Wednesday, 4 April 2018

ಅವರು ಕ್ರಿಕೆಟ್ ಬಾಲನ್ನೇಕೆ ಹಾಗೆ ಉಜ್ಜುತ್ತಾರೆ?


ಕ್ರಿಕೆಟ್ ಆಟಗಾರರು ಏಕೆ ಬಾಲಿನ ರೂಪಗೆಡಿಸುತ್ತಾರೆ? ವೇಗದ ಬೌಲರುಗಳು ಏಕೆ ಬಾಲನ್ನು ತಮ್ಮ ಟ್ರೌಸರಿಗೆ ಉಜ್ಜಿಕೊಳ್ಳುತ್ತಾರೆ? ಇಂತಹ ಪ್ರಶ್ನೆಗಳು ಕ್ರಿಕೆಟ್ ಅಭಿಮಾನಿಗಳ ತಲೆಯನ್ನೂ ಕೊರೆಯುತ್ತವೆ. ಮೊನ್ನೆ, ಆಸ್ಟ್ರೇಲಿಯಾದ ಕ್ರಿಕೆಟಿಗ ಕ್ಯಾಮರೂನ್ ಬ್ಯಾಂಕ್ರಾಪ್ಟ್ ಕಿಸೆಯಲ್ಲಿ ಗುಟ್ಟಾಗಿ ಅಡಗಿಸಿಟ್ಟ ಹಳದಿ ಬಣ್ಣದ ಪಟ್ಟಿಯಿಂದ ಬಾಲನ್ನು ಉಜ್ಜುತ್ತಿದ್ದ ದೃಶ್ಯವನ್ನು ಕ್ಯಾಮರಾ ಸೆರೆ ಹಿಡಿಯಿತು. ನಂತರದ ಸಂಗತಿ ನಿಮಗೆ ಗೊತ್ತೇ ಇದೆ- ನಾಯಕ ಸ್ಮಿಥ್, ಉಪನಾಯಕ ವಾರ್ನರ್, ಕೋಚ್ ಲೆಹಮನ್ ತಮ್ಮ ಸ್ಥಾನ ತೊರೆಯಬೇಕಾಯಿತು. ಅವರು ಮಾಡಿದ ಒಳ್ಳೆಯ ಕೆಲಸ ಅಂದರೆ, ತಮ್ಮ ತಪ್ಪನ್ನು ಒಪ್ಪಿಕೊಂಡದ್ದು; ಮಾಡಿದ ತಪ್ಪಿಗೆ ಸಾರ್ವಜನಿಕವಾಗಿ ಪಶ್ಚಾತ್ತಾಪ ಪಟ್ಟಿದ್ದು. ಹಿಂದೆಲ್ಲ ಇದೇ ತಪ್ಪು ಮಾಡಿ, ಮುನ್ನೂರಕ್ಕೂ ಹೆಚ್ಚು ಟೆಸ್ಟ್ ವಿಕೆಟ್ಟುಗಳನ್ನು ಪಡೆದು ಕ್ರಿಕೆಟ್ ಲೋಕದ ದಂತಕತೆಯಾದವರಿದ್ದಾರೆ. ಆಗ, ಹೀಗೆ ಮೈದಾನದ ಸುತ್ತ ಮತ್ತು ಮೈದಾನದ ಮೇಲೆ ಒಟ್ಟೂ ಮೂವತ್ತು ಹದ್ದಿನ ಕಣ್ಣಿನ ಕ್ಯಾಮರಾಗಳು ಆಟಗಾರರ ಪ್ರತಿ ಚಲನೆಯನ್ನೂ ಸೆರೆ ಹಿಡಿಯಲು ಕಾದು ಕುಳಿತಿರುತ್ತಿರಲಿಲ್ಲ.

      ವೇಗದ ಬೌಲರುಗಳು ಕ್ರಿಕೆಟ್ ಲೋಕದ ವಿಲಕ್ಷಣ ಪ್ರಬೇಧದಂತೆ ಭಾಸವಾದರೆ ಅದರಲ್ಲಿ ಆಶ್ಚರ್ಯಪಡುವಂತಹದ್ದೇನಿಲ್ಲ. ಡೆನಿಸ್ ಲಿಲ್ಲಿ, ಜೆಫ್ ಥಾಮ್ಸನ್, ರಾಬಟ್ರ್ಸ್, ಮಾಲ್ಕಂ ಮಾರ್ಷಲ್, ರಿಚರ್ಡ್ ಹ್ಯಾಡ್ಲೀ, ಇಮ್ರಾನ್ ಖಾನ್, ಡೋನಾಲ್ಡರಿಂದ ಹಿಡಿದು ವಾಸಿಮ್ ಅಕ್ರಮ್, ಅಂಬ್ರೋಸ್, ವಕಾರ್ ಯೂನಿಸ್, ಬ್ರೆಟ್ಲೀ, ಮೆಕ್‍ಗ್ರಾಥ್, ಡೇಲ್ ಸ್ಟೇಯ್ನ್, ಜಹೀರ್ ಖಾನ್, ಶೋಯಬ್ ಅಕ್ತರ್, ಉಮೇಶ್ ಯಾದವ್‍ವರೆಗೆ ಯಾವುದೇ ಪಕ್ಕಾ ವೇಗದ ಬೌಲರನ್ನು ಗಮನಿಸಿದರೆ ಮೇಲಿನ ಮಾತಿಗೆ ಮತ್ತೆ ಸಮರ್ಥನೆ ಬೇಕಿಲ್ಲ. ಒಮ್ಮೆ ಆಸ್ಟ್ರೇಲಿಯಾದ ಥಾಮ್ಸನ್ ಭಾರತದ ಸುನಿಲ್ ಗಾವಸ್ಕರರವರಿಗೆ ಬೌಲಿಂಗ್ ಮಾಡುತ್ತಿದ್ದರು. ಥಾಮ್ಸನ್ ಓಡಿಬರಲು ಆರಂಭಿಸುತ್ತಿದ್ದಂತೆಯೇ ಗಾವಸ್ಕರ್ ಕ್ರೀಸ್‍ನಿಂದ ಹೊರ ಹೋಗುತ್ತಿದ್ದರು. ಎರಡು ಮೂರು ಬಾರಿ ಗಾವಸ್ಕರ್ ಹೀಗೆಯೇ ಮಾಡಿದಾಗ ಸೈಟ್ ಸ್ಕ್ರೀನಿನದೇ ಸಮಸ್ಯೆ ಇರಬಹುದು ಎಂದು ಭಾವಿಸಿದ ಅಂಪೈರ್, ಸೈಟ್ ಸ್ಕ್ರೀನಿನ ಸ್ಥಾನವನ್ನು ಬದಲಿಸಬೇಕೇ ಎಂದು ಕೇಳಿದರು. ಅದಕ್ಕೆ ಗಾವಸ್ಕರ್- ``ಹೌದು, ನನ್ನ ಮತ್ತು ಥಾಮ್ಸನ್ನರ ನಡುವೆ ಸೈಟ್ ಸ್ಕ್ರೀನ್ ಹಾಕಿಬಿಡಿ’’ ಎಂದಿದ್ದರು.
    ಅಷ್ಟೊಂದು ದೂರದಿಂದ ಓಡಿಬರುವ ರೀತಿಯಾಗಲಿ, ಬ್ಯಾಟ್ಸ್‍ಮನ್‍ಗಳ ಕಡೆ ಆಗಾಗ ಕೆಂಗಣ್ಣು ಬಿಡುವುದಾಗಲಿ ಎಲ್ಲವೂ ವಿಲಕ್ಷಣ. ವೇಗದ ಬೌಲರುಗಳ ಇನ್ನೊಂದು `ವಿಚಿತ್ರ' ಸ್ವಭಾವ ಏನೆಂದರೆ, ಕೈಗೆ ಕ್ರಿಕೆಟ್ ಚೆಂಡು ಸಿಕ್ಕಿತೆಂದರೆ ತಮ್ಮ ಪ್ಯಾಂಟಿಗೆ ಗಸಗಸ ಎಂದು ತಿಕ್ಕಿಕೊಳ್ಳುವುದು. ಉಜ್ಜುತ್ತಾ, ಉಜ್ಜತ್ತಾ ಮತ್ತು ಆಗಾಗ ಅದನ್ನು ನೋಡಿಕೊಳ್ಳುತ್ತಾ, ಎಂಜಲನ್ನು ಚೆಂಡಿಗೆ ಸವರುತ್ತಾ ತಮ್ಮ `ರನ್‍ಅಪ್'ನ ಆರಂಭದ ಕಡೆ ನಡೆಯುವ ದೃಶ್ಯ ಸಾಮಾನ್ಯ. ಎಷ್ಟು ಸಾಮಾನ್ಯವೆಂದರೆ ಇದನ್ನು ಟಿ.ವಿಯಲ್ಲಿ ನೋಡಿದ ಚಿಣ್ಣರು ತಮ್ಮ ಬೀದಿ ಕ್ರಿಕೆಟ್ಟಿನಲ್ಲಿ ಟೆನಿಸ್ ಬಾಲಿನಲ್ಲಿ ಬೌಲಿಂಗ್ ಮಾಡುವಾಗ ಕೂಡಾ ಒಂದು ಅವಶ್ಯಕ ವಿಧಿಯಂತೆ ಈ ಕ್ರಿಯೆಯನ್ನು ಅನುಕರಿಸುತ್ತಾರೆ. ಕಾಲೇಜು ಹಂತದಲ್ಲಿ ಕ್ರಿಕೆಟ್ ಆಡುವವರು ತಮ್ಮ ಬಿಳಿ ಪ್ಯಾಂಟಿನ ಮೇಲೆ ಚೆಂಡಿನ ಕೆಂಪು ಮಚ್ಚೆಗಳು ಮೂಡಿದೆಯೆಂದರೆ ತಾನೊಬ್ಬ ಮಹಾನ್ ವೇಗದ ಬೌಲರ್ ಎಂದು ಹೆಮ್ಮೆ ಪಟ್ಟುಕೊಳ್ಳುತ್ತಾರೆ!
ಬೌಲರನ ಕೈಯಿಂದ ಹೊರಟ ಚೆಂಡು ಬ್ಯಾಟ್ಸ್‍ಮನ್‍ನ ಕಡೆ ಗಾಳಿಯಲ್ಲಿ ಕ್ರಮಿಸುತ್ತಿರುವಾಗಲೇ ಅದಕ್ಕೊಂದು ವಕ್ರ ಪಥ ಪ್ರಾಪ್ತಿಯಾದರೆ ಅದನ್ನು ಸ್ವಿಂಗ್ ಎನ್ನುತ್ತಾರೆ. ಇದು ಕುಶಲ ವೇಗದ ಬೌಲರುಗಳಿಗೆ ಸಿದ್ಧಿಸಿರುವ ಕಲೆ. ಈ ಕಲೆಗಾರಿಕೆಯ ಹಿಂದೆ ವಿಜ್ಞಾನವಿದೆ. ಗಾಳಿಯಲ್ಲಿ ವಸ್ತುಗಳ ಚಲನೆಯು ಅನೇಕ ಅಂಶಗಳನ್ನು ಅವಲಂಭಿಸಿದೆ. ಭೂಮಿಯ ಗುರುತ್ವ, ವಸ್ತುವಿಗೆ ನೀಡಿದ ಪ್ರಾರಂಭಿಕ ವೇಗ, ವಾತಾವರಣದಲ್ಲಿನ ಆರ್ದೃತೆ ಇತ್ಯಾದಿ ಇತ್ಯಾದಿ. ವಸ್ತುವಿನ ಆಕಾರ ಮತ್ತು ಅದನ್ನು ಎಸೆದ ಕ್ರಮವೂ ಆ ವಸ್ತುವಿನ ಗತಿಯನ್ನು ನಿರ್ಧರಿಸುತ್ತದೆ. ಐದೂವರೆ ಔನ್ಸ್ ತೂಕದ ಕ್ರಿಕೆಟ್ ಬಾಲಿನ ಒಳಗೆ ಗಟ್ಟಿಯಾದ ಕಾರ್ಕ್ ಇರುತ್ತದೆ. ಅದರ ಸುತ್ತಲೂ ಚರ್ಮದ ಹೊದಿಕೆ. ಚರ್ಮದ ಹೊದಿಕೆಯ ಎರಡು ಅರ್ಧಗೋಳಗಳನ್ನು ಈ ಕಾರ್ಕಿನ ಮೇಲೆ ಜೋಡಿಸಿ ಹೊಲಿದ ರೇಖೆಯನ್ನು ಸೀಮ್ ಎನ್ನುತ್ತಾರೆ. ಪ್ರತಿ ಅರ್ಧಗೋಳವೂ ಎರಡು ಕಾಲು ಭಾಗಗಳ ಜೋಡಣೆಯಾಗಿದೆ. ಈ ಎರಡು ಕಾಲುಭಾಗಗಳನ್ನು ಒಳಗಡೆಯಿಂದ ಹೊಲಿದಿರುತ್ತಾರೆ. ಈ ಜೋಡಣೆ ಹೊರಗಿಂದ ಎದ್ದುಕಾಣುವುದಿಲ್ಲ. ಮುಖ್ಯ ಸೀಮ್‍ಗೆ ಲಂಭವಾಗಿರುವ ಈ ಗೆರೆಗೆ ಕ್ವಾರ್ಟರ್‍ಸೀಮ್ ಎನ್ನುತ್ತಾರೆ. ವೇಗದ ಬೌಲರುಗಳು ಮುಖ್ಯಸೀಮ್ ಗೆರೆಯಗುಂಟ ಬೆರಳುಗಳನ್ನು ಹಿಡಿದು ಚೆಂಡನ್ನು ಎಸೆಯುತ್ತಾರೆ. ಬೌಲರನ ಕೈಯಿಂದ ಹೊರಟ ಚೆಂಡನ್ನು ಗುರುತಿಸಿದ ಬ್ಯಾಟ್ಸ್‍ಮನ್ ಚೆಂಡು ಸರಳರೇಖೆಯಲ್ಲಿ ಚಲಿಸುವುದೆಂದು ನಿರೀಕ್ಷಿಸಿ ಬ್ಯಾಟ್ ಬೀಸಿದರೆ ಅದು ಬ್ಯಾಟನ್ನು ತಪ್ಪಿಸಿಕೊಂಡು ವಿಕೆಟ್ಟಿಗೆ ತಗಲುತ್ತದೆ ಅಥವಾ ಬ್ಯಾಟಿನ ಅಂಚನ್ನು ಸ್ಪರ್ಶಿಸಿ ಸ್ಲಿಪ್‍ನಲ್ಲಿರುವ ಫೀಲ್ಡರ್ ಕೈಸೇರುತ್ತದೆ. ವೇಗದ ಬೌಲಿಂಗನಲ್ಲಿ ಚೆಂಡಿಗೆ ಪ್ರಾಪ್ತವಾಗುವ ಈ ವಕ್ರಪಥವೇ ಸ್ವಿಂಗ್. ಸಾಂಪ್ರದಾಯಿಕ ಸ್ವಿಂಗ್ ಬೌಲರ್ ಚೆಂಡನ್ನು ಯಾವ ಕಡೆ ಸ್ವಿಂಗ್ ಮಾಡಬಹುದೆಂದು ಊಹಿಸಲು ಬ್ಯಾಟ್ಸಮನ್ ಗಳು ಬೌಲರ್‍ ಚೆಂಡಿನ ಹಿಡಿತ, ಎಸೆಯುವ ಭಂಗಿ, ಮಣಿಕಟ್ಟಿನ ಚಲನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಾರೆ. ಸಾಧ್ಯವಾದರೆ, ಚೆಂಡಿನ ನುಣುಪು ಭಾಗ ಯಾವ ಕಡೆ ಇದೆ, ಸೀಮ್ ಯಾವ ಕಡೆ ನಿರ್ದೇಶಿತವಾಗಿದೆ ಎನ್ನುವುದನ್ನೂ ನೋಡುತ್ತಾರೆ. ಇವೆಲ್ಲದರ ಆಧಾರದ ಮೇಲೆ ತನ್ನತ್ತ ಬರುತ್ತಿರುವ ಚೆಂಡು ಔಟ್ ಸ್ವಿಂಗ್ ಆಗಬಹುದೋ ಇನ್‍ಸ್ವಿಂಗ್ ಆಗಬಹುದೋ ಎಂದು ಅಂದಾಜಿಸುತ್ತಾರೆ ಮತ್ತು ತಕ್ಕಂತೆ ಬ್ಯಾಟ್ ಬೀಸುತ್ತಾರೆ. ಚೆಂಡಿನ ಸೀಮ್ ಎತ್ತ ಕಡೆ ಬೊಟ್ಟುಮಾಡಿರುತ್ತದೋ ಅದೇ ಕಡೆ ಬಾಲ್ ಸ್ವಿಂಗ್ ಆಗುತ್ತದೆ. ಸ್ವಿಂಗ್ ಮಾಡುವ ಕಲೆಯ ಹಿಂದೆ ಹೇಗೆ ವಿಜ್ಞಾನ ಅಡಗಿದೆಯೋ ಹಾಗೆ ಸ್ವಿಂಗ್‍ನ್ನು ಅಂದಾಜಿಸುವುದೂ ವಿಜ್ಞಾನವೇ! ರಾಕೆಟ್ ಸೈನ್ಸ್ ಕೆಲವರಿಗಾದರೂ ಅರ್ಥವಾಗಿದೆ, ಕ್ರಿಕೆಟ್ ಸೈನ್ಸ್ ಅರ್ಥಮಾಡಿಕೊಳ್ಳುವುದು ಕಷ್ಟ.
   ಗಾಳಿಯನ್ನು ಸೀಳಿಕೊಂಡು ಕ್ರಮಿಸುವ ಚೆಂಡಿನ ಮೇಲ್ಮೈಗುಂಟ ತೆಳುವಾದ ಗಾಳಿಯ ಪೊರೆಯೂ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತದೆ. ಈ ಪೊರೆ ಯಾವ ಬಿಂದುವಿನಲ್ಲಿ ಚೆಂಡನಿಂದ ಬೇರೆಯಾಗುತ್ತದೆ ಎಂಬುದು ಬಹಳ ಮುಖ್ಯ. ಇದು ಚೆಂಡಿನ ಸ್ವಿಂಗನ್ನು ನಿರ್ಧರಿಸುತ್ತದೆ. ಚೆಂಡಿನ ಎಡ ಮತ್ತು ಬಲ ಬದಿಗಳಲ್ಲಿ ಯಾವ ಬದಿಯಲ್ಲಿ ಕಡಿಮೆ ಒತ್ತಡ ಉಂಟಾಗುವುದೋ ಆ ಬದಿಗೆ ಚೆಂಡು ಸ್ವಿಂಗ್ ಆಗುತ್ತದೆ. ಹೊಸ ಚೆಂಡಿನ ಸೀಮ್ ಗೆರೆಯನ್ನು ಸ್ಲಿಪ್ ದಿಕ್ಕಿನತ್ತ ಬೊಟ್ಟುಮಾಡಿ ಎಸೆದರೆ ಆ ಬದಿಯ ಚೆಂಡಿನ ಒರಟು ಮೇಲ್ಮೈಗುಂಟ ಹೆಚ್ಚು ಸಮಯ ಗಾಳಿಯ ಚಲಿಸುವ ಪೊರೆ ಅಂಟಿಕೊಂಡಿರುತ್ತದೆ. ಇನ್ನೊಂದು ಬದಿಯ ನಯವಾದ ಮೇಲ್ಮೈ ಗಾಳಿಯನ್ನು ಹೊರತಳ್ಳುತ್ತದೆ. ಔಟ್ ಸ್ವಿಂಗ್ ಉಂಟಾಗುತ್ತದೆ. ಸೀಮ್‍ನ ಸರಿಯಾದ ಬಳಕೆಯಿಂದಾಗಿ ಎರಡೂ ಬದಿ ಒಂದೇ ಪ್ರಮಾಣದ ನುಣುಪು ಮೇಲ್ಮೈ ಹೊಂದಿದ್ದ ಮೊದಲ ಎಸೆತದಲ್ಲೂ ಚೆಂಡು ಸ್ವಿಂಗ್ ಮಾಡಬಹುದು. ಹೀಗೆ ಸ್ವಿಂಗ್ ಆಗುವ ಸಾಧ್ಯತೆ ಮತ್ತು ಪ್ರಮಾಣವನ್ನು ಹೆಚ್ಚಿಸಲಿಕ್ಕಾಗಿ ಚೆಂಡಿನ ಒಂದು ಬದಿಯನ್ನು ಹೆಚ್ಚು ನುಣುಪಾಗಿಡುವ ಪ್ರಯತ್ನವನ್ನು ಬೌಲರುಗಳು ಮಾಡುತ್ತಿರುತ್ತಾರೆ. ಮೈಬೆವರು, ಎಂಜಲನ್ನು ಸವರುತ್ತಾರೆ. ಟ್ರೌಸರಿಗೆ ಗಸಗಸ ಉಜ್ಜುತ್ತಾರೆ. ಇದರಲ್ಲಿ ತಪ್ಪಿಲ್ಲ. ಆದರೆ, ಕೆಲವು ಆಟಗಾರರು ಕ್ರಿಕೆಟ್ ನಿಯಮಗಳ ಸರಹದ್ದನ್ನು ಮೀರಿ ವ್ಯಾಸಲಿನ್‍ನಂತಹ ಬಾಹ್ಯ ವಸ್ತುಗಳನ್ನು ಚೆಂಡಿಗೆ ಸವರುವುದಿದೆ. ಹೀಗೆ ಮಾಡಿ ಸಿಕ್ಕಿ ಬಿದ್ದಿದ್ದೂ ಇದೆ. ಮ್ಯಾಚ್ ಗೆದ್ದಿದ್ದೂ ಇದೆ. ಸಾಂಪ್ರದಾಯಿಕ ಸ್ವಿಂಗ್ ಬೌಲಿಂಗಿಗೆ ಹೊಸ ಚೆಂಡೇ ಇರಬೇಕು, ಎಸೆತದ ವೇಗವೂ ಸಾಕಷ್ಟು ಹೆಚ್ಚಿರಬೇಕು. ಜೊತೆಗೆ, ಚೆಂಡಿನ ಹಿಡಿತ, ಸೀಮ್ ಬಳಕೆ, ಮುಂಗೈನ ಚಲನೆಗೆ ಸಂಬಂಧಿಸಿದಂತೆ ಸೂಕ್ತ ತಾಂತ್ರಿಕತೆ ತಿಳಿದಿರಬೇಕು. ಚೆಂಡು ಹಳೆತಾದರೆ ಏನು ಮಾಡುವುದು? ಇದ್ದಾರಲ್ಲ ಬಿಷನ್ ಬೇಡಿ, ಎರ್ರಂಪಳ್ಳಿ ಪ್ರಸನ್ನ, ಚಂದ್ರಶೇಖರ್, ಅನಿಲ್ ಕುಂಬ್ಳೆ, ಶೇನ್ ವಾರ್ನ್, ಅಬ್ದುಲ್ ಖಾದಿರ್, ಮಣಿಂದರ್ ಸಿಂಗ್, ರವಿಚಂದ್ರನ್ ಅಶ್ವಿನ್ ಒಬ್ಬರೇ ಇಬ್ಬರೇ?
  ಆದರೆ, ಈಗ ಹಾಗಿಲ್ಲ. ವೇಗದ ಬೌಲರುಗಳು ಹಳೆಯ ಬಾಲನ್ನೂ ಸ್ವಿಂಗ್ ಮಾಡುತ್ತಾರೆ. ಇದನ್ನು ರಿವರ್ಸ್ ಸ್ವಿಂಗ್ ಎನ್ನುತ್ತಾರೆ. ಪಾಕಿಸ್ತಾನದ ಕ್ಲಬ್ ಆಟಗಾರ ಸಲಿಮ್ ಮಿರ್ ಈ ಕಲೆಯನ್ನು ತನ್ನ ಸಹ ಆಟಗಾರ ಸರಫ್ರಾಜ್ ನವಾಜ್‍ರವರಿಗೆ ಕಲಿಸಿದರೆಂದೂ, ಅವರು ನಂತರ ಇಮ್ರಾನ್‍ಖಾನ್‍ರಿಗೆ ವರ್ಗಾಯಿಸಿದರೆಂದೂ ಹೇಳಲಾಗುತ್ತದೆ. ವಾಸಿಮ್ ಅಕ್ರಮ್, ವಕಾರ್ ಯೂನಿಸ್‍ರಷ್ಟೇ ಅಲ್ಲ ಭಾರತದ ಬೌಲರುಗಳೂ ಇಮ್ರಾನ್ ಖಾನ್ ರಿಂದಲೇ ಈ ವಿದ್ಯೆಯನ್ನು ಕಲಿತರೆಂದೂ ನಂತರ ಎಲ್ಲ ದೇಶಗಳ ವೇಗದ ಬೌಲರುಗಳಿಗೂ ಇದು ತಿಳಿಯಿತೆಂದೂ ಹೇಳುತ್ತಾರೆ. ಮೊನ್ನೆ ಆಸ್ಟ್ರೇಲಿಯನ್ನರು ಈ ವಿದ್ಯೆಯನ್ನು ಜಗಜ್ಜಾಹೀರು ಮಾಡಿಬಿಟ್ಟರು!
   ಹಳೆಯ ಚೆಂಡಿನಲ್ಲಿ ನುಣುಪು ಹೊಳೆಯುವ ಮೇಲ್ಮೈ ಇಲ್ಲದಿರುವುದರಿಂದ ಸಾಂಪ್ರದಾಯಿಕ ಸ್ವಿಂಗ್ ಬೌಲಿಂಗ್ ಸಾಧ್ಯವಿಲ್ಲ. ಒರಟಾಗಿರುವ ಬದಿಗಳಲ್ಲೇ ಒಂದು ಬದಿಯನ್ನು ಇನ್ನಷ್ಟು ಒರಟು ಮಾಡಿದರೆ ಅದು ಸಾಂಪ್ರದಾಯಿಕ ಸ್ವಿಂಗ್ ಬೌಲಿಂಗ್‍ನಲ್ಲಿ ನುಣುಪು ಬದಿ ವಹಿಸುವ ಪಾತ್ರವನ್ನೇ ವಹಿಸುತ್ತದೆ. ಅದೇ ವೇಗ, ಅದೇ ಶೈಲಿ, ಅದೇ ಬಗೆಯ ಸೀಮ್ ಹಿಡಿತ, ಅದೇ ಮಣಿಕಟ್ಟು ಚಲನೆಯೊಂದಿಗೆ ಬ್ಯಾಟ್ಸಮನ್‍ನಿಂದ ಹೊರಹೋಗುವ ಔಟ್ ಸ್ವಿಂಗ್ ಪ್ರಯತ್ನಿಸಿದರೆ ಇಲ್ಲಿ ಒಳಬರುವ ಇನ್ ಸ್ವಿಂಗ್ ಆಗುತ್ತದೆ. ಅದೇ ಕಾರಣಕ್ಕೆ ಇದು ರಿವರ್ಸ್ ಸ್ವಿಂಗ್. ಪ್ರಶ್ನೆ ಇರುವುದು ಇಲ್ಲೇ! ರಿವರ್ಸ್ ಸ್ವಿಂಗನ್ನು ಸಾಧಿಸಲು ಚೆಂಡಿನ ಒಂದು ಬದಿಯನ್ನು ಕುಳಿಗಳಿರುವ ಒರಟು ಮೇಲ್ಮೈಯನ್ನಾಗಿಸುವುದು ಹೇಗೆ? ಇದರಲ್ಲಿ ಪಾಕಿಸ್ತಾನದ ಬೌಲರುಗಳು ಚಾಂಪಿಯನ್ನರು. ಕೋಕೋಕೋಲಾ ಬಾಟಲಿಯ ಮುಚ್ಚಳ, ಗಮ್ ಟೇಪಿಗೆ ಮೆತ್ತಿದ ಸಕ್ಕರೆ, ಮರಳು ಅಥವಾ ಮಾರುಕಟ್ಟೆಯಲ್ಲಿ ದೊರೆಯುವ ಪಾಲಿಶ್ ಪೇಪರ್, ಮನೆಯಲ್ಲೇ ತಯಾರಿಸಿದ ಸಕ್ಕರೆ ಕ್ಯಾಂಡಿ ಹೀಗೆ ಯಾವುದೇ ಒರಟು ಮತ್ತು ಅಡಗಿಸಿಟ್ಟುಕೊಳ್ಳಬಹುದಾದ ವಸ್ತುವಿನಿಂದ ಚೆಂಡಿನ ರೂಪಗೆಡಿಸಬಹುದು.
  ಗಾಲ್ಫ್ ಚೆಂಡಿಗೆ ದೀಪಿಕಾ ಪಡುಕೋಣೆಯ ಕೆನ್ನೆಯ ಮೇಲಿರುವಂತಹ ಅನೇಕ ಡಿಂಪಲ್‍ಗಳಿರುವುದು ನಿಮಗೆ ಗೊತ್ತಿರಬಹುದು. ಗಾಲ್ಫ್ ಚೆಂಡು ನುಣುಪಾಗಿದ್ದರೆ ಗಾಳಿಯನ್ನು ಸೀಳಿಕೊಂಡು ಮುಂದೆ ಕ್ರಮಿಸುವಾಗ ವಿರುದ್ಧ ದಿಕ್ಕಿನಲ್ಲಿ ಚೆಂಡಿನ ಮೈಗುಂಟಾ ಚಲಿಸುವ ಗಾಳಿ ಬೇಗನೆ ಚೆಂಡಿನಿಂದ ಬೇರ್ಪಟ್ಟು ಹಿಂದೊಂದು ನಿರ್ವಾತದ ಪ್ರದೇಶವನ್ನುಂಟು ಮಾಡುತ್ತದೆ. ಈ ನಿರ್ವಾತವು ಚೆಂಡನ್ನು ಹಿಂದಕ್ಕೆಳೆಯುವುದರಿಂದ ದೂರ ಕ್ರಮಿಸಲಾರದು. ಕುಳಿಗಳಿರುವ ಚೆಂಡು ಅಷ್ಟೇ ಶಕ್ತಿಯಲ್ಲಿ ನುಣುಪು ಚೆಂಡಿನ ಎರಡು ಪಟ್ಟು ದೂರ ಚಲಿಸುತ್ತದೆ.
ಪ್ರಾಚೀನ ಜನರಿಗೂ ಏರೋಡೈನಾಮಿಕ್ಸ್ ಕುರಿತು ಸಾಕಷ್ಟು ತಿಳುವಳಿಕೆಯಿತ್ತು. ಸುಮಾರು 20,000 ವರ್ಷಗಳ ಹಿಂದೆಯೇ ಬೂಮರಾಂಗ್ ಎಂಬ ಸಾಧನವನ್ನು ಜನಬಳಸುತ್ತಿದ್ದರು. ಇದರ ಹುಟ್ಟು ಪೆÇೀಲೆಂಡ್‍ನಲ್ಲಾಗಿತ್ತು ಎನ್ನುತ್ತಾರೆ. ಶ್ರೀಮಂತ ರಾಜಕಾರಣಿಗಳು ಚಪ್ಪಲಿ, ಸೀರೆ, ಒಡವೆ, ಹಣವನ್ನು ಸಂಗ್ರಹಿಸಿಡುವ ಹಾಗೆ ಈಜಿಪ್ಟಿನ ರಾಜ ತುತಂಕಾಮನ್ ಸಾವಿರಾರು ಬೂಮರಾಂಗುಗಳನ್ನು ಸಂಗ್ರಹಿಸಿಟ್ಟಿದ್ದನಂತೆ!
ಆಸ್ಟ್ರೇಲಿಯನ್ನರು ವಾಪಸು ಬರುವ ಬೂಮರಾಂಗ್‍ಗಳನ್ನು ವಿನ್ಯಾಸಗೊಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಎರಡು ರೆಕ್ಕೆಗಳು 80 ರಿಂದ 120 ಕೋನದಲ್ಲಿ ಜೋಡಿಸಿಕೊಂಡಂತೆ ಇರುವ ಈ ಸರಳ ಸಾಧನಗಳು ಮಾನವನ ಅದ್ಭುತ ಸೃಷ್ಟಿಗಳಲ್ಲೊಂದು. ಹ್ಯಾಲಿಕಾಪ್ಟರಿನ ಬ್ಲೇಡಿನಂತೆ ಚಲಿಸುತ್ತಾ ಸಾಗುವ ಭೂಮರಾಂಗುಗಳು ವೃತ್ತೀಯಪಥದಲ್ಲಿ ಸಾಗುತ್ತಾ ಪುನಃ ಪ್ರಾರಂಭಿಕ ಸ್ಥಳಕ್ಕೆ ಆಗಮಿಸುವುದು ಅದ್ಭುತವಲ್ಲದೇ ಮತ್ತೇನು? `ನನ್ನ ಬೂಮರಾಂಗ್ ವಾಪಾಸು ಬರುವುದಿಲ್ಲ' ಎಂಬುದು ಬಹಳ ಗರ್ವದಿಂದ ಆಡುವ ಮಾತು; ಖಂಡಿತ ಗುರಿ ತಲುಪುತ್ತದೆ ಎಂಬ ಆತ್ಮವಿಶ್ವಾಸದ ಮಾತು.
  ಆದರೆ, ಈ ಬಾರಿ ಆಸ್ಟ್ರೇಲಿಯನ್ನರ ಬೂಮರಾಂಗು ವಾಪಸ್ ಬಂದಿದೆ!

Monday, 19 March 2018

ದಿನೇಶ್ ಕಾರ್ತಿಕ್ ಕುಸಿದು ಬಿದ್ದಾಗ...........


   ಇದು ಕೆಲವು ವರ್ಷಗಳ ಹಿಂದಿನ ಘಟನೆ. ಬಾಂಗ್ಲಾದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತದ ಮೊದಲ ನಾಲ್ಕು ಬ್ಯಾಟ್ಸ್‍ಮನ್‍ಗಳೂ ಸೆಂಚುರಿಯನ್ನು ಸಿಡಿಸಿ ತಮಗಿಲ್ಲದ ಮೀಸೆಯ ಮೇಲೆ ಬೆರಳಾಡಿಸಿದ್ದರು. ಆದರೆ ಆ ಶತಕಗಳು ಅಷ್ಟು ಸುಲಭದ್ದಾಗಿರಲಿಲ್ಲ. ಏಕೆಂದರೆ ಅವರು ಹೋರಾಡುತ್ತಿದ್ದುದು ಬಾಂಗ್ಲಾದ ವಿರುದ್ಧವಾಗಿರಲಿಲ್ಲ, ಬಿರು ಬಿಸಿಲ ಬೇಗೆಯ ಎದುರಾಗಿತ್ತು.ಆರಂಭಿಕರಿಬ್ಬರನ್ನೂ ಆಟದ ನಡುವೆಯೇ ಮೈದಾನದಿಂದ ಹೊತ್ತುಕೊಂಡು ಬರಬೇಕಾಯಿತು. ವಾಸಿಮ್ ಜಾಫರ್ ಮುಂಬೈನವರು ನೋಡಿ, ಶತಕ ಬಾರಿಸಿದ ನಂತರವೇ ಕುಸಿದುಬಿದ್ದರು. ದಕ್ಷಿಣ ಭಾರತದ ಕಾರ್ತಿಕ್ ಶತಕದ ಮೊದಲೇ ಕುಸಿದರು.ದಿನೇಶ್ ಕಾರ್ತಿಕ್ ಸ್ನಾಯು ಸೆಳೆತದಿಂದ ಕುಸಿದು ಬೀಳುವ ಮೊದಲು ಅವರ ದೇಹ ಬೇಸಿಗೆಯ ಸೆಕೆಯಿಂದ ಪಾರಾಗಲೂ ಬಹಳಷ್ಟು ಶ್ರಮಿಸಿದ್ದಂತೂ ನಿಜ. ದಿನೇಶ್ ಕಾರ್ತಿಕ್ ಕೂಡ ಎಲ್ಲ ಉಷ್ಣರಕ್ತದ ಪ್ರಾಣಿಗಳಂತೆ ಸ್ಥಿರ ದೇಹತಾಪವನ್ನು ಹೊಂದಿರುವವರು. ಹೊರಗಡೆಯ ತಾಪದಲ್ಲಿ ಎಷ್ಟೇ ಹೆಚ್ಚಳವಾಗಲಿ ಅಥವಾ ಇಳಿಕೆಯಾಗಲಿ ಅವರ ದೇಹದ ತಾಪವು ಅದರಿಂದ ವ್ಯತ್ಯಯಗೊಳ್ಳದು. ಸ್ಥಿರ ತಾಪವನ್ನು ಕಾದುಕೊಳ್ಳಲು ಅವಶ್ಯಕವಾದ ತಾಪಸ್ಥಾಪಿ ತಂತ್ರವನ್ನು ಅವರ ದೇಹವೇ ಅನಸರಿಸುತ್ತದೆ.ಎಲ್ಲ ಮನುಷ್ಯರಂತೆ ದಿನೇಶ್ ಕಾರ್ತಿಕ್‍ರ ದೇಹದಲ್ಲಿ ಅದರಲ್ಲೂ ಮುಖ್ಯವಾಗಿ ಸ್ನಾಯುಗಳು ಮತ್ತು ಪಿತ್ತಕೋಶದಲ್ಲಿ ನಡೆಯುವ ಚಯಪಚಯ ಕ್ರಿಯೆಗಳಿಂದ ಉಷ್ಣವು ಉತ್ಪಾದನೆಗೊಳ್ಳುತ್ತದೆ. ಕಾರ್ತಿಕರ ದೇಹದ ತಾಪಕ್ಕಿಂತ ಢಾಕಾದ ಚಿತ್ತಗಾಂವ ಕ್ರೀಡಾಂಗಣದಲ್ಲಿನ ತಾಪ ಹೆಚ್ಚಿದ್ದುದರಿಂದ ಅವರಿಗೆ ಸೆಕೆಯ ಅನುಭವ ಉಂಟಾಯಿತು. ಅವರ ಮೆದುಳಿನ ಕೆಳಭಾಗದಲ್ಲಿರುವ ಹೈಪೋಥಲಾಮಸ್ ಎಂಬ ಭಾಗಕ್ಕೆ ಇದು ಮೊದಲು ಗೊತ್ತಾಯಿತು. ಈ ಹೈಪೋಥಲಾಮಸ್ ಎಂದರೆ ಪ್ರಿಜ್ಜು, ಏ.ಸಿ, ಇಸ್ತ್ರಿ ಪೆಟ್ಟಿಗೆಗಳಲ್ಲಿರುವ ಸ್ಥಿರತಾಪವನ್ನು ಕಾದುಕೊಳ್ಳಲು ಬಳಸುವ ತಾಪಸ್ಥಾಪಿ ಸ್ವಿಚ್ಚುಗಳಂತೆ ಕೆಲಸ ಮಾಡುವ ಭಾಗ. ಕೂಡಲೇ ಹೃದಯ ಪಂಪು ಮಾಡುವ ರಕ್ತದ ಶೇಕಡಾ ಮೂವತ್ತಕ್ಕಿಂತ ಹೆಚ್ಚಿನ ಪ್ರಮಾಣದ ರಕ್ತವನ್ನು ಚರ್ಮಕ್ಕೆ ಕಳುಹಿಸುವ ಏರ್ಪಾಟು ನಡೆಯಿತು. ಕಾರಿನ ಬಿಸಿ ಏಂಜಿನ್‍ನ  ಶಾಖವನ್ನು ರೇಡಿಯೇಟರ್‍ನಲ್ಲಿ ಹರಿಯುವ ದ್ರವ ಕೂಲಂಟ್ ಹೀರಿಕೊಂಡು ಅನಂತರ ವಾತಾವರಣಕ್ಕೆ ಹೊರ ಹಾಕುತ್ತದ್ದಲ್ಲ ಹಾಗೆ, ನಮ್ಮ ರಕ್ತವು ಚರ್ಮದ ರಕ್ತನಾಳಗಳ ಮೂಲಕ ಹರಿಯುವುದರಿಂದ ದೇಹ ತಣ್ಣಗಾಗುತ್ತದೆ. ನಮ್ಮ ಚರ್ಮವು ದೇಹವನ್ನು ತಣ್ಣಗಿರಿಸಲು ಬೆವರುವಿಕೆ ತಂತ್ರವನ್ನು ಅನುಸರಿಸುತ್ತದೆ.ದಿನೇಶ್ ಕಾರ್ತಿಕ್‍ರ ಚರ್ಮದ ಮೇಲೆ ಸುಮಾರು 2,500,00 ಸ್ವೇದ ಗ್ರಂಥಿಗಳಿವೆ. ಈ ಗ್ರಂಥಿಗಳೊಡನೆ ರಕ್ತದ ಲೋಮನಾಳಗಳ ಒಡನಾಟವಿದೆ. ಅಲ್ಲದೇ ದೇಹದ ತಾಪ ಮತ್ತು ಬಾಹ್ಯ ತಾಪಗಳ ಮಾಹಿತಿಗಳನ್ನು ಮೆದುಳಿಗೆ ತಿಳಿಸಬಲ್ಲ ಜ್ಞಾನವಾಗಿ ನರಗಳಿವೆ. ತಾಪಕ್ಕೆ ತಕ್ಕಂತೆ ಉದ್ಧೀಪನಗಳನ್ನುಂಟು ಮಾಡುವ ಎಸಿಟೈಲ್‍ಚೋಲಿನ್ ಎಂಬ ರಾಸಾಯನಿಕದ ನೆರವಿನಿಂದ ನರವ್ಯವಸ್ಥೆಯು ರಕ್ತದ ಸಾಗಾಣಿಕೆ, ಬೆವರುವಿಕೆಯ ಪ್ರಮಾಣ ಮತ್ತಿತರ ಕ್ರಿಯೆಗಳ ನಡುವೆ ಹೊಂದಾಣಿಕೆಯನ್ನೇರ್ಪಡಿಸುತ್ತದೆ.ಢಾಕಾದ ಸೆಕೆ ಮತ್ತು ಒಣ ವಾತಾವರಣ ದಿನೇಶ್ ಕಾರ್ತಿಕ್‍ರನ್ನು ಬಹಳಷ್ಟು ಬೆವರು ಸುರಿಸುವಂತೆ ಮಾಡಿದವು. ಮಣ್ಣಿನ ಮಡಕೆಯ ಮೇಲಿರುವ ಸಣ್ಣ ಸಣ್ಣ ರಂದ್ರಗಳ ಮೂಲ ‘ಬೆವರುವಿಕೆ’ ಉಂಟಾಗುವುದರಿಂದ ಹೇಗೆ ಒಳಗಡೆಯ ನೀರು ತಣ್ಣಗಾಗಿರುವುದೋ ಹಾಗೆ ಕಾರ್ತಿಕರ ದೇಹ ಕೂಡಾ ತಣ್ಣಗಾಗಲು ಬೆವರುವುದು ಅನಿವಾರ್ಯವಾಗಿತ್ತು. ಬೇಸಿಗೆಯಲ್ಲಿ ಬೆವರುವಿಕೆಯಿಂದ ಗಂಟೆಗೆ ಒಂದೂವರೆ ಲೀಟರ್‍ನಿಂದ ನಾಲ್ಕು ಲೀಟರ್‍ವರೆಗೆ ನೀರು ವಾತಾವರಣ ಸೇರಬಹುದು. ದಿನೇಶ್ ಕಾರ್ತಿಕ್ ಆ ದಿನ ಸಾಕಷ್ಟು ಅಧಿಕ ಪ್ರಮಾಣದ ನೀರನ್ನು ಬೆವರುವಿಕೆಯಿಂದ ಕಳೆದುಕೊಂಡರು. ಇದರಿಂದ ಅವರ ದೇಹ ನಿರ್ಜಲೀಕರಣದ ಸ್ಥಿತಿಯನ್ನು ತಲುಪಿತು. ಜೊತೆಗೆ, ಈ ಬೆವರುವಿಕೆ ಎಂಬುದು ಬರೇ ನೀರನ್ನು ಕಳೆದುಕೊಳ್ಳುವ ಕ್ರಿಯೆ ಮಾತ್ರವಲ್ಲ, ಇದರಲ್ಲಿ ಸೋಡಿಯಂ ಕ್ಲೋರೈಡ್, ಪೊಟಾಸಿಯಂ, ಲ್ಯಾಕ್ಟಿಕ್ ಆಮ್ಲ, ಯೂರಿಕ್ ಆಮ್ಲಗಳೆಲ್ಲವೂ ಇರುತ್ತವೆ. ಸೋಡಿಯಂ ಮತ್ತು ಪೊಟಾಸಿಯಂ ಲವಣಗಳನ್ನು ಕಳೆದುಕೊಂಡದ್ದರಿಂದ ಕಾರ್ತಿಕರ ದೇಹದಲ್ಲಿ ಇಲೆಕ್ಟ್ರೋಲೈಟ್ ಅಸಂತುಲನೆ ಉಂಟಾಯಿತು. ಇದೇ ಅವರನ್ನು ಸ್ನಾಯು ಸೆಳೆತಕ್ಕೆ ಗುರಿಯಾಗಿಸಿತು.ನೀರೇ ದೊರೆಯದ ಮರುಭೂಮಿಯಲ್ಲಿ ಬೆವರುವುದು ಬಹಳ ದುಬಾರಿ ವ್ಯವಹಾರ. ಆದುದರಿಂದ ಅಲ್ಲಿನ ಜೀವಿಗಳು ಬಹಳ ಅಧಿಕ ತಾಪದಲ್ಲಷ್ಟೇ ಬೆವರುತ್ತವೆ. ಆನೆಗಳದು ಇನ್ನೂ ಭಿನ್ನತಂತ್ರ. ಅವುಗಳು ಎಂದೂ ಬೆವರುವುದೇ ಇಲ್ಲ. ಸುಮಾರು ನಾಲ್ಕೈದು ಚದರ ಮೀಟರ್ ಮೇಲ್ಮೈ ವಿಸ್ತೀರ್ಣವನ್ನು ಹೊಂದಿರುವ ಅವುಗಳ ಕಿವಿಗಳಲ್ಲಿ ಭಾರಿ ಪ್ರಮಾಣದ ಲೋಮನಾಳ ಜಾಲವಿದೆ. ದೇಹದ ಉಷ್ಣತೆಯನ್ನೆಲ್ಲ ಹೀರಿಕೊಂಡು ಬೆಚ್ಚಗಾದ ರಕ್ತ ಈ ಲೋಮನಾಳಗಳಲ್ಲಿ ಹರಿಯುತ್ತದೆ. ಆಗ ಆನೆಗಳ ನೆರಳಿದ್ದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಾ ತಮ್ಮ ಕಿವಿಗಳನ್ನು ಆಚೀಚೆ ಆಡಿಸುತ್ತವೆ. ದಿನೇಶ್ ಕಾರ್ತಿಕ್ ಆನೆಯೂ ಅಲ್ಲ, ಒಂಟೆಯೂ ಅಲ್ಲ. ಅವರೊಬ್ಬ ಮನುಷ್ಯ. ಆದುದರಿಂದಲೇ ಢಾಕಾದ ಬಿರು ಬಿಸಿಲಿಗೆ ಕುಸಿದು ಬಿದ್ದರು. ಆದರೂ, ಈಗಾಗಲೇ ಕುಸಿದು ಬಿದ್ದಿದ್ದ ಭಾರತ ತಂಡವನ್ನು ಸಾಕಷ್ಟು ಮೇಲಕ್ಕೆತ್ತಿದ್ದರು! 


Tuesday, 13 March 2018

ಆಕಾಶದ ಬೆರಗು ಮತ್ತು ಜನ್ಮಕುಂಡಲಿ

ಈ ವಿಶ್ವಕ್ಕೆ ಅಂಚುಗಳಿಲ್ಲ; ಮನುಷ್ಯ ಪ್ರಯತ್ನದ ಸಾಧ್ಯತೆಗಳಿಗೆ ಸೀಮೆಯೆಂಬುದು ಇಲ್ಲವೇ ಇಲ್ಲ.

-ಸ್ಟೀಫನ್ ಹಾಕಿಂಗ್
 
  ನಮ್ಮೂರ ಅಂಚಿಗಿರುವ ಆಚೆಮರುಕಲ ಗುಡ್ಡದ ಮೇಲೆ ನಿಂತು ಜೈ ಚಾಚಿದರೆ  ಆಕಾಶವನ್ನೇ ಮುಟ್ಟಬಹುದಲ್ಲ ಎಂದು ಚಿಕ್ಕವನಿರುವಾಗ ಚಕಿತನಾಗುತಿದ್ದೆ. ಇದು ನನ್ನೊಬ್ಬನ ಬೆರಗಲ್ಲ; ಎಲ್ಲರ ಬಾಲ್ಯದ ಬೆರಗು.
    ಇಂತಹ ಬೆರಗು, ಕುತೂಹಲಗಳು ಇಲ್ಲದೇ ಹೋಗಿದ್ದರೆ ಅದು ಬಾಲ್ಯವಾಗಿರುತಿತ್ತೇ?
   ಹೌದು, ಆಕಾಶವು ದಿಗಂತವನ್ನು ಸ್ಪರ್ಶಿಸಿದಂತೆ ಕಾಣುತ್ತದೆ. ದೊಡ್ಡ ಕೊಡೆಯನ್ನು ಭೂಮಿಯ ಮೇಲೆ ಬೋರಲು ಹಾಕಿದಂತೆ. ರಾತ್ರಿಯಲ್ಲಾದರೆ, ಆ ಅರ್ಧಗೋಳಕ್ಕೆ ಬೇರೆ ಬೇರೆ ಪ್ರಕಾಶದ ನಕ್ಷತ್ರಗಳನ್ನು ಅಂಟಿಸಿಟ್ಟ ಹಾಗೆ ಕಾಣುತ್ತದೆ. ನಮಗೆ ರಾತ್ರಿಯಿರುವಾಗ ಭೂಮಿಯ ಇನ್ನೊಂದು ಬದಿಯಲ್ಲಿರುವವರಿಗೆ ಹಗಲಾಗಿರುತ್ತದಲ್ಲ? ಅಲ್ಲಿಯೂ ಅಂತದ್ದೇ ಅರ್ಧಗೋಳ ಇರುತ್ತದೆ ಎಂಬುದನ್ನು ಕಲ್ಪಿಸಿಕೊಳ್ಲುವುದು ಕಷ್ಟವಲ್ಲ. ಇಲ್ಲಿಗೆ, ಒಂದು ಪೂರ್ತಿಗೋಳ ಉಂಟಾಗುತ್ತದೆ. ಇದೇ ಖಗೋಳ! ನಾವು ಕಾಣುವ ಖಗೋಳ ನಮ್ಮ ಇಂದ್ರೀಯಗಳ ಮಿತಿಗಳನ್ನು ಬಹುಪಾಲು ಆಧರಿಸಿದೆ. ನಾವಿರುವ ಭೂಮಿಯು ಸೌರವ್ಯೂಹದ ಸದಸ್ಯ. ತನ್ನ ಅಕ್ಷದ ಸುತ್ತ ಸುತ್ತುತ್ತಲೇ ಸೂರ್ಯನ ಸುತ್ತ ಪರಿಭ್ರಮಿಸುತ್ತಿದೆ. ಭೂಮಿಯನ್ನು ಆವರಿಸಿರುವ ವಾಯುಮಂಡಲ ನಮ್ಮ ದೃಷ್ಟಿಗೆ ಪರದೆಯನ್ನು ಹಾಕಿದೆ. ನಮ್ಮ ಯೋಚನೆಗಳ ಮಿತಿಯನ್ನಂತೂ ನಾವು ದಾಟಲಾರೆವು. ಇದೆಲ್ಲದರ ಪರಿಣಾಮವಾಗಿ, ನಮಗೆ ಕಾಣುವ ನೋಟ ಸಾಕಷ್ಟು ವಿರೂಪಗೊಂಡಿದೆ. ರಾತ್ರಿಯಾಕಾಶದಲ್ಲಿ ಕಾಣುವ ನಕ್ಷತ್ರಗಳೆಲ್ಲ ಪೂರ್ವದಿಂದ ಪಶ್ಚಿಮಕ್ಕೆ ಚಲಿಸುತ್ತಿರುವಂತೆ ಕಾಣುತ್ತವೆ; ಬಸ್ಸು ವೇಗವಾಗಿ ಮುಂದಕ್ಕೆ ಚಲಿಸುವಾಗ ರಸ್ತೆಯ ಇಕ್ಕೆಲಗಳಲ್ಲಿರುವ ಮರ-ಗಿಡಗಳು, ಕಟ್ಟಡಗಳು ಅದೇ ವೇಗದಲ್ಲಿ ಹಿಂದಕ್ಕೆ ಚಲಿಸದ ಹಾಗೆ ಕಾಣಿಸುತ್ತದಲ್ಲ, ಹಾಗೆ! ಅಲ್ಲಿರುವ ನಕ್ಷತ್ರಗಳೆಲ್ಲ ನಮ್ಮಿಂದ ಒಂದೇ ದೂರದಲ್ಲಿರುವ ಹಾಗೆ ಕಾಣುವುದೂ ದೃಷ್ಟಿ ಭ್ರಮೆಯೇ! ರಾತ್ರಿಯಾಕಾಶದಲ್ಲಿ ಕಾಣುವ ನಕ್ಷತ್ರಗಳ ಗೋಚರ ಪ್ರಕಾಶಗಳ ವ್ಯತ್ಯಾಸವೂ ಸಹ ಅವುಗಳ ವಾಸ್ತವ ಪ್ರಕಾಶದ ವ್ಯತ್ಯಾಸಗಳನ್ನು ಪ್ರತಿನಿಧಿಸುವುದಿಲ್ಲ. ಹತ್ತಿರದ ಮೊಂಬತ್ತಿಯ ಜ್ವಾಲೆ ದೂರದ ಬೀದಿದೀಪಕ್ಕಿಂತ ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತದಲ್ಲ? ಹಾಗಂತ, ಪ್ರಕಾಶಮಾನವಾಗಿರುವವೆಲ್ಲ ಹತ್ತಿರದಲ್ಲಿವೆಯೆಂದೂ ಮಂದ ಬೆಳಕಿನ ನಕ್ಷತ್ರಗಳೆಲ್ಲವೂ ದೂರದಲ್ಲಿವೆಯೆಂದೂ ಸಾರಾಸಗಟು ಹೇಳಲಾಗದು.
ನಮಗೆ ಕಾಣುವುದಂತೂ ಹೀಗೆಯೇ! ನಮ್ಮ ನಡುನೆತ್ತಿಯ ಮೇಲೆ ಭೂಮಿಗೆ ಲಂಭವಾಗಿ ಗೆರೆ ಎಳೆದರೆ ಆ ಗೆರೆಯು ನಾವು ಕಾಣುವ ಅರ್ಧ ಖಗೋಳದ ಖಮಧ್ಯವನ್ನು ಹಾದುಹೋಗುತ್ತದೆ. ಈ ಇಡೀ ಗೋಳವು ಅಂಟಿಕೊಂಡಿರುವ ನಕ್ಷತ್ರಗಳ ಸಮೇತವಾಗಿ ಪೂರ್ವದಿಂದ ಪಶ್ಚಿಮಕ್ಕೆ ಚಲಿಸುತ್ತಿದೆ. ಹೀಗೆ ಪರಿಭ್ರಮಿಸುತ್ತಿರುವ ಗೋಳದ ಅಕ್ಷವು ಉತ್ತರದಿಂದ ದಕ್ಷಿಣಕ್ಕೆ ಹಾದುಹೋಗುತ್ತದೆ. ರಾತ್ರಿಯಾಕಾಶದಲ್ಲಿ ಕಾಣುವ ನಕ್ಷತ್ರಗಳ ಸಂಖ್ಯೆ ಎಷ್ಟು ದೊಡ್ಡದೆಂದರೆ ಖಗೋಳವನ್ನು ಆವರಿಸಿರುವ ಈ ಎಲ್ಲ ನಕ್ಷತ್ರಗಳನ್ನು ಬಿಡಿ ಬಿಡಿಯಾಗಿ ಗುರುತಿಸುವುದು ಸಾಮಾನ್ಯ ಕಣ್ಣುಗಳಿಗೆ ಅಸಾಧ್ಯ. ಭೂಮಿಯ ಭ್ರಮಣೆಯಿಂದಾಗಿ ನಕ್ಷತ್ರಗಳು ಪೂರ್ವದಿಂದ ಪಶ್ಚಿಮಕ್ಕೆ ಚಲಿಸಿದಂತೆ ಕಂಡರೂ ಅವುಗಳÀ ಪರಸ್ಪರ ಸಾಪೇಕ್ಷ ಸ್ಥಾನ`ಮಾನ’ ಬದಲಾಗದು. ಇದರಿಂದಾಗಿ, ಆಕಾಶದಲ್ಲಿ ಈ ಚುಕ್ಕಿಗಳನ್ನೆಲ್ಲ ಸೇರಿಸಿ ಖಾಯಂ ರಂಗೋಲಿಗಳನ್ನು ಕಲ್ಪಿಸಿಕೊಳ್ಳಬಹುದು. ನಕ್ಷತ್ರ ಸಮೂಹವನ್ನು ಚಿತ್ರಾಕೃತಿಯಾಗಿ ಗುರುತಿಸಿದರೆ ಅದನ್ನು ನಕ್ಷತ್ರ ಪುಂಜಗಳೆನ್ನುತ್ತೇವೆ. ಹನ್ನೆರಡು ಮನುಷ್ಯಾಕೃತಿಗಳು, ಒಂಬತ್ತು ಹಕ್ಕಿಗಳು, ಹತ್ತೊಂಬತ್ತು ಭೂಮಿಯ ಮೇಲೆ ವಾಸಿಸುವ ವಿವಿಧ ಪ್ರಾಣಿಗಳು, ಎರಡು ಕೀಟಗಳು, ಹತ್ತು ಜಲಚರಗಳು, ಕಾಲ್ಪನಿಕ ಜೀವಿಗಳು, ವಸ್ತುಗಳು ಹೀಗೆ ಎಂಬತ್ತೆಂಟು ನಕ್ಷತ್ರ ಪುಂಜಗಳಾಗಿ ಖಗೋಳವನ್ನು ವಿಭಜಿಸಲಾಗಿದೆ. ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಈ ಗುರುತಿಸುವಿಕೆ ಸ್ವಲ್ಪ ಭಿನ್ನವಾಗಿದೆ. ಏಳು ನಕ್ಷತ್ರಗಳ ಗುಂಪಾಗಿರುವ ಸಪ್ತರ್ಷಿ ಮಂಡಳವನ್ನು ಬಿಗ್ ಡಿಪ್ಪರ್ ಎಂತಲೂ ಗ್ರೇಟ್ ಬೇರ್ ಎಂತಲೂ ಬೇರೆ ಬೇರೆ ಹೆಸರುಗಳಲ್ಲಿ ಬೇರೆ ಬೇರೆ ಕಡೆಯಲ್ಲಿ ಗುರುತಿಸುತ್ತಾರೆ.
  ಕ್ರಿಸ್ತಪೂರ್ವ 270 ರಲ್ಲಿ ಗ್ರೀಕ್ ಕವಿ ಅರಾಟಸ್ ರಚಿಸಿದ ಫಿನೋಮಿನಾ ಎಂಬ ಕಾವ್ಯದಲ್ಲಿ ಈಗ ಗುರುತಿಸಲಾಗುವ ನಕ್ಷತ್ರಪುಂಜಗಳ ಮೊದಲ ಉಲ್ಲೇಖಗಳು ದೊರೆಯುತ್ತವೆ. ಆದುದರಿಂದ, ಆ ಕಾಲಕ್ಕಿಂತಲೂ ಹಿಂದಿನಿಂದಲೇ ಜನರು ನಕ್ಷತ್ರಪುಂಜಗಳನ್ನು ಗುರುತಿಸಲು ಆರಂಭಿಸಿರಬಹುದೆಂದು ಅಂದಾಜಿಸಬಹುದು. ಖಗೋಲದ ದಕ್ಷಿಣ ತುದಿಯಲ್ಲಿನ ಪುಂಜಗಳನ್ನು ಅವರು ಉಲ್ಲೇಖಿಸದೇ ಇರುವುದರ ಆಧಾರದ ಮೇಲೆ ಸ್ವಲ್ಪ ಪತ್ತೆದಾರಿ ಮಾಡಿ ಹೀಗೆ ಗುರುತಿಸಿದವರು ಭೂಮಿಯ ಉತ್ತರಕ್ಕೆ 30 ಡಿಗ್ರಿ ಅಕ್ಷಾಂಶದ ಆಚೆ ಇರುವ ಸುಮೇರಿಯನ್ನರೋ ಬ್ಯಾಬಿಲೋನಿಯನ್ನರೋ ಅಗಿರಬಹುದು ಎಂದೂ ಊಹಿಸಬಹುದು.
  ಸೂರ್ಯನು ಪೂರ್ವದಲ್ಲಿ ಉದಯಿಸಿ ಪಶ್ಚಿಮದಲ್ಲಿ ಅಸ್ತಂಗತನಾಗುವುದು ದಿನಾ ಇದ್ದದ್ದೇ. ಈ ವಿದ್ಯಮಾನವೂ ನಮ್ಮ ಇಂದ್ರಿಯಗಳ ಮಿತಿಯಿಂದಲೇ ಉಂಟಾಗಿರುವುದು ಎಂಬುದು ನಮಗೆ ಗೊತ್ತೇ ಇದೆ. ಸೂರ್ಯನು ಪೂರ್ವದಲ್ಲಿ ಉದಯಿಸಿ ಪಶ್ಚಿಮದಲ್ಲಿ ಮುಳುಗಿ ಮತ್ತೆ ಮಾರನೆಯ ದಿನ ಪೂರ್ವದಲ್ಲೇ ಉದಯಿಸುವಾಗ ಭೂಮಿಯನ್ನು ಒಂದು ಸುತ್ತುಹಾಕಿಂದಂತೆ ಕಾಣುತ್ತದೆ. ಸೂರ್ಯನ ಈ ದೃಗ್ಗೋಚರ ಪಥವನ್ನು ಕ್ರಾಂತಿವೃತ್ತ ಎನ್ನುತ್ತಾರೆ. ಸೂರ್ಯನು ಕ್ರಾಂತಿ ವೃತ್ತದುದ್ದಕ್ಕೂ ಹೀಗೆ ಹಾದು ಹೋಗುವಾಗ ಹಿನ್ನೆಲೆಯಲ್ಲಿ ಕೆಲವು ನಕ್ಷತ್ರ ಪುಂಜಗಳಿರುತ್ತವೆ. ಕ್ರಾಂತಿವೃತ್ತದುದ್ದಕ್ಕೂ ಹರಡಿರುವ ಹನ್ನೆರಡು ನಕ್ಷತ್ರಪುಂಜಗಳನ್ನು ರಾಶಿಪುಂಜಗಳೆನ್ನುವರು. ಸೂರ್ಯಾಸ್ತದ ಸಮಯದಲ್ಲಿ ಪಶ್ಚಿಮದ ದಿಗಂತದಲ್ಲಿ ಮೀನ ರಾಶಿಯಿದೆಯೆಂದರೆ ಸೂರ್ಯನು ಮೀನರಾಶಿಯಲ್ಲಿರುವನು ಎಂದರ್ಥ. ಆಗ, ಪೂರ್ವದಲ್ಲಿ ಕನ್ಯಾ ರಾಶಿಯು ಮೂಡುತ್ತಿರುತ್ತದೆ. ಮೇಷದಿಂದ ಆರಂಭಿಸಿ ಪಶ್ಚಿಮದಿಂದ ಪೂರ್ವಕ್ಕೆ ಬಂದರೆ  ಕನ್ಯಾರಾಶಿಯು ಆರನೆಯದು. ಕುಂಡಲಿಯಲ್ಲಿ ಸೂರ್ಯನ ಆರನೇ ಮನೆ. ಚಾಂದ್ರ ಕಕ್ಷೆಯೂ ರಾಶಿ ಚಕ್ರಕ್ಕೆ ಸೀಮಿತವಾಗಿದೆ. ಸೂರ್ಯನು ಪ್ರತಿ ತಿಂಗಳೂ ತನ್ನ ಮನೆ ಬದಲಿಸುತ್ತಿದ್ದರೆ ಚಂದ್ರನು ಪ್ರತಿ ಎರಡೂಕಾಲು ದಿನಗಳಿಗೇ ಮನೆ ಬದಲಿಸುತ್ತಾನೆ. ಆದುದರಿಂದ, ಚಂದ್ರನ ಪ್ರತಿದಿನದ ಸ್ಥಾನವನ್ನು ಗುರುತಿಸಲು ಇಪ್ಪತ್ತೇಳು ನಕ್ಷತ್ರಗಳ ಸಹಾಯ ಪಡೆಯಲಾಗಿದೆ. ಪ್ರತಿ ನಕ್ಷತ್ರಕ್ಕೂ ನಾಲ್ಕು ಪಾದಗಳು. ಅಮವಾಸ್ಯೆಗೂ ಹುಣ್ಣಿಮೆಗೂ ಇರುವ ಅಂತರವನ್ನು ಅನುಕೂಲಕ್ಕಾಗಿ ಎರಡು ವಾರಗಳಾಗಿ ವಿಂಗಡಿಸಲಾಗಿದೆ. ವಾರದ ಪ್ರತಿ ದಿನವನ್ನೂ ಚರಕಾಯಗಳ ಹೆಸರಿನಿಂದ ಗುರುತಿಸಲಾಗಿದೆ. ಎಲ್ಲವೂ ನಮ್ಮ ಅನುಕೂಲಕ್ಕಾಗಿ. ಅಶ್ವಿನಿಯಿಂದ ರೇವತಿವರೆಗಿನ ಇಪ್ಪತ್ತೇಳು ನಕ್ಷತ್ರಗಳನ್ನು ಹನ್ನೆರಡು ರಾಶಿಗಳಿಗೆ ಹಂಚಿದರೆ ನಕ್ಷತ್ರ-ರಾಶಿ ಸಂಬಂಧ ಅರ್ಥವಾಗುತ್ತದೆ.  ಗಡಿಯಾರ, ಕ್ಯಾಲೆಂಡರು ಯಾವುದೂ ಇಲ್ಲದೆ ಆಕಾಶದಲ್ಲಿ ಕಾಣುವ ಈ ದೃಶ್ಯಗಳಿಂದಲೇ ಮಗು ಹುಟ್ಟಿದ್ದು ಯಾವ ಸಮಯದಲ್ಲಿ ಎಂದು ಹೇಳಬಹುದು. ಜನ್ಮ ಕುಂಡಲಿಯೆಂಬುದು ಒಂದು ವೈಜ್ಞಾನಿಕ ದಾಖಲೆ. ಯಾವುದೇ ಘಟನೆಯ ಸಮಯವನ್ನು ಗುರುತಿಸಲು ಇದರಿಂದ ಸಾಧ್ಯ. ಒಂದು ಉದಾಹರಣೆ ಹೇಳಬೇಕೆಂದರೆ, ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವೃಶ್ಚಿಕ ರಾಶಿ, ಅನುರಾಧಾ ನಕ್ಷತ್ರದಲ್ಲಿ ಹುಟ್ಟಿದರು. ಅದು ಕ್ಯಾಲೆಂಡಿರಿನ ಸೆಪ್ಟಂಬರ್ ತಿಂಗಳ ಹದಿನೇಳನೇ ತಾರೀಕು.
  ಹೀಗೆ, ಆಕಾಶಕಾಯಗಳ ದೃಗ್ಗೋಚರ ಚಲನೆಗಳನ್ನು ನಮ್ಮ ಇಂದ್ರಿಯಾನುಭವದ ಮಿತಿಯಲ್ಲಿಯೇ ಗ್ರಹಿಸಿ ನಿರಂತರ ವೀಕ್ಷಣೆಯ ಮೂಲಕ ಈ ಚಲನೆಯಲ್ಲಿ ಕಂಡುಬರುವ ನಿಯಮಿತ ಅಂಶಗಳನ್ನು ಗುರುತಿಸಿದ ನಮ್ಮ ಪೂರ್ವಜರು ಖಂಡಿತವಾಗಿಯೂ ನಿಶಿತ ಮತಿಗಳು. ಆದರೆ, ನಾವು ಕಾಣುವುದೇ ವಾಸ್ತವವಲ್ಲ. ರಾಶಿ ಪುಂಜಗಳು ನಮ್ಮನ್ನು ಸುತ್ತುತ್ತಲೂ ಇಲ್ಲ, ಅವುಗಳೆಲ್ಲವೂ ಒಂದೇ ದೂರದಲ್ಲೂ ಇಲ್ಲ. ಕೆಲವು ನಕ್ಷತ್ರಗಳ ಬೆಳಕು ಭೂಮಿಯನ್ನು ತಲುಪಲು ನೂರಾರು ಜ್ಯೋತಿವರ್ಷಗಳು ಬೇಕಾಗುತ್ತವೆ. ಆಧ್ರ್ರಾ ನಕ್ಷತ್ರದಿಂದ ಹೊರಟ ಬೆಳಕು ಭೂಮಿಯನ್ನು ತಲುಪಲು ಆರುನೂರಾ ನಲವತ್ತೆರಡು ವರ್ಷಗಳು ಬೇಕು. ರೋಹಿಣಿ ನಕ್ಷತ್ರದಿಂದಾದರೆ ಅರವತ್ತೈದು ವರ್ಷಗಳು ಬೇಕು. ಅವುಗಳ ಪ್ರಭಾವ ಆಯ್ದ ಮನುಷ್ಯರ ಮೇಲಾಗುತ್ತದೆ ಎಂಬುದು ಅತಾರ್ಕಿಕ. ಪ್ರತಿ ಸೆಕೆಂಡಿಗೆ ನಾಲ್ಕು ಮಕ್ಕಳು ಹುಟ್ಟುತ್ತಾರೆ. ಈ ಹುಟ್ಟುವ ಪ್ರಕ್ರೀಯೆಯೇ ಬಹಳ ದೀರ್ಘವಾದದು. ಅದು ಎಲ್ಲಿಂದ ಆರಂಭವಾಗಿ ಎಲ್ಲಿಗೆ ಮುಗಿಯುತ್ತದೆ ಎಂದು ಹೇಳುವುದೇ ಕಷ್ಟ.  ಸಿಸೇರಿಯನ್ ಹೆರಿಗೆ ಮಾಡಿಸುವ ಕೆಲವು ವೈದ್ಯರು ಮಹೂರ್ತ ನೋಡಿಯೇ ಹೆರಿಗೆ ಮಾಡಿಸುವುದಿದೆ. ಪ್ರಕೃತಿ ವಿಕೋಪಗಳಾದಾಗ, ಪ್ಲೇಗಿನಂತಹ ಮಾರಿ ಬಡಿದಾಗ, ರೈಲು ಅಪಘಾತಗಳು ಸಂಭವಿಸುವಾಗ ಬೇರೆ ಬೇರೆ ಜನ್ಮ ಕುಂಡಲಿಯವರು ಒಟ್ಟಿಗೆ ಸಾಯುತ್ತಾರೆ. ಒಂದೇ ಜನ್ಮಕುಂಡಲಿಯವರು ಬೇರೆ ಬೇರೆ ಬದುಕಿನ ಹಾದಿಯಲ್ಲಿ ಸಾಗುತ್ತಾರೆ. ಅನುಮಾನ, ದತ್ತಾಂಶ ಸಂಗ್ರಹ, ಪರೀಕ್ಷೆ, ಪ್ರಶ್ನೆ, ವಿಶ್ಲೇಷಣೆ, ನಿಖರ ಊಹೆ, ಮರು ಪರೀಕ್ಷೆ, ಅನ್ವಯ ಇವೆಲ್ಲ ವಿಜ್ಞಾನದ ನಿಜಮಾರ್ಗದ ನಿಲ್ದಾಣಗಳು.
ಜನ್ಮ ಕುಂಡಲಿಯ ಸಹಾಯದಿಂದ ಮನುಷ್ಯ ಯಾವ ಉದ್ಯೋಗ ಹಿಡಿಯುತ್ತಾನೆ, ಯಾವಾಗ ಮದುವೆ ಆಗುತ್ತಾನೆ, ಯಾವಾಗ ಸಾಯುತ್ತಾನೆ ಎಂದು ಲೆಕ್ಕ ಹಾಕುವುದು ಒಂದು ಉದ್ಯೋಗವೇ ಆಗಿಬಿಟ್ಟಿದೆ. ಈ ಕೌಶಲದಿಂದ ಹೊಟ್ಟೆ ತುಂಬಿಸಿಕೊಳ್ಳುವ ಮಂದಿ ತಮ್ಮ ಸುತ್ತ ಮೌಢ್ಯವು ಆವರಿಸಿಕೊಂಡಿರಬೇಕು ಎಂದು ಬಯಸುತ್ತಾರೆ. ಭಯಗೊಳಿಸಿ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಹೊಸ ವರಸೆಯೇನೂ ಅಲ್ಲ. ಇದು ಹಳೆಯ ಚಾಳಿ.

Monday, 13 February 2017

ಕನ್ನಡದ ಕಾವ್ಯ ಪರಂಪರಯನ್ನು ಕಾಲೇಜ ವಿಧ್ಯಾರ್ಥಿಗಳ ಮುಂದೆ ಬಿಚ್ಚಿಡುವ ಪ್ರಯತ್ನವೇ ಸಮುದಾಯದ ಕಾವ್ಯ ರಂಗ ತಿರುಗಾಟ





 ಯುವಕರದನಿ ಇಂದು ಕರ್ಕಶವಾಗುತ್ತಿರುವ ಹೊತ್ತಿನಲ್ಲಿ ಅವರ ದೇಹಕ್ಕೆ ಕಾವ್ಯದ ಸಾಹಚರ್ಯ ಒದಗಿಸುವ ಸಾಮಾಜಿಕ ಉದ್ದೇಶದಿಂದ ಶಾಸನ ಪದ್ಯಗಳಿಂದ ಹಿಡಿದು ಇದುವರೆಗಿನ ಕಾವ್ಯ ಕಥನಗಳ ಆಯ್ದ ಬರಹಗಳ ತುಣುಕನ್ನು ಸಂಬಂಧಗಳ ಪರಿಕಲ್ಪನೆಯಾಧಾರದಲ್ಲಿ ಹೆಣೆದು ಕಾವ್ಯರಂಗ ರೂಪಕವಾಗಿಸಲಾಗಿದೆ. ಕನ್ನಡದ ಲೋಕಗೃಹಿಕೆ, ಕನ್ನಡದ ವಿವೇಕ ಇವನ್ನು ಇಂದಿನ ಯುವಕರಿಗಾಗಿ ಮರುನಿರೂಪಿಸುವ ಒಂದು ಪ್ರಯತ್ನ ಭಾಗವಾಗಿ ಸಮುದಾಯದ ನಟ ನಟಿಯರು ಈ ಕಾವ್ಯಗಳನ್ನು ಆಡುತ್ತಾರೆ, ಹಾಡುತ್ತಾರೆ,ಕೆಲವನ್ನು ಅಭಿನುಸುತ್ತಾರೆ.  ಒಂದೂವರೆಗಂಟೆ ಕಾಲ ಸುಮಾರು 31 ಸಾಹಿತ್ಯಿಕ ಬರಹವನ್ನು ಇಲ್ಲಿ ರಂಗಕ್ಕೆತರಲಾಗಿದೆ. ಸಾಹಿತ್ಯ ಕಥನಗಳ ರಂಗ ಓದು ಇದು. ವಿದ್ಯಾರ್ಥಿಗಳಿಗೂ, ಅಧ್ಯಾಪಕರಿಗೂ ಅನುಕೂಲವಾಗುವುದೆಂಬ ಶೈಕ್ಷಣಿಕ ಉದ್ದೇಶವಿದೆ.
     ಹಣತೆ ಹಚ್ಚುತ್ತೆವೆ ನಾವು ಕತ್ತಲನ್ನು ಗೆಲ್ಲುತ್ತೆನೆಂಬ ಜಿದ್ದಿನಿಂದಲ್ಲ ಇರುವಷ್ಟು ಹೊತ್ತು ನಿಮ್ಮ ಮುಖ ನಾವು ನನ್ನ ಮುಖ ನೀವು ನೋಡಬಹುದೆಂಬ ಆಶೆಯಿಂದ ಎಂಬ ಜಿಎಸ್‍ಎಸ್ ರ ಪದ್ಯದಿಂದ ಆರಂಬವಾಗುವ ಈ ಕಾವ್ಯರಂಗ ಕನ್ನಡ ನಾಡು ರೂಪಿಸಿಕೊಂಡ ಬಂದ ಸಂಬಂದಗಳ ಜಾಲವನ್ನು ಹೆಣೆಯುವ ಕೆಲವು ನುಡಿಗಳನ್ನು ಕವಿರಾಜ ಮಾರ್ಗದಿಂದ ಮತ್ತು ದೂರದ ಬನವಾಸಿ ಕುರಿತು ಪಂಪನು ಹೇಳುವ ಚಾಗದ ಭೋಗದ ಸಾಲುಗಳನ್ನು ಒಳಗೊಂಡು  ಮನುಷ್ಯರಲ್ಲಿರುವ ಜಾತಿಸೂತಕ, ಕರ್ಮಸೂತಕವನ್ನು ಕಿತ್ತಿ ಅವರೆಲ್ಲರನ್ನು ಒಂದುಮಾಡಲು ಹೋರಟ ಶರಣ ಪರಂಪರೆಯನ್ನು ನೆನೆಯುತ್ತಾ  ಕುವೆಂಪುರವರ ರಾಮಾಯಣ ದರ್ಶನಂ ಹಾಗೂ ಶಿವರಾಮ ಕಾರಂತರ ಚೋಮ ಹಾಗೂ ಪ್ರಕೃತಿ ಸಂಬಂದಗಳ ಕಲ್ಪನಾ ಸ್ವರೂಪ ಸಾರವು ಬೇಂದ್ರೆಯವರ ಬೃಂಗದ ಬೆನ್ನೇರಿ ಬಂತು ಹಾಗೂ ವರ್ಗಅಸಮಾನತೆ, ಧರ್ಮದ ಹೆಸರಿನಲ್ಲಿ ನಡೆಯುವ ಡೊಂಗಿತನ ಸಾರುವ  ಜಾನಪದ ಹಾಗೂ ತತ್ವಪದದ ಕೇಲವು ಸಾಲುಗಳನ್ನು ಧ್ವನಿಪೂರ್ವಕವಾಗಿ ಇಲ್ಲಿ ನಿರೂಪಿಸಲಾಗಿದೆ. ಸ್ತ್ರೀ ಸಂಬಂದಗಳ ಕುರಿತು ಹೇಳುವ ಪ್ರತಿಭಾ ನಂದಕುಮಾರ ಹಾಗೂ ವೈದೇಹಿಯವರ ಕವನದ ಸಾಲುಗಳು ಇಲ್ಲಿ ಹೆಣ್ಣಿಣ ಶೋಷಣೆಯ ಮುಖಗಳನ್ನು ಅನಾವರಣ ಮಾಡಿದೆ. ದೇವನೂರರ ಒಡಲಾಳ ಸಿದ್ದಲಿಂಗಯ್ಯನವರ ನೆನ್ನೆ ದಿನ ನನ್ನ ಜನ  ಕವನಗಳು ಇವತ್ತೀನ ಶೋಷಣೆಯನ್ನು ಸಾರುತ್ತವೆ. ಕೊನೇಗೆ ಸು,ರಂ ಎಕ್ಕುಂಡಿಯವರ ಮೂಡಲ ದೀಪದೋಂದಿಗೆ ಕಾವ್ಯರಂಗ ಮುಕ್ತಾಯವಾಗುತ್ತದೆ. ಒಟ್ಟಾರೆಯಾಗಿ ಕಾವ್ಯರಂಗ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗು ಉಪನ್ನಾಸಕರಿಗೆ ಮೆಚ್ಚಿಗೆಯಾಗುವ ರೀತಿಯಲ್ಲಿ ನಮ್ಮ ಕಾಲಾವಿದರಾದ ರಂಜಿತಾ ಜಾಧವ.ರೇಶ್ಮಾ ತಿಪಟೂರ. ಧೀರಜ್, ಯಲ್ಲಪ್ಪ ಗಾಣಗೇರ, ಚಿದಂಬರ ಕುಲಕರ್ಣಿ, ಮಹಾಂತೇಶ ದೊಡ್ಡಮನಿ, ಪ್ರಶಾಂತ, ವಿನಾಯಕ ಈಳಗೇರ , ಬಸವರಾಜ ಕಮ್ಮಾರ, ಕುಮಾರ ಬದಾಮಿ, ಚಂದ್ರು ಕಿಲ್ಲೇದಾರ, ಪ್ರಶಾಂತ ಒಳಗೊಂಡ 13 ಜನರ ಕಲಾತಂಡ ಎಲ್ಲರನ್ನು ಮಂತ್ರಮುಗ್ದರನ್ನಾಗಿಸುವ ಹಾಗೆ ಅಭಿನಯಿಸಿದರು. ಈ ಕಾವ್ಯ ರಂಗ ಯಶಸ್ವಿ ಹಿಂದೆ ನಿರ್ದೇಕರಾದ ಡಾ.ಶ್ರೀಪಾಧ ಬಟ್ ಹಾಗೂ ರಂಗಪಠ್ಯ ಸಿದ್ದಪಡಿಸಿದ ಡಾ.ಎಂ.ಜಿ ಹೆಗಡೆ ಯವರ ಶ್ರಮವಿದೆ. ಇವರೆಲ್ಲರ ಶ್ರಮ ಸಾರ್ಥಕಗೊಂಡದ್ದು ಈ ಸಮುದಾಯದ ಕಾವ್ಯರಂಗ ತಿರುಗಾಟದಿಂದ.
  ಈ ಕಾವ್ಯರಂಗ ಹಾವೇರಿ ಜಿಲ್ಲೆಯ ಶೇಷಗಿರಿಯಲ್ಲಿ 21-01-2017 ರಿಂದ 15 ದಿನಗಳ ಕಾಲ ಡಾ.ಶ್ರೀಪಾದ ಭಟ್ ರವರ ನಿರ್ದೇಶನದಲ್ಲಿ ತರಬೇತಿ ಹೊಂದಿ, ದಿನಾಂಕ; 03-02-2017 ರಂದು ಧಾರವಾಡದ ಕನ್ನಡ ಸಾಹಿತ್ಯಭವನದಲ್ಲಿ ಚಿದಂಬರರಾವ ಜಂಭೆಯವರಿಂದ ಯದ್ಘಾಟನೆಗೊಂಡು ಧಾರವಾಡ,ಬೆಳಗಾಂ,ಗದಗ ಜಿಲ್ಲೆಗಳ ಕಾಲೇಜುಗಳಲ್ಲಿ ಪ್ರದರ್ಶನ ನೀಡಿತ್ತಿದೆ.
ರಂಗ ಪಠ್ಯ: ಡಾ.ಎಂ.ಜಿ.ಹೆಗಡೆ; ವಿನ್ಯಾಸ: ದಾಮೋದರ ನಾಯ್ಕ, ಹೊನ್ನಾವರ; ನಿರ್ದೇಶನ: ಡಾ.ಶ್ರೀಪಾದ ಭಟ್ ಸಹ ನಿರ್ದೇಶನ;




   

Saturday, 4 February 2017

ನಾರಾಯಣ ಗಾಂವಕಾರರಿಗೆ ದಿ. ದುರ್ಗಾದಾಸ ಗಂಗೊಳ್ಳಿ ಪ್ರಶಸ್ತಿ

ಕುಮಟಾದ ಕಲಾ ಗಂಗೋತ್ರಿ ಸಂಸ್ಥೆಯು ಯಕ್ಷಗಾನ ಕಲಾವಿದರಾದ ನಾರಾಯಣ ಗಾಂವಕಾರ ಇವರಿಗೆ ದಿ. ದುರ್ಗಾದಾಸ ಗಂಗೊಳ್ಳಿ ಪ್ರಶಸ್ತಿ ನೀಡಿ ಗೌರವಿಸಿತು. ಇದೇ ಸಂದರ್ಭದಲ್ಲಿ ಜಾನಪದ ಹಾಡುಗಾರ್ತಿ ಪದ್ಮಶ್ರಿ ಸುಕ್ರಿ ಗೌಡ, ಶ್ರೀ ಮುರೂರು ವಿಷ್ಣು ಭಟ್, ಡಾ ಎಂ ಆರ್ ನಾಯಕರನ್ನು ಇದೇ ವೇದಿಕೆಯಲ್ಲಿ ಸಮ್ಮಾನಿಸಲಾಯಿತು.


ಬಡಾಬಡಗಿನ ಯಕ್ಷಗಾನ ಪರಂಪರೆಯಲ್ಲಿ ಡೇರೆಮೇಳಗಳ ಕಲಾವಿದರಷ್ಟೇ ಜನಪ್ರಿಯರಾದ ಅನೇಕ ಹವ್ಯಾಸಿ ಮತ್ತು ಬಯಲಾಟದ ಕಲಾವಿದರಿದ್ದಾರೆ. ಪಡುವಣಿಯ ನಾರಾಯಣ ಗಾಂವಕಾರರು ಅಂತಹ ಕಲಾವಿದರಲ್ಲೊಬ್ಬರು. ಅನಾರೋಗ್ಯದ ಕಾರಣದಿಂದಾಗಿ ತಮ್ಮ ಹವ್ಯಾಸವನ್ನು ಐವತ್ತೈದರ ಹರೆಯದಲ್ಲೇ ನಿಲ್ಲಿಸಿದರೂ ಅವರ ಎರಡು ದಶಕಗಳ ಕಾಲದ ಯಕ್ಷಗಾನದ ಸೇವೆ ಅನುಪಮವಾದದ್ದು. ತಮ್ಮ ಕಾಲದಲ್ಲಿ ಉತ್ತರ ಕನ್ನಡದ ಉದ್ದಗಲಗಳಲ್ಲಿ ವಿಶಿಷ್ಟ ಪಾತ್ರಾಭಿನಯ ಮತ್ತು ಅರ್ಥಗಾರಿಕೆಗಾಗಿ ಹೆಸರಾಗಿದ್ದ ನಾರಾಯಣ ಗಾಂವಕಾರರು ಮಾರುತಿ ಪ್ರತಾಪ ಪ್ರಸಂಗದ ಹನುಮಂತ, ಕಚದೇವಯಾನಿ ಪ್ರಸಂಗದ ಶುಕ್ರಾಚಾರ್ಯ ಪಾತ್ರಗಳ ಮಟ್ಟಿಗಂತೂ `ಇವರೇ ಸೈ’ ಎಂಬಷ್ಟು ಜನಪ್ರಿಯರು.

ಉತ್ತರ ಕನ್ನಡದ ಕುಮಟಾ ತಾಲೂಕಿನ ಪಡುವಣಿ ಇವರ ಹುಟ್ಟೂರು. ಅನಂತ ಗಾಂವಕಾರ
ಮತ್ತು ಸಣ್ಣಮ್ಮ ಗಾಂವಕಾರರ ಮಗನಾಗಿ 1940 ರ ಮೇ 10 ನೇ ತಾರೀಕಿನಂದು ಜನಸಿದ ಗಾಂವಕಾರರು ಮೆಟ್ರಿಕ್ ವರೆಗಿನ ಶಿಕ್ಷಣವನ್ನು ಹೆಗೆಡೆಯಲ್ಲಿ ಪಡೆದವರು. ಯಕ್ಷಗಾನದ ಹುಚ್ಚು ಓದನ್ನು ಮುಂದುವರಿಸಲು ಅವಕಾಶವನ್ನೇ ನೀಡದಾಗ ತನ್ನ ಹದಿನಾಲ್ಕನೇ ವಯಸ್ಸಿನಲ್ಲಿಯೇ ಗೆಜ್ಜೆ ಕಟ್ಟಿ ಅಭಿಮನ್ಯುವಿನ ಪಾತ್ರದ ಮೂಲಕ ರಂಗದ ಮೇಲೆ ಹೆಜ್ಜೆ ಹಾಕಿದರು. ಆಗಿನ ಹೆಸರಾಂತ ಭಾಗವತರಾದ ಬಾಡದ ಶಿವರಾಮ ಹೆಗಡೆಯವರು ಮತ್ತು ಪಡುವಣಿ ಪರಮಯ್ಯ ಪಟಗಾರರರನ್ನು ಇವರು ತನ್ನ ಯಕ್ಷಗುರುಗಳೆಂದು ನೆನಪುಮಾಡಿಕೊಳ್ಳುತ್ತಾರೆ. ಚಿಕ್ಕ ಪ್ರಾಯದಲ್ಲೇ ಯಕ್ಷಗಾನಕ್ಕೆ ಮನಸೋತು, ಎಲ್ಲ ಬಗೆಯ ಪಾತ್ರಗಳನ್ನು ಮಾಡುತ್ತಾ ಹಂತ-ಹಂತವಾಗಿ ಮೇಲೇರಿ, ಎರಡನೇ ವೇಷದಾರಿಯಾಗಿ ರಸಿಕರ ಮನದಲ್ಲಿ ಅಚ್ಚಳಿಯದೆ ಉಳಿದವರು. ರಂಗದಿಂದ ನಿವೃತ್ತಿ ಪಡೆದು ಎರಡುದಶಕಗಳೇ ಕಳೆದರೂ ಊರೂರುಗಳಲ್ಲಿ ಇವರ ಪಾತ್ರವನ್ನು ಕಣ್ಣೆದರು ತಂದುಕೊಂಡು ಪರವಶರಾಗುವ ಅಭಿಮಾನಿಗಳಿದ್ದಾರೆ. ತನ್ನ ಪಾತ್ರವನ್ನು ರೂಪಿಸುತ್ತಾ ಒಂದು ಸಂಘಟಿತ ಆಖ್ಯಾನದ ಪ್ರದರ್ಶನಕ್ಕೆ ಪೋಷಣೆ ನೀಡುವುದು ಯಕ್ಷಗಾನಕ್ಕೇ ವಿಶಿಷ್ಟವಾದ ಪರಂಪರೆ. ನಾರಾಯಣ ಗಾಂವಕಾರರು ಈ ಅಲಿಖಿತ ನಿಯಮವನ್ನು ಮೀರಿದವರಲ್ಲ. ಹವ್ಯಾಸಿ ಮೇಳಗಳಲ್ಲಿಯೇ ತಮ್ಮ ಸೇವೆಯನ್ನು ಪೂರ್ಣಗೊಳಿದವರಾಗಿದ್ದರೂ ಪ್ರೇಕ್ಷಕ ವರ್ಗ ಯಾವುದೇ ಆಗಿದ್ದರೂ ಪ್ರಾಮಾಣಿಕ ಪ್ರದರ್ಶನ ನೀಡುವ ಶೃದ್ಧೆ ಮತ್ತು ಬದ್ಧತೆಯಲ್ಲಿ ಇವರದು ಪಕ್ಕಾ ವೃತ್ತಿಪರ ನಿಲುವು. ಚಿಕ್ಕ ಹಳ್ಳಿಗಳಲ್ಲಿಯೇ ಇರಲಿ ನಗರದ ದೊಡ್ಡ ಸಭಾಂಗಣಗಳವೇ ಆಗಿರಲಿ ನೂರಕ್ಕ ನೂರಷ್ಟು ತಮ್ಮ ಸಾಮರ್ಥ್ಯಕ್ಕೆ ತಕ್ಕಂತಹ ಪ್ರದರ್ಶನವನ್ನು ನೀಡುವುದಕ್ಕೆ ನಾರಾಯಣ ಗಾಂವಕಾರರು ಸದಾ ಬದ್ಧರಾಗಿದ್ದರು. ಪಾತ್ರ ಬೀಳಾಗದಂತೆ ಸದಾ ಎಚ್ಚರದಲ್ಲಿರುವವರು. ಇವರ ಪಾತ್ರಗಳಲ್ಲೇ `ಹನುಮಂತ’ ನ ಪಾತ್ರ ಅನನ್ಯವಾದದ್ದು. ತನ್ನ ಯಕ್ಷಸೇವೆಯ ಆರಂಭದ ದಿನಗಳಲ್ಲೇ ಇಂದ್ರಜೀತು ಕಾಳಗದಲ್ಲಿ ಮೂರೂರು ದೇವರು ಹೆಗಡೆಯವರ ಇಂದ್ರಜಿತುವಿನ ಎದುರು ಹನುಮಂತನಾಗಿ ಹತ್ತಾರು ಕಡೆ ಪಾತ್ರವಹಿಸಿ ಹನುಮಂತನ ಪಾತ್ರಕ್ಕೆ ಅನನ್ಯವಾದ ಆಯಾಮವನ್ನು ಒದಗಿಸಿದವರು. ಆನಂತರ, ಇವರು ನೂರಾರು ರಂಗಸ್ಥಳಗಳ ಮೇಲೆ ಹನುಮಂತನಾಗಿ ಮೆರೆದವರು. ವಾಚಿಕ, ಆಹಾರ್ಯ, ಆಂಗಿಕ ಹಾಗೂ ಸಾತ್ವಿಕ ಅಭಿನಯಗಳಲ್ಲಿ ಇವರು ಸಮಾನ ಸಿದ್ಧಿಯನ್ನು ಸಾಧಿಸಿದವರು. ಇವರ ಅಭಿನಯ ನಿಜವಾದ ರಸೋಲ್ಲಾಸವೇ ಆಗಿರುತಿತ್ತು. ಉತ್ತಮ ನಾಯ್ಕರ ಮೇಳವೆಂದೇ ಪ್ರಸಿದ್ಧವಾಗಿದ್ದ ಕುಮಟಾದ ಶಾಂತಿಕಾ ಪರಮೇಶ್ವರಿ ಯಕ್ಷಗಾನ ಮಂಡಳಿ ಇಬ್ಬರು ಶ್ರೇಷ್ಠ ಹನುಮಂತನ ಪಾತ್ರದಾರಿಗಳನ್ನು ಒಂದೇ ಕಾಲಗಟ್ಟದಲ್ಲಿ ನೀಡಿದೆ. ಒಬ್ಬರು ಕುಮಟಾ ಗೋವಿಂದ ನಾಯ್ಕರಾದರೆ ಇನ್ನೊಬ್ಬರು ಪಡುವಣಿ ನಾರಾಯಣ ಗಾಂವಕಾರರು. ವೇಷಕಟ್ಟಿಕೊಳ್ಳುವಲ್ಲಿ ತೋರುವ ಶ್ರದ್ಧೆ, ಮುಖವರ್ಣಿಕೆಯಲ್ಲಿನ ಅಚ್ಚುಕಟ್ಟುತನ ಮತ್ತು ಕಲಾತ್ಮಕತೆ ಮತ್ತು ಹನುಮಂತನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡುವ ಕಾರಣಕ್ಕಾಗಿ ನಾರಾಯಣ ಗಾಂವಕಾರರು ಬಡಗುತಿಟ್ಟು ಯಕ್ಷಗಾನ ಪ್ರಪಂಚದ ಸಾರ್ವಕಾಲಿಕ ಶ್ರೇಷ್ಟ ಹನುಮಂತನ ಪಾತ್ರದಾರಿಗಳ ಸಾಲಿನಲ್ಲಿ ನಿಲ್ಲುವವರು. ಯಕ್ಷರಂಗದ ದಂತಕತೆ ಎಕ್ಟರ್ ಜೋಷಿಯವರ ಭೂಕೈಲಾಸದಲ್ಲಿ ರಾವಣನ ಪಾತ್ರ ಮಾಡುತ್ತಿದ್ದರೆ ನಾರಾಯಣ ಗಾಂವಕಾರರದು ಈಶ್ವರನ ಪಾತ್ರ. ಈ ಜೋಡಿಯ ಜನಪ್ರೀಯತೆ ಅವರನ್ನು ಗೋವಾ ಮತ್ತು ಮುಂಬೈಗಳಲ್ಲಿಯೂ ಪ್ರದರ್ಶನ ನೀಡುವ ಅವಕಾಶವನ್ನು ನೀಡಿತು. ಕೆರೆಮನೆ ಮಹಾಬಲ ಹೆಗೆಡೆಯವರ ಸುದನ್ವ ಪಾತ್ರಕ್ಕೆ ಎದುರಾಗಿ ಅರ್ಜುನನಾಗಿ, ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಭಸ್ಮಾಸುರನ ಪಾತ್ರಕ್ಕೆ ಎದುರಾಗಿ ರಾವಣನಾಗಿ ಹೀಗೆ ಆಗಿನ ಪ್ರಸಿದ್ಧ ಕಲಾವಿದರೊಂದಿಗೆ ಪಾತ್ರ ಮಾಡಿ ಮೆಚ್ಚುಗೆ ಗಳಿಸಿದವರು.
ಕಚ-ದೇವಯಾನಿ ಪ್ರಸಂಗದಲ್ಲಿ ನಾರಾಯಣ ಗಾಂವಕಾರರು ಶುಕ್ರಾಚಾರ್ಯನಾಗಿ ಕಚನಾಗಿ ಧಾರೇಶ್ವರ ಮಾಸ್ತರರು ಮತ್ತು ದೇವಯಾನಿಯಾಗಿ ಪಾಲನಕರ ಮಾಸ್ತರರು ಇರಲೇಬೇಕೆಂಬ ಸಹೃದಯರ ಒತ್ತಾಯ ಆ ಕಾಲದ ಅಲಿಖಿತ ನಿಯಮವಾಗಿ ಚಾಲ್ತಿಯಲ್ಲಿದ್ದುದು ಅವರ ಜನಪ್ರಿಯತೆಗೆ ಸಾಕ್ಷಿ. ಅನಾರೋಗ್ಯದಿಂದಾಗಿ ತಮ್ಮ ಐವತ್ತರ ಹರೆಯದಲ್ಲೇ ವೇಷ ಹಚ್ಚುವುದನ್ನು ನಿಲ್ಲಿಸಿ ತಾಳಮದ್ದಳೆಯಲ್ಲಿ ತಮ್ಮ ವ್ಯವಸಾಯವನ್ನು ಮುಂದುವರಿಸಿದರು. ಅರ್ಥಗಾರಿಕೆಯಲ್ಲೂ ಇವರು ತಮ್ಮ ಛಾಪನ್ನು ಮೂಡಿಸಿದರು. ಕರ್ಕಿಯ ಹಾಸ್ಯಗಾರ ಮೇಳ, ಹಳದೀಪುರದ ಜೋಗನಕಟ್ಟೆ ಮೇಳ, ಕುಮಟಾದ ಶ್ರೀ ರಾಮನಾಥ ಯಕ್ಷಗಾನ ಮಂಡಳಿ, ಹೆಗಡೆಯ ಶ್ರೀ ಶಾಂತಿಕಾ ಪರಮೇಶ್ವರಿ ಯಕ್ಷಗಾನ ಮಂಡಳಿ ಮುಂತಾದ ಬಯಲಾಟದ ಮೇಳಗಳಲ್ಲಿ ಪಾತ್ರವಹಿಸಿ ಜಿಲ್ಲೆಯ ಹಿರಿ-ಕಿರಿಯ ಯಕ್ಷಗಾನ ಕಲಾವಿದರೊಂದಿಗೆ ಒಡನಾಟಹೊಂದಿದವರು. ಮೂರೂರು ದೇವರ ಹೆಗಡೆ, ಎಕ್ಟರ್ ಜೋಷಿ ಮತ್ತು ವೀರಭದ್ರನಾಯ್ಕರ ಪಾತ್ರಗಳಿಂದ ಪ್ರಭಾವಿತರಾಗಿದ್ದ ನಾರಾಯಣ ಗಾಂವಕಾರರು ಕಡತೋಕ ಮಂಜು ಭಾಗವತರು, ಕೊಪ್ಪಲಮಕ್ಕಿ ಭಾಗವತರು, ಬಾಡದ ಶಿವರಾಮ ಹೆಗಡೆಯವರಂತಹ ಶ್ರೇಷ್ಟರ ತಾಳಕ್ಕೆ ಹೆಜ್ಜೆಹಾಕಿದವರು. ದೇವರು ಹೆಗಡೆಯವರು, ಕೊಂಡದಕುಳಿ ರಾಮ ಹೆಗಡೆ (ಸೀನಿಯರ್) ಅಗ್ರಗೋಣ ಎಂ. ಎಂ ನಾಯಕ, ಹಿರೇಗುತ್ತಿ ವೆಂಕಟ್ರಮಣ ನಾಯಕರಂತಹ ಮೇರುಕಲಾವಿದರ ಮಾರ್ಗದರ್ಶನ ಪಡೆದು ತನ್ನದೇ ದಾರಿಯನ್ನು ಗುರುತಿಸಿಕೊಂಡವರು. ಕುಮಟಾ ಉತ್ತಮ ನಾಯ್ಕ್, ಕುಮಟಾ ಗೋವಿಂದ ನಾಯ್ಕ್ , ಗೋಕರ್ಣ ಹೊನ್ನಪ್ಪ ಗುನಗಾ , ಶಿವಾನಂದ ಭಂಡಾರಿ, ಅನಂತ ಹೆಗಡೆ ಹಾವಗೋಡಿ ಮುಂತಾದವರ ಜೊತೆಯಲ್ಲಿಯೇ ಹವ್ಯಾಸಿ ಮೇಳವಾಗಿ ಯಕ್ಷಗಾನವನ್ನು ಹಳ್ಳಿಗಳಲ್ಲಿ ಜೀವಂತವಾಗಿರಿಸಿದವರು. ನಾರಾಯಣ ಗಾಂವಕಾರರು ಯಾರನ್ನೂ ಅನುಸರಿಸಿದವರಲ್ಲ; ಅನುಕರಿಸಿದವರಲ್ಲ.
ಯಕ್ಷಗಾನದ ನೈಜ ಪ್ರದರ್ಶನ ನೀಡಿದವರಲ್ಲಿ ಇವರೊಬ್ಬರು. ತಮ್ಮ ಪಾತ್ರಗಳ ಮೂಲಕ ಪ್ರೇಕ್ಷಕರಲ್ಲಿ ನಾರಾಯಣ ಗಾಂವಕಾರರು ಹೊಮ್ಮಿಸಿದ ರಸಾನುಭವ ಅನಿರ್ವಚನೀಯ.