಲ್ಯಮಾಪನವು ಕಲಿಕೆಯ ಅವಕಾಶ ಮತ್ತು ಅಭಿಪ್ರೇರಣೆಯನ್ನು ಒದಗಿಸುತ್ತದೆ.

   ಆದರೆ, ಕಲಿಕೆ ಮತ್ತು ಮೌಲ್ಯಮಾಪನಗಳ ನಡುವಿನ ಅಂತರವನ್ನು ಹೋಗಲಾಡಿಸುವ ಪ್ರಯತ್ನವಾಗಿ ಹಿಂದಿನ ತರಗತಿಗಳಲ್ಲಿ ಜಾರಿಗೆ ತಂದಿರುವ ಸಿ.ಸಿ.ಇ ಗೂ ಮತ್ತು  ಈ ಪದ್ಧತಿಗೂ ಸಾಕಷ್ಟು ತಾತ್ವಿಕ ವ್ಯತ್ಯಾಸಗಳಿವೆ. ಈಗ ಹತ್ತನೇ ತರಗತಿಗೆ ಅಳವಡಿಸಲಾದ ಮೌಲ್ಯಮಾಪನ ಪದ್ಧತಿಯು ವರ್ಷಾಂತ್ಯದಲ್ಲಿ ಬರುವ ಬಾಹ್ಯ ಪರೀಕ್ಷೆಗೇ ಹೆಚ್ಚು ಮಹತ್ವ ನೀಡುತ್ತದೆ. ರೂಪಣಾತ್ಮಕ ಮೌಲ್ಯಮಾಪನ ಇರುವುದಾದರೂ ಅವು ನಿಗಧಿತ ಅಂತರದಲ್ಲಿ ನಡೆಯುವ ಕಿರುಪರೀಕ್ಷೆಗಳು ಮತ್ತು ಶಿಕ್ಷಕರೇ ನಿರ್ಧರಿಸುವ ಚಟುವಟಿಕೆಗಳನ್ನು ಒಳಗೊಂಡಿರುತ್ತವೆ. ಆಂತರಿಕ ಮೌಲ್ಯಮಾಪನದ ಕಿರುಪರೀಕ್ಷೆಗಳು ಸಂಕಲನಾತ್ಮಕ ಸ್ವರೂಪದಲ್ಲಿರುವುದರಿಂದ ಮತ್ತು ಚಟುವಟಿಕೆಗಳು ಮೌಲ್ಯಮಾಪನಕ್ಕಾಗಿಯೇ ಹಮ್ಮಿಕೊಳ್ಳುವುದರಿಂದ ಇವುಗಳು ವಿದ್ಯಾರ್ಥಿಗೂ ಶಿಕ್ಷಕರಿಗೂ ಹಿಮ್ಮಾಹಿತಿಯನ್ನೊದಗಿಸುತ್ತಾ ಕಲಿಕೆಯ ಭಾಗವಾಗಿ `ನಿರಂತರ’ಗೊಳ್ಳುವ ಸಾಧ್ಯತೆ ಕಡಿಮೆ. ಹಿಂದಿನ ತರಗತಿಗಳಲ್ಲಿ ದೈಹಿಕ ಶಿಕ್ಷಣ, ಕಲಾ ಶಿಕ್ಷಣ ಮತ್ತು ಕಾರ್ಯ ಶಿಕ್ಷಣಗಳನ್ನು ಪಠ್ಯವಿಷಯಗಳಾಗಿ ಸ್ವೀಕರಿಸಿ ತರಗತಿ ಪ್ರಕ್ರಿಯೆಗಳಲ್ಲಿ ಅವುಗಳ ಮಹತ್ವವನ್ನು ಹೆಚ್ಚಿಸಲಾಗಿದೆ. ಹತ್ತನೇ ತರಗತಿಯಲ್ಲಿ ಮಾತ್ರ ಅವು ಬಿ-ಭಾಗದಲ್ಲಿ ಮುಂಚಿನಂತೆ ಕಡಿಮೆ ಮಹತ್ವದ ವಿಷಯಗಳಾಗಿ ಮುಂದುವರಿಯುತ್ತವೆ.ಅಂದರೆ, ಈ ಹಿಂದಿನಂತೆ ಪಠ್ಯವಿಷಯದ ಶಿಕ್ಷಕರು ತಮಗೆ ಅವಧಿ ಕಡಿಮೆಯಾದಲ್ಲಿ ದೈಹಿಕ ಶಿಕ್ಷಣದ ಅವಧಿಗಳನ್ನೋ, ಕಲಾಶಿಕ್ಷಣದ ಅವಧಿಗಳನ್ನೋ ತೆಗೆದುಕೊಳ್ಳುವ ಪರಿಪಾಠ ಮುಂದುವರಿಯಲಿದೆ. ಈ ಪದ್ಧತಿಯನ್ನು ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಎಂದು ಕರೆಯಲಾಗಿದ್ದರೂ, ಅಂತಿಮ ಪರೀಕ್ಷೆಯೇ ಮಗುವನ್ನು ಪಾಸೋ ಫೇಲೋ ಎಂದು ನಿರ್ಧರಿಸುವ ಸಾಂಪ್ರದಾಯಿಕ ಪರೀಕ್ಷಾ ಪದ್ಧತಿಯಿಂದ ಈ ಪದ್ಧತಿ ಭಿನ್ನವಾಗಿ ನಿಲ್ಲುವುದಿಲ್ಲ. ಈ ಮಿತಿಗಳಿಗೆ ಎಸ್. ಎಸ್. ಎಲ್. ಸಿ ಯು ಪಬ್ಲಿಕ್ ಪರೀಕ್ಷೆಯಾಗಿರುವುದೇ ಕಾರಣ ಎಂಬುದನ್ನು ಅರ್ಥಮಾಡಿಕೊಳ್ಳಬಹುದು.
  ಕಲಿಕೆಯ ಉತ್ಪನ್ನದೊಡನೆ ಕಲಿಕೆಯ ಪ್ರಕ್ರಿಯೆಯನ್ನೂ ಮೌಲ್ಯಮಾಪನಕ್ಕೊಳಪಡಿಸುವ ಮೌಲ್ಯಮಾಪನ ಪದ್ಧತಿ ಈಗಿನ ಅಗತ್ಯವಾಗಿದೆ. ವಿದ್ಯಾರ್ಥಿಯ ಶೈಕ್ಷಣಿಕ ಸಾಧನೆಗಳ ಜೊತೆಗೆ ಸಾಮಾಜಿಕ ಕೌಶಲಗಳು, ಜೀವನ ಕೌಶಲಗಳು ಮತ್ತು ವೈಜ್ಞಾನಿಕ ಕೌಶಲಗಳನ್ನೂ ಮೌಲ್ಯಮಾಪನದ ತೆಕ್ಕಗೆ ಸೇರಿಸುವ ಮತ್ತು ಪ್ರತಿ ವಿದ್ಯಾರ್ಥಿಯ ಬಲ-ದೌರ್ಬಲ್ಯಗಳಿಗೆ ಸಂವೇದನಾಶೀಲವಾಗಿರುವ ಮಾನವೀಯ ಮೌಲ್ಯಮಾಪನ ಪದ್ಧತಿಯೊಂದರ ಬೀಜಗಳು ಈಗ ಜಾರಿಗೆ ತಂದಿರುವ ಪದ್ಧತಿಯಲ್ಲೇ ಕಾಣಸಿಗುತ್ತಿರುವುದು ಸಮಾಧಾನದ ಸಂಗತಿ. 

Saturday 8 February 2014

ರೇನ್ ಕೋಟು  ಶಿರಸಿ ಬಸ್ ಸ್ಟಾಂಡಿನ ಸಿಮೆಂಟು ಬೆಂಚಿನ ಮೇಲೆ ಕುಳಿತು ಕಣ್ಣು, ಕುತ್ತಿಗೆ, ದೇಹವನ್ನೆಲ್ಲ ಇಷ್ಟಿಷ್ಟೇ ತಿರುಗಿಸಿ ಪೂರ್ತಿ ಮುನ್ನೂರವತ್ತು ಡಿಗ್ರಿವರೆಗೂ ಕಣ್ಣು ಹರಿಸಿದರೂ ಪರಿಚಯದವರ್ಯಾರೂ ಕಾಣಲಿಲ್ಲ. ಬಸ್ಟ್ಯಾಂಡು, ರೈಲು ನಿಲ್ದಾಣ  ಅಥವಾ ಯಾವುದೇ ಅಪರಿಚಿತ ಸ್ಥಳ ತಲುಪಿದ ತಕ್ಷಣ ನಾನು ಮಾಡುವ ಮೊದಲ ಕೆಲಸವಿದು. ದೂರದೂರಿಗೆ ತುರ್ತು ಸುದ್ದಿ ಮುಟ್ಟಿಸುವ ಸಲುವಾಗಿ ಯಾರನ್ನೋ ಹುಡುಕುವಂತೆ ಜನಸಮುದ್ರದ ನಡುವೆ ನಮ್ಮೂರ ಜನಕ್ಕಾಗಿ ನನ್ನ ಕಣ್ಣು, ಕುತ್ತಿಗೆ, ದೇಹವೆಲ್ಲ ಸೇರಿ ಆ ಬಗೆಯ ಜಂಟಿ ಪ್ರಯತ್ನದಲ್ಲಿ ಯಾಕಾದರೂ ತೊಡಗುತ್ತವೋ? ಬಹುಷಃ, ನಾನು ಯಾವುದೋ ನಿರ್ಧಿಷ್ಟ ವ್ಯಕ್ತಿಯನ್ನು ಹುಡುಕುತ್ತಿರಬಹುದೇ ಅಥವಾ ಇಂತಹ ಅಭ್ಯಾಸ ಎಲ್ಲರಲ್ಲಿಯೂ ಇದ್ದು, ಅದು ಮನುಷ್ಯನ ಮೂಲ ಪ್ರವೃತ್ತಿಯೇ ಆಗಿದೆಯೇ? ನನ್ನ ಜೊತೆ ಶಾಲೆಗೆ ಹೋಗುತ್ತಿದ್ದ ನಮ್ಮೂರ ಮೇಷ್ಟ್ರ ಮಗಳು ಈಗ ಏಕಾಏಕಿ ಗಂಡನ ಜೊತೆ ಒಂದೋ ಎರಡೋ ಮಕ್ಕಳನ್ನು ಕಟ್ಟಿಕೊಂಡು ಎದುರು ಸಿಕ್ಕರೆ, ಆಕೆಯನ್ನು ಬಹುವಚನದಲ್ಲಿ ಸಂಬೋಧಿಸಬೇಕೋ ಅಥವಾ ಸಲಿಗೆಯ ಏಕವಚನ ಸಾಕೋ ಎಂದೆಲ್ಲ ಯೋಚಿಸುತ್ತಾ ಶಿರಸಿ  ಬಸ್ ಸ್ಟ್ಯಾಂಡಿನ ಇಂಚಿಂಚು ಸರ್ವೆ ನಡೆಸಿದೆ.
  ಹಿಂದಿನ ಅನೇಕ ಬಸ್ ಸ್ಟ್ಯಾಂಡುಗಳಲ್ಲಿ ಆದ ನಿರಾಸೆ ಶಿರಸಿ ಬಸ್ ಸ್ಟ್ಯಾಂಡಿನಲ್ಲೂ ಮುಂದುವರಿಯಿತು. ನಮ್ಮೂರ ಜನ ಬೇರೆಲ್ಲಿಗೂ ಹೋಗುವುದೇ ಇಲ್ಲವೇನೋ ಅಂದುಕೊಳ್ಳುತ್ತಾ ಕಲ್ಲು ಬೆಂಚಿನ ಮೇಲೆ ಕೈಚೀಲವನ್ನಿಟ್ಟು ಅದರ ಬಳಿಯೇ ಕುಳಿತೆ. ಕಾಲಿಗೆ ತಾಗಿದ ಯಾರದೋ  ಕೈಚೀಲ ಅದರಲ್ಲಿದ್ದ ಹಸಿ ಹಸಿ ತರಕಾರಿಗಳಿಂದ ಗಮನ ಸೆಳೆಯಿತು. ನುಗ್ಗೆಕಾಯಿ, ಬಸಲೆಸೊಪ್ಪು ಹೊರಗೆ ಇಣುಕುತ್ತಿದ್ದವು. ನನಗೆ ಮಾದನಗೇರಿಯ ಮೂಲಂಗಿ, ಪಟ್ಲಕಾಯಿಯ ನೆನಪಾಯಿತು. ಜೊತೆಗೆ, ಬಿಳಿಶೆಟ್ಲಿ, ಚಿಪ್ಪಿಕಲ್ಲು ಕೂಡಾ ನೆನಪಿಗೆ ಬಂದವು. ಪಟ್ಲಕಾಯಿ ಅಥವಾ ಬಸಲೆಯ ಜೊತೆಗೆ ಚಿಪ್ಪಿಕಲ್ಲು ಅಥವಾ ಶೆಟ್ಲಿ ಸೇರಿಸಿ ಅಮ್ಮ ಮಾಡುವ ಹುಳುಗ ನೆನಪಾಗಿ ಬಾಯಿ ನೀರಾಯಿತು. ಇಷ್ಟೆಲ್ಲ ನೆನಪುಗಳ ಮೆರವಣಿಗೆಯನ್ನು ಮನದಲ್ಲಿ ಮೂಡಿಸಿದ ಆ ಕೈಚೀಲದ ಯಜಮಾನನನ್ನು ನೋಡುವ ಕುತೂಹಲ ಉಂಟಾಗಿ ನಿಧಾನವಾಗಿ ಚೀಲದ ಪಕ್ಕದಲ್ಲೇ ಇದ್ದ ಹಳೆಯ ಹವಾಯಿ ಚಪ್ಪಲಿಯ ಕಾಲುಗಳಿಂದ ಪ್ರಾರಂಭಿಸಿ ನನ್ನ ದೃಷ್ಟಿಯನ್ನು ಆತನ ಮುಖದವರೆಗೂ ಮೇಲೆತ್ತಿದೆ-ಎಂಬತ್ತರ ದಶಕದ ಸಿನೇಮಾಗಳಲ್ಲಿ ನಾಯಕನನ್ನು ಕಾಲಿನಿಂದ ಪ್ರಾರಂಭಿಸಿ ಸ್ವಲ್ಪ ಸ್ವಲ್ಪವೇ ಹೆಚ್ಚಿಗೆ ತೋರಿಸುತ್ತಾ ಕೊನೆಗೆ ಪೂರ್ತಿಯಾಗಿ ತೋರಿಸುವಂತೆ.
    ಅರೇ! ಇವ ದಾಮುವಲ್ಲವೇ?!
*****
   ಹೌದು, ದಾಮುವೇ!
