Saturday 19 January 2013

ನೀಲಿ ಶಾಯಿಯ ಕಲೆ *ಉದಯ ಗಾಂವಕಾರ


ನೀಲಿ ಶಾಯಿಯ ಕಲೆ




           










             ಶೆರೊನ್ ಹೊಟೆಲಿನ ಎರಡನೇ ಮಹಡಿಯಲ್ಲಿರುವ ರೂಮ್ ನಂಬರ್ 217 ರ ಒಳಗಿಂದ ಕೇಳಿಬರುತ್ತಿರುವ ಅಳುವಿನ ಸದ್ದು ಗಂಡಸಿನದೇ ಎಂದು ತೀರ್ಮಾನಿಸಲು ರೂಮ್ ಬಾಯ್ ರಾಬರ್ಟ್ ಮೆಂಡೋನ್ಸಾನಿಗೆ ಕಷ್ಟವಾಗಲಿಲ್ಲ. ಮಟ-ಮಟ ಮದ್ಯಾನ್ಹವಾದ್ದರಿಂದ ರಸ್ತೆಯಲ್ಲಿ ಹೆಚ್ಚು ಜನಸಂಚಾರವೂ ಇರಲಿಲ್ಲ. ಪಕ್ಕದ ಬಂಟರ ಯಾನೆ ನಾಡವರ ಸಂಕೀರ್ಣದಲ್ಲೂ ಮದುವೆಯ ಗೌಜು ಗದ್ದಲವಿರಲಿಲ್ಲ. ಈ ಎಲ್ಲ ಕಾರಣಗಳೊಂದಿಗೆ 217 ನೇ ನಂಬರಿನ ಕೋಣೆ ತೆರೆದೇ ಇರುವ ಕಾರಣವೂ ಸೇರಿಕೊಂಡದ್ದರಿಂದ ಮಧ್ಯಾನ್ಹದ ಸಣ್ಣ ತೂಕಡಿಕೆಯನ್ನು ಸುಖಿಸುತ್ತಿದ್ದ ರಾಬರ್ಟ್ ಮೆಂಡೊನ್ಸಾನನ್ನು ಅಳುವಿನ ಸದ್ದು ಎಚ್ಚರಿಸಿತು.ಕೆಲ ಸೆಕೆಂಡುಗಳವರೆಗೂ ಅಳುವಿನ ಸದ್ದು ತನ್ನ ತೂಕಡಿಕೆಯನ್ನು ಸಮೃದ್ಧಗೊಳಿಸುತ್ತಿರುವ ಕಿರುಗನಸಿನ ಭಾಗವೆಂದೇ ಮೆಂಡೋನ್ಸಾ ಭಾವಿಸಿದ್ದ.ಆದರೆ,ಸದ್ದು ಇನ್ನಷ್ಟು ಗಟ್ಟಿಯಾಗಿ ಕನಸಿನ ಮೇರೆಗಳನ್ನು ಕತ್ತರಿಸಿ ಅವನ ಮೂಗು ಹಿಡಿದು ಎಚ್ಚರಿಸಿತು.
      ಗಂಡಸರು ಬೇರೆಯವರನ್ನು ಅಳುಸುವುದಷ್ಟೇ ಅಲ್ಲ,ಸ್ವತಃ ಅಳಬಲ್ಲರು ಎಂಬುದು ಮೇಂಡೋನ್ಸಾನಿಗೂ ಗೊತ್ತು.ಹೊಟೇಲು ರೂಮಿಗೆ ಇಸ್ಪೀಟು ಆಡಲೆಂದು ಬರುವ ಕೆಲ ಗಂಡಸರು ಸಾರಾಯಿಯ ನಶೆಯಲ್ಲಿ ತಮ್ಮ ಭಗ್ನ ಪ್ರೇಮವನ್ನೋ, ಹೆಂಡತಿಯ ಹಠಮಾರಿತನವನ್ನೋ ಸ್ನೇಹಿತರೊಡನೆ ಹೇಳಿಕೊಳ್ಳುತ್ತಾ ಅಳುವುದನ್ನು ಆತ ಕೇಳಿದ್ದ. ಆದರೆ,ಇದೆಲ್ಲ ಇಸ್ಪೀಟಿನಲ್ಲಿ ದುಡ್ಡು ಕಳೆದುಕೊಂಡ ದುಃಖವನ್ನು ವ್ಯಕ್ತಪಡಿಸುವ ಪಾನಮತ್ತ ರೂಪವೆಂಬುದು ಅವನಿಗೆ ಗೊತ್ತಿತ್ತು. ಹಾಗೆ ಕೇಳಿಬರುವ ಅಳುವಿನ ಜೊತೆ ಅಮಲಿನ ಮಾತುಗಳು,ತೊದಲಿಕೆಗಳು ಸಮ್ಮಿಶ್ರಣಗೊಂಡು ಗದ್ದಲವುಂಟಾಗುವುದು ಮಾಮೂಲು. ಆದರೆ,ಈ ಬಾರಿ ರೂಮಿನಿಂದ ಕೇಳಿಬರುತ್ತಿರುವ ಅಳು ಹಾಗಲ್ಲ:ಈ ಅಳು ಕುಡಿತದ ಉಪಉತ್ಪನ್ನದಂತೆ ಕೇಳಿಬರುತ್ತಿಲ್ಲ.ಅಳು ಸ್ಪಷ್ಟವಾಗಿತ್ತು.ಭಾಷೆಯ ಅತ್ಯಂತ ಶಕ್ತ ಬಳಕೆ ಅಳುವೇ ಇರಬೇಕು ಎಂದು ರಾಬರ್ಟ್ ಮೆಂಡೋನ್ಸಾ ಮನಸ್ಸಿನಲ್ಲೆ ಅಂದುಕೊಳ್ಳುವಷ್ಟು ಸುಸ್ಪಷ್ಟವಾಗಿತ್ತು. ನಗುವಿನಂತೆ ಅಳು ಕೂಡಾ ಅನೇಕ ಬಾರಿ ನಮ್ಮ ಮಾತಿನ ಹಾಗೆ ಅಪ್ರಾಮಾಣಿಕವೂ ಅಸ್ಪಷ್ಟವೂ ಆಗಿರಲೂ ಸಾಧ್ಯ.ಈಗ ಕೇಳಿಬರುತ್ತಿರುವ ಅಳು ನಾಟಕದ್ದಲ್ಲ ಅಂತ ರಾಬರ್ಟ್ ಮೆಂಡೋನ್ಸಾನಿಗೆ ಅನ್ನಿಸಿರಬೇಕು. ಆತ ರೂಮ್ ನಂಬರ್ 217ರ ದಿಕ್ಕು ಹಿಡಿದು ಹೊರಟ.
====
     ಮೆಂಡೋನ್ಸಾ ಊಹಿಸಿದಂತೆ,ರೂಮ್ ನಂಬರ್ 217 ತೆರೆದೇ ಇತ್ತು.ಒಳಗೆ ಇಬ್ಬರು ವ್ಯಕ್ತಿಗಳಿದ್ದರು.ಒಬ್ಬರನ್ನೊಬ್ಬರು ಅಪ್ಪಿಕೊಂಡು ಅಳುತ್ತಿದ್ದರು.ಅವರಲ್ಲಿ ಒಬ್ಬ ವ್ಯಕ್ತಿ ಎರಡು ದಿನಗಳಿಂದ ಆ ಹೊಟೆಲಿನ ಅತಿಥಿಯಾಗಿರುವ ಸುಬ್ಬು ಕಾಂಚನ.ಮುಂಬೈನಲ್ಲಿ ಒಂದು ಜ್ಯೂಸ್ ಅಂಗಡಿ ಇಟ್ಟುಕೊಂಡು ಸಧ್ಯಕ್ಕೆ ಅ ಬೆರಗಿನ ನಗರದ ಖಾಯಂ ವಾಸಿಯಾಗಿರುವಾತ.ಇನ್ನೊಬ್ಬ ರವಿಶಂಕರ-ಸುಬ್ಬು ಕಾಂಚನನ ಬಾಲ್ಯದ ಗೆಳೆಯ. ಈಗ ಜಿಲ್ಲಾ ಪಂಚಾಯಿತಿಯ ಅಕೌಂಟ್ಸ್ ವಿಭಾಗದಲ್ಲಿ ಅಧಿಕಾರಿಯಾಗಿದ್ದಾನೆ. ಉಡುಪಿಯ ಅಲೆವೂರಿನಲ್ಲಿ ಸ್ವಂತದ ಮನೆ ಇದೆ. ಹೆಂಡತಿ ಎಲ್.ಐ.ಸಿ ಯಲ್ಲಿ ಉದ್ಯೋಗಿ.ಇಬ್ಬರು ಮಕ್ಕಳು ಇಂದ್ರಾಳಿಯ ಇಂಗ್ಲೀಷ್ ಮಾಧ್ಯಮದ ಶಾಲೆಯಲ್ಲಿ ಓದುತ್ತಿದ್ದಾರೆ.
   ಎಂಟನೆ ತರಗತಿಯಲ್ಲಿರುವಾಗ ಭಕ್ತ ಮಾರ್ಕಂಡೇಯ ಸಿನೇಮಾ ನೋಡುತ್ತಾ ರವಿಶಂಕರ ಅತ್ತ್ತಿದ್ದನ್ನು ಕಂಡು ಮನೆಯವರೆಲ್ಲ ನಕ್ಕಿದ್ದರು.ಆ ನಂತರ ರವಿಶಂಕರ ಅತ್ತದ್ದು ಯಾವಾಗ ಎಂದು ಯೋಚಿಸಿದರೆ ನೆನಪಿಸಿಕೊಳ್ಳುವುದು ಕಷ್ಟ. ಸುಬ್ಬು ಕಾಂಚನನಿಗೋ ಅಳುವುದಿದ್ದರೆ ಬೇಕಾದಷ್ಟು ಕಾರಣಗಳಿದ್ದವು.ತಂದೆ ಸತ್ತದ್ದು ಸುಬ್ಬುಕಾಂಚನನಿಗೆ ಯಾವಾಗೆಂಬುದೇ ನೆನಪಿಲ್ಲ.ಅಮ್ಮ ಅದ್ಯ್ಹಾಗೆ ಸಾಕಿದಳು ಎಂಬುದೂ ಸರಿಯಾಗಿ ನೆನಪಿಲ್ಲ.ಬೆಳಿಗ್ಗೆ ಕೆಲಸಕ್ಕೆ ಹೋಗುವ ಅಮ್ಮ ಇಳಿಹೊತ್ತಿನಲ್ಲಿ ಮನೆಗೆ ಬರುವುದು,ಮನೆಗೆ ಬಂದ ಮೇಲೆ ದಡ-ಬಡ ಎಂದು ಮನೆ ಕೆಲಸಗಳನ್ನೆಲ್ಲ ಮುಗಿಸುವುದು,ತಿನಿಸಿಗೆಂದು ಹಠಮಾಡಿದರೆ ಬೆನ್ನಿನ ಮೇಲೆ ಬಡಿಯುವುದು,ಆ ನಂತರ ಮುದ್ದು ಮಾಡಿ ಅಂಗಡಿಗೆ ಸಾಮಾನು ತರಲು ಕಳುಹಿಸಿ ರಾತ್ರಿಯ ಅಡುಗೆಗೆ ಸಿದ್ಧಗೊಳ್ಳುವುದು- ಎಲ್ಲ ಸ್ವಾಭಾವಿಕವೆಂಬಂತೆ ಆಗ ಸುಬ್ಬು ಕಾಂಚನನಿಗೆ ಕಾಣಿಸುತ್ತಿತ್ತು. ಬದುಕು ಕಷ್ಟದ್ದೆಂದು ಅನ್ನಿಸಿರಲೇ ಇಲ್ಲ. ಅಮ್ಮ ಕೊಡುವ ಪೆಟ್ಟಿಗೆ,ಬೇಡಿಕೆ ಈಡೇರಿಕೆಗಾಗಿ ಮಾಡುವ ಹಠಕ್ಕೆ ಕಾಂಚನ ಆಗಾಗ ಅಳುತ್ತಿದ್ದದ್ದು ಬಿಟ್ಟರೆ, ಹತ್ತನೇ ತರಗತಿಗೆ ಬರುವವರೆಗೆ ಸುಬ್ಬುವಿಗೂ ಅಳಲು ಬೇರೆ ಕಾರಣಗಳು ಇರಲಿಲ್ಲ. ಹತ್ತನೇ ತರಗತಿಯಲ್ಲಿರುವಾಗ ಒಂದು ದಿನ ಹೆಡ್ ಮಾಸ್ತರರು ತರಗತಿಗೆ ಬಂದು ನಿನ್ನಮ್ಮಗೆ ಹುಷಾರಿಲ್ಲ,ಮನೆಗೆ ಹೋಗು ಎಂದರು. ಕಾಂಚನ ಮನೆಗೆ ಬಂದಾಗ ಅಮ್ಮ ಜಗುಲಿಯ ಮೇಲೆ ಮಲಗಿದಂತಿದ್ದಳು. ಸುತ್ತಲೂ ಜನ ಸೇರಿದ್ದರು. ಅಮ್ಮ ಸತ್ತಿದ್ದಾಳೆ ಎಂಬುದು ಸುಬ್ಬುವಿಗೆ ತಿಳಿದೇ ಹೋಯ್ತು. ಆಗ ಎದೆ ಖಾಲಿಯಾಗುವಷ್ಟು  ಅತ್ತಿದ್ದ. ಆ ನಂತರವೂ ಅಮ್ಮನ ನೆನಪಾದಾಗ ಸುಬ್ಬು ಅಳುತ್ತಿದ್ದ. ಟಿ.ಬಿ ಖಾಯಿಲೆಯ ಅಮ್ಮ ತನ್ನನ್ನು ಬೆಳೆಸಲು,ಓದಿಸಲು ಪಟ್ಟ ಕಷ್ಟಗಳೆಲ್ಲ ಅರ್ಥವಾದದ್ದು ಅಮ್ಮ ಸತ್ತ ಮೇಲೆಯೇ!. ಹೊಟ್ಟೆ ಪಾಡನ್ನು ಹುಡುಕುತ್ತಾ ಹುಬ್ಬಳ್ಳಿ,ಬೆಳಗಾವಿ,ಪೂಣಾ ಅನಂತರ ಮುಂಬೈಗೆ ತೆರಳಿದ ಸುಬ್ಬು ಕಾಂಚನನಿಗೆ ದಿನವೂ ಅಮ್ಮ ಒಂದಿಲ್ಲೊಂದು ಕಾರಣಕ್ಕಾಗಿ ನೆನಪಾಗುತ್ತಿದ್ದಳು. 
    ಸುಬ್ಬು ಈಗ ಜ್ಯೂಸ್ ಅಂಗಡಿಯ ಮಾಲಿಕ.ಹೆಂಡತಿ,ಇಬ್ಬರು ಮಕ್ಕಳೊಂದಿಗೆ ಸುಖ ಸಂಸಾರ.
                                           ===
 ರವಿಶಂಕರನೆಂಬ ಬ್ರಾಹ್ಮರ ಹುಡುಗ ಸುಬ್ಬುಕಾಂಚನನ ಗೆಳಯನಾದದ್ದು ಕುಂದಾಪುರದ ಬೋರ್ಡ್ ಹೈಸ್ಕೂಲಿನಲ್ಲಿ. ಇಬ್ಬರೂ ಎಂಟನೇ ತರಗತಿಯುಲ್ಲಿ ಜೊತೆ ಸೇರಿದ್ದರು. ಇಬ್ಬರದೂ ಎತ್ತರ ಸುಮಾರಾಗಿ ಒಂದೇ ಇದ್ದುದರಿಂದ ಒಂದೇ ಬೆಂಚಿನಲ್ಲಿ ಸ್ಥಾನ ಪಡೆದಿದ್ದರು. ಕಲಿಯುವುದರಲ್ಲಿ ಸುಬ್ಬು ಕಾಂಚನ ರವಿಶಂಕರನಿಗಿಂತ ಹಿಂದಿರಲಿಲ್ಲ.ಗಣಿತದಲ್ಲಂತೂ ಸುಬ್ಬುವೇ ಯಾವಾಗಲೂ ರವಿಶಂಕರನಿಗಿಂತ ಹೆಚ್ಚು ಅಂಕ ಪಡೆಯುತ್ತಿದ್ದ. ಆಟದಲ್ಲಿಯೂ ಆತನೇ ಮುಂದೆ.ಹೈ ಜಂಪ್ ಮತ್ತು ರನ್ನಿಂಗ್‍ನಲ್ಲಿ ಸುಬ್ಬು ಶಾಲೆಯ ಚಾಂಪಿಯನ್ ಆಗಿದ್ದ.ಸದಾ ಸಿಡುಕುವ ಪಿ.ಟಿ ಮಾಷ್ಟ್ರರಾದ ಗಂಗಯ್ಯ ಗಾಣಿಗರ ಮೆಚ್ಚಿನ ಶಿಷ್ಯನಾಗಿದ್ದ. ರವಿಶಂಕರನ ಅಮ್ಮ ಸುಬ್ಬು ಕಾಂಚನನ ಹೆಸರನ್ನು ತೆಗೆದುಕೊಳ್ಳದೇ ``ಬ್ರಾಹ್ಮಣರ ಮಕ್ಕಳೂ ಇತರೇ ಮಕ್ಕಳೂ ಒಂದೇ ಅಲ್ಲ. ನೀ ಜಾಸ್ತಿ ಮಾಕ್ರ್ಸ್ ತಗೊಂಡೇ ಮುಂದೆ ಬರ್ಬೇಕು’’ ಎಂದು ಯಾವಾಗಲೂ ರವಿಶಂಕರನನ್ನು ಎಚ್ಚರಿಸುತ್ತಿದ್ದರು.
     ಇವೆಲ್ಲದರ ಪರಿಣಾಮವೋ ಎಂಬಂತೆ,ಒಳಗೊಳಗೆ ಸಣ್ಣದೊಂದು ಅಸೂಯೆಯನ್ನು ಪೋಷಿಸಿಕೊಂಡೇ ರವಿಶಂಕರ ಸುಬ್ಬುಕಾಂಚನನ್ನು ಇಷ್ಟಪಡುತ್ತಿದ್ದ. ಆದರೆ,ಹತ್ತನೇ ತರಗತಿಯಲ್ಲಿರುವಾಗ ಸುಬ್ಬು ಕಾಂಚನನ ಅಮ್ಮ ತೀರಿಕೊಂಡಿದ್ದರಿಂದಾಗಿ ಆತ ಶಾಲೆ ಬಿಡಬೇಕಾಗಿ ಬಂತು. ಇದು ಸುಬ್ಬುವಿಗಿಂತ ರವಿಶಂಕರನಿಗೇ ಹೆಚ್ಚು ದುಃಖ ತರಿಸಿತ್ತು. ಆ ನಂತರ ಅವರಿಬ್ಬರ ದಾರಿಗಳೂ ಬೇರೆ ಬೇರೆ ಆಗಿಬಿಟ್ಟವು. ರವಿಶಂಕರ ಡಿಗ್ರಿ ಮುಗಿಸಿ ಆಡಳಿತ ಸೇವೆಯ ಪರೀಕ್ಷೆ ಬರೆದು ಅಧಿಕಾರಿಯಾಗುವ ಸಮಯದಲ್ಲಿ ಕಾಂಚನ ಮುಂಬೈನಲ್ಲಿ ಹೊಟೆಲ್ ಮಾಣಿಯಾಗಿದ್ದ. ವರ್ಷಕ್ಕೊಮ್ಮೆ ಊರಿಗೆ ಬಂದಾಗ ರವಿಶಂಕರನನ್ನು ಭೇಟಿಯಾಗುತ್ತಿದ್ದ. ಕೆಲ ವರ್ಷಗಳ ಹಿಂದೆ ಜ್ಯೂಸ್ ಅಂಗಡಿ ಮಾಡಲು ಹಣದ ಅಗತ್ಯ ಬಂದಾಗ ಕಾಂಚನ ಊರಿನ ಜಾಗ ಮಾರಬೇಕಾಯಿತು.ಆ ನಂತರ ಸುಬ್ಬು ಕಾಂಚನ ಊರಿಗೆ ಬರುವುದು ಕಡಿಮೆಯಾಯಿತು.
  ಈ ಬಾರಿ ಸುಬ್ಬು ಕಾಂಚನ ಊರ ದೇವಸ್ಥಾನದ ಜೀರ್ಣೊದ್ಧಾರ ಮತ್ತು ಪುನರ್ ಪ್ರತಿಷ್ಠೆ ಕಾರ್ಯಕ್ರಮಕ್ಕಾಗಿ ಬಂದವ ಶೆರೋನ್ ಹೊಟೆಲಿನಲ್ಲಿಯೇ ಉಳಿದುಕೊಂಡಿದ್ದ. ಗಡಿಬಿಡಿ ಕೆಲಸಗಳ ನಡುವೆ ಇರುವ ನಾಲ್ಕು ದಿನಗಳಲ್ಲೇ ಒಂದು ದಿನ ಬಿಡುವು ಮಾಡಿಕೊಂಡು ರವಿಶಂಕರನಿಗೆ,` ಮಾತಾಡುವುದಿದೆ ಮಾರಾಯ, ಶೆರೋನ್ ಹೊಟೇಲಿಗೆ ಬಾ’ ಎಂದು ಫೋನ್ ಮಾಡಿದ್ದ. ರವಿಶಂಕರನೂ ಅಷ್ಟೇ,ಜೀವದ ಗೆಳಯನ ಜೊತೆ ಕಾಲಕಳೆಯುವುದಕ್ಕಿಂತ ಮಿಗಿಲಾದ ಯಾವ ಕೆಲಸವೂ ಇಲ್ಲವೆಂಬಂತೆ ಶೆರೋನ್ ಹೊಟೇಲಿಗೆ ಬೆಳಿಗ್ಗೆಯೇ ಬಂದಿದ್ದ. ಎಷ್ಟು ಮತಾಡಿದರೂ ಮುಗಿಯದೆಂಬಂತೆ ಮತ್ತೆ-ಮತ್ತೆ ಒತ್ತರಿಸಿ ಬರುತ್ತಿದ್ದ ನೆನಪುಗಳನ್ನುಇಬ್ಬರೂ ತಡೆಯಲೇ ಇಲ್ಲ. ಮೊಬೈಲ್ ಫೋನನ್ನು ಸ್ವಿಚ್ ಆಫ್ ಮಾಡಿಕೊಂಡು ಜೀವಮಾನದ ಸುಖಗಳೆಲ್ಲವೂ ತಮ್ಮ ಬಾಲ್ಯದ ನೆನಪುಗಳನ್ನು ಕೆದುಕುವುದರಲ್ಲಿಯೇ ಅಡಕವಾಗಿವೆ ಎಂಬಂತೆ ಸ್ನೆಹಿತರಿಬ್ಬರೂ ಮಾತಾಡಕೊಳ್ಳತೊಡಗಿದರು.
   ``ನೆಂಪಿತ್ತ ನಿಂಗೆ,ಒಂಬತ್ತರಲ್ಲಿಪ್ಪಾಗ ಎಂಥದೋ ಸಿಟ್ ಮಾಡ್ಕಂಡ್ ಪೆನ್ ಶಾಯಿನೆಲ್ಲ ನೀ ನನ್ನಂಗಿ ಮೇಲ್ ಚೆಲ್ಲಿದ್ದ. ಎಂಥ ಪೇಚಾಟ ಆಯ್ತ್ ಗೊತ್ತ ನಿಂಗೆ?’’ ಸುಬ್ಬು ಕಾಂಚನ ನೆನಪಿಸಿದ ಈ ಘಟನೆಯನ್ನು ರವಿಶಂಕರ ಮರತೇ ಬಿಟ್ಟಿದ್ದ. ಬಹುಶಃ ಆತನಿಗೆ ಇದು ನೆನೆಪಿಟ್ಟುಕೊಳ್ಳುವಷ್ಟು ಮುಖ್ಯ ಘಟನೆ ಅಗಿರಲಿಲ್ಲ. ``ಹುಡುಗಾಟದಲ್ಲಿ ಅದೆಲ್ಲ ಇರೊದೆ ಅಲ್ಲ ಮಾರಾಯ’’ಎಂದು ರವಿಶಂಕರ ಪ್ರತಿಕ್ರಿಯಿಸಿದಾಗ ಸುಬ್ಬು ಕಾಂಚನ ಆ ದಿನದ ಕತೆ ಹೇಳಬೇಕಾಯಿತು.
  ತನ್ನ ಹೊಸ ಡ್ರಾಯಿಂಗ್ ಪುಸ್ತಕದ ಮೇಲೆ ಶಾಯಿ ಚೆಲ್ಲಿದ್ದಾನೆ ಎಂಬ ಸಿಟ್ಟಿನ ಮೇಲೆ ರವಿಶಂಕರ ಆ ದಿನ ಕಾಂಚನನೊಡನೆ ಜಗಳ ಪ್ರಾರಂಭಿಸಿದ್ದ. ಮಾತಿಗೆ ಮಾತು ಬೆಳೆದು ಎಲ್ಲಿಯವರೆಗೆ ತಲುಪಿತ್ತೆಂದರೆ,ಒಂದು ಹಂತದಲ್ಲಿ ರವಿಶಂಕರ ತನ್ನ ಫೌಂಟೇನ್ ಪೆನ್ನನ್ನು ತೆರೆದು ಅದರಲ್ಲಿದ್ದ ಶಾಯಿಯನ್ನು ಕಾಂಚನನ ಅಂಗಿಯ ಮೇಲೆ ಸುರುವಿಬಿಟ್ಟ. ಕಾಂಚನನ ಹತ್ತಿರ ಇರುವುದು ಒಂದೇ ಜೊತೆ ಸಮವಸ್ತ್ರ. ಅದನ್ನು ಬುಧವಾರ ಬಿಟ್ಟು ಬೇರೆಲ್ಲ ಶಾಲಾದಿನಗಳಲ್ಲೂ ಧರಿಸಬೇಕಾಗಿತ್ತು. ಆದುದರಿಂದ ವಾರಕ್ಕೆ ಎರಡು ಬಾರಿ ಮಾತ್ರ ಒಗೆಯಲು ಸಮಯ ಸಿಗುತ್ತಿತ್ತು. ರವಿಶಂಕರನ ಸಿಟ್ಟಿನಿಂದಾಗಿ ಸೋಮವಾರ ದಿನವೇ ಸಮವಸ್ತ್ರಕ್ಕೆ  ಶಾಯಿ ತಗುಲಿದರೆ ಹೇಗಾಗಬೇಡ? ಸಮವಸ್ತ್ರ ಧರಿಸದೇ ಮಾರನೆಯ ದಿನ ಶಾಲೆಗೆ ಹೋಗುವಂತಿಲ್ಲ;ಹೋದರೆ, ಗಂಗಯ್ಯ ಗಾಣಿಗರು ಕೆಂಡಾಮಂಡಲರಾಗುತ್ತಾರೆ. ಮನೆಗೆ ಹೋದಮೇಲೆ ಬಟ್ಟೆ ಒಗೆದರೆ ಮಾರನೆಯ ದಿನದವರೆಗೆ ಒಣಗುವ ಸಾಧ್ಯತೆ ಇರಲಿಲ್ಲ-ಕಾಂಚನನಿಗೆ ನಿಜಕ್ಕೂ ಪೇಚಾಟವಾಯಿತು.
    ಅಂಗಿಯ ಮೇಲಿನ ಕಲೆಯನ್ನು ಕಂಡರೆ ಅಮ್ಮ ಬಯ್ಯಬಹುದೆಂಬ ಭಯವನ್ನಿಟ್ಟುಕೊಂಡೇ ಕಾಂಚನ ಮನೆಗೆ ಬಂದ.ಅಮ್ಮ ಬರುವ ಮುಂಚೆಯೇ ಅಂಗಿಯನ್ನು ಒಗೆದು ಒಣಗಿಸಲು ಬಿಟ್ಟರೆ ನಾಳೆ ಅರೆ-ಬರೆ ಒಣಗಿರುವ ಅಂಗಿಯನ್ನಾದರೂ ಧರಿಸಬಹುದು ಎಂದುಕೊಂಡು ಒಗೆಯುವ ಕಲ್ಲಿನ ಮೇಲೆ ಅಂಗಿಯನ್ನಿಟ್ಟು ಒಗೆಯುತ್ತಿರುವಾಗಲೇ ಅಮ್ಮ ಬಂದಳು.ಸತ್ಯ ಹೇಳದೇ ಕಾಂಚನನಿಗೆ ಬೇರೆ ದಾರಿಯಿರಲಿಲ್ಲ.ಅಮ್ಮ ಏನೂ ಮಾತಾಡಲಿಲ್ಲ.ಅಮ್ಮ ಬಯ್ಯದೇ ಇದ್ದುದೇ ಸುಬ್ಬುವಿಗೆ ಭಯ ಹುಟ್ಟಿಸಿತು.ಕಲೆಯಿದ್ದ ಜಾಗವನ್ನು ಅವಳೇ ಉಜ್ಜಿ ಉಜ್ಜಿ ತೊಳೆದು ನೀರನ್ನು ಹಿಂಡಿದಳು.ರಾತ್ರಿ ಊಟವಾದ ಮೇಲೆ ಒಣಗಲು ಹಾಕಿದ್ದ ಅಂಗಿಯನ್ನು ಪಕ್ಕದ ಮನೆಯ ಭತ್ತ ಬೇಯಿಸುವ ಒಲೆಯ ಹತ್ತಿರ ಕೊಂಡೊಯ್ದು ಎಷ್ಟೋ ಹೊತ್ತಿನವರೆಗೆ ಒಲೆಯ ಶಾಖದ ಎದುರು ಅಂಗಿಯನ್ನು ಬಿಡಿಸಿ ಹಿಡಿದುಕೊಂಡಿದ್ದಳು.ಸುಬ್ಬು ಮಲಗುವವರೆಗೂ ಅಮ್ಮ ಒಲೆಯ ಮುಂದೆ ಅಂಗಿ ಒಣಗಿಸುತ್ತಲೇ ಇದ್ದಳು.
                             ===
   ಕಾಂಚನ ಹೇಳಿದ ಕತೆ ಕೇಳಿ ರವಿಶಂಕರನಿಗೆ ಅಳು ಬಂತು.ಮಗುವಿನಂತೆ ಅಳಲು ಪ್ರಾರಂಭಿಸಿದ.ರವಿಶಂಕರ ಅತ್ತಿದ್ದರಿಂದಲೋ ತನ್ನ ಪರಿಸ್ಥಿತಿಯನ್ನು ನೆನೆದೋ  ಅಥವಾ ಸತ್ತುಹೋದ ಅಮ್ಮನ ನೆನಪಾಗಿಯೋ ಗೊತ್ತಿಲ್ಲ,ಸುಬ್ಬು ಕಾಂಚನನೂ ರವಿಶಂಕರನೊಡನೆ ಅಳಲು ಶುರು ಮಾಡಿದ.ಈ ಲೋಕದ ಪರಿವೆಯೇ ಇಲ್ಲವೆಂಬಂತೆ ಅಳುತ್ತಿದ್ದ ಇಬ್ಬರನ್ನು ಈ ಲೋಕಕ್ಕೆ ಎಳೆದು ತಂದಾತ ರೂಮ್ ಬಾಯ್ ಮೆಂಡೋನ್ಸಾ. ತೆರೆದೇ ಇದ್ದ ಬಾಗಿಲನ್ನು ಸೌಜನ್ಯಕ್ಕಾಗಿ ಬಡಿದು ತನ್ನ ಬರುವಿಕೆಯನ್ನು ಅವರಿಬ್ಬರಿಗೂ ಮನದಟ್ಟುಮಾಡಲು ಮೆಂಡೋನ್ಸಾ ಮಾಡಿದ ಪ್ರಯತ್ನ ಫಲ ನೀಡಲಿಲ್ಲ. ಅವರಬ್ಬರೂ ಅಳುವುದನ್ನು ನಿಲ್ಲಿಸಲಿಲ್ಲ. ಎಷ್ಟೋ ಹೊತ್ತಿನ ನಂತರ ಅವರಿಬ್ಬರೂ ಸಮಾಧಾನಗೊಂಡಾಗ ಮೆಂಡೋನ್ಸಾ ಅಲ್ಲಿಯೇ ಇದ್ದ. ``ಏನಾದರೂ ತರಬೇಕೇ ಸರ್,..ಟೀ..ಕಾಫಿ..?’’ ಮೆಂಡೋನ್ಸಾನ ಪ್ರಶ್ನೆಗೆ ಇಬ್ಬರೂ ಉತ್ತರಿಸಲಿಲ್ಲ. ಅತಿಥಿಗಳ ವೈಯಕ್ತಿಕ ಬದುಕಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವುದು ತನ್ನ ಕೆಲಸದ ಸರಹದ್ದದನ್ನು ದಾಟುತ್ತದೆ ಎಂಬ ಎಚ್ಚರವನ್ನು ಮೀರಿ ಮೆಂಡೋನ್ಸಾ ಕೇಳಿದ ``ಇಷ್ಟು ಹೊತ್ತು ಅಳುತ್ತಿದ್ದೀರಲ್ಲ..ಯಾಕೆ?’’
   ಸುಬ್ಬು ಕಾಂಚನ ನಗತೊಡಗಿದ.ಜೊತೆಗೆ,ರವಿಶಂಕರ ಕೂಡಾ.     
ನೀಲಿ ಶಾಯಿಯ ಕಲೆ *ಕತೆ-ಉದಯ ಗಾಂವಕಾರ

No comments: