Tuesday 13 March 2018

ಆಕಾಶದ ಬೆರಗು ಮತ್ತು ಜನ್ಮಕುಂಡಲಿ

ಈ ವಿಶ್ವಕ್ಕೆ ಅಂಚುಗಳಿಲ್ಲ; ಮನುಷ್ಯ ಪ್ರಯತ್ನದ ಸಾಧ್ಯತೆಗಳಿಗೆ ಸೀಮೆಯೆಂಬುದು ಇಲ್ಲವೇ ಇಲ್ಲ.

-ಸ್ಟೀಫನ್ ಹಾಕಿಂಗ್
 
  ನಮ್ಮೂರ ಅಂಚಿಗಿರುವ ಆಚೆಮರುಕಲ ಗುಡ್ಡದ ಮೇಲೆ ನಿಂತು ಜೈ ಚಾಚಿದರೆ  ಆಕಾಶವನ್ನೇ ಮುಟ್ಟಬಹುದಲ್ಲ ಎಂದು ಚಿಕ್ಕವನಿರುವಾಗ ಚಕಿತನಾಗುತಿದ್ದೆ. ಇದು ನನ್ನೊಬ್ಬನ ಬೆರಗಲ್ಲ; ಎಲ್ಲರ ಬಾಲ್ಯದ ಬೆರಗು.
    ಇಂತಹ ಬೆರಗು, ಕುತೂಹಲಗಳು ಇಲ್ಲದೇ ಹೋಗಿದ್ದರೆ ಅದು ಬಾಲ್ಯವಾಗಿರುತಿತ್ತೇ?
   ಹೌದು, ಆಕಾಶವು ದಿಗಂತವನ್ನು ಸ್ಪರ್ಶಿಸಿದಂತೆ ಕಾಣುತ್ತದೆ. ದೊಡ್ಡ ಕೊಡೆಯನ್ನು ಭೂಮಿಯ ಮೇಲೆ ಬೋರಲು ಹಾಕಿದಂತೆ. ರಾತ್ರಿಯಲ್ಲಾದರೆ, ಆ ಅರ್ಧಗೋಳಕ್ಕೆ ಬೇರೆ ಬೇರೆ ಪ್ರಕಾಶದ ನಕ್ಷತ್ರಗಳನ್ನು ಅಂಟಿಸಿಟ್ಟ ಹಾಗೆ ಕಾಣುತ್ತದೆ. ನಮಗೆ ರಾತ್ರಿಯಿರುವಾಗ ಭೂಮಿಯ ಇನ್ನೊಂದು ಬದಿಯಲ್ಲಿರುವವರಿಗೆ ಹಗಲಾಗಿರುತ್ತದಲ್ಲ? ಅಲ್ಲಿಯೂ ಅಂತದ್ದೇ ಅರ್ಧಗೋಳ ಇರುತ್ತದೆ ಎಂಬುದನ್ನು ಕಲ್ಪಿಸಿಕೊಳ್ಲುವುದು ಕಷ್ಟವಲ್ಲ. ಇಲ್ಲಿಗೆ, ಒಂದು ಪೂರ್ತಿಗೋಳ ಉಂಟಾಗುತ್ತದೆ. ಇದೇ ಖಗೋಳ! ನಾವು ಕಾಣುವ ಖಗೋಳ ನಮ್ಮ ಇಂದ್ರೀಯಗಳ ಮಿತಿಗಳನ್ನು ಬಹುಪಾಲು ಆಧರಿಸಿದೆ. ನಾವಿರುವ ಭೂಮಿಯು ಸೌರವ್ಯೂಹದ ಸದಸ್ಯ. ತನ್ನ ಅಕ್ಷದ ಸುತ್ತ ಸುತ್ತುತ್ತಲೇ ಸೂರ್ಯನ ಸುತ್ತ ಪರಿಭ್ರಮಿಸುತ್ತಿದೆ. ಭೂಮಿಯನ್ನು ಆವರಿಸಿರುವ ವಾಯುಮಂಡಲ ನಮ್ಮ ದೃಷ್ಟಿಗೆ ಪರದೆಯನ್ನು ಹಾಕಿದೆ. ನಮ್ಮ ಯೋಚನೆಗಳ ಮಿತಿಯನ್ನಂತೂ ನಾವು ದಾಟಲಾರೆವು. ಇದೆಲ್ಲದರ ಪರಿಣಾಮವಾಗಿ, ನಮಗೆ ಕಾಣುವ ನೋಟ ಸಾಕಷ್ಟು ವಿರೂಪಗೊಂಡಿದೆ. ರಾತ್ರಿಯಾಕಾಶದಲ್ಲಿ ಕಾಣುವ ನಕ್ಷತ್ರಗಳೆಲ್ಲ ಪೂರ್ವದಿಂದ ಪಶ್ಚಿಮಕ್ಕೆ ಚಲಿಸುತ್ತಿರುವಂತೆ ಕಾಣುತ್ತವೆ; ಬಸ್ಸು ವೇಗವಾಗಿ ಮುಂದಕ್ಕೆ ಚಲಿಸುವಾಗ ರಸ್ತೆಯ ಇಕ್ಕೆಲಗಳಲ್ಲಿರುವ ಮರ-ಗಿಡಗಳು, ಕಟ್ಟಡಗಳು ಅದೇ ವೇಗದಲ್ಲಿ ಹಿಂದಕ್ಕೆ ಚಲಿಸದ ಹಾಗೆ ಕಾಣಿಸುತ್ತದಲ್ಲ, ಹಾಗೆ! ಅಲ್ಲಿರುವ ನಕ್ಷತ್ರಗಳೆಲ್ಲ ನಮ್ಮಿಂದ ಒಂದೇ ದೂರದಲ್ಲಿರುವ ಹಾಗೆ ಕಾಣುವುದೂ ದೃಷ್ಟಿ ಭ್ರಮೆಯೇ! ರಾತ್ರಿಯಾಕಾಶದಲ್ಲಿ ಕಾಣುವ ನಕ್ಷತ್ರಗಳ ಗೋಚರ ಪ್ರಕಾಶಗಳ ವ್ಯತ್ಯಾಸವೂ ಸಹ ಅವುಗಳ ವಾಸ್ತವ ಪ್ರಕಾಶದ ವ್ಯತ್ಯಾಸಗಳನ್ನು ಪ್ರತಿನಿಧಿಸುವುದಿಲ್ಲ. ಹತ್ತಿರದ ಮೊಂಬತ್ತಿಯ ಜ್ವಾಲೆ ದೂರದ ಬೀದಿದೀಪಕ್ಕಿಂತ ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತದಲ್ಲ? ಹಾಗಂತ, ಪ್ರಕಾಶಮಾನವಾಗಿರುವವೆಲ್ಲ ಹತ್ತಿರದಲ್ಲಿವೆಯೆಂದೂ ಮಂದ ಬೆಳಕಿನ ನಕ್ಷತ್ರಗಳೆಲ್ಲವೂ ದೂರದಲ್ಲಿವೆಯೆಂದೂ ಸಾರಾಸಗಟು ಹೇಳಲಾಗದು.
ನಮಗೆ ಕಾಣುವುದಂತೂ ಹೀಗೆಯೇ! ನಮ್ಮ ನಡುನೆತ್ತಿಯ ಮೇಲೆ ಭೂಮಿಗೆ ಲಂಭವಾಗಿ ಗೆರೆ ಎಳೆದರೆ ಆ ಗೆರೆಯು ನಾವು ಕಾಣುವ ಅರ್ಧ ಖಗೋಳದ ಖಮಧ್ಯವನ್ನು ಹಾದುಹೋಗುತ್ತದೆ. ಈ ಇಡೀ ಗೋಳವು ಅಂಟಿಕೊಂಡಿರುವ ನಕ್ಷತ್ರಗಳ ಸಮೇತವಾಗಿ ಪೂರ್ವದಿಂದ ಪಶ್ಚಿಮಕ್ಕೆ ಚಲಿಸುತ್ತಿದೆ. ಹೀಗೆ ಪರಿಭ್ರಮಿಸುತ್ತಿರುವ ಗೋಳದ ಅಕ್ಷವು ಉತ್ತರದಿಂದ ದಕ್ಷಿಣಕ್ಕೆ ಹಾದುಹೋಗುತ್ತದೆ. ರಾತ್ರಿಯಾಕಾಶದಲ್ಲಿ ಕಾಣುವ ನಕ್ಷತ್ರಗಳ ಸಂಖ್ಯೆ ಎಷ್ಟು ದೊಡ್ಡದೆಂದರೆ ಖಗೋಳವನ್ನು ಆವರಿಸಿರುವ ಈ ಎಲ್ಲ ನಕ್ಷತ್ರಗಳನ್ನು ಬಿಡಿ ಬಿಡಿಯಾಗಿ ಗುರುತಿಸುವುದು ಸಾಮಾನ್ಯ ಕಣ್ಣುಗಳಿಗೆ ಅಸಾಧ್ಯ. ಭೂಮಿಯ ಭ್ರಮಣೆಯಿಂದಾಗಿ ನಕ್ಷತ್ರಗಳು ಪೂರ್ವದಿಂದ ಪಶ್ಚಿಮಕ್ಕೆ ಚಲಿಸಿದಂತೆ ಕಂಡರೂ ಅವುಗಳÀ ಪರಸ್ಪರ ಸಾಪೇಕ್ಷ ಸ್ಥಾನ`ಮಾನ’ ಬದಲಾಗದು. ಇದರಿಂದಾಗಿ, ಆಕಾಶದಲ್ಲಿ ಈ ಚುಕ್ಕಿಗಳನ್ನೆಲ್ಲ ಸೇರಿಸಿ ಖಾಯಂ ರಂಗೋಲಿಗಳನ್ನು ಕಲ್ಪಿಸಿಕೊಳ್ಳಬಹುದು. ನಕ್ಷತ್ರ ಸಮೂಹವನ್ನು ಚಿತ್ರಾಕೃತಿಯಾಗಿ ಗುರುತಿಸಿದರೆ ಅದನ್ನು ನಕ್ಷತ್ರ ಪುಂಜಗಳೆನ್ನುತ್ತೇವೆ. ಹನ್ನೆರಡು ಮನುಷ್ಯಾಕೃತಿಗಳು, ಒಂಬತ್ತು ಹಕ್ಕಿಗಳು, ಹತ್ತೊಂಬತ್ತು ಭೂಮಿಯ ಮೇಲೆ ವಾಸಿಸುವ ವಿವಿಧ ಪ್ರಾಣಿಗಳು, ಎರಡು ಕೀಟಗಳು, ಹತ್ತು ಜಲಚರಗಳು, ಕಾಲ್ಪನಿಕ ಜೀವಿಗಳು, ವಸ್ತುಗಳು ಹೀಗೆ ಎಂಬತ್ತೆಂಟು ನಕ್ಷತ್ರ ಪುಂಜಗಳಾಗಿ ಖಗೋಳವನ್ನು ವಿಭಜಿಸಲಾಗಿದೆ. ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಈ ಗುರುತಿಸುವಿಕೆ ಸ್ವಲ್ಪ ಭಿನ್ನವಾಗಿದೆ. ಏಳು ನಕ್ಷತ್ರಗಳ ಗುಂಪಾಗಿರುವ ಸಪ್ತರ್ಷಿ ಮಂಡಳವನ್ನು ಬಿಗ್ ಡಿಪ್ಪರ್ ಎಂತಲೂ ಗ್ರೇಟ್ ಬೇರ್ ಎಂತಲೂ ಬೇರೆ ಬೇರೆ ಹೆಸರುಗಳಲ್ಲಿ ಬೇರೆ ಬೇರೆ ಕಡೆಯಲ್ಲಿ ಗುರುತಿಸುತ್ತಾರೆ.
  ಕ್ರಿಸ್ತಪೂರ್ವ 270 ರಲ್ಲಿ ಗ್ರೀಕ್ ಕವಿ ಅರಾಟಸ್ ರಚಿಸಿದ ಫಿನೋಮಿನಾ ಎಂಬ ಕಾವ್ಯದಲ್ಲಿ ಈಗ ಗುರುತಿಸಲಾಗುವ ನಕ್ಷತ್ರಪುಂಜಗಳ ಮೊದಲ ಉಲ್ಲೇಖಗಳು ದೊರೆಯುತ್ತವೆ. ಆದುದರಿಂದ, ಆ ಕಾಲಕ್ಕಿಂತಲೂ ಹಿಂದಿನಿಂದಲೇ ಜನರು ನಕ್ಷತ್ರಪುಂಜಗಳನ್ನು ಗುರುತಿಸಲು ಆರಂಭಿಸಿರಬಹುದೆಂದು ಅಂದಾಜಿಸಬಹುದು. ಖಗೋಲದ ದಕ್ಷಿಣ ತುದಿಯಲ್ಲಿನ ಪುಂಜಗಳನ್ನು ಅವರು ಉಲ್ಲೇಖಿಸದೇ ಇರುವುದರ ಆಧಾರದ ಮೇಲೆ ಸ್ವಲ್ಪ ಪತ್ತೆದಾರಿ ಮಾಡಿ ಹೀಗೆ ಗುರುತಿಸಿದವರು ಭೂಮಿಯ ಉತ್ತರಕ್ಕೆ 30 ಡಿಗ್ರಿ ಅಕ್ಷಾಂಶದ ಆಚೆ ಇರುವ ಸುಮೇರಿಯನ್ನರೋ ಬ್ಯಾಬಿಲೋನಿಯನ್ನರೋ ಅಗಿರಬಹುದು ಎಂದೂ ಊಹಿಸಬಹುದು.
  ಸೂರ್ಯನು ಪೂರ್ವದಲ್ಲಿ ಉದಯಿಸಿ ಪಶ್ಚಿಮದಲ್ಲಿ ಅಸ್ತಂಗತನಾಗುವುದು ದಿನಾ ಇದ್ದದ್ದೇ. ಈ ವಿದ್ಯಮಾನವೂ ನಮ್ಮ ಇಂದ್ರಿಯಗಳ ಮಿತಿಯಿಂದಲೇ ಉಂಟಾಗಿರುವುದು ಎಂಬುದು ನಮಗೆ ಗೊತ್ತೇ ಇದೆ. ಸೂರ್ಯನು ಪೂರ್ವದಲ್ಲಿ ಉದಯಿಸಿ ಪಶ್ಚಿಮದಲ್ಲಿ ಮುಳುಗಿ ಮತ್ತೆ ಮಾರನೆಯ ದಿನ ಪೂರ್ವದಲ್ಲೇ ಉದಯಿಸುವಾಗ ಭೂಮಿಯನ್ನು ಒಂದು ಸುತ್ತುಹಾಕಿಂದಂತೆ ಕಾಣುತ್ತದೆ. ಸೂರ್ಯನ ಈ ದೃಗ್ಗೋಚರ ಪಥವನ್ನು ಕ್ರಾಂತಿವೃತ್ತ ಎನ್ನುತ್ತಾರೆ. ಸೂರ್ಯನು ಕ್ರಾಂತಿ ವೃತ್ತದುದ್ದಕ್ಕೂ ಹೀಗೆ ಹಾದು ಹೋಗುವಾಗ ಹಿನ್ನೆಲೆಯಲ್ಲಿ ಕೆಲವು ನಕ್ಷತ್ರ ಪುಂಜಗಳಿರುತ್ತವೆ. ಕ್ರಾಂತಿವೃತ್ತದುದ್ದಕ್ಕೂ ಹರಡಿರುವ ಹನ್ನೆರಡು ನಕ್ಷತ್ರಪುಂಜಗಳನ್ನು ರಾಶಿಪುಂಜಗಳೆನ್ನುವರು. ಸೂರ್ಯಾಸ್ತದ ಸಮಯದಲ್ಲಿ ಪಶ್ಚಿಮದ ದಿಗಂತದಲ್ಲಿ ಮೀನ ರಾಶಿಯಿದೆಯೆಂದರೆ ಸೂರ್ಯನು ಮೀನರಾಶಿಯಲ್ಲಿರುವನು ಎಂದರ್ಥ. ಆಗ, ಪೂರ್ವದಲ್ಲಿ ಕನ್ಯಾ ರಾಶಿಯು ಮೂಡುತ್ತಿರುತ್ತದೆ. ಮೇಷದಿಂದ ಆರಂಭಿಸಿ ಪಶ್ಚಿಮದಿಂದ ಪೂರ್ವಕ್ಕೆ ಬಂದರೆ  ಕನ್ಯಾರಾಶಿಯು ಆರನೆಯದು. ಕುಂಡಲಿಯಲ್ಲಿ ಸೂರ್ಯನ ಆರನೇ ಮನೆ. ಚಾಂದ್ರ ಕಕ್ಷೆಯೂ ರಾಶಿ ಚಕ್ರಕ್ಕೆ ಸೀಮಿತವಾಗಿದೆ. ಸೂರ್ಯನು ಪ್ರತಿ ತಿಂಗಳೂ ತನ್ನ ಮನೆ ಬದಲಿಸುತ್ತಿದ್ದರೆ ಚಂದ್ರನು ಪ್ರತಿ ಎರಡೂಕಾಲು ದಿನಗಳಿಗೇ ಮನೆ ಬದಲಿಸುತ್ತಾನೆ. ಆದುದರಿಂದ, ಚಂದ್ರನ ಪ್ರತಿದಿನದ ಸ್ಥಾನವನ್ನು ಗುರುತಿಸಲು ಇಪ್ಪತ್ತೇಳು ನಕ್ಷತ್ರಗಳ ಸಹಾಯ ಪಡೆಯಲಾಗಿದೆ. ಪ್ರತಿ ನಕ್ಷತ್ರಕ್ಕೂ ನಾಲ್ಕು ಪಾದಗಳು. ಅಮವಾಸ್ಯೆಗೂ ಹುಣ್ಣಿಮೆಗೂ ಇರುವ ಅಂತರವನ್ನು ಅನುಕೂಲಕ್ಕಾಗಿ ಎರಡು ವಾರಗಳಾಗಿ ವಿಂಗಡಿಸಲಾಗಿದೆ. ವಾರದ ಪ್ರತಿ ದಿನವನ್ನೂ ಚರಕಾಯಗಳ ಹೆಸರಿನಿಂದ ಗುರುತಿಸಲಾಗಿದೆ. ಎಲ್ಲವೂ ನಮ್ಮ ಅನುಕೂಲಕ್ಕಾಗಿ. ಅಶ್ವಿನಿಯಿಂದ ರೇವತಿವರೆಗಿನ ಇಪ್ಪತ್ತೇಳು ನಕ್ಷತ್ರಗಳನ್ನು ಹನ್ನೆರಡು ರಾಶಿಗಳಿಗೆ ಹಂಚಿದರೆ ನಕ್ಷತ್ರ-ರಾಶಿ ಸಂಬಂಧ ಅರ್ಥವಾಗುತ್ತದೆ.  ಗಡಿಯಾರ, ಕ್ಯಾಲೆಂಡರು ಯಾವುದೂ ಇಲ್ಲದೆ ಆಕಾಶದಲ್ಲಿ ಕಾಣುವ ಈ ದೃಶ್ಯಗಳಿಂದಲೇ ಮಗು ಹುಟ್ಟಿದ್ದು ಯಾವ ಸಮಯದಲ್ಲಿ ಎಂದು ಹೇಳಬಹುದು. ಜನ್ಮ ಕುಂಡಲಿಯೆಂಬುದು ಒಂದು ವೈಜ್ಞಾನಿಕ ದಾಖಲೆ. ಯಾವುದೇ ಘಟನೆಯ ಸಮಯವನ್ನು ಗುರುತಿಸಲು ಇದರಿಂದ ಸಾಧ್ಯ. ಒಂದು ಉದಾಹರಣೆ ಹೇಳಬೇಕೆಂದರೆ, ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವೃಶ್ಚಿಕ ರಾಶಿ, ಅನುರಾಧಾ ನಕ್ಷತ್ರದಲ್ಲಿ ಹುಟ್ಟಿದರು. ಅದು ಕ್ಯಾಲೆಂಡಿರಿನ ಸೆಪ್ಟಂಬರ್ ತಿಂಗಳ ಹದಿನೇಳನೇ ತಾರೀಕು.
  ಹೀಗೆ, ಆಕಾಶಕಾಯಗಳ ದೃಗ್ಗೋಚರ ಚಲನೆಗಳನ್ನು ನಮ್ಮ ಇಂದ್ರಿಯಾನುಭವದ ಮಿತಿಯಲ್ಲಿಯೇ ಗ್ರಹಿಸಿ ನಿರಂತರ ವೀಕ್ಷಣೆಯ ಮೂಲಕ ಈ ಚಲನೆಯಲ್ಲಿ ಕಂಡುಬರುವ ನಿಯಮಿತ ಅಂಶಗಳನ್ನು ಗುರುತಿಸಿದ ನಮ್ಮ ಪೂರ್ವಜರು ಖಂಡಿತವಾಗಿಯೂ ನಿಶಿತ ಮತಿಗಳು. ಆದರೆ, ನಾವು ಕಾಣುವುದೇ ವಾಸ್ತವವಲ್ಲ. ರಾಶಿ ಪುಂಜಗಳು ನಮ್ಮನ್ನು ಸುತ್ತುತ್ತಲೂ ಇಲ್ಲ, ಅವುಗಳೆಲ್ಲವೂ ಒಂದೇ ದೂರದಲ್ಲೂ ಇಲ್ಲ. ಕೆಲವು ನಕ್ಷತ್ರಗಳ ಬೆಳಕು ಭೂಮಿಯನ್ನು ತಲುಪಲು ನೂರಾರು ಜ್ಯೋತಿವರ್ಷಗಳು ಬೇಕಾಗುತ್ತವೆ. ಆಧ್ರ್ರಾ ನಕ್ಷತ್ರದಿಂದ ಹೊರಟ ಬೆಳಕು ಭೂಮಿಯನ್ನು ತಲುಪಲು ಆರುನೂರಾ ನಲವತ್ತೆರಡು ವರ್ಷಗಳು ಬೇಕು. ರೋಹಿಣಿ ನಕ್ಷತ್ರದಿಂದಾದರೆ ಅರವತ್ತೈದು ವರ್ಷಗಳು ಬೇಕು. ಅವುಗಳ ಪ್ರಭಾವ ಆಯ್ದ ಮನುಷ್ಯರ ಮೇಲಾಗುತ್ತದೆ ಎಂಬುದು ಅತಾರ್ಕಿಕ. ಪ್ರತಿ ಸೆಕೆಂಡಿಗೆ ನಾಲ್ಕು ಮಕ್ಕಳು ಹುಟ್ಟುತ್ತಾರೆ. ಈ ಹುಟ್ಟುವ ಪ್ರಕ್ರೀಯೆಯೇ ಬಹಳ ದೀರ್ಘವಾದದು. ಅದು ಎಲ್ಲಿಂದ ಆರಂಭವಾಗಿ ಎಲ್ಲಿಗೆ ಮುಗಿಯುತ್ತದೆ ಎಂದು ಹೇಳುವುದೇ ಕಷ್ಟ.  ಸಿಸೇರಿಯನ್ ಹೆರಿಗೆ ಮಾಡಿಸುವ ಕೆಲವು ವೈದ್ಯರು ಮಹೂರ್ತ ನೋಡಿಯೇ ಹೆರಿಗೆ ಮಾಡಿಸುವುದಿದೆ. ಪ್ರಕೃತಿ ವಿಕೋಪಗಳಾದಾಗ, ಪ್ಲೇಗಿನಂತಹ ಮಾರಿ ಬಡಿದಾಗ, ರೈಲು ಅಪಘಾತಗಳು ಸಂಭವಿಸುವಾಗ ಬೇರೆ ಬೇರೆ ಜನ್ಮ ಕುಂಡಲಿಯವರು ಒಟ್ಟಿಗೆ ಸಾಯುತ್ತಾರೆ. ಒಂದೇ ಜನ್ಮಕುಂಡಲಿಯವರು ಬೇರೆ ಬೇರೆ ಬದುಕಿನ ಹಾದಿಯಲ್ಲಿ ಸಾಗುತ್ತಾರೆ. ಅನುಮಾನ, ದತ್ತಾಂಶ ಸಂಗ್ರಹ, ಪರೀಕ್ಷೆ, ಪ್ರಶ್ನೆ, ವಿಶ್ಲೇಷಣೆ, ನಿಖರ ಊಹೆ, ಮರು ಪರೀಕ್ಷೆ, ಅನ್ವಯ ಇವೆಲ್ಲ ವಿಜ್ಞಾನದ ನಿಜಮಾರ್ಗದ ನಿಲ್ದಾಣಗಳು.
ಜನ್ಮ ಕುಂಡಲಿಯ ಸಹಾಯದಿಂದ ಮನುಷ್ಯ ಯಾವ ಉದ್ಯೋಗ ಹಿಡಿಯುತ್ತಾನೆ, ಯಾವಾಗ ಮದುವೆ ಆಗುತ್ತಾನೆ, ಯಾವಾಗ ಸಾಯುತ್ತಾನೆ ಎಂದು ಲೆಕ್ಕ ಹಾಕುವುದು ಒಂದು ಉದ್ಯೋಗವೇ ಆಗಿಬಿಟ್ಟಿದೆ. ಈ ಕೌಶಲದಿಂದ ಹೊಟ್ಟೆ ತುಂಬಿಸಿಕೊಳ್ಳುವ ಮಂದಿ ತಮ್ಮ ಸುತ್ತ ಮೌಢ್ಯವು ಆವರಿಸಿಕೊಂಡಿರಬೇಕು ಎಂದು ಬಯಸುತ್ತಾರೆ. ಭಯಗೊಳಿಸಿ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಹೊಸ ವರಸೆಯೇನೂ ಅಲ್ಲ. ಇದು ಹಳೆಯ ಚಾಳಿ.

No comments: