Saturday, 28 June 2025

ಸಾಂಕ್ರಾಮಿಕ



ಆ ನಗುವನ್ನು ಹೇಗೆ ಮರೆಯಲು ಸಾಧ್ಯ?

  ಕೆಮಿಸ್ಟ್ರಿ ಲೆಕ್ಚರರ್ ನಂದೂ ರೇವಣಕರರು ಬ್ಲಾಕ್ ಬೋರ್ಡಿನ ಮೇಲೆ ಇಕ್ವೇಷನ್ ಬರೆಯುವುದರಲ್ಲಿ ಮಗ್ನರಾಗಿದ್ದರು. ಅವರನ್ನು ಅನುಸರಿಸುತ್ತಾ ಆ ತರಗತಿಯ ನಲವತ್ತೇಳು ವಿದ್ಯಾರ್ಥಿಗಳು ಬ್ಲಾಕ್ ಬೋರ್ಡಿನ ಮೇಲೆಯೇ ತಮ್ಮ ಕಣ್ಣು  ಮತ್ತು ಮನಸ್ಸನ್ನು ನೆಟ್ಟಿದ್ದರು. ಮೊದಲ ಅವಧಿಯ ಗಂಟೆ ಬಾರಿಸಲು ಇನ್ನೂ ಮೂವತ್ತೇಳು ನಿಮಿಷಗಳು ಬಾಕಿ ಇದ್ದವು. ಆಗ...

  ಒಮ್ಮೆಗೇ ಸ್ಫೋಟಗೊಂಡಿತ್ತು ಅ ನಗು.

  ನಕ್ಕಿದ್ದು ಹುಡುಗಿಯೇ ಎಂಬುದರಲ್ಲಿ ಅನುಮಾನವಿರಲಿಲ್ಲ. ನಕ್ಕ ಹುಡುಗಿ ಯಾರೆಂಬುದು ಆ ಕ್ಷಣದಲ್ಲಿ ಗೊತ್ತಾಗಲಿಲ್ಲ.         

  ಮಾತನಾಡುವಾಗ ಒಬ್ಬೊಬ್ಬರ ಧ್ವನಿಯೂ ಒಂದೊಂದು ರೀತಿ. ಪ್ರತಿಯೊಬ್ಬರ ಧ್ವನಿಯೂ ವಿಶಿಷ್ಟ. ಧ್ವನಿಯಿಂದಲೇ ವ್ಯಕ್ತಿಯನ್ನು ಗುರುತಿಸಬಹುದು. ಒಬ್ಬರ ಧ್ವನಿಯನ್ನು ತೆಗೆದು ಅದರ ಬದಲು ಇನ್ನೊಬ್ಬನ ಧ್ವನಿಯನ್ನು ಜೋಡಿಸಿದವೆಂದು ಇಟ್ಟುಕೊಳ್ಳಿ, ಆಗ ವ್ಯಕ್ತಿಯೇ ಬೇರೆಯಾಗಿಬಿಡುತ್ತಾನೆ. ಅಮಿತಾಭ್ ಬಚ್ಚನನಿಗೆ ಬೇರೆ ಯಾರದ್ದೋ ಧ್ವನಿಯನ್ನು ಜೋಡಿಸಿದರೆ ಹೇಗಾಗಬಹುದು?

 ನಗು ಹಾಗಲ್ಲ. ಎಲ್ಲರ ನಗುವೂ ಸುಮಾರಾಗಿ ಒಂದೇ ಥರಾ. ಮನಸ್ಸು ತೆರೆದು ಮುಕ್ತವಾಗಿ ನಗುವಾಗಲಂತೂ ಎಲ್ಲರೂ ಒಂದೇ. ದೇಶ, ಭಾಷೆ, ಜನಾಂಗಗಳೆಲ್ಲ ಆ ನಗುವಿನಲ್ಲಿ ಕರಗಿಹೋಗುತ್ತವೆ.

  ಆದರೂ, ನಕ್ಕಿದ್ದು ಯಾರೆಂದು ತಿಳಿದುಕೊಳ್ಳಲು ಕಳೆದ ಇಪ್ಪತ್ತೆಂಟು ವರ್ಷಗಳಿಂದ ಅಧ್ಯಾಪನ ವೃತ್ತಿಯಲ್ಲಿರುವ ನಂದೂ ರೇವಣಕರರಿಗೆ ಹೆಚ್ಚು ಸಮಯ ಬೇಕಾಗಲಿಲ್ಲ. ಬೇರೆ ಬೇರೆ ಬೆಂಚಿನಲ್ಲಿ ಕುಳಿತಿದ್ದ ಹುಡುಗಿಯರು ತಮ್ಮ ಕುತ್ತಿಗೆಯನ್ನು ಬೇರೆ ಬೇರೆ ಕೋನದಲ್ಲಿ ತಿರುಗಿಸಿ, ಅದರಲ್ಲೇ ಏಕ ಕೇಂದ್ರೀಯ ವರ್ತುಲಗಳನ್ನು ನಿರ್ಮಿಸಿ ತಮ್ಮ ದೃಷ್ಟಿಯನ್ನು ಆ ವರ್ತುಲಗಳ ಕೇಂದ್ರದಲ್ಲಿರುವ ಸ್ಮಿತಾ ಶಾನುಭಾಗ ಎಂಬ ಹುಡುಗಿಯ ಕಡೆ ನೆಟ್ಟಿದ್ದರು.

   ದೊಗಳೆ ದೊಗಳೆಯಂತಿರುವ ಚೂಡಿದಾರ, ಎರಡು ಜಡೆ, ದಪ್ಪ ಫ್ರೇಮಿನ ಕನ್ನಡಕ ಮತ್ತು ಏನನ್ನೋ ಕಳೆದು ಕೊಂಡಂತಿರುವ ಮುಖಭಾವವನ್ನು ಹೊತ್ತುಕೊಂಡು ದಾರಿಯ ಅಂಚಿನಲ್ಲೇ ಯಾವಾಗಲೂ ನಡೆದುಕೊಂಡು ಬರುವ ಸ್ಮಿತಾ ಶಾನುಭಾಗಳು ನಕ್ಕಿದ್ದನ್ನು ಅದುವರೆಗೆ ಕಾಲೇಜಿನ ಯಾವ ನರಪಿಳ್ಳೆಯೂ ಕಂಡದ್ದಿರಲಿಲ್ಲ. ಎಸ್.ಎಸ್.ಎಲ್.ಸಿ ಯಲ್ಲಿ ತೊಂಬತ್ತೊಂಬತ್ತು ಶೇಕಡಾ ಅಂಕಗಳನ್ನು ಪಡೆದು ಸುದ್ದಿಯಾಗಿದ್ದು ಬಿಟ್ಟರೆ ಆಕೆಯೆಂದೂ ಇನ್ನೊಬ್ಬರ ಚರ್ಚೆಯ ವಿಷಯವಾಗಿರಲಿಲ್ಲ. ಯಾವುದರಲ್ಲೂ ಅಸಕ್ತಿಯೇ ಇಲ್ಲವೇನೋ ಎಂಬಂತಿದ್ದರೂ ಆಗಾಗ ಕಾಲೇಜಿನಲ್ಲಿ ನಡೆಯುತ್ತಿದ್ದ ಪ್ರಬಂಧ, ಭಾಷಣ ಮತ್ತು ಗಾಯನ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಿಟ್ಟಿಸಿಕೊಳ್ಳುತ್ತಿದ್ದಳು. ಅದರಿಂದಾಗಿ, ಅನಾಥ ಮಗುವಿನ ಪೋಸಿನಲ್ಲಿರುವ ಸ್ಮಿತಾ ಶಾನುಭಾಗಳ ಫೋಟೋ ಕಾಲೇಜಿನ ನೋಟೀಸ್ ಬೋರ್ಡಿನಲ್ಲಿ ಕಾಣಿಸಿಕೊಳ್ಳುತಿತ್ತು. ಅವಳ ಮೇಲೆ ಇರುವ ಗೌರವದಿಂದಲೋ ಅಥವಾ ಒಳಗೊಳಗೇ ಇರುವ ಅಸೂಯೆಯಿಂದಲೋ ತರಗತಿಯ ಇತರ ವಿದ್ಯಾರ್ಥಿನಿಯರು ಸ್ಮಿತಾ ಶಾನುಭಾಗಳೊಡನೆ ಹೆಚ್ಚಿಗೆ ಬೆರೆಯುತ್ತಿರಲಿಲ್ಲ. ಹಾಗಂತ, ಅವಳಿಗೆ ಗೆಳತಿಯರೇ ಇಲ್ಲವೆಂತಲ್ಲ; ಆಕೆಯ ಹೆಚ್ಚಿನ ಮಾತುಕತೆ ನಡೆಯುವುದು ಪಕ್ಕದಲ್ಲೇ ಕುಳಿತುಕೊಳ್ಳುವ ಮಂದಾಕಿನಿಯೊಂದಿಗೆ. ರೀಡಿಂಗ್ ರೂಮಿನಲ್ಲಿರಲಿ, ಕ್ಯಾಂಟೀನಿಗೆ ಹೋಗುವಾಗಿರಲಿ ಮಂದಾಕಿನಿಯ ಜೊತೆ ಸ್ಮಿತಾ ಮತ್ತು ಸ್ಮಿತಾಳ ಜೊತೆ ಮಂದಾಕಿನಿ. ಈ ಮಂದಾಕಿನಿ ಕೂಡಾ ಅಷ್ಟೇ! ಆಕೆ ಸ್ಮಿತಾ ಶಾನುಭಾಗಳ ಗೆಳತಿಯೆಂದ ಮೇಲೆ ಅವಳ ಪರ್ಸನಾಲಿಟಿಯನ್ನು ವರ್ಣಿಸಲು ಬೇರೇ ಪದಗಳು ಬೇಕೇ? ನಡೆ-ನುಡಿಗಳಲ್ಲಿ ಸ್ಮಿತಾಳನ್ನೇ ಹೋಲುತ್ತಿದ್ದರೂ ರೂಪದಲ್ಲಿ ಸ್ಮಿತಾಳಿಗಿಂತ ಸಂದರವಾಗಿದ್ದಳು. ಬಡತನದ ಹಿನ್ನೆಲೆಯಲ್ಲಿ ಬಂದವಳಾದ್ದರಿಂದ ಆಕೆಯ ಕೀಳರಿಮೆ ನೋಟದಲ್ಲಿ, ಮಾತಿನಲ್ಲಿ ಎದ್ದುಕಾಣುತಿತ್ತು. ಕಾಲೇಜಿನ ಆಡಳಿತ ಮಂಡಳಿ ಆಕೆಯ ಶುಲ್ಕವನ್ನು ವಿನಾಯತಿ ಮಾಡಿದ್ದಲ್ಲದೆ ವಿದ್ಯಾರ್ಥಿ ವೇತನವನ್ನೂ ನೀಡಿ ಅವಳ ಬಡತನವನ್ನು ಇಡೀ ಕಾಲೇಜಿಗೇ ಜಾಹೀರು ಮಾಡಿದ್ದರಿಂದಾಗಿ ಅವಳಲ್ಲಿ ಮೂಡಿದ ಕೀಳರಿಮೆ ಇನ್ನಷ್ಟು ತೀವ್ರಗೊಳ್ಳುವ ಹಾಗಾಯಿತು.

  ಕ್ಷಮಿಸಿ, ಈ ಇಬ್ಬರು ಹುಡುಗಿಯರ ಕುರಿತು ಇಷ್ಟು ಪೀಠಿಕೆಯನ್ನು ಹೇಳುವುದು ಅನಿವಾರ್ಯವಾಗಿತ್ತು. ಸರಿ, ಈಗ ನಾವು ಪುನಃ ನಗುವಿನ ಕತೆಯನ್ನು ಮುಂದುವರಿಸೋಣ.

   ನಂದೂ ರೇವಣಕರರು ಅಪರಾಧಿಯನ್ನು ಹಿಡಿದೇಬಿಟ್ಟೆ ಎಂಬ ಹೆಮ್ಮೆಯಿಂದ ಸ್ಮಿತಾಳತ್ತ ಕೈ ತೋರಿಸಿ ಎದ್ದು ನಿಲ್ಲುವಂತೆ ಸೂಚಿಸಿದರು. ಸ್ಮಿತಾ ಶಾನುಭಾಗಳು ತನ್ನ ಕನ್ನಡಕವನ್ನು ತೋರುಬೆರಳಿನಿಂದ ಹುಬ್ಬುಗಳ ನಡುವೆ ಒತ್ತುತ್ತಾ ಎದ್ದುನಿಲ್ಲುತ್ತಿರುವಾಗ ಪಕ್ಕದಲ್ಲಿ ಕುಳಿತಿದ್ದ ಮಂದಾಕಿನಿ ಆಣೆಕಟ್ಟು ಒಡೆದು ಹೋದ ಹಾಗೆ ನಗುವಿನ ಮೂಟೆಯನ್ನೇ ಒಡೆದುಬಿಟ್ಟಳು. ಮಂದಾಕಿನಿ ನಕ್ಕಿದ್ದೇ ತಡ ಸ್ಮಿತಾ ಶಾನುಭಾಗ ಕೂಡಾ ತನ್ನ ಬಲಗೈಯನ್ನು ಬಾಯಿಗೆ ಅಡ್ಡ ಹಿಡಿದು ತಲೆಬಗ್ಗಿಸಿಕೊಂಡು ಜೋರಾಗಿ ಮತ್ತು ಅನಿಯಂತ್ರಿತವಾಗಿ ನಗತೊಡಗಿದಳು. ಘನತೆಯೇ ಮೈವೆತ್ತು ಬಂದAತಿದ್ದ ಈ ಇಬ್ಬರು ಹುಡುಗಿಯರು ಹೀಗೆ ನಗಲು ಪ್ರಾರಂಭಿಸಿದಾಗ ಹೇಗೆ ಪ್ರತಿಕ್ರಿಯಿಸಬೇಕೆಂದು ಗೊತ್ತಾಗಲಿಲ್ಲವೋ ಅಥವಾ ನಂದೂ ರೇವಣಕರರ ಕೆಮಿಸ್ಟ್ರಿ ತರಗತಿಯ ಅಸಹನೀಯ ಗಾಂಭೀರ್ಯವನ್ನು ಮುರಿಯುವ ಸುಪ್ತ ಆಕಾಂಕ್ಷೆ ಎಲ್ಲರಲ್ಲೂ ಇತ್ತೋ, ಇಡೀ ತರಗತಿಯೇ ನಗೆಯಲ್ಲಿ ಮುಳುಗಿಹೋಯಿತು. ಕೆಲವರ ನಗು ಮುಗಿಯಿತೆನ್ನುವಾಗ ಇನ್ನು ಯಾರದೋ ಹೊಸ ಆವೃತ್ತಿ ಪ್ರಾರಂಭವಾಗುತ್ತ ನಗು ಮುಂದುವರಿಯುತ್ತಲೇ ಹೋಯಿತು. ತನ್ನ ಇಪ್ಪತೈದು ವರ್ಷಗಳ ವೃತ್ತಿ ಜೀವನದಲ್ಲಿ ನಂದೂ ರೇವಣಕರರು ಇಂತಹ ಪರಿಸ್ಥಿತಿಯನ್ನು ಎಂದೂ ಎದುರಿಸಿರಲಿಲ್ಲ. ಅವರೆಷ್ಟು ಅಸಹಾಯಕರಾದರೆಂದರೆ, ಈ ನಗುವನ್ನು ನಿಯಂತ್ರಿಸುವ ಎಲ್ಲ ಪ್ರಯತ್ನಗಳನ್ನೂ ಕೈಬಿಟ್ಟರು. ತನ್ನ ಪರಿಸ್ಥಿತಿಯನ್ನು ಕಂಡು ಅವರಿಗೇ ನಗುಬಂದಿರಬೇಕು; ಅವರೂ ನಗತೊಡಗಿದರು-ಜೀವಮಾನದಲ್ಲಿ ಇಂತಹ ಸುಖದ ಕ್ಷಣ ಹಿಂದೆAದೂ ಬಂದಿರಲೇ ಇಲ್ಲವೆಂಬ ಹಾಗೆ. ಸ್ವತಃ ಸ್ವಾವಲಂಬಿಯಾಗಿ ಮುಂದುವರಿಯುತ್ತಿರುವ ನಗುವಿನ ಪ್ರವಾಹದಲ್ಲಿ ನಂದೂ ರೇವಣಕರರಿಂದ ಹಿಡಿದು ತರಗತಿಯ ನಲವತ್ತೇಳು ವಿದ್ಯಾರ್ಥಿಗಳೂ ಮುಳುಗಿಹೋದರು.

  ಅಷ್ಟೊತ್ತಿಗೆ ಅವಧಿಯ ಗಂಟೆ ಬಾರಿಸಿದ್ದರಿಂದ ಅಕ್ಕಪಕ್ಕದ ತರಗತಿಗಳಿಂದ ವಿದ್ಯಾರ್ಥಿಗಳು ಬರತೊಡಗಿದರು. ಈ ತರಗತಿಯಲ್ಲಿ ವಿಚಿತ್ರವಾಗಿ ಮುಂದುವರಿದುಕೊAಡಿರುವ ನಗುವಿನ ಸದ್ದು ಅವರೆಲ್ಲರನ್ನೂ ಸ್ಥಬ್ಧ ಚಿತ್ರವನ್ನಾಗಿಸುವ ಮಟ್ಟಿಗೆ ಚಕಿತಗೊಳಿಸಿತು. ಇನ್ನಷ್ಟು ವಿದ್ಯಾರ್ಥಿಗಳು ಈ ಗುಂಪಿಗೆ ಸೇರಿಕೊಂಡರೂ ಅವರ ಮೊದಲ ಪ್ರತಿಕ್ರಿಯೆ ಇದಕ್ಕಿಂತ ಭಿನ್ನವಾಗಿರಲಿಲ್ಲ. ಆ ನಂತರ ಆಶ್ಚರ್ಯ ಅವರ ಮುಖದಿಂದ ಮಾಯವಾಗಿ ಯಾವುದೋ ಕುತೂಹಲಕರ ನಾಟಕವನ್ನು ನೋಡುತ್ತಿರುವ ಪ್ರೇಕ್ಷಕರಂತೆ ಕಾಣತೊಡಗಿದರು. ಇದನ್ನೆಲ್ಲ ಅವರು ಯಾವ ಮಟ್ಟದಲ್ಲಿ ಆಸ್ವಾದಿಸಲು ಪ್ರಾರಂಭಿಸಿದರೆAದರೆ, ಅ ನಾಟಕದಲ್ಲಿ ಅವರೂ ತಮಗರಿವಿಲ್ಲದಂತೆ ಪಾತ್ರಧಾರಿಗಳಾಗಿಬಿಟ್ಟರು. ನಡೆಯುತ್ತಿರುವುದರ ಕುರಿತು ಯಾವುದೇ ವಿವರಗಳು ಲಭ್ಯವಿಲ್ಲದೇ ಹೋದರೂ ಇಡೀ ತರಗತಿಯೇ ನಂದೂ ರೇವಣಕರರೆಂಬ ಗಂಟುಮುಖದ ಲೆಕ್ಚರರ್‌ರೊಂದಿಗೆ ನಗುವಿನ ಹಬ್ಬದಲ್ಲಿ ತೊಡಗಿರುವುದನ್ನು ಸುಮ್ಮನೆ ನೋಡಲು ಹೇಗೆ ಸಾಧ್ಯ ಹೇಳಿ? ಕಾರಣವಿಲ್ಲದೆ, ಪ್ರಯತ್ನವೂ ಇಲ್ಲದೆ ಅವರೆಲ್ಲರ ತುಟಿಗಳು ಮತ್ತೆ ಜೋಡಿಸಲು ಸಾಧ್ಯವೇ ಇಲ್ಲವೆನ್ನುವ ಹಾಗೆ ಪರಸ್ಪರ ಬೇರ್ಪಟ್ಟವು.

   ಫಿಸಿಕ್ಸ್ ಲೆಕ್ಚರರ್ ಶಾಸ್ತಿç ಮುಂದಿನ ಅವಧಿಗಾಗಿ ಆ ತರಗತಿಗೆ ಬಂದಾಗ ಉಹಿಸಲೂ ಸಾಧ್ಯವಾಗದಂತಹ ವಾತಾವರಣವೊಂದು ಅಲ್ಲಿ ನಿರ್ಮಾಣವಾಗಿತ್ತು. ತರಗತಿಯ ಹೊರಗೆ ವಿದ್ಯಾರ್ಥಿಗಳ ಬಹಳ ದೊಡ್ಡ ಗುಂಪು ನೆರೆದಿತ್ತು. ಅಲ್ಲಿ ನೆರೆದಿದ್ದಷ್ಟೇ ಅಲ್ಲ, ಶಾಸ್ತಿçಗಳನ್ನು ನೋಡಿಯೂ ನೋಡದ ಹಾಗೆ ಇದ್ದುಕೊಂಡು ಅವರೆಲ್ಲ ಹೊಟ್ಟೆ ಹಿಡಿದುಕೊಂಡು ನಗುತ್ತಿದ್ದರು. ಕೆಲವರು ನಕ್ಕೂ ನಕ್ಕೂ ಸುಸ್ತಾಗಿರುವಂತೆ ತೋರುತ್ತಿದ್ದರೆ ಇನ್ನು ಕೆಲವರು ಕಣ್ಣೀರು ಒರೆಸಿಕೊಳ್ಳುತ್ತಾ ನಗುತ್ತಿದ್ದರು. ಒಂದಿಷ್ಟು ಜಾಗ ಮಾಡಿಕೊಂಡು ಶಾಸ್ತಿçಗಳು ತರಗತಿಯ ಒಳಗೆ ಬಂದರು. ಒಳಗೆ ಗೋಡೆಯ ಕಡೆ ಮುಖ ಮಾಡಿಕೊಂಡು ನಗುತ್ತಿದ್ದ ನಂದೂ ರೇವಣಕರರು ಶಾಸ್ತಿçಗಳನ್ನು ಬಾಗಿಲ ಬಳಿ ಕಂಡು ತರಗತಿಯಿಂದ ಹೊರಬರುವ ಪ್ರಯತ್ನ ಮಾಡಿದರಾದರೂ ಸಫಲವಾಗಲಿಲ್ಲ. ನಗುವನ್ನು ನಿಯಂತ್ರಿಸಿಕೊಳ್ಳುವ ಪ್ರಯತ್ನದಲ್ಲಿ ಕೆಮ್ಮನ್ನೂ ನಗುವಿನೊಂದಿಗೆ ಸಂಯೋಜಿಸಿಕೊಳ್ಳುತ್ತಾ ಮೂಲೆಯಲ್ಲೆ ನಿಂತುಬಿಟ್ಟರು.

   ಈ ಹುಚ್ಚುತನದಲ್ಲಿ ಶಾಸ್ತ್ರಿಗಳೂ ಕಳೆದುಹೋಗಲು ಆನಂತರ ಹೆಚ್ಚು ಸಮಯ ಬೇಕಾಗಲಿಲ್ಲ.

 

                     **********************************

  ದ್ವಿತೀಯ ಪಿಯು ತರಗತಿಯಲ್ಲಿ ಹುಟ್ಟಿದ ನಗುವಿನ ಸುನಾಮಿಯ ಸುದ್ದಿ ಇಡೀ ಕಾಲೇಜಿಗೆ ಈಗ ತಿಳಿದುಹೊಯಿತು. ಬೇರೆ ಬೇರೆ ತರಗತಿಯಲ್ಲಿದ್ದವರು, ಸ್ಪೋರ್ಟ್ಸ್ ರೂಮಿನಲ್ಲಿ ಆಟವಾಡುತ್ತಿದ್ದವರು, ಕ್ಯಾಂಟೀನಿನಲ್ಲಿ ತಿಂಡಿ ತಿನ್ನುವ ನೆವದಲ್ಲಿ ಹರಟೆಹೊಡೆಯುತ್ತಿದ್ದವರು.. ಹೀಗೆ ಎಲ್ಲರೂ ಓಡೋಡಿ ಬಂದರು. ಹಾಗೆ ಬಂದವರೆಲ್ಲ ಸಾಂಕ್ರಮಿಕ ನಗುವಿಗೆ ತುತ್ತಾದರು. ನೀವು ನಂಬುತ್ತೀರೋ ಬಿಡುತ್ತೀರೋ ಆ ಕಾಲೇಜಿನಲ್ಲಿ ಆಗ ಈ ನಗುವಿಗೆ ಸಿಲುಕಿಕೊಳ್ಳದೇ ತಪ್ಪಿಸಿಕೊಂಡಿದ್ದವರು ಇಬ್ಬರೇ- ಒಬ್ಬರು ಪ್ರಿನ್ಸಿಪಾಲ್ ಚಾಕೋ ಇನ್ನೊಬ್ಬಾತ ಸದಾ ಅವರ ಚೇಂಬರಿನ ಬಾಗಿಲ ಬಳಿಯೇ  ಕುಳಿತುಕೊಂಡಿರುವ ಜವಾನ ಚಂದ್ರಕಾAತ. 

  ದೂರ್ವಾಸ ಮುನಿಯ ದೊಡ್ಡಪ್ಪನ ಮಗನಂತಿರುವ ಪ್ರಿನ್ಸಿಪಾಲ್ ಚಾಕೋ ಶಿಸ್ತಿಗೆ ಹೆಸರಾದವರು. ಎಲ್ಲದರಲ್ಲೂ ಕಟ್ಟುನಿಟ್ಟು. ವಿದ್ಯಾರ್ಥಿಗಳಷ್ಟೇ ಏಕೆ ಉಪನ್ಯಾಸಕರೂ ಚಾಕೋರವರ ಎದರುಬರುವ ಅವಕಾಶಗಳನ್ನು ಸಾಕಷ್ಟು ಬುದ್ಧಿವಂತಿಕೆಯನ್ನು ಬಳಸಿ ತಪ್ಪಿಸಿಕೊಳ್ಳುತ್ತಿದ್ದರು. ಚಾಕೋರವರ ಶಿಸ್ತಿನ ಕುರಿತಾಗಿ ಬಹಳಷ್ಟು ಕತೆಗಳನ್ನು ಅವರ ಅಭಿಮಾನಿಗಳು ಹೇಳುತ್ತಿದ್ದರು. ಚಾಕೋರವರ ಶಿಸ್ತಿಗೆ ಹೆದರಿ ಅವರ ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳು ಕೇರಳದ ಅವರ ಸ್ವಂತ ಊರಿನಲ್ಲೇ ಉಳಿದುಕೊಂಡಿದ್ದಾರೆಂಬ ಕತೆ ಅಂತಹವುಗಳಲ್ಲೊಂದು. ಈ ಕತೆ ಇಡಿಯಾಗಿ ಸತ್ಯವೋ ಅಥವಾ ಚಾಕೋರವರ ಶಿಸ್ತಿನ ಕುರಿತು ಇತರರಿಗೆ ಮನವರಿಕೆ ಮಾಡಿಕೊಡಲು ಹೆಣೆದುಕೊಂಡ ಪೂರಕ ಸಾಹಿತ್ಯವೋ ತಿಳಿಯದು. ಚಾಕೋ ಪ್ರಿನ್ಸಿಪಾಲ್ ಕ್ವಾರ್ಟರ್ಸ್ನಲ್ಲಿ ಒಬ್ಬರೇ ವಾಸವಾಗಿದ್ದಂತೂ ಸತ್ಯ.

   ಇದಕ್ಕೆ ಸರಿಯಾಗಿ, ಸಿಡುಕುತನ, ಗಂಟಿಕ್ಕಿಕೊಂಡ ಮುಖ, ಯಾವುದೇ ಸಂಸ್ಥೆಯ ಮುಖ್ಯಸ್ಥನಿಗೆ ಇರಲೇಬೇಕಾದ ಮೂಲಭೂತ ಅರ್ಹತೆ ಎಂದು ಚಾಕೋ ಭಾವಿಸಿಕೊಂಡಿದ್ದರು. ಈ ಎಲ್ಲ ದೌರ್ಬಲ್ಯಗಳಿಂದಾಗಿಯೇ ಚಾಕೋ ಕುರಿತು ಪರಿಸರದ ಜನರಲ್ಲಿ ಭಯ, ಭಕ್ತಿ, ಗೌರವಗಳಿದ್ದವು. ಅವರು ಪ್ರಿನ್ಸಿಪಾಲರಾಗಿ ಈ ಕಾಲೇಜಿಗೆ ಬಂದ ಮೇಲೆ ದೊಂಬಿ, ಸ್ಟ್ರೈಕು ಕಡಿಮೆಯಾಗಿದ್ದವು.

  ಪ್ರಿನ್ಸಿಪಾಲ್ ಕೆ.ಪಿ ಚಾಕೋಗೆ ಈ ನಗುವಿನ ಸುದ್ದಿ ಅಷ್ಟೊತ್ತಿನವರೆಗೂ ತಲುಪಿಯೇ ಇರಲಿಲ್ಲ. ಕಾಲೇಜಿನ ವಿದ್ಯಾರ್ಥಿಗಳಿಂದ ಹಿಡಿದು ಲೆಕ್ಚರರ್‌ಗಳವರೆಗೆ ಎಲ್ಲರೂ ಮೊದಲ ದರ್ಜೆಯ ಹುಚ್ಚರಂತೆ ಬಿದ್ದೂ ಬಿದ್ದೂ ನಗುತ್ತಿದ್ದಾರೆಂದು ಹೇಳುವುದಾದರೂ ಹೇಗೆ? ಹೇಳಲು ಅ ನಗುವಿನಿಂದ ತಪ್ಪಿಸಿಕೊಂಡು ಉಳಿದವರಾದರೂ ಯಾರು? ಆದುದರಿಂದ, ನಗುವಿನ ಸುದ್ದಿ ಕಡೆಯದಾಗಿ ತಿಳಿದದ್ದೇ ಚಾಕೋಗೆ. ಶಿಸ್ತು ಪಾಲನೆಯಲ್ಲಿ ಲೋಪವಾದರೆ ನೆಲ ಆಕಾಶವನ್ನು ಒಂದುಮಾಡುವ ಹಾಗೆ ಎಗರಾಡುತ್ತಿದ್ದ ಚಾಕೋ ಈ ಬಾರಿ ಶಾಂತರಾಗಿದ್ದರು.  ಕ್ಯಾಬಿನ್ನಿನಿಂದ ಹೊರಬಂದು ಮಾಮೂಲಿನಂತೆ ಅವರಿವರ ಮೇಲೆ ಎಗರಾಡುವಷ್ಟು ಈ ಸಮಸ್ಯೆ ಸರಳವಾದದ್ದಲ್ಲ ಎಂಬುದನ್ನು ಅವರು ಬಹಳ ಬೇಗನೆ ಅರಿತುಕೊಂಡರು. ಹೊರಬಂದರೆ ತಾನೂ ನಗೆಯ ಬಲೆಯಲ್ಲಿ ಸಿಲುಕಿಕೊಳ್ಳಬಹುದೆಂಬ ಭಯ ಅವರಲ್ಲಿ ಹುಟ್ಟಿಕೊಂಡಿರಬಹುದೆAದರೆ ನಂಬಲು ಸಾಧ್ಯವಾಗದು. ಆದರೆ, ಅವರು ಹೊರಬರಲಿಲ್ಲ.

   ಜವಾನನ್ನು ಕರೆದು ದೀರ್ಘ ಗಂಟೆ ಭಾರಿಸಿ ಕಾಲೇಜಿಗೆ ರಜಾ ಸಾರುವಂತೆ ಸೂಚಿಸಿದರು. ಜವಾನ ಹೋದ ಬೆನ್ನಲ್ಲೇ ಕ್ಯಾಬಿನ್ನಿನ ಬಾಗಿಲನ್ನು ಹಾಕಿಕೊಂಡು ಜೋರಾಗಿ ನಗಹತ್ತಿದರು ಚಾಕೋ.

           ********************************************************

    ರಾತ್ರಿಯ ನಿದ್ದೆಗೆ ಹಳೆಯದೆಲ್ಲವನ್ನೂ ತಿಳಿಗೊಳಿಸಿ ಹೊಸದಿನವನ್ನು ಹೊಚ್ಚಹೊಸದಾಗಿ ಆರಂಭಿಸುವಷ್ಟು ಶಕ್ತಿಯಿದೆ ಎಂಬ ನಂಬಿಕೆ ಬೆಳ್ಳಂಬೆಳಿಗ್ಗೆಯೇ ಹುಸಿಯಾಗಲಿಲ್ಲ. ನಿನ್ನೆಯ ನಗುವನ್ನು ನೆನಪಿಸಿಕೊಳ್ಳುವ ಪ್ರಯತ್ನವನ್ನು ಯಾವ ವಿದ್ಯಾರ್ಥಿಯೂ ಮಾಡಲಿಲ್ಲ. ಕಾಲೇಜಿಗೆ ಬರುವಾಗ  ಬಸ್ಸಿನಲ್ಲಾಗಲಿ, ರಸ್ತೆಯಲ್ಲಾಗಲಿ, ಕಾಲೇಜಿನ ವೆರಾಂಡದಲ್ಲಿ ನಡೆಯುವಾಗಲೇ ಆಗಲಿ ಯಾರೂ ನಿನ್ನೆಯ ಕುರಿತಾಗಿ ಚಕಾರಚೆತ್ತಲಿಲ್ಲ. ಕೆಲವರಂತೂ ಒಬ್ಬರ ಮುಖವನ್ನು ಒಬ್ಬರು ನೋಡದಂತೆ ಓಡಾಡುತ್ತಿದ್ದರು. ಪರಸ್ಪರ ಕಣ್ಣುಗಳನ್ನು ನೋಡುತ್ತಾ ಮಾತನಾಡುವಷ್ಟು ಆತ್ಮ ವಿಶ್ವಾಸ ಕಂಡುಬರಲಿಲ್ಲ. ಇವುಗಳೇ ಹೊಸದಾಗಿ ನಗು ತರಿಸುವÀಷ್ಟು ತಮಾಷೆಯಾಗಿದ್ದವು. ಆದರೂ ಯಾರೂ ನಕ್ಕಿರಲಿಲ್ಲ. ಇನ್ನೇನು ತರಗತಿ ಪ್ರಾರಂಭವಾಗಲು ಹತ್ತು ನಿಮಿಷಗಳು ಬಾಕಿ ಇವೆ ಎಂಬಾಗ ನಂದೂ ರೇವಣಕರರು ತಮ್ಮ ಹಳೆಯ ಬಜಾಜ್ ಸ್ಕೂಟರಿನಲ್ಲಿ ಗುಡ್..ಗುಡ್..ಗುಡ್.... ಶಬ್ಧದೊಂದಿಗೆ ಒಳಬರುತ್ತಿದ್ದಂತೆ ವೆರಾಂಡದಲ್ಲಿ ನಿಂತಿದ್ದ ವಿದ್ಯಾರ್ಥಿಯೊಬ್ಬನ ಸಹನೆಯ ಕಟ್ಟೆ ಒಡೆದೇ ಹೋಯಿತು. ಆತ ನಕ್ಕಿದ್ದೇ ತಡ ತೀವ್ರ ಸೋಂಕು ಜಾಡ್ಯದ ಹಾಗೆ ನಗು ಒಬ್ಬರಿಂದ ಒಬ್ಬರಿಗೆ ಹರಡುತ್ತಾ ಪುನಃ ಕಾಲೇಜು ತುಂಬಾ ಹಬ್ಬಿಕೊಂಡಿತು.

     ತೀರಾ ತರಾತುರಿಯಲ್ಲಿ ಸ್ಟಾಫ್‌ಮೀಟಿಂಗ್ ಕರೆದರು ಚಾಕೋ. ಕಾಲೇಜಿನ ಮೂಲೆ ಮೂಲೆಗಳಿಂದ ನಗು ಅಲೆ ಅಲೆಯಾಗಿ ತೇಲಿ ಬರುತ್ತಿದ್ದರೆ ಮೀಟಿಂಗ್ ಹಾಲಿನಲ್ಲಿ ಸತ್ತವರ ಮನೆಯ ಮೌನ.ಚಾಕೋರವರೇ ಬಾಯ್ತೆರೆದು ``ರೇವಣಕರ್, ಈ ನಗು ನಿಮ್ಮ ಕ್ಲಾಸಲ್ಲೇ ಪ್ರಾರಂಭವಾಯ್ತಂತಲ್ಲ?''ಎಂದರು. ಈ ನಗುವಿನ ಪ್ರಹಸನದಲ್ಲಿ ಸ್ವತಃ ಸಕ್ರೀಯವಾಗಿ ಭಾಗವಹಿಸಿದ ಕಾರಣದಿಂದಲೋ ಅಥವಾ ಪ್ರಾಂಶುಪಾಲರ ಪ್ರಶ್ನೆ ಯಾವ ಉತ್ತರವನ್ನು ನಿರೀಕ್ಷಿಸುತ್ತಿದೆ ಎಂಬುದು ತಿಳಿಯದ್ದರಿಂದಲೋ ಗೊತ್ತಿಲ್ಲ, ನಂದೂ ರೇವಣಕರ ಮಾತನಾಡಲಿಲ್ಲ. 

ಚಾಕೋ ಪುನಃ ಕೇಳಿದರು-

``ಮೊದಲು ನಗುವನ್ನು ಪ್ರಾರಂಭಿಸಿದ್ದು ಯಾರು?''

ಈಗಲೂ ಮಾತಿಲ್ಲ

``ರೇವಣಕರ್, ನಿಮ್ಮನ್ನೇ ಕೇಳ್ತಿರೋದು'' ಚಾಕೋರವರ ಧ್ವನಿ ಗಡುಸಾಯಿತು.

``ಸ್ಮಿತಾ ಶಾನುಭಾಗ''

``ಯಾರವಳು?''

``ಕನ್ನಡಕ ಹಾಕ್ಕೊಳ್ತಾಳಲ್ಲ. ರ‍್ಯಾಂಕ್ ಸ್ಟುಡೆಂಟ್''ಯಾರೋ ಹೇಳಿದರು.

ಚಾಕೋರವರಿಗೆ ಗೊತ್ತಾಗಲಿಲ್ಲವೆಂದು ಭಾವಿಸಿ ಜವಾನ ಚಂದ್ರಕಾಂತ ಪ್ರಿನ್ಸಿಪಾಲರ ಹತ್ತಿರಬಂದು

``ಅದೇ ಸರ್, ನಿನ್ನೆ ಬೆಳಿಗ್ಗೆ ನಿಮ್ಮ ಕ್ಯಾಬಿನ್ನಿಗೆ ಕರೆಸಿದ್ದರಲ್ಲ ಮಂದಾಕಿನಿ, ಅವಳ ಜೊತೆಯೇ ಇರುತ್ತಿದ್ದಳಲ್ಲ .. ಅವಳೇ ...ಸ್ಮಿತಾ ಶಾನುಭಾಗ.''

ಚಂದ್ರಕಾಂತನ ವಿವರಣೆಗೆ ಗಮನಕೊಡದವರಂತೆ ಚಾಕೋ ಮಾತು ಮುಂದುವರಿಸಿ ``ಹೇಗೆ ಪ್ರಾರಂಭವಾಯಿತು ಎಂಬುದು  ಮುಖ್ಯವಲ್ಲ, ಏಕೆ ಇನ್ನೂ ನಿಂತಿಲ್ಲ ಎಂಬುದನ್ನು ಹೇಳಿ'' ಎಂದರು. ಅವರ ವಿಚಾರಣೆ ಯಾಕೋ ದಾರಿಬದಲಿಸತೊಡಗಿತು.

   ಅಷ್ಟೊತ್ತಿಗೆ ಹೊರಗಿನಿಂದ ಏನೋ ಗಲಾಟೆ ಕೇಳಿಸಲಾರಂಬಿಸಿತು. ಗಡಿಬಿಡಿಯ ನಡೆದಾಟದ ಸದ್ದುಗಳು ಹತ್ತಿರವಾಗತೊಡಗಿದವು. ಧಡ್ ಎಂಬ ಸದ್ದಿನೊಡನೆ ಮೂರು-ನಾಲ್ಕು ಜನ ಕ್ಯಾಮರಾ, ಮೈಕು, ಲೈಟು ಮತ್ತಿತರ ಸರಂಜಾಮುಗಳೊಂದಿಗೆ ಮೀಟಿಂಗ್ ಹಾಲಿನೊಳಗೆ ಪ್ರವೇಶಿಸಿದರು.

  ಅವರೆಲ್ಲ ಟೀ ವಿ ಚಾನೆಲ್ಲಿನವರು ಎಂದು ಅರ್ಥಮಾಡಿಕೊಳ್ಳುವುದು ಕಷ್ಟವಿರಲಿಲ್ಲ.

``ಹೀಗೆಲ್ಲ ಅನುಮತಿ ಇಲ್ಲದೆ ಪ್ರವೇಶಿಸುಸುವಂತಿಲ್ಲ''ಚಾಕೋ ಪ್ರಿನ್ಸಿಪಾಲರ ಗತ್ತಿನಲ್ಲಿ ಹೇಳಿದ್ದು ಪ್ರಯೋಜನವಾಗಲಿಲ್ಲ.

``ತೀರಾ ತುರ್ತು ಸಂದರ್ಭಗಳಲ್ಲಿ ಔಪಚಾರಿಕತೆಗಳನ್ನು  ನಿರ್ವಹಸಿಲಾಗುವುದಿಲ್ಲ ಸರ್ .. ದಯವಿಟ್ಟು ಕ್ಷಮಿಸಿ...ಹಾಗೆಯೇ ಸರ್..ಈ ನಗು ಮೊದಲು ಪ್ರಾರಂಭವಾದದ್ದು ಹೇಗೆ? ಟೀವಿ ವರದಿಗಾರ ತನ್ನ ಕೆಲಸವನ್ನು ಶುರುಹಚ್ಚಿಕೊಂಡ.

      ************************************************************

  ``ಇದೆಲ್ಲ ಪ್ರಾರಂಭವಾದದ್ದು ಸ್ಮಿತಾ ಶಾನುಭಾಗ ಎಂಬ ದ್ವಿತೀಯ ಪಿ ಯು  ವಿದ್ಯಾರ್ಥಿನಿ ನಿನ್ನೆ ಕೆಮಿಸ್ಟ್ರಿ ಲೆಕ್ಚರರ್ ನಂದೂ ರೇವಣಕರರ ತರಗತಿಯಲ್ಲಿ ಜೋರಾಗಿ ನಕ್ಕಿದ್ದರಿಂದ. ಆ ನಂತರ ಆ ನಗು ಒಬ್ಬರಿಂದ ಒಬ್ಬರಿಗೆ ಹರಡುತ್ತಾ ಕಾಲೇಜನ್ನೇ ಆವರಿಸಿಕೊಂಡುಬಿಟ್ಟಿದೆ. ಇದೀಗ ಎರಡನೇ ದಿನಕ್ಕೆ  ಈ ನಗುಹಗರಣ ಕಾಲಿಟ್ಟಿದೆ. ಬನ್ನಿ ಕಾಲೇಜಿನ ಆವರಣದಲ್ಲಿ ಏನು ನಡೆಯುತ್ತಿದೆ ನೋಡೋಣ.......''ಎಂದು ಗಂಟಲು ಹರಿಯುವಂತೆ ಟೀವಿ ವರದಿಗಾರ ಕೂಗುತ್ತಿದ್ದ.

``ಬೇರೆ ಚಾನೆಲ್ ಹಾಕು'' ಎಂದಳು ಮಂದಾಕಿನಿ.

   ಮಂದಾಕಿನಿ ಕಾಲೇಜಿಗೆ ಹೋಗದೆ ಸ್ಮಿತಾ ಶಾನುಭಾಗಳ ಮನೆಯಲ್ಲೇ ಇದ್ದಳು. ಸ್ಮಿತಾ ನಡದ್ದೆಲ್ಲವನ್ನೂ ಮನೆಯವರಿಗೆ ಹೇಳಿದ್ದರಿಂದ ನಿರಾಳವಾಗಿದ್ದಳು.

``ಇರಲಿ ಏನು ಹೇಳುತ್ತಾರೋ ನೋಡೋಣ''ಎಂದಳು ಸ್ಮಿತಾಳ ಅಮ್ಮ. ಸ್ವಲ್ಪ ಸಮಯದಲ್ಲಿ ಟೀವಿ ಸ್ಟುಡಿಯೋದಲ್ಲಿ ಕಾಲೇಜಿನ ನಗುವಿನ ಕುರಿತು ತಜ್ಞರೊಡನೆ ಸಂವಾದ ಪ್ರಾರಂಭವಾಯಿತು.

ನಿರೂಪಕ-ಡಾ.ತ್ರಿಪಾಠಿ,ಈ ರೀತಿಯ ಘಟನೆ ಹೇಗೆ ಸಂಭವಿಸುತ್ತದೆ?''

ಡಾ.ತ್ರಿಪಾಠಿ-ಅದಕ್ಕೆ ಅಂತಹ ನಿರ್ದಿಷ್ಟ ಕಾರಣವಿರುವುದಿಲ್ಲ. ಬೇರೆ ಬೇರೆ ಪರಿಸ್ಥಿತಿಗಳು, ಸಂದರ್ಭಗಳು ಮತ್ತು ಒತ್ತಡಗಳು ಈ ರೀತಿಯ ಸರಣಿ ನಗುವಿಗೆ ಕಾರಣವಾಗಬಲ್ಲವು''

ನಿರೂಪಕ-ಪ್ರೋಫೆಸರ್ ಮೂರ್ತಿಯವರೆ, ಈ ಹಿಂದೆ ಇಂತಹ ಘಟನೆಗಳು ನಡೆದ ಉದಾಹರಣೆಗಳಿವೆಯೇ?''

ಪ್ರೊ.ಮೂರ್ತಿ-ಓಹ್..ಬಹಳ ಸಲ ನಡೆದಿವೆ. ಕೆಲವು ದಾಖಲಾಗಲಿಲ್ಲ. ತಾಂಜೇನಿಯಾದ ವಸತಿ ಶಾಲೆಯೊಂದರಲ್ಲಿ 1962 ರ ಜನೆವರಿ 30 ರಂದು ಹೀಗೆಯೇ ಆಗಿತ್ತು. ಅಲ್ಲಿನ ತೊಂಬತ್ತೊಂದು ವಿದ್ಯಾರ್ಥಿಗಳಿಂದ ನಗುವನ್ನು ನಿಲ್ಲಿಸಲು ಸಾಧ್ಯವೇ ಆಗಲಿಲ್ಲ. ಮಾರ್ಚ ಹದಿನೆಂಟರಂದು ಶಾಲೆಯನ್ನು ಮುಚ್ಚಲಾಯಿತು''

ನಿರೂಪಕ-``ಪುನಃ ಶಾಲೆ ಯಾವಾಗ ಪ್ರಾರಂಭವಾಯಿತು?''

ಪ್ರೊ.ಮೂರ್ತಿ-``ಎರಡುವರೆ ವರ್ಷಗಳ ನಂತರ. ಆಗ ನಗು ನಿಂತಿತ್ತಂತೆ''

 ಹೀಗೆ ಸಂವಾದ ಕಾರ್ಯಕ್ರಮ ಮುಂದುವರಿದಿತ್ತು. ನಡುನಡುವೆ ಕಾಲೇಜಿನಿಂದ ನಗುವಿನ ನೇರ ಪ್ರಸಾರ ಬಿತ್ತರಗೊಳ್ಳುತಿತ್ತು. ಪುನಃ ಸ್ಟುಡಿಯೋದಲ್ಲಿ ತಜ್ಞರೊಡನೆ ಸಂವಾದ ಮುಂದುವರಿಯುತಿತ್ತು.

ನಿರೂಪಕ-``ಡಾ.ತ್ರಿಪಾಠಿ, ಈ ಘಟನೆಯ ಕುರಿತು ನಿಮ್ಮ ಒಟ್ಟಾಭಿಪ್ರಾಯವೇನು?''

ಡಾ.ತ್ರಿಪಾಠಿ-``ನಗು ಒಳ್ಳೆಯದು. ಒತ್ತಡ ಪರಿಸ್ಥಿತಿಗೆ ಕಾರಣವಾಗುವ ನ್ಯೂರೂ ಎಂಡೋಕ್ರೈನ್ ಹಾರ್ಮೋನುಗಳ ಸೃವಿಕೆ ಇದರಿಂದ ತಗ್ಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ,‌ ನಕ್ಕರೆ ಮುದಿಯಾಗುವ ಪ್ರಕ್ರಿಯೆ ನಿಧಾನಗೊಳ್ಳುತ್ತದೆ.''

  ಟಿ.ವಿ ನೋಡುತ್ತಿದ್ದ ಮಂದಾಕಿನಿ ತನಗರಿವಿಲ್ಲದಂತೆ ಗಟ್ಟಿಯಾಗಿ ಕೂಗಿದಳು-

   ``ಎಲ್ಲ ಸುಳ್ಳು''

ಎಲ್ಲರ ದೃಷ್ಟಿಯೂ ತನ್ನ ಕಡೆಯೇ ತಿರುಗಿದ್ದನ್ನು ಗಮನಿಸಿ``ಸುಳ್ಳಲ್ಲದೆ ಮತ್ತೇನು? .....ಎಂದೂ ನಗದ, ಯಾವಾಗಲು ಮುಖ ಗಂಟುಹಾಕಿಕೊಂಡೇ ಇರುವ ಚಾಕೋಗೆ ಮುದಿ ವಯಸ್ಸು ತನಗೆ ಬಂದಿದೆ ಎಂಬುದೇ ಗೊತ್ತಾಗಲಿಲ್ಲ...ತನ್ನ ಮಗಳ ವಯಸ್ಸಿನ ಹುಡುಗಿಯರೊಡನೆ... ..ಛೀ.. ಛೀ.. ..''

  ಮಂದಾಕಿನಿ ಹೊರಡಲು ಎದ್ದು ನಿಂತಳು. ಯಾರ ಮುಖದಲ್ಲೂ ನಗುವಿರಲಿಲ್ಲ.

Monday, 29 January 2024

ಮಕ್ಕಳ ಸಾಹಿತ್ಯ ಸಂಭ್ರಮದ ಹಾಡುಗಳು

 

ಸಾಹಿತ್ಯ ಸಂಭ್ರಮ 

 

ಆಟ.. ಹಾಡು.. 

ಮೋಜು.. ಮಸ್ತಿ 

ಎಲ್ಲಾ ಇದೆ ಇಲ್ಲಿ 

ನಮಗೆ ಎಲ್ಲ ಇದೆ ಇಲ್ಲಿ

 

ಪ್ರಕೃತಿ ನೋಡುತ್ತಾ 

ಬಣ್ಣವ ಬಳಿಯುತ್ತಾ

ಚಿತ್ರವ ಬಿಡಿಸೋಣಾ 

ಸೃಷ್ಟಿಯ ಚಿತ್ರವ ಬಿಡಿಸೋಣ

 

ಕಥೆ ಕೇಳುತ್ತಾ.. 

ಕಥೆ ಹೇಳುತ್ತಾ..

ನಾವೇ ಬರೆಯೋಣ 

ಕಥೆಯನು ನಾವೇ ಬರೆಯೋಣ

 

ಪದಗಳ ಹುಡುಕುತ್ತಾ 

ಪ್ರಾಸವ ಜೋಡಿಸಿ

ಕವಿತೆಯ ಕಟ್ಟೋಣ 

ನಾವೇ ಕವಿತೆಯ ಕಟ್ಟೋಣ

 

ಕವಿತೆಯನು ಕಟ್ಟಿ 

ತಾಳವನು ಕುಟ್ಟಿ

ಕಥೆಯನು ಆಡೋಣ 

ನಮ್ಮದೇ ಕಥೆಯನ್ನು ಆಡೋಣ 

 

ನಾಟಕ ನೋಡುತ್ತಾ 

ನಟನೆಯ ಮಾಡುತ್ತ

ಲೋಕವ ತಿಳಿಯೋಣ 

ರಂಗ ಲೋಕವ ತಿಳಿಯೋಣ

 

- ಕವಿತಾ ಹಾಸನ

https://youtu.be/2LWleLq8Ke8?si=VuS8vmTUNXMbMOLk

 

2. ಹಕ್ಕಿಗಳಾಗಿ ಬಾನೆತ್ತರದಿ

 

ಹಕ್ಕಿಗಳಾಗಿ ಬಾನೆತ್ತರದಿ

ಹಾರುತ ಏರುತ ಸುತ್ತೋಣ

ಬೆಳಕಿನ ಕಿರಣದಿ ಬಣ್ಣವ ಹುಡುಕುತ

ಭಾವಲೋಕದಲಿ ಮೀಯೋಣ

 

ಬಣ್ಣದ ಕನಸಿನ ಚಿಣ್ಣರು ನಾವು

ಕಾಮನಬಿಲ್ಲನು ಮುಟ್ಟೋಣ

ಬಾಚಿ ಬಳಿಯುತ ರಂಗನು ಚೆಲ್ಲುತ

ಬಾನಲಿ ಚಿತ್ತಾರ ಬಿಡಿಸೋಣ

 

ಏರುತ ಇಳಿಯುತ ಮೂಡಿ ಮುಳಗುವ 

ದಿನಕರನಾಟವ ತಿಳಿಯೋಣ

ಕತ್ತಲೆ ಕವಿಯಲು ತಾರಾ ಲೋಕದಿ 

ಸೇರುತ ಮಿನಮಿನ ಮಿನುಗೋಣ

 

ರಂಗು ರಂಗಿನ ಮೋಡಗಳಾಗಿ

ಚೆಂದದಿ ಹನಿಹನಿಗೂಡೋಣ

ಗುಡುಗುಡು ಗುಡುಗುತ ಮಿಂಚಿನ ಮಳೆಹನಿ

ಸುರಿಸುತ ಭುವಿಯನು ತಣಿಸೋಣ

 

ಹಸಿರನು ಬಿತ್ತಿ ಉಸಿರನು ಪಸರಿಸಿ

ಖುಷಿಯಲಿ ಆಟವ ಆಡೋಣ

ಅಕ್ಷರ ಲೋಕದ ಚಿಟ್ಟೆಗಳಾಗಿ

ಪುಸ್ತಕ ಬನವನು ಸುತ್ತೋಣ

 

ವನವನ ಸುತ್ತಿ ಓದಿನ ಪರಿಮಳ

ಸವಿಯುತ ಸವಿನುಡಿಯಾಡೋಣ

ವಿಶ್ವದ ಶಾಂತಿಗೆ ಸಮತೆಯ ಹಾಡಿಗೆ

ದನಿಗೂಡಿಸುತ ಸಾಗೋಣ

 

 - ಡಾ. ನಿಂಗು ಸೊಲಗಿ

 

https://youtu.be/tKUkLAsTxPg

 
3. ಪುಸ್ತಕಗಳು ಮಾತಾಡುತ್ತವೆ

 

ಮಾತಾಡ್ತಾವೆ ಪುಸ್ತಕ ಮಾತಾಡ್ತಾವೆ

ಮಾತಾಡ್ತಾವೆ ಪುಸ್ತಕ ಮಾತಾಡ್ತಾವೆ ||||

 

ಕಳೆದ ಯುಗಗಳ ಬಗೆಯ ಕುರಿತು

ಜಗದ ಜನರ ಈ ದಿನ ಕುರಿತು

ನಾಳೆಯ ಒಂದೊಂದು ಕ್ಷಣವನ್ನು ಕುರಿತು 

ಮಾತಾಡ್ತಾವೆ.....

 

ಸೋಲು ಗೆಲುವಿನ ಕುರಿತು

ಸುಖ ದುಃಖದ  ಸಾಲುಗಳ ಕುರಿತು

ಬದುಕಿನ ಒಂದೊಂದು ಕ್ಷಣವನ್ನು ಕುರಿತು

ಮಾತಾಡ್ತಾವೆ.....

 

ಹೂ ದುಂಬಿಗಳೊಲವಿನ ಕುರಿತು

ಸಾವು ಯುದ್ಧದ ನಿಲುವ ಕುರಿತು

ನೀ ಕೇಳಯ್ಯಾ ಗೆಳೆಯ ಪುಸ್ತಕಗಳ ನುಡಿಯ

ಮಾತಾಡ್ತಾವೆ....

 

ಪಕ್ಷಿಗಳ ಚಿಲಿಪಿಲಿ ಗಾನ

ಹೊಲ-ಗದ್ದೆಗಳುಸಿರಿನ ತಾಣ

ನದಿ ಝರಿಗಳ ಜುಳು ಜುಳು ತುಂಬಿದೆ ಪುಸ್ತಕದಿ|ಮಾತಾಡ್ತಾವೆ.....

 

ಮುಗುಳು ಮುಖದ ಕಿನ್ನರಿ ನಗೆಯ

ಜ್ಞಾನ-ವಿಜ್ಞಾನಗಳ ಗಣಿಯ

ನಮ್ಮೊಂದಿಗೆ ಪ್ರತಿಗಳಿಗೆ ಇರುವ ಪುಸ್ತಕವೆಲ್ಲ

ಮಾತಾಡ್ತಾವೆ......

 

- ಸಪ್ದರ್ ಹಷ್ಮಿಕನ್ನಡಕ್ಕೆ: ಸಿ. ಬಸವಲಿಂಗಯ್ಯ. ರೂಪಾಂತರ: ನಿಂಗು ಸೊಲಗಿ.

 

ಹಾಡನ್ನು ಈ ಕೊಂಡಿ ಬಳಸಿ ಕೇಳಬಹುದು : 

https://youtu.be/6oqtrjwR9yc?si=2JYL-DJI4R0zXcbg

 

********

 

4. ಗ್ರಂಥಾಲಯಕ್ಕೆ ಗೋಡೆಗಳಿಲ್ಲ..

 

ಇಲ್ಲ ಇಲ್ಲ ಇಲ್ಲವೇ ಇಲ್ಲ

ಗ್ರಂಥಾಲಯಕ್ಕೆ ಗೋಡೆಗಳಿಲ್ಲ..

ಅಕಾಶಕ್ಕೆ ಅಂಚುಗಳಿಲ್ಲ

ಕನಸು ಕಪಾಟಿಗೆ ಬಾಗಿಲೇ ಇಲ್ಲ

 

ಓದುವೆ ನಾನು ಈ ಜಗವನ್ನು

ತೆರೆಯುವೆ ಈಗಲೆ ಹೊಸ ಪುಟವನ್ನು

ಹಾಳೆಯ ತುಂಬಾ ಹರಡಿದೆ ನೋಡು

ನೀಲಿ ಬಾನು, ಹಸುರಿನ ಕಾನು

 

ಇಲ್ಲ ಇಲ್ಲ ಇಲ್ಲವೇ ಇಲ್ಲ

ಗ್ರಂಥಾಲಯಕ್ಕೆ ಗೋಡೆಗಳಿಲ್ಲ..

 

ಕಟ್ಟುವೆ ನಾನು ಪುಸ್ತಕ ಸೇತುವೆ,

ಪ್ರೀತಿ ಪದಗಳ ಮನೆಯನ್ನು

ಅಜ್ಜನು ಅಜ್ಜಿಯು ಅಮ್ಮ, ಅಪ್ಪನು

ತೆರೆಯುತ ಹೋಗುವೆ  ಬದುಕನ್ನು

 

ಇಲ್ಲ ಇಲ್ಲ ಇಲ್ಲವೇ ಇಲ್ಲ

ಗ್ರಂಥಾಲಯಕ್ಕೆ ಗೋಡೆಗಳಿಲ್ಲ..

 

ಆಡುವೆ ಅಲ್ಲಿ, ಓಡುವೆ ಇಲ್ಲಿ

ಭೂಮ್ಯಾಕಾಶದ ಬಯಲಲ್ಲಿ.

ಮಾತು, ಮೋಜು, ಹಾಡು ಎಲ್ಲ

ಪುಸ್ತಕವೆಂದರೆ ಅಕ್ಷರವಲ್ಲ.

 

ಇಲ್ಲ ಇಲ್ಲ ಇಲ್ಲವೇ ಇಲ್ಲ

ಗ್ರಂಥಾಲಯಕ್ಕೆ ಗೋಡೆಗಳಿಲ್ಲ..

 

ಬದುಕಿನ ಹೊಲದಲಿ ಮಮತೆಯ ತೋಟ

ಬಿತ್ತುವೆ ಈಗ ಪ್ರೀತಿಯ ಬೀಜ

ಬೆಳೆಯುವೆ ನಾನು ಸ್ನೇಹದ ಫಸಲು,

ಹರಡುವೆ ಎಲ್ಲೆಡೆ ಓದಿನ ಘಮಲು.

 

ಇಲ್ಲ ಇಲ್ಲ ಇಲ್ಲವೇ ಇಲ್ಲ

ಗ್ರಂಥಾಲಯಕ್ಕೆ ಗೋಡೆಗಳಿಲ್ಲ..

 

- ಉದಯ ಗಾಂವಕಾರ

https://youtu.be/bBazAoGSx-0

 

5. ಹಳ್ಳಿಗೋಗುವಾ ನಾವು ಹಳ್ಳಿಗೋಗುವಾ

 

ಹಳ್ಳಿಗೋಗುವಾ ನಾವು ಹಳ್ಳಿಗೋಗುವಾ II 

ಆಹಾ.. ಬೆಟ್ಟ ಬಿದಿರು ಬಳ್ಳಿ ಕಳ್ಳಿ ಬೆಳೆದು ನಿಂತಾವಾ ಮುತ್ತುಗದೂವು ಮತ್ತಾಬರಿಸೀ  

ಮೆತ್ತಗೆ ಮೆತ್ ಮೆತ್ತಗೆ ಕರೆದಾವ..II ಹಳ್ಳಿಗೋಗುವ II

 

ಹಳ್ಳ ಕೊಳ್ಳ ಹಾರೋದೇ ನಮ್ ಲಾಂಗ್ ಜಂಪೂ.. ಓ ಓ.. 

ಬೇಲಿಗೀಲಿ ಹಾರೋದೇ ನಮ್ ಹೈ ಜಂಪೂ 

ಕಬ್ಬಿನ್  ಕಂತೆ ಎತ್ತೋದೆ ನಮ್ಮ್  ವೈಟ್  ಲಿಪ್ಟಿಂಗು ಎಮ್ಮೆ ಮ್ಯಾಗಳ ಪಯಣಾನೆ  ನಮ್ ಕಾರ್ ಡ್ರೈವಿಂಗೂ                       

   ||ಹಳ್ಳಿಗೋಗುವಾ||

 

ಕಲ್ಲಾಟ ಜಿಬಿಲಿಗಳೆ ನಮ್ಮ ಕೆರಂ ಬೋರ್ಡು ಓ.. ಓ..

ಕುಟ್ಟಿ ದೊಣ್ಣೆ ಬುಗುರಿನೇ ನಮ್ ಫುಟ್ ಬಾಲ್ ಕ್ರಿಕೆಟು 

ಪಾಡ್ದನ ಸಂಧಿಯ ಪದವೇ ಆರ್ಕೆಸ್ಟ್ರಾ

ಜೋಗೀರಯ್ಯನ ತಂಬೂರೀನೇ ಲೇಟೆಸ್ಟ್ ಗಿಟಾರ್   

||ಹಳ್ಳಿಗೋಗುವಾ||

 

ಅಡಿಕೆ ಹಾಳೆಲ್ ಕಿರೀಟ ಮಾಡ್ಕೊಂಡ್ ..ಆಹಾಹಾ.. ತೆಂಗಿನ ಗರಿಯಲ್ ವಾಚ್ ಕಟ್ಕೊಂಡ್ ಓಹೋಹೋ.. ಸೋರೆ ಬುರುಡೆಲ್ ದೋಣಿ ಮಾಡ್ಕೊಂಡ್ ಬೊಂಬಾಟ್ ನಮ್ ಟೀಮು

ಕೆರೆಯಾ ಒಳಗಿನ ಪರಪಂಚಾನೇ ನಾವ್ ಕಾಣುವಾ 

|Iಹಳ್ಳಿಗೋಗುವಾ||

 

- ನೆ.ಲ. ಕೃಷ್ಣಮೂರ್ತಿ

 

https://youtu.be/G2YWxreC0dQ?si=Ja0csofXQGeIRC5V

 

********

 

6. ಗಡಿಗಳೇ ಇಲ್ಲಾ ನಮಗೆ ಗಡಿಗಳೇ ಇಲ್ಲಾ

 

ಗಡಿಗಳೇ ಇಲ್ಲಾ ನಮಗೆ ಗಡಿಗಳೇ ಇಲ್ಲಾ

ಗಡಿಗಳೇ ಇಲ್ಲಾ ನಮಗೆ ಗಡಿಗಳೇ ಇಲ್ಲಾ

ಉರಿವ ಸೂರ್ಯನಿಗೆ ಜಾತಿಯೇ ಇಲ್ಲ

ಸಲಹೋ ಭೂಮಿಗೆ ಧರ್ಮವೇ ಇಲ್ಲ

ಮೇಲು ಕೀಳಿನ ಹಂಗೇ ಇಲ್ಲ

ದೇಶ ಭಾಷೆಯ ಗುಂಗೇ ಇಲ್ಲ

ಅವರು ಇವರೂ ಎಲ್ಲರೂ ಒಂದೇ ನಮಗೆ

ಗಡಿಗಳೇ ಇಲ್ಲಾ ನಮಗೆ ಗಡಿಗಳೇ ಇಲ್ಲಾ

ಗಡಿಗಳೇ ಇಲ್ಲಾ ನಮಗೆ ಗಡಿಗಳೇ ಇಲ್ಲಾ..

 

ಬೀಸುವ ಗಾಳಿಗೆ ಎಲ್ಲೆಯೇ ಇಲ್ಲ

ಹರಿಯುವ ನೀರಿಗೆ ಶಾಸ್ತ್ರವೇ ಇಲ್ಲ

ಮರಕ್ಕೆ ಬೇಧವಿಲ್ಲ

ನೆರಳಿಗೆ ಮೈಲಿಗೆಯಿಲ್ಲ

ಅವರು ಇವರೂ ಎಲ್ಲರೂ ಒಂದೇ ನಮಗೆ

ಗಡಿಗಳೇ ಇಲ್ಲಾ ನಮಗೆ ಗಡಿಗಳೇ ಇಲ್ಲಾ

ಗಡಿಗಳೇ ಇಲ್ಲಾ ನಮಗೆ ಗಡಿಗಳೇ ಇಲ್ಲಾ..

 

ಯುದ್ಧದಲ್ಲಿ ಫಲವಿಲ್ಲ

ಗೆದ್ದವನಿಗೆ ಸುಖವೇ ಇಲ್ಲ

ಗಡಿಯ ನೆಟ್ಟವಗೆ ಬುದ್ದಿಯೇ ಇಲ್ಲಾ

ನಮಗೆ ಗಡಿಗಳ ತಂಟೆಯೇ ಇಲ್ಲ..

ಗಡಿಗಳೇ ಇಲ್ಲಾ ನಮಗೆ ಗಡಿಗಳೇ ಇಲ್ಲಾ

ಗಡಿಗಳೇ ಇಲ್ಲಾ ನಮಗೆ ಗಡಿಗಳೇ ಇಲ್ಲಾ..

 

ದ್ವೇಷಕ್ಕೆಂದೂ ಕೊನೆಯೇ ಇಲ್ಲ

ಸಿಡಿಯೋ ಗುಂಡಿಗೆ ಕರುಣೆ ಇಲ್ಲಾ

ಪ್ರೀತಿ ಹಂಚಿದರೆ ಜಗಳವೇ ಇಲ್ಲ

ಗಡಿಗಳೇ ಇಲ್ಲಾ ನಮಗೆ ಗಡಿಗಳೇ ಇಲ್ಲಾ

ಗಡಿಗಳೇ ಇಲ್ಲಾ ನಮಗೆ ಗಡಿಗಳೇ ಇಲ್ಲಾ..

 

- ಸಚಿನ ಅಂಕೋಲಾ

 

********

 

7. ಮಕ್ಕಳು ನಾವು - ಲಾವಣಿ

 

ಮಕ್ಕಳು ನಾವು ಮಣ್ಣಲಿ

ಬೆರೆತು 

ಬೆಳಕಿನ ಗಿಡಗಳ ನೆಟ್ಟಿಹೆವು

ಕಾಮನಬಿಲ್ಲನು ಎಳೆದೂ ತಂದು

ಬಣ್ಣದ ಕತೆಗಳ ಕಟ್ಟುವೆವು..

 

ಮುದ್ದಿನ ಚಿತ್ರಕೆ ಪದಗಳ ಕದ್ದು 

ಸದ್ದನು ಅದಕೇ ತುಂಬುವೆವು

ದೊಡ್ಡ ಪುಸ್ತಕದ ಅಕ್ಷರವಾಗಿ

ಚಿಟ್ಟೆಗಳಂತೇ ಹಾರುವೆವು

 

ಮಳೆ ಸುರಿವಾಗ ಕೊಡೆಯನು

ಬೀಳಿಸಿ 

ಅಮ್ಮಗೆ ಕಾಣದೆ ತೋಯುವೆವು

ಒಳಗಿನ ದನಿಯನು ಹನಿಗಳ ಜೊತೆಗೆ 

ಹಂಚಿ ಕನಸನು ನೇಯುವೆವು

 

ಸದ್ದೇ ಇರದಾ ಕೋಣೆಯ ಗೋಡೆಗೆ

ಸುದ್ಧಿಯ ಹೇಳಲು ಕಲಿಸುವೆವು

ಪುಸ್ತಕ ಓದಿ ಮಸ್ತಕ ತುಂಬಿ

ಜಗವನ್ನರಿಯಲು ನಡೆಯುವೆವು



  • ಸಂಧ್ಯಾ ನಾಯ್ಕ

 

8. ಕಲೆತು ಕಲಿತು ಕೂಡುವ

 

ಕಲೆತು ಕಲಿತು ಕೂಡುವ 

ನಮ್ಮ ಸಂಗಮ

ಸಾಹಿತ್ಯದ ವಿಸ್ತಾರ 

ನಮ್ಮ ಸಂಭ್ರಮ| |

 

ನಮ್ಮ ಬಾಳ ಬಾನಿಗಿಂದು

ಹೊಸ ಸಡಗರವು

ಆಡಿ ಹಾಡಿ ನಲಿದು ಬಂತು ಕಾಮನಬಿಲ್ಲು

 

ತುಂಬಿದೆ ಬಣ್ಣ ಮಳೆಯೋ ಬಿಸಿಲೋ 

 

ತೆರೆಯೋ ಕಣ್ಣ ದಾಟೋ ಹೊಸಿಲು 

ಕಲೆತು ಕಲಿತು ಕೂಡುವ ನಮ್ಮ ಸಂಗಮ 

ಸಾಹಿತ್ಯದ  ವಿಸ್ತಾರ ನಮ್ಮ ಸಂಭ್ರಮ

 

ಕವಿತೆ  ನಾಟಕ ಕಥೆಯೆ ಗಾಳಿಪಟ

ಅಕ್ಷರದ ಜೇನಿಗೆ  ಬಾನೆ ಹೂದೋಟ

ನಮ್ಮೆಲ್ಲ ಕನಸುಗಳು ಹೊಸ ಹುಡುಕಾಟಗಳು ಎಳೆಯ ಜೀವಗಳ ಬದುಕ ಪ್ರೀತಿಗಾಗಿ

 

ಉರಿಯೋ ಭಾಸ್ಕರ ತಂಪೆರೆವ ಚಂದಿರ 

ನಮ್ಮಯ ಬೆರಗಿಗೆ  ಮಿನುಗಲಿ ನಕ್ಷತ್ರ

ಉಲ್ಕೆ ಧೂಮಕೇತು ಚಿಮ್ಮುವ ರಾಕೆಟ್

ಎಲ್ಲವೂ ನಮ್ಮೊಳಗೆ ಬರೆವ ಖುಷಿಯ ಕೊಡುತಿದೆ

 

- ಚೇತನ್ ಕೊಪ್ಪ

 

********

 

9. ಕನಸುಗಾರರು ನಾವು ಕನಸುಗಾರರು

 

ಕನಸುಗಾರರು ನಾವು ಕನಸುಗಾರರು

ಕನಸು ನನಸು ಮಾಡುವಂತ 

ಹುಡುಗ ಹುಡುಗೀರು 

ಮನೆಯಲ್ಲಿ ಶಾಲೆಯಲ್ಲಿ 

ಆಟದಲ್ಲಿ ಪಾಠದಲ್ಲಿ 

ಹಳ್ಳಿಯಲ್ಲಿ ಪೇಟೆಯಲ್ಲಿ 

ಊರೂರಲ್ಲಿ ಅಲ್ಲಿ ಇಲ್ಲಿ 

 

ದೂರದಲ್ಲೊಂದು ಬೆಟ್ಟ 

ಊರಿನ ಪಕ್ಕಾ ನದಿ

ನದಿ ನದಿಯ ತುಂಬಾ ನೀರು

ನೀರಿನ ತುಂಬಾ ಮೀನು 

ಮೀನಿನ ಜೊತೆಗೆ ನಾವಾಡ್ಬೇಕು 

ಈಜು ಹೊಡೆದಾಟ 

 

ಸುತ್ತಮುತ್ತ ಕಾಡು 

ಕಾಡಲಿ ಜಿಂಕೆ ನವಿಲು 

ಕಾರೆ ಬೋರೆ ನೆಲ್ಲಿ 

ಚೇಪೆ ಹಲಸು ಮಾವು ಹಣ್ಣು ತಿಂದು ನಾವಾಡ್ಬೇಕು ಮರಕೋತಿಯಾಟ 

 

ಕಾಲಕಾಲಕ್ಕೆ ಮಳೆ 

ಹೊಲದ ತುಂಬಾ ಬೆಳೆ 

ರಾಗಿ ಅರ್ಕ ಭತ್ತ 

ಸಜ್ಜೆ ಸಾಮೆ ಜೋಳ 

ಕೆಮಿಕಲ್ಲು ಗಿಮಿಕಲ್ಲು 

ಹಾಕೋ ಹಂಗಿಲ್ಲ 

 

ಬಳಸೋದಿಲ್ಲ ಬಿ ಟಿ

ಬೀಜಗಳೆಲ್ಲಾ ನಾಟಿ 

ಪ್ರತಿನಿತ್ಯ ಸಂತೆ 

ಸಾವಯವ ಜಾತ್ರೆ

ಸುಗ್ಗಿ ಸಮಯ ಉರೋರ್ ಸೇರಿ

ಆಟ ಕೋಲಾಟ 

 

ಊರಲ್ಲೊಂದು ಸ್ಕೂಲು

ಚಂದದ ಬಿದಿರು ಸೂರು 

ಖುಷಿಖುಷಿಯಾಗಿ ಮಕ್ ಳು 

ಓದುತ್ತಾರೆ ಎಲ್ರೂ 

ಆಚೆ-ಗೀಚೆ ಆಟದ ಬಯಲು 

ಈಚೆ ಕೈತೋಟ 

 

ಇರುವೆ ಗೆದ್ಲು ನೋಡ್ತಾ

ಸಾಲು ಬೀಜ ಬಿತ್ ತಾ

ಜೀವಶಾಸ್ತ್ರ ಗಣಿತ ಎಲ್ಲಾ ಕಲ್ತುಕೊಳ್ತಾ

ಓದಿ ಬರೆದು ಕೂಡಿ ಕಳೆದು 

ಪಾಠದ ಆಟ 

ಮುದ್ದೆ ಸೊಪ್ಪು ಸಾರು 

ರೊಟ್ಟಿ ಖಾರ ಜೋರು 

ಮಕ್ಕಳಿಗೆಲ್ಲ ಹಾಲು 

ತುಪ್ಪ ಬೆಣ್ಣೆ ಮೊಸರು 

ಯಾವ ಮನೆಗೋದ್ರು 

ಊಟಕ್ಕಿಲ್ಲ ಅನ್ನೋ ಹಂಗಿಲ್ಲ 

 

ಕ್ರಿಸ್ಮಸ್ ಅಂದ್ರೆ ಕೇಕು 

ಗಣಪ ಬಂದ್ರೆ ಕಡಬು 

ನಡುವೆ ನಾಟಿ ಕೋಳಿ 

ಯುಗಾದಿ ಹಬ್ಬ ಮೊಹರಂ ಹಬ್ಬಗಳಲ್ಲಿ ಒಮ್ಮೊಮ್ಮೆ ಬಿರಿಯಾನಿ 

ಹಬ್ಬಗಳಲ್ಲಿ ಆಟ ಒಡನಾಟ

 

- ಜನಾರ್ದನ ಕೆಸರಗದ್ದೆ

 

https://youtu.be/cAYWzht45n8?si=Lt0r7jeTFCe_AtY-

 

----------------------

 

10. ಐಲೈಸಾ ಐಲೈಸಾ...

 

ಐಲೈಸಾ ಐಲೈಸಾ...

ಐಲೈಸಾ ಐಲೈಸಾ....

 

ಮಣ್ಣ ಮೇಲೆ ಮರ ಇದೆ

ಐಲೈಸಾ ಐಲೈಸಾ...

ಮರದ ಮೇಲೆ ಟೊಂಗೆ ಇದೆ

ಐಲೈಸಾ ಐಲೈಸಾ..

.

ಮಣ್ಣ ಮೇಲೆ ಮರ ಇದೆ ಮರದ ಮೇಲೆ ಟೊಂಗೆ ಇದೆ

ಐಲೈಸಾ ಐಲೈಸಾ....

 

ಟೊಂಗೆಯಲ್ಲಿ ಎಲೆ ಇದೆ

ಐಲೈಸಾ ಐಲೈಸಾ

 

ಮಣ್ಣ ಮೇಲೆ ಮರ ಇದೆ

ಮರದ ಮೇಲೆ ಟೊಂಗೆ ಇದೆ

ಟೊಂಗೆಯಲ್ಲಿ ಎಲೆ ಇದೆ

ಐಲೈಸಾ ಐಲೈಸಾ

 

ಎಲೆಯ ಆಚೆ ಹೂವು ಇದೆ 

ಐಲೈಸಾ ಐಲೈಸಾ

 

ಮಣ್ಣ ಮೇಲೆ ಮರ ಇದೆ

ಮರದ ಮೇಲೆ ಟೊಂಗೆ ಇದೆ

ಟೊಂಗೆಯಲ್ಲಿ ಎಲೆ ಇದೆ

ಎಲೆಯ ಆಚೆ ಹೂವು ಇದೆ

ಐಲೈಸಾ ಐಲೈಸಾ 

 

ಹೂವಿನ ಕೆಳಗೆ ಕಾಯಿ ಇದೆ

ಐಲೈಸಾ ಐಲೈಸಾ

 

ಮಣ್ಣ ಮೇಲೆ ಮರ ಇದೆ

ಮರದ ಮೇಲೆ ಟೊಂಗೆ ಇದೆ

ಟೊಂಗೆಯಲ್ಲಿ ಎಲೆ ಇದೆ

ಎಲೆಯ ಆಚೆ ಹೂವು ಇದೆ

ಹೂವಿನ ಕೆಳಗೆ ಕಾಯಿ ಇದೆ

ಐಲೈಸಾ ಐಲೈಸಾ...

 

ಕಾಯಿಯ ಆಚೆ ಹಣ್ಣು ಇದೆ

ಐಲೈಸಾ ಐಲೈಸಾ

 

ಮಣ್ಣ ಮೇಲೆ...... (ಮುಂದುವರಿಕೆ...)

 

ಹಣ್ಣಿನೊಳಗೆ ಬೀಜ ಇದೆ 

ಐಲೈಸಾ ಐಲೈಸಾ

 

ಮಣ್ಣ ಮೇಲೆ......

 

ಬೀಜದೊಳಗೆ ಮೊಳಕೆ ಇದೆ

ಐಲೈಸಾ ಐಲೈಸಾ....

 

ಮಣ್ಣ ಮೇಲೆ....

 

ಮೊಳಕೆಯಲ್ಲಿ ಗಿಡ ಇದೆ

ಐಲೈಸಾ ಐಲೈಸಾ....

 

ಮಣ್ಣ ಮೇಲೆ......

 

ಐಲೈಸಾ ಐಲೈಸಾ....

ಐಲೈಸಾ ಐಲೈಸಾ.....

ಐಲೈಸಾ ಐಲೈಸಾ...

 

-------------------------

 

11. ಆಹಾ ನೋಡು ಎಂಥ ಚಂದ

 

ಆಹಾ ನೋಡು ಎಂಥ ಚಂದ

ನಮ್ಮೂರು ಹಳ್ಳಿ

ಸುತ್ತ ಮುತ್ತ ಗಿಡ ಮರ

ಬೆಳದಾವ ಇಲ್ಲಿ

 

ಹಳ್ಳ ಕೊಳ್ಳ ಕಲ್ಲು ಮುಳ್ಳು

ಇರುತ್ತಾವ ಇಲ್ಲಿ

ಜೇನು ಗೀನು ತಿನ್ನಲ್ಲಾಕ 

ಸಿಗುತ್ತಾವ ಇಲ್ಲಿ 

 

ಕಾಡು ಗಿಡು ಗುಡ್ಡಾ ಗಾಡು 

ಇರುತ್ತಾವ ಇಲ್ಲಿ 

ಜಿಂಕೆ ನವಿಲು ನೋಡಲಾಕ

ಸಿಗುತ್ತಾವ ಇಲ್ಲಿ 

 

ಕಬ್ಬು ಕಾಯಿ ಬತ್ತಾ ಜೋಳ

ಬೆಳಿತ್ತಾರ ಇಲ್ಲಿ 

ಭೂಮಿ ತಾಯಿ ಸೇವೆಯನ್ನು 

ಮಾಡುತ್ತಾರ ಇಲ್ಲಿ 

 

# ಎಂ. ಎಸ್. ಮನೋಹರ

 

********

 

12. ಬಾನ ದಾರಿಯ ತಾರೆಗಳು
 

 

ಬನ್ನಿರಿ ಬನ್ನಿರಿ ಗೆಳೆಯರೆ ನಾವು 

ಸಾಹಿತ್ಯ ಹಬ್ಬಕೆ ಹೋಗೋಣ

ಆಡಿ ಹಾಡಿ ಕುಣಿ ಕುಣಿದಾಡಿ

ಸಂಭ್ರಮದಿಂದ ನಲಿಯೋಣ||||

 

ಹಕ್ಕಿ ಪಿಕ್ಕಿ ಚಿತ್ರವ ಬಿಡಿಸಿ

ಕಥೆ - ಕವಿತೆ ಕಟ್ಟೋಣ

ಅನುಭವದಾಟವ ಆಡುತ ನಟಿಸುತ

ನಾಟಕ ನಾವೇ ಬರೆಯೋಣ

 

ಕಲ್ಪನೆಗಳಿಗೆ ರೆಕ್ಕೆಯ ಕಟ್ಟಿ 

ಆಗಸದೆಡೆಗೆ ಹಾರೋಣ

ಬಾನ ದಾರಿಯ ತಾರೆಗಳಂತೆ

ನಗುತಲಿ ನಲಿಯುತ ಮಿನುಗೋಣ

 

ಅಕ್ಕರೆಯಿಂದಲಿ ಅಕ್ಷರ ಪೋಣಿಸಿ

ಮುದದಿ ಪದಗಳ ಬರೆಯೋಣ

ರವಿ ಕಿರಣವ ಬಾಚಿ ಬಳಿಯುತ

ಹೊಸದೇ ಹೊಳಪು ಪಡೆಯೋಣ

 

✍️ಉಷಾ ಗೊಬ್ಬೂರ ಕಲಬುರಗಿ

https://youtu.be/e4eKzVFOfAo?si=Ay9OTQnVBkXRxFiT