Thursday, 31 March 2016

ನಾರಾಯಣ ಗಾಂವಕಾರ-ನುಡಿ ಚಿತ್ರಗಳು










ಅನುಪಮ ಕಲಾವಿದ ಪಡುವಣಿ ನಾರಾಯಣ ಗಾಂವಕಾರ




  • ಬರೆಹ: ಗೌತಮ ಗಾಂವಕಾರ, ತೊರ್ಕೆ, ಕರಾವಳಿ ಮುಂಜಾವಿನಲ್ಲಿ.


ನಾರಾಯಣ ಗಾಂವಕಾರರು ಪಡುವಣಿಯವರು. ಇವರ ಪೂರ್ವಜರು ಚಂದಾವರ ಸೀಮೆಯ ಅಘನಾಶಿನಿಯವರು ಎಂದು ಕೇಳಿದ್ದೇನೆ.ಇವರೊಬ್ಬ ವಿಶಿಷ್ಟ ಪ್ರತಿಭೆಯ ಯಕ್ಷಗಾನ ಕಲಾವಿದರು. ಇವರು ಎಲೆ ಮರೆಯ ಕಾಯಿಯಂತೆ ಇದ್ದವರಲ್ಲ; ಜಿಲ್ಲೆಯ  ಎಲ್ಲೆಡೆ ತಮ್ಮ ಕಲಾಪ್ರತಿಭೆಯನ್ನು ಮೆರೆದು ವಿಜೃಂಸಿದ ಕಲಾವಿದ

ನಾರಾಯಣ ಗಾಂವಕಾರ, ಪಡುವಣಿ
ಯಾವನೋ ಯಕ್ಷಗಾನ ಗುರುವಿನ ಮಾರ್ಗದರ್ಶನದಲ್ಲಿ ಒಂದೇ ಒಂದು ಆಖ್ಯಾನದಲ್ಲಿ ಒಂದೇ ಒಂದು ಪಾತ್ರಕ್ಕಾಗಿ ಅಷ್ಟಿಷ್ಟು ಕುಣಿದು, ಉರುಹೊಡೆದು ಒಪ್ಪಿಸುವವನೂ ಕಲಾವಿದ!  ಚಿಕ್ಕ ಪ್ರಾಯದಲ್ಲೇ ಯಕ್ಷಗಾನಕ್ಕೆ ಮನಸೋತು, ಎಲ್ಲ ಬಗೆಯ ಪಾತ್ರಗಳನ್ನು ಮಾಡುತ್ತಾ ಹಂತ-ಹಂತವಾಗಿ ಮೇಲೇರಿ, ಎರಡನೇ ವೇಷದಾರಿಯಾಗಿ ರಸಿಕರ ಮನದಲ್ಲಿ ಅಚ್ಚಳಿಯದೆ ಉಳಿದ ನಾರಾಯಣ ಗಾಂವಕಾರರನ್ನು ಅವರು ರಂಗದಿಂದ ನಿವೃತ್ತಿ ಪಡೆದಮೇಲೆ ಮರೆತದ್ದು ಬಯಲಾಟ ಪ್ರಪಂಚದ ದುರಂತ. ಇವರು ವಂದಿ ಮಾಗದರ ಗುಂಪು ಕಟ್ಟಿಕೊಳ್ಳಲಿಲ್ಲ. ವ್ಯಕ್ತಿ ಪ್ರತಿಭೆಯ ನೈಜ ಪ್ರಕಾಶಕ್ಕೆ ಇಂತಹ ಗುಂಪು ಮಾರಕ . ತನ್ನ ಪಾತ್ರವನ್ನು ರೂಪಿಸುತ್ತಾ ಒಂದು ಸಂಘಟಿತ ಆಖ್ಯಾನದ ಪ್ರದರ್ಶನಕ್ಕೆ ಪೋಷಣೆ ನೀಡುವುದು ಈ ಕಲೆಗೇ ವಿಶಿಷ್ಟವಾದ ಪರಂಪರೆ. ನಾರಾಯಣ ಗಾಂವಕಾರರು ಈ ಅಲಿಖಿತ ನಿಯಮವನ್ನು ಮೀರಿದವರಲ್ಲ.

ಎಲ್ಲರೂ ದಶಾವತಾರಿಗಳಾಗುವುದಿಲ್ಲ. ನಾರಾಯಣ ಗಾಂವಕಾರರನ್ನೂ ದಶಾವತಾರಿ ಎನ್ನಲಾಗದು. ಆದರೆ, ಹತ್ತು ಹಲವು ಪಾತ್ರಗಳಲ್ಲಿ `ಇವರೇ ಸೈ’ ಎನ್ನು ಮುದ್ರೆ ಒತ್ತಿದವರು. ಒಂಟಿ ಸಲಗದಂತೆ ಸಾಗಿ ಜನಮೆಚ್ಚಿಗೆಯನ್ನು ಪಡೆದವರು.

ಭಾಗವತರು, ಮದ್ದಳೆಯವರು, ಚೆಂಡೆಯವರು, ವಿದೂಷಕಪಾತ್ರದಾರಿಯೂ ಸೇರಿದಂತೆ ಪ್ರತಯೊಬ್ಬರ ಪೂರಕ ಶ್ರಮ, ಪ್ರತಿಭೆಗಳು ಒಟ್ಟುಗೂಡಿ ಒಂದು ಆಖ್ಯಾನವಾಗುತ್ತಿರುವಾಗಲೇ ನಿನಗಿಂತ ನಾನು ಕಡಿಮೆಯಿಲ್ಲ ಎಂಬ ಮೇಲಾಟವೂ ಇವರ ನಡುವೆ ನಡೆಯುತ್ತದೆ. ಇವರ ನಡುವೆ ಒರೆಸಾಟಗಳೂ ನಡೆಯುತ್ತವೆ. ಪುರುಷ ಪಾತ್ರದಾರಿಯು ಹುಸಿ ಹೆಜ್ಜೆಯನ್ನು ಹಾಕುವವನಂತೆ ಮಾಡಿ ಮದ್ದಳೆಯವನನ್ನು ಪರೀಕ್ಷಿಸುತ್ತಾನೆ. ಮದ್ದಲೆಯವನು ಗಲಿಬಿಲಿಯಾಗದಿದ್ದಲ್ಲಿ ಪಾತ್ರದಾರಿ ಮೆಚ್ಚುತ್ತಾನೆ. ಇದೇ ರೀತಿ ಭಾಗವತರೂ, ಎದುರು ಪಾತ್ರದಾರಿಯೂ ಇತರರಿಗೆ ಪರೀಕ್ಷೆಗಳನ್ನು ಒಡ್ಡುತ್ತಲೇ ಇರುತ್ತಾರೆ. ಹಿಮ್ಮೇಳ-ಮುಮ್ಮೇಳಗಳ ನಡುವೆ ಇಂತಹ ಒರೆಸಾಟಗಳಲ್ಲಿ   ಕಲಾವಿದನ ಸತ್ವವು ಹೊರಹೊಮ್ಮುತ್ತದೆ. ನಾರಾಯಣ ಗಾಂವಕಾರರು ಇಂತಹ ಒರೆಸಾಟಗಳಲ್ಲಿ ಗೆದ್ದು, ಆಖ್ಯಾನವನ್ನೂ ಗೆಲ್ಲಿಸಿದವರು.

 ನಾರಾಯಣ ಗಾಂವಕಾರರು 
ಅಂದಿನ ಆಟದ ಭೂಮಿಕೆಗೆ ಹೊಂದುವಂತೆ ಪಾತ್ರ ನಿರ್ವಹಣೆಗೆ ಹೆಸರಾದವರು. ಪಾತ್ರ ಬೀಳಾಗದಂತೆ ಸದಾ ಎಚ್ಚರದಲ್ಲಿರುವವರು. ಇವರ ಪಾತ್ರಗಳಲ್ಲೇ `ಹನುಮಂತ’ ನ ಪಾತ್ರ ಅನನ್ಯವಾದದ್ದು. ಪಾತ್ರದಲ್ಲಿ ತಲ್ಲೀನತೆ ಅಂತಹದ್ದು. ಇವರು ನೂರಾರು ರಂಗಸ್ಥಳಗಳ ಮೇಲೆ ಹನುಮಂತನಾಗಿ ಮೆರೆದವರು. ಇದರ ಪರಿಣಾಮವಾಗಿ ಇವರ ಬೇರೆ ಪಾತ್ರಗಳಲ್ಲೂ ಹನುಮಂತನ ಛಾಯೆ ಕಾಣಿಸುತಿತ್ತು. ವಾಚಿಕ, ಆಹಾರ್ಯ, ಆಂಗಿಕ ಹಾಗೂ ಸಾತ್ವಿಕ ಅಭಿನಯಗಳಲ್ಲಿ ಇವರು ಸಮಾನ ಸಿದ್ಧಿಯನ್ನು ಸಾಧಿಸಿದವರು. ಇವರ ಅಭಿನಯ ನಿಜವಾದ ರಸೋಲ್ಲಾಸವೇ ಆಗಿರುತಿತ್ತು.
ಅನಾರೋಗ್ಯದಿಂದಾಗಿ ತಮ್ಮ  ಐವತ್ತರ ಹರೆಯದಲ್ಲೇ ವೇಷ ಹಚ್ಚುವುದನ್ನು ನಿಲ್ಲಿಸಿದರು. ತಾಳಮದ್ದಳೆಯಲ್ಲಿ ತಮ್ಮ ವ್ಯವಸಾಯವನ್ನು ಮುಂದುವರಿಸಿದರು.  ಅರ್ಥಗಾರಿಕೆಯಲ್ಲೂ ಇವರು ತಮ್ಮ ಛಾಪನ್ನು ಮೂಡಿಸಿದರು.

ಇವರು ಯಾರನ್ನೂ ಅನುಸರಿಸಿದವರಲ್ಲ; ಅನುಕರಿಸಿದವರಲ್ಲ. ಯಕ್ಷಗಾನದ ನೈಜ ಪ್ರದರ್ಶನ ನೀಡಿದವರಲ್ಲಿ ಇವರೊಬ್ಬರು. ತಮ್ಮ ಪಾತ್ರಗಳ ಮೂಲಕ ಪ್ರೇಕ್ಷಕರಲ್ಲಿ ನಾರಾಯಣ ಗಾಂವಕಾರರು ಹೊಮ್ಮಿಸಿದ ರಸಾನುಭವ ಅನಿರ್ವಚನೀಯ.
ನಾರಾಯಣ ಗಾಂವಕಾರವರ ಸಂದರ್ಶನಕ್ಕಾಗಿ ಕ್ಲಿಕ್ ಮಾಡಿ. 

ನಾರಾಯಣ ಗಾಂವಕಾರರ ಸಂದರ್ಶನ

ನಾರಾಯಣ ಗಾಂವಕಾರ, ಪಡುವಣಿ

NARAYANA GAONKAR
ತಂದೆ: ಅನಂತ ಗಾಂವಕಾರ
ತಾಯಿ: ಸಣ್ಣಮ್ಮ ಗಾಂವಕಾರ
ಜನನ: 10 ಮೇ 1940
ಶಿಕ್ಷಣ: ಮೆಟ್ರಿಕ್
ಯಕ್ಷರಂಗಕ್ಕೆ ಪಾದಾರ್ಪಣೆ: ತನ್ನ 14 ನೇ ವಯಸ್ಸಿನಲ್ಲಿ 1954 ರಲ್ಲಿ
ಮೊದಲ ಪಾತ್ರ: ಅಭಿಮನ್ಯು
ಪ್ರಾರಂಭಿಕ ಗುರುಗಳು: ದಿ. ಶಿವರಾಮ ಹೆಗಡೆ, ಬಾಡ ಮತ್ತು ದಿ. ಪರಮಯ್ಯ ಪಟಗಾರ, ಪಡುವಣಿ

ಹೆಸರು ತಂದ ಪಾತ್ರಗಳು: ಹನುಮಂತ (ಮಾರುತಿ ಪ್ರತಾಪ), ಶುಕ್ರಾಚಾರ್ಯ(ಕಚ ದೇವಯಾನಿ),

ನಾರಾಯಣ ಗಾಂವಕಾರರ ಸಂದರ್ಶನ
ಸಂಸದರ್ಶಕರು ಬೊಮ್ಮಯ್ಯ ಗಾಂವಕಾರ, ಉಪನ್ಯಾಸಕರು ಮತ್ತು ಹೆಸರಾಂತ ಭಾಗವತರು

ಪ್ರಶ್ನೆ:ನಿಮ್ಮ ಮೆಚ್ಚಿನ ಓರಿಗೆಯ ಕಲಾವಿದರಾರು?
ಉತ್ತರ: ದಿ. ಪರಮಯ್ಯ ಹಾಸ್ಯಗಾರ, ದಿ. ಬಳ್ಕೂರು ಜುಟ್ಟು ನಾಯ್ಕ, ದಿ. ಧಾರೇಶ್ವರ ಮಾಸ್ತರ, ದಿ. ಶಿವಾನಂದ ಭಂಡಾರಿ, ಶ್ರೀ ಅನಂತ ಹೆಗಡೆ ಹಾವಗೋಡಿ, ಶ್ರೀ ರಾಮ ಮಾಸ್ತರ ಮುಂತಾದವರು

ಪ್ರಶ್ನೆ: ನೀವು ಮೆಚ್ಚಿಕೊಂಡ ಕಲಾವಿದರು?
ಉತ್ತರ: ದಿ.ದೇವರು ಹೆಗಡೆ, ದಿ.ಎಕ್ಟರ್ ಜೋಷಿ, ದಿ.ವೀರಭದ್ರ ನಾಯ್ಕ, ದಿ. ಜಗನ್ನಾಥ ಶೆಟ್ಟಿ, ದಿ. ಶಂಭು ಹೆಗಡೆ, ದಿ. ವೆಂಕಟರಮಣ ನಾಯಕ, ಹಿರೇಗುತ್ತಿ, ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ, ಶ್ರೀ ಜಲವಳ್ಳಿ ವೆಂಕಟೇಶ್ ರಾವ್. ದಿ. ಗೋವಿಂದ ನಾಯ್ಕ್, ದಿ. ಎಂ ಎಂ ನಾಯಕ ಇತ್ಯಾದಿ

ಪ್ರಶ್ನೆ: ಯಾವ ಯಾವ ಬಯಲಾಟ ಮೇಳಗಳಲ್ಲಿ ನೀವು ಅಭಿನಯಿಸಿದ್ದೀರಿ?

ಉತ್ತರ: ಹಾಸ್ಯಗಾರ ಮೇಳ, ಕರ್ಕಿ, ಜೋಗನಕಟ್ಟೆ ಮೇಳ ಹಳದೀಪುರ, ಶ್ರೀ ರಾಮನಾಥ ಯಕ್ಷಗಾನ ಮಂಡಳಿ, ಕುಮಟಾ, ಶ್ರೀ ಶಾಂತಿಕಾ ಪರಮೇಶ್ವರಿ ಯಕ್ಷಗಾನ ಮಂಡಳಿ, ಹೆಗಡೆ, ಇನ್ನೂ ಅನೇಕ..