Thursday, 21 March 2019

ನಮ್ಮ ಅಧಿಕಾರ ಚಲಾಯಿಸೋಣ ಮತ್ತು ನಮ್ಮ ಕರ್ತವ್ಯ ಮೆರೆಯೋಣ.

1
ಶ್ರೀ ಭಾಸ್ಕರ ಕೊಗ್ಗ ಕಾಮತರು ಸಾಂಪ್ರದಾಯಿಕ ಯಕ್ಷಗಾನ ಪದ್ಯದ ಮೂಲಕ ತಮ್ಮ ಯಕ್ಷಗಾನ ಗೊಂಬೆಗಳ ಕುಣಿತವನ್ನು ಮಾಡಿಸುತ್ತಾ ರಂಗಕ್ಕೆ ಆಗಮಿಸುವರು.
ವಿಡಿಯೋ ದೃಶ್ಯೀಕರಣ ಗೊಂಬೆಗಳನ್ನು ಕೇಂದ್ರೀಕರಿಸುವುದು. ನಿಧಾನವಾಗಿ ಇಡಿಯ ರಂಗಸ್ಥಳದ ನೋಟವನ್ನು ಒಳಗೊಳ್ಳುವುದು.
(30 ಸೆಕೆಂಡುಗಳವರೆಗೆ ಕುಣಿತ ಮುಂದುವರಿಯುವದು ಮತ್ತು ನಿಧಾನವಾಗಿ ಶ್ರೀ ಭಾಸ್ಕರ ಕೊಗ್ಗ ಕಾಮತರನ್ನು ಕೇಂದ್ರೀಕರಿಸುವುದು. ಹಿನ್ನೆಲೆ ಧ್ವನಿ ನಿಧಾನವಾಗಿ ಕುಂದುತ್ತಾ ಕುಣಿತದ ದೃಶ್ಯ ಮಾತ್ರ ಕಾಣಿಸುವುದು.)
ಹಿನ್ನೆಲೆಯಲ್ಲಿ ಭಾಸ್ಕರ ಕಾಮತರ ಪರಿಚಯ ನೀಡಲಾಗುವುದು-
ಶ್ರೀ ಭಾಸ್ಕರ ಕೊಗ್ಗ ಕಾಮತ್. ಉಪ್ಪಿಕುದ್ರು ಯಕ್ಷಗಾನ ಗೊಂಬೆಯಾಟದ ಪರಂಪರೆಯನ್ನು ಇಂದಿಗೂ ಜೀವಂತವಾಗಿಟ್ಟುಕೊಂಡಿರುವ ಸಾಧಕ. ತನ್ನ ಗೊಂಬೆಗಳ ಜೊತೆ ದೇಶ ವಿದೇಶಗಳನ್ನು ಸುತ್ತಿರುವ ಕಾಮತರು ಕುಂದಾಪುರ ತಾಲೂಕಿನ ಉಪ್ಪಿನಕುದ್ರುವಿನಲ್ಲಿ ಗೊಂಬೆಮನೆ ಎಂಬ ಗೊಂಬೆಯಾಟದ ಶಾಲೆಯನ್ನು ನಡೆಸುತ್ತಿರುವರು.
ನಿಧಾನವಾಗಿ ಭಾಸ್ಕರ ಕಾಮತರು ಕ್ಲೋಸ್ ಅಪ್ ನಲ್ಲಿ ತೆರೆಯ ಮೇಲೆ ಕಾಣಿಸಿಕೊಳ್ಳುವರು ಮತ್ತು ಸ್ವೀಪ್ ಸಂದೇಶವನ್ನು ನೀಡುವರು)
-
ನಮಸ್ಕಾರ
ಮತದಾನವು ಪ್ರತಿಯೊಬ್ಬ ನಾಗರೀಕನ ಆದ್ಯ ಕರ್ತವ್ಯ. ಮತದಾನದಲ್ಲಿ ಭಾಗಿಯಾಗದೆ ಇರುವುದು ನಮ್ಮನ್ನೇ ನಾವು ವಂಚಿಸಿದ ಹಾಗೆ. ಪ್ರಜಾಪ್ರಭುತ್ವದ ಹಬ್ಬವಾದ ಮತದಾನದಲ್ಲಿ ನಾವೆಲ್ಲರೂ ಪಾಲ್ಗೊಳ್ಳೋಣ. ನಮ್ಮ ಅಧಿಕಾರ ಚಲಾಯಿಸೋಣ ಮತ್ತು ನಮ್ಮ ಕರ್ತವ್ಯ ಮೆರೆಯೋಣ. ಪ್ರಜಾಪ್ರಭುತ್ವವನ್ನು ಅರ್ಥಪೂರ್ಣಗೊಳಿಸೋಣ.
(ಚುನಾವಣಾ ದಿನಾಂಕ, ಸಮಯ ಮತ್ತು ಸ್ವೀಪ್ ಲೋಗೋ, ಚುನಾವಣಾ ಆಯೋಗದ ವೆಬ್ ವಿಳಾಸ ತೆರೆಯ ಮೇಲೆ ಮೂಡುವುದು.)
_____________________________________________________________________________________
ಕಾಡಿನ ರಾಜ ಸಿಂಹದ ರಾಜಸಭೆ- ಒಡ್ಡೋಲಗದ ಮೂಲಕ ಆರಂಭವಾಗುವುದು.
ಹಸಿರ ಸಿರಿ ಕಾಡಿಗೆ ಕೈಮುಗಿದು
ಬಂದನಾ ಸಿಂಹರಾಜನು
ಘನ ಗಾಂಭೀರ್ಯದಲಿ
ಪೂರ್ವದಿಂ ಪಶ್ಚಿಮಕೆ
ಉತ್ತರಾಧಿ ದಕ್ಷಿಣಕೆ
ಹಬ್ಬಿದಾ ಮಲೆ, ಕಡು ಕಾಡಿನೊಳಗೆ
ಜೀವಿಪ ಮೃಗ ಖಗಗಳೆಲ್ಲ
ಬಂದು ಸೇರಿದವು ಸಿಂಹ ದುರ್ಗದಲಿ||

ಪ್ರಾಣಿಗಳು: ಮಹಾರಾಜರಿಗೆ ಜಯವಾಗಲಿ|
ರಾಜ(ಸಿಂಹ): ಎಲ್ಲರಿಗೂ ವಂದನೆಗಳು. ನೀವೆಲ್ಲರೂ ಸೇರಿ ನನ್ನ ಮೇಲೆ ನಂಬಿಕೆಯಿಟ್ಟು ಕಾಡಿನ ರಾಜನನ್ನಾಗಿ ಆರಿಸಿ ಆರಿಸಿದ್ದೀರಿ. ನಿಮಗೆಲ್ಲರಿಗೂ ಧನ್ಯವಾದಗಳು.
ಎಲ್ಲ ಪ್ರಾಣಿಗಳು: ನೀವು ಆ ಹುದ್ದೆಗೆ ಅರ್ಹರು ಮಹಾಸ್ವಾಮಿ.
ರಾಜ: ಮತ್ತೊಮ್ಮೆ ನಿಮಗೆಲ್ಲ ಧನ್ಯವಾದಗಳು. (ಮಂತ್ರ್ರಿಗಳ ಕಡೆ ತಿರುಗಿ) ಮಂತ್ರಿಗಳೇ ಏನಾದರೂ ವಿಶೇಷ ಘಟನೆಗಳು ವರದಿಯಾಗಿವೆಯೇ?
ಮಂತಿ(ಆಮೆ)್ರ: ಹೌದು ಸ್ವಾಮಿ. ಒಂದು ವಿಶೇಷ ಸುದ್ದಿಯನ್ನು ನಮ್ಮ ಧೂತನು ನಾಡಿನಿಂದ ತಂದಿರುವನು. ಅವನ ಮುಖದಿಂದಲೇ ಆ ಸುದ್ದಿಯನ್ನು ತಾವು ಕೇಳುವಂತವರಾಗಿ.
ರಾಜ: ಕರೆಯಿರಿ ಆ ಧೂತನನ್ನು..
ಧೂತ(ಕುದುರೆ): ಸ್ವಾಮಿ, ಸುದ್ದಿ ತಂದಿರುವೆ
ಪದ್ಯ:
ಸುದ್ದಿ ತಂದಿರುವೆ ನಾನು ಸ್ವಾಮಿದೇವಾ
ಸುದ್ದಿ ತಂದಿರುವೆ ಧಣಿಯೇ ಸ್ವಾಮಿದೇವಾ || ಪ ||
ಕಾಡಿಗೆಲ್ಲ ಹೇಳಲೆಂದು
ನಾಡಿನಿಂದ ಓಡಿಬಂದು
ಬೀಡುಗಳನು ಗೋಡೆಗಳನು
ದಾಟಿ ಬಂದೆ ಸ್ವಾಮಿ
ಸುದ್ದಿ ತಂದಿರುವೆ ನಾನು ಸ್ವಾಮಿದೇವಾ
ಸುದ್ದಿ ತಂದಿರುವೆ ಧಣಿಯೇ ಸ್ವಾಮಿದೇವಾ || ಪ ||
ನಾಡ ಜನರ ಹಬ್ಬವಂತೆ
ಪ್ರತಿನಿಧಿಯ ಆಯ್ಕೆಯಂತೆ
ತಮ್ಮ ಕನಸು, ತಮ್ಮ ಯೋಚನೆ
ತಾವೇ ನನಸು ಮಾಡ್ತಾರಂತೆ
ಸುದ್ದಿ ತಂದಿರುವೆ ನಾನು ಸ್ವಾಮಿದೇವಾ
ಸುದ್ದಿ ತಂದಿರುವೆ ಧಣಿಯೇ ಸ್ವಾಮಿದೇವಾ || ಪ ||
ಧೂತ: ಸ್ವಾಮಿ, ನಾಡಿನಲ್ಲಿ ಚುನಾವಣೆ ಬರ್ತಿದಿಯಂತೆ, ಜನರು ತಮ್ಮ ಮತವನ್ನು ಹಾಕುವ ಮೂಲಕ ತಮ್ಮ ಪ್ರತಿನಿಧಿಯನ್ನು ಆರಿಸುವರಂತೆ.
ರಾಜ: ಓಹೋ ಇದು ಶುಭ ವಿಚಾರ. ನಮ್ಮ ಸಂದೇಶವನ್ನು ನಾಡಿನ ಜನರಿಗೆಲ್ಲ ತಲುಪಿಸಿ.
     ಈ ಚುನಾವಣೆ ಅರ್ಥಪೂರ್ಣವಾಗಬೇಕಾದರೆ ನಾಡಿನ ಎಲ್ಲ ಅರ್ಹ ಮತದಾರರೂ ಮತ ಚಲಾಯಿಸಬೇಕು. ಮತಚಲಾಯಿಸುವಾಗ ಹಣ, ಜಾತಿ, ಭಾಷೆ, ಧರ್ಮ ಮತ್ತಿತರ ಪ್ರಲೋಭನೆಗೆ ಒಳಗಾಗಬಾರದು. ಮತದಾನ ಎಲ್ಲ ಪ್ರಜೆಗಳ ಪವಿತ್ರವಾದ ಕರ್ತವ್ಯ
ಸರ್ವರಿಗೂ ಸನ್ಮಂಗಳವಾಗಲಿ!
(ಚುನಾವಣಾ ದಿನಾಂಕ, ಸಮಯ ಮತ್ತು ಸ್ವೀಪ್ ಲೋಗೋ, ಚುನಾವಣಾ ಆಯೋಗದ ವೆಬ್ ವಿಳಾಸ ತೆರೆಯ ಮೇಲೆ ಮೂಡುವುದು.)

3
ಇಂಡಿಯನ್ ಪಪೆಟ್ ಹಾಡುತ್ತಾ ಕುಣಿಯುತ್ತಾ ರಸ್ತೆಯ ಮೇಲೆ ಬರುತ್ತಿದೆ.  ರಸ್ತೆಯಲ್ಲಿ ಕುದುರೆ ಸವಾರ ಎದುರಾಗುತ್ತಾನೆ.
ಸವಾರ: ಎಂಥಾ ಹಾಳ್ಬಿದ್ ರಸ್ತೆ ಮಾರಾಯ್ತಿ...ಹೊಂಡ ಬಿಟ್ರೆ ಬೇರೆಂಥಾ ಇಲ್ಲಾ..
(ಇಂಡಿಯನ್ ಪಪೆಟ್ ಮತ್ತೆ ಕುಣಿಯುವುದು)
ಸವಾರ: ಅಷ್ಟಪ ಟ್ಯಾಕ್ಸ್ ತಕಂತ್ರ..ರಸ್ತೆ ಸಮಾ ಮಾಡುಕೆ ಧಾಡಿ...
(ಇಂಡಿಯನ್ ಪಪೆಟ್ ಮತ್ತೆ ಕುಣಿಯುವುದು)
ಸವಾರ: ನೀರಿಲ್ಲ, ಕರೆಂಟಿಲ್ಲ, ಬಸ್ ಇಲ್ಲ...ಯಾವ್ದೂ ಸಮಾ ಇಲ್ಲ... ಇವ್ರು ಏನೂ ಮಾಡ್ತಿಲ್ಲ...
(ಇಂಡಿಯನ್ ಪಪೆಟ್ ಮತ್ತೆ ಕುಣಿಯುವುದನ್ನು ನಿಲ್ಲಿಸುವುದು)
ಇಂಡಿಯನ್ ಪಪೆಟ್ : ದೂರುವುದನ್ನು ನಿಲ್ಲಿಸು. ನೀನು, ನಿನ್ನ ಕರ್ತವ್ಯ ಮಾಡಿದ್ದೀಯಾ?
ಸವಾರ: ಎಂಥ ಕರ್ತವ್ಯ?
ಇಂಡಿಯನ್ ಪಪೆಟ್ : ಕಳೆದ ಚುನಾವಣೆಯಲ್ಲಿ ನೀನು ಮತ ಚಲಾಯಿಸಿದ್ದೀಯಾ?
ಸವಾರ: (ಇಲ್ಲ ಎಂಬಂತೆ ತಲೆಯಲ್ಲಾಡಿಸುವನು..)
ಇಂಡಿಯನ್ ಪಪೆಟ್ : ಈ ಬಾರಿ ಮತ ಚಲಾಯಿಸು. ನಿನ್ನ ಕರ್ತವ್ಯ ನಿಭಾಯಿಸು. ಮತದಾನವು ಪ್ರತಿಯೊಬ್ಬ ನಾಗರೀಕನ ಪವಿತ್ರ ಹೊಣೆಗಾರಿಕೆ.
(ಚುನಾವಣಾ ದಿನಾಂಕ, ಸಮಯ ಮತ್ತು ಸ್ವೀಪ್ ಲೋಗೋ, ಚುನಾವಣಾ ಆಯೋಗದ ವೆಬ್ ವಿಳಾಸ ತೆರೆಯ ಮೇಲೆ ಮೂಡುವುದು.)





No comments: