Wednesday 4 April 2018

ಅವರು ಕ್ರಿಕೆಟ್ ಬಾಲನ್ನೇಕೆ ಹಾಗೆ ಉಜ್ಜುತ್ತಾರೆ?


ಕ್ರಿಕೆಟ್ ಆಟಗಾರರು ಏಕೆ ಬಾಲಿನ ರೂಪಗೆಡಿಸುತ್ತಾರೆ? ವೇಗದ ಬೌಲರುಗಳು ಏಕೆ ಬಾಲನ್ನು ತಮ್ಮ ಟ್ರೌಸರಿಗೆ ಉಜ್ಜಿಕೊಳ್ಳುತ್ತಾರೆ? ಇಂತಹ ಪ್ರಶ್ನೆಗಳು ಕ್ರಿಕೆಟ್ ಅಭಿಮಾನಿಗಳ ತಲೆಯನ್ನೂ ಕೊರೆಯುತ್ತವೆ. ಮೊನ್ನೆ, ಆಸ್ಟ್ರೇಲಿಯಾದ ಕ್ರಿಕೆಟಿಗ ಕ್ಯಾಮರೂನ್ ಬ್ಯಾಂಕ್ರಾಪ್ಟ್ ಕಿಸೆಯಲ್ಲಿ ಗುಟ್ಟಾಗಿ ಅಡಗಿಸಿಟ್ಟ ಹಳದಿ ಬಣ್ಣದ ಪಟ್ಟಿಯಿಂದ ಬಾಲನ್ನು ಉಜ್ಜುತ್ತಿದ್ದ ದೃಶ್ಯವನ್ನು ಕ್ಯಾಮರಾ ಸೆರೆ ಹಿಡಿಯಿತು. ನಂತರದ ಸಂಗತಿ ನಿಮಗೆ ಗೊತ್ತೇ ಇದೆ- ನಾಯಕ ಸ್ಮಿಥ್, ಉಪನಾಯಕ ವಾರ್ನರ್, ಕೋಚ್ ಲೆಹಮನ್ ತಮ್ಮ ಸ್ಥಾನ ತೊರೆಯಬೇಕಾಯಿತು. ಅವರು ಮಾಡಿದ ಒಳ್ಳೆಯ ಕೆಲಸ ಅಂದರೆ, ತಮ್ಮ ತಪ್ಪನ್ನು ಒಪ್ಪಿಕೊಂಡದ್ದು; ಮಾಡಿದ ತಪ್ಪಿಗೆ ಸಾರ್ವಜನಿಕವಾಗಿ ಪಶ್ಚಾತ್ತಾಪ ಪಟ್ಟಿದ್ದು. ಹಿಂದೆಲ್ಲ ಇದೇ ತಪ್ಪು ಮಾಡಿ, ಮುನ್ನೂರಕ್ಕೂ ಹೆಚ್ಚು ಟೆಸ್ಟ್ ವಿಕೆಟ್ಟುಗಳನ್ನು ಪಡೆದು ಕ್ರಿಕೆಟ್ ಲೋಕದ ದಂತಕತೆಯಾದವರಿದ್ದಾರೆ. ಆಗ, ಹೀಗೆ ಮೈದಾನದ ಸುತ್ತ ಮತ್ತು ಮೈದಾನದ ಮೇಲೆ ಒಟ್ಟೂ ಮೂವತ್ತು ಹದ್ದಿನ ಕಣ್ಣಿನ ಕ್ಯಾಮರಾಗಳು ಆಟಗಾರರ ಪ್ರತಿ ಚಲನೆಯನ್ನೂ ಸೆರೆ ಹಿಡಿಯಲು ಕಾದು ಕುಳಿತಿರುತ್ತಿರಲಿಲ್ಲ.

      ವೇಗದ ಬೌಲರುಗಳು ಕ್ರಿಕೆಟ್ ಲೋಕದ ವಿಲಕ್ಷಣ ಪ್ರಬೇಧದಂತೆ ಭಾಸವಾದರೆ ಅದರಲ್ಲಿ ಆಶ್ಚರ್ಯಪಡುವಂತಹದ್ದೇನಿಲ್ಲ. ಡೆನಿಸ್ ಲಿಲ್ಲಿ, ಜೆಫ್ ಥಾಮ್ಸನ್, ರಾಬಟ್ರ್ಸ್, ಮಾಲ್ಕಂ ಮಾರ್ಷಲ್, ರಿಚರ್ಡ್ ಹ್ಯಾಡ್ಲೀ, ಇಮ್ರಾನ್ ಖಾನ್, ಡೋನಾಲ್ಡರಿಂದ ಹಿಡಿದು ವಾಸಿಮ್ ಅಕ್ರಮ್, ಅಂಬ್ರೋಸ್, ವಕಾರ್ ಯೂನಿಸ್, ಬ್ರೆಟ್ಲೀ, ಮೆಕ್‍ಗ್ರಾಥ್, ಡೇಲ್ ಸ್ಟೇಯ್ನ್, ಜಹೀರ್ ಖಾನ್, ಶೋಯಬ್ ಅಕ್ತರ್, ಉಮೇಶ್ ಯಾದವ್‍ವರೆಗೆ ಯಾವುದೇ ಪಕ್ಕಾ ವೇಗದ ಬೌಲರನ್ನು ಗಮನಿಸಿದರೆ ಮೇಲಿನ ಮಾತಿಗೆ ಮತ್ತೆ ಸಮರ್ಥನೆ ಬೇಕಿಲ್ಲ. ಒಮ್ಮೆ ಆಸ್ಟ್ರೇಲಿಯಾದ ಥಾಮ್ಸನ್ ಭಾರತದ ಸುನಿಲ್ ಗಾವಸ್ಕರರವರಿಗೆ ಬೌಲಿಂಗ್ ಮಾಡುತ್ತಿದ್ದರು. ಥಾಮ್ಸನ್ ಓಡಿಬರಲು ಆರಂಭಿಸುತ್ತಿದ್ದಂತೆಯೇ ಗಾವಸ್ಕರ್ ಕ್ರೀಸ್‍ನಿಂದ ಹೊರ ಹೋಗುತ್ತಿದ್ದರು. ಎರಡು ಮೂರು ಬಾರಿ ಗಾವಸ್ಕರ್ ಹೀಗೆಯೇ ಮಾಡಿದಾಗ ಸೈಟ್ ಸ್ಕ್ರೀನಿನದೇ ಸಮಸ್ಯೆ ಇರಬಹುದು ಎಂದು ಭಾವಿಸಿದ ಅಂಪೈರ್, ಸೈಟ್ ಸ್ಕ್ರೀನಿನ ಸ್ಥಾನವನ್ನು ಬದಲಿಸಬೇಕೇ ಎಂದು ಕೇಳಿದರು. ಅದಕ್ಕೆ ಗಾವಸ್ಕರ್- ``ಹೌದು, ನನ್ನ ಮತ್ತು ಥಾಮ್ಸನ್ನರ ನಡುವೆ ಸೈಟ್ ಸ್ಕ್ರೀನ್ ಹಾಕಿಬಿಡಿ’’ ಎಂದಿದ್ದರು.
    ಅಷ್ಟೊಂದು ದೂರದಿಂದ ಓಡಿಬರುವ ರೀತಿಯಾಗಲಿ, ಬ್ಯಾಟ್ಸ್‍ಮನ್‍ಗಳ ಕಡೆ ಆಗಾಗ ಕೆಂಗಣ್ಣು ಬಿಡುವುದಾಗಲಿ ಎಲ್ಲವೂ ವಿಲಕ್ಷಣ. ವೇಗದ ಬೌಲರುಗಳ ಇನ್ನೊಂದು `ವಿಚಿತ್ರ' ಸ್ವಭಾವ ಏನೆಂದರೆ, ಕೈಗೆ ಕ್ರಿಕೆಟ್ ಚೆಂಡು ಸಿಕ್ಕಿತೆಂದರೆ ತಮ್ಮ ಪ್ಯಾಂಟಿಗೆ ಗಸಗಸ ಎಂದು ತಿಕ್ಕಿಕೊಳ್ಳುವುದು. ಉಜ್ಜುತ್ತಾ, ಉಜ್ಜತ್ತಾ ಮತ್ತು ಆಗಾಗ ಅದನ್ನು ನೋಡಿಕೊಳ್ಳುತ್ತಾ, ಎಂಜಲನ್ನು ಚೆಂಡಿಗೆ ಸವರುತ್ತಾ ತಮ್ಮ `ರನ್‍ಅಪ್'ನ ಆರಂಭದ ಕಡೆ ನಡೆಯುವ ದೃಶ್ಯ ಸಾಮಾನ್ಯ. ಎಷ್ಟು ಸಾಮಾನ್ಯವೆಂದರೆ ಇದನ್ನು ಟಿ.ವಿಯಲ್ಲಿ ನೋಡಿದ ಚಿಣ್ಣರು ತಮ್ಮ ಬೀದಿ ಕ್ರಿಕೆಟ್ಟಿನಲ್ಲಿ ಟೆನಿಸ್ ಬಾಲಿನಲ್ಲಿ ಬೌಲಿಂಗ್ ಮಾಡುವಾಗ ಕೂಡಾ ಒಂದು ಅವಶ್ಯಕ ವಿಧಿಯಂತೆ ಈ ಕ್ರಿಯೆಯನ್ನು ಅನುಕರಿಸುತ್ತಾರೆ. ಕಾಲೇಜು ಹಂತದಲ್ಲಿ ಕ್ರಿಕೆಟ್ ಆಡುವವರು ತಮ್ಮ ಬಿಳಿ ಪ್ಯಾಂಟಿನ ಮೇಲೆ ಚೆಂಡಿನ ಕೆಂಪು ಮಚ್ಚೆಗಳು ಮೂಡಿದೆಯೆಂದರೆ ತಾನೊಬ್ಬ ಮಹಾನ್ ವೇಗದ ಬೌಲರ್ ಎಂದು ಹೆಮ್ಮೆ ಪಟ್ಟುಕೊಳ್ಳುತ್ತಾರೆ!
ಬೌಲರನ ಕೈಯಿಂದ ಹೊರಟ ಚೆಂಡು ಬ್ಯಾಟ್ಸ್‍ಮನ್‍ನ ಕಡೆ ಗಾಳಿಯಲ್ಲಿ ಕ್ರಮಿಸುತ್ತಿರುವಾಗಲೇ ಅದಕ್ಕೊಂದು ವಕ್ರ ಪಥ ಪ್ರಾಪ್ತಿಯಾದರೆ ಅದನ್ನು ಸ್ವಿಂಗ್ ಎನ್ನುತ್ತಾರೆ. ಇದು ಕುಶಲ ವೇಗದ ಬೌಲರುಗಳಿಗೆ ಸಿದ್ಧಿಸಿರುವ ಕಲೆ. ಈ ಕಲೆಗಾರಿಕೆಯ ಹಿಂದೆ ವಿಜ್ಞಾನವಿದೆ. ಗಾಳಿಯಲ್ಲಿ ವಸ್ತುಗಳ ಚಲನೆಯು ಅನೇಕ ಅಂಶಗಳನ್ನು ಅವಲಂಭಿಸಿದೆ. ಭೂಮಿಯ ಗುರುತ್ವ, ವಸ್ತುವಿಗೆ ನೀಡಿದ ಪ್ರಾರಂಭಿಕ ವೇಗ, ವಾತಾವರಣದಲ್ಲಿನ ಆರ್ದೃತೆ ಇತ್ಯಾದಿ ಇತ್ಯಾದಿ. ವಸ್ತುವಿನ ಆಕಾರ ಮತ್ತು ಅದನ್ನು ಎಸೆದ ಕ್ರಮವೂ ಆ ವಸ್ತುವಿನ ಗತಿಯನ್ನು ನಿರ್ಧರಿಸುತ್ತದೆ. ಐದೂವರೆ ಔನ್ಸ್ ತೂಕದ ಕ್ರಿಕೆಟ್ ಬಾಲಿನ ಒಳಗೆ ಗಟ್ಟಿಯಾದ ಕಾರ್ಕ್ ಇರುತ್ತದೆ. ಅದರ ಸುತ್ತಲೂ ಚರ್ಮದ ಹೊದಿಕೆ. ಚರ್ಮದ ಹೊದಿಕೆಯ ಎರಡು ಅರ್ಧಗೋಳಗಳನ್ನು ಈ ಕಾರ್ಕಿನ ಮೇಲೆ ಜೋಡಿಸಿ ಹೊಲಿದ ರೇಖೆಯನ್ನು ಸೀಮ್ ಎನ್ನುತ್ತಾರೆ. ಪ್ರತಿ ಅರ್ಧಗೋಳವೂ ಎರಡು ಕಾಲು ಭಾಗಗಳ ಜೋಡಣೆಯಾಗಿದೆ. ಈ ಎರಡು ಕಾಲುಭಾಗಗಳನ್ನು ಒಳಗಡೆಯಿಂದ ಹೊಲಿದಿರುತ್ತಾರೆ. ಈ ಜೋಡಣೆ ಹೊರಗಿಂದ ಎದ್ದುಕಾಣುವುದಿಲ್ಲ. ಮುಖ್ಯ ಸೀಮ್‍ಗೆ ಲಂಭವಾಗಿರುವ ಈ ಗೆರೆಗೆ ಕ್ವಾರ್ಟರ್‍ಸೀಮ್ ಎನ್ನುತ್ತಾರೆ. ವೇಗದ ಬೌಲರುಗಳು ಮುಖ್ಯಸೀಮ್ ಗೆರೆಯಗುಂಟ ಬೆರಳುಗಳನ್ನು ಹಿಡಿದು ಚೆಂಡನ್ನು ಎಸೆಯುತ್ತಾರೆ. ಬೌಲರನ ಕೈಯಿಂದ ಹೊರಟ ಚೆಂಡನ್ನು ಗುರುತಿಸಿದ ಬ್ಯಾಟ್ಸ್‍ಮನ್ ಚೆಂಡು ಸರಳರೇಖೆಯಲ್ಲಿ ಚಲಿಸುವುದೆಂದು ನಿರೀಕ್ಷಿಸಿ ಬ್ಯಾಟ್ ಬೀಸಿದರೆ ಅದು ಬ್ಯಾಟನ್ನು ತಪ್ಪಿಸಿಕೊಂಡು ವಿಕೆಟ್ಟಿಗೆ ತಗಲುತ್ತದೆ ಅಥವಾ ಬ್ಯಾಟಿನ ಅಂಚನ್ನು ಸ್ಪರ್ಶಿಸಿ ಸ್ಲಿಪ್‍ನಲ್ಲಿರುವ ಫೀಲ್ಡರ್ ಕೈಸೇರುತ್ತದೆ. ವೇಗದ ಬೌಲಿಂಗನಲ್ಲಿ ಚೆಂಡಿಗೆ ಪ್ರಾಪ್ತವಾಗುವ ಈ ವಕ್ರಪಥವೇ ಸ್ವಿಂಗ್. ಸಾಂಪ್ರದಾಯಿಕ ಸ್ವಿಂಗ್ ಬೌಲರ್ ಚೆಂಡನ್ನು ಯಾವ ಕಡೆ ಸ್ವಿಂಗ್ ಮಾಡಬಹುದೆಂದು ಊಹಿಸಲು ಬ್ಯಾಟ್ಸಮನ್ ಗಳು ಬೌಲರ್‍ ಚೆಂಡಿನ ಹಿಡಿತ, ಎಸೆಯುವ ಭಂಗಿ, ಮಣಿಕಟ್ಟಿನ ಚಲನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಾರೆ. ಸಾಧ್ಯವಾದರೆ, ಚೆಂಡಿನ ನುಣುಪು ಭಾಗ ಯಾವ ಕಡೆ ಇದೆ, ಸೀಮ್ ಯಾವ ಕಡೆ ನಿರ್ದೇಶಿತವಾಗಿದೆ ಎನ್ನುವುದನ್ನೂ ನೋಡುತ್ತಾರೆ. ಇವೆಲ್ಲದರ ಆಧಾರದ ಮೇಲೆ ತನ್ನತ್ತ ಬರುತ್ತಿರುವ ಚೆಂಡು ಔಟ್ ಸ್ವಿಂಗ್ ಆಗಬಹುದೋ ಇನ್‍ಸ್ವಿಂಗ್ ಆಗಬಹುದೋ ಎಂದು ಅಂದಾಜಿಸುತ್ತಾರೆ ಮತ್ತು ತಕ್ಕಂತೆ ಬ್ಯಾಟ್ ಬೀಸುತ್ತಾರೆ. ಚೆಂಡಿನ ಸೀಮ್ ಎತ್ತ ಕಡೆ ಬೊಟ್ಟುಮಾಡಿರುತ್ತದೋ ಅದೇ ಕಡೆ ಬಾಲ್ ಸ್ವಿಂಗ್ ಆಗುತ್ತದೆ. ಸ್ವಿಂಗ್ ಮಾಡುವ ಕಲೆಯ ಹಿಂದೆ ಹೇಗೆ ವಿಜ್ಞಾನ ಅಡಗಿದೆಯೋ ಹಾಗೆ ಸ್ವಿಂಗ್‍ನ್ನು ಅಂದಾಜಿಸುವುದೂ ವಿಜ್ಞಾನವೇ! ರಾಕೆಟ್ ಸೈನ್ಸ್ ಕೆಲವರಿಗಾದರೂ ಅರ್ಥವಾಗಿದೆ, ಕ್ರಿಕೆಟ್ ಸೈನ್ಸ್ ಅರ್ಥಮಾಡಿಕೊಳ್ಳುವುದು ಕಷ್ಟ.
   ಗಾಳಿಯನ್ನು ಸೀಳಿಕೊಂಡು ಕ್ರಮಿಸುವ ಚೆಂಡಿನ ಮೇಲ್ಮೈಗುಂಟ ತೆಳುವಾದ ಗಾಳಿಯ ಪೊರೆಯೂ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತದೆ. ಈ ಪೊರೆ ಯಾವ ಬಿಂದುವಿನಲ್ಲಿ ಚೆಂಡನಿಂದ ಬೇರೆಯಾಗುತ್ತದೆ ಎಂಬುದು ಬಹಳ ಮುಖ್ಯ. ಇದು ಚೆಂಡಿನ ಸ್ವಿಂಗನ್ನು ನಿರ್ಧರಿಸುತ್ತದೆ. ಚೆಂಡಿನ ಎಡ ಮತ್ತು ಬಲ ಬದಿಗಳಲ್ಲಿ ಯಾವ ಬದಿಯಲ್ಲಿ ಕಡಿಮೆ ಒತ್ತಡ ಉಂಟಾಗುವುದೋ ಆ ಬದಿಗೆ ಚೆಂಡು ಸ್ವಿಂಗ್ ಆಗುತ್ತದೆ. ಹೊಸ ಚೆಂಡಿನ ಸೀಮ್ ಗೆರೆಯನ್ನು ಸ್ಲಿಪ್ ದಿಕ್ಕಿನತ್ತ ಬೊಟ್ಟುಮಾಡಿ ಎಸೆದರೆ ಆ ಬದಿಯ ಚೆಂಡಿನ ಒರಟು ಮೇಲ್ಮೈಗುಂಟ ಹೆಚ್ಚು ಸಮಯ ಗಾಳಿಯ ಚಲಿಸುವ ಪೊರೆ ಅಂಟಿಕೊಂಡಿರುತ್ತದೆ. ಇನ್ನೊಂದು ಬದಿಯ ನಯವಾದ ಮೇಲ್ಮೈ ಗಾಳಿಯನ್ನು ಹೊರತಳ್ಳುತ್ತದೆ. ಔಟ್ ಸ್ವಿಂಗ್ ಉಂಟಾಗುತ್ತದೆ. ಸೀಮ್‍ನ ಸರಿಯಾದ ಬಳಕೆಯಿಂದಾಗಿ ಎರಡೂ ಬದಿ ಒಂದೇ ಪ್ರಮಾಣದ ನುಣುಪು ಮೇಲ್ಮೈ ಹೊಂದಿದ್ದ ಮೊದಲ ಎಸೆತದಲ್ಲೂ ಚೆಂಡು ಸ್ವಿಂಗ್ ಮಾಡಬಹುದು. ಹೀಗೆ ಸ್ವಿಂಗ್ ಆಗುವ ಸಾಧ್ಯತೆ ಮತ್ತು ಪ್ರಮಾಣವನ್ನು ಹೆಚ್ಚಿಸಲಿಕ್ಕಾಗಿ ಚೆಂಡಿನ ಒಂದು ಬದಿಯನ್ನು ಹೆಚ್ಚು ನುಣುಪಾಗಿಡುವ ಪ್ರಯತ್ನವನ್ನು ಬೌಲರುಗಳು ಮಾಡುತ್ತಿರುತ್ತಾರೆ. ಮೈಬೆವರು, ಎಂಜಲನ್ನು ಸವರುತ್ತಾರೆ. ಟ್ರೌಸರಿಗೆ ಗಸಗಸ ಉಜ್ಜುತ್ತಾರೆ. ಇದರಲ್ಲಿ ತಪ್ಪಿಲ್ಲ. ಆದರೆ, ಕೆಲವು ಆಟಗಾರರು ಕ್ರಿಕೆಟ್ ನಿಯಮಗಳ ಸರಹದ್ದನ್ನು ಮೀರಿ ವ್ಯಾಸಲಿನ್‍ನಂತಹ ಬಾಹ್ಯ ವಸ್ತುಗಳನ್ನು ಚೆಂಡಿಗೆ ಸವರುವುದಿದೆ. ಹೀಗೆ ಮಾಡಿ ಸಿಕ್ಕಿ ಬಿದ್ದಿದ್ದೂ ಇದೆ. ಮ್ಯಾಚ್ ಗೆದ್ದಿದ್ದೂ ಇದೆ. ಸಾಂಪ್ರದಾಯಿಕ ಸ್ವಿಂಗ್ ಬೌಲಿಂಗಿಗೆ ಹೊಸ ಚೆಂಡೇ ಇರಬೇಕು, ಎಸೆತದ ವೇಗವೂ ಸಾಕಷ್ಟು ಹೆಚ್ಚಿರಬೇಕು. ಜೊತೆಗೆ, ಚೆಂಡಿನ ಹಿಡಿತ, ಸೀಮ್ ಬಳಕೆ, ಮುಂಗೈನ ಚಲನೆಗೆ ಸಂಬಂಧಿಸಿದಂತೆ ಸೂಕ್ತ ತಾಂತ್ರಿಕತೆ ತಿಳಿದಿರಬೇಕು. ಚೆಂಡು ಹಳೆತಾದರೆ ಏನು ಮಾಡುವುದು? ಇದ್ದಾರಲ್ಲ ಬಿಷನ್ ಬೇಡಿ, ಎರ್ರಂಪಳ್ಳಿ ಪ್ರಸನ್ನ, ಚಂದ್ರಶೇಖರ್, ಅನಿಲ್ ಕುಂಬ್ಳೆ, ಶೇನ್ ವಾರ್ನ್, ಅಬ್ದುಲ್ ಖಾದಿರ್, ಮಣಿಂದರ್ ಸಿಂಗ್, ರವಿಚಂದ್ರನ್ ಅಶ್ವಿನ್ ಒಬ್ಬರೇ ಇಬ್ಬರೇ?
  ಆದರೆ, ಈಗ ಹಾಗಿಲ್ಲ. ವೇಗದ ಬೌಲರುಗಳು ಹಳೆಯ ಬಾಲನ್ನೂ ಸ್ವಿಂಗ್ ಮಾಡುತ್ತಾರೆ. ಇದನ್ನು ರಿವರ್ಸ್ ಸ್ವಿಂಗ್ ಎನ್ನುತ್ತಾರೆ. ಪಾಕಿಸ್ತಾನದ ಕ್ಲಬ್ ಆಟಗಾರ ಸಲಿಮ್ ಮಿರ್ ಈ ಕಲೆಯನ್ನು ತನ್ನ ಸಹ ಆಟಗಾರ ಸರಫ್ರಾಜ್ ನವಾಜ್‍ರವರಿಗೆ ಕಲಿಸಿದರೆಂದೂ, ಅವರು ನಂತರ ಇಮ್ರಾನ್‍ಖಾನ್‍ರಿಗೆ ವರ್ಗಾಯಿಸಿದರೆಂದೂ ಹೇಳಲಾಗುತ್ತದೆ. ವಾಸಿಮ್ ಅಕ್ರಮ್, ವಕಾರ್ ಯೂನಿಸ್‍ರಷ್ಟೇ ಅಲ್ಲ ಭಾರತದ ಬೌಲರುಗಳೂ ಇಮ್ರಾನ್ ಖಾನ್ ರಿಂದಲೇ ಈ ವಿದ್ಯೆಯನ್ನು ಕಲಿತರೆಂದೂ ನಂತರ ಎಲ್ಲ ದೇಶಗಳ ವೇಗದ ಬೌಲರುಗಳಿಗೂ ಇದು ತಿಳಿಯಿತೆಂದೂ ಹೇಳುತ್ತಾರೆ. ಮೊನ್ನೆ ಆಸ್ಟ್ರೇಲಿಯನ್ನರು ಈ ವಿದ್ಯೆಯನ್ನು ಜಗಜ್ಜಾಹೀರು ಮಾಡಿಬಿಟ್ಟರು!
   ಹಳೆಯ ಚೆಂಡಿನಲ್ಲಿ ನುಣುಪು ಹೊಳೆಯುವ ಮೇಲ್ಮೈ ಇಲ್ಲದಿರುವುದರಿಂದ ಸಾಂಪ್ರದಾಯಿಕ ಸ್ವಿಂಗ್ ಬೌಲಿಂಗ್ ಸಾಧ್ಯವಿಲ್ಲ. ಒರಟಾಗಿರುವ ಬದಿಗಳಲ್ಲೇ ಒಂದು ಬದಿಯನ್ನು ಇನ್ನಷ್ಟು ಒರಟು ಮಾಡಿದರೆ ಅದು ಸಾಂಪ್ರದಾಯಿಕ ಸ್ವಿಂಗ್ ಬೌಲಿಂಗ್‍ನಲ್ಲಿ ನುಣುಪು ಬದಿ ವಹಿಸುವ ಪಾತ್ರವನ್ನೇ ವಹಿಸುತ್ತದೆ. ಅದೇ ವೇಗ, ಅದೇ ಶೈಲಿ, ಅದೇ ಬಗೆಯ ಸೀಮ್ ಹಿಡಿತ, ಅದೇ ಮಣಿಕಟ್ಟು ಚಲನೆಯೊಂದಿಗೆ ಬ್ಯಾಟ್ಸಮನ್‍ನಿಂದ ಹೊರಹೋಗುವ ಔಟ್ ಸ್ವಿಂಗ್ ಪ್ರಯತ್ನಿಸಿದರೆ ಇಲ್ಲಿ ಒಳಬರುವ ಇನ್ ಸ್ವಿಂಗ್ ಆಗುತ್ತದೆ. ಅದೇ ಕಾರಣಕ್ಕೆ ಇದು ರಿವರ್ಸ್ ಸ್ವಿಂಗ್. ಪ್ರಶ್ನೆ ಇರುವುದು ಇಲ್ಲೇ! ರಿವರ್ಸ್ ಸ್ವಿಂಗನ್ನು ಸಾಧಿಸಲು ಚೆಂಡಿನ ಒಂದು ಬದಿಯನ್ನು ಕುಳಿಗಳಿರುವ ಒರಟು ಮೇಲ್ಮೈಯನ್ನಾಗಿಸುವುದು ಹೇಗೆ? ಇದರಲ್ಲಿ ಪಾಕಿಸ್ತಾನದ ಬೌಲರುಗಳು ಚಾಂಪಿಯನ್ನರು. ಕೋಕೋಕೋಲಾ ಬಾಟಲಿಯ ಮುಚ್ಚಳ, ಗಮ್ ಟೇಪಿಗೆ ಮೆತ್ತಿದ ಸಕ್ಕರೆ, ಮರಳು ಅಥವಾ ಮಾರುಕಟ್ಟೆಯಲ್ಲಿ ದೊರೆಯುವ ಪಾಲಿಶ್ ಪೇಪರ್, ಮನೆಯಲ್ಲೇ ತಯಾರಿಸಿದ ಸಕ್ಕರೆ ಕ್ಯಾಂಡಿ ಹೀಗೆ ಯಾವುದೇ ಒರಟು ಮತ್ತು ಅಡಗಿಸಿಟ್ಟುಕೊಳ್ಳಬಹುದಾದ ವಸ್ತುವಿನಿಂದ ಚೆಂಡಿನ ರೂಪಗೆಡಿಸಬಹುದು.
  ಗಾಲ್ಫ್ ಚೆಂಡಿಗೆ ದೀಪಿಕಾ ಪಡುಕೋಣೆಯ ಕೆನ್ನೆಯ ಮೇಲಿರುವಂತಹ ಅನೇಕ ಡಿಂಪಲ್‍ಗಳಿರುವುದು ನಿಮಗೆ ಗೊತ್ತಿರಬಹುದು. ಗಾಲ್ಫ್ ಚೆಂಡು ನುಣುಪಾಗಿದ್ದರೆ ಗಾಳಿಯನ್ನು ಸೀಳಿಕೊಂಡು ಮುಂದೆ ಕ್ರಮಿಸುವಾಗ ವಿರುದ್ಧ ದಿಕ್ಕಿನಲ್ಲಿ ಚೆಂಡಿನ ಮೈಗುಂಟಾ ಚಲಿಸುವ ಗಾಳಿ ಬೇಗನೆ ಚೆಂಡಿನಿಂದ ಬೇರ್ಪಟ್ಟು ಹಿಂದೊಂದು ನಿರ್ವಾತದ ಪ್ರದೇಶವನ್ನುಂಟು ಮಾಡುತ್ತದೆ. ಈ ನಿರ್ವಾತವು ಚೆಂಡನ್ನು ಹಿಂದಕ್ಕೆಳೆಯುವುದರಿಂದ ದೂರ ಕ್ರಮಿಸಲಾರದು. ಕುಳಿಗಳಿರುವ ಚೆಂಡು ಅಷ್ಟೇ ಶಕ್ತಿಯಲ್ಲಿ ನುಣುಪು ಚೆಂಡಿನ ಎರಡು ಪಟ್ಟು ದೂರ ಚಲಿಸುತ್ತದೆ.
ಪ್ರಾಚೀನ ಜನರಿಗೂ ಏರೋಡೈನಾಮಿಕ್ಸ್ ಕುರಿತು ಸಾಕಷ್ಟು ತಿಳುವಳಿಕೆಯಿತ್ತು. ಸುಮಾರು 20,000 ವರ್ಷಗಳ ಹಿಂದೆಯೇ ಬೂಮರಾಂಗ್ ಎಂಬ ಸಾಧನವನ್ನು ಜನಬಳಸುತ್ತಿದ್ದರು. ಇದರ ಹುಟ್ಟು ಪೆÇೀಲೆಂಡ್‍ನಲ್ಲಾಗಿತ್ತು ಎನ್ನುತ್ತಾರೆ. ಶ್ರೀಮಂತ ರಾಜಕಾರಣಿಗಳು ಚಪ್ಪಲಿ, ಸೀರೆ, ಒಡವೆ, ಹಣವನ್ನು ಸಂಗ್ರಹಿಸಿಡುವ ಹಾಗೆ ಈಜಿಪ್ಟಿನ ರಾಜ ತುತಂಕಾಮನ್ ಸಾವಿರಾರು ಬೂಮರಾಂಗುಗಳನ್ನು ಸಂಗ್ರಹಿಸಿಟ್ಟಿದ್ದನಂತೆ!
ಆಸ್ಟ್ರೇಲಿಯನ್ನರು ವಾಪಸು ಬರುವ ಬೂಮರಾಂಗ್‍ಗಳನ್ನು ವಿನ್ಯಾಸಗೊಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಎರಡು ರೆಕ್ಕೆಗಳು 80 ರಿಂದ 120 ಕೋನದಲ್ಲಿ ಜೋಡಿಸಿಕೊಂಡಂತೆ ಇರುವ ಈ ಸರಳ ಸಾಧನಗಳು ಮಾನವನ ಅದ್ಭುತ ಸೃಷ್ಟಿಗಳಲ್ಲೊಂದು. ಹ್ಯಾಲಿಕಾಪ್ಟರಿನ ಬ್ಲೇಡಿನಂತೆ ಚಲಿಸುತ್ತಾ ಸಾಗುವ ಭೂಮರಾಂಗುಗಳು ವೃತ್ತೀಯಪಥದಲ್ಲಿ ಸಾಗುತ್ತಾ ಪುನಃ ಪ್ರಾರಂಭಿಕ ಸ್ಥಳಕ್ಕೆ ಆಗಮಿಸುವುದು ಅದ್ಭುತವಲ್ಲದೇ ಮತ್ತೇನು? `ನನ್ನ ಬೂಮರಾಂಗ್ ವಾಪಾಸು ಬರುವುದಿಲ್ಲ' ಎಂಬುದು ಬಹಳ ಗರ್ವದಿಂದ ಆಡುವ ಮಾತು; ಖಂಡಿತ ಗುರಿ ತಲುಪುತ್ತದೆ ಎಂಬ ಆತ್ಮವಿಶ್ವಾಸದ ಮಾತು.
  ಆದರೆ, ಈ ಬಾರಿ ಆಸ್ಟ್ರೇಲಿಯನ್ನರ ಬೂಮರಾಂಗು ವಾಪಸ್ ಬಂದಿದೆ!