Friday, 4 November 2022
ಕಲಿಕೆಯೆಂಬುದು ಹಬ್ಬ!
Monday, 10 October 2022
ಸೂಕ್ಷ್ಮ ಜೀವಿಯೊಂದು ಸಾಕ್ಷ್ಯ ನುಡಿಯಲು ಬಂದಾಗ..
ಪರೇಶ ಮೆಸ್ತಾ ಎಂಬ ಬಾಳಿ ಬದುಕಬೇಕಿದ್ದ ಯುವಕ ಸಾವಿಗೀಡಾಗಿದ ಘಟನೆ ನಡೆದು ಐದು ವರ್ಷಗಳೇ ಕಳೆದಿವೆ. ಮನೆಯ ಮಗನ ಸಾವನ್ನು ಸ್ವೀಕರಿಸುವುದು ಯಾವ ತಂದೆ-ತಾಯಿಗೂ ಸುಲಭವಲ್ಲ. ಸಾವಿನ ಸುದ್ದಿ ತಿಳಿದಾಗ ಪ್ರೀತಿಪಾತ್ರರ ಮನಸ್ಸು ಆ ಸುದ್ದಿಯನ್ನು ನಿರಾಕರಿಸುತ್ತದೆ. ಎಲಿಜಬೆಥ್ ಕುಬ್ಲೆರ್ ತನ್ನ ಡೆಥ್ ಅಂಡ್ ಡೈಯಿಂಗ್ ಕೃತಿಯಲ್ಲಿ ಸಾವಿನ ನಿರಾಕರಣೆಯನ್ನು ಶೋಕದ ಮೊದಲ ಹಂತವಾಗಿ ಗುರುತಿಸುತ್ತಾರೆ. ಬದುಕಿನ ಅತ್ಯಂತ ದೊಡ್ಡ ನಷ್ಟವನ್ನು ಎದುರಿಸಲು ಮನಸ್ಸು ಬಳಸುವ ರಕ್ಷಣಾತ್ಮಕ ತಂತ್ರವಿದು.
ಪರೇಶ್ ಮೆಸ್ತಾ ಸಾವಿನ ಪ್ರಕರಣವನ್ನು ಸಿ.ಬಿ.ಐ ಆಕಸ್ಮಿಕ ಸಾವು ಎಂದು ಕೊನೆಗೊಳಿಸಿದೆ. ಕೊಲೆ ಎಂಬ ಸಂಶಯದಲ್ಲಿ ನಡೆದ ಈ ತನಿಖೆಯು ಹಲವು ಪುರಾವೆಗಳನ್ನು ಪರಿಶೀಲಿಸಿ ಈ ತೀರ್ಮಾನಕ್ಕೆ ಬಂದಿದೆ. ಎಂಟಿ ಮಾರ್ಟೆಮ್ ಡ್ರೋನಿಂಗ್ ಅಥವಾ ಮುಳುಗುವ ಮೊದಲಿನ ಸಾವು ಎಂದು ತೀರ್ಮಾನಿಸಲು ಯಾವ ಸಾಕ್ಷ್ಯವೂ ದೊರೆತಿಲ್ಲವೆಂದು ಹೇಳಿದೆ. ಈ ಲೇಖನದ ಕಾಳಜಿಯಿರುವುದು ಯಾವ ವೈಜ್ಞಾನಿಕ ಸಾಕ್ಷ್ಯಗಳು ಇಂತಹ ಪರಿಶೋಧನೆಗೆ ಸಹಾಯ ಮಾಡುತ್ತವೆ ಎಂಬುದರಲ್ಲಿ.
ಪ್ರತಿ ವರ್ಷವೂ ಜಗತ್ತಿನಾದ್ಯಂತ ಮೂರು ಲಕ್ಷಕ್ಕೂ ಹೆಚ್ಚು ಜನ ನೀರಿನಲ್ಲಿ ಮುಳುಗಿ ಸಾಯುತ್ತಾರೆ. ಡೋರ್ಲ್ಯಾಂಡ್ ಮೆಡಿಕಲ್ ಡಿಕ್ಷನರಿಯ ಪ್ರಕಾರ ಮುಳುಗಿ ಸಾಯುವುದೆಂದರೆ ಶ್ವಾಸಕೋಶದಲ್ಲಿ ನೀರು ತುಂಬಿ ಉಸಿರಾಟ ಸಾಧ್ಯವಾಗದೇ ಸಾಯುವುದು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಮುಳುಗಿ ಸಾಯುವುದೆಂದರೆ ದ್ರವದಲ್ಲಿ ಮುಳುಗಿ ಉಂಟಾದ ಉಸಿರಾಟ ಅಸೌಕರ್ಯದಿಂದಾದ ಸಾವು. ನೀರಿನಲ್ಲಿ ಶವ ದೊರೆತ ಮಾತ್ರಕ್ಕೆ ಅದನ್ನು ಮುಳುಗಿ ಉಂಟಾದ ಸಾವು ಎಂದು ತೀರ್ಮಾನಿಸಲಾಗದು. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರಷ್ಟೇ ಅಲ್ಲ, ಬೇರೆ ಬೇರೆ ಸಂಸ್ಥೆಗಳು, ಪ್ರಯೋಗಾಲಯಗಳು, ವಿವಿಧ ಕ್ಷೇತ್ರಗಳ ತಜ್ಞರ ಸುಸಂಘಟಿತ ಪ್ರಯತ್ನವು ಇಂತಹ ಸಾವಿನ ಬಗ್ಗೆ ಖಚಿತವಾದ ತೀರ್ಮಾನಗಳನ್ನು ನೀಡುವಲ್ಲಿ ಸಹಾಯ ಮಾಡುತ್ತವೆ. ಮೆಡಿಕೋ ಲೀಗಲ್ ತನಿಖೆದಾರರು, ಫೋರೆನ್ಸಿಕ್ ತಜ್ಞರು, ತಾಂತ್ರಿಕ ಪರಿಣಿತರು, ಮೊದಲ ವೈದ್ಯಕೀಯ ಪ್ರತಿಸ್ಪಂದಿಗಳು, ಸೂಕ್ಷ್ಮಾಣುಜೀವಿ ಶಾಸ್ತ್ರಜ್ಞರು ಹೀಗೆ ಹತ್ತು-ಹಲವು ವೃತ್ತಿಪರರ ವರದಿಗಳ ಆಧಾರದ ಮೇಲೆ ಸಾವು ಹೇಗೆ ಉಂಟಾಯಿತು ಎಂಬ ತೀರ್ಮಾನಕ್ಕೆ ಬರಲಾಗುತ್ತದೆ.
ಈ ಲೇಖನವನ್ನೂ ಓದಿ: |
ಈಗಾಗಲೆ ಚರ್ಚಿಸಿದಂತೆ ನೀರಿನಲ್ಲಿ ಮುಳುಗಿಸಾಯುವುದೆಂದರೆ ಆಮ್ಲಜನಕದ ಕೊರತೆ ಉಂಟಾಗಿ ಸಾಯುವುದು. ಇದು ಹಲವು ಅಂಗಗಳ ಮೇಲೆ ಪ್ರಭಾವ ಬೀರುವ ಕ್ರೀಯೆ. ನಾವು ಒಮ್ಮೆ ಉಸಿರು ತೆಗೆದುಕೊಂಡಿದ್ದೇವೆಂದರೆ ಇಪ್ಪತೈದು ಸೆಕ್ಸ್ಟಿಲಿಯನ್ ಅಣುಗಳನ್ನು ಒಳಗೆಳೆದುಕೊಳ್ಳುತ್ತೇವೆ. ಅಂದರೆ ಇಪ್ಪತೈದರ ಮುಂದೆ ಇಪ್ಪತ್ತೊಂದು ಸೊನ್ನೆಹಾಕಿದರೆ (25,000,000,000,000,000,000,000) ಎಷ್ಟು ಅಣುಗಳಾಗುತ್ತವೋ ಅಷ್ಟು. ಹೀಗೆ ಉಸಿರಾಡಿದ ಗಾಳಿಯು ಶ್ವಾಸನಾಳದ ಮೂಲಕ ಶ್ವಾಸಕೋಶದ ಅತ್ಯಂತ ನವಿರಾದ ಭಾಗವಾದ ಅಲ್ವಿಯೋಲೈಗಳಿಗೆ ತಲುಪುತ್ತದೆ. ಅಲ್ಲಿಂದ ಈ ಲೋಮನಾಳಗಳಿಗೆ ವಿಸರಣೆಗೊಂಡು ರಕ್ತ ಪ್ರವಾಹವನ್ನು ಸೇರಿಕೊಳ್ಳುತ್ತದೆ. ಸಾಕಷ್ಟು ಸಮಯದವರೆಗೆ ಆಮ್ಲಜನಕ ದೊರೆಯದಾಗ ಹಿಪೋಕ್ಸಿಯಾ ಅಥವಾ ಆಮ್ಲಜನಕ ಅಲಭ್ಯತೆ ಉಂಟಾಗಿ ಸಾವು ಸಂಭವಿಸುತ್ತದೆ.
ಪ್ರಜ್ಞೆಯಲ್ಲಿರುವ ಮನುಷ್ಯನೊಬ್ಬ ಆಕಸ್ಮಿಕವಾಗಿ ನೀರಿಗೆ ಬಿದ್ದಾಗ ಎಷ್ಟು ಆಳಕ್ಕೆ ಹೋಗುತ್ತಾನೆ ಎಂಬುದು ಬೀಳುವಾಗಿನ ಚಲನ ಪರಿಮಾಣವನ್ನು ಅವಲಂಬಿಸಿದೆ. ಆನಂತರ ತೇಲುವಿಕೆ ಮತ್ತು ಕೈಕಾಲು ಬಡಿತಗಳಿಂದಾಗಿ ವ್ಯಕ್ತಿ ಮೇಲೆ ಬರುತ್ತಾನೆ. ಮುಖ ನೀರಿನ ಮೇಲೆ ಬಂದಾಗ ಸಹಾಯಕ್ಕಾಗಿ ಕೂಗುತ್ತಾನೆ. ಮತ್ತೆ ಮುಳುಗುವಾಗ ನೀರು ಆತನ ಮೂಗು, ಬಾಯಿಗಳ ಮೂಲಕ ಶ್ವಾಸಕೋಶವನ್ನು ಸೇರುತ್ತದೆ. ಹೀಗೆ ಒಳಸೇರಿದ ನೀರನ್ನು ಹೊರಹಾಕಲು ಮಾಡುವ ಪ್ರಯತ್ನದಲ್ಲಿ ಕೆಮ್ಮುತ್ತಾನೆ. ಸ್ವಲ್ಪ ಮಟ್ಟಿನ ಗಾಳಿ ಹೊರಹೋಗುತ್ತದೆ ಮತ್ತು ಇನ್ನಷ್ಟು ನೀರು ಒಳಸೇರುತ್ತದೆ. ಈಗ ದೇಹದ ತೂಕ ಹೆಚ್ಚುತ್ತದೆ. ವ್ಯಕ್ತಿ ಇನ್ನಷ್ಟು ಮುಳುಗುತ್ತಾನೆ. ಈ ಕ್ರಿಯೆಗಳು ಮತ್ತೆ ಮತ್ತೆ ನಾಲ್ಕೈದು ಬಾರಿ ಪುನರಾವರ್ತನೆಯಾಗುವಾಗ ಶ್ವಾಸಕೋಶದ ಗಾಳಿ ಮತ್ತಷ್ಟು ಹೊರಹೋಗಿ ಇನ್ನಷ್ಟು ನೀರು ತುಂಬಿಕೊಳ್ಳುತ್ತದೆ.
ಶವವೊಂದನ್ನು ನೀರಿನಿಂದ ಹೊರತೆಗೆದ ಮೇಲೆ ಆ ಸಾವು ನೀರಿಗೆ ಬೀಳುವ ಮೊದಲು ಉಂಟಾಯಿತೋ ಅಥವಾ ನಂತರ ಉಂಟಾಯಿತೋ ಎಂಬುದನ್ನು ಪತ್ತೆ ಮಾಡಲು ದೇಹದ ಹೊರಗಿನ ಚಿನ್ಹೆಗಳು, ದೇಹದ ಒಳಗಿನ ಚಿನ್ಹೆಗಳು, ಜೀವರಾಸಾಯನಿಕ ಮತ್ತು ಜೀವ ಭೌತಿಕ ಪರೀಕ್ಷೆಗಳು ಮಾತ್ರವಲ್ಲ ಮುಳುಗಿದಾಗ ದೇಹದ ಒಳಸೇರಿದ ಡಯಟಮ್ ಎಂಬ ಸೂಕ್ಷ್ಮ ಜೀವಿಗಳೂ ಸಾಕ್ಷ್ಯವಾಗುತ್ತವೆ.
ಡಯಟಮ್ ಎಂಬ ಸೂಕ್ಷ್ಮಾಣುಗಳು ನೀರಿನಲ್ಲಿ ವಾಸಿಸುವ ಸ್ವಪೋಷಕ ಜೀವಿಗಳು. ಇಪ್ಪತ್ತು ಮೈಕ್ರಾನ್ ನಿಂದ ಇನ್ನೂರು ಮೈಕ್ರಾನ್ ವ್ಯಾಸದಲ್ಲಿರುವ ಈ ಜೀವಿಗಳು ಕೆರೆ ಸರೋವರಗಳ ದ್ಯುತಿವಲಯದಲ್ಲಿ ಅಂದರೆ ಬೆಳಕು ತಲುಪಬಲ್ಲಷ್ಟು ಆಳದವರೆಗೆ ಇರುತ್ತವೆ. ಇವುಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಪ್ರಬೇಧಗಳಿವೆ. ನೀರಿನಿಂದ ಹೊರತೆಗೆದ ಶವದ ಅಂಗಾಂಗಗಳಿಂದ ಡಯಟಮ್ ಗಳನ್ನು ಸಂಗ್ರಹಿಸಲಾಗುತ್ತದೆ. ಶವ ದೊರೆತ ಕೆರೆ, ಸರೋವರ, ನದಿಗಳಿಂದಲೂ ಡಯಟಮ್ ಗಳನ್ನು ಸಂಗ್ರಹಿಸಲಾಗುತ್ತದೆ.
ಮುಳುಗಿ ಸಾಯುವ ಪ್ರಕರಣಗಳಲ್ಲಿ ದೇಹದಿಂದ ನೀರನ್ನು ಬಲವಂತವಾಗಿ ಹೊರಹಾಕುವ ಪ್ರಯತ್ನ ನಡೆಯುವುದರಿಂದ ಶ್ವಾಸಕೋಶದ ಅಲ್ವಿಯೋಲೈ ಭಾಗದ ಸೂಕ್ಷ್ಮ ಗೋಡೆಗಳು ಹರಿದುಹೋಗುತ್ತವೆ. ಇದರಿಂದ ಡಯಟಮ್ ಗಳು ರಕ್ತ ಸೇರಿ ಕಿಡ್ನಿ, ಪಿತ್ಥಕೋಶ, ಮೆದುಳು, ಮೂಳೆಮಜ್ಜೆಗಳನ್ನು ಸೇರುತ್ತವೆ. ನೀರಿಗೆ ಬಿದ್ದ ಮೇಲೆ ಸಾವು ಸಂಭವಿಸಿದ್ದರೆ, ಶವ ದೊರೆತ ಸ್ಥಳದ ನೀರಿನಲ್ಲಿರುವ ಶೇಖಡಾ ಹತ್ತರಷ್ಟು ಸಾಂದ್ರತೆಯಲ್ಲಿ ಶ್ವಾಸಕೋಶದಲ್ಲಿ ಡಯಟಮ್ ಗಳು ಪತ್ತೆಯಾಗುತ್ತವೆ. ಶ್ವಾಸಕೋಶದ ಡಯಟಮ್ ಸಾಂದ್ರತೆಯ ಹತ್ತರಷ್ಟು ಅಂಗಾಂಗಗಳಲ್ಲಿ ದೊರೆಯುತ್ತವೆ. ಆಯಾ ಕೆರೆ, ನದಿಯ ನೀರಿನ ಆಮ್ಲೀಯತೆ, ತಾಪಮಾನ, ಲವಣ ಸಾಂದ್ರತೆಯ ಆಧಾರದ ಮೇಲೆ ಕೆಲವು ಪ್ರಬೇಧದ ಡಯಟಮ್ ಗಳು ಹೆಚ್ಚಿಗೆ ಇರುತ್ತವೆ. ಆದುದರಿಂದ, ದೇಹದಲ್ಲಿ ದೊರೆತ ಡಯಾಟಮ್ ಪ್ರಬೇಧಗಳ ಸಾಂದ್ರತೆಗೂ ಕೆರೆಯಲ್ಲಿರುವ ಡಯಾಟಮ್ ಪ್ರಬೇಧಗಳ ಸಾಂದ್ರತೆಗೂ ಹೋಲಿಕೆ ಮಾಡಲಾಗುತ್ತದೆ.
ನೀರಿಗೆ ಬೀಳುವ ಮೊದಲೇ ಸಾವು ಉಂಟಾಗಿದ್ದರೆ ಅಂಗಾಂಶಗಳಲ್ಲಿ ಅದರಲ್ಲೂ ಮೂಳೆಮಜ್ಜೆಗಳಲ್ಲಿ ಡಯಟಮ್ ಗಳು ಸೇರುವ ಸಾಧ್ಯತೆ ಇಲ್ಲವೇ ಇಲ್ಲ ಎಂಬಷ್ಟು ಕ್ಷೀಣ.
ಹೀಗೆ, ಡಯಟಮ್ ಎಂಬ ಸೂಕ್ಷ್ಮ ಜೀವಿಯು ಸಾವಿನ ಸಾಕ್ಷ್ಯ ನುಡಿಯಲು ಕೋರ್ಟು ಕಟೆಕಟೆಯನ್ನು ಹತ್ತುತ್ತದೆ.
Thursday, 18 August 2022
ಅಮೃತದ ಹೂಜಿಯಲ್ಲಿ ವಿಷ
ಅಮೃತ ಉತ್ಸವ ಆಚರಿಸುವಾಗಲೇ ಕುಡಿಯುವ ನೀರಿನ ಮಡಕೆ ಮುಟ್ಟಿದ್ದಕ್ಕಾಗಿ ಶಿಕ್ಷಕನೊಬ್ಬ ಮಗುವನ್ನು ಕೊಂದ ಘಟನೆ ನಡೆದುಹೋಗಿದೆ. ರಾಜಸ್ತಾನದ ಜಲೋರ್ ಎಂಬಲ್ಲಿನ ಸರಸ್ವತಿ ವಿದ್ಯಾಮಂದಿರದಲ್ಲಿ ಮೂರನೆಯ ತರಗತಿ ಕಲಿಯುತ್ತಿದ್ದ ಬಾಲಕನನ್ನು ಚೈಲ್ ಸಿಂಗ್ ಎಂಬ ಹೆಸರಿನ ಮೇಲ್ವರ್ಗದವನು ಎಂದುಕೊಳ್ಳುವ ಶಿಕ್ಷಕನೊಬ್ಬ ಹೊಡೆದು ಕೊಂದಿದ್ದಾನೆ. ಆತನಿಗಾಗಿ ಕುಡಿಯಲು ನೀರು ಸಂಗ್ರಹಿಸಿಟ್ಟಿದ್ದ ಮಡಕೆಯಿಂದ ನೀರು ಕುಡಿದಿದ್ದೇ ಆ ಬಾಲಕ ಮಾಡಿದ ತಪ್ಪು. ಆ ಬಾಲಕ ಇಂದ್ರಕುಮಾರನಿಗೆ ಇದೆಲ್ಲ ಈಗಷ್ಟೇ ಅರಿವಿಗೆ ಬರುತ್ತಿದ್ದ ವಯಸ್ಸು. ಮೇಲು-ಕೀಳುಗಳೆಂಬ ಶ್ರೇಣಿಗಳನ್ನು ಶಾಲೆಯಲ್ಲಿ, ಓಣಿಯಲ್ಲಿ, ಕೇರಿಯಲ್ಲಿ ದಿನವೂ ಇಷ್ಟಿಷ್ಟೇ ಅನುಭವಿಸುತ್ತಾ ಕೊನೆಗೆ ತನ್ನ ಜಾತಿಯ ಬಗ್ಗೆಯೂ, ತನ್ನ ಬಗ್ಗೆಯೂ ಕೀಳರಿಮೆ ಬೆಳಸಿಕೊಂಡು ನಿಧಾನವಾಗಿ ಅಭಿವೃದ್ಧಿಯ ಚಲನ ಮಾರ್ಗದಿಂದ ದೂರ ಸರಿಯುವ ಎಲ್ಲ ಒತ್ತಡಗಳನ್ನು ಆತ ನಿಭಾಯಿಸಬೇಕಿತ್ತು. ಆದರೆ, ದುಷ್ಟ ಶಿಕ್ಷಕ ಅದಕ್ಕೂ ಆಸ್ಪದ ನೀಡದೆ ಆತನನ್ನು ಬದುಕಿನಿಂದಲೇ ದೂರ ತಳ್ಳಿದ್ದಾನೆ. ಇಂದ್ರಕುಮಾರನ ತಂದೆ ತನ್ನ ದೂರಿನಲ್ಲಿ “ ನನ್ನ ಮಗನಿಗೆ ಅದು ಅವರ ನೀರಿನ ಮಡಕೆ ಎಂದು ಗೊತ್ತಿರಲಿಲ್ಲ” ಎಂದಿದ್ದಾರೆ. ತನ್ನ ಮಗ ಗೊತ್ತಿಲ್ಲದೆ ಮಾಡಿದ “ ತಪ್ಪು” ಎನ್ನುವ ರೀತಿಯಲ್ಲಿ. ಪಾಪ, ಆ ಬಡತಂದೆಗೆ ಇಂತಹ ಸಂದರ್ಭ ಎದುರಾದಾಗಲೂ ತಮ್ಮ ಮೇಲೆ ಶತಮಾನಗಳಿಂದ ಆಗುತ್ತಿದ್ದ ಶೋಷಣೆಯನ್ನು ಗುರುತಿಸಲಾಗದಷ್ಟು ಈ ಸಮಾಜ ಆತನ ಮೆದುಳಿನ ಮೇಲೆ ಬೆರಳಾಡಿಸಿಬಿಟ್ಟಿದೆ.
ದೇಶವನ್ನು ಹಿಂದಕ್ಕೆ ಎಳೆಯುವ ಚೈಲ್ ಸಿಂಗನಂತವರು ದೇಶದ ಎಲ್ಲ ಕಡೆಯೂ ಇದ್ದಾರೆ. ಅವರ ನೀರಿನ ಮಡಕೆ ಯಾವುದೆಂದು ಗೊತ್ತಾಗುವುದು ಅದನ್ನು ಇತರರು ಮುಟ್ಟಿದಾಗಲೇ!
.
ಕೆಲವು ವರ್ಷಗಳ ಹಿಂದೆ ಹಿರಿಯ ಸ್ನೇಹಿತರೊಬ್ಬರು ಗ್ರಹ ಪ್ರವೇಶದ ಆಮಂತ್ರಣ ಕಾಗದ ನೀಡಿದರು. ಮುಂಚೆ ಮೇಷ್ಟ್ರಾದವರು, ನಂತರ ವಿಷಯ ಪರಿವೀಕ್ಷಕರಾಗಿ ನಿವೃತ್ತರಾದವರು. ಪ್ರೀತಿಯಿಂದ ಕರೆದಿದ್ದಾರೆ, ಹೋಗ್ಲೇಬೇಕು ಎಂದುಕೊಂಡೆ. ಆ ನಂತರ ಗೊತ್ತಾಯ್ತು ಅವರು ನಮಗೆಲ್ಲ ಒಂದು ದಿನ ಔತಣವಿಟ್ಟುಕೊಂಡಿದ್ದರು. ಅದರ ಮುನ್ನಾದಿನ ತಮ್ಮ ಜಾತಿಯವರಿಗೆಂದೇ ವಿಶೇಷ ಔತಣ ಇಟ್ಟುಕೊಂಡಿದ್ದರು. ನಾನವರಲ್ಲಿ ಕೇಳಿದೆ. ಅದಕ್ಕವರು “ ನೀವೂ ಬೇಕು, ಅವರೂ ಬೇಕು. ನಮ್ಮವರು ಕೆಲವರು ನಿಮ್ಮ ಜೊತೆ ಕುಳಿತು ಊಟ ಮಾಡುವುದಿಲ್ಲ.. ಸರಿಯೋ ತಪ್ಪೋ.. ನಂಗೆ ಎಲ್ರೂ ಬರಬೇಕು” ಅಂದರು. ನಾನು ಹೋಗಲಿಲ್ಲ.
.
ಪಿ.ಯು ಕಾಲೇಜಿನ ಪ್ರಿನ್ಸಿಪಾಲರೊಬ್ಬರು ತಮ್ಮ ಮನೆಯ ಮೇಲೆ ಇನ್ನೊಂದು ಮಹಡಿ ಕಟ್ಟಿಸಿದಾಗ ಈ ರಗಳೆಯೇ ಬೇಡವೆಂದುಕೊಂಡು ಅದರ ಪ್ರವೇಶೋತ್ಸವಕ್ಕೆ ತಮ್ಮ ಜಾತಿಯ ಸಹೋದ್ಯೋಗಿಗಳಿಗೆ ಮಾತ್ರ ಆಮಂತ್ರಣ ನೀಡಿದರು. ಮಾರನೆಯ ದಿನ ಉಳಿದವರಿಗೆ ಸಿಹಿತಿನಿಸು ತಂದುಕೊಟ್ಟರು. ಕೆನ್ನೆಯ ಮೇಲೆ ಬಿದ್ದ ಪೆಟ್ಟು ಕೆಲವರಿಗೆ ಮಾತ್ರ ತಿಳಿಯಿತು. ಆ ಕೆಲವರಷ್ಟೇ ಸಿಹಿ ತಿನಿಸು ತಿನ್ನಲಿಲ್ಲ.
ನಮ್ಮ ಬಿ.ಇ.ಓ ಕಚೇರಿಯಲ್ಲಿ ಕೆಲಸಮಾಡುತ್ತಿದ್ದ ಪ್ರಥಮ ದರ್ಜೆ ಸಹಾಯಕರೊಬ್ಬರ ಮದುವೆಗೆ ಹೋಗಲು ನಿಂತಿದ್ದೆ. ನನ್ನ ಸಹೋದ್ಯೋಗಿಯೊಬ್ಬರು ನನ್ನ ಜೊತೆ ಬರುವೆ ಎಂದರು. ನನ್ನ ವಾಹನದಲ್ಲಿ ಮದುವೆ ಹಾಲಿಗೆ ತಲುಪಿ, ವಧುವರರಿಗೆ ಶುಭಾಶಯ ತಿಳಿಸುವವರೆಗೂ ಅವರು ನನ್ನ ಜೊತೆಯೇ ಇದ್ದರು. ಊಟದ ಹಾಲಿಗೆ ಹೋಗುವಾಗ ಅವರು ಮರೆಯಾದರು. ಆಚೀಚೆ ಹುಡುಕಿದೆ. ಬೇರೆ ಯಾವುದೋ ಸಾಲಿನಲ್ಲಿ ಕುಳಿತರಿರಬಹುದು ಎಂದುಕೊಂಡು ಸುಮ್ಮನಾದೆ. ಕೈ ತೊಳೆದುಕೊಂಡು ಬರಲು ಹೋದಾಗ ಅಲ್ಲೊಂದು ಪ್ರತ್ಯೇಕ ಸಾಲು ಒಳಗಡೆ ಊಟಕ್ಕೆ ಕುಳಿತಿರುವುದ ಕಾಣಿಸಿತು. ನನ್ನ ಸಹೋದ್ಯೋಗಿಯೂ ಅಲ್ಲಿದ್ದರು. ಕೆನ್ನೆಗೆ ಹೊಡೆದ ಹಾಗಾಯಿತು. ಬರುವಾಗ ಒಬ್ಬನೇ ಬಂದುಬಿಟ್ಟೆ.ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಸಿದ್ಧತೆ ನಡೆಯುತಿತ್ತು. ಪರಿಶೀಲನಾ ಸಭೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕರು ಆತಿಥ್ಯದ ಸಿದ್ಧತೆಯ ಕುರಿತು ಸಭೆಗೆ ಮಾಹಿತಿ ಸಲ್ಲಿಸುತಿದ್ದರು. ಊಟವನ್ನು ಇಂತದ್ದೇ ಜಾತಿಯವರು ಮಾಡುವುದಾಗಿಯೂ ಬಡಿಸಲೂ ಸಹ ಅದೇ ಮೇಲ್ಜಾತಿಯೆನ್ನುವರನ್ನೇ ಗೊತ್ತುಮಾಡಿರುವುದಾಗಿಯೂ ಸಭೆಗೆ ತಿಳಿಸಿದರು. ಭಾಗವಹಿಸಿದವರು ಚಪ್ಪಾಳೆ ತಟ್ಟಿ ಮೆಚ್ಚಿದರು. ಸಾಮಾನ್ಯವಾಗಿ ಬಡಿಸಲು ಊರಿನ ಕಾರ್ಯಕರ್ತರನ್ನೇ ಬಳಸಿಕೊಳ್ಳುವುದು ವಾಡಿಕೆ. ಈ ಜಾತಿ ತರತಮದ ಮಾತಿನಿಂದ ರೋಸಿಹೋದ ಬಿ.ಇ.ಓ ಎದ್ದುನಿಂತು “ಇದು ಸರ್ಕಾರಿ ಕಾರ್ಯಕ್ರಮ, ನಿಮ್ಮ ಮನೆಯದ್ದಲ್ಲ. ನಿಮ್ಮ ಮನೆಯದ್ದಾದರೂ ನೀವು ಜಾತಿ ತರತಮ ಮಾಡಬಾರದು. ಸರ್ಕಾರಿ ಕಾರ್ಯಕ್ರಮದಲ್ಲಂತೂ ಇಂತಹ ಮಾತನ್ನು ಆಡಲೇಬಾರದು. ಊಟದ ವ್ಯವಸ್ಥೆ ಸರಿಯಾಗಿ ನಡೆಯಬೇಕು. ಶುಚಿ, ರುಚಿಯಾದ ಅಡುಗೆ ಸಿದ್ಧವಾಗಬೇಕು. ಅಷ್ಟೇ ನಮ್ಮ ಆದ್ಯತೆ” ಎಂದರು. ಕೆಲವೇ ದಿನಗಳಲ್ಲಿ ಅವರಿಗೆ ವರ್ಗವಾಯಿತು.
.
ಕೆನ್ನೆಯ ಮೇಲೆ ಬೀಳುವ ಪೆಟ್ಟುಗಳನ್ನು ನಿರ್ಲಕ್ಷಿಸುತ್ತಲೇ ಇದ್ದರೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಅಕ್ಷರ ದಾಸೋಹ ಶುರುವಾದ ಹೊಸತರಲ್ಲಿ ಕೆಳಜಾತಿಯ ಅಡುಗೆಯವರು ಸಿದ್ಧಪಡಿಸಿದ ಆಹಾರವನ್ನು ತಮ್ಮ ಮಕ್ಕಳು ತಿನ್ನುವುದಿಲ್ಲ ಎಂದು ಅನೇಕ ಪಾಲಕರು ಪ್ರತಿಭಟಿಸಿದರು. ಇಂತಹ ಸಂವಿಧಾನ ವಿರೋಧಿ ಮಾತುಗಳನ್ನು ಆಡಲು ಧೈರ್ಯ ಬಂದಿರುವುದು ಎಲ್ಲಿಂದ? ಆ ಜಾತಿ-ಈ ಜಾತಿ ಎನ್ನದೆ ಎಲ್ಲರಲ್ಲೂ ಜಾತಿ ಶ್ರೇಷ್ಠತೆಯ ವ್ಯಸನ ಇರುವುದರಿಂದಲೇ ಇಂತದ್ದೆಲ್ಲ ಮತ್ತೆ ಮತ್ತೆ ಸಂಭವಿಸುತ್ತವೆ. ಅನೇಕ ಶಾಲೆಗಳಲ್ಲಿ ಕೆಳಜಾತಿ ಅಡುಗೆಯವರ ನೇಮಕದ ವಿವಾದ ನಿಧಾನವಾಗಿ ತಣ್ಣಗಾಗಿರುವುದು ಎಲ್ಲರೂ ಅವರನ್ನು ಒಪ್ಪಿಕೊಂಡಿರುವುದರಿಂದಲ್ಲ. ಹೇಗೋ ಅವರನ್ನು ಮನವೊಲಿಸಿ, ಬೆದರಿಸಿ, ಆಮಿಷ ತೋರಿಸಿ ಅಡುಗೆ ಕೆಲಸದಿಂದ ಅವರಾಗೇ ಹೊರಹೋಗುವಂತೆ ಮಾಡಿರುವುದರಿಂದ. ಮೇಲ್ನೋಟಕ್ಕೆ ಎಲ್ಲ ಚೆಂದವಾಗಿ ಕಾಣಿಸುವ ಸಮಾಜದೊಳಗೆ ಜಾತಿಪ್ರಜ್ಞೆಯ ಒರಲೆ ಮನೆಮಾಡಿಕೊಂಡಿದೆ. ಇತ್ತೀಚೆಗೆ, ಸ್ನೇಹಿತರೊಬ್ಬರು ʼನಾವೆಲ್ಲ ಉದಾರ ಧೋರಣೆಯ ಜನರಂತೆ ಕಾಣುತ್ತೇವೆ. ಹಾಗೆಂದು ಅಂದುಕೊಂಡಿದ್ದೇವೆ ಕೂಡಾ. ಸ್ವಲ್ಪ ಕೆರೆದು ನೋಡಿದರೆ ನಮ್ಮೆಲ್ಲರಲ್ಲೂ ಜಾತಿ ಪ್ರಜ್ಞೆ ಇದೆ. ಅದನ್ನು ನಮ್ಮ ಸಂಸ್ಕೃತಿ, ಪರಂಪರೆ ಎನ್ನುತ್ತಾ ಪೋಷಿಸಿಕೊಂಡು ಬರುತ್ತಿದ್ದೇವೆ. ಇನ್ನೊಂದು ಜೀವದ ಘನತೆಯ ಬದುಕನ್ನು ಅವಮಾನಿಸುವ ಮಟ್ಟಕ್ಕೆ ಈ ಪ್ರಜ್ಞೆ ಬೆಳಯದಂತೆ ನೋಡಿಕೊಳ್ಳಬೇಕಿದೆʼ ಎಂದಿದ್ದರು.
.
ನೀವು ಉದಾಹರಿಸಿ ಅನೇಕ ಸಂದಭ೯ಗಳು, ಸನ್ನಿವೇಶಗಳು ನೆನಪಾಗುತ್ತಿವೆ. ಜಾತೀಯತೆ, ಮಾನಸಿಕ ಅಸ್ಪ್ರಶ್ಯತೆ ಕೋಮು ವಿಷ ಇವೆಲ್ಲ ಹೊಸ ಹೊಸ ವೇಷಗಗಳಲ್ಲಿ ನಮ್ಮಲ್ಲಿ ಸಕ್ರಿಯವಾಗುತ್ತಿದ್ದು ಅವು ನಮ್ಮ "ಪಂಚಪ್ರಾಣಗಳ"ನ್ನು ನಿತ್ಯ ಹೀರುತ್ತ ಪ್ರಗತಿಯ ಚಲನೆಯ ವಿರುದ್ಧ ದಿಕ್ಕಿಗೆ ಎಳೆಯುತ್ಚಲೇ ಇವೆ. ನಿಮ್ಮ ಲೇಖನ ಕಣ್ಣು ತೆರೆಸುವಂತಿದೆ. ಆದರೆ ನಾವು ಕಣ್ಣು ತೆರೆಯಲಾರೆವು; ಅನ್ನ ನೀರು ಕೊಡಲಾರೆವು, ಭೇದ, ಪಂಕ್ತಿಭೇದ ಜಾತಿ ಹಿಂಸೆಗಳು ಮುಂದುವರಿಯಲಿವೆ!. ಭಾರತ್ ಮಾತಾ ಕೀ ಜೈ!!
|
ಬಹಳ ವರ್ಷಗಳ ಹಿಂದೆ ಕುಂದಾಪುರದ ಕೊರಗ ಮಕ್ಕಳ ಪೋಷಕರ ಸಭೆ ನಡೆದಿತ್ತು. ಶಿಕ್ಷಣದ ಅವಶ್ಯಕತೆ, ಶುಚಿತ್ವ ಇತ್ಯಾದಿಗಳ ಬಗ್ಗೆ ಅರಿವು ಮೂಡಿಸುವುದು ಆ ಸಭೆಯ ಉದ್ಧೇಶ. ಸಭೆ ನಡೆದಿರುವುದು ಕೊರಗ ಕ್ಷೇಮಾಭಿವೃದ್ಧಿ ಸಮಿತಿ ನಿರ್ವಹಿಸುವ ವಸತಿನಿಲಯದಲ್ಲಿ. ಭಾಗವಹಿಸಿದ ಎಲ್ಲ ಪೋಷಕರಿಗೂ, ಸಂಪನ್ಮೂಲ ವ್ಯಕ್ತಿಗಳಿಗೂ ಅದೇ ವಸತಿ ನಿಲಯದ ಅಡುಗೆಯವರು ಆಹಾರ ಸಿದ್ಧಪಡಿಸಿದ್ದರು. ಬೆಳಿಗ್ಗೆಯಿಂದ ಆದರ್ಶದ ಮಾತಾಡುತ್ತಿದ್ದ ಸಂಪನ್ಮೂಲ ವ್ಯಕ್ತಿಗಳು ಮದ್ಯಾಹ್ನ ಊಟದ ಹೊತ್ತಿಗೆ ಒಬ್ಬೊಬ್ಬರೇ ಮಾಯವಾಗಿಬಿಟ್ಟಿದ್ದರು. ಕೊರಗರ ಕ್ಷೇಮಾಭಿವೃದ್ಧಿಗೆ ದುಡಿಯುತ್ತಿರುವ ಗಣೇಶರು “ ಎಲ್ಲ ಇಷ್ಟೇ, ಹೇಳುವುದು ಪುರಾಣ!” ಎಂದು ಉದ್ಘರಿಸಿದಾಗ ತಲೆತಗ್ಗಿಸಬೇಕಾಯ್ತು. ಹೌದು, ನಾವು ಹೇಳುತ್ತಿರುವುದೆಲ್ಲ ಪುರಾಣ. ವಾಸ್ತವ ಬೇರೆಯೇ ಇದೆ.
.
ಈ ಮಗುವಿನ ಪಾಲಕರು ನಮ್ಮನೆಂದೂ ಕ್ಷಮಿಸಲಾರರು.
Monday, 8 August 2022
ಬರಿಯ ಬಣ್ಣದ ಬಟ್ಟೆಯಲ್ಲ ನಮ್ಮ ಬಾವುಟ!
ಒಂದು ಭೌಗೋಳಿಕ ವ್ಯಾಪ್ತಿಯು ಒಂದು ಆಡಳಿತಕ್ಕೊಳಪಟ್ಟ ಮಾತ್ರಕ್ಕೆ ಅದೊಂದು ದೇಶವಾಗಲಾರದು.” ದೇಶವೆಂದರೆ ಮಣ್ಣಲ್ಲ, ದೇಶವೆಂದರೆ ಮನುಷ್ಯರು” ಎನ್ನುತ್ತಾರೆ ತೆಲುಗಿನ ಕವಿ ವೆಂಕಟ ಅಪ್ಪಾರಾವ್ ಗುರ್ಜಡ. ದೇಶವು ಇಲ್ಲಿನ ಜನರನ್ನು ಭಾವನಾತ್ಮಕವಾಗಿ ಒಗ್ಗೂಡಿಸದೇ ಹೋದರೆ ಅದು ಭೂಪಟದ ಗೆರೆಯಾಗಿ ಉಳಿದುಬಿಡುತ್ತದೆ.
ಬ್ರಿಟೀಷರು 1905 ರಲ್ಲಿ ಬಂಗಾಳವನ್ನು ವಿಭಜಿಸಿ ಹೋಳು ಮಾಡಿದಾಗಲೇ ಅಲ್ಲಿನ ಜನರಿಗೆ ಅದು ರಾಷ್ಟ್ರೀಯ ಭಾವನೆಗೆ ಧಕ್ಕೆ ತರುತ್ತದೆ ಎಂದೆನಿಸಿತು. ಹಿಂದುಗಳು-ಮುಸಲ್ಮಾನರು ತಮ್ಮ ನೆಲವನ್ನು ಹೀಗೆ ವಿಭಜಿಸುವುದನ್ನು ವಿರೋಧಿಸಿ ರಸ್ತೆಗಿಳಿದರು. ಭಾಷೆ ಅವರನ್ನು ಒಗ್ಗೂಡಿಸಿತ್ತು. ಆ ಹೋರಾಟದಲ್ಲಿ ಅವರು ತಮ್ಮ ಐಕ್ಯತೆಯನ್ನು ಪ್ರದರ್ಶಿಸಲು ಒಂದು ಬಾವುಟವನ್ನು ಸಿದ್ಧಪಡಿಸಿದ್ದರು. ಬೆಂಗಾಲ ವಿಭಜನೆಯ ವಿರುದ್ಧದ ಹೋರಾಟವನ್ನು ಸಂಘಟಿಸಿದ್ದ ಸುರೇಂದ್ರನಾಥ ಬ್ಯಾನರ್ಜಿಯವರೇ ಆ ಬಾವುಟವನ್ನು ವಿನ್ಯಾಸಗೊಳಿಸಿದ್ದರು ಕೂಡಾ.
ಹೀಗೆ ಈ ದೇಶಕ್ಕೆ ಭಾವುಟವೊಂದು ದೊರಕಿತ್ತು.
ಬಂಗಾಳಿಗಳ ಭಾಷಿಕ ಅಭಿಮಾನದಿಂದ ಅಕ್ಷರಶಃ ದಂಗಾಗಿಹೋದ ಬ್ರಿಟೀಷರು ಒಡೆದ ಬಂಗಾಳಿ ಹೋಳುಗಳನ್ನು 1911 ರಲ್ಲಿ ಲಾರ್ಡ್ ಹಾರ್ಡಿಂಗ್ ನೇತೃತ್ವದಲ್ಲಿ ಒಂದುಗೂಡಿಸಿದರು. ಆನಂತರ ಐಕ್ಯತೆಯನ್ನು ಪ್ರದರ್ಶಿಸಲು ಸಿದ್ಧಪಡಿಸಿದ್ದ ಬಾವುಟವನ್ನು ಎಲ್ಲರೂ ಮರೆತರು.
ಈ ನಡುವೆ, ಜರ್ಮನಿಯಲ್ಲಿ ನಡೆದ ಎರಡನೆ ಅಂತರಾಷ್ಟ್ರೀಯ ಸಮಾಜವಾದಿ ಸಮಾವೇಶದಲ್ಲಿ ಭಾರತದಿಂದ ಭಾಗವಹಿಸಿದ ಬಿಕಾಜಿ ರುಸ್ತುಮ್ ಕಾಮಾರವರು ಬ್ರಿಟೀಷರ ವಿರುದ್ಧದ ಭಾರತೀಯರ ರಾಜಕೀಯ ಹೋರಾಟವನ್ನು ಬಲಪಡಿಸುವ ತಮ್ಮ ಕೆಚ್ಚನ್ನು ತಮ್ಮ ಭಾಷಣದಲ್ಲಿ ವ್ಯಕ್ತಪಡಿಸಿದರು ಮಾತ್ರವಲ್ಲ, ಭಾರತೀಯರ ಈ ಇಚ್ಛಾಶಕ್ತಿಯನ್ನು ಪ್ರದರ್ಶಿಸಲೋಸುಗ ಒಂದು ಬಾವುಟವನ್ನು ಅಲ್ಲಿಯೇ ಎತ್ತರಿಸಿದರು. ಆ ಬಾವುಟವನ್ನು ವಿನ್ಯಾಸಗೊಳಿಸದವರು ಹೇಮಚಂದ್ರದಾಸರು.
*
1916 ರಿಂದ 1918 ರವರೆಗೆ ನಡೆದ ಹೋಮ್ ರೂಲ್ ಚಳುವಳಿ ಭಾರತದ ಮುಂದಿನ ಸ್ವಾತಂತ್ರ ಸಂಗ್ರಾಮಕ್ಕೆ ಸ್ಪೂರ್ತಿದಾಯಕ ಆರಂಭವನ್ನು ಒದಗಿಸಿತ್ತು. ಅನಿಬೆಸೆಂಟ್ ಮತ್ತು ಬಾಲ ಗಂಗಾಧರ ತಿಲಕರು ಈ ಚಳುವಳಿಯ ನೇತೃತ್ವ ವಹಿಸಿದ್ದರು.
ಅನಿಬೆಸಂಟರು ವೈಜ್ಞಾನಿಕ ಭೌತವಾದದಲ್ಲಿ ನಂಬಿಕೆಯಿಟ್ಟ ಆಂಗ್ಲೋ ಐರಿಶ್ ಮಹಿಳೆ. "ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು" ಎಂದ ತಿಲಕರು ಸಂಪ್ರದಾಯಸ್ಥ ರಾಷ್ಟ್ರೀಯವಾದಿ. ಇವರಿಬ್ಬರೂ ಸೇರಿ ಹೋಮ್ ರೂಲ್ ಚಳುವಳಿಗಾಗಿ ವಿನ್ಯಾಸಗೊಳಿಸಿದ ಬಾವುಟದಲ್ಲಿ ಐದು ಕೆಂಪು ಪಟ್ಟಿಗಳು ಮತ್ತು ನಾಲ್ಕು ಹಸಿರು ಪಟ್ಟಿಗಳಿದ್ದವು. ಸಪ್ತರ್ಷಿ ಮಂಡಳದಂತೆ ಏಳು ನಕ್ಷತ್ರಗಳನ್ನು ಜೋಡಿಸಿ ಇನ್ನೊಂದು ನಕ್ಷತ್ರವನ್ನು ಈಗಿನ ಪಾಕಿಸ್ತಾನದ ಧ್ವಜದಲ್ಲಿರುವಂತೆ ಚಂದ್ರನ ಜೊತೆ ಇರಿಸಿದ್ದರು. ಬ್ರಿಟನ್ನಿನ ಯೂನಿಯನ್ ಜಾಕನ್ನು ಎಡ ಮೇಲ್ಭಾಗದಲ್ಲಿ ಇರಿಸುವ ಮೂಲಕ ಮುಂಬರುವ ಭಾರತವನ್ನು ಬ್ರಿಟಿಷ್ ಅಧಿಪತ್ಯಕ್ಕೊಳಪಡುವ ಸ್ವತಂತ್ರ ದೇಶವಾಗಿ ಕಲ್ಪಿಸಿಕೊಂಡಿದ್ದರು.*
ಇದಾಗಿ ನಾಲ್ಕು ವರ್ಷಗಳ ನಂತರ ಗಾಂಧೀಜಿ ರಾಷ್ಟ್ರೀಯ ಕಾಂಗ್ರೆಸ್ಸಿನ ನೇತೃತ್ವ ವಹಿಸಿದರು. ರಾಷ್ಟ್ರೀಯ ಚಳುವಳಿಯ ಐಕ್ಯತೆಯನ್ನು ಬಿಂಬಿಸುವ ಸಲುವಾಗಿ ಅವರು ಪಿಂಗಳೆ ವೆಂಕಯ್ಯನವರಲ್ಲಿ ಧ್ವಜವನ್ನು ಸಿದ್ಧಪಡಿಸಲು ಕೋರಿದರು. ಗಾಂಧೀಜಿಯವರ ಅನುಯಾಯಿಯಾಗಿದ್ದ ವೆಂಕಯ್ಯನವರು ಕೃಷಿಕರಾಗಿದ್ದರು. ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮನ್ನು ಅರ್ಪಿಸಿಕೊಂಡಿದ್ದರು.
ಗಾಂಧೀಜಿಯವರು 1921 ರ ಎಪ್ರಿಲ್ 1 ರಂದು ವಿಜಯವಾಡ ನಗರಕ್ಕೆ ಆಗಮಿಸಿದಾಗ ತಾವು ವಿನ್ಯಾಸಗೊಳಿಸಿದ ಧ್ವಜವನ್ನು ಗಾಂಧೀಜಿಯವರಿಗೆ ಅರ್ಪಿಸಿದರು. ಗಾಂಧೀಜಿಯವರ ಆಶಯದಂತೆ ಬಾವುಟದ ಮಧ್ಯಬಾಗದಲ್ಲಿ ಚರಕದ ಚಿತ್ರವನ್ನು ಮೂಡಿಸಲಾಗಿತ್ತು. ಸ್ವಾವಲಂಬನೆಯೊಂದೇ ಸ್ವಾತಂತ್ರ್ಯವನ್ನು ತರಬಲ್ಲದು ಎಂಬ ಗಾಂಧೀಜಿಯವರ ನಂಬಿಕೆಯೇ ಚರಕವಾಗಿ ಬಾವುಟದಲ್ಲಿ ಸ್ಥಾನಪಡೆದಿತ್ತು.
*
ಈ ಲೇಖನವನ್ನೂ ಓದಿ: |
ಸ್ವಾವಲಂಬನೆಯನ್ನು ಸ್ವಾತಂತ್ರ್ಯದ ಮೆಟ್ಟಿಲು ಎಂದು ಗಾಂಧೀಜಿ ಭಾವಿಸಿರಲಿಲ್ಲ. ಅವರಿಗೆ ಸ್ವಾವಲಂಭನೆಯೇ ಸ್ವಾತಂತ್ರ್ಯವಾಗಿತ್ತು.
ಚರಕವು ಸ್ವಾತಂತ್ರ್ಯ ಹೋರಾಟದ ಸಂಕೇತವಾಗುವ ಹಿಂದೆ ಗಾಂಧೀಜಿಯವರ ಈ ನಂಬಿಕೆಯ ಪ್ರಭಾವವಿತ್ತು. ಇದು ಬೇಗನೆ ಜಗತ್ತಿಗೆ ಮನವರಿಕೆಯಾಯ್ತು.
ಕೈಗಾರಿಕಾ ಕ್ರಾಂತಿಯ ನಂತರ ಇಂಗ್ಲೆಂಡಿನ ಲ್ಯಾಂಕಾಶೈರ್ ಪ್ರದೇಶವು ಜಗತ್ತಿನ ಬಟ್ಟೆ ಉದ್ಯಮದ ಕೇಂದ್ರವಾಗಿ ಬೆಳೆದಿತ್ತು. ಬಟ್ಟೆ ಉದ್ಯಮವು ಅಲ್ಲಿ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿತ್ತಲ್ಲದೆ ಇಂಗ್ಲೆಂಡಿನ ಬಹುಮುಖ್ಯ ರಪ್ತು ಉದ್ಯಮವಾಗಿ ರೂಪುಗೊಂಡಿತ್ತು. ಮೊದಲ ಮಹಾಯುದ್ಧದ ನಂತರ ಅಲ್ಲಿ ತಯಾರಾಗುತ್ತಿದ್ದ ಬಟ್ಟೆಗಳಲ್ಲಿ ಶೇಖಡಾ ಅರವತ್ತರಷ್ಟು ಬಟ್ಟೆಗಳು ಭಾರತದಲ್ಲಿ ಬಿಕರಿಯಾಗುತ್ತಿದ್ದವು.
ಸ್ವಾವಲಂಬಿ ಭಾರತವನ್ನು ಕಟ್ಟುವ ಮೂಲಕ ಬ್ರಿಟೀಷ್ ಪ್ರಭುತ್ವದ ಆರ್ಥಿಕತೆಗೆ ಹೊಡೆತ ನೀಡುವ ಉದ್ಧೇಶದಿಂದ ವಿದೇಶಿ ಬಟ್ಟೆಗಳನ್ನು ಬಹಿಷ್ಕರಿಸಲು ಗಾಂಧೀಜಿ ಕರೆಕೊಟ್ಟಿದ್ದರು. ಪರಿಣಾಮವಾಗಿ ಬ್ರಿಟಿನ್ನಿನ ವಸ್ತ್ರೋಧ್ಯಮ ನೆಲಕಚ್ಚಿತು. ಆರ್ಥಿಕ ಕುಸಿತ ಉಂಟಾಯಿತು. ಬಟ್ಟೆ ಗಿರಣಿಗಳು ಮುಚ್ಚಿದವು. ಅಲ್ಲಿ ನಿರುದ್ಯೋಗ ಉಂಟಾಯಿತು.
ಸಾವಿರದ ಒಂಬೈನೂರಾ ಮೂವತ್ತೊಂದರ ಸೆಪ್ಟಂಬರ್ ತಿಂಗಳಲ್ಲಿ ಗಾಂಧೀಜಿ ಕಾಂಗ್ರೆಸ್ಸಿನ ಏಕೈಕ ಪ್ರತಿನಿಧಿಯಾಗಿ ಎರಡನೇ ದುಂಡು ಮೇಜಿನ ಪರಿಷತ್ತಿನಲ್ಲಿ ಭಾಗವಹಿಸಲು ಇಂಗ್ಲೆಂಡಿಗೆ ಹೋಗಿದ್ದರು. ಆಗ ಅವರು ಲ್ಯಾಂಕಾಶೈರ್ ಪ್ರದೇಶಕ್ಕೂ ಭೇಟಿ ನೀಡಲು ಇಚ್ಛೆಪಟ್ಟರು. ಇಂಗ್ಲೆಂಡಿನ ಜನರ ಉದ್ಯೋಗ ಕಿತ್ತುಕೊಂಡ ಮನುಷ್ಯ ಲ್ಯಾಂಕಾಶೈರಿಗೆ ಬರುತ್ತಿರುವುದಾಗಿ ಅಲ್ಲಿನ ಪತ್ರಿಕೆಗಳು ಬರೆದವು.
ಗಾಂಧೀಜಿ ಅಲ್ಲಿನ ಬಟ್ಟೆ ಮಿಲ್ಲೊಂದಕ್ಕೆ ಭೇಟಿ ನೀಡಿದರು. “ನಮ್ಮೆಲ್ಲ ಕಾರ್ಮಿಕರು ನಿಮ್ಮನ್ನೊಮ್ಮೆ ನೋಡಬಹುದೇ?” ಎಂದು ಮಿಲ್ಲಿನ ಮ್ಯಾನೇಜರ್ ಗಾಂಧೀಜಿಯವರಲ್ಲಿ ಕೇಳಿದರು. “ಓಹೋ..ಅದಕ್ಕೇನಂತೆ?” ಎಂದರು ಗಾಂಧೀಜಿ. ಮಿಲ್ಲಿನ ಗಂಟೆ ಭಾರಿಸಿದ್ದೇ ತಡ ಗಾಂಧೀಜಿಯವರ ಬರುವನ್ನೇ ಶತಮಾನಗಳಿಂದ ಕಾಯುತ್ತಿರುವವರಂತೆ ಕಾರ್ಮಿಕರೆಲ್ಲ ಓಡೋಡಿ ಬಂದರು. ತಮ್ಮ ಅಭಿಮಾನವನ್ನು ನಿಯಂತ್ರಿಸಿಕೊಳ್ಳಲಾರದ ಕೆಲವರು ಗಾಂಧೀಜಿಯನ್ನು ಆಲಂಗಿಸಿಕೊಂಡರು.
“ತಮ್ಮ ಎದುರಾಳಿಯ ಮುಂದೆ ಮಂಡಿಯೂರಿದ ವಸ್ತ್ರೋಧ್ಯಮ” ಎಂದು ಇಂಗ್ಲೆಂಡಿನ ಪತ್ರಿಕೆಯೊಂದು ಈ ಸುದ್ದಿಗೆ ತಲೆಬರೆಹ ನೀಡಿತು.
*
ಗಾಂಧೀಜಿಯವರ ಮಾರ್ಗದರ್ಶನದಂತೆ ಪಿಂಗಳೆ ವೆಂಕಯ್ಯನವರು ಸಿದ್ಧಪಡಿಸಿದ ಬಾವುಟವನ್ನು ಚರಕಾ ಧ್ವಜ ಎಂದೇ ಕರೆಯುತ್ತಿದ್ದರು. ಚರಕವೂ ಭಾರತದ ರಾಷ್ಟ್ರೀಯ ಚಳುವಳಿಯೂ ಹೀಗೆ ಒಂದನ್ನೊಂದು ಬೇರ್ಪಡಿಸಲಾಗದಷ್ಟು ಬೆಸೆದುಹೋಗಿದ್ದವು.
ಇಷ್ಟಾಗಿಯೂ ಚರಕಧ್ವಜಕ್ಕೆ ಹೊಸರೂಪದ ಅಗತ್ಯವಿದೆ ಎನಿಸಿತು. 1931 ರಲ್ಲಿ ಚರಕಾಧ್ವಜಕ್ಕೆ ಹೊಸ ವಿನ್ಯಾಸವನ್ನು ನೀಡಲು ಏಳುಮಂದಿಯ ಸಮಿತಿಯನ್ನು ಕರಾಚಿಯಲ್ಲಿ ರೂಪಿಸಲಾಯಿತು. ಈ ಸಮಿತಿ ಹೊಸ ರೂಪವನ್ನು ನೀಡಿತು. ಬಾವುಟದ ಮೇಲಿನ ಮತ್ತು ಕೆಳಗಿನ ಅಂಚುಗಳವರೆಗೆ ವಿಸ್ತರಿಸಿದ್ದ ಚರಕವನ್ನು ಮಧ್ಯದ ಬಿಳಿಯ ಪಟ್ಟಿಗೆ ಸೀಮಿತಗೊಳಿಸಲಾಯಿತು.
*
ಭಾರತಕ್ಕೆ ಸ್ವಾತಂತ್ರ್ಯ ದೊರೆಯುವ ಸೂಚನೆಯನ್ನು ಲಾರ್ಡ್ ಮೌಂಟ್ ಬ್ಯಾಟನ್ ಘೋಷಿಸಿದಾಗ ಮೂಲತಃ ಪಿಂಗಳೆ ವೆಂಕಯ್ಯನವರು ಸಿದ್ಧಪಡಿಸಿದ ಬಾವುಟವನ್ನು ಮರುವಿನ್ಯಾಸಗೊಳಿಸಲು ಡಾ. ರಾಜೇಂದ್ರ ಪ್ರಸಾದರವರ ನೇತೃತ್ವದ ಸಮಿತಿಯನ್ನು ರಚಿಸಲಾಯಿತು. ಐ.ಸಿ.ಎಸ್ ಅಧಿಕಾರಿ ಬದ್ರುದ್ದೀನ ತ್ಯಾಬ್ಜಿಯವರ ಹೆಂಡತಿ ಸುರೈಯ್ಯಾ ರವರು ಈಗ ನಾವು ಬಳಸುತ್ತಿರುವ ವಿನ್ಯಾಸದ ಬಾವುಟವನ್ನು ಮೊದಲ ಬಾರಿಗೆ ಸಿದ್ಧಪಡಿಸಿದರು. ಚರಕದ ಬದಲಾಗಿ ಚರಕವು ಪ್ರತಿನಿಧಿಸುವ ಸ್ವಾವಲಂಬನೆಯನ್ನೂ ಪ್ರಗತಿ, ಚಲನೆ ಮತ್ತು ಜೀವಂತಿಕೆಯನ್ನೂ ಪ್ರತಿನಿಧಿಸುವ ಸಾರಾನಾಥದ ಅಶೋಕ ಸ್ಥಂಭದ ಚಕ್ರವನ್ನು ಧ್ವಜದಲ್ಲಿ ಮೂಡಿಸಲಾಯಿತು. 1947 ರ ಜುಲೈ 21 ರಂದು ಹೊಸ ಧ್ವಜವನ್ನು ಅಂಗೀಕರಿಸಲಾಯಿತು.
*
ಭಾರತದ ರಾಷ್ಟ್ರೀಯ ಧ್ವಜದಲ್ಲಿ ನಾಲ್ಕು ಬಣ್ಣಗಳಿವೆ. ಆದರೂ ಇದನ್ನು ನಾವು ತ್ರಿವರ್ಣ ಧ್ವಜ ಎನ್ನುತ್ತೇವೆ. ಕೇಸರಿ, ಬಿಳಿ,ಹಸಿರು ಪಟ್ಟಿಗಳಲ್ಲದೆ ನೀಲಿ ಬಣ್ಣವೂ ಇದೆ. ಎಲ್ಲೆಗಳಿಲ್ಲದ ಆಕಾಶದಂತೆ, ಕೊನೆಯಿರದ ಸಮುದ್ರದಂತೆ ನೀಲಿಯು ಗಡಿಗಳನ್ನು ಮೀರಿದ ವೈಶಾಲ್ಯತೆಯನ್ನು ಸೂಚಿಸುತ್ತದೆ.
ಈ ಬಣ್ಣಗಳೆಲ್ಲವೂ ಮನ-ಮನಗಳಲ್ಲಿ ಮೂಡಲಿ!
Sunday, 10 July 2022
ಮನದ ಸೂತಕವನ್ನು ಹೋಗಲಾಡಿಸೋಣ.
ಹೆಣ್ಣು ಹೆಣ್ಣಾದೊಡೆ ಗಂಡಿನ ಸೂತಕ
ಗಂಡು ಗಂಡಾದೊಡೆ ಹೆಣ್ಣಿನ ಸೂತಕ
ಮನದ ಸೂತಕ ಹಿಂಗಿದೊಡೆ
ತನುವಿನ ಸೂತಕಕ್ಕೆ ತೆರಹುಂಟೇ ಅಯ್ಯ?
ಮೊದಲಿಲ್ಲದ ಸೂತಕಕ್ಕೆ ಮರುಳಾಯಿತ್ತು ಜಗವೆಲ್ಲ
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನೆಂಬ
ಗುರುವಂಗೆ ಜಗವೆಲ್ಲ ಹೆಣ್ಣು ನೋಡಾ!
-ಅಕ್ಕಮಹಾದೇವಿ
ಹದಿವಯಸ್ಸಿನ ಹುಡುಗಿಯರಿಗೆ ಮುಟ್ಟಿನ ಕಪ್ಪುಗಳನ್ನು ನೀಡುವ ಕಾರ್ಯಕ್ರಮಕ್ಕೆ ಸರಕಾರ ಚಾಲನೆ ನೀಡಿದೆ. ಮೊದಲ ಹಂತದಲ್ಲಿ ಚಾಮರಾಜ ನಗರ ಮತ್ತು ದಕ್ಷಿಣ ಕನ್ನಡದ ಹುಡುಗಿಯರಿಗೆ ಮುಟ್ಟಿನ ಕಪ್ಪುಗಳು ದೊರೆಯುತ್ತವೆ . ಮೈತ್ರಿ ಎಂಬ ಹೆಸರಿನ ಈ ಕಪ್ಪುಗಳು ಪ್ರೌಢಾವಸ್ಥೆಗೆ ಕಾಲಿಡುತ್ತಿರುವ ರಾಜ್ಯದ ಎಲ್ಲ ಕಿಶೋರಿಯರಿಗೂ ತಲುಪಲಿದೆ. ಈಗ ಮುಟ್ಟಿನ ಕುರಿತು ಮಾತನಾಡಬೇಕಿದೆ. ಮುಟ್ಟಿನ ಬಗ್ಗೆ ಮಾತನಾಡಲು ಜನರು ಹಿಂಜರಿಯುವ ಕಾಲದಲ್ಲಿ ಈ ಕುರಿತು ಮತ್ತೆ ಮತ್ತೆ ಮಾತನಾಡುವುದೇ ಮುಟ್ಟಿಗಿರುವ ಸಾಮಾಜಿಕ ಸಂಕೋಚವನ್ನು ಪರಿಹರಿಸುವ ದಾರಿ.
ಕರಾವಳಿ ಮುಂಜಾವು ಅಂಕಣ: ಈ ಲೇಖನವನ್ನೂ ಓದಿ: |
|
ಹೊಸ ಜೀವ ಸೃಷ್ಟಿಯೆಂಬುದು ಗಂಡು ಮತ್ತು ಹೆಣ್ಣು ಲಿಂಗಾಣುಗಳ ಸಮಾಗಮದೊಂದಿಗೆ ಆರಂಭವಾಗುತ್ತದೆ. ಪ್ರತಿ ಹೆಣ್ಣು ಮಗುವೂ ಹುಟ್ಟುತ್ತಲೆ ನಿರ್ದಿಷ್ಟ ಸಂಖ್ಯೆಯ ಹೆಣ್ಣು ಲಿಂಗಾಣುಗಳನ್ನು ಅಥವಾ ಅಂಡಗಳನ್ನು ಹೊತ್ತೇ ಹುಟ್ಟಿರುತ್ತಾಳೆ. ಹೆಣ್ಣು ಮಗು ಹನ್ನೆರಡೋ ಹದಿಮೂರೋ ವಯಸ್ಸು ತಲುಪುತ್ತಲೆ ಆಕೆಯ ದೇಹದಲ್ಲಿ ಬಿಡುಗಡೆಯಾಗುವ ಕೆಲವು ರಾಸಾಯನಿಕ ಪ್ರಚೋದಕಗಳು ಆಕೆಯ ಒಂದು ಜೊತೆ ಅಂಡಾಶಯಳಲ್ಲಿ ಯಾವುದೋ ಒಂದರಿಂದ ಒಂದು ಅಂಡವನ್ನು ಬಿಡುಗೊಡೆಗೊಳಿಸುತ್ತದೆ. ಆ ಒಂದು ಅಂಡ ಅಲ್ಲಿಂದ ಪ್ರಯಾಣಮಾಡಿ ಗರ್ಭಾಶಯವನ್ನು ತಲುಪಬೇಕು. ಒಂದೊಮ್ಮೆ ಗಂಡಿನೊಂದಿಗೆ ಲೈಂಗಿಕ ಸಂಪರ್ಕ ಉಂಟಾದಲ್ಲಿ ಗರ್ಭಾಶಯವನ್ನು ಪ್ರವೇಶಿಸಲಿರುವ ಗಂಡು ಲಿಂಗಾಣುಗಗಳಲ್ಲಿ ಒಂದರೊಡನೆ ಜೊತೆಗೂಡಿ ಜೀವಸೃಷ್ಟಿ ಶುರುವಾಗಬೇಕಲ್ಲ? ಇದಕ್ಕೆಲ್ಲ ಸ್ವಲ್ಪ ಸಿದ್ಧತೆ ಬೇಕು. ಗಂಡು ಮತ್ತು ಹೆಣ್ಣು ಲಿಂಗಾಣುಗಳ ಸಮಾಗಮದ ನಂತರ ಫಲಿತಗೊಳ್ಳುವ ಜೀವಾಂಕುರವು ನೆಲೆನಿಲ್ಲಲು, ಪೋಷಣೆಯನ್ನು ಪಡೆಯಲು ಗರ್ಭಾಶಯದ ಒಳಗೋಡೆಯ ಮೇಲೆ ಸಾಕಷ್ಟು ಸಿದ್ಧತೆಗಳು ನಡೆಯಬೇಕು. ಈ ಸಿದ್ಧತೆಯಲ್ಲಿ ಗರ್ಭಾಶಯದ ಒಳಗೋಡೆಯ ಮೇಲೆ ನವಿರಾದ ರಕ್ತನಾಳಗಳು ಬೆಳೆದು ಪೋಷಣೆಯನ್ನು ಒದಗಿಸುವ ಮೆತ್ತನೆಯ ಹಾಸಿಗೆಯೊಂದನ್ನು ಸೃಷ್ಟಿಸುತ್ತವೆ. ಸಿದ್ಧತೆಗೆ ನಾಲ್ಕು ವಾರಗಳೇ ಬೇಕಾಗುತ್ತವೆ.. ಆದರೆ, ಇಷ್ಟಕ್ಕೆ ಗಂಡು ಲಿಂಗಾಣುವು ಲೈಂಗಿಕ ಕ್ರಿಯೆಯ ಮೂಲಕ ಹೆಣ್ಣು ದೇಹವನ್ನು ಪ್ರವೇಶಿಸಲೇ ಬೇಕೆಂದಿಲ್ಲವಲ್ಲ? ಲೈಂಗಿಕ ಸಮಾಗಮವನ್ನು ಗಂಡು ಮತ್ತು ಹೆಣ್ಣುಗಳು ನಿರ್ಧರಿಸಬೇಕು. ಹಲವು ಸಾಮಾಜಿಕ ನಿಭಂದನೆಗಳು ಈ ನಿರ್ಧಾರದ ಮೇಲೆ ಪ್ರಭಾವ ಬೀರುತ್ತವೆ. ಅಂಡವು ಫಲಿತಗೊಳ್ಳದಾಗ ಗರ್ಭಕೋಶದಲ್ಲಾದ ಈ ಎಲ್ಲ ಸಿದ್ಧತೆಗಳು ವ್ಯರ್ಥವಾಗುತ್ತವೆ. ಆಗ ಗರ್ಭಕೋಶದ ಹಾಸಿಗೆ ಕಳಚಿಕೊಂಡು ಮುಟ್ಟಿನ ಸ್ರಾವವಾಗಿ ಹೊರಹೋಗುತ್ತದೆ.ಈ ಕ್ರಿಯೆ ನಾಲ್ಕೈದು ವಾರಗಳಿಗೊಮ್ಮೆ ಪುನರಾವರ್ತನೆ ಆಗುತ್ತಲೇ ಇರುತ್ತದೆ. ಋತುಸ್ರಾವವು ನಾಲ್ಕು-ಐದು ದಿನಗಳವರೆಗೂ ಉಂಟಾಗುತ್ತದೆ. ಹೆಣ್ಣು ಋತುಮತಿಯಾಗುವುದು ಒಂದು ಜೈವಿಕ ಕ್ರಿಯೆ. ಜೀವಸೃಷ್ಟಿಯ ಉದ್ಧೇಶವೂ ದೈವಿಕ.
ಜೀವಾಂಕುರವಾಗುವುದು ಗರ್ಭಾಶಯದಲ್ಲಿ. ಆದರೆ, ಗರ್ಭ ಧರಿಸುವ ಹೆಣ್ಣು ಗರ್ಭಗುಡಿಗೆ ಹೋಗುವಂತಿಲ್ಲ. ಮುಟ್ಟಾಗಿರಲಿ, ಇಲ್ಲದಿರಲಿ, ಧರ್ಮ ಯಾವುದೇ ಇರಲಿ, ಗರ್ಭಗುಡಿಗೆ ಹೆಣ್ಣಿನ ಪ್ರವೇಶ ನಿಷಿದ್ಧ. ಶಬರಿಮಲೆಯ ಅಯ್ಯಪ್ಪನ ದೇವಾಲಯ ಮಂಡಲಿಯ ಅಧ್ಯಕ್ಷರು ‘ಮಹಿಳೆಯರು ಮುಟ್ಟಾಗಿದ್ದಾರಾ ಎಂಬುದನ್ನು ಪತ್ತೆಹಚ್ಚುವ ಮೆಷಿನ್ ಬರಲಿ, ಆಮೇಲೆ ಮಹಿಳೆಯರನ್ನು ದೇವಾಲಯದೊಳಗೆ ಬಿಡುವ ಬಗ್ಗೆ ಯೋಚಿಸೋಣ’ ಎಂಬರ್ಥದ ಮಾತುಗಳನ್ನು ಆಡಿದ್ದರು. ಇದು ಧರ್ಮದ ಮಾತೂ ಅಲ್ಲ. ಸಮಾನತೆಯನ್ನು ಖಾತರಿಪಡಿಸುವ ನಮ್ಮ ಸಂವಿಧಾನದ ಮಾತೂ ಅಲ್ಲ. ಇದು ಮುಟ್ಟಿನ ಬಗ್ಗೆ ಇನ್ನೂ ನಮ್ಮ ಸಮಾಜದಲ್ಲಿ ನೆಲೆಯೂರಿರುವ ಅಜ್ಞಾನದ ಮಾತು.
ಮುಟ್ಟಿನ ಬಗ್ಗೆ ಹೆಣ್ಣು ಮಕ್ಕಳಿಗೆ ತಿಳುವಳಿಕೆ ನೀಡುವುದು ಎಷ್ಟು ಅವಶ್ಯಕವೋ ಗಂಡು ಮಕ್ಕಳಿಗೆ ತಿಳಿಸುವುದೂ ಅಷ್ಟೇ ಅವಶ್ಯಕ. ಇತ್ತೀಚೆಗೆ, ಒಂದು ಸಂಸ್ಥೆಯವರು ಉಚಿತವಾಗಿ ಸ್ಯಾನಿಟರಿ ಪ್ಯಾಡು ನೀಡಲು ಶಾಲೆಗೆ ಬಂದಿದ್ದರು. ಅದನ್ನು ಹಂಚುವಾಗ ಗಂಡುಮಕ್ಕಳು ಹೊರಹೋಗಲಿ ಎಂದು ಸೂಚಿಸಿದರು. “ ಬೇಡ, ಅವರೂ ಇರಲಿ” ಎಂದೆ. ಗಂಡು ಮಕ್ಕಳಿಗೂ ಮುಟ್ಟಿನ ತಿಳುವಳಿಕೆ ದೊರೆಯಿತು. ಹೆಣ್ಣು ಮಕ್ಕಳ ಸಂಕೋಚವೂ ಸಾಕಷ್ಟು ಕಡಿಮೆಯಾಯಿತು. ಕಾರ್ಯಕ್ರಮದ ಕೊನೆಯಲ್ಲಿ, ಸ್ಯಾನಿಟರಿ ಪ್ಯಾಡು ಹಿಡಿದುಕೊಂಡ ಹುಡುಗಿಯರ ಫೋಟೋ ಬೇಕೆಂದರು. “ಈಗಲಾದರೂ, ಹುಡುಗರು ಹೊರಹೋಗಲಿ ಅಲ್ವೇ” ಎಂದು ನನ್ನಲ್ಲಿ ಕೇಳಿದರು. ಆಗಲೂ ಬೇಡ ಎಂದೆ. ಹುಡುಗಿಯರು ಸ್ಯಾನಿಟರಿ ಪ್ಯಾಡ್ ಹಿಡಿದುಕೊಂಡು ಅವರ ಕಾರ್ಯಕ್ರಮದಲ್ಲಿ ರೂಪದರ್ಶಿಗಳಾದರು. ಹುಡುಗರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.” ಎಷ್ಟು ಹುಡುಗರು ನಿಮ್ಮ ಅಮ್ಮನಿಗೋ ಅಕ್ಕನಿಗೋ ಅಂಗಡಿಯಿಂದ ಸ್ಯಾನಿಟರಿ ಪ್ಯಾಡು ತಂದುಕೊಟ್ಟಿದ್ದೀರಿ?” ಎಂದು ಪ್ರಶ್ನಿಸಿದೆ. ಕೆಲವರಷ್ಟೇ ಕೈ ಎತ್ತಿದರು. ಕೈ ಎತ್ತದಿದ್ದ ಒಬ್ಬ ಹುಡುಗನನ್ನು ಕೇಳಿದೆ., “ಕೇಳಿದ್ದರೆ ತಂದುಕೊಡುತ್ತಿದ್ದೆ” ಎಂದನು.. ಕ್ಲಾಸಿನಲ್ಲಿದ್ದ ಅವಳಿ ಮಕ್ಕಳಲ್ಲಿ ಒಬ್ಬ ಹುಡುಗ ಕೈಯೆತ್ತಿರಲಿಲ್ಲ. ಅವಳಿ ಹುಡುಗಿ ಮಧ್ಯಪ್ರವೇಶಿಸಿ “ ನನಗೆ ಪ್ಯಾಡು ತಂದುಕೊಡುವವ ಅವನೇ, ಆದರೂ ಕೈ ಎತ್ತಿಲ್ಲ” ಎಂದು ದೂರಿದಳು. ಹೊಸ ತಲೆಮಾರು ಬದಲಾಗುತ್ತಿದೆ. ಶಬರಿಮಲೈ ಘಟನೆಯ ನಂತರ ಪಾಟಿಯಾಲದ ಸರ್ಕಾರಿ ಕಾಲೇಜಿನಲ್ಲಿ ಪದವಿ ಓದುತ್ತಿದ್ದ ನಿಖಿತಾ ಅಜಾದ್ ಎಂಬ ಯುವತಿ #Happy_to_Bleed ಎಂಬ ಹ್ಯಾಷ್ ಟ್ಯಾಗಿನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮುಟ್ಟಿನ ಕುರಿತು ಮಾತನಾಡಲು ಹೆಣ್ಣುಮಕ್ಕಳಿಗೆ ಕರೆನೀಡಿದರು. ಇದೊಂದು ಆಂದೋಲನವಾಗಿ ರೂಪುಗೊಂಡಿತು. ಯುವತಿಯರು ತಮ್ಮ ಅನುಭವ ಮತ್ತು ಆಶಯಗಳನ್ನು ನಿರ್ಬಿಡೆಯಾಗಿ ಹಂಚಿಕೊಂಡರು. ಈ ಆಂದೋಲನವು ಗಂಡಾಳಿಕೆಯ ಜಗತ್ತನ್ನು ಹೆಣ್ಣಿನ ಕಣ್ಣುಗಳಿಂದ ನೋಡುವ ದೃಷ್ಟಿಯನ್ನು ಒದಗಿಸಿತು.
ಮುಟ್ಟಿನ ಸ್ರಾವದಲ್ಲಿರುವುದು ದೇಹದಲ್ಲಿ ಹರಿಯುವ ರಕ್ತವೇ. ಜೊತೆಗೆ, ಇತರ ಅಂಗಾಂಶಗಳು ಇರುತ್ತವೆ ಹೊರಗಿನ. ಆಮ್ಲಜನಕದೊಡನೆ ಸಂಯೋಜನೆಗೊಂಡು ಸ್ರಾವದ ಬಣ್ಣವು ಕಂದು-ಕೆಂಪು ಬಣ್ಣಕ್ಕೆ ತಿರುಗಿರುತ್ತದೆ. ಅದರಲ್ಲಿ ಮಲಿನವಾದದ್ದು ಯಾವುದೂ ಇಲ್ಲ. ಮಲ ಮೂತ್ರ ವಿಸರ್ಜನೆಗಳೂ ಮಲಿನವಲ್ಲ. ಜೈವಿಕ ಕ್ರಿಯೆಗಳಷ್ಟೆ. ಮುಟ್ಟಿನ ಸಮಯದಲ್ಲಿ ಸ್ನಾನ ಮಾಡಬಾರದೆಂಬ ಕಟ್ಟಳೆಯೂ ವೈಜ್ಞಾನಿಕವಲ್ಲ. ಬಿಸಿನೀರು ಸ್ನಾನವು ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಮುಟ್ಟಿನ ನೋವನ್ನು ಕಡಿಮೆ ಮಾಡುತ್ತದೆ. ಮುಟ್ಟಿನ ಸಮಯದಲ್ಲಿ ಹೆಣ್ಣು ಮಕ್ಕಳು ಹೊರಗಿರುವುದನ್ನು ಅವರಿಗೆ ನೀಡಿರುವ ವಿಶ್ರಾಂತಿಯೆಂದು ಕೆಲವರು ಸಮರ್ಥಿಸಿಕೊಳ್ಳುತ್ತಾರೆ. ಆದರೆ, ದೈಹಿಕ ಚಟುವಟಿಕೆಗಳು ಸೆರಟೋನಿನ್ ಎಂಬ ಚೋದಕ ದೃವ್ಯದ ಸೃವಿಕೆಗೆ ಕಾರಣವಾಗುತ್ತವೆ. ಈ ದೃವ್ಯವು ದೇಹದಲ್ಲಿ ಹರಿದಾಡಿ ಖುಷಿಗೆ ಕಾರಣವಾಗುತ್ತದೆ. ನಿದ್ದೆ, ಜೀರ್ಣಕ್ರೀಯೆಗಳು ಸುಲಲಿತಗೊಳ್ಳುತ್ತವೆ.
ಮುಟ್ಟು, ಮುಟ್ಟಿನ ನೋವು, ಮುಟ್ಟಿನ ಕುರಿತಾದ ತಪ್ಪು ಕಲ್ಪನೆಗಳಷ್ಟೇ ಹೆಣ್ಣನ್ನು ಪೀಡಿಸುವುದಲ್ಲ, ಮುಟ್ಟನ್ನು ನಿರ್ವಹಿಸಲು ಬಳಸುವ ಸ್ಯಾನಟರಿ ಪ್ಯಾಡುಗಳನ್ನು ನಿರ್ವಹಿಸುವುದೂ ಸವಾಲೇ ಸರಿ. ಮುಟ್ಟಿನ ಕಪ್ಪುಗಳು ಹೆಣ್ಣುಮಕ್ಕಳನ್ನು ಪ್ಯಾಡುಗಳ ರಗಳೆಯಿಂದ ಪಾರುಮಾಡಬಲ್ಲದು. ಸಿಲಿಕೋನಿನಿಂದ ತಯಾರಿಸಿದ ಮುಟ್ಟಿನ ಕಪ್ಪುಗಳನ್ನು ಮರುಬಳಕೆ ಮಾಡಬಹುದು. ಈ ಕಪ್ಪು ಋತುಸ್ರಾವವನ್ನು ಹೀರುವುದಿಲ್ಲ; ಅದನ್ನು ಸಂಗ್ರಹಿಸುತ್ತದೆ. ಸೂಕ್ತ ಸ್ವಚ್ಛತಾ ವಿಧಾನವನ್ನು ಬಳಸಿ ಕಪ್ಪನ್ನು ಮತ್ತೆ ಮತ್ತೆ ಬಳಸಬಹುದು. ಪ್ಯಾಡುಗಳಲ್ಲಿ ಪ್ಲಾಸ್ಟಿಕ್ ಇರುವುದರಿಂದ ಅವು ನೂರಾರು ವರ್ಷಗಳ ವರೆಗೆ ಕೊಳೆಯದೆ ಉಳಿಯುತ್ತವೆ. ಮುಟ್ಟಿನ ಕಪ್ಪುಗಳು ಮಹಿಳಾಸ್ನೇಹಿ ಅಷ್ಟೇ ಅಲ್ಲ, ಪರಿಸರ ಸ್ನೇಹಿ ಕೂಡಾ..
ಮುಟ್ಟಿನ ಕಪ್ಪುಗಳು ಹೊಸದಾದರೂ ಅವುಗಳನ್ನು ನಿರ್ವಹಿಸುವ ವಿಧಾನವನ್ನು ಹೆಣ್ಣುಮಕ್ಕಳು ಬೇಗನೆ ಕಲಿಯಬಲ್ಲರು. ಹಳೆಯ ನಂಬಿಕೆಗಳನ್ನು ನಿರ್ವಹಿಸುವುದು ಈಗಲೂ ಸವಾಲೇ!
|
|
Tuesday, 21 June 2022
ನೀನೊಬ್ಬ ಅಯೋಗ್ಯ ಎಂದು ಜರೆಯುವ ಪರೀಕ್ಷೆ..
ಕಳೆದ ವರ್ಷ ಹತ್ತನೆಯ ತರಗತಿಯಲ್ಲಿದ್ದ ಒಬ್ಬ ಹುಡುಗ ಇತ್ತೀಚೆಗೆ ಬಸ್ಟ್ಯಾಂಡಿನಲ್ಲಿ ಭೇಟಿಯಾದ. ಆ ಬ್ಯಾಚಿನ ಅನೇಕ ಮಕ್ಕಳು ಲಾಕ್ ಡೌನ್ ನಂತರ ಸಾಕಷ್ಟು ಕಷ್ಟ-ನಷ್ಟಗಳನ್ನು ಅನುಭವಿಸಿದವರು. ಒಂದು ಹೊತ್ತಿನ ಊಟ ಎಷ್ಟು ದುಬಾರಿ ಎಂಬ ಅರಿವಿದ್ದ ಮಕ್ಕಳೇ ಹೆಚ್ಚಿದ್ದ ಬ್ಯಾಚದು. ಶಾಲೆ ಮುಚ್ಚಿದ್ದರಿಂದ ಓದಿನ ಎಲ್ಲ ಹೊಣೆ ಅವರ ಮೇಲೆ ಬಿದ್ದಿತ್ತು. ವರ್ಚುವಲ್ ತರಗತಿಗಳು ಅವರ ಹತ್ತಿರ ಬಂದಿರಲಿಲ್ಲ. ಆದರೂ ಆ ಬ್ಯಾಚಿನ ಮಕ್ಕಳನ್ನು ಕೋವಿಡ್ ಬ್ಯಾಚು ಎಂದು ಹಗುರ ಧ್ವನಿಯಲ್ಲಿ ಅನೇಕರು ಕರೆಯುತ್ತಿದ್ದರು. ಅದೇ ಬ್ಯಾಚಿನವನು ಈ ಹುಡುಗ. ಈತ ಎಸ್ ಎಸ್ ಎಲ್ ಸಿ ಪಾಸಾಗಲಾರ ಎಂದು ನಾವೆಲ್ಲ ಅಂದುಕೊಂಡಿದ್ದೆವು. ಆತನ ಉತ್ತರ ಪತ್ರಿಕೆಯಲ್ಲಿ ಮಾರ್ಕು ಹಾಕಬಹುದಾದ ಒಂದೇ ಒಂದು ಸಾಧ್ಯತೆ ಎಲ್ಲಾದರೂ ಇದೆಯೇ ಎಂದು ಹುಡುಕಾಡುತ್ತಿದ್ದೆವು. ಸಾಲದ್ದಕ್ಕೆ ಆತ ಕಲಿಕೆಯ ಹೊರತಾಗೂ ಯಾವ ಉತ್ಸಾಹವನ್ನೂ ತೋರುತ್ತಿರಲಿಲ್ಲ. ಈತ ಅಡಿಕೆ ಹೆಕ್ಕಲಷ್ಟೇ ಲಾಯಕ್ಕು ಎಂದು ಬಾಯಿಬಿಟ್ಟು ಹೇಳಿರಲಿಲ್ಲ ಅಷ್ಟೆ.
ಕೋವಿಡ್ ಕಾರಣಕ್ಕಾಗಿ ಎಲ್ಲರನ್ನೂ ಪಾಸು ಮಾಡಿದಾಗ ಆತನೂ ಎಸ್ ಎಸ್ ಎಲ್ ಸಿ ಪಾಸಾಗಿದ್ದ. ಮೇಷ್ಟ್ರನ್ನು ಕಂಡರೆ ಮುದುಡಿಹೋಗುತ್ತಿದ್ದ ಆ ಹುಡುಗ ಈಗ ನನ್ನನ್ನು ನೋಡಿದ್ದೇ ಬಳಿಬಂದಿದ್ದ. 'ಸರ್' ಎಂದ. ಅವನು ಐ.ಟಿ.ಐ ಕೈಗಾರಿಕಾ ತರಬೇತಿ ಸೇರಿದ್ದು ಗೊತ್ತಿತ್ತು. 'ಹೇಗಾಗ್ತಿದೆ ಐ.ಟಿ.ಐ?" ಎಂದು ಕೇಳಿದೆ.
.
"ಸರ್, ಈ ಕೋರ್ಸಿಗೆ ಸೇರಿದ್ದು ಬಹಳ ಒಳ್ಳೇದಾಯ್ತು" ಎಂದ. "ನಿನಗೆ ಅಲ್ಲಿ ಯಾವುದು ಇಷ್ಟವಾಯ್ತು?" ಎಂದು ಕೇಳಿದೆ. ಬಹುಶಃ ನನ್ನ ಪ್ರಶ್ನೆಯಲ್ಲಿ ಅತನಿಗೆ ಕಲಿಯುವುದು ಹೇಗೆ ಇಷ್ಟವಾಯ್ತು ಎಂಬ ಆಶ್ಚರ್ಯವೂ ಇತ್ತಿರಬಹುದು. ಆತ ಹೆಚ್ಚು ಯೋಚಿಸದೆ ಹೇಳಿದ "ನಾವು ಶಾಲೆಯಲ್ಲಿ ಕದ್ದು ಮುಚ್ಚಿ ಮಾಡ್ತಿದ್ದ ಬ್ಯಾಟರಿ- ಮೋಟಾರು ಪ್ರಯೋಗಗಳನ್ನೆಲ್ಲ ಈಗ ಅಲ್ಲಿ ಲ್ಯಾಬ್ ನಲ್ಲಿ ಮಾಡ್ತೇವೆ." ಆ ಹುಡುಗ ಎಲೆಕ್ಟ್ರಿಕಲ್ ವಿಭಾಗ ಆರಿಸಿಕೊಂಡಿದ್ದಾನೆಂದು ಗೊತ್ತಾಯ್ತು. ಅಷ್ಟೇ ಅಲ್ಲ, ಶಾಲೆಯಲ್ಲಿ ಬ್ಯಾಟರಿ- ಮೋಟಾರು ಜೋಡಿಸಿ ಮಾದರಿಗಳನ್ನು ಮಾಡುತ್ತಿದ್ದನೆಂಬುದೂ ಈಗ ಗೊತ್ತಾಯ್ತು. ಬಹಳಷ್ಟು ಹುಡುಗರು ವಿಜ್ಞಾನದ ಮಾದರಿಗಳನ್ನು ಮಾಡಲು ಹೇಳಿದಾಗ ಎಲೆಕ್ಟ್ರಿಕಲ್ ಡಿವೈಸ್ ಗಳನ್ನು ತಯಾರಿಸುತ್ತಾರೆ. ಮೋಟರ್ ಬಳಸಿ ವಾಶಿಂಗ್ ಮಶೀನ್, ಕಳೆ ಕತ್ತರಿಸುವ ಯಂತ್ರ ಮತ್ತಿತ್ಯಾದಿ ಉಪಕರಣಗಳನ್ನು ತಯಾರಿಸುತ್ತಾರೆ. ಕಳ್ಳರು ಗೇಟು ದಾಟಿದಾಗ, ಬಾಗಿಲು ತೆರೆದಾಗ ಸೈರನ್ ಆಗುವ ಉಪಕರಣಗಳನ್ನೂ ಹೆಚ್ಚಾಗಿ ರೂಪಿಸುತ್ತಾರೆ. ಚಲಿಸುವ ಯಂತ್ರಗಳು ಮತ್ತು ಕಳ್ಳರನ್ನು ಹಿಡಿಯುವುದು ಹುಡುಗರಿಗೇಕೆ ಅಷ್ಟು ಆಸಕ್ತಿಯ ವಿಷಯ ಎಂಬ ಕುತೂಹಲ ನನಗೆ ಯಾವಾಗಲೂ ಇದೆ. ಆದರೆ, ಈ ಹುಡುಗ ಮೋಟಾರು ಬಳಸಿ ಮಾದರಿ ತಯಾರಿಸಿದ್ದು ನನಗೆ ಗೊತ್ತಿರಲಿಲ್ಲ. " ನೀನೂ ಬ್ಯಾಟರಿ-ಮೋಟಾರು ಬಳಸಿ ಮಾದರಿ ತಯಾರಿಸುತ್ತಿದ್ದೆಯಾ?" ಎಂದು ಆಶ್ಚರ್ಯದಿಂದ ಕೇಳಿದೆ. ನನ್ನ ಆಶ್ಚರ್ಯ ಆತನಿಗೆ ನಿರೀಕ್ಷಿತವಾಗಿತ್ತು ಎಂಬುದು ಆತನ ಮಾತಲ್ಲಿ ಗೊತ್ತಾಯ್ತು. " ಹೌದು ಸರ್, ನಾನೇ ಮಾಡ್ತಿದ್ದುದು ಅವೆಲ್ಲ.. ಆದರೆ, ಅದಕ್ಕೆ ವಿವರಣೆ ಕೊಡಲು ಆಗ್ತಿರಲಿಲ್ಲವಾದ್ದರಿಂದ ಬೇರೆಯವರಿಗೆ ಕೊಡ್ತಿದ್ದೆ" ಎಂದ. "ಓ ಹೌದಾ?.. ಈಗ ನೀನು ಮಾಡಿದ್ದನ್ನು ನೀನೇ ವಿವರಿಸ್ತಿಯಲ್ಲ?" ಎಂದೆ.
" ಹೌದು ಸರ್, ಈಗ ಇಂತದ್ದನೆಲ್ಲ ಮಾಡ್ತಾ ನಾವೇನು ಮಾಡ್ತಿದ್ದೇವೆಂದು ಅರ್ಥವಾಗ್ತಾಹೋಗ್ತಿದೆ.. ಇಲ್ಲಿ ಈ ತರ ನಾವೇ ಮಾಡುವುದು ಜಾಸ್ತಿ ಇರುತ್ತದೆ. ಕೇಳುವುದು ಕಡಿಮೆ" ಎಂದ.
ಅವನು ಇಷ್ಟೆಲ್ಲ ಮಾತನಾಡಬಲ್ಲೆನಾ ಎಂದು ಆಶ್ಚರ್ಯವಾಯ್ತು. ಶಾಲೆಯಲ್ಲಿ ಒಂದೇ ಒಂದು ಬಾರಿಯೂ ಹೌದು-ಅಲ್ಲ ಕ್ಕಿಂತ ಹೆಚ್ಚಿನದಾದ ಉತ್ತರ ಕೊಟ್ಟಿದ್ದೇ ಇರಲಿಲ್ಲ.
"ಶಾಲೆಯ ಹಾಗೆ ಪರೀಕ್ಷೆ, ಓದು ಇರುವುದಿಲ್ಲವಾ ಅಲ್ಲಿ? " ಎಂದು ಕೇಳಿದೆ.
" ಇರುತ್ತದೆ ಸರ್. ಓದಿನ ಒತ್ತಡ ಇರುವುದಿಲ್ಲ, ಪರೀಕ್ಷೆ ಎಂದರೆ ಓದು ಮಾತ್ರ ಆಗಿರುವುದಿಲ್ಲ. ನಾವು ಸ್ವತಃ ಮಾಡಿದ ಚಟುವಟಿಕೆಗಳೇ ನಮಗೆ ಪರೀಕ್ಷೆಯಲ್ಲಿ ಉತ್ತರ ಬರೆಯಲು ಸಹಾಯವಾಗುತ್ತವೆ" ಎಂದ. ಆತ ಏನನ್ನು ಹೇಳಿದ ಎನ್ನುವುದರಷ್ಟೇ ಆತನ ನುಡಿಗಳ ಸ್ಪಷ್ಟತೆಯೂ ಇಷ್ಟವಾಯ್ತು.
"ಒಳ್ಳೆಯ ಉಪನ್ಯಾಕರು ಸಿಕ್ಕಿದ್ದಾರೆ, ಹಾಗಾದರೆ.." ಎಂದೆ. ಆತನ ಪ್ರತಿಕ್ರಿಯೆ ನಿರೀಕ್ಷಿಸುತ್ತಾ.
" ಹೌದು ಸರ್, ಇಡೀ ದಿನ ಓದು ಓದು ಎಂದು ಒತ್ತಡ ಹೇರುವುದಿಲ್ಲ. ನಮಗೆ ಕಲಿಯಲು ಅವಕಾಶ ಮಾಡಿಕೊಡುತ್ತಾರೆ" ಎಂದ. ಆತ ನೇರವಾಗಿ ಮಾತನಾಡುತ್ತಿದ್ದ. ಆತನ ಪದಗಳು ಪ್ರಾಮಾಣಿಕವಾಗಿದ್ದವು. ಯಾರನ್ನೂ ಗುರಿಯಾಗಿಸಿ ಪದಗಳನ್ನು ಜಾಣ್ಮೆಯಿಂದ ಬಳಸುವ ಅವಶ್ಯಕತೆ ಆತನಿಗಿರಲಿಲ್ಲ. ಆದರೂ, ಆತನ ಮಾತುಗಳು ನನ್ನನ್ನು ಇರಿಯುತ್ತಿದ್ದವು.
ಕಲಿಕೆಯ ಕುರಿತಾಗಿ ಈ ಹುಡುಗನಿಗಿರುವ ಗ್ರಹಿಕೆ ನಮಗೇಕೆ ದಕ್ಕುವುದಿಲ್ಲ? ಅಥವಾ ಇವೆಲ್ಲ ಗೊತ್ತಿದ್ದೂ ನಾವೇಕೆ ಕಲಿಯುವ ಸರಿಯಾದ ದಾರಿಯನ್ನು ಮಕ್ಕಳಿಗೆ ತೆರೆಯುವುದಿಲ್ಲ? ಇದರಲ್ಲಿ ನನ್ನ ತಪ್ಪೆಷ್ಟು? ನಾನೂ ಆತನಂತೆ ಇಲ್ಲಿ ಸಂತ್ರಸ್ತನೇ? ಹತ್ತಾರು ಪ್ರಶ್ನೆಗಳು ಮೂಡಿದವು.
ಅನೇಕ ಸಹೋದ್ಯೋಗಿಗಳು ಆಗಾಗ ಸಲಹೆಯ ರೂಪದ ದೂರನ್ನು ಹೇಳ್ತಿರ್ತಾರೆ- " ಕ್ಲಾಸಲ್ಲಿ ಕತೆ ಹೇಳ್ತಾ, ಪ್ರಯೋಗ ಮಾಡ್ತಾ ಇದ್ರೆ ಮಕ್ಕಳಿಗೆ ಇಷ್ಟವಾಗಬಹುದು.. ಪರೀಕ್ಷೆಯಲ್ಲಿ ಮಾರ್ಕು ಸಿಗದು" ಇನ್ನು ಕೆಲವರು ಇದನ್ನೇ ಬೇರೆ ರೂಪದಲ್ಲಿ ಹೇಳ್ತಾರೆ " ಡಿಸೆಂಬರ್ ವರೆಗೆ ಪಾಠ ಮುಗಿಸ್ಕೋಬೇಕು.. ಆ ನಂತರದ ಎರಡುವರೆ ತಿಂಗಳಲ್ಲಿ ನಾವೆಷ್ಟು ರಿವಿಷನ್ ಮಾಡ್ತೇವೋ ಅದಷ್ಟೇ ಪ್ರಯೋಜನಕ್ಕೆ ಬರುವುದು."
|
ರಿವಿಷನ್ ಎಂದರೆ ಮತ್ತೆ ಮತ್ತೆ ಪರೀಕ್ಷೆ.. ಬಾಯಿಪಾಠ, ಪರೀಕ್ಷೆಯ ಸಂಭವನೀಯ ಪ್ರಶ್ನೆಗಳಿಗಷ್ಟೇ ಅಲ್ಲಿ ಮಹತ್ವ.
.
ಸಹೋದ್ಯೋಗಿಗಳ ಮಾತಲ್ಲಿ ಯಾವ ತಪ್ಪೂ ಇರಲಿಲ್ಲ. ಹಾಗೆ ಮಾಡಿದರಷ್ಟೇ ಹೆಚ್ಚು ಮಕ್ಕಳು ಪಾಸಾಗಬಹುದು ಎಂಬುದು ನನ್ನ ನಂಬಿಕೆಯೂ ಹೌದು.
ಹಾಗಾದರೆ ಪಾಸಾಗುವುದು ಎಂದರೇನು? ಬಾಯಿಪಾಠ ಮಾಡಿದಷ್ಟಕ್ಕೆ ಕಲಿಕೆ ಉಂಟಾಗಿದೆ ಎಂದು ಒಪ್ಪುವ ಈ ಮೌಲ್ಯಮಾಪನ ಮಾಡಿರುವ ಅನ್ಯಾಯಕ್ಕೆ ಎಷ್ಟೊಂದು ಪ್ರತಿಭಾವಂತರು ಸರಿದುಹೋಗಿರಬಹುದು? ಎಲೆಯ ಚೂರೊಂದನ್ನು ಮೂಸಿನೋಡಿ ಯಾವ ಸಸ್ಯ ಎಂದು ಹೇಳಬಲ್ಲ ಕಾಡಿನ ಮಕ್ಕಳೂ ನನ್ನ ಶಾಲೆಯಲ್ಲಿದ್ದಾರೆ. ಅವರ ಜ್ಞಾನವು ಮೌಲ್ಯಮಾಪನದ ತೆಕ್ಕೆಗೆ ಸಿಗದಿರುವುದೇಕೆ?
ಆ ಹುಡುಗನ ಬಸ್ ಬಂತು. "ಬೈ ಸರ್" ಎಂದವನೇ ಮತ್ತೆನೋ ನೆನಪಾದವನಂತೆ " ಈ ಸಲದ ಎಸ್ ಎಸ್ ಎಲ್ ಸಿ ರಿಸಲ್ಟ್ ಯಾವಾಗಂತೆ ಸರ್?" ಎಂದು ಕೇಳಿದ.
" ಸದ್ಯ ಬರಬಹುದು" ಎಂದೆ. ಹಾಗೆನ್ನುವಾಗ ಕೆಲವು ಮಕ್ಕಳ ಮುಖಗಳು ಕಣ್ಣೆದುರು ಬಂದವು. ಈ ಅಂಕಣದ ಮುಂದಿನ ಬರೆಹ ಬರುವುದರೊಳಗಾಗಿ ಎಸ್ ಎಸ್ ಎಲ್ ಸಿ ಫಲಿತಾಂಶ ಬರಲಿದೆ. "ನೀನು ಒಬ್ಬ ಫೇಲ್ಯೂರ್" ಎಂದು ಆ ಫಲಿತಾಂಶ ಕೆಲವರಿಗಾದರೂ ಹೇಳಲಿದೆ; ಅದೂ ನಿಷ್ಕಾರಣವಾಗಿ, ನಿಷ್ಕರುಣೆಯಿಂದ.
ಕಲಿಯುವುದೆಂದರೆ ಪ್ರಶ್ನೆಗಳ ಬೆನ್ನ ಮೇಲಿನ ಸವಾರಿ.
ಕಲಿಯುವುದು ಒಂದು ಸಾಮಾಜಿಕ ಪ್ರಕ್ರಿಯೆ. ನಾವು ಒಡನಾಡುತ್ತಾ ಕಲಿಯುತ್ತೇವೆ. ಕಲಿಸುವವರು ಮತ್ತು ಕಲಿಯುವವರು ಎಂದು ವ್ಯಕ್ತಿಗಳನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ. ಎಲ್ಲರೂ ಜೊತೆಯಾಗಿ ಕಲಿಯುತ್ತಿರುತ್ತೇವೆ.
|
ಜೀವಪ್ರೀತಿಯ ಕೊಡೆಯೊಂದು ಸದಾ ನೆರಳಾಗಲಿ!
ಮೂರು ವರ್ಷಗಳ ಹಿಂದೆ ಶಿಕ್ಷಣ ಇಲಾಖೆಯು ಭಾರತ ಜ್ಞಾನ ವಿಜ್ಞಾನ ಸಮಿತಿಯ ಜೊತೆಗೂಡಿ ನಡೆಸಿದ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಹಬ್ಬಕ್ಕಾಗಿ ಶ್ರೀರಂಗಪಟ್ಟಣಕ್ಕೆ ಹೋದಾಗ ಸಯಿದಾ ನಕ್ರಾ ಎಂಬ ಹುಡುಗಿಯನ್ನು ಭೇಟಿಯಾಗಿದ್ದೆ. ಆಗ ಆಕೆ ಇನ್ನೂ ಪಿ.ಯು.ಸಿ ಓದುತ್ತಿದ್ದರು. ಹಿಂದಿನ ವರ್ಷ ಆಕೆ ಹತ್ತನೇ ತರಗತಿಯಲ್ಲಿರುವಾಗ ವಿನ್ಯಾಸಗೊಳಿಸಿದ ಆಲ್ ಇನ್ ಒನ್ ಕೊಡೆಗೆ ಇನಸ್ಪೈರ್ ರಾಷ್ಟ್ರೀಯ ಪ್ರಶಸ್ತಿ ಬಂದಿತ್ತು. ರಾಷ್ಟ್ರಪತಿಗಳ ವಿಶೇಷ ಪ್ರಶಸ್ತಿಯೂ ಆಕೆಗೆ ಒಲಿದಿತ್ತು. ಆಕೆಯ ಸಂಶೋಧನೆಯು ಮಿದುಳಿನಿಂದ ಕಾರ್ಯಗತವಾದದ್ದಕ್ಕಿಂತ ಹೆಚ್ಚಾಗಿ ಹೃದಯದಿಂದ ಪರಿಕಲ್ಪಿತವಾಗಿತ್ತು.
ತರಕಾರಿ ಕೊಳ್ಳಲು ಮಾರುಕಟ್ಟೆಗೆ ಹೋದಾಗ ರಸ್ತೆಯ ಎರಡೂ ಬದಿಯಲ್ಲಿ
ವ್ಯಾಪಾರಕ್ಕೆ ಕುಳಿತಿದ್ದ ಮಹಿಳೆಯರನ್ನು ಕಂಡು ಸಯೀದಾ ದುಃಖಿತರಾಗುತ್ತಿದ್ದರು. ಬಿಸಿಲು, ಮಳೆಯೆನ್ನದೆ
ಹೊಟ್ಟೆಪಾಡಿಗಾಗಿ ರಸ್ತೆಯ ಬದಿಯಲ್ಲಿ ಹಾಗೆ ಕುಳಿತುಕೊಳ್ಳಬೇಕಾದದ್ದು ಬೀದಿ ವ್ಯಾಪಾರಿಗಳಿಗೆ ಅನಿವಾರ್ಯ.
ಈ ಮಹಿಳೆಯರಿಗೆ ತಾನು ಹೇಗೆ ಸಹಾಯಮಾಡಬಹುದು ಎಂದು ಸಯೀದಾ ಸದಾ ಯೋಚಿಸತೊಡಗಿದರು. ಈ ಯೋಚನೆಯಿಂದಲೇ
ಆಕೆಯ ಬಹುಪಯೋಗಿ ಕೊಡೆ ರೂಪುಗೊಂಡಿತು.
ಎಲ್ಲರೂ ಮಳೆ, ಬಿಸಿಲಿಗೆ ಬಳಸುವ ಕೊಡೆಯನ್ನೇ ಸಯೀದಾ ಆಧುನಿಕ
ತಂತ್ರಜ್ಞಾನ ಬಳಸಿ ನವೀಕರಿಸಿದರು. ಸೋಲಾರ್ ಪ್ಯಾನೆಲ್ ಸಿಕ್ಕಿಸಿ ಅದೇ ಶಕ್ತಿಯಿಂದ ಕೊಡೆಗೆ ಒಳಗೊಂದು
ಫ್ಯಾನ್ ತಿರುಗುವಂತೆ ಮಾಡಿದರು. ಸಂಜೆಯಾಗುತ್ತಲೆ ಎಲ್.ಇ.ಡಿ ದೀಪ ಉರಿಯಿವಂತೆ ಸಜ್ಜುಗೊಳಿಸಿದರು.
ಮೊಬೈಲ್ ಚಾರ್ಜರ್ ಜೋಡಿಸಿದರು. ವ್ಯಾಪಾರ ಮಾಡುತ್ತಿರುವವರಿಗೆ ಪದೇ ಪದೇ ಮೊಬೈಲ್ ಫೋನನ್ನು ಕೈಯಲ್ಲಿ
ಹಿಡಿಯುವುದು ಕಷ್ಟ. ಅದಕ್ಕಾಗಿ ಸಯಿದಾ ಬ್ಲೂ ಟೂತ್ ತಂತ್ರಜ್ಞಾನ ಬಳಸಿ ಕೈಗಳಲ್ಲಿ ಮೊಬೈಲ್ ಎತ್ತಿಕೊಳ್ಳದೆ
ಕರೆಗಳನ್ನು ಸ್ವೀಕರಿಸಲು ಸಾಧ್ಯವಾಗುವಂತೆ ಕೊಡೆಯನ್ನು ಬಳಕೆದಾರ ಸ್ನೇಹಿಯಾಗಿಸಿದರು. ಈಗ ಮಾಮೂಲು
ಕೊಡೆಯು ಅತ್ಯಾಧುನಿಕ ಅಂಗಡಿಯಾಗಿ ರೂಪುಗೊಂಡಿತು.
ಈ ಕೊಡೆಯನ್ನು ಯಾವುದಾದರೂ ನವೋದ್ಯಮಿಗಳು ತಯಾರಿಸಲಿ ಮತ್ತು
ಸರ್ಕಾರಗಳು, ಸಂಘ ಸಂಸ್ಥೆಗಳು ಖರೀದಿಸಿ ರಸ್ತೆ ಬದಿಯ ವ್ಯಾಪಾರಿಗಳಿಗೆ ಒದಗಿಸುವಂತಾಗಲಿ ಎಂಬ ಆಶಯ
ಸಯಿದಾರವರದಾಗಿತ್ತು. ಆ ಆಶಯಕ್ಕಾಗಿಯೇ ಆಕೆಗೆ ಇನಸ್ಪೈರ್ ಪ್ರಶಸ್ತಿ ಬಂದಿತು. ಈ ಮೂರು ವರ್ಷಗಳಲ್ಲಿ
ಸಯಿದಾರ ಆಶಯ ಕೈಗೂಡಲಿಲ್ಲ ಎನ್ನುವುದು ಬೇರೆ ವಿಷಯ. ಆದರೆ, ಹೃದಯದಿಂದ ಯೋಚಿಸಿದ ಸಯಿದಾ ವಿಜ್ಞಾನವನ್ನು
ಮಾನವೀಯಗೊಳಿಸಿದರು.
ಶರಧಿ ಎಂಬ ಕುಂದಾಪುರದ ಹುಡುಗಿ ಕೂಡಾ ಸಯಿದಾರಂತೆ ಇನಸ್ಪೈರ್
ರಾಷ್ಟ್ರೀಯ ಪ್ರಶಸ್ತಿ ಪಡೆದವರು. ಹಾಸ್ಟೆಲ್ ವಿದ್ಯಾರ್ಥಿಗಳು ಮಳೆಗಾಲದಲ್ಲಿ ಬಟ್ಟೆ ಒಣಗಿಸಲು ಪಡುತ್ತಿದ್ದ
ಪಾಡು ಶರಧಿಯ ಸಂಶೋಧನೆಗೆ ಪ್ರೇರಣೆಯಾಯಿತು. ಬಟ್ಟೆಯನ್ನು ಹಾಸ್ಟೆಲಿನಲ್ಲಿ ಒಣಗಿಸಲು ಬಿಟ್ಟು ಶಾಲೆಗೆ
ಹೋದರೆ ಹಿಂತಿರುಗಿ ಬಂದಾಗ ಮಳೆಯಲ್ಲಿ ತೊಯ್ದಿರುತಿತ್ತು. ಬಿಸಿಲು ಬಂದಾಗ ಬಟ್ಟೆ ಹೊರಬರುವ ಮತ್ತು
ಮಳೆಯ ಸೂಚನೆ ಬರುತ್ತಲೇ ಮಾಡಿನಡಿ ಸೇರಿಕೊಳ್ಳುವಂತಹ ವ್ಯವಸ್ಥೆ ಇದ್ದರೆ ಎಷ್ಟು ಚೆನ್ನಾಗಿತ್ತು ಎಂದೆನಿಸಿತು
ಶರಧಿಗೆ. ವಿಜ್ಞಾನ ಶಿಕ್ಷಕರ ಸಹಾಯ ಪಡೆದು ಅಂತದ್ದೊಂದು ಸೌಕರ್ಯವನ್ನು ಆಕೆ ತಯಾರಿಸಿದರು. ಬೆಳಕಿನ
ತೀವ್ರತೆಗೆ ಸೂಕ್ಷ್ಮಗ್ರಾಹಿಯಾದ ಮೋಟಾರ್ ಜೋಡಿಸಿದ ಬಟ್ಟೆ ಒಣಗಿಸುವ ತಂತಿಯು ಬಿಸಿಲು ಬಂದಾಗ ಬಟ್ಟೆಯನ್ನು
ಹೊರಗೊಯ್ದರೆ ಮೋಡ ಕವಿದಾಗ ಒಳಸೇರಿಸುತಿತ್ತು. ಈ ಉಪಕರಣ ಬಳಕೆಗೆ ದೊರೆಯದೇ ಹೋದರೂ ಇಂತಹ ಐಡಿಯಾ ಶರದಿಗೆ
ಬಂದಿರುವುದಕ್ಕಾಗೇ ಆಕೆಯ ಹೊಸ್ಟೆಲ್ ಗೆಳತಿಯರ ಕಣ್ಣಾಲಿ ತುಂಬಿಕೊಂಡಿತ್ತು.
ಎಳವೆಯಲ್ಲೇ ಒದಗಿಬಂದ ಈ ಅಂತಃಕರಣವನ್ನು ದೊಡ್ಡವರಾಗುವವರೆಗೂ
ಕಾಪಿಟ್ಟುಕೊಂಡರೆ ಜಗತ್ತು ಇನ್ನಷ್ಟು ಸುಂದರವಾಗಬಲ್ಲದು ಎಂಬುದಕ್ಕೆ ಶರದ್ ಆಸಾನಿ ಎಂಬ ಎಲೆಕ್ಟ್ರಿಕಲ್
ಎಂಜಿನಿಯರ್ ಉದಾಹರಣೆ. ಶರದರಿಗೆ ಕೂಡಾ ಜಗತ್ತಿನ ನೋವು, ಸಂಕಟ, ಹಸಿವುಗಳು ಸಯಿದಾ ಅಥವಾ ಶರಧಿಯಂತೆ
ತೀವ್ರವಾಗಿ ಕಾಡುತಿದ್ದವು. 2004 ರಲ್ಲಿ ಮುಂಬೈನ ರೂಪದರ್ಶಿ ನಫೀಸಾ ಜೊಸೆಫ್ ನೇಣುಹಾಕಿಕೊಂಡು ಆತ್ಮಹತ್ಯೆಮಾಡಿಕೊಂಡ
ಸುದ್ದಿಯನ್ನು ನ್ಯೂಸ್ ಚಾನೆಲ್ ಒಂದರಲ್ಲಿ ನೋಡಿದ
ಶರದ್ ಆಶಾನಿ ದುಃಖದಲ್ಲಿ ತಲೆ ಎತ್ತಿ ಫ್ಯಾನಿನ ಕಡೆಯೇ ನೋಡಿದರು. ಆಕೆ ನೇಣಿಗೆ ಕೊರಳೊಡ್ಡಿ ತನ್ನ
ಭಾರವನ್ನು ಫ್ಯಾನಿಗೆ ವರ್ಗಾಯಿಸಿದಾಗ ಸೀಲಿಂಗಿಗೆ ಜೋಡಿಸಿದ ಫ್ಯಾನ್ ರಾಡ್ ತುಂಡಾಗಬಾರದಿತ್ತೇ ಎನಿಸಿತು
ಅವರಿಗೆ. ಹೀಗೆ ಅನಿಸಿದ್ದೇ ತಡ, ಆತ್ಮಹತ್ಯೆಯನ್ನು ತಪ್ಪಿಸಬಹುದಾದಂತಹ ಫ್ಯಾನ್ ರಾಡನ್ನು ಏಕೆ ತಯಾರಿಸಬಾರದು
ಎಂದು ಕಾರ್ಯಪ್ರವೃತ್ತರಾದರು. ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ವರದಿಯ ಪ್ರಕಾರ ಆ ಹಿಂದಿನ ವರ್ಷ ಒಂದು ಲಕ್ಷದ ಹದಿಮೂರು ಸಾವಿರ ಆತ್ಮಹತ್ಯೆಗಳು
ವರದಿಯಾಗಿದ್ದವು. ಅವುಗಳಲ್ಲಿ ಮೂವತ್ತು ಸಾವಿರಕ್ಕೂ ಹೆಚ್ಚು ಆತ್ಮಹತ್ಯೆಗಳು ನೇಣು ಹಾಕಿಕೊಂಡು ನಡೆದಿರುವುದಾಗಿತ್ತು.
ಈ ಸಂಖ್ಯೆ ಮತ್ತು ಪ್ರಮಾಣ ಪ್ರತಿ ವರ್ಷವೂ ಹೆಚ್ಚುತ್ತಲೇ
ಇದೆ. ಈಗೆರಡು ವರ್ಷಗಳಿಂದ ಅರ್ಧಕ್ಕಿಂತ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ನೇಣಿಗೆ ಸಂಬಂಧಿಸಿದವು.
ಹಾಸ್ಟೆಲ್ಲುಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚುತ್ತಿದೆ. ಕೋವಿಡ್ ಪೂರ್ವದ ಐದು ವರ್ಷಗಳಲ್ಲಿ
ಐವತ್ತು ಸಾವಿರ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶರದ್ ಈ ಆತ್ಮಹತ್ಯೆಗಳನ್ನು ತಡೆಯಲು ಮುಂದಾದರು. ಸಾಮಾನ್ಯವಾಗಿ
ಫ್ಯಾನು ನೆಲದಿಂದ ಎಂಟು ಅಡಿ ಎತ್ತರದಲ್ಲಿರುತ್ತದೆ. ಹತ್ತು ಅಡಿಯ ಮೇಲ್ಚಾವಣಿಗೆ ರಾಡ್ ಮೂಲಕ ಜೋಡಿಸಿಕೊಂಡಿರುತ್ತದೆ.
ಒಂದು ನಿರ್ಧಾರಿತ ತೂಕಕ್ಕಿಂತ ಹೆಚ್ಚಿನ ಭಾರವನ್ನು ಅನುಭವಿಸಿದಾಗ ವಿಸ್ತರಿಸಿಕೊಂಡು ಉದ್ದವಾಗುವ ಫ್ಯಾನ್
ರಾಡನ್ನು ಶರದ್ ರೂಪಿಸುವ ಮೊದಲು ಸಾಕಷ್ಟು ಅಧ್ಯಯನಗಳನ್ನು ನಡೆಸಿದ್ದರು. ಈಗ ಶರದ್ ವಿನ್ಯಾಸಗೊಳಿಸಿದ
ಫ್ಯಾನ್ ರಾಡ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಅವರೀಗ ಜೀವ ಉಳಿಸಬಲ್ಲ ವಸ್ತುಗಳನ್ನು ತಯಾರಿಸುವ
ಗೋಲ್ಡ್ ಲೈಫ್ ಎಂಬ ಉದ್ಯಮವನ್ನೇ ಆರಂಭಿಸಿದ್ದಾರೆ.
ಹಿಡಿ ಪ್ರೀತಿಯಿದ್ದರೆ ಇಡಿಯ ಭೂಮಿಯನ್ನೇ ಬೆಳದಿಂಗಳಾಗಿಸಬಹುದು!
Monday, 20 June 2022
ಬಿಳಿ ಬಣ್ಣ ಶ್ರೇಷ್ಟವೆಂಬ ವ್ಯಸನವು ಜಾತಿ ತಾರತಮ್ಯದಷ್ಟೇ ಅಮಾನವೀಯ
"ಚರ್ಮದ ಬಣ್ಣದ ಕಾರಣಕ್ಕಾಗಿ ತಾರತಮ್ಯ ನಡೆಯುತ್ತದೆ. ತಿಳಿ ಮೈಬಣ್ಣ ಶ್ರೇಷ್ಠವೆಂಬ ಅಹಮಿಕೆಯೂ, ಗಾಢ ಬಣ್ಣ ಕುರೂಪವೆಂಬ ಕೀಳರಿಮೆಯೂ ಬೇಡ”
ಹೀಗೆನ್ನುತ್ತಾ ಫೇರನೆಸ್ ಉತ್ಪನ್ನವೊಂದರ ಎರಡು ಕೋಟಿ ರೂಪಾಯಿಗಳ ಜಾಹಿರಾತು ಒಪ್ಪಂದವನ್ನು ತಿರಸ್ಕರಿಸಿ ಬಹುಭಾಷಾ ನಟಿ ಸಾಯಿಪಲ್ಲವಿ ಸುದ್ದಿಯಾಗಿದ್ದರು. ಅವರ ತರ್ಕ ಸರಳವಾಗಿದೆ- ನಿಗ್ರೋಗಳಿಗೆ ತಮ್ಮದೇ ಮೈಬಣ್ಣ ಇರುವಂತೆ, ಮಂಗೂಲಿಯನ್ನರಿಗೆ, ಕಕೇಶಿಯನ್ನರಿಗೆ, ಆಸ್ಟ್ರೇಲಿಯನ್ನರಿಗೆ ತಮ್ಮದೇ ಬಣ್ಣದ ಚರ್ಮ ಇರುತ್ತದೆ. ಭಾರತೀಯರಿಗೂ ಕೂಡಾ ತಮ್ಮದೇ ಮೈಬಣ್ಣವಿದೆ ಅಷ್ಟೆ. ದ್ರಾವಿಡಿಯನ್ನರ ಬಣ್ಣ ಉತ್ತರದ ಜನರ ಬಣ್ಣಕ್ಕಿಂತ ತುಸು ಗಾಢವಿರಬಹುದು ಅದು ನಮ್ಮ ಮೈಬಣ್ಣ. ಬ್ರಿಟೀಷರನ್ನು ಈ ದೇಶದಿಂದ ಹೊರದಬ್ಬುವ ದೀರ್ಘ ಹೋರಾಟದಲ್ಲಿ ಈ ದೇಶದ ಎಲ್ಲ ಮೈಬಣ್ಣದವರೂ ಜೊತೆಗೂಡಿದ್ದರು. ಎಂಟು ಧರ್ಮದ, ನಾಲ್ಕು ಸಾವಿರ ಜಾತಿಯ, ಇನ್ನೂರೈವತ್ತು ಭಾಷೆಯ ಜನರು, ಅದೆಷ್ಟೋ ಉಪಭಾಷೆಯನ್ನು ಮಾತನಾಡುವವರು, ಇನ್ನೆಷ್ಟೋ ವಿಶಿಷ್ಟ ಆಚರಣೆಗಳನ್ನು ಅನುಸರಿಸುವವರು, ವಿಭಿನ್ನ ಪಂಥದವರು. ನೂರಾರು ಬುಡಕಟ್ಟು ಪಂಗಡವರು ಒಂದಾಗಿ ಬ್ರಿಟೀಷರನ್ನು ಎದುರಿಸಿ ಗೆದ್ದಿದ್ದೆವು. ಅವರೇನೋ ಹೊರಟುಹೋದರು. ಆದರೆ, ಅವರು ಬಿಟ್ಟು ಹೋದ ಬಿಳಿ ಮೈಬಣ್ಣ ಶ್ರೇಷ್ಟವೆಂಬ ವ್ಯಸನ ಇಲ್ಲೇ ಇದೆ. ಅದು ಒಂದು ಸಾಮಾಜಿಕ ಉಪಟಳವಾಗಿ ಕಾಡುತ್ತಿದೆ.
ಅಮೇರಿಕದ ಮಿನಾಪೋಲಿಸ್ ಪಟ್ಟಣದಲ್ಲಿ 2020 ರ ಮೇ 25 ರಂದು ಕಪ್ಪು ವರ್ಣೀಯರಾದ ಜಾರ್ಜ್ ಫ್ಲಾಯ್ಡ್ ಎಂಬವರನ್ನು ಬಿಳಿ ಬಣ್ಣದ ಪೋಲೀಸ್ ಅಧಿಕಾರಿ, ರಸ್ತೆಯಲ್ಲಿ ತಡೆದು ಕಾರಿನಿಂದ ಹೊರಗೆಳೆದು ಕಾಲಿನಲ್ಲೇ ಕುತ್ತಿಗೆ ಓತ್ತಿ ಕೊಂದಿದ್ದ. ಈ ಜನಾಂಗೀಯ ದ್ವೇಷದ ವಿರುದ್ಧ ಜಗತ್ತಿನಾದ್ಯಂತ ಆ ನಂತರ ಪ್ರತಿಭಟನೆಗಳು ನಡೆದಿದ್ದವು. ಫೇರ್ ಎನ್ನುವ ಪದವೇ ಜನಾಂಗೀಯ ತಾರತಮ್ಯದಿಂದ ಕೂಡಿದೆ ಎಂಬ ಕಾರಣಕ್ಕಾಗಿ ಯೂನಿಲಿವರ್ ಸಂಸ್ಥೆ ತನ್ನ 'ಫೇರ್ ಎಂಡ್ ಲವ್ಲಿ' ಎಂಬ ಉತ್ಪನ್ನದ ಹೆಸರನ್ನು 'ಗ್ಲೋ ಎಂಡ್ ಲವ್ಲಿ' ಎಂದು ಬದಲಿಸಿತು. ಭಾರತದ ದೊಡ್ಡ ಮದುವೆ ದಲ್ಲಾಳಿ ವೆಬ್ ಸೈಟಾದ 'ಶಾದಿ ಡಾಟ್ ಕಾಮ್' ತನ್ನ ಫಿಲ್ಟರ್ ಸೌಕರ್ಯದಿಂದ 'ಫೇರ್' ಎಂಬ ಸುಳಿವು ಪದವನ್ನು ತೆಗೆದುಹಾಕಿತು.
ಚರ್ಮದ ಬಣ್ಣಕ್ಕೆ ಮೆಲಾನಿನ್ ಎಂಬ ವರ್ಣಕ ಕಾರಣ. ಚರ್ಮ, ಕೂದಲು, ಕಣ್ಣಿನ ಬಣ್ಣದ ಮೂಲಕ ಮಾನವ ಪ್ರಬೇಧವು ಹಲವು ಜನಾಂಗಗಳಾಗಿ ಗುರುತಿಸಲ್ಪಟ್ಟಿರುವುದರಲ್ಲಿ ಈ ವರ್ಣಕದ ಪಾತ್ರ ದೊಡ್ಡದು. ನಮ್ಮ ದೇಹದಲ್ಲಿರುವ ಮೆಲನೋಸೈಟುಗಳೆಂಬ ಜೀವಕೋಶಗಳು ಈ ವರ್ಣಕವನ್ನು ಉತ್ಪಾದಿಸುತ್ತವೆ. ಮೆಲನೋಸೈಟುಗಳು ಎಲ್ಲರಲ್ಲೂ ಇವೆ. ಎಲ್ಲರಲ್ಲೂ ಬಹುತೇಕ ಸಮಾನ ಸಂಖ್ಯೆಯಲ್ಲೇ ಇವೆ. ಆದರೆ, ಅವು ತಯಾರಿಸುವ ಮೆಲಾನಿನ್ ವರ್ಣಕಗಳ ಪ್ರಮಾಣ ಬೇರೆ ಬೇರೆ ಜನಾಂಗದ ಜನರಲ್ಲಿ ಬೇರೆಯಾಗಿದೆ. ಕಡಿಮೆ ಮೆಲಾನಿನ್ ಉತ್ಪತ್ತಿಯಾದರೆ, ನಿಮ್ಮದು ತಿಳಿಬಣ್ಣ, ಹೆಚ್ಚು ಉತ್ಪತ್ತಿಯಾದರೆ ಕಪ್ಪು ಬಣ್ಣ. ನಮಗೆಷ್ಟು ಮೆಲಾನಿನ್ ತಯಾರಿಸಬೇಕು ಎಂಬುದನ್ನು ನಾವು ನಿರ್ಣಯಿಸಲಾರೆವು. ಇಂತಿಷ್ಟೇ ವರ್ಣಕವನ್ನು ಮೆಲಾನೋಸೈಟುಗಳು ನಮ್ಮಲ್ಲಿ ಉತ್ಪಾದಿಸಬೇಕೆಂಬ ಆದೇಶ ಎಂದೋ ಆಗಿಹೋಗಿದೆ. ತಲೆಮಾರಿನಿಂದ ತಲೆಮಾರಿಗೆ ಈ ಆದೇಶವನ್ನು ನಮ್ಮ ವಂಶವಾಹಿಗಳಲ್ಲಿರುವ ಜೀನುಗಳು ಹೊತ್ತೊಯ್ಯುತ್ತಾ ಬಂದಿವೆ.
ಎರಡು ಕೋಟಿಯ ಆಫರ್ ತಿರಸ್ಕರಿಸಿದ ನಂತರ ಸಾಯಿಪಲ್ಲವಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮೈಬಣ್ಣದ ತಾರತಮ್ಯದ ಕುರಿತು ತನ್ನದೇ ಅನುಭವವನ್ನು ಹಂಚಿಕೊಂಡಿದ್ದರು. ಸಾಯಿಪಲ್ಲವಿಯವರ ಸಹೋದರಿಗೆ ತನ್ನಕ್ಕನಿಗಿಂತ ತನ್ನ ಮೈಬಣ್ಣ ಗಾಢವಾಗಿದೆ ಎಂಬ ಕೀಳರಿಮೆ ಇತ್ತು. ಈ ಕೀಳರಿಮೆಯು ಬಿಳಿ ಬಣ್ಣವನ್ನು ಗೌರವಿಸುವ, ಕಪ್ಪನ್ನು ಕೀಳಾಗಿ ಕಾಣುವ ಸಮಾಜದ ಪ್ರತಿಫಲನ. ಫೇರ್ ನೆಸ್ ಕ್ರೀಮುಗಳ ಜಾಹಿರಾತುಗಳು, ಸಿನೇಮಾ- ಧಾರವಾಹಿಗಳಲ್ಲಿ ತೆಳುಬಣ್ಣದ ನಾಯಕ- ನಾಯಕಿಯರೇ ಇರುವುದು ಇತ್ಯಾದಿ ಸಂಗತಿಗಳು ಕಪ್ಪುಬಣ್ಣ ಕುರೂಪ ಎಂಬ ಮನಃಸ್ಥಿತಿಯನ್ನು ಬೆಳೆಸುತ್ತಾ ಬಂದಿದೆ. ಸಾಕಷ್ಟು ತರಕಾರಿ ಮತ್ತು ಹಣ್ಣುಗಳನ್ನು ಸೇವಿಸಿದರೆ ತನ್ನಂತೆ ತಿಳಿಬಣ್ಣ ಹೊಂದಲು ಸಾಧ್ಯ ಎಂದು ತರಕಾರಿ ತಿನ್ನಲೊಪ್ಪದ ಸಹೋದರಿಗೆ ಸಾಯಿಪಲ್ಲವಿ ಹೇಳಿದ್ದರಂತೆ. ಆಕೆ, ಇಷ್ಟವಿಲ್ಲದಿದ್ದರೂ ತರಕಾರಿ ತಿನ್ನಲು ಆರಂಭಿಸಿದ್ದರಂತೆ. ಆದರೆ, ಮೈಬಣ್ಣ ಹಾಗೆಯೇ ಉಳಿಯಿತು. ಕಪ್ಪು ಕುರೂಪವೆಂಬ ಕಲೆಯೂ ಆಕೆಯ ಮನಸ್ಸಿನಲ್ಲಿ ಅಚ್ಚಾಗಿ ಉಳಿಯಿತು. ಮೈಬಣ್ಣದ ಕಾರಣಕ್ಕೆ ಮಾನಸಿಕವಾಗಿ ಕುಗ್ಗುವ, ಮದುವೆಯಾಗದಿರುವ, ತಂದೆ-ತಾಯಿಯರಿಗೆ ಸಮಸ್ಯೆ ಎಂದು ನೊಂದುಕೊಳ್ಳುವ ಹೆಣ್ಣುಮಕ್ಕಳನ್ನು ಮನಸ್ಸಲ್ಲಿಟ್ಟುಕೊಂಡೇ ತಾನು ಆ ಜಾಹಿರಾತಿನಲ್ಲಿ ನಟಿಸಲು ನಿರಾಕರಿಸಿದೆನೆಂದು ಸಾಯಿಪಲ್ಲವಿ ಹೇಳಿದ್ದರು.
ಶಿಕ್ಷಕಿಯೊಬ್ಬರು ವರ್ಣತಾರತಮ್ಯದ ತನ್ನ ಅನುಭವವನ್ನು ನನ್ನ ಬಳಿ ಹಂಚಿಕೊಂಡಿದ್ದರು. ಅವರು ಪ್ರೌಢಶಾಲೆಯಲ್ಲಿರುವಾಗ ಶಾಲಾ ನಾಟಕದಲ್ಲಿ ಅಭಿನಯಿಸಲು ಹೋಗಿದ್ದರಂತೆ. ಕಾಳಿದಾಸನ ಅಭಿಜ್ಞಾನ ಶಾಕುಂತಲೆಯ ಪುಟ್ಟ ಭಾಗವನ್ನು ಅವರ ಶಿಕ್ಷಕರು ಶಾಲಾ ವಾರ್ಷಿಕೋತ್ಸವದಂದು ರಂಗದ ಮೇಲೆ ತರಲು ಯೋಜಿಸಿದ್ದರಂತೆ. ಇವರ ಅಭಿನಯ ನೋಡಿ, "ಈ ಹುಡುಗಿ ಚೆನ್ನಾಗಿ ಅಭಿನಯಿಸುತ್ತಾಳೆ, ಇವಳನ್ನು ಶಕುಂತಲೆಯ ಪಾತ್ರಕ್ಕೆ ಆಯ್ಕೆ ಮಾಡೋಣ" ಎಂದರಂತೆ. ಮಾರನೇ ದಿನ ತಾಲೀಮು ಶುರುವಾದಾಗ ಬಿಳಿ ಚರ್ಮದ ಹುಡುಗಿಯೊಬ್ಬಳನ್ನು ಶಕುಂತಲೆ ಪಾತ್ರಕ್ಕೆ ಅವರು ಆಯ್ಕೆ ಮಾಡಿ, ಇವರಲ್ಲಿ ಬೇರೊಂದು ಪಾತ್ರ ಮಾಡಲು ಸೂಚಿಸಿದರಂತೆ. ಬೆಳೆದು ದೊಡ್ಡವಳಾಗಿ, ಈಗ ಶಿಕ್ಷಕಿಯಾದರೂ ಆ ಗಾಯವಿನ್ನೂ ಅವರಲ್ಲಿ ಮಾಸಿರಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ನೀನಾಸಂ ತಿರುಗಾಟದ ಸೀತಾ ಸ್ವಯಂವರ ನಾಟಕದಲ್ಲಿ ಕಪ್ಪು ಮೈಬಣ್ಣದ ನಟಿಯನ್ನು ಸೀತೆಯಾಗಿಯೂ ತಿಳಿಬಣ್ಣದ ನಟಿಯನ್ನು ಸೀತೆಯ ಸಖಿಯಾಗಿಯೂ ಆಯ್ಕೆ ಮಾಡಿ ಇಂತಹ ಮನಃಸ್ಥಿತಿಯನ್ನು ಕದಲಿಸುವ ಪ್ರಯತ್ನ ಮಾಡಿದ್ದರು. ಕನ್ನಡ ಸಾಹಿತ್ಯವೂ ಮೈಬಣ್ಣದ ತಾರತಮ್ಯವನ್ನು ಪ್ರತಿರೋಧಿಸುವ ರಚನೆಗಳನ್ನು ಸೃಷ್ಟಿಸಿದೆ.
ಮೆಲನೋಮಾ ಎಂಬುದು ಗಂಭೀರ ಸ್ವರೂಪದ ಕ್ಯಾನ್ಸರ್. ಮೂಗು, ಕೆನ್ನೆಗಳಂತಹ ಸೂರ್ಯನ ಬೆಳಕಿಗೆ ತೆರೆದುಕೊಳ್ಳುವ ಭಾಗದ ಮೆಲನೋಸೈಟುಗಳಲ್ಲಿ ಕಂಡು ಬರುವ ಈ ಕ್ಯಾನ್ಸರ್ ಬಿಳಿಚರ್ಮದವರಿಗೆ ಬರುವ ಸಾಧ್ಯತೆ ಹೆಚ್ಚು. ಶ್ರೇಷ್ಟತೆಯ ವ್ಯಸನವೆಂಬ ಕ್ಯಾನ್ಸರ್ ಕೂಡಾ ಬಿಳಿ ಚರ್ಮದವರಿಗೆ, ಮೇಲ್ಜಾತಿ ಅಂದುಕೊಳ್ಳುವವರಿಗೆ ತಗಲುವ ಸಾಧ್ಯತೆ ಹೆಚ್ಚು.
ಅಂಕಣ ಬರೆಹ: