Monday, 29 January 2024

ಮಕ್ಕಳ ಸಾಹಿತ್ಯ ಸಂಭ್ರಮದ ಹಾಡುಗಳು

 

ಸಾಹಿತ್ಯ ಸಂಭ್ರಮ 

 

ಆಟ.. ಹಾಡು.. 

ಮೋಜು.. ಮಸ್ತಿ 

ಎಲ್ಲಾ ಇದೆ ಇಲ್ಲಿ 

ನಮಗೆ ಎಲ್ಲ ಇದೆ ಇಲ್ಲಿ

 

ಪ್ರಕೃತಿ ನೋಡುತ್ತಾ 

ಬಣ್ಣವ ಬಳಿಯುತ್ತಾ

ಚಿತ್ರವ ಬಿಡಿಸೋಣಾ 

ಸೃಷ್ಟಿಯ ಚಿತ್ರವ ಬಿಡಿಸೋಣ

 

ಕಥೆ ಕೇಳುತ್ತಾ.. 

ಕಥೆ ಹೇಳುತ್ತಾ..

ನಾವೇ ಬರೆಯೋಣ 

ಕಥೆಯನು ನಾವೇ ಬರೆಯೋಣ

 

ಪದಗಳ ಹುಡುಕುತ್ತಾ 

ಪ್ರಾಸವ ಜೋಡಿಸಿ

ಕವಿತೆಯ ಕಟ್ಟೋಣ 

ನಾವೇ ಕವಿತೆಯ ಕಟ್ಟೋಣ

 

ಕವಿತೆಯನು ಕಟ್ಟಿ 

ತಾಳವನು ಕುಟ್ಟಿ

ಕಥೆಯನು ಆಡೋಣ 

ನಮ್ಮದೇ ಕಥೆಯನ್ನು ಆಡೋಣ 

 

ನಾಟಕ ನೋಡುತ್ತಾ 

ನಟನೆಯ ಮಾಡುತ್ತ

ಲೋಕವ ತಿಳಿಯೋಣ 

ರಂಗ ಲೋಕವ ತಿಳಿಯೋಣ

 

- ಕವಿತಾ ಹಾಸನ

https://youtu.be/2LWleLq8Ke8?si=VuS8vmTUNXMbMOLk

 

2. ಹಕ್ಕಿಗಳಾಗಿ ಬಾನೆತ್ತರದಿ

 

ಹಕ್ಕಿಗಳಾಗಿ ಬಾನೆತ್ತರದಿ

ಹಾರುತ ಏರುತ ಸುತ್ತೋಣ

ಬೆಳಕಿನ ಕಿರಣದಿ ಬಣ್ಣವ ಹುಡುಕುತ

ಭಾವಲೋಕದಲಿ ಮೀಯೋಣ

 

ಬಣ್ಣದ ಕನಸಿನ ಚಿಣ್ಣರು ನಾವು

ಕಾಮನಬಿಲ್ಲನು ಮುಟ್ಟೋಣ

ಬಾಚಿ ಬಳಿಯುತ ರಂಗನು ಚೆಲ್ಲುತ

ಬಾನಲಿ ಚಿತ್ತಾರ ಬಿಡಿಸೋಣ

 

ಏರುತ ಇಳಿಯುತ ಮೂಡಿ ಮುಳಗುವ 

ದಿನಕರನಾಟವ ತಿಳಿಯೋಣ

ಕತ್ತಲೆ ಕವಿಯಲು ತಾರಾ ಲೋಕದಿ 

ಸೇರುತ ಮಿನಮಿನ ಮಿನುಗೋಣ

 

ರಂಗು ರಂಗಿನ ಮೋಡಗಳಾಗಿ

ಚೆಂದದಿ ಹನಿಹನಿಗೂಡೋಣ

ಗುಡುಗುಡು ಗುಡುಗುತ ಮಿಂಚಿನ ಮಳೆಹನಿ

ಸುರಿಸುತ ಭುವಿಯನು ತಣಿಸೋಣ

 

ಹಸಿರನು ಬಿತ್ತಿ ಉಸಿರನು ಪಸರಿಸಿ

ಖುಷಿಯಲಿ ಆಟವ ಆಡೋಣ

ಅಕ್ಷರ ಲೋಕದ ಚಿಟ್ಟೆಗಳಾಗಿ

ಪುಸ್ತಕ ಬನವನು ಸುತ್ತೋಣ

 

ವನವನ ಸುತ್ತಿ ಓದಿನ ಪರಿಮಳ

ಸವಿಯುತ ಸವಿನುಡಿಯಾಡೋಣ

ವಿಶ್ವದ ಶಾಂತಿಗೆ ಸಮತೆಯ ಹಾಡಿಗೆ

ದನಿಗೂಡಿಸುತ ಸಾಗೋಣ

 

 - ಡಾ. ನಿಂಗು ಸೊಲಗಿ

 

https://youtu.be/tKUkLAsTxPg

 
3. ಪುಸ್ತಕಗಳು ಮಾತಾಡುತ್ತವೆ

 

ಮಾತಾಡ್ತಾವೆ ಪುಸ್ತಕ ಮಾತಾಡ್ತಾವೆ

ಮಾತಾಡ್ತಾವೆ ಪುಸ್ತಕ ಮಾತಾಡ್ತಾವೆ ||||

 

ಕಳೆದ ಯುಗಗಳ ಬಗೆಯ ಕುರಿತು

ಜಗದ ಜನರ ಈ ದಿನ ಕುರಿತು

ನಾಳೆಯ ಒಂದೊಂದು ಕ್ಷಣವನ್ನು ಕುರಿತು 

ಮಾತಾಡ್ತಾವೆ.....

 

ಸೋಲು ಗೆಲುವಿನ ಕುರಿತು

ಸುಖ ದುಃಖದ  ಸಾಲುಗಳ ಕುರಿತು

ಬದುಕಿನ ಒಂದೊಂದು ಕ್ಷಣವನ್ನು ಕುರಿತು

ಮಾತಾಡ್ತಾವೆ.....

 

ಹೂ ದುಂಬಿಗಳೊಲವಿನ ಕುರಿತು

ಸಾವು ಯುದ್ಧದ ನಿಲುವ ಕುರಿತು

ನೀ ಕೇಳಯ್ಯಾ ಗೆಳೆಯ ಪುಸ್ತಕಗಳ ನುಡಿಯ

ಮಾತಾಡ್ತಾವೆ....

 

ಪಕ್ಷಿಗಳ ಚಿಲಿಪಿಲಿ ಗಾನ

ಹೊಲ-ಗದ್ದೆಗಳುಸಿರಿನ ತಾಣ

ನದಿ ಝರಿಗಳ ಜುಳು ಜುಳು ತುಂಬಿದೆ ಪುಸ್ತಕದಿ|ಮಾತಾಡ್ತಾವೆ.....

 

ಮುಗುಳು ಮುಖದ ಕಿನ್ನರಿ ನಗೆಯ

ಜ್ಞಾನ-ವಿಜ್ಞಾನಗಳ ಗಣಿಯ

ನಮ್ಮೊಂದಿಗೆ ಪ್ರತಿಗಳಿಗೆ ಇರುವ ಪುಸ್ತಕವೆಲ್ಲ

ಮಾತಾಡ್ತಾವೆ......

 

- ಸಪ್ದರ್ ಹಷ್ಮಿಕನ್ನಡಕ್ಕೆ: ಸಿ. ಬಸವಲಿಂಗಯ್ಯ. ರೂಪಾಂತರ: ನಿಂಗು ಸೊಲಗಿ.

 

ಹಾಡನ್ನು ಈ ಕೊಂಡಿ ಬಳಸಿ ಕೇಳಬಹುದು : 

https://youtu.be/6oqtrjwR9yc?si=2JYL-DJI4R0zXcbg

 

********

 

4. ಗ್ರಂಥಾಲಯಕ್ಕೆ ಗೋಡೆಗಳಿಲ್ಲ..

 

ಇಲ್ಲ ಇಲ್ಲ ಇಲ್ಲವೇ ಇಲ್ಲ

ಗ್ರಂಥಾಲಯಕ್ಕೆ ಗೋಡೆಗಳಿಲ್ಲ..

ಅಕಾಶಕ್ಕೆ ಅಂಚುಗಳಿಲ್ಲ

ಕನಸು ಕಪಾಟಿಗೆ ಬಾಗಿಲೇ ಇಲ್ಲ

 

ಓದುವೆ ನಾನು ಈ ಜಗವನ್ನು

ತೆರೆಯುವೆ ಈಗಲೆ ಹೊಸ ಪುಟವನ್ನು

ಹಾಳೆಯ ತುಂಬಾ ಹರಡಿದೆ ನೋಡು

ನೀಲಿ ಬಾನು, ಹಸುರಿನ ಕಾನು

 

ಇಲ್ಲ ಇಲ್ಲ ಇಲ್ಲವೇ ಇಲ್ಲ

ಗ್ರಂಥಾಲಯಕ್ಕೆ ಗೋಡೆಗಳಿಲ್ಲ..

 

ಕಟ್ಟುವೆ ನಾನು ಪುಸ್ತಕ ಸೇತುವೆ,

ಪ್ರೀತಿ ಪದಗಳ ಮನೆಯನ್ನು

ಅಜ್ಜನು ಅಜ್ಜಿಯು ಅಮ್ಮ, ಅಪ್ಪನು

ತೆರೆಯುತ ಹೋಗುವೆ  ಬದುಕನ್ನು

 

ಇಲ್ಲ ಇಲ್ಲ ಇಲ್ಲವೇ ಇಲ್ಲ

ಗ್ರಂಥಾಲಯಕ್ಕೆ ಗೋಡೆಗಳಿಲ್ಲ..

 

ಆಡುವೆ ಅಲ್ಲಿ, ಓಡುವೆ ಇಲ್ಲಿ

ಭೂಮ್ಯಾಕಾಶದ ಬಯಲಲ್ಲಿ.

ಮಾತು, ಮೋಜು, ಹಾಡು ಎಲ್ಲ

ಪುಸ್ತಕವೆಂದರೆ ಅಕ್ಷರವಲ್ಲ.

 

ಇಲ್ಲ ಇಲ್ಲ ಇಲ್ಲವೇ ಇಲ್ಲ

ಗ್ರಂಥಾಲಯಕ್ಕೆ ಗೋಡೆಗಳಿಲ್ಲ..

 

ಬದುಕಿನ ಹೊಲದಲಿ ಮಮತೆಯ ತೋಟ

ಬಿತ್ತುವೆ ಈಗ ಪ್ರೀತಿಯ ಬೀಜ

ಬೆಳೆಯುವೆ ನಾನು ಸ್ನೇಹದ ಫಸಲು,

ಹರಡುವೆ ಎಲ್ಲೆಡೆ ಓದಿನ ಘಮಲು.

 

ಇಲ್ಲ ಇಲ್ಲ ಇಲ್ಲವೇ ಇಲ್ಲ

ಗ್ರಂಥಾಲಯಕ್ಕೆ ಗೋಡೆಗಳಿಲ್ಲ..

 

- ಉದಯ ಗಾಂವಕಾರ

https://youtu.be/bBazAoGSx-0

 

5. ಹಳ್ಳಿಗೋಗುವಾ ನಾವು ಹಳ್ಳಿಗೋಗುವಾ

 

ಹಳ್ಳಿಗೋಗುವಾ ನಾವು ಹಳ್ಳಿಗೋಗುವಾ II 

ಆಹಾ.. ಬೆಟ್ಟ ಬಿದಿರು ಬಳ್ಳಿ ಕಳ್ಳಿ ಬೆಳೆದು ನಿಂತಾವಾ ಮುತ್ತುಗದೂವು ಮತ್ತಾಬರಿಸೀ  

ಮೆತ್ತಗೆ ಮೆತ್ ಮೆತ್ತಗೆ ಕರೆದಾವ..II ಹಳ್ಳಿಗೋಗುವ II

 

ಹಳ್ಳ ಕೊಳ್ಳ ಹಾರೋದೇ ನಮ್ ಲಾಂಗ್ ಜಂಪೂ.. ಓ ಓ.. 

ಬೇಲಿಗೀಲಿ ಹಾರೋದೇ ನಮ್ ಹೈ ಜಂಪೂ 

ಕಬ್ಬಿನ್  ಕಂತೆ ಎತ್ತೋದೆ ನಮ್ಮ್  ವೈಟ್  ಲಿಪ್ಟಿಂಗು ಎಮ್ಮೆ ಮ್ಯಾಗಳ ಪಯಣಾನೆ  ನಮ್ ಕಾರ್ ಡ್ರೈವಿಂಗೂ                       

   ||ಹಳ್ಳಿಗೋಗುವಾ||

 

ಕಲ್ಲಾಟ ಜಿಬಿಲಿಗಳೆ ನಮ್ಮ ಕೆರಂ ಬೋರ್ಡು ಓ.. ಓ..

ಕುಟ್ಟಿ ದೊಣ್ಣೆ ಬುಗುರಿನೇ ನಮ್ ಫುಟ್ ಬಾಲ್ ಕ್ರಿಕೆಟು 

ಪಾಡ್ದನ ಸಂಧಿಯ ಪದವೇ ಆರ್ಕೆಸ್ಟ್ರಾ

ಜೋಗೀರಯ್ಯನ ತಂಬೂರೀನೇ ಲೇಟೆಸ್ಟ್ ಗಿಟಾರ್   

||ಹಳ್ಳಿಗೋಗುವಾ||

 

ಅಡಿಕೆ ಹಾಳೆಲ್ ಕಿರೀಟ ಮಾಡ್ಕೊಂಡ್ ..ಆಹಾಹಾ.. ತೆಂಗಿನ ಗರಿಯಲ್ ವಾಚ್ ಕಟ್ಕೊಂಡ್ ಓಹೋಹೋ.. ಸೋರೆ ಬುರುಡೆಲ್ ದೋಣಿ ಮಾಡ್ಕೊಂಡ್ ಬೊಂಬಾಟ್ ನಮ್ ಟೀಮು

ಕೆರೆಯಾ ಒಳಗಿನ ಪರಪಂಚಾನೇ ನಾವ್ ಕಾಣುವಾ 

|Iಹಳ್ಳಿಗೋಗುವಾ||

 

- ನೆ.ಲ. ಕೃಷ್ಣಮೂರ್ತಿ

 

https://youtu.be/G2YWxreC0dQ?si=Ja0csofXQGeIRC5V

 

********

 

6. ಗಡಿಗಳೇ ಇಲ್ಲಾ ನಮಗೆ ಗಡಿಗಳೇ ಇಲ್ಲಾ

 

ಗಡಿಗಳೇ ಇಲ್ಲಾ ನಮಗೆ ಗಡಿಗಳೇ ಇಲ್ಲಾ

ಗಡಿಗಳೇ ಇಲ್ಲಾ ನಮಗೆ ಗಡಿಗಳೇ ಇಲ್ಲಾ

ಉರಿವ ಸೂರ್ಯನಿಗೆ ಜಾತಿಯೇ ಇಲ್ಲ

ಸಲಹೋ ಭೂಮಿಗೆ ಧರ್ಮವೇ ಇಲ್ಲ

ಮೇಲು ಕೀಳಿನ ಹಂಗೇ ಇಲ್ಲ

ದೇಶ ಭಾಷೆಯ ಗುಂಗೇ ಇಲ್ಲ

ಅವರು ಇವರೂ ಎಲ್ಲರೂ ಒಂದೇ ನಮಗೆ

ಗಡಿಗಳೇ ಇಲ್ಲಾ ನಮಗೆ ಗಡಿಗಳೇ ಇಲ್ಲಾ

ಗಡಿಗಳೇ ಇಲ್ಲಾ ನಮಗೆ ಗಡಿಗಳೇ ಇಲ್ಲಾ..

 

ಬೀಸುವ ಗಾಳಿಗೆ ಎಲ್ಲೆಯೇ ಇಲ್ಲ

ಹರಿಯುವ ನೀರಿಗೆ ಶಾಸ್ತ್ರವೇ ಇಲ್ಲ

ಮರಕ್ಕೆ ಬೇಧವಿಲ್ಲ

ನೆರಳಿಗೆ ಮೈಲಿಗೆಯಿಲ್ಲ

ಅವರು ಇವರೂ ಎಲ್ಲರೂ ಒಂದೇ ನಮಗೆ

ಗಡಿಗಳೇ ಇಲ್ಲಾ ನಮಗೆ ಗಡಿಗಳೇ ಇಲ್ಲಾ

ಗಡಿಗಳೇ ಇಲ್ಲಾ ನಮಗೆ ಗಡಿಗಳೇ ಇಲ್ಲಾ..

 

ಯುದ್ಧದಲ್ಲಿ ಫಲವಿಲ್ಲ

ಗೆದ್ದವನಿಗೆ ಸುಖವೇ ಇಲ್ಲ

ಗಡಿಯ ನೆಟ್ಟವಗೆ ಬುದ್ದಿಯೇ ಇಲ್ಲಾ

ನಮಗೆ ಗಡಿಗಳ ತಂಟೆಯೇ ಇಲ್ಲ..

ಗಡಿಗಳೇ ಇಲ್ಲಾ ನಮಗೆ ಗಡಿಗಳೇ ಇಲ್ಲಾ

ಗಡಿಗಳೇ ಇಲ್ಲಾ ನಮಗೆ ಗಡಿಗಳೇ ಇಲ್ಲಾ..

 

ದ್ವೇಷಕ್ಕೆಂದೂ ಕೊನೆಯೇ ಇಲ್ಲ

ಸಿಡಿಯೋ ಗುಂಡಿಗೆ ಕರುಣೆ ಇಲ್ಲಾ

ಪ್ರೀತಿ ಹಂಚಿದರೆ ಜಗಳವೇ ಇಲ್ಲ

ಗಡಿಗಳೇ ಇಲ್ಲಾ ನಮಗೆ ಗಡಿಗಳೇ ಇಲ್ಲಾ

ಗಡಿಗಳೇ ಇಲ್ಲಾ ನಮಗೆ ಗಡಿಗಳೇ ಇಲ್ಲಾ..

 

- ಸಚಿನ ಅಂಕೋಲಾ

 

********

 

7. ಮಕ್ಕಳು ನಾವು - ಲಾವಣಿ

 

ಮಕ್ಕಳು ನಾವು ಮಣ್ಣಲಿ

ಬೆರೆತು 

ಬೆಳಕಿನ ಗಿಡಗಳ ನೆಟ್ಟಿಹೆವು

ಕಾಮನಬಿಲ್ಲನು ಎಳೆದೂ ತಂದು

ಬಣ್ಣದ ಕತೆಗಳ ಕಟ್ಟುವೆವು..

 

ಮುದ್ದಿನ ಚಿತ್ರಕೆ ಪದಗಳ ಕದ್ದು 

ಸದ್ದನು ಅದಕೇ ತುಂಬುವೆವು

ದೊಡ್ಡ ಪುಸ್ತಕದ ಅಕ್ಷರವಾಗಿ

ಚಿಟ್ಟೆಗಳಂತೇ ಹಾರುವೆವು

 

ಮಳೆ ಸುರಿವಾಗ ಕೊಡೆಯನು

ಬೀಳಿಸಿ 

ಅಮ್ಮಗೆ ಕಾಣದೆ ತೋಯುವೆವು

ಒಳಗಿನ ದನಿಯನು ಹನಿಗಳ ಜೊತೆಗೆ 

ಹಂಚಿ ಕನಸನು ನೇಯುವೆವು

 

ಸದ್ದೇ ಇರದಾ ಕೋಣೆಯ ಗೋಡೆಗೆ

ಸುದ್ಧಿಯ ಹೇಳಲು ಕಲಿಸುವೆವು

ಪುಸ್ತಕ ಓದಿ ಮಸ್ತಕ ತುಂಬಿ

ಜಗವನ್ನರಿಯಲು ನಡೆಯುವೆವು



  • ಸಂಧ್ಯಾ ನಾಯ್ಕ

 

8. ಕಲೆತು ಕಲಿತು ಕೂಡುವ

 

ಕಲೆತು ಕಲಿತು ಕೂಡುವ 

ನಮ್ಮ ಸಂಗಮ

ಸಾಹಿತ್ಯದ ವಿಸ್ತಾರ 

ನಮ್ಮ ಸಂಭ್ರಮ| |

 

ನಮ್ಮ ಬಾಳ ಬಾನಿಗಿಂದು

ಹೊಸ ಸಡಗರವು

ಆಡಿ ಹಾಡಿ ನಲಿದು ಬಂತು ಕಾಮನಬಿಲ್ಲು

 

ತುಂಬಿದೆ ಬಣ್ಣ ಮಳೆಯೋ ಬಿಸಿಲೋ 

 

ತೆರೆಯೋ ಕಣ್ಣ ದಾಟೋ ಹೊಸಿಲು 

ಕಲೆತು ಕಲಿತು ಕೂಡುವ ನಮ್ಮ ಸಂಗಮ 

ಸಾಹಿತ್ಯದ  ವಿಸ್ತಾರ ನಮ್ಮ ಸಂಭ್ರಮ

 

ಕವಿತೆ  ನಾಟಕ ಕಥೆಯೆ ಗಾಳಿಪಟ

ಅಕ್ಷರದ ಜೇನಿಗೆ  ಬಾನೆ ಹೂದೋಟ

ನಮ್ಮೆಲ್ಲ ಕನಸುಗಳು ಹೊಸ ಹುಡುಕಾಟಗಳು ಎಳೆಯ ಜೀವಗಳ ಬದುಕ ಪ್ರೀತಿಗಾಗಿ

 

ಉರಿಯೋ ಭಾಸ್ಕರ ತಂಪೆರೆವ ಚಂದಿರ 

ನಮ್ಮಯ ಬೆರಗಿಗೆ  ಮಿನುಗಲಿ ನಕ್ಷತ್ರ

ಉಲ್ಕೆ ಧೂಮಕೇತು ಚಿಮ್ಮುವ ರಾಕೆಟ್

ಎಲ್ಲವೂ ನಮ್ಮೊಳಗೆ ಬರೆವ ಖುಷಿಯ ಕೊಡುತಿದೆ

 

- ಚೇತನ್ ಕೊಪ್ಪ

 

********

 

9. ಕನಸುಗಾರರು ನಾವು ಕನಸುಗಾರರು

 

ಕನಸುಗಾರರು ನಾವು ಕನಸುಗಾರರು

ಕನಸು ನನಸು ಮಾಡುವಂತ 

ಹುಡುಗ ಹುಡುಗೀರು 

ಮನೆಯಲ್ಲಿ ಶಾಲೆಯಲ್ಲಿ 

ಆಟದಲ್ಲಿ ಪಾಠದಲ್ಲಿ 

ಹಳ್ಳಿಯಲ್ಲಿ ಪೇಟೆಯಲ್ಲಿ 

ಊರೂರಲ್ಲಿ ಅಲ್ಲಿ ಇಲ್ಲಿ 

 

ದೂರದಲ್ಲೊಂದು ಬೆಟ್ಟ 

ಊರಿನ ಪಕ್ಕಾ ನದಿ

ನದಿ ನದಿಯ ತುಂಬಾ ನೀರು

ನೀರಿನ ತುಂಬಾ ಮೀನು 

ಮೀನಿನ ಜೊತೆಗೆ ನಾವಾಡ್ಬೇಕು 

ಈಜು ಹೊಡೆದಾಟ 

 

ಸುತ್ತಮುತ್ತ ಕಾಡು 

ಕಾಡಲಿ ಜಿಂಕೆ ನವಿಲು 

ಕಾರೆ ಬೋರೆ ನೆಲ್ಲಿ 

ಚೇಪೆ ಹಲಸು ಮಾವು ಹಣ್ಣು ತಿಂದು ನಾವಾಡ್ಬೇಕು ಮರಕೋತಿಯಾಟ 

 

ಕಾಲಕಾಲಕ್ಕೆ ಮಳೆ 

ಹೊಲದ ತುಂಬಾ ಬೆಳೆ 

ರಾಗಿ ಅರ್ಕ ಭತ್ತ 

ಸಜ್ಜೆ ಸಾಮೆ ಜೋಳ 

ಕೆಮಿಕಲ್ಲು ಗಿಮಿಕಲ್ಲು 

ಹಾಕೋ ಹಂಗಿಲ್ಲ 

 

ಬಳಸೋದಿಲ್ಲ ಬಿ ಟಿ

ಬೀಜಗಳೆಲ್ಲಾ ನಾಟಿ 

ಪ್ರತಿನಿತ್ಯ ಸಂತೆ 

ಸಾವಯವ ಜಾತ್ರೆ

ಸುಗ್ಗಿ ಸಮಯ ಉರೋರ್ ಸೇರಿ

ಆಟ ಕೋಲಾಟ 

 

ಊರಲ್ಲೊಂದು ಸ್ಕೂಲು

ಚಂದದ ಬಿದಿರು ಸೂರು 

ಖುಷಿಖುಷಿಯಾಗಿ ಮಕ್ ಳು 

ಓದುತ್ತಾರೆ ಎಲ್ರೂ 

ಆಚೆ-ಗೀಚೆ ಆಟದ ಬಯಲು 

ಈಚೆ ಕೈತೋಟ 

 

ಇರುವೆ ಗೆದ್ಲು ನೋಡ್ತಾ

ಸಾಲು ಬೀಜ ಬಿತ್ ತಾ

ಜೀವಶಾಸ್ತ್ರ ಗಣಿತ ಎಲ್ಲಾ ಕಲ್ತುಕೊಳ್ತಾ

ಓದಿ ಬರೆದು ಕೂಡಿ ಕಳೆದು 

ಪಾಠದ ಆಟ 

ಮುದ್ದೆ ಸೊಪ್ಪು ಸಾರು 

ರೊಟ್ಟಿ ಖಾರ ಜೋರು 

ಮಕ್ಕಳಿಗೆಲ್ಲ ಹಾಲು 

ತುಪ್ಪ ಬೆಣ್ಣೆ ಮೊಸರು 

ಯಾವ ಮನೆಗೋದ್ರು 

ಊಟಕ್ಕಿಲ್ಲ ಅನ್ನೋ ಹಂಗಿಲ್ಲ 

 

ಕ್ರಿಸ್ಮಸ್ ಅಂದ್ರೆ ಕೇಕು 

ಗಣಪ ಬಂದ್ರೆ ಕಡಬು 

ನಡುವೆ ನಾಟಿ ಕೋಳಿ 

ಯುಗಾದಿ ಹಬ್ಬ ಮೊಹರಂ ಹಬ್ಬಗಳಲ್ಲಿ ಒಮ್ಮೊಮ್ಮೆ ಬಿರಿಯಾನಿ 

ಹಬ್ಬಗಳಲ್ಲಿ ಆಟ ಒಡನಾಟ

 

- ಜನಾರ್ದನ ಕೆಸರಗದ್ದೆ

 

https://youtu.be/cAYWzht45n8?si=Lt0r7jeTFCe_AtY-

 

----------------------

 

10. ಐಲೈಸಾ ಐಲೈಸಾ...

 

ಐಲೈಸಾ ಐಲೈಸಾ...

ಐಲೈಸಾ ಐಲೈಸಾ....

 

ಮಣ್ಣ ಮೇಲೆ ಮರ ಇದೆ

ಐಲೈಸಾ ಐಲೈಸಾ...

ಮರದ ಮೇಲೆ ಟೊಂಗೆ ಇದೆ

ಐಲೈಸಾ ಐಲೈಸಾ..

.

ಮಣ್ಣ ಮೇಲೆ ಮರ ಇದೆ ಮರದ ಮೇಲೆ ಟೊಂಗೆ ಇದೆ

ಐಲೈಸಾ ಐಲೈಸಾ....

 

ಟೊಂಗೆಯಲ್ಲಿ ಎಲೆ ಇದೆ

ಐಲೈಸಾ ಐಲೈಸಾ

 

ಮಣ್ಣ ಮೇಲೆ ಮರ ಇದೆ

ಮರದ ಮೇಲೆ ಟೊಂಗೆ ಇದೆ

ಟೊಂಗೆಯಲ್ಲಿ ಎಲೆ ಇದೆ

ಐಲೈಸಾ ಐಲೈಸಾ

 

ಎಲೆಯ ಆಚೆ ಹೂವು ಇದೆ 

ಐಲೈಸಾ ಐಲೈಸಾ

 

ಮಣ್ಣ ಮೇಲೆ ಮರ ಇದೆ

ಮರದ ಮೇಲೆ ಟೊಂಗೆ ಇದೆ

ಟೊಂಗೆಯಲ್ಲಿ ಎಲೆ ಇದೆ

ಎಲೆಯ ಆಚೆ ಹೂವು ಇದೆ

ಐಲೈಸಾ ಐಲೈಸಾ 

 

ಹೂವಿನ ಕೆಳಗೆ ಕಾಯಿ ಇದೆ

ಐಲೈಸಾ ಐಲೈಸಾ

 

ಮಣ್ಣ ಮೇಲೆ ಮರ ಇದೆ

ಮರದ ಮೇಲೆ ಟೊಂಗೆ ಇದೆ

ಟೊಂಗೆಯಲ್ಲಿ ಎಲೆ ಇದೆ

ಎಲೆಯ ಆಚೆ ಹೂವು ಇದೆ

ಹೂವಿನ ಕೆಳಗೆ ಕಾಯಿ ಇದೆ

ಐಲೈಸಾ ಐಲೈಸಾ...

 

ಕಾಯಿಯ ಆಚೆ ಹಣ್ಣು ಇದೆ

ಐಲೈಸಾ ಐಲೈಸಾ

 

ಮಣ್ಣ ಮೇಲೆ...... (ಮುಂದುವರಿಕೆ...)

 

ಹಣ್ಣಿನೊಳಗೆ ಬೀಜ ಇದೆ 

ಐಲೈಸಾ ಐಲೈಸಾ

 

ಮಣ್ಣ ಮೇಲೆ......

 

ಬೀಜದೊಳಗೆ ಮೊಳಕೆ ಇದೆ

ಐಲೈಸಾ ಐಲೈಸಾ....

 

ಮಣ್ಣ ಮೇಲೆ....

 

ಮೊಳಕೆಯಲ್ಲಿ ಗಿಡ ಇದೆ

ಐಲೈಸಾ ಐಲೈಸಾ....

 

ಮಣ್ಣ ಮೇಲೆ......

 

ಐಲೈಸಾ ಐಲೈಸಾ....

ಐಲೈಸಾ ಐಲೈಸಾ.....

ಐಲೈಸಾ ಐಲೈಸಾ...

 

-------------------------

 

11. ಆಹಾ ನೋಡು ಎಂಥ ಚಂದ

 

ಆಹಾ ನೋಡು ಎಂಥ ಚಂದ

ನಮ್ಮೂರು ಹಳ್ಳಿ

ಸುತ್ತ ಮುತ್ತ ಗಿಡ ಮರ

ಬೆಳದಾವ ಇಲ್ಲಿ

 

ಹಳ್ಳ ಕೊಳ್ಳ ಕಲ್ಲು ಮುಳ್ಳು

ಇರುತ್ತಾವ ಇಲ್ಲಿ

ಜೇನು ಗೀನು ತಿನ್ನಲ್ಲಾಕ 

ಸಿಗುತ್ತಾವ ಇಲ್ಲಿ 

 

ಕಾಡು ಗಿಡು ಗುಡ್ಡಾ ಗಾಡು 

ಇರುತ್ತಾವ ಇಲ್ಲಿ 

ಜಿಂಕೆ ನವಿಲು ನೋಡಲಾಕ

ಸಿಗುತ್ತಾವ ಇಲ್ಲಿ 

 

ಕಬ್ಬು ಕಾಯಿ ಬತ್ತಾ ಜೋಳ

ಬೆಳಿತ್ತಾರ ಇಲ್ಲಿ 

ಭೂಮಿ ತಾಯಿ ಸೇವೆಯನ್ನು 

ಮಾಡುತ್ತಾರ ಇಲ್ಲಿ 

 

# ಎಂ. ಎಸ್. ಮನೋಹರ

 

********

 

12. ಬಾನ ದಾರಿಯ ತಾರೆಗಳು
 

 

ಬನ್ನಿರಿ ಬನ್ನಿರಿ ಗೆಳೆಯರೆ ನಾವು 

ಸಾಹಿತ್ಯ ಹಬ್ಬಕೆ ಹೋಗೋಣ

ಆಡಿ ಹಾಡಿ ಕುಣಿ ಕುಣಿದಾಡಿ

ಸಂಭ್ರಮದಿಂದ ನಲಿಯೋಣ||||

 

ಹಕ್ಕಿ ಪಿಕ್ಕಿ ಚಿತ್ರವ ಬಿಡಿಸಿ

ಕಥೆ - ಕವಿತೆ ಕಟ್ಟೋಣ

ಅನುಭವದಾಟವ ಆಡುತ ನಟಿಸುತ

ನಾಟಕ ನಾವೇ ಬರೆಯೋಣ

 

ಕಲ್ಪನೆಗಳಿಗೆ ರೆಕ್ಕೆಯ ಕಟ್ಟಿ 

ಆಗಸದೆಡೆಗೆ ಹಾರೋಣ

ಬಾನ ದಾರಿಯ ತಾರೆಗಳಂತೆ

ನಗುತಲಿ ನಲಿಯುತ ಮಿನುಗೋಣ

 

ಅಕ್ಕರೆಯಿಂದಲಿ ಅಕ್ಷರ ಪೋಣಿಸಿ

ಮುದದಿ ಪದಗಳ ಬರೆಯೋಣ

ರವಿ ಕಿರಣವ ಬಾಚಿ ಬಳಿಯುತ

ಹೊಸದೇ ಹೊಳಪು ಪಡೆಯೋಣ

 

✍️ಉಷಾ ಗೊಬ್ಬೂರ ಕಲಬುರಗಿ

https://youtu.be/e4eKzVFOfAo?si=Ay9OTQnVBkXRxFiT