Monday 28 July 2014

ಎಸ್. ಎಸ್. ಎಲ್. ಸಿ ಗೆ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ.



   ರಾಜ್ಯ ಪಠ್ಯಕ್ರಮದ ಹತ್ತನೆಯ ತರಗತಿಗೆ ಈ ಶೈಕ್ಷಣಿಕ ವರ್ಷದಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಗಳಿಗೂ ಸರ್ಕಾರ ಬದಲಾವಣೆ ತಂದಿದೆ. ಬದಲಾದ ಪದ್ಧತಿಯನ್ನು `ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ’ ಎಂದು ಕರೆಯಲಾಗಿದೆ.
   ಹೊಸ ಮೌಲ್ಯಮಾಪನ ಪದ್ಧತಿಯು ಕಲಿಕೆಯ ವಿಷಯಗಳನ್ನು ಪಠ್ಯ(scholastic) ಮತ್ತು ಸಹಪಠ್ಯ(Non scholastic) ಎಂಬುದಾಗಿ ವಿಂಗಡಿಸುತ್ತದೆ. ಪಠ್ಯ ವಿಷಯದಲ್ಲಿ  ಆಂತರಿಕ ಮತ್ತು ಬಾಹ್ಯ ಮೌಲ್ಯಮಾಪನ ಇರುತ್ತದೆ. ಬಾಹ್ಯ ಮೌಲ್ಯಮಾಪನಕ್ಕೆ ಶೇಖಡಾ 80 ರಷ್ಟು ಮತ್ತು ಆಂತರಿಕ ಮೌಲ್ಯಮಾಪನಕ್ಕೆ ಶೇಖಡಾ 20 ರಷ್ಟು ಪ್ರಾಧಾನ್ಯತೆ ಇರುತ್ತದೆ. ಪ್ರಥಮ ಭಾಷೆ, ದ್ವಿತೀಯ ಭಾಷೆ, ತೃತಿಯ ಭಾಷೆ, ಗಣಿತ, ಸಾಮಾನ್ಯ ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳು ಪಠ್ಯ ವಿಷಯಗಳಾಗಿದ್ದು, ಇವುಗಳಿಗೆ ಒಟ್ಟಾಗಿ 500 ಅಂಕಗಳ ಬಾಹ್ಯ ಪರೀಕ್ಷೆಯನ್ನು ಶೈಕ್ಷಣಿಕ ವರ್ಷಾಂತ್ಯದಲ್ಲಿ ನಡೆಸಲಾಗುತ್ತದೆ. ಉತ್ತೀರ್ಣತೆ ಹೊಂದಲು ಪ್ರಥಮ ಭಾಷೆಯ ಗರಿಷ್ಠ 100 ಅಂಕಗಳ ಬಾಹ್ಯ ಪರೀಕ್ಷೆಯಲ್ಲಿ ಕನಿಷ್ಠ 30 ಅಂಕಗಳನ್ನೂ ಉಳಿದ ಪಠ್ಯವಿಷಯಗಳ 80 ಅಂಕಗಳ ಬಾಹ್ಯ ಪರೀಕ್ಷೆಯಲ್ಲಿ ಕನಿಷ್ಠ 24 ಅಂಕಗಳನ್ನೂ ಪಡೆಯಬೇಕಾಗುತ್ತದೆ. ಜೊತೆಗೆ, ಬಾಹ್ಯ ಪರೀಕ್ಷೆಯ ಒಟ್ಟು 500 ಅಂಕಗಳಲ್ಲಿ 175 ಅಂಕಗಳನ್ನು ಪಡೆಯಬೇಕು. ವಿದ್ಯಾರ್ಥಿಯ ಪಠ್ಯ ವಿಷಯಗಳಲ್ಲಿನ ಸಾಧನೆಯನ್ನು ಅಂಕಗಳು, ಶ್ರೇಣಿಗಳಲ್ಲಿ ಗುರುತಿಸುವುದರೊಂದಿಗೆ ಸಂಚಿತ ದರ್ಜಾಂಶ ಸರಾಸರಿಯಲ್ಲೂ ಸೂಚಿಸಲಾಗುವುದು. ಆದರೆ, ಸಹಪಠ್ಯ ವಿಷಯಗಳಾದ ದೈಹಿಕ ಮತ್ತು ಆರೋಗ್ಯ ಶಿಕ್ಷಣ, ಕಾರ್ಯಾನುಭವ, ಮನೋಭಾವನೆ ಮತ್ತು ಮೌಲ್ಯಶಿಕ್ಷಣ, ಕಲಾಶಿಕ್ಷಣಗಳಿಗೆ ಬಾಹ್ಯ ಮೌಲ್ಯಮಾಪನ ಇರುವುದಿಲ್ಲ. ಸಹಪಠ್ಯ ವಿಷಯಗಳಲ್ಲಿನ ವಿದ್ಯಾರ್ಥಿಯ  ಸಾಧನೆಯನ್ನು ಎ, ಬಿ  ಅಥವಾ ಸಿ ಶ್ರೇಣಿಗಳಲ್ಲಿ ಗುರುತಿಸಲಾಗುತ್ತದೆ.

    ಪ್ರತಿ ಪಠ್ಯ ವಿಷಯಕ್ಕೂ 200 ಅಂಕಗಳ ಆಂತರಿಕ ಮೌಲ್ಯಮಾಪನವನ್ನು ನಡೆಸಲಾಗುತ್ತದೆ. ಆಂತರಿಕ ಮೌಲ್ಯಮಾಪನವನ್ನು ನಾಲ್ಕು ರೂಪಣಾತ್ಮಕ ಮೌಲ್ಯಮಾಪನಗಳಾಗಿ ವಿಭಜಿಸಲಾಗಿದ್ದು, ಪ್ರತಿ ರೂಪಣಾತ್ಮಕ ಮೌಲ್ಯಮಾಪನದಲ್ಲಿಯೂ 20 ಅಂಕಗಳ ಒಂದು ಕಿರು ಪರೀಕ್ಷೆ ಮತ್ತು 15 ಅಂಕಗಳ ಎರಡು ಚಟುವಟಿಕೆಗಳನ್ನು ನಡೆಸಲಾಗುತ್ತದೆ. ವಿದ್ಯಾರ್ಥಿಯು ನಿರ್ವಹಿಸಬೇಕಾದ ಚಟುವಟಿಕೆಗಳ ಪಟ್ಟಿಯನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಒದಗಿಸುತ್ತದೆ. ತಮ್ಮ ವಿದ್ಯಾರ್ಥಿಗಳಿಗೆ ಸೂಕ್ತವಾದ ಚಟುವಟಿಕೆಗಳನ್ನು ಶಿಕ್ಷಕರೆ ಈ ಪಟ್ಟಿಯಿಂದ ಆಯ್ದುಕೊಳ್ಳಬಹುದಾಗಿದೆ. ಹೀಗೆ, ಪ್ರಥಮ ಭಾಷೆಯನ್ನು ಹೊರತು ಪಡಿಸಿ ಪ್ರತಿ ವಿಷಯದ ಅಂತರಿಕ ಮೌಲ್ಯಮಾಪನದಲ್ಲಿ ಗಳಿಸಿದ ಅಂಕಗಳ 1/10 ಭಾಗವನ್ನು(ಗರಿಷ್ಠ 20 ಅಂಕಗಳು) ಮತ್ತು ಪ್ರಥಮ ಭಾಷೆಯಲ್ಲಾದರೆ, ಆಂತರಿಕ ಮೌಲ್ಯಮಾಪನದದಲ್ಲಿ ಗಳಿಸಿದ ಅಂಕಗಳ 1/8 ಭಾಗವನ್ನು (ಗರಿಷ್ಠ 25 ಅಂಕಗಳು) ಬಾಹ್ಯ ಮೌಲ್ಯಮಾಪನದ ಅಂಕಗಳೊಂದಿಗೆ ಸಂಯೋಜಿಸಲಾಗುತ್ತದೆ. ಅರ್ಧವಾರ್ಷಿಕ ಪರೀಕ್ಷೆ ಮತ್ತು ಸಿದ್ಧತಾ ಪರೀಕ್ಷೆಗಳು ಆಂತರಿಕ ಮೌಲ್ಯಮಾಪನದಲ್ಲಿ ಸೇರುವುದಿಲ್ಲ.
   ಖಾಸಗಿ ವಿದ್ಯಾರ್ಥಿಗಳು ಮತ್ತು ವಿಶೇಷ ವಿದ್ಯಾರ್ಥಿಗಳಿಗೆ ಬಾಹ್ಯ ಮೌಲ್ಯಮಾಪನವು ಆರು ಪಠ್ಯವಿಷಯಗಳಿಗೆ ಗರಿಷ್ಠ 625 ಅಂಕಗಳಾಗಿರುತ್ತವೆ. ಬಿ ವಿಭಾಗದ ಸಹಪಠ್ಯ ವಿಷಯಗಳ ಮೌಲ್ಯಮಾಪನ ಇರುವುದಿಲ್ಲ.

ಈ ಪದ್ಧತಿ ಎಷ್ಟು ನಿರಂತರ, ಎಷ್ಟು ಸಮಗ್ರ?

  ಶಿಕ್ಷಕರು ಬಳಸುವ ಮೌಲ್ಯಮಾಪನ ತಂತ್ರಗಳು ಮಗುವಿನ ಬಲ ಮತ್ತು ದೌರ್ಬಲ್ಯಗಳಿಗೆ ಸಂವೇದನಾಶೀಲವಾಗಿರಬೇಕು. ಇದರಿಂದ ಮೌಲ್ಯಮಾಪನವು ಮಾನವೀಯಗೊಳ್ಳಬಲ್ಲದು. ಮೌಲ್ಯಮಾಪನ ವಿಧಾನಗಳು ಸ್ಪಷ್ಟ ಮತ್ತು ವಿಶ್ವಾಸಾರ್ಹ ಹಿಮ್ಮಾಹಿತಿಗಳನ್ನು ವಿದ್ಯಾರ್ಥಿಗಳಿಗೂ, ಶಿಕ್ಷಕರಿಗೂ ಒದಗಿಸುವಂತಿರಬೇಕು.  ಜೊತೆಗೆ, ಮೌಲ್ಯಮಾಪನವನ್ನು ಒಂದು ಅರ್ಥಪೂರ್ಣ ತರಗತಿ ಸಂವಹನವಾಗಿಯೂ ಗ್ರಹಿಸುವ ಅವಶ್ಯಕತೆಯಿದೆ. ಪ್ರತಿ ವಿದ್ಯಾರ್ಥಿಯೂ ಭಿನ್ನ ಸಾಮಾಜಿಕ ಮತ್ತು ಕೌಟುಂಬಿಕ ಹಿನ್ನೆಲೆಯನ್ನು ಹೊಂದಿರುತ್ತದೆ. ವಿದ್ಯಾರ್ಥಿಗೆ ದೊರೆಯುವ ಅನುಭವಗಳು ವಿಭಿನ್ನವಾಗಿರುತ್ತವೆ ಮತ್ತು ಅವುಗಳನ್ನು ಗ್ರಹಿಸುವ ರೀತಿ ಪ್ರತಿ ವಿದ್ಯಾರ್ಥಿಗೂ ವಿಶಿಷ್ಟವಾಗಿರುತ್ತದೆ. ಆದುದರಿಂದಲೇ, ಮೌಲ್ಯಮಾಪನವು ವಿದ್ಯಾರ್ಥಿಯ ಅನನ್ಯತೆಯನ್ನು ಗಣನೆಗೆ ತೆಗೆದುಕೊಳ್ಳುವುದು ಅವಶ್ಯಕ.

    ಪಠ್ಯವಿಷಯವೊಂದರ ಕಲಿಕೆಗೆ ಸಂಬಂಧಿಸಿದ ಸಾಧನೆಗಳನ್ನು  ಮಗುವಿನ ಸಹಜ ವರ್ತನೆಗಳಲ್ಲಿ ವಿವಿಧ ಸಾಧನ ಮತ್ತು ತಂತ್ರಗಳ ಸಹಾಯದಿಂದ ಹುಡುಕುವುದೇ  ರೂಪಣಾತ್ಮಕ ಮೌಲ್ಯಮಾಪನ. ರೂಪಣಾತ್ಮಕ ಮೌಲ್ಯಮಾಪನವು ಕಾರ್ಯರೂಪದಲ್ಲಿ ತೀರಾ ಹೊಸದಾದ ಪರಿಕಲ್ಪನೆ. ಇದಕ್ಕೆ ಅಗತ್ಯವಾದ ಸಾಧನಗಳು, ತಂತ್ರಗಳು ಮತ್ತು ಅಳತೆಗೋಲುಗಳನ್ನು ಪ್ರತಿ ವಿದ್ಯಾರ್ಥಿಯ ವಿಶಿಷ್ಠತೆಗಳನ್ನು ಲಕ್ಷಿಸಿಕೊಂಡೇ ರೂಪಿಸಬೇಕಾಗುತ್ತದೆ. ಭಾಷೆಯ ಸೃಜನಶೀಲ ಬಳಕೆಯನ್ನಾಗಲೀ, ಬದುಕಿನ ನಿರ್ಧಾರ ತೆಗೆದುಕೊಳ್ಳುವಾಗ ವಿಜ್ಞಾನದ ವಿಧಾನಗಳನ್ನು ಅನುಸರಿಸುವುದನ್ನಾಗಲೀ, ಅಭಿವ್ಯಕ್ತಿಯಲ್ಲಿ ಗಣಿತವನ್ನು ಪರಿಣಾಮಕಾರಿಯಾಗು ಬಳಸುವುದನ್ನಾಗಲೀ ಅಳೆಯಬೇಕಾದರೆ ಮೌಲ್ಯಮಾಪನವನ್ನು ತರಗತಿ ಸಂವಹನದ ಭಾಗವಾಗಿ ಗ್ರಹಿಸುತ್ತಾ ಶಿಕ್ಷಕಿಯು ಉದ್ಧೇಶಪೂರ್ವಕ ಸಂದರ್ಭಗಳನ್ನು ಕಲಿಕೆಯ ಪರಿಸರದಲ್ಲೇ ಸೃಷ್ಟಿಸಿಕೊಳ್ಳಬೇಕಾಗುತ್ತದೆ. ಶೈಕ್ಷಣಿಕ ಸಾಧನೆಗಳ ಜೊತೆಗೆ, ಮಗುವಿನ ಸಾಮಾಜಿಕ, ಭಾವನಾತ್ಮಕ, ವೈಜ್ಞಾನಿಕ ಕೌಶಲಗಳು ಮತ್ತು ಮೌಲ್ಯ ರೂಪಣೆ ಹಾಗೂ ಮನೋಧೋರಣೆಗಳಲ್ಲಿರುವ ಧನಾತ್ಮಕ ಅಂಶಗಳನ್ನು ಗುರುತಿಸುವ ಮೂಲಕ ಸಮಗ್ರ ವ್ಯಕ್ತಿತ್ವದ ಮೌಲ್ಯಮಾಪನ ನಡೆಯಬೇಕು. ರೂಪಣಾತ್ಮಕ ಮೌಲ್ಯಮಾಪನವು ಪ್ರತಿಫಲನಾತ್ಮಕ ವಿದ್ಯಾರ್ಥಿಯನ್ನೂ, ಪ್ರತಿಫಲನಾತ್ಮಕ ಶಿಕ್ಷಕರನ್ನೂ ರೂಪಿಸಬಲ್ಲದು. ರೂಪಣಾತ್ಮಕ ಮೌಲ್ಯಮಾಪನವು ಕಲಿಕೆಯ ಅವಕಾಶ ಮತ್ತು ಅಭಿಪ್ರೇರಣೆಯನ್ನು ಒದಗಿಸುತ್ತದೆ.

   ಆದರೆ, ಕಲಿಕೆ ಮತ್ತು ಮೌಲ್ಯಮಾಪನಗಳ ನಡುವಿನ ಅಂತರವನ್ನು ಹೋಗಲಾಡಿಸುವ ಪ್ರಯತ್ನವಾಗಿ ಹಿಂದಿನ ತರಗತಿಗಳಲ್ಲಿ ಜಾರಿಗೆ ತಂದಿರುವ ಸಿ.ಸಿ.ಇ ಗೂ ಮತ್ತು  ಈ ಪದ್ಧತಿಗೂ ಸಾಕಷ್ಟು ತಾತ್ವಿಕ ವ್ಯತ್ಯಾಸಗಳಿವೆ. ಈಗ ಹತ್ತನೇ ತರಗತಿಗೆ ಅಳವಡಿಸಲಾದ ಮೌಲ್ಯಮಾಪನ ಪದ್ಧತಿಯು ವರ್ಷಾಂತ್ಯದಲ್ಲಿ ಬರುವ ಬಾಹ್ಯ ಪರೀಕ್ಷೆಗೇ ಹೆಚ್ಚು ಮಹತ್ವ ನೀಡುತ್ತದೆ. ರೂಪಣಾತ್ಮಕ ಮೌಲ್ಯಮಾಪನ ಇರುವುದಾದರೂ ಅವು ನಿಗಧಿತ ಅಂತರದಲ್ಲಿ ನಡೆಯುವ ಕಿರುಪರೀಕ್ಷೆಗಳು ಮತ್ತು ಶಿಕ್ಷಕರೇ ನಿರ್ಧರಿಸುವ ಚಟುವಟಿಕೆಗಳನ್ನು ಒಳಗೊಂಡಿರುತ್ತವೆ. ಆಂತರಿಕ ಮೌಲ್ಯಮಾಪನದ ಕಿರುಪರೀಕ್ಷೆಗಳು ಸಂಕಲನಾತ್ಮಕ ಸ್ವರೂಪದಲ್ಲಿರುವುದರಿಂದ ಮತ್ತು ಚಟುವಟಿಕೆಗಳು ಮೌಲ್ಯಮಾಪನಕ್ಕಾಗಿಯೇ ಹಮ್ಮಿಕೊಳ್ಳುವುದರಿಂದ ಇವುಗಳು ವಿದ್ಯಾರ್ಥಿಗೂ ಶಿಕ್ಷಕರಿಗೂ ಹಿಮ್ಮಾಹಿತಿಯನ್ನೊದಗಿಸುತ್ತಾ ಕಲಿಕೆಯ ಭಾಗವಾಗಿ `ನಿರಂತರ’ಗೊಳ್ಳುವ ಸಾಧ್ಯತೆ ಕಡಿಮೆ. ಹಿಂದಿನ ತರಗತಿಗಳಲ್ಲಿ ದೈಹಿಕ ಶಿಕ್ಷಣ, ಕಲಾ ಶಿಕ್ಷಣ ಮತ್ತು ಕಾರ್ಯ ಶಿಕ್ಷಣಗಳನ್ನು ಪಠ್ಯವಿಷಯಗಳಾಗಿ ಸ್ವೀಕರಿಸಿ ತರಗತಿ ಪ್ರಕ್ರಿಯೆಗಳಲ್ಲಿ ಅವುಗಳ ಮಹತ್ವವನ್ನು ಹೆಚ್ಚಿಸಲಾಗಿದೆ. ಹತ್ತನೇ ತರಗತಿಯಲ್ಲಿ ಮಾತ್ರ ಅವು ಬಿ-ಭಾಗದಲ್ಲಿ ಮುಂಚಿನಂತೆ ಕಡಿಮೆ ಮಹತ್ವದ ವಿಷಯಗಳಾಗಿ ಮುಂದುವರಿಯುತ್ತವೆ.ಅಂದರೆ, ಈ ಹಿಂದಿನಂತೆ ಪಠ್ಯವಿಷಯದ ಶಿಕ್ಷಕರು ತಮಗೆ ಅವಧಿ ಕಡಿಮೆಯಾದಲ್ಲಿ ದೈಹಿಕ ಶಿಕ್ಷಣದ ಅವಧಿಗಳನ್ನೋ, ಕಲಾಶಿಕ್ಷಣದ ಅವಧಿಗಳನ್ನೋ ತೆಗೆದುಕೊಳ್ಳುವ ಪರಿಪಾಠ ಮುಂದುವರಿಯಲಿದೆ. ಈ ಪದ್ಧತಿಯನ್ನು ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಎಂದು ಕರೆಯಲಾಗಿದ್ದರೂ, ಅಂತಿಮ ಪರೀಕ್ಷೆಯೇ ಮಗುವನ್ನು ಪಾಸೋ ಫೇಲೋ ಎಂದು ನಿರ್ಧರಿಸುವ ಸಾಂಪ್ರದಾಯಿಕ ಪರೀಕ್ಷಾ ಪದ್ಧತಿಯಿಂದ ಈ ಪದ್ಧತಿ ಭಿನ್ನವಾಗಿ ನಿಲ್ಲುವುದಿಲ್ಲ. ಈ ಮಿತಿಗಳಿಗೆ ಎಸ್. ಎಸ್. ಎಲ್. ಸಿ ಯು ಪಬ್ಲಿಕ್ ಪರೀಕ್ಷೆಯಾಗಿರುವುದೇ ಕಾರಣ ಎಂಬುದನ್ನು ಅರ್ಥಮಾಡಿಕೊಳ್ಳಬಹುದು.
  ಕಲಿಕೆಯ ಉತ್ಪನ್ನದೊಡನೆ ಕಲಿಕೆಯ ಪ್ರಕ್ರಿಯೆಯನ್ನೂ ಮೌಲ್ಯಮಾಪನಕ್ಕೊಳಪಡಿಸುವ ಮೌಲ್ಯಮಾಪನ ಪದ್ಧತಿ ಈಗಿನ ಅಗತ್ಯವಾಗಿದೆ. ವಿದ್ಯಾರ್ಥಿಯ ಶೈಕ್ಷಣಿಕ ಸಾಧನೆಗಳ ಜೊತೆಗೆ ಸಾಮಾಜಿಕ ಕೌಶಲಗಳು, ಜೀವನ ಕೌಶಲಗಳು ಮತ್ತು ವೈಜ್ಞಾನಿಕ ಕೌಶಲಗಳನ್ನೂ ಮೌಲ್ಯಮಾಪನದ ತೆಕ್ಕಗೆ ಸೇರಿಸುವ ಮತ್ತು ಪ್ರತಿ ವಿದ್ಯಾರ್ಥಿಯ ಬಲ-ದೌರ್ಬಲ್ಯಗಳಿಗೆ ಸಂವೇದನಾಶೀಲವಾಗಿರುವ ಮಾನವೀಯ ಮೌಲ್ಯಮಾಪನ ಪದ್ಧತಿಯೊಂದರ ಬೀಜಗಳು ಈಗ ಜಾರಿಗೆ ತಂದಿರುವ ಪದ್ಧತಿಯಲ್ಲೇ ಕಾಣಸಿಗುತ್ತಿರುವುದು ಸಮಾಧಾನದ ಸಂಗತಿ. 

No comments: