Tuesday 21 June 2022

ನೀನೊಬ್ಬ ಅಯೋಗ್ಯ ಎಂದು ಜರೆಯುವ ಪರೀಕ್ಷೆ..

 ಕಳೆದ ವರ್ಷ ಹತ್ತನೆಯ ತರಗತಿಯಲ್ಲಿದ್ದ ಒಬ್ಬ ಹುಡುಗ ಇತ್ತೀಚೆಗೆ ಬಸ್ಟ್ಯಾಂಡಿನಲ್ಲಿ ಭೇಟಿಯಾದ. ಆ ಬ್ಯಾಚಿನ ಅನೇಕ ಮಕ್ಕಳು ಲಾಕ್ ಡೌನ್ ನಂತರ ಸಾಕಷ್ಟು ಕಷ್ಟ-ನಷ್ಟಗಳನ್ನು ಅನುಭವಿಸಿದವರು.  ಒಂದು ಹೊತ್ತಿನ ಊಟ ಎಷ್ಟು ದುಬಾರಿ ಎಂಬ ಅರಿವಿದ್ದ ಮಕ್ಕಳೇ ಹೆಚ್ಚಿದ್ದ ಬ್ಯಾಚದು. ಶಾಲೆ ಮುಚ್ಚಿದ್ದರಿಂದ ಓದಿನ ಎಲ್ಲ ಹೊಣೆ ಅವರ ಮೇಲೆ ಬಿದ್ದಿತ್ತು. ವರ್ಚುವಲ್ ತರಗತಿಗಳು ಅವರ ಹತ್ತಿರ ಬಂದಿರಲಿಲ್ಲ. ಆದರೂ ಆ ಬ್ಯಾಚಿನ ಮಕ್ಕಳನ್ನು ಕೋವಿಡ್ ಬ್ಯಾಚು ಎಂದು ಹಗುರ ಧ್ವನಿಯಲ್ಲಿ ಅನೇಕರು ಕರೆಯುತ್ತಿದ್ದರು. ಅದೇ ಬ್ಯಾಚಿನವನು ಈ ಹುಡುಗ. ಈತ  ಎಸ್ ಎಸ್ ಎಲ್ ಸಿ ಪಾಸಾಗಲಾರ ಎಂದು ನಾವೆಲ್ಲ ಅಂದುಕೊಂಡಿದ್ದೆವು. ಆತನ ಉತ್ತರ ಪತ್ರಿಕೆಯಲ್ಲಿ ಮಾರ್ಕು ಹಾಕಬಹುದಾದ ಒಂದೇ ಒಂದು ಸಾಧ್ಯತೆ ಎಲ್ಲಾದರೂ ಇದೆಯೇ ಎಂದು ಹುಡುಕಾಡುತ್ತಿದ್ದೆವು. ಸಾಲದ್ದಕ್ಕೆ ಆತ ಕಲಿಕೆಯ ಹೊರತಾಗೂ ಯಾವ ಉತ್ಸಾಹವನ್ನೂ ತೋರುತ್ತಿರಲಿಲ್ಲ. ಈತ ಅಡಿಕೆ ಹೆಕ್ಕಲಷ್ಟೇ ಲಾಯಕ್ಕು ಎಂದು ಬಾಯಿಬಿಟ್ಟು ಹೇಳಿರಲಿಲ್ಲ ಅಷ್ಟೆ.

ಕೋವಿಡ್ ಕಾರಣಕ್ಕಾಗಿ ಎಲ್ಲರನ್ನೂ ಪಾಸು ಮಾಡಿದಾಗ ಆತನೂ ಎಸ್ ಎಸ್ ಎಲ್ ಸಿ ಪಾಸಾಗಿದ್ದ. ಮೇಷ್ಟ್ರನ್ನು ಕಂಡರೆ ಮುದುಡಿಹೋಗುತ್ತಿದ್ದ ಆ ಹುಡುಗ ಈಗ ನನ್ನನ್ನು ನೋಡಿದ್ದೇ ಬಳಿಬಂದಿದ್ದ. 'ಸರ್' ಎಂದ. ಅವನು‌ ಐ.ಟಿ.ಐ ಕೈಗಾರಿಕಾ ತರಬೇತಿ ಸೇರಿದ್ದು ಗೊತ್ತಿತ್ತು. 'ಹೇಗಾಗ್ತಿದೆ ಐ.ಟಿ.ಐ?" ಎಂದು ಕೇಳಿದೆ.

.


"ಸರ್, ಈ ಕೋರ್ಸಿಗೆ ಸೇರಿದ್ದು ಬಹಳ ಒಳ್ಳೇದಾಯ್ತು" ಎಂದ. "ನಿನಗೆ ಅಲ್ಲಿ ಯಾವುದು ಇಷ್ಟವಾಯ್ತು?" ಎಂದು ಕೇಳಿದೆ. ಬಹುಶಃ ನನ್ನ ಪ್ರಶ್ನೆಯಲ್ಲಿ ಅತನಿಗೆ ಕಲಿಯುವುದು ಹೇಗೆ ಇಷ್ಟವಾಯ್ತು ಎಂಬ ಆಶ್ಚರ್ಯವೂ ಇತ್ತಿರಬಹುದು. ಆತ ಹೆಚ್ಚು ಯೋಚಿಸದೆ ಹೇಳಿದ "ನಾವು ಶಾಲೆಯಲ್ಲಿ‌ ಕದ್ದು ಮುಚ್ಚಿ ಮಾಡ್ತಿದ್ದ ಬ್ಯಾಟರಿ- ಮೋಟಾರು ಪ್ರಯೋಗಗಳನ್ನೆಲ್ಲ ಈಗ ಅಲ್ಲಿ ಲ್ಯಾಬ್ ನಲ್ಲಿ ಮಾಡ್ತೇವೆ."  ಆ ಹುಡುಗ ಎಲೆಕ್ಟ್ರಿಕಲ್ ವಿಭಾಗ ಆರಿಸಿಕೊಂಡಿದ್ದಾನೆಂದು ಗೊತ್ತಾಯ್ತು. ಅಷ್ಟೇ ಅಲ್ಲ, ಶಾಲೆಯಲ್ಲಿ ಬ್ಯಾಟರಿ- ಮೋಟಾರು ಜೋಡಿಸಿ ಮಾದರಿಗಳನ್ನು ಮಾಡುತ್ತಿದ್ದನೆಂಬುದೂ ಈಗ ಗೊತ್ತಾಯ್ತು. ಬಹಳಷ್ಟು ಹುಡುಗರು ವಿಜ್ಞಾನದ ಮಾದರಿಗಳನ್ನು ಮಾಡಲು ಹೇಳಿದಾಗ ಎಲೆಕ್ಟ್ರಿಕಲ್ ಡಿವೈಸ್ ಗಳನ್ನು ತಯಾರಿಸುತ್ತಾರೆ. ಮೋಟರ್ ಬಳಸಿ ವಾಶಿಂಗ್ ಮಶೀನ್, ಕಳೆ ಕತ್ತರಿಸುವ ಯಂತ್ರ ಮತ್ತಿತ್ಯಾದಿ ಉಪಕರಣಗಳನ್ನು ತಯಾರಿಸುತ್ತಾರೆ. ಕಳ್ಳರು ಗೇಟು ದಾಟಿದಾಗ, ಬಾಗಿಲು ತೆರೆದಾಗ ಸೈರನ್ ಆಗುವ ಉಪಕರಣಗಳನ್ನೂ ಹೆಚ್ಚಾಗಿ ರೂಪಿಸುತ್ತಾರೆ. ಚಲಿಸುವ ಯಂತ್ರಗಳು ಮತ್ತು ಕಳ್ಳರನ್ನು ಹಿಡಿಯುವುದು ಹುಡುಗರಿಗೇಕೆ ಅಷ್ಟು ಆಸಕ್ತಿಯ ವಿಷಯ ಎಂಬ ಕುತೂಹಲ ನನಗೆ ಯಾವಾಗಲೂ ಇದೆ. ಆದರೆ, ಈ ಹುಡುಗ ಮೋಟಾರು ಬಳಸಿ ಮಾದರಿ ತಯಾರಿಸಿದ್ದು ನನಗೆ ಗೊತ್ತಿರಲಿಲ್ಲ. " ನೀನೂ ಬ್ಯಾಟರಿ-ಮೋಟಾರು ಬಳಸಿ ಮಾದರಿ ತಯಾರಿಸುತ್ತಿದ್ದೆಯಾ?" ಎಂದು ಆಶ್ಚರ್ಯದಿಂದ ಕೇಳಿದೆ. ನನ್ನ ಆಶ್ಚರ್ಯ ಆತನಿಗೆ ನಿರೀಕ್ಷಿತವಾಗಿತ್ತು ಎಂಬುದು ಆತನ ಮಾತಲ್ಲಿ ಗೊತ್ತಾಯ್ತು. " ಹೌದು ಸರ್, ನಾನೇ ಮಾಡ್ತಿದ್ದುದು ಅವೆಲ್ಲ.. ಆದರೆ, ಅದಕ್ಕೆ ವಿವರಣೆ ಕೊಡಲು ಆಗ್ತಿರಲಿಲ್ಲವಾದ್ದರಿಂದ ಬೇರೆಯವರಿಗೆ  ಕೊಡ್ತಿದ್ದೆ" ಎಂದ.  "ಓ ಹೌದಾ?.. ಈಗ ನೀನು ಮಾಡಿದ್ದನ್ನು ನೀನೇ ವಿವರಿಸ್ತಿಯಲ್ಲ?" ಎಂದೆ.

" ಹೌದು ಸರ್, ಈಗ ಇಂತದ್ದನೆಲ್ಲ ಮಾಡ್ತಾ ನಾವೇನು ಮಾಡ್ತಿದ್ದೇವೆಂದು ಅರ್ಥವಾಗ್ತಾಹೋಗ್ತಿದೆ.. ಇಲ್ಲಿ ಈ ತರ ನಾವೇ ಮಾಡುವುದು  ಜಾಸ್ತಿ ಇರುತ್ತದೆ. ಕೇಳುವುದು ಕಡಿಮೆ" ಎಂದ.

ಅವನು ಇಷ್ಟೆಲ್ಲ ಮಾತನಾಡಬಲ್ಲೆನಾ ಎಂದು ಆಶ್ಚರ್ಯವಾಯ್ತು. ಶಾಲೆಯಲ್ಲಿ ಒಂದೇ ಒಂದು ಬಾರಿಯೂ ಹೌದು-ಅಲ್ಲ ಕ್ಕಿಂತ ಹೆಚ್ಚಿನದಾದ ಉತ್ತರ ಕೊಟ್ಟಿದ್ದೇ ಇರಲಿಲ್ಲ.

"ಶಾಲೆಯ ಹಾಗೆ ಪರೀಕ್ಷೆ, ಓದು ಇರುವುದಿಲ್ಲವಾ ಅಲ್ಲಿ? " ಎಂದು ಕೇಳಿದೆ.

" ಇರುತ್ತದೆ ಸರ್. ಓದಿನ ಒತ್ತಡ ಇರುವುದಿಲ್ಲ, ಪರೀಕ್ಷೆ ಎಂದರೆ ಓದು ಮಾತ್ರ ಆಗಿರುವುದಿಲ್ಲ. ನಾವು ಸ್ವತಃ ಮಾಡಿದ ಚಟುವಟಿಕೆಗಳೇ ನಮಗೆ ಪರೀಕ್ಷೆಯಲ್ಲಿ ಉತ್ತರ ಬರೆಯಲು ಸಹಾಯವಾಗುತ್ತವೆ" ಎಂದ. ಆತ ಏನನ್ನು ಹೇಳಿದ ಎನ್ನುವುದರಷ್ಟೇ ಆತನ  ನುಡಿಗಳ ಸ್ಪಷ್ಟತೆಯೂ ಇಷ್ಟವಾಯ್ತು.

"ಒಳ್ಳೆಯ ಉಪನ್ಯಾಕರು ಸಿಕ್ಕಿದ್ದಾರೆ, ಹಾಗಾದರೆ.." ಎಂದೆ. ಆತನ ಪ್ರತಿಕ್ರಿಯೆ ನಿರೀಕ್ಷಿಸುತ್ತಾ.

" ಹೌದು ಸರ್, ಇಡೀ ದಿನ ಓದು ಓದು ಎಂದು ಒತ್ತಡ ಹೇರುವುದಿಲ್ಲ. ನಮಗೆ ಕಲಿಯಲು ಅವಕಾಶ ಮಾಡಿಕೊಡುತ್ತಾರೆ" ಎಂದ. ಆತ ನೇರವಾಗಿ ಮಾತನಾಡುತ್ತಿದ್ದ. ಆತನ ಪದಗಳು ಪ್ರಾಮಾಣಿಕವಾಗಿದ್ದವು. ಯಾರನ್ನೂ ಗುರಿಯಾಗಿಸಿ ಪದಗಳನ್ನು ಜಾಣ್ಮೆಯಿಂದ ಬಳಸುವ ಅವಶ್ಯಕತೆ ಆತನಿಗಿರಲಿಲ್ಲ. ಆದರೂ, ಆತನ ಮಾತುಗಳು ನನ್ನನ್ನು ಇರಿಯುತ್ತಿದ್ದವು.

ಕಲಿಕೆಯ ಕುರಿತಾಗಿ ಈ ಹುಡುಗನಿಗಿರುವ ಗ್ರಹಿಕೆ ನಮಗೇಕೆ ದಕ್ಕುವುದಿಲ್ಲ? ಅಥವಾ ಇವೆಲ್ಲ ಗೊತ್ತಿದ್ದೂ ನಾವೇಕೆ ಕಲಿಯುವ ಸರಿಯಾದ ದಾರಿಯನ್ನು ಮಕ್ಕಳಿಗೆ ತೆರೆಯುವುದಿಲ್ಲ? ಇದರಲ್ಲಿ ನನ್ನ ತಪ್ಪೆಷ್ಟು? ನಾನೂ ಆತನಂತೆ ಇಲ್ಲಿ ಸಂತ್ರಸ್ತನೇ? ಹತ್ತಾರು ಪ್ರಶ್ನೆಗಳು ಮೂಡಿದವು.

ಅನೇಕ ಸಹೋದ್ಯೋಗಿಗಳು ಆಗಾಗ ಸಲಹೆಯ ರೂಪದ ದೂರನ್ನು ಹೇಳ್ತಿರ್ತಾರೆ- " ಕ್ಲಾಸಲ್ಲಿ ಕತೆ ಹೇಳ್ತಾ, ಪ್ರಯೋಗ ಮಾಡ್ತಾ ಇದ್ರೆ ಮಕ್ಕಳಿಗೆ ಇಷ್ಟವಾಗಬಹುದು.. ಪರೀಕ್ಷೆಯಲ್ಲಿ ಮಾರ್ಕು ಸಿಗದು" ಇನ್ನು ಕೆಲವರು ಇದನ್ನೇ ಬೇರೆ ರೂಪದಲ್ಲಿ ಹೇಳ್ತಾರೆ " ಡಿಸೆಂಬರ್ ವರೆಗೆ ಪಾಠ ಮುಗಿಸ್ಕೋಬೇಕು.. ಆ ನಂತರದ ಎರಡುವರೆ ತಿಂಗಳಲ್ಲಿ ನಾವೆಷ್ಟು ರಿವಿಷನ್ ಮಾಡ್ತೇವೋ ಅದಷ್ಟೇ ಪ್ರಯೋಜನಕ್ಕೆ ಬರುವುದು."

 

  ಈ ಲೇಖನವನ್ನೂ ಓದಿ 


ಕಲಿಯುವುದೆಂದರೆ ಪ್ರಶ್ನೆಗಳ ಬೆನ್ನಮೇಲಿನ ಸವಾರಿ

ರಿವಿಷನ್ ಎಂದರೆ ಮತ್ತೆ ಮತ್ತೆ ಪರೀಕ್ಷೆ.. ಬಾಯಿಪಾಠ, ಪರೀಕ್ಷೆಯ ಸಂಭವನೀಯ ಪ್ರಶ್ನೆಗಳಿಗಷ್ಟೇ ಅಲ್ಲಿ ಮಹತ್ವ.

.

ಸಹೋದ್ಯೋಗಿಗಳ ಮಾತಲ್ಲಿ ಯಾವ ತಪ್ಪೂ ಇರಲಿಲ್ಲ. ಹಾಗೆ ಮಾಡಿದರಷ್ಟೇ ಹೆಚ್ಚು ಮಕ್ಕಳು ಪಾಸಾಗಬಹುದು ಎಂಬುದು ನನ್ನ ನಂಬಿಕೆಯೂ ಹೌದು.

ಹಾಗಾದರೆ ಪಾಸಾಗುವುದು ಎಂದರೇನು? ಬಾಯಿಪಾಠ ಮಾಡಿದಷ್ಟಕ್ಕೆ ಕಲಿಕೆ ಉಂಟಾಗಿದೆ ಎಂದು ಒಪ್ಪುವ ಈ ಮೌಲ್ಯಮಾಪನ ಮಾಡಿರುವ ಅನ್ಯಾಯಕ್ಕೆ ಎಷ್ಟೊಂದು ಪ್ರತಿಭಾವಂತರು ಸರಿದುಹೋಗಿರಬಹುದು? ಎಲೆಯ ಚೂರೊಂದನ್ನು ಮೂಸಿನೋಡಿ ಯಾವ ಸಸ್ಯ ಎಂದು ಹೇಳಬಲ್ಲ ಕಾಡಿನ ಮಕ್ಕಳೂ ನನ್ನ ಶಾಲೆಯಲ್ಲಿದ್ದಾರೆ. ಅವರ ಜ್ಞಾನವು ಮೌಲ್ಯಮಾಪನದ ತೆಕ್ಕೆಗೆ ಸಿಗದಿರುವುದೇಕೆ?

ಆ ಹುಡುಗನ ಬಸ್ ಬಂತು. "ಬೈ ಸರ್" ಎಂದವನೇ ಮತ್ತೆನೋ ನೆನಪಾದವನಂತೆ " ಈ ಸಲದ ಎಸ್ ಎಸ್ ಎಲ್ ಸಿ ರಿಸಲ್ಟ್ ಯಾವಾಗಂತೆ ಸರ್?" ಎಂದು ಕೇಳಿದ.

" ಸದ್ಯ ಬರಬಹುದು" ಎಂದೆ. ಹಾಗೆನ್ನುವಾಗ ಕೆಲವು‌ ಮಕ್ಕಳ ಮುಖಗಳು ಕಣ್ಣೆದುರು ಬಂದವು. ಈ ಅಂಕಣದ ಮುಂದಿನ ಬರೆಹ ಬರುವುದರೊಳಗಾಗಿ ಎಸ್ ಎಸ್ ಎಲ್ ಸಿ ಫಲಿತಾಂಶ ಬರಲಿದೆ. "ನೀನು ಒಬ್ಬ ಫೇಲ್ಯೂರ್" ಎಂದು ಆ ಫಲಿತಾಂಶ ಕೆಲವರಿಗಾದರೂ ಹೇಳಲಿದೆ; ಅದೂ ನಿಷ್ಕಾರಣವಾಗಿ, ನಿಷ್ಕರುಣೆಯಿಂದ.

No comments: