Wednesday, 4 September 2013

ಅರಿವಿನ ಗುರುವಿಗೊಂದು ಪತ್ರ

ಪ್ರೀತಿಯ ಸರ್,

ನನ್ನ ಬದುಕಿನ ಪ್ರತಿ ಕದಲುವಿಕೆಯಲ್ಲೂ ನಿಮ್ಮ ಶಕ್ತಿ,ನಿಮ್ಮ ನೆನಪುಗಳು ಮತ್ತು ನೀವೇ ಒದಗಿಸಿದ ಪ್ರಾರಂಭಿಕ ನೆಗೆತ ಇರುವುದರಿಂದ ನೀವು ನನಗೆ ಯಾವಾಗಲೂ ನೆನಪಾಗುತ್ತೀರಿ-ಈ ದಿನ ಮಾತ್ರ ಅಲ್ಲ.
ಯಾವಾಗಲೂ ನೆನಪಾಗುತ್ತೀರಿ ಎಂದನಲ್ಲವೇ? ಯಾವಾಗಲೂ ನಿಮ್ಮ ಹೆಸರನ್ನು ನೆನಪಿಸಿಕೊಳ್ಳುತ್ತೇನೆ ಎಂಬರ್ಥದಲ್ಲಿ ಹಾಗೆ ಹೇಳಿದ್ದಲ್ಲ.ನನ್ನ ನಡೆಯಲ್ಲಿ,ನುಡಿಯಲ್ಲಿ,ಅಕ್ಷರಗಳಲ್ಲಿ ನಿಮ್ಮ ನೆರಳಿದೆ.ನನ್ನ ಆಲೋಚನೆಗಳಲ್ಲೂ ನೀವಿದ್ದೀರಿ.ನನ್ನೊಳಗೆ ನೀವು ನನಗೇ ಗೊತ್ತಿಲ್ಲದಂತೆ ಸೇರಿಕೊಂಡಿದ್ದೀರಿ.ಹೇಗೆ ಸೇರಿಕೊಂಡಿರಿ ಎಂಬುದು ಈವತ್ತಿಗೂ ನನಗೆ ಹೊಳೆಯದ ಅಚ್ಚರಿ!
ನೀವಂದುಕೊಂಡಂತೆ ನಡೆದುಕೊಳ್ಳಬೇಕೆಂದು ಎಂದೂ ನನ್ನ ಮೇಲೆ ನೀವು ಒತ್ತಡ ತಂದಿರಲಿಲ್ಲ.ನಿಮ್ಮ ಆಲೋಚನೆಗಳನ್ನು ನನ್ನ ಮೇಲೆ ಎಂದೂ ಹೇರಿರಲಿಲ್ಲ.ಅಷ್ಟೇಕೆ,ಎಷ್ಟೋ ಬಾರಿ ನನ್ನ ಅಭಿಪ್ರಾಯಗಳನ್ನೇ ನೀವು ಒಪ್ಪಿಕೊಂಡು ಅನುಸರಿಸಿದ್ದೀರಿ.ಆದರೂ,ಹೇಗೆ ನನ್ನೊಳಗೆ ನೀವು ಸೇರಿಕೊಂಡಿರೆಂಬುದೇ ತಿಳಿಯುತ್ತಿಲ್ಲ.
ನನಗೆ ಆಟವಾಡುವುದನ್ನು ಕಲಿಸುವ ಬದಲು,ನನ್ನೊಡನೆ ಆಟವಾಡಿದ್ದೀರಿ.ನಾನು ಗೆದ್ದಾಗ,ನಿಮ್ಮದೇ ಗೆಲುವು ಎಂಬಂತೆ ಸಂಭ್ರಮಿಸಿದ್ದೀರಿ.ನಾನು ಸೋತಾಗ ನನ್ನ ಹೆಗಲ ಮೇಲೆ ಕೈಯಿಟ್ಟು ಧೈರ್ಯ ತುಂಬಿದ್ದೀರಿ. ನೀವು ನನಗೆ ಕಲಿಸುತ್ತಿದ್ದೀರಿ ಎಂದು ನನಗೆ ಎಂದೂ ಅನ್ನಿಸಿರಲಿಲ್ಲ.ಎಷ್ಟೋ ಬಾರಿ,ನೀವೇ ನನ್ನಿಂದ ಕಲಿಯುತ್ತಿದ್ದೀರಿ ಎಂಬಂತೆ ನಡೆದುಕೊಂಡಿದ್ದೀರಿ.ಈಗಲೂ ನನಗೆ ಆ ಗೊಂದಲ ಕಾಡುತ್ತದೆ-ನೀವು ನನಗೆ ಕಲಿಸಿದಿರೋ ಅಥವಾ ನಾನೇ ನಿಮಗೆ ಕಲಿಸಿರಬಹುದೋ?
ಕವಿತೆಯನ್ನೂ ಗಣಿತವನ್ನೂ ಅದೆಷ್ಟು ಸುಂದರವಾಗಿ ಬೆಸೆಯುತ್ತಿದ್ದಿರಿ.ಕುಮಾರವ್ಯಾಸನ ಪ್ರತಿ ಸಾಲಿನಲ್ಲೂ ಗಣಿತವನ್ನೂ ,ಸಂಖ್ಯೆಗಳ ನಡುವೆ ಕವಿತೆಯನ್ನೂ ಕಾಣಲು ನಮಗೆ ಸಾಧ್ಯವಾಯಿತು. ಬದುಕಿನ ಪ್ರತಿ ಹೆಜ್ಜೆಯನ್ನೂ ಸುಂದರ ಕಾವ್ಯವನ್ನಾಗಿ ಅನುಭವಿಸುವುದನ್ನು ನಾವೆಲ್ಲ ನಿಮ್ಮಿಂದ ಕಲಿತಿದ್ದೇವೆ. ವಿಜ್ಞಾನವನ್ನು ಬದುಕುವ ದಾರಿಯನ್ನಾಗಿಯೂ ಸಾಹಿತ್ಯವನ್ನು ಉಸಿರಾಗಿಯೂ ನೀವು ಬದುಕಿದ ರೀತಿಯೇ ನಿಮ್ಮ ತರಗತಿಯಾಗಿತ್ತು.
ನೀವು ತಿಳಿ ಹೇಳಲಿಲ್ಲ-ನನಗೇ ಹೆಚ್ಚು ತಿಳಿದಿದೆಯೆಂದು ಅಂದುಕೊಳ್ಳುವಂತೆ ಮಾಡಿದ್ದೀರಿ.ಆದುದರಿಂದಲೇ ನೀವು ಕಲಿಸುವ ಗುರುವೆಂದು ಆಗ ಅನ್ನಿಸಿರಲಿಲ್ಲ.ನಿಮಗೂ ಸಹ ಗೊತ್ತಿರದ ಅನೇಕ ಸಂಗತಿಗಳಿವೆ ಎಂಬುದನ್ನು ನೀವು ನನಗೆ ಮತ್ತು ನನ್ನ ಸಹಪಾಠಿಗಳಿಗೆ ಆಗಾಗ ಮನದಟ್ಟು ಮಾಡುತ್ತಿದ್ದಿರಿ.ನೀವು ನಮ್ಮಲ್ಲಿ ಕೇಳುವ ಅನೇಕ ಪ್ರಶ್ನೆಗಳು ಪರಿಕ್ಷಾರ್ಥವೆನಿಸದೇ, ನಿಮಗೆ ನಮ್ಮಿಂದ ತಿಳಿಯುವ ಅನೇಕ ವಿಷಯಗಳಿವೆ ಎಂದು ನಾವಂದುಕೊಳ್ಳುತ್ತಿದ್ದೆವು.ಖುಷಿಪಡುತ್ತಿದ್ದೆವು.
ನನ್ನ ತಪ್ಪುಗಳನ್ನೂ,ದೌರ್ಬಲ್ಯಗಳನ್ನೂ ಕಂಡೆ ಇಲ್ಲವೇನೋ ಎಂದು ನಾನಂದುಕೊಳ್ಳುವಹಾಗೆ ನನ್ನ ಒಳ್ಳೆಯ ಗುಣಗಳನ್ನು ಮಾತ್ರ ಎತ್ತಿಹೇಳಿದ್ದೀರಿ. ನನ್ನ ತಂದೆ,ತಾಯಿ,ಬಂಧುಗಳು ನನ್ನ ಬಗ್ಗೆ ಹೆಮ್ಮೆಪಡುವಂತೆ ಮಾಡಿದ್ದೀರಿ.ಇಂತಹ ಮಾತುಗಳು ನನ್ನಲ್ಲಿ ಇನ್ನಷ್ಟು ಒಳ್ಳೆಯದನ್ನು ಮಾಡುವ ಉತ್ಸಾಹವನ್ನು ತುಂಬುತ್ತಿದ್ದವು.
ನಿಮ್ಮೊಡನೆ ಆಡದ ಮಾತುಗಳೇ ಇರಲಿಲ್ಲವೇನೋ?! ನಮ್ಮ ಪ್ರತಿ ಪ್ರಶ್ನೆಗೂ ನಿಮ್ಮ ಬಳಿ ಉತ್ತರವಿರದಿದ್ದರೂ, ಕೇಳುವ ಕಿವಿಗಳು ನಿಮ್ಮಲ್ಲಿ ಯಾವಾಗಲೂ ಇದ್ದವು.ನೀವೆಷ್ಟು ಶಾಂತವಾಗಿ ನಮ್ಮ ಮಾತುಗಳನ್ನು ಆಲಿಸುತ್ತಿದ್ದಿರೆಂದರೆ,ಎಷ್ಟೋ ಬಾರಿ ನಮಗೆ ನಿಮ್ಮಿಂದ ಉತ್ತರಪಡೆಯುವುದೇ ಮರೆತುಹೋಗಿ ಇನ್ನೊಂದಿಷ್ಟು ಪ್ರಶ್ನೆಗಳನ್ನು ನಿಮ್ಮ ಮುಂದಿಡುತ್ತಿದ್ದೆವು.ನಮ್ಮ ಮುಂದಿನ ಪ್ರಶ್ನೆಗಳಲ್ಲೇ ಹಿಂದಿನ ಪ್ರಶ್ನೆಗಳ ಉತ್ತರ ಹೊಳೆದು ಸಮಾದಾನ ಪಟ್ಟುಕೊಳ್ಳುತ್ತಿದ್ದೆವು.
ಕಥೆಗಳನ್ನು ದೇಹದ ಮೂಲಕವೂ,ಕವಿತೆಗಳನ್ನು ಕಣ್ಣುಗಳ ಮೂಲಕವೂ ನಮಗೆ ಹೇಳುವಾಗ ನಿಮ್ಮ ಇಡೀ ದೇಹ ನಮಗಾಗಿ ಇದೆಯೆಂದು ನಮಗನಿಸುತಿತ್ತು.
ನೀವು ಗುರುವನ್ನು ಮಗುವಿನ ಅತ್ಯಂತ ಹತ್ತಿರ ತಂದಿರಿ ಸರ್.ಎಷ್ಟು ಹತ್ತಿರವೆಂದರೆ,ನೀವು ನನ್ನೊಳಗೆ ಪ್ರತ್ಯೇಕಿಸಲಾರದಷ್ಟು ಬೆಸೆದುಹೋಗಿದ್ದೀರಿ-ನನಗೆ ಗೊತ್ತಿಲ್ಲದಂತೆ.

ಪ್ರೀತಿಯಿಂದ
ನಿಮ್ಮ ವಿದ್ಯಾರ್ಥಿ
ಉದಯ

5 ಸೆಪ್ಟಂಬರ್ 2013

Tuesday, 13 August 2013

ದೇವರ ಫೋಟೋ..


Monday, 24 June 2013

ದೀರ್ಘಾಯುಷ್ಮಾನ್‍ಭವ!


                ಮುಂದಿನ ಬಾರಿ ನಿಮ್ಮನ್ನು “ದೀರ್ಘಾಯುಷ್ಮಾನ್‍ಭವ” ಅಥವಾ “ದೀರ್ಘಸುಮಂಗಲೀಭವ” ಎಂದು ಮಹಭಾರತ, ರಾಮಾಯಣ ಇತ್ಯಾದಿ ಸಿರಿಯಲ್ಲುಗಳ ಶೈಲಿಯಲ್ಲಿ ಆಶೀರ್ವದಿಸಿದಾಗ ಒಂದಿಷ್ಟು ಮುಜುಗರವಾಗುವುದು ಬಿಟ್ಟು ಇನ್ನೂ ಒಂದು ಹೊಸ ಸಾಧ್ಯತೆಗೆ ಅವಕಾಶವಿದೆ. ಅದೇನೆಂದರೆ  ಆ ಆಶೀರ್ವಚನ  ಸತ್ಯವಾಗಲೂಬಹುದು!
                ಏಕೆಂದರೆ ದೀರ್ಘಾಯುಷ್ಯದ ರಹಸ್ಯವನ್ನು ವಿಜ್ಞಾನಿಗಳೀಗ ಬೇದಿಸಿ ಬಿಟ್ಟಿದ್ದಾರೆ! ಸಂತೋಷವಾಯ್ತು? ಆಗದೇ ಏನು? ದೀರ್ಘಾಯುಷ್ಯವನ್ನು ಪಡೆಯುವುದು ನಾವು-ನೀವೆಲ್ಲರೂ ಗುಟ್ಟಾಗಿ ಪೋಷಿಸಿಕೊಂಡು ಬಂದಿರುವ ಎರಡನೇ ಅತಿದೊಡ್ಡ ಕನಸು. ಮೊದಲನೆಯದು ಯಾವುದೆಂದು ನೀವು ಕೇಳಬೇಕಿಲ್ಲ, ನಾನೇ ಹೇಳುತ್ತೇನೆ.... ಅದೇನೂ ನಿಮಗೆ ಗೊತ್ತಿಲ್ಲದ್ದಲ್ಲ - ಸಾವನ್ನು ಗೆದ್ದು ಸದಾ ಬದುಕೇ ಇರಬೇಕೆಂಬ ಕನಸು. ಅಮೃತದ ಕಥೆ ಹುಟ್ಟಿಕೊಂಡಿದ್ದೇ ಈ ಕನಸಿನಿಂದಾಗಿ.
                ವೈದ್ಯಕೀಯ ವಿಜ್ಞಾನದಲ್ಲಾದ ಅನೇಕ ಸಂಶೋಧನೆಗಳು ಮಾನವನ ಸರಾಸರಿ ಜೀವಿತದ ಅವಧಿಯನ್ನು ವಿಶ್ವದೆಲ್ಲೆಡೆ ಬಹಳಷ್ಟು ಹೆಚ್ಚಿಸಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೂ ಆರೋಗ್ಯವಂತನೊಬ್ಬನ ಜೀವಿತಾವಧಿಯನ್ನು ಹೆಚ್ಚಿಸುವಂತಹ ಯಾವ ಸಂಶೋಧನೆಯೂ ಇದುವರೆಗೆ ಫಲಪ್ರದವಾಗಿರಲಿಲ್ಲ. ಅಮೇರಿಕಾದ ಟೆಕ್ಸಾಸ್ ವಿಶ್ವವಿದ್ಯಾನಿಲಯದ ಸಂಶೋಧಕರು ಈ ನಿಟ್ಟಿನಲ್ಲಿ ಒಂದು ದೊಡ್ಡ ಹೆಜ್ಜೆಯನ್ನಿಟ್ಟು ಇಡೀ ಜಗತ್ತು ಆಸೆಗಳಿಂದ ಅವರತ್ತ ನೋಡುವಂತೆ ಮಾಡಿದ್ದಾರೆ.  ಕೆಲ ವರ್ಷಗಳ ಹಿಂದೆ “ಸೈಯನ್ಸ್” ಪತ್ರಿಕೆಯ ಅಂತರ್ಜಾಲ ಸಂಚಿಕೆಯಲ್ಲಿ ಬಿಡುಗಡೆ ಮಾಡಿದ ವರದಿಯಲ್ಲಿ ಜೀವಿತಾವಧಿಯನ್ನು ಹೆಚ್ಚಿಸಬಲ್ಲ ನೈಸರ್ಗಿಕ ಹಾರ್ಮೋನೊಂದನ್ನು ಟೆಕ್ಸಾಸ್‍ನ ಡಾ| ಮಕಟೋ ಕುರೋಓ ಮತ್ತು ಅವರ ಸಹೋದ್ಯೋಗಿಗಳು ಪತ್ತೆ ಮಾಡಿರುವುದನ್ನು ಬಹಿರಂಗ ಪಡಿಸಲಾಗಿದೆ. ಪತ್ತೆಯಾದ ಈ ಹೊಸ ಹಾರ್ಮೋನಿಗೆ “ಕ್ಲೋಥೋ” ಎಂದು ನಾಮಕರಣ ಮಾಡಲಾಗಿದೆಯಂತೆ. ಹೆಸರು ಯಾವುದೇ ಇಟ್ಟಿದ್ದರೂ ಏನೂ ವ್ಯತ್ಯಾಸವಾಗುತ್ತಿರಲಿಲ್ಲ ಬಿಡಿ. “ಕ್ಲೋಥೋ” ಎಂಬುದು ಗ್ರೀಕ್ ಮಿಥಕಗಳಲ್ಲಿ ಮಾನವನ ವಯಸ್ಸನ್ನು ನಿರ್ಧರಿಸುವ ವಿಧಿ.
                ಅನೇಕ ಪ್ರಭೇದದ ಜೀವಿಗಳಲ್ಲಿ ಮೆದುಳು ಮತ್ತು ಮೂತ್ರ ಕೋಶಗಳಲ್ಲಿ ಉತ್ಪಾದಿಸಲ್ಪಟ್ಟು ನಂತರ ರಕ್ತ ಪ್ರವಾಹದಲ್ಲಿ ಸೋರಿಹೋಗುವ ಈ “ಕ್ಲೋಥೋ” ಎಂಬ ಚೋದಕ ದ್ರವ್ಯದ ಬೆನ್ನು ಹತ್ತಿಹೋದ ಕಥೆ ಯವುದೇ ಪತ್ತೆದಾರಿ ಕಾದಂಬರಿಗೂ ಕಡಿಮೆ ಇಲ್ಲದಷ್ಟು ರೋಚಕ.
                ಕ್ಲೋಥೋ ಚೋದಕವನ್ನು ಉತ್ಪಾದಿಸಲು ಕಾರಣವಾಗುವ ವಂಶವಾಹಿಯನ್ನು ಹೊಂದಿರದ ಇಲಿಯೊಂದನ್ನು ಪತ್ತೆ ಮಾಡಿದ ಸಂಶೋಧನಾ ತಂಡ ಆ ಇಲಿಗೆ ನಾಲ್ಕೇ ತಿಂಗಳಲ್ಲಿ ಅಕಾಲ ಮುದಿತನ ಪ್ರಾಪ್ತಿಯಾದ್ದನ್ನು ಗಮನಿಸಿತು. ಎರಡು ವರ್ಷಗಳವರÉಗೆ ಬದುಕ ಬೇಕಿದ್ದ ಆ ಇಲಿ ಕೇವಲ ಆರೇ ತಿಂಗಳಲ್ಲಿ ಇಹಲೋಕ ವ್ಯಾಪಾರ ಮುಗಿಸಿ ಟಾಟಾ ಹೇಳಿದಾಗ ಡಾ| ಮಕಟೋರಂತಹ ಗಂಟುಮುಖದ ವಿಜ್ಞಾನಿಯೂ ಕುಣಿದು ಕುಪ್ಪಳಿಸಿಬಿಟ್ಟರು. ಇಲಿಗೆ ಅಕಾಲ ಮರಣವಾದರೆ ಡಾ| ಮಕಟೋ ಏಕೆ ಕುಣಿಯಬೇಕೆಂಬ ಅನುಮಾನ ಉಂಟಾದರೆ ಈ ಲೇಖನದ ಮುಂದಿನ ಭಾಗವನ್ನು ನೀವು ಓದುವ ಅವಶ್ಯಕತೆಯೇ ಇಲ್ಲ.
ಇಲ್ಲವಾದಲ್ಲಿ ಡಾ| ಮಕಟೋ ಮತ್ತವರ ತಂಡ ಮುಂದೇನು ಮಾಡಿರಬಹುದೆಂಬುದನ್ನು ನೀವು ಊಹಿಸಬಲ್ಲಿರಿ.
                ಈ ತಂಡ ಆ ನಂತರ ವಂಶವಾಹಿಗಳನ್ನು ಕಡಿದು, ಕತ್ತರಿಸಿ, ಬಾಗಿಸಿ, ಬಗ್ಗಿಸಿ, ತಿರುಚಿ ಮತ್ತಿನ್ನೇನೋ ಮಾಡಿ ಅತ್ಯಧಿಕ ಪ್ರಮಾಣದಲ್ಲಿ ಕ್ಲೋಥೋ ಹಾರ್ಮೋನನ್ನು ಉತ್ಪಾದಿಸುವ ಇಲಿಗಳನ್ನು ಸೃಷ್ಟಿಸಿದರು. ಹೀಗೆ ನಮಗೆ ಬೇಕಾದಂತೆ ವಂಶವಾಹಿಗಳನ್ನು ರಿಪೇರಿ ಮಾಡುವುದೇ ಜೆನೆಟಿಕ್ ಇಂಜಿನಿಯರಿಂಗ್. ಹೀಗೆ ಸೃಷ್ಟಿಸಲ್ಪಟ್ಟ ಗಂಡು ಇಲಿಗಳ ಆಯಸ್ಸು ಶೇಕಡಾ 31 ರಷ್ಟು ಹೆಚ್ಚಿತಂತೆ, ಹೆಣ್ಣು ಇಲಿಗಳಿಗೆ ಸಾಮಾನ್ಯ ಹೆಣ್ಣು ಇಲಿಗಳಿಗಿಂತ ಶೇಕಡಾ 16ರಷ್ಟು ಹೆಚ್ಚಿನ ಆಯಸ್ಸನ್ನು ಪಡೆಯಲಷ್ಟೇ ಸಾಧ್ಯವಾಯಿತಂತೆ!.
                ಇನ್ನೇನು ದೀರ್ಘಾಯುಷ್ಯದ ಮಾತ್ರೆಗಳು ಮಿರಿಮಿರಿ ಮಿಂಚುವ ಹೊದಿಕೆಗಳಲ್ಲಿ ಅಡಗಿಕೊಂಡು ಮೆಡಿಕಲ್ ಸ್ಟೋರ್‍ಗಳಿಗೂ ಅನಂತರ ಮನೆ - ಮನೆಗೂ ಬಂದೇ ಬಿಡುತ್ತದೆ ಎಂದು ನೀವಂದುಕೊಳ್ಳುವ ಮೊದಲೇ ಕಹಿ ಸುದ್ಧಿಯೊಂದನ್ನು ಹೇಳುತ್ತೇನೆ. ಅದೆಷ್ಟು ಕಹಿಯೆಂದರೆ  ಸಿಹಿಯನ್ನು ಅಕ್ಷರಶಃ ನಮ್ಮಿಂದ ಕಸಿದುಕೊಳ್ಳುವಂತಹದು. ಕ್ಲೋಥೋ ಹಾರ್ಮೋನಿನ ಪ್ರಮಾಣ ದೇಹದಲ್ಲಿ ಹೆಚ್ಚಿದರೆ ಸಕ್ಕರೆ ಕಾಯಿಲೆಯುಂಟಾಗುವ ಸಾಧ್ಯತೆಯೂ ಹೆಚ್ಚಂತೆ! ಏಕೆಂದರೆ ಈ ಕ್ಲೋಥೋ ಹಾರ್ಮೋನು ಇನ್ಸುಲಿನ್ ನಿರೋಧಕವಂತೆ.
                ನೂರಕ್ಕಿಂತಲೂ ಹೆಚ್ಚು ವರ್ಷದಿಂದ ಈ ಭೂಮಿಯ ಮೇಲೆ ಬದುಕಿಯೇ ಇರುವ ದೀರ್ಘಾಯುಷಿಗಳಲ್ಲಿ ಈ ಕ್ಲೋಥೋ ಹಾರ್ಮೋನಿನ ಪ್ರಮಾಣ ಎಷ್ಟಿದೆ ಎನ್ನುವುದು ಪತ್ತೆ ಮಾಡುವಲ್ಲಿ ಈಗಾಗಲೇ ಸಂಶೋಧನಾ ತಂಡ ನಿರತವಾಗಿದೆ. ಕ್ಲೋಥೋ ಹಾರ್ಮೋನಿನ ಸ್ರವಿಸುವಿಕೆಯ ಪ್ರಮಾಣವನ್ನು ಹೆಚ್ಚುವಂತೆ ಮಾಡುವುದು ಅಥವಾ ಬಾಹ್ಯ ಮೂಲದಿಂದ ಇದನ್ನು ಮಾನವ ದೇಹಕ್ಕೆ ಸೇರಿಸಿ ಆಯುಷ್ಯವನ್ನು ವೃದ್ಧಿಯಾಗುವಂತೆ ಮಾಡುವುದು ಈ ತಂಡದ ಮುಂದಿನ ಹೆಜ್ಜೆ.
                ಇದು ಸಾಧ್ಯವಾದರೆ ಮುಂದಿನ ತಲೆ ಮಾರಿನ ಜನರ ಆಯುಷ್ಯ ವೃದ್ಧಿಸಬಹುದು. ಆ ಹೆಚ್ಚಿದ ಆಯುಷ್ಯವಿಡೀ ಸಕ್ಕರೆ ಕಾಯಿಲೆಯಿಂದ ಬಳಲುವಂತಾಗಲೂಬಹುದು!.


-ಉದಯ ಗಾಂವಕಾರ

(ಜನಪ್ರತಿನಿಧಿ ವಾರಪತ್ರಿಕೆಯ ಜನ ವಿಜ್ಞಾನ ಅಂಕಣದಲ್ಲಿ  ಬಹಳ ಹಿಂದೆ ಪ್ರಕಟವಾದ ಲೇಖನ.ಇನ್ನುಳಿದ ಸುಮಾರು ನೂರಕ್ಕಿಂತಲೂ ಹೆಚ್ಚು ಲೇಖನಗಳನ್ನು ಸದ್ಯದಲ್ಲೇ ಈ ಬ್ಲಾಗಿಗೆ ಹಂತ-ಹಂತವಾಗಿ  post  ಮಾಡಲಾಗುವುದು.)


Monday, 10 June 2013

ವೈದ್ಯನಾಗಲು ಬಯಸಿರುವ ರಂಜಿತಕುಮಾರ

 


ಮನೆಯಲ್ಲಿ ಬಡತನವಿದೆ.ಅಪ್ಪ-ಅಮ್ಮ ಕೂಲಿ ಮಾಡುತ್ತಾರೆ.ಆದರೆ,ಗೌರವದ ಬದುಕನ್ನು ನಡೆಸುತ್ತಿದ್ದಾರೆ.ಮಕ್ಕಳನ್ನು ಕಷ್ಟಪಟ್ಟು ಓದಿಸುತ್ತಿದ್ದಾರೆ.ಒಬ್ಬ ಮಗನ ಹೆಸರು ರಂಜಿತಕುಮಾರ.ಕನ್ನಡ ಮಾಧ್ಯಮದಲ್ಲೇ ಎಸ್ ಎಸ್ ಎಲ್ ಸಿ ವರೆಗೆ ಓದಿದ್ದು,ಪಿ ಯುಸಿ ವಿಜ್ಞಾನ ನಾವುಂದದ ಸರ್ಕಾರಿ ಕಾಲೇಜಿನಲ್ಲಿ.ದ್ವಿತೀಯ ಪಿ ಯು ನಲ್ಲಿ 568 ಅಂಕಗಳು(93.28%) ಭೌತಶಾಸ್ತ್ರ 99,ರಸಾಯನಶಾಸ್ತ್ರ 100,ಗಣಿತ 97,ಜೀವಶಾಸ್ತ್ರ 94..
ಕನ್ನಡ ಮಾಧ್ಯಮದಲ್ಲಿ ಓದಿದವರಲ್ಲಿ  ಈ ತಾಲೂಕಿಗೇ ಪ್ರಥಮಿಗ. ವೈದ್ಯನಾಗಬೇಕೆಂಬ ಈತನ ಆಸೆಯನ್ನು ಸಹೃದಯಿಗಳು ಪೋಷಿಸಬಹುದೇ?    ಅಭಿನಂದನೆ ತಿಳಿಸುವುದಿದ್ದರೆ ಈ ನಂಬರಿಗೆ ಕರೆಮಾಡಿ-7760348194          ಮಾಹಿತಿ ಜನಪ್ರತಿನಿಧಿ 6/6/2013





































Tuesday, 23 April 2013

ನೆನಪುಗಳು ಚಿತ್ರವಾಗಿ..

ಕಾ.ತ ಚಿಕ್ಕಣ್ಣ ಮತ್ತು ಗೀತಾ ನಾಗಭೂಷಣ ನಮ್ಮ ಮನೆಗೆ ಬಂದಿದ್ದಾಗ ..ಬಹಳ ವರ್ಷ ಹಿಂದಿನ ನೆನಪು.




 ಸಂಧ್ಯಾ,ಮಗಳು ಪ್ರಾರ್ಥನಾ ,ತಂಗಿಯ ಮಗಳು ಸಾಗರಿಯೊಂದಿಗೆ


 ಕಿಟಕಿಯಾಚೆಯ ನೋಟ-ಪ್ರಾರ್ಥನಾ
ಪ್ರಾರ್ಥನಾಳ ಫ್ಯಾನ್ಸಿ ಡ್ರೆಸ್


ಸಮುದಾಯದ ಒಂದು ಕಾರ್ಯಕ್ರಮಕ್ಕಾಗಿ ನಾನು ರಚಿಸಿದ ಕಲಾಕೃತಿ.


 ಡಿ.ವೈ.ಎಫ್.ಐ ಕಾರ್ಯಕ್ರಮಕ್ಕಾಗಿ ರಚಿಸಿದ ಈ ಹಿನ್ನೆಲೆ ಹೇಗಿದೆ?

ಪ್ರಾರ್ಥನಾಳ ಇತ್ತೀಚಿನ ಫೋಟೋ






ನೆನಪುಗಳು ಚಿತ್ರವಾಗಿ..

ಕಾ.ತ ಚಿಕ್ಕಣ್ಣ ಮತ್ತು ಗೀತಾ ನಾಗಭೂಷಣ ನಮ್ಮ ಮನೆಗೆ ಬಂದಿದ್ದಾಗ ..ಬಹಳ ವರ್ಷ ಹಿಂದಿನ ನೆನಪು.




 ಸಂಧ್ಯಾ,ಮಗಳು ಪ್ರಾರ್ಥನಾ ,ತಂಗಿಯ ಮಗಳು ಸಾಗರಿಯೊಂದಿಗೆ


 ಕಿಟಕಿಯಾಚೆಯ ನೋಟ-ಪ್ರಾರ್ಥನಾ
ಪ್ರಾರ್ಥನಾಳ ಫ್ಯಾನ್ಸಿ ಡ್ರೆಸ್


ಸಮುದಾಯದ ಒಂದು ಕಾರ್ಯಕ್ರಮಕ್ಕಾಗಿ ನಾನು ರಚಿಸಿದ ಕಲಾಕೃತಿ.


 ಡಿ.ವೈ.ಎಫ್.ಐ ಕಾರ್ಯಕ್ರಮಕ್ಕಾಗಿ ರಚಿಸಿದ ಈ ಹಿನ್ನೆಲೆ ಹೇಗಿದೆ?
ಪ್ರಾರ್ಥನಾಳ ಇತ್ತೀಚಿನ ಫೋಟೋ