Saturday, 17 January 2015

ಅಮೋನಿಯಂ ನೈಟ್ರೇಟೆಂಬ ರಕ್ತಲೇಪಿತ ರಸಗೊಬ್ಬರದ ಕತೆ


  ಮೊನ್ನೆಯಷ್ಟೇ ಬೆಂಗಳೂರು ಸ್ಪೋಟಕ್ಕೆ ಕಾರಣರಾದ ಭಟ್ಕಳದ ಶಂಕಿತ ಉಗ್ರರನ್ನು ಸೆರೆಹಿಡಿದರು. ಸೆರೆ ಸಿಕ್ಕವರು ಉಗ್ರರೇ ಹೌದು ಎಂಬುದನ್ನು ಖಚಿತಪಡಿಸಿದ್ದು ಅವರ ಮನೆಯಲ್ಲಿ ಸಿಕ್ಕಿದ ಅಮೋನಿಯಂ ನೈಟ್ರೇಟು!
  ಸಾಮಾನ್ಯ ತಾಪದಲ್ಲಿ ಬಿಳಿ ಬಣ್ಣದ ಪುಡಿಹರಳಿನ ರೂಪದಲ್ಲಿರುವ ಈ ರಾಸಾಯನಿಕ ಕೃಷಿಯ ದಿಕ್ಕು-ದೆಶೆಗಳನ್ನು ಬದಲಾಯಿಸಿದ ರಸಗೊಬ್ಬರ. ಸಸ್ಯಗಳ ಬೆಳವಣಿಗೆಗೆ, ಹಣ್ಣು ಬೆಳೆಗಳ ಉತ್ತಮ ಇಳುವರಿಗೆ, ಎಲೆ ತರಕಾರಿಗಳು ಹಸಿ-ಹಸಿ ಸೊಪ್ಪನ್ನು ಹೇರಿಕೊಂಡು ಬೆಳೆಯಲು ನೈಟ್ರೋಜನ್ ಬೇಕು. ವಾತಾವರಣದಲ್ಲಿ ನೈಟ್ರೋಜನ್ ಹೇರಳವಾಗಿದ್ದರೂ ಅವುಗಳನ್ನು ಸಸ್ಯಗಳು ನೇರವಾಗಿ ಪಡೆಯಲಾರವು. ಸಸ್ಯಗಳು ಪೋಷಕಾಂಶಗಳನ್ನು ಪಡೆಯಬೇಕಾದರೆ ಅವು ನೀರಿನಲ್ಲಿ ಕರಗಬೇಕಾಗುತ್ತವೆ. ಅಮ್ಮೋನಿಯಂ ನೈಟ್ರೇಟಿನಲ್ಲೋ ಹತ್ತಿರ ಹತ್ತಿರ ಮೂವತ್ತು ಶೇಕಡಾದಷ್ಟು ನೈಟ್ರೋಜನ್ ಇರುತ್ತದೆ. ಇದು ನೀರಿನಲ್ಲಿ ಕರಗುತ್ತದೆ. ಜೊತೆಗೆ, ಬಹಳ ಅಗ್ಗ ಕೂಡಾ. ಕೇಳಬೇಕೇ? ಈ ರಾಸಾಯನಿಕ ಬಡದೇಶಗಳ ರೈತರ ಡಾರ್ಲಿಂಗ್ ಆಗಿಹೋಯಿತು.
  ಅಮೋನಿಯಂ ನೈಟ್ರೇಟು ರಾಸಾಯನಿಕ ಕ್ರೀಯೆಯಲ್ಲಿ ಪ್ರತಿಕಾರಕಗಳ ಎಲೆಕ್ಡ್ರಾನುಗಳನ್ನು ಕಳೆಯಬಲ್ಲದು -ಇದೊಂದು ಶಕ್ತಿಶಾಲಿಯಾದ ಆಕ್ಸಿಡೀಕರಣದ ದಲ್ಲಾಳಿ. ಹಾಗೆಯೇ, ಸಾವಿನ ದಲ್ಲಾಳಿ ಕೂಡಾ. ಶಾಖಕ್ಕೆ ಸೂಕ್ಷ್ಮವಾಗಿ ಪ್ರತಿಕ್ರಿಯಿಸುವ ಅಮೋನಿಯಂ ನೈಟ್ರೇಟು, ಇಂತಹ ಬಾಹ್ಯಪ್ರೇರಣೆಗೆ ಕೂಡಲೇ ಪ್ರತಿಕ್ರಿಯಿಸುವ ಮೂಲಕ ರಸಗೊಬ್ಬರದಿಂದ  ಸ್ಪೋಟಕ ಸಾಮಗ್ರಿಯಾಗಿ ಬದಲಾಗಬಲ್ಲದು! ಹೀಗಾಗಿ, ಅಮೋನಿಯಂ ನೈಟ್ರೇಟು ಇತ್ತೀಚೆಗೆ ರೈತರಿಗಿಂತ ಉಗ್ರಗಾಮಿಗಳಿಗೇ ಹೆಚ್ಚು ಪ್ರಿಯವಾದ ರಾಸಾಯನಿಕ.
  ಅಮೋನಿಯಂ ನೈಟ್ರೇಟನ್ನು ಟ್ರೈ ನೈಟ್ರೋ ಟೋಲಿನ್ ಎಂಬ ಸ್ಫೋಟಕದೊಂದಿಗೋ ಡಿಸೆಲ್‍ನಂತಹ ಇಂಧನತೈಲದೊಂದಿಗೋ ಬೆರೆಕೆ ಹಾಕಿ ಬಾಂಬು ತಯಾರಿಸುತ್ತಾರೆ. ಈ ಸ್ಫೋಟಕಗಳನ್ನೆಲ್ಲ ಉಗ್ರಗಾಮಿಗಳೇ ಬಳಸುತ್ತಾರೆ ಎಂದುಕೊಳ್ಳಬೇಡಿ. ಬಾಂಬುಗಳು ಮೂಲತಃ ಗಣಿಗಾರಿಕೆಗಾಗಿಯೇ ಕಂಡುಹಿಡಿಯಲ್ಪಟ್ಟ ಸ್ಪೋಟಕ ಕಾಂಬಿನೇಷನ್‍ಗಳು. ಆನಂತರ, ರಕ್ಷಣಾಪಡೆಗಳು ಇವುಗಳನ್ನು ಬಳಸಿಕೊಂಡವು. 1996 ರ ಅಮೇರಿಕಾದ ಒಕ್ಲಾಮಾ ನಗರದ ಸ್ಫೋಟದಿಂದಲೂ ಅಮೋನಿಯಂ ನೈಟ್ರೇಟನ್ನು ಉಗ್ರಗಾಮಿಗಳು ಬಳಸುತ್ತಿದ್ದಾರೆ!  2002 ರ ಬಾಲಿ ನೈಟ್ ಕ್ಲಬ್ ಸ್ಫೋಟ, 2003ರ ಇಸ್ತನಾಬುಲ್ ಸ್ಫೋಟಗಳಲ್ಲಿ ಅಲ್ ಖೈದಾದಂತಹ ಜಾಗತಿಕ ಭೀತಿವಾದಿಗಳು ಅಮೋನಿಯಂ ನೈಟ್ರೇಟನ್ನು ಬಳಸಿದ್ದರು. 2004 ರಲ್ಲಿ ಭಾರತ ಸರಕಾರ ನೈಟ್ರೋ ಗ್ಲಿಸರಿನ್ ಮೂಲದ ಸ್ಫೋಟಕಗಳನ್ನು ನಿಷೇದಿಸಿದ ಮೇಲೆ, ಭಾರತೀಯ ಉಪಖಂಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಗ್ರಗಾಮಿ ಸಂಘಟನೆಗಳು ಅಮೋನಿಯಂ ನೈಟ್ರೇಟನ್ನು ಹೆಚ್ಚೆಚ್ಚು ಬಳಸಲಾರಂಭಿಸಿದವು. ಈ ಮಾತಿಗೆ ಪುರಾವೆಯಾಗಿ ಹೈದರಾಬಾದ್ ಸ್ಫೋಟ, ಚಿನ್ನಸ್ವಾಮಿ ಕ್ರೀಡಾಂಗಣ ಸ್ಫೋಟ, ಪುಣೆಯ ಜರ್ಮನ್ ಬೇಕರಿ ಸ್ಫೋಟ, ದಿಲ್ ಕುಷ್ ನಗರದ ಸ್ಫೋಟ ಹೀಗೆ ಹಲವು ಉದಾಹರಣೆಗಳು ದೊರೆಯುತ್ತವೆ. ಸುಧಾರಿತ ಸ್ಫೋಟಕ ಉಪಕರಣಗಳು(Iಇಆ) ಎಂದು ಕರೆಯಲ್ಪಡುವ ಸ್ಫೋಟಕಗಳಲ್ಲಿ ಮುಖ್ಯ ಕಚ್ಚಾವಸ್ತು ಅಮೋನಿಯಂ ನೈಟ್ರೇಟ್ ಆಗಿರುತ್ತದೆ. ನಟ್ಟು, ಬೋಲ್ಟು, ಬಾಲ್‍ಬಿಯರಿಂಗ್ ಗುಂಡುಗಳÀಂತಹ ದೇಹದ ಮೂಲಕ ತೂರಿಹೋಗಬಹುದಾದ ಘನವಸ್ತುಗಳನ್ನು ಸೇರಿಸಿ ಈ ಬಾಂಬುಗಳು ಪರಿಣಾಮವನ್ನು ಹೆಚ್ಚಿಸಲಾಗುತ್ತದೆ.
  ಸೆಲ್ಯುಲೋಸ್ ನೈಟ್ರೇಟ್ ಮತ್ತು ನೈಟ್ರೋ ಗ್ಲಿಸರಿನ್ ಮೂಲದ ಸ್ಫೋಟಕಗಳ ಬಳಕೆ ಪ್ರಾರಂಭವಾದದ್ದು ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ. ಸರ್ ಅಲ್ಪ್ರೆಡ್ ನೊಬೆಲ್‍ರ ತಂದೆ ನಡೆಸುತ್ತಿದ್ದ ಸ್ಫೋಟಕಗಳ ಫ್ಯಾಕ್ಟರಿಯಲ್ಲಿ ಆಕಸ್ಮಿಕವಾಗಿ ಸ್ಫೋಟ ಸಂಭವಿಸಿ ನೊಬೆಲ್‍ರ ಇಬ್ಬರು ತಮ್ಮಂದಿರು ಅಸುನೀಗಿದ್ದರು. ಆನಂತರ, ಅಲ್ಫ್ರೆಡ್ ನೊಬೆಲ್ ನೈಟ್ರೋಗ್ಲಿಸರಿನ್ ಮೂಲದ ಸ್ಫೋಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಬಳಸಬಹುದಾದ ಡೈನಮೈಟ್ ಎಂಬ ಸಂಯೋಜನೆಯನ್ನು  ತಯಾರಿಸಿದರು. ಡೈನಮೈಟ್ ತಯಾರಾದದ್ದು ಗಾಂಧಿ ಹುಟ್ಟುವುದಕ್ಕಿಂತ ಎರಡು ವರ್ಷ ಮೊದಲು- 1867 ರಲ್ಲಿ. ಆನಂತರ, ಡೈನಮೈಟ್ ತಯಾರಿಸಿದ ಕುಖ್ಯಾತಿಯಿಂದ ತಪ್ಪಿಸಿಕೊಳ್ಳಲೋಸುಗುವೋ ಎಂಬಂತೆ ತನ್ನ ಆಸ್ತಿಯೆಲ್ಲ ನೊಬೆಲ್ ಪ್ರಶಸ್ತಿಗಳನ್ನು ನೀಡಲು ವಿನಿಯೋಗವಾಗಬೇಕೆಂಬ ಇಚ್ಛಾಪತ್ರವನ್ನು ಬರೆದು ಇದೇ ನೊಬೆಲ್ ಮಹಾಶಯ ಅಸುನೀಗಿದ್ದರು.
    ರಕ್ತ ಸಿಕ್ತವಾದ ಆಲೋಚನೆಗಳನ್ನು ಹೊಂದಿರುವವರು ಬಾಯಲ್ಲಿ ಆಲಿವ್ ಟೊಂಗೆಯನ್ನು ಕಚ್ಚಿಕೊಂಡರೇನಂತೆ- ಅವರ ಕಾರ್ಯಗಳಲ್ಲಿ ರಕ್ತದ ಲೇಪನ ಇದ್ದೇ ಇರುತ್ತದೆ. ಅಮೋನಿಯಂ ನೈಟ್ರೇಟು ಮತ್ತಿತರ ರಸಗೊಬ್ಬರಗಳನ್ನು ಹೇಬರ್ ಪ್ರಕ್ರಿಯೆ ಎಂಬ ರಾಸಾಯನಿಕ ಕ್ರಿಯೆಯ ಮೂಲಕ ತಯಾರಿಸಿದ ಸಾಧನೆಗಾಗಿ ವಿಜ್ಞಾನಿ ಫ್ರಿಟ್ಞ್ ಹೇಬರರಿಗೆ 1918 ರಲ್ಲಿ ರಸಾಯನ ಶಾಸ್ತ್ರದ ನೊಬೆಲ್ ಪ್ರಶಸ್ತಿ ದೊರೆಯಿತು. ಇದೇ ಹೇಬರ್ ಮಹಾಶಯನನ್ನು ಮೊದಲ ಮಹಾಯುದ್ಧದ ಕಾಲದಲ್ಲಿ ಜರ್ಮನಿಯ ರಾಸಾಯನಿಕ ಸಮರಪಡೆಯ ಮುಖ್ಯಸ್ಥರನ್ನಾಗಿಯೂ ಮಾಡಲಾಗಿತ್ತು. ಇದೇ ಹೇಬರ್ ಎರಡನೇ ವೈಪ್ರೆಸ್ ಕದನದಲ್ಲಿ ಕ್ಲೋರಿನ್ ಗ್ಯಾಸ್ ದಾಳಿಯನ್ನು ನಿರ್ದೇಶಿಸಿ ಮಿತ್ರಪಡೆಯ ಸಾವಿರಾರು ಯೋಧರ ಸಾವಿಗೆ ಕಾರಣರಾಗಿದ್ದರು. ಅಮೋನಿಯಂ ನೈಟ್ರೇಟೆಂಬ ರಸಗೊಬ್ಬರ ರಕ್ತಲೇಪಿಸಿಕೊಂಡೇ ಹುಟ್ಟಿರುವುದಕ್ಕೆ ಇದಕ್ಕಿಂತ ಬೇರೆ ಪುರಾವೆ ಬೇಕೇ?
 ಸ್ಫೋಟಕಗಳಿಗೆ ಬಹಳ ದೊಡ್ಡ ಇತಿಹಾಸವಿಲ್ಲ. ಬಹುಷಃ, ದೀರ್ಘ ಭವಿಷ್ಯವೂ ಇಲ್ಲ! ಹದಿಮೂರನೇ ಶತಮಾನದ ಹೊತ್ತಿಗೆ ಕೋವಿ ಮದ್ದಲ್ಲದೇ ಬೇರೆ ಸ್ಫೋಟಕಗಳೇ ಗೊತ್ತಿರಲಿಲ್ಲ.  ಸೆಲ್ಯುಲೋಸ್ ನೈಟ್ರೇಟ್ ಮತ್ತು ನೈಟ್ರೋ ಗ್ಲಿಸರಿನ್ ಮೂಲದ ಸ್ಫೋಟಕಗಳ ಬಳಕೆ ಪ್ರಾರಂಭವಾದದ್ದು ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ;  ಟಿ.ಎನ್.ಟಿ ರಂಗಪ್ರವೇಶ ಮಾಡಿದ್ದು ಮೊದಲ ವಿಶ್ವಸಮರದ ಸಂದರ್ಭದಲ್ಲಿ. 1991 ರಲ್ಲಿ ರಾಜೀವ ಗಾಂಧಿ ಆರ್. ಡಿ. ಎಕ್ಸ್ ಎಂಬ ಸ್ಫೋಟಕಕ್ಕೆ ಬಲಿಯಾದರು. ಈಗ ಮತ್ತದೇ ರಸಗೊಬ್ಬರ. ಬೆಂಗಳೂರಿನಲ್ಲಿ ಬಾಂಬು ಸ್ಫೋಟಗೊಂಡರೆ ಭಟ್ಕಳದಲ್ಲಿ ಅಮೋನಿಯಂ ನೈಟ್ರೇಟು ದೊರೆಯುತ್ತದೆ.
  ಅಮೋನಿಯಂ ನೈಟ್ರೇಟನ್ನು ರಸಗೊಬ್ಬರವಾಗಿ ಬಳಸುವಾಗಲೂ ಅಪಾಯವಿದ್ದೇ ಇದೆ. ಸಂಗ್ರಹಣೆ ಮತ್ತು ಬಳಕೆಯ ಯಾವ ಹಂತದಲ್ಲಿ ಎಚ್ಚರ ತಪ್ಪಿದರೂ ಅನಾಹುತ ಕಟ್ಟಿಟ್ಟ ಬುತ್ತಿ. ಟೆಕ್ಸಾಸ್ ನಗರದ ರಸಗೊಬ್ಬರ ಕಾರ್ಖಾನೆಯ ದುರಂತವೂ ಸೇರಿದಂತೆ ಎಷ್ಟೋ ಸಾವು-ನೋವುಗಳಿಗೆ ಈ ರಸಗೊಬ್ಬರ ಕಾರಣವಾಗಿದೆ. ರಸಗೊಬ್ಬರಕ್ಕಾಗಿ ಹಾತೊರೆಯುತ್ತಾ ಪೋಲೀಸರ ಗುಂಡು ತಿಂದು ಸತ್ತ ಹಾವೇರಿಯ ರೈತ ನಮ್ಮ ನೆನಪಿಂದ ಇನ್ನೂ ಮರೆಯಾಗಿಲ್ಲ. ಗತಿಸಿದ 2014 ರ ಕಟ್ಟಕಡೆಯ ನೂರೈವತ್ತು ಗಂಟೆಗಳಲ್ಲಿ ವಿದರ್ಭ ಪ್ರಾಂತ್ಯದ 12 ರೈತರು ಆತ್ಮಹತ್ಯೆ ಮಾಡಿಕೊಂಡರು. ಈ ಸಾವಿನಲ್ಲಿ ರಸಗೊಬ್ಬರದ ಅವಶೇಷಗಳು ಇಲ್ಲದೇ ಇಲ್ಲ. ಹಸಿರು ಕ್ರಾಂತಿಯ ನೆವದಲ್ಲಿ, ಹಾಕಿದ ದುಡ್ಡಿಗೆ ಬರುವ ಇಳುವರಿ ಸಾಲುವುದಿಲ್ಲವೆಂಬ ಕೊರಗಲ್ಲಿ ನೆಲಕ್ಕೆ ಸುರಿದ ರಾಸಾಯನಿಕಗಳು ಇಂದು ರೈತನನ್ನೇ ತಿನ್ನುತ್ತಿವೆ. ರಸಗೊಬ್ಬರಕ್ಕೆ ರಕ್ತ ಮೆತ್ತಿಕೊಂಡದಂತೂ ಸತ್ಯ.
  ಅಂದಹಾಗೆ, ಅಮೋನಿಯಂ ನೈಟ್ರೇಟನ್ನು ನೀರಲ್ಲಿ ಹಾಕಿ ಬಿಸಿ ಮಾಡಿದರೆ ಏನು ದೊರೆಯುವುದು ಗೊತ್ತೇ? ನೈಟ್ರಸ್ ಆಕ್ಸೈಡ್-ಅದೇ.. ಲಾಫಿಂಗ್ ಗ್ಯಾಸ್!
_________________________________________________________________________
ಉದಯ ಗಾಂವಕಾರ
9481509699

No comments: