Wednesday, 4 September 2013

ಅರಿವಿನ ಗುರುವಿಗೊಂದು ಪತ್ರ

ಪ್ರೀತಿಯ ಸರ್,

ನನ್ನ ಬದುಕಿನ ಪ್ರತಿ ಕದಲುವಿಕೆಯಲ್ಲೂ ನಿಮ್ಮ ಶಕ್ತಿ,ನಿಮ್ಮ ನೆನಪುಗಳು ಮತ್ತು ನೀವೇ ಒದಗಿಸಿದ ಪ್ರಾರಂಭಿಕ ನೆಗೆತ ಇರುವುದರಿಂದ ನೀವು ನನಗೆ ಯಾವಾಗಲೂ ನೆನಪಾಗುತ್ತೀರಿ-ಈ ದಿನ ಮಾತ್ರ ಅಲ್ಲ.
ಯಾವಾಗಲೂ ನೆನಪಾಗುತ್ತೀರಿ ಎಂದನಲ್ಲವೇ? ಯಾವಾಗಲೂ ನಿಮ್ಮ ಹೆಸರನ್ನು ನೆನಪಿಸಿಕೊಳ್ಳುತ್ತೇನೆ ಎಂಬರ್ಥದಲ್ಲಿ ಹಾಗೆ ಹೇಳಿದ್ದಲ್ಲ.ನನ್ನ ನಡೆಯಲ್ಲಿ,ನುಡಿಯಲ್ಲಿ,ಅಕ್ಷರಗಳಲ್ಲಿ ನಿಮ್ಮ ನೆರಳಿದೆ.ನನ್ನ ಆಲೋಚನೆಗಳಲ್ಲೂ ನೀವಿದ್ದೀರಿ.ನನ್ನೊಳಗೆ ನೀವು ನನಗೇ ಗೊತ್ತಿಲ್ಲದಂತೆ ಸೇರಿಕೊಂಡಿದ್ದೀರಿ.ಹೇಗೆ ಸೇರಿಕೊಂಡಿರಿ ಎಂಬುದು ಈವತ್ತಿಗೂ ನನಗೆ ಹೊಳೆಯದ ಅಚ್ಚರಿ!
ನೀವಂದುಕೊಂಡಂತೆ ನಡೆದುಕೊಳ್ಳಬೇಕೆಂದು ಎಂದೂ ನನ್ನ ಮೇಲೆ ನೀವು ಒತ್ತಡ ತಂದಿರಲಿಲ್ಲ.ನಿಮ್ಮ ಆಲೋಚನೆಗಳನ್ನು ನನ್ನ ಮೇಲೆ ಎಂದೂ ಹೇರಿರಲಿಲ್ಲ.ಅಷ್ಟೇಕೆ,ಎಷ್ಟೋ ಬಾರಿ ನನ್ನ ಅಭಿಪ್ರಾಯಗಳನ್ನೇ ನೀವು ಒಪ್ಪಿಕೊಂಡು ಅನುಸರಿಸಿದ್ದೀರಿ.ಆದರೂ,ಹೇಗೆ ನನ್ನೊಳಗೆ ನೀವು ಸೇರಿಕೊಂಡಿರೆಂಬುದೇ ತಿಳಿಯುತ್ತಿಲ್ಲ.
ನನಗೆ ಆಟವಾಡುವುದನ್ನು ಕಲಿಸುವ ಬದಲು,ನನ್ನೊಡನೆ ಆಟವಾಡಿದ್ದೀರಿ.ನಾನು ಗೆದ್ದಾಗ,ನಿಮ್ಮದೇ ಗೆಲುವು ಎಂಬಂತೆ ಸಂಭ್ರಮಿಸಿದ್ದೀರಿ.ನಾನು ಸೋತಾಗ ನನ್ನ ಹೆಗಲ ಮೇಲೆ ಕೈಯಿಟ್ಟು ಧೈರ್ಯ ತುಂಬಿದ್ದೀರಿ. ನೀವು ನನಗೆ ಕಲಿಸುತ್ತಿದ್ದೀರಿ ಎಂದು ನನಗೆ ಎಂದೂ ಅನ್ನಿಸಿರಲಿಲ್ಲ.ಎಷ್ಟೋ ಬಾರಿ,ನೀವೇ ನನ್ನಿಂದ ಕಲಿಯುತ್ತಿದ್ದೀರಿ ಎಂಬಂತೆ ನಡೆದುಕೊಂಡಿದ್ದೀರಿ.ಈಗಲೂ ನನಗೆ ಆ ಗೊಂದಲ ಕಾಡುತ್ತದೆ-ನೀವು ನನಗೆ ಕಲಿಸಿದಿರೋ ಅಥವಾ ನಾನೇ ನಿಮಗೆ ಕಲಿಸಿರಬಹುದೋ?
ಕವಿತೆಯನ್ನೂ ಗಣಿತವನ್ನೂ ಅದೆಷ್ಟು ಸುಂದರವಾಗಿ ಬೆಸೆಯುತ್ತಿದ್ದಿರಿ.ಕುಮಾರವ್ಯಾಸನ ಪ್ರತಿ ಸಾಲಿನಲ್ಲೂ ಗಣಿತವನ್ನೂ ,ಸಂಖ್ಯೆಗಳ ನಡುವೆ ಕವಿತೆಯನ್ನೂ ಕಾಣಲು ನಮಗೆ ಸಾಧ್ಯವಾಯಿತು. ಬದುಕಿನ ಪ್ರತಿ ಹೆಜ್ಜೆಯನ್ನೂ ಸುಂದರ ಕಾವ್ಯವನ್ನಾಗಿ ಅನುಭವಿಸುವುದನ್ನು ನಾವೆಲ್ಲ ನಿಮ್ಮಿಂದ ಕಲಿತಿದ್ದೇವೆ. ವಿಜ್ಞಾನವನ್ನು ಬದುಕುವ ದಾರಿಯನ್ನಾಗಿಯೂ ಸಾಹಿತ್ಯವನ್ನು ಉಸಿರಾಗಿಯೂ ನೀವು ಬದುಕಿದ ರೀತಿಯೇ ನಿಮ್ಮ ತರಗತಿಯಾಗಿತ್ತು.
ನೀವು ತಿಳಿ ಹೇಳಲಿಲ್ಲ-ನನಗೇ ಹೆಚ್ಚು ತಿಳಿದಿದೆಯೆಂದು ಅಂದುಕೊಳ್ಳುವಂತೆ ಮಾಡಿದ್ದೀರಿ.ಆದುದರಿಂದಲೇ ನೀವು ಕಲಿಸುವ ಗುರುವೆಂದು ಆಗ ಅನ್ನಿಸಿರಲಿಲ್ಲ.ನಿಮಗೂ ಸಹ ಗೊತ್ತಿರದ ಅನೇಕ ಸಂಗತಿಗಳಿವೆ ಎಂಬುದನ್ನು ನೀವು ನನಗೆ ಮತ್ತು ನನ್ನ ಸಹಪಾಠಿಗಳಿಗೆ ಆಗಾಗ ಮನದಟ್ಟು ಮಾಡುತ್ತಿದ್ದಿರಿ.ನೀವು ನಮ್ಮಲ್ಲಿ ಕೇಳುವ ಅನೇಕ ಪ್ರಶ್ನೆಗಳು ಪರಿಕ್ಷಾರ್ಥವೆನಿಸದೇ, ನಿಮಗೆ ನಮ್ಮಿಂದ ತಿಳಿಯುವ ಅನೇಕ ವಿಷಯಗಳಿವೆ ಎಂದು ನಾವಂದುಕೊಳ್ಳುತ್ತಿದ್ದೆವು.ಖುಷಿಪಡುತ್ತಿದ್ದೆವು.
ನನ್ನ ತಪ್ಪುಗಳನ್ನೂ,ದೌರ್ಬಲ್ಯಗಳನ್ನೂ ಕಂಡೆ ಇಲ್ಲವೇನೋ ಎಂದು ನಾನಂದುಕೊಳ್ಳುವಹಾಗೆ ನನ್ನ ಒಳ್ಳೆಯ ಗುಣಗಳನ್ನು ಮಾತ್ರ ಎತ್ತಿಹೇಳಿದ್ದೀರಿ. ನನ್ನ ತಂದೆ,ತಾಯಿ,ಬಂಧುಗಳು ನನ್ನ ಬಗ್ಗೆ ಹೆಮ್ಮೆಪಡುವಂತೆ ಮಾಡಿದ್ದೀರಿ.ಇಂತಹ ಮಾತುಗಳು ನನ್ನಲ್ಲಿ ಇನ್ನಷ್ಟು ಒಳ್ಳೆಯದನ್ನು ಮಾಡುವ ಉತ್ಸಾಹವನ್ನು ತುಂಬುತ್ತಿದ್ದವು.
ನಿಮ್ಮೊಡನೆ ಆಡದ ಮಾತುಗಳೇ ಇರಲಿಲ್ಲವೇನೋ?! ನಮ್ಮ ಪ್ರತಿ ಪ್ರಶ್ನೆಗೂ ನಿಮ್ಮ ಬಳಿ ಉತ್ತರವಿರದಿದ್ದರೂ, ಕೇಳುವ ಕಿವಿಗಳು ನಿಮ್ಮಲ್ಲಿ ಯಾವಾಗಲೂ ಇದ್ದವು.ನೀವೆಷ್ಟು ಶಾಂತವಾಗಿ ನಮ್ಮ ಮಾತುಗಳನ್ನು ಆಲಿಸುತ್ತಿದ್ದಿರೆಂದರೆ,ಎಷ್ಟೋ ಬಾರಿ ನಮಗೆ ನಿಮ್ಮಿಂದ ಉತ್ತರಪಡೆಯುವುದೇ ಮರೆತುಹೋಗಿ ಇನ್ನೊಂದಿಷ್ಟು ಪ್ರಶ್ನೆಗಳನ್ನು ನಿಮ್ಮ ಮುಂದಿಡುತ್ತಿದ್ದೆವು.ನಮ್ಮ ಮುಂದಿನ ಪ್ರಶ್ನೆಗಳಲ್ಲೇ ಹಿಂದಿನ ಪ್ರಶ್ನೆಗಳ ಉತ್ತರ ಹೊಳೆದು ಸಮಾದಾನ ಪಟ್ಟುಕೊಳ್ಳುತ್ತಿದ್ದೆವು.
ಕಥೆಗಳನ್ನು ದೇಹದ ಮೂಲಕವೂ,ಕವಿತೆಗಳನ್ನು ಕಣ್ಣುಗಳ ಮೂಲಕವೂ ನಮಗೆ ಹೇಳುವಾಗ ನಿಮ್ಮ ಇಡೀ ದೇಹ ನಮಗಾಗಿ ಇದೆಯೆಂದು ನಮಗನಿಸುತಿತ್ತು.
ನೀವು ಗುರುವನ್ನು ಮಗುವಿನ ಅತ್ಯಂತ ಹತ್ತಿರ ತಂದಿರಿ ಸರ್.ಎಷ್ಟು ಹತ್ತಿರವೆಂದರೆ,ನೀವು ನನ್ನೊಳಗೆ ಪ್ರತ್ಯೇಕಿಸಲಾರದಷ್ಟು ಬೆಸೆದುಹೋಗಿದ್ದೀರಿ-ನನಗೆ ಗೊತ್ತಿಲ್ಲದಂತೆ.

ಪ್ರೀತಿಯಿಂದ
ನಿಮ್ಮ ವಿದ್ಯಾರ್ಥಿ
ಉದಯ

5 ಸೆಪ್ಟಂಬರ್ 2013

No comments: