Saturday 19 January 2013

ದೇವರ ಫೋಟೋ ಮತ್ತು ನಿಂಬೆಹಣ್ಣು *ಉದಯ ಗಾಂವಕಾರ

Udayavani | Dec 30, 2012

    ದೇವರ ಫೋಟೋ ಮತ್ತು ನಿಂಬೆಹಣ್ಣು   
                                                                                                                                    
    ಅಣ್ಣಪ್ಪ ಮಾಸ್ತರರಿಗೆ ಅಂತಹ¨ಅಂತಹದ್ದುದೊಂದು ದುರಭ್ಯಾಸವಿದೆಯೆಂದರೆ ನಂಬುವುದೇ ಕಷ್ಟ. ಬೀಡಿ ಸೇದಿದವರಲ್ಲ, ಹೆಂಡ ಕುಡಿದವರಲ್ಲ. ಅಷ್ಟೇಕೆ, ಅವರ ವಯಸ್ಸಿನ ಹೆಚ್ಚಿನವರಿಗೆ ಇರುವ ಕವಳದ ಚಟವೂ ಅಣ್ಣಪ್ಪ ಮಾಸ್ತರರಿಗೆ ಇರಲಿಲ್ಲ. ಒಂದು ದಿನವೂ ಶಾಲೆಗೆ ತಡವಾಗಿ ಬಂದವರಲ್ಲ. ಬಿಳಿ ಜುಬ್ಬ, ಪೈಜಾಮಿನ ಅಣ್ಣಪ್ಪ ಮಾಸ್ತರರು ತಮ್ಮ ಹರ್ಕ್ಯುಲಸ್‌ ಸೈಕಲ್ಲನ್ನೇರಿ ಶಾಲೆಗೆ ಬಂದರೆಂದರೆ ಸಮಯ ಎಂಟೂವರೆಯಾಯಿತೆಂದೇ ಅರ್ಥ. ಊರಿನ ಜನ ಗಡಿಯಾರಗಳ ವಿಶ್ವಾಸಾರ್ಹತೆಯ ಕುರಿತು ಸ್ವಲ್ಪವಾದರೂ ಸಂಶಯವನ್ನಿಟ್ಟು ಕೊಂಡಿರಬಹುದು. ಆದರೆ, ಊರಿನ ಮಸೀದಿಯಲ್ಲಿ ನಮಾಜು ಮಾಡುವಾಗ ಧ್ವನಿವರ್ಧಕದಲ್ಲಿ 'ಅಲ್ಲಾ..'ಎಂಬ ಪ್ರಾರ್ಥನೆ ಕೇಳಿಸುವ ಸಮಯ ಮತ್ತು ಅಣ್ಣಪ್ಪ ಮಾಸ್ತರರು ಶಾಲೆಗೆ ಬರುವ ಸಮಯಗಳ ನಿಖರತೆಯ ಕುರಿತು ಯಾರಿಗೂ ಅನುಮಾನಗಳಿರಲಿಲ್ಲ. ವಯಸ್ಸು ಐವತ್ತಾರಾದರೂ ಅಣ್ಣಪ್ಪ ಮಾಸ್ತರರ ತಲೆ ತುಂಬ ಕೂದಲು. ಆ ಕೂದಲುಗಳಲ್ಲಿ ವಯಸ್ಸಿಗನುಗುಣವಾಗಿ ಕೆಲವಾದರೂ ಬಿಳಿಯಾಗಬೇಕಿತ್ತಲ್ಲ ಎಂದು ಯಾರಿಗಾದರೂ ಅನಿಸಿದರೆ ಅದು ಅಣ್ಣಪ್ಪ ಮಾಸ್ತರರ ತಪ್ಪಲ್ಲ. ಬೇರೆಯವರ ತಲೆಯಾಗಿದ್ದರೆ ಇದೆಲ್ಲ ಗೋದ್ರೆಜ್‌ ಹೇರ್‌ ಡೈನ ಮಹಿಮೆ ಎಂದು ಊರಿನ ಹರೆಯದ ಹುಡುಗರಾದರೂ ಅಂದುಕೊಳ್ಳುತ್ತಿದ್ದರು.ಆ ಊರಿನಲ್ಲಿ ಹುಟ್ಟಿ ಬೆಳೆದು ದೊಡ್ಡವರಾದವರ ಮಟ್ಟಿಗೆ ಎಂದೆಂದೂ ಬದಲಾಗದ ಕೆಲವು ಸಂಗತಿಗಳಲ್ಲಿ ಅಣ್ಣಪ್ಪ ಮಾಸ್ತರರೂ ಒಬ್ಬರು. ಎಣ್ಣೆ ಹಾಕಿ ಬಾಚಿದ ಅವರ ಕೂದಲುಗಳ ಮೇಲೆ ಹಾದು ಹೋಗುವ ಬಾಚಣಿಗೆಯ ಹಲ್ಲುಗಳು ಉಂಟುಮಾಡುವ‌ ಸಮನಾಂತರ ಗೆರೆಗಳ ವಿನ್ಯಾಸ ಕೂಡಾ ಕಳೆದ ಎಷ್ಟೋ ವರ್ಷಗಳಿಂದ ಬದಲಾಗದೆ ಸ್ಥಿರವಾಗಿರುವ ಇನಸ್ಟಾಲೇಷನ್‌ ಕಲೆಯ ಹಾಗೆ ಅವರಿಗೆ ಕಾಣಿಸುತ್ತಿತ್ತು.
ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಕಾಲದ ಪರೀಕ್ಷೆಗಳನ್ನು ಸಂಭಾಳಿಸಿ ಕೊಂಡು ಬಂದ ಅವರ ರೂಪದಲ್ಲಿ ಆಗುವ ಸೂಕ್ಷ್ಮ ಬದಲಾವಣೆಗಳನ್ನು ಗುರುತಿಸಲು ಆ ಊರಿನ ಜನ ಅಶಕ್ತರಾಗಿದ್ದರು. ಇದಕ್ಕೆ ಕಳೆದ ಮೂವತ್ತೆ„ದು ವರ್ಷಗಳಿಂದ ಅಣ್ಣಪ್ಪ ಮಾಸ್ತರು ರೂಢಿಸಿಕೊಂಡು ಬಂದ ಶಿಸ್ತೇ ಕಾರಣ. ಈ ಬಗೆಯ ಗುರುಪರಂಪರೆಗೆ ಸೇರಿದ ಅಣ್ಣಪ್ಪ ಮಾಸ್ತರರಿಗೆ ಇದ್ದ ದುರಭ್ಯಾಸವಾದರೂ ಯಾವುದು?ಇದನ್ನು ತಿಳಿಸುವ ಮೊದಲು ಅವರ ಚಿಕ್ಕ ಪರಿಚಯವನ್ನು ನಿಮಗೆ ನೀಡುವುದು ಅವಶ್ಯಕ.
ಅಣ್ಣಪ್ಪ ಮಾಸ್ತರರಿಗೆ ಎಂಟನೇ ತರಗತಿಯಲ್ಲಿರುವಾಗಲೇ ಶಿಕ್ಷಕ ನೌಕರಿ ದೊರಕಿತಂತೆ. ಆನಂತರ ಮೆಟ್ರಿಕ್‌ ಪರೀಕ್ಷೆ ಪಾಸುಮಾಡಿಕೊಂಡರೂ ಶಿಕ್ಷಕ ವೃತ್ತಿಗೆ ಅವಶ್ಯಕವಾದ ಟಿ. ಸಿ. ಎಚ್‌ ಕೋರ್ಸನ್ನು ಮಾಡಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಇದರಿಂದಾಗಿ ಅವರು ಅನ್‌ಟ್ರೇನ್‌ಡ್‌ ಶಿಕ್ಷಕ ಎಂಬ ಹಣೆಪಟ್ಟಿಯೊಂದಿಗೆ ಕಳೆದ ಮೂವತ್ತೆ„ದು ವರ್ಷಗಳಿಂದಲೂ ಯಾವುದೇ ಭಡ್ತಿಯಿಲ್ಲದೆ ಒಂದೇ ಶಾಲೆಯಲ್ಲಿ¨ªಾರೆ. ಅಣ್ಣಪ್ಪ ಮಾಸ್ತರರ ವಿದ್ಯಾರ್ಥಿಗಳಲ್ಲಿ ಎಷ್ಟೋ ಮಂದಿ ಬೇರೆ ಬೇರೆ ಊರುಗಳಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದಾರೆ. ಇನ್ನು ಕೆಲವರು ಊರಲ್ಲೇ ಉಳಿದು ಮನೆತನದ ವೃತ್ತಿಯನ್ನು ಮುಂದುವರಿಸಿದ್ದಾರೆ. ಅಂಥವರ ಮಕ್ಕಳು,ಮೊಮ್ಮಕ್ಕಳು ಕೂಡಾ ಅಣ್ಣಪ್ಪ ಮಾಸ್ತರರ ವಿದ್ಯಾರ್ಥಿಗಳಾದದ್ದು ಇದೆ.ಅಣ್ಣಪ್ಪ ಮಾಸ್ತರರಿಗೆ ಎಲ್ಲ ಮಕ್ಕಳೂ ಒಂದೇ-ಮಕ್ಕಳೆಂದರೆ ಮಕ್ಕಳು ಮಾತ್ರ. ಅವರಿಗೆ ದೊಡ್ಡವರ ಮನೆಯ ಮಕ್ಕಳು, ಬಡವರ ಮಕ್ಕಳು, ಮೇಲ್ಜಾತಿಯ, ಕೆಳಜಾತಿಯ ಮಕ್ಕಳು ಎಂಬ ಭೇದವಿಲ್ಲ. ಅಣ್ಣಪ್ಪ ಮಾಸ್ತರರು ಎಂದರೆ ಒಂದು ಕಾಲದ ಶಿಸ್ತಿನ ಶಿಕ್ಷಕರ ಜೀವಂತ ಪಳೆಯುಳಿಕೆ. ಇಂತಿರ್ಪ ಅವರು ದುರಭ್ಯಾಸವೊಂದನ್ನು ಪೋಷಿಸಿಕೊಂಡು ಬರುತ್ತಿದ್ದಾರೆಂದರೆ ನಂಬುವುದೇ ಕಷ್ಟ.
ಮಾಸ್ತರರು ತಮ್ಮ ದುರಭ್ಯಾಸಕ್ಕೆ ಸಿಲುಕಿಕೊಂಡದ್ದೂ ಒಂದು ಕತೆಯೇ ! ಐದಾರು ವರ್ಷಗಳ ಹಿಂದೆ ಅವರೊಮ್ಮೆ ತರಕಾರಿ ತರಲು ಅಂಗಡಿಗೆ ಹೋಗಿದ್ದರು. ಬರುವ ಸಂಬಳದಲ್ಲಿ ಬಹಳ ನಾಜೂಕಿನಿಂದ ಬದುಕು ಸಾಗಿಸಬೇಕು. ನಿತ್ಯದ ಬದುಕಿನಲ್ಲಿ ಕೊರತೆ ಕಾಣದ ಹಾಗೆ, ಕಿಸೆಗೂ ಹೊರೆಯಾಗದ ಹಾಗೆ ಸಾಮಗ್ರಿಗಳನ್ನು ಅಂಗಡಿಯಿಂದ ಆಯ್ದುಕೊಳ್ಳುವುದೂ ಒಂದು ಕಲೆ. ಕಾಲು ಕಿ. ಗ್ರಾಂ. ಈರುಳ್ಳಿ , ಐವತ್ತು ಗ್ರಾಂ. ಹಸಿಮೆಣಸು,ಅರ್ಧ ಕಿ. ಗ್ರಾಂ. ಬಟಾಟೆ ಕೊಂಡುಕೊಂಡರು.ಟೊಮ್ಯಾಟೋ ಬದಲು ಹುಣಿಸೇಹಣ್ಣು ಬಳಸುವುದೇ ಒಳ್ಳೆಯದು ಎಂದುಕೊಂಡರು. ಶನಿವಾರದ ಸಸ್ಯಾಹಾರದ ವೃತವಿಲ್ಲದೇ ಹೋಗಿದ್ದರೆ ಮೀನುಪಳದಿಯೇ ಒಳ್ಳೆಯದಾಗುತಿತ್ತು ಎಂದೆನಿಸಿತವರಿಗೆ-ಖರ್ಚೂ ಕಡಿಮೆ, ರುಚಿಯೂ ಜಾಸ್ತಿ. ವೃತದ ಅಡುಗೆಗೆ ತರಕಾರಿ ಕೊಳ್ಳುವಾಗ
ಮೀನಿನ ನೆನಪಾದುದಕ್ಕೆ ಒಮ್ಮೆ ಕಸಿವಿಸಿಯಾದರೂ ಆನಂತರ, ನಮ್ಮ ನಮ್ಮ ಆಹಾರದ ಪದ್ಧತಿಗಳು ನಮ್ಮ ದೇವರಿಗೂ ಸಹ್ಯವಾಗಬೇಕು ಎಂಬ ಅಭಿಪ್ರಾಯಕ್ಕೆ ಬಂದು ಸಮಾಧಾನ ಪಟ್ಟುಕೊಂಡರು. ತರಕಾರಿಗಳನ್ನು ಚೀಲಕ್ಕೆ ತುಂಬಿಕೊಳ್ಳುವಾಗ ಕೆಲವು ಈರುಳ್ಳಿಗಳು ಉರುಳಿ ಬಿದ್ದವು. ಅವುಗಳನ್ನು ಆರಿಸಿಕೊಂಡು, ಅಂಗಡಿಯಾತನಿಗೆ ಹಣ ನೀಡಿ ಬಂದರು. ಮನೆಗೆ ಬಂದು ಚೀಲ ತೆರೆದಾಗ ಅಣ್ಣಪ್ಪ ಮಾಸ್ತರರು ಕೊಂಡ ತರಕಾರಿಗಳ ಜೊತೆ ಎರಡು ನಿಂಬೆಹಣ್ಣುಗಳೂ ಇದ್ದವು. ನಿಂಬೆ ಹಣ್ಣುಗಳನ್ನು ಅಂಗಡಿಯಾತನಿಗೆ ವಾಪಸು ಕೊಡುವುದೇ ಸರಿ ಎಂದು ಭಾವಿಸಿ ವಾಪಸು ಅಂಗಡಿಗೆ ಹೋಗಲೆದ್ದರು. ಅಷ್ಟರಲ್ಲಿ, ಎರಡು ನಿಂಬೆಹಣ್ಣುಗಳನ್ನು ಹಿಡಿದುಕೊಂಡು ವಾಪಸು ಹೋಗುವುದಕ್ಕಿಂತ ಅವುಗಳ ಹಣ ಎಷ್ಟೆಂದು ಕೊಟ್ಟುಬಿಡುವುದೇ ಒಳ್ಳೆಯದು ಎಂಬ ಆಲೋಚನೆ ಅವರ ಮನಸ್ಸಿನಲ್ಲಿ ಹಾದುಹೋದದ್ದರಿಂದ ಉಂಟಾದ ಗೊಂದಲ ಅವರನ್ನು ನಿಷ್ಕ್ರಿàಯಗೊಳಿಸಿತು. ಸ್ವಲ್ಪ ಸುಸ್ತಾದದ್ದೂ ಕಾರಣವಾಗಿರಬಹುದು; ಅಣ್ಣಪ್ಪ ಮಾಸ್ತರರು ಸಮಸ್ಯೆಯನ್ನು ನಾಳೆಯವರೆಗೆ ಮುಂದೂಡಿದರು. ಕಾಲ ನಮ್ಮ ತೀರ್ಮಾನಗಳ ಮೇಲೆ ಎಷ್ಟೊಂದು ಪ್ರಭಾವ ಬೀರುತ್ತದೆ ನೋಡಿ, ಮಾರನೆ ದಿನ ಅಣ್ಣಪ್ಪ ಮಾಸ್ತರರಿಗೆ ಎರಡು ನಿಂಬೆಹಣ್ಣುಗಳನ್ನು ವಾಪಸು ನೀಡಿ ಅಥವಾ ಅವುಗಳ ಬೆಲೆಯನ್ನು ತೆತ್ತು ಪ್ರದರ್ಶನದ ಪ್ರಾಮಾಣಿಕತೆ ಮೆರೆಯುವುದು ಅಷ್ಟು ಸರಿಕಾಣಲಿಲ್ಲ. ಆ ಅಂಗಡಿಯಲ್ಲಿ ಎಷ್ಟೋ ವ್ಯವಹಾರ ಮಾಡಿರುವಾಗ ಎರಡು ನಿಂಬೆಹಣ್ಣುಗಳು ದೊಡ್ಡವೇನಲ್ಲ; ಇದನ್ನು ಇಲ್ಲಿಯೇ ಮರೆತುಬಿಡುವುದು ಒಳ್ಳೆಯದು ಅಂದುಕೊಂಡರು.
ಆದರೆ, ಅಣ್ಣಪ್ಪ ಮಾಸ್ತರರು ಅದನ್ನು ಮರೆಯಲಿಲ್ಲ. ವಾರದ ನಂತರ ಮತ್ತದೇ ಅಂಗಡಿಗೆ ಹೋದಾಗ ನಿಂಬೆಹಣ್ಣಿನ ಪ್ರಸಂಗ ನೆನಪಾಯಿತವರಿಗೆ. ಅದೆಂತಹ ಭೂತ ಅಣ್ಣಪ್ಪ ಮಾಸ್ತರರ ಜೀವದಲ್ಲಿ ಸೇರಿಕೊಂಡಿತೋ, ಈ ಬಾರಿಯೂ ತರಕಾರಿಗಳು ಉರುಳಿಬಿದ್ದವು.ಅವುಗಳನ್ನು ಆರಿಸಿ ಚೀಲಕ್ಕೆ ತುಂಬಿಕೊಳ್ಳುವ ಸಂದರ್ಭದಲ್ಲಿ ಪುನಃ ಎರಡು ನಿಂಬೆಹಣ್ಣುಗಳು ಚೀಲ ಸೇರಿದವು. ಈ ಬಾರಿಯೂ ತರಕಾರಿಗಳ ಜೊತೆ ನಿಂಬೆಹಣ್ಣುಗಳನ್ನು ತಂದಿರುವುದು ಅವರ ಹೆಂಡತಿಗೆ ಆಶ್ಚರ್ಯವನ್ನುಂಟುಮಾಡಿರಬೇಕು.
'ಈ ಮಳೆಗಾಲದಲ್ಲಿ ನಿಂಬೆ ಹಣ್ಣು ಯಾಕೆ ತಂದ್ರಿ?'ಎಂದು ಕೇಳಿದರು.
'ಶೀತ-ಕೆಮ್ಮು ಬರುವುದೆಲ್ಲ ಮಳೆಗಾಲದಲ್ಲೇ'ಎಂಬ ತತ್‌ಕ್ಷಣದ ಬುದ್ಧಿವಂತ ಉತ್ತರ ಹೊಳೆದರೂ ಅಣ್ಣಪ್ಪ ಮಾಸ್ತರರು ಏನೂ ಹೇಳದೆ ಸುಮ್ಮನುಳಿದರು.ಆ ಮಳೆಗಾಲದಲ್ಲಿ ಅಣ್ಣಪ್ಪ ಮಾಸ್ತರರಿಗೆ ಶೀತ-ಕೆಮ್ಮು ಬಾಧಿಸಿತೋ ಇಲ್ಲವೋ ಅದರೆ, ಆಗಾಗ ತರಕಾರಿ ಅಂಗಡಿಯಿಂದ ಒಂದೆರಡು ನಿಂಬೆಹಣ್ಣು, ಈರುಳ್ಳಿ, ಹಸಿಮೆಣಸು, ಬಟಾಟೆ ಮತ್ತಿತ್ಯಾದಿ ಚಿಕ್ಕಪುಟ್ಟ ವಸ್ತುಗಳನ್ನು ಗುಟ್ಟಾಗಿ ಎತ್ತಿಕೊಳ್ಳುವ ಗೀಳಂತೂ ಅಂಟಿಕೊಂಡಿತು.
ಈ ದುರಭ್ಯಾಸದಿಂದ ತಪ್ಪಿಸಿಕೊಳ್ಳಲು ಅಣ್ಣಪ್ಪ ಮಾಸ್ತರರು ಮಾಡಿದ ಪ್ರಯತ್ನಗಳೆಲ್ಲ ವಿಫ‌ಲವಾದವು.ಕೊನೆಯ ಕ್ಷಣದಲ್ಲಿ ಮನಸ್ಸನ್ನು ಹತೋಟಿ ಯಲ್ಲಿಟ್ಟುಕೊಳ್ಳಲು ಸಾಧ್ಯವಾಗದೆ ಪ್ರತಿಬಾರಿ ಸೋಲುತ್ತಿದ್ದರು. ತಮ್ಮನ್ನು ತಾವೇ ವಿಫ‌ಲಗೊಳಿಸುವ ಇಂತಹ ಪ್ರಸಂಗಗಳು ಸ್ವತಃ ಅಣ್ಣಪ್ಪ ಮಾಸ್ತರರಿಗೂ ವಿಚಿತ್ರವಾಗಿ ತೋರುತಿದ್ದವು. ಪ್ರತಿಸಾರಿ ಯಾವುದೋ ಪುಡಿಗಾಸಿನ ವಸ್ತುವೊಂದನ್ನು ಎಗರಿಸಿಕೊಂಡು ಬಂದಾಗಲೂ ವಿಶ್ವ ವನ್ನೇ ಗೆದ್ದ ಸಂತೋಷ.
ಮರುಕ್ಷಣವೇ ತನ್ನ ಕೊಳಕು ಬುದ್ಧಿಯ ಬಗ್ಗೆ ಅಸಹ್ಯ.ಇನ್ನು ಮುಂದೆ ಇಂತಹ ನೀಚ ಕೆಲಸವನ್ನು ಮಾಡಲೇಬಾರದು ಎಂದು ಎಷ್ಟು ಬಾರಿ ಪಣತೊಟ್ಟಿದ್ದರೋ ಅಷ್ಟೇ ಬಾರಿ ಆ ಪಣವನ್ನು ಮುರಿದು ತನ್ನ ಗೀಳಿಗೆ ಮತ್ತೆ ತಲೆಬಾಗಿದ್ದರು. ಅದೇ ತರಕಾರಿ ಅಂಗಡಿಯ ಅಣ್ಣಪ್ಪ ಮಾಸ್ತರರ ಗೀಳು ಮುಂದುವರಿದಿದ್ದರೆ ಅಂತಹ ಅಪಾಯವಾಗುತ್ತಿರಲಿಲ್ಲ. ತರಕಾರಿ ಅಂಗಡಿಯಲ್ಲಿ ಹುಟ್ಟಿಕೊಂಡ ದುರಭ್ಯಾಸ ಈಗ ದಿನಸಿ ಅಂಗಡಿಯವರೆಗೂ ಬಂದಿತ್ತು. ಗಜಾನನನ ದಿನಸಿ ಅಂಗಡಿಯ ಕ್ಯಾಶ್‌ ಕೌಂಟರಿನ ಮೇಲೆ ಜೋಡಿಸಿಟ್ಟ ಸಣ್ಣ ಪುಟ್ಟ ವಸ್ತು¤ಗಳನ್ನು ಹುಷಾರಾಗಿ ಎಗರಿಸಿಕೊಳ್ಳುವುದನ್ನು ಅಣ್ಣಪ್ಪ ಮಾಸ್ತರರು ಶುರುಮಾಡಿಕೊಂಡರು. ಇದರಿಂದಾಗಿ, ಮನೆಯಲ್ಲಿ ಆವಶ್ಯಕತೆಗಿಂತ ಹೆಚ್ಚು ಪೆನ್ನು, ಬೆಂಕಿಪೊಟ್ಟಣಗಳು, ಅಮೃತಾಂಜನ್‌ ಡಬ್ಬಗಳು ಸಂಗ್ರಹವಾಗತೊಡಗಿದವು. ಮಾಸ್ತರರ ಹೆಂಡತಿಗೆ ಇದೆಲ್ಲ ವಿಚಿತ್ರವಾಗಿ ಕಾಣಿಸತೊಡಗಿತು. ಮೊದಮೊದಲು ತನ್ನ ಗಂಡನಿಗೆ ಮರೆವು ಪ್ರಾರಂಭವಾಗಿದೆ ಎಂದೇ ಅಂದುಕೊಂಡಿದ್ದರು. ಬೇರೆಲ್ಲ ವಿಷಯಗಳಲ್ಲಿ ಗಂಡನ ಸ್ಮರಣಶಕ್ತಿ ಚೆನ್ನಾಗಿಯೇ ಇರುವುದು ಆಕೆಯ ಗಮನಕ್ಕೆ ಬಂದ ಮೇಲೆ ತನ್ನ ಗಂಡನದು ಮರೆವಿನ ಸಮಸ್ಯೆ ಅಲ್ಲ ಎಂಬುದು ತಿಳಿದುಹೋಯಿತು. ಪ್ರತಿಬಾರಿ ಅಂಗಡಿಗೆ ಮಾಸ್ತರರು ಹೋಗುವಾಗಲೂ ಅವರು ತರಬೇಕಾದ ಸಾಮಗ್ರಿಗಳನ್ನು ಹೇಳುವುದರ ಜೊತೆಗೆ ಬೆಂಕಿಪೊಟ್ಟಣ ತರಬೇಡಿ, ನಿಂಬೆಹಣ್ಣು ತರಬೇಡಿ ಮುಂತಾಗಿ ಎಚ್ಚರಿಸಿ ಕಳುಸುತ್ತಿದ್ದರು. ಆದರೂ ಮತ್ತೆ ಮತ್ತೆ ಅವೇ ವಸ್ತುಗಳು ಮನೆಯನ್ನು ಸೇರುತ್ತಲೇ ಇದ್ದವು. ಮಾಸ್ತರರ ಹೆಂಡತಿ ಈ ಸಮಸ್ಯೆಗೊಂದು ಪರಿಹಾರವನ್ನು ಹುಡುಕಲೇಬೇಕೆಂದುಕೊಂಡರು. .ಈ ಬಾರಿ ಅಣ್ಣಪ್ಪ ಮಾಸ್ತರರು ಗಜಾನನನ ಅಂಗಡಿಗೆ ಹೋದಾಗ ಅವರಿಗೊಂದು ಆಘಾತ ಕಾದಿತ್ತು.'ಸಾಮಾನಿನ ಚೀಟಿ ಕೊಡಿ ಸಾರ್‌'ಎಂದು ಗಜಾನನ ಅಂದಾಗಲೇ ಮಾಸ್ತರರಿಗೆ ಏನೋ ಬದಲಾಗಿರುವ ಹಾಗೆ ಅನ್ನಿಸಿತ್ತು. ಮಾಸ್ತರರು ಹಿಂದೆ ಎಂದೂ ಸಾಮಾನುಗಳ ಪಟ್ಟಿ ತಂದವರಲ್ಲ. ಗಜಾನನನೂ, 'ಚೀಟಿ ಕೊಡಿ ಸರ್‌' ಎಂದು ಹಿಂದೆ ಯಾವತ್ತೂ ಕೇಳಿದ್ದಿರಲಿಲ್ಲ. ಈ ದಿನ ಬರುವಾಗ ಹೆಂಡತಿ ಚೀಟಿ ಬರೆದುಕೊಂಡು ಹೋಗಿ ಎಂದು ತುಂಬಾ ಒತ್ತಾಯಿಸಿದ್ದರಿಂದ ಅವರು ಸಾಮಾನುಗಳ ಪಟ್ಟಿ ಮಾಡಿಕೊಂಡು ಬಂದಿದ್ದರು.ಅದಕ್ಕೆ ಸರಿಯಾಗಿ ಗಜಾನನ ಚೀಟಿ ಕೇಳುವುದೆಂದರೆ?
ಗಜಾನನನ ಮುಖ ನೋಡುತ್ತಾ ಸಾವಕಾಶವಾಗಿ ಮಾಸ್ತರರು ಕಿಸೆಯಿಂದ ಚೀಟಿ ತೆ‌ಗೆದುಕೊಟ್ಟರು. 'ಚೀಟಿಯಲ್ಲಿ ಬರೆದಿರುವುದನ್ನು ಬಿಟ್ಟು ಬೇರೆ ಏನನ್ನೂ ಕೊಡಬೇಡ ಎಂದು ಅಮ್ಮ ಹೇಳಿ ಹೋಗಿದ್ದಾರೆ.' ಎಂದ ಗಜಾನನ. ಬೆಂಕಿಪೊಟ್ಟಣ, ಅಮೃತಾಂಜನ್‌ ಡಬ್ಬಗಳನ್ನು ಮತ್ತೆ ಮತ್ತೆ ಮನೆಗೆ ತರುವ ವಿಚಾರವನ್ನು ಹೆಂಡತಿ ಹೇಳಿರಬಹುದೆ? ಈಗಾಗಲೆ ಕೌಂಟರಿನ ಮೇಲಿಟ್ಟಿರುವ ವಸ್ತುಗಳು ಮಾಯವಾಗುತ್ತಿರುವುದು ಗಜಾನನನ ಅರಿವಿಗೆ ಬಂದಿದ್ದರೆ ಹೆಂಡತಿಯ ಮಾತು ಅವನಿಗೆ ಸುಳಿವ ಒದಗಿಸಿದ ಹಾಗಾಗಿರಬಹುದಲ್ಲ? -ಮಾಸ್ತರರು ಚಿಂತಿತರಾದರು. ಕೂಡಲೇ ಧೈರ್ಯ ತಂದುಕೊಂಡು, ಹಾಗೇನೂ ಆಗಿರಲಾರದು ಎಂಬ ಸಮಾಧಾನದಿಂದ 'ಯಾಕಂತೆ?' ಎಂದರು. 'ಅಮ್ಮ ಹೇಳದ ಸಾಮಾನುಗಳನ್ನೂ ನೀವು ಕೊಂಡು ಹೋಗುತ್ತೀರಂತೆ!' ಎಂದ. ನಿರಾಳದ ಉಸಿರುಬಿಟ್ಟು 'ಓ ಹಾಗಾ?'ಎಂದರು.
ಅಂಗಡಿಯಿಂದ ಮನೆಗೆ ಮರುಳುವಾಗ ಅಣ್ಣಪ್ಪ ಮಾಸ್ತರರ ತಲೆಯಲ್ಲಿ ಮೋಟಾರು ಓಡಾಡಿದ ಹಾಗಾಗುತಿತ್ತು. ಈ ಗೀಳು ಇನ್ನೂ ಮುಂದುವರಿದರೆ ಮಾನ ಕಳೆದುಕೊಳ್ಳುವುದು ಗ್ಯಾರಂಟಿ ಎಂದು ಅನ್ನಿಸಿಬಿಟ್ಟಿತ್ತು. ಆಲೋಚಿಸಿದರು.. ಆಲೋಚಿಸಿದರು..ಆಲೋಚಿಸುತ್ತ ಹೋದರು. ಹಿಂದೆ ಎಷ್ಟೋ ಬಾರಿ ಇಂದು ಕದಿಯಲೇಬಾರದು ಎಂದು ದೃಢನಿರ್ಧಾರ ತೆಗೆದುಕೊಂಡು ಅಂಗಡಿಗೆ ಹೋದಾಗಲೂ ಸೋತುಹೋಗಿದ್ದರು. ಈ ದರಿದ್ರ ಚಟದಿಂದ ತಪ್ಪಿಸಿಕೊಳ್ಳುವುದು ಸುಲಭವಲ್ಲ ಎಂಬುದು ಅನೇಕ ಬಾರಿ ಸಾಬೀತಾಗಿತ್ತು.ಕದಿಯುವುದು ಮಾನಸಿಕ ಕಾಯಿಲೆಯಾಗಿ ಬದಲಾಗಿಬಿಟ್ಟಿರಬಹುದೆಂಬ ಬಲವಾದ ಅನುಮಾನ ಅಣ್ಣಪ್ಪ ಮಾಸ್ತರರ ತಲೆಯೊಳಗೆ ಸೇರಿಕೊಂಡು ಅವರನ್ನು ಕಾಲಿನಿಂದ ತಲೆಯವರೆಗೆ ಅಡಿಸಲು ಶುರುಮಾಡಿತು. ಯಾರೊಡನಾದರೂ ಹೇಳಿಕೊಂಡರೆ ಪರಿಹಾರ ದೊರೆಯಬಹುದೆಂದು ಅನ್ನಿಸುವಾಗಲೇ ಹೇಗೆ ಹೇಳಿಕೊಳ್ಳುವುದು ಎಂಬ ಪ್ರಶ್ನೆಯೂ ಸೇರಿಕೊಳ್ಳುತಿತ್ತು. ಬಹಳ ಆಲೋಚನೆ ಮಾಡಿ ಕೊನೆಗೂ ಮಾಸ್ತರರು ಒಂದು ನಿರ್ಧಾರಕ್ಕೆ ಬಂದರು. ಒಬ್ಬ ಸೂಕ್ತ ವ್ಯಕ್ತಿಯಲ್ಲಿ ಇದನ್ನೆಲ್ಲ ಹೇಳಿಕೊಂಡು,ಪರಿಹಾರಕ್ಕಾಗಿ ಕೈಯೊಡ್ಡುವುದೇ ಈ ಕೊಳಚೆಯನ್ನು ಕಿತ್ತೂಸೆಯಲು ಇರುವ ಏಕೈಕ ದಾರಿ ಎಂಬ ದೃಢ ನಿರ್ಧಾರದೊಂದಿಗೆ ಮನೆಯನ್ನು ತಲುಪಿದರು.

ತನ್ನ ಸಮಸ್ಯೆಯನ್ನು ಹೇಳಿಕೊಳ್ಳಲು ಸೂಕ್ತ ವ್ಯಕ್ತಿಯನ್ನು ಆಯುವುದರ ಮಾಸ್ತರರು ಆ ರಾತ್ರಿಯನ್ನು ವ್ಯಯಿಸಿದರು.ಕೊನೆಗೂ,ತಮ್ಮ ಹೆಡ್‌ ಮಾಸ್ತರರೇ ಅತ್ಯಂತ ಸೂಕ್ತ ವ್ಯಕ್ತಿ ಎಂದು ನಿರ್ಧರಿಸಿ, ಬೆಳಿಗ್ಗೆಯೇ ಸೈಕಲ್ಲು ಏರಿ ಹೊರಟರು. ರವಿವಾರವಾದುದರಿಂದ ಇಬ್ಬರೂ ಸಮಯದ ಒತ್ತಡವಿಲ್ಲದೇ ಮಾತನಾಡಬಹುದು ಎಂದು ಎಣಿಸುತ್ತ ಹೆಡ್‌ಮಾಸ್ತರರ ಮನೆಯ ಬಾಗಿಲು ಬಡಿದಾಗ ಅವರ ಹೆಂಡತಿ ಹೊರಬಂದರು. ಹೆಡ್‌ ಮಾಸ್ತರರು ಶಾಲೆಗೆ ಹೋಗಿದ್ದಾರೆಂದು ಅವರ ಹೆಂಡತಿ ತಿಳಿಸಿದಾಗ ಅಣ್ಣಪ್ಪ ಮಾಸ್ತರರಿಗೆ ಮೊದಲು ಆಶ್ಚರ್ಯವೇ ಆಯಿತು.ಆನಂತರ, ಅಧಿಕಾರಿಗಳು ಯಾವುದೋ ಅಂಕಿಸಂಖ್ಯೆಯನ್ನು ತುರ್ತಾಗಿ ಕಳುಹಿಸಿ ಎಂದು ದೂರವಾಣಿಯಲ್ಲಿ ಆದೇಶ ನೀಡುವುದು ಇತ್ತೀಚೆಗೆ ಹೆಚ್ಚಾಗಿದೆ ಎಂದು ಆಗಾಗ ಹೆಡ್‌ ಮಾಸ್ತರರು ಹೇಳುವುದು ನೆನಪಿಗೆ ಬಂತು.ಬಹುಶಃ ಹೆಡ್‌ ಮಾಸ್ತರರು ಯಾವುದೋ ಫೈಲಿನಲ್ಲಿ ಈಗ ಹುದುಗಿಹೋಗಿರಬಹುದೆಂದು ಊಹಿಸುತ್ತಾ ಶಾಲೆಯ ಕಡೆ ಸೈಕಲ್‌ ತುಳಿದರು. ಬರೇ ಹತ್ತು ನಿಮಿಷದ ಹಾದಿ. ಶಾಲೆಯ ಗೇಟಿನ ಸದ್ದು ಕೇಳಿ ಹೆಡ್‌ ಮಾಸ್ತರರು ಹೊರಗೆ ಬಂದರು. ರಜೆಯ ದಿನವೂ ಕೆಲಸ ಮಾಡುವ ಹೆಡ್‌ ಮಾಸ್ತರರ ವೃತ್ತಿಪರತೆಯ ಕುರಿತು ಅಣ್ಣಪ್ಪ ಮಾಸ್ತರರ ಹೊಗಳಿಕೆಯ
ಮಾತುಗಳನ್ನು ನಡುವೆಯೇ ತುಂಡರಿಸುತ್ತ ಹೆಡ್‌ ಮಾಸ್ತರರೇ ಮೆಲುಧ್ವನಿಯಲ್ಲಿ ತುಂಬ ನಯದಿಂದ ಕೇಳಿದರು- 'ಏನು ಬಂದದ್ದು?'
ಹೆಡ್‌ ಮಾಸ್ತರರ ಪ್ರಶ್ನೆಯನ್ನು ಹಿಂಬಾಲಿಸಿದ ನಾಟಕೀಯ ಮೌನವನ್ನು ಅಣ್ಣಪ್ಪ ಮಾಸ್ತರರೇ ದೀರ್ಘ‌ ಉಸಿರು ಬಿಡುವ ಮೂಲಕ ಭೇದಿಸಿ, ತಲೆ ಅಲ್ಲಾಡಿಸುತ್ತ 'ಹೇಳ್ತೇನೆ ಸರ್‌' ಎಂದರು. ನಿಧಾನವಾಗಿ ಹೆಡ್‌ ಮಾಸ್ತರರ ಕೋಣೆಯ ಕಡೆ ನಡೆದು ಕುರ್ಚಿಯೊಂದರ ಮೇಲೆ ಕುಳಿತುಕೊಂಡರು.ಅವರನ್ನು ಹಿಂಬಾಲಿಸಿ ಬಂದ ಹೆಡ್‌ ಮಾಸ್ತರರೂ ತಮ್ಮ ಕುರ್ಚಿಯ ಮೇಲೆ ಕುಳಿತು ಅಣ್ಣಪ್ಪ ಮಾಸ್ತರರ ಕತೆ ಕೇಳಲು ಸಿದ್ಧರಾದರು.
ಕತೆಯನ್ನು ಪೂರ್ತಿಯಾಗಿ ಆಲಿಸಿದ ಮೇಲೆ ಪುನಃ ಆವರಿಸಿದ ಮೌನವನ್ನು ಹೆಡ್‌ ಮಾಸ್ತರರೇ ಮುರಿದು, 'ಇನ್ಮುಂದೆ ಒಂದ್ಕೆಲಸ ಮಾಡಿ,ಅಂಗಡಿಗೆ ಹೋಗುವಾಗ ಚೀಲದೊಳಗೆ ನಿಮ್ಮ ಇಷ್ಟದೇವರ ಚಿಕ್ಕ ಫೋಟೋ ಇಟ್ಟುಕೊಂಡು ಹೋಗಿ. ಏನಾಗ್ತದೋ ನೋಡೋಣ.'ಎಂದರು. ಅದ್ಭುತ ಐಡಿಯಾ ಇದು ಎನಿಸಿತು ಮಾಸ್ತರರಿಗೆ. 'ದೇವರೇ ಅಪ್ಪಣೆ ಕೊಡಿಸಿದ ಹಾಗಿದೆ ನಿಮ್ಮ ಮಾತು ಸರ್‌' ಮಾಸ್ತರರು ಹೊರಡಲೆದ್ದರು-ಹೊಸ ಐಡಿಯಾವನ್ನು ಕಾರ್ಯರೂಪಕ್ಕಿಳಿಸುವ ಉತ್ಸಾಹದಲ್ಲಿ.ಅರ್ಧ ದಾರಿಯನ್ನೂ ಕ್ರಮಿಸಿರಲಿಲ್ಲ. ಹೆಡ್‌ ಮಾಸ್ತರರು ಈ ವಿಷಯ ವನ್ನು ಇನ್ಯಾರಿಗಾದರೂ ಹೇಳಿಬಿಡಬಹುದೋ ಎಂಬ ಅನುಮಾನ ಮಾಸ್ತರ ರನ್ನು ಕಾಡಲು ಪ್ರಾರಂಭಿಸಿತು. ಹೆಡ್‌ ಮಾಸ್ತ‌ರರು ಅಂಥವರಲ್ಲ. ಆದರೆ, ಇಂತಹ ಆಸಕ್ತಿದಾಯಕ ವಿಚಾರವನ್ನು ತಮ್ಮ ಹೆಂಡತಿಗೂ ಹೇಳಲಾರರು ಎಂದು ನಂಬುವುದು ಹೇಗೆ? ಅವರ ಹೆಂಡತಿ ಪಕ್ಕದ ಮನೆಯ ಸಾವಿತ್ರಮ್ಮ ನಿಗೋ ಅಥವಾ ಎದುರು ಮನೆಯ ನಿರ್ಮಲಾಳಿಗೋ ಹೇಳಿದರೆಂದರೆ, ಸುದ್ದಿ ಪೇಪರಿನಲ್ಲಿ ಬಂದ ಹಾಗೆಯೇ! ನಾನು ಈ ದುರಭ್ಯಾಸದಿಂದ ತಪ್ಪಿಸಿ ಕೊಂಡರೂ ಮರ್ಯಾದೆ ಹೋಗುವುದು ಗ್ಯಾರಂಟಿ! 'ಇದು ನಿಮ್ಮಲ್ಲಿಯೇ ಇರಲಿ' ಎಂದು ಒಂದು ಮಾತು ಹೆಡ್‌ ಮಾಸ್ತರರಿಗೆ ಹೇಳಿ ಬರುವುದೇ ಸರಿ ಎಂಬ ತೀರ್ಮಾನಕ್ಕೆ ಬಂದು ಅಣ್ಣಪ್ಪ ಮಾಸ್ತರರು ಸೈಕಲ್ಲನ್ನು ತಿರುಗಿಸಿದರು.
ಅಣ್ಣಪ್ಪ ಮಾಸ್ತರರು ಶಾಲೆಯ ಗೇಟಿನ ಒಳಹೋಗುವುದಕ್ಕೂ ಹೆಡ್‌ ಮಾಸ್ತರರು ಹೊರಬರುವುದಕ್ಕೂ ಸರಿಹೋಯಿತು. ಎದುರಿಗೆ ಅಣ್ಣಪ್ಪ ಮಾಸ್ತರರನ್ನು ಕಂಡು ಹೆಡ್‌ ಮಾಸ್ತರರು ಗಾಬರಿಗೊಂಡರು. ಅಣ್ಣಪ್ಪಮಾಸ್ತರರಿಗೆ ಆಶ್ಚರ್ಯಹುಟ್ಟಿಸುವಂತೆ ಹೆಡ್‌ ಮಾಸ್ತರರು ತಮ್ಮ ಎರಡೂ ಕೈಗಳಲ್ಲಿ ಹಿಡಿದುಕೊಂಡಿದ್ದ ಎರಡು ಭಾರವಾದ ಕೈಚೀಲಗಳನ್ನು ಬಹಳ ಗಡಿಬಿಡಿಯಲ್ಲಿ ತಮ್ಮ ಸ್ಕೂಟರಿಗೆ ಸಿಕ್ಕಿಸಲು ಪ್ರಯತ್ನಿಸಿದರು. ಈ ಪ್ರಯತ್ನದಲ್ಲಿ ಎಡವಿಬಿಟ್ಟರು. ಕೈಚೀಲಗಳು ನೆಲಕ್ಕುರುಳಿದವು. ಅದರಲ್ಲಿದ್ದ ಶಾಲಾಮಕ್ಕಳ ಬಿಸಿಯೂಟದ ಬೇಳೆ, ಎಣ್ಣೆಯ ಪ್ಯಾಕೆಟ್ಟುಗಳು ಚೀಲದ ಹೊರಗೆ ಚೆಲ್ಲಿಹೋದವು. ಅಣ್ಣಪ್ಪ ಮಾಸ್ತರರಿಗೆ ಮತ್ತಷ್ಟು ಆಶ್ಚರ್ಯ ಹುಟ್ಟಿಸುವಂತೆ ಬೇಗನೆ ಸಾವರಿಸಿಕೊಂಡ ಹೆಡ್‌ ಮಾಸ್ತರರು, 'ನೀವು ಹೇಳಿದ್ದನ್ನು ಯಾರಿಗೂ ಹೇಳುವುದಿಲ್ಲ' ಎಂದರು. ಆ ಮಾತಿನಲ್ಲಿ, ಇಲ್ಲಿ ನೋಡಿದ್ದನ್ನು ಯಾರಿಗೂ ಹೇಳದಿರುವುದು ಕ್ಷೇಮ ಎಂಬ ಭಾವವಿತ್ತು. ಅವರ ಭಂಡತನ ಅಣ್ಣಪ್ಪ ಮಾಸ್ತರರಿಗೆ ಇನ್ನಷ್ಟು ಅಸಹ್ಯ ಹುಟ್ಟಿಸಿತು. ಒಂದೇ ಒಂದು ಮಾತನ್ನೂ ಆಡದೇ
ಅಲ್ಲಿಂದ ಹೊರಟುಬಿಟ್ಟರು. .ಅಣ್ಣಪ್ಪಮಾಸ್ತರರಿಗೆ ಈಗ ಕದಿಯುವ ಗೀಳಿಲ್ಲ.ಅಂಗಡಿಗೆ ಪ್ರತಿ ಬಾರಿ ಹೋಗುವಾಗಲೂ ಕೈಚೀಲದಲ್ಲಿ ದೇವರ ಫೋಟೋ ಕೊಂಡೊಯ್ಯುವುದನ್ನು ಮಾಸ್ತರರು ಮರೆಯುವುದಿಲ್ಲ. ಚೀಲದೊಳಗಿನ ಫೊಟೋದ ಆಯತಾಕಾರದ ಅಸ್ತಿತ್ವವು ಮಾಸ್ತರರಿಗೆ ಎಂತಹ ಭಯವನ್ನು ಉಂಟುಮಾಡಿದೆಯೋ ದೇವರಿಗೇ ಗೊತ್ತು! ಈಗವರು ಅಂಗಡಿಯ ವಸ್ತುಗಳನ್ನು ಕದಿಯುವುದಿಲ್ಲ.
ನಿಂಬೆಹಣ್ಣು, ಅಮೃತಾಂಜನ್‌ ಡಬ್ಬ ಮುಂತಾದ ವಸ್ತುಗಳು ಅನಗತ್ಯವಾಗಿ ಮನೆಸೇರುವುದು ನಿಂತಿರುವುದು ಮಾಸ್ತರರ ಹೆಂಡತಿಗೆ ‌ಮಾಧಾನ ತಂದಿದೆ. ಗಂಡ ಪ್ರತಿ ಬಾರಿ ಅಂಗಡಿಗೆ ಹೋಗುವಾಗಲೂ ದೇವರ ಫೋಟೋ ಕೊಂಡೊಯ್ಯುವುದೇಕೆ ಎಂಬುದು ಆಕೆಗೆ ಸಮಸ್ಯೆಯಾಗಿ ಕಾಡುವುದಿಲ್ಲ. ಆದರೆ,ಮಾಸ್ತರಿಗೇ ಇದು ಸಮಸ್ಯೆಯಾಗಿ ಕಾಡುತ್ತಿದೆ-ಚೀಲದಲ್ಲಿ ದೇವರ ಫೋಟೋ ಇಟ್ಟುಕೊಳ್ಳುವುದಕ್ಕೂ ನಾನು ಕದಿಯುವುದನ್ನು ನಿಲ್ಲಿಸಿರುವುದಕ್ಕೂ ಸ‌ಂಬಂಧವಿದೆಯೇ? 

No comments: