ಮುಂದಿನ ಬಾರಿ ನಿಮ್ಮನ್ನು
“ದೀರ್ಘಾಯುಷ್ಮಾನ್‍ಭವ” ಅಥವಾ “ದೀರ್ಘಸುಮಂಗಲೀಭವ” ಎಂದು ಮಹಭಾರತ, ರಾಮಾಯಣ
ಇತ್ಯಾದಿ ಸಿರಿಯಲ್ಲುಗಳ ಶೈಲಿಯಲ್ಲಿ ಆಶೀರ್ವದಿಸಿದಾಗ ಒಂದಿಷ್ಟು ಮುಜುಗರವಾಗುವುದು ಬಿಟ್ಟು ಇನ್ನೂ ಒಂದು
ಹೊಸ ಸಾಧ್ಯತೆಗೆ ಅವಕಾಶವಿದೆ. ಅದೇನೆಂದರೆ ಆ ಆಶೀರ್ವಚನ ಸತ್ಯವಾಗಲೂಬಹುದು!
ಏಕೆಂದರೆ ದೀರ್ಘಾಯುಷ್ಯದ ರಹಸ್ಯವನ್ನು
ವಿಜ್ಞಾನಿಗಳೀಗ ಬೇದಿಸಿ ಬಿಟ್ಟಿದ್ದಾರೆ! ಸಂತೋಷವಾಯ್ತು?
ಆಗದೇ ಏನು? ದೀರ್ಘಾಯುಷ್ಯವನ್ನು ಪಡೆಯುವುದು
ನಾವು-ನೀವೆಲ್ಲರೂ ಗುಟ್ಟಾಗಿ ಪೋಷಿಸಿಕೊಂಡು ಬಂದಿರುವ ಎರಡನೇ ಅತಿದೊಡ್ಡ
ಕನಸು. ಮೊದಲನೆಯದು ಯಾವುದೆಂದು ನೀವು ಕೇಳಬೇಕಿಲ್ಲ, ನಾನೇ
ಹೇಳುತ್ತೇನೆ.... ಅದೇನೂ ನಿಮಗೆ ಗೊತ್ತಿಲ್ಲದ್ದಲ್ಲ
- ಸಾವನ್ನು ಗೆದ್ದು ಸದಾ ಬದುಕೇ
ಇರಬೇಕೆಂಬ ಕನಸು. ಅಮೃತದ ಕಥೆ ಹುಟ್ಟಿಕೊಂಡಿದ್ದೇ
ಈ ಕನಸಿನಿಂದಾಗಿ.
ವೈದ್ಯಕೀಯ ವಿಜ್ಞಾನದಲ್ಲಾದ ಅನೇಕ ಸಂಶೋಧನೆಗಳು ಮಾನವನ
ಸರಾಸರಿ ಜೀವಿತದ ಅವಧಿಯನ್ನು ವಿಶ್ವದೆಲ್ಲೆಡೆ
ಬಹಳಷ್ಟು ಹೆಚ್ಚಿಸಿದೆ
ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೂ ಆರೋಗ್ಯವಂತನೊಬ್ಬನ
ಜೀವಿತಾವಧಿಯನ್ನು ಹೆಚ್ಚಿಸುವಂತಹ ಯಾವ ಸಂಶೋಧನೆಯೂ ಇದುವರೆಗೆ
ಫಲಪ್ರದವಾಗಿರಲಿಲ್ಲ. ಅಮೇರಿಕಾದ ಟೆಕ್ಸಾಸ್ ವಿಶ್ವವಿದ್ಯಾನಿಲಯದ ಸಂಶೋಧಕರು ಈ ನಿಟ್ಟಿನಲ್ಲಿ ಒಂದು
ದೊಡ್ಡ ಹೆಜ್ಜೆಯನ್ನಿಟ್ಟು ಇಡೀ ಜಗತ್ತು ಆಸೆಗಳಿಂದ
ಅವರತ್ತ ನೋಡುವಂತೆ ಮಾಡಿದ್ದಾರೆ. ಕೆಲ ವರ್ಷಗಳ ಹಿಂದೆ “ಸೈಯನ್ಸ್” ಪತ್ರಿಕೆಯ
ಅಂತರ್ಜಾಲ ಸಂಚಿಕೆಯಲ್ಲಿ ಬಿಡುಗಡೆ ಮಾಡಿದ ವರದಿಯಲ್ಲಿ
ಜೀವಿತಾವಧಿಯನ್ನು ಹೆಚ್ಚಿಸಬಲ್ಲ ನೈಸರ್ಗಿಕ ಹಾರ್ಮೋನೊಂದನ್ನು ಟೆಕ್ಸಾಸ್ನ ಡಾ| ಮಕಟೋ
ಕುರೋಓ ಮತ್ತು ಅವರ ಸಹೋದ್ಯೋಗಿಗಳು
ಪತ್ತೆ ಮಾಡಿರುವುದನ್ನು ಬಹಿರಂಗ ಪಡಿಸಲಾಗಿದೆ. ಪತ್ತೆಯಾದ
ಈ ಹೊಸ ಹಾರ್ಮೋನಿಗೆ
“ಕ್ಲೋಥೋ”
ಎಂದು ನಾಮಕರಣ ಮಾಡಲಾಗಿದೆಯಂತೆ. ಹೆಸರು
ಯಾವುದೇ ಇಟ್ಟಿದ್ದರೂ ಏನೂ ವ್ಯತ್ಯಾಸವಾಗುತ್ತಿರಲಿಲ್ಲ ಬಿಡಿ. “ಕ್ಲೋಥೋ” ಎಂಬುದು
ಗ್ರೀಕ್ ಮಿಥಕಗಳಲ್ಲಿ ಮಾನವನ ವಯಸ್ಸನ್ನು ನಿರ್ಧರಿಸುವ
ವಿಧಿ.
ಅನೇಕ ಪ್ರಭೇದದ ಜೀವಿಗಳಲ್ಲಿ
ಮೆದುಳು ಮತ್ತು ಮೂತ್ರ ಕೋಶಗಳಲ್ಲಿ
ಉತ್ಪಾದಿಸಲ್ಪಟ್ಟು ನಂತರ ರಕ್ತ ಪ್ರವಾಹದಲ್ಲಿ
ಸೋರಿಹೋಗುವ ಈ “ಕ್ಲೋಥೋ” ಎಂಬ ಚೋದಕ ದ್ರವ್ಯದ
ಬೆನ್ನು ಹತ್ತಿಹೋದ ಕಥೆ ಯವುದೇ ಪತ್ತೆದಾರಿ
ಕಾದಂಬರಿಗೂ ಕಡಿಮೆ ಇಲ್ಲದಷ್ಟು ರೋಚಕ.
ಕ್ಲೋಥೋ ಚೋದಕವನ್ನು ಉತ್ಪಾದಿಸಲು
ಕಾರಣವಾಗುವ ವಂಶವಾಹಿಯನ್ನು ಹೊಂದಿರದ ಇಲಿಯೊಂದನ್ನು ಪತ್ತೆ
ಮಾಡಿದ ಸಂಶೋಧನಾ ತಂಡ ಆ
ಇಲಿಗೆ ನಾಲ್ಕೇ ತಿಂಗಳಲ್ಲಿ ಅಕಾಲ
ಮುದಿತನ ಪ್ರಾಪ್ತಿಯಾದ್ದನ್ನು ಗಮನಿಸಿತು. ಎರಡು ವರ್ಷಗಳವರÉಗೆ
ಬದುಕ ಬೇಕಿದ್ದ ಆ ಇಲಿ
ಕೇವಲ ಆರೇ ತಿಂಗಳಲ್ಲಿ ಇಹಲೋಕ
ವ್ಯಾಪಾರ ಮುಗಿಸಿ ಟಾಟಾ ಹೇಳಿದಾಗ
ಡಾ| ಮಕಟೋರಂತಹ ಗಂಟುಮುಖದ ವಿಜ್ಞಾನಿಯೂ ಕುಣಿದು ಕುಪ್ಪಳಿಸಿಬಿಟ್ಟರು. ಇಲಿಗೆ
ಅಕಾಲ ಮರಣವಾದರೆ ಡಾ| ಮಕಟೋ ಏಕೆ
ಕುಣಿಯಬೇಕೆಂಬ ಅನುಮಾನ ಉಂಟಾದರೆ ಈ
ಲೇಖನದ ಮುಂದಿನ ಭಾಗವನ್ನು ನೀವು
ಓದುವ ಅವಶ್ಯಕತೆಯೇ ಇಲ್ಲ.
ಇಲ್ಲವಾದಲ್ಲಿ
ಡಾ| ಮಕಟೋ ಮತ್ತವರ ತಂಡ
ಮುಂದೇನು ಮಾಡಿರಬಹುದೆಂಬುದನ್ನು ನೀವು ಊಹಿಸಬಲ್ಲಿರಿ.
ಈ ತಂಡ ಆ
ನಂತರ ವಂಶವಾಹಿಗಳನ್ನು ಕಡಿದು, ಕತ್ತರಿಸಿ, ಬಾಗಿಸಿ,
ಬಗ್ಗಿಸಿ, ತಿರುಚಿ ಮತ್ತಿನ್ನೇನೋ ಮಾಡಿ
ಅತ್ಯಧಿಕ ಪ್ರಮಾಣದಲ್ಲಿ ಕ್ಲೋಥೋ ಹಾರ್ಮೋನನ್ನು ಉತ್ಪಾದಿಸುವ
ಇಲಿಗಳನ್ನು ಸೃಷ್ಟಿಸಿದರು. ಹೀಗೆ ನಮಗೆ ಬೇಕಾದಂತೆ
ವಂಶವಾಹಿಗಳನ್ನು ರಿಪೇರಿ ಮಾಡುವುದೇ ಜೆನೆಟಿಕ್
ಇಂಜಿನಿಯರಿಂಗ್. ಹೀಗೆ ಸೃಷ್ಟಿಸಲ್ಪಟ್ಟ ಗಂಡು
ಇಲಿಗಳ ಆಯಸ್ಸು ಶೇಕಡಾ 31 ರಷ್ಟು
ಹೆಚ್ಚಿತಂತೆ, ಹೆಣ್ಣು ಇಲಿಗಳಿಗೆ ಸಾಮಾನ್ಯ
ಹೆಣ್ಣು ಇಲಿಗಳಿಗಿಂತ ಶೇಕಡಾ 16ರಷ್ಟು ಹೆಚ್ಚಿನ
ಆಯಸ್ಸನ್ನು ಪಡೆಯಲಷ್ಟೇ ಸಾಧ್ಯವಾಯಿತಂತೆ!.
ಇನ್ನೇನು ದೀರ್ಘಾಯುಷ್ಯದ ಮಾತ್ರೆಗಳು
ಮಿರಿಮಿರಿ ಮಿಂಚುವ ಹೊದಿಕೆಗಳಲ್ಲಿ ಅಡಗಿಕೊಂಡು
ಮೆಡಿಕಲ್ ಸ್ಟೋರ್ಗಳಿಗೂ ಅನಂತರ
ಮನೆ - ಮನೆಗೂ ಬಂದೇ ಬಿಡುತ್ತದೆ
ಎಂದು ನೀವಂದುಕೊಳ್ಳುವ ಮೊದಲೇ ಕಹಿ ಸುದ್ಧಿಯೊಂದನ್ನು
ಹೇಳುತ್ತೇನೆ. ಅದೆಷ್ಟು ಕಹಿಯೆಂದರೆ ಸಿಹಿಯನ್ನು ಅಕ್ಷರಶಃ ನಮ್ಮಿಂದ ಕಸಿದುಕೊಳ್ಳುವಂತಹದು.
ಕ್ಲೋಥೋ ಹಾರ್ಮೋನಿನ ಪ್ರಮಾಣ ದೇಹದಲ್ಲಿ ಹೆಚ್ಚಿದರೆ
ಸಕ್ಕರೆ ಕಾಯಿಲೆಯುಂಟಾಗುವ ಸಾಧ್ಯತೆಯೂ ಹೆಚ್ಚಂತೆ! ಏಕೆಂದರೆ ಈ ಕ್ಲೋಥೋ
ಹಾರ್ಮೋನು ಇನ್ಸುಲಿನ್ ನಿರೋಧಕವಂತೆ.
ನೂರಕ್ಕಿಂತಲೂ ಹೆಚ್ಚು ವರ್ಷದಿಂದ ಈ
ಭೂಮಿಯ ಮೇಲೆ ಬದುಕಿಯೇ ಇರುವ
ದೀರ್ಘಾಯುಷಿಗಳಲ್ಲಿ ಈ ಕ್ಲೋಥೋ ಹಾರ್ಮೋನಿನ
ಪ್ರಮಾಣ ಎಷ್ಟಿದೆ ಎನ್ನುವುದು ಪತ್ತೆ
ಮಾಡುವಲ್ಲಿ ಈಗಾಗಲೇ ಸಂಶೋಧನಾ ತಂಡ
ನಿರತವಾಗಿದೆ. ಕ್ಲೋಥೋ ಹಾರ್ಮೋನಿನ ಸ್ರವಿಸುವಿಕೆಯ
ಪ್ರಮಾಣವನ್ನು ಹೆಚ್ಚುವಂತೆ ಮಾಡುವುದು ಅಥವಾ ಬಾಹ್ಯ ಮೂಲದಿಂದ
ಇದನ್ನು ಮಾನವ ದೇಹಕ್ಕೆ ಸೇರಿಸಿ
ಆಯುಷ್ಯವನ್ನು ವೃದ್ಧಿಯಾಗುವಂತೆ ಮಾಡುವುದು ಈ ತಂಡದ ಮುಂದಿನ
ಹೆಜ್ಜೆ.
ಇದು ಸಾಧ್ಯವಾದರೆ ಮುಂದಿನ
ತಲೆ ಮಾರಿನ ಜನರ ಆಯುಷ್ಯ
ವೃದ್ಧಿಸಬಹುದು. ಆ ಹೆಚ್ಚಿದ ಆಯುಷ್ಯವಿಡೀ
ಸಕ್ಕರೆ ಕಾಯಿಲೆಯಿಂದ ಬಳಲುವಂತಾಗಲೂಬಹುದು!.
-ಉದಯ ಗಾಂವಕಾರ
(ಜನಪ್ರತಿನಿಧಿ ವಾರಪತ್ರಿಕೆಯ ಜನ ವಿಜ್ಞಾನ ಅಂಕಣದಲ್ಲಿ ಬಹಳ ಹಿಂದೆ ಪ್ರಕಟವಾದ ಲೇಖನ.ಇನ್ನುಳಿದ ಸುಮಾರು ನೂರಕ್ಕಿಂತಲೂ ಹೆಚ್ಚು ಲೇಖನಗಳನ್ನು ಸದ್ಯದಲ್ಲೇ ಈ ಬ್ಲಾಗಿಗೆ ಹಂತ-ಹಂತವಾಗಿ post ಮಾಡಲಾಗುವುದು.)
-ಉದಯ ಗಾಂವಕಾರ
(ಜನಪ್ರತಿನಿಧಿ ವಾರಪತ್ರಿಕೆಯ ಜನ ವಿಜ್ಞಾನ ಅಂಕಣದಲ್ಲಿ ಬಹಳ ಹಿಂದೆ ಪ್ರಕಟವಾದ ಲೇಖನ.ಇನ್ನುಳಿದ ಸುಮಾರು ನೂರಕ್ಕಿಂತಲೂ ಹೆಚ್ಚು ಲೇಖನಗಳನ್ನು ಸದ್ಯದಲ್ಲೇ ಈ ಬ್ಲಾಗಿಗೆ ಹಂತ-ಹಂತವಾಗಿ post ಮಾಡಲಾಗುವುದು.)
No comments:
Post a Comment