Sunday, 10 July 2022

ಮನದ ಸೂತಕವನ್ನು ಹೋಗಲಾಡಿಸೋಣ.


ಹೆಣ್ಣು ಹೆಣ್ಣಾದೊಡೆ ಗಂಡಿನ ಸೂತಕ

ಗಂಡು ಗಂಡಾದೊಡೆ ಹೆಣ್ಣಿನ ಸೂತಕ

ಮನದ ಸೂತಕ ಹಿಂಗಿದೊಡೆ

ತನುವಿನ ಸೂತಕಕ್ಕೆ ತೆರಹುಂಟೇ ಅಯ್ಯ?

ಮೊದಲಿಲ್ಲದ ಸೂತಕಕ್ಕೆ ಮರುಳಾಯಿತ್ತು ಜಗವೆಲ್ಲ

ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನೆಂಬ

ಗುರುವಂಗೆ ಜಗವೆಲ್ಲ ಹೆಣ್ಣು ನೋಡಾ!

-ಅಕ್ಕಮಹಾದೇವಿ












ಹದಿವಯಸ್ಸಿನ ಹುಡುಗಿಯರಿಗೆ ಮುಟ್ಟಿನ ಕಪ್ಪುಗಳನ್ನು ನೀಡುವ ಕಾರ್ಯಕ್ರಮಕ್ಕೆ ಸರಕಾರ ಚಾಲನೆ ನೀಡಿದೆ. ಮೊದಲ ಹಂತದಲ್ಲಿ ಚಾಮರಾಜ ನಗರ ಮತ್ತು ದಕ್ಷಿಣ ಕನ್ನಡದ ಹುಡುಗಿಯರಿಗೆ ಮುಟ್ಟಿನ ಕಪ್ಪುಗಳು ದೊರೆಯುತ್ತವೆ . ಮೈತ್ರಿ ಎಂಬ ಹೆಸರಿನ ಈ ಕಪ್ಪುಗಳು ಪ್ರೌಢಾವಸ್ಥೆಗೆ ಕಾಲಿಡುತ್ತಿರುವ ರಾಜ್ಯದ ಎಲ್ಲ ಕಿಶೋರಿಯರಿಗೂ ತಲುಪಲಿದೆ. ಈಗ ಮುಟ್ಟಿನ ಕುರಿತು ಮಾತನಾಡಬೇಕಿದೆ.  ಮುಟ್ಟಿನ ಬಗ್ಗೆ ಮಾತನಾಡಲು ಜನರು ಹಿಂಜರಿಯುವ ಕಾಲದಲ್ಲಿ  ಈ ಕುರಿತು ಮತ್ತೆ ಮತ್ತೆ ಮಾತನಾಡುವುದೇ ಮುಟ್ಟಿಗಿರುವ ಸಾಮಾಜಿಕ ಸಂಕೋಚವನ್ನು ಪರಿಹರಿಸುವ ದಾರಿ.

ಕರಾವಳಿ ಮುಂಜಾವು ಅಂಕಣ: ಈ ಲೇಖನವನ್ನೂ ಓದಿ: 

 


ಮತ್ತೆ ಬಂದ ಜೇನು ಹುಳುಗಳು 

ಹೊಸ ಜೀವ ಸೃಷ್ಟಿಯೆಂಬುದು ಗಂಡು ಮತ್ತು ಹೆಣ್ಣು‌ ಲಿಂಗಾಣುಗಳ ಸಮಾಗಮದೊಂದಿಗೆ ಆರಂಭವಾಗುತ್ತದೆ. ಪ್ರತಿ ಹೆಣ್ಣು ಮಗುವೂ ಹುಟ್ಟುತ್ತಲೆ ನಿರ್ದಿಷ್ಟ ಸಂಖ್ಯೆಯ ಹೆಣ್ಣು ಲಿಂಗಾಣುಗಳನ್ನು ಅಥವಾ ಅಂಡಗಳನ್ನು ಹೊತ್ತೇ ಹುಟ್ಟಿರುತ್ತಾಳೆ. ಹೆಣ್ಣು ಮಗು ಹನ್ನೆರಡೋ ಹದಿಮೂರೋ ವಯಸ್ಸು ತಲುಪುತ್ತಲೆ ಆಕೆಯ ದೇಹದಲ್ಲಿ ಬಿಡುಗಡೆಯಾಗುವ ಕೆಲವು ರಾಸಾಯನಿಕ ಪ್ರಚೋದಕಗಳು  ಆಕೆಯ ಒಂದು ಜೊತೆ ಅಂಡಾಶಯಳಲ್ಲಿ ಯಾವುದೋ ಒಂದರಿಂದ ಒಂದು ಅಂಡವನ್ನು ಬಿಡುಗೊಡೆಗೊಳಿಸುತ್ತದೆ. ಆ ಒಂದು ಅಂಡ ಅಲ್ಲಿಂದ ಪ್ರಯಾಣಮಾಡಿ ಗರ್ಭಾಶಯವನ್ನು ತಲುಪಬೇಕು. ಒಂದೊಮ್ಮೆ ಗಂಡಿನೊಂದಿಗೆ ಲೈಂಗಿಕ ಸಂಪರ್ಕ ಉಂಟಾದಲ್ಲಿ ಗರ್ಭಾಶಯವನ್ನು ಪ್ರವೇಶಿಸಲಿರುವ ಗಂಡು ಲಿಂಗಾಣುಗಗಳಲ್ಲಿ ಒಂದರೊಡನೆ  ಜೊತೆಗೂಡಿ ಜೀವಸೃಷ್ಟಿ ಶುರುವಾಗಬೇಕಲ್ಲ? ಇದಕ್ಕೆಲ್ಲ ಸ್ವಲ್ಪ ಸಿದ್ಧತೆ ಬೇಕು. ಗಂಡು ಮತ್ತು ಹೆಣ್ಣು ಲಿಂಗಾಣುಗಳ ಸಮಾಗಮದ ನಂತರ ಫಲಿತಗೊಳ್ಳುವ ಜೀವಾಂಕುರವು ನೆಲೆನಿಲ್ಲಲು, ಪೋಷಣೆಯನ್ನು ಪಡೆಯಲು ಗರ್ಭಾಶಯದ ಒಳಗೋಡೆಯ ಮೇಲೆ ಸಾಕಷ್ಟು ಸಿದ್ಧತೆಗಳು ನಡೆಯಬೇಕು. ಈ ಸಿದ್ಧತೆಯಲ್ಲಿ ಗರ್ಭಾಶಯದ ಒಳಗೋಡೆಯ ಮೇಲೆ ನವಿರಾದ ರಕ್ತನಾಳಗಳು ಬೆಳೆದು ಪೋಷಣೆಯನ್ನು ಒದಗಿಸುವ ಮೆತ್ತನೆಯ ಹಾಸಿಗೆಯೊಂದನ್ನು ಸೃಷ್ಟಿಸುತ್ತವೆ. ಸಿದ್ಧತೆಗೆ ನಾಲ್ಕು ವಾರಗಳೇ ಬೇಕಾಗುತ್ತವೆ.. ಆದರೆ, ಇಷ್ಟಕ್ಕೆ ಗಂಡು ಲಿಂಗಾಣುವು ಲೈಂಗಿಕ ಕ್ರಿಯೆಯ ಮೂಲಕ ಹೆಣ್ಣು ದೇಹವನ್ನು ಪ್ರವೇಶಿಸಲೇ ಬೇಕೆಂದಿಲ್ಲವಲ್ಲ? ಲೈಂಗಿಕ  ಸಮಾಗಮವನ್ನು ಗಂಡು ಮತ್ತು ಹೆಣ್ಣುಗಳು ನಿರ್ಧರಿಸಬೇಕು. ಹಲವು ಸಾಮಾಜಿಕ ನಿಭಂದನೆಗಳು ಈ ನಿರ್ಧಾರದ ಮೇಲೆ ಪ್ರಭಾವ ಬೀರುತ್ತವೆ. ಅಂಡವು ಫಲಿತಗೊಳ್ಳದಾಗ ಗರ್ಭಕೋಶದಲ್ಲಾದ ಈ ಎಲ್ಲ ಸಿದ್ಧತೆಗಳು ವ್ಯರ್ಥವಾಗುತ್ತವೆ. ಆಗ ಗರ್ಭಕೋಶದ ಹಾಸಿಗೆ ಕಳಚಿಕೊಂಡು ಮುಟ್ಟಿನ ಸ್ರಾವವಾಗಿ ಹೊರಹೋಗುತ್ತದೆ.ಈ ಕ್ರಿಯೆ ನಾಲ್ಕೈದು ವಾರಗಳಿಗೊಮ್ಮೆ ಪುನರಾವರ್ತನೆ ಆಗುತ್ತಲೇ ಇರುತ್ತದೆ. ಋತುಸ್ರಾವವು ನಾಲ್ಕು-ಐದು ದಿನಗಳವರೆಗೂ ಉಂಟಾಗುತ್ತದೆ. ಹೆಣ್ಣು ಋತುಮತಿಯಾಗುವುದು ಒಂದು ಜೈವಿಕ ಕ್ರಿಯೆ. ಜೀವಸೃಷ್ಟಿಯ ಉದ್ಧೇಶವೂ ದೈವಿಕ.

ಜೀವಾಂಕುರವಾಗುವುದು  ಗರ್ಭಾಶಯದಲ್ಲಿ. ಆದರೆ, ಗರ್ಭ ಧರಿಸುವ ಹೆಣ್ಣು ಗರ್ಭಗುಡಿಗೆ ಹೋಗುವಂತಿಲ್ಲ. ಮುಟ್ಟಾಗಿರಲಿ, ಇಲ್ಲದಿರಲಿ, ಧರ್ಮ ಯಾವುದೇ ಇರಲಿ, ಗರ್ಭಗುಡಿಗೆ  ಹೆಣ್ಣಿನ ಪ್ರವೇಶ ನಿಷಿದ್ಧ. ಶಬರಿಮಲೆಯ ಅಯ್ಯಪ್ಪನ ದೇವಾಲಯ ಮಂಡಲಿಯ ಅಧ್ಯಕ್ಷರು ‘ಮಹಿಳೆಯರು ಮುಟ್ಟಾಗಿದ್ದಾರಾ ಎಂಬುದನ್ನು ಪತ್ತೆಹಚ್ಚುವ ಮೆಷಿನ್ ಬರಲಿ, ಆಮೇಲೆ ಮಹಿಳೆಯರನ್ನು ದೇವಾಲಯದೊಳಗೆ ಬಿಡುವ ಬಗ್ಗೆ ಯೋಚಿಸೋಣ’ ಎಂಬರ್ಥದ ಮಾತುಗಳನ್ನು ಆಡಿದ್ದರು. ಇದು ಧರ್ಮದ ಮಾತೂ ಅಲ್ಲ. ಸಮಾನತೆಯನ್ನು ಖಾತರಿಪಡಿಸುವ ನಮ್ಮ ಸಂವಿಧಾನದ ಮಾತೂ ಅಲ್ಲ. ಇದು ಮುಟ್ಟಿನ ಬಗ್ಗೆ ಇನ್ನೂ ನಮ್ಮ ಸಮಾಜದಲ್ಲಿ ನೆಲೆಯೂರಿರುವ ಅಜ್ಞಾನದ ಮಾತು.

ಮುಟ್ಟಿನ ಬಗ್ಗೆ ಹೆಣ್ಣು ಮಕ್ಕಳಿಗೆ ತಿಳುವಳಿಕೆ ನೀಡುವುದು ಎಷ್ಟು ಅವಶ್ಯಕವೋ ಗಂಡು ಮಕ್ಕಳಿಗೆ ತಿಳಿಸುವುದೂ ಅಷ್ಟೇ ಅವಶ್ಯಕ. ಇತ್ತೀಚೆಗೆ, ಒಂದು ಸಂಸ್ಥೆಯವರು ಉಚಿತವಾಗಿ ಸ್ಯಾನಿಟರಿ ಪ್ಯಾಡು ನೀಡಲು ಶಾಲೆಗೆ ಬಂದಿದ್ದರು. ಅದನ್ನು ಹಂಚುವಾಗ ಗಂಡುಮಕ್ಕಳು ಹೊರಹೋಗಲಿ ಎಂದು ಸೂಚಿಸಿದರು. “ ಬೇಡ, ಅವರೂ ಇರಲಿ” ಎಂದೆ. ಗಂಡು ಮಕ್ಕಳಿಗೂ ಮುಟ್ಟಿನ ತಿಳುವಳಿಕೆ ದೊರೆಯಿತು. ಹೆಣ್ಣು ಮಕ್ಕಳ ಸಂಕೋಚವೂ ಸಾಕಷ್ಟು ಕಡಿಮೆಯಾಯಿತು. ಕಾರ್ಯಕ್ರಮದ ಕೊನೆಯಲ್ಲಿ, ಸ್ಯಾನಿಟರಿ ಪ್ಯಾಡು ಹಿಡಿದುಕೊಂಡ ಹುಡುಗಿಯರ ಫೋಟೋ ಬೇಕೆಂದರು. “ಈಗಲಾದರೂ, ಹುಡುಗರು ಹೊರಹೋಗಲಿ ಅಲ್ವೇ” ಎಂದು ನನ್ನಲ್ಲಿ ಕೇಳಿದರು. ಆಗಲೂ ಬೇಡ ಎಂದೆ. ಹುಡುಗಿಯರು ಸ್ಯಾನಿಟರಿ ಪ್ಯಾಡ್‌ ಹಿಡಿದುಕೊಂಡು  ಅವರ ಕಾರ್ಯಕ್ರಮದಲ್ಲಿ ರೂಪದರ್ಶಿಗಳಾದರು. ಹುಡುಗರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.” ಎಷ್ಟು ಹುಡುಗರು ನಿಮ್ಮ ಅಮ್ಮನಿಗೋ ಅಕ್ಕನಿಗೋ ಅಂಗಡಿಯಿಂದ ಸ್ಯಾನಿಟರಿ ಪ್ಯಾಡು ತಂದುಕೊಟ್ಟಿದ್ದೀರಿ?” ಎಂದು ಪ್ರಶ್ನಿಸಿದೆ. ಕೆಲವರಷ್ಟೇ ಕೈ ಎತ್ತಿದರು. ಕೈ ಎತ್ತದಿದ್ದ ಒಬ್ಬ ಹುಡುಗನನ್ನು ಕೇಳಿದೆ., “ಕೇಳಿದ್ದರೆ ತಂದುಕೊಡುತ್ತಿದ್ದೆ” ಎಂದನು.. ಕ್ಲಾಸಿನಲ್ಲಿದ್ದ ಅವಳಿ ಮಕ್ಕಳಲ್ಲಿ ಒಬ್ಬ ಹುಡುಗ ಕೈಯೆತ್ತಿರಲಿಲ್ಲ. ಅವಳಿ  ಹುಡುಗಿ ಮಧ್ಯಪ್ರವೇಶಿಸಿ “ ನನಗೆ ಪ್ಯಾಡು ತಂದುಕೊಡುವವ ಅವನೇ, ಆದರೂ ಕೈ ಎತ್ತಿಲ್ಲ” ಎಂದು ದೂರಿದಳು. ಹೊಸ ತಲೆಮಾರು ಬದಲಾಗುತ್ತಿದೆ. ಶಬರಿಮಲೈ ಘಟನೆಯ ನಂತರ ಪಾಟಿಯಾಲದ ಸರ್ಕಾರಿ ಕಾಲೇಜಿನಲ್ಲಿ ಪದವಿ ಓದುತ್ತಿದ್ದ ನಿಖಿತಾ ಅಜಾದ್‌ ಎಂಬ ಯುವತಿ #Happy_to_Bleed ಎಂಬ ಹ್ಯಾಷ್‌ ಟ್ಯಾಗಿನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮುಟ್ಟಿನ ಕುರಿತು ಮಾತನಾಡಲು ಹೆಣ್ಣುಮಕ್ಕಳಿಗೆ ಕರೆನೀಡಿದರು. ಇದೊಂದು ಆಂದೋಲನವಾಗಿ ರೂಪುಗೊಂಡಿತು. ಯುವತಿಯರು ತಮ್ಮ ಅನುಭವ ಮತ್ತು ಆಶಯಗಳನ್ನು ನಿರ್ಬಿಡೆಯಾಗಿ ಹಂಚಿಕೊಂಡರು. ಈ ಆಂದೋಲನವು ಗಂಡಾಳಿಕೆಯ ಜಗತ್ತನ್ನು ಹೆಣ್ಣಿನ ಕಣ್ಣುಗಳಿಂದ ನೋಡುವ ದೃಷ್ಟಿಯನ್ನು ಒದಗಿಸಿತು.

ಮುಟ್ಟಿನ ಸ್ರಾವದಲ್ಲಿರುವುದು ದೇಹದಲ್ಲಿ ಹರಿಯುವ  ರಕ್ತವೇ. ಜೊತೆಗೆ, ಇತರ ಅಂಗಾಂಶಗಳು ಇರುತ್ತವೆ ಹೊರಗಿನ. ಆಮ್ಲಜನಕದೊಡನೆ ಸಂಯೋಜನೆಗೊಂಡು ಸ್ರಾವದ ಬಣ್ಣವು ಕಂದು-ಕೆಂಪು ಬಣ್ಣಕ್ಕೆ ತಿರುಗಿರುತ್ತದೆ. ಅದರಲ್ಲಿ ಮಲಿನವಾದದ್ದು ಯಾವುದೂ ಇಲ್ಲ. ಮಲ ಮೂತ್ರ ವಿಸರ್ಜನೆಗಳೂ ಮಲಿನವಲ್ಲ. ಜೈವಿಕ ಕ್ರಿಯೆಗಳಷ್ಟೆ. ಮುಟ್ಟಿನ ಸಮಯದಲ್ಲಿ ಸ್ನಾನ ಮಾಡಬಾರದೆಂಬ ಕಟ್ಟಳೆಯೂ ವೈಜ್ಞಾನಿಕವಲ್ಲ. ಬಿಸಿನೀರು ಸ್ನಾನವು ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಮುಟ್ಟಿನ ನೋವನ್ನು ಕಡಿಮೆ ಮಾಡುತ್ತದೆ. ಮುಟ್ಟಿನ ಸಮಯದಲ್ಲಿ ಹೆಣ್ಣು ಮಕ್ಕಳು ಹೊರಗಿರುವುದನ್ನು ಅವರಿಗೆ ನೀಡಿರುವ ವಿಶ್ರಾಂತಿಯೆಂದು ಕೆಲವರು ಸಮರ್ಥಿಸಿಕೊಳ್ಳುತ್ತಾರೆ. ಆದರೆ, ದೈಹಿಕ ಚಟುವಟಿಕೆಗಳು ಸೆರಟೋನಿನ್‌ ಎಂಬ ಚೋದಕ ದೃವ್ಯದ ಸೃವಿಕೆಗೆ ಕಾರಣವಾಗುತ್ತವೆ. ಈ ದೃವ್ಯವು ದೇಹದಲ್ಲಿ  ಹರಿದಾಡಿ ಖುಷಿಗೆ ಕಾರಣವಾಗುತ್ತದೆ. ನಿದ್ದೆ, ಜೀರ್ಣಕ್ರೀಯೆಗಳು ಸುಲಲಿತಗೊಳ್ಳುತ್ತವೆ.

ಮುಟ್ಟು, ಮುಟ್ಟಿನ ನೋವು, ಮುಟ್ಟಿನ ಕುರಿತಾದ ತಪ್ಪು ಕಲ್ಪನೆಗಳಷ್ಟೇ ಹೆಣ್ಣನ್ನು ಪೀಡಿಸುವುದಲ್ಲ, ಮುಟ್ಟನ್ನು ನಿರ್ವಹಿಸಲು ಬಳಸುವ ಸ್ಯಾನಟರಿ ಪ್ಯಾಡುಗಳನ್ನು ನಿರ್ವಹಿಸುವುದೂ  ಸವಾಲೇ ಸರಿ. ಮುಟ್ಟಿನ ಕಪ್ಪುಗಳು  ಹೆಣ್ಣುಮಕ್ಕಳನ್ನು ಪ್ಯಾಡುಗಳ ರಗಳೆಯಿಂದ ಪಾರುಮಾಡಬಲ್ಲದು. ಸಿಲಿಕೋನಿನಿಂದ ತಯಾರಿಸಿದ ಮುಟ್ಟಿನ ಕಪ್ಪುಗಳನ್ನು ಮರುಬಳಕೆ ಮಾಡಬಹುದು. ಈ ಕಪ್ಪು ಋತುಸ್ರಾವವನ್ನು ಹೀರುವುದಿಲ್ಲ;  ಅದನ್ನು ಸಂಗ್ರಹಿಸುತ್ತದೆ. ಸೂಕ್ತ ಸ್ವಚ್ಛತಾ ವಿಧಾನವನ್ನು ಬಳಸಿ ಕಪ್ಪನ್ನು ಮತ್ತೆ ಮತ್ತೆ ಬಳಸಬಹುದು. ಪ್ಯಾಡುಗಳಲ್ಲಿ ಪ್ಲಾಸ್ಟಿಕ್‌ ಇರುವುದರಿಂದ ಅವು ನೂರಾರು ವರ್ಷಗಳ ವರೆಗೆ ಕೊಳೆಯದೆ ಉಳಿಯುತ್ತವೆ. ಮುಟ್ಟಿನ ಕಪ್ಪುಗಳು ಮಹಿಳಾಸ್ನೇಹಿ ಅಷ್ಟೇ ಅಲ್ಲ, ಪರಿಸರ ಸ್ನೇಹಿ ಕೂಡಾ..

ಮುಟ್ಟಿನ ಕಪ್ಪುಗಳು ಹೊಸದಾದರೂ ಅವುಗಳನ್ನು ನಿರ್ವಹಿಸುವ ವಿಧಾನವನ್ನು ಹೆಣ್ಣುಮಕ್ಕಳು ಬೇಗನೆ ಕಲಿಯಬಲ್ಲರು. ಹಳೆಯ ನಂಬಿಕೆಗಳನ್ನು ನಿರ್ವಹಿಸುವುದು ಈಗಲೂ ಸವಾಲೇ!

 ಕರಾವಳಿ ಮುಂಜಾವು ಅಂಕಣ

 


Tuesday, 21 June 2022

ನೀನೊಬ್ಬ ಅಯೋಗ್ಯ ಎಂದು ಜರೆಯುವ ಪರೀಕ್ಷೆ..

 ಕಳೆದ ವರ್ಷ ಹತ್ತನೆಯ ತರಗತಿಯಲ್ಲಿದ್ದ ಒಬ್ಬ ಹುಡುಗ ಇತ್ತೀಚೆಗೆ ಬಸ್ಟ್ಯಾಂಡಿನಲ್ಲಿ ಭೇಟಿಯಾದ. ಆ ಬ್ಯಾಚಿನ ಅನೇಕ ಮಕ್ಕಳು ಲಾಕ್ ಡೌನ್ ನಂತರ ಸಾಕಷ್ಟು ಕಷ್ಟ-ನಷ್ಟಗಳನ್ನು ಅನುಭವಿಸಿದವರು.  ಒಂದು ಹೊತ್ತಿನ ಊಟ ಎಷ್ಟು ದುಬಾರಿ ಎಂಬ ಅರಿವಿದ್ದ ಮಕ್ಕಳೇ ಹೆಚ್ಚಿದ್ದ ಬ್ಯಾಚದು. ಶಾಲೆ ಮುಚ್ಚಿದ್ದರಿಂದ ಓದಿನ ಎಲ್ಲ ಹೊಣೆ ಅವರ ಮೇಲೆ ಬಿದ್ದಿತ್ತು. ವರ್ಚುವಲ್ ತರಗತಿಗಳು ಅವರ ಹತ್ತಿರ ಬಂದಿರಲಿಲ್ಲ. ಆದರೂ ಆ ಬ್ಯಾಚಿನ ಮಕ್ಕಳನ್ನು ಕೋವಿಡ್ ಬ್ಯಾಚು ಎಂದು ಹಗುರ ಧ್ವನಿಯಲ್ಲಿ ಅನೇಕರು ಕರೆಯುತ್ತಿದ್ದರು. ಅದೇ ಬ್ಯಾಚಿನವನು ಈ ಹುಡುಗ. ಈತ  ಎಸ್ ಎಸ್ ಎಲ್ ಸಿ ಪಾಸಾಗಲಾರ ಎಂದು ನಾವೆಲ್ಲ ಅಂದುಕೊಂಡಿದ್ದೆವು. ಆತನ ಉತ್ತರ ಪತ್ರಿಕೆಯಲ್ಲಿ ಮಾರ್ಕು ಹಾಕಬಹುದಾದ ಒಂದೇ ಒಂದು ಸಾಧ್ಯತೆ ಎಲ್ಲಾದರೂ ಇದೆಯೇ ಎಂದು ಹುಡುಕಾಡುತ್ತಿದ್ದೆವು. ಸಾಲದ್ದಕ್ಕೆ ಆತ ಕಲಿಕೆಯ ಹೊರತಾಗೂ ಯಾವ ಉತ್ಸಾಹವನ್ನೂ ತೋರುತ್ತಿರಲಿಲ್ಲ. ಈತ ಅಡಿಕೆ ಹೆಕ್ಕಲಷ್ಟೇ ಲಾಯಕ್ಕು ಎಂದು ಬಾಯಿಬಿಟ್ಟು ಹೇಳಿರಲಿಲ್ಲ ಅಷ್ಟೆ.

ಕೋವಿಡ್ ಕಾರಣಕ್ಕಾಗಿ ಎಲ್ಲರನ್ನೂ ಪಾಸು ಮಾಡಿದಾಗ ಆತನೂ ಎಸ್ ಎಸ್ ಎಲ್ ಸಿ ಪಾಸಾಗಿದ್ದ. ಮೇಷ್ಟ್ರನ್ನು ಕಂಡರೆ ಮುದುಡಿಹೋಗುತ್ತಿದ್ದ ಆ ಹುಡುಗ ಈಗ ನನ್ನನ್ನು ನೋಡಿದ್ದೇ ಬಳಿಬಂದಿದ್ದ. 'ಸರ್' ಎಂದ. ಅವನು‌ ಐ.ಟಿ.ಐ ಕೈಗಾರಿಕಾ ತರಬೇತಿ ಸೇರಿದ್ದು ಗೊತ್ತಿತ್ತು. 'ಹೇಗಾಗ್ತಿದೆ ಐ.ಟಿ.ಐ?" ಎಂದು ಕೇಳಿದೆ.

.


"ಸರ್, ಈ ಕೋರ್ಸಿಗೆ ಸೇರಿದ್ದು ಬಹಳ ಒಳ್ಳೇದಾಯ್ತು" ಎಂದ. "ನಿನಗೆ ಅಲ್ಲಿ ಯಾವುದು ಇಷ್ಟವಾಯ್ತು?" ಎಂದು ಕೇಳಿದೆ. ಬಹುಶಃ ನನ್ನ ಪ್ರಶ್ನೆಯಲ್ಲಿ ಅತನಿಗೆ ಕಲಿಯುವುದು ಹೇಗೆ ಇಷ್ಟವಾಯ್ತು ಎಂಬ ಆಶ್ಚರ್ಯವೂ ಇತ್ತಿರಬಹುದು. ಆತ ಹೆಚ್ಚು ಯೋಚಿಸದೆ ಹೇಳಿದ "ನಾವು ಶಾಲೆಯಲ್ಲಿ‌ ಕದ್ದು ಮುಚ್ಚಿ ಮಾಡ್ತಿದ್ದ ಬ್ಯಾಟರಿ- ಮೋಟಾರು ಪ್ರಯೋಗಗಳನ್ನೆಲ್ಲ ಈಗ ಅಲ್ಲಿ ಲ್ಯಾಬ್ ನಲ್ಲಿ ಮಾಡ್ತೇವೆ."  ಆ ಹುಡುಗ ಎಲೆಕ್ಟ್ರಿಕಲ್ ವಿಭಾಗ ಆರಿಸಿಕೊಂಡಿದ್ದಾನೆಂದು ಗೊತ್ತಾಯ್ತು. ಅಷ್ಟೇ ಅಲ್ಲ, ಶಾಲೆಯಲ್ಲಿ ಬ್ಯಾಟರಿ- ಮೋಟಾರು ಜೋಡಿಸಿ ಮಾದರಿಗಳನ್ನು ಮಾಡುತ್ತಿದ್ದನೆಂಬುದೂ ಈಗ ಗೊತ್ತಾಯ್ತು. ಬಹಳಷ್ಟು ಹುಡುಗರು ವಿಜ್ಞಾನದ ಮಾದರಿಗಳನ್ನು ಮಾಡಲು ಹೇಳಿದಾಗ ಎಲೆಕ್ಟ್ರಿಕಲ್ ಡಿವೈಸ್ ಗಳನ್ನು ತಯಾರಿಸುತ್ತಾರೆ. ಮೋಟರ್ ಬಳಸಿ ವಾಶಿಂಗ್ ಮಶೀನ್, ಕಳೆ ಕತ್ತರಿಸುವ ಯಂತ್ರ ಮತ್ತಿತ್ಯಾದಿ ಉಪಕರಣಗಳನ್ನು ತಯಾರಿಸುತ್ತಾರೆ. ಕಳ್ಳರು ಗೇಟು ದಾಟಿದಾಗ, ಬಾಗಿಲು ತೆರೆದಾಗ ಸೈರನ್ ಆಗುವ ಉಪಕರಣಗಳನ್ನೂ ಹೆಚ್ಚಾಗಿ ರೂಪಿಸುತ್ತಾರೆ. ಚಲಿಸುವ ಯಂತ್ರಗಳು ಮತ್ತು ಕಳ್ಳರನ್ನು ಹಿಡಿಯುವುದು ಹುಡುಗರಿಗೇಕೆ ಅಷ್ಟು ಆಸಕ್ತಿಯ ವಿಷಯ ಎಂಬ ಕುತೂಹಲ ನನಗೆ ಯಾವಾಗಲೂ ಇದೆ. ಆದರೆ, ಈ ಹುಡುಗ ಮೋಟಾರು ಬಳಸಿ ಮಾದರಿ ತಯಾರಿಸಿದ್ದು ನನಗೆ ಗೊತ್ತಿರಲಿಲ್ಲ. " ನೀನೂ ಬ್ಯಾಟರಿ-ಮೋಟಾರು ಬಳಸಿ ಮಾದರಿ ತಯಾರಿಸುತ್ತಿದ್ದೆಯಾ?" ಎಂದು ಆಶ್ಚರ್ಯದಿಂದ ಕೇಳಿದೆ. ನನ್ನ ಆಶ್ಚರ್ಯ ಆತನಿಗೆ ನಿರೀಕ್ಷಿತವಾಗಿತ್ತು ಎಂಬುದು ಆತನ ಮಾತಲ್ಲಿ ಗೊತ್ತಾಯ್ತು. " ಹೌದು ಸರ್, ನಾನೇ ಮಾಡ್ತಿದ್ದುದು ಅವೆಲ್ಲ.. ಆದರೆ, ಅದಕ್ಕೆ ವಿವರಣೆ ಕೊಡಲು ಆಗ್ತಿರಲಿಲ್ಲವಾದ್ದರಿಂದ ಬೇರೆಯವರಿಗೆ  ಕೊಡ್ತಿದ್ದೆ" ಎಂದ.  "ಓ ಹೌದಾ?.. ಈಗ ನೀನು ಮಾಡಿದ್ದನ್ನು ನೀನೇ ವಿವರಿಸ್ತಿಯಲ್ಲ?" ಎಂದೆ.

" ಹೌದು ಸರ್, ಈಗ ಇಂತದ್ದನೆಲ್ಲ ಮಾಡ್ತಾ ನಾವೇನು ಮಾಡ್ತಿದ್ದೇವೆಂದು ಅರ್ಥವಾಗ್ತಾಹೋಗ್ತಿದೆ.. ಇಲ್ಲಿ ಈ ತರ ನಾವೇ ಮಾಡುವುದು  ಜಾಸ್ತಿ ಇರುತ್ತದೆ. ಕೇಳುವುದು ಕಡಿಮೆ" ಎಂದ.

ಅವನು ಇಷ್ಟೆಲ್ಲ ಮಾತನಾಡಬಲ್ಲೆನಾ ಎಂದು ಆಶ್ಚರ್ಯವಾಯ್ತು. ಶಾಲೆಯಲ್ಲಿ ಒಂದೇ ಒಂದು ಬಾರಿಯೂ ಹೌದು-ಅಲ್ಲ ಕ್ಕಿಂತ ಹೆಚ್ಚಿನದಾದ ಉತ್ತರ ಕೊಟ್ಟಿದ್ದೇ ಇರಲಿಲ್ಲ.

"ಶಾಲೆಯ ಹಾಗೆ ಪರೀಕ್ಷೆ, ಓದು ಇರುವುದಿಲ್ಲವಾ ಅಲ್ಲಿ? " ಎಂದು ಕೇಳಿದೆ.

" ಇರುತ್ತದೆ ಸರ್. ಓದಿನ ಒತ್ತಡ ಇರುವುದಿಲ್ಲ, ಪರೀಕ್ಷೆ ಎಂದರೆ ಓದು ಮಾತ್ರ ಆಗಿರುವುದಿಲ್ಲ. ನಾವು ಸ್ವತಃ ಮಾಡಿದ ಚಟುವಟಿಕೆಗಳೇ ನಮಗೆ ಪರೀಕ್ಷೆಯಲ್ಲಿ ಉತ್ತರ ಬರೆಯಲು ಸಹಾಯವಾಗುತ್ತವೆ" ಎಂದ. ಆತ ಏನನ್ನು ಹೇಳಿದ ಎನ್ನುವುದರಷ್ಟೇ ಆತನ  ನುಡಿಗಳ ಸ್ಪಷ್ಟತೆಯೂ ಇಷ್ಟವಾಯ್ತು.

"ಒಳ್ಳೆಯ ಉಪನ್ಯಾಕರು ಸಿಕ್ಕಿದ್ದಾರೆ, ಹಾಗಾದರೆ.." ಎಂದೆ. ಆತನ ಪ್ರತಿಕ್ರಿಯೆ ನಿರೀಕ್ಷಿಸುತ್ತಾ.

" ಹೌದು ಸರ್, ಇಡೀ ದಿನ ಓದು ಓದು ಎಂದು ಒತ್ತಡ ಹೇರುವುದಿಲ್ಲ. ನಮಗೆ ಕಲಿಯಲು ಅವಕಾಶ ಮಾಡಿಕೊಡುತ್ತಾರೆ" ಎಂದ. ಆತ ನೇರವಾಗಿ ಮಾತನಾಡುತ್ತಿದ್ದ. ಆತನ ಪದಗಳು ಪ್ರಾಮಾಣಿಕವಾಗಿದ್ದವು. ಯಾರನ್ನೂ ಗುರಿಯಾಗಿಸಿ ಪದಗಳನ್ನು ಜಾಣ್ಮೆಯಿಂದ ಬಳಸುವ ಅವಶ್ಯಕತೆ ಆತನಿಗಿರಲಿಲ್ಲ. ಆದರೂ, ಆತನ ಮಾತುಗಳು ನನ್ನನ್ನು ಇರಿಯುತ್ತಿದ್ದವು.

ಕಲಿಕೆಯ ಕುರಿತಾಗಿ ಈ ಹುಡುಗನಿಗಿರುವ ಗ್ರಹಿಕೆ ನಮಗೇಕೆ ದಕ್ಕುವುದಿಲ್ಲ? ಅಥವಾ ಇವೆಲ್ಲ ಗೊತ್ತಿದ್ದೂ ನಾವೇಕೆ ಕಲಿಯುವ ಸರಿಯಾದ ದಾರಿಯನ್ನು ಮಕ್ಕಳಿಗೆ ತೆರೆಯುವುದಿಲ್ಲ? ಇದರಲ್ಲಿ ನನ್ನ ತಪ್ಪೆಷ್ಟು? ನಾನೂ ಆತನಂತೆ ಇಲ್ಲಿ ಸಂತ್ರಸ್ತನೇ? ಹತ್ತಾರು ಪ್ರಶ್ನೆಗಳು ಮೂಡಿದವು.

ಅನೇಕ ಸಹೋದ್ಯೋಗಿಗಳು ಆಗಾಗ ಸಲಹೆಯ ರೂಪದ ದೂರನ್ನು ಹೇಳ್ತಿರ್ತಾರೆ- " ಕ್ಲಾಸಲ್ಲಿ ಕತೆ ಹೇಳ್ತಾ, ಪ್ರಯೋಗ ಮಾಡ್ತಾ ಇದ್ರೆ ಮಕ್ಕಳಿಗೆ ಇಷ್ಟವಾಗಬಹುದು.. ಪರೀಕ್ಷೆಯಲ್ಲಿ ಮಾರ್ಕು ಸಿಗದು" ಇನ್ನು ಕೆಲವರು ಇದನ್ನೇ ಬೇರೆ ರೂಪದಲ್ಲಿ ಹೇಳ್ತಾರೆ " ಡಿಸೆಂಬರ್ ವರೆಗೆ ಪಾಠ ಮುಗಿಸ್ಕೋಬೇಕು.. ಆ ನಂತರದ ಎರಡುವರೆ ತಿಂಗಳಲ್ಲಿ ನಾವೆಷ್ಟು ರಿವಿಷನ್ ಮಾಡ್ತೇವೋ ಅದಷ್ಟೇ ಪ್ರಯೋಜನಕ್ಕೆ ಬರುವುದು."

 

  ಈ ಲೇಖನವನ್ನೂ ಓದಿ 


ಕಲಿಯುವುದೆಂದರೆ ಪ್ರಶ್ನೆಗಳ ಬೆನ್ನಮೇಲಿನ ಸವಾರಿ

ರಿವಿಷನ್ ಎಂದರೆ ಮತ್ತೆ ಮತ್ತೆ ಪರೀಕ್ಷೆ.. ಬಾಯಿಪಾಠ, ಪರೀಕ್ಷೆಯ ಸಂಭವನೀಯ ಪ್ರಶ್ನೆಗಳಿಗಷ್ಟೇ ಅಲ್ಲಿ ಮಹತ್ವ.

.

ಸಹೋದ್ಯೋಗಿಗಳ ಮಾತಲ್ಲಿ ಯಾವ ತಪ್ಪೂ ಇರಲಿಲ್ಲ. ಹಾಗೆ ಮಾಡಿದರಷ್ಟೇ ಹೆಚ್ಚು ಮಕ್ಕಳು ಪಾಸಾಗಬಹುದು ಎಂಬುದು ನನ್ನ ನಂಬಿಕೆಯೂ ಹೌದು.

ಹಾಗಾದರೆ ಪಾಸಾಗುವುದು ಎಂದರೇನು? ಬಾಯಿಪಾಠ ಮಾಡಿದಷ್ಟಕ್ಕೆ ಕಲಿಕೆ ಉಂಟಾಗಿದೆ ಎಂದು ಒಪ್ಪುವ ಈ ಮೌಲ್ಯಮಾಪನ ಮಾಡಿರುವ ಅನ್ಯಾಯಕ್ಕೆ ಎಷ್ಟೊಂದು ಪ್ರತಿಭಾವಂತರು ಸರಿದುಹೋಗಿರಬಹುದು? ಎಲೆಯ ಚೂರೊಂದನ್ನು ಮೂಸಿನೋಡಿ ಯಾವ ಸಸ್ಯ ಎಂದು ಹೇಳಬಲ್ಲ ಕಾಡಿನ ಮಕ್ಕಳೂ ನನ್ನ ಶಾಲೆಯಲ್ಲಿದ್ದಾರೆ. ಅವರ ಜ್ಞಾನವು ಮೌಲ್ಯಮಾಪನದ ತೆಕ್ಕೆಗೆ ಸಿಗದಿರುವುದೇಕೆ?

ಆ ಹುಡುಗನ ಬಸ್ ಬಂತು. "ಬೈ ಸರ್" ಎಂದವನೇ ಮತ್ತೆನೋ ನೆನಪಾದವನಂತೆ " ಈ ಸಲದ ಎಸ್ ಎಸ್ ಎಲ್ ಸಿ ರಿಸಲ್ಟ್ ಯಾವಾಗಂತೆ ಸರ್?" ಎಂದು ಕೇಳಿದ.

" ಸದ್ಯ ಬರಬಹುದು" ಎಂದೆ. ಹಾಗೆನ್ನುವಾಗ ಕೆಲವು‌ ಮಕ್ಕಳ ಮುಖಗಳು ಕಣ್ಣೆದುರು ಬಂದವು. ಈ ಅಂಕಣದ ಮುಂದಿನ ಬರೆಹ ಬರುವುದರೊಳಗಾಗಿ ಎಸ್ ಎಸ್ ಎಲ್ ಸಿ ಫಲಿತಾಂಶ ಬರಲಿದೆ. "ನೀನು ಒಬ್ಬ ಫೇಲ್ಯೂರ್" ಎಂದು ಆ ಫಲಿತಾಂಶ ಕೆಲವರಿಗಾದರೂ ಹೇಳಲಿದೆ; ಅದೂ ನಿಷ್ಕಾರಣವಾಗಿ, ನಿಷ್ಕರುಣೆಯಿಂದ.

ಕಲಿಯುವುದೆಂದರೆ ಪ್ರಶ್ನೆಗಳ ಬೆನ್ನ ಮೇಲಿನ ಸವಾರಿ.

ಕಲಿಯುವುದು ಒಂದು ಸಾಮಾಜಿಕ ಪ್ರಕ್ರಿಯೆ. ನಾವು ಒಡನಾಡುತ್ತಾ ಕಲಿಯುತ್ತೇವೆ. ಕಲಿಸುವವರು ಮತ್ತು ಕಲಿಯುವವರು ಎಂದು ವ್ಯಕ್ತಿಗಳನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ. ಎಲ್ಲರೂ ಜೊತೆಯಾಗಿ ಕಲಿಯುತ್ತಿರುತ್ತೇವೆ. 



ಶಿಕ್ಷಕ-ಶಿಕ್ಷಕಿಯರು ತಮ್ಮ ವಿದ್ಯಾಭ್ಯಾಸದ ಸಮಯದಲ್ಲಿ ಕಲಿತಿರುವುದಕ್ಕಿಂತ ಹೆಚ್ಚು ವಿಷಯಗಳನ್ನು ಮಕ್ಕಳೊಂದಿಗೆ ಕಲಿಯುತ್ತಾರೆ. ಒಂದೆರಡು ಉದಾಹರಣೆಗಳು ಈ ಮಾತನ್ನು ಸಮರ್ಥಿಸಬಲ್ಲವು.
.
ನಾನು ಆಗಷ್ಟೇ ಶಿಕ್ಷಕನಾಗಿ ಕೆಲಸ ಆರಂಭಿಸಿದ್ದೆ. ಲೋಹಗಳನ್ನು ಅವುಗಳ ಅದುರಿನಿಂದ ಉದ್ಧರಿಸುವ ವಿಧಾನಗಳ ಕುರಿತು ಹತ್ತನೆಯ ತರಗತಿಯ ವಿದ್ಯಾರ್ಥಿಗಳಿಗೆ ಪಾಠ ನಡೆಯುತಿತ್ತು. ಕಬ್ಬಿಣವನ್ನು ಅದರ ಅದಿರಿನಿಂದ ಉದ್ಧರಿಸುವ ಊದುಕುಲುಮೆಯನ್ನು ನಾನಂತೂ ನೋಡಿದ್ದೇ ಇರಲಿಲ್ಲ. ಅದರ ಕುರಿತು ನನಗಾಗ ಗೊತ್ತಿದ್ದುದು ಪಠ್ಯಪುಸ್ತಕದಲ್ಲಿ ನೀಡಿದ ಮಾಹಿತಿಯಷ್ಟೇ ಎನ್ನಬಹುದು. ಊದುಕುಲುಮೆಯೊಳಗೆ ಬಿಸಿಗಾಳಿಯನ್ನು ಹಾಯಿಸಿ ಸಾವಿರದಾರುನೂರು ಡಿಗ್ರೀ ಸೆಲ್ಸಿಯಸ್‌ವರೆಗೆ ತಾಪಮಾನವನ್ನು ಹೆಚ್ಚಿಸಿದಾಗ  ಕುಲುಮೆಯೊಳಗಿನ  ಕೋಕ್‌  ಕಾದ ಕಬ್ಬಿಣದ ಹೆಮಟೈಟ್‌ ಅದಿರನ್ನು ಅಪಕರ್ಷಿಸಿಸುತ್ತದೆ. ದೃವಿತ ಕಬ್ಬಿಣವು ಕುಲುಮೆಯ ಬುಡಭಾಗದಲ್ಲಿ ಸಂಗ್ರಹಗೊಳ್ಳುತ್ತದೆ ಇತ್ಯಾದಿ ಇತ್ಯಾದಿ.. ವಿವರಗಳನ್ನು ಬೋರ್ಡಿನ ಮೇಲಿರುವ ಚಿತ್ರ ತೋರಿಸುತ್ತಾ ವಿವರಿಸುತ್ತಿದ್ದೆ. ಹುಡುಗಿಯೊಬ್ಬಳು "ಸರ್‌, ಅಷ್ಟು ತಾಪಮಾನದಲ್ಲಿ ಆ ಕುಲುಮೆ ಕರಗಿಹೋಗುವುದಿಲ್ವಾ?" ಎಂದು ಕೇಳಿದಳು. ಇದುವರೆಗೂ ಬೋರ್ಡಿನ ಮೇಲಿನ ಚಿತ್ರವನ್ನೇ ಪಿಳಿ ಪಿಳಿ ನೋಡುತ್ತಾ ನಾನು ಹೇಳುತ್ತಿದ್ದ, ನನಗೂ ಗೊತ್ತಿಲ್ಲದ ವಿಷಯಗಳನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದ ಮಕ್ಕಳಲ್ಲಿ ವಿದ್ಯುತ್‌ ಸಂಚಾರವಾದಂತಾಯ್ತು. ಪ್ರಶ್ನೆಗಳ ಖಜಾನೆಯ ಬಾಗಿಲು ತೆರೆದುಕೊಂಡಿತು. ಇನ್ನೊಬ್ಬಳು ಕೇಳಿದಳು "ಸರ್‌, ಕುಲುಮೆಯನ್ನು ಯಾವುದರಿಂದ ಮಾಡಿರ್ತಾರೆ?" 
ಆ ಅಧ್ಯಾಯಕ್ಕೆ ಸಂಬಂಧಿಸಿದ ಅಭ್ಯಾಸದ ಪ್ರಶ್ನೆಗಳನ್ನು ಕೇಳಿದ್ದರೆ ಸುಲಭವಾಗಿ ಉತ್ತರಿಸುವಷ್ಟು ಸಿದ್ಧತೆ ಮಾಡಿಕೊಂಡಿದ್ದ ನನ್ನ ತಲೆಯೊಳಗೆ ಇಂತಹ ಪ್ರಶ್ನೆಗಳು ಬಂದೇ ಇರಲಿಲ್ಲ. ಕುಲುಮೆಯನ್ನು ಯಾವುದರಿಂದ ಮಾಡಿರುತ್ತಾರೆ ಎಂಬ ವಿವರ ಪಠ್ಯಪುಸ್ತಕದಲ್ಲಿ ಇದ್ದಿರಲಿಲ್ಲ. ಮಾರನೆಯ ದಿನ ಮೆಟಲರ್ಜಿಯ ಪುಸ್ತಕ ಓದಿಕೊಂಡು ಮಕ್ಕಳ ಅನುಮಾನಗಳನ್ನೆಲ್ಲ ಪರಿಹರಿಸಿದೆ. ಎಷ್ಟೇ ಸಿದ್ಧತೆ ಮಾಡಿಕೊಂಡು ಹೋಗಿದ್ದರೂ ಮಕ್ಕಳು ಕೇಳಿದ ಎಲ್ಲ ಪ್ರಶ್ನೆಗಳಿಗೂ ಆಗ ನನ್ನಲ್ಲಿ ಉತ್ತರ ಇರಲಿಲ್ಲ, ಈಗಲೂ ಇಲ್ಲ. ಪ್ರತಿ ತರಗತಿಯಲ್ಲೂ ಮಕ್ಕಳು ಕೇಳುವ ಪ್ರಶ್ನೆಗಳು ನನ್ನನ್ನು ನಿತ್ಯ ವಿದ್ಯಾರ್ಥಿಯಾಗಿಸಿದ ಹಾಗೆ ಎಲ್ಲ ಶಿಕ್ಷಕರ ಕಲಿಕೆಯನ್ನೂ ನಿರಂತರಗೊಳಿಸಿವೆ.
ಪ್ರಾಥಮಿಕ ಶಾಲೆಯ ಪುಟ್ಟ ಮಕ್ಕಳು ದೊಡ್ಡ ತರಗತಿಯ ಮಕ್ಕಳಿಗಿಂತ ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾರೆ. ಮಕ್ಕಳು ಪ್ರಶ್ನೆಗಳನ್ನು ಕೇಳಿದಾಗಲೋ, ತಮಗೇ ಅನುಮಾನ ಬಂದಾಗಲೋ ಅಥವಾ ಪುಸ್ತಕದಲ್ಲೇ ಇರುವ ʻನಿಮ್ಮ ಶಿಕ್ಷಕರನ್ನು ಕೇಳಿ ತಿಳಿಯಿರಿʼ ಎಂಬಂತಹ ಚಟುವಟಿಕೆಗಳ ಕಾರಣದಿಂದಲೋ ಪಕ್ಕದ ಪ್ರಾಥಮಿಕ ಶಾಲೆಯ ಶಿಕ್ಷಕ ಶಿಕ್ಷಕಿಯರು ಮುಂಚೆ ಸಮೀಪದ ಪ್ರೌಢಶಾಲೆಯ ಶಿಕ್ಷಕರ ಬಳಿ ಸಮಾಲೋಚನೆ ನಡೆಸುವ ರೂಢಿ ಇತ್ತು. ಈಗ ಅಂತದ್ದಕ್ಕೆಲ್ಲ ಗೂಗಲ್‌ ಮಾಡುತ್ತಾರೆ. ನನ್ನ ಬಳಿ ಒಮ್ಮೆ ಶಿಕ್ಷಕರೊಬ್ಬರು  " ನಾವು ಮಾಂಸವನ್ನು ಜೀರ್ಣಿಸಿಕೊಳ್ಳುತ್ತೇವೆ, ಆದರೆ ಹಸಿವಾದಾಗ ನಮ್ಮ ಜಠರವೇ ಏಕೆ ಜೀರ್ಣವಾಗುವುದಿಲ್ಲ?" ಎಂದು ಕೇಳಿದ್ದರು. ಈ ಪ್ರಶ್ನೆಯನ್ನು ತರಗತಿಯಲ್ಲಿ ಮಗುವೊಂದು ಅವರನ್ನು ಕೇಳಿತ್ತಂತೆ. ಪುಠಾಣಿ ಮಕ್ಕಳು ಕೇಳುವ ಪ್ರಶ್ನೆಗಳು ಆ ಪ್ರಶ್ನೆಯ ಉತ್ತರಕ್ಕಿಂತ ಮುಖ್ಯವೆನಿಸುತ್ತವೆ. " ಮಳೆಯಲ್ಲಿ ಕಾಮನಬಿಲ್ಲು ನೆನೆಯುವುದಿಲ್ಲವಾ ಸರ್?"‌ ಎಂಬ ಪ್ರಶ್ನೆಯನ್ನು ದೊಡ್ಡವರು ಕೇಳಬಲ್ಲರೆ?
.
ಎಂಟನೆಯ ತರಗತಿಯ ವಿದ್ಯಾರ್ಥಿಗಳಿಗೆ ಸೂಕ್ಷ್ಮಾಣು ಜೀವಿಗಳ ಪಾಠವನ್ನು ಮಾಡುತ್ತಿದ್ದ ಸಹೋದ್ಯೋಗಿಯೊಬ್ಬರು ಇಂತಹ ಪ್ರಶ್ನೆಗಳ ಮೂಲಕವೇ ತರಗತಿ ಸಂವಹನವನ್ನು ಪರಿಣಾಮಕಾರಿಯಾಗಿಸಿದ ಪ್ರಸಂಗವನ್ನು ಹಂಚಿಕೊಂಡಿದ್ದರು. ಹೆಣ್ಣು ಅನಾಫೆಲಿಸ್‌ ಸೊಳ್ಳೆಯು ಮಲೇರಿಯಾ ರೋಗವನ್ನು ಹರಡುತ್ತದೆ ಎಂಬ ಮಾಹಿತಿಯನ್ನು ಕ್ಲಾಸಿನಲ್ಲಿ ಹೇಳಿಗಾಗ ವಿದ್ಯಾರ್ಥಿಯೊಬ್ಬ " ಗಂಡು ಅನಾಫೆಲಿಸ್‌ ಸೊಳ್ಳೆ ಯಾಕೆ ಮಲೇರಿಯಾ ಹರಡುವುದಿಲ್ಲ ಸರ್?" ಎಂದು ಕೇಳಿದನಂತೆ. ಈಗ ಇಂತಹ ಪ್ರಶ್ನೆಗಳಿಗೆಲ್ಲ ಕ್ಷಣಾರ್ಧದಲ್ಲಿ ಗೂಗಲ್‌ ಮಾಡಿ ಉತ್ತರ ಪಡೆಯಬಹುದು. ಆದರೆ, ಆಗ ಈ ಸೌಕರ್ಯ ಇರಲಿಲ್ಲ.‌ ಪರೀಕ್ಷೆಗೆ ಬೇಕಷ್ಟೇ ಕಲಿಯುವುದಾದರೆ ಇಂತಹ ಪ್ರಶ್ನೆಗಳು ಹುಟ್ಟುವುದೇ ಇಲ್ಲ. ತನಗೆ ಉತ್ತರ ಗೊತ್ತಿಲ್ಲದೆ ಇರುವಾಗಲೂ ಆ ಪ್ರಶ್ನೆಯನ್ನು ಶಿಕ್ಷಕರು ಬಹಳ ಚೆನ್ನಾಗಿ ನಿರ್ವಹಿಸಿದರು. " ಓಹ! ಹೌದಲ್ಲ? ನಂಗ್ಯಾಕೆ ಇದು ಹೊಳಿಲಿಲ್ಲ?" ಎಂದು ಹೇಳಿದರು. ಎಷ್ಟು ಚೆಂದದ ಪ್ರತಿಕ್ರಿಯೆ. ಎಷ್ಟು ಪ್ರಾಮಾಣಿಕ ಮತ್ತು ಉತ್ತೇಜಕ. ಶಿಕ್ಷಕರ ಈ ಉತ್ತರ ಮಕ್ಕಳ ಉತ್ಸಾಹವನ್ನು ಹೆಚ್ಚಿಸಿತು. ಅವರು ಬೇರೆ ಬೇರೆ ಉತ್ತರಗಳನ್ನು ಹೇಳಿದರು. ಆ ಉತ್ತರಗಳು ಸರಿಯೋ ತಪ್ಪೋ ಎಂಬುದು ಶಿಕ್ಷಕರಿಗೆ ಗೊತ್ತಾಗಲಿಲ್ಲ. ಕೊನೆಯಲ್ಲಿ, "ನಾಳೆ ನಾನು ಈ ಪ್ರಶ್ನೆಗೆ ಉತ್ತರ ಹುಡುಕುವೆ, ನೀವೂ ಹುಡುಕಿಕೊಂಡು ಬನ್ನಿ" ಎಂದರು. ಕೆಲವು ಮಕ್ಕಳು ಮಧ್ಯಾಹ್ನದ ಊಟದ ವಿರಾಮದಲ್ಲಿ ತಮಗೆ ಈ ಹಿಂದೆ ವಿಜ್ಞಾನ ಬೋಧಿಸಿದ ಪ್ರಾಥಮಿಕ ಶಾಲೆಯ ಶಿಕ್ಷಕಿಯ ಬಳಿ ಪ್ರಶ್ನೆಯನ್ನು ಕೊಂಡೊಯ್ದರು. ಅವರೂ ತನಗೆ ಗೊತ್ತಿಲ್ಲ ಎಂದಿರಬೇಕು. ಹತ್ತಾರು ಜನರನ್ನು ವಿಚಾರಿಸಿ ಮಾರನೆಯ ದಿನ  ತರಗತಿಗೆ ಮರಳಿ ಬಂದಾಗ, ಶಿಕ್ಷಕರು ತಾನು ಸಂಗ್ರಹಿಸಿದ ಉತ್ತರ ಹೇಳುವ ಬದಲು ಮಕ್ಕಳು ಬೇರೆ ಬೇರೆ ಜನರಿಂದ ಪಡೆದು ತಂದಿದ್ದ ಉತ್ತರಗಳನ್ನೆಲ್ಲ ಆಲಿಸಿದರು. ಕೊನೆಯಲ್ಲಿ, ಸರಿ ಉತ್ತರವನ್ನು ತಿಳಿಸಿ, ಕಾರಣವನ್ನು ವಿವರಿಸಿದರು. ಹೆಣ್ಣು ಸೊಳ್ಳೆಗಳು ಬ್ರಹತ್‌ ಸಂಖ್ಯೆಯಲ್ಲಿ ಮೊಟ್ಟೆ ಹಾಕುತ್ತವೆ. ಈ ಕಾರಣಕ್ಕಾಗಿ ಅವುಗಳಿಗೆ ಪೋಷಕದ್ರವ್ಯಗಳ ಅಗತ್ಯ ಅತಿ ಹೆಚ್ಚು. ಆದುದರಿಂದ ಅವು ರಕ್ತ ಹೀರುತ್ತವೆ. ಗಂಡು ಅನಾಫೆಲಿಸ್ ಸೊಳ್ಳೆಯಲ್ಲಿ ರಕ್ತ ಹೀರಬಲ್ಲಂತಹ ದೇಹಭಾಗವೇ ಇರುವುದಿಲ್ಲ. ‌

ಒಂದು ಪ್ರಶ್ನೆ ತರಗತಿ ವ್ಯವಹಾರವನ್ನೇ ರಚನಾತ್ಮಕವಾಗಿಸಬಲ್ಲದು. ಶಿಕ್ಷಕ-ಶಿಕ್ಷಕಿಯರು ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಬಲ್ಲ ಎನಸೈಕ್ಲೋಪೀಡಿಯಾಗಳಲ್ಲ. ಅವರು ಮಕ್ಕಳಲ್ಲಿ ಪ್ರಶ್ನೆಗಳನ್ನು ಹುಟ್ಟಿಸಬಲ್ಲರು. ಪ್ರಶ್ನೆಗಳು ಮಕ್ಕಳನ್ನು ʻಉತ್ತರಾಭಿಮುಖಿʼಯಾಗಿಸುತ್ತವೆ. ಇದರಿಂದ ಮಕ್ಕಳು ಜ್ಞಾನದ ನಿರ್ಮಾತೃರಾಗುತ್ತಾರೆ.
ಶಾಖದ ಪಾಠ ಮಾಡುವಾಗ ಕ್ಲಿನಿಕಲ್‌ ಥರ್ಮಾಮೀಟರ್‌ ತೋರಿಸಿ ಸೆಲ್ಸಿಯಸ್ಸಿಗೂ ಫ್ಯಾರನ್‌ ಹೀಟಿಗೂ ಇರುವ ಸಂಬಂಧ ತಿಳಿಸುತ್ತಿದ್ದೆ. ವಿದ್ಯಾರ್ಥಿಯೊಬ್ಬ ನಡುವೆಯೇ  " ದನಗಳ ಜ್ವರ ಅಳೆಯಲು ಥರ್ಮಾಮೀಟರ್‌ ಎಲ್ಲಿಡ್ತಾರೆ ಗೊತ್ತಾ ಸರ್?"‌ ಎಂದು ಕೇಳಿದ. ಆತನಿಗೆ ಉತ್ತರ ಗೊತ್ತಿತ್ತು. ನನಗೆ ಉತ್ತರ ಗೊತ್ತಿಲ್ಲವೆಂದೂ ಆತನಿಗೆ ಗೊತ್ತಾಗಿ ಹೋಗಿತ್ತು. " ಎಲ್ಲಿ ಮಾರಾಯಾ?" ಎಂದೆ. 
ಬಾಲ ಎತ್ತಿ ಥರ್ಮಾಮೀಟರಿಟ್ಟು  ದನಗಳ ಜ್ವರ ಅಳೆಯುವ ವಿಧಾನವನ್ನು ನಾಟಕೀಯವಾಗಿ ವಿವರಿಸಿದ. ಆಸಕ್ತಿಯಿಂದ ಆಲಿಸಿದೆ.

ಜೀವಪ್ರೀತಿಯ ಕೊಡೆಯೊಂದು ಸದಾ ನೆರಳಾಗಲಿ!

 ಮೂರು ವರ್ಷಗಳ ಹಿಂದೆ ಶಿಕ್ಷಣ ಇಲಾಖೆಯು ಭಾರತ  ಜ್ಞಾನ ವಿಜ್ಞಾನ ಸಮಿತಿಯ ಜೊತೆಗೂಡಿ ನಡೆಸಿದ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಹಬ್ಬಕ್ಕಾಗಿ  ಶ್ರೀರಂಗಪಟ್ಟಣಕ್ಕೆ ಹೋದಾಗ ಸಯಿದಾ ನಕ್ರಾ ಎಂಬ ಹುಡುಗಿಯನ್ನು ಭೇಟಿಯಾಗಿದ್ದೆ. ಆಗ ಆಕೆ ಇನ್ನೂ ಪಿ.ಯು.ಸಿ ಓದುತ್ತಿದ್ದರು. ಹಿಂದಿನ ವರ್ಷ ಆಕೆ ಹತ್ತನೇ ತರಗತಿಯಲ್ಲಿರುವಾಗ ವಿನ್ಯಾಸಗೊಳಿಸಿದ ಆಲ್‌ ಇನ್‌ ಒನ್‌ ಕೊಡೆಗೆ ಇನಸ್ಪೈರ್‌ ರಾಷ್ಟ್ರೀಯ ಪ್ರಶಸ್ತಿ ಬಂದಿತ್ತು. ರಾಷ್ಟ್ರಪತಿಗಳ ವಿಶೇಷ ಪ್ರಶಸ್ತಿಯೂ ಆಕೆಗೆ ಒಲಿದಿತ್ತು. ಆಕೆಯ ಸಂಶೋಧನೆಯು ಮಿದುಳಿನಿಂದ ಕಾರ್ಯಗತವಾದದ್ದಕ್ಕಿಂತ ಹೆಚ್ಚಾಗಿ ಹೃದಯದಿಂದ ಪರಿಕಲ್ಪಿತವಾಗಿತ್ತು.

ತರಕಾರಿ ಕೊಳ್ಳಲು ಮಾರುಕಟ್ಟೆಗೆ ಹೋದಾಗ ರಸ್ತೆಯ ಎರಡೂ ಬದಿಯಲ್ಲಿ ವ್ಯಾಪಾರಕ್ಕೆ ಕುಳಿತಿದ್ದ ಮಹಿಳೆಯರನ್ನು ಕಂಡು ಸಯೀದಾ ದುಃಖಿತರಾಗುತ್ತಿದ್ದರು. ಬಿಸಿಲು, ಮಳೆಯೆನ್ನದೆ ಹೊಟ್ಟೆಪಾಡಿಗಾಗಿ ರಸ್ತೆಯ ಬದಿಯಲ್ಲಿ ಹಾಗೆ ಕುಳಿತುಕೊಳ್ಳಬೇಕಾದದ್ದು ಬೀದಿ ವ್ಯಾಪಾರಿಗಳಿಗೆ ಅನಿವಾರ್ಯ. ಈ ಮಹಿಳೆಯರಿಗೆ ತಾನು ಹೇಗೆ ಸಹಾಯಮಾಡಬಹುದು ಎಂದು ಸಯೀದಾ ಸದಾ ಯೋಚಿಸತೊಡಗಿದರು. ಈ ಯೋಚನೆಯಿಂದಲೇ ಆಕೆಯ ಬಹುಪಯೋಗಿ ಕೊಡೆ ರೂಪುಗೊಂಡಿತು.

ಎಲ್ಲರೂ ಮಳೆ, ಬಿಸಿಲಿಗೆ ಬಳಸುವ ಕೊಡೆಯನ್ನೇ ಸಯೀದಾ ಆಧುನಿಕ ತಂತ್ರಜ್ಞಾನ ಬಳಸಿ ನವೀಕರಿಸಿದರು. ಸೋಲಾರ್‌ ಪ್ಯಾನೆಲ್‌ ಸಿಕ್ಕಿಸಿ ಅದೇ ಶಕ್ತಿಯಿಂದ ಕೊಡೆಗೆ ಒಳಗೊಂದು ಫ್ಯಾನ್‌ ತಿರುಗುವಂತೆ ಮಾಡಿದರು. ಸಂಜೆಯಾಗುತ್ತಲೆ ಎಲ್‌.ಇ.ಡಿ ದೀಪ ಉರಿಯಿವಂತೆ ಸಜ್ಜುಗೊಳಿಸಿದರು. ಮೊಬೈಲ್‌ ಚಾರ್ಜರ್‌ ಜೋಡಿಸಿದರು. ವ್ಯಾಪಾರ ಮಾಡುತ್ತಿರುವವರಿಗೆ ಪದೇ ಪದೇ ಮೊಬೈಲ್‌ ಫೋನನ್ನು ಕೈಯಲ್ಲಿ ಹಿಡಿಯುವುದು ಕಷ್ಟ. ಅದಕ್ಕಾಗಿ ಸಯಿದಾ ಬ್ಲೂ ಟೂತ್‌ ತಂತ್ರಜ್ಞಾನ ಬಳಸಿ ಕೈಗಳಲ್ಲಿ ಮೊಬೈಲ್‌ ಎತ್ತಿಕೊಳ್ಳದೆ ಕರೆಗಳನ್ನು ಸ್ವೀಕರಿಸಲು ಸಾಧ್ಯವಾಗುವಂತೆ ಕೊಡೆಯನ್ನು ಬಳಕೆದಾರ ಸ್ನೇಹಿಯಾಗಿಸಿದರು. ಈಗ ಮಾಮೂಲು ಕೊಡೆಯು ಅತ್ಯಾಧುನಿಕ ಅಂಗಡಿಯಾಗಿ ರೂಪುಗೊಂಡಿತು.

ಈ ಕೊಡೆಯನ್ನು ಯಾವುದಾದರೂ ನವೋದ್ಯಮಿಗಳು ತಯಾರಿಸಲಿ ಮತ್ತು ಸರ್ಕಾರಗಳು, ಸಂಘ ಸಂಸ್ಥೆಗಳು ಖರೀದಿಸಿ ರಸ್ತೆ ಬದಿಯ ವ್ಯಾಪಾರಿಗಳಿಗೆ ಒದಗಿಸುವಂತಾಗಲಿ ಎಂಬ ಆಶಯ ಸಯಿದಾರವರದಾಗಿತ್ತು. ಆ ಆಶಯಕ್ಕಾಗಿಯೇ ಆಕೆಗೆ ಇನಸ್ಪೈರ್‌ ಪ್ರಶಸ್ತಿ ಬಂದಿತು. ಈ ಮೂರು ವರ್ಷಗಳಲ್ಲಿ ಸಯಿದಾರ ಆಶಯ ಕೈಗೂಡಲಿಲ್ಲ ಎನ್ನುವುದು ಬೇರೆ ವಿಷಯ. ಆದರೆ, ಹೃದಯದಿಂದ ಯೋಚಿಸಿದ ಸಯಿದಾ ವಿಜ್ಞಾನವನ್ನು ಮಾನವೀಯಗೊಳಿಸಿದರು.

ಶರಧಿ ಎಂಬ ಕುಂದಾಪುರದ ಹುಡುಗಿ ಕೂಡಾ ಸಯಿದಾರಂತೆ ಇನಸ್ಪೈರ್‌ ರಾಷ್ಟ್ರೀಯ ಪ್ರಶಸ್ತಿ ಪಡೆದವರು. ಹಾಸ್ಟೆಲ್‌ ವಿದ್ಯಾರ್ಥಿಗಳು ಮಳೆಗಾಲದಲ್ಲಿ ಬಟ್ಟೆ ಒಣಗಿಸಲು ಪಡುತ್ತಿದ್ದ ಪಾಡು ಶರಧಿಯ ಸಂಶೋಧನೆಗೆ ಪ್ರೇರಣೆಯಾಯಿತು. ಬಟ್ಟೆಯನ್ನು ಹಾಸ್ಟೆಲಿನಲ್ಲಿ ಒಣಗಿಸಲು ಬಿಟ್ಟು ಶಾಲೆಗೆ ಹೋದರೆ ಹಿಂತಿರುಗಿ ಬಂದಾಗ ಮಳೆಯಲ್ಲಿ ತೊಯ್ದಿರುತಿತ್ತು. ಬಿಸಿಲು ಬಂದಾಗ ಬಟ್ಟೆ ಹೊರಬರುವ ಮತ್ತು ಮಳೆಯ ಸೂಚನೆ ಬರುತ್ತಲೇ ಮಾಡಿನಡಿ ಸೇರಿಕೊಳ್ಳುವಂತಹ ವ್ಯವಸ್ಥೆ ಇದ್ದರೆ ಎಷ್ಟು ಚೆನ್ನಾಗಿತ್ತು ಎಂದೆನಿಸಿತು ಶರಧಿಗೆ. ವಿಜ್ಞಾನ ಶಿಕ್ಷಕರ ಸಹಾಯ ಪಡೆದು ಅಂತದ್ದೊಂದು ಸೌಕರ್ಯವನ್ನು ಆಕೆ ತಯಾರಿಸಿದರು. ಬೆಳಕಿನ ತೀವ್ರತೆಗೆ ಸೂಕ್ಷ್ಮಗ್ರಾಹಿಯಾದ ಮೋಟಾರ್ ಜೋಡಿಸಿದ ಬಟ್ಟೆ ಒಣಗಿಸುವ ತಂತಿಯು ಬಿಸಿಲು ಬಂದಾಗ ಬಟ್ಟೆಯನ್ನು ಹೊರಗೊಯ್ದರೆ ಮೋಡ ಕವಿದಾಗ ಒಳಸೇರಿಸುತಿತ್ತು. ಈ ಉಪಕರಣ ಬಳಕೆಗೆ ದೊರೆಯದೇ ಹೋದರೂ ಇಂತಹ ಐಡಿಯಾ ಶರದಿಗೆ ಬಂದಿರುವುದಕ್ಕಾಗೇ ಆಕೆಯ ಹೊಸ್ಟೆಲ್ ಗೆಳತಿಯರ ಕಣ್ಣಾಲಿ ತುಂಬಿಕೊಂಡಿತ್ತು.

ಎಳವೆಯಲ್ಲೇ ಒದಗಿಬಂದ ಈ ಅಂತಃಕರಣವನ್ನು ದೊಡ್ಡವರಾಗುವವರೆಗೂ ಕಾಪಿಟ್ಟುಕೊಂಡರೆ ಜಗತ್ತು ಇನ್ನಷ್ಟು ಸುಂದರವಾಗಬಲ್ಲದು ಎಂಬುದಕ್ಕೆ ಶರದ್‌ ಆಸಾನಿ ಎಂಬ ಎಲೆಕ್ಟ್ರಿಕಲ್‌ ಎಂಜಿನಿಯರ್ ಉದಾಹರಣೆ. ಶರದರಿಗೆ ಕೂಡಾ ಜಗತ್ತಿನ ನೋವು, ಸಂಕಟ, ಹಸಿವುಗಳು ಸಯಿದಾ ಅಥವಾ ಶರಧಿಯಂತೆ ತೀವ್ರವಾಗಿ ಕಾಡುತಿದ್ದವು. 2004 ರಲ್ಲಿ ಮುಂಬೈನ ರೂಪದರ್ಶಿ ನಫೀಸಾ ಜೊಸೆಫ್‌ ನೇಣುಹಾಕಿಕೊಂಡು ಆತ್ಮಹತ್ಯೆಮಾಡಿಕೊಂಡ ಸುದ್ದಿಯನ್ನು ನ್ಯೂಸ್‌ ಚಾನೆಲ್‌ ಒಂದರಲ್ಲಿ  ನೋಡಿದ ಶರದ್‌ ಆಶಾನಿ ದುಃಖದಲ್ಲಿ ತಲೆ ಎತ್ತಿ ಫ್ಯಾನಿನ ಕಡೆಯೇ ನೋಡಿದರು. ಆಕೆ ನೇಣಿಗೆ ಕೊರಳೊಡ್ಡಿ ತನ್ನ ಭಾರವನ್ನು ಫ್ಯಾನಿಗೆ ವರ್ಗಾಯಿಸಿದಾಗ ಸೀಲಿಂಗಿಗೆ ಜೋಡಿಸಿದ ಫ್ಯಾನ್‌ ರಾಡ್‌ ತುಂಡಾಗಬಾರದಿತ್ತೇ ಎನಿಸಿತು ಅವರಿಗೆ. ಹೀಗೆ ಅನಿಸಿದ್ದೇ ತಡ, ಆತ್ಮಹತ್ಯೆಯನ್ನು ತಪ್ಪಿಸಬಹುದಾದಂತಹ ಫ್ಯಾನ್‌ ರಾಡನ್ನು ಏಕೆ ತಯಾರಿಸಬಾರದು ಎಂದು ಕಾರ್ಯಪ್ರವೃತ್ತರಾದರು. ನ್ಯಾಷನಲ್‌ ಕ್ರೈಮ್ ರೆಕಾರ್ಡ್ಸ್‌ ಬ್ಯೂರೋ ವರದಿಯ ಪ್ರಕಾರ  ಆ ಹಿಂದಿನ ವರ್ಷ ಒಂದು ಲಕ್ಷದ ಹದಿಮೂರು ಸಾವಿರ ಆತ್ಮಹತ್ಯೆಗಳು ವರದಿಯಾಗಿದ್ದವು. ಅವುಗಳಲ್ಲಿ ಮೂವತ್ತು ಸಾವಿರಕ್ಕೂ ಹೆಚ್ಚು ಆತ್ಮಹತ್ಯೆಗಳು ನೇಣು ಹಾಕಿಕೊಂಡು ನಡೆದಿರುವುದಾಗಿತ್ತು. ಈ ಸಂಖ್ಯೆ ಮತ್ತು ಪ್ರಮಾಣ  ಪ್ರತಿ ವರ್ಷವೂ ಹೆಚ್ಚುತ್ತಲೇ ಇದೆ. ಈಗೆರಡು ವರ್ಷಗಳಿಂದ ಅರ್ಧಕ್ಕಿಂತ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ನೇಣಿಗೆ ಸಂಬಂಧಿಸಿದವು. ಹಾಸ್ಟೆಲ್ಲುಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚುತ್ತಿದೆ. ಕೋವಿಡ್‌ ಪೂರ್ವದ ಐದು ವರ್ಷಗಳಲ್ಲಿ ಐವತ್ತು ಸಾವಿರ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.

 ಈ ಲೇಖನ ಓದಿದ್ದೀರಾ? 

  ಕಲಿಯುವುದೆಂದರೆ ಪ್ರಶ್ನೆಗಳ ಬೆನ್ನ ಮೇಲೆ ಸವಾರಿ

ಶರದ್‌ ಈ ಆತ್ಮಹತ್ಯೆಗಳನ್ನು ತಡೆಯಲು ಮುಂದಾದರು. ಸಾಮಾನ್ಯವಾಗಿ ಫ್ಯಾನು ನೆಲದಿಂದ ಎಂಟು ಅಡಿ ಎತ್ತರದಲ್ಲಿರುತ್ತದೆ. ಹತ್ತು ಅಡಿಯ ಮೇಲ್ಚಾವಣಿಗೆ ರಾಡ್‌ ಮೂಲಕ ಜೋಡಿಸಿಕೊಂಡಿರುತ್ತದೆ. ಒಂದು ನಿರ್ಧಾರಿತ ತೂಕಕ್ಕಿಂತ ಹೆಚ್ಚಿನ ಭಾರವನ್ನು ಅನುಭವಿಸಿದಾಗ ವಿಸ್ತರಿಸಿಕೊಂಡು ಉದ್ದವಾಗುವ ಫ್ಯಾನ್‌ ರಾಡನ್ನು ಶರದ್‌ ರೂಪಿಸುವ ಮೊದಲು ಸಾಕಷ್ಟು ಅಧ್ಯಯನಗಳನ್ನು ನಡೆಸಿದ್ದರು. ಈಗ ಶರದ್ ವಿನ್ಯಾಸಗೊಳಿಸಿದ ಫ್ಯಾನ್‌ ರಾಡ್‌ ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಅವರೀಗ ಜೀವ ಉಳಿಸಬಲ್ಲ ವಸ್ತುಗಳನ್ನು ತಯಾರಿಸುವ ಗೋಲ್ಡ್‌ ಲೈಫ್‌ ಎಂಬ ಉದ್ಯಮವನ್ನೇ ಆರಂಭಿಸಿದ್ದಾರೆ.

ಹಿಡಿ ಪ್ರೀತಿಯಿದ್ದರೆ ಇಡಿಯ ಭೂಮಿಯನ್ನೇ ಬೆಳದಿಂಗಳಾಗಿಸಬಹುದು!



Monday, 20 June 2022

ಬಿಳಿ ಬಣ್ಣ ಶ್ರೇಷ್ಟವೆಂಬ ವ್ಯಸನವು ಜಾತಿ ತಾರತಮ್ಯದಷ್ಟೇ ಅಮಾನವೀಯ

"ಚರ್ಮದ ಬಣ್ಣದ ಕಾರಣಕ್ಕಾಗಿ ತಾರತಮ್ಯ ನಡೆಯುತ್ತದೆ. ತಿಳಿ ಮೈಬಣ್ಣ ಶ್ರೇಷ್ಠವೆಂಬ ಅಹಮಿಕೆಯೂ, ಗಾಢ ಬಣ್ಣ ಕುರೂಪವೆಂಬ ಕೀಳರಿಮೆಯೂ ಬೇಡ” 

ಹೀಗೆನ್ನುತ್ತಾ ಫೇರನೆಸ್‌ ಉತ್ಪನ್ನವೊಂದರ ಎರಡು ಕೋಟಿ ರೂಪಾಯಿಗಳ ಜಾಹಿರಾತು ಒಪ್ಪಂದವನ್ನು ತಿರಸ್ಕರಿಸಿ ಬಹುಭಾಷಾ ನಟಿ ಸಾಯಿಪಲ್ಲವಿ ಸುದ್ದಿಯಾಗಿದ್ದರು. ಅವರ ತರ್ಕ ಸರಳವಾಗಿದೆ- ನಿಗ್ರೋಗಳಿಗೆ ತಮ್ಮದೇ  ಮೈಬಣ್ಣ ಇರುವಂತೆ, ಮಂಗೂಲಿಯನ್ನರಿಗೆ, ಕಕೇಶಿಯನ್ನರಿಗೆ, ಆಸ್ಟ್ರೇಲಿಯನ್ನರಿಗೆ ತಮ್ಮದೇ ಬಣ್ಣದ ಚರ್ಮ ಇರುತ್ತದೆ. ಭಾರತೀಯರಿಗೂ ಕೂಡಾ ತಮ್ಮದೇ ಮೈಬಣ್ಣವಿದೆ ಅಷ್ಟೆ. ದ್ರಾವಿಡಿಯನ್ನರ ಬಣ್ಣ ಉತ್ತರದ ಜನರ ಬಣ್ಣಕ್ಕಿಂತ ತುಸು ಗಾಢವಿರಬಹುದು ಅದು ನಮ್ಮ ಮೈಬಣ್ಣ. ಬ್ರಿಟೀಷರನ್ನು ಈ ದೇಶದಿಂದ ಹೊರದಬ್ಬುವ ದೀರ್ಘ ಹೋರಾಟದಲ್ಲಿ ಈ ದೇಶದ ಎಲ್ಲ ಮೈಬಣ್ಣದವರೂ ಜೊತೆಗೂಡಿದ್ದರು. ಎಂಟು ಧರ್ಮದ, ನಾಲ್ಕು ಸಾವಿರ ಜಾತಿಯ, ಇನ್ನೂರೈವತ್ತು ಭಾಷೆಯ ಜನರು,  ಅದೆಷ್ಟೋ ಉಪಭಾಷೆಯನ್ನು ಮಾತನಾಡುವವರು, ಇನ್ನೆಷ್ಟೋ ವಿಶಿಷ್ಟ ಆಚರಣೆಗಳನ್ನು ಅನುಸರಿಸುವವರು, ವಿಭಿನ್ನ ಪಂಥದವರು. ನೂರಾರು ಬುಡಕಟ್ಟು ಪಂಗಡವರು  ಒಂದಾಗಿ ಬ್ರಿಟೀಷರನ್ನು ಎದುರಿಸಿ ಗೆದ್ದಿದ್ದೆವು. ಅವರೇನೋ ಹೊರಟುಹೋದರು. ಆದರೆ, ಅವರು ಬಿಟ್ಟು ಹೋದ ಬಿಳಿ ಮೈಬಣ್ಣ ಶ್ರೇಷ್ಟವೆಂಬ ವ್ಯಸನ ಇಲ್ಲೇ ಇದೆ. ಅದು ಒಂದು ಸಾಮಾಜಿಕ ಉಪಟಳವಾಗಿ ಕಾಡುತ್ತಿದೆ. 

ಅಮೇರಿಕದ ಮಿನಾಪೋಲಿಸ್ ಪಟ್ಟಣದಲ್ಲಿ 2020 ರ ಮೇ 25 ರಂದು ಕಪ್ಪು ವರ್ಣೀಯರಾದ ಜಾರ್ಜ್ ಫ್ಲಾಯ್ಡ್ ಎಂಬವರನ್ನು  ಬಿಳಿ ಬಣ್ಣದ ಪೋಲೀಸ್ ಅಧಿಕಾರಿ, ರಸ್ತೆಯಲ್ಲಿ ತಡೆದು ಕಾರಿನಿಂದ ಹೊರಗೆಳೆದು ಕಾಲಿನಲ್ಲೇ ಕುತ್ತಿಗೆ ಓತ್ತಿ ಕೊಂದಿದ್ದ. ಈ ಜನಾಂಗೀಯ ದ್ವೇಷದ ವಿರುದ್ಧ ಜಗತ್ತಿನಾದ್ಯಂತ ಆ ನಂತರ ಪ್ರತಿಭಟನೆಗಳು ನಡೆದಿದ್ದವು. ಫೇರ್ ಎನ್ನುವ ಪದವೇ ಜನಾಂಗೀಯ ತಾರತಮ್ಯದಿಂದ ಕೂಡಿದೆ ಎಂಬ ಕಾರಣಕ್ಕಾಗಿ ಯೂನಿಲಿವರ್ ಸಂಸ್ಥೆ ತನ್ನ 'ಫೇರ್ ಎಂಡ್ ಲವ್ಲಿ' ಎಂಬ ಉತ್ಪನ್ನದ ಹೆಸರನ್ನು 'ಗ್ಲೋ ಎಂಡ್ ಲವ್ಲಿ' ಎಂದು ಬದಲಿಸಿತು. ಭಾರತದ ದೊಡ್ಡ ಮದುವೆ ದಲ್ಲಾಳಿ ವೆಬ್ ಸೈಟಾದ 'ಶಾದಿ ಡಾಟ್ ಕಾಮ್' ತನ್ನ ಫಿಲ್ಟರ್ ಸೌಕರ್ಯದಿಂದ 'ಫೇರ್' ಎಂಬ ಸುಳಿವು ಪದವನ್ನು ತೆಗೆದುಹಾಕಿತು.



ಚರ್ಮದ ಬಣ್ಣಕ್ಕೆ ಮೆಲಾನಿನ್‌ ಎಂಬ ವರ್ಣಕ ಕಾರಣ. ಚರ್ಮ, ಕೂದಲು, ಕಣ್ಣಿನ ಬಣ್ಣದ ಮೂಲಕ ಮಾನವ ಪ್ರಬೇಧವು ಹಲವು ಜನಾಂಗಗಳಾಗಿ ಗುರುತಿಸಲ್ಪಟ್ಟಿರುವುದರಲ್ಲಿ ಈ ವರ್ಣಕದ ಪಾತ್ರ ದೊಡ್ಡದು. ನಮ್ಮ ದೇಹದಲ್ಲಿರುವ ಮೆಲನೋಸೈಟುಗಳೆಂಬ ಜೀವಕೋಶಗಳು ಈ ವರ್ಣಕವನ್ನು ಉತ್ಪಾದಿಸುತ್ತವೆ.  ಮೆಲನೋಸೈಟುಗಳು  ಎಲ್ಲರಲ್ಲೂ ಇವೆ. ಎಲ್ಲರಲ್ಲೂ ಬಹುತೇಕ ಸಮಾನ ಸಂಖ್ಯೆಯಲ್ಲೇ ಇವೆ. ಆದರೆ, ಅವು ತಯಾರಿಸುವ ಮೆಲಾನಿನ್‌ ವರ್ಣಕಗಳ ಪ್ರಮಾಣ ಬೇರೆ ಬೇರೆ ಜನಾಂಗದ ಜನರಲ್ಲಿ ಬೇರೆಯಾಗಿದೆ. ಕಡಿಮೆ ಮೆಲಾನಿನ್‌ ಉತ್ಪತ್ತಿಯಾದರೆ, ನಿಮ್ಮದು ತಿಳಿಬಣ್ಣ, ಹೆಚ್ಚು ಉತ್ಪತ್ತಿಯಾದರೆ ಕಪ್ಪು ಬಣ್ಣ. ನಮಗೆಷ್ಟು ಮೆಲಾನಿನ್‌ ತಯಾರಿಸಬೇಕು ಎಂಬುದನ್ನು ನಾವು ನಿರ್ಣಯಿಸಲಾರೆವು. ಇಂತಿಷ್ಟೇ ವರ್ಣಕವನ್ನು ಮೆಲಾನೋಸೈಟುಗಳು ನಮ್ಮಲ್ಲಿ ಉತ್ಪಾದಿಸಬೇಕೆಂಬ  ಆದೇಶ ಎಂದೋ ಆಗಿಹೋಗಿದೆ. ತಲೆಮಾರಿನಿಂದ ತಲೆಮಾರಿಗೆ  ಈ ಆದೇಶವನ್ನು ನಮ್ಮ ವಂಶವಾಹಿಗಳಲ್ಲಿರುವ  ಜೀನುಗಳು ಹೊತ್ತೊಯ್ಯುತ್ತಾ ಬಂದಿವೆ.

ಈ ಲೇಖನ ಓದಿದ್ದೀರಾ?   ದಿನೇಶ್ ಕಾರ್ತಿಕ್ ಕುಸಿದು ಬಿದ್ದಾಗ

ಎರಡು ಕೋಟಿಯ ಆಫರ್ ತಿರಸ್ಕರಿಸಿದ ನಂತರ ಸಾಯಿಪಲ್ಲವಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮೈಬಣ್ಣದ ತಾರತಮ್ಯದ ಕುರಿತು ತನ್ನದೇ ಅನುಭವವನ್ನು ಹಂಚಿಕೊಂಡಿದ್ದರು. ಸಾಯಿಪಲ್ಲವಿಯವರ ಸಹೋದರಿಗೆ ತನ್ನಕ್ಕನಿಗಿಂತ ತನ್ನ ಮೈಬಣ್ಣ ಗಾಢವಾಗಿದೆ ಎಂಬ ಕೀಳರಿಮೆ ಇತ್ತು. ಈ ಕೀಳರಿಮೆಯು ಬಿಳಿ ಬಣ್ಣವನ್ನು ಗೌರವಿಸುವ, ಕಪ್ಪನ್ನು ಕೀಳಾಗಿ ಕಾಣುವ ಸಮಾಜದ ಪ್ರತಿಫಲನ. ಫೇರ್ ನೆಸ್ ಕ್ರೀಮುಗಳ ಜಾಹಿರಾತುಗಳು, ಸಿನೇಮಾ- ಧಾರವಾಹಿಗಳಲ್ಲಿ ತೆಳುಬಣ್ಣದ ನಾಯಕ- ನಾಯಕಿಯರೇ ಇರುವುದು ಇತ್ಯಾದಿ ಸಂಗತಿಗಳು ಕಪ್ಪುಬಣ್ಣ ಕುರೂಪ ಎಂಬ ಮನಃಸ್ಥಿತಿಯನ್ನು ಬೆಳೆಸುತ್ತಾ ಬಂದಿದೆ. ಸಾಕಷ್ಟು ತರಕಾರಿ ಮತ್ತು ಹಣ್ಣುಗಳನ್ನು ಸೇವಿಸಿದರೆ ತನ್ನಂತೆ ತಿಳಿಬಣ್ಣ ಹೊಂದಲು ಸಾಧ್ಯ ಎಂದು ತರಕಾರಿ ತಿನ್ನಲೊಪ್ಪದ  ಸಹೋದರಿಗೆ ಸಾಯಿಪಲ್ಲವಿ ಹೇಳಿದ್ದರಂತೆ. ಆಕೆ, ಇಷ್ಟವಿಲ್ಲದಿದ್ದರೂ ತರಕಾರಿ ತಿನ್ನಲು ಆರಂಭಿಸಿದ್ದರಂತೆ. ಆದರೆ, ಮೈಬಣ್ಣ ಹಾಗೆಯೇ ಉಳಿಯಿತು. ಕಪ್ಪು ಕುರೂಪವೆಂಬ ಕಲೆಯೂ ಆಕೆಯ ಮನಸ್ಸಿನಲ್ಲಿ ಅಚ್ಚಾಗಿ ಉಳಿಯಿತು. ಮೈಬಣ್ಣದ ಕಾರಣಕ್ಕೆ ಮಾನಸಿಕವಾಗಿ ಕುಗ್ಗುವ, ಮದುವೆಯಾಗದಿರುವ, ತಂದೆ-ತಾಯಿಯರಿಗೆ ಸಮಸ್ಯೆ ಎಂದು ನೊಂದುಕೊಳ್ಳುವ ಹೆಣ್ಣುಮಕ್ಕಳನ್ನು ಮನಸ್ಸಲ್ಲಿಟ್ಟುಕೊಂಡೇ ತಾನು ಆ ಜಾಹಿರಾತಿನಲ್ಲಿ ನಟಿಸಲು ನಿರಾಕರಿಸಿದೆನೆಂದು ಸಾಯಿಪಲ್ಲವಿ ಹೇಳಿದ್ದರು. 

ಶಿಕ್ಷಕಿಯೊಬ್ಬರು ವರ್ಣತಾರತಮ್ಯದ ತನ್ನ ಅನುಭವವನ್ನು ನನ್ನ ಬಳಿ ಹಂಚಿಕೊಂಡಿದ್ದರು. ಅವರು ಪ್ರೌಢಶಾಲೆಯಲ್ಲಿರುವಾಗ ಶಾಲಾ ನಾಟಕದಲ್ಲಿ ಅಭಿನಯಿಸಲು ಹೋಗಿದ್ದರಂತೆ. ಕಾಳಿದಾಸನ ಅಭಿಜ್ಞಾನ ಶಾಕುಂತಲೆಯ ಪುಟ್ಟ ಭಾಗವನ್ನು ಅವರ ಶಿಕ್ಷಕರು ಶಾಲಾ ವಾರ್ಷಿಕೋತ್ಸವದಂದು ರಂಗದ ಮೇಲೆ ತರಲು ಯೋಜಿಸಿದ್ದರಂತೆ. ಇವರ ಅಭಿನಯ ನೋಡಿ, "ಈ ಹುಡುಗಿ ಚೆನ್ನಾಗಿ ಅಭಿನಯಿಸುತ್ತಾಳೆ, ಇವಳನ್ನು ಶಕುಂತಲೆಯ ಪಾತ್ರಕ್ಕೆ ಆಯ್ಕೆ ಮಾಡೋಣ"  ಎಂದರಂತೆ. ಮಾರನೇ ದಿನ ತಾಲೀಮು ಶುರುವಾದಾಗ ಬಿಳಿ ಚರ್ಮದ ಹುಡುಗಿಯೊಬ್ಬಳನ್ನು ಶಕುಂತಲೆ ಪಾತ್ರಕ್ಕೆ ಅವರು ಆಯ್ಕೆ ಮಾಡಿ, ಇವರಲ್ಲಿ ಬೇರೊಂದು ಪಾತ್ರ ಮಾಡಲು ಸೂಚಿಸಿದರಂತೆ. ಬೆಳೆದು ದೊಡ್ಡವಳಾಗಿ, ಈಗ ಶಿಕ್ಷಕಿಯಾದರೂ ಆ ಗಾಯವಿನ್ನೂ ಅವರಲ್ಲಿ  ಮಾಸಿರಲಿಲ್ಲ.  ಇದಕ್ಕೆ ವ್ಯತಿರಿಕ್ತವಾಗಿ, ನೀನಾಸಂ ತಿರುಗಾಟದ ಸೀತಾ ಸ್ವಯಂವರ ನಾಟಕದಲ್ಲಿ ಕಪ್ಪು ಮೈಬಣ್ಣದ ನಟಿಯನ್ನು ಸೀತೆಯಾಗಿಯೂ ತಿಳಿಬಣ್ಣದ ನಟಿಯನ್ನು ಸೀತೆಯ ಸಖಿಯಾಗಿಯೂ ಆಯ್ಕೆ ಮಾಡಿ ಇಂತಹ ಮನಃಸ್ಥಿತಿಯನ್ನು ಕದಲಿಸುವ ಪ್ರಯತ್ನ ಮಾಡಿದ್ದರು. ಕನ್ನಡ ಸಾಹಿತ್ಯವೂ ಮೈಬಣ್ಣದ ತಾರತಮ್ಯವನ್ನು ಪ್ರತಿರೋಧಿಸುವ ರಚನೆಗಳನ್ನು ಸೃಷ್ಟಿಸಿದೆ.

ಮೆಲನೋಮಾ ಎಂಬುದು ಗಂಭೀರ ಸ್ವರೂಪದ ಕ್ಯಾನ್ಸರ್. ಮೂಗು, ಕೆನ್ನೆಗಳಂತಹ ಸೂರ್ಯನ ಬೆಳಕಿಗೆ ತೆರೆದುಕೊಳ್ಳುವ ಭಾಗದ ಮೆಲನೋಸೈಟುಗಳಲ್ಲಿ  ಕಂಡು ಬರುವ ಈ ಕ್ಯಾನ್ಸರ್ ಬಿಳಿಚರ್ಮದವರಿಗೆ ಬರುವ ಸಾಧ್ಯತೆ ಹೆಚ್ಚು. ಶ್ರೇಷ್ಟತೆಯ ವ್ಯಸನವೆಂಬ ಕ್ಯಾನ್ಸರ್ ಕೂಡಾ ಬಿಳಿ ಚರ್ಮದವರಿಗೆ, ಮೇಲ್ಜಾತಿ ಅಂದುಕೊಳ್ಳುವವರಿಗೆ ತಗಲುವ ಸಾಧ್ಯತೆ ಹೆಚ್ಚು.

ಅಂಕಣ ಬರೆಹ:






Sunday, 29 August 2021

ಮತ್ತೆ ಬಂದ ಜೇನುಹುಳುಗಳು


 ಐದನೇ ಮಹಡಿಯ ನಮ್ಮ ಮನೆಯ ಒಂದು ಕಿಟಕಿಯ ಶೇಡ್‌ ಸ್ಲ್ಯಾಬಿಗೆ ಜೇನುಹುಳುಗಳು ಗೂಡುಕಟ್ಟಿದಾಗ ಆತಂಕ ಶುರುವಾಗಿತ್ತು. ಓಡಿಸಬೇಕೆಂದು ನಾನೂ Sandhya ಳೂ ಬಹಳ ಪ್ರಯತ್ನ ಪಟ್ಟಿದ್ದೆವು. ರಾತ್ರಿ ಹೊಗೆ ಹಾಕಿ ನೋಡಿದೆವು. ಅವು ಜಗ್ಗಿರಲಿಲ್ಲ. ರಾತ್ರಿಯಾಗುತ್ತಲೇ ಲೈಟಿಗೆ ಆಕರ್ಷಿತವಾಗಿ ಮನೆಯೊಳಗೆ ಬರುತ್ತಿದ್ದವು. ಬೆಳಗಿನವರೆಗೂ ರುಂಯ್‌ ಗುಡುತ್ತಾ ಕೊನೆಗೆ ಸಾವನ್ನಪ್ಪುತ್ತಿದ್ದವು. ಜೇನುಗೂಡಿನ ಹತ್ತಿರದಲ್ಲಿರುವ ಕೋಣೆಯ ಕಿಟಕಿಗೆ ದಪ್ಪನೆಯ ಪರದೆಗಳನ್ನು ಹಾಕಿ ಅವು ಬೆಳಕಿಗೆ ಆಕರ್ಷಿತವಾಗದಂತೆ ಪ್ರಯತ್ನಪಟ್ಟೆವು. ಆ ಕೋಣೆಗೆ ರಾತ್ರಿ ಲೈಟ್‌ ಹಾಕುವುದು ಸಾಧ್ಯವಿರಲಿಲ್ಲ. ರಾತ್ರಿ ಸಾಧ್ಯವಾದಷ್ಟು ಕಡಿಮೆ ವಿದ್ಯುದ್ದೀಪಗಳನ್ನು ಬಳಸುವುದನ್ನು ರೂಢಿಸಿಕೊಂಡೆವು. ಬರಬರುತ್ತಾ ಜೇನುಹುಳುಗಳ ಜೊತೆಯ ನಮ್ಮ ಸಹಜೀವನ ಸಹ್ಯವಾಗತೊಡಗಿತು. ಸಂಜೆಯಾಗುತ್ತಲೆ ಕಿಟಕಿಗಾಜುಗಳನ್ನು ತಪ್ಪದೆ ಹಾಕುತ್ತಿದ್ದೆವು. ಅಷ್ಟರ ಮೇಲೂ ಒಳಬರುವ ಐದಾರು ಜೇನುಹುಳುಗಳನ್ನು ಹೊರಹಾಕಲು ಒಂದೊಂದೇ ಕೋಣೆಯ ಬೆಳಕನ್ನು ಆರಿಸುತ್ತಾ, ಬಾಗಿಲು ಹಾಕಿಕೊಳ್ಳುತ್ತಾ ಅವು ಹೊರಗಿನ ಬೆಳಕಿನಿಂದ ಆಕರ್ಷಣೆಗೊಂಡು ಹೊರಹೋಗುವಂತೆ ಮಾಡುತ್ತಿದ್ದೆವು. ಹಗಲಲ್ಲಿ ಅವುಗಳ ಸಮಸ್ಯೆಯೇನಿಲ್ಲ. ಆಗ ಅವುಗಳ ಚಟುವಟಿಕೆಗಳನ್ನು ಹತ್ತಿರದಿಂದ ನೋಡುವುದಕ್ಕಾಗಿ ಎಲ್ಲೋ ಒಳಗಿಟ್ಟಿದ್ದ ಬೈನಾಕುಲರನ್ನು ಹೊರಬಂತು. ಚಹಾದ ಕಪ್ಪು ಹಿಡಿದುಕೊಂಡು ಆ ಕಿಟಕಿಯ ಬಳಿ ನಿಲ್ಲುವುದು ರೂಢಿಯಾಯಿತು. ಒಮ್ಮೆ ಬಿಹಾರಿ ಹುಡುಗರಿಬ್ಬರು ಬಂದು ಜೇನು ತೆಗೆದುಕೊಡುವುದಾಗಿ ಹೇಳಿದರೂ ನಾವು ಒಪ್ಪಲಿಲ್ಲ. ನಮ್ಮದೇ ಅಪಾರ್ಟ್‌ ಮೆಂಟಿನಲ್ಲಿ ಇನ್ನೂ ಎರಡು ಜೇನುಗೂಡುಗಳಿದ್ದವು. ಅವುಗಳ ಜೇನು ತೆಗೆದುಕೊಡುವುದಾಗಿ ಹೇಳಿ ಆ ಹುಡುಗರು ಅಪಾರ್ಟಮೆಂಟಿನ ವಾಸಿಗಳಿಗೆಲ್ಲ ಸಕ್ಕರೆ ಪಾಕವನ್ನು ಮಾರಿ ಹೋಗಿದ್ದರು!

ಇವುಗಳ ದೊಡ್ಡ ಗಾತ್ರ ನೋಡಿದರೆ ತೀರಾ ಆಕ್ರಮಣಕಾರಿಯಾಗಿರುವ ಹೆಜ್ಜೇನುಗಳೇ ಇರಬೇಕು, ಇವುಗಳ ಬಗ್ಗೆ ಕರುಣೆ ಬೇಡ ಎಂದು ಹಲವರು ಉಪದೇಶ ಮಾಡಿದರೂ ನಮಗೆ ಅವುಗಳನ್ನು ಓಡಿಸುವ ಯೋಚನೆ ಮತ್ತೆ ಬರಲಿಲ್ಲ. ಈ ಹೆಜ್ಜೇನುಗಳು ಆಕ್ರಮಣಕಾರಿಯಾಗಿರುತ್ತವೆಂತಲೂ, ಅವುಗಳು ಕಚ್ಚಿದರೆ ಸಾವೂ ಸಂಭವಿಸಬಹುದೆಂದೂ ಕೆಲವರು ಕಾಳಜಿಯಿಂದಲೇ ಎಚ್ಚರಿಸಿದ್ದರು. ಸುಮಾರು ಎರಡು ಸೆಂಟೀಮೀಟರಿನಷ್ಟು ದೊಡ್ಡದಿರುವ ಈ ಜೇನುಹುಳುಗಳಿಗೆ ಎತ್ತರದ ಮರಗಳೋ, ಬಂಡೆಗಳೊ ಅಥವಾ ಇಂತಹ ಅಪಾರ್ಟ್ಮೆಂಟುಗಳೇ ಬೇಕು ಮನೆಮಾಡಿಕೊಳ್ಳಲು.‌ ಅಕಶೇರುಕಗಳಲ್ಲೇ ಅತಿಹೆಚ್ಚು ಪ್ರಬೇಧಗಳನ್ನು ಹೊಂದಿರುವ ಸಂಧಿಪದಿ ವರ್ಗಕ್ಕೆ ಜೇನುಹುಳುಗಳು ಸೇರುತ್ತವೆ. ಸಂಧಿಪದಿಗಳಿಗೆ ಕೀಲುಕಾಲುಗಳಿರುತ್ತವೆ. ಕೀಟಗಳಿಗೋ ಅಂತಹ ಆರೇ ಕಾಲುಗಳಿರುತ್ತವೆ. ಏಡಿ, ಸಿಗಡಿ, ಜೇಡ, ಹೇನು, ಇರುವೆ ಎಲ್ಲವೂ ಸಂಧಿಪದಿಗಳೇ. ಆದರೆ, ಇವುಗಳಲ್ಲಿ ಹೇನು, ಇರುವೆ ಕೀಟಗಳು. ಪ್ರಪಂಚದಲ್ಲಿ ಕೀಟಗಳ ಸಂಖ್ಯೆ ಬಹಳ ದೊಡ್ಡದು. ಭೂಮಿಯ ಮೇಲಿರುವ ಎಲ್ಲ ಇರುವೆಗಳನ್ನು ತಕ್ಕಡಿಯ ಒಂದು ತಟ್ಟೆಯಲ್ಲೂ ಇನ್ನೊಂದರಲ್ಲಿ ಮನುಷ್ಯರನ್ನೂ ಹಾಕಿದರೆ ಇರುವೆಗಳೆ ಹೆಚ್ಚು ತೂಗಬಹುದಂತೆ! ಈಗ ಜೇನುಹುಳುಗಳ ಮಾತಿಗೆ ಬರೋಣ! ದೊಡ್ಡ ಪಾಲು ಕೃಷಿಬೆಳೆಗಳಿಗೆ ಜೇನ್ನೊಣಗಳು ನಡೆಸುವ ಪರಾಗಸ್ಪರ್ಶ ಕ್ರಿಯೇಯೇ ಕಾರಣ. ಅವುಗಳು ನಡೆಸುವ ಮಧುಕರವೃತ್ತಿಯ ನೇರ ಫಲವೇ ನಾವು ತಿನ್ನುವ ಹಣ್ಣು, ಕಾಯಿ, ಬೀಜ, ತರಕಾರಿ ಎಲ್ಲವೂ. ಹೂವುಗಳ ಬಣ್ಣ, ಸುವಾಸನೆ ಕೀಟಗಳನ್ನು ಆಕರ್ಷಿಸುವ ಸಸ್ಯಗಳ ತಂತ್ರ. ಜೇನ್ನೊಣಗಳು ಹೂಗಳಿಂದ ಹೂಗಳಿಗೆ ಹಾರುತ್ತಾ ಸಸ್ಯದ ಗಂಡು ಲಿಂಗಾಣುವಿರುವ ಪರಾಗವನ್ನು ಹೆಣ್ಣು ಭಾಗವಾದ ಶಲಾಕಾಗ್ರಕ್ಕೆ ಅಂಟಿಸಿ ಅಲ್ಲಿಂದ ಹೆಣ್ಣು ಲಿಂಗಾಣುಗಳಿಗೆ ತಲುಪಲು ಕಾರಣವಾಗುತ್ತದೆ. ಹೀಗೆ ಪರಕೀಯ ಪರಾಗಸ್ಪರ್ಶ ನಡೆದು ಗಂಡು-ಹೆಣ್ಣಿನ ಸಮ್ಮಿಳನದಿಂದ ಯುಗ್ಮಜವು ರೂಪುಗೊಂಡು ಅದು ಅನಂತರ ಬೀಜವಾಗಿ ಇನ್ನೊಂದು ಗಿಡದ ಹುಟ್ಟಿಗೋ ಇನ್ಯಾರದೋ ಹೊಟ್ಟೆಗೋ ತಲುಪುತ್ತದೆ. ಹೀಗೆ, ಸಸ್ಯಗಳಿಗೆ ಸಹಾಯ ಮಾಡುವ ಜೇನುಹುಳುಗಳಿಗೆ ದೊರೆಯುವ ದಲ್ಲಾಳಿ ಶುಲ್ಕವೇ ಮಕರಂಧ. ಒಂದೇ ಪ್ರಬೇಧದ ಬೇರೆ ಬೇರೆ ಹೂಗಳ ನಡುವೆ ಪರಕೀಯ ಪರಾಗಸ್ಪರ್ಶಕ್ಕೆ ಜೇನುಹುಳುಗಳು ಅನುವು ಮಾಡುವುದರಿಂದ ಸಸ್ಯ ಜಗತ್ತು ಇಷ್ಟು ವೈವಿದ್ಯಮಯವಾಗಿದೆ. ಜೇನುಹುಳುಗಳ ಕಾಲನಿಯಲ್ಲಿ ಎರಡು-ಮೂರು ತಲೆಮಾರುಗಳ ಜೇನುಹುಳುಗಳಿರುತ್ತವೆ. ತಮ್ಮ ಮರಿಗಳಿಗೆ ಆಹಾರ ಸಂಗ್ರಹಿಸಲಿಕ್ಕಾಗಿ ಅವು ಮಕರಂಧ ಹುಡುಕಿ ಹೋಗುತ್ತವೆ. ರೋಮವುಳ್ಳ ಇವುಗಳ ಕಾಲಿನ ಮೇಲೆ ವಿಶಿಷ್ಠ ಮಕರಂಧ ಚೀಲವಿರುತ್ತದೆ. ಹೂಗಳು ಅಷ್ಟು ವರ್ಣಮಯವಾಗಿದ್ದರೂ ಜೇನ್ನೊಣಗಳ ಗ್ರಹಿಕೆಗೆ ಆ ಬಣ್ಣಗಳು ದಕ್ಕುವುದು ಬಿಳಿ-ಕಪ್ಪು-ಕಂದುಬಣ್ಣದ ವಿವಿಧ ಛಾಯೆಯಲ್ಲೇ!. ಸುವಾಸನೆಯೂ ಜೇನ್ನೊಣಗಳನ್ನು ಹೂಗಳತ್ತ ಸೆಳೆಯುತ್ತದೆ. ಒಂದು ಜೇನ್ನೊಣಕ್ಕೆ ಹೂವಿನ ಗುರುತು ಸಿಕ್ಕಿತೆಂದರೆ ಉಳಿದ ಸಂಗಾತಿಗಳಿಗೆ ರಾಸಾಯನಿಕ ಮಾಹಿತಿ ನೀಡುತ್ತವೆ, ಫೆರ್ಮೋನುಗಳೆಂಬ ಸುವಾಸನಾ ಸಂಕೇತಗಳಿಂದಲೇ ಎಲ್ಲವನ್ನೂ ಗ್ರಹಿಸಿ ಉಳಿದ ಸಂಗಾತಿಗಳು ಅಲ್ಲಿಗೆ ತಲುಪುತ್ತವೆ. ಹೀಗೆ ಹೂಗಳಿಂದ ಮರಳಿ ಗೂಡುಗಳಿಗೆ ತಲುಪಿದಾಗ ಅಲ್ಲಿರುವ ಇತರ ಸಂಗಾತಿಗಳಿಗೂ ಮಾಹಿತಿ ನೀಡಬೇಕಲ್ಲ? ಅದಕ್ಕಾಗಿ ಸೂಕ್ತ ಚಲನವಿನ್ಯಾಸಗಳನ್ನು ಸೃಷ್ಟಿಸುತ್ತವೆ. ಸಂಗಾತಿಗಳ ಈ ನೃತ್ಯವನ್ನೇ ಅರ್ಥಮಾಡಿಕೊಂಡು ಅಲ್ಲಿರುವ ಜೇನ್ನೊಣಗಳು ಸಿಗಬಹುದಾದ ಮಕರಂಧದ ಗುಣಲಕ್ಷಣ, ಪ್ರಮಾಣ, ಅಲ್ಲಿಗಿರುವ ದೂರ ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತವೆ. ಒಂದು ಪ್ರಬೇಧದ ಹೂವುಗಳು ಸಿಕ್ಕವೆಂದರೆ ಇನ್ನೊಂದು ಪ್ರಬೇಧದ ಹೂಗಳ ಬಗ್ಗೆ ನಿರಾಸಕ್ತಿ ವಹಿಸುತ್ತವೆ. ಅಟ್ಲ ಮರ ಹೂ ಬಿಡುವಾಗಿನ ಜೇನಿಗೆ ನಮ್ಮೂರಲ್ಲಿ ಬೇಡಿಕೆ ಜಾಸ್ತಿ. ಎಲ್ಲರಿಗೂ ಗೊತ್ತಿರುವಂತೆ ಜೇನು ಹುಳುಗಳು ಸಾಮಾಜಿಕ ಜೀವಿಗಳು. ಕೊಲೋನಿಯಲ್ಲಿ ಗಂಡು ಜೇನು, ಕೆಲಸಗಾರ ಜೇನು ಮತ್ತು ರಾಣಿಜೇನುಗಳಿಗೆ ನಿರ್ದಿಷ್ಟ ಕೆಲಸ ಕಾರ್ಯಗಳಿರುತ್ತವೆ. ಆದರೆ, ಗುಂಪಿನ ನೆರವಿಲ್ಲದೆ ವೈಯಕ್ತಿಕವಾಗಿ ಅವುಗಳು ಬದುಕಲಾರವು. ರಾಣಿಜೇನು ಯಾವುದೇ ಗೂಡಿನಲ್ಲಿರುವ ಏಕೈಕ ಪ್ರೌಢ ಹೆಣ್ಣು. ಇದರ ಕಾರ್ಯ ಮೊಟ್ಟೆಯಿಡುವುದು ಮಾತ್ರ. ದಿನಕ್ಕೆ ಒಂದುವರೆ ಸಾವಿರ ಮೊಟ್ಟೆಗಳನ್ನು ಅದು ಇಡಬಲ್ಲದು. ಗಂಡಿಗಿಂತ ಮತ್ತು ಕೆಲಸಗಾರ ಹುಳುವಿಗಿಂತ ಗಾತ್ರದಲ್ಲಿ ದೊಡ್ಡದಾಗಿರುತ್ತದೆ. ಇದು ನಾಲ್ಕೈದು ವರ್ಷಗಳ ವರೆಗೆ ಬದುಕಬಲ್ಲದು. ಗಂಡಿನ ಜೊತೆಗಿನ ಸಮ್ಮೀಳನದ ನಂತರ ಉಂಟಾಗುವ ಮೊಟ್ಟೆಗಳು ಕೆಲಸಗಾರ ಹುಳುಗಳ ಹುಟ್ಟಿಗೆ ಕಾರಣವಾಗುತ್ತವೆ. ಗಂಡಿನ ಜೊತೆ ಸಮ್ಮಿಳನ ಸಾಧ್ಯವಾಗದಿದ್ದರೂ ರಾಣಿ ಮೊಟ್ಟೆಯಿಡುತ್ತದೆ. ಆದರೆ, ಆ ಮೊಟ್ಟೆಯಿಂದ ಗಂಡೇ ಹುಟ್ಟುತ್ತವೆ. ರಾಣಿ ಜೇನು ತಕ್ಕ ಪ್ರಮಾಣದಲ್ಲಿ ಮೇಣ ತಯಾರಿಸಲು ಶಕ್ತವಾಗಿಲ್ಲವೆಂದಾದರೆ ಕೆಲಸಗಾರ ಹುಳುಗಳು ಆ ರಾಣಿಯನ್ನು ಪದಭ್ರಷ್ಟವಾಗಿಸಿ ಹೊಸರಾಣಿಯನ್ನು ಘೋಷಿಸುತ್ತವೆ.

ಎಪಿಸ್‌ ಡಾರ್ಸೆಟಾ ಡಾರ್ಸೆಟಾ ಎಂಬ ಹೆಜ್ಜೇನೂ. ಎಪಿಸ್‌ ಸೆರೆನಾ ಇಂಡಿಕಾ ಎಂಬ ತೊಡವೆ ಜೇನೂ ಹೀಗೆ, ಮನೆಯ ಮಾಡಿನ ನೆರಳಿನಲ್ಲಿ ಗೂಡುಕಟ್ಟುತ್ತವೆ. ಸಾಮಾನ್ಯವಾಗಿ ಹೆಜ್ಜೇನುಗಳು ಅಲೆಮಾರಿಗಳಾಗಿದ್ದು ಒಂದು ಕಡೆಯಿಂದ ಇನ್ನೊಂದು ಕಡೆ ವಾಸ ಬದಲಿಸುತ್ತಿರುತ್ತವೆ. ಆದರೆ, ನಮ್ಮನೆಯ ಕಿಟಕಿಗಳಲ್ಲಿ ಇವು ಖಾಯಂ ವಾಸ ಮಾಡಿಕೊಂಡಿದ್ದವು. ವರ್ಷದ ಹಿಂದೆ ಮೇಲಂತಸ್ತಿನ ಮನೆಗೆ ಪೇಂಟ್‌ ಮಾಡುವುದು ಈ ಜೇನುಹುಳುಗಳಿಗೆ ಇಷ್ಟವಾಗಲಿಲ್ಲವೆಂದು ಕಾಣುತ್ತದೆ ಅಥವಾ ಬೇರೆ ಯಾವುದೋ ಕಾರಣವಿರಬಹುದು, ಅವು ತಮ್ಮ ಗೂಡುಗಳನ್ನು ಅರ್ಧದಲ್ಲೇ ಬಿಟ್ಟು ಹೋಗಿದ್ದವು. ಈಗ ಅವು ಹಾರಿ ಹೋಗಿದ್ದೇ ನಮ್ಮ ಆತಂಕಕ್ಕೆ ಕಾರಣವಾಯ್ತು. ವರ್ಷವಾದರೂ ಮರಳಿ ಬಂದಿರಲಿಲ್ಲ. ಮೊನ್ನೆ ಸಂಧ್ಯಾ ಕಣ್ಣುಮುಚ್ಚಿಕೊಂಡು ಕಿಟಕಿಯ ಬಳಿ ಬರಲು ತಿಳಿಸಿದಾಗ ಅರಳಿದ ಹೊಸ ಹೂವನ್ನು ಕಾಣಿಸುತ್ತಾಳೆಂದುಕೊಂಡೆ. ಕಣ್ ತೆರೆದಾಗ ಜೇನುಗೂಡು ಕಾಣಿಸಿತು. ಇಷ್ಟನ್ನೂ ಬರೆಯಬೇಕೆನಿಸಿದ್ದು ಜೇನುಹುಳುಗಳು ಮತ್ತೆ ಬಂದ ಖುಷಿಯಲ್ಲಿ. ಈ ಹಿಂದೆ ಮನೆಬಿಟ್ಟುಹೋದ ಜೇನುಹುಳುಗಳೇ ಮತ್ತೆ ಬಂದಿವೆ ಎಂಬ ನಂಬಿಕೆಯಲ್ಲಿ! ಮಕ್ಕಳವಾಣಿಯ ಒಂದು ಸಂಚಿಕೆಯಲ್ಲಿ ಜೇನುಹುಳುಗಳ ಕತೆ ಇದೆ. ಆ ಲಿಂಕನ್ನೂ ನಿಮಗಾಗಿ ಲಗತ್ತಿಸಿರುವೆ.