 ದಾಮು ಎಂದರೆ ದಾಮೋದರ. ನನ್ನೊಡನೆ ಶಾಲೆಯಲ್ಲಿ ಬೆಂಚು ಡೆಸ್ಕುಗಳನ್ನು ಹಂಚಿಕೊಂಡವ. ನನ್ನಷ್ಟೇ ಎತ್ತರ ಇದ್ದುದರಿಂದ ಇರಬಹುದು, ನಮ್ಮ ಸಹಬೆಂಚು ಸ್ನೇಹ ಏಳನೆಯ ತರಗತಿಯವರೆಗೂ ಮುಂದುವರಿದಿತ್ತು. ಒಮ್ಮೆ ಇದೇ ದಾಮು ನನ್ನ ಮಡ್ಲಕೊಡೆಯನ್ನು ಅವನ ಅರಿವೆ ಕೊಡೆಯ ಚೂಪಾದ ತುದಿಯಿಂದ ಇರಿದು ತೂತು ಮಾಡಿದ್ದ. ನಾನು ಗಾಯತ್ರಿ ಮಾಸ್ತರರಲ್ಲಿ ದೂರು ನೀಡಿದಾಗ ಇದೇ ದಾಮು ಎಲ್ಲ ತಪ್ಪೂ ನನ್ನ ಮಡ್ಲಕೊಡೆಯದೇ ಎಂಬಂತೆ ವಾದಿಸಿದ್ದ. ಅವನ ವಾದಕ್ಕೆ ಗಾಯತ್ರಿ ಮಾಸ್ತರರು ಮರುಳಾದರೋ ಅಥವಾ ಅವರಿಗೂ ನನ್ನ ಮಡ್ಲಕೊಡೆಯ ಬಗ್ಗೆ ತಾತ್ಸಾರವಿತ್ತೋ, ಒಂದು ಐತಿಹಾಸಿಕ ತೀರ್ಪನ್ನು ನೀಡಿದ್ದರು. ಮಡಚಿ ಮೂಲೆಯಲ್ಲಿ ಇಡಲು ಸಾಧ್ಯವಾಗದೇ ಇರುವುದು ಮತ್ತು ತರಗತಿಯ ಬಹುಜಾಗವನ್ನು ಆಕ್ರಮಿಸಿ ವಿದ್ಯಾರ್ಥಿಗಳ ಓಡಾಟಕ್ಕೆ ತೊಂದರೆ ಕೊಡುತ್ತದೆ ಎಂಬ ಕಾರಣಗಳನ್ನು ನೀಡಿ, ಇನ್ನು ಮುಂದೆ ಮಡ್ಲಕೊಡೆಯನ್ನು ತರಲೇಬಾರದೆಂದು ಕಟ್ಟಪ್ಪಣೆ ಮಾಡಿದ್ದರು! ಈ ಆದೇಶ ನನ್ನ ಹಾಗೆ ಮಡ್ಲಕೊಡೆ ತರುತ್ತಿದ್ದ ಇನ್ನೂ ಮೂವರು ವಿದ್ಯಾರ್ಥಿಗಳಿಗೂ ಅನ್ವಯಿಸುತ್ತದೆ ಎಂದು ಅವರೆಲ್ಲರ ಹೆಸರುಗಳನ್ನು ಹೇಳಿ ಸ್ಪಷ್ಟಪಡಿಸಿದ್ದರು.
  ಉಳಿದ ಮಕ್ಕಳ ಹಗುರದ ಬಟ್ಟೆಕೊಡೆಗಳನ್ನು ಕಂಡು ಅಸೂಯೆಪಡುತ್ತಿದ್ದ ನನಗೆ ಭಾರದ ಮಡ್ಲಕೊಡೆಯ ಬಗ್ಗೆ ಅಸಮಾಧಾನವಿದ್ದದ್ದು ಸುಳ್ಳಲ್ಲ. ಆದ್ದರಿಂದಲೇ, ಗಾಯತ್ರಿ ಮಾಸ್ತರರ ಮಡ್ಲಕೊಡೆ ನಿಷೇಧದ ತೀರ್ಪನ್ನು ಮನೆಗೆ ಹೋಗಿ ಇನ್ನಷ್ಟು ಕಟ್ಟುನಿಟ್ಟುಗೊಳಿಸಿ ವರದಿಮಾಡಿದ್ದೆ. ಮಡ್ಲಕೊಡೆಯ ಬದಲು ಅರಿವೆಕೊಡೆ ದೊರೆಯುತ್ತದೆ ಎಂಬ ನನ್ನ ಸಂತೋಷವನ್ನು ಮನೆಯವರೆದುರು ತೋರಿಸಿಕೊಳ್ಳದೆ ಮುಂದಿನ ಕೆಲದಿನಗಳವರೆಗೆ ಬೇರೆ ಯಾರದೋ ಕೊಡೆಯನ್ನು ಹಂಚಿಕೊಂಡು ಶಾಲೆಗೆ ಹೋಗುತ್ತಿದ್ದೆ. ಅರಿವೆ ಕೊಡೆ ಬರುತ್ತದೆ ಎಂಬ ಖುಷಿಯೊಂದಿಗೆ ಮಳೆಯಲ್ಲಿ ನೆನೆದು ಬಂದರೂ ವಿನಾಯ್ತಿ ದೊರೆಯುವ ಖುಷಿಯೂ ಸೇರಿಕೊಂಡು ನನಗೆ ದುಪ್ಪಟ್ಟು ಸಂತೋಷ ದೊರೆತದ್ದರಲ್ಲ್ಲಿ ದಾಮುವಿನ ಪಾಲಿದೆ ಎಂದು ಆಗ ನನಗನಿಸಿರಲಿಲ್ಲ.  ತಲೆಯನ್ನು ಒದ್ದೆಮಾಡಿಕೊಳ್ಳಬೇಡ ಎಂಬ ಅಮ್ಮನ ಕಾಳಜಿ ಮತ್ತು ಪುಸ್ತಕದ ಚೀಲ ಒದ್ದೆಯಾಗಬಾರದೆಂಬ ನನ್ನದೇ ಸ್ವಂತ ಕಾಳಜಿ ಎರಡಕ್ಕೂ ಬೆಲೆಕೊಡುತ್ತಾ ಚೀಲವನ್ನು ತಲೆಯಮೇಲಿಟ್ಟುಕೊಂಡು ಯಾರದೋ ಕೊಡೆಯೊಳಗೆ ತೂರಿಕೊಳ್ಳುತ್ತಿದ್ದೆ. ಸ್ವಂತದ ಕೊಡೆಯ ಜವಾಬ್ಧಾರಿಗಿಂತ ಹೀಗೆ ತೂರಿಕೊಂಡೇ ದಿನ ಕಳೆಯುವುದು ಉತ್ತಮ ಅನ್ನಿಸಿದ್ದೂ ಉಂಟು. ಆದರೆ, ಬರಲಿರುವ ಕರಿಯ ಅರಿವೆಕೊಡೆ ಹುಟ್ಟಿಸಿದ ನಿರೀಕ್ಷೆಗಳು ಇಂತಹ ಮಧ್ಯಂತರ ಆಲೋಚನೆಗಳನ್ನು ನಿವಾಳಿಸಿಬಿಡುತ್ತಿದ್ದವು.
  ಕೊಡೆ ಇಂದು ದೊರೆಯಬಹುದೋ ನಾಳೆಯೋ ಎಂಬ ನಿರೀಕ್ಷೆ ಒಂದು ಕಡೆಯಾದರೆ, ಬರಲಿರುವ ಕೊಡೆ ಪ್ಲಾಸ್ಟಿಕ್ ಹಿಡಿಕೆಯ ಸ್ಟೀಲ್ ದಂಟಿನದೋ ಅಥವಾ ಬೆತ್ತದ ದಂಟಿನ ಹಳೆಯ ಮಾದರಿಯೋ ಎಂಬ ಕುತೂಹಲ ಇನ್ನೊಂದು ಕಡೆ. ಬೆತ್ತದ ದಂಟಿನ ಕೊಡೆಯೇ ಒಳ್ಳೆಯದು; ಪ್ಲಾಸ್ಟಿಕ್ ಹಿಡಿಕೆಯ ಕೊಡೆಗಳೆಲ್ಲ ಬರೀ ಚೆಂದಕ್ಕೆ ಎಂದು ಅಪ್ಪ ಆಗಾಗ ಹೇಳುತ್ತಿದ್ದುದು ನೆನಪಿಸಿಕೊಂಡರೆ ಆತಂಕವಾಗುತಿತ್ತು. ಬೆತ್ತದ ಕೊಡೆ ಚೆನ್ನಾಗಿರುವುದಾದರೆ ನಾನೂ ಅದನ್ನೇ ಬಯಸುತ್ತಿದ್ದನಲ್ಲ? ಮಕ್ಕಳಿಗೆ ಇಷ್ಟವಾಗುವುದೆಲ್ಲ ದೊಡ್ಡವರಿಗೇಕೆ ಇಷ್ಟವಾಗುವುದಿಲ್ಲ? ಚೆನ್ನಾಗಿರುವುದು ಎಂದರೆ ಎಲ್ಲರಿಗೂ ಇಷ್ಟವಾಗಬೇಕಲ್ಲವೇ? ಚೆಂದ ಇದ್ದ ಮಾತ್ರಕ್ಕೆ ಚೆನ್ನಾಗಿಲ್ಲ ಎಂದು ಏಕೆ ಯೋಚಿಸಬೇಕು? ಹೀಗೆಲ್ಲ ಯೊಚನೆಗಳು ಬಂದು ಹಳೆಯ ಮಾದರಿಯೇ ಉತ್ತಮ ಎಂಬ ಅಪ್ಪನ ನಿಖರ ನಿಲುವಿನ ಬಗ್ಗೆಯೇ ಅನುಮಾನ ಪಟ್ಟಿದ್ದೆ.
   ಮಡ್ಲಕೊಡೆ ನಿಷೇದದ ಎಂಟೋ ಒಂಬತ್ತೋ ದಿನಗಳ ನಂತರ ಅಪ್ಪ ಕುಮಟಾಕ್ಕೆ ಹೋದರು. ಬಹುಷಃ ಕೊಡೆಗೆ ಬೇಕಾದ ದುಡ್ಡು ಹೊಂದಿಸಿಕೊಳ್ಳಲು ಅಷ್ಟು ದಿನಗಳು ತಗುಲಿರಬಹುದು. ಆ ದಿನ ಶಾಲೆ ಬಿಟ್ಟು ಬರುವಾಗ ಕೊಡೆ ಬಂದಿರಬಹುದು ಎಂದು ಊಹಿಸುತ್ತಾ ಸಂತೋಷ, ಕುತೂಹಲ ಮತ್ತು ಆತಂಕಗಳ ವಿಚಿತ್ರ ಕಾಂಬಿನೇಷನ್ನಿನ ಅದೆಂತದೋ ಭಾವದೊಂದಿಗೆ ಮನೆಗೆ ಬಂದಿದ್ದೆ. ನನ್ನ ಕಣ್ಗಳಲ್ಲಿರುವ ಕುತೂಹಲವನ್ನು ಅಳತೆಮಾಡುವವಳÀಂತೆ ನೋಡಿ ಅಮ್ಮ ಜಗುಲಿಯಿಂದ ಕೊಣೆಯೊಳಗೆ ತೆರಳಿ ಕೂಡಲೇ ಒಂದು ನೀಲಿ ಕೈಚೀಲದೊಂದಿಗೆ ಹೊರಬಂದಳು. ಕೊಡೆಯ ಉದ್ದನೆಯ ದಂಡಿನಂತಹ ಆಕಾರವನ್ನು ನಿರೀಕ್ಷಿಸುತ್ತಿದ್ದ ನನಗೆ ಕೈಚೀಲ ಇನ್ನಷ್ಟು ಕುತೂಹಲವನ್ನುಂಟುಮಾಡಿತ್ತು. ಕೈಚೀಲದ ಗುಂಡಿಗಳನ್ನು ತೆರೆದು ಒಳಗಿರುವ ನೀಲಿ ಬಣ್ಣದ ರೇನ್ ಕೋಟನ್ನು ಅಮ್ಮ ನನ್ನ ಕೈಗೆ ನೀಡಿದ್ದಳು. ಕೊಡೆಯ ಬದಲು ರೇನ್ ಕೋಟ್ ದೊರೆತದ್ದಕ್ಕೆ ಖುಷಿಪಡಬೇಕೋ ಬೇಜಾರು ಪಟ್ಟುಕೊಳ್ಳಬೇಕೋ ಎಂದು ನಿರ್ಧರಿಸಲಾಗದೇ ಗೊಂದಲದಲ್ಲಿರುವಾಗ `` ನಮ್ಮೂರಲ್ಲಿ ಯಾರತ್ರೂ ರೇನ್ ಕೋಟಿಲ್ಲ..ನೀನೇ ಮೋದ್ಲು ರೇನ್ ಕೋಟ್ ಹಾಕುವವ’’ ಎಂದು ಅಮ್ಮ ಹೇಳಿದ್ದರಿಂದ ನನ್ನ ಗೊಂದಲಕ್ಕೆ ಕಾರಣವೇ ಇಲ್ಲವಾಯಿತು. ಪ್ಲಾಸ್ಟಿಕ್ ಹಿಡಿಕೆಯ ಸ್ಟೀಲ್ ದಂಟಿನ ಅರಿವೆ ಕೊಡೆಯನ್ನು ಹಿಡಿಯುವುದಕ್ಕಿಂತ ರೇನ್ ಕೋಟ್ ಧರಿಸುವುದೇ ಹೆಚ್ಚು ಪ್ರತಿಷ್ಟೆಯದು ಎಂಬುದು ಮನದಟ್ಟಾಗುತ್ತಲೇ, ನಾಳೆ ದಾಮು ನನ್ನ ರೇನ್ ಕೋಟನ್ನು ನೋಡಿ ಹೇಗೆ ಪ್ರತಿಕ್ರಿಯಿಸಬಹುದು ಎಂಬುದನ್ನು ಕಲ್ಪಿಸತೊಡಗಿದೆ.
                                     ******
   ನಾನು ಆ ಶಾಲೆಗೇ ಸೇರಿದ್ದೇ ಐದನೆಯ ತರಗತಿಯಲ್ಲಿ. ಏಕೋಪಾಧ್ಯಾಯರಿರುವ ಕಿರಿಯ ಪ್ರಾಥಮಿಕ ಶಾಲೆಯಿಂದ  ಬಂದಿದ್ದ ನನಗೆ ಬಹಳಷ್ಟು ಶಿಕ್ಷಕರಿರುವ ಹಿರಿಯ ಪ್ರಾಥಮಿಕ ಶಾಲೆ ಬೆರಗನ್ನುಂಟುಮಾಡಿತ್ತು. ಮೊದಲ ದಿನವೇ ಅಲ್ಲಿರುವ ಶಿಕ್ಷಕ-ಶಿಕ್ಷಕಿಯರ ಹೆಸರುಗಳನ್ನು ತಿಳಿದುಕೊಳ್ಳಬೇಕೆಂಬ ಕುತೂಹಲ ಇದ್ದಿದ್ದರೂ ಎಲ್ಲರ ಹೆಸರುಗಳನ್ನು ತಿಳಿದುಕೊಳ್ಳಲು ಒಂದು ವಾರ ಹಿಡಿಯಿತು. ಗಾಯತ್ರಿ ಎಂಬುದು ಒಬ್ಬ ಮಾಸ್ತರರ ಹೆಸರು ಎಂದಾಗ ನನಗೆ ಮತ್ತು ನನ್ನ ಹಾಗೆ ಆ ಶಾಲೆಗೆ ಹೊಸದಾಗಿ ಸೇರಿದವರಿಗೆ ನಂಬಲೇ ಆಗಿರಲಿಲ್ಲ. ಗಂಡಸಿನ ಹೆಸರು ಗಾಯತ್ರಿ ಎಂದಿರಲು ಸಾಧ್ಯವೇ ಇಲ್ಲ ಎಂದು ನಾವೆಲ್ಲ ವಾದಿಸಿದೆವು. ಆದರೆ, ಅದೇ ಶಾಲೆಯಲ್ಲಿ ಒಂದನೇ ತರಗತಿಯಿಂದಲೂ ಕಲಿಯುತ್ತಿದ್ದ ಉಳಿದ ಮಕ್ಕಳು ಗಾಯತ್ರಿ ಎಂಬುದು ಶಿಕ್ಷಕರೊಬ್ಬರ ಹೆಸರು ಎಂದು ಮನವರಿಕೆ ಮಾಡಿಕೊಡಲು ಬಹಳ ಪ್ರಯತ್ನ ಪಟ್ಟಿದ್ದರು. ಅವರ ಪ್ರಯತ್ನವೆಲ್ಲ ವಿಫಲಗೊಂಡು ಅಂತಿಮವಾಗಿ, ಹೆಡ್ ಮಾಸ್ತರರ ಕೋಣೆಯ ಗೋಡೆಗೆ ನೇತುಹಾಕಲಾಗಿದ್ದ ಶಿಕ್ಷಕರ ಹೆಸರುಗಳ ಬೋರ್ಡಿನ ಬಳಿ ನಮ್ಮನ್ನೆಲ್ಲ ಕರೆದುಕೊಂಡು ಹೋಗಿ ಅಲ್ಲಿರುವ ಆರ್. ಎಸ್. ಗಾಯತ್ರಿ ಎಂಬ ಹೆಸರನ್ನು ಕಾಣಿಸಿದರು. ಪ್ರತ್ಯಕ್ಷ ಪುರಾವೆ ಉಂಟುಮಾಡಿದ ಕಣ್ಕಟ್ಟಿನಿಂದಾಗಿ ಸುಮ್ಮನೆ ತರಗತಿಕೋಣೆಗೆ ಬಂದಿದ್ದರೂ ನಮಗೆ ಒಪ್ಪಿಗೆ ಆಗಿರಲಿಲ್ಲ. ಬೋರ್ಡಿನಲ್ಲಿ ಹೆಸರಿದ್ದ ಮಾತ್ರಕ್ಕೆ ಗಂಡಸಿನದೇ ಆಗಿರಬೇಕೆಂದಿಲ್ಲವೆಂದು ಪ್ರತಿವಾದ ಹೂಡಿದೆವು. ಆಗ ಇದೇ ದಾಮೋದರ ಬಹುದೊಡ್ಡ ಸಂಶೋಧನೆಯನ್ನು ಪ್ರಕಟಿಸುವ ಗತ್ತಿನಲ್ಲಿ, ಹೆಸರಿನ ಹಿಂದೆ ಶ್ರೀ ಇದ್ದರೆ ಅದು ಗಂಡಸಿನದೆಂದೂ ಶ್ರೀಮತಿ ಎಂದಿದ್ದರೆ ಹೆಂಗಸಿನದ್ದೆಂದೂ ತೀರ್ಪು ನೀಡಿದ್ದ. ಪುನಃ ಹೆಡ್ ಮಾಸ್ತರರ ಕೋಣೆಯ ಗೋಡೆಯ ಮೇಲಿನ ಬೋರ್ಡನ್ನು ನೋಡಿದರೆ ಅಲ್ಲಿ ಯಾರ ಹೆಸರಿನ ಹಿಂದೆಯೂ ಶ್ರೀ ಅಥವಾ ಶ್ರೀಮತಿ ಎಂಬುದು ಇರಲಿಲ್ಲ. ಹೆಸರಿನ ಮುಂದೆ ಶ್ರೀ ಹೊಂದಿರುವ ನಮ್ಮದೇ ತರಗತಿಯ ಕಾವ್ಯಶ್ರೀ ಗಂಡೊ ಹೆಣ್ಣೋ ಎಂಬ ಹುಸಿ ಚರ್ಚೆಯನ್ನು ಮಾಡುತ್ತಾ ಮತ್ತೆ ತರಗತಿಗೆ ಬಂದಿದ್ದೆವು.
    ಇಷ್ಟೆಲ್ಲ ಕುತೂಹಲವನ್ನು ಉಂಟುಮಾಡಿದ ಗಾಯತ್ರಿ ಮಾಸ್ತರರು ನಮ್ಮ ತರಗತಿಗೆ ಬಂದೇ ಬಿಟ್ಟರು. ಆಗಿನ್ನೂ ನಮ್ಮ ಪಾಲಿಗೆ ಅವರು ಗಾಯತ್ರಿ ಮಾಸ್ತರರಾಗಿರಲಿಲ್ಲ- ಕುಳ್ಳಗಿನ ಆಕಾರ, ಗುಂಡಗಿನ ಮುಖ, ಜುಬ್ಬ ಪಾಯಿಜಾಮದ ಮನುಷ್ಯಾಕೃತಿ ಮಾತ್ರ. ನಾವವರ ಮುಂದಿನ ನಡೆಗಳನ್ನು ಕುತೂಹಲದಿಂದ  ನಿರೀಕ್ಷಿಸುತ್ತಿದ್ದೆವು. ಶಂಕಿತ ಗಾಯತ್ರಿ ಮಾಸ್ತರರು ಆ ಶಾಲೆಗೆ ಹೊಸದಾಗಿ ಸೇರಿದ ನಮ್ಮ ಹೆಸರುಗಳನ್ನು ಕೇಳಿತಿಳಿದುಕೊಂಡರು. ತಮ್ಮ ಹೆಸರನ್ನೂ ಹೇಳಬಹುದೆಂದು ನಾವೆಲ್ಲ ಅಂದುಕೊಂಡೆವು. ಅವರು ಹಾಗೆ ಮಾಡಲಿಲ್ಲ. ಬದಲಿಗೆ, ನಾನು ನಿಮ್ಮ ಕ್ಲಾಸ್ ಟೀಚರ್ ಎಂದರು. ಹಾಗೆ ಹೇಳಿದ್ದೇ ಏನೋ ಹೊಳೆದವರಂತೆ, ಕರಿಹಲಗೆಯ ಕಡೆ ತಿರುಗಿ ಅತ್ಯಂತ ಮೇಲುಗಡೆ `ಶ್ರೀ ಮಹಾಬಲೇಶ್ವರಾಯ ನಮಃ’ ಎಂದು ಬರೆದರು. ಕೆಳಗಿನ ಸಾಲಿನಲ್ಲಿ ತರಗತಿ ಐದು ಎಂದು ಒಂದು ಮೂಲೆಯಲ್ಲಿ ಬರೆದು ಇನ್ನೊಂದು  ಮೂಲೆಯಲ್ಲಿ ಶಿಕ್ಷಕರ ಹೆಸರು ಎಂದು ಬರೆಯುತ್ತಿದ್ದಂತೆ ನನ್ನ ಎದೆ ಡವಗುಟ್ಟುತಿತ್ತು. ಇವರ ಹೆಸರು ಗಾಯತ್ರಿ ಎಂದಾಗದಿರಲಿ ಎಂದು ಬೋರ್ಡಿನ ಮೇಲೆ ಇರುವ ಮಹಾಬಲೇಶ್ವರನನ್ನು ಪ್ರಾರ್ಥಿಸತೊಡಗಿದೆ. ಅವರು ಬರೆಹವನ್ನು ಪೂರ್ತಿಗೊಳಿಸಿದರು-ತರಗತಿ ಶಿಕ್ಷಕರ ಹೆಸರು ಶ್ರೀ ರಾಜಾರಾಮ ಎಸ್ ಗಾಯತ್ರಿ.
 ದಾಮು ನನ್ನ ಕಡೆ ನೋಡಿ ಕೀಟಲೆಯ ನಗು ಬೀರಿದ್ದ.
******


  ಧೋ ಎಂದು ಸುರಿಯುವ ಮಳೆ ಮತ್ತು ಖಾಲಿ ಖಾಲಿಯಿರುವ ಶಾಲೆಯ ಸುತ್ತಲಿನ ನೆಲ ಗಾಯತ್ರಿ ಮಾಸÀ್ತರರನ್ನು ಕೆಣಕಿಸಿರಬಹುದು-ಅವರು ಏಳನೆಯ ತರಗತಿಯ ಮಕ್ಕಳ ಸಹಾಯ ಪಡೆದು ತರಕಾರಿ ಬೆಳೆಯುವ ಕೆಲಸಕ್ಕೆ ಕೈ ಹಾಕಿದ್ದರು. ಬೆಂಡೆ ಗಿಡಗಳು ಎತ್ತರ ಬೆಳೆದಿದ್ದವು. ಒಂದು ದಿನ ಬೆಂಡೆಗಿಡಗಳ ಬುಡಸಡಿಲುಗೊಳಿಸಿ ಗೊಬ್ಬರ ಹಾಕಲು ನಮ್ಮೆಲ್ಲರನ್ನು ಕರೆದುಕೊಂಡು ಹೋದರು. ಹಾರೆ-ಪಿಕಾಸು ಹಿಡಿಯುವ ಅದೃಷ್ಟ ಕೆಲವರಿಗಷ್ಟೇ-ಉಳಿದವರಿಗೆ ಕಳೆತೆಗೆದು ಕೈತೋಟ ಸ್ವಚ್ಛಗೊಳಿಸುವ ಕೆಲಸ.
 ಹತ್ತು ನಿಮಿಷವೂ ಕಳೆದಿರಲಿಲ್ಲ; ಸಣ್ಣದಾಗಿ ಮಳೆ ಪ್ರಾರಂಭವಾಯ್ತು. ಮಕ್ಕಳು ಕೊಡೆ ಹಿಡಿದು ಕಳೆಕೀಳುವ ಕೆಲಸ ಮುಂದುವರಿಸಿದರು. ನಾನು ರೇನ್ ಕೋಟ್ ಹಾಕಿಕೊಂಡು ಕಳೆಕೀಳಲು ಕಷ್ಟಪಡುತ್ತಿದ್ದೆ. ಚಿಕ್ಕದೊಂದು ಮುಂಡು ಪಿಕ್ಕಾಸು ಹಿಡಿದು ಅಗೆಯುತ್ತಿದ್ದ ದಾಮು ಗಾಯತ್ರಿ ಮಾಸ್ತರರ ಬಳಿ ಬಂದು ರೇನ್ ಕೋಟ್ ಇದ್ದಿದ್ದರೆ ಬುಡ ಸಡಿಲುಮಾಡುವ ಕೆಲಸ ಮುಗಿಸಿಯೇ ಹೋಗಬಹುದಿತ್ತು ಎಂಬ ಅಮೋಘ ಸಲಹೆಯನ್ನು ನೀಡಿದ. ನನ್ನ ರೇನ್ ಕೋಟನ್ನೊಮ್ಮೆ ತಾನೂ ಧರಿಸುವೆನೆಂದು ದಾಮು ಹಿಂದೆ ಬಹಳಸಲ ನನ್ನನ್ನು ಕೇಳಿದ್ದ. ನಾನದಕ್ಕೆ ಒಪ್ಪಿರಲಿಲ್ಲ. ಈಗ ಎಷ್ಟು ಉಪಾಯವಾಗಿ ನನ್ನ ರೇನ್ ಕೋಟನ್ನು ಪಡೆಯಲು ಹವಣಿಸುತ್ತಿದ್ದಾನೆ!!
 ಗಾಯತ್ರಿ ಮಾಸ್ತರರು ರೇನ್ ಕೋಟ್ ಬಿಚ್ಚಿಕೊಡಲು ತಿಳಿಸಿದರು. ನಾನು ರೇನ್‍ಕೋಟ್ ಬಿಚ್ಚಿಕೊಟ್ಟು ಗಾಯತ್ರಿ ಮಾಸ್ತರರ ಕೊಡೆಯಲ್ಲಿ ಆಶ್ರಯ ಪಡೆದೆ. ಕೆಲಸ ಮದ್ಯಾಹ್ನದ ಊಟದ ವಿರಾಮದವರೆಗೂ ಮುಂದುವರಿಯಿತು. ದಾಮು ರೇನ್ ಕೋಟ್ ಬಿಚ್ಚಿಕೊಡುವುದನ್ನೇ ಕಾಯುತ್ತಿದ್ದ ನನಗೆ ಊಟದ ವಿರಾಮದ ಲಾಂಗ್ ಬೆಲ್ಲು ಎಂದಿಗಿಂತ ಇಂಪಾಗಿ ಕೇಳಿಸಿತು.
  ಮದ್ಯಾಹ್ನ ಮನೆಗೆ ಹೋಗಿ ತಟ್ಟಿಯ ಮೇಲೆ ರೇನ್ ಕೊಟ್ ಬಿಚ್ಚಿಡುತ್ತಿರುವಾಗ ಅಮ್ಮ ಏನೋ ಅನಾಹುತವನ್ನು ಕಂಡವಳÀಂತೆ ಹೌಹಾರಿದಳು. ಬಲಕಂಕುಳ ಬಳಿ ರೇನ್ ಕೋಟ್ ಅರ್ಧ ಅಡಿಯಷ್ಟು ಹರಿದುಹೋಗಿತ್ತು. ಅಮ್ಮ ಹೊಡದೇ ಬಿಡುವರೆಂಬ ಭಯದಲ್ಲಿ ಪೂರ್ತಿ  ಕತೆಯನ್ನು ಅರ್ಧ ಮಾತು ಇನ್ನರ್ಧ ಅಳುವನ್ನು ಸೇರಿಸಿ ಅರುಹಿದೆ. ರೇನ್ ಕೋಟ್ ಹರಿದಿದ್ದನ್ನು ಕಾಣದ ನನಗೂ, ರೇನ್ ಕೋಟ್ ಹರಿದ ದಾಮೋದರನಿಗೂ ಮತ್ತು ಇಡೀ ಘಟನೆಯ ಪುರೋಹಿತತನವನ್ನು ವಹಿಸಿದ ಗಾಯತ್ರಿ ಮಾಸ್ತರರಿಗೂ ಎರಡು ಸುತ್ತು ಬೈದು, ಆನಂತರ ಸುಧಾರಿಸಿಕೊಂಡು
`` ಇದ ಅವರಿಗೇ ಕೊಟ್ಟು ಬಾ..ಬೆಂಡಿ ಗಿಡಕ್ಕೆ ಮಂಗ ಬರದಿದ್ದಂಗೆ ಬಿಚ್ಚ ಬೇಕಾರೆ ಮಾಡ್ಕಣ್ಲಿ’’ ಎಂದು ಸಿಟ್ಟಿನಿಂದ ಊಟಹಾಕದೇ ನನ್ನನ್ನು ವಾಪಸು ಕಳುಹಿಸಿದಳು.
 ನಾನು ಶಾಲೆಗೆ ವಾಪಸು ಹೋಗುವ ಮೊದಲೇ ನಮ್ಮ ಮನೆಯಲ್ಲಿ ನಡೆದ ರಾದ್ಧಾಂತ ಶಾಲೆಯನ್ನು ತಲುಪಿತ್ತು. ಶಾಲೆಗೆ ಹೋದವನೇ
 ರೇನ್ ಕೋಟನ್ನು ದಾಮುವಿಗೆ ನೀಡಿ
 `` ನೀನೇ ಸರಿಮಾಡಿಕೊಡಬೇಕು’’ ಎಂದು ಹಠ ಹಿಡಿದೆ.
ಇದಕ್ಕೆ ಸಂಬಂಧವೇ ಇಲ್ಲದವನಂತೆ ದಾಮು-
 ‘` ರೇನ್ ಕೋಟ್ ಕೊಡು ಅಂದ ಹೇಳಿದ್ದ ನಾನಾ ಗಾಯತ್ರಿ ಮಾಸ್ತರರಾ?’’ ಎಂದು ನನ್ನನ್ನೇ ಪ್ರಶ್ನೆ ಮಾಡಿದ.
ನನಗೆ ಎಲ್ಲಿಲ್ಲದ ಕೋಪ ಬಂತು
 `` ನಿನ್ನ ಗಾಯತ್ರಿ ಮಾಸ್ತರ ಸೊಡ್ಲಿಗೆ ಹೋಗಲಿ’’ ಎಂದು ಹೇಳಿ ಆನಂತರ ತುಟಿಕಚ್ಚಿಕೊಂಡೆ.
 ನಾನೆಂತಹ ಗಂಭೀರ ತಪ್ಪು ಮಾಡಿದೆನೆಂಬ ಅರಿವಾಗುವಾಗ ತಡವಾಗಿತ್ತು. ಪೇಸ್ಟು ಟ್ಯೂಬಿನಿಂದ ಹೊರಬಂದುಬಿಟ್ಟಿತ್ತು.
``ನೀನು ಗಾಯತ್ರಿ ಮಾಸ್ತರರಿಗೆ ಸೊಡ್ಲಿಗೆ ಹೋಗ್ಲಿ ಅಂದ್ಯಾ.... ತಡಿ ನಿಂಗೆ’’ ಅಂದ.
ಏಳನೆಯ ತರಗತಿ ಮುಗಿಯುವವರೆಗೂ ಗಾಯತ್ರಿ ಮಾಸ್ತರರಿಗೆ ಹೇಳಿಕೊಡುತ್ತೇನೆ ಎಂದು ದಾಮು ಆಗಾಗ ನನ್ನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದ. ತನ್ನ ಹೋಮ್ ವರ್ಕ್ ಎಲ್ಲವನ್ನೂ ನನ್ನಿಂದಲೇ ಮಾಡಿಸುತ್ತಿದ್ದ. ದಾಮುವಿನ ಬೇಡಿಕೆಗಳನ್ನು ಈಡೇರಿಸಲು ನಾನು ಆಗಾಗ ಅಮ್ಮನ ಸಾಸಿವೆ, ಕೊತ್ತುಂಬರಿ ಡಬ್ಬಗಳನ್ನೆಲ್ಲ ಹುಡುಕಿ ಚಿಲ್ಲರೆ ಕಳುವು ಮಾಡಬೇಕಾಗುತಿತ್ತು. ಇಷ್ಟಾದರೂ ದಾಮು ತೃಪ್ತನಾಗುತ್ತಿರಲಿಲ್ಲ, ತರಗತಿಯ ನನ್ನ ಖಾಸಾ ಸ್ನೇಹಿತರೊಡನೆ ದಾಮುವಿನ ಆದೇಶದಂತೆ ಮಾತುಬಿಡಬೇಕಾಗಿತ್ತು. ನನ್ನ ಪಾಲಿಗೆ ಅತಿ ದೀರ್ಘ ಅವಧಿಯದ್ದೆನಿಸಿದ ಏಳನೆಯ ತರಗತಿ ಮುಗಿಯುವವರೆಗೂ ದಾಮು ನನ್ನಿಂದ ಅನೇಕ ಸಲ ಕಳುವು ಮಾಡಿಸಿದ್ದ, ಸುಳ್ಳು ಹೇಳಿಸಿದ್ದ, ಸ್ನೇಹಿತರೊಡನೆ ಕಾಲು ಕೆರೆದು ಜಗಳವಾಡುವಂತೆ ಮಾಡಿಸಿದ್ದ. ನಾನೆಷ್ಟು ಹಿಂಸೆ ಅನುಭವಿಸಿದ್ದೆನೆಂದರೆ, ಏಳನೆಯ ತರಗತಿಯ ಅಂತ್ಯದಲ್ಲಿ ಇದ್ದ ಬಿದ್ದ ಧೈರ್ಯವನ್ನೆಲ್ಲ ಒಟ್ಟುಗೂಡಿಸಿ ಒಂದು ತೀರ್ಮಾನಕ್ಕೆ ಬಂದು ಬಿಟ್ಟಿದ್ದೆ-ಇನ್ನು ಮುಂದೆ ಹೇಗೂ ಈ ಶಾಲೆ ಬಿಟ್ಟು ಹೈಸ್ಕೂಲು ಸೇರಬೇಕಾದ್ದರಿಂದ ಇನ್ನು ಮುಂದೆ ದಾಮು `` ಗಾಯತ್ರಿ ಮಾಸ್ತರರಿಗೆ ಹೇಳ್ತೇ..’’ ಎಂದು ಹೆದರಿಸಿದರೆ `` ಹೇಳ್ಕೋ ಹೋಗೋ’’ ಎಂದು ಹೇಳಬೇಕೆಂದುಕೊಂಡಿದ್ದೆ. ಆದರೆ, ದಾಮೋದರ ಮತ್ತೆಂದೂ ನನ್ನನ್ನು ಹೆದರಿಸಲಿಲ್ಲ. ಏಕೆಂದರೆ, ಆತ ಏಳನೆಯ ತರಗತಿಯನ್ನು ದಾಟಿ ಎಂಟಕ್ಕೆ ಬರಲೇ ಇಲ್ಲ!
****
   ಶಿರಸಿ ಬಸ್ ಸ್ಟಾಂಡಿನಲ್ಲಿ ದಾಮುವನ್ನು ಕಂಡಾಗ ಹಳೆಯದೆಲ್ಲ ನೆನಪಾದರೂ ಹಳೆಯ ಸಿಟ್ಟು ಇರಲಿಲ್ಲ.
``ದಾಮು ಊರಿಗೆ ಹೊರಟ್ಯೇನೋ’’ ಎಂದು ಮಾತಿಗಾರಂಭಿಸಿದೆ. ಕಳೆದ ಇಪ್ಪತೈದು ವರ್ಷಗಳಿಂದಲೂ ದಾಮು ಶಿರಸಿಯ ರೆಸ್ಟೋರೆಂಟ್ ಒಂದರಲ್ಲಿ ಸಪ್ಲೈಯರ್ ಕೆಲಸ ಮಾಡುತ್ತಿದ್ದಾನೆ. ಸಣ್ಣ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡವ ಆದ್ದರಿಂದಲೇ, ಏಳನೆಯ ತರಗತಿ ಫೇಲ್ ಆಗುತ್ತಲೆ ದುಡಿಮೆಯ ಪ್ರಪಂಚಕ್ಕೆ ಕಾಲಿರಿಸಿದ್ದ. ದಾಮುವಿನ ಜೊತೆ ಸಪ್ಲೈಯರ್ ಕೆಲಸಕ್ಕೆ ಅದೇ ರೆಸ್ಟೋರೋಟಿನಲ್ಲಿ ಸೇರಿಕೊಂಡ ಒಂದಿಬ್ಬರು ಭಡ್ತಿ ಪಡೆದು ಈಗ ಅದೇ ಮಾಲೀಕರ ಬೇರೆ ರೆಸ್ಟೋರೆಂಟುಗಳಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರಂತೆ. ಇನ್ನಿಬ್ಬರು ತಮ್ಮದೇ ಸ್ವಂತ ಹೊಟೇಲು ನಡೆಸುತ್ತಿದ್ದಾರಂತೆÉ. ದಾಮುವಿನದು ಅದೇ ಸಪ್ಲೈಯರು ಕೆಲಸ. ಕೆಲಸದಲ್ಲಿ ಬದಲಾವಣೆ ಇಲ್ಲದಿದ್ದರೂ ಕಳೆದ ಇಪ್ಪತೈದು ವರ್ಷಗಳಲ್ಲಿ ದಾಮುವಿನ ಬದುಕಿನಲ್ಲಿ ಬಹಳ ಬದಲಾವಣೆಗಳು ಸಂಭವಿಸಿದ್ದವು. ಹತ್ತು ವರ್ಷಗಳÀ ಹಿಂದೆಯೇ ಮದುವೆ ಆಗಿತ್ತು. ಆನಂತರ, ಮಕ್ಕಳು, ಸಂಸಾರ ಹೀಗೆ ಜವಾಬ್ಧಾರಿಗಳು ಹೆಚ್ಚುತ್ತಲೇ ಹೋದವು. ಈ ಗಡಿಬಿಡಿಯಲ್ಲಿ ತನ್ನ ವೃತ್ತಿ ಬದುಕನ್ನು ಶಿರಸಿಯಿಂದ ಊರಿಗಾಗಲಿ ಅಥವಾ ತನ್ನ ಸಂಸಾರವನ್ನು ಊರಿಂದ ಶಿರಸಿಗಾಗಲಿ ಸ್ಥಳಾಂತರಿಸಲು ಸಮಯ ಸೌಕರ್ಯ ಯಾವುದೂ ಸಿಕ್ಕಿರಲಿಲ್ಲ. ದಾಮುವಿನ ಕುರಿತು ಊರಿಗೆ ಹೋದಾಗ ಅಷ್ಟಿಷ್ಟು  ಕೇಳಿತಿಳಿದುಕೊಂಡಿದ್ದ ಮಾಹಿತಿಗಳಿವು. ಎರಡು ವರ್ಷಗಳ ಹಿಂದೆ ಒಂದೆರಡುಬಾರಿ ಸಿಕ್ಕಿದ್ದ ಕೂಡಾ. ಈಗಲೂ ದಾಮು ಊರಿಗೆ ಹೊರಟಿದ್ದು ಖಾತ್ರಿಯಿದ್ದರೂ ಮಾತಿಗೊಂದು ಪ್ರಾರಂಭ ಪಡೆಯಲು
 ``ಊರಿಗೆ ಹೊರಟ್ಯೇನೋ’’  ಎಂದು ಕೇಳಿದ್ದೆ.
 ``ವಾರದ ಹಿಂದೆ ಹೋಗಿಬಂದಿದ್ದೆ, ಅಮ್ಮಗೆ ಹುಷಾರಿಲ್ವಂತೆ ಅದಕ್ಕೆ ಹೋಗಿ ಬರುವಾ ಅಂತ ಮಾಡ್ದೆ’’ ಅಂದ.
ನನ್ನ ಬಗ್ಗೆಯೂ ಕೇಳಿ ತಿಳಿದುಕೊಂಡ. ಸಾಗರದಲ್ಲಿ ಮನೆಕಟ್ಟಿಸಿದ ಬಗ್ಗೆ ಹೇಳಿದಾಗ ಏನೂ ಖುಷಿಪಟ್ಟುಕೊಳ್ಳಲಿಲ್ಲ.
``ನಮ್ಮೂರಲ್ಲಿ ಸಿಗುವ ಹಸಿಶೆಟ್ಲಿ ಬೇರೆ ಎಲ್ಲಾರೂ ಸಿಗುದಾ?’’
 ಎಂದು ನನ್ನನ್ನೇ ಪ್ರಶ್ನಿಸಿ, ತಾಜಾ ಸಿಗಡಿ ಮತ್ತು ಗಾಳದ ಹೊಳೆ ಮೀನುಗಳ ದೊರೆಯುವಿಕೆಯೇ ಒಂದು ಊರು ಎಷ್ಟು ಉತ್ತಮ ಎಂದು ಅಳೆಯುವ ಏಕೈಕ ಮಾನದಂಡವೆಂಬಂತೆ ಮಾತನಾಡಿದ.
``ಬೇರೆ ಊರಲ್ಲಿ ನಾವ್ಯಾವಾಗಲೂ ಹೊರಗಿನವರೇ’’ ಅಂದ.
 ನಲವತ್ತು ಲಕ್ಷ ರೂಪಾಯಿ ಖರ್ಚು ಮಾಡಿ ನಾನು ಕಟ್ಟಿಸಿದ ಮನೆ ನಿಷ್ಪ್ರಯೋಜಕವೆಂಬಂತಿತ್ತು ಅವನ  ಮಾತು.
  ದಾಮು ಧರಿಸಿದ ಶರ್ಟು, ಪ್ಯಾಂಟು ಮತ್ತು ವಾರದಿಂದ ಬೋಳಿಸದ ಅವನ ಗಡ್ಡ ಅವನ ಪರಿಸ್ಥಿತಿಯನ್ನು ನನಗೆ ಮನದಟ್ಟು ಮಾಡಿದ್ದವು. ಆದುದರಿಂದ, ಅವನ ಕುರಿತು ನಾನು ಹೆಚ್ಚಿಗೆ ಕೇಳಲು ಹೋಗಲಿಲ್ಲ. ಅಷ್ಟರಲ್ಲಿ ಬಸ್ ಬಂದದ್ದರಿಂದ ದಾಮು ಹೊರಡಲಣಿಯಾದ.
``ಊರಿಗೆ ಸದ್ಯ ಹೋಗಿದ್ದೆಯಾ’’ ಎಂದು ಕೇಳಿದ.
 ಹೋಗದೇ ಆರು ತಿಂಗಳಾಗಿತ್ತು. ಇತ್ತೀಚೆಗೆ ಅಪ್ಪಗೆ ಹುಷಾರಿಲ್ಲದಾಗಲೂ ಹೋಗಲಾಗಿರಲಿಲ್ಲ. ತಮ್ಮನ ಬ್ಯಾಂಕ್ ಅಕೌಂಟಿಗೆ ಐದುಸಾವಿರ ರೂಪಾಯಿ ಇ ಎಮ್ ಟಿ ಮಾಡಿ, ಫೋನಿನಲ್ಲೇ ಅಪ್ಪನ ಆರೋಗ್ಯ ವಿಚಾರಿಸಿಕೊಂಡಿದ್ದೆ. ``ಸದ್ಯ ಹೋಗಲಿಲ್ಲ’’ ಎಂದು ಹೇಳಲು ಏಕೋ ಅಳುಕಾಯಿತು.
 ``ಹದಿನೈದು ದಿನದ ಹಿಂದೆ ಹೋಗಿದ್ದೆ’’ ಅಂದೆ.
 ``ನುಗ್ಗೆಕೋಡು ಬೇಕಾ’’ ಎಂದು ಕೇಳಿದ.
ಮಾತಾಡದೆ ಒಂದು ಕಟ್ಟು ತೆಗೆದುಕೊಂಡೆ. ದಾಮು ಬಸ್ಸಿನ ಕಡೆ ಹೆಜ್ಜೆ ಹಾಕುತ್ತಿರುವಾಗ
`` ದಾಮು, ಒಂದ್ನಿಮಿಷ’’ ಎಂದೆ.
 ದಾಮು ತಿರುಗಿದ
 ``ಇದನ್ನು ಇಟ್ಕೋ’’
ಎನ್ನುತ್ತಾ ಐದು ನೂರು ರೂಪಾಯಿ ನೋಟನ್ನು ಅವನ ಕೈಗಿಡಲು ಹೋದೆ. ದಾಮುವಿನ ಮುಖಚಹರೆ ಬದಲಾಯಿತು. ತಟ್ಟನೆ ನನ್ನ ಕೈಯಲ್ಲಿದ್ದ ನುಗ್ಗೆಕೋಡಿನ ಕಟ್ಟನ್ನು ಕಸಿದುಕೊಂಡು ಸರಸರನೆ ಬಸ್ ಹತ್ತಲು ಧಾವಿಸಿಹೋದ.
  ಕೈಲಿದ್ದ ಐದು ನೂರರÀ ನೋಟು ಆಗಷ್ಟೇ ಬೆಳಗಿದ ನಿಯಾನ್ ದೀಪದಲ್ಲಿ ಬೇರೆ ತರ ಕಾಣಿಸುತಿತ್ತು.

************************************************************


ಬಿಚ್ಚು-ಬೆಚ್ಚು, ಬೆರ್ಚಪ್ಪ
ಮಡ್ಲಕೊಡೆ-ತಾಳೆಗರಿಯ ಕೊಡೆ    
ಸೊಡ್ಲಿ- ಸ್ಮಶಾನ
ಪಟ್ಲಕಾಯಿ-ಪಡುವಲಕಾಯಿ
ಹುಳಗಾ- ಒಂದು ಬಗೆಯ ಸಾರು
ಶೆಟ್ಲಿ- ಸಿಗಡಿ