Sunday 10 July 2022

ಮನದ ಸೂತಕವನ್ನು ಹೋಗಲಾಡಿಸೋಣ.


ಹೆಣ್ಣು ಹೆಣ್ಣಾದೊಡೆ ಗಂಡಿನ ಸೂತಕ

ಗಂಡು ಗಂಡಾದೊಡೆ ಹೆಣ್ಣಿನ ಸೂತಕ

ಮನದ ಸೂತಕ ಹಿಂಗಿದೊಡೆ

ತನುವಿನ ಸೂತಕಕ್ಕೆ ತೆರಹುಂಟೇ ಅಯ್ಯ?

ಮೊದಲಿಲ್ಲದ ಸೂತಕಕ್ಕೆ ಮರುಳಾಯಿತ್ತು ಜಗವೆಲ್ಲ

ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನೆಂಬ

ಗುರುವಂಗೆ ಜಗವೆಲ್ಲ ಹೆಣ್ಣು ನೋಡಾ!

-ಅಕ್ಕಮಹಾದೇವಿ












ಹದಿವಯಸ್ಸಿನ ಹುಡುಗಿಯರಿಗೆ ಮುಟ್ಟಿನ ಕಪ್ಪುಗಳನ್ನು ನೀಡುವ ಕಾರ್ಯಕ್ರಮಕ್ಕೆ ಸರಕಾರ ಚಾಲನೆ ನೀಡಿದೆ. ಮೊದಲ ಹಂತದಲ್ಲಿ ಚಾಮರಾಜ ನಗರ ಮತ್ತು ದಕ್ಷಿಣ ಕನ್ನಡದ ಹುಡುಗಿಯರಿಗೆ ಮುಟ್ಟಿನ ಕಪ್ಪುಗಳು ದೊರೆಯುತ್ತವೆ . ಮೈತ್ರಿ ಎಂಬ ಹೆಸರಿನ ಈ ಕಪ್ಪುಗಳು ಪ್ರೌಢಾವಸ್ಥೆಗೆ ಕಾಲಿಡುತ್ತಿರುವ ರಾಜ್ಯದ ಎಲ್ಲ ಕಿಶೋರಿಯರಿಗೂ ತಲುಪಲಿದೆ. ಈಗ ಮುಟ್ಟಿನ ಕುರಿತು ಮಾತನಾಡಬೇಕಿದೆ.  ಮುಟ್ಟಿನ ಬಗ್ಗೆ ಮಾತನಾಡಲು ಜನರು ಹಿಂಜರಿಯುವ ಕಾಲದಲ್ಲಿ  ಈ ಕುರಿತು ಮತ್ತೆ ಮತ್ತೆ ಮಾತನಾಡುವುದೇ ಮುಟ್ಟಿಗಿರುವ ಸಾಮಾಜಿಕ ಸಂಕೋಚವನ್ನು ಪರಿಹರಿಸುವ ದಾರಿ.

ಕರಾವಳಿ ಮುಂಜಾವು ಅಂಕಣ: ಈ ಲೇಖನವನ್ನೂ ಓದಿ: 

 


ಮತ್ತೆ ಬಂದ ಜೇನು ಹುಳುಗಳು 

ಹೊಸ ಜೀವ ಸೃಷ್ಟಿಯೆಂಬುದು ಗಂಡು ಮತ್ತು ಹೆಣ್ಣು‌ ಲಿಂಗಾಣುಗಳ ಸಮಾಗಮದೊಂದಿಗೆ ಆರಂಭವಾಗುತ್ತದೆ. ಪ್ರತಿ ಹೆಣ್ಣು ಮಗುವೂ ಹುಟ್ಟುತ್ತಲೆ ನಿರ್ದಿಷ್ಟ ಸಂಖ್ಯೆಯ ಹೆಣ್ಣು ಲಿಂಗಾಣುಗಳನ್ನು ಅಥವಾ ಅಂಡಗಳನ್ನು ಹೊತ್ತೇ ಹುಟ್ಟಿರುತ್ತಾಳೆ. ಹೆಣ್ಣು ಮಗು ಹನ್ನೆರಡೋ ಹದಿಮೂರೋ ವಯಸ್ಸು ತಲುಪುತ್ತಲೆ ಆಕೆಯ ದೇಹದಲ್ಲಿ ಬಿಡುಗಡೆಯಾಗುವ ಕೆಲವು ರಾಸಾಯನಿಕ ಪ್ರಚೋದಕಗಳು  ಆಕೆಯ ಒಂದು ಜೊತೆ ಅಂಡಾಶಯಳಲ್ಲಿ ಯಾವುದೋ ಒಂದರಿಂದ ಒಂದು ಅಂಡವನ್ನು ಬಿಡುಗೊಡೆಗೊಳಿಸುತ್ತದೆ. ಆ ಒಂದು ಅಂಡ ಅಲ್ಲಿಂದ ಪ್ರಯಾಣಮಾಡಿ ಗರ್ಭಾಶಯವನ್ನು ತಲುಪಬೇಕು. ಒಂದೊಮ್ಮೆ ಗಂಡಿನೊಂದಿಗೆ ಲೈಂಗಿಕ ಸಂಪರ್ಕ ಉಂಟಾದಲ್ಲಿ ಗರ್ಭಾಶಯವನ್ನು ಪ್ರವೇಶಿಸಲಿರುವ ಗಂಡು ಲಿಂಗಾಣುಗಗಳಲ್ಲಿ ಒಂದರೊಡನೆ  ಜೊತೆಗೂಡಿ ಜೀವಸೃಷ್ಟಿ ಶುರುವಾಗಬೇಕಲ್ಲ? ಇದಕ್ಕೆಲ್ಲ ಸ್ವಲ್ಪ ಸಿದ್ಧತೆ ಬೇಕು. ಗಂಡು ಮತ್ತು ಹೆಣ್ಣು ಲಿಂಗಾಣುಗಳ ಸಮಾಗಮದ ನಂತರ ಫಲಿತಗೊಳ್ಳುವ ಜೀವಾಂಕುರವು ನೆಲೆನಿಲ್ಲಲು, ಪೋಷಣೆಯನ್ನು ಪಡೆಯಲು ಗರ್ಭಾಶಯದ ಒಳಗೋಡೆಯ ಮೇಲೆ ಸಾಕಷ್ಟು ಸಿದ್ಧತೆಗಳು ನಡೆಯಬೇಕು. ಈ ಸಿದ್ಧತೆಯಲ್ಲಿ ಗರ್ಭಾಶಯದ ಒಳಗೋಡೆಯ ಮೇಲೆ ನವಿರಾದ ರಕ್ತನಾಳಗಳು ಬೆಳೆದು ಪೋಷಣೆಯನ್ನು ಒದಗಿಸುವ ಮೆತ್ತನೆಯ ಹಾಸಿಗೆಯೊಂದನ್ನು ಸೃಷ್ಟಿಸುತ್ತವೆ. ಸಿದ್ಧತೆಗೆ ನಾಲ್ಕು ವಾರಗಳೇ ಬೇಕಾಗುತ್ತವೆ.. ಆದರೆ, ಇಷ್ಟಕ್ಕೆ ಗಂಡು ಲಿಂಗಾಣುವು ಲೈಂಗಿಕ ಕ್ರಿಯೆಯ ಮೂಲಕ ಹೆಣ್ಣು ದೇಹವನ್ನು ಪ್ರವೇಶಿಸಲೇ ಬೇಕೆಂದಿಲ್ಲವಲ್ಲ? ಲೈಂಗಿಕ  ಸಮಾಗಮವನ್ನು ಗಂಡು ಮತ್ತು ಹೆಣ್ಣುಗಳು ನಿರ್ಧರಿಸಬೇಕು. ಹಲವು ಸಾಮಾಜಿಕ ನಿಭಂದನೆಗಳು ಈ ನಿರ್ಧಾರದ ಮೇಲೆ ಪ್ರಭಾವ ಬೀರುತ್ತವೆ. ಅಂಡವು ಫಲಿತಗೊಳ್ಳದಾಗ ಗರ್ಭಕೋಶದಲ್ಲಾದ ಈ ಎಲ್ಲ ಸಿದ್ಧತೆಗಳು ವ್ಯರ್ಥವಾಗುತ್ತವೆ. ಆಗ ಗರ್ಭಕೋಶದ ಹಾಸಿಗೆ ಕಳಚಿಕೊಂಡು ಮುಟ್ಟಿನ ಸ್ರಾವವಾಗಿ ಹೊರಹೋಗುತ್ತದೆ.ಈ ಕ್ರಿಯೆ ನಾಲ್ಕೈದು ವಾರಗಳಿಗೊಮ್ಮೆ ಪುನರಾವರ್ತನೆ ಆಗುತ್ತಲೇ ಇರುತ್ತದೆ. ಋತುಸ್ರಾವವು ನಾಲ್ಕು-ಐದು ದಿನಗಳವರೆಗೂ ಉಂಟಾಗುತ್ತದೆ. ಹೆಣ್ಣು ಋತುಮತಿಯಾಗುವುದು ಒಂದು ಜೈವಿಕ ಕ್ರಿಯೆ. ಜೀವಸೃಷ್ಟಿಯ ಉದ್ಧೇಶವೂ ದೈವಿಕ.

ಜೀವಾಂಕುರವಾಗುವುದು  ಗರ್ಭಾಶಯದಲ್ಲಿ. ಆದರೆ, ಗರ್ಭ ಧರಿಸುವ ಹೆಣ್ಣು ಗರ್ಭಗುಡಿಗೆ ಹೋಗುವಂತಿಲ್ಲ. ಮುಟ್ಟಾಗಿರಲಿ, ಇಲ್ಲದಿರಲಿ, ಧರ್ಮ ಯಾವುದೇ ಇರಲಿ, ಗರ್ಭಗುಡಿಗೆ  ಹೆಣ್ಣಿನ ಪ್ರವೇಶ ನಿಷಿದ್ಧ. ಶಬರಿಮಲೆಯ ಅಯ್ಯಪ್ಪನ ದೇವಾಲಯ ಮಂಡಲಿಯ ಅಧ್ಯಕ್ಷರು ‘ಮಹಿಳೆಯರು ಮುಟ್ಟಾಗಿದ್ದಾರಾ ಎಂಬುದನ್ನು ಪತ್ತೆಹಚ್ಚುವ ಮೆಷಿನ್ ಬರಲಿ, ಆಮೇಲೆ ಮಹಿಳೆಯರನ್ನು ದೇವಾಲಯದೊಳಗೆ ಬಿಡುವ ಬಗ್ಗೆ ಯೋಚಿಸೋಣ’ ಎಂಬರ್ಥದ ಮಾತುಗಳನ್ನು ಆಡಿದ್ದರು. ಇದು ಧರ್ಮದ ಮಾತೂ ಅಲ್ಲ. ಸಮಾನತೆಯನ್ನು ಖಾತರಿಪಡಿಸುವ ನಮ್ಮ ಸಂವಿಧಾನದ ಮಾತೂ ಅಲ್ಲ. ಇದು ಮುಟ್ಟಿನ ಬಗ್ಗೆ ಇನ್ನೂ ನಮ್ಮ ಸಮಾಜದಲ್ಲಿ ನೆಲೆಯೂರಿರುವ ಅಜ್ಞಾನದ ಮಾತು.

ಮುಟ್ಟಿನ ಬಗ್ಗೆ ಹೆಣ್ಣು ಮಕ್ಕಳಿಗೆ ತಿಳುವಳಿಕೆ ನೀಡುವುದು ಎಷ್ಟು ಅವಶ್ಯಕವೋ ಗಂಡು ಮಕ್ಕಳಿಗೆ ತಿಳಿಸುವುದೂ ಅಷ್ಟೇ ಅವಶ್ಯಕ. ಇತ್ತೀಚೆಗೆ, ಒಂದು ಸಂಸ್ಥೆಯವರು ಉಚಿತವಾಗಿ ಸ್ಯಾನಿಟರಿ ಪ್ಯಾಡು ನೀಡಲು ಶಾಲೆಗೆ ಬಂದಿದ್ದರು. ಅದನ್ನು ಹಂಚುವಾಗ ಗಂಡುಮಕ್ಕಳು ಹೊರಹೋಗಲಿ ಎಂದು ಸೂಚಿಸಿದರು. “ ಬೇಡ, ಅವರೂ ಇರಲಿ” ಎಂದೆ. ಗಂಡು ಮಕ್ಕಳಿಗೂ ಮುಟ್ಟಿನ ತಿಳುವಳಿಕೆ ದೊರೆಯಿತು. ಹೆಣ್ಣು ಮಕ್ಕಳ ಸಂಕೋಚವೂ ಸಾಕಷ್ಟು ಕಡಿಮೆಯಾಯಿತು. ಕಾರ್ಯಕ್ರಮದ ಕೊನೆಯಲ್ಲಿ, ಸ್ಯಾನಿಟರಿ ಪ್ಯಾಡು ಹಿಡಿದುಕೊಂಡ ಹುಡುಗಿಯರ ಫೋಟೋ ಬೇಕೆಂದರು. “ಈಗಲಾದರೂ, ಹುಡುಗರು ಹೊರಹೋಗಲಿ ಅಲ್ವೇ” ಎಂದು ನನ್ನಲ್ಲಿ ಕೇಳಿದರು. ಆಗಲೂ ಬೇಡ ಎಂದೆ. ಹುಡುಗಿಯರು ಸ್ಯಾನಿಟರಿ ಪ್ಯಾಡ್‌ ಹಿಡಿದುಕೊಂಡು  ಅವರ ಕಾರ್ಯಕ್ರಮದಲ್ಲಿ ರೂಪದರ್ಶಿಗಳಾದರು. ಹುಡುಗರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.” ಎಷ್ಟು ಹುಡುಗರು ನಿಮ್ಮ ಅಮ್ಮನಿಗೋ ಅಕ್ಕನಿಗೋ ಅಂಗಡಿಯಿಂದ ಸ್ಯಾನಿಟರಿ ಪ್ಯಾಡು ತಂದುಕೊಟ್ಟಿದ್ದೀರಿ?” ಎಂದು ಪ್ರಶ್ನಿಸಿದೆ. ಕೆಲವರಷ್ಟೇ ಕೈ ಎತ್ತಿದರು. ಕೈ ಎತ್ತದಿದ್ದ ಒಬ್ಬ ಹುಡುಗನನ್ನು ಕೇಳಿದೆ., “ಕೇಳಿದ್ದರೆ ತಂದುಕೊಡುತ್ತಿದ್ದೆ” ಎಂದನು.. ಕ್ಲಾಸಿನಲ್ಲಿದ್ದ ಅವಳಿ ಮಕ್ಕಳಲ್ಲಿ ಒಬ್ಬ ಹುಡುಗ ಕೈಯೆತ್ತಿರಲಿಲ್ಲ. ಅವಳಿ  ಹುಡುಗಿ ಮಧ್ಯಪ್ರವೇಶಿಸಿ “ ನನಗೆ ಪ್ಯಾಡು ತಂದುಕೊಡುವವ ಅವನೇ, ಆದರೂ ಕೈ ಎತ್ತಿಲ್ಲ” ಎಂದು ದೂರಿದಳು. ಹೊಸ ತಲೆಮಾರು ಬದಲಾಗುತ್ತಿದೆ. ಶಬರಿಮಲೈ ಘಟನೆಯ ನಂತರ ಪಾಟಿಯಾಲದ ಸರ್ಕಾರಿ ಕಾಲೇಜಿನಲ್ಲಿ ಪದವಿ ಓದುತ್ತಿದ್ದ ನಿಖಿತಾ ಅಜಾದ್‌ ಎಂಬ ಯುವತಿ #Happy_to_Bleed ಎಂಬ ಹ್ಯಾಷ್‌ ಟ್ಯಾಗಿನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮುಟ್ಟಿನ ಕುರಿತು ಮಾತನಾಡಲು ಹೆಣ್ಣುಮಕ್ಕಳಿಗೆ ಕರೆನೀಡಿದರು. ಇದೊಂದು ಆಂದೋಲನವಾಗಿ ರೂಪುಗೊಂಡಿತು. ಯುವತಿಯರು ತಮ್ಮ ಅನುಭವ ಮತ್ತು ಆಶಯಗಳನ್ನು ನಿರ್ಬಿಡೆಯಾಗಿ ಹಂಚಿಕೊಂಡರು. ಈ ಆಂದೋಲನವು ಗಂಡಾಳಿಕೆಯ ಜಗತ್ತನ್ನು ಹೆಣ್ಣಿನ ಕಣ್ಣುಗಳಿಂದ ನೋಡುವ ದೃಷ್ಟಿಯನ್ನು ಒದಗಿಸಿತು.

ಮುಟ್ಟಿನ ಸ್ರಾವದಲ್ಲಿರುವುದು ದೇಹದಲ್ಲಿ ಹರಿಯುವ  ರಕ್ತವೇ. ಜೊತೆಗೆ, ಇತರ ಅಂಗಾಂಶಗಳು ಇರುತ್ತವೆ ಹೊರಗಿನ. ಆಮ್ಲಜನಕದೊಡನೆ ಸಂಯೋಜನೆಗೊಂಡು ಸ್ರಾವದ ಬಣ್ಣವು ಕಂದು-ಕೆಂಪು ಬಣ್ಣಕ್ಕೆ ತಿರುಗಿರುತ್ತದೆ. ಅದರಲ್ಲಿ ಮಲಿನವಾದದ್ದು ಯಾವುದೂ ಇಲ್ಲ. ಮಲ ಮೂತ್ರ ವಿಸರ್ಜನೆಗಳೂ ಮಲಿನವಲ್ಲ. ಜೈವಿಕ ಕ್ರಿಯೆಗಳಷ್ಟೆ. ಮುಟ್ಟಿನ ಸಮಯದಲ್ಲಿ ಸ್ನಾನ ಮಾಡಬಾರದೆಂಬ ಕಟ್ಟಳೆಯೂ ವೈಜ್ಞಾನಿಕವಲ್ಲ. ಬಿಸಿನೀರು ಸ್ನಾನವು ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಮುಟ್ಟಿನ ನೋವನ್ನು ಕಡಿಮೆ ಮಾಡುತ್ತದೆ. ಮುಟ್ಟಿನ ಸಮಯದಲ್ಲಿ ಹೆಣ್ಣು ಮಕ್ಕಳು ಹೊರಗಿರುವುದನ್ನು ಅವರಿಗೆ ನೀಡಿರುವ ವಿಶ್ರಾಂತಿಯೆಂದು ಕೆಲವರು ಸಮರ್ಥಿಸಿಕೊಳ್ಳುತ್ತಾರೆ. ಆದರೆ, ದೈಹಿಕ ಚಟುವಟಿಕೆಗಳು ಸೆರಟೋನಿನ್‌ ಎಂಬ ಚೋದಕ ದೃವ್ಯದ ಸೃವಿಕೆಗೆ ಕಾರಣವಾಗುತ್ತವೆ. ಈ ದೃವ್ಯವು ದೇಹದಲ್ಲಿ  ಹರಿದಾಡಿ ಖುಷಿಗೆ ಕಾರಣವಾಗುತ್ತದೆ. ನಿದ್ದೆ, ಜೀರ್ಣಕ್ರೀಯೆಗಳು ಸುಲಲಿತಗೊಳ್ಳುತ್ತವೆ.

ಮುಟ್ಟು, ಮುಟ್ಟಿನ ನೋವು, ಮುಟ್ಟಿನ ಕುರಿತಾದ ತಪ್ಪು ಕಲ್ಪನೆಗಳಷ್ಟೇ ಹೆಣ್ಣನ್ನು ಪೀಡಿಸುವುದಲ್ಲ, ಮುಟ್ಟನ್ನು ನಿರ್ವಹಿಸಲು ಬಳಸುವ ಸ್ಯಾನಟರಿ ಪ್ಯಾಡುಗಳನ್ನು ನಿರ್ವಹಿಸುವುದೂ  ಸವಾಲೇ ಸರಿ. ಮುಟ್ಟಿನ ಕಪ್ಪುಗಳು  ಹೆಣ್ಣುಮಕ್ಕಳನ್ನು ಪ್ಯಾಡುಗಳ ರಗಳೆಯಿಂದ ಪಾರುಮಾಡಬಲ್ಲದು. ಸಿಲಿಕೋನಿನಿಂದ ತಯಾರಿಸಿದ ಮುಟ್ಟಿನ ಕಪ್ಪುಗಳನ್ನು ಮರುಬಳಕೆ ಮಾಡಬಹುದು. ಈ ಕಪ್ಪು ಋತುಸ್ರಾವವನ್ನು ಹೀರುವುದಿಲ್ಲ;  ಅದನ್ನು ಸಂಗ್ರಹಿಸುತ್ತದೆ. ಸೂಕ್ತ ಸ್ವಚ್ಛತಾ ವಿಧಾನವನ್ನು ಬಳಸಿ ಕಪ್ಪನ್ನು ಮತ್ತೆ ಮತ್ತೆ ಬಳಸಬಹುದು. ಪ್ಯಾಡುಗಳಲ್ಲಿ ಪ್ಲಾಸ್ಟಿಕ್‌ ಇರುವುದರಿಂದ ಅವು ನೂರಾರು ವರ್ಷಗಳ ವರೆಗೆ ಕೊಳೆಯದೆ ಉಳಿಯುತ್ತವೆ. ಮುಟ್ಟಿನ ಕಪ್ಪುಗಳು ಮಹಿಳಾಸ್ನೇಹಿ ಅಷ್ಟೇ ಅಲ್ಲ, ಪರಿಸರ ಸ್ನೇಹಿ ಕೂಡಾ..

ಮುಟ್ಟಿನ ಕಪ್ಪುಗಳು ಹೊಸದಾದರೂ ಅವುಗಳನ್ನು ನಿರ್ವಹಿಸುವ ವಿಧಾನವನ್ನು ಹೆಣ್ಣುಮಕ್ಕಳು ಬೇಗನೆ ಕಲಿಯಬಲ್ಲರು. ಹಳೆಯ ನಂಬಿಕೆಗಳನ್ನು ನಿರ್ವಹಿಸುವುದು ಈಗಲೂ ಸವಾಲೇ!

 ಕರಾವಳಿ ಮುಂಜಾವು ಅಂಕಣ

 


No comments: