Monday 20 June 2022

ಬಿಳಿ ಬಣ್ಣ ಶ್ರೇಷ್ಟವೆಂಬ ವ್ಯಸನವು ಜಾತಿ ತಾರತಮ್ಯದಷ್ಟೇ ಅಮಾನವೀಯ

"ಚರ್ಮದ ಬಣ್ಣದ ಕಾರಣಕ್ಕಾಗಿ ತಾರತಮ್ಯ ನಡೆಯುತ್ತದೆ. ತಿಳಿ ಮೈಬಣ್ಣ ಶ್ರೇಷ್ಠವೆಂಬ ಅಹಮಿಕೆಯೂ, ಗಾಢ ಬಣ್ಣ ಕುರೂಪವೆಂಬ ಕೀಳರಿಮೆಯೂ ಬೇಡ” 

ಹೀಗೆನ್ನುತ್ತಾ ಫೇರನೆಸ್‌ ಉತ್ಪನ್ನವೊಂದರ ಎರಡು ಕೋಟಿ ರೂಪಾಯಿಗಳ ಜಾಹಿರಾತು ಒಪ್ಪಂದವನ್ನು ತಿರಸ್ಕರಿಸಿ ಬಹುಭಾಷಾ ನಟಿ ಸಾಯಿಪಲ್ಲವಿ ಸುದ್ದಿಯಾಗಿದ್ದರು. ಅವರ ತರ್ಕ ಸರಳವಾಗಿದೆ- ನಿಗ್ರೋಗಳಿಗೆ ತಮ್ಮದೇ  ಮೈಬಣ್ಣ ಇರುವಂತೆ, ಮಂಗೂಲಿಯನ್ನರಿಗೆ, ಕಕೇಶಿಯನ್ನರಿಗೆ, ಆಸ್ಟ್ರೇಲಿಯನ್ನರಿಗೆ ತಮ್ಮದೇ ಬಣ್ಣದ ಚರ್ಮ ಇರುತ್ತದೆ. ಭಾರತೀಯರಿಗೂ ಕೂಡಾ ತಮ್ಮದೇ ಮೈಬಣ್ಣವಿದೆ ಅಷ್ಟೆ. ದ್ರಾವಿಡಿಯನ್ನರ ಬಣ್ಣ ಉತ್ತರದ ಜನರ ಬಣ್ಣಕ್ಕಿಂತ ತುಸು ಗಾಢವಿರಬಹುದು ಅದು ನಮ್ಮ ಮೈಬಣ್ಣ. ಬ್ರಿಟೀಷರನ್ನು ಈ ದೇಶದಿಂದ ಹೊರದಬ್ಬುವ ದೀರ್ಘ ಹೋರಾಟದಲ್ಲಿ ಈ ದೇಶದ ಎಲ್ಲ ಮೈಬಣ್ಣದವರೂ ಜೊತೆಗೂಡಿದ್ದರು. ಎಂಟು ಧರ್ಮದ, ನಾಲ್ಕು ಸಾವಿರ ಜಾತಿಯ, ಇನ್ನೂರೈವತ್ತು ಭಾಷೆಯ ಜನರು,  ಅದೆಷ್ಟೋ ಉಪಭಾಷೆಯನ್ನು ಮಾತನಾಡುವವರು, ಇನ್ನೆಷ್ಟೋ ವಿಶಿಷ್ಟ ಆಚರಣೆಗಳನ್ನು ಅನುಸರಿಸುವವರು, ವಿಭಿನ್ನ ಪಂಥದವರು. ನೂರಾರು ಬುಡಕಟ್ಟು ಪಂಗಡವರು  ಒಂದಾಗಿ ಬ್ರಿಟೀಷರನ್ನು ಎದುರಿಸಿ ಗೆದ್ದಿದ್ದೆವು. ಅವರೇನೋ ಹೊರಟುಹೋದರು. ಆದರೆ, ಅವರು ಬಿಟ್ಟು ಹೋದ ಬಿಳಿ ಮೈಬಣ್ಣ ಶ್ರೇಷ್ಟವೆಂಬ ವ್ಯಸನ ಇಲ್ಲೇ ಇದೆ. ಅದು ಒಂದು ಸಾಮಾಜಿಕ ಉಪಟಳವಾಗಿ ಕಾಡುತ್ತಿದೆ. 

ಅಮೇರಿಕದ ಮಿನಾಪೋಲಿಸ್ ಪಟ್ಟಣದಲ್ಲಿ 2020 ರ ಮೇ 25 ರಂದು ಕಪ್ಪು ವರ್ಣೀಯರಾದ ಜಾರ್ಜ್ ಫ್ಲಾಯ್ಡ್ ಎಂಬವರನ್ನು  ಬಿಳಿ ಬಣ್ಣದ ಪೋಲೀಸ್ ಅಧಿಕಾರಿ, ರಸ್ತೆಯಲ್ಲಿ ತಡೆದು ಕಾರಿನಿಂದ ಹೊರಗೆಳೆದು ಕಾಲಿನಲ್ಲೇ ಕುತ್ತಿಗೆ ಓತ್ತಿ ಕೊಂದಿದ್ದ. ಈ ಜನಾಂಗೀಯ ದ್ವೇಷದ ವಿರುದ್ಧ ಜಗತ್ತಿನಾದ್ಯಂತ ಆ ನಂತರ ಪ್ರತಿಭಟನೆಗಳು ನಡೆದಿದ್ದವು. ಫೇರ್ ಎನ್ನುವ ಪದವೇ ಜನಾಂಗೀಯ ತಾರತಮ್ಯದಿಂದ ಕೂಡಿದೆ ಎಂಬ ಕಾರಣಕ್ಕಾಗಿ ಯೂನಿಲಿವರ್ ಸಂಸ್ಥೆ ತನ್ನ 'ಫೇರ್ ಎಂಡ್ ಲವ್ಲಿ' ಎಂಬ ಉತ್ಪನ್ನದ ಹೆಸರನ್ನು 'ಗ್ಲೋ ಎಂಡ್ ಲವ್ಲಿ' ಎಂದು ಬದಲಿಸಿತು. ಭಾರತದ ದೊಡ್ಡ ಮದುವೆ ದಲ್ಲಾಳಿ ವೆಬ್ ಸೈಟಾದ 'ಶಾದಿ ಡಾಟ್ ಕಾಮ್' ತನ್ನ ಫಿಲ್ಟರ್ ಸೌಕರ್ಯದಿಂದ 'ಫೇರ್' ಎಂಬ ಸುಳಿವು ಪದವನ್ನು ತೆಗೆದುಹಾಕಿತು.



ಚರ್ಮದ ಬಣ್ಣಕ್ಕೆ ಮೆಲಾನಿನ್‌ ಎಂಬ ವರ್ಣಕ ಕಾರಣ. ಚರ್ಮ, ಕೂದಲು, ಕಣ್ಣಿನ ಬಣ್ಣದ ಮೂಲಕ ಮಾನವ ಪ್ರಬೇಧವು ಹಲವು ಜನಾಂಗಗಳಾಗಿ ಗುರುತಿಸಲ್ಪಟ್ಟಿರುವುದರಲ್ಲಿ ಈ ವರ್ಣಕದ ಪಾತ್ರ ದೊಡ್ಡದು. ನಮ್ಮ ದೇಹದಲ್ಲಿರುವ ಮೆಲನೋಸೈಟುಗಳೆಂಬ ಜೀವಕೋಶಗಳು ಈ ವರ್ಣಕವನ್ನು ಉತ್ಪಾದಿಸುತ್ತವೆ.  ಮೆಲನೋಸೈಟುಗಳು  ಎಲ್ಲರಲ್ಲೂ ಇವೆ. ಎಲ್ಲರಲ್ಲೂ ಬಹುತೇಕ ಸಮಾನ ಸಂಖ್ಯೆಯಲ್ಲೇ ಇವೆ. ಆದರೆ, ಅವು ತಯಾರಿಸುವ ಮೆಲಾನಿನ್‌ ವರ್ಣಕಗಳ ಪ್ರಮಾಣ ಬೇರೆ ಬೇರೆ ಜನಾಂಗದ ಜನರಲ್ಲಿ ಬೇರೆಯಾಗಿದೆ. ಕಡಿಮೆ ಮೆಲಾನಿನ್‌ ಉತ್ಪತ್ತಿಯಾದರೆ, ನಿಮ್ಮದು ತಿಳಿಬಣ್ಣ, ಹೆಚ್ಚು ಉತ್ಪತ್ತಿಯಾದರೆ ಕಪ್ಪು ಬಣ್ಣ. ನಮಗೆಷ್ಟು ಮೆಲಾನಿನ್‌ ತಯಾರಿಸಬೇಕು ಎಂಬುದನ್ನು ನಾವು ನಿರ್ಣಯಿಸಲಾರೆವು. ಇಂತಿಷ್ಟೇ ವರ್ಣಕವನ್ನು ಮೆಲಾನೋಸೈಟುಗಳು ನಮ್ಮಲ್ಲಿ ಉತ್ಪಾದಿಸಬೇಕೆಂಬ  ಆದೇಶ ಎಂದೋ ಆಗಿಹೋಗಿದೆ. ತಲೆಮಾರಿನಿಂದ ತಲೆಮಾರಿಗೆ  ಈ ಆದೇಶವನ್ನು ನಮ್ಮ ವಂಶವಾಹಿಗಳಲ್ಲಿರುವ  ಜೀನುಗಳು ಹೊತ್ತೊಯ್ಯುತ್ತಾ ಬಂದಿವೆ.

ಈ ಲೇಖನ ಓದಿದ್ದೀರಾ?   ದಿನೇಶ್ ಕಾರ್ತಿಕ್ ಕುಸಿದು ಬಿದ್ದಾಗ

ಎರಡು ಕೋಟಿಯ ಆಫರ್ ತಿರಸ್ಕರಿಸಿದ ನಂತರ ಸಾಯಿಪಲ್ಲವಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮೈಬಣ್ಣದ ತಾರತಮ್ಯದ ಕುರಿತು ತನ್ನದೇ ಅನುಭವವನ್ನು ಹಂಚಿಕೊಂಡಿದ್ದರು. ಸಾಯಿಪಲ್ಲವಿಯವರ ಸಹೋದರಿಗೆ ತನ್ನಕ್ಕನಿಗಿಂತ ತನ್ನ ಮೈಬಣ್ಣ ಗಾಢವಾಗಿದೆ ಎಂಬ ಕೀಳರಿಮೆ ಇತ್ತು. ಈ ಕೀಳರಿಮೆಯು ಬಿಳಿ ಬಣ್ಣವನ್ನು ಗೌರವಿಸುವ, ಕಪ್ಪನ್ನು ಕೀಳಾಗಿ ಕಾಣುವ ಸಮಾಜದ ಪ್ರತಿಫಲನ. ಫೇರ್ ನೆಸ್ ಕ್ರೀಮುಗಳ ಜಾಹಿರಾತುಗಳು, ಸಿನೇಮಾ- ಧಾರವಾಹಿಗಳಲ್ಲಿ ತೆಳುಬಣ್ಣದ ನಾಯಕ- ನಾಯಕಿಯರೇ ಇರುವುದು ಇತ್ಯಾದಿ ಸಂಗತಿಗಳು ಕಪ್ಪುಬಣ್ಣ ಕುರೂಪ ಎಂಬ ಮನಃಸ್ಥಿತಿಯನ್ನು ಬೆಳೆಸುತ್ತಾ ಬಂದಿದೆ. ಸಾಕಷ್ಟು ತರಕಾರಿ ಮತ್ತು ಹಣ್ಣುಗಳನ್ನು ಸೇವಿಸಿದರೆ ತನ್ನಂತೆ ತಿಳಿಬಣ್ಣ ಹೊಂದಲು ಸಾಧ್ಯ ಎಂದು ತರಕಾರಿ ತಿನ್ನಲೊಪ್ಪದ  ಸಹೋದರಿಗೆ ಸಾಯಿಪಲ್ಲವಿ ಹೇಳಿದ್ದರಂತೆ. ಆಕೆ, ಇಷ್ಟವಿಲ್ಲದಿದ್ದರೂ ತರಕಾರಿ ತಿನ್ನಲು ಆರಂಭಿಸಿದ್ದರಂತೆ. ಆದರೆ, ಮೈಬಣ್ಣ ಹಾಗೆಯೇ ಉಳಿಯಿತು. ಕಪ್ಪು ಕುರೂಪವೆಂಬ ಕಲೆಯೂ ಆಕೆಯ ಮನಸ್ಸಿನಲ್ಲಿ ಅಚ್ಚಾಗಿ ಉಳಿಯಿತು. ಮೈಬಣ್ಣದ ಕಾರಣಕ್ಕೆ ಮಾನಸಿಕವಾಗಿ ಕುಗ್ಗುವ, ಮದುವೆಯಾಗದಿರುವ, ತಂದೆ-ತಾಯಿಯರಿಗೆ ಸಮಸ್ಯೆ ಎಂದು ನೊಂದುಕೊಳ್ಳುವ ಹೆಣ್ಣುಮಕ್ಕಳನ್ನು ಮನಸ್ಸಲ್ಲಿಟ್ಟುಕೊಂಡೇ ತಾನು ಆ ಜಾಹಿರಾತಿನಲ್ಲಿ ನಟಿಸಲು ನಿರಾಕರಿಸಿದೆನೆಂದು ಸಾಯಿಪಲ್ಲವಿ ಹೇಳಿದ್ದರು. 

ಶಿಕ್ಷಕಿಯೊಬ್ಬರು ವರ್ಣತಾರತಮ್ಯದ ತನ್ನ ಅನುಭವವನ್ನು ನನ್ನ ಬಳಿ ಹಂಚಿಕೊಂಡಿದ್ದರು. ಅವರು ಪ್ರೌಢಶಾಲೆಯಲ್ಲಿರುವಾಗ ಶಾಲಾ ನಾಟಕದಲ್ಲಿ ಅಭಿನಯಿಸಲು ಹೋಗಿದ್ದರಂತೆ. ಕಾಳಿದಾಸನ ಅಭಿಜ್ಞಾನ ಶಾಕುಂತಲೆಯ ಪುಟ್ಟ ಭಾಗವನ್ನು ಅವರ ಶಿಕ್ಷಕರು ಶಾಲಾ ವಾರ್ಷಿಕೋತ್ಸವದಂದು ರಂಗದ ಮೇಲೆ ತರಲು ಯೋಜಿಸಿದ್ದರಂತೆ. ಇವರ ಅಭಿನಯ ನೋಡಿ, "ಈ ಹುಡುಗಿ ಚೆನ್ನಾಗಿ ಅಭಿನಯಿಸುತ್ತಾಳೆ, ಇವಳನ್ನು ಶಕುಂತಲೆಯ ಪಾತ್ರಕ್ಕೆ ಆಯ್ಕೆ ಮಾಡೋಣ"  ಎಂದರಂತೆ. ಮಾರನೇ ದಿನ ತಾಲೀಮು ಶುರುವಾದಾಗ ಬಿಳಿ ಚರ್ಮದ ಹುಡುಗಿಯೊಬ್ಬಳನ್ನು ಶಕುಂತಲೆ ಪಾತ್ರಕ್ಕೆ ಅವರು ಆಯ್ಕೆ ಮಾಡಿ, ಇವರಲ್ಲಿ ಬೇರೊಂದು ಪಾತ್ರ ಮಾಡಲು ಸೂಚಿಸಿದರಂತೆ. ಬೆಳೆದು ದೊಡ್ಡವಳಾಗಿ, ಈಗ ಶಿಕ್ಷಕಿಯಾದರೂ ಆ ಗಾಯವಿನ್ನೂ ಅವರಲ್ಲಿ  ಮಾಸಿರಲಿಲ್ಲ.  ಇದಕ್ಕೆ ವ್ಯತಿರಿಕ್ತವಾಗಿ, ನೀನಾಸಂ ತಿರುಗಾಟದ ಸೀತಾ ಸ್ವಯಂವರ ನಾಟಕದಲ್ಲಿ ಕಪ್ಪು ಮೈಬಣ್ಣದ ನಟಿಯನ್ನು ಸೀತೆಯಾಗಿಯೂ ತಿಳಿಬಣ್ಣದ ನಟಿಯನ್ನು ಸೀತೆಯ ಸಖಿಯಾಗಿಯೂ ಆಯ್ಕೆ ಮಾಡಿ ಇಂತಹ ಮನಃಸ್ಥಿತಿಯನ್ನು ಕದಲಿಸುವ ಪ್ರಯತ್ನ ಮಾಡಿದ್ದರು. ಕನ್ನಡ ಸಾಹಿತ್ಯವೂ ಮೈಬಣ್ಣದ ತಾರತಮ್ಯವನ್ನು ಪ್ರತಿರೋಧಿಸುವ ರಚನೆಗಳನ್ನು ಸೃಷ್ಟಿಸಿದೆ.

ಮೆಲನೋಮಾ ಎಂಬುದು ಗಂಭೀರ ಸ್ವರೂಪದ ಕ್ಯಾನ್ಸರ್. ಮೂಗು, ಕೆನ್ನೆಗಳಂತಹ ಸೂರ್ಯನ ಬೆಳಕಿಗೆ ತೆರೆದುಕೊಳ್ಳುವ ಭಾಗದ ಮೆಲನೋಸೈಟುಗಳಲ್ಲಿ  ಕಂಡು ಬರುವ ಈ ಕ್ಯಾನ್ಸರ್ ಬಿಳಿಚರ್ಮದವರಿಗೆ ಬರುವ ಸಾಧ್ಯತೆ ಹೆಚ್ಚು. ಶ್ರೇಷ್ಟತೆಯ ವ್ಯಸನವೆಂಬ ಕ್ಯಾನ್ಸರ್ ಕೂಡಾ ಬಿಳಿ ಚರ್ಮದವರಿಗೆ, ಮೇಲ್ಜಾತಿ ಅಂದುಕೊಳ್ಳುವವರಿಗೆ ತಗಲುವ ಸಾಧ್ಯತೆ ಹೆಚ್ಚು.

ಅಂಕಣ ಬರೆಹ:






No comments: