Tuesday, 21 June 2022

ಕಲಿಯುವುದೆಂದರೆ ಪ್ರಶ್ನೆಗಳ ಬೆನ್ನ ಮೇಲಿನ ಸವಾರಿ.

ಕಲಿಯುವುದು ಒಂದು ಸಾಮಾಜಿಕ ಪ್ರಕ್ರಿಯೆ. ನಾವು ಒಡನಾಡುತ್ತಾ ಕಲಿಯುತ್ತೇವೆ. ಕಲಿಸುವವರು ಮತ್ತು ಕಲಿಯುವವರು ಎಂದು ವ್ಯಕ್ತಿಗಳನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ. ಎಲ್ಲರೂ ಜೊತೆಯಾಗಿ ಕಲಿಯುತ್ತಿರುತ್ತೇವೆ. 



ಶಿಕ್ಷಕ-ಶಿಕ್ಷಕಿಯರು ತಮ್ಮ ವಿದ್ಯಾಭ್ಯಾಸದ ಸಮಯದಲ್ಲಿ ಕಲಿತಿರುವುದಕ್ಕಿಂತ ಹೆಚ್ಚು ವಿಷಯಗಳನ್ನು ಮಕ್ಕಳೊಂದಿಗೆ ಕಲಿಯುತ್ತಾರೆ. ಒಂದೆರಡು ಉದಾಹರಣೆಗಳು ಈ ಮಾತನ್ನು ಸಮರ್ಥಿಸಬಲ್ಲವು.
.
ನಾನು ಆಗಷ್ಟೇ ಶಿಕ್ಷಕನಾಗಿ ಕೆಲಸ ಆರಂಭಿಸಿದ್ದೆ. ಲೋಹಗಳನ್ನು ಅವುಗಳ ಅದುರಿನಿಂದ ಉದ್ಧರಿಸುವ ವಿಧಾನಗಳ ಕುರಿತು ಹತ್ತನೆಯ ತರಗತಿಯ ವಿದ್ಯಾರ್ಥಿಗಳಿಗೆ ಪಾಠ ನಡೆಯುತಿತ್ತು. ಕಬ್ಬಿಣವನ್ನು ಅದರ ಅದಿರಿನಿಂದ ಉದ್ಧರಿಸುವ ಊದುಕುಲುಮೆಯನ್ನು ನಾನಂತೂ ನೋಡಿದ್ದೇ ಇರಲಿಲ್ಲ. ಅದರ ಕುರಿತು ನನಗಾಗ ಗೊತ್ತಿದ್ದುದು ಪಠ್ಯಪುಸ್ತಕದಲ್ಲಿ ನೀಡಿದ ಮಾಹಿತಿಯಷ್ಟೇ ಎನ್ನಬಹುದು. ಊದುಕುಲುಮೆಯೊಳಗೆ ಬಿಸಿಗಾಳಿಯನ್ನು ಹಾಯಿಸಿ ಸಾವಿರದಾರುನೂರು ಡಿಗ್ರೀ ಸೆಲ್ಸಿಯಸ್‌ವರೆಗೆ ತಾಪಮಾನವನ್ನು ಹೆಚ್ಚಿಸಿದಾಗ  ಕುಲುಮೆಯೊಳಗಿನ  ಕೋಕ್‌  ಕಾದ ಕಬ್ಬಿಣದ ಹೆಮಟೈಟ್‌ ಅದಿರನ್ನು ಅಪಕರ್ಷಿಸಿಸುತ್ತದೆ. ದೃವಿತ ಕಬ್ಬಿಣವು ಕುಲುಮೆಯ ಬುಡಭಾಗದಲ್ಲಿ ಸಂಗ್ರಹಗೊಳ್ಳುತ್ತದೆ ಇತ್ಯಾದಿ ಇತ್ಯಾದಿ.. ವಿವರಗಳನ್ನು ಬೋರ್ಡಿನ ಮೇಲಿರುವ ಚಿತ್ರ ತೋರಿಸುತ್ತಾ ವಿವರಿಸುತ್ತಿದ್ದೆ. ಹುಡುಗಿಯೊಬ್ಬಳು "ಸರ್‌, ಅಷ್ಟು ತಾಪಮಾನದಲ್ಲಿ ಆ ಕುಲುಮೆ ಕರಗಿಹೋಗುವುದಿಲ್ವಾ?" ಎಂದು ಕೇಳಿದಳು. ಇದುವರೆಗೂ ಬೋರ್ಡಿನ ಮೇಲಿನ ಚಿತ್ರವನ್ನೇ ಪಿಳಿ ಪಿಳಿ ನೋಡುತ್ತಾ ನಾನು ಹೇಳುತ್ತಿದ್ದ, ನನಗೂ ಗೊತ್ತಿಲ್ಲದ ವಿಷಯಗಳನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದ ಮಕ್ಕಳಲ್ಲಿ ವಿದ್ಯುತ್‌ ಸಂಚಾರವಾದಂತಾಯ್ತು. ಪ್ರಶ್ನೆಗಳ ಖಜಾನೆಯ ಬಾಗಿಲು ತೆರೆದುಕೊಂಡಿತು. ಇನ್ನೊಬ್ಬಳು ಕೇಳಿದಳು "ಸರ್‌, ಕುಲುಮೆಯನ್ನು ಯಾವುದರಿಂದ ಮಾಡಿರ್ತಾರೆ?" 
ಆ ಅಧ್ಯಾಯಕ್ಕೆ ಸಂಬಂಧಿಸಿದ ಅಭ್ಯಾಸದ ಪ್ರಶ್ನೆಗಳನ್ನು ಕೇಳಿದ್ದರೆ ಸುಲಭವಾಗಿ ಉತ್ತರಿಸುವಷ್ಟು ಸಿದ್ಧತೆ ಮಾಡಿಕೊಂಡಿದ್ದ ನನ್ನ ತಲೆಯೊಳಗೆ ಇಂತಹ ಪ್ರಶ್ನೆಗಳು ಬಂದೇ ಇರಲಿಲ್ಲ. ಕುಲುಮೆಯನ್ನು ಯಾವುದರಿಂದ ಮಾಡಿರುತ್ತಾರೆ ಎಂಬ ವಿವರ ಪಠ್ಯಪುಸ್ತಕದಲ್ಲಿ ಇದ್ದಿರಲಿಲ್ಲ. ಮಾರನೆಯ ದಿನ ಮೆಟಲರ್ಜಿಯ ಪುಸ್ತಕ ಓದಿಕೊಂಡು ಮಕ್ಕಳ ಅನುಮಾನಗಳನ್ನೆಲ್ಲ ಪರಿಹರಿಸಿದೆ. ಎಷ್ಟೇ ಸಿದ್ಧತೆ ಮಾಡಿಕೊಂಡು ಹೋಗಿದ್ದರೂ ಮಕ್ಕಳು ಕೇಳಿದ ಎಲ್ಲ ಪ್ರಶ್ನೆಗಳಿಗೂ ಆಗ ನನ್ನಲ್ಲಿ ಉತ್ತರ ಇರಲಿಲ್ಲ, ಈಗಲೂ ಇಲ್ಲ. ಪ್ರತಿ ತರಗತಿಯಲ್ಲೂ ಮಕ್ಕಳು ಕೇಳುವ ಪ್ರಶ್ನೆಗಳು ನನ್ನನ್ನು ನಿತ್ಯ ವಿದ್ಯಾರ್ಥಿಯಾಗಿಸಿದ ಹಾಗೆ ಎಲ್ಲ ಶಿಕ್ಷಕರ ಕಲಿಕೆಯನ್ನೂ ನಿರಂತರಗೊಳಿಸಿವೆ.
ಪ್ರಾಥಮಿಕ ಶಾಲೆಯ ಪುಟ್ಟ ಮಕ್ಕಳು ದೊಡ್ಡ ತರಗತಿಯ ಮಕ್ಕಳಿಗಿಂತ ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾರೆ. ಮಕ್ಕಳು ಪ್ರಶ್ನೆಗಳನ್ನು ಕೇಳಿದಾಗಲೋ, ತಮಗೇ ಅನುಮಾನ ಬಂದಾಗಲೋ ಅಥವಾ ಪುಸ್ತಕದಲ್ಲೇ ಇರುವ ʻನಿಮ್ಮ ಶಿಕ್ಷಕರನ್ನು ಕೇಳಿ ತಿಳಿಯಿರಿʼ ಎಂಬಂತಹ ಚಟುವಟಿಕೆಗಳ ಕಾರಣದಿಂದಲೋ ಪಕ್ಕದ ಪ್ರಾಥಮಿಕ ಶಾಲೆಯ ಶಿಕ್ಷಕ ಶಿಕ್ಷಕಿಯರು ಮುಂಚೆ ಸಮೀಪದ ಪ್ರೌಢಶಾಲೆಯ ಶಿಕ್ಷಕರ ಬಳಿ ಸಮಾಲೋಚನೆ ನಡೆಸುವ ರೂಢಿ ಇತ್ತು. ಈಗ ಅಂತದ್ದಕ್ಕೆಲ್ಲ ಗೂಗಲ್‌ ಮಾಡುತ್ತಾರೆ. ನನ್ನ ಬಳಿ ಒಮ್ಮೆ ಶಿಕ್ಷಕರೊಬ್ಬರು  " ನಾವು ಮಾಂಸವನ್ನು ಜೀರ್ಣಿಸಿಕೊಳ್ಳುತ್ತೇವೆ, ಆದರೆ ಹಸಿವಾದಾಗ ನಮ್ಮ ಜಠರವೇ ಏಕೆ ಜೀರ್ಣವಾಗುವುದಿಲ್ಲ?" ಎಂದು ಕೇಳಿದ್ದರು. ಈ ಪ್ರಶ್ನೆಯನ್ನು ತರಗತಿಯಲ್ಲಿ ಮಗುವೊಂದು ಅವರನ್ನು ಕೇಳಿತ್ತಂತೆ. ಪುಠಾಣಿ ಮಕ್ಕಳು ಕೇಳುವ ಪ್ರಶ್ನೆಗಳು ಆ ಪ್ರಶ್ನೆಯ ಉತ್ತರಕ್ಕಿಂತ ಮುಖ್ಯವೆನಿಸುತ್ತವೆ. " ಮಳೆಯಲ್ಲಿ ಕಾಮನಬಿಲ್ಲು ನೆನೆಯುವುದಿಲ್ಲವಾ ಸರ್?"‌ ಎಂಬ ಪ್ರಶ್ನೆಯನ್ನು ದೊಡ್ಡವರು ಕೇಳಬಲ್ಲರೆ?
.
ಎಂಟನೆಯ ತರಗತಿಯ ವಿದ್ಯಾರ್ಥಿಗಳಿಗೆ ಸೂಕ್ಷ್ಮಾಣು ಜೀವಿಗಳ ಪಾಠವನ್ನು ಮಾಡುತ್ತಿದ್ದ ಸಹೋದ್ಯೋಗಿಯೊಬ್ಬರು ಇಂತಹ ಪ್ರಶ್ನೆಗಳ ಮೂಲಕವೇ ತರಗತಿ ಸಂವಹನವನ್ನು ಪರಿಣಾಮಕಾರಿಯಾಗಿಸಿದ ಪ್ರಸಂಗವನ್ನು ಹಂಚಿಕೊಂಡಿದ್ದರು. ಹೆಣ್ಣು ಅನಾಫೆಲಿಸ್‌ ಸೊಳ್ಳೆಯು ಮಲೇರಿಯಾ ರೋಗವನ್ನು ಹರಡುತ್ತದೆ ಎಂಬ ಮಾಹಿತಿಯನ್ನು ಕ್ಲಾಸಿನಲ್ಲಿ ಹೇಳಿಗಾಗ ವಿದ್ಯಾರ್ಥಿಯೊಬ್ಬ " ಗಂಡು ಅನಾಫೆಲಿಸ್‌ ಸೊಳ್ಳೆ ಯಾಕೆ ಮಲೇರಿಯಾ ಹರಡುವುದಿಲ್ಲ ಸರ್?" ಎಂದು ಕೇಳಿದನಂತೆ. ಈಗ ಇಂತಹ ಪ್ರಶ್ನೆಗಳಿಗೆಲ್ಲ ಕ್ಷಣಾರ್ಧದಲ್ಲಿ ಗೂಗಲ್‌ ಮಾಡಿ ಉತ್ತರ ಪಡೆಯಬಹುದು. ಆದರೆ, ಆಗ ಈ ಸೌಕರ್ಯ ಇರಲಿಲ್ಲ.‌ ಪರೀಕ್ಷೆಗೆ ಬೇಕಷ್ಟೇ ಕಲಿಯುವುದಾದರೆ ಇಂತಹ ಪ್ರಶ್ನೆಗಳು ಹುಟ್ಟುವುದೇ ಇಲ್ಲ. ತನಗೆ ಉತ್ತರ ಗೊತ್ತಿಲ್ಲದೆ ಇರುವಾಗಲೂ ಆ ಪ್ರಶ್ನೆಯನ್ನು ಶಿಕ್ಷಕರು ಬಹಳ ಚೆನ್ನಾಗಿ ನಿರ್ವಹಿಸಿದರು. " ಓಹ! ಹೌದಲ್ಲ? ನಂಗ್ಯಾಕೆ ಇದು ಹೊಳಿಲಿಲ್ಲ?" ಎಂದು ಹೇಳಿದರು. ಎಷ್ಟು ಚೆಂದದ ಪ್ರತಿಕ್ರಿಯೆ. ಎಷ್ಟು ಪ್ರಾಮಾಣಿಕ ಮತ್ತು ಉತ್ತೇಜಕ. ಶಿಕ್ಷಕರ ಈ ಉತ್ತರ ಮಕ್ಕಳ ಉತ್ಸಾಹವನ್ನು ಹೆಚ್ಚಿಸಿತು. ಅವರು ಬೇರೆ ಬೇರೆ ಉತ್ತರಗಳನ್ನು ಹೇಳಿದರು. ಆ ಉತ್ತರಗಳು ಸರಿಯೋ ತಪ್ಪೋ ಎಂಬುದು ಶಿಕ್ಷಕರಿಗೆ ಗೊತ್ತಾಗಲಿಲ್ಲ. ಕೊನೆಯಲ್ಲಿ, "ನಾಳೆ ನಾನು ಈ ಪ್ರಶ್ನೆಗೆ ಉತ್ತರ ಹುಡುಕುವೆ, ನೀವೂ ಹುಡುಕಿಕೊಂಡು ಬನ್ನಿ" ಎಂದರು. ಕೆಲವು ಮಕ್ಕಳು ಮಧ್ಯಾಹ್ನದ ಊಟದ ವಿರಾಮದಲ್ಲಿ ತಮಗೆ ಈ ಹಿಂದೆ ವಿಜ್ಞಾನ ಬೋಧಿಸಿದ ಪ್ರಾಥಮಿಕ ಶಾಲೆಯ ಶಿಕ್ಷಕಿಯ ಬಳಿ ಪ್ರಶ್ನೆಯನ್ನು ಕೊಂಡೊಯ್ದರು. ಅವರೂ ತನಗೆ ಗೊತ್ತಿಲ್ಲ ಎಂದಿರಬೇಕು. ಹತ್ತಾರು ಜನರನ್ನು ವಿಚಾರಿಸಿ ಮಾರನೆಯ ದಿನ  ತರಗತಿಗೆ ಮರಳಿ ಬಂದಾಗ, ಶಿಕ್ಷಕರು ತಾನು ಸಂಗ್ರಹಿಸಿದ ಉತ್ತರ ಹೇಳುವ ಬದಲು ಮಕ್ಕಳು ಬೇರೆ ಬೇರೆ ಜನರಿಂದ ಪಡೆದು ತಂದಿದ್ದ ಉತ್ತರಗಳನ್ನೆಲ್ಲ ಆಲಿಸಿದರು. ಕೊನೆಯಲ್ಲಿ, ಸರಿ ಉತ್ತರವನ್ನು ತಿಳಿಸಿ, ಕಾರಣವನ್ನು ವಿವರಿಸಿದರು. ಹೆಣ್ಣು ಸೊಳ್ಳೆಗಳು ಬ್ರಹತ್‌ ಸಂಖ್ಯೆಯಲ್ಲಿ ಮೊಟ್ಟೆ ಹಾಕುತ್ತವೆ. ಈ ಕಾರಣಕ್ಕಾಗಿ ಅವುಗಳಿಗೆ ಪೋಷಕದ್ರವ್ಯಗಳ ಅಗತ್ಯ ಅತಿ ಹೆಚ್ಚು. ಆದುದರಿಂದ ಅವು ರಕ್ತ ಹೀರುತ್ತವೆ. ಗಂಡು ಅನಾಫೆಲಿಸ್ ಸೊಳ್ಳೆಯಲ್ಲಿ ರಕ್ತ ಹೀರಬಲ್ಲಂತಹ ದೇಹಭಾಗವೇ ಇರುವುದಿಲ್ಲ. ‌

ಒಂದು ಪ್ರಶ್ನೆ ತರಗತಿ ವ್ಯವಹಾರವನ್ನೇ ರಚನಾತ್ಮಕವಾಗಿಸಬಲ್ಲದು. ಶಿಕ್ಷಕ-ಶಿಕ್ಷಕಿಯರು ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಬಲ್ಲ ಎನಸೈಕ್ಲೋಪೀಡಿಯಾಗಳಲ್ಲ. ಅವರು ಮಕ್ಕಳಲ್ಲಿ ಪ್ರಶ್ನೆಗಳನ್ನು ಹುಟ್ಟಿಸಬಲ್ಲರು. ಪ್ರಶ್ನೆಗಳು ಮಕ್ಕಳನ್ನು ʻಉತ್ತರಾಭಿಮುಖಿʼಯಾಗಿಸುತ್ತವೆ. ಇದರಿಂದ ಮಕ್ಕಳು ಜ್ಞಾನದ ನಿರ್ಮಾತೃರಾಗುತ್ತಾರೆ.
ಶಾಖದ ಪಾಠ ಮಾಡುವಾಗ ಕ್ಲಿನಿಕಲ್‌ ಥರ್ಮಾಮೀಟರ್‌ ತೋರಿಸಿ ಸೆಲ್ಸಿಯಸ್ಸಿಗೂ ಫ್ಯಾರನ್‌ ಹೀಟಿಗೂ ಇರುವ ಸಂಬಂಧ ತಿಳಿಸುತ್ತಿದ್ದೆ. ವಿದ್ಯಾರ್ಥಿಯೊಬ್ಬ ನಡುವೆಯೇ  " ದನಗಳ ಜ್ವರ ಅಳೆಯಲು ಥರ್ಮಾಮೀಟರ್‌ ಎಲ್ಲಿಡ್ತಾರೆ ಗೊತ್ತಾ ಸರ್?"‌ ಎಂದು ಕೇಳಿದ. ಆತನಿಗೆ ಉತ್ತರ ಗೊತ್ತಿತ್ತು. ನನಗೆ ಉತ್ತರ ಗೊತ್ತಿಲ್ಲವೆಂದೂ ಆತನಿಗೆ ಗೊತ್ತಾಗಿ ಹೋಗಿತ್ತು. " ಎಲ್ಲಿ ಮಾರಾಯಾ?" ಎಂದೆ. 
ಬಾಲ ಎತ್ತಿ ಥರ್ಮಾಮೀಟರಿಟ್ಟು  ದನಗಳ ಜ್ವರ ಅಳೆಯುವ ವಿಧಾನವನ್ನು ನಾಟಕೀಯವಾಗಿ ವಿವರಿಸಿದ. ಆಸಕ್ತಿಯಿಂದ ಆಲಿಸಿದೆ.

No comments: