Sunday, 4 August 2019

ಚಂದ್ರನಲ್ಲಿ ಮೊದಲ ಹೆಜ್ಜೆ

ಮನುಷ್ಯ ಕುಲದ ಧೈತ್ಯ ನೆಗೆತಕ್ಕೆ ಈಗ ಐವತ್ತು ವರ್ಷಗಳು. ನಂಬಿಕೆಗಳ ಪೆಟ್ಟಿಗೆಗೆ ಸುತ್ತಿಗೆಯ ಪೆಟ್ಟುಕೊಟ್ಟು, ಮಾನವ ಪ್ರಯತ್ನಕ್ಕೆ ಸಾಧ್ಯವಾಗದ್ದು ಯಾವುದೂ ಇಲ್ಲವೆಂಬ ಆತ್ಮವಿಶ್ವಾಸವನ್ನು ತುಂಬಿದ ಅಪೋಲೋ11 ಚಂದ್ರಯಾನದ ಕಥೆ ಬಹಳ ರೋಚಕ. ಬಹುಷಃ ಮುಂದಿನ ಎಷ್ಟೋ ತಲೆಮಾರುಗಳವರೆಗೆ ಅಜ್ಜಿ ಅಜ್ಜಂದಿರು ತಮ್ಮ ಮೊಮ್ಮಕ್ಕಳಿಗೆ ಹೇಳಬಹುದಾದ ಕಥೆಯಿದು. ಆ ಯಾನದ ಯಾತ್ರಿಗಳಾದ ನೀಲ್ ಆರ್ಮಸ್ಟ್ರಾಂಗ್, ಎಡ್ವಿನ್ ಆಲ್ಡ್ರೀನ್ ಮತ್ತು ಮೈಕಲ್ ಕಾಲಿನ್ಸ್‍ರು ಮಾತ್ರ ಹೆಮ್ಮೆಯಿಂದ ಹೇಳಬಹುದಾದ ಕಥೆಯಲ್ಲವಿದು. ಅಪೋಲೋ ವ್ಯೋಮ ಯೋಜನೆಯ ಆರಂಭದಲ್ಲೇ, ಅಂದರೆ  1967 ರ ಅಪೋಲೋ 1 ರ ಉಡ್ಡಯನದಲ್ಲಿಯೇ ವ್ಯೋಮಯಾನಿಗಳಾದ ಗ್ರಿಸಮ್, ವೈಟ್ ಮತ್ತು ರೋಜರ್ ಛಾಫೀ ಜೀವವನ್ನ  ಕಳೆದುಕೊಂಡಿದ್ದರು. ಅಪೊಲೋ 11 ರ ಕಮಾಂಡ್ ಮೊಡ್ಯೂಲ್ ಹೇಗೆ ಕಾರ್ಯನಿರ್ವಹಿಸಬಹುದು ಎಂಬುದನ್ನು ತಿಳಿದುಕೊಳ್ಳಲು ಅಪೋಲೋ 8 ರಲ್ಲಿ ಅಂತದ್ದೇ ಕಮಾಂಡ್ ಮೊಡ್ಯೂಲನ್ನು ಭೂಮಿಯ ಸುತ್ತ ಸುತ್ತುವಂತೆ ಮಾಡಲಾಗಿತ್ತು. ಆ ನಂತರ ಅಪೋಲೋ 9 ರಲ್ಲಿ ಚಂದ್ರನ ಸುತ್ತ ಕಕ್ಷೆಯಲ್ಲಿ ಕಮಾಂಡ್ ಮಾಡ್ಯೂಲನ್ನು ಪರೀಕ್ಷಿಸಲಾಗಿತ್ತು. ಅಪೋಲೋ 10 ರಲ್ಲಿ ವ್ಯೋಮಯಾನಿಗಳ ಪೋಷಾಕುಗಳ ತಾಲೀಮು ನಡೆಯಿತು. ಹೀಗೆ, ಆ ಯಾನಕ್ಕಾಗಿ ಹತ್ತಿರ ಹತ್ತಿರ ನಾಲ್ಕು ಲಕ್ಷ ಜನ ದಶಕಗಳ ಕಾಲ ದುಡಿದ್ದಿದ್ದರು. ಜೀವ ತೇಯ್ದಿದ್ದರು. ಜೀವವನ್ನೇ ನೀಡಿದ್ದರು. ಅದಕ್ಕಿಂತಲೂ ಹೆಚ್ಚು ಜನ ಆ ಯಾನಕ್ಕಾಗಿ ಶುಭ ಹಾರೈಸಿದ್ದರು. ಇನ್ನೂ ಹೇಳಬೇಕೆಂದರೆ, ಮನುಷ್ಯನಾಗಿ ಹುಟ್ಟಿದ ಪ್ರತಿ ಜೀವಿಯೂ ತಮ್ಮ ಜೀವಿತದ ಒಂದಲ್ಲ ಒಂದು ಸಮಯದಲ್ಲಿ ಚಂದ್ರನ ನೆಲವನ್ನು ತಮ್ಮ ಬೆರಳುಗಳಲ್ಲಿ ಮುಟ್ಟಿ ಧನ್ಯವಾಗಬೇಕೆಂಬ ಕನಸು ಕಂಡವರೇ!
ಹಠ ಮಾಡುವ ಮಗುವಿಗೆ ಚಂದ್ರನನ್ನು ತೋರಿಸಿ ಆಸೆಕಂಗಳಲ್ಲಿರುವಾಗಲೇ ತುತ್ತು ತಿನ್ನಿಸಿ ಯಾಮಾರಿಸದ ಯಾವ ಅಮ್ಮ ಈ ಭೂಮಿಯ ಮೇಲೆದ್ದಾಳೆ ಹೇಳಿ?
ಚಂದ್ರ, ನಮ್ಮೆಲ್ಲರ ಮಹಾತ್ವಾಕಾಂಕ್ಷೆಯ ಸಂಕೇತ. ಆದುದರಿಂದಲೇ ಭೂಮಿಯ ಮೇಲಿನ ತಮ್ಮ ಶ್ರೇಷ್ಠತೆಯನ್ನು ಜಗತ್ತಿಗೆಲ್ಲಾ ಸಾರಲು ಅಮೇರಿಕನ್ನರು ಆರಿಸಿಕೊಂಡಿದ್ದು ಚಂದ್ರನನ್ನು. ಅಂತಹ ಚಂದ್ರನ ಮೇಲೆ ಮನುಷ್ಯ ಚೇತನವೊಂದು ಮೊದಲ ಹೆಜ್ಜೆಯನ್ನಿಟ್ಟ ಮಹತ್ವದ ಕ್ಷಣವನ್ನು ಮರೆಯಲಾದಿತೇ?

ಜುಲೈ 20, 1969 ಸಂಯೋಜಿತ ಸಾರ್ವತ್ರಿಕ ಕಾಲಮಾನ 20.17. ಚಂದ್ರನ ಮೇಲಿಳಿದ ಮೊದಲ ಮಾನವ ಎಂಬ ವಿಶೇಷಣದೊಂದಿಗೆ ಇತಿಹಾಸದ ಪುಟಗಳನ್ನು ಸೇರಿರುವ ನೀಲ್ ಆರ್ಮ್‍ಸ್ಟ್ರಾಂಗ್, ಅಪೋಲೋ-11 ಚಂದ್ರಯಾನ ಯೋಜನೆಯ ನಿಯಂತ್ರಣ ಕೇಂದ್ರಕ್ಕೆ "ಈಗಲ್ ಚಂದ್ರನ ಮೇಲಿಳಿದಿದೆ" ಎಂಬ ಸುದ್ದಿ ನೀಡಿದರು. ಚಂದ್ರನ ಮೇಲೆ ಮಾನವ ಇಳಿದ ಆ ಐತಿಹಾಸಿಕ ಸಂದರ್ಭಕ್ಕೆ ಈಗ ಐವತ್ತು ವರ್ಷಗಳು ಸಂದಿವೆ. ಅಪೋಲೋ 11ರ ಈಗಲ್ ಚಾಂದ್ರ ನೌಕೆ ಚಂದ್ರನ ಮೇಲಿಳಿದ ಒಂದು ದಿನದ ನಂತರ, ಜುಲೈ 21 ರಂದು ನೀಲ್ ಆರ್ಮಸ್ಟ್ರಾಂಗ್ ಚಂದ್ರನ ಮೇಲೆ ಮನುಷ್ಯನ ಮೊದಲ ಹೆಜ್ಜೆಯನ್ನಿಟ್ಟರು. ಚಂದ್ರನ ಮೇಲೆ ಇಳಿದ ಹತ್ತೊಂಬತ್ತು ನಿಮಿಷಗಳ ನಂತರ ಎಡ್ವಿನ್ ಅಲ್ಡ್ರಿನ್ ಕೂಡಾ ಚಂದ್ರನ ಮೇಲಿಳಿದರು. ಅವರಿಬ್ಬರೂ ಚಂದ್ರನ ನೆಲದ ಮೇಲೆ ಸುಮಾರು ಎರಡೂಕಾಲು ಗಂಟೆಗಳ ಕಾಲ ಓಡಾಡಿ ಸುಮಾರು ಇಪ್ಪತ್ತೊಂದು ಕಿಲೋಗ್ರಾಮಿನಷ್ಟು ವಸ್ತುಗಳನ್ನು ಚಂದ್ರ ಮೇಲ್ಮೈನಿಂದ ಸಂಗ್ರಹಿಸಿದರು. ಹೀಗೆ ಇವರಿಬ್ಬರೂ ಚಂದ್ರನ ಮೇಲೆ ಹೆಜ್ಜೆಗಳನ್ನಿಡುತ್ತಿರುವಾಗ ಇವರ ಜೊತೆ ಸಹಯಾನಿಯಾಗಿದ್ದ ಕಾಲಿನ್ಸ್ ಕಮಾಂಡ್ ಮಾಡ್ಯೂಲ್ ನಲ್ಲಿ ಚಂದ್ರನನ್ನು ಸುತ್ತುತ್ತಿದ್ದರು. ನೀಲ್ ಆರ್ಮಸ್ಟ್ರಾಂಗ್ ಚಂದ್ರನ ನೆಲದಿಂದಾಡಿದ ಮೊದಲ ಮಾತು ಚಂದ್ರ ಪಯಣದ ರೋಚಕ ಕಥೆಯನ್ನು ಒಂದೇ ವಾಕ್ಯದಲ್ಲಿ ಹಿಡಿದಿಟ್ಟಿತ್ತು-ಮಾನವನಿಗೆ ಒಂದು ಪುಟ್ಟ ಹೆಜ್ಜೆ, ಮನುಷ್ಯ ಕುಲದ ಧೈತ್ಯ ನೆಗೆತ.

ಅಮೇರಿಕಾದ ಫ್ಲೋರಿಡಾದಲ್ಲಿರುವ ಕೆನಡಿ ವ್ಯೋಮಕೇಂದ್ರದಿಂದ ಜುಲೈ 16 ರಂದು ಉಡ್ಡಯನಗೊಂಡ ಅಪೋಲೋ 11 ವ್ಯೋಮನೌಕೆಯು ತನ್ನ ರಾಕೆಟ್ಟಿನಿಂದ ಪ್ರತ್ಯೇಕಗೊಂಡು ಚಂದ್ರನ ಸುತ್ತ ಸೂಕ್ತ ಕಕ್ಷೆಯನ್ನು ಪಡೆಯುವ ಮೊದಲು ಮೂರು ದಿನಗಳ ಕಾಲ ಪ್ರಯಾಣಿಸುತ್ತಲೇ ಇತ್ತು. ಸೂಕ್ತ ಚಂದ್ರ ಕಕ್ಷೆಯನ್ನು ಪಡೆದ ನಂತರ ಕಮಾಂಡ್ ಮಾಡ್ಯೂಲ್‍ನಿಂದ ನೀಲ್ ಆರ್ಮ್‍ಸ್ಟ್ರಾಂಗ್ ಮತ್ತು ಎಡ್ವಿನ್ ಅಲ್ಡ್ರಿನ್‍ರು ಈಗಲ್ ಎಂಬ ಲೂನಾರ್ ಮಾಡ್ಯೂಲ್‍ಗೆ ವರ್ಗಾವಣೆಗೊಂಡರು. ಚಂದ್ರನ ಮೇಲಿರುವ ಟ್ರಾಂಕ್ವಿಲಿಟಿ ಸಮುದ್ರ ಎಂಬ ತಗ್ಗು ಪ್ರದೇಶವು ಈಗಲ್‍ನ ನೆಲಸ್ವರ್ಶಕ್ಕಾಗಿ ಆಯ್ಕೆಗೊಂಡಿತ್ತು. ನಿಯಂತ್ರಣ ನೌಕೆಯಲ್ಲಿ ಕಾಲಿನ್ಸ್ ಮಾತ್ರ ಉಳಿದರು. ಈಗಲ್‍ನಲ್ಲಿ ಆಲ್ಡ್ರೀನ್‍ಗೆ ತಾಂತ್ರಿಕ ನಿರ್ವಹಣೆಯ ಕೆಲಸ. ಜೊತೆಗೆ ಅವರು ಕೊಲಂಬಿಯಾದ ಮೂಲಕ ಹೌಸ್ಟನ್‍ನಲ್ಲಿರುವ ನಿಯಂತ್ರಣ ಕೇಂದ್ರದೊಂದಿಗೆ ಸತತ ಸಂಪರ್ಕದಲ್ಲಿರಬೇಕಾಗಿತ್ತು. ಚಂದ್ರನ ಮೇಲೆ ಮೊದಲ ಹೆಜ್ಜೆಯನ್ನಿಡುವ ವ್ಯಕ್ತಿಯೆಂದು ಈ ಮೊದಲೇ ನಿಶ್ಚಯಿಸಲಾದ ನೀಲ್ ಆರ್ಮಸ್ಟ್ರಾಂಗ್ ಈಗಲ್‍ನ ನೆಲಸ್ಪರ್ಶಕ್ಕೆ ಅಂತಿಮ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿತ್ತು. ನೆಲಸ್ಪರ್ಶಕ್ಕೆ ನಿರ್ದಿಷ್ಟ ಸ್ಥಳ ಮತ್ತು ಇಳಿಯುವ ಜವವನ್ನೂ (ಸ್ಪೀಡ್) ಅವರೇ ನಿರ್ಧರಿಸಬೇಕಾಗಿತ್ತು. ಚಂದ್ರನ ಮೇಲೆ ಎಲ್ಲಿ ನೋಡಿದರೂ ಬರೀ ಬಂಡೆಗಳು. ಕೆಲವಂತೂ ಆನೆಗಾತ್ರದ ಬಂಡೆಗಳು! ಎಲ್ಲಿ ಇಳಿಯಬೇಕೆಂದು ತೋಚದೆ ಆರ್ಮಸ್ಟ್ರಾಂಗ್ ಈಗಲ್‍ನ ಇಳಿಯುವಿಕೆಯನ್ನು ನಿಧಾನಗೊಳಿಸಿದರು. ಈಗಲ್ ಇಳಿಯಲು ವಿಳಂಬವಾಗುತ್ತಿದ್ದಂತೆ ಇತ್ತ ಭೂಮಿಯ ಮೇಲೆ ಆತಂಕ ಶುರುವಾಯಿತು. ಚಂದ್ರನಲ್ಲಿಳಿಯಲು ಮೀಸಲಿರಿಸಿದ್ದ ಇಂಧನ ಮುಗಿಯುತ್ತಾ ಬಂದಿತ್ತು. ಕೇವಲ ಅರವತ್ತು ಸೆಕೆಂಡ್‍ಗಳಿಗಾಗುವಷ್ಟು ಇಂಧನ ಉಳಿದಿದೆ ಎಂಬ ಮಾಹಿತಿ ನಿಯಂತ್ರಣ ಕೇಂದ್ರದಿಂದ ಬಂತಾದರೂ ಆಲ್ಡ್ರೀನ್ ಸಹನೆಯಿಂದಿದ್ದರು. ಅವರು ಆರ್ಮಸ್ಟ್ರಾಂಗ್‍ರನ್ನು ಗಾಬರಿಪಡಿಸುವಂತಿರಲಿಲ್ಲ. ಅಂತೂ, ಇಂಧನ ಮುಗಿಯಲು ಇನ್ನೇನು ಹದಿನೇಳು ಸೆಕೆಂಡುಗಳಿರುವಾಗ ಸುಮಾರಾಗಿ ಸಮತಟ್ಟಾಗಿರುವ, ಹೆಚ್ಚು ಬಂಡೆಗಳಿರದ ಸ್ಥಳದಲ್ಲಿ ಈಗಲ್ ನೆಲಸ್ಪರ್ಶಗೊಂಡಿತು.

1950 ರ ದಶಕವು ಶೀತಲ ಸಮರದ  ಕಾಲ. ಅಮೇರಿಕ ಮತ್ತು ಸೋವಿಯತ್ ರಷ್ಯಾ ದೇಶಗಳು ಒಂದಕ್ಕೊಂದು ಮೇಲಾಟದಲ್ಲಿ ತೊಡಗಿದ್ದವು. ವಿಚಿತ್ರವೆಂದರೆ, ಈ ದೇಶಗಳ ಶ್ರೇಷ್ಠತೆಯ ವ್ಯಸನ, ಯುದ್ಧೋನ್ಮಾದಗಳು ವ್ಯೋಮವಿಜ್ಞಾನದ ನೆಗೆತಕ್ಕೆ ಕಾರಣವಾಯಿತು. 1957 ರಲ್ಲೇ ಸೋವಿಯತ್ ರಷ್ಯಾವು ಕೃತಕ ಉಪಗ್ರಹ ಸ್ಪುಟ್ನಿಕ್ 1 ನ್ನು ಹಾರಿಬಿಟ್ಟು ವ್ಯೋಮ ವಿಜ್ಞಾನದಲ್ಲಿ ತಮ್ಮ ಶ್ರೇಷ್ಟತೆಯನ್ನು ಸಾಬೀತುಪಡಿಸಿತ್ತು. ಇದರೊಂದಿಗೆ ಖಂಡಾಂತರ ಕ್ಷಿಪಣ ಗಳ ಮೂಲಕ ಬೈಜಿಕ ಅಸ್ತ್ರಗಳನ್ನು ಗುರಿಗೆ ತಲುಪಿಸಬಲ್ಲ ತಮ್ಮ ತಾಕತ್ತನ್ನೂ ಜಗತ್ತಿಗೆ ಮನದಟ್ಟುಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಅಮೇರಿಕಾ ಸಂಯುಕ್ತ ಸಂಸ್ಥಾನವು ನಾಸಾವನ್ನು ಸ್ಥಾಪಿಸಿತು. ನಾಸಾ ತನ್ನ ಮಕ್ರ್ಯುರಿ ಯೋಜನೆಯ ಮೂಲಕ ಭೂ ಕಕ್ಷೆಯಲ್ಲಿ ಮಾನವನನ್ನು ಸುತ್ತಿಸುವ ಉದ್ಧೇಶ ಹೊಂದಿತ್ತು. ಆದರೆ, 1961 ರಲ್ಲಿ ಸೋವಿಯತ್ ರಷ್ಯಾ ಈ ಸಾಧನೆಯನ್ನು ಮಾಡುವ ಮೂಲಕ ಯೂರಿ ಗಗಾರಿನ್ ವ್ಯೋಮಕ್ಕೆ ಹಾರಿದ ಮೊದಲ ಮಾನವನಾದರು.  ಅಮೇರಿಕಾ ಸಂಯುಕ್ತ ಸಂಸ್ಥಾನವು ವ್ಯೋಮ ವಿಜ್ಞಾನದಲ್ಲಿ ತನ್ನ ಶ್ರೇಷ್ಠತೆಯನ್ನು ಸಾಬೀತುಪಡಿಸಲೇಬೇಕಾದ ಒತ್ತಡಕ್ಕೆ ಒಳಗಾಯಿತು.

"ಈ ದಶಕ ಮುಗಿಯುವುದರೊಳಗೆ ಚಂದ್ರನಲ್ಲಿಗೆ ಮನುಷ್ಯರನ್ನು ಕಳುಹಿಸಿ ಅವರನ್ನು ಸುರಕ್ಷಿತವಾಗಿ ಹಿಂತಿರುಗುವಂತೆ ಮಾಡುವ ಗುರಿಗೆ ಈ ದೇಶ ಬದ್ಧವಾಗಿದೆ" ಎಂದು 1961ರ ಮೇ 25 ರಂದು ಅಮೇರಿಕಾದ ಆಗಿನ ಅಧ್ಯಕ್ಷ ಜಾನ್ ಕೆನಡಿ ಹೇಳಿದರು. ಅಸಾಧ್ಯ ಒತ್ತಡಗಳನ್ನು ಮೆಟ್ಟಿ ನಿಂತು ಜಾನ್ ಕೆನಡಿಯವರು ಕರೆ ನೀಡಿದ ಎಂಟು ವರ್ಷ, ಒಂದು ತಿಂಗಳು ಮತ್ತು ಇಪ್ಪತ್ತೊಂಬತ್ತು ದಿನಗಳ ನಂತರ "ಗುರಿ ಈಡೇರಿದೆ" ಎಂಬ ಅಧಿಕೃತ ಘೋಷಣೆ ಹೌಸ್ಟನ್‍ನ ಅಪೋಲೋ 11 ರ ನಿಯಂತ್ರಣ ಕೇಂದ್ರದಿಂದ ಬಿತ್ತರಗೊಂಡಿತು.
ಅಪೋಲೋ 11 ರ ಸಾಧನೆ ಉಂಟುಮಾಡಿದ ಪರಿಣಾಮ ಬಹಳ ದೊಡ್ಡದು. ಈ ವ್ಯೋಮಸಾಹಸ ಜಗತ್ತನ್ನು ಒಂದಾಗಿಸಿತು. ಮನುಷ್ಯನ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ಮಾನವ ಪ್ರಯತ್ನದ ಮೇಲೆ ನಂಬಿಕೆ ಹೆಚ್ಚಿತು. ಮತ್ತಿಷ್ಟು ವ್ಯೋಮ ಕಾರ್ಯಕ್ರಮಗಳು ಮೊದಲಾಗುವಲ್ಲಿ ನೆರವಾಯಿತು. ಅದರ ಪರಿಣಾಮವಾಗಿ ಭೂ ಸ್ಥಿರ ಉಪಗ್ರಹಗಳು ಮಾಹಿತಿ ಕ್ರಾಂತಿಯನ್ನೇ ಉಂಟುಮಾಡಿದವು.

ವ್ಯೋಮ ಕಾರ್ಯಕ್ರಮಗಳು ಯುದ್ಧದ ಹೊಸ್ತಿನಿಂದ ಹುಟ್ಟಿದ್ದರೂ ಅಪೋಲೋ ವ್ಯೋಮಯಾನಿಗಳು ಗಡಿಗಳಿಲ್ಲದ ಭೂಮಿಯನ್ನು ಹಂಬಲಿಸಿದ್ದರು.
________________________
ಉದಯ ಗಾಂವಕಾರ

No comments: