Sunday 29 August 2021

ಮತ್ತೆ ಬಂದ ಜೇನುಹುಳುಗಳು


 ಐದನೇ ಮಹಡಿಯ ನಮ್ಮ ಮನೆಯ ಒಂದು ಕಿಟಕಿಯ ಶೇಡ್‌ ಸ್ಲ್ಯಾಬಿಗೆ ಜೇನುಹುಳುಗಳು ಗೂಡುಕಟ್ಟಿದಾಗ ಆತಂಕ ಶುರುವಾಗಿತ್ತು. ಓಡಿಸಬೇಕೆಂದು ನಾನೂ Sandhya ಳೂ ಬಹಳ ಪ್ರಯತ್ನ ಪಟ್ಟಿದ್ದೆವು. ರಾತ್ರಿ ಹೊಗೆ ಹಾಕಿ ನೋಡಿದೆವು. ಅವು ಜಗ್ಗಿರಲಿಲ್ಲ. ರಾತ್ರಿಯಾಗುತ್ತಲೇ ಲೈಟಿಗೆ ಆಕರ್ಷಿತವಾಗಿ ಮನೆಯೊಳಗೆ ಬರುತ್ತಿದ್ದವು. ಬೆಳಗಿನವರೆಗೂ ರುಂಯ್‌ ಗುಡುತ್ತಾ ಕೊನೆಗೆ ಸಾವನ್ನಪ್ಪುತ್ತಿದ್ದವು. ಜೇನುಗೂಡಿನ ಹತ್ತಿರದಲ್ಲಿರುವ ಕೋಣೆಯ ಕಿಟಕಿಗೆ ದಪ್ಪನೆಯ ಪರದೆಗಳನ್ನು ಹಾಕಿ ಅವು ಬೆಳಕಿಗೆ ಆಕರ್ಷಿತವಾಗದಂತೆ ಪ್ರಯತ್ನಪಟ್ಟೆವು. ಆ ಕೋಣೆಗೆ ರಾತ್ರಿ ಲೈಟ್‌ ಹಾಕುವುದು ಸಾಧ್ಯವಿರಲಿಲ್ಲ. ರಾತ್ರಿ ಸಾಧ್ಯವಾದಷ್ಟು ಕಡಿಮೆ ವಿದ್ಯುದ್ದೀಪಗಳನ್ನು ಬಳಸುವುದನ್ನು ರೂಢಿಸಿಕೊಂಡೆವು. ಬರಬರುತ್ತಾ ಜೇನುಹುಳುಗಳ ಜೊತೆಯ ನಮ್ಮ ಸಹಜೀವನ ಸಹ್ಯವಾಗತೊಡಗಿತು. ಸಂಜೆಯಾಗುತ್ತಲೆ ಕಿಟಕಿಗಾಜುಗಳನ್ನು ತಪ್ಪದೆ ಹಾಕುತ್ತಿದ್ದೆವು. ಅಷ್ಟರ ಮೇಲೂ ಒಳಬರುವ ಐದಾರು ಜೇನುಹುಳುಗಳನ್ನು ಹೊರಹಾಕಲು ಒಂದೊಂದೇ ಕೋಣೆಯ ಬೆಳಕನ್ನು ಆರಿಸುತ್ತಾ, ಬಾಗಿಲು ಹಾಕಿಕೊಳ್ಳುತ್ತಾ ಅವು ಹೊರಗಿನ ಬೆಳಕಿನಿಂದ ಆಕರ್ಷಣೆಗೊಂಡು ಹೊರಹೋಗುವಂತೆ ಮಾಡುತ್ತಿದ್ದೆವು. ಹಗಲಲ್ಲಿ ಅವುಗಳ ಸಮಸ್ಯೆಯೇನಿಲ್ಲ. ಆಗ ಅವುಗಳ ಚಟುವಟಿಕೆಗಳನ್ನು ಹತ್ತಿರದಿಂದ ನೋಡುವುದಕ್ಕಾಗಿ ಎಲ್ಲೋ ಒಳಗಿಟ್ಟಿದ್ದ ಬೈನಾಕುಲರನ್ನು ಹೊರಬಂತು. ಚಹಾದ ಕಪ್ಪು ಹಿಡಿದುಕೊಂಡು ಆ ಕಿಟಕಿಯ ಬಳಿ ನಿಲ್ಲುವುದು ರೂಢಿಯಾಯಿತು. ಒಮ್ಮೆ ಬಿಹಾರಿ ಹುಡುಗರಿಬ್ಬರು ಬಂದು ಜೇನು ತೆಗೆದುಕೊಡುವುದಾಗಿ ಹೇಳಿದರೂ ನಾವು ಒಪ್ಪಲಿಲ್ಲ. ನಮ್ಮದೇ ಅಪಾರ್ಟ್‌ ಮೆಂಟಿನಲ್ಲಿ ಇನ್ನೂ ಎರಡು ಜೇನುಗೂಡುಗಳಿದ್ದವು. ಅವುಗಳ ಜೇನು ತೆಗೆದುಕೊಡುವುದಾಗಿ ಹೇಳಿ ಆ ಹುಡುಗರು ಅಪಾರ್ಟಮೆಂಟಿನ ವಾಸಿಗಳಿಗೆಲ್ಲ ಸಕ್ಕರೆ ಪಾಕವನ್ನು ಮಾರಿ ಹೋಗಿದ್ದರು!

ಇವುಗಳ ದೊಡ್ಡ ಗಾತ್ರ ನೋಡಿದರೆ ತೀರಾ ಆಕ್ರಮಣಕಾರಿಯಾಗಿರುವ ಹೆಜ್ಜೇನುಗಳೇ ಇರಬೇಕು, ಇವುಗಳ ಬಗ್ಗೆ ಕರುಣೆ ಬೇಡ ಎಂದು ಹಲವರು ಉಪದೇಶ ಮಾಡಿದರೂ ನಮಗೆ ಅವುಗಳನ್ನು ಓಡಿಸುವ ಯೋಚನೆ ಮತ್ತೆ ಬರಲಿಲ್ಲ. ಈ ಹೆಜ್ಜೇನುಗಳು ಆಕ್ರಮಣಕಾರಿಯಾಗಿರುತ್ತವೆಂತಲೂ, ಅವುಗಳು ಕಚ್ಚಿದರೆ ಸಾವೂ ಸಂಭವಿಸಬಹುದೆಂದೂ ಕೆಲವರು ಕಾಳಜಿಯಿಂದಲೇ ಎಚ್ಚರಿಸಿದ್ದರು. ಸುಮಾರು ಎರಡು ಸೆಂಟೀಮೀಟರಿನಷ್ಟು ದೊಡ್ಡದಿರುವ ಈ ಜೇನುಹುಳುಗಳಿಗೆ ಎತ್ತರದ ಮರಗಳೋ, ಬಂಡೆಗಳೊ ಅಥವಾ ಇಂತಹ ಅಪಾರ್ಟ್ಮೆಂಟುಗಳೇ ಬೇಕು ಮನೆಮಾಡಿಕೊಳ್ಳಲು.‌ ಅಕಶೇರುಕಗಳಲ್ಲೇ ಅತಿಹೆಚ್ಚು ಪ್ರಬೇಧಗಳನ್ನು ಹೊಂದಿರುವ ಸಂಧಿಪದಿ ವರ್ಗಕ್ಕೆ ಜೇನುಹುಳುಗಳು ಸೇರುತ್ತವೆ. ಸಂಧಿಪದಿಗಳಿಗೆ ಕೀಲುಕಾಲುಗಳಿರುತ್ತವೆ. ಕೀಟಗಳಿಗೋ ಅಂತಹ ಆರೇ ಕಾಲುಗಳಿರುತ್ತವೆ. ಏಡಿ, ಸಿಗಡಿ, ಜೇಡ, ಹೇನು, ಇರುವೆ ಎಲ್ಲವೂ ಸಂಧಿಪದಿಗಳೇ. ಆದರೆ, ಇವುಗಳಲ್ಲಿ ಹೇನು, ಇರುವೆ ಕೀಟಗಳು. ಪ್ರಪಂಚದಲ್ಲಿ ಕೀಟಗಳ ಸಂಖ್ಯೆ ಬಹಳ ದೊಡ್ಡದು. ಭೂಮಿಯ ಮೇಲಿರುವ ಎಲ್ಲ ಇರುವೆಗಳನ್ನು ತಕ್ಕಡಿಯ ಒಂದು ತಟ್ಟೆಯಲ್ಲೂ ಇನ್ನೊಂದರಲ್ಲಿ ಮನುಷ್ಯರನ್ನೂ ಹಾಕಿದರೆ ಇರುವೆಗಳೆ ಹೆಚ್ಚು ತೂಗಬಹುದಂತೆ! ಈಗ ಜೇನುಹುಳುಗಳ ಮಾತಿಗೆ ಬರೋಣ! ದೊಡ್ಡ ಪಾಲು ಕೃಷಿಬೆಳೆಗಳಿಗೆ ಜೇನ್ನೊಣಗಳು ನಡೆಸುವ ಪರಾಗಸ್ಪರ್ಶ ಕ್ರಿಯೇಯೇ ಕಾರಣ. ಅವುಗಳು ನಡೆಸುವ ಮಧುಕರವೃತ್ತಿಯ ನೇರ ಫಲವೇ ನಾವು ತಿನ್ನುವ ಹಣ್ಣು, ಕಾಯಿ, ಬೀಜ, ತರಕಾರಿ ಎಲ್ಲವೂ. ಹೂವುಗಳ ಬಣ್ಣ, ಸುವಾಸನೆ ಕೀಟಗಳನ್ನು ಆಕರ್ಷಿಸುವ ಸಸ್ಯಗಳ ತಂತ್ರ. ಜೇನ್ನೊಣಗಳು ಹೂಗಳಿಂದ ಹೂಗಳಿಗೆ ಹಾರುತ್ತಾ ಸಸ್ಯದ ಗಂಡು ಲಿಂಗಾಣುವಿರುವ ಪರಾಗವನ್ನು ಹೆಣ್ಣು ಭಾಗವಾದ ಶಲಾಕಾಗ್ರಕ್ಕೆ ಅಂಟಿಸಿ ಅಲ್ಲಿಂದ ಹೆಣ್ಣು ಲಿಂಗಾಣುಗಳಿಗೆ ತಲುಪಲು ಕಾರಣವಾಗುತ್ತದೆ. ಹೀಗೆ ಪರಕೀಯ ಪರಾಗಸ್ಪರ್ಶ ನಡೆದು ಗಂಡು-ಹೆಣ್ಣಿನ ಸಮ್ಮಿಳನದಿಂದ ಯುಗ್ಮಜವು ರೂಪುಗೊಂಡು ಅದು ಅನಂತರ ಬೀಜವಾಗಿ ಇನ್ನೊಂದು ಗಿಡದ ಹುಟ್ಟಿಗೋ ಇನ್ಯಾರದೋ ಹೊಟ್ಟೆಗೋ ತಲುಪುತ್ತದೆ. ಹೀಗೆ, ಸಸ್ಯಗಳಿಗೆ ಸಹಾಯ ಮಾಡುವ ಜೇನುಹುಳುಗಳಿಗೆ ದೊರೆಯುವ ದಲ್ಲಾಳಿ ಶುಲ್ಕವೇ ಮಕರಂಧ. ಒಂದೇ ಪ್ರಬೇಧದ ಬೇರೆ ಬೇರೆ ಹೂಗಳ ನಡುವೆ ಪರಕೀಯ ಪರಾಗಸ್ಪರ್ಶಕ್ಕೆ ಜೇನುಹುಳುಗಳು ಅನುವು ಮಾಡುವುದರಿಂದ ಸಸ್ಯ ಜಗತ್ತು ಇಷ್ಟು ವೈವಿದ್ಯಮಯವಾಗಿದೆ. ಜೇನುಹುಳುಗಳ ಕಾಲನಿಯಲ್ಲಿ ಎರಡು-ಮೂರು ತಲೆಮಾರುಗಳ ಜೇನುಹುಳುಗಳಿರುತ್ತವೆ. ತಮ್ಮ ಮರಿಗಳಿಗೆ ಆಹಾರ ಸಂಗ್ರಹಿಸಲಿಕ್ಕಾಗಿ ಅವು ಮಕರಂಧ ಹುಡುಕಿ ಹೋಗುತ್ತವೆ. ರೋಮವುಳ್ಳ ಇವುಗಳ ಕಾಲಿನ ಮೇಲೆ ವಿಶಿಷ್ಠ ಮಕರಂಧ ಚೀಲವಿರುತ್ತದೆ. ಹೂಗಳು ಅಷ್ಟು ವರ್ಣಮಯವಾಗಿದ್ದರೂ ಜೇನ್ನೊಣಗಳ ಗ್ರಹಿಕೆಗೆ ಆ ಬಣ್ಣಗಳು ದಕ್ಕುವುದು ಬಿಳಿ-ಕಪ್ಪು-ಕಂದುಬಣ್ಣದ ವಿವಿಧ ಛಾಯೆಯಲ್ಲೇ!. ಸುವಾಸನೆಯೂ ಜೇನ್ನೊಣಗಳನ್ನು ಹೂಗಳತ್ತ ಸೆಳೆಯುತ್ತದೆ. ಒಂದು ಜೇನ್ನೊಣಕ್ಕೆ ಹೂವಿನ ಗುರುತು ಸಿಕ್ಕಿತೆಂದರೆ ಉಳಿದ ಸಂಗಾತಿಗಳಿಗೆ ರಾಸಾಯನಿಕ ಮಾಹಿತಿ ನೀಡುತ್ತವೆ, ಫೆರ್ಮೋನುಗಳೆಂಬ ಸುವಾಸನಾ ಸಂಕೇತಗಳಿಂದಲೇ ಎಲ್ಲವನ್ನೂ ಗ್ರಹಿಸಿ ಉಳಿದ ಸಂಗಾತಿಗಳು ಅಲ್ಲಿಗೆ ತಲುಪುತ್ತವೆ. ಹೀಗೆ ಹೂಗಳಿಂದ ಮರಳಿ ಗೂಡುಗಳಿಗೆ ತಲುಪಿದಾಗ ಅಲ್ಲಿರುವ ಇತರ ಸಂಗಾತಿಗಳಿಗೂ ಮಾಹಿತಿ ನೀಡಬೇಕಲ್ಲ? ಅದಕ್ಕಾಗಿ ಸೂಕ್ತ ಚಲನವಿನ್ಯಾಸಗಳನ್ನು ಸೃಷ್ಟಿಸುತ್ತವೆ. ಸಂಗಾತಿಗಳ ಈ ನೃತ್ಯವನ್ನೇ ಅರ್ಥಮಾಡಿಕೊಂಡು ಅಲ್ಲಿರುವ ಜೇನ್ನೊಣಗಳು ಸಿಗಬಹುದಾದ ಮಕರಂಧದ ಗುಣಲಕ್ಷಣ, ಪ್ರಮಾಣ, ಅಲ್ಲಿಗಿರುವ ದೂರ ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತವೆ. ಒಂದು ಪ್ರಬೇಧದ ಹೂವುಗಳು ಸಿಕ್ಕವೆಂದರೆ ಇನ್ನೊಂದು ಪ್ರಬೇಧದ ಹೂಗಳ ಬಗ್ಗೆ ನಿರಾಸಕ್ತಿ ವಹಿಸುತ್ತವೆ. ಅಟ್ಲ ಮರ ಹೂ ಬಿಡುವಾಗಿನ ಜೇನಿಗೆ ನಮ್ಮೂರಲ್ಲಿ ಬೇಡಿಕೆ ಜಾಸ್ತಿ. ಎಲ್ಲರಿಗೂ ಗೊತ್ತಿರುವಂತೆ ಜೇನು ಹುಳುಗಳು ಸಾಮಾಜಿಕ ಜೀವಿಗಳು. ಕೊಲೋನಿಯಲ್ಲಿ ಗಂಡು ಜೇನು, ಕೆಲಸಗಾರ ಜೇನು ಮತ್ತು ರಾಣಿಜೇನುಗಳಿಗೆ ನಿರ್ದಿಷ್ಟ ಕೆಲಸ ಕಾರ್ಯಗಳಿರುತ್ತವೆ. ಆದರೆ, ಗುಂಪಿನ ನೆರವಿಲ್ಲದೆ ವೈಯಕ್ತಿಕವಾಗಿ ಅವುಗಳು ಬದುಕಲಾರವು. ರಾಣಿಜೇನು ಯಾವುದೇ ಗೂಡಿನಲ್ಲಿರುವ ಏಕೈಕ ಪ್ರೌಢ ಹೆಣ್ಣು. ಇದರ ಕಾರ್ಯ ಮೊಟ್ಟೆಯಿಡುವುದು ಮಾತ್ರ. ದಿನಕ್ಕೆ ಒಂದುವರೆ ಸಾವಿರ ಮೊಟ್ಟೆಗಳನ್ನು ಅದು ಇಡಬಲ್ಲದು. ಗಂಡಿಗಿಂತ ಮತ್ತು ಕೆಲಸಗಾರ ಹುಳುವಿಗಿಂತ ಗಾತ್ರದಲ್ಲಿ ದೊಡ್ಡದಾಗಿರುತ್ತದೆ. ಇದು ನಾಲ್ಕೈದು ವರ್ಷಗಳ ವರೆಗೆ ಬದುಕಬಲ್ಲದು. ಗಂಡಿನ ಜೊತೆಗಿನ ಸಮ್ಮೀಳನದ ನಂತರ ಉಂಟಾಗುವ ಮೊಟ್ಟೆಗಳು ಕೆಲಸಗಾರ ಹುಳುಗಳ ಹುಟ್ಟಿಗೆ ಕಾರಣವಾಗುತ್ತವೆ. ಗಂಡಿನ ಜೊತೆ ಸಮ್ಮಿಳನ ಸಾಧ್ಯವಾಗದಿದ್ದರೂ ರಾಣಿ ಮೊಟ್ಟೆಯಿಡುತ್ತದೆ. ಆದರೆ, ಆ ಮೊಟ್ಟೆಯಿಂದ ಗಂಡೇ ಹುಟ್ಟುತ್ತವೆ. ರಾಣಿ ಜೇನು ತಕ್ಕ ಪ್ರಮಾಣದಲ್ಲಿ ಮೇಣ ತಯಾರಿಸಲು ಶಕ್ತವಾಗಿಲ್ಲವೆಂದಾದರೆ ಕೆಲಸಗಾರ ಹುಳುಗಳು ಆ ರಾಣಿಯನ್ನು ಪದಭ್ರಷ್ಟವಾಗಿಸಿ ಹೊಸರಾಣಿಯನ್ನು ಘೋಷಿಸುತ್ತವೆ.

ಎಪಿಸ್‌ ಡಾರ್ಸೆಟಾ ಡಾರ್ಸೆಟಾ ಎಂಬ ಹೆಜ್ಜೇನೂ. ಎಪಿಸ್‌ ಸೆರೆನಾ ಇಂಡಿಕಾ ಎಂಬ ತೊಡವೆ ಜೇನೂ ಹೀಗೆ, ಮನೆಯ ಮಾಡಿನ ನೆರಳಿನಲ್ಲಿ ಗೂಡುಕಟ್ಟುತ್ತವೆ. ಸಾಮಾನ್ಯವಾಗಿ ಹೆಜ್ಜೇನುಗಳು ಅಲೆಮಾರಿಗಳಾಗಿದ್ದು ಒಂದು ಕಡೆಯಿಂದ ಇನ್ನೊಂದು ಕಡೆ ವಾಸ ಬದಲಿಸುತ್ತಿರುತ್ತವೆ. ಆದರೆ, ನಮ್ಮನೆಯ ಕಿಟಕಿಗಳಲ್ಲಿ ಇವು ಖಾಯಂ ವಾಸ ಮಾಡಿಕೊಂಡಿದ್ದವು. ವರ್ಷದ ಹಿಂದೆ ಮೇಲಂತಸ್ತಿನ ಮನೆಗೆ ಪೇಂಟ್‌ ಮಾಡುವುದು ಈ ಜೇನುಹುಳುಗಳಿಗೆ ಇಷ್ಟವಾಗಲಿಲ್ಲವೆಂದು ಕಾಣುತ್ತದೆ ಅಥವಾ ಬೇರೆ ಯಾವುದೋ ಕಾರಣವಿರಬಹುದು, ಅವು ತಮ್ಮ ಗೂಡುಗಳನ್ನು ಅರ್ಧದಲ್ಲೇ ಬಿಟ್ಟು ಹೋಗಿದ್ದವು. ಈಗ ಅವು ಹಾರಿ ಹೋಗಿದ್ದೇ ನಮ್ಮ ಆತಂಕಕ್ಕೆ ಕಾರಣವಾಯ್ತು. ವರ್ಷವಾದರೂ ಮರಳಿ ಬಂದಿರಲಿಲ್ಲ. ಮೊನ್ನೆ ಸಂಧ್ಯಾ ಕಣ್ಣುಮುಚ್ಚಿಕೊಂಡು ಕಿಟಕಿಯ ಬಳಿ ಬರಲು ತಿಳಿಸಿದಾಗ ಅರಳಿದ ಹೊಸ ಹೂವನ್ನು ಕಾಣಿಸುತ್ತಾಳೆಂದುಕೊಂಡೆ. ಕಣ್ ತೆರೆದಾಗ ಜೇನುಗೂಡು ಕಾಣಿಸಿತು. ಇಷ್ಟನ್ನೂ ಬರೆಯಬೇಕೆನಿಸಿದ್ದು ಜೇನುಹುಳುಗಳು ಮತ್ತೆ ಬಂದ ಖುಷಿಯಲ್ಲಿ. ಈ ಹಿಂದೆ ಮನೆಬಿಟ್ಟುಹೋದ ಜೇನುಹುಳುಗಳೇ ಮತ್ತೆ ಬಂದಿವೆ ಎಂಬ ನಂಬಿಕೆಯಲ್ಲಿ! ಮಕ್ಕಳವಾಣಿಯ ಒಂದು ಸಂಚಿಕೆಯಲ್ಲಿ ಜೇನುಹುಳುಗಳ ಕತೆ ಇದೆ. ಆ ಲಿಂಕನ್ನೂ ನಿಮಗಾಗಿ ಲಗತ್ತಿಸಿರುವೆ